ಬಾನ ಬೀದಿಗೆ ಜೋಲಿ ಹೊಡೆದು ಉರುಳಿವೆ ಮೋಡ
ಪಡುವಣದ ಪಡಖಾನೆಯಿಂದ ತೂರಿ;
ಬೇಕು ಬೇಕಾದತ್ತ ಹೊರಳಿ ಅಸ್ತವ್ಯಸ್ತ
ಸುಸ್ತಾಗಿ ಬಿದ್ದಿಹವು ನೆರಳು ಕಾರಿ!
ಹಗಲು ಮೂರ್‍ಛೆಗೆ ಸಂದ ಗಾಳಿ ಇದ್ದೆಡೆಯಿಂದ
ಮೈ ಮುರಿದು ಆಗೀಗ ಆಕಳಿಸಿದೆ-
ಆಗ ಬೆಚ್ಚನೆ ಧೂಳಿ ಹುಚ್ಚೆದ್ದು ಮೇಲೇರಿ
ಅದಕೆ ಹಾಜರಿ ಕೊಟ್ಟು ಕುಪ್ಪಳಿಸಿದೆ!
ಕಾಗೆ ಬೇವಿನಕಾಯ ಕುಕ್ಕಿ ಚುಂಚನು ತಿಕ್ಕಿ-
ಹೊತ್ತು ಗೊತ್ತಿಲ್ಲದೆಯೆ ಕಿರಿಚುತ್ತಿದೆ,
ಹುಲ್ಲಿನಲಿ ಹುಳವನಾರಿಸುತಿಹವು ಗೊರವಂಕ
ಗೂಡಿನಲಿ ಗುಬ್ಬಚ್ಚಿ ಅರಚುತ್ತಿದೆ!
ಗಿಡದ ಬೊಡ್ಡೆಯನಾತು ಮಲಗಿರುವ ಭಿಕ್ಷುಕನ
ಮುತ್ತಿ ಟೊಮ್ಮೆಂದಿಹುದು ನೊಣದ ಪರಿಸೆ;
ಬಾಲ ಗುಂಡಾಡಿಸುತ ನಾಯಿ ತೆರೆದಿದೆ ಬಾಯಿ
ತೀರಿತಿಲ್ಲವೊ ಅದರ ಅಗಳಿನಾಸೆ!
ಬೆಕ್ಕು ತಿಂದಿಹ ಇಲಿಗೆ ಬಿತ್ತು ಹದ್ದಿನ ಕಣ್ಣು
ನಿಮಿಷಾರ್ಧದಲಿ ಅದಕು ಅರ್ಧಪಾಲು,
ಬೆಟ್ಟಿ ಬೆನಕನ ಮಸಣಯಾತ್ರೆ ನೆರವೇರಿಸಲು
ಅತ್ತೆ ಹೊರಟಂತಿಹುದು ಇರುವೆಸಾಲು!
ಹಸುರು ಜೊಂಡಿನ ಹೊಂಡದಲ್ಲಿ ಬಡಕಲು ಎಮ್ಮೆ,
‘ಈಸಬೇಕೊ ಇದ್ದು ಜೈಸಬೇಕು’!
ಹಿಂಡಿದರೆ ಉಪಚಾರ ; ತೊಂಡು ಮೇದರೆ ಕೊಂಡ-
ವಾಡೆಯಲಿ ಉಪವಾಸ ಸಾಯಬೇಕು.
ಬಾಡಿಗೆಯ ಚಕ್ಕಡಿಗೆ ಎಣ್ಣೆಯಿಲ್ಲದ ಕೀಲ
ಎಳೆಯಲಾರದ ಎತ್ತು ಎಳೆಯುತ್ತಿದೆ;
ಧೂಳಿ ಮಾಂಕಾಳಿಯೊಲು ಬುಸುಗುಟ್ಟಿ ಬರುತಿರುವ
ಕಾರು ಫೋಂಕರಿಸುತ್ತ ಒತ್ತರಿಸಿದೆ!
ಆಫೀಸಿನಲ್ಲಿ ಕುಳಿತ ಕಾರಕೂನರ ಕುರ್ಚಿ
ಜಡವಾಗಿ ಬಡವಾಗಿ ಹುರುಪಳಿಸಿವೆ;
ಮೇಜು ತಿಣಿಕಿದೆ, ಟೈಪುರೈಟರಿಗು ತೆರಪಿಲ್ಲ
ಹೊರೆಗಟ್ಟಲೆಯ ಕಡತ ಬೆಂಬಳಿಸಿದೆ!
ಎದುರುಗೋಡೆಗೆ ಸಿಲುಬೆಗೇರಿಸಿದ ಗಡಿಯಾರ
ಸುತ್ತು ಸುತ್ತಿಗೆ ಗಂಟೆ ಟೆಂಟೆಣಿಸಿದೆ,
ಹತ್ತಿರದ ಹೋಟಲಿನ ಹಾಡು-ಹಲಗೆಯು ಕೂಗಿ
ಬಸಿಯ ಮಧುವೀಂಟಲ್ಕೆ ಕರೆಯುತ್ತಿದೆ.
ಬಿಸಿಲು ತಗ್ಗಲು ಸಂಜೆ ನಂಜಿಕೊಳ್ಳಲಿಕಿಹುದು
ಇರುಳು ಹೇಗೋ ಕಳೆದು ಬೆಳಗು ಬಹುದು
ಮಜಲು ಬರುವದು ಮತ್ತೆ ಹಗಲ ಪಂಜನುಹಿಡಿದು
ಜಗದ ಹೆಗಲಿಗೆ ನೊಗವ ಹೇರಿಸುವದು!
ಕೀಲಿಕರಣ: ಎಂ ಎನ್ ಎಸ್ ರಾವ್
ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ
