ಪೋಸ್ಟ್‌ಮಾರ್ಟಂ ರಿಪೋರ್ಟ್ ಮೇಲೆ ಎರಡನೆಯ ಬಾರಿಗೆ ಕಣ್ಣಾಡಿಸಿದ ಸಬ್ ಇನ್ಸ್‌ಪೆಕ್ಟರ್ ಟೈಟಸ್.
ಎಲ್ಲವೂ ತಾನು ಊಹಿಸಿದಂತೇ ಇತ್ತು.
ದೇವಕಿಯ ಕೊಲೆ ಉಸಿರು ಕಟ್ಟಿಸುವಿಕೆಯಿಂದಾಗಿತ್ತು. ಕುತ್ತಿಗೆಯನ್ನು ನೈಲಾನ್ ಹುರಿಯಿಂದ ಬಿಗಿಯುವುದರ ಜತೆಗೇ ಮೂಗಿನ ಮೇಲೆ ಯಾವುದೋ ಮೃದು ವಸ್ತುವನ್ನಿಟ್ಟು ಒತ್ತಿ ಉಸಿರು ಕಟ್ಟುವಂತೆ ಮಾಡಲಾಗಿತ್ತು. ಕೊನೇಗಳಿಗೆಯಲ್ಲಿ ದೇವಕಿ ಹೋರಾಟ ನಡೆಸಿದುದರ ಸಾಧ್ಯತೆಯ ಬಗ್ಗೆ ರಿಪೋರ್ಟ್ ಹೇಳಿತ್ತು… ಕೊಲೆ ನಡೆದದ್ದು ರಾತ್ರಿ ಹನ್ನೊಂದೂವರೆಯಿಂದ ಹನ್ನೆರಡೂವರೆಯ ಒಳಗೆ. ಅದೂ ಹೊಸ ವಿಷಯವೇನಲ್ಲ…
ಫೊರೆನ್ಸಿಕ್ ರಿಪೋರ್ಟ್‌ನಲ್ಲೂ ಯಾವುದೇ ಹೊಸ ವಿಷಯ ಇದ್ದಂತಿರಲಿಲ್ಲ. ಶವದ ತಲೆಯ ಭಾಗದಲ್ಲಿ ಸಿಕ್ಕಿದ ಒದ್ದೆ ಕರವಸ್ತ್ರದಲ್ಲಿದ್ದುದು ದೇವಕಿಯದೇ ಬೆವರು ಮತ್ತು ಶ್ಲೇಷ್ಮ.
ರಿಪೋರ್ಟ್‌ನಲ್ಲಿ ಕಾಣುವ ಒಂದೇ ಒಂದು ಹೊಸ ವಿಷಯವೆಂದರೆ ದೇವಕಿ ಸ್ವಲ್ಪ ಹೆಚ್ಚಾಗಿಯೇ ಕಾಫಿ ಸೇವಿಸಿದ್ದಾರೆ. ಇದು ಅಚ್ಚರಿಯ ವಿಷಯ. ಆಕೆಯ ತಾಯಿ ಹೇಳುವ ಪ್ರಕಾರ ದೇವಕಿ ಊಟದ ನಂತರ ಮನೆಯಲ್ಲಿ ಕಾಫಿ ತೆಗೆದುಕೊಂಡಿಲ್ಲ! ಅಂದರೆ ಕಾಫಿ ಸೇವಿಸಿದ್ದು ಮನೆಯಿಂದ ಹೊರಟ ನಂತರವೇ? ಅದು ಕೊಲೆಗಾರನ ಜತೆಯಲ್ಲೇ?
ಭಾರದ ಪೇಪರ್ ವೆಯಿಟನ್ನು ಸಶಬ್ಧವಾಗಿ ರಿಪೋರ್ಟ್ ಮೇಲಿಟ್ಟ. ಅಟೆಂಡರ್ ಬೂಕಯ್ಯನನ್ನು ಕೂಗಿ ಕರೆದು ಕ್ಯಾಂಟೀನಿನಿಂದ ಮಸಾಲೆ ಟೀ ತರಲು ಹೇಳಿದ. ಕುರ್ಚಿಯಲ್ಲಿ ಹಿಂದಕ್ಕೆ ಒರಗಿ ಕಣ್ಣು ಮುಚ್ಚಿದ.
ಮನದಲ್ಲಿ ಮತ್ತೆ ಪ್ರಶ್ನೆಗಳ ಮೇಳ.
ದೇವಕಿಯ ಮೇಲೆ ನರಹರಿಯ ಹೊರತಾಗಿ ಬೇರಾರಿಗೂ ದ್ವೇಷವಿದ್ದ ಸೂಚನೆ ಇಲ್ಲ. ಕೊಲೆ ನಡೆದ ರಾತ್ರಿ ತನಗೆ ಎಚ್ಚರವಿಲ್ಲದ ನಿದ್ದೆ ಎಂದು ಅವನು ಹೇಳಿದ ಮಾತು ಎಷ್ಟು ನಿಜ? ಮೊನ್ನೆ ರಾತ್ರಿ ಶವದಂತೆ ಬಿದ್ದಿದ್ದ, ಅಂಥವನು ಕಳೆದ ರಾತ್ರಿ ನಿದ್ದೆಯಿಲ್ಲದೇ ಹೊರಳಾಡುತ್ತಿದ್ದ ಎಂದು ಪೇದೆ ಅಂತೋಣಿ ಹೇಳುತ್ತಾನೆ…
ಆಲೋಚನೆಯಲ್ಲಿ ಮುಳುಗಿದ ಟೈಟಸ್ ಹೆಜ್ಜೆ ಸಪ್ಪಳ ಕೇಳಿಬಂದಾಗ ಕಣ್ಣು ತೆರೆಯದೇ ಆದೇಶಿಸಿದ.
“ಇಟ್ಟುಹೋಗಯ್ಯ.”
“ಏನನ್ನ ಗುರೂ ಇಟ್ಟುಹೋಗೋದು?” ಪ್ರಶ್ನೆ ಬಂತು.
“ಟೀನ. ಇನ್ನೇನಂದ್ಕೊಂಡೆ? ನಿನ್ನಜ್ಜಿ ಪಿಂಡಾನಾ?” ಸಿಡುಕಿದ.
ಕ್ಷಣಕಾಲ ಮೌನ. ನಂತರ ಒಮ್ಮೆ ಲೊಚಗುಟ್ಟುವಿಕೆಯ ಶಬ್ಧ. ಹಿಂದೆಯೇ ಮಾತುಗಳು.
“ನೋಡೂ ಮಾದೇಶೂ, ನಮ್ ಸಾಹೇಬ್ರು ಯಾವುದೋ ಬೇರೆ ಲೋಕದಲ್ಲಿದ್ದಾರೆ. ಅವರನ್ನ ಸ್ವಲ್ಪ ಈ ಭೂಲೋಕಕ್ಕೆ ಇಳಿಸೋದಿಕ್ಕೆ ಪ್ರಯತ್ನಿಸ್ತೀನಿ. ಅಲ್ಲೀವರೆಗೆ ನೀನು ಸ್ವಲ್ಪ ಹೊರಗೆ ಕೂತಿರು ರಾಜಾ. ಬೇಜಾರು ಮಾಡ್ಕೋಬೇಡಪ್ಪ.”
ಅರೆ ಇದು ಈಪಾಟೀ ಕೋದಂಡಯ್ಯನ ದನಿ! ಟೈಟಸ್ ಗಕ್ಕನೆ ಕಣ್ಣು ತೆರೆದ.
ಕಣ್ಣಿಗೆ ಬಿದ್ದದ್ದು ಕೋದಂಡಯ್ಯನ ಹಲ್ಲು ಕಿರಿಯುವ ಮುಖ ಹಾಗೂ ಬಾಗಿಲತ್ತ ಸರಿದುಹೋಗುತ್ತಿದ್ದ ದೊಗಳೇ ಖಾಕಿ ಬೆನ್ನು.
“ಅಯ್ ನೀನಾ ಕೋದಂಡಯ್ಯಾ?” ಕಣ್ಣುಗಳನ್ನು ಅಗಲವಾಗಿ ತೆರೆದ.
“ಹ್ಞೂ ನಾನೇ ದೇವ್ರೂ.” ಕೋದಂಡಯ್ಯ ಮತ್ತಷ್ಟು ಅಗಲವಾಗಿ ಬಾಯಿ ತೆರೆದ. “ಮಸಾಲೆ ಟೀ ಹಿಡಕೊಂಡು ಬಂದಿರೋ ಅಟೆಂಡರ್ ಬೂಕಯ್ಯ ಅಂದ್ಕೊಂಡ್ರಾ?”
ಅವನ ಮಾತಿಗೆ ಉತ್ತರಿಸದೇ ಟೈಟಸ್ ಪ್ರಶ್ನೆ ಹಾಕಿದ.
“ಅದ್ಯಾರು ಅಲ್ಲಿ ಹೋಗ್ತಾ ಇರೋದು?”
“ಅವನೊಬ್ಬ ವಿ ಐ ಪಿ. ಇಡೀ ಮಧ್ಯಾಹ್ನ ಹುಡುಕಾಡಿದ್ದಕ್ಕೆ ಈಗ ಸಿಕ್ದ. ಒಂದು ಕಡೆ ಒಂದು ಕ್ಷಣ ನಿಲ್ಲೋನಲ್ಲ. ಮೂರು ಹೊತ್ತೂ ಕಾಲಿಗೆ ಚಕ್ರ ಕಟ್ಕೊಂಡು ಊರೆಲ್ಲಾ ತಿರುಗ್ತಾ ಇರ್ತಾನೆ. ಅಂಥಾ ಡಿಮ್ಯಾಂಡೋ ಡಿಮ್ಯಾಂಡು ಅವಂಗೆ. ಶೆಟ್ಟರ ಕುದುರೆ ಬಿಟ್ಟರೆ ಸಿಗದು ಅನ್ನೋ ಜಾತಿ. ಏನೋ ನನ್ನ ಪೂರ್ವಜನ್ಮದ ಪುಣ್ಯ, ಸಿಕ್ಕಿಬಿಟ್ಟ. ಸಿಕ್ಕಿದ ಕೂಡ್ಲೇ ಹಿಡಕೊಂಡು ಬಂದಿದ್ದೀನಿ.”
ಟೈಟಸ್ ಕಣ್ಣರಳಿಸಿದ. ನಗೆಯೊಂದಿಗೆ ಕೋದಂಡಯ್ಯನ ವಿವರಣೆ ಬಂತು.
“ರಾತ್ರಿ ಆಯಮ್ಮ ದೇವಕೀನ ಮನೇಗೆ ಕರಕೊಂಡು ಬಂದ ಆಟೋ ಡ್ರೈವರ್ ಅವ್ನು. ಮಾದೇಶು ಅಂತ ಹೆಸ್ರೂ. ಕೊಳ್ಳೇಗಾಲದ ಕಡೆಯ ಮಲೆಮಾದೇಶ್ವರ ಸ್ವಾಮಿಯ ಒಕ್ಕಲು. ನಂಗೆಲ್ಲಾ ಹೇಳಿದ್ದಾನೆ. ನಿಮಗೆ ನಾನೇ ಹೇಳಲೋ ಅಥವಾ ಅವನ ಬಾಯಿಂದಾನೇ ಕೇಳಿಸ್ಕೋತೀರೋ?”
“ನೀನೇನೂ ಹೇಳೋದು ಬ್ಯಾಡ. ನಿನ್ನ ಹರಿಕಥೆ ಕೇಳೋದಕ್ಕೆ ಪುರುಸೊತ್ತಿಲ್ಲ ನಂಗೆ. ಅವನನ್ನೇ ಕರಿ.” ಅಂದವನು ಟೀ ಕಪ್ ಹಿಡಿದುಕೊಂಡು ಬಂದ ಬೂಕಯ್ಯನಿಗೆ ಮತ್ತೆರಡು ಟೀ ತರುವಂತೆ ಆರ್ಡರ್ ಮಾಡಿದ.
“ಸರಿ ದೇವ್ರೂ, ತಮ್ಮ ಚಿತ್ತ” ಎಂದ ಕೋದಂಡಯ್ಯ ಆಟೋ ಡ್ರೈವರ್ ಮಾದೇಶುವನ್ನು ಒಳಗೆ ಕರೆದ.
ಹೊಳೆಯುತ್ತಿದ್ದ ಉಬ್ಬಿದ ಹಣೆಯ ದುಂಡು ಮುಖ, ಕಪ್ಪನೆಯ ಕುಳ್ಳುದೇಹ, ತೆಳ್ಳನೆಯ ಕೈಕಾಲುಗಳು… ಆಟೋ ಡ್ರೈವರ್ ಮಾದೇಶು “ನಮಸ್ಕಾರ ಸಾ” ಅಂದ.
“ದೇವಕಿಯನ್ನ ಕರಕೊಂಡು ಬಂದೋನು ನೀನೇನಯ್ಯಾ?”
“ಹ್ಞೂ ಸಾ.”
“ಎಲ್ಲಿಂದ?”
“ಕುವೆಂಪುನಗರ ಮಾರ್ಕೆಟ್‌ನಿಂದ ಸಾ.”
“ಎಷ್ಟೊತ್ನಲ್ಲಿ?”
“ರಾತ್ರಿ ಹತ್ತೂವರೆ ಅಂತ ಕಾಣುತ್ತೆ ಸಾ.”
“ಸರಿ. ಆಯಮ್ಮನ ಜತೇಲಿ ಯಾರಿದ್ರು?”
“ಯಾರೂ ಇರ್‍ಲಿಲ್ಲ ಸಾ. ಆಯಮ್ಮ ಒಬ್ಳೇ ಇದ್ಲು ಸಾ.”
ಟೈಟಸ್ ಅಚ್ಚರಿಗೊಂಡ. ಹುಬ್ಬುಗಳು ಚಕ್ಕನೆ ಮೇಲೇರಿದವು. ಅವನು ಬಾಯಿ ತೆರೆಯುವ ಮೊದಲೇ ಕೋದಂಡಯ್ಯ ಮಾದೇಶುವಿನ ಭುಜ ಒತ್ತಿದ.
“ಸ್ವಲ್ಪ ಡೀಟೇಲಾಗಿ ಹೇಳೂ ಮಾದೇಶಣ್ಣಾ. ನೀನು ಆಯಮ್ಮನ್ನ ನೋಡಿದ ಗಳಿಗೆಯಿಂದ ಶುರು ಮಾಡು ರಾಜಾ.”
ಮಾದೇಶು ಒಮ್ಮೆ ಗಂಟಲು ಸರಿಪಡಿಸಿಕೊಂಡ.
“ಸರಿ ಸಾ. ನಾನು ಬಸ್ ಸ್ಟ್ಯಾಂಡ್‌ನಿಂದ ಸವಾರಿ ಹತ್ತಿಸ್ಕೊಂಡು ಕುವೆಂಪುನಗರಕ್ಕೇ ಬಂದಿದ್ದೆ ಸಾ. ವೆಂಕಟೇಶ್ವರ ಭಂಢಾರದ ಹತ್ರ ಸವಾರೀನ ಇಳಿಸ್ಬಿಟ್ಟು ಇನ್ನು ಮನೇಗೆ ಹೋಗಿಬಿಡಾಣ ಅಂತಂದ್ಕೊಂಡು ಹಿಂದಕ್ಕೆ ತಿರುಗ್ದೆ ಸಾ. ಮಾರ್ಕೆಟ್ ತಾವಾ ಬಲಕ್ಕೆ ತಿರುಗ್ತಾ ಇದ್ದಾಗ ಯಾರೋ ಹೆಂಗ್ಸು ‘ಆಟೋ’ ಅಂತ ಕೂಗ್ದಂಗಾಯ್ತು ಸಾ. ರಸ್ತೇಲಿ ಒಂದು ಜನಾನೂ ಇರ್ಲಿಲ್ಲ ಸಾ. ಮಳೆ ಒಂದೇಸಮ್ನೆ ಸುರೀತಾ ಇತ್ತು ಸಾ. ಇದ್ಯಾರಪ್ಪ ಇದೂ ಅಂತ ಆಟೋ ನಿಲ್ಲಿಸ್ದೆ ಸಾ. ರಸ್ತೆ ಪಕ್ಕದ ಮರದ ಕೆಳಗಿನಿಂದ ಆಯಮ್ಮ ಓಡ್ಬಂದ್ಲು ಸಾ. ಬಂದವ್ಳೇ ಗುಡಕ್ಕನೆ ಆಟೋ ಒಳ್ಗೆ ಹತ್ಕೊಂಡು ಕೂತ್ಬುಟ್ಲು ಸಾ. ‘ವಿವೇಕಾನಂದ ನಗರಕ್ಕೆ ನಡೆಯಪ್ಪ’ ಅಂದ್ಲು ಸಾ. ನಂಗೆ ಪುನಃ ಹಿಂದಕ್ಕೆ ತಿರುಗೋದು ಇಷ್ಟ ಇರ್ಲಿಲ್ಲ ಸಾ. ಆದ್ರೆ ಏನ್ಮಾಡೋದು ಸಾ?”
ಕೈ ಅಡ್ಡ ತಂದು ಅವನನ್ನು ತಡೆದ ಟೈಟಸ್.
“ಮಾತುಮಾತಿಗೂ ‘ಸಾ ಸಾ’ ಅನ್ನೋದನ್ನ ನಿಲ್ಸಯ್ಯ. ಬರೀ ವಿಷಯ ಏನು ಅಂತ ಹೇಳು. ಅಷ್ಟು ಸಾಕು.” ಸಿಡುಕಿದ.
ಅರೆಕ್ಷಣ ಪೆಚ್ಚಾದ ಮಾದೇಶು. ಕೋದಂಡಯ್ಯ ಅವನ ಭುಜ ತಟ್ಟಿದ.
ಮಾದೇಶು ಬಾಯಿ ತೆರೆದ.
“ಸರಿ ಸಾ. ಇಲ್ಲ… ತಪ್ಪಾಯ್ತು. ಇನ್ನೊಂದ್ಸಲ ‘ಸಾ’ ಅನ್ನಲ್ಲ ಸಾ. ಅಯ್ ಥುತ್.” ಟೈಟಸ್‌ನತ್ತ ಮತ್ತೊಮ್ಮೆ ಪೆಚ್ಚುನೋಟ ಹೂಡಿದ. ಕೋದಂಡಯ್ಯ ಅವನ ಹೆಗಲು ಸವರಿದ.
“ಇರ್‍ಲಿ ಬಿಡು ಮಾದೇಶಣ್ಣಾ. ಗಾಬರಿಯಾಗಬೇಡ. ಮುಂದಕ್ಕೆ ಹೇಳು.”
ಮಾದೇಶು “ಹ್ಞೂಂ ಹಂಗೇ ಮಾಡ್ತೀನಿ” ಅಂದವನು ಮರುಕ್ಷಣ ಕೋದಂಡಯ್ಯನ ಕಡೆ ಮಿಕಿಮಿಕಿ ನೋಡಿದ. ಎಡಗೈ ಮೇಲೆತ್ತಿ ತಲೆ ಕೆರೆದುಕೊಂಡ. “ಸಾ ಸಾ” ಗಳ ಗೊಂದಲದಲ್ಲಿ ತಾನು ಏನು ಹೇಳುತ್ತಿದ್ದೆ ಎಂಬುದೇ ಅವನಿಗೆ ಮರೆತುಹೋಗಿತ್ತು.
ಕೋದಂಡಯ್ಯನಿಗೆ ಅವನ ಸಮಸ್ಯೆ ಅರ್ಥವಾಯಿತು.
“ಆಯಮ್ಮ ನಿನ್ನ ಆಟೋ ಹತ್ಕೊಂಡು ‘ವಿವೇಕಾನಂದ ನಗರದ ಕಡೆ ನಡೆಯಪ್ಪ’ ಅಂದ್ಲು. ಹ್ಞೂ ಈಗ ಮುಂದಕ್ಕೆ ಹೇಳು ರಾಜಾ. ಈಪಾಟಿ ಗಾಬರಿಯಾದ್ರೆ ಹೇಗೆ?”
ಮಾದೇಶುವಿನ ಮುಖ ಅರಳಿತು. “ಹ್ಞೂ ಸಾ. ಈಗ ನೆನಪಾಯ್ತು. ಆಯಮ್ಮ ಮಳೇಲಿ ನೆನೆದುಹೋಗಿದ್ಲು. ಛಳೀಲಿ ನಡುಗ್ತಾ ಇದ್ಲು. ಅಯ್ಯೋ ಪಾಪ ಅಂದ್ಕಂಡು ಆಟೋ ತಿರುಗುಸ್ದೆ ಸಾ. ತಕ್ಷಣ ಅಲ್ಲೇ ಮರದ ಕೆಳಗೆ ಕತ್ಲಲ್ಲಿ ನಿಂತಿದ್ದ ಒಂದು ಬೈಕು ಸ್ಟಾಟಾಯ್ತು. ಅದು ಅಲ್ಲಿ ನಿಂತಿದ್ದನ್ನ ನಾನು ಗಮನ್ಸೇ ಇರ್ಲಿಲ್ಲ. ಬೈಕ್‌ನಂವ ಆಟೋ ಹಿಂದೇನೇ ಬಂದ. ನಂಗೆ ಅನ್ಮಾನ ಆಯ್ತು. ‘ಅದ್ಯಾರಮ್ಮ ಅದೂ? ನಿಮ್ಮ ಕಡೆಯೋರಾ?’ ಅಂತ ಆಯಮ್ಮನ್ನ ಕೇಳ್ದೆ. ‘ಹ್ಞೂ ಕಣಪ್ಪ, ನೀನೇನು ಗಾಬರಿಯಾಗ್ಬೇಡಾ’ ಅಂತ ಆಯಮ್ಮ ನಗಾಡಿದ್ಲು. ಆಯಮ್ಮನ ಮನೆ ಗೇಟ್ ಮುಂದೆ ನಾನು ಆಟೋ ನಿಲ್ಲಿಸ್ದಾಗ ಆ ಬೈಕ್‌ನಂವ ನಮ್ಮ ಆಟೋನ ದಾಟಿ ಮುಂದಕ್ಕೋದ. ಕಾಂಪೌಂಡ್ ಪಕ್ಕ ಬಲಕ್ಕೆ ತಿರುಗಿ ನಿಂತ್ಕಂಡ. ಈಯಮ್ಮ ನಂಗೆ ದುಡ್ಡು ಕೊಟ್ಟು ಆಮೇಲೆ ಆಟೋದಿಂದ ಕೆಳಕ್ಕೆ ಇಳಿದ್ಲು. ತಲೇಮೇಲೆ ಸೆರಗು ಹೊದ್ಕೊಂಡು ಬೈಕ್‌ನವನ ಹತ್ರ ಓಡಿದ್ಲು. ಅವರಿಬ್ರೂ ಆಕಡೆ ಗೇಟ್ ತೆಕ್ಕೊಂಡು ಒಳಾಕೆ ಹೋದ್ರು.”
“ಆಮೇಲೆ?” ಕುತೂಹಲದಿಂದ ಕೇಳುತ್ತಿದ್ದ ಟೈಟಸ್ ಪ್ರಶ್ನೆ ಹಾಕಿದ.
“ಆಮೇಲೆ… ನಾನು ಆಟೋನ ಹಿಂದಕ್ಕೆ ತಿರುಗಿಸ್ಕಂಡು ಬಂದ್ಬುಟ್ಟೆ.” ಮಾದೇಶು ತಣ್ಣಗೆ ಹೇಳಿದ.
“ನೀನೇಳೋದು ಮೆಯಿನ್ ಗೇಟ್ ಮುಂದೆ ನೀನು ಆಯಮ್ಮನ್ನ ಇಳಿಸ್ದೆ. ಆದ್ರೆ ಅವ್ಳು ಆ ಗೇಟನ್ನ ಬಿಟ್ಟು ಮುಂದಕ್ಕೆ ನಡಕೊಂಡು ಹೋಗಿ ಬಲಗಡೆ ಇದ್ದ ಸಣ್ಣ ಗೇಟಿನ ಮೂಲಕ ಒಳಗೆ ಹೋದ್ಲು ಅಂತ ತಾನೆ?”
“ಹ್ಞೂ ಅದೇ ನಾನು ಹೇಳೋದು. ಆವಯ್ಯ ಮೊದ್ಲೇ ಅಲ್ಲೀಗೋಗಿ ನಿಂತಿದ್ನಲ್ಲ? ಹೀಗಾಗೀನೇ ಆಯಮ್ಮಾನೂ ಅತ್ಲಾಗೇ ಹೋದ್ಲು.”
“ಸರಿ, ಆ ಬೈಕ್‌ನಲ್ಲಿದ್ದೋನು ನೋಡೋಕೆ ಹೇಗಿದ್ದ?” ಅಧಿಕಾರಿ ಮುಖ ಮುಂದೆ ತಂದು ಪ್ರಶ್ನಿಸಿದ.
ಮಾದೇಶು ತಲೆ ಅಲುಗಿಸಿದ. “ಅವನ ಮುಖಾನ ನಾನು ನೋಡ್ಲಿಲ್ಲ. ಅವ್ನು ಕರೀ ಪ್ಯಾಂಟು, ಕರೀ ಜರ್ಕಿನ್ ಹಾಕ್ಕೊಂಡಿದ್ದ. ತಲೇ ಮೇಲೆ ಹೆಲ್ಮೆಟ್ಟು. ಕತ್ಲೇ ಬೇರೆ. ಅವನ ಮುಖಾ ನೋಡೋದಿಕ್ಕೇ ಆಗ್ಲಿಲ್ಲ”
ಆಟೋ ದ್ರೈವರ್‌ನಿಂದ ಇನ್ನೇನೂ ತಿಳಿಯುವಂತಿರಲಿಲ್ಲ.
“ಸರಿ ಮಾದೇಶು, ತುಂಬಾ ಥ್ಯಾಂಕ್ಸ್ ಕಣಪ್ಪ. ನಿನ್ನ ಅಡ್ರೆಸ್ಸು, ಫೋನಿದ್ರೆ ಅದ್ರ ನಂಬರ್ ಎರಡನ್ನೂ ಇದ್ರಲ್ಲಿ ಬರೆದುಬಿಡು. ಅಗತ್ಯ ಬಿದ್ರೆ ನಿನ್ನನ್ನ ಮತ್ತೆ ಕಾಂಟ್ಯಾಕ್ಟ್ ಮಾಡ್ತೀನಿ.” ಮಾತು ಮುಗಿಸಿ ಡೈರಿ ಮುಂದೆ ಮಾಡಿದ ಟೈಟಸ್.
ಡೈರಿಯಲ್ಲಿ ತನ್ನ ವಿಳಾಸ ಹಾಗೂ ಫೋನ್ ನಂಬರ್‌ಗಳನ್ನು ಬರೆದು ಎದ್ದು ನಿಂತ ಮಾದೇಶು. “ಸರಿ, ನಾ ಬರ್ತೀನಿ.” ಹೇಳಿ ಹಿಂದೆ ತಿರುಗಿದ.
ಅವನನ್ನೇ ವಿಚಿತ್ರವಾಗಿ ನೋಡಿದ ಟೈಟಸ್. ಕೋದಂಡಯ್ಯ ಅವನ ಭುಜ ಹಿಡಿದ.
“ಏನ್ ಮಾದೇಶಣ್ಣಾ, ನಮ್ ಸಾಹೇಬ್ರನ್ನ ನಿನ್ನ ಸೋದರಮಾವ ಅಂತ ತಿಳಿದ ಹಾಗಿದೆಯಲ್ಲಾ? ಲಕ್ಷಣವಾಗಿ ‘ನಾ ಬರ್ತೀನಿ ಸಾರ್’ ಅನ್ನೋದು ಬಿಟ್ಟು ಸಲೀಸಾಗಿ ‘ನಾ ಬರ್ತೀನಿ’ ಅಂತ ಕೈ ಅಲ್ಲಾಡಿಸ್ಬಿಟ್ಟು ಹೋಗ್ತಿದೀಯ?”
ಮಾದೇಶು ಪೆಚ್ಚಾದ.
“ಸರಿ ಸಾ, ನಾ ಹೋಗಿದ್ದು ಬರ್ತೀನಿ ಸಾ.” ಸಣ್ಣಗೆ ದನಿ ಹೊರಡಿಸಿದ.
ಮಾದೇಶು ಹೊರಟುಹೋದ ನಂತರ ಎಸ್ ಐ ಟೈಟಸ್ ನಿಮಿಷಗಳವರೆಗೆ ಮೌನವಾದ. ನಿಧಾನವಾಗಿ ಮಾತು ಹೊರಡಿಸಿದ.
“ನೀನು ಹೇಳಿದ ಹಾಗೇ ನಡೆದಿದೆ ಕೋದಂಡಯ್ಯ. ಒಂದೇ ಒಂದು ವ್ಯತ್ಯಾಸ ಅಂದ್ರೆ ಕೊಲೆಗಾರ ಆಯಮ್ಮನ ಜತೆ ಆಟೋದಲ್ಲಿ ಬಂದಿಲ್ಲ. ಆಟೋ ಹಿಂದೆ ಬೈಕ್‌ನಲ್ಲಿ ಬಂದಿದ್ದಾನೆ ಅಷ್ಟೇ.”
“ಹೌದು ದೇವ್ರೂ. ಮಾದೇಶು ಹೇಳಿದ ಮಾತುಗಳಿಂದ ಒಂದು ವಿಷ್ಯ ಸ್ಪಷ್ಟ ಆಗುತ್ತೆ. ಮೆಯಿನ್ ಗೇಟ್‌ನಿಂದ್ಲೇ ಮನೇ ಒಳಗೆ ಹೋಗೋ ಉದ್ದೇಶ ದೇವಕಿಯಮ್ಮನಿಗಿದ್ದಿರಬೇಕು. ಆದ್ರಿಂದಾನೇ ಅಲ್ಲೇ ಆಟೋ ನಿಲ್ಸೋದಿಕ್ಕೆ ಡ್ರೈವರ್‌ಗೆ ಹೇಳಿದ್ದಾಳೆ…” ಅವನ ಮಾತನ್ನು ಅಷ್ಟಕ್ಕೇ ಕತ್ತರಿಸಿದ ಟೈಟಸ್. “ನಾನು ಹೇಳ್ತೀನಿ ತಗೋ. ಚಿಕ್ಕ ಗೇಟ್‌ನಿಂದ ಒಳಗೆ ಹೋಗೋದು ಕೊಲೆಗಾರನ ಪ್ಲಾನು. ಹೀಗಾಗಿ ಅವ್ನು ಆಕಡೆ ಹೋಗಿದ್ದಾನೆ. ದೇವಕಿಯಮ್ಮ ಆ ದಾರೀನೇ ಹಿಡೀಬೇಕಾಯ್ತು.”
“ಸರಿಯಾಗಿ ಹೇಳಿದ್ರಿ ಗುರೂ. ಆ ದಾರಿ ಹಿಡಿದ ಆಯಮ್ಮ ಅದೇ ದಾರೀಲಿ ಹೊರಟುಹೋದ್ಲು. ಹಿಂದಕ್ಕೆ ಬರ್‍ಲೇ ಇಲ್ಲ.”
“ಹೌದು ಕೋದಂಡಯ್ಯ. ಆದ್ರೆ ಒಂದು ತಲೆನೋವು. ಆಯಮ್ಮ ತನ್ನ ಕಾರನ್ನ ಕುವೆಂಪುನಗರ ಮಾರ್ಕೆಟ್‌ನಲ್ಲಿ ನಿಲ್ಲಿಸ್ಬಿಟ್ಟು ಆಟೋದಲ್ಲಿ ಮನೆಗೆ ಬಂದದ್ದು ಯಾಕೆ? ಅದು ಹೀಗಿರಬೋದಾ? ಕೊಲೆಗಾರ ಅವಳಿಗೆ ಅಲ್ಲಿಗೆ ಬರೋ ಹಾಗೆ ಸೂಚನೆ ಕೊಟ್ಟಿದ್ದಾನೆ ಅಥವಾ ಅವಳು ಮನೆಯಿಂದ ಹೊರಟಾಗಲೇ ಅವಳನ್ನ ಗುಟ್ಟಾಗಿ ಹಿಂಬಾಲಿಸಿಕೊಂಡು ಬಂಧು ಅವ್ಳು ಆ ಜಾಗಕ್ಕೆ ಬಂದಾಗ ಅಲ್ಲಿ ಕಾರ್ ನಿಲ್ಸೋ ಹಾಗೆ ಮಾಡಿದ್ದಾನೆ. ಅಲ್ಲಿ ಮಳೇರಾತ್ರೀನಲ್ಲಿ ಅಷ್ಟೊತ್ನಲ್ಲೂ ತೆರೆದಿದ್ದ ಯಾವುದೋ ಹೋಟೆಲ್‌ನಲ್ಲಿ ಕಾಫಿ ಕುಡಿಸಿದ್ದಾನೆ. ಆಮೇಲೆ ಯಾವುದೋ ನೆಪ ಹೇಳಿ ಅವಳನ್ನ ಕಾರಿಂದ ಇಳಿಸಿ ಆಟೋ ಹತ್ತಿಸಿದ್ದಾನೆ. ಇದೂ ಅವನ ಕುತಂತ್ರದ ಒಂದು ಭಾಗ ಆಗಿರಬೋದು.”
“ಕರೆಕ್ಟಾಗಿ ಹೇಳಿದ್ರಿ ಗುರೂ. ಅದು ಹಾಗೇ ನಡೆದಿರೋದು.”
“ಅಲ್ಲಿರೋ ಹೋಟೆಲ್‌ನವರನ್ನ ವಿಚಾರಿಸಿದ್ರೆ ಕೊಲೆಗಾರನ ಬಗ್ಗೆ ನಮಗೆ ಏನಾದ್ರೂ ಸಮಾಚಾರ ಸಿಗಬೋದೇನೋ ಕಣಯ್ಯ.” ಉತ್ಸಾಹದಿಂದ ಹೇಳಿದ ಟೈಟಸ್.
ಲೊಚಗುಟ್ಟಿದ ಕೋದಂಡಯ್ಯ.
“ಆ ಕೆಲ್ಸ ಮಾಡಿಯಾಯ್ತು ಗುರೂ. ಪ್ರಯೋಜನ ಆಗ್ಲಿಲ್ಲ. ಕಾವೇರಿ ರೆಸ್ಟೋರೆಂಟಿನ ಸರ್ವರ್ ರಂಗನಾಥ ಹೇಳೋ ಪ್ರಕಾರ ರಾತ್ರಿ ಹತ್ತೂಕಾಲು ಹತ್ತೂವರೆ ಹೊತ್ನಲ್ಲಿ ರಸ್ತೆ ಪಕ್ಕ ನಿಂತಿದ್ದ ಕಾರ್‍ನಿಂದ ಒಬ್ಳು ಹೆಂಗ್ಸು ಕೈತಟ್ಟಿ ಕರೆದು ಎರಡು ದೊಡ್ಡ ಲೋಟಗಳ ಭರ್ತಿ ಕಾಫೀ ತರೋದಿಕ್ಕೆ ಹೇಳಿದಳಂತೆ. ಇವ್ನು ತಗೋಂಡು ಹೋಗಿ ಅವಳಿಗೊಂದು, ಕಾರ್ ಹೊರಗೆ ನಿಂತಿದ್ದ ಒಬ್ಬ ಗಂಡಸಿಗೊಂದು ಲೋಟ ಕೊಟ್ನಂತೆ. ಆ ಹೆಂಗ್ಸೇ ಅಂತೆ ದುಡ್ಡು ಕೊಟ್ಟಿದ್ದು.”
“ಹೌದಾ ಕೋದಂಡಯ್ಯಾ? ಅಂದ್ರೆ ಆ ರಂಗನಾಥ ಕೊಲೆಗಾರನ್ನ ನೋಡಿರಬೋದಲ್ಲ?” ಟೈಟಸ್ ಹೆಚ್ಚುಕಡಿಮೆ ಉದ್ವೇಗದಿಂದ ಅರಚಿದ.
“ಇಲ್ಲಾ ಗುರೂ. ನೀವು ಈಪಾಟೀ ಆಸೆ ಇಟ್ಕೊಳ್ಳೋದು ಒಳ್ಳೇದಲ್ಲಾ. ಆ ಕತ್ಲೇನಲ್ಲಿ ಆ ಮನುಷ್ಯನ ಮುಖ ಸರಿಯಾಗಿ ಕಾಣಿಸ್ಲಿಲ್ಲ ಅಂತಾನೆ ಅವ್ನು. ‘ಸ್ವಲ್ಪ ನೆನಪಿಸ್ಕೋ ರಾಜ’ ಅಂತ ನಾನು ಪುಸಲಾಯಿಸ್ದಾಗ ಅವ್ನು ‘ಇಲ್ಲಾ ಸಾರ್, ಬೀದಿ ದೀಪ ಇರ್‍ಲಿಲ್ಲ. ನಮ್ಮ ಹೋಟೆಲ್‌ನ ಮೇಣದಬತ್ತಿಗಳ ಬೆಳಕು ಅಲ್ಲೀವರೆಗೆ ಬೀಳ್ತಾ ಇರ್‍ಲಿಲ್ಲ. ಆ ಕತ್ಲೆನಲ್ಲಿ ಕರೀ ಜರ್ಕಿನ್ ಹಾಕ್ಕೊಂಡು ನಿಂತಿದ್ದ ಆವಯ್ಯ ಮನುಷ್ಯನೋ ಇಲ್ಲಾ ಕರಡೀನೋ ಅಂತ ನಂಗೆ ಗೊತ್ತಾಗ್ಲೇ ಇಲ್ಲ’ ಅಂತ ಕೈ ಆಡಿಸಿಬಿಟ್ಟ ಭೂಪ.”
ನಿರಾಶೆಯಿಂದ ತಲೆ ಕೆಳಗೆ ಹಾಕಿದ ಅಧಿಕಾರಿ. ನಿಮಿಷದ ನಂತರ ತಲೆಯೆತ್ತಿ ಹೇಳಿದ.
“ಇರಲಿ ಬಿಡು ಕೋದಂಡಯ್ಯ. ನಮ್ಮ ಹಣೇಬರಹಾನೇ ಚೆನ್ನಾಗಿಲ್ಲ ಅಂತ ಕಾಣುತ್ತೆ. ಇನ್ನೊಂದು ವಿಷ್ಯ. ಕೊಲೆಗಾರನ ಬೈಕ್ ಎಲ್ಲಿಗೋಯ್ತು ಕೋದಂಡಯ್ಯ? ಚಿಕ್ಕ ಗೇಟ್ ಹತ್ರ ಅದನ್ನ ನಿಲ್ಸಿ ದೇವಕಿಯಮ್ಮನ್ನ ಕರಕೊಂಡು ಮನೆಯೊಳಗೆ ಹೋದ. ಅವಳನ್ನ ಕೊಲೆ ಮಾಡಿ ಬೆಂಕಿ ಹಾಕ್ದ. ಆ ಗಳಿಗೇಗೆ ಸರಿಯಾಗಿ ಮಾನ್ಸಿ ಹೊರಗೆ ಬಂದ್ಲು. ಅವ್ಳು ನೀರು ಹಾಯ್ಸೋವಾಗ ಅವ್ನು…”
ಅವನ ಮಾತನ್ನು ಅಲ್ಲಿಗೇ ತಡೆದ ಕೋದಂಡಯ್ಯ.
“ಗೊತ್ತಾಯ್ತು. ನಿಮ್ಮ ಪ್ರಶ್ನೆ ಏನು ಅಂತ ಗೊತ್ತಾಯ್ತೂ. ನೀವು ಈಪಾಟೀ ವಿವರಣೆ ಕೊದ್ಬೇಕಾಗಿಲ್ಲ. ಗೇಟ್ ಪಕ್ಕ ನಿಲ್ಸಿದ್ದ ಬೈಕನ್ನ ಕೊಲೆಗಾರ ಯಾರಿಗೂ ಗೊತ್ತಾಗದ ಹಾಗೆ ಯಾವಾಗ ತಗೋಂಡ್ ಹೋದ ಅನ್ನೋದು ನಿಮ್ಮ ಪ್ರಶ್ನೆ ತಾನೆ? ಅದನ್ನ ನಾನು ಹೇಳ್ತೀನಿ. ಸಾಯಂಕಾಲ ಆ ಏರಿಯಾದಲ್ಲಿ ಸ್ವಲ್ಪ ಸುತ್ತಾಡ್ದೆ. ಆ ಚಿಕ್ಕ ಗೇಟ್‌ನ ಕಡೆಯ ಸಾಲಿನ ಮನೆಗಳ ಮುಂದೆ ಕಾಲಾಡಿಸ್ದೆ. ಎಂಟು ಮನೆಗಳಾಚೆ ಇರೋ ರಾಜಾರಾಂ ಅನ್ನೋರಿಂದ ಬೇಕಾದ ಮಾಹಿತಿ ಸಿಕ್ತು. ಅವರು ಹೇಳೋ ಪ್ರಕಾರ ರಾತ್ರಿ ಹನ್ನೆರಡೂಕಾಲು-ಹನ್ನೆರಡೂವರೆಯ ಹೊತ್ನಲ್ಲಿ ಕರೀ ಪ್ಯಾಂಟು, ಕರೀ ಜರ್ಕಿನ್, ತಲೆಗೆ ಹೆಲ್ಮೆಟ್ ಹಾಕ್ಕೊಂಡಿದ್ದವನೊಬ್ಬ ಒಂದು ಬೈಕನ್ನ ತಳ್ಕೊಂಡು ಹೋಗ್ತಾ ಇದ್ನಂತೆ. ಹಾಗೇ ಸ್ವಲ್ಪ ದೂರ ಹೋಗಿ ಆಮೇಲೆ ಬೈಕ್ ಸ್ಟಾರ್ಟ್ ಮಾಡ್ಕೊಂಡು ಹೊರಟ್ಹೋದನಂತೆ. ಇದರರ್ಥ ಆ ಎದುರು ಮನೆ ಶಿವಶಂಕರಪ್ಪ ಹೊರಗೆ ಬಂದದ್ದನ್ನ ನೋಡಿದ ಕೊಲೆಗಾರ ಹೆದರಿ ಕಾಂಪೌಂಡ್ ಹಾರಿ ಹೊರ ಹೋದ. ಅಲ್ಲೇ ಬೈಕ್ ಸ್ಟಾರ್ಟ್ ಮಾಡಿದ್ರೆ ಮಾನ್ಸಿಗೆ, ಶಿವಶಂಕರಪ್ಪಂಗೆ ಗೊತ್ತಾಗ್ಬಿಡುತ್ತೆ ಅಂತಂದ್ಕೊಂಡು ಬೈಕನ್ನ ಸ್ವಲ್ಪ ದೂರ ತಳ್ಕೊಂಡು ಹೋಗಿದ್ದಾನೆ. ಇಷ್ಟೇ ನಡೆದಿರೋದು.”
“ಓಹ್, ಅವ್ನು ಭಾಳಾ ಚಾಲಾಕಿ ಕೋದಂಡಯ್ಯ! ಎಷ್ಟು ಎಚ್ಚರಿಕೆ ತಗೋಂಡಿದ್ದಾನೆ ನೋಡು.” ಉದ್ಗರಿಸಿದ ಟೈಟಸ್.
“ಹೌದೂ ಗುರೂ. ಅವ್ನು ಭಾಳಾ ಚಾಲಾಕೀನೇ. ನೀವು ಅವನಿಗೇನು ಕಡಿಮೆ? ಹೇಳಿ ಮತ್ತೆ ಅವನ್ಯಾರು ಅಂತ.” ಕೋದಂಡಯ್ಯನ ಮುಖದಲ್ಲಿ ತುಂಟ ನಗೆ.
ಟೈಟಸ್ ನಗಲಿಲ್ಲ. ಗಂಭೀರ ದನಿಯಲ್ಲಿ ಮಾತು ಹೊರಡಿಸಿದ.
“ನಾನು ಸರಿಸುಮಾರು ಒಂದು ತೀರ್ಮಾನಕ್ಕೆ ಬಂದಿದ್ದೀನಿ ಕೋದಂಡಯ್ಯ. ಈ ಕೊಲೆ ಮಾಡಿದೋನು ಯಾರು ಅಂತ ಗೊತ್ತಿಲ್ಲ. ಆದ್ರೆ ಕೊಲೆ ಮಾಡಿಸಿದೋನು ಯಾರು ಅಂತ ಗೊತ್ತು.”
ಕೋದಂಡಯ್ಯ ಕಣ್ಣರಳಿಸಿದ. ಅಧಿಕಾರಿ ಮುಂದುವರೆಸಿದ.
ಸಾಯಂಕಾಲ ಆ ವಿವೇಕ್ ಜತೆ ಮಾತಾಡ್ದೆ. ಅವನಿಂದ ಒಂದು ಮುಖ್ಯ ವಿಷಯ ತಿಳೀತು. ಆ ನರಹರಿ ಇದ್ದಾನಲ್ಲ ಅವನಿಗೆ ಆಯಮ್ಮನ ಮೇಲೆ ದ್ವೇಷ. ಅವನಿಲ್ಲಿಗೆ ಬಂದ ಎರಡನೆಯ ದಿನಾನೇ ಅವನಿಗೂ ಆಯಮ್ಮನಿಗೂ ಮಾರಾಮಾರಿ. ‘ನಿನ್ನನ್ನ ಸಿಗಿದು ಹಾಕ್ಬಿಡ್ತೀನಿ’ ಅಂತ ಆವಯ್ಯ ಅವಳ ಮೇಲೆ ಏರಿಹೋದ್ನಂತೆ. ಅವ್ಳು ಹೆದರಿ ಬಾತ್‌ರೂಂ ಒಳಗೆ ಸೇರ್ಕೊಂಡು ಬಾಗಿಲು ಮುಚ್ಕೊಂಡ್ಲಂತೆ. ಇವ್ನು ಹುಚ್ಚು ಹಿಡಿದೋನ ಹಾಗೆ ಬಾಗಿಲಿಗೆ ಮೂರು ನಾಲ್ಕು ಸಲ ಒದ್ನಂತೆ. ಆ ಮಾನ್ಸಿ ಮತ್ತು ಅವರತ್ತಿಗೆ ಓಡಿಬಂದ್ರಂತೆ. ಅವರನ್ನ ಕಂಡ ಮೇಲೆ ಅವ್ನು ಹೊರಗೆ ಹೊರಟೋದ್ನಂತೆ.”
“ಓ ಹೀಗಾ ಗುರೂ? ಇದು ಆ ದಯಾನಂದನಿಗೆ ಗೊತ್ತಾ?”
“ಗೊತ್ತಂತೆ. ಮಾನ್ಸೀನೇ ಹೇಳಿದ್ಲಂತೆ.”
“ಈ ನರಹರೀನೇ ಕೊಲೆ ಮಾಡಿಸ್ದೋನು ಅಂತ ನೀವು ಹೇಳೋದು?”
“ಹೌದು ಕಣಯ್ಯ. ಬೇರೊಬ್ಬನ ಮೂಲಕ ಕೊಲೆ ಮಾಡಿಸಿದ್ದಾನೆ.”
ಕೋದಂಡಯ್ಯ ಮುಖ ಕೆಳಗೆ ಹಾಕಿದ. ಅವನಿಗೆ ನಿರಾಶೆಯಾದಂತಿತ್ತು. ತಲೆ ತಗ್ಗಿಸಿದಂತೇ ಸಣ್ಣಗೆ ದನಿ ತೆಗೆದ.
“ನಿಮ್ಮ ಮಾತಿಗೆ ಏನು ಆಧಾರ ಗುರುದೇವಾ?”
“ನೋಡೂ ಕೋದಂಡಯ್ಯ, ಈ ಕೊಲೆಗೆ ದರೋಡೆ ಕಾರಣ ಅಲ್ಲ ಅನ್ನೋದು ಸ್ಪಷ್ಟವಾಗೇ ಇದೆ. ಪೋಸ್ಟ್‌ಮಾರ್ಟಂ ರಿಪೋರ್ಟ್ ಹೇಳೋ ಪ್ರಕಾರ ಆಯಮ್ಮನ ಮೇಲೆ ಲೈಂಗಿಕ ಅತ್ಯಾಚಾರವೇನೂ ನಡೆದಿಲ್ಲ. ಅಂದ್ರೆ ಈ ಕೊಲೆಗೆ ಹಣ ಮತ್ತು ಸೆಕ್ಸ್ ಎರಡೂ ಕಾರಣ ಅಲ್ಲ. ಅಂದಮೇಲೆ ವೈಯುಕ್ತಿಕ ದ್ವೇಷದ ಸಾಧ್ಯತೆ ಮಾತ್ರ ಉಳಿಯುತ್ತೆ ಅಲ್ವಾ?” ಪ್ರಶ್ನಿಸಿದ.
ಕೋದಂಡಯ್ಯ ತಲೆದೂಗಿದ. “ಮುಂದೆ ಹೇಳಿ.” ಪ್ರೋತ್ಸಾಹಿಸಿದ.
“ದೇವಕಿಯ ಮೇಲೆ ಅಂಥಾ ವೈಯುಕ್ತಿಕ ದ್ವೇಷ ಇದ್ದದ್ದು ಇವನೊಬ್ಬನಿಗೆ ಮಾತ್ರ. ತನ್ನ ಮೇಲೆ ಅನುಮಾನ ಬರದಿರಲಿ ಅಂತ ಬೇರಾರಿಂದಲೋ ಕೊಲೆ ಮಾಡ್ಸಿದಾನೆ. ತಾನು ಎಲ್ಲಾನೂ ನೋಡ್ತಾ ಅಥವಾ ಕೊಲೆಗಾರನಿಗೆ ಅಗತ್ಯವಾದ ಸೂಚನೆಗಳನ್ನ ಕೊಡ್ತಾ ದೂರದಲ್ಲಿ ನಿಂತಿದ್ದಾನೆ. ತಾನು ಕುಂಭಕರ್ಣನ ಹಾಗೆ ನಿದ್ದೆ ಮಾಡ್ಬಿಟ್ಟೆ, ನಂಗೇನೂ ಗೊತ್ತೇ ಇಲ್ಲ ಅನ್ನೋದು ನಾಟಕ.”
“ಹೌದು ಗುರೂ.” ತಲೆದೂಗಿದ ಕೋದಂಡಯ್ಯ. “ಕೊಲೆ ಮಾಡಿದೋನು ಯಾರು?” ಪ್ರಶ್ನಿಸಿದ.
“ಅದನ್ನ ಪತ್ತೇ ಮಾಡೋದಿಕ್ಕೇ ನಾನಿಷ್ಟು ಶ್ರಮ ಪಡ್ತಾ ಇರೋದು.” ಕ್ಷಣ ನಿಧಾನಿಸಿ ಹೇಳಿದ. “ನಾನೀಗ ಕೊಲೆಗಾರನ ಬೆನ್ನು ಹತ್ತಿದ್ದೀನಿ ಕಣಯ್ಯ. ಒಂದೆರಡು ಸುಳಿವು ಸಿಕ್ಕಿವೆ.”
“ಏನು ಸ್ವಾಮೀ ಅವೂ? ನಂಗೆ ಹೇಳಬಾರದೇ?”
“ಯಾರಿಗೆ ಹೇಳಿದ್ರೂ ನಿಂಗೆ ಹೇಳಬಾರದು. ಹರಕುಬಾಯಿ ನಿಂದು.” ಕಿಡಿಗೇಡಿಯ ನಗೆ ನಕ್ಕ.
ಕೋದಂಡಯ್ಯ ಅಧಿಕಾರಿಯನ್ನೇ ನೇರವಾಗಿ ನೋಡಿದ. ಮುಖ ಗಂಟು ಹಾಕಿ ಹೇಳಿದ. “ಸರಿ, ನಂಗೇನೂ ಬ್ಯಾಡ ಅದು. ನೀವೇ ಮಡಿಕ್ಕೊಳ್ಳೀ.” ಹಾಗೆಂದವನು ಟೇಬಲ್‌ನ ಅಂಚಿನಲ್ಲಿದ್ದ ನಿದ್ರೆಯ ಗುಳಿಗೆಗಳ ಬಾಟಲಿನತ್ತ ಬೆರಳು ಮಾಡಿ ಅಚ್ಚರಿಯ ಪ್ರಶ್ನೆ ಹಾಕಿದ.
“ಇದ್ಯಾವಾಗ ಶುರೂ ಆಯ್ತೂ ಗುರೂ ನಿಮ್ಗೆ ಈ ಗುಳಿಗೆ ಚಟ?”
“ಅಯ್ ನಂದಲ್ಲ ಕಣಯ್ಯ ಅದೂ. ಆ ದಯಾನಂದ ಮನೇಲೂ ಒಂದು ಕೋಣೇನ ಆಫೀಸ್ ರೂಂ ಅಂತ ಮಾಡ್ಕೊಂಡಿದ್ದಾನೆ. ಆ ಕೋಣೇನಲ್ಲಿ ಬೆಳಿಗ್ಗೆ ಹುಡುಕಾಡೋವಾಗ ಸಿಕ್ತು. ಟೇಬಲ್ ಡ್ರಾ ಒಳಗಿತ್ತು. ಇದ್ಯಾತಕ್ಕೆ ಇಟ್ಕೊಂಡಿರಬೋದು ಅಂತ ಕುತೂಹಲ ಆಯ್ತು. ಎತ್ಕೊಂಡು ಬಂದೆ ಅಷ್ಟೇ.”
ಬಾಟಲು ಕೈಗೆತ್ತಿಕೊಂಡು ಮುಚ್ಚಳ ತೆರೆದ ಕೋದಂಡಯ್ಯ. ಪುಟ್ಟ ಪುಟ್ಟ ಬಿಳುಪು ಮಾತ್ರೆಗಳನ್ನು ಅಂಗೈಗೆ ಸುರಿದುಕೊಂಡ. ಒಂದೊಂದಾಗಿ ಲೆಕ್ಕ ಹಾಕಿದ.
ಇಪ್ಪತ್ತೊಂದು ಗುಳಿಗೆಗಳಿದ್ದವು.
“ಮೂವತ್ತು ಗುಳಿಗೆಗಳ ಬಾಟಲು ಇದು ಗುರೂ. ಆವಯ್ಯ ಒಂಬತ್ತು ಗುಳಿಗೆಗಳನ್ನ ತಿಂದಿದ್ದಾನೆ. ಈ ಬಿಸಿನೆಸ್‌ಮೆನ್‌ಗಳಿಗೆ ಇದಿಲ್ಲದೇ ನಿದ್ದೆ ಬರೋದಿಲ್ಲ. ಕರ್ಮ.” ಗೊಣಗಿದ.
ನಕಾರದಲ್ಲಿ ತಲೆಯಾಡಿಸಿದ ಟೈಟಸ್.
“ಆವಯ್ಯ ಇದನ್ನ ಉಪಯೋಗಿಸಿಲ್ಲ ಕೋದಂಡಯ್ಯ.”
“ಅಂ! ಹಾಗಂದನಾ? ಹಾಗಿದ್ರೆ ಒಂಬತ್ತು ಗುಳಿಗೆಗಳನ್ನ ಯಾರಿಗೆ ತಿನ್ನಿಸಿದನಂತೆ?”
“ಅಪರೂಪಕ್ಕೊಂದ್ಸಲ ಆ ದೇವಕಿ ತಗೋತಿದ್ಲಂತೆ. ಹಾಗಂತ ಹೇಳ್ದ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳೋದು ಬೇಡ.”
ಕೋದಂಡಯ್ಯನ ಮುಖದಲ್ಲಿ ಅಪನಂಬಿಕೆ ಎದ್ದುಕಂಡಿತು.
“ಆಯಮ್ಮ ತಗೋಳೋ ಹಾಗಿದ್ರೆ ಇದು ಬೆಡ್‌ರೂಂನಲ್ಲಿರಬೇಕಾಗಿತ್ತು. ದಯಾನಂದನ ಆಫೀಸ್‌ರೂಂನಲ್ಲಿ ಯಾಕಿರುತ್ತೆ ಹೇಳೀ?”
“ಅಯ್ ಬಿಡಯ್ಯ. ಬೇಕಾದಾಗ ಗಂಡನ ಆಫೀಸ್‌ರೂಂಗೆ ಹೋಗಿ ಇದನ್ನ ತಗೊಳ್ಳೋ ಸ್ವಾತಂತ್ರ್ಯ ಹೆಂಡತಿಗಿಲ್ವಾ?” ಅಸಹನೆಯ ದನಿಯಲ್ಲಿ ಮಾತು ಮುಗಿಸಿ ಮೌನವಾದ ಅಧಿಕಾರಿ.
ಅಧಿಕಾರಿಗೆ ಆಯಾಸವಾಗಿದೆಯೆಂದು ಕೋದಂಡಯ್ಯನಿಗೆ ಗೊತ್ತಾಯಿತು.
ತನ್ನ ಮನದಲ್ಲಿ ಮೂಡಿದ ಪ್ರಶ್ನೆಯನ್ನು ಹೊರಹಾಕಲು ಇದು ಸರಿಯಾದ ಸಮಯವಲ್ಲ! ವಿವೇಕ ಎಚ್ಚರಿಸಿತು. ದನಿ ಮೃದುಗೊಳಿಸಿ ಹೇಳಿದ.
“ಇರಲಿ ಗುರೂ, ಟೈಮ್ ಒಂಬತ್ತಾಗ್ತಾ ಬಂತು. ಮನೇಗೆ ಹೋಗಿ ನೆಮ್ಮದಿಯಾಗಿ ನಿದ್ದೆ ಮಾಡಿ. ಬೇರೆ ಏನು ರಾಜಕಾರ್ಯ ಇದ್ರೂ ನಾಳೆ ನೋಡ್ಕೊಳ್ಳೋಣ.”
“ಹೌದು ಕೋದಂಡಯ್ಯ, ಇನ್ನು ಹೊರಡೋಣ. ನಂಗೆ ಹಸಿವಾಗ್ತಿದೆ.” ಮೇಲೆದ್ದು ನಿಂತ ಟೈಟಸ್.
“ಒಂದ್ವಿಷ್ಯಾ ಗುರೂ.” ಸಣ್ಣಗೆ ಸ್ವರ ಹೊರಡಿಸಿದ ಕೋದಂಡಯ್ಯ.
“ಏನಯ್ಯಾ ಅದೂ?” ಅಧಿಕಾರಿ ಕುತೂಹಲಗೊಂಡಿದ್ದ.
“ನೋಡಿ ಗುರೂ, ಆ ದೇವರಿಗೆ ನಿಮ್ಮ ಮೇಲೆ ಅದೇನೋ ಭಾಳಾ ಪ್ರೀತಿ ಅಂತ ಕಾಣುತ್ತೆ. ನಿಮಗೆ ಬಡಿಸೋದಿಕ್ಕೆ ಬಿರಿಯಾನೀನ ಈಗಲೂ ರೆಡೀ ಮಾಡಿಟ್ಕೊಂಡು ಕೂತಿದ್ದಾನಂತೆ. ಹೋಗಿ ಹೊಡೆದುಬಿಡೋಣವಾ?”
“ಬೇಡ ಕೋದಂಡಯ್ಯ. ಒಂದು ದಿನಕ್ಕೆ ಎರಡು ಸಲ ಮಟನ್ ತಿನ್ನೋದು ಮೈಗೆ ಒಳ್ಳೇದಲ್ಲ. ಕೊಲೆಸ್ಟರಾಲು ಗಿಲೆಸ್ಟರಾಲು ಅಂತ ಏನೇನೋ ತಾಪತ್ರಯ.”
“ಹ್ಞು ಸರಿ ಬಿಡಿ.” ಕೋದಂಡಯ್ಯ ಲೊಚಗುಟ್ಟಿದ. ಗೋಡೆಯ ಮೇಲಿದ್ದ ನಾಗರಹೊಳೆಯ ಹುಲಿಯ ಚಿತ್ರದತ್ತಲೇ ನೋಡುತ್ತಾ ಹೇಳಿದ. “ಅಲ್ಲಾ ಗುರೂ, ನಾವು ಅಮಾವಾಸ್ಯೆಗೋ ಹುಣ್ಣಿಮೆಗೋ ಒಂದೊಂದ್ಸಲ ಒಂದು ನೂರೋ ಇನ್ನೂರೋ ಗ್ರಾಮ್ ಮಟನ್ ತಿಂದುಬಿಟ್ರೆ ಕೊಲೆಸ್ಟೆರಾಲ್ ಏರಿಬಿಡುತ್ತೇ ಅಂತ ಗೋಳಾಡ್ತೀವಿ. ಈ ಹುಲಿ, ಸಿಂಹ, ಚಿರತೆ ಅವೆಲ್ಲಾ ದಿನಕ್ಕೆ ಮೂರುಹೊತ್ತೂ, ಮುನ್ನೂರ ಅರವತ್ತೈದು ದಿನಾನೂ ತಿನ್ನೋದು ಬರೀ ಮಟನ್ನೇ. ಅವಕ್ಕೆ ಕೊಲೆಸ್ಟರಾಲ್ ಹೆಚ್ಚಾಗಲ್ವಾ ಸಾರ್?”
“ಹೋಗಯ್ಯ ನಂಗೊತ್ತಿಲ್ಲ.” ಕೈ ಒದರಿ ಹೊರನಡೆದ ಟೈಟಸ್.
* * *
-ಏಳು-
ಬೈಕ್ ನಿಂತ ಶಬ್ಧ ಕೇಳಿ ಚಕ್ಕನೆ ತಲೆಯೆತ್ತಿದ ಪೇದೆ ಅಂತೋಣಿ ವಾಹನದಿಂದ
ಕೆಳಗಿಳಿಯುತ್ತಿದ್ದ ವ್ಯಕ್ತಿಯನ್ನು ನೋಡಿ ಕಣ್ಣರಳಿಸಿದ.
‘ಈಪಾಟೀ ಕೋದಂಡಯ್ಯ! ಇಷ್ಟೊತ್ತಿನಲ್ಲಿ ಯಾಕೆ ಬಂದ?’ ಅಚ್ಚರಿಯ ಜತೆ ಪ್ರಶ್ನೆಯೂ ಮೂಡಿತು.
“ಇದೇನ್ಸಾರ್ ಇಷ್ಟೊತ್ನಲ್ಲೀ?” ಕೇಳಿಯೇಬಿಟ್ಟ.
“ಸುಮ್ನೆ ಗಾಳಿ ಸೇವನೆಗೆ ಅಂತ ಬಂದೆ ಕಣಯ್ಯ. ಹಾಗೇ ನಿನ್ನನ್ನ ಸ್ವಲ್ಪ ನೋಡ್ಕೊಂಡು ಹೋಗೋಣ ಅನ್ನಿಸ್ತು. ಬಂದೆ. ನಾ ಬಂದದ್ದು ನಿಂಗಿಷ್ಟ ಇಲ್ಲ ಅಂದ್ರೆ ಹಾಗಂತ ಹೇಳ್ಬಿಡು. ಹಿಂದಕ್ಕೆ ಹೊರಟುಬಿಡ್ತೀನಿ.” ನಗೆಯಾಡಿದ ಕೋದಂಡಯ್ಯ.
“ಅಯ್ಯಯ್ಯೋ! ನಾನ್ಯಾಕೆ ಹಾಗನ್ಲಿ? ಧಾರಾಳವಾಗಿ ಬನ್ನಿ. ಬಂದೋರು ರಾತ್ರಿ ಪೂರ್ತಿ ಇಲ್ಲೇ ಇರಿ. ನಂಗೂ ಜತೆ ಅಂತ ಒಬ್ಬರು ಇದ್ದ ಹಾಗೆ ಆಗುತ್ತೆ.” ಪ್ರತಿಯಾಗಿ ನಗೆ ಬೀರಿದ ಅಂತೋಣಿ.
“ಸರಿ ಬಿಡು. ಹಂಗೇ ಮಾಡೋಣ.” ಹೇಳಿದ ಕೋದಂಡಯ್ಯ ಹತ್ತಿರ ಬಂದ. ತಗ್ಗಿದ ಸ್ವರದಲ್ಲಿ ಪ್ರಶ್ನಿಸಿದ. “ಈ ಮನೇಲಿ ನರಹರಿ ಅಂತ ಒಬ್ಬ ಇದ್ದಾನಂತಲ್ಲ, ಎಲ್ಲಿ ಅವ್ನು?”
“ಅವ್ನಾ? ಗುಮ್ಮನ ಗುಸಕ ಅವ್ನು. ಯಾರ ಕಣ್ಣಿಗೂ ಬೀಳೋದಿಲ್ಲ. ಮೂರು ಹೊತ್ತೂ ಆ ಔಟ್‌ಹೌಸ್‌ನಲ್ಲಿ ಕಂಬ್ಳಿ ಹೊದ್ಕೊಂಡು ಬಿದ್ದಿರ್ತಾನೆ.” ಅಂತೋಣಿಯ ದನಿಯಲ್ಲಿ ಅಸಡ್ಡೆಯಿತ್ತು.
“ಸರಿ, ನಾ ಹೋಗಿ ಸ್ವಲ್ಪ ಅವನನ್ನ ಒದ್ದು ಎಬ್ಬಿಸ್ತೀನಿ” ಎನ್ನುತ್ತಾ ಔಟ್‌ಹೌಸ್‌ನತ್ತ ನಡೆದ ಕೋದಂಡಯ್ಯ.
ಕಲ್ಲು ಚಪ್ಪಡಿಗಳ ಹಾಸಿನ ಹಾದಿಯಲ್ಲಿ ನಡೆದು ಕತ್ತಲೆಯಲ್ಲಿ ಮುಳುಗಿದ್ದ ಔಟ್‌ಹೌಸ್ ಸಮೀಪಿಸಿದ. ಮೈಕೈಗೆ ತಾಗುತ್ತಿದ್ದ ಗಿಡಗಳ ರೆಂಬೆಗಳನ್ನು ಸರಿಸುತ್ತಾ ಗೊಣಗಿದ. “ಥತ್! ಯಾವ ಸೀಮೆ ಜನ! ಈಪಾಟೀ ಗಿಡಗಂಟೆ ಬೆಳೆಸ್ಕೊಂಡಿದ್ದಾರೆ! ಕತ್ತರಿಸೋದಿಕ್ಕೇನು ಧಾಡಿ?”
ಕಿಟಕಿಯ ಮುಂದೆ ನಿಂತು ಗಾಜಿಗೆ ಮುಖ ಒತ್ತಿದ. ಒಳಗೆ ಗಾಢಾಂಧಕಾರ. ಏನೊಂದೂ ಕಾಣಿಸಲಿಲ್ಲ. ಎರಡು ಹೆಜ್ಜೆ ಮುಂದಿಟ್ಟು ನಸುತೆರೆದಿದ್ದ ಮತ್ತೊಂದು ಕಿಟಕಿಯನ್ನು ಸಮೀಪಿಸಿದ. ಕಿವಿಗಳು ಚುರುಕಾದವು.
ನೀಳ ನಿಟ್ಟುಸಿರಿನ ಶಬ್ಧ!
ಹಿಂದೆಯೇ ಹೊರಳಾಟದ ಮಸುಕು ಶಬ್ಧಗಳು!
ಒಳಗಿರುವ ವ್ಯಕ್ತಿಗೆ ನಿದ್ದೆ ಹತ್ತಿಲ್ಲ! ನಿಟ್ಟುಸುರುಗರೆಯುತ್ತಾ ಹೊರಳಾಟ ನಡೆಸಿದೆ!
ಕಿಟಕಿಗೆ ಸಮೀಪವಾಗಿ ನಿಂತು ಲಘುವಾಗಿ ಕೆಮ್ಮಿದ ಕೋದಂಡಯ್ಯ.
ಒಳಗಿನಿಂದ ಯಾವ ಪ್ರತಿಕ್ರಿಯೆಯೂ ಇಲ್ಲ! ಕಿಟಕಿಯ ಸರಳಿಗೆ ಮುಖ ಒತ್ತಿ ಮತ್ತೊಮ್ಮೆ ಕೆಮ್ಮಿದ.
“ಯಾರದು?” ಈಗ ಒಳಗಿನಿಂದ ಪ್ರಶ್ನೆ ಬಂತು.
“ನಾನು ಕಣಪ್ಪ… ನಿನ್ನ ದೋಸ್ತ್.” ಮೆಲ್ಲಗೆ ಹೇಳಿದ ಕೋದಂಡಯ್ಯ.
“ಯಾರ್ರೀ ಅದೂ?” ಈ ಸಲ ಪ್ರಶ್ನೆಯಲ್ಲಿ ಅಸಹನೆಯಿತ್ತು.
“ನನ್ನನ್ನ ಕೋದಂಡಯ್ಯ ಅಂತಾರೆ. ಹೊಟ್ಟೆಪಾಡಿಗೆ ಪೋಲೀಸು ಇಲಾಖೆ ಸೇರಿದ್ದೀನಿ.”
ಕೆಲಕ್ಷಣಗಳ ಮೌನ. ನಂತರ ಗೊಣಗಾಟದ ಶಬ್ಧ ಕಿವಿಗಳನ್ನು ಇರಿಯಿತು.
“ಇಷ್ಟೊತ್ನಲ್ಲಿ ಈ ಪೋಲೀಸ್ ಕಾಟ ನಂಗ್ಯಾಕೆ? ಇದ್ಯಾವ ಜನ್ಮದ ಕರ್ಮ ಇದು. ಸುಮ್ನೆ ನೆಮ್ಮದಿಯಾಗಿ ನಿದ್ದೆ ಮಾಡೋದಕ್ಕೂ ಬಿಡೋದಿಲ್ಲ ಶನಿಗಳು.”
“ಸ್ವಲ್ಪ ಬಾಗಿಲು ತೆಗೆಯಪ್ಪ. ಬೇಸರ ಆದ್ರೂನೂ ಅದನ್ನ ಮುಚ್ಚಿಟ್ಕೊಂಡು ಒಂದೆರಡು ಒಳ್ಳೇ ಮಾತಾಡೋ ನಟನೆಯನ್ನಾದ್ರೂ ಮಾಡಬಾರ್ದಾ? ಅದೆಂಥಾ ಆಕ್ಟರ್ ನೀನು?”
ಮರುಕ್ಷಣ ಕೋಣೆಯಲ್ಲಿ ಬೆಳಕು ಮೂಡಿತು. ದಢಾರನೆ ಬಾಗಿಲು ತೆರೆದ ನರಹರಿ.
ಸುಕ್ಕುಗಟ್ಟಿದ ಪೈಜಾಮಾ, ತೋಳಿಲ್ಲದ ಬನಿಯನ್‌ನಲ್ಲಿದ್ದ ಕೆದರಿದ ತಲೆಯ ನರಹರಿ ಕೋದಂಡಯ್ಯನತ್ತ ಉರಿನೋಟ ಬೀರಿದ.
“ನೀನು ನೆಮ್ಮದಿಯಾಗಿ ನಿದ್ದೆ ಮಾಡ್ತಾ ಇದ್ದಿದ್ರೆ ನಾನು ನಿಂಗೆ ತೊಂದ್ರೆ ಕೊಡ್ತಾ ಇರ್‍ಲಿಲ್ಲ. ಆದ್ರೆ ನೀನು ನಿದ್ದೆ ಬಾರದೇ ಹೊರಳಾಡ್ತಾ ಇರೋದನ್ನ ನೋಡ್ದಾಗ ನಿನ್ ಜತೆ ಆತ್ಮೀಯವಾಗಿ ಎರಡು ಮಾತಾಡೋಣ, ನಿನ್ ಮನಸ್ನಲ್ಲಿ ಕೊರೀತಾ ಇರೋ ಚಿಂತೆ ಏನೂ ಅಂತ ವಿಚಾರಿಕೊಳ್ಳೋಣ ಅಂತ ಬಂದೆ. ಹೇಳು, ಅದು ತಪ್ಪಾ?”
ನರಹರಿಯ ಮುಖದ ಬಣ್ಣ ಏಕಾಏಕಿ ಬದಲಾಯಿತು. ಕೋಪದ ಜಾಗದಲ್ಲಿ ಅಚ್ಚರಿ, ಗೊಂದಲ.
ಬೆಳಗಿನಿಂದ ಎರಡು ಸಾರಿ ವಕ್ಕರಿಸಿ ತಲೆ ತಿಂದಿದ್ದ ಎಸ್. ಐ. ಟೈಟಸ್‌ನಂತಿಲ್ಲ ಇವನು! ಮಾತು ಬೇರೆ ಇಷ್ಟು ಮೃದುವಾಗಿದೆ! ಪೋಲೀಸರಿಗೂ ಮೃದುಹೃದಯ ಅನ್ನುವುದು ಇರುತ್ತದೆಯೇ?
ಕೋದಂಡಯ್ಯನನ್ನೇ ಮಿಕಿಮಿಕಿ ನೋಡಿದ.
ಅವನ ಭುಜದ ಮೇಲೆ ಕೈಯಿಟ್ಟ ಕೋದಂಡಯ್ಯ.
“ಹೊರಗೆ ಹವಾ ತಣ್ಣಗಿದೆ. ಒಂದೆರಡು ನಿಮಿಷ ಕೂರೋಣ ಬಾ.” ಅವನ ಭುಜ ಹಿಡಿದಂತೆಯೇ ಹೊರಗೆ ಕರೆತಂದು ಸಿಮೆಂಟ್ ಬೆಂಚಿನ ಮೇಲೆ ಕೂರಿಸಿದ. ತಾನು ಪಕ್ಕದಲ್ಲಿ ಕುಳಿತ.
“ಕೊಳ್ಳಿದೆವ್ವ ಸಿನಿಮಾದಲ್ಲಿ ಹೀರೋಯಿನ್‌ನ ಚುಡಾಯಿಸ್ಕೊಂದು ಓಡಾಡ್ತಿದ್ದ ಕಾಲೇಜು ಹುಡುಗ ನೀನೇ ಅಲ್ವೇನಪ್ಪ?”
ನರಹರಿಯ ಮುಖದಲ್ಲಿ ಕಿರುನಗೆ ಹರಡಿದ್ದು ಬೀದೀ ದೀಪದ ಮಸಕು ಬೆಳಕಿನಲ್ಲಿ ಸ್ಪಷ್ಟವಾಗಿ ಕಂಡಿತು.
“ಭಾಳಾ ಚೆನ್ನಾಗಿ ಆಕ್ಟ್ ಮಾಡಿದ್ದೀಯ ಕಣಪ್ಪ.” ಕೋದಂಡಯ್ಯ ಜಾಲ ಹೊಸೆದ.
ನರಹರಿ ಹಳ್ಳಕ್ಕೆ ಬಿದ್ದ.
“ಹ್ಞೂಂ ಸಾರ್. ಆ ರೋಲ್ ನಂಗೂ ಇಷ್ಟ ಆಯ್ತು. ಆಮೇಲೆ ಮತ್ತೆ ಅಂಥದೇ ಮತ್ತೊಂದೆರಡು ರೋಲ್ ಬಂದ್ವು ಲವ್ ಇನ್ ಪಾಂಡಿಚೆರಿ, ಕನ್ಯಾಕುಮಾರಿ, ಸೆರಗಿನ ಕೆಂಡ ಫಿಲ್ಮ್‌ಗಳಲ್ಲಿ. ನೀವು ನೋಡಿರಬೇಕಲ್ಲ?” ಉತ್ಸಾಹದಿಂದ ಹೇಳಿದ.
“ಹ್ಞಾ ನೋಡಿದ್ದೀನಿ ಕಣಪ್ಪ. ನನ್ ಹೆಂಡ್ತೀ ಮಕ್ಳೂ ನೋಡಿದ್ದಾರೆ. ಅವರಿಗೂ ತುಂಬಾ ಇಷ್ಟ ಆಯ್ತು.” ಸ್ವಲ್ಪ ತಡೆದು ಪ್ರಶ್ನಿಸಿದ. “ಇತ್ತೀಚೆಗೆ ಯಾವ ಸಿನಿಮಾದಲ್ಲಿ ಮಾಡಿದ್ದೀಯಪ್ಪ?”
ನರಹರಿ ತಲೆ ಕೆಳಗೆ ಹಾಕಿದ. “ಇಲ್ಲಾ ಸಾರ್, ಇತ್ತೀಚೆಗೆ ಅಂಥಾ ಒಳ್ಳೇ ರೋಲ್ಸ್ ಸಿಗ್ಲೇ ಇಲ್ಲಾ.” ಕ್ಷಣ ತಡೆದು ಮುಂದುವರೆಸಿದ. “ಎಲ್ಲಾ ಮೋಸ ಸಾರ್. ಸಿನಿಮಾ ಅಂದ್ರೆ ಹೊರಗಷ್ಟೇ ಚಂದ. ಒಳಗೆ ಹೋದ್ರೆ ಕಾಲು ಹಾಕಿದ ಕಡೇಲೆಲ್ಲಾ ಬರೀ ಕಚಡಾ. ಬೇಜಾರಾಗಿಬಿಡ್ತು. ಹಿಂದಕ್ಕೆ ಬಂದ್ಬಿಟ್ಟೆ. ಇನ್ನು ಆ ಕಡೆ ತಲೆ ಹಾಕೋದಿಲ್ಲ.” ದನಿಯಲ್ಲಿ ಅತೀವ ಬೇಸರವಿತ್ತು.
“ಸಿನಿಮಾ ಜಗತ್ತು ಅಂದ್ರೆ ಹಾಗೇ ಕಣಪ್ಪ. ಇರಲಿ, ಮುಂದೇನು ಮಾಡಬೇಕು ಅಂತಿದೀಯ?” ಬೇಸರಗೊಂಡವನ ಮುಂಗೈಯನ್ನು ಮೃದುವಾಗಿ ತಟ್ಟಿದ ಕೋದಂಡಯ್ಯ.
“ಏನು ಮಾಡ್ಬೇಕು ಅಂತ ಗೊತ್ತಾಗ್ತಾ ಇಲ್ಲ. ಏನಾದ್ರೂ ಬಿಸಿನೆಸ್ ಮಾಡು ಅಂತ ಅಣ್ಣ ಹೇಳ್ತಾನೆ.”
“ಒಳ್ಳೇ ಯೋಚನೆ.” ಕೋದಂಡಯ್ಯ ಮೆಚ್ಚುಗೆ ತೋರಿದ. ಹಿಂದೆಯೇ ಮಾತು ಸೇರಿಸಿದ. “ನಿಮ್ಮಣ್ಣನಿಗೆ ಅಕ್ಸಿಡೆಂಟ್ ಆಯ್ತು. ಇನ್ನು ಅವ್ರು ಆಸ್ಪತ್ರೆಯಿಂದ ಬಂದು ವ್ಯವಹಾರ ನೋಡ್ಕೊಳ್ಳೋದಕ್ಕೆ ತಿಂಗಳೇ ಬೇಕಾಗಬೋದು. ಈ ಸಮಯದಲ್ಲಿ ನೀನು ವ್ಯವಹಾರಕ್ಕೆ ಕೈಹಾಕಿದ್ರೆ ನಿಮ್ಮಣ್ಣನಿಗೆ ನೆಮ್ಮದಿ.”
“ಹೌದು ಸರ್. ನಾನೂ ಅದೇ ಯೋಚಿಸ್ತಿದೀನಿ. ಅಣ್ಣಂಗೆ ಈಗ ನನ್ನ ಸಹಾಯದ ಅಗತ್ಯ ತುಂಬಾ ಇದೆ. ಈಗ ನಾನು ಅವನ ಬೆನ್ನಿಗೆ ನಿಲ್ಲಬೇಕು.” ಕಪ್ಪು ಆಕಾಶದತ್ತ ಮೋಗ ಹೂಡಿ ನಿಧಾನವಾಗಿ ಮಾತು ಹೊರಡಿಸಿದ ನರಹರಿ.
“ಹೆಂಡತಿಯ ಕೊಲೆಯ ಶಾಕ್‌ನಿಂದ ಚೇತರಿಸಿಕೊಳ್ಳೋದಿಕ್ಕೆ ನಿಮ್ಮಣ್ಣಂಗೆ ತುಂಬಾ ಕಾಲ ಬೇಕಾಗಬೋದು. ಆ ದುಃಖಾನ್ನ ಮರೆತು ಆತ ವ್ಯವಹಾರದ ಕಡೆ ಗಮನ ಕೊಡೋದಿಕ್ಕೆ ಸಧ್ಯಕ್ಕಂತೂ ಆಗೋದಿಲ್ಲ. ಎಲ್ಲಾ ಜವಾಬ್ಧಾರಿ ನಿನ್ನ ತಲೇ ಮೇಲೇ.” ಎಚ್ಚರಿಕೆಯಿಂದ ಪದಗಳನ್ನು ಜೋಡಿಸಿದ ಕೋದಂಡಯ್ಯ.
ನರಹರಿ ಮಾತಾಡಲಿಲ್ಲ.
ಕೋದಂಡಯ್ಯ ಮತ್ತೊಂದು ಅಸ್ತ್ರ ಪ್ರಯೋಗಿಸಿದ.
“ನಿಮ್ಮತ್ತಿಗೆಯ ಕೊಲೆಗಾರ ಸಿಕ್ಕಿಬಿಟ್ರೆ ನಿಮ್ಮಣ್ಣನಿಗೆ ನೆಮ್ಮದಿ.”
ಮೀನು ಗಾಳ ನುಂಗಿತು.
“ಸಿಕ್ಕದೇ ಎಲ್ಲಿ ಹೋಗ್ತಾನೆ ಬಿಡಿ. ಈ ಕಾಲದಲ್ಲಿ ಕೊಲೆ ಮಾಡಿ ತಪ್ಪಿಸ್ಕೊಳ್ಳೋದು ಅಷ್ಟು ಸುಲಭ ಅಲ್ಲ. ಅವ್ನು ಆದಷ್ಟು ಬೇಗ ಸಿಕ್ಕಲೀ ಅಂತ ನಾನೂ ಬಯಸ್ತೀನಿ. ನಂಗೆ ನಿಮ್ಮ ಆ ಎಸ್ ಐ ಕಾಟ ತಪ್ಪುತ್ತೆ.” ಬಿಡಿಬಿಡಿಯಾಗಿ ಹೇಳಿದ ನರಹರಿ.
ಅದನ್ನೇ ಪಟ್ಟಾಗಿ ಹಿಡಿದ ಕೋದಂಡಯ್ಯ.
“ಛೇ ಅವರ್‍ಯಾಕೆ ನಿನ್ನ ಹಿಂದೆ ಬಿದ್ದಿದ್ದಾರೋ ನಂಗರ್ಥ ಆಗ್ತಾ ಇಲ್ಲ.” ಲೊಚಗುಟ್ಟಿದ. ವಾರೆಗಣ್ಣಿಂದಲೇ ನರಹರಿಯ ಮುಖಭಾವವನ್ನು ಅಳೆದ.
“ಕೊಲೆ ನಡೆದ ಸಮಯದಲ್ಲಿ ನಾನು ಇಲ್ಲಿದ್ದೆ ಅನ್ನೋದೇ ನನ್ನ ಮೇಲೆ ಅವರ ಅನುಮಾನಕ್ಕೆ ಕಾರಣ.” ದನಿ ಎಳೆದ ನರಹರಿ.
“ಹೌದು ಕಣಪ್ಪ. ನೀನು ನಿದ್ದೆ ಮಾಡ್ತಾ ಇದ್ದೆ, ನಡೆದದ್ದು ಏನೂ ನಿನ್ನ ಗಮನಕ್ಕೆ ಬಂದಿಲ್ಲ ಅನ್ನೋದನ್ನ ಅವ್ರು ನಂಬ್ತಾ ಇಲ್ಲ.” ಮೆಲ್ಲಗೆ ಹೇಳಿದ ಕೋದಂಡಯ್ಯ.
ನರಹರಿಯ ಉತ್ತರ ಸರಕ್ಕನೆ ಬಂತು.
“ಅವ್ರು ನಂಬಲ್ಲ ಅಂದ್ರೆ ನಾನೇನು ಮಾಡ್ಲಿ? ನಾನು ನಿದ್ದೆ ಮಾಡಿದ್ದಂತೂ ನಿಜ.”
ಸಂಭಾಷಣೆಯ ನಿರ್ಣಾಯಕ ಗಳಿಗೆ ಹತ್ತಿರಾಗಿರುವುದನ್ನು ಕೋದಂಡಯ್ಯ ಗ್ರಹಿಸಿದ. ಒಮ್ಮೆ ಲಘುವಾಗಿ ಕೆಮ್ಮಿ ಬಾಯಿ ತೆರೆದ.
“ಒಂದ್ವೇಳೆ ಈಗ ನನ್ನ ಬದಲಿಗೆ ನಮ್ಮ ಎಸ್ ಐ ಬಂದಿದ್ರೆ ಹೇಗಿರ್ತಿತ್ತು? ಕೊಲೆ ನಡೆದ ರಾತ್ರಿ
ನಿಂಗೆ ಎಚ್ಚರವಿಲ್ಲದ ನಿದ್ದೆ. ಈಗ ನಿದ್ದೆ ಬಾರದೇ ಹೊರಳಾಡ್ತಾ ಇದೀಯ. ಇದನ್ನ ನೋಡಿದ್ರೆ ಅವ್ರು ಏನಂದ್ಕೋಬೋದು ಸ್ವಲ್ಪ ಯೋಚ್ನೆ ಮಾಡು.”
ನರಹರಿಯ ಉತ್ತರ ನಿಧಾನವಾಗಿ ಬಂತು.
“ನಂಗೆ ಅದೇ ಅರ್ಥ ಆಗ್ತಾ ಇಲ್ಲ ಸರ್. ಮೊನ್ನೆ ರಾತ್ರಿ ಅಂದ್ರೆ ನಮ್ಮತ್ತಿಗೆ ಕೊಲೆ ಆದ ರಾತ್ರಿವರೆಗೆ ನಂಗೆ ಇಡೀ ರಾತ್ರಿ ಎಚ್ಚರ ಇಲ್ಲದಷ್ಟು ನಿದ್ದೆ ಬರ್ತಿತ್ತು. ಆದ್ರೆ ನಿನ್ನೆ ರಾತ್ರಿಯಿಂದ ನಿದ್ದೇನೇ ಬರ್ತಾ ಇಲ್ಲ. ಇಡೀ ರಾತ್ರಿ ಹಾಸಿಗೇನಲ್ಲಿ ಹೊರಳಾಡೋದೇ ಆಗಿದೆ.”
“ಅಂದ್ರೆ ಇಲ್ಲಿಗೆ ಬಂದಾಗಿನಿಂದ ಮೊನ್ನೆ ರಾತ್ರಿವರೆಗೆ ಸೊಗಸಾದ ನಿದ್ದೆ ಬರ್ತಿತ್ತು ಅನ್ನು.”
“ಇಲ್ಲ. ಬಂದ ಎರಡು ದಿನ ನಂಗೆ ಅಷ್ಟು ಚೆನ್ನಾಗಿ ನಿದ್ದೆ ಬರಲೇ ಇಲ್ಲ. ಮೂರನೇ ರಾತ್ರಿಯಿಂದ ತಗೋಳೀ, ಅದೇನು ಮ್ಯಾಜಿಕ್ಕೋ ಹತ್ತುಗಂಟೆಗೆ ಮಲಗಿದ್ರೆ ಬೆಳಗ್ಗೆ ಎಂಟು ಗಂಟೇವರೆಗೂ ಎಚ್ಚರವೇ ಇರದ ನಿದ್ದೆ. ನಿನ್ನೆ ರಾತ್ರಿಯಿಂದ ಮತ್ತೆ ಅದೇ ಹಳೇ ಕತೆ. ನಿದ್ದೇನೇ ಇಲ್ಲ.”
ಕೋದಂಡಯ್ಯ ಉದ್ವೇಗಗೊಂಡ. ಅಭ್ಯಾಸಬಲದಿಂದ ಮನದ ಉದ್ವೇಗವನ್ನು ಹತ್ತಿಕ್ಕಿ ಪ್ರಶ್ನಿಸಿದ. “ನೀನು ಇಲ್ಲಿಗೆ ಬಂದದ್ದು ಯಾವತ್ತು ನರಹರೀ.”
“ಎರಡು ವಾರದ ಹತ್ರ ಆಯ್ತು ಸಾರ್.”
“ಯಾವ ಡೇಟು ಅಂತ ಸ್ವಲ್ಪ ನೆನಪಿಸಿಕೊಳ್ಳೋದಿಕ್ಕೆ ಆಗುತ್ತಪ್ಪಾ?” ಹತ್ತಿರ ಸರಿದ.
“ಆವತ್ತು ಭಾನುವಾರ. ತಾರೀಖು ಹನ್ನೆರಡು ಅಂತ ಕಾಣುತ್ತೆ.” ನಿಧಾನವಾಗಿ ಹೇಳಿದ ನರಹರಿ.
“ಕೋದಂಡಯ್ಯನ ಹೃದಯ ವೇಗವಾಗಿ ಬಡಿದುಕೊಂಡಿತು. ಅವನ ಮನದಲ್ಲಿ ಕೊರೆಯುತ್ತಿದ್ದ ಪ್ರಶ್ನೆಗೆ ಉತ್ತರ ದೊರೆತಿತ್ತು!
ನರಹರಿ ಇಲ್ಲಿಗೆ ಬಂದು ಇಂದಿಗೆ ಸರಿಯಾಗಿ ಹದಿಮೂರು ದಿನಗಳಾಗಿವೆ. ಮೊದಲ ಎರಡುದಿನಗಳು ಅವನಿಗೆ ಸರಿಯಾಗಿ ನಿದ್ದೆ ಇಲ್ಲ. ಮೂರನೆಯ ರಾತ್ರಿಯಿಂದ ಸೊಗಸಾದ ನಿದ್ದೆ. ಇದು ಒಂಬತ್ತು ರಾತ್ರಿಗಳವರೆಗೆ ಅಂದರೆ ದೇವಕಿ ಕೊಲೆಯಾದ ರಾತ್ರಿಯವರೆಗೆ ನಡೆದಿದೆ. ನಿನ್ನೆ ರಾತ್ರಿಯಿಂದ ಮತ್ತೆ ನಿದ್ದೆ ಇಲ್ಲ!
ಒಂಬತ್ತು ರಾತ್ರಿಗಳವರೆಗೆ ಅವನಿಗೆ ಭರ್ಜರಿ ನಿದ್ದೆ!
ದಯಾನಂದನ ಆಫೀಸುಕೋಣೆಯ ಮೇಜಿನ ಡ್ರಾನಲ್ಲಿ ಸಿಕ್ಕಿದ ನಿದ್ರೆಯ ಗುಳಿಗೆಗಳ ಬಾಟಲಿನಲ್ಲಿ ಒಂಬತ್ತು ಗುಳಿಗೆಗಳು ಕಡಿಮೆಯಾಗಿವೆ!
ಅಂದರೆ ನರಹರಿಯ ಮೇಲೆ ಅವನಿಗರಿವಿಲ್ಲದಂತೇ ನಿದ್ರೆಯ ಗುಳಿಗೆಗಳ ಪ್ರಯೋಗ ನಡೆದಿದೆಯೇ? ಹಾಗೇ ಆಗಿದ್ದರೆ ಅದನ್ನು ಪ್ರಯೋಗಿಸಿದವರಾರು? ದಯಾನಂದನೇ? ಅಥವಾ ದೇವಕಿಯೇ?
“ಅಡಿಗೆಯೋಳು ಬಂದಹಾಗೆ ಕಾಣ್ಲಿಲ್ಲ. ನೀನು ಊಟ ಎಲ್ಲಿ ಮಾಡಿದೆ ನರಹರೀ?” ಕೋದಂಡಯ್ಯ ಬತ್ತಳಿಕೆಯಿಂದ ಮತ್ತೊಂದು ಬಾಣ ಹೊರತೆಗೆದ.
“ಇಲ್ಲೇ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿರೋ ರೆಸ್ಟೋರೆಂಟ್‌ನಲ್ಲಿ ಊಟ ಮಾಡ್ದೆ. ನಿನ್ನೆ ಬೆಳಿಗ್ಗೆಯಿಂದ್ಲೂ ಹಾಗೇ ಮಾಡ್ತಿದೀನಿ.”
“ಅದಕ್ಕೆ ಮೊದ್ಲು ನಿಮ್ಮತ್ತಿಗೆ ಬಡಿಸ್ತಿದ್ರು ಅನ್ನು.”
ರಭಸವಾಗಿ ತಲೆ ಒದರಿದ ನರಹರಿ.
“ಇಲ್ಲ ಅವಳ ಕೈನ ಊಟ ಮಾಡೋದನ್ನ ಬಂದ ಎರಡನೇ ದಿನಕ್ಕೇ ನಿಲ್ಲಿಸ್ದೆ. ಊಟ ಯಾಕೆ ಅವಳಿರೋ ಮನೇ ಒಳಗೇ ಹೋಗ್ತಾ ಇರ್‍ಲಿಲ್ಲ ನಾನು. ಮೂರುಹೊತ್ತೂ ಊಟಾನಾ ಅಡಿಗೆಯೋಳೇ ನಂಗೆ ಇಲ್ಲಿಗೇ ತಂದು ಕೊಡ್ತಾ ಇದ್ಲು.”
“ನಿಮ್ಮತ್ತಿಗೆ ಮೇಲೆ ನಿಂಗೆ ಅಷ್ಟು ಕೋಪ ಯಾಕೆ ನರಹರೀ?” ದನಿಯನ್ನು ಆದಷ್ಟು ಮೃದುಗೊಳಿಸಿದ ಕೋದಂಡಯ್ಯ.
ಸೆಟೆದು ಕುಳಿತ ನರಹರಿ.
“ಇದೆಲ್ಲಾ ಯಾಕೆ ಕೇಳ್ತಾ ಇದೀರಿ ನೀವು? ಅದೂ ಈ ಅಪರಾತ್ರೀನಲ್ಲಿ?” ಅವನು ಬೇಸರಗೊಂಡದ್ದು ಸ್ಪಷ್ಟವಾಗಿತ್ತು.
ಕೋದಂಡಯ್ಯ ತಾಳ್ಮೆ ವಹಿಸಿದ. ಅದೇ ಮೃದುದನಿಯಲ್ಲಿ ಹೇಳಿದ.
“ನಾನು ನಿನ್ನ ದೋಸ್ತ್ ಅಂತ ಆವಾಗ್ಲೇ ಹೇಳ್ದೆ. ಒಬ್ಬ ನಿಜವಾದ ದೋಸ್ತ್ ಮಾಡೋ ಕೆಲಸಾನ್ನೆ ಮಾಡ್ತಾ ಇದೀನಿ ನಾನು.”
ನರಹರಿಯ ಕಣ್ಣುಗಳಲ್ಲಿ ಗೊಂದಲ. ಅವನ ಮುಂಗೈ ತಟ್ಟಿ ಮಾತು ಮುಂದುವರೆಸಿದ ಕೋದಂಡಯ್ಯ. “ನಿಮ್ಮತ್ತಿಗೆಯ ಮೇಲೆ ನಿಂಗೆ ಸಖತ್ ಕೋಪ ಅಂತ ತಿಳಿದ ನಮ್ಮ ಎಸ್ ಐ ಆ ದಿಕ್ಕಿನಲ್ಲಿ ತಮ್ಮ ಊಹೆನ ಲಂಗುಲಗಾಮಿಲ್ದೇ ಹರಿಸ್ತಿದಾರೆ. ನೀನು ತೊಂದ್ರೇಗೆ ಸಿಕ್ಕಿಕೊಳ್ಳೋ ಸಾಧ್ಯತೇ ಇದೆ. ಅದನ್ನ ತಪ್ಪಿಸೋ ಉದ್ದೇಶದಿಂದ ನಿನ್ನ ಜತೆ ನಾಲ್ಕು ಮಾತಾಡಿ ವಿಷಯ ತಿಳಕೋತಾ ಇದೀನಿ. ದೋಸ್ತ್ ಅಂತ ಹೇಳಿಕೊಂಡ ಮೇಲೆ ಅಷ್ಟಾದರೂ ಮಾಡಬೇಡವೇ ನಾನು?”
ನರಹರಿ ಮೌನವಾಗಿ ಅವನನ್ನೇ ದಿಟ್ಟಿಸಿದ.
“ಹೇಳಪ್ಪ.” ನರಹರಿಯ ಬೆನ್ನನ್ನು ಮೃದುವಾಗಿ ಸವರಿದ ಕೋದಂಡಯ್ಯ.
ನಿಮಿಷದ ಮೌನದ ನಂತರ ಬಾಯಿ ತೆರೆದ ನರಹರಿ.
* * *
ಮತ್ತೆ ಕಂಪ್ಯೂಟರಿನ ಮುಂದೆ ಕುಳಿತಳು ಮಾನ್ಸಿ.
ದೇವಕಿಯ ಇ ಮೇಲ್‌ನ ಪಾಸ್‌ವರ್ಡ್ ಕಂಡುಹಿಡಿಯಲು ನಿನ್ನೆಯಿಡೀ ನಡೆಸಿದ ಶ್ರಮ ವ್ಯರ್ಥವಾಗಿತ್ತು. ತೋಚಿದ ಎಲ್ಲಾ ಪದಗಳ ಜತೆ ಮಹಾಭಾರತದ ದೇವಕಿಗೆ ಸಂಬಂಧಿಸಿದ ಎಲ್ಲ ಹೆಸರುಗಳನ್ನೂ ಒಂದೊಂದಾಗಿ ಕಂಪ್ಯೂಟರಿಗೆ ತುರುಕಿದ್ದಳು. ವಸುದೇವ, ಕೃಷ್ಣ, ಯಶೋದಾ, ಮಥುರಾ, ಯಮುನಾ… ಹೀಗೆ ನೂರೊಂದು ಹೆಸರುಗಳು. ಕೊನೆಗೆ ಬೇಸತ್ತು ಕಂಸನನ್ನೂ ಪ್ರಯತ್ನಿಸಿದ್ದಳು. ಪ್ರಯೋಜನವಾಗಿರಲಿಲ್ಲ. ಆ ಯಂತ್ರ ತನ್ನ ರಹಸ್ಯವನ್ನು ಬಿಟ್ಟುಕೊಟ್ಟಿರಲಿಲ್ಲ.
ತನ್ನ ಇ ಮೇಲ್‌ಗಳ ರಹಸ್ಯವನ್ನು ಕಾಪಾಡಲು ದೇವಕಿ ಆಂಟಿ ಅದ್ಯಾವ ಬೀಗ ಜಡಿದಿರಬಹುದು? ಪುರಾಣದ ದೇವಕಿ ತನ್ನ ಕಂದನನ್ನು ಕಾಪಾಡುವುದಕ್ಕೆ ಮಾಡಿದ ಉಪಾಯಕ್ಕಿಂತಲೂ ಈ ಕಲಿಯುಗದ ದೇವಕಿ ಹೂಡಿದ ಉಪಾಯ ಭಾರಿಯಾಗಿದೆಯಲ್ಲ?
ಅಂದಹಾಗೆ ಆ ದೇವಕಿಯ ಕಂದ ಕೃಷ್ಣನನ್ನು ಬಿರುಮಳೆಯಿಂದ ರಕ್ಷಿಸಿದ್ದು ವಾಸುಕಿ. ಅದೇ ಮಹಾಸರ್ಪ ಈಗ ದೇವಕಿ ಆಂಟಿಯ ಮೇಲ್ ಬಾಕ್ಸನ್ನು ಕಾಯುತ್ತಿರಬಹುದೇ?
ಆ ಯೋಚನೆ ಬಂದದ್ದೇ ತಡ ಸರ್ರನೆ ಮುಂದೆ ಬಾಗಿದಳು. ಬೆರಳುಗಳು ಕೀಬೋರ್ಡ್‌ನ ಗುಂಡಿಗಳನ್ನು ಪಟಪಟನೆ ಒತ್ತಿದವು.
ಬಿಟ್ಟಕಣ್ಣು ಬಿಟ್ಟಂತೆ ನೋಡಿದಳು ಮಾನ್ಸಿ. ವಾಸುಕಿ ವಿಶ್ವಾಸ ಉಳಿಸಿಕೊಂಡಿದ್ದ. ದೇವಕಿಯ ಮೇಲ್ ಬಾಕ್ಸ್ ತೆರೆದುಕೊಂಡಿತ್ತು!
“ಹುರ್ರಾ.” ಕೂಗಿದಳು ಮಾನ್ಸಿ.
* * *
-ಎಂಟು-
ಬೆಳಿಗ್ಗೆ ದಯಾನಂದನ ಮನೆಯ ಅಡಿಗೆಯವಳ ಮನೆಗೆ ಹೋಗಿ ಅವಳೊಡನೆ ಅರ್ಧಗಂಟೆ ಮಾತಾಡಿ ಕೋದಂಡಯ್ಯ ಠಾಣೆ ತಲುಪಿದಾಗ ಎಸ್ ಐ ಎಲ್ಲೂ ಕಾಣಿಸಲಿಲ್ಲ. ನಿಧಾನವಾಗಿ ಬರಬಹುದೇನೋ ಎಂದುಕೊಂಡು ತನ್ನ ಜಾಗಕ್ಕೆ ನಡೆದವನಿಗೆ ಪಿ ಸಿ ಸತೀಶ್ ಎದುರಾದ.
“ಈವತ್ತು ಎಸ್ ಐ ಸಾಹೇಬ್ರು ಬರೋದಿಲ್ಲ ಸಾರ್.”
“ಅದೇನಯ್ಯ ಹಂಗಂದ್ರೆ?”
“ಬೆಳಿಗ್ಗೆ ಬೆಳಿಗ್ಗೇನೇ ಬೆಂಗ್ಳೂರಿಗೆ ಹೊರಟ್ರು ಸಾರ್.”
ಕೋದಂಡಯ್ಯನಿಗೆ ಅಚ್ಚರಿ. ಇದ್ದಕ್ಕಿದ್ದಂತೆ ಬೆಂಗಳೂರಿಗೆ! ಯಾಕಿರಬಹುದು?
“ಈಪಾಟೀ ಅರ್ಜೆಂಟಾಗಿ ಅಲ್ಲಿಗೆ ಹಾರಿದ್ದಾರೆ. ವಿಷಯ ಏನಯ್ಯ? ಡ್ಯೂಟಿ ಮೇಲೆ ಹೋಗಿದ್ದಾರೋ ಇಲ್ಲಾ ಸ್ವಂತಕ್ಕೋ?” ಪ್ರಶ್ನಿಸಿದ.
“ಅದೇನೋ ನಂಗೊತ್ತಿಲ್ಲಾ ಸಾರ್.”
“ಸರಿ, ಸಾಹೇಬರ ಸವಾರಿ ಯಾವಾಗ ಹಿಂದಕ್ಕೆ ಬರೋದು? ಅದಾದರೂ ಗೊತ್ತಾ?”
“ಅದೂ ಗೊತ್ತಿಲ್ಲಾ ಸಾರ್.”
ಕೋದಂಡಯ್ಯ ತಲೆ ತುರಿಸಿಕೊಂಡ. ನನಗೆ ಒಂದು ಮಾತನ್ನೂ ಹೇಳಲಿಲ್ಲವಲ್ಲ? ಇದೆಂಥಾ ಸೀಕ್ರೆಟ್ ಮಿಷನ್?
ಆಲೋಚನೆಯಲ್ಲಿ ಮುಳುಗಿದವನನ್ನು ಪೇದೆಯ ಕರೆ ಎಚ್ಚರಿಸಿತು.
“ಸಾರ್, ಒಂದು ಹುಡ್ಗೀ, ಅದೇನೋ ಮಾನ್ಸಿ ಅಂತ. ಅರ್ಧಗಂಟೆಯಿಂದ ಐದಾರು ಸಲ ಫೋನ್ ಮಾಡಿದ್ದಾಳೆ.”
ಕೋದಂಡಯ್ಯನ ಕಿವಿಗಳು ಚುರುಕಾದವು.
“ವಿಷಯ ಏನಂತೇ?”
“ಅದೇನೋ ಮೇಲು ಫೀಮೇಲು ಅಂತೇನೋ ಹೇಳ್ದಂಗಿತ್ತು. ನಂಗೆ ಸರಿಯಾಗಿ ಅರ್ಥ ಆಗ್ಲಿಲ್ಲ. ನೀವು ಬಂದ ಮೇಲೆ ತಿಳಿಸ್ತೀನಿ ಅಂದೆ. ಅದೇನೋ ನೀವೇ…” ಅವನ ಮಾತು ಮುಗಿಯುವ ಮೊದಲೇ ಫೋನ್ ಹೊಡೆದುಕೊಂಡಿತು. “…ಅವಳೇ ಇರಬೇಕು. ಫೋನ್ ಎತ್ಕೊಳ್ಳಿ.” ಮಾತು ಮುಗಿಸಿದ ಸತೀಶ. ಆತುರಾತುರವಾಗಿ ಫೋನ್ ಎತ್ತಿ ಕಿವಿಗಿಟ್ಟ ಕೋದಂಡಯ್ಯ.
ಅತ್ತ ಕಡೆಯಿಂದ ಮಾನ್ಸಿಯ ದನಿ ತೂರಿಬಂತು.
“ಎಸ್ ಐ ಅವರಾ?”
“ನಾನು ಕೋದಂಡಯ್ಯ ಕಣಮ್ಮ. ವಿಷಯ ಏನು ಹೇಳು.”
“ಓ ನೀವಾ ಸರ್? ಸರ್ ನಾನು ದೇವಕಿ ಆಂಟೀದು ಮೇಲ್ ಬಾಕ್ಸನ್ನ ಓಪನ್ ಮಾಡಿದ್ದೀನಿ ಸರ್. ಅವರಿಗೆ ಬಂದಿದ್ದ ಇ ಮೇಲನ್ನ ಪತ್ತೆ ಮಾಡಿಬಿಟ್ಟಿದ್ದೀನಿ. ನಿಮಗೆ ತೋರಿಸ್ಬೇಕು. ನೀವು ಈಗ್ಲೇ ಬನ್ನಿ ಸರ್.” ದನಿಯಲ್ಲಿ ಉದ್ವೇಗವಿತ್ತು.
ಕೋದಂಡಯ್ಯನೂ ಉದ್ವೇಗಗೊಂಡಿದ್ದ.
“ಆಯ್ತಮ್ಮ, ಈಗ್ಲೇ ಬರ್ತೀನಿ.” ಹೇಳಿ ಫೋನ್ ಕೆಳಗಿಟ್ಟ.
ಠಾಣೆಯಲ್ಲಿ ಎಸ್ ಐ ಇಲ್ಲದ ದಿನಗಳಲ್ಲಿ ಕೋದಂಡಯ್ಯನದೇ ರಾಜ್ಯಭಾರ. ಇದ್ದ ಮೂರು ನಾಲ್ಕು ಪೇದೆಗಳಿಗೆ ಒಂದೆರಡು ಸೂಚನೆಗಳಿತ್ತು ವಿವೇಕಾನಂದನಗರದತ್ತ ವಾಹನ ಚಲಾಯಿಸಿದ.
“ಕೊಲೆಗಾರ ದೇವಕಿ ಆಂಟಿಗೆ ಕಳಿಸಿದ ಇ ಮೇಲ್ ಸರ್ ಇದೂ. ಅವರ ಪಾಸ್‌ವರ್ಡ್ ಕಂಡುಹಿಡಿದುಬಿಟ್ಟೆ ಸರ್. ಅದು ವಾಸುಕಿ ಅಂತ. ರಾತ್ರಿ ಹತ್ತೂವರೆಗೆ ತನ್ನನ್ನ ಭೇಟಿಯಾಗೋದಿಕ್ಕೆ ಇ ಮೇಲ್ ಮೂಲಕ ಸೂಚಿಸಿದ್ದಾನೆ. ಇಲ್ಲಿ ನೋಡಿ ಸರ್.” ಮೇಲಿನ ಅರ್ಧಭಾಗದಲ್ಲಿ ಪುಟ್ಟ ಪುಟ್ಟ ಕಪ್ಪು ಅಕ್ಷರಗಳಿಂದ ತುಂಬಿದ್ದ ಬಿಳಿಯ ಹಾಳೆಯೊಂದನ್ನು ಅವನ ಮುಂದೆ ಹಿಡಿದಳು ಮಾನ್ಸಿ.
ಹಾಳೆಯನ್ನು ಕೈಗೆ ತೆಗೆದುಕೊಂದು ಕಣ್ಣಾಡಿಸಿದ ಕೋದಂಡಯ್ಯ. ಕಣ್ಣುಗಳನ್ನು ಕಿರಿದುಗೊಳಿಸಿದ. ತುಟಿಗಳು ಸೊಟ್ಟಗಾದವು. ಹಾಳೆಯನ್ನು ಅವಳಿಗೇ ಹಿಂತಿರುಗಿಸಿದ.
“ಈ ಪರಂಗೀ ಭಾಷೇನ ಸರಿಯಾಗಿ ಕಲೀಲಿಲ್ಲಮ್ಮ ನಾನು. ಸ್ವಲ್ಪ ಇದನ್ನ ನಮ್ಮ ಕಸ್ತೂರಿ ಕನ್ನಡಕ್ಕೆ ಅನುವಾದ ಮಾಡಿಬಿಡು ತಾಯೀ.” ಕಿರುನಗೆ ಸೂಸಿದ.
ಐದು ನಿಮಿಷಗಳಲ್ಲಿ ಮುದ್ದಾದ ಅಕ್ಷರಗಳಲ್ಲಿದ್ದ ಕನ್ನಡ ಅನುವಾದ ಅವನ ಕೈಯಲ್ಲಿತ್ತು. ಕಣ್ಣರಳಿಸಿ ಓದಿದ.
ನನ್ನ ಬದುಕನ್ನ ನಾನು ಈಗ ಸರಿ ಮಾಡಿಕೊಳ್ಳೋದಿಕ್ಕೆ ಹೊರಟಿದ್ದೀನಿ. ಇದಕ್ಕೆ ನಿನ್ನಿಂದ ಈ
ರೀತಿಯ ವಿರೋಧವನ್ನು ನಾನು ನಿರೀಕ್ಷಿಸಿರಲಿಲ್ಲ. ನಾನು ಮಾಡೋದಿಕ್ಕೆ ಹೊರಟಿರೋ
ಕೆಲಸದಿಂದ ನಿನಗಾಗೋ ನಷ್ಟ ಏನು ಅಂತ ನಂಗರ್ಥ ಆಗ್ತಾ ಇಲ್ಲ. ನೀನು ಯಾವುದನ್ನೂ
ಸರಿಯಾಗಿ ಹೇಳ್ತಾನೇ ಇಲ್ಲ. ಇದರ ಬಗ್ಗೆ ನಾವಿಬ್ಬರೇ ಒಂದುಕಡೆ ಕೂತು ಮಾತಾಡಿದ್ರೆ
ಹೇಗೆ? ಈ ರಾತ್ರಿ ಹತ್ತೂವರೆಯ ಹೊತ್ತಿಗೆ ಮನೆಗೆ ಬಾ. ನಾನು ಕಾಯ್ತಾ ಇರ್ತೀನಿ.
ನನ್ನ ಮನಸ್ನಲ್ಲಿರೋದನ್ನ ನಿಂಗೆ ಹೇಳ್ತೀನಿ; ನಿನ್ನ ಮನಸ್ನಲ್ಲಿರೋದನ್ನ ನಂಗೆ ಹೇಳು. ಏನು
ಮಾಡೋದು ಅನ್ನೋದನ್ನ ಇಬ್ರೂ ಸೇರಿ ತೀರ್ಮಾನಿಸೋಣ. ನಿಂಗೆ ಇಷ್ಟ ಇಲ್ಲವೇ ಇಲ್ಲ
ಅಂದರೆ ನಾನು ಈ ಕೆಲಸವನ್ನ ಮಾಡೋದಿಕ್ಕೆ ಹೋಗೋದೇ ಇಲ್ಲ. ಆದರೆ ನೀನು ಹಾಗೆ
ಹೇಳೋದಿಕ್ಕೆ ಮೊದ್ಲು ನನ್ನ ಅನಿಸಿಕೆಗಳೇನು ಅನ್ನೋದನ್ನ ತಿಳಕೊಳ್ಳೋದು ನ್ಯಾಯ ಅಲ್ವಾ?
ರಾತ್ರಿ ಹತ್ತು ಗಂಟೆಗೆ ಮನೇನಲ್ಲಿ ಕಾಯ್ತಾ ಇರ್ತೀನಿ. ಬಾ.
ಅದರ ಮೇಲೆ ಒಮ್ಮೆ ಕಣ್ಣಾಡಿಸಿದ ಕೋದಂಡಯ್ಯ. ತಲೆಯೆತ್ತಿ ಪ್ರಶ್ನಿಸಿದ.
“ಇದನ್ನ ಕಳಿಸಿರೋ ಮನುಷ್ಯನ ಹೆಸ್ರೂ ಗಿಸ್ರೂ ಇಲ್ವಮ್ಮ?”
“ಏನೋ ಡೆಸರ್ಟ್ ಫಾಕ್ಸ್ ಅಂತ ಇದೆ. ಆದ್ರೆ ಅದು ನಿಜವಾದ ಹೆಸರಿನ ಹಾಗೆ ಕಾಣೋದಿಲ್ಲ ಸರ್. ಕೊಲೆಗಾರ ಈ ಕಳ್ಳ ಹೆಸರಲ್ಲಿ ಸೃಷ್ಟಿಕೊಂಡಿರೋ ಇ ಮೇಲ್ ಐಡಿ ಮಾತ್ರ ಇದೆ.” ಇಂಗ್ಲಿಷ್ ಪ್ರತಿಯ ಒಂದುಕಡೆ ಬೆರಳು ಮಾಡಿದಳು. ಕೋದಂಡಯ್ಯ ಅದರ ಮೇಲೆ ಕಣ್ಣಾಡಿಸಿದ. ಲೊಚಗುಟ್ಟುತ್ತಾ ಪ್ರಶ್ನೆ ಹಾಕಿದ.
“ಇದೇನಮ್ಮ ಇದೂ?”
“ಅದೇ ಸರ್ ಡೆಸರ್ಟ್ ಫಾಕ್ಸ್ ಅನ್ನೋ ಕಳ್ಳ ಹೆಸರು ಮತ್ತು ಅವನ ಇ ಮೇಲ್ ಐಡಿ.
“ಈ ಐಡಿ ನೋಡಿದ್ರೆ ಏನೂ ಐಡಿಯಾ ಹೊಳೆಯೋದಿಲ್ವಾ ಮಾನ್ಸೀ?” ಕಣ್ಣುಗಳನ್ನು ಪಕಪಕನೆ ಆಡಿಸುತ್ತಾ ಪ್ರಶ್ನಿಸಿದ ಕೋಡಂಡಯ್ಯ. ಅವನನ್ನೇ ಒಮ್ಮೆ ಪೆಚ್ಚಾಗಿ ನೋಡಿದ ಮಾನ್ಸಿ ಸಾವರಿಸಿಕೊಂಡು ಉತ್ತರಿಸಿದಳು. “ದೇವಕಿ ಆಂಟೀ ತನ್ನ ಪರಿಚಯದವರ ಹೆಸರು ಮತ್ತು ಇ ಮೇಲ್ ಐಡೀಗಳನ್ನ ಒಂದು ನೀಲೀ ಡೈರೀನಲ್ಲಿ ಬರೆದಿಟ್ಟಿದ್ದಾರೆ. ಅದನ್ನ ನೋಡಿದ್ರೆ ಡೆಸರ್ಟ್ ಫಾಕ್ಸ್ ಅನ್ನೋ ಹೆಸರಿನ ವ್ಯಕ್ತಿ ಯಾರು ಅಂತ ಗೊತ್ತಾಗಿಬಿಡತ್ತೆ.” ಅತುರಾತುರವಾಗಿ ಹೇಳಿದಳು. ಉಸಿರೆಳೆದುಕೊಂಡು ದನಿ ಎತ್ತರಿಸಿದಳು. “ಕೊಲೆಗಾರ ಸಿಕ್ಕಿಹೋಗ್ತಾನೆ.”
ತನ್ನ ಪ್ರೀತಿಯ ದೇವಕಿ ಆಂಟಿಯ ಕೊಲೆಗಾರನನ್ನು ತಾನು ಪತ್ತೆ ಮಾಡಿಬಿಟ್ಟೆ ಎಂಬ ಸಮಾಧಾನ, ಸಂತೋಷ ಅವಳಿಗೆ.
ಅವಳ ಬೆವರುಗಟ್ಟಿದ ಮುಖವನ್ನೂ, ಹೊಳೆಯುತ್ತಿದ್ದ ಕಣ್ಣುಗಳನ್ನೂ ತದೇಕಚಿತ್ತನಾಗಿ ದಿಟ್ಟಿಸಿದ ಕೋದಂಡಯ್ಯ.
“ಆಯ್ತಮ್ಮ, ಆ ಡೈರೀನ ಪತ್ತೇ ಮಾಡ್ತೀನಿ.” ಮೆಲ್ಲಗೆ ಹೇಳಿದ.
“ಆ ಡೈರಿ ಅವರ ಬೆಡ್ ರೂಂನ ಟೇಬಲ್ ಮೇಲೇ ಇದೆ ಸರ್. ಈಗ್ಲೇ ಹೋಗಿ ನೋಡೋಣ ಸರ್.” ಕಣ್ಣುಗಳನ್ನು ಅರಳಿಸಿ ಹೇಳಿದಳು ಮಾನ್ಸಿ.
“ಬೆಡ್ ರೂಂನ ಟೇಬಲ್ ಮೇಲೆ.” ಬೇಸರದ ಉಸಿರು ಹಾಕಿದ ಕೋದಂಡಯ್ಯ. ಮುಖದಲ್ಲಿ ನಿರಾಶೆ ಮೂಡಿತು. ಮಾನ್ಸಿ ಅವನತ್ತ ಪ್ರಶ್ನಾರ್ಥಕವಾಗಿ ನೋಡಿದಳು. ಕೋದಂಡಯ್ಯನ ಉತ್ತರ ತಡೆದುಬಂತು.
“ಆ ಕೋಣೇನ ಎಸ್. ಐ. ಸೀಲ್ ಮಾಡಿಬಿಟ್ಟಿದ್ದಾರೆ ಕಣಮ್ಮ.” ಅವಳೇನೋ ಹೇಳಲು ಬಾಯಿ ತೆರೆಯುತ್ತಿದ್ದಂತೇ ಮುಂದಿನ ಮಾತು ಹೊರಹಾಕಿದ. “ಎಸ್. ಐ. ಈವತ್ತು ಬೆಳಿಗ್ಗೆ ಬೆಂಗ್ಳೂರಿಗೆ ಹೋದ್ರು ಕಣಮ್ಮ. ಹಿಂತಿರುಗೋದಿಕ್ಕೆ ಎರಡು ದಿನ ಆಗುತ್ತೆ.”
“ಓಹ್.” ನಿರಾಶೆಯಲ್ಲಿ ಉದ್ಗರಿಸಿದಳು ಮಾನ್ಸಿ.
ಅವಳಿಗೇನೋ ಹೇಳಲು ಅವನು ಬಾಯಿ ತೆರೆಯುವಷ್ಟರಲ್ಲಿ ಕಿಟಕಿಯಲ್ಲಿ ನೆರಳು ಕಂಡಿತು. ಇಬ್ಬರೂ ಸರಕ್ಕನೆ ಅತ್ತ ತಿರುಗಿದರು.
ಗೇಟ್‌ನತ್ತ ಸರಸರನೆ ನಡೆದುಹೋಗುತ್ತಿದ್ದ ನರಹರಿ.
* * *
ಕಣ್ಣು ಮುಚ್ಚಿದಂತೇ ಮಸಾಲೆ ಚಾಯನ್ನು ಒಂದೊಂದು ಗುಟುಕಾಗಿ ಹೀರಿದ ಕೋದಂಡಯ್ಯ. ತಲೆಯಲ್ಲಿ ಚಕ್ರ ಭ್ರಮಿಸುತ್ತಿತ್ತು.
ಇದ್ದಕ್ಕಿದ್ದಂತೇ ಬೆಂಗಳೂರಿಗೆ ಹಾರುವ ಹುಚ್ಚು ಎಸ್ ಐಗೆ ಯಾಕೆ ಬಂತು? ಕರ್ತವ್ಯದ ಮೇಲೆ ಹೋಗುತ್ತಿರುವುದಾಗಿ ರಜಾ ಅರ್ಜಿಯಲ್ಲಿ ಬರೆದಿದ್ದಾರೆ. ಎರಡು ದಿನಗಳ ಆನ್ ಡ್ಯೂಟಿ ಲೀವ್ ತೆಗೆದುಕೊಂಡು ಯಾರಿಗೂ ಹೇಳದೇ ಗುಟ್ಟಾಗಿ ಮಾಡುವ ಅದೆಂತಹ ಡ್ಯೂಟಿ ಅದು? ಆತ ಈಗ ಇಲ್ಲಿದ್ದರೆ ದೇವಕಿಯ ನೀಲೀ ಡೈರಿಯನ್ನ ನೋಡಬಹುದಾಗಿತ್ತು. ಕೊಲೆಗಾರನ ಪತ್ತೆ ಆಗಿಹೋಗಿರುತ್ತಿತ್ತು.
ಇರಲಿ, ಯಾವತ್ತು ಬರುತ್ತಾರೋ ಬರಲಿ. ನನಗೇಕೆ ಅದರ ಚಿಂತೆ? ಈ ಕೊಲೆಯ ತನಿಖೆ ನನ್ನ ತಲೆನೋವೆನೂ ಅಲ್ಲವಲ್ಲ? ಅದೇನಿದ್ದರೂ ಅವರ ಕೆಲಸ. ಅವರು ಹೇಳಿದ್ದನ್ನು ಮಾಡುವುದಷ್ಟೇ ನನ್ನ ಕೆಲಸ…
ಕಣ್ಣು ತೆರೆದು ಖಾಲಿ ಕಪ್ಪನ್ನು ಟೇಬಲ್ ಮೇಲಿಡುತ್ತಿದ್ದಂತೇ ಬಾಗಿಲಲ್ಲಿ ನೆರಳು ಕಂದಿತು. ಗೋಕುಲ್ ತಲೆ ಒಳಗೆ ಹಾಕಿದ.
“ಸಾರ್, ಅಕ್ಕನಿಗೆ ಬಂದ ಇ ಮೇಲ್‌ನ ನೀವು ಓದಿದ್ರಂತೆ. ಮಾನ್ಸಿ ಹೇಳಿದ್ಲು.” ಉದ್ವೇಗದಲ್ಲಿ ಅವನ ದನಿ ಕಂಪಿಸುತ್ತಿತ್ತು.
“ಹೌದು ನೋಡ್ದೆ. ಮಾನ್ಸಿಗೆ ನಮ್ಮ ಇಲಾಖೆ ಮೆಡಲ್ ಕೊಟ್ಟು ಗೌರವಿಸಬೇಕು.” ಹಾಗೆಂದವನು ಅಟೆಂಡರ್ ಬೂಕಯ್ಯನನ್ನು ಕರೆದು ಮತ್ತೊಂದು ಟೀ ತರಲು ಹೇಳಿದ.
ಕುರ್ಚಿಯಲ್ಲಿ ಕುಳಿತ ಗೋಕುಲ್ ಜೇಬಿನಿಂದ ಕರವಸ್ತ್ರ ತೆಗೆದು ಮುಖ ಒರೆಸಿಕೊಂಡ. “ಇನ್ಸ್‌ಪೆಕ್ಟರ್ ಬೆಂಗ್ಲೂರ್‍ನಿಂದ ಇನ್ನೂ ಬಂದಿಲ್ವಾ ಸರ್?” ಪ್ರಶ್ನಿಸಿದ.
“ಅವರು ಬೆಂಗ್ಳೂರಿಗೆ ಹೋಗಿದ್ದಾರೆ ಅಂತ ಮಾನ್ಸಿ ಹೇಳಿದ್ರೇನು?”
“ಹ್ಞೂಂ.” ಕರವಸ್ತ್ರದಿಂದ ಮತ್ತೊಮ್ಮೆ ಹಣೆ ಒತ್ತಿದ ಗೋಕುಲ್.
“ಇನ್ಸ್‌ಪೆಕ್ಟರ್ ಇದ್ದಿದ್ರೆ ಸೀಲ್ ತೆಗೆಸಿ ಕೋಣೆ ಒಳಗೆ ಹೋಗಬೋದಾಗಿತ್ತು. ಡೈರಿ ನೋಡಿದ ಕೂಡ್ಲೇ ಅದು ಯಾರು ಅಂತ ಗೊತ್ತಾಗಿಬಿಡ್ತಿತ್ತು.” ಲೊಚಗುಟ್ಟಿದ ಕೋದಂಡಯ್ಯ.
ಗೋಕುಲ್ ಮುಖ ಮುಂದೆ ತಂದ.
“ಟೇಬಲ್ ಮೇಲೆ ಡೈರಿ ಇಲ್ಲಾ ಸರ್. ಅರ್ಧಗಂಟೇ ಹಿಂದೆ ನಾನೂ ಮಾನ್ಸೀನೂ ಕಿಟಕಿ ಮೂಲಕ ರೂಂ ಒಳಗೆ ನೋಡಿದ್ವಿ. ಟೇಬಲ್ ಮೇಲೆ ಡೈರಿ ಇಲ್ಲ.”
ಕೋದಂಡಯ್ಯ ಬೆಚ್ಚಿದ.
“ನಿಮ್ಮಕ್ಕ ಅದನ್ನ ಬೇರೆಲ್ಲಾದ್ರೂ ಇಟ್ಟಿರಬೋದೇನೋ.” ದನಿ ಎಳೆದ.
ನಕಾರದಲ್ಲಿ ತಲೆ ಅಲುಗಿಸಿದ ಗೋಕುಲ್.
“ಅಕ್ಕ ಅದನ್ನ ಯಾವಾಗ್ಲೂ ಅಲ್ಲೇ ಇಡೋದು. ನಾನಿಲ್ಲಿಗೆ ಬಂದಾಗಿನಿಂದ ಅದನ್ನ ಆ ಜಾಗ ಬಿಟ್ಟು ಬೇರೆ ಕಡೆ ನೋಡಿಲ್ಲ. ಅದೀಗ ಅಲ್ಲಿಲ್ಲ ಅಂದ್ರೆ ಕೊಲೆಗಾರ ಅದನ್ನ ಎತ್ಕೊಂಡು ಹೋಗಿದ್ದಾನೆ ಅಂತಾನೇ ಅರ್ಥ.”
ಅವನ ದನಿಯಲ್ಲಿನ ನಿಖರತೆಗೆ ಅವಾಕ್ಕಾದ ಕೋದಂಡಯ್ಯ. ಇಬ್ಬರ ನಡುವೆ ಮೌನ ನೆಲೆಸಿತು. ನಿಮಿಷಗಳ ಮೌನವನ್ನು ಗೋಕುಲ್‌ನೇ ಭಂಗಿಸಿದ.
“ಆ ಇ ಮೇಲ್ ನೋಡಿದ್ರಲ್ಲ ನಿಮಗೇನನ್ಸುತ್ತೆ? ಯಾರ ಮೇಲಾದ್ರೂ ಸಂದೇಹ?”
ಕೋದಂಡಯ್ಯ ತಲೆಯೆತ್ತಿ ತಿರುಗುತ್ತಿದ್ದ ಫ್ಯಾನಿನ ಮೇಲೆ ದೃಷ್ಟಿ ನೆಟ್ಟ.
“ಡೈರಿ ಸಿಕ್ಕಿಬಿಟ್ರೆ ಕೊಲೆಗಾರನ ಪತ್ತೆಯಾಗಿಹೋಗುತ್ತೆ ಅನ್ನೋ ಸಮಾಧಾನ ಇದ್ದಿದ್ರಿಂದ ಯಾರ ಮೇಲೂ ಸಂದೇಹ ಪಡೋ ಶ್ರಮಾನ ತಗೋಂಡಿರಲಿಲ್ಲ. ಈಗ ಆ ಡೈರಿ ಸುಲಭವಾಗಿ ಸಿಗೋದಿಲ್ಲ ಅಂತ ತಿಳಿದ ಮೇಲೆ ಸ್ವಲ್ಪ ತಲೆಗೆ ಕೆಲಸ ಕೊಡಬೇಕು. ಊಹೆ ಮಾಡೋ ಸರ್ಕಸ್ ಶುರು ಮಾಡಬೇಕು. ಮತ್ತೊಂದು ಸಲ ಆ ಇ ಮೇಲ್ ನೋಡಿದ್ರೆ ಮೆದುಳು ತನ್ನ ಕೆಲಸ ಆರಂಭಿಸೋದಿಕ್ಕೆ ಅನುಕೂಲ.” ಹೇಳುತ್ತಾ ಟೇಬಲ್ ಮೇಲಿದ್ದ ಫೈಲ್‌ಗಳನ್ನು ಅತ್ತಿತ್ತ ಸರಿಸತೊಡಗಿದ.
ಮೂರುನಾಲ್ಕು ನಿಮಿಷಗಳ ಹುಡುಕಾಟ ವ್ಯರ್ಥವಾಯಿತು. ಮಾನ್ಸಿ ಮಾಡಿಕೊಟ್ಟಿದ್ದ ಈ ಮೇಲ್‌ನ ಕನ್ನಡ ಅನುವಾದ ಇದ್ದ ಹಾಳೆ ಕಾಣೆಯಾಗಿತ್ತು!
ಬೆಳಿಗ್ಗೆ ತಾನೇ ತಂದು ಇಲ್ಲಿಟ್ಟ ಹಾಳೆ ಅದೆಲ್ಲಿ ಮಾಯವಾಯಿತು?
“ಇಲ್ಲೇ ಇಟ್ಟಿದ್ದೆ. ಈಗ ಕಾಣ್ತಾ ಇಲ್ಲ.” ಬೇಸರದ ಉದ್ಗಾರ ತೆಗೆದು ಮತ್ತೊಮ್ಮೆ ಫೈಲುಗಳನ್ನು ಅತ್ತಿತ್ತ ಎಳೆದಾಡಿದ.
ಗೋಕುಲ್‌ನ ಮುಖದಲ್ಲಿ ಕಿರುನಗೆ ಮಿಂಚಿತು.
“ಅದು ಕಳೆದುಹೋದ್ರೆ ಚಿಂತೆ ಬೇಡ. ಹತ್ತಿರದ ಯಾವುದಾದ್ರೂ ಇಂಟಟ್‌ನೆಟ್ ಕೆಫೆಗೆ ಹೋದ್ರೆ ಎರಡು ನಿಮಿಷದಲ್ಲಿ ಅದರ ಇನ್ನೊಂದು ಕಾಪಿ ತೆಗೆದುಕೊಡ್ತೀನಿ. ಅಕ್ಕನ ಪಾಸ್‌ವರ್ಡ್ ಏನಂತ ನಂಗೆ ಗೊತ್ತು. ಮಾನ್ಸಿ ಅದನ್ನ ನಂಗೆ ಹೇಳಿದ್ದಾಳೆ.”
ಕೋದಂಡಯ್ಯನ ಮುಖದ ಬೇಸರ ಕ್ಷಣದಲ್ಲಿ ಮಾಯವಾಯಿತು. ಗೋಕುಲ್ ಆಪದ್ಭಾಂಧವನಂತೆ ಕಂಡ.
“ಇಂಟರ್‌ನೆಟ್ ಕೆಫೆ ಯಾಕೆ? ನಮ್ಮ ಸ್ಟೇಷನ್‌ನಲ್ಲೇ ಕಂಪ್ಯೂಟರ್ ಇದೆ. ಇಂಟರ್‌ನೆಟ್ಟೂ ಇದೆ. ನಡೀರೀ ಅಲ್ಲಿಗೆ ಹೋಗೋಣ.” ಉತ್ಸಾಹದಿಂದ ಮೇಲೆದ್ದ. ಗೋಕುಲ್ ಕಿರುನಗೆ ಸೂಸುತ್ತಾ ಅವನ ಹಿಂದೆಯೇ ನಡೆದ.
ಸ್ಟೆನೋ ಮಹೇಶ್ ಪೋಲಿ ವೆಬ್ ಸೈಟ್‌ಗಳನ್ನು ನೋಡಲು ಮಾತ್ರ ಉಪಯೋಗವಾಗುತ್ತಿದ್ದ ಕಂಪ್ಯೂಟರ್ ಈಗ ಮುಸುಕು ಹೊದ್ದು ಕುಳಿತಿತ್ತು. ಮಹೇಶ್ ಎಲ್ಲೂ ಕಾಣಲಿಲ್ಲ. ಎಸ್. ಐ. ಠಾಣೆಯಲ್ಲಿ ಇಲ್ಲದ ದಿನಗಳಲ್ಲಿ ಅವನನ್ನು ಕೇಳುವವರಾರೂ ಇರಲಿಲ್ಲ.
ಪರದೆಯ ಮೇಲೆ ಮೂಡಿದ ಅಕ್ಷರಗಳನ್ನು ಕಣ್ಣರಳಿಸಿ ನೋಡಿದ ಕೋದಂಡಯ್ಯ.
“ನಿಮ್ಮ ಪ್ರಿಂಟರ್ ಕೆಲಸ ಮಾಡ್ತಾ ಇಲ್ಲ. ಧೂಳು ಹಿಡಿದು ಕೂತಿದೆ. ತಿಪ್ಪೆಗೆ ಹಾಕಿ ಇದನ್ನ.” ಅದರ ಮೇಲೆ ಅಸಡ್ಡೆಯಿಂದ ಬಡಿದ ಗೋಕುಲ್.
ಕೋದಂಡಯ್ಯ ಕೈ ಅಲ್ಲಾಡಿಸಿದ.
“ಅದು ಹಾಳಾಗಲೀ. ಪ್ರಿಂಟು ಗಿಂಟು ಏನೂ ಬ್ಯಾಡ ಈ ಇಂಗ್ಲೀಷ್‌ನಲ್ಲಿರೋದನ್ನ ತಗೋಂಡು ನಾನೇನು ಉಪ್ಪಿನಕಾಯಿ ಹಾಕ್ಕೊಂಡು ನೆಕ್ಕಲೇ? ಈ ಹಾಳೇನಲ್ಲಿ ಅದರ ಕನ್ನಡ ಅನುವಾದ ಬರೆದುಬಿಡಿ. ನಂಗೆ ಅದು ಸಾಕು. ಇಂಗ್ಲೀಷು ಪಂಗ್ಲೀಷು ನಮ್ ಸಾಹೇಬ್ರು ಬಂದು ನೋಡ್ಕೋತಾರೆ.” ಹಾಳೆಯೊಂದನ್ನು ಅವನ ಮುಂದಿಟ್ಟ.
ಗೋಕುಲ್‌ನ ಮುಖದ ನಗೆ ದೊಡ್ಡದಾಯಿತು. “ಸರಿ ಹಾಗೇ ಮಾಡ್ತೀನಿ. ಎರಡು ನಿಮಿಷದ ಕೆಲಸ ಅದು.” ಕಂಪ್ಯೂಟರಿನ ಪರದೆಯನ್ನೇ ನೋಡುತ್ತಾ ಹೇಳಿದ.
ಗೋಕುಲ್ ನೀಡಿದ ಹಾಳೆಯನ್ನು ತೆಗೆದುಕೊಂಡ ಕೋದಂಡಯ್ಯ ಅವನಿಗೆ ಮೂರು ನಾಲ್ಕು ಸಲ “ಥ್ಯಾಂಕ್ಸ್” ಹೇಳಿದ. ಹಾಳೆಯ ಮೇಲೆ ಕಣ್ಣಾಡಿಸುವಷ್ಟರಲ್ಲಿ ಹೊರಗೆ ಗದ್ದಲ ಕೇಳಿಸಿತು. “ಫಕ್ರುದ್ದೀನ್ ಅದೇನು ನೋಡೋ.” ಕೂಗಿ ಹೇಳಿದ. ಫಕ್ರುದ್ದೀನ್‌ನ ದನಿ ಹಿಂದೆಯೇ ಬಂತು. “ಸ್ವಲ್ಪ ನೀವೇ ಬಂದ್ರೆ ಒಳ್ಳೇದು.”
“ಥತ್” ಎಂದು ಗೊಣಗುತ್ತಾ ಹೊರಗೆ ನಡೆದ. ಅಲ್ಲಿ ಕಂಡದ್ದು ಯುವಕನೊಬ್ಬನನ್ನು ಸುತ್ತುಗಟ್ಟಿ ನಿಂತಿದ್ದ ಏಳೆಂಟು ಜನ. ಒಂದಿಬ್ಬರು ಹೆಂಗಸರೂ ಇದ್ದರು.
ಕೈಲಿದ್ದ ಹಾಳೆಯನ್ನು ತನ್ನ ಟೇಬಲ್‌ನ ಡ್ರಾ ಒಳಗೆ ಸೇರಿಸಿ ಹಿಂದೆಯೇ ಬಂದಿದ್ದ ಗೋಕುಲ್‌ನತ್ತ ತಿರುಗಿದ.
“ಯಾವುದೋ ರೋಡ್ ರೋಮಿಯೋ ಕೇಸ್ ಇರಬೇಕು. ನಿಮಗೆ ಬೇರೇನಾದ್ರೂ ಕೆಲಸ ಇದ್ರೆ ಹೊರಟುಬಿಡಿ. ಆಮೇಲೆ ಮತ್ತೆ ಭೇಟಿಯಾಗೋಣ.”
ಗಡಿಯಾರ ನೋಡಿದ ಗೋಕುಲ್ ಗಾಬರಿಯ ಮುಖ ಮಾಡಿದ. ಆತುರಾತುರವಾಗಿ ಹೇಳಿದ. “ನರಹರಿ ಜತೆ ಲಂಚ್‌ಗೆ ಹೋಗೋ ಪ್ರೋಗ್ರಾಂ ಇದೆ. ನೀವು ನಿಮ್ಮ ಕೆಲಸ ಮಾಡಿ. ನಾನಿನ್ನು ಹೊರಡ್ತೀನಿ. ತಡ ಆದ್ರೆ ನರಹರಿ ಹುಚ್ಚುಕುದುರೆ ಥರಾ ಆಡ್ತಾನೆ.” ಮಾತು ಮುಗಿಸಿ ತಲೆತಗ್ಗಿಸಿ ಸರಸರನೆ ನಡೆದುಹೋದ.
ರೋಡ್ ರೋಮಿಯೋಗೆ ಸರಿಯಾದ ಸತ್ಕಾರ ಮಾಡಿ ಉದ್ರಿಕ್ತ ಜನರ ಗುಂಪನ್ನು ಶಾಂತಗೊಳಿಸುವಷ್ಟರಲ್ಲಿ ಒಂದುಗಂಟೆಗೂ ಹೆಚ್ಚು ಸಮಯ ಕಳೆದುಹೋಯಿತು. ಮೂರುಗಂಟೆಗೆ ಮನೆ ಸೇರಿ ಊಟ ಮುಗಿಸಿ ಒಂದುಗಂಟೆ ರೆಸ್ಟ್ ತೆಗೆದುಕೊಂಡು ಠಾಣೆಗೆ ಹಿಂತಿರುಗಿದ ಕೋದಂಡಯ್ಯ.
ಗೋಕುಲ್ ಮಾಡಿಕೊಟ್ಟಿದ್ದ ಇ ಮೇಲ್‌ನ ಕನ್ನಡ ಅನುವಾದವನ್ನು ಮತ್ತೊಮ್ಮೆ ಓದಿದ. ಬೆಳಿಗ್ಗೆ ಮಾನ್ಸಿ ಮಾಡಿದ್ದ ಪ್ರತಿಯನ್ನು ಸರಿಯಾಗಿ ಓದಲೇ ಆಗಿರಲಿಲ್ಲ. ಈಗ ಇದನ್ನು ಓದುತ್ತಿದ್ದಂತೇ ಮನಸ್ಸಿಗೆ ಹತ್ತಿದ್ದ ಪೊರೆ ಸರಿಯುತ್ತಿರುವಂತೆನಿಸಿತು. ‘ಇಡೀ ಪ್ರಕರಣದ ಕೀಲಿ ಕೈ ಇದು. ಇದನ್ನು ಜೋಪಾನವಾಗಿಡಬೇಕು. ಎಸ್. ಐ. ಬಂದ ಒಡನೇ ಅವರ ಮುಂದೆ ಹಿಡೀಬೇಕು.’ ಯೋಚಿಸುತ್ತಾ ಟೈಟಸ್‌ನ ಕೋಣೆಯತ್ತ ನಡೆದ. ಮನದಲ್ಲಿ ಗೊಂದಲ.
“ನಿನ್ನೆ ರಾತ್ರಿ ನರಹರಿ ಹೇಳಿದ ವಿಷಯಗಳಲ್ಲಿ ಎಷ್ಟು ನಿಜ?”
ತನ್ನಲ್ಲೇ ಗೊಣಗಿಕೊಂಡು ಕೋಣೆಯೊಳಗೆ ಕಾಲಿಟ್ಟ. ಟೇಬಲ್ ಸಮೀಪಿಸಿದವನು ಅವಾಕ್ಕಾಗಿ ನಿಂತ.
ಬೆಳಿಗ್ಗೆ ಮಾನ್ಸಿ ಕೊಟ್ಟ ಹಾಳೆಗಳು ಅಲ್ಲೇ ಇದ್ದವು!
ಅರೆ! ಬೆಳಿಗ್ಗೆ ಇದನ್ನು ಇಲ್ಲಿ ತಂದಿಟ್ಟಿದ್ದು ಮರೆತೇಹೋಗಿತ್ತಲ್ಲ! ಅನ್ಯಾಯವಾಗಿ ಆ ಗೋಕುಲ್‌ಗೆ ತೊಂದರೆ ಕೊಟ್ಟೆನಲ್ಲ?
ಪೇಪರ್ ವೆಯಿಟ್ ಕೆಳಗಿದ್ದ ಹಾಳೆಯನ್ನೇ ಕಣ್ಣು ಮಿಟುಕಿಸದೇ ನೋಡಿದ. ಮಾನ್ಸಿಯ ಅಕ್ಷರಗಳು ಮುದ್ದಾಗಿ ಕಂಡವು. ಕೈಗೆತ್ತಿಕೊಂಡು ಒಮ್ಮೆ ಓದಿದ. ತುಟಿಗಳನ್ನು ಅಲುಗಿಸುತ್ತಾ ಮತ್ತೆರಡು ಸಲ ಓದಿದ. ಇನ್ನೊಂದು ಸಲ…
“ಅದನ್ನೇನು ಸಾರ್ ಹಂಗೆ ನೋಡ್ತಿದೀರಿ?” ಒಳಬಂದ ಫಕ್ರುದ್ದೀನ್ ಪ್ರಶ್ನಿಸಿದ.
ಕೋದಂಡಯ್ಯನ ಮುಖದಲ್ಲಿ ನಗೆ ಅರಳಿತು.
“ನೋಡಬೇಕಾದದ್ದೇ ಕಣಯ್ಯ. ಈ ಎರಡು ಹಾಳೆಗಳನ್ನೂ ನೋಡು. ಎರಡರಲ್ಲೂ ಇರೋ ವಿಷಯ ಒಂದೇ. ಅದ್ರಲ್ಲಿ ವ್ಯತ್ಯಾಸ ಇಲ್ಲ. ಆದ್ರೆ ಬರವಣಿಗೆ ನೋಡಯ್ಯ. ಇದು ಹುಡುಗಿ ಬರೆದದ್ದು. ಅಕ್ಷರಗಳು ಮುತ್ತಿನ ಮಣಿಯಂತಿವೆ. ಇದು ನೋಡು, ಹುಡುಗ ಬರೆದದ್ದು. ಕೋಳಿ ಕೆದಕಿದ ಹಾಗಿದೆ.”
“ಹುಡುಗ ಹುಡುಗಿ ಬರೆದಿರೋ ಕಾಗದಗಳನ್ನ ಹಿಡಕೊಂಡು ನೀವು ಕನಸು ಕಾಣಿ. ನಂಗೆ ಬೇರೆ ಕೆಲ್ಸಾ ಇದೆ.” ಹೇಳುತ್ತಾ ಟೇಬಲ್ ಮೇಲೆ ಪತ್ರಗಳನ್ನಿಟ್ಟು ಹೊರಗೆ ನಡೆದ ಫಕ್ರುದ್ದೀನ್.
ಅವನನ್ನು ತಡೆದು ಹೇಳಿದ ಕೋದಂಡಯ್ಯ.
“ಭರ್ಜರಿ ಮಸಾಲೆ ಟೀ ಕುಡೀಬೇಕು ಅನಿಸ್ತಿದೆ ಕಣಯ್ಯ. ಗಂಗಣ್ಣಿ ಹೋಟೆಲ್‌ನಿಂದ ತರೋದಿಕ್ಕೆ ಆ ಬೂಕಯ್ಯನಿಗೆ ಹೇಳು. ನಮ್ಮ ಕ್ಯಾಂಟೀನಿನ ಟೀ ಬ್ಯಾಡ. ಕತ್ತೆ ಉಚ್ಚೆ ಹಂಗಿರತ್ತೆ ಅದು. ಅದನ್ನ ಕುಡಿದ್ರೆ ಬಾಯೆಲ್ಲಾ ಕೆಟ್ಟುಹೋಗುತ್ತೆ.” ಮಾತು ಮುಗಿಸಿ ಸಿಳ್ಳು ಹಾಕುತ್ತಾ ತನ್ನ ಟೇಬಲ್‌ನತ್ತ ನಡೆದ.
* * *
ದುಂಡುಮೈನ ಗಂಗಣ್ಣಿ ವಿಶೇಷ ಅಸ್ಥೆಯಿಂದ ತಯಾರಿಸಿದ ಮಸಾಲೆ ಟೀನ ಒಂದೊಂದು ಹನಿಯನ್ನೂ ಆಸ್ವಾದಿಸಿದ ಕೋದಂಡಯ್ಯ ತೃಪ್ತಿಯಿಂದ ತಲೆದೂಗಿದ. ಎದ್ದು ಸೀದಾ ಹೊರಗೆ ನಡೆದು ಮೂಲೆಯ ಇಂಟರ್‌ನೆಟ್ ಕೆಫೆಗೆ ನುಗ್ಗಿದ. ಅತ್ತಿತ್ತ ನೋಡಿ ಖಾಲಿಯಿದ್ದ ಗೂಡೊಂದರೊಳಗೆ ಸೇರಿಕೊಂಡ.
ಠಾಣೆಯಲ್ಲಿರುವ ಕಂಪ್ಯೂಟರ್ ಬಿಟ್ಟು ಇಲ್ಲಿಗೆ ಬಂದ ಪೋಲೀಸಯ್ಯನನ್ನು ಕೆಫೆಯ ಹುಡುಗಿ ಅಚ್ಚರಿಯಿಂದ ದಿಟ್ಟಿಸಿದಳು.
ಮುಕ್ಕಾಲು ಗಂಟೆಗಳ ನಂತರ ಕೊದಂಡಯ್ಯ ಗೂಡೊಳಗಿಂದ ಹೊರಬಂದ. “ಪರವಾಗಿಲ್ಲ ಬಿಡೀ ಸಾರ್” ಎನ್ನುತ್ತಾ ತುಸುವೇ ಹಲ್ಲು ತೋರಿಸಿದ ಹುಡುಗಿಯ ಮುಂದೆ ಹತ್ತು ರೂಗಳ ಎರಡು ನೋಟುಗಳನ್ನಿಟ್ಟು ಸಿಳ್ಳು ಹಾಕುತ್ತಾ ಹೊರನಡೆದ. ಬೈಕ್ ಹತ್ತಿ ಸೀದಾ ವಿವೇಕಾನಂದ ನಗರದತ್ತ ಸಾಗಿದ.
ಬಾಗಿಲು ತೆರೆದ ಅಪರಿಚಿತ ಹೆಂಗಸು ಅಚ್ಚರಿಯ ಮುಖ ಮಾಡಿದಳು. ಕೋದಂಡಯ್ಯ ಪರಿಚಯ ಹೇಳಿಕೊಳ್ಳುವಷ್ಟರಲ್ಲಿ ಊರುಗೋಲಿನ ಆಸರೆಯಲ್ಲಿ ಮಾನ್ಸಿ ಹೊರಬಂದಳು. ಕೋದಂಡಯ್ಯನನ್ನು ನೋಡಿ ನಗೆ ಬೀರಿದಳು. ನೀಳ ನಿಲುವಿನ ಆಕರ್ಷಕ ಹೆಂಗಸು ತನ್ನ ಅತ್ತಿಗೆ ಎಂದು ಪರಿಚಯಿಸಿದಳು.
ಅರ್ಧಗಂಟೆಯ ಹಿಂದೆಯಷ್ಟೇ ಬೆಳಗಾವಿಯಿಂದ ಹಿಂತಿರುಗಿದ್ದ ವಸಂತರಾವ್ ದೇಶಪಾಂಡೆ ಮತ್ತವನ ಹೆಂಡತಿ ರಜನಿ ಕೋದಂಡಯ್ಯನ ಜತೆ ದೇವಕಿಯ ಕೊಲೆಯ ಬಗ್ಗೆ ಹತ್ತಾರು ಪ್ರಶ್ನೆ ಕೇಳಿದರು. ನೆರೆಯಲ್ಲಾದ ದುರಂತ ಅವರಿಗೆ ಅತೀವ ನೋವುಂಟುಮಾಡಿದ್ದುದು ಅವರ ಮಾತುಗಳಿಂದ ಸ್ಪಷ್ಟವಾಗಿತ್ತು.
ಟೀ ಮಾಡಲು ಹೊರಟ ರಜನಿಗೆ ಬೇಡವೆಂದು ಹೇಳಿ ಮಾನ್ಸಿಯತ್ತ ತಿರುಗಿದ ಕೋದಂಡಯ್ಯ.
“ಬೆಳಿಗ್ಗೆ ಒಂದು ವಿಷಯ ಕೇಳೋದನ್ನ ಮರೆತೆ. ಈಗ ಕೇಳ್ತೀನಿ. ಬೇಸರ ಮಾಡ್ಕೋಬೇಡಮ್ಮ.”
ಅಡಿಗೆಮನೆಯತ್ತ ನಡೆಯುತ್ತಿದ್ದ ರಜನಿ ಹೆಜ್ಜೆ ಸ್ಥಗಿತಗೊಳಿಸಿದಳು. ದೇಶಪಾಂಡೆ ಕಣ್ಣರಳಿಸಿದ. ಮಾನ್ಸಿ ಕೋದಂಡಯ್ಯನತ್ತ ಕುತೂಹಲದ ನೋಟ ಬೀರಿದಳು.
ಕೋದಂಡಯ್ಯ ನೇರವಾಗಿ ವಿಷಯಕ್ಕೆ ಬಂದ.
“ನರಹರಿ ನಿನ್ನನ್ನ ಮದುವೆಯಾಗೋ ಆಸೆ ತೋರಿಸಿದ್ರೇ?”
ಮಾನ್ಸಿ ಬೆದರಿದಳು. ನರಹರಿಯ ಪ್ರಸ್ತಾಪ ಅವಳ ಕಣ್ಣುಗಳಲ್ಲಿ ಭೀತಿ ತಂದಿತ್ತು.
“ಹ್ಞೂ.” ಪಿಸುಗಿದಳು.
“ಅದನ್ನ ದೇವಕಿ ವಿರೋಧಿಸಿದರೇ?”
ಮಾನ್ಸಿ ಮತ್ತಷ್ಟು ಬೆದರಿದಳು. ಉತ್ತರಿಸದೇ ಅಣ್ಣನ ಮುಖವನ್ನೊಮ್ಮೆ, ಅತ್ತಿಗೆಯ ಮುಖವನ್ನೊಮ್ಮೆ ದಿಟ್ಟಿಸಿದಳು. ರಜನಿ ಅವಳ ನೆರವಿಗೆ ಬಂದಳು.
“ನಾನು ಹೇಳ್ತೀನಿ ಸರ್. ದೇವಕಿ ಅದನ್ನ ವಿರೋಧಿಸಿದ್ದು ನಿಜ. ಆಕೆಗೆ ಅದು ಸುತರಾಂ ಇಷ್ಟ ಇರ್ಲಿಲ್ಲ. ಈ ಮದುವೆ ನಡೆಯೋದಿಕ್ಕೆ ಸಾಧ್ಯಾನೇ ಇಲ್ಲ ಅಂತೆ ರಂಪ ಮಾಡಿಬಿಟ್ರು.”
“ಯಾಕೆ? ಅವರ ವಿರೋಧಕ್ಕೆ ಏನು ಕಾರಣ?”
“ನರಹರಿ ಸಿನಿಮಾ ಗೀಳು ಹತ್ತಿಸ್ಕೊಂಡು ಬದುಕನ್ನ ಹಾಳು ಮಾಡಿಕೊಂಡೋನು. ಅವನು ಮಾನ್ಸೀನ ಚೆನ್ನಾಗಿ ನೋಡಿಕೊಳ್ತಾನೆ ಅನ್ನೋ ನಂಬಿಕೆ ದೇವಕಿಗೆ ಇರ್‍ಲಿಲ್ಲ. ಮಾನ್ಸೀನ ಮದುವೆ ಮಾಡ್ಕೊಂಡು ಅವಳ ಪಾಲಿನ ಅಸ್ತಿಯನ್ನ ಲಪಟಾಯಿಸೋ ಯೋಜನೆ ಅವಂದು ಅಂತ ಆಕೆ ತಿಳಿದ್ಲು. ಅದನ್ನ ಆಕೆ ನೇರವಾಗಿ ಅವನಿಗೇ ಹೇಳಿದ್ಲು.” ಮಾತು ನಿಲ್ಲಿಸಿ ಒಮ್ಮೆ ಕಿಟಕಿಯತ್ತ ನೋಡಿ ಮತ್ತೆ ಮುಂದುವರೆಸಿದಳು ರಜನಿ. “ಮಾನ್ಸಿಯ ಅಸ್ತೀನ ಹೊಡಕೊಂಡು ಅದರಿಂದ ಐಷಾರಾಮದ ಬದುಕು ನಡೆಸೋದಿಕ್ಕೆ ಪ್ಲಾನ್ ಹಾಕ್ತಾ ಇರೋ ಪರಾವಲಂಬಿ ನೀನು ಅಂತ ಅವನ ಮುಖಕ್ಕೇ ಹೇಳಿ ಉಗಿದ್ಲು.” ಮಾತು ಮುಗಿಸಿ ಮತ್ತೊಮ್ಮೆ ಕಿಟಕಿಯತ್ತ ಬೆದರಿದ ನೋಟ ಹೂಡಿದಳು ರಜನಿ.
ಕೋದಂಡಯ್ಯ ಮುಖ ಮುಂದೆ ತಂದ.
“ಅದಕ್ಕೆ ನರಹರಿಯ ಪ್ರತಿಕ್ರಿಯೆ?”
“ಓಹ್ ಕೇಳಬೇಡಿ. ಹುಚ್ಚುನಾಯಿಯ ಥರಾ ಆಡಿಬಿಟ್ಟ. ನಿನ್ನನ್ನ ಕೊಂದುಬಿಡ್ತೀನಿ ಅಂತ ಅವಳ ಮೇಲೆ ಏರಿಹೋದ. ದೇವಕಿ ಬಾತ್‌ರೂಂನೊಳಗೆ ನುಗ್ಗಿ ತಪ್ಪಿಸ್ಕೊಂಡ್ಲು. ಅವನಿಲ್ಲಿಗೆ ಬಂದ ಎರಡನೇ ದಿನಕ್ಕೆ ಇಷ್ಟೆಲ್ಲಾ ಆಯ್ತು.”
“ಅವನಿಗೇಕೆ ಅಂಥಾ ಕೋಪ ಬಂತು?”
“ಅವ್ಳು ಅವನನ್ನ ಪರಾವಲಂಬಿ ಅಂತ ಕರೆದ್ಲಲ್ಲ ಅದನ್ನ ಅವ್ನು ಸಹಿಸ್ಲಿಲ್ಲ.”
“ಐ ಸೀ” ಕೋದಂಡಯ್ಯ ಛಾವಣಿಗೆ ಮೊಗವೆತ್ತಿದ.
“ಅಂದ್ರೆ ನರಹರಿ ಜೀವನದಲ್ಲಿ ಯಶಸ್ವಿ ಮನುಷ್ಯನಾಗಿದ್ದು ಅವಂಗೆ ಸ್ವಂತ ಸಂಪಾದನೆ ಇದ್ದಿದ್ರೆ ಅವ್ನು ಮಾನ್ಸೀನ ಮದುವೆಯಾಗೋದಿಕ್ಕೆ ದೇವಕಿ ಅಡ್ಡಿ ಬರ್ತಾ ಇರ್‍ಲಿಲ್ಲ ಅಲ್ವೇ?” ರಜನಿಯನ್ನೇ ನೇರವಾಗಿ ನೋಡುತ್ತಾ ಪ್ರಶ್ನೆ ಹಾಕಿದ.
ಅವಳ ಉತ್ತರ ಥಟ್ಟನೆ ಬಂತು.
“ನೀವು ಹೇಳೋದು ನಿಜ. ಹಾಗಂತ ಅವ್ಳು ನಂಗೆ ನಾಲ್ಕೈದು ಸಲ ಹೇಳಿದ್ಲು. ಮಾನ್ಸಿಯ ಬಗ್ಗೆ ಅವಳಿಗೆ ತುಂಬ ಪ್ರೀತಿ. ಮಾನ್ಸಿಯ ಹಣಕ್ಕೆ ಆಸೆ ಪಡದೇ ತನ್ನ ಸ್ವಂತ ಸಂಪಾದನೇಲಿ ಅವಳನ್ನ ಪ್ರೀತಿಯಿಂದ ನೋಡಿಕೊಳ್ಳೋ ಹುಡುಗನಿಗೆ ಮಾತ್ರ ಅವಳನ್ನ ಮದುವೆ ಮಾಡಿ ಅಂತ ಯಾವಾಗ್ಲೂ ಹೇಳ್ತಾ ಇದ್ಲು. ನೌಕರಿ ಇಲ್ಲದ ಉಡಾಳರಿಗೆ ಅವಳನ್ನ ಕೊಡಬೇಡಿ, ಅಂಥೋರು ಮದುವೆಯಾದ ಮೇಲೆ ಆಸ್ತೀನೆಲ್ಲಾ ಹೊಡಕೊಂಡು ಮಾನ್ಸೀನ ಕಡೆಗಣಿಸಿಬಿಡ್ತಾರೆ ಅಂತ ಹೇಳ್ತಿದ್ಲು.”
ಮತ್ತೊಮ್ಮೆ ಛಾವಣಿಗೆ ಮೊಗವೆತ್ತಿದ ಕೋದಂಡಯ್ಯ.
* * *
ಐದು ಗಂಟೆಗೆ ಠಾಣೆಗೆ ಹಿಂತಿರುಗಿ ಐದು ನಿಮಿಷ ಅಲ್ಲಿ ಕುಳಿತಿದ್ದ ಶಾಸ್ತ್ರ ಮಾಡಿ ಮನೆಗೆ ಹೋದ ಕೋದಂಡಯ್ಯ. ಯೂನಿಫಾರ್ಮ್ ತೆಗೆದೆಸೆದು ಸಾದಾ ಉಡುಪು ಧರಿಸಿ, ತಲೆಗೊಂದು ಗಾಂಧಿಟೋಪಿ ಏರಿಸಿ ಹೊರಗೆ ಹೊರಟ. ಬೃಂದಾವನ್ ಎಕ್ಸ್‌ಟೆನ್ಷನ್, ಕಾವೇರಿ ನರ್ಸಿಂಗ್ ಹೋಂ, ಜಯನಗರ, ಬಸ್ ಸ್ಟ್ಯಾಂಡ್- ಹೀಗೆ ಹತ್ತಾರು ಕಡೆ ಸುತ್ತಿ ಅವನು ಮನೆ ಸೇರಿದಾಗ ಸಮಯ ರಾತ್ರಿ ಹನ್ನೆರಡು ದಾಟಿತ್ತು. ರಾತ್ರಿ ನಿದ್ದೆಗೆಟ್ಟರೂ ಬೆಳಿಗ್ಗೆ ಬೇಗ ಎದ್ದು ನರಹರಿಯ ಬಳಿಗೆ ಓಡಿದ.
* * *
-ಒಂಬತ್ತು-
ಸಬ್ ಇನ್ಸ್‌ಪೆಕ್ಟರ್ ಟೈಟಸ್ ಬೆಂಗಳೂರಿನಿಂದ ಹಿಂತಿರುಗಿದಾಗ ಸಮಯ ಸಂಜೆ ನಾಲ್ಕು ಗಂಟೆ. ನೇರ ಮನೆಗೆ ಹೋಗಿ ಬಿಸಿನೀರಿನಲ್ಲಿ ಸ್ನಾನ ಮಾಡಿ ರೋಸಮ್ಮ ನೀಡಿದ ಬಿಸಿಬಿಸಿ ಕಾಫಿ ಹೀರಿ ಠಾಣೆಯತ್ತ ಹೊರಟ. ಠಾಣೆ ಖಾಲಿಖಾಲಿಯಾಗಿದ್ದಂತೆ ಕಂಡಿತು. ಕೋದಂಡಯ್ಯನೂ ಎಲ್ಲೂ ಕಾಣಿಸದೇ ಹೋದಾಗ ಅಟೆಂಡರ್ ಬೂಕಯ್ಯನನ್ನು ಪ್ರಶ್ನಿಸಿದ.
“ಅವ್ರು ನಿನ್ನೆ ಸಾಯಂಕಾಲದಿಂದ್ಲೂ ಪತ್ತೆ ಇಲ್ಲ ಸಾರ್.” ಬೂಕಯ್ಯನ ಉತ್ತರ ಕೇಳಿ ಕಣ್ಣರಳಿಸಿದ.
“ಬೆಳಗಿನಿಂದ ಸ್ಟೇಷನ್‌ಗೆ ಬರ್‍ಲೇ ಇಲ್ವೇನಯ್ಯ?” ದನಿಯಲ್ಲಿ ಕೋಪವಿತ್ತು.
ಬೂಕಯ್ಯ ಒಮ್ಮೆ ತಲೆ ಕೆರೆದುಕೊಂಡ. “ಒಂದ್ಸಲ ಬಂದ್ರಿದ್ರು ಅನ್ಸುತ್ತೆ ಸಾ.” ರಾಗ ಎಳೆದ.
ಒಮ್ಮೆ ಹೂಂಕರಿಸಿ ಜೊರ್ರನೆ ಕುರ್ಚಿ ಎಳೆದು ಕೂತ. “ನಾನಿಲ್ದೇ ಇದ್ರೆ ಸ್ಟೇಷನ್ ಕುಲಗೆಟ್ಟುಹೋಗುತ್ತೆ.” ಗೊಣಗಿದ. ಹೆದರುತ್ತಲೇ “ಮಸಾಲೆ ಟೀ ತರಲಾ ಸಾ?” ಎಂದು ಕೇಳಿದ ಬೂಕಯ್ಯನ ಮೇಲೆ ಹರಿಹಾಯ್ದ. “ತಗೋಂಡು ಬಂದು ನಿನ್ನ ತಲೆ ಮೇಲೆ ಸುರಕೋ.”
ಬಡಪಾಯಿ ಬೂಕಯ್ಯ ಸದ್ದಿಲ್ಲದೇ ಜಾಗ ಖಾಲಿ ಮಾಡಿದ.
ಟೈಟಸ್ ಕೈಬೆರಳುಗಳನ್ನು ಅಸಹನೆಯಿಂದ ಹಿಸುಕಿದ.
“ಎರಡು ದಿನ ಬೆಂಗಳೂರಿನಲ್ಲಿದ್ದುಕೊಂಡು ನಾನಿಷ್ಟು ಕೆಲಸ ಮಾಡಿಕೊಂಡು ಬಂದಿರೋವಾಗ ಇಲ್ಲಿ ಎಲ್ರೂ ಮಜಾ ಉಡಾಯಿಸ್ತಿದಾರೆ! ಈ ಈಪಾಟೀ ಕೋದಂಡ ಎಲ್ಲಿ ಹಾಳಾಗಿ ಹೋದ?”
ಬೇಸರದಿಂದ ಕಣ್ಣುಮುಚ್ಚಿದ. ಎರಡು ಕ್ಷಣಗಳ ನಂತರ ಕಣ್ಣು ತೆರೆದರೆ ಎದುರಿಗೆ ಕೋದಂಡಯ್ಯ!
“ಎಲ್ಲಯ್ಯ ಹಾಳಾಗಿದ್ದೆ?” ಅರಚಿದ.
“ಇಲ್ಲೇ ಇದ್ದೆ ಸಾರ್. ನಾನೆಲ್ಲಿಗೆ ಹೋಗ್ಲಿ? ನಂಗೇನು ಬೆಂಗ್ಳೂರು ಮಂಗ್ಳೂರು ಅಲ್ಲೆಲ್ಲಾ ನೆಂಟ್ರು ಇದ್ದಾರಾ? ಇಲ್ಲಾ ಕೊಲೇ ತನಿಖೆಗೆ ಅಂತ ಅಲ್ಲಿಗೆಲ್ಲಾ ಹೋಗೋದಿಕ್ಕೆ ನಾನೇನು ಸಬ್ ಇನ್ಸ್‌ಪೆಕ್ಟರಾ?” ವಿಶಾಲವಾಗಿ ನಕ್ಕ ಕೋದಂಡಯ್ಯ.
“ನಾನು ಬೆಂಗ್ಳೂರಿಗೆ ಹೋಗಿದ್ದದ್ದು ಕೊಲೇ ತನಿಖೆಗೇ ಅಂತ ಹ್ಯಾಗಯ್ಯ ಹೇಳ್ತೀಯ?”
ಕೋದಂಡಯ್ಯ ಕುರ್ಚಿ ಎಳೆದು ಕೂತ.
“ಅದೇನು ದೊಡ್ಡ ವಿಷಯ ಬಿಡಿ ಸಾರ್. ನೀವು ಕೊಲೆ ತನಿಖೆ ನಡೆಸ್ತಾ ಇದ್ದಾಗ ನಾನು ನಿಮ್ಮ ಬಗ್ಗೆ ಸ್ವಲ್ಪ ತನಿಖೆ ನಡೆಸ್ದೆ. ವಿಷಯ ತಿಳಿದುಹೋಯ್ತು.” ಮತ್ತೊಮ್ಮೆ ಹಲ್ಲು ಬಿಟ್ಟ. ಟೈಟಸ್ ಮತ್ತೆ ಬಾಯಿ ತೆರೆಯುವ ಮೊದಲೇ ಹೇಳಿದ. “ಅದೆಲ್ಲಾ ಇರ್‍ಲಿ, ನೀವು ಬೆಂಗ್ಳೂರಿಗೆ ಹೋಗಿದ್ದ ವಿಷಯ ಏನಾಯ್ತು ಹೇಳಿ.”
“ದೇವಕಿಯ ಕೊಲೆಗಾರನ ಬಗ್ಗೆ ಸಾಕಷ್ಟು ವಿವರ ಕಲೆಕ್ಟ್ ಮಾಡ್ಕೊಂಡು ಬಂದಿದೀನಿ” ಎನ್ನುತ್ತಾ ಬ್ರೀಫ್ ಕೇಸ್ ತೆರೆದ ಟೈಟಸ್. ಹಾಳೆಯೊಂದನ್ನು ಹೊರತೆಗೆದು ಕೋದಂಡಯ್ಯನ ಮುಂದೆ ಹಿಡಿದ.
“ಕೊಲೆಗಾರ ದೇವಕಿಗೆ ಕಳಿಸಿದ್ದ ಇ ಮೇಲ್ ಕಣಯ್ಯ ಇದು. ಐ ಜಿ ಪಿ ಅವರ ಆಫೀಸ್‌ನಲ್ಲಿರೋ ಕಂಪ್ಯೂಟರ್ ತಜ್ಞರು ನಿನ್ನೆ ದಿನಪೂರ್ತಿ ತಿಣುಕಾಡಿದ ಮೇಲೆ ಆಯಮ್ಮನ ಮೇಲ್ ಬಾಕ್ಸ್ ಓಪನ್ ಆಯ್ತು.”
“ಭಾರೀ ದೊಡ್ಡ ಸಾಧನೆ. ನಿಮಗೆ ಶಹಬ್ಬಾಸ್ ಹೇಳಬೇಕು” ಎಂದ ಕೋದಂಡಯ್ಯ ಕೈನಲ್ಲಿದ್ದ ಫೈಲಿನಿಂದ ಹಾಳೆಯೊಂದನ್ನೆತ್ತಿ ಟೈಟಸ್‌ನ ಮುಖಕ್ಕೆ ಹಿಡಿದ.
“ಇದೇನಯ್ಯ ಇದೂ?” ಎನ್ನುತ್ತಾ ಅದನ್ನೇ ನೋಡಿದ ಟೈಟಸ್. ಬಾಯಿ ಅಗಲವಾಗಿ ತೆರೆದುಕೊಂಡಿತು.
ತಾನು ತಂದ ಇ ಮೇಲ್‌ನ ಪ್ರಿಂಟ್‌ಔಟ್‌ನ ಪಡಿಯಚ್ಚು!
ಟೈಟಸ್ ದಂಗಾಗಿಹೋಗಿದ್ದ.
“ಇದು… ಇದೆಲ್ಲಯ್ಯ ಸಿಕ್ತು?” ಬೆರಗಿನ ಪ್ರಶ್ನೆ ಹೊರಬಂತು.
“ನಿಮ್ಮ ಬೆಂಗಳೂರಿನ ಕಂಪ್ಯೂಟರ್ ತಜ್ಞರು ದಿನಪೂರ್ತಿ ತಿಣುಕಾಡಿ ಸಾಢಿಸಿದ ಕೆಲಸಾನ್ನ ನಮ್ಮ ಆ ಮಾನ್ಸಿ ಇಲ್ಲೇ ತನ್ನ ಮನೇಲೇ ಮಾಡಿದ್ದಾಳೆ.” ಮತ್ತೊಮ್ಮೆ ನಕ್ಕ ಕೋದಂಡಯ್ಯ.
ಎಸ್ ಐಗೆ ನಿಮಿಷಗಳವರೆಗೆ ಮಾತೇ ಹೊರಡಲಿಲ್ಲ. ಕಣ್ಣೆದುರಿಗಿದ್ದ ಸತ್ಯವನ್ನು ಅರಗಿಸಿಕೊಳ್ಳಲು ಅವನಿಗೆ ಕಷ್ಟವಾಗಿತ್ತು.
“ಅವಳು ಮಾಡಿದ್ಲಾ? ನಾನು ಇದಕ್ಕಾಗಿ ಬೆಂಗಳೂರಿನವರೆಗೆ ಅಲೆದೆನಲ್ಲ.” ತನ್ನಲ್ಲಿಯೇ ಗೊಣಗಿಕೊಂಡ.
“ಅದು ಯಾವಾಗ್ಲೂ ಹಾಗೇ ತಾನೆ? ಹಿತ್ತಲ ಗಿಡ ಮದ್ದಲ್ಲ ಅನ್ನೋ ಜಾತಿ ನಿಮ್ದು. ಇರಲಿ, ಈ ಇ ಮೇಲ್ ನೋಡಿ ಏನು ತೀರ್ಮಾನ ತಗೋಂಡ್ರಿ?” ನಗೆ ಸೂಸಿ ಪ್ರಶ್ನೆ ಹಾಕಿದ ಕೋದಂಡಯ್ಯ.
ಟೈಟಸ್ ಸುಧಾರಿಸಿಕೊಂಡಿದ್ದ. ನಿಧಾನವಾಗಿ ಬಾಯಿ ತೆರೆದ.
“ನೀನೇ ಹೇಳು. ಇದನ್ನ ನೀನೂ ಓದಿದ್ದೀಯಲ್ಲ?”
ಒಮ್ಮೆ ಗಂಟಲು ಸರಿಪಡಿಸಿಕೊಂಡ ಕೋದಂಡಯ್ಯ.
“ನೋಡಿ ಗುರೂ. ಇದನ್ನ ಕಳಿಸ್ದೋನು ಅಡ್ಡದಾರಿ ಹಿಡಿದು ಹಾಳು ಮಾಡಿಕೊಂಡ ತನ್ನ ಜೀವನವನ್ನ ಈಗ ಸರಿ ಮಾಡಿಕೊಳ್ಳೋದಕ್ಕೆ ಹೊರಟಿದ್ದಾನೆ. ಅದಕ್ಕೆ ದೇವಕಿಯಿಂದ ವಿರೋಧ ಬಂದಿದೆ. ಭಿನ್ನಾಭಿಪ್ರಾಯಗಳನ್ನ ದೂರ ಮಾಡಿಕೊಳ್ಳೋದಿಕ್ಕೆ ಆಯಮ್ಮನ್ನ ಮಾತುಕತೆಗೆ ಆಹ್ವಾನಿಸಿದ್ದಾನೆ.”
“ಅದು ಯಾರಿರಬೋದು?”
“ಅದೇನು ದೊಡ್ಡ ವಿಷಯವಲ್ಲ. ದೇವಕಿಯ ಪರಿಚಯದವರಲ್ಲಿ ಅಡ್ಡದಾರಿ ಹಿಡಿದಿದ್ದೋನು ಅಂದ್ರೆ ನರಹರಿ. ಈಗ ಮಾನ್ಸಿಯನ್ನ ಮದುವೆಯಾಗಿ ತನ್ನ ಬದುಕನ್ನ ಸರಿ ಮಾಡಿಕೊಳ್ಳೋ ಯೋಚನೆ ಅವಂಗೆ. ಇದನ್ನ ದೇವಕಿ ವಿರೋಧಿಸಿದ್ದಾಳೆ. ಈ ವಿಷಯದಲ್ಲಿ ಇಬ್ಬರ ನಡುವೆ ಘರ್ಷಣೆ ಆಗಿದೆ. ಅದರ ಬಗ್ಗೆ ಮಾತಾಡೋದಿಕ್ಕೆ ನರಹರಿ ದೇವಕಿಯನ್ನ ಕರೆದಿದ್ದಾನೆ ಅಂತ ಊಹಿಸಬೋದು.”
ಟೈಟಸ್‌ನ ಬಾಯಿ ಗುಹೆಯಂತೆ ತೆರೆದುಕೊಂಡಿತು. ನರಹರಿ ಮಾನ್ಸಿಯನ್ನು ಮದುವೆಯಾಗುವುದನ್ನು ದೇವಕಿ ಕಡುವಾಗಿ ವಿರೋಧಿಸಿದ ವಿಷಯವನ್ನು ತಾನು ಬೆಂಗಳೂರಿನ ಗಾಂಧಿನಗರದಲ್ಲಿದ್ದ ನರಹರಿಯ ಜೀವದ ಗೆಳೆಯನೊಬ್ಬನಿಂದ ಸಂಗ್ರಹಿಸಿದ್ದೆ! ಈ ಮಾಹಿತಿ ಕೋದಂಡಯ್ಯನಿಗೆಲ್ಲಿ ಸಿಕ್ಕಿತು?
“ಇದು ನಿಂಗೆ ಹ್ಯಾಗೆ ಗೊತ್ತಾಯ್ತು ಕೋದಂಡಯ್ಯ?” ಕೇಳಿಯೇಬಿಟ್ಟ.
“ನರಹರಿಯೇ ಹೇಳ್ದ.” ತಣ್ಣಗೆ ಹೇಳಿದ ಕೋದಂಡಯ್ಯ. “ಮಾನ್ಸಿ ಮತ್ತವಳ ಅತ್ತಿಗೆನೂ ಸಾಕಷ್ಟು ವಿವರ ಕೊಟ್ರು.” ಸೇರಿಸಿದ.
ಟೈಟಸ್‌ನ ಬಾಯಿ ಮತ್ತಷ್ಟು ಅಗಲವಾಗಿ ತೆರೆದುಕೊಂಡಿತು.
“ಅಲ್ಲಾ ಅ ನರಹರಿ ನಾನು ಮಾತಾಡಿಸಿದ್ರೆ ಮೈಮೇಲೇ ಬೀಳ್ತಾನೆ. ನಿಂಗೆ ಇದನ್ನೆಲ್ಲಾ ಯಾವಾಗ ಹೇಳ್ದ?” ಅಚ್ಚರಿಯ ಪ್ರಶ್ನೆ ಹೊರಬಂತು.
ಕೋದಂಡಯ್ಯ ಹುಸಿನಗೆ ನಕ್ಕ.
“ತಪ್ಪು ನಿಮ್ಮದೇ ಗುರೂ. ಅವನನ್ನ ಬೈಯ್ಯಬೇಡಿ. ನೀವು ಅವನ ಮೇಲೆ ವಿಶ್ವಾಸ ತೋರ್‍ಸಿ ಮಾತಾಡಿಸಿದ್ರೆ ಅವನು ನಿಮ್ಮ ಜತೇನೂ ಚೆನ್ನಾಗೇ ಮಾತಾಡ್ತಿದ್ದ. ನೀವಂತೂ… ಹ್ಞು ಬಿಡಿ.” ಸ್ವಲ್ಪ ಗಟ್ಟಿಯಾಗಿಯೇ ಲೊಚಗುಟ್ಟಿದ.
ಠಾನು ಎರಡು ದಿನಗಳು ಬೆಂಗಳೂರಿನಲ್ಲಿ ಅಲೆದಾಡಿ ಸಂಗ್ರಹಿಸಿದ ವಿಷಯಗಳೆಲ್ಲವನ್ನೂ ಈ ಈಪಾಟೀ ಕೋದಂಡಯ್ಯ ಮೈಸೂರಿನಲ್ಲೇ ಸಂಗ್ರಹಿಸಿಬಿಟ್ಟಿದ್ದಾನೆ! ಇವನೆಷ್ಟು ಘಾಟಿ!
ಕೋದಂದಯ್ಯನೇ ಮಾತಾಡಿದ.
“ಇದೆಲ್ಲಾನೂ ನೋಡಿ ನೀವು ದೇವಕಿಯ ಕೊಲೆ ಹಿಂದಿರೋ ವ್ಯಕ್ತಿ ನರಹರಿಯೇ ಅಂತ ತೀರ್ಮಾನ ಮಾಡಿದ್ದೀರಿ ಅಲ್ಲವೇ?”
ಒಂದುಕ್ಷಣ ಅವನನ್ನೇ ನೋಡಿದ ಟೈಟಸ್.
“ಹೌದು. ನೀನು ಬೇರೇನಾದ್ರೂ ಹೇಳ್ತೀಯಾ?” ದನಿಯಲ್ಲಿ ತುಸು ಗಾಬರಿಯಿತ್ತು. ತನಗೆ ಸಿಗದ ಬೇರೇನಾದರೂ ವಿಷಯವನ್ನು ಕೋದಂಡಯ್ಯ ಪತ್ತೆ ಹಚ್ಚಿರಬಹುದೇನೋ ಎನ್ನುವ ಆತಂಕ ಅವನ ಮನಸ್ಸಿನಲ್ಲಿ ಧುತ್ತನೆ ಎದ್ದು ನಿಂತಿತ್ತು.
“ಇಲ್ಲಾ ಗುರೂ. ಈ ವಿಚಾರದಲ್ಲಿ ನಿಮ್ಮ ತೀರ್ಮಾನವೇ ನನ್ನ ತೀರ್ಮಾನ. ಬೇರೆ ಮಾತಿಲ್ಲ.” ಕೋದಂಡಯ್ಯ ಘೋಷಿಸಿದ.
ಟೈಟಸ್‌ನ ಕಣ್ಣುಗಳಲ್ಲಿ ಹೊಳಪು.
“ಅಂದ್ರೆ ನರಹರಿಯೇ ಅಪರಾಧೀ ಅಂತ ನೀನೂ ಹೇಳ್ತೀಯ?” ಖಚಿತಪಡಿಸಿಕೊಳ್ಳಲು ಪ್ರಶ್ನೆಯನ್ನು ಒತ್ತಿ ಕೇಳಿದ.
“ಅದರಲ್ಲಿ ಅನುಮಾನ ಏನು ಬಂತು ದೇವ್ರೂ?”
ಟೈಟಸ್ ತೃಪ್ತಿಯಿಂದ ತಲೆದೂಗಿದ.
“ಕೊಲೆ ನಡೆದ ದಿನವೇ ಅವನೇ ಕೊಲೆಗಾರ ಅಂತ ನಾನು ತೀರ್ಮಾನ ಮಾಡಿಬಿಟ್ಟೆ ಕೋದಂಡಯ್ಯ. ತನಗೆ ಎಚ್ಚರವಿಲ್ಲದ ನಿದ್ದೆ ಅನ್ನೋ ಅವನ ಮಾತನ್ನ ನಾನು ಒಂಚೂರೂ ನಂಬಿರ್‍ಲಿಲ್ಲ. ಸರಿಯಾದ ಆಧಾರಗಳನ್ನ ಸೇರಿಸಿಕೊಂಡು ಅವನನ್ನ ಹಿಡೀಬೇಕು ಅಂತ ತೀರ್ಮಾನ ಮಾಡ್ದೆ. ಈಗ ನನ್ನಲ್ಲಿ ಆಧಾರಗಳಿವೆ. ನಾನೀಗ ಅವನನ್ನ ಅರೆಸ್ಟ್ ಮಾಡೋದಿಕ್ಕೆ ಹೊರಟಿದ್ದೀನಿ. ಬರ್‍ತೀಯಾ ನನ್ ಜತೆ?” ಹೇಳುತ್ತಾ ಎದ್ದು ನಿಂತ.
“ಬರದೇ ಇರ್‍ತೀನಾ ಸಾರ್? ಏನು ಮಾತು ಅಂತ ಕೇಳ್ತೀರಿ? ನಡೀರಿ ಹೊರಡೋಣ. ಇಬ್ರೂ ಸೇರಿ ನರಹರಿಯ ನರ ಹರಿದುಬಿಡೋಣ.” ಕೋದಂಡಯ್ಯನೂ ಎದ್ದುನಿಂತ. ಹೊರಡುವ ಮೊದಲು ಗೋಕುಲ್‌ನ ಸೆಲ್‌ಗೆ ಫೋನ್ ಮಾಡಿ “ಮಾನ್ಸಿ ಮನೇಗೆ ಬನ್ನಿ. ಒಂದು ಭರ್ಜರಿ ನಾಟಕ ತೋರಿಸ್ತೀನಿ” ಎಂದು ಹೇಳಿದ.
* * *
ಅವರಿಬ್ಬರೂ ಅಲ್ಲಿಗೆ ತಲುಪುವ ಹೊತ್ತಿಗೆ ಗೋಕುಲ್ ಬಂದಾಗಿತ್ತು. ಇಬ್ಬರನ್ನೂ ನಗುಮೊಗದಿಂದ ಸ್ವಾಗತಿಸಿದ.
“ನರಹರಿ ತನ್ನ ಅಂತಃಪುರದಲ್ಲಿದ್ದಾರೇನು?” ಕೋದಂಡಯ್ಯ ಮೆಲ್ಲಗೆ ಪ್ರಶ್ನಿಸಿದ.
“ಇದ್ದಾನೆ ಅಂತ ಕಾಣುತ್ತೆ. ಏನು ವಿಷಯ?” ಅಷ್ಟೇ ಮೆಲ್ಲಗೆ ಮರುಪ್ರಶ್ನಿಸಿದ ಗೋಕುಲ್.
“ಈ ಸಂಜೆಯ ನಾಟಕದ ಹೀರೋ ಅವನೇ. ಸ್ವಲ್ಪ ಅವನನ್ನ ಉಪಾಯವಾಗಿ ಇಲ್ಲಿಗೆ ಕರೆತರ್ತೀರಾ?” ಬೇಡಿಕೆ ಸಲ್ಲಿಸಿದ.
ಗೋಕುಲ್‌ನ ಕಣ್ಣುಗಳು ವಿಶಾಲಗೊಂಡವು. “ಈಗ್ಲೇ ಕರಕೊಂಡು ಬರ್ತೀನಿ.” ಮಾತು ಮುಗಿಸಿ ಹೊರಟವನನ್ನು ತಡೆದು ಪಿಸುದನಿಯಲ್ಲಿ ಹೇಳಿದ ಕೋದಂಡಯ್ಯ. “ನಾನೂ ಎಸ್ ಐ ಸಾಹೇಬರೂ ಇಲ್ಲಿದೀವಿ ಅಂತ ಅವನಿಗೆ ಹೇಳಬೇಡಿ. ಬೇರೇನಾದ್ರೂ ಸುಳ್ಳು ಕಾರಣ ಕೊಟ್ಟು ಅವನು ಇಲ್ಲಿಗೆ ಬರೋಹಾಗೆ ಮಾಡಿ.”
ಗೋಕುಲ್‌ನ ಬೆನ್ನಹಿಂದೆ ತಲೆತಗ್ಗಿಸಿ ಒಳಬಂದ ನರಹರಿ ಅಲ್ಲಿದ್ದವರನ್ನು ಕಂಡು ಬೆಚ್ಚಿದ. ಅವನ ಪ್ರಶ್ನಾರ್ಥಕ ನೋಟವನ್ನು ಗಮನಿಸಿದ ಗೋಕುಲ್ ಅವನ ಭುಜ ತಟ್ಟಿದ. “ನಮ್ಮ ಈ ಸಂಜೆಯ ಸಂತೋಷಕೂಟಕ್ಕೆ ಸಬ್ ಇನ್ಸ್‌ಪೆಕ್ಟರ್ ಟೈಟಸ್ ಮತ್ತು ಹೆಡ್ ಕಾನ್ಸ್‌ಟೇಬಲ್ ಕೋದಂಡಯ್ಯ ಅನಿರೀಕ್ಷಿತ ಅತಿಥಿಗಳು.” ಕ್ಷಣ ತಡೆದು ಸೇರಿಸಿದ. “ಇವರಿಬ್ಬರೂ ಐದು ಹತ್ತು ನಿಮಿಷವಿದ್ದು ಹೊರಟುಹೋಗ್ತಾರೆ. ಆಮೇಲೆ ಇಡೀ ಸಂಜೆ ನಮ್ಮದೇ.”
ರಜನಿ ನೀಡಿದ ಕಾಫಿಯನ್ನು ಎಲ್ಲರೂ ಮೌನವಾಗಿ ಗುಟುಕರಿಸಿದರು. ನರಹರಿಯನ್ನುಳಿದು ಎಲ್ಲರ ಮನದಲ್ಲಿದ್ದುದು ಮುಂದೇನು ನಡೆಯಲಿದೆ ಎಂಬ ಕುತೂಹಲ, ಆತಂಕ.
ಖಾಲೀ ಕಪ್ಪನ್ನು ಸಶಬ್ಧವಾಗಿ ಟೀಪಾಯ್ ಮೇಲಿಟ್ಟು ಎದ್ದು ನಿಂತ ಎಸ್ ಐ ಟೈಟಸ್. ಕೋದಂಡಯ್ಯನತ್ತ ಅರ್ಥಪೂರ್ಣವಾಗಿ ನೋಡಿದ.
ಕೋದಂಡಯ್ಯ ಒಮ್ಮೆ ಕೆಮ್ಮಿ ಬಾಯಿ ತೆರೆದ.
“ನಾವಿಲ್ಲಿ ಉಳಿದು ನಿಮ್ಮ ಸೊಗಸಾದ ಸಂಜೇನ ಹಾಳು ಮಾಡೋದಿಕ್ಕೆ ಇಷ್ಟಪಡೋದಿಲ್ಲ. ನಾವಿನ್ನು ಹೊರಡ್ತೀವಿ. ಹೊರಡೋದಿಕ್ಕೆ ಮೊದಲು ನಿಮಗೊಂದು ಸುದ್ದಿ ಹೇಳಬೇಕು.” ಮತ್ತೊಮ್ಮೆ ಕೆಮ್ಮಿ ಮುಂದುವರೆಸಿದ. “ದೇವಕಿಯವರ ಕೊಲೆಗಾರನನ್ನ ನಮ್ಮ ಎಸ್ ಐ ಸಾಹೇಬರು ಪತ್ತೆ ಹಚ್ಚಿದ್ದಾರೆ. ಅವನನ್ನು ಅರೆಸ್ಟ್ ಮಾಡೋದಿಕ್ಕೇ ನಾವೀಗ ಹೊರಟಿರೋದು.”
ಅಲ್ಲಿದ್ದವರ ಮೇಲೆ ಅವನ ಮಾತಿನ ಪರಿಣಾಮ ಅಸಾಧಾರಣವಾಗಿತ್ತು.
ವಸಂತರಾವ್ ಮತ್ತು ರಜನಿ ಸರಕ್ಕನೆ ತಲೆ ಮೇಲೆತ್ತಿದರು. ಮಾನ್ಸಿಯ ಕಣ್ಣುಗಳು ಕಣ್ಣುಗುಡ್ಡೆಗಳು ಹೊರಬರುವಷ್ಟು ಅಗಲಗೊಂಡವು. ನರಹರಿಯ ಕೈ ಅಲುಗಿ ಕಪ್ಪಿನಿಂದ ಕಾಫಿ ಹೊರಚೆಲ್ಲಿತು. ಗೋಕುಲ್ ಥಟ್ಟನೆ ಮೇಲೆದ್ದು ನಿಂತ. ಅತೀವ ಅಚ್ಚರಿಯಲ್ಲಿ ಪ್ರಶ್ನೆ ಹಾಕಿದ.
“ಕೊಲೆಗಾರ… ಯಾರು? ಎಲ್ಲಿದ್ದಾನೆ ಅವನು?”
ಅವನತ್ತ ತಿರುಗಿದ ಕೋದಂಡಯ್ಯ.
“ಈ ಊರಲ್ಲೇ ಇದ್ದಾನೆ. ನಾವೀಗ ಅವನ ಮನೆಗೇ ಹೊರಟಿರೋದು. ನೀವೂ ಬರ್ತೀರೇನು ನಮ್ಮ ಜತೆ? ನಿಮ್ಮ ಸಹಕಾರ ಇದ್ರೆ ಅಪರಾಧಿಯನ್ನ ಹಿಡಿಯೋದು ನಮಗೆ ಸುಲಭ.”
ಗೋಕುಲ್‌ನ ಕಣ್ಣುಗಳು ಮಿಂಚಿದವು. ಎರಡು ಹೆಜ್ಜೆ ಮುಂದೆ ಬಂದ.
“ನಮ್ಮಕ್ಕನ ಕೊಲೆ ಮಾಡಿದ ಪಾಪಿಯನ್ನ ಅರೆಸ್ಟ್ ಮಾಡೋ ನಿಮ್ಮ ಕೆಲಸಕ್ಕೆ ಎಂಥಾ ಸಹಾಯಕ್ಕಾದರೂ ನಾನು ಸಿದ್ಧ.”
“ಗುಡ್.” ಟೈಟಸ್‌ನ ಕಣ್ಣುಗಳಲ್ಲಿ ಮೆಚ್ಚುಗೆ ಮೂಡಿತು.
ನಸುನಗೆ ಬೀರುತ್ತಾ ಕೋದಂಡಯ್ಯ ಮುಂದೆ ಸರಿದ. ಪ್ಯಾಂಟಿನ ಜೇಬಿನಿಂದ ಕೋಳಗಳನ್ನು ಹೊರತೆಗೆದು ಗೋಕುಲ್‌ನತ್ತ ಚಾಚಿದ.
“ತಗೋಳಿ. ನಿಮ್ಮಕ್ಕನ ಕೊಲೆಗಾರನ ಕೈಗೆ ಕೋಳ ತೊಡಿಸೋ ಕೆಲಸ ನಿಮ್ಮಿಂದಲೇ ಆಗಲಿ. ಆಗ ನಿಮ್ಮಕ್ಕನ ಆತ್ಮಕ್ಕೆ ಶಾಂತಿ ಸಿಗಬೋದು.”
ಕೋಳಗಳನ್ನೇ ಒಂದುಕ್ಷಣ ಬೆರಗಿನಿಂದ ದಿಟ್ಟಿಸಿದ ಗೋಕುಲ್. ನಿಧಾನವಾಗಿ ಕೈಚಾಚಿ ಕೋಳಗಳನ್ನು ತೆಗೆದುಕೊಂಡ.
“ಯಾರು ಹೇಳಿ ಕೊಲೆಗಾರ?” ಕನಸಿನಲ್ಲಿರುವಂತೆ ಪ್ರಶ್ನಿಸಿದ. ಇಡೀ ಪ್ರಕರಣ ಅವನಿಗೆ ತೀರಾ ಅನಿರೀಕ್ಷಿತವಾಗಿದ್ದುದು ಸ್ಪಷ್ಟವಾಗಿತ್ತು.
ಟೈಟಸ್ ಮುಂದೆ ಬಂದ.
“ಅಲ್ಲಿದ್ದಾನೆ ನೋಡಿ ಕೊಲೆಗಾರ.” ನರಹರಿಯತ್ತ ಬೆರಳು ಮಾಡಿದ.
ನರಹರಿ ಥಟ್ಟನೆ ಎದ್ದುನಿಂತ.
“ಇನ್ಸ್‌ಪೆಕ್ಟರ್ ಹುಡುಗಾಟ ಆಡ್ತಿದೀರೇನು?” ಅರಚಿದ. ಕೋದಂಡಯ್ಯನತ್ತ ತಿರುಗಿ ಹತಾಷೆಯ ನೋಟ ಬೀರಿದ.
ಕೋದಂಡಯ್ಯ ಅವನ ನೋಟ ತಪ್ಪಿಸಿದ.
ಹೂಂಕರಿಸಿದ ಟೈಟಸ್. “ನಟನೆ ಸಾಕು ನಟಸಾರ್ನಭೌಮ. ಇದು ಸಿನಿಮಾ ಶೂಟಿಂಗ್ ಅಲ್ಲ. ಮರ್ಯಾದೆಯಾಗಿ ಕೋಳಕ್ಕೆ ಕೈಒಡ್ಡು. ಇಲ್ಲದ ಆಟ ಆಡಿದ್ರೆ ಗೋಲಿ ಉಡಾಯಿಸಿಬಿಡ್ತೀನಿ.” ರಿವಾಲ್ವರ್ ಮುಂದೆ ಮಾಡಿದ. ಗೋಕುಲ್‌ನತ್ತ ತಿರುಗಿ ಉತ್ತೇಜಕ ದನಿಯಲ್ಲಿ ಹೇಳಿದ. “ಕಮಾನ್ ಗೋಕುಲ್. ಗೋ ಅಹೆಡ್ ಅಂಡ್ ಅರೆಸ್ಟ್ ಹಿಮ್.”
ನರಹರಿ ಸರ್ರನೆ ನಾಲ್ಕು ಹೆಜ್ಜೆ ಹಿಂದೆ ಹಾರಿದ. ಕೈಗೆ ಸಿಕ್ಕಿದ ಒಂದೂವರೆ ಅಡಿ ಉದ್ದದ ಕಂಚಿನ ಹೂದಾನಿಯನ್ನು ಕೈಗೆತ್ತಿಕೊಂಡ. ಗೋಕುಲ್‌ನತ್ತ ಉರಿನೋಟ ಬೀರಿದ. “ಹತ್ರ ಬಂದ್ರೆ ಬುರುಡೆ ಚಚ್ಚಿಬಿಡ್ತೀನಿ.” ಪೂತ್ಕರಿಸಿದ.
ಗೋಕುಲ್ ಅನುಮಾನಿಸುತ್ತಾ ನಿಂತ. ಅವನ ಬೆನ್ನು ತಟ್ಟಿದ ಕೋದಂಡಯ್ಯ.
“ಅಕ್ಕನ ಕೊಲೆಗಾರನ್ನ ಹಿಡಿಯೋದರಲ್ಲಿ ಎಂಥಾ ಸಹಾಯಕ್ಕಾದ್ರೂ ರೆಡೀ ಅಂತ ಎರಡು ನಿಮಿಷಗಳ ಹಿಂದೆ ಹೇಳಿದ್ರಿ. ಈಗ ನೋಡಿದ್ರೆ…?” ಛೇಡಿಸಿದ.
ಸುತ್ತಲೂ ಬೊಂಬೆಗಳಂತೆ ನಿಂತಿದ್ದವರತ್ತ ಒಮ್ಮೆ ನೋಡಿ ಒಂದು ಹೆಜ್ಜೆ ಮುಂದಿಟ್ಟ ಗೋಕುಲ್. ಅವನ ಮೇಲೆ ಕಣ್ಣಿಟ್ಟ ನರಹರಿ ಕೈಯಲ್ಲಿದ್ದ ಹೂದಾನಿಯನ್ನು ತೂಗಾಡಿಸಿದ. ಮಾನ್ಸಿ ಉಸಿರು ಬಿಗಿ ಹಿಡಿದಳು.
ಗೋಕುಲ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟ…
ಕೋದಂಡಯ್ಯ ಅವನನ್ನು ಸಮೀಪಿಸಿದ. ಅವನ ಭುಜ ಒತ್ತಿ ಪ್ರಶ್ನೆ ಹಾಕಿದ. “ಕೈಗಳಿಗೆ ಕೋಳ ತೊಡಿಸೋದು ಹೇಗೆ ಅಂತ ಗೊತ್ತೇನು ನಿಮಗೆ?”
ಗೋಕುಲ್ ಒಂದುಕ್ಷಣ ಪೆಚ್ಚಾದ. ಕಣ್ಣುಗಳಲ್ಲಿ ಮೂಡಿದ ಗೊಂದಲ ಕೋಳ ತೊಡಿಸುವ ವಿಧಾನ ಅವನಿಗೆ ತಿಳಿದಿಲ್ಲವೆಂದು ಸಾರಿತು.
ಕೋದಂಡಯ್ಯನ ಮುಖದಲ್ಲಿ ನಸುನಗೆ.
“ಐ ಐ ಎಂ, ಅಹ್ಮದಾಬಾದ್‌ನಲ್ಲಿ ಇದನ್ನ ನಿಮಗೆ ಹೇಳಿಕೊಟ್ಟಿಲ್ಲ ಅಂತ ತಿಳೀತೀನಿ. ಚಿಂತೆಯಿಲ್ಲ. ನಾನು ಹೇಳಿಕೊಡ್ತೀನಿ.” ಕೋಳಗಳನ್ನು ತನ್ನ ಕೈಗೆ ತೆಗೆದುಕೊಂಡ. “ಎಲ್ಲೀ ನಿಮ್ಮ ಕೈಗಳನ್ನ ಮುಂದೆ ಚಾಚಿ… ಹೀಗೇ… ಹ್ಞಾ ಹೀಗೇ…” ಎನ್ನುತ್ತಾ ಗೋಕುಲ್‌ನ ಎರಡು ಕೈಗಳಿಗೂ ಕೋಳ ತೂರಿಸಿದ. ಅಧಿಕಾರಿಯತ್ತ ತಿರುಗಿ ಹೇಳಿದ.
“ಕೊಲೆಗಾರನ ಕೈಗೆ ಕೋಳ ತೊಡಿಸಿಯಾಯ್ತು ಗುರೂ. ಇನ್ನು ಮುಂದಿನ ಕೆಲಸ ನಿಮ್ಮದು.”
ಒಂದುಕ್ಷಣ ಎಲ್ಲರೂ ಬೆಚ್ಚಿದರು. ಟೈಟಸ್ ಅವಾಕ್ಕಾಗಿದ್ದ.
ಗೋಕುಲ್‌ನ ಕಣ್ಣುಗಳಲ್ಲಿ ಅರೆಕ್ಷಣ ಭೀತಿ ಚಿಮ್ಮಿತು. ಮರುಕ್ಷಣ ದನಿಯೆತ್ತರಿಸಿ ಅರಚಿದ. “ಹುಡುಗಾಟ ಆಡ್ತಿದಿರೇನ್ರೀ?” ಕೋಳಗಳಿದ್ದ ಕೈಗಳನ್ನು ರಭಸವಾಗಿ ಅಲುಗಿಸಿದ.
“ಗಾಂಚಾಲಿ ಮಾಡ್ತೀಯೇನಲೇ ಹೈವಾನ್?” ಛಟ್ಟನೆ ಅವನ ಕೆನ್ನೆಗೆ ಬಾರಿಸಿದ ಕೋದಂಡಯ್ಯ. ಅವನ ರಟ್ಟೆ ಹಿಡಿದು ಅಧಿಕಾರಿಯತ್ತ ನೂಕಿದ. “ಸ್ವಂತ ಅಕ್ಕನನ್ನ ಕೊಂದ ಪಾಪಿ ಇವನೇ ಸಾರ್. ಎಳಕೊಂಡು ಹೋಗಿ ಒದ್ದು ಲಾಕಪ್‌ಗೆ ಹಾಕಿ.”
ಸಬ್ ಇನ್ಸ್‌ಪೆಕ್ಟರ್ ಟೈಟಸ್ ಗರಬಡಿದವನಂತೆ ನಿಂತುಬಿಟ್ಟಿದ್ದ. ವಸಂತರಾವ್ ಬಿಟ್ಟಕಣ್ಣು ಬಿಟ್ಟಂತೆ ನಿಂತಿದ್ದ. ರಜನಿ ಎದೆಗೆ ಕೈ ಒತ್ತಿದಳು. ಮಾನ್ಸಿ ಬಾಯಿಗೆ ಕೈ ಒತ್ತಿ ಚೀತ್ಕಾರ ತಡೆದಳು. ನರಹರಿಯ ಕೈನಿಂದ ಹೂದಾನಿ ಜಾರಿ ಸಶಬ್ಧವಾಗಿ ಕೆಳಗೆ ಬಿತ್ತು.
* * *
-ಹತ್ತು-
ತನ್ನ ಅಪರಾಧವನ್ನು ಒಪ್ಪಿಕೊಂಡು ಹೇಳಿಕೆ ಕೊಟ್ಟ ಗೋಕುಲ್‌ನನ್ನು ಲಾಕಪ್‌ಗೆ ಹಾಕಿ ರೆಕಾರ್ಡ್‌ಗಳ ರಗಳೆಯನ್ನು ಪೂರ್ಣಗೊಳಿಸಿ ಕುರ್ಚಿಯಲ್ಲಿ ಕುಸಿದು ನೀಳವಾಗಿ ಉಸಿರೆಳೆದುಕೊಂಡ ಎಸ್ ಐ ಟೈಟಸ್.
ಅವನನ್ನೇ ಅನುಸರಿಸಿ ಠಾಣೆಗೆ ಬಂದಿದ್ದ ವಸಂತರಾವ್, ರಜನಿ ಮತ್ತು ಮಾನ್ಸಿ ತಮ್ಮತಮ್ಮೊಳಗಿನ ಗುಸುಗುಸು ನಿಲ್ಲಿಸಿ ಅವನತ್ತ ತಿರುಗಿದರು. ಕೋದಂಡಯ್ಯ ಅಟೆಂಡರ್ ಬೂಕಯ್ಯನ ಜತೆ ಏನೋ ಚಟಾಕಿ ಹಾರಿಸಿ ಠಾಣೆಯ ಸೂರು ಹಾರಿಹೋಗುವಂತೆ ನಗುತ್ತಿದ್ದ.
“ಕೋದಂಡಯ್ಯಾ” ಕೂಗಿದ ಟೈಟಸ್. “ಇವನೇ ಕೊಲೆಗಾರ ಅಂತ ಹೇಗೆ ಕಂಡುಹಿಡಿದೆ ಅಂತ ಈಗಲಾದ್ರೂ ಸ್ವಲ್ಪ ದೀಟೇಲಾಗಿ ಹೇಳಿಬಿಡು ಮಾರಾಯಾ. ಇನ್ನು ಸತಾಯಿಸಬೇಡ.”
ಹಲ್ಲು ಕಿರಿಯುತ್ತಲೇ ಹತ್ತಿರ ಬಂದ ಕೋದಂಡಯ್ಯ. “ನಿಮಗೆ ಹೇಳದೇ ಇನ್ನಾರಿಗೆ ಹೇಳ್ತೀನಿ ಗುರೂ? ನೀವು ಸ್ವಲ್ಪ ಆರಾಮವಾಗಿ ಕೂರಲಿ ಅಂತಾನೇ ಕಾಯ್ತಿದ್ದೆ.” ಹೇಳುತ್ತಾ ಕುರ್ಚಿ ಎಳೆದು ಕೂತು ಮಾತು ಮುಂದುವರೆಸಿದ.
“ನಿನ್ನೆ ಮಧ್ಯಾಹ್ನದವರೆಗೂ ಇವನ ಮೇಲೆ ನಂಗೆ ಯಾವ ಅನುಮಾನವೂ ಇರಲಿಲ್ಲ. ಆದ್ರೆ ಇವನು ತೋರಿಸಿದ ಒಂದು ಅತೀ ಬುದ್ಧಿವಂತಿಕೆಯ ಕೆಲಸ ಇವನ ಮೇಲೆ ಸಂಶಯ ಬರೋ ಹಾಗೆ ಮಾಡ್ತು. ದೇವಕಿಗೆ ಬಂದ ಇ ಮೇಲ್‌ನ ಒಂದು ಪ್ರಿಂಟ್‌ಔಟನ್ನ ಮಾನ್ಸಿ ಕೊಟ್ಟಿದ್ಲು. ಅದರ ಕನ್ನಡ ಅನುವಾದಾನೂ ಮಾಡಿಕೊಟ್ಟಿದ್ಲು. ನಾನು ಅವೆರಡನ್ನೂ ನಿಮ್ಮ ಟೇಬಲ್ ಮೇಲಿಟ್ಟು ಮರೆತುಬಿಟ್ಟೆ. ಅವು ಕಳೆದುಹೋದ್ವೇನೋ ಅಂತ ಯೋಚಿಸ್ತಾ ಇದ್ದಾಗ ಇವನು ನಮ್ಮ ಕಂಪ್ಯೂಟರ್‌ನಲ್ಲೇ ದೇವಕಿಯ ಮೇಲ್ ಬಾಕ್ಸ್ ಓಪನ್ ಮಾಡಿ ತಾನೇ ಮತ್ತೊಂದು ಕನ್ನಡ ಅನುವಾದ ಮಾಡಿಕೊಟ್ಟ. ಸ್ವಲ್ಪ ಹೊತ್ತಾದ ಮೇಲೆ ನಂಗೆ ಮಾನ್ಸಿ ಕೊಟ್ಟಿದ್ದ ಪ್ರತಿಗಳು ಸಿಕ್ಕಿದ್ವು. ಎರಡನ್ನೂ ನೋಡ್ದಾಗ ಒಂದು ಮುಖ್ಯ ವ್ಯತ್ಯಾಸ ಕಂಡುಬಂತು. ಗೋಕುಲ್ ಮಾಡಿದ್ದ ಅನುವಾದದಲ್ಲಿ ಶುರೂನಲ್ಲೇ ‘ನಂಗೆ ಸಿನಿಮಾ ಗೀಳು ಬಿಟ್ಟುಹೋಯ್ತು’ ಅಂತ ಇತ್ತು. ಮಾನ್ಸಿ ಮಾಡಿದ ಅನುವಾದದಲ್ಲಿ ಅದಿಲ್ಲ! ಅರೆರೆರೆ ಇದೇನು ಅಂತ ಇಂಗ್ಲೀಷ್ ಪ್ರತಿಯನ್ನ ನೋಡ್ದೆ. ನಂಗೆ ಇಂಗ್ಲೀಷ್ ಸರಿಯಾಗಿ ಬರೋದಿಲ್ಲ ನಿಜ. ಆದ್ರೆ ಗೋಕುಲ್ ಈ ವಾಕ್ಯಾನ ತಾನೇ ಸೇರ್‍ಸಿದಾನೆ ಅಂತ ತಿಳಿದುಕೊಳ್ಳದಷ್ಟು ದಡ್ಡ ಅಲ್ಲ ನಾನು. ಆದ್ರೂ ಅನುಮಾನ ಪರಿಹರಿಸಿಕೊಳ್ಳೋದಿಕ್ಕೆ ನನ್ನ ಹೆಂಡತಿಗೆ ತೋರಿಸ್ದೆ. ಅವಳು ಸ್ಕೂಲ್‌ನಲ್ಲಿ ಇಂಗ್ಲೀಷ್ ಮೇಡಮ್ಮು ಅನ್ನೋದು ನಿಮ್ಗೆ ಗೊತ್ತು. ಗೋಕುಲ್ ಮಾಡಿರೋ ತಪ್ಪನ್ನ ಅವ್ಳು ಎತ್ತಿತೋರಿಸಿದ್ಲು.
“ಈ ಆಸಾಮಿ ಇದೇಕೆ ಹೀಗೆ ಮಾಡಿದ ಅಂತ ತಲೆ ಕೆಡಿಸಿಕೊಂಡೆ. ಒರಿಜಿನಲ್ ಇ ಮೇಲ್ ನೋಡಿದ್ರೆ ಅದನ್ನ ಕಳಿಸಿರೋದು ನರಹರಿ ಇರಬೋದೇನೋ ಅನ್ನೋ ಅನುಮಾನ ಬಂದರೂ ಬರಬೋದು. ಗ್ಯಾರಂಟಿಯಾಗಿ ಹೇಳಕ್ಕಾಗಲ್ಲ. ಆದ್ರೆ ಈ ಗೋಕುಲ್ ಮಾಡಿರೋ ಅನುವಾದ ನೋಡಿದ್ರೆ, ಅಲ್ಲಿರೋ ‘ನಂಗೆ ಸಿನಿಮಾ ಗೀಳು ಬಿಟ್ಟುಹೋಯ್ತು’ ಅನ್ನೋ ವಾಕ್ಯ ನೋಡಿದ್ರೆ ಇದನ್ನ ಕಳಿಸಿದೋನು ನರಹರಿಯೇ ಅಂತ ಗ್ಯಾರಂಟಿಯಾಗಿ ಹೇಳಿಬಿಡಬೋದು. ಗೋಕುಲ್ ಹೀಗೇಕೆ ಮಾಡಿದ? ನರಹರಿಯ ಮೇಲೆ ಅನುಮಾನ ತಿರುಗೋ ಹಾಗೆ ಮಾಡಿದ್ರೆ ಇವನಿಗೇನು ಲಾಭ ಅಂತ ತಲೆ ಕೆಡಿಸ್ಕೊಂಡೆ. ಇವನೇ ಕೊಲೆಗಾರನೇ ಅಥವಾ ನಿಜವಾದ ಕೊಲೆಗಾರಂಗೆ ಇವ್ನು ರಕ್ಷಣೆ ಕೊಡ್ತಾ ಇರಬೋದಾ ಅನ್ನೋ ಹುಳು ತಲೇಲಿ ಕೊರೀತು. ಅವನ ಬಗ್ಗೆ ಆ ಒಂದು ಸಂಶಯ ಬಂದದ್ದೇ ತಡ ಬೇರೆ ಬೇರೆ ಸಂಶಯಗಳು ನನ್ನ ತಲೇಲಿ ಮೂಡೋದಿಕ್ಕೆ ಶುರೂ ಆಯ್ತು. ಇವ್ನು ತನ್ನ ಬಗ್ಗೆ ಹೇಳಿಕೊಂಡ ವಿಷಯಗಳಲ್ಲಿ ಎಷ್ಟು ಸುಳ್ಳಿರಬೋದು ಅಂತ ಅನುಮಾನ ಬಂತು. ಪಕ್ಕದ ಇಂಟರ್‌ನೆಟ್ ಕೆಫೆಗೆ ನುಗ್ಗಿ ಅಹ್ಮದಾಬಾದ್‌ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ವೆಬ್‌ಸೈಟ್ ತೆಗೆದು ಅಲ್ಲಿ ಎಂ ಬಿ ಎ ಮಾಡಿದವರ ಲಿಸ್ಟ್ ಗಮನಿಸ್ದೆ. ಈ ವರ್ಷ ಇರಲಿ, ಕಳೆದ ಹತ್ತು ವರ್ಷಗಳಲ್ಲೂ ಗೋಕುಲ್ ಅನ್ನೋ ಸ್ಟೂಡೆಂಟ್ ಅಲ್ಲಿ ಎಂ ಬಿ ಎ ಮಾಡಿದ ಕುರುಹೇ ಇಲ್ಲ! ಅಂದರೆ ಈ ಆಸಾಮಿ ತಾನು ಎಂ ಬಿ ಎ ರ್‍ಯಾಂಕ್ ಹೋಲ್ಡರ್ ಅಂತ ಹೇಳಿದ್ದು ಅಪ್ಪಟ ಸುಳ್ಳು ಅಂತ ಸಾಬೀತಾಗಿಹೋಯ್ತು. ನಿನ್ನೆ ಸಂಜೆ ಇವನ ಬಗ್ಗೆ ಒಂದೆರಡು ಕಡೆ ಪತ್ತೇದಾರಿ ನಡೆಸ್ದೆ. ಇವ್ನು ಓದಿರೋದು ಬರೀ ಪಿ ಯು ಸಿ; ಎಂಜಿನೀರಿಂಗ್ ಡಿಪ್ಲೋಮಾ ಫೇಲು ಅಂತ ತಿಳಿತು. ಮೊನ್ನೆ ಮೊನ್ನೆವರೆಗೂ ಓದೋ ನೆಪದಲ್ಲಿ ರಾಯಚೂರಿನ ಕಡೆ ಕಾಲ ಹಾಕ್ತಾ ಇದ್ದ ಅಂತ ಜಯನಗರದಲ್ಲಿರೋ ಅವನ ಸೋದರತ್ತೆ ಹೇಳಿದ್ರು. ಅವನ ಒಂದೆರಡು ಗೆಳೆಯರನ್ನ ಪತ್ತೆ ಮಾಡಿ ಸೂಕ್ಷ್ಮವಾಗಿ ಮಾತಾಡ್ದೆ. ಇವನ ಬಂಡವಾಳ ಮತ್ತೂ ಬಯಲಾಯ್ತು.
“ತಾನು ಮಾನ್ಸಿಯನ್ನ ಮದುವೆಯಾಗೋದಕ್ಕೆ ದೇವಕಿ ಅಡ್ಡಿಬಂದ್ಲು ಅನ್ನೋ ವಿಷಯವನ್ನ ನರಹರಿಯೇ ನಂಗೆ ಮೊನ್ನೆ ರಾತ್ರಿ ಹೇಳ್ದ. ತಾನು ಕೆಲಸವಿಲ್ಲದ ಉಂಡಾಡಿ ಅನ್ನೋದು ಅವಳ ಭಾವನೆ ಆಗಿತ್ತು ಅಂತಾನೂ ಹೇಳ್ದ. ನಿನ್ನೆ ಸಂಜೆ ರಜನಿಯಮ್ಮ ಇದನ್ನ ಖಚಿತ ಪಡಿಸಿದ್ರು. ಬದುಕನ್ನ ಹಾಳು ಮಾಡಿಕೊಂಡ ಯಾವುದೇ ಬೇಜವಾಬ್ದಾರಿ ಮನುಷ್ಯನಿಗೂ ಮಾನ್ಸಿಯನ್ನ ಮದುವೆ ಮಾಡಕೂಡದು ಅನ್ನೋದು ದೇವಕಿಯ ಅಭಿಪ್ರಾಯ ಆಗಿತ್ತು ಅಂತಾನೂ ಆಕೆ ಹೇಳಿದ್ರು. ವಿಷಯ ಹೀಗಿದ್ರೆ ಮಾನ್ಸೀನ ಗೋಕುಲ್ ಮದುವೆಯಾಗೋದನ್ನೂ ದೇವಕಿ ಒಪ್ಪೋದಿಲ್ಲ ಅಂತ ಯೋಚಿಸ್ದೆ. ಇವನೇನೋ ತಾನು ಎಂ ಬಿ ಎ ರ್‍ಯಾಂಕ್ ಹೋಲ್ಡರ್ ಅಂತ ಬುರುಡೆ ಹೊಡಕೊಂಡಿದ್ದ. ಇನ್ನಾರು ತಿಂಗಳಲ್ಲಿ ತಾನು ಒಂದು ಬಿಸಿನೆಸ್ ಕನ್ಸಲ್ಟೆನ್ಸಿ ಶುರು ಮಾಡ್ತೀನಿ ಅಂತ ಮಾನ್ಸಿಗೆ ಹೇಳಿ ನಂಬಿಸಿದ್ದ. ನಿನ್ನನ್ನ ಅದರ ಡೈರೆಕ್ಟರ್ ಮಾಡ್ತೀನಿ ಅಂತ ಅವಳನ್ನ ಉಬ್ಬಿಸಿದ್ದ. ಆದ್ರೆ ಇವನ ನಿಜವಾದ ಬಣ್ಣ ಸ್ವಂತ ಅಕ್ಕನಿಗೆ ಗೊತ್ತೇ ಇರುತ್ತೆ ಅಲ್ವಾ? ಇವನಿಗೆ ಒಂದು ಪೈಸೆಯನ್ನೂ ಸಂಪಾದಿಸೋ ಯೋಗ್ಯತೆ ಇರ್‍ಲಿಲ್ಲ. ದೇವಕಿಗೆ ತಿಳಿಯದ ಹಾಗೆ ಯಾವುಯಾವುದೋ ಸಬೂಬು ಹೂಡಿ ದಯಾನಂದ ಅವರಿಂದ ಕಾಸು ಕೀಳ್ತಾ ಇದ್ದ. ಇದು ದೇವಕಿಗೆ ತಿಳಿದಾಗ ಆಕೆ ಅದಕ್ಕೆ ತಡೆ ಒಡ್ಡಿದ್ರು. ಈ ವಿಷಯಾನ್ನ ನಿನ್ನೆ ಸಾಯಂಕಾಲ ದಯಾನಂದ ಅವರೇ ನಂಗೆ ಹೇಳಿದ್ರು. ಇವನು ಆಸ್ತಿಯ ಆಸೆಗಾಗಿ ಮಾನ್ಸಿಯ ಸುತ್ತ ಬಲೆ ಹೆಣೀತಾ ಇರೋದನ್ನ ದೇವಕಿ ಗಮನಿಸಿದ್ದಾರೆ. ಇವನ ಪರಾವಲಂಬಿ ಮನೋಭಾವವನ್ನ ಆಕೆ ಸಹಿಸಿಲ್ಲ ಅಂತ ಗ್ಯಾರಂಟಿಯಾಗಿ ಹೇಳಬೋದು. ಮಾನ್ಸೀನ ಇವ್ನು ಮದುವೆಯಾಗೋದನ್ನ ಆಕೆ ಖಡಾಖಂಡಿತವಾಗಿ ವಿರೋಧಿಸಿದ್ದಾರೆ. ನರಹರಿಯ ಬಗ್ಗೆ ವಿರೋಧವನ್ನ ಬಹಿರಂಗವಾಗೇ ತೋರ್‍ಸಿದಾರೆ. ಆದ್ರೆ ಇವನ ಬಗ್ಗೆ ಅಷ್ಟು ರಂಪ ಮಾಡೋದಿಕ್ಕೆ ಹೋಗಿಲ್ಲ. ಈ ಬಗ್ಗೆ ಗಂಡನಿಗೂ ಏನೂ ಹೇಳಿಲ್ಲ. ಸ್ವಂತ ತಮ್ಮ ಅನ್ನೋದು ಕಾರಣ ಇರಬೋದು. ಆದ್ರೂ ಅಕ್ಕ ತಮ್ಮನ ಮಧ್ಯೆ ವಿರಸ ಏರ್‍ತಾ ಹೋಗಿದೆ. ಇವನ ಕಾಟ ಅತಿಯಾದಾಗ ದೇವಕಿ ಇವನಿಗೆ ಬೆದರಿಕೆ ಹಾಕಿರಬೋದು. ‘ನಿನ್ನ ಬಗ್ಗೆ ಸತ್ಯ ಸಂಗತಿಗಳನ್ನ ಮಾನ್ಸಿಗೆ ತಿಳಿಸಿ ಅವಳು ತಾನಾಗೆ ನಿನ್ನನ್ನ ದೂರ ಇಡೋ ಹಾಗೆ ಮಾಡ್ತೀನಿ’ ಅಂತ ಆಕೆ ಅವನನ್ನ ಹೆದರಿಸಿರಬೋದು. ಇಲ್ಲಿಗೆ ಇವನ ಪಿತ್ಥ ಕೆದರಿದೆ. ಆಕೇನ್ನ ಕೊಲೆ ಮಾಡೋ ಯೋಜನೇನ ಇವನು ಹಾಕೋದಿಕ್ಕೆ ಇದು ಕಾರಣ ಇರಬೋದು. ಮಾನ್ಸಿಯ ಆಸ್ತಿಯನ್ನ ಹೊಡಕೊಂಡು ಮಜ ಉಡಾಯಿಸೋ ತನ್ನ ಆಸೆಗೆ ದೇವಕಿ ಮುಳ್ಳಾಗಿ ನಿಂತಿರೋದನ್ನ ಇವನು ಸಹಿಸಿಲ್ಲ. ತನ್ನ ಆಸೆಗಳೆಲ್ಲ ನೆರವೇರಬೇಕಾದ್ರೆ ದೇವಕಿ ಸಾಯಬೇಕು ಅಂತ ಅವ್ನು ನಿರ್ಧಾರ ಮಾಡಿದ್ದಾನೆ. ಹಾಗೇ ಕೊಲೆಗೆ ಯೋಜನೆ ರೂಪಿಸಿದ್ದಾನೆ. ಇ ಮೇಲ್ ಮೂಲಕ ದೇವಕಿಯನ್ನ ಮನೆಗೆ ಬರೋ ಹಾಗೆ ಮಾಡಿದ್ದಾನೆ. ತನ್ನ ಪ್ಲಾನ್‌ಗೆ ಅವಳನ್ನ ಒಪ್ಪಿಸೋ ಕಡೇ ಪ್ರಯತ್ನ ಮಾಡೋದು, ಆಕೆ ಒಪ್ಪದೇ ಹೋದ್ರೆ ಅವಳನ್ನ ಕೊನೆಗಾಣಿಸಿಬಿಡೋದು ಅನ್ನೋದು ಅವನ ಯೋಜನೆ. ಅವನ ಉದ್ದೇಶಾನ ತಿಳಿಯದ ದೇವಕಿ ಮನೆಗೆ ಬಂದಿದ್ದಾರೆ. ಅವನಿಗೆ ಏಕಾಂತದಲ್ಲಿ ಬುದ್ಧಿಮಾತು ಹೇಳೋ ಪ್ರಯತ್ನ ಮಾಡಬೇಕು ಅನ್ನೋದು ಆಕೆಯ ಯೋಚನೆಯಾಗಿತ್ತೇನೋ. ಅವನ ದುರುದ್ದೇಶ ಆಕೆಯ ಅರಿವಿಗೆ ಬಂದಿರಲಾರದು. ಹೀಗಾಗೇ ಆಕೆ ಹಾಸಿಗೆ ಮೇಲೆ ಆರಾಮವಾಗಿ ಮಲಗಿ ಅವನ ಕೈಯಿಂದ್ಲೇ ಹಣೆಗೆ, ಕುತ್ತಿಗೆಗೆ ಅಮೃತಾಂಜನ್ ಹಚ್ಚಿಸಿಕೊಂಡಿದ್ದಾರೆ. ಹಾಗೇ ಇಬ್ಬರ ನಡುವೆ ಮಾತುಕಥೆ ನಡೆದಿದೆ. ಅಕ್ಕ ತನ್ನ ಮನಸ್ಸನ್ನ ಬದಲಾಯಿಸೋದೇ ಇಲ್ಲ ಅಂತ ಇವನಿಗೆ ಖಚಿತ ಆದಾಗ ತನ್ನ ಯೋಜನೇನ ಕಾರ್ಯರೂಪಕ್ಕಿಳಿಸಿದ್ದಾನೆ. ಜೇಬಿನಲ್ಲಿದ್ದ ನೈಲಾನ್ ಹುರಿಯನ್ನ ಹೊರತೆಗೆದು ದೇವಕಿಯ ಕುತ್ತಿಗೆಗೆ ಸುತ್ತಿ ಬಿಗಿಯಾಗಿ ಎಳೆದಿದ್ದಾನೆ. ದೇವಕಿಗೆ ಇದು ಅನಿರೀಕ್ಷಿತ. ಮಂಚದ ಮೇಲೆ ಒರಗಿದ್ದ ಆಕೆ ಎಮರ್ಜೆನ್ಸಿ ಲ್ಯಾಂಪ್‌ನ ಮಂದ ಬೆಳಕಿನಲ್ಲಿ ಅವನ ಬೆರಳುಗಳ ಆಟಾನ ಗಮನಿಸಿರೋ ಸಾಧ್ಯತೆ ಇಲ್ಲ. ಅಲ್ಲದೇ ಅವನ ದುರುದ್ದೇಶದ ಬಗ್ಗೆ ಯಾವುದೇ ಪೂರ್ವಾನುಮಾನವೂ ಇಲ್ಲದ ಆಕೆ ಅವನ ಕುತಂತ್ರಕ್ಕೆ ಸುಲಭವಾಗಿ ಬಲಿಯಾಗಿಹೋಗಿದ್ದಾರೆ. ದೇವಕಿಯನ್ನ ಕೊಂದ ನಂತರ ಆಕೆಯ ದೇಹಕ್ಕೆ ಬೆಂಕಿ ಹಾಕಿದ್ದು ಯಾಕೆ ಅಂತ ಗೊತ್ತಾಗ್ತಾ ಇಲ್ಲ. ಬೆಂಕೀನಲ್ಲಿ ಶವದ ಜತೆ ಇಡೀ ಕೋಣೆ ಸುಟ್ಟುಹೋದ್ರೆ ಆಗ ದೇವಕಿಯ ಸಾವು ಬೆಂಕಿ ಆಕಸ್ಮಿಕ ಅಂತ ಎಲ್ರೂ ತಿಳೀತಾರೆ ಅನ್ನೋ ಉದ್ದೇಶ ಅವನಿಗಿತ್ತೇನೋ. ಕೆಲಸ ಮುಗಿಸಿ ಮುಂಬಾಗಿಲಿಂದ್ಲೇ ಹೊರಬಂದಿದ್ದಾನೆ. ಅದಕ್ಕೆ ಸ್ಪ್ರಿಂಗ್ ಲಾಕ್ ಇರೋದ್ರಿಂದ ಬಾಗಿಲು ಮುಚ್ಚಿದ ಕೂಡಲೇ ಲಾಕ್ ಆಗಿಬಿಟ್ಟಿದೆ. ಇವ್ನು ತನ್ನ ಬೆರಳಗುರುತುಗಳು ಎಲ್ಲೂ ಬೀಳದ ಹಾಗೆ ಎಚ್ಚರ ವಹಿಸಿದ್ದಾನೆ. ದೇವಕಿಯ ಹಣೆಗೆ ಅಮೃತಾಂಜನ್ ಹಚ್ಚೋವಾಗ್ಲೂ ಬಹುಷಃ ಕೈಗೆ ತೆಳುವಾದ ಪ್ಲಾಸ್ಟಿಕ್ ಗ್ಲೋವ್ಸ್ ಹಾಕ್ಕೊಂಡಿದ್ದಾನೆ. ಹೆಚ್ಚು ಶಬ್ಧಗಳು ಆಗದ ಹಾಗೆ ನೋಡ್ಕೊಂಡಿದ್ದಾನೆ. ಸಣ್ಣಪುಟ್ಟ ಶಬ್ಧಗಳು ಆಗಿದ್ರೂ ಸುರೀತಾ ಇದ್ದ ಮಳೇನಲ್ಲಿ ಅವು ಯಾರಿಗೂ ಕೇಳಿಸಿರೋ ಸಾಧ್ಯತೆ ಇಲ್ಲ. ಒಂದುವೇಳೆ ಮಾನ್ಸಿಯ ಗಮನಕ್ಕೆ ಬೆಂಕಿ ಬಾರದೇಹೋಗಿದ್ರೆ ಅವನ ಪ್ಲಾನ್ ಪೂರ್ಣವಾಗಿ ಯಶಸ್ವಿಯಾಗ್ತಾ ಇತ್ತು. ಶವ ಸುಟ್ಟು ಕರಕಲಾಗಿಬಿಟ್ಟಿರ್ತಿತ್ತು.” ವಿವರಣೆ ಮುಗಿಸಿ ಕಿರುನಗೆ ನಕ್ಕ ಕೋದಂಡಯ್ಯ.
“ಮಾನ್ಸಿ ನೀರು ಹಾಯಿಸ್ತಾ ಇದ್ದಾಗ ಅವಳ ಹಿಂದೆ ಯಾಕೆ ನಿಂತಿದ್ದ?” ಅಧಿಕಾರಿಯ ಸಂದೇಹಗಳಿನ್ನೂ ದೂರಾಗಿರಲಿಲ್ಲ.
ಕೋದಂಡಯ್ಯ ನಕಾರದಲ್ಲಿ ತಲೆಯಾಡಿಸಿದ.
“ಅದು ನಂಗೂ ಅರ್ಥ ಆಗ್ತಾ ಇಲ್ಲ ಗುರೂ. ಅವನನ್ನೇ ಕೇಳಬೇಕು. ಮಾನ್ಸೀನ ಕೊಲ್ಲೋ ಉದ್ದೇಶವಂತೂ ಅವನಿಗರಲಿಲ್ಲ ಅಂತ ಗ್ಯಾರಂಟಿಯಾಗಿ ಹೇಳಬೋದು. ಅವಳನ್ನ ಪಡಕೊಳ್ಳೋದಿಕ್ಕೇ ಅಲ್ಲವೇ ಆ ಪಾಪಿ ಒಡಹುಟ್ಟಿದ ಅಕ್ಕನನ್ನೇ ಕೊಲೆ ಮಾಡಿದ್ದು? ಈ ಸೈತಾನನ ಮನಸ್ನಲ್ಲಿ ಬೇರೇನು ಕೆಟ್ಟ ಯೋಚನೆ ಇತ್ತೋ ಅವನನ್ನೇ ಕೇಳಬೇಕು. ಹೇಗೂ ನಮ್ಮ ಕೈಗೆ ಸಿಕ್ಕಿಬಿದ್ದಿದ್ದಾನಲ್ಲ, ಬುರುಡೆಗೆ ನಾಲ್ಕು ಬಾರಿಸಿ ಎಲ್ಲಾ ವಿಷಯಾನ್ನೂ ಕಕ್ಕಿಸೋಣ ಬಿಡಿ.”
“ಕೊಲೆ ನಡೆದ ರಾತ್ರಿ ತಾನು ಹೈದರಾಬಾದಿನಿಂದ ಮೈಸೂರಿಗೆ ಪ್ರಯಾಣ ಮಾಡಿದೆ ಅಂತ ಹೇಳಿದನಲ್ಲ?” ಅಧಿಕಾರಿಯಿಂದ ಮತ್ತೊಂದು ಪ್ರಶ್ನೆ ಬಂತು.
“ಇವನು ಹೈದರಾಬಾದಿಗೆ ಹೋಗಲೇ ಇಲ್ಲ. ಇದೆಲ್ಲಾ ಬರೀ ಬುರುಡೆ. ಅವನ ನಾಟಕದ ಒಂದು ಭಾಗ. ದೇವಕಿಯನ್ನ ಕೊನೆಗಾಣಿಸೋದಿಕ್ಕೆ ಬಹುಷಃ ಒಂದು ವಾರದ ಹಿಂದೇನೇ ಪ್ಲಾನ್ ಹಾಕಿದ್ದನೆ. ತನ್ನ ಮೇಲೆ ಅನುಮಾನ ಬರದಿರಲಿ ಅಂತ ಹೈದರಾಬಾದ್ ಕಥೆ ಕಟ್ಟಿದ್ದಾನೆ. ವಾಸ್ತವವಾಗಿ ಕೊಲೆ ನಡೆದ ಸಂಜೆ ಅವ್ನು ಮೈಸೂರಿನಲ್ಲೇ ಇದ್ದ ಅಂತ ನಾನು ಪತ್ತೆ ಮಾಡಿದ್ದೀನಿ. ತನ್ನ ರೂಂನಲ್ಲೇ ಸಿಗರೇಟ್ ಹೊಗೆ ಮಧ್ಯೆ ಸಂಜೆಪೂರ್ತಿ ಕೂತಿದ್ದ ಅಂತ ಅವನ ಒಬ್ಬ ಫ್ರೆಂಡ್ ಹೇಳ್ತಾನೆ. ಅಲ್ಲದೇ ಕೊಲೆ ನಡೆದ ರಾತ್ರಿ ಬನ್ನೂರಿನ ತನ್ನ ಫ್ರೆಂಡ್ ಒಬ್ಬನ ಬೈಕನ್ನ ತಗೋಂಡಿದ್ದ ಅಂತಾನೂ ತಿಳೀತು.”
“ಭಾಳಾ ಚಾಲಾಕಿ ಕಣಯ್ಯ ಇವ್ನು.” ಟೈಟಸ್ ಉದ್ಗರಿಸಿದ.
“ನಿಜ ಗುರೂ. ಅಂತಿಂಥಾ ಚಾಲಾಕಿ ಅಲ್ಲ. ಸರಿಯಾದ ಕೇಪ್‌ಮಾರಿ. ಇವನ ಇ ಮೇಲ್ ಕಥೆ ಕೇಳಿ. ಒಂದಲ್ಲಾ ನಾಕೈದು ಇ ಮೇಲ್ ಐಡಿ ಇಟ್ಕೊಂಡಿದ್ದ. ಮಾನ್ಸಿಗೆ ಕೊಟ್ಟಿದ್ದೇ ಒಂದು, ತನ್ನಕ್ಕನಿಗೆ ಕೊಟ್ಟಿದ್ದೇ ಒಂದು, ಫ್ರೆಂಡ್ಸ್‌ಗೆ ಕೊಟ್ಟಿದ್ದು ಇನ್ನೊಂದು- ಹೀಗೆ. ಒಬ್ಬರಿಗೆ ಕೊಟ್ಟಿದ್ದು ಇನ್ನೊಬ್ಬರಿಗೆ ಗೊತ್ತಿಲ್ಲ! ದೇವಕಿಗೆ ಇವನು ಕಳಿಸಿದ್ದ ಇ ಮೇಲನ್ನ ಮಾನ್ಸಿ ಪತ್ತೆ ಹಚ್ಚಿಬಿಟ್ಟದ್ದರಿಂದ ಇವನಿಗೇನೂ ಹೆದರಿಕೆ ಆದಹಾಗೆ ಕಾಣೋದಿಲ್ಲ. ಅದರಲ್ಲಿರೋ ತನ್ನ ಇ ಮೇಲ್ ಐಡಿಯಿಂದ ತನ್ನ ಪತ್ತೆ ಆಗಿಬಿಡಬೋದೇನೋ ಅನ್ನೋ ಹೆದರಿಕೆ ಅವನಿಗಿರಲಿಲ್ಲ. ದೇವಕಿ ಅವನ ಇ ಮೇಲ್ ಐಡಿನ ಬರೆದಿಟ್ಟಿದ್ದ ಡೈರಿಯನ್ನ ಮಂಗಮಾಯ ಮಾಡಿಬಿಟ್ಟಿದ್ದನಲ್ಲ?”
“ನಡೆದಿರೋದು ಹೀಗೆ. ನನ್ನ ತಲೆ ಎತ್ತೆತ್ತಲೋ ಓಡಿಬಿಟ್ಟಿತ್ತು. ಢಯಾನಂದ ಅವರ ಆಫೀಸ್‌ರೂಂನಲ್ಲಿ ನಿದ್ರೆಯ ಗುಳಿಗೆಗಳ ಬಾಟಲು ನೋಡಿ ನಾನು ಏನೇನೋ ಊಹೆ ಮಾಡೋದಿಕ್ಕೆ ಹೊರಟಿದ್ದೆ.” ಟೈಟಸ್ ಹಣೆ ಉಜ್ಜಿದ.
ಕೋದಂಡಯ್ಯ ನಕ್ಕ.
“ಆ ನಿದ್ರೆಗುಳಿಗೆಗಳದ್ದೇನೂ ದೊಡ್ಡ ರಹಸ್ಯ ಅಲ್ಲ. ಅವುಗಳ ಪ್ರಯೋಗಕ್ಕೆ ಒಳಗಾದ ಬಡಪಾಯಿ ನರಹರಿ.”
“ಅಂ! ಅದ್ಹೇಗೆ?” ಅಧಿಕಾರಿಯಿಂದ ಅಚ್ಚರಿಯ ಪ್ರಶ್ನೆ ಹೊರಬಂತು.
“ನರಹರಿಯ ಜತೆ ಘರ್ಷಣೆ ಆದಾಗಿನಿಂದ ದೇವಕಿಗೆ ಅವನ ಬಗ್ಗೆ ವಿಪರೀತ ಹೆದರಿಕೆ ಇತ್ತು. ರಾತ್ರಿ ತಾನು ಒಂಟಿಯಾಗಿರೋವಾಗ ಅವನೇನಾದರೂ ತೊಂದರೆ ಕೋಡಬೋದೇನೋ ಅನ್ನೋ ಭಯ ಅವಳನ್ನ ಯಾವಾಗಲೂ ಕಾಡ್ತಾ ಇತ್ತು. ಇದನ್ನ ಗಂಡನ ಜತೆ ಹೇಳಿಕೊಂಡ್ಲು. ನರಹರಿಗೆ ನಿದ್ರೆಯ ಔಷದಿ ಕೊಟ್ಟು ಅವನು ರಾತ್ರಿಯಿಡೀ ಕೊರಡಿನ ಹಾಗೆ ನಿದ್ದೆ ಮಾಡೋ ಪ್ಲಾನ್ ಹಾಕಿದ್ದು ದಯಾನಂದ. ದಿನಾ ರಾತ್ರಿಯೂಟಕ್ಕೆ ನಿದ್ರೆಮಾತ್ರೆ ಬೆರೆಸಿ ಅವನಿಗೆ ಕೋಡೋದು ಅಡಿಗೆಯಾಕೆ ಅಂಬುಜಮ್ಮನ ಕೆಲಸ. ನಿನ್ನೆ ಬೆಳಿಗ್ಗೆ ಅವಳೇ ಇದನ್ನ ನಂಗೆ ಹೇಳಿದ್ಲು.”
“ಇದು ನಂಗೂ ಗೊತ್ತಿತ್ತು.” ರಜನಿ ಮೆಲ್ಲಗೆ ದನಿಗೂಡಿಸಿದಳು.
ಹೆಂಡತಿಯತ್ತ ಅಚ್ಚರಿಯ ನೋಟ ಬೀರಿದ ವಸಂತರಾವ್ ಕೋದಂಡಯ್ಯನತ್ತ ತಿರುಗಿದ.
“ಗೋಕುಲ್ ಇಂಥೋನು ಅಂತ ನಮಗೆ ಗೊತ್ತೇ ಇರಲಿಲ್ಲ.” ಬೆರಗು ಹತ್ತಿದ ದನಿಯಲ್ಲಿ ಉದ್ಗರಿಸಿದ. ಕೋದಂಡಯ್ಯ ಅವನ ಕಡೆ ತಿರುಗಿದ.
“ಇವನೊಬ್ಬ ಭಯಂಕರ ಆಕ್ಟರ್. ತನ್ನ ಬಗ್ಗೆ ಭಾರಿ ಭಾರಿ ಸುಳ್ಳುಗಳನ್ನೇ ಹೇಳಿ ನಿಮ್ಮನ್ನೆಲ್ಲ ನಂಬಿಸಿಬಿಟ್ಟಿದ್ದ. ವಾಸ್ತವವಾಗಿ ಹೇಳೋದಾದ್ರೆ ಮಾನ್ಸಿಯ ಆಸ್ತಿಯನ್ನ ಹೊಡಕೊಂಡು ಸುಖಜೀವನ ನಡೆಸೋದಿಕ್ಕೆ ಪ್ಲಾನ್ ಹಾಕಿದ್ದ ಪರಾವಲಂಬಿ ಇವನು.”
“ನಾವೆಲ್ಲಾ ನರಹರಿ ಪರಾವಲಂಬಿ ಅಂತ ತಿಳಿದಿದ್ವು.” ರಜನಿಯ ದನಿಯಲ್ಲಿ ಪಶ್ಚಾತ್ತಾಪವಿತ್ತು.
“ನಾನು ನರಹರಿಯನ್ನ ಸೂಕ್ಷ್ಮವಾಗಿ ಗಮನ್ಸಿದ್ದೀನಿ. ಅವನದು ಪರಾವಲಂಬಿಯ ಮನೋಭಾವ ಅಲ್ಲ. ಇಲ್ಲೀವರೆಗೆ ತನ್ನ ಬದುಕನ್ನ ಹಾಳು ಮಾಡಿಕೊಂಡದ್ದರ ಅರಿವು ಅವನಿಗಿದೆ. ಅದರ ಬಗ್ಗೆ ಪಶ್ಚಾತ್ತಾಪಾನೂ ಇದೆ. ಇನ್ನು ಮುಂದಾದರೂ ಜವಾಬ್ದಾರಿಯುತ ಬದುಕು ನಡೆಸಬೇಕು ಅಂತ ಅವನು ಧೃಢ ನಿರ್ಧಾರ ಮಾಡಿದ್ದಾನೆ. ಅಣ್ಣನ ವ್ಯವಹಾರದಲ್ಲಿ ಕೈಗೂಡಿಸಿ ಅದನ್ನ ಇನ್ನೂ ಚೆನ್ನಾಗಿ ಬೆಳೆಸಬೇಕು ಅನ್ನೋ ಛಲ ಅವನಲ್ಲಿ ಮೂಡಿದೆ. ಅವನು ಮಾನ್ಸಿಯ ಹಣವನ್ನ ಬಯಸ್ಲಿಲ್ಲ. ಅವನಿಗದು ಬೇಕಾಗೂ ಇಲ್ಲ. ವಾಸ್ತವವಾಗಿ ಹೇಳೋದಾದ್ರೆ ಅವನು ಮಾನ್ಸೀನ ತುಂಬಾ ಇಷ್ಟ ಪಡ್ತಾನೆ. ‘ಅವಳ ಆಸ್ತಿಯಲ್ಲಿ ನಂಗೆ ಒಂದು ಬಿಡಿಗಾಸೂ ಬೇಡ. ಅವಳು ನನ್ನ ಹೆಂಡತಿಯಾದರೆ ಸಾಕು, ಅವಳನ್ನ ನಾನು ನನ್ನ ಸಂಪಾದನೇಲಿ ಹೂವಿನ ಹಾಗೆ ನೋಡ್ಕೋತೀನಿ’ ಅಂತ ನಂಗೆ ಹೇಳ್ದ. ಅವನ ಮಾತುಗಳನ್ನ ನಂಬಬೋದು. ಅವನು ಪರಾವಲಂಬಿ ಅಲ್ಲ. ನಿಜವಾದ ಪರಾವಲಂಬಿ ಜೈಲು ಸೇರಿದ್ದಾನೆ.” ಮಾತು ಮುಗಿಸಿ ನಕ್ಕ ಕೋದಂಡಯ್ಯ.
“ಅಂದ್ರೆ ನರಹರಿ ಒಳ್ಳೇ ಮನುಷ್ಯ ಅಂತೀರಾ? ದೇವಕಿ ಜತೆ ಅವನು ವರ್ತಿಸಿದ ರೀತಿ ನೋಡಿದ್ರೆ…” ವಸಂತರಾವ್‌ನ ದನಿಯಲ್ಲಿ ಇನ್ನೂ ಅಪನಂಬಿಕೆ ಇತ್ತು.
“ಆಯಮ್ಮ ಅವನನ್ನ ಪರಾವಲಂಬಿ ಅಂತ ಕರೆದದ್ದನ್ನ ಸಹಿಸೋದಿಕ್ಕೆ ಅವನಿಗೆ ಆಗಿಲ್ಲ. ಕಾರಣ ಸ್ಪಷ್ಟ. ಅವನು ಪರಾವಲಂಬಿ ಅಲ್ಲ. ನರಹರಿ ಸ್ವಾಭಿಮಾನಿ. ತನ್ನ ಹೆಸರಿಗೆ ಕಳಂಕ ಹತ್ತೋದನ್ನ ಅವನು ಒಪ್ಪಿಕೊಳ್ಳೋದು ಅಸಂಭವ. ಸ್ವಾಭಿಮಾನಿಯಾದ ಒಬ್ಬ ಗಂಡಸು ತನ್ನದೆಲ್ಲವನ್ನೂ ಜೋಪಾನವಾಗಿ ಕಾಪಾಡಿಕೊಳ್ತಾನೆ- ತನ್ನ ಹೆಸರನ್ನೂ ಸಹ, ಹೆಂಡತಿಯನ್ನೂ ಸಹ.”
ವಸಂತರಾವ್ ಕಣ್ಣುಮುಚ್ಚಿ ಆಲೋಚನೆಯಲ್ಲಿ ಮುಳುಗಿದ.
“ಅವನನ್ನ ನಾನೂ ತಪ್ಪು ತಿಳಿದಿದ್ದೆ.” ಅಧಿಕಾರಿ ಸಂತಾಪದ ದನಿ ತೆಗೆದ. ವಸಂತರಾವ್‌ನತ್ತ ತಿರುಗಿ ಪ್ರಶ್ನಿಸಿದ. “ಅಂದಹಾಗೆ ಈಗೆಲ್ಲಿ ಆತ? ನಿಮ್ಮ ಜತೆ ಬರಲಿಲ್ವೇನು?”
ಕಣ್ಣುಮುಚ್ಚಿ ಚಿಂತನೆಯಲ್ಲಿ ಮುಳುಗಿದ್ದ ಗಂಡ ಬಾಯಿ ತೆರೆಯುವುದಕ್ಕೂ ಮೊದಲೇ ರಜನಿ ಹೇಳಿದಳು.
“ನಮ್ಮ ಜತೆ ಇಲ್ಲಿಗೆ ಬರೋದಿಕ್ಕೆ ಹೊರಟಿದ್ರು. ಆದ್ರೆ ಅದೇ ಸಮಯಕ್ಕೆ ಫ್ಯಾಕ್ಟರೀನಲ್ಲಿ ಏನೋ ಪ್ರಾಬ್ಲಂ ಆಗಿದೆಯಂತೆ, ಹೋಗಿ ನೋಡು ಅಂತ ದಯಾನಂದ ನರ್ಸಿಂಗ್ ಹೋಂನಿಂದ ಫೋನ್ ಮಾಡಿದ್ರು. ನಂಗೆ ಆ ಕೆಲಸ ಮುಖ್ಯ ಅಂತ ಹೇಳಿ ನರಹರಿ ಅಲ್ಲಿಗೆ ಓಡಿದ್ರು.”
ಕೋದಂಡಯ್ಯನ ಮುಖದ ನಗೆ ವಿಶಾಲವಾಯಿತು.
“ನೋಡಿದ್ರಾ. ಅವನು ಜವಾಬ್ದಾರಿಯುತ ಮನುಷ್ಯ ಆಗ್ತಾ ಇದ್ದಾನೆ ಅಂತ ನಾನು ಹೇಳ್ಲಿಲ್ವಾ?” ಹೇಳುತ್ತಾ ತಲೆ ತಗ್ಗಿಸಿ ಕುಳಿತು ಕಣ್ಣಿಗೆ ಕರವಸ್ತ್ರ ಒತ್ತಿದ್ದ ಮಾನ್ಸಿಯತ್ತ ನಡೆದ. ಅವಳ ಭುಜ ಒತ್ತಿ ಮೃದುದನಿಯಲ್ಲಿ ಹೇಳಿದ.
“ನೀನು ಈಪಾಟೀ ಶೋಕ ಮಾಡೋದಿಕ್ಕೆ ಕಾರಣ ಇಲ್ಲಮ್ಮ. ನಿನ್ನ ಬದುಕಿನಲ್ಲಿ ಬಂದಿದ್ದ ಧೂಮಕೇತು ನಾಶವಾಯ್ತು. ಅದಕ್ಕಾಗಿ ಸಂತೋಷ ಪಡಬೇಕು ನೀನು.” ಸ್ವಲ್ಪ ತಡೆದು ಮುಂದುವರೆಸಿದ. “ಒಂದು ಮಾತು ಹೇಳ್ತೀನಿ ಕೇಳು. ನರಹರಿ ಎಂ ಬಿ ಎ ರ್‍ಯಾಂಕ್ ಹೋಲ್ಡರ್ ಅಲ್ಲದಿರಬೋದು, ನಿನ್ನನ್ನ ಅವನು ದೊಡ್ಡ ಕಂಪನಿಯ ಡೈರೆಕ್ಟರ್ ಮಾಡದೇ ಇರಬೋದು. ಆದ್ರೆ ನಿನ್ನನ್ನ ಹೂವಿನ ಹಾಗೆ ನೋಡ್ಕೋತಾನೆ. ನೀನು ಬಯಸಿದ ನೆಮ್ಮದಿಯ ಬದುಕನ್ನ ನಿನಗೆ ಕೊಡ್ತಾನೆ.” ಕ್ಷಣ ನಿಧಾನಿಸಿ ಧೃಢದನಿಯಲ್ಲಿ ಹೇಳಿದ. “ಈ ಬಗ್ಗೆ ನಾನು ಗ್ಯಾರಂಟಿ ಕೊಡ್ತೀನಿ ಕಣಮ್ಮ. ಇದುವರೆಗೂ ನಾನು ಗ್ಯಾರಂಟಿ ನಿಂತ ಯಾವ ಪಾರ್ಟಿಯೂ ಡಿಫಾಲ್ಟರ್ ಆಗಿಲ್ಲ.”
ಮಾನ್ಸಿಯ ತಲೆ ಮತ್ತೂ ಬಾಗಿತು.
*****