ನಿಧಾನವಾಗಿ ಸುಧಾರಿಸಿಕೊಂಡ, “ಗೌಡ್ರ ಕಾಲ ಹಿಡಕೋ ಅಂತ ನಾನಽ ಕಳಿಸಿದೆ” ಎಂದು ಕಳ್ಳ ಹೇಳಿದೊಡನೆ ಗುಡಸೀಕರನ ಮುಖದ ಮೇಲೆ ತಣ್ಣಿರು ಎರಚಿದಂತಾಯ್ತು.
“ಅಲ್ಲಲೇ, ಇಂಥಾ ಕೇಸಿನ್ಯಾಗ ಗೌಡಗೇನ ತಿಳಿತೈತಿ? ವಕೀಲ ನಾನೋ? ಗೌಡನೋ?”
“ನಿಮ್ಮನ್ನ ಬಿಟ್ಟು ಅವರೆಲ್ಲಿ ಹೋಗತಾರ ತಡೀರಿ; ಈಗ ಹೇಳಿ ಕಳಸ್ತಾರ” ಅಂದ. ಅದೂ ನಿಜವೇ. ಗೌಡನಿಗೆ ತಾನು ವಕೀಲಿ ಪಾಸಾದದ್ದು ಗೊತ್ತಿಲ್ಲವೆ? ಏನು ಮಾಡೋಣವೆಂದು ಕೇಳಲಿಕ್ಕೆ ಬಂದೇ ಬರುತ್ತಾನೆ. ಬಂದಾಗ ಹೋದರಾಯಿತು ಎಂದುಕೊಂಡು ಕುತೂಹಲ ತಾಳಿಕೊಂಡು ಸುಮ್ಮನೇ ಕೂತ.
ಗೌರಿ, ಗಟಿವಾಳಪ್ಪನ ಹೆಣ ನೋಡಿ ದತ್ತಪ್ಪನಿಗೇನು ಗೌಡನಿಗೂ ಭಯವಾಯಿತು. ತಕ್ಷಣ ಬಾಗಿಲು ಹಾಕಿ ಇಬ್ಬರೂ ಮುಂದಿನ ಹಾದಿ ಯೋಚಿಸುತ್ತ ಕೂತುಬಿಟ್ಟರು. ನಿಂಗೂ ತಪ್ಪು ಮಾಡಿದ ಖರೆ, ಆದರೆ ಗಟಿವಾಳಪ್ಪ ಗೌರಿಯರದೂ ತಪ್ಪೇ. ಅಲ್ಲೆ ಮಲಗಿದ್ದ ಮಗ ಕಾಣದಷ್ಟು ಕುರುಡಾಗೋದಂದರೇನು? ಮನುಷ್ಯ ಸಹನೆಗೂ ಮಿತಿ ಇಲ್ಲವೆ? ಇಷಲ್ಲದ ಇವರ ಆಸೆಗೆ ನಿಂಗೂ ಯಾವಾಗ ಅಡ್ಡಿ ಮಾಡಿದ್ದ? ಕಾಮ ಮುದುಕನ ಕಣ್ಣು ಕುಕ್ಕಿತು ಸಿಟ್ಟು ನಿಂಗೂನ ಕಣ್ಣು ಕುಕ್ಕಿತು. ಇಬ್ಬರೂ ಕುರುಡರಾದರು. ಸತ್ತವರು ಸತ್ತು ಹೋದರು. ಇದ್ದವನ ಗತಿಯೇನು?
ಇಂಥ ಕೇಸುಗಳಲ್ಲಿ ಗೌಡನ ಮನಸ್ಸು ಹೇಗೆ ಓಡುತ್ತದೆಂದು ದತ್ತಪ್ಪ ಬಲ್ಲ. ಇಷ್ಟು ವರ್ಷ ಕೂಡಿದ್ದು ಊರುಗಾರಿಕೆ ಮಾಡಿ ಸುಸೂತ್ರ ಪಾರುಗಾಣಿಸಿದರಲ್ಲವೆ? ಆದರೆ ಇಬ್ಬರ ತಲೆಯಲ್ಲೂ ಗುಡಸೀಕರ ತಪ್ಪಿ ಸುಳಿಯಲಿಲ್ಲ. ಬೇರೆ ದಿನಗಳಾಗಿದ್ದರೆ ಆ ಮಾತು ಬೇರೆ. ನಾಳೆ ಕರಿಬೇಟೆಯ ಹಬ್ಬ. ನಾಯಕರ ಹುಡುಗರು ಇಂದು ಬೇಟೆಯಾಡಲಿಕ್ಕೆ ಹೋಗುತ್ತವೆ. ಆ ಸಮಯವೂ ಹತ್ತಿರ ಬಂತು, ಹೋಗುವ ಮುನ್ನ ಗೌಡನಿಗೆ ನಮಸ್ಕಾರ ಮಾಡಿ ಅವನಿಂದ ಕಾಯಿ ತಗೊಂಡು ಹೋಗುವದು ಪದ್ಧತಿ. ಅವರು ಗೌಡನ ಮನೆಗೆ ಹೋಗೋಣ, ಗೌಡ ಇಲ್ಲದಿರೋಣ, ಏನೇನೋ ಸಂಶಯಗಳೇಳೋಣ. ಆಗಲೇ ಈ ಸುದ್ದಿ ಎಷ್ಟು ಮಂದಿಗೆ ಗೊತ್ತಾಗಿದೆಯೋ, ಗೊತ್ತಾಗುವ ಮುನ್ನವೇ ಇದಕ್ಕೊಂದು ಮುಕ್ತಾಯ ಕೊಡಬೇಕೆಂದು ಇಬ್ಬರ ತವಕ. ಯೋಚಿಸುತ್ತ ಹೆಣ ಕಾಯುತ್ತ ಇಬ್ಬರೂ ಕೂತರು. ನಿಂಗೂ ಇನ್ನೂ ಬಂದಿರಲಿಲ್ಲ.
ಅಷ್ಟರಲ್ಲಿ ನಿಂಗೂ ಗುಡಸೀಕರ ಮತ್ತು ಕಳ್ಳ ಸಿದ್ದರಾಮನೊಂದಿಗೆ ಬಂದ. ದತ್ತಪ್ಪನ ಮೈಮುರಿಯಿತು. ಏನೋ ಮಾಡಿ ಈ ಮಗನ್ನ ಪಾರು ಮಾಡೋಣವೆಂದರೆ ಇದ್ದದ್ದೂ ಹೋಗಿ ಗುಡಸೀಕರನನ್ನು ಕರೆತಂದನಲ್ಲಾ ಎಂದುಕೊಂಡು ‘ಛೀ’ ಅಂದ. ಗೌಡನಿಗೆ ಅರ್ಥವಾಯಿತು. ಆದರೆ ಅವನಿಗೆ ಮನುಷ್ಯರ ಮೇಲೆ ಭಾರೀ ವಿಶ್ವಾಸ, “ಬಾ ಹುಡುಗಾ ನೀನೂ ಬಂದಿ, ಛೆಲೋ ಆತು” ಅಂದ. ಗುಡಸೀಕರ ನಿರ್ಲಕ್ಷ್ಯ ಮಾಡಿ ಗುಡಿಸಲು ಬಾಗಿಲು ತೆಗೆದು ಒಳಕ್ಕೆ ನೋಡಿ, ನೋಡಲಾರದೇ ಹೊರಗೆ ಬಂದ. ಗೌಡ, “ಕೂಡ ಬಾ” ಅಂದ. ಹೋಗಿ ಕೂತ. ಕಳ್ಳನಿಗೆ ಬಾಗಿಲು ಹಾಕಲಿಕ್ಕೆ ಹೇಳಿದರು, ಹಾಕಿದ. ಗುಡಸೀಕರನೂ ಹೆಣ ನೋಡಿ ಬೆವರಿದ್ದ. ಹತ್ತು ನಿಮಿಷ ಯಾರೂ ಮಾತಾಡಲಿಲ್ಲ. ನಿಂಗೂವನ್ನು ಬಿಟ್ಟು ಉಳಿದವರೆಲ್ಲ ನಿಶ್ಚಲರಾಗಿ ಕಲ್ಲಿನಂತೆ ಕೂತುಬಿಟ್ಟರು. ನಿಂಗೂ ಮಾತ್ರ ಅವನ ಮುಖವನ್ನೊಮ್ಮೆ ಇವನ ಮುಖವನ್ನೊಮ್ಮೆ ನೋಡುತ್ತ ಕಣ್ಣೀರು ಸುರಿಸುತ್ತ ದೀನನಾಗಿ, ಹೆದರಿ ತನ್ನ ಗತಿಯೇನಾಗುವುದೋ ಎಂದು ಚಡಪಡಿಸುತ್ತಿದ್ದ.
ಕೊನೆಗೆ ಗೌಡನೇ ಬಾಯಿಬಿಟ್ಟ-
“ದತ್ತೂ ಗುಡಿಸಲಕ ಬೆಂಕಿ ಹಚ್ಚಿದರ ಹೆಂಗ?”
“ಬರೋಬರಿ” ಅಂದ ದತ್ತಪ್ಪ.
ದತ್ತಪ್ಪ ಸೈ ಅಂದರಾಯ್ತು. ಅದು ಸರಿಯಾದ ತೀರ್ಮಾನವೆಂದೇ ಗೌಡನ ಲೆಕ್ಕ. “ನಿಂಗ್ಯಾ ಹೆಣ ಹೊರಗ ತಗೀಬ್ಯಾಡ. ಇಂದ ರಾತ್ರಿ ಗುಡಿಸಲಕ ಬೆಂಕಿ ಹಚ್ಚು. ಯಾರಿಗೇನೂ ಹೇಳಬ್ಯಾಡ. ಬೆಳಿಗ್ಗೆದ್ದ ಇಬ್ಬರೂ ಗುಡಿಸಲದಾಗ ಸುಟಗೊಂಡ ಸತ್ತರಂತ ಮಂದಿಗೆಲ್ಲಾ ಹೇಳು.”
ಗುಡಸೀಕರನಿಗೆ ಸಿಡಿಲು ಬಡಿದಂತಾಯ್ತು. ಇದು ಹೇಳಿ ಕೇಳಿ ಖೂನಿ ಕೇಸು. ಇದರಲ್ಲಿ ತಾನಲ್ಲದೇ ಇನ್ನು ಯಾರು ಸಲಹೆ ಕೊಡಬಲ್ಲರು? ಅದು ಬಿಟ್ಟು ಹಳ್ಳಿಯ ಗಮಾರ ಮುದಿಯರಿಬ್ಬರು ತಾವೇ ಕಾನೂನು ಬಲ್ಲವರಂತೆ ಕೇಸು ಮುಚ್ಚುತ್ತೇವೆಂದರೆ ದಡ್ಡತನಕ್ಕೊಂದು ಮಿತಿ ಬೇಡವೆ? ಗೌಡನಿಗೆ ಬುದ್ಧಿ ಬೇಡವೆ? ತಾನು ಮನೆಯಲ್ಲಿ ಕೂತಿದ್ದರೆ ಕರೆಸಲೇ ಇಲ್ಲ. ಹೋಗಲಿ, ಹೆಂಗೋ ಕಳ್ಳನೇ ನಿಂಗೂನನ್ನು ಬಳಿಗೆ ಕರೆತಂದ. ತಾನಿಲ್ಲಿಗೆ ಬಂದದ್ದಾಯಿತು. ಬಂದ ಮೇಲೂ ತನ್ನ ಬಗ್ಗೆ ಈ ನಿರ್ಲಕ್ಷ್ಯವೇ? ಈ ಹದ್ದುಗಳು ತನ್ನನ್ನೊಂದು ಹುಲ್ಲುಕಡ್ಡಿಗೆ ಸಮನ ಮಾಡುವುದೆಂದರೇನು? ಖೂನಿ ಅಂದರೇನು! ಸಣ್ಣ ಬಾಬತ್ತೆ? ಕೋರ್ಟಿದೆ, ಕಾನೂನಿದೆ, ಕಾಯ್ದೆ ಕಣ್ಣಲ್ಲಿ ಮಣ್ಣೆರೆಚುವ ಕೆಲಸವನ್ನು ಹಾಡಹಗಲೇ ಮಾಡುತ್ತಾನಲ್ಲ ಇವನ ಮುದಿ ಧೈರ್ಯ ಎಷ್ಟು? ಹೋಗಲಿ ತನ್ನನ್ನಾದರೂ ಕೇಳಿದನೆ? ದತ್ತೂನನ್ನು ಕೇಳಿದನಲ್ಲ! ಇವರಿಗೆ ಬುದ್ಧಿ ಕಲಿಸಬೇಕೆಂದು ಮನಸ್ಸಿನಲ್ಲಿಯೇ ತೀರ್ಮಾನಿಸಿಬಿಟ್ಟ ಗುಡಸೀಕರ.
“ಬೆಂಕಿ ಹಚ್ಚಿ ಕಾಯ್ದೆ ಕಾನೂನು ಯಾಕ ಮೈಮ್ಯಾಲ ಹಾಕ್ಕೋತೀರಿ? ಸುಮ್ಮನೆ ಪೋಜುದಾರನ್ನ ಕರಸಿ ಪಂಚನಾಮೆ ಮಾಡಸರಿ” ಅಂದ.
“ಕಾಯ್ದೇ ಕಾನೂನು ನಮಗೂ ಗೊತ್ತವ ಏನಪಾ,-ಆದರ….”
ಎಂದು ದತ್ತಪ್ಪ ಬಾಯಿ ಹಾಕಿದ. ಗೌದ ಅಷ್ಟಕ್ಕೇ ತಡೆದು
“ಕಾಯ್ದೆ ಕಾನೂನಂದರ ಸಣ್ಣ ಮಾತಲ್ಲಪಾ, ಕೆಟ್ಟ ಇಂಗರೇಜಿ ಸರಕಾರ, ಕೇಸ ಬೆಳಗಾಂವಿಗೆ ಹೋದರ ನಿಂಗೂ ಉಳಿಯಾಣಿಲ್ಲ. ಸುಮ್ಮನ ಎಲ್ಲಾರೂ ಕೂಡಿ ಒಬ್ಬಗ ತಿಳಿತು, ತಿಳೀಲಿಲ್ಲ ಅಷ್ಟರಾಗ ಮುಗಿಸಿಬಿಡೋಣ.”
“ನಿಂಗೂ ಯಾಕ ಉಳಿಯಾಣಿಲ್ಲ?”
“ಯಾಕಂದರ ತಪ್ಪು ಮಾಡ್ಯಾನ-ಅದಕ್ಕ”
“ತಪ್ಪು ಮಾಡಿದ್ದಽ ಖರೆ ಆದರ ಅನುಭವಿಸಲಿ”
“ಅಂದರೇನು ನಿಂಗೂನ ಜೈಲಿಗೆ ಕಳಿಸೋಣಂತೀಯೇನು?”
“ಜೇಲಿಗೆ ಯಾಕ ಹೋಗಬೇಕು? ಅವನ ಪರವಾಗಿ ನಾ ವಕೀಲಿ, ಹಿಡೀತೀನಿ” ಎಂದ ಗುಡಸೀಕರ, ತನ್ನ ಮಾತಿನಲ್ಲಿಯ ವಿರೋಧ ಗುರುತಿಸಿದ. ಈ ಹುಡುಗ ಯಾರ ಪರವಾಗಿದ್ದಾನೆಂದು ದತ್ತಪ್ಪನಿಗೆ ತಿಳಿಯದಾಯ್ತು.
“ನೋಡಪಾ ಗುಡಸೀಕರ, ನೀ ವಕೀಲ್ಕಿ ಹಿಡೀತೀನಂತೀಯಲ್ಲಾ, ಬರೋಬರಿ. ಹಿಡಿದ ಏನ್ ಮಾಡತಿ? ವಾದಾ ಮಾಡಿ ನಿಂಗೂನ ಉಳಿಸಬೇಕಂತಿ! ಇಲ್ಲೇ ಈಗಽ ಉಳಿಸಲ್ಲ. ಹಾಂಗಽ ನೋಡಿದರ ಕೋರ್ಟಿಗೆ ಹೋದಮ್ಯಾಲ ಹೇಸ ಹಾಂಗ ಆದೀತು, ಹೀಂಗ ಆದೀತು-ಅಂತ ಹೇಳಾಕ ಬರತೈತೇನು? ನಿನ್ನ ಕೈಗೂ ಮೀರಿದ್ದದು. ವಾದಾ ಮಾಡತಿ, ಕೂರತಿ. ನಿಂಗೂಗ ಏನ ಮಾಡಬೇಕಂತ ಹೇಳವರು ಯಾರು? ಜಜ್ಜ ಸಾಹೇಬನ? ನೀನ? ಖೂನಿ ಮಾಡ್ಯಾನಂದಮ್ಯಾಲ ಫಾಸಿ ಶಿಕ್ಷಾ ಆಗಬೇಕಂತ ಅಂದರ? ಆಗ ಏನ ಮಾಡತಿ?”
“ಹಾಂಗಂತ ಕಾಯ್ದೆ ಕಾನೂನು ಮೀರಾಕ ಆದೀತೇನ್ರಿ?”
“ಮೀರಾಕ ನಾವೇನೀಗ ಅನ್ಯಾಯ ಮಾಡಕ ಹತ್ತೀದೇವು?”
“ಹಾಂಗಂದರ ಖೂನಿ ಮಾಡಿದವರ್‍ನೆಲ್ಲಾ ನೀವು ಹೀಂಗ ಬಚಾವ ಮಾಡಿಕೋತ ಹೋದರ ನ್ಯಾಯ ನೀತಿ ಉಳಿದಾವು ಹೆಂಗ?”
“ಅಂದರ ಒಟ್ಟು ನಿಂಗೂಗ ಫಾಸಿ ಶಿಕ್ಷಾ ಆಗಲೆಂದೇನು?”
ಗುಡಸೀಕರ ನಿರುತ್ತರನಾದ. ಇವರ ಈ ಅನಿರೀಕ್ಷಿತ, ಸ್ವಚ್ಛಂದ ವಾದಕ್ಕೆ ಹೇಗೆ ಉತ್ತರ ಕೊಡಬೇಕೆಂಬುದೇ ತಿಳಿಯದಾಯ್ತು. ಕೋರ್ಟಿನಲ್ಲಿ ಆಗುವ ವಾಗ್ವಾದಕ್ಕಿಂತ ಬೇರೆಯದೇ ಆದ, ವಿಚಿತ್ರ ವಾದವಿದು. ಈ ವಾದ ಮುಂದುವರಿಸಬೇಕಾದರೆ ಮೊದಲು ತಾನೆಲ್ಲಿ ನಿಂತಿದ್ದೇನೆ ಅನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ಬರೀ ನ್ಯಾಯ ನೀತಿ ಎಂದರೆ ನಿಂಗೂ ಜೇಲಿಗೆ ಹೋಗಬೇಕು, ಆದರೆ ಅದು ಬೇಕಿಲ್ಲ. ಹಾಳಾಗಿ ಹೋಗಲೆಂದರೆ ಈ ಮುದಿ ನರಿಗಳು ಕಾನೂನನ್ನು ತಮ್ಮ ಕೈಯಲ್ಲಿ ತಕ್ಕೊಂಡು ತಮಗ ಬೇಕಾದಂತೆ ಅರ್ಥೈಸುತ್ತ ಊರಿಗೆಲ್ಲ ಹುಸಿ ಪುಡಾರಿಗಳಾಗುತ್ತಿದ್ದಾರೆ!
“ನೋಡ್ರಿ ನಿಂಗೂ ಉಳೀತಾನೋ ಬಿಡತಾನೊ; ಆದರ ಕಾಯ್ದೆ ಕಾನೂನಂದರ ನಿಮ್ಮ ಕೈಯಾಗಿನ ಜನಿವಾರವಲ್ಲ.” ಎಂದು ದತ್ತಪ್ಪನಿಗೆ ಹೇಳಿಬಿಟ್ಟ. ಜಾತಿ ಆಡಿದನಲ್ಲಾ ಎಂದು ಗೌದನಿಗೂ ವ್ಯಸನವಾಯಿತು. ಇನ್ನು ಸುಮ್ಮನಿದ್ದರೆ ದತ್ತಪ್ಪನ ಬಾಯಿ ಮುಚ್ಚುವುದು ಕಷ್ಟ. ನಿಂಗೂನಿಗಾಗಲೇ ಗುಡಸೀಕರನ ಮೇಲೆ ಸಿಟ್ಟುಬಂದಿತ್ತು. ಇದೇನಿದು? ದಾರಿಯ ಪೀಡೆ ತಂದು ಮೈಮೇಲೆ ತೂರಿಸಿಕೊಂಡಂತಾಯಿತಲ್ಲಾ ಎಂದುಕೊಂಡ. ಸ್ವಥಾ ಪಂಚಾಯ್ತಿ ಮೆಂಬರ ಕಳ್ಳನಿಗೂ ಅಸಮಧಾನವಾಯ್ತು.
“ಆಯ್ತಪ್ಪಾ ಈಗೇನ ಮಾಡೋಣಂದಿ?”
“ಏನಂದರ ಪೋಜುದಾರ್‍ನ ಕರಸಿ ಪಂಚನಾಮೆ ಮಾಡ್ರಿ” ಈ ಹುಡುಗನಿಗೊಮ್ಮೆ ಕೊನೆಯ ಬಾರಿ ಬುದ್ಧಿ ಹೇಳಿ ನೋಡೋಣ ಅನ್ನಿಸಿತು ಗೌಡನಿಗೆ,
“ನೋಡಪಾ, ನಿಮ್ಮ ಶಹರದಾಗಿನ ಕಾಯ್ದೆ ಬ್ಯಾರೆ, ನಮ್ಮ ಹಳ್ಳಿ ಕಾಯ್ದೆ ಬ್ಯಾರೆ. ನಮ್ಮದು ನಿನಗೂ ಗೊತ್ತಿದ್ದಾಂಗ ಭಾಳ ಸರಳ. ಇಲ್ಲಿ ಜಗಳಾದರ ಇಲ್ಲೇ ನ್ಯಾಯ ಸಿಗಬೇಕು. ಇಲ್ಲೀ ಜಗಳದ ಮ್ಯಾಲ ಬೆಳಗಾಂವಿ ತೀರ್ಪು ತಂದ ಹೇರತೀನಂತಿ, ಹೆಂಗ ಹೇಳು?”
“ಕಾಯ್ದೆದೊಳಗ ಹಳ್ಳಿದೊಂದು ಶಹರದೊಂದು ಅಂತ ಎರಡಿಲ್ಲರಿ”
“ಇಲ್ಲದಿದ್ದರ ಮಾಡಬೇಕಪಾ. ಮತ್ತ ಖರೇ ಸಿಕ್ಕೀತು ಹೆಂಗ ಹೇಳು? ಇಷ್ಟಽ ತಿಳಿ: ಇಲ್ಲಿಂದ ಬೆಳಗಾಂವಿಗೆ ಕೇಸ ಒಯ್ತಿ. ನಿಂಗೂ ದೇವರಾಣಿ ಮಾಡಿ ಸುಳ್ಳ ಹೇಳತಾನ, ಹೇಳಸ್ತಾನ, ಆ ಸಾಕ್ಷಿ ನಂಬಿ ನೀ ವಾದ ಮಾಡತಿ. ನಿನ್ನ ವಾದ ಕೇಳಿ ಜಜ್‌ಸಾಬ ಜಜ್‌ಮೆಂಟ ಬರೀತಾನ. ಬಡ್ಡ್ಯಾಗ ಸುಳ್ಳ ಐತಿ, ತುದ್ಯಾಗ ಕುಂತವಗ ಖರೆ ಹೆಂಗ ಕಂಡೀತು ಹೇಳು?”
ಯಾವ ಬದಿಯಿಂದ ನೋಡಿದರೂ ತಾನೇ ಸೋಲುತ್ತಿದ್ದೇನೆಂದು ಗುಡಸೀಕರನಿಗೆ ಅನ್ನಿಸಿತು . ದತ್ತಪ್ಪನಿಗೆ ಗೌಡನ ಅನುಭವ ಹೊಸದಲ್ಲ. ಗೌಡನ ಮಾತಿಗೆ ಮನಸ್ಸಿನಲ್ಲೇ ಭಲೇ ಅಂದ. ಗೌಡ ಮುಂದುವರೆಸಿದ-
“ನಾವೆಲ್ಲಾ ಮುದುಕರಾದಿವಪಾ; ನಮ್ಮ ಕಾಲ ಮುಗೀತು. ಇನ್ನ ಹಳ್ಳೀ ಕಾರಭಾರ ನೋಡಿಕೋಬೇಕಾದವ ನೀನು. ನಮ್ಮ ಕಾಲದ ಮಂದಿ ಸರಳ ಇದ್ದರು. ಹೇಳಿದ್ದ ಕೇಳತಿದ್ದರು. ನಮ್ಮ ಕಾಲದಾಗಂತೂ ನಾವು ಕೋರ್ಟು ಕಛೇರಿ ಕಟ್ಟಿ ಹತ್ತಲಿಲ್ಲ. ನೀ ವಕೀಲಿ ಪಾಸ ಮಾಡೀದಿ ಅಂತ ಈ ಮಂದೀನೆಲ್ಲಾ ಕೋರ್ಟಿಗೆ ಎಳೆದರ ಹೆಂಗ, ನೋಡು? ನರ ಮನಶ್ಯಾ ತಪ್ಪ ಮಾಡ್ತಾನ ಮನಶ್ಯಾ ಮಾಡದ ಇನ್ನೇನ ದೇವರ ತಪ್ಪ ಮಾದಾಕಾಗತೈತಿ? ತಪ್ಪು ಮಾಡಿದಾ ಅಂತ ಏಕದಂ ಕೊಲ್ಲಾಕ ನೀ ಯಾರು ಹೇಳು? ಮನಶ್ಯಾ ಬರೀ ಸಾಯಾಕಽ ಹುಟ್ಟಲಿಲ್ಲಪ್ಪಾ. ಬದುಕಾಕೂ ಹುಟ್ಯಾನ. ದೇವರ್‍ನ ನೋಡಲ್ಲ. ನಾವು ಮಾಡಿದ ತಪ್ಪ ನೋಡಿದರ ಒಂದಽ ಒಂದು ದಿನ ನಮ್ಮನ್ನ ಈ ಭೂಮಿ ಮ್ಯಾಗಿಡಬಾರದು. ಆದರೂ ಕರಿಮಾಯಿ ನಮ್ಮನ್ನೆಲ್ಲಾ ಇಟ್ಯಾಳಲ್ಲ? ಯಾಕ ಹೇಳು? ಯಾಕಂದರ ಸಾವಿನಕಿಂತ ಬದುಕ ದೊಡ್ಡದಪಾ….?”
ಇವರು ಅಂತಿಂಥ ವಾದಕ್ಕೆ ಮಣಿಯುವುದಿಲ್ಲವೆಂದು ಗುಡಸೀಕರನಿಗೆ ಖಾತ್ರಿಯಾಯ್ತು. ಇವರ ವಾದದಲ್ಲಿ ಹುರುಳಿಲ್ಲ. ನಿಜ, ಆದರೆ ಪ್ರತಿವಾದ ಹೇಗೆ ಹೂಡಬೇಕೆಂದು ತಿಳಿಯದಾಯ್ತು.
“ನೋಡರೀ, ಇಂದಿಲ್ಲ ನಾಳೆ ಈ ಸುದ್ದಿ ಪೋಲೀಸರಿಗೆ ಸಿಗೋದಽ. ಸಿಕ್ಕಿತು ಅಂದರ ನಿಂಗೂನ ಗತಿ ಬಿಡರಿ, ನೀವಿಬ್ಬರೂ ಈ ಕೇಸಿನ್ಯಾಗ ಸಿಗಬೀಳ್ತಿರಿ. ಈ ವಯಸ್ಸಿನಾಗ ನಿಮಗ ಜೇಲಾಗೋದಂದರ ಚೆಲೋ ಅಲ್ಲ; ತಿಳಿದ ನೋಡ್ರಿ.”
ದತ್ತಪ್ಪ ಈ ತನಕ ಬಾಯಿ ಮುಚ್ಚಿದ್ದೇ ಹೆಚ್ಚು.
“ಆತಪಾ ನಾವು ಜೇಲಿಗೂ ಹೋಗಾಕ ತಯಾರ. ಆದರ ನಿಂಗೂನ್ನ ಬಿಟ್ಟು ಕೊಡಾಕ ನಾವು ತಯಾರಿಲ್ಲ. ನಿಂಗೂ ಖೂನಿ ಮಾಡಬೇಕಂತ ಮಾಡಿಲ್ಲ. ಇನ್ನ ಮುಂದ ಮಾಡಾವನೂ ಅಲ್ಲ. ಏನೋ ಅಚಾನಕ ಆದದ್ದು. ನಾವಿಬ್ಬರೂ ಅವನ ಬೆನ್ನಿಗೆ ನಿಂದರಾವರಽ. ಬೇಕಂದರ ನೀ ಹೋಗಿ ಪೋಲೀಸರಿಗಿ ಹೇಳಿಕೊ ಹೋಗು.”
ಹಸಿ ಗೋಡೆಯಲ್ಲಿ ಹರಳು ನಟ್ಟಂತೆ ದತ್ತಪ್ಪನ ಈ ಮಾತು ಗುಡಸೀಕರನ ಎದೆಯಲ್ಲಿ ನಾಟಿಬಿಟ್ಟಿತು. ಈ ಮುದಿಯರಿಗೆ ಈ ಧೈರ್ಯವೇ? ಮಾತು ಬಿರುಸಾದ್ದು ಗೌಡನಿಗೂ ತಿಳಿದಿತ್ತು. ಕೂಡಲೇ ಹೇಳಿದ.
“ಆಯ್ತಪಾ; ನೀ ಅದೆನು ಶಿಕ್ಷೆ ಕೊಡ್ತಿ ಕೊಡು. ನೀ ಹೇಳಿದಾಂಗ ಕೇಳಾಕ ಹಚ್ಚತೀವಿ. ತಪ್ಪಿಗಿ ಶಿಕ್ಷಾ ಇಲ್ಲ ಅನಬ್ಯಾಡ. ಆದರ ಬೆಳಗಾಂವಿ ಮಂದಿ ನಮ್ಮ ಊರಿನ ಮನಶ್ಯಾಗ ಶಿಕ್ಷಾ ಕೊಡೋದು ಶಕ್ಯಿಲ್ಲ. ಏನಂತಿ?”
“ನಾ ಜಜ್ ಅಲ್ಲ.”
“ನಾವಽ ಮಾಡತೀವಲ್ಲ. ಬೇಕಂದರ ನಮಗೂ ಶಿಕ್ಷಾ ಕೊಡು. ನೀ ಹೇಳಿದ್ದಕ್ಕ ಎರಡೆಂದರ ನಮ್ಮ ನಾಲಿಗಿ ಕಳಚಿ ಬೀಳಲಿ; ಕರಿಮಾಯಿ ಆಣಿ, ಮತ್ತೇನೈತಿ?”
ಈ ತನಕ ನಿಂಗೂ ಬಾಯಿ ಮುಚ್ಚಿದನಲ್ಲ. ಈಗ ತಡೆದುಕೊಳ್ಳಲಾರದೇ ತೆರೆದೇಬಿಟ್ಟ. “ನೋಡೋ ಗುಡಸ್ಯಾ! ನಿನ್ನ ಮನಸ್ಸಿನ್ಯಾಗೇನೈತಿ ನಂಗೂ ತಿಳೀತು. ಇವರಿಬ್ಬರದೂ ಒಂದಽ ಒಂದ ಕೂದಲು ಕೊಂಕಿದರ, ಆಮ್ಯಾಲ ನೀ ಈ ಊರಾಗ ಬಾಳ್ವೆ ಮಾಡಾಕ ಆಗಾಣಿಲ್ಲ. ಮೊದಲಽ ಹೇಳಿರತೇನ.”
ನಿಂಗೂ ಇಂಥಾ ಮಾತಾಡಿದ್ದೇ ಮೊದಲು. ಬೇರೆ ಸಮಯದಲ್ಲಾಗಿದ್ದರೆ ಇದನ್ನು ನಿರ್ಲಕ್ಷ್ಯಿಸಬಹುದಿತ್ತು.
“ಬಲ್ಲಿನೋ ಮಗನ ನಿನ್ನ ಕುವ್ವತ್ತ. ನೀ ಏನಾದರೂ ಉಳುಯೋದಾದರ ಅದು ನನ್ನ ದಯದಿಂದ; ತಿಳಕೋ.”
“ಹೋಗಲೇ, ನನಗ ನಿನ್ನ ದಯಾಮಾಯಾ ಬ್ಯಾಡ. ಅದೇನ ಮಾಡ್ತಿ ಮಾಡಿಕೋ ಹೋಗ. ಮೊದಲ ನನ್ನ ಹೊಲದಾಗಿಂದ ಕಾಲ್ತಗಿ.”
ಇಷ್ಟು ಕೇಳಿದ್ದೇ ಗುಡಸೀಕರ ನೆಲ ಒದೆಯುತ್ತ ಊರ ಕಡೆ ಹೊರಟುಬಿಟ್ಟ. ನಿಂಗೂ ಹೀಗೆ ಹೇಳಿದ್ದು ಸರಿಯೆನಿಸಿತು ದತ್ತಪ್ಪನಿಗೆ. ಆದರೆ ಗೌಡನಿಗೆ ಅಸಮಧಾನವಾಯ್ತು. ಸುಮ್ಮನೇ ಕೂತ. ಮುಂದಾಗಬಹುದಾದ್ದನ್ನು ಮನಸ್ಸಿನಲ್ಲೇ ಧೇನಿಸಿದ. ಸರಪ,ಚ ಆದಾಗಿನಿಂದ ಗುಡಸೀಕರನನ್ನು ಗಮನಿಸುತ್ತ ಬಂದಿದ್ದ. ಹುಡುಗನ ಮನಸ್ಸು ಆರೋಗ್ಯದಿಂದಿಲ್ಲವೆಂದು ಆಗಲೇ ಖಾತ್ರಿಯಾಗಿತ್ತು. ದತ್ತಪ್ಪನಂತೂ ಇವನ ಬಗ್ಗೆ ಎಂದೋ ತೀರ್ಮಾನ ತಗೊಂಡುಬಿಟ್ಟಿದ್ದ. ಈ ಹುಡುಗನ ಕಣ್ಣಲ್ಲಿ ಬರೇ ಸ್ವಯಂಪ್ರತಿಷ್ಟೆಯೇ ಹೊರತು ಊರು ಮೂಡುತ್ತಿರಲಿಲ್ಲ. ಪ್ರತಿಷ್ಠೆಗಾಗಿ ಬೇಕಾದರೆ ಈತ ಊರನ್ನೇ ಬಲಿ ಕೊಡುವನೆಂದು ಹೇಳುತ್ತಿದ್ದ. ಆದರೆ ಗೌಡ ನಂಬಿಕೆ ಕಳೆದುಕೊಂಡಿರಲಿಲ್ಲ. ಇಂದಿಲ್ಲ ನಾಳೆ ಹಾದಿಗೆ ಬಂದಾನೆಂದುಕೊಂಡಿದ್ದ. ಆದರೆ ಇಂದಿನ ಮಾತುಕತೆಯಿಂದ ಗೌಡನಿಗೂ ನಿರಾಸೆಯಾಯಿತು. ಈ ಹುಡುಗ ಅಪಾಯಕಾರಿ ಎನ್ನಿಸಿತು. ಹಾಗೇ ಬಿಟ್ಟಿದ್ದರೆ ಎಷ್ಟು ಹೊತ್ತು ಯೋಚಿಸುತ್ತಿದ್ದನೋ, ದತ್ತಪ್ಪ ಎಚ್ಚರಿಸಿದ.
“ಈಗ ಬ್ಯಾಟಿ ಹುಡುಗೋರ ಹೊಂಡೊ ಯಾಳೆ ಆಯ್ತಲ್ಲಾಪಾ”
“ದತ್ತೂ ಇದ್ಯಾಕೋ ಬರೋಬರಿ ಆಗಲಿಲ್ಲಪಾ”
“ನೋಡೋಣಂತ ನಡಿ, ಹೊತ್ತ ಮುಳುಗಾಕ ಹತ್ತೇತಿ.”
ದತ್ತಪ್ಪನಿಗೆ ಗುಡಸೀಕರನ ಅಪಾಯದ ಬಗ್ಗೆ ಕಾಳಜಿ ಇತ್ತು. ಗೌಡನೇ ನಿಂಗೂನಿಗೆ ಹೇಳಿದ.
“ನಿಂಗೂ, ಈಗ ಗುಡಿಸಲಾ ಕೀಲಿ ಹಾಕು. ನೀ ಲಗುಮಿ ಮನ್ಯಾಗ ಇರು. ಗಾಬರಿಯಾಗಬ್ಯಾಡ. ಕರಿಮಾಯಿ ನೋಡಿಕೋತಾಳ. ಸಿದ್ರಾಮ ನೀನೂ ಯಾರ ಮುಂದೂ ಬಾಯಿ ಬಿಡಬ್ಯಾಡ. ಬಿಟ್ಟರ ನಾವಷ್ಟಽ ಅಲ್ಲ. ನೀನೂ ಕುಡಗೋಲ ನುಂಗಬೇಕಾಗತೈತಿ.”
ಎಂದು ಹೇಳಿ ಗೌಡ ಎದ್ದ.
ಗೌಡನೆಂದೂ ಈ ರೀತಿ ಚಿಂತಿ ಮಾಡಿದವನಲ್ಲ. ಮನೆಗೆ ಬಂದ ಮೇಲೂ ಜೀವ ಹಳಹಳಿಸತೊಡಗಿತ್ತು. ಪಂಚರನ್ನು ಈಗಲೇ ಕರೆಸೋಣವೆಂದುಕೊಂಡ. ಬೇಟೆಗಾರ ಹುಡುಗರ ಜೊತೆಗೆ ಬರುತ್ತಾರಲ್ಲ ಬರಲಿ ಎಂದು ಸುಮ್ಮನಾದ. ಆದರೂ ಮನಸ್ಸಿಗೆ ಸಮಾಧಾನವಾಗಲೊಲ್ಲದು. ಅಷ್ಟರಲ್ಲಿ ದತ್ತಪ್ಪ ಮತ್ತೆ ಅವಸರದಿಂದ ಬಂದ. ಮತ್ತೆ ಬಂದನಲ್ಲ ಯಾಕಿರಬಹುದೆಂದು ಗೌಡನಿಗೆ ದಿಗಿಲಾಯಿತು. ಬಂದ ಉಸಿರಿನಲ್ಲಿಯೇ ದತ್ತಪ್ಪ-
“ಹಬ್ಬ ಮಾಡೋಣಂದ್ಯೋ, ಬ್ಯಾಡಂದ್ಯೋ?”
ಎಂದ. ಹೌಂದಲ್ಲ! ಎಷ್ಟೇ ಮುಚ್ಚಿಟ್ಟರೂ ಹೆಣದ ವಾಸನೆ ಜನರ ಮೂಗಿಗೆ ಬಡಿಯೋದೇ. ಗೊತ್ತಾದರೆ ಯಾರ ಮನಸ್ಸೂ ಹಗುರವಾಗಿರದು. ಹ್ಯಾಗೊ ಸೂತಕವಾಗಿದೆ. ನಿಲ್ಲಿಸಿ ಬಿಡುವದೇ ಮೇಲೆಂದು ಯೋಚಿಸಿದ. ಬೇಡವೆಂದರೆ ಕುತೂಹಲ ಕೆರಳಿಸಿದಂತೆ. ಅದಕ್ಕೊಂದು ಸಮಾಧಾನ ಕೊಡಲೇಬೇಕು. ಏನೋ ಹೊಳೆಯಿತು.
“ದತ್ತೂ, ನಿನ್ನ ಚಿಂತಾಮಣಿ ಏನ ಹೇಳತೈತಿ?” ಅಂದ. ದತ್ತಪ್ಪ ಆಗಲೇ ನೋಡಿ ಬಂದಿದ್ದನೋ ಏನೋ-
“ತಾಯೀನ ಕೇಳಂತೈತಿ.” ಅಂದ.
“ಹೋಗಿ ಬಾ ಹಂಗಾದರ. ನೀ ಬರೋತನಕಾ ಹುಡುಗರನ್ನ ಇಲ್ಲೇ ನಿಲ್ಲಿಸ್ರ್ತೀನಿ” ಅಂದ. ದತ್ತಪ್ಪ ಓಡಿದ.
ಬೇಟಿಯ ಹುಡುಗರು ವಾದ್ಯಗಳೊಂದಿಗೆ ಬಂದರು. ಬಸೆಟ್ಟಿ, ಬಾಳು ಮೆರವಣಿಗೆಯ ಜೊತೆಯಲ್ಲಿಯೇ ಬಂದರು. ಗೌಡ ಎಂದಿನಂತೆ ಲವಲವಿಕೆಯಿಂದ ಇರಲಿಲ್ಲವೆಂದು ಎಲ್ಲರಿಗೂ ತಿಳಿಯಿತು. ಒಬ್ಬಿಬ್ಬರು “ಮೈಯಾಗ ಆರಾಮಿಲ್ಲೇನ್ರೀ” ಎಂದು ಕೇಳಿಯೂ ಬಿಟ್ಟರು. ಶುಂಠಿಯ ಕಾಡೆ(ಕಷಾಯ)ಇಂಥದ್ದಕ್ಕೆಲ್ಲ ಬಹಳ ಒಳ್ಳೆಯದೆಂದು ಬಸೆಟ್ಟಿ ಮದ್ದನ್ನೂ ಸೂಚಿಸಿದ.
ಗೌದ ಎಲ್ಲರಿಗೂ ಕೂರಲಿಕ್ಕೆ ಹೇಳಿದ. ಕೂತರು. ದತ್ತಪ್ಪ ಇನ್ನೂ ಬಂದಿರಲಿಲ್ಲ. ಮಂದಿಗೆ ಕೂರಲಿಕ್ಕೆ ಹೇಳಿ ಏನಾದರೂ ಮಾತಡಬೇಕಿತ್ತು. ಗೌಡ ಮಾತಾಡಲಾಗಲಿಲ್ಲ. ಮೈಯಲ್ಲಿ ಹುಷಾರಿಲ್ಲವಲ್ಲ ಎಂದುಕೊಂಡ ಜನ್ ತಮ್ಮಲ್ಲಿ ತಾವೇ ಮಾತಾಡಕೊಳ್ಳತೊಡಗಿದರು. ಶಿವನಿಂಗ ಬೇಟೆಯ ಹುಡುಗರಲ್ಲಿದ್ದ. ಅವನಿನ್ನೂ ಬೆಳ್ಳಂಬೆಳತನಕ ಅಡವಿಯಲ್ಲಿ ಅಲೆದಾಡಬೇಕು. “ಈ ಸಲ ಬೇಡ” ಎಂದ. ದತ್ತಪ್ಪ ಇನ್ನೂ ಬರಲಿಲ್ಲ. ಸಾಮಾನ್ಯವಾಗಿ ಗೌಡನ ಮನೆಯಲ್ಲಿ ತಡವಾಗುವುದಿಲ್ಲ. ಕಾಯಿ ತರಿಸಿ ತರುಣರಿಗೆ ಕೊಡುವುದೆಷ್ಟೋ ಅಷ್ಟೇ. ಆದರೆ ಗೌಡ ತರಾತುರಿ ಮಾದಲಿಲ್ಲ. ಶಿವನಿಂಗ ಕಾಯಿ ತಂದು ಆಗಲೇ ಗೌಡನ ಮುಂದೆ ಇಟ್ಟಿದ್ದ. ರಾತ್ರಿ ಬೇರೆ ಆಗುತ್ತಿತ್ತು. ಬೆಳ್ದಿಂಗಳಿತ್ತು ನಿಜ.
ಅಷ್ಟರಲ್ಲಿ ದತ್ತಪ್ಪ ಬಂದ. ಮುಖದಲ್ಲಿ ಉದ್ವಿಗ್ನತೆಯಿತ್ತು. ಬಂದವನೇ ಗೌಡನ ಕಿವಿಯಲ್ಲಿ “ಗುಡಸ್ಯಾ ಮೂರುಸಂಜಿ, ಬೆಳಗಾಂವಿಗೆ ಹೋದನಂತೆ” ಎಂದ.
“ತಾಯಿ ಏನು ಹೇಳಿದಳು?”
“ಹಬ್ಬಾ ಬಿಡಬ್ಯಾಡಂದ್ಲು.”
ಇಷ್ಟು ಕೇಳಿದ್ದೇ ಕಾಯಿ ತಗೊಂಡು ಬೇಟೆಯ ಹುಡುಗರ ನಾಯಕನಿಗೆ ಕೊಟ್ಟ. ಅನೇಕರಿಗೆ ಅನೇಕ ಬಗೆಯ ಅನುಮಾನಗಳು ಸುಳಿದರೂ ಕೇಳಲಾರದೇ ಎದ್ದು ಬೇಟೆಗೆ ಹೊರಟರು. ಗೌಡ ನಾಲ್ಕು ಜನ ವಿಶ್ವಾಸಿ ಹುಡುಗರನ್ನು ಕರೆದು ಬೇಟೆಗೆ ಹೋಗಬೇಡಿರೆಂದು ಹೇಳಿ, ಊಟ ಮಾಡಿ ಬರ್ರೆಂದು ಪಂಚರನ್ನು ಅಲ್ಲೇ ಕೂರಿಸಿಕೊಂಡ.
ಕರಿಬೇಟೆ
ಬೆಳಗಾಯಿತು. ಆದಿನ ಊರವರು ದಿನಕ್ಕಿಂತ ಹೆಚ್ಚು ಖುಷಿಪಡಬೇಕಾಗಿತ್ತು. ಯಾಕೆಂದರೆ ಕರಿಬೇಟೆಯ ದಿನ. ಕರಿಬೇಟೆ ಕ್ಷತ್ರಿಯ ನಾಯಕರ ಹಬ್ಬ. ಗೌಡನೂ ಅದೇ ಕುಲದವನು. ತರುಣ ನಾಯಕರೆಲ್ಲ ನಿನ್ನೆಯೇ ಬೇಟೆಯಾಡಲಿಕ್ಕೆ ಹೋಗಿದ್ದರಲ್ಲ. ಈ ಹೊತ್ತು ಅವರು ಬಂದೊಡನೆ ಬೇಟೆಯ ಮೆರವಣಿಗೆ ಮಾಡಿ, ಗೌಡನಿಗೊಂದು ಪಾಲು ಕೊಟ್ಟು ಮನೆಗಳಿಗೆ ಹೋಗುತ್ತಾರೆ. ಇಂದು ರಾತ್ರಿ ನಾಯಕರ ಮನೆಗಳಲ್ಲೆಲ್ಲ ಮಾಂಸದ ಅಡಿಗೆ. ಊಟ ಮಾಡಿ ಎಲ್ಲರೂ ಕರಿಮಾಯಿಯ ಗುಡಿಯಲ್ಲಿ ಸೇರುತ್ತಾರೆ. ತಾಜಾ ಭಟ್ಟಿಸೆರೆ ಕುಡಿಯುತ್ತ ಸೂಳೆಯರ ಬೇಟೆ ಹಾಡುಗಳಿಗೆ ತಕ್ಕಂತೆ ಕುಣಿಯುತ್ತಾ ವಿನೋದದಿಂದ ಕಾಲ ಕಳೆಯುತ್ತಾರೆ. ನಾಯಕರನ್ನು ಬಿಟ್ಟು ಬೇರೆಯವರು ಕುಣಿಯುವುದಿಲ್ಲ. ಆದರೆ ಉಳಿದವರು ವಿನೋದ ನೋಡುವ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ.
ಹಾಡುಗಳ ತುಂಬ ಬೇಟೆಯ ಸಾಹಸದ ವರ್ಣನೆಗಳೇ, ಅವೆಲ್ಲ ಪದ್ಧತಿಯ ಹಾಡುಗಳು. ಹುಡುಗರು ಬೇಟೆಯಲ್ಲದ ಹಸಿಗಾಯಗಳುಳ್ಳ ಕರಿಯ ಬರಿ ಮೈಗಳನ್ನು ಉಬ್ಬುಬ್ಬಿಸಿ ತೋರುತ್ತಮದ ಉಕ್ಕುವ ಎಳೇ ಸೂಳೆಯಯರ ಸಂದಿಗೊಂದಿಗಳನ್ನು ಕಣ್ಣಿನಿಂದ ಬಗಿಯುತ್ತ, ಸೆರೆಯ ನಶೆಯಲ್ಲಿ ಸೊಂಟ ತೇಲಿಸುತ್ತ ಕುಣಿಯುತ್ತಿದ್ದರೆ ನೋಡುವ ಹೆಣ್ಣು ಕಣ್ಣುಗಳೆಲ್ಲ ಕನಸುಗಳನ್ನು ಹಡೆಯುತ್ತವೆ. ಅಷ್ಟೊಂದು ಹಸಿದ ಕಣ್ಣುಗಳಿಗೆ ಗುರಿಯಾಗುವ ಅವಕಾಶವನ್ನು ಯಾವ ಮತಿವಂತ ಸೂಳೆ ತಪ್ಪಿಸಿಕೊಂಡಾಳು? ಪರ ಊರಿನ ಸೂಳೆಯರನ್ನು ಎಲೆಯಡಿಕೆ ಕೊಟ್ಟು ಆಮಂತ್ರಿಸುವ ಪರಿಪಾಠವೂ ಇದೆ. ಈ ಸಲ ಯಾರು ಬಂದಿದ್ದಾರೆ, ಹ್ಯಾಂಗಿದ್ದಾರೆ, ಎಂಬೆಲ್ಲ ಕುತೂಹಲಗಳು ನೋಡುವವರಲ್ಲಿ ಇರುತ್ತಿದ್ದವು. ಅಷ್ಟೇ ಅಲ್ಲ, ಇನ್ನೂ ಹದಿನೈದು ದಿನ ಹಬ್ಬ ಇರುವಾಗಲೇ ನಾಯಕರ ಹುಡುಗರು ಭೇಟಿಯಾದರೆ “ಏನಪಾ ನಾಯಕಾ, ಈ ವರ್ಷ ಯಾ ಊರ ಸೂಳೇರ್‍ನ ಕರಸ್ತೀರೋ?” ಎಂದೆಲ್ಲ ಕೇಳುತ್ತಿದ್ದರು.
ಆದರೆ ಈ ದಿನ ಕೊನೇ ಪಕ್ಷ ಸುದ್ದಿ ತಿಳಿದವರಿಗಂತೂ ಆ ಉತ್ಸಾಹ ಉಳಿದಿರಲಿಲ್ಲ. ಗೌಡ ಎಂದಿನಂತೆ ಬೆಳಿಗ್ಗೆದ್ದು ಕೆರೆಯಲ್ಲಿ ಜಳಕ ಮಾಡಿ ಕರಿಮಾಯಿಗೆ ಕೈ ಮುಗಿದು ಮನೆಗೆ ಬಂದ. ನ್ಯಾರೆ ಮಾಡಿ ತೋಟದ ಕಡೆ ಹೊಂಟವನು ನಿಂಗೂನ ತೋಟಕ್ಕೆ ಹೋದ. ಹುಡುಗರ ಕೆಲಸ ನೋಡಿ ‘ಭಲೆ’ ಎಂದುಕೊಂಡು ಹಾಗೇ ತನ್ನ ತೋಟಕ್ಕೆ ಹೋದ. ಲಗಮವ್ವನನ್ನು ಕರೆಸಿದ. ಅವಳಿಂದ ಒಂದು ಕಾಯಿ ಸೆರೆ ತರಿಸಿ ಕುಡಿದು ಹೊರಸಿನ ಮೇಲೆ ಕೂತ. ಶಿವಸಾನಿ ಮಾತಾಡಿಸಿದ್ದು ಅವನ ಗಮನಕ್ಕೆ ಬರಲಿಲ್ಲ.
ಹೊತ್ತು ಮೇಲೇರಿತು. ಮಧ್ಯಾಹ್ನವಾಗಿ ಇಳಿಹೊತ್ತಾಯಿತು. ಹೊತ್ತು ಹೆಚ್ಚಾದಂತೆ ಹೆಚ್ಚು ಹೆಚ್ಚು ಮಂದಿಗೆ ಸುದ್ದಿ ಗೊತ್ತಾಯಿತು. ಕೆಲವರು ಕುತೂಹಲ ತಾಳದೇ ನಿಂಗೂನ ತೋಟದ ಕಡೆ ಹೋಗಿ ಬಂದರು. ನೀರು ತರುವ ಹೆಂಗಸರು ಗುಸುಗುಸು ಮಾತಾಡಿದರು. ಯಾರು ಸಿಕ್ಕರೂ “ಸುದ್ದಿ ಖರೆಯೇನಽ? ಹೆಂಗಾತಂತ?” ಎಂದು ಕೇಳುವ, ಹೇಳುವ ಆತುರ ಇರುತ್ತಿತ್ತು. ಎಲ್ಲರಿಗೂ ಈ ದಿನ ಮಾತಾಡುವ ಚಪಲ. ಗೌಡನಿಗೂ, ಗುಡಸೀಕರನಿಗೂ ಮಾರಾಮಾರಿಯಾಯಿತೆಂದೂ ಕೈ ಕೈ ಹತ್ತಿತೆಂದೂ, ಗೌಡನನ್ನು, ದತ್ತಪ್ಪನನ್ನು ಜೇಲಿನಲ್ಲಿ ಇಡದಿದ್ದರೆ ತನ್ನ ಹೆಸರು ಗುಡಸೀಕರನೇ ಅಲ್ಲವೆಂದು, ಗುಡಸೀಕರ ಕರಿಮಾಯಿಯ ಮೇಲೆ ಆಣೆ ಇಟ್ಟಿದ್ದಾನೆಂದೂ-ಹೀಗೆ ಯದ್ವಾ ತದ್ವಾ ಊಹೆಗಳಾಗಿ, ಊಹೆಗಳು ಕಥೆಯಾಗಿ, ಕಥೆಗಳೇ ನಿಜಘಟನೆಗಳಾಗಿ ಸಾಯಂಕಾಲವಾಗುವುದರೊಳಗೆ ನಿಂಗೂ ಕಥಾನಾಯಕನಾಗಿ, ಅವನ ಸುತ್ತ ಕಥೆ ಹಬ್ಬಿ, ಆ ಕಥೆಯ ನೂರಾರು ಪಾಠಾಂತರಗಳು ನಾನಾ ನಮೂನೆಯ ಹೊಸ ಹೊಸ ವಿವರಗಳೊಂದಿಗೆ ಬಾಯಿಗೊಂದು ಬಣ್ಣ ತಳೆಯುತ್ತ ಹಬ್ಬತೊಡಗಿದವು.
ಆದರೆ ಹಬ್ಬ ನಿಲ್ಲಿಸಬೇಕೆಂದು ಕೆಲವರು ಅಂದುಕೊಂಡರು. ಈಗ ಹೇಳಿದ್ದರೆ ನಾಯಕರ ಹುಡುಗರು ಸಿದ್ಧರಾಗುತ್ತಿದ್ದರೋ ಇಲ್ಲವೋ. ಯಾಕೆಂದರೆ ಈ ದಿನ ಊರ ವತಿಯಿಂದ ದುರ್ಗಿ ಕುಣಿಯುವವಳಿದ್ದಳು. ಪಕ್ಕದ ಪಾಶ್ಚಾಪುರದಿಂದ ಸುಂದರಿ ಬಂದಿದ್ದಳು. ಸತ್ತವರು ಯಾವ ದೊಡ್ಡ ಸಜ್ಜರರೆಂದು ಹಬ್ಬ ನಿಲ್ಲಿಸಬೇಕು? ಅಲ್ಲದೇ ನಿಲ್ಲಿಸುವದಾಗಿದ್ದರೆ ಗೌಡ ಹೇಳುತ್ತಿದ್ದ. ಕರಿಮಾಯಿಯ ವಾಕ್ಯ ಆಗುತ್ತಿತ್ತು. ಹೀಗೆ ಅವರ ತಲೆಯಲ್ಲಿ ವಿಚಾರ ಹೊಳೆಯುತ್ತಿರುವಾಗಲೇ ಬೇಟೆಗಾರರು ಮೆರವಣಿಗೆಯಲ್ಲಿ ಬಂದರು.
ಉಂಡು ಮಲಗುವ ಹೊತ್ತಿಗೆ ಎಲ್ಲರೂ ಬಂದು ಗುಡಿಯ ಪೌಳಿಯಲ್ಲಿ ಸೇರಿದರು. ಮುದಿ ನಾಯಕರಿಗೆ ಎಷ್ಟೂ ಉತ್ಸಾಹವಿರಲಿಲ್ಲ. ಹಿಂದಿನ ಹಬ್ಬಗಳಲ್ಲಾಗಿದ್ದರೆ ಸ್ವಥಾ ಲಗಮವ್ವ ಉಟ್ಟ ಸೀರೆಯ ನೆರಿಗೆಗಳನ್ನು ಮುಂಗೈಯಲ್ಲಾಡಿಸುತ್ತ ಬೇಟೆಯ ಪದ ಹಾಡತೊಡಗಿದರೆ, ರಂಗೇರಿದಂತೆ ಆಕೆಯ ಮೈಯ ಹಿಂದು ಮುಂದಿನ ಉಬ್ಬುಗಳನ್ನು ತುಳುಕುತ್ತ ಹೆಜ್ಜೆ ಹಾಕುತ್ತಿದ್ದರೆ, ಬಚ್ಚಬಾಯಿಯ ಮುದುಕರೂ ತೆರೆದ ಬಾಯಿ ತೆರೆದಂತೆಯೇ ಕುಣಿಯತೊಡಗುತ್ತಿದ್ದವು. ಮುದಿ ಮೈಗಳಲ್ಲೂ ಲಯ ತುಳುಕಿಸುತ್ತಿದ್ದಳು ಲಗುಮವ್ವ ತನ್ನ ಹಾಡುಗಾರಿಕೆಯಿಂದ. ಆದರೆ ಇಂದು ಗೌಡನೇನೋ ಬಂದಿದ್ದ; ಸುಮ್ಮನೇ ಕೂತಿದ್ದನಷ್ಟೆ. ಅವನ ನಗೆಯ ಮಜ ಮಾಯವಾಗಿತ್ತು. ಒಂದು ವಿಶೇಷವೆಂದರೆ ಸಾಮಾನ್ಯವಾಗಿ ಈ ಹಬ್ಬಕ್ಕೆ ದತ್ತಪ್ಪ ಬರುತ್ತಿರಲಿಲ್ಲ. ಇಂದು ಅವನೂ ಬಂದಿದ್ದ. ಇದರಿಂದಾಗಿ ವಾತಾವರಣದ ಗಾಂಭೀರ್ಯ ಉಸಿರುಗಟ್ಟುವಂತಾಗಿತ್ತು.
ದುರ್ಗಿಯ ಹಾಡುಗಾರಿಕೆ ಸುರುವಾಯ್ತು. ಬೆಳ್ದಿಂಗಳ ಸುಖದ ಮದ ಈಗಷ್ಟೇ ಹುಡುಗರ ಮೈಗೆ ತಾಗತೊಡಗಿತ್ತು. ಅಷ್ಟರಲ್ಲಿ ಗೌಡ, ದತ್ತಪ್ಪ ಮೊದಲೇ ನಿರೀಕ್ಷಿಸಿದ್ದಂತೆ ಪೋಲೀಸ್ ಜೀಪಿನ ಬೆಳಕು ಗುಂಪಿನ ಮೇಲೆ ಬಿತ್ತು. ಸ್ತಬ್ಧರಾಗಿ ಕೂತವರೆಲ್ಲ ಎದ್ದುನಿಂತರು. ಗೌಡನೂ ಅವನ ಹಿಂದಿನಿಂದ ದತ್ತಪ್ಪನೂ ಎದ್ದು ಮುಂದೆ ಬರುವದರೊಳಗಾಗಿ ಜೀಪು ಗುಡಿಯ ಹತ್ತಿರವೇ ಬಂದು ನಿಂತಿತು.
ನಡುವಯಸ್ಸಿನ ಫೌಜುದಾರನೊಬ್ಬ ಇಬ್ಬರು ಪೋಲೀಸ್‌ರೊಂದಿಗೆ ಇಳಿದು ಬಂದ. ಜನ ಗಾಬರಿಯಾಗಿ ಮಿಕಿಮಿಕಿ ಇವರನ್ನೇ ನೋಡುತ್ತಿದ್ದರು. ಗೌಡ, ದತ್ತಪ್ಪ ಮುಂದೆ ಬಂದು ನಮಸ್ಕರಿಸಿದರು. ತಾವಿಬ್ಬರೂ ಗೌಡ, ಕುಲಕರ್ಣಿ ಎಂದು ಪರಿಚಯಮಾಡಿಕೊಟ್ಟರು. ಇವರ ಮಾತು ನಿಲ್ಲಿಸಿ “ಈ ಮಂದಿ ಇಲ್ಯಾಕ ಸೇರ್‍ಯಾರ?” ಎಂದು ಫೌಜುದಾರ ಕೇಳಿದ.
“ಇಂದ ಕರಿಬ್ಯಾಟಿ ಹಬ್ಬ; ಕುಣ್ಯಾಕ ಹತ್ಯಾರರಿ.”
“ಹಬ್ಬ?”
“ಹೌಂದರಿ.”
“ಇಂದೇನ ಹಬ್ಬ ಮಾಡೋ ಜರೂರಿಲ್ಲ.”
ಇಷ್ಟು ಹೇಳಿ ಪೋಜುದಾರ ತಿರುಗಿದ. ಕೂಡಲೇ ದತ್ತಪ್ಪ ಸಣ್ಣದಾಗಿಸಿದ ಲಾಟೀನು ದೊಡ್ಡದು ಮಾಡಿ ಮುಂದೆ ಮುಂದೆ ಚಾವಡಿಯ ಕಡೆ ನಡೆದ. ಪೋಜುದಾರ, ಅವನ ಹಿಂದೆ ಪೋಲೀಸರು ನಡೆದರು. ಗೌಡ ಒಂದಿಬ್ಬರನ್ನು ಕರೆದು ಇನ್ನೇನೋ ಹೇಳಿ ಮುಂದೆ ಹೋಗುತ್ತಿದ್ದ ಪೋಜುದಾರನನ್ನು ಕೂಡಿಕೊಂಡ.
ಶಿವಪೂಜೆಯಲ್ಲಿ ಕರಡಿ ಬಿಟ್ಟಂತಾಯ್ತು ನಾಯಕರ ಹುಡುಗರಿಗೆ. ಇನ್ನು ಕೆಲವರಿಗೆ ಇದು ಗುಡಸೀಕರನ ಕರಾಮತಿಯೆಂದು ಗೊತ್ತಾಯಿತು. ಗೌಡ, ದತ್ತಪ್ಪನನ್ನು ಜೇಲಿಗೆ ಒಯ್ಯುತ್ತಾರೆಂದು ಕೆಲವರೆಂದರು. “ಯಾಕೆ? ಊರಾಗೇನ ಗಂಡಸರಿಲ್ಲೇನ?” ಎಂದು ಹುಡುಗರೆಂದರು. ತಮತಮಗೆ ಗುಜುಗುಜು ಮಾತಾಡಕೊಳ್ಳತೊಡಗಿದರು.
ಚಾವಡಿಗೆ ಹೋದೊಡನೆ ಪೋಜುದಾರ ನಿಂಗೂನನ್ನು ಕರೆತರುವಂತೆ ಹೇಳಿದ. ಊರಲ್ಲಿ ಖೂನಿ ಆಗಿದ್ದರೂ ಹಬ್ಬ ಮಾಡುತ್ತಿದ್ದುದಕ್ಕೆ ಛೀಮಾರಿ ಹಾಕಿದ. ಖೂನಿ ಗೀನಿ ಏನೂ ಆಗಿಲ್ಲವೆಂದೂ, ಆಗಿದ್ದರೆ ತಾನು ಸುಮ್ಮನಿರಲಿಕ್ಕಾಗುತ್ತಿತ್ತೆ? ಹಬ್ಬ ಮಾಡಲಿಕ್ಕಾಗುತ್ತಿತ್ತೆ? ಗೌರಿ ಗಟಿವಾಳಪ್ಪ ಸತ್ತು ಹದಿನೈದು ದಿನವಾಯಿತೆಂದೂ, ಹೋರಿ ಗರ್ಭಕ್ಕೆ ಇರಿದು ಗೌರಿ ಸತ್ತಳೆಂದೂ ಒಂದೆರಡು ದಿನ ಜ್ವರ ಅಂತ ಮಲಗಿದವನು ಗಟಿವಾಳಪ್ಪ ಮೇಲೇಳಲೇ ಇಲ್ಲವೆಂದು ಗೌಡ ಹೇಳಿದ. ದತ್ತಪ್ಪ ಮಧ್ಯ ಮಧ್ಯ ಹೌದು ಹೌದೆಂದು ಸೇರಿಸಿ, ತನ್ನ ಧಫ್ತರಿನಲ್ಲಿ ನಮೂದಿಸಿದ್ದಾಗಿ ಹೇಳಿದ.
ನಿಂಗೂ ಚಾವಡಿಗೆ ಬಂದಾಗ ಪೋಜುದಾರನಿಗೇನು, ಗೌಡ ದತ್ತಪ್ಪನಿಗೂ ದೂರ ನಿಂತಿದ್ದ ಜನಕ್ಕೂ ಹೊಯ್ಕಾಯಿತು. ಅವನಾಗಲೇ ಸೀರೆ ಉಟ್ಟು, ಕೈ ಬಳೆ ತೊಟ್ಟಿದ್ದ. ಅವನೂ ಬಂದು ಗೌಡ ಹೇಳಿದಂತೆ ಹೇಳಿದ. ಫೌಜುದಾರ ಪೇಚಿನಲ್ಲಿ ಸಿಕ್ಕ. ಈ ನಪುಂಸಕ ಹುಡುಗ ಖೂನಿ ಮಾಡುವದು ಸಾಧ್ಯವಿಲ್ಲೆಂದು ಅವನ ಅನುಭವ ಸಾರಿ ಸಾರಿ ಹೇಳಿತು. ತನಗೆ ಬಂದ ಸುದ್ದಿಯಲ್ಲಿ ಏನೋ ಐಬಿದೆಯೆಂದು ಅನ್ನಿಸಿತು. ಅಷ್ಟರಲ್ಲಿ ನಾಯಕರ ಹಿರಿಯನೊಬ್ಬ ಹಬ್ಬ ಆಚರಿಸಲು ಪರವಾನಗಿ ಕೇಳಲು ಬಂದ. ಪೋಜುದಾರ ಅವನನ್ನು ಕೇಳಿದ. ಅವನು “ಛೇ ಛೇ ಖೂನಿ ಆಗಿದ್ದರೆ ಸೂತಕ ಆಗುತ್ತಿತ್ತು. ಸೂತಕದಲ್ಲಿ ಕರಿಬೇಟೆ ಹಬ್ಬ ಆಚರಿಸಲು ಬರುವುದಿಲ್ಲವೆಂದು, ಊರಲ್ಲಿ ಸೂತಕ ಇಟ್ಟುಕೊಂಡು ಕರಿಬೇಟೆಯ ನೈವೇದ್ಯವನ್ನು ಕರಿಮಾಯಿಗೆ ನೀಡಿದರೆ “ತಾಯಿ ಸುಮ್ಮನಿದ್ದಾಳೇನ್ರೀ ಸಾಹೇಬರಽ” ಎಂದೂ ಅಂದ. ಕರಿಮಾಯಿ ಬೆಂಕಿ ಕೆಂಡದಂಥವಳು. ಹೈಗೈ ಆದರೆ ನಾವೂ ಇಲ್ಲ ನೀವೂ ಇಲ್ಲ. “ಈಗ ನಿಂಗೂನ ಗುಡಿಸಲ ನೋಡಬೇಕು” ಎಂದ. ನಾಳೆ ಮುಂಜಾನೆ ಹೋಗೋಣವೆಂದು ಗೌಡ, ಈಗಲೇ ಹೋಗಬೇಕೆಂದು ಫೌಜದಾರ ಎದ್ದ.
ರಾತ್ರಿಯೇ ತೋಟಕ್ಕೆ ಹೋದರು. ಹಿಂಡು ಜನ ಬೆನ್ನುಹತ್ತಿದರು. “ಬೆಂಕೀ ಹಚ್ಚಿದ ಗುಡಿಸಲೆಲ್ಲಿ” ಎಂದು ಪೋಜುದಾರ ಕೇಳಿದ. ಎಲ್ಲೀ ಬೆಂಕಿ ಏನು ಕತೆ? ಇದೇ ನಿಂಗೂನ ತೋಟ, ಇದೇ ಗುಡಿಸಲು ಎಂದು ಗೌಡ ಹೇಳಿದ. ಪೋಜುದಾರನಿಗೆ ಇದ್ದದೂ ಹಣಕಲಾಯಿತು, ತಿರುಗಿ ಬಂದರು.
ಗೌಡನ ಮನೆಯಲ್ಲಿ ಊಟಕ್ಕೆ ಕೂತರು. ಹ್ಯಾಗೂ ಬೇಟೆಯ ಪಲ್ಯ ಇತ್ತು. ಅಸಲ ಸೆರೆಯಿತ್ತು. ಅದು ಒಳಕ್ಕೆ ಇಳಿಯಲಾರಂಭಿಸಿದಂತೆ ಪೋಜುದಾರನ ತಲೆ ತೂಗಲಾರಂಭಿಸಿತು. ಇತ್ತ ಹುಡುಗರ ಹಾಡು, ಕುಣಿತ ಸುರುವಾಯಿತು. ಬಹುಶಃ ನಿರಾಸೆಯಿಂದಿರಬೇಕು. ಪೋಜುದಾರನ ತಲೆ ತಿರುಗಿತು. “ನಿಲ್ಲಿಸ್ರಿ ಅದನ್ನ” ಎಂದು ಊಟ ಮಾಡುತ್ತಲೇ ಕಿರುಚಿದ. ಗೌಡ ನಿಧಾನವಾಗಿಯೇ ಹೇಳಿದ.
“ಅದನ್ನ ನಿಲ್ಲಿಸಾಕ ನಾನಾಗಲಿ ನಿಮಗಾಗಲಿ ಹಕ್ಕಿಲ್ಲರೀ ಸಾಹೇಬರ”
“ಏ, ಗೌಡಾ, ನನಗೆ ಕಾಯ್ದೆ ಹೇಳಿಕೊಡ್ತಿ ಏನಲೇ? ಊರ ಗೌಡಾಗಿ, ಊರಾಗ ದೋ ಪಾರ್ಟಿ ಇಟಗೊಂಡು ಖೂನಿ ಮಾಡಿಸಿಕೊಂತ….
“ಯಾವ ದೋ ಪಾರ್ಟಿ? ಎಲ್ಲಿ ಖೂನಿ? ಏನ ಸಾಹೇಬರ, ಏನಂಬೋ ಮಾತಿದು?”
“ನನಗ್ಗೊತ್ತಲೇ ಚೇರ್ಮನ್ ಪಾರ್ಟಿ ಮಂದೀನ ಇಂದ ಹಬ್ಬದ ನೆವದಾಗ ನಾಯಕರ ಹುಡುಗರ ಕಡಿಂದ ಬಡಸಬೇಕಂತ….”
ಎಲ್ಲ ಅರೆಮಾತುಗಳಾಗಿದ್ದರಿಂದ ಗುಡಸೀಕರ ಏನೇನು ಹೇಳಿದ್ದಾನೋ ಎಂದು ಗೌಡನಿಗೂ ದಿಗಿಲಾಯಿತು. ಕ್ರಮಬದ್ಧವಾಗಿ ಪೋಜುದಾರನ ಜೊತೆಮಾತಾಡುವುದೂ ಸಾಧ್ಯವಿರಲಿಲ್ಲ. ಮತ್ತೆ ಪೋಜುದಾರನೇ ಬಾಯಿಬಿಟ್ಟ-
“ನೋಡಾ ಗೌಡಾ, ಊರಾಗ ಹೊಡೆದಾಟ ಆಗೋ ಛಾನ್ಸ್ ಇದ್ದಾಗ ಇಂತಾ ಹಬ್ಬಾ ಮಾಡಾಕ ಕೊಡಬಾರದಂತ ಗೊತ್ತಿಲ್ಲ ನಿನಗ? ನಿಲ್ಲಿಸ ಮೊದಲ….”
“ಸಾಹೇಬರ ಹೊಡೆದಾಟ ಬಡಿದಾಟ ಅದರ ಆ ಜವಾಬ್ದಾರೀ ನಂದು. ತಮ್ಮ ಪಾಡಿಗೆ ತಾವ ಹಾಡಿಕೊಂಡ ಕುಣೀತಾವ. ನೀವು ಆರಾಮ ನಿದ್ದೀ ಮಾಡರಿ.”
ಎಂದ ಗೌಡ. ಪೋಜುದಾರನ ನೆತ್ತರು ಕುದಿಯಲಾರಂಭಿಸಿತು. ಒಳಗಿನ ದೇಸೀ ದೇವಿ ತುಳುಕಲಾರಂಭಿಸಿದಳು. ತನ್ನ ಮುಂದೆ ಈ ಹಳ್ಳೀ ಗೌಡನ ಸೊಕ್ಕೆಷ್ಟು ಅಂದ. ಕೈತೊಳೆದು ಎದ್ದವನೇ ತೂರಾಡುತ್ತ ಬಾಗಿಲು ತೆಗೆಯಹೋದ. ಹೊರಗಡೆಯಿಂದ ಚಿಲಕ ಹಾಕಿದ್ದರು. ಬಾಗಿಲು ಎಳೆದ, ಜಗ್ಗಿದ, ಒದ್ದ, ಕಾಲಿಗೆ ಪೆಟ್ಟು ತಾಗಿ ತಿರುಗಿ ಎಲ್ಲೇ ಇದ್ದ ಹಾಸಿಗೆಯ ಮೇಲೆ ಕೂತ. ‘ಬಾಗಲಾ ತೆಗಿಸಲೇ’ ಎಂದು ಒಂದೆರಡು ಬಾರಿ ಕಿರಿಚಿದ. ಪೋಲೀಸರಿಬ್ಬರೂ ಅತ್ತಿತ್ತ ಅಲೆದಾಡಿ ಹೊರಕ್ಕೆ ಹೋಗಲು ದಾರಿಯಿದೆಯೇ ನೋಡಿದರು. ಯಾರಾದರೂ ಹಾದಾಡುತ್ತಿದ್ದರೆ ಕರೆಯಬೇಕೆಂದು ಕಿಟಿಕಿಯಿಂದ ಇಣಿಕುತ್ತ ಚಡಪಡಿಸಿದರು.
ಗೌಡ ಇವರ ಒದ್ದಾಟ ನೋಡದಾದ. ಇವನ ನೆಮ್ಮದಿ ನೋಡಿ ಪೋಜುದಾರನ ನೆಮ್ಮದಿ ಹದಗೆಟ್ಟಿತು.
“ಏ ಗೌಡಾ, ನಾ ಇರೋವಾಗ ಇವರು ಹೆಂಗ ಹಬ್ಬ ಮಾಡತಾರ ನೋಡತೀನಿ, ನಿನ್ನೂ ನೋಡಿಕೋತೀನಿ….”
ಗೌಡ ಅದೇ ಸಮಾಧಾನದಿಂದ ಹೇಳಿದ-
“ಸಾಹೇಬರ, ಈ ಊರಿನ ನರ ನಿಮಗ್ಗೊತ್ತಿಲ್ಲರಿ”
“ಏ, ಇದು ನನ್ನ ಆಳಿಕಿ ಊರೋ…”
“ಅಲ್ಲ ಸಾಹೇಬರ, ನನ್ನ ಆಳಿಕೀದು. ನಾವೇನಾದರೂ ತಪ್ಪು ಮಾಡಿದರ ನಿಮ್ಮ ಆಳಿಕಿ. ಈಗ ಹಂತಾ ತಪ್ಪೇನು ಆಗಿಲ್ಲ. ಅಷ್ಟೂ ಮೀರಿ ನಿಮ್ಮ ಆಳಿಕಿ ತೋರಸ್ತೇವಂದರ, ನೋಡ್ರೀ, ಮೊದಲ ಹೇಳಿರತೀನಿ. ಅವು ಮೊದಲ ಹರೇದ ಸೊಕ್ಕೇರಿದ ಹುಡುಗರು, ಕಾಡ ಅಡ್ಡಾಡಿ ಬ್ಯಾಟಿ ತಂದಾವ, ಕುಡದ್ದಾವ. ಊರ ಸೂಳೇರಾಗಿದ್ದರ ಹೆಂಗೋ ನಡೀತಿತ್ತು; ಪರವೂರ ಸೂಳೇರ ಬಂದಾರ, ಅವರ ಮುಂದ ಕುಣ್ಯಾಕ ಹತ್ಯಾವ. ಅವರನ್ನ ನೀವು ಹೋಗಿ ತಡವಿದರ, ಖರೇ ಹೇಳತೀನ್ರಿ-ಮುಂದಿನ ಹೋನಾರಕ್ಕ ನಾನಂತೂ ಜವಾಬ್ದಾರಲ್ಲ.”
-ಅಂದ. ಪೋಜುದಾರನ ಬಾಯಿ ಬಂದಾಯಿತು, ಮಲಗಿದ. ಅಷ್ಟರಲ್ಲಿ ಪೋಜುದಾರ ನಿದ್ದೆ ಮಾಡುವುದನ್ನು ನೋಡಿದ ಪೋಲೀಸರು ತಾವೂ ಮಲಗಿಕೊಂಡರು. ಗೌಡ ಅವರನ್ನು ನೋಡಿ ಒಳಗೊಳಗೇ ನಕ್ಕ. ಎದ್ದು ಬಂದು ಕಿಟಕಿಯಲ್ಲಿ ಹಣಕಿ ಹಾಕಿದ. ದೂರದಿಂದ ಲಗುಮವ್ವನ ದನಿ ಹುಡುಗರ ಹುಯ್ಲಿನೊಂದಿಗೆ ಕೇಳಿ ಬರುತ್ತಿತ್ತು:
ಬ್ಯಾಟಿ ಬ್ಯಾಟಿಯನಾಡಿದಾ |
ಬ್ಯಾಡರ ಹುಡುಗ
ಕಾಡ ಬ್ಯಾಟಿಯನಾಡಿದ ||
ಇಲ್ಲಿ ನಿಂತುಕೊಂಡೇ ಅವಳ ತುಳುಕಾಟ ಊಹಿಸಿದ. ಸೆರೆ ಸುರಿದ ಹಾಗೆ ಊರೆಲ್ಲ ಬೆಳ್ದಿಂಗಳಿಂದ ತೊಯ್ದು ಹೋಗಿತ್ತು. ಕೈಕಾಲು ಅಲುಗಿಸಲೂ ಆಗದಷ್ಟು ನಶೆಯೇರಿ ತೇಲುಗಣ್ಣ ಜೋಕಾಲಿಯಲ್ಲಿ ತೇಲುತ್ತ ಹಳ್ಳಿಗೆ ಹಳ್ಳೀಯೇ ಬಾಯಿಂದ ಸೆರೆ ಸಾಕಾಗಿ, ಈಗ ಕಿವಿಯಿಂದ ಹಾಡನ್ನು ಕೇಳುವಂತಿತ್ತು. ಪೋಜುದಾರ ಬಂದಾಗ ಊರು ಗಾಬರಿಯಾದದ್ದು ನಿಜ, ಬೆರಗಾದದ್ದು ನಿಜ. ಆದರೆ ಕುಡಿದ ಬೆಳ್ದಿಂಗಳು ಅಂಗಾಲಿನ ತನಕ ಇಳಿದ ಮೇಲೆ ಮತ್ತೆ ಮೊದಲಿನ ತನ್ನ ಸಹಜ ಸ್ಥಿಗೆ ತಲುಪಿತು. ಬದುಕಿನ ಬಗೆಗಿನ ಅದೇ ಉತ್ಸಾಹ ಉಕ್ಕತೊಡಗಿತು. ಪೋಲೀಸರು ಈ ಹಳ್ಳಿಗೆ ಬಂದುದು ಇದೇ ಪ್ರಥಮ ಸಲವೂ ಅಲ್ಲ. ಹಿಂದೆ ಎರಡು ಮೂರು ಬಾರಿ ಸ್ವಾತಂತ್ರ್ಯ ಚಳುವಳಿಗಾರರನ್ನು ಹುಡುಕುವ ನೆಪದಲ್ಲಿ ಬಂದಿದ್ದರು. ಹೇಗೆ ಬಂದರೂ ಹೊರಗಿನವರು ಹೊರಗೇ ಉಳಿದಿದ್ದರು.
ಪೋಜುದಾರನಿಗೆ ಎಚ್ಚರಾದಾಗ ಮುಂಜಾನೆ ಬೆಳ್ಳಂಬೆಳಗಾಗಿತ್ತು. ಎದ್ದ, ಬಾಗಿಲು ತೆರೆದಿತ್ತು. ‘ಗೌಡ, ಕುಲಕಣ್ಣಿ ಎಲ್ಲಿ?’ ಎಂದು ಹಳಬನನ್ನು ಕೇಳಿದ. ಚಾವಡಿಯಲ್ಲಿ ತಮ್ಮಗಾಗಿ ಕಾಯುತ್ತಿದ್ದಾರೆ ಎಂದನವ. ಬೆಳಗಿನ ವಿಧಿಗಳನ್ನು ಪೂರೈಸಿ ಚಾವಡಿಗೆ ಹೋದ. ಆಗಲೇ ಗೌಡ ನಿನ್ನೆ ರಾತ್ರಿ ಮನೆಯಲ್ಲಿ ನಡೆದುದನ್ನು ದತ್ತಪ್ಪನಿಗೆ ಹೇಳಿ ನಗಾಡುತ್ತಿದ್ದ. ಪೋಜುದಾರ ಬಂದವನೇ ಅವರನ್ನು ಕರೆದುಕೊಂಡು ಇನ್ನೊಮ್ಮೆ ನಿಂಗೂನ ತೋಟಕ್ಕೆ ಹೋದ. ಅದೇ ನಿಂಗೂನ ಗುಡಿಸಲು ಎಂದು ಖಾತ್ರಿ ಮಾಡಿಕೊಂಡ.
ಅದೆ ಗುಡಿಸಲು ಹಾಗೇ ಇತ್ತು. ಗುಡಸೀಕರ ಬೆಳಗಾಂವಿಗೆ ಹೋದೊಡನೆ ಗೌಡ ಗುಡಿಸಲನ್ನು ಸುಡಿಸದೆ ಹಾಗೇ ಇಟ್ಟಿದ್ದ. ಹೆಣ ಮಣ್ಣು ಮಾಡಿಸಿದ್ದ. ಗುಡಿಸಲನ್ನು ಹಸನು ಮಾಡಿಸಿ ಯಥಾಸ್ಥಿತಿಗೆ ತಂದಿದ್ದ. ಅದೀಗ ಎಷ್ಟು ಸಹಜವಾಗಿತ್ತೆಂದರೆ ಅಲ್ಲಿ ಖೂನಿಯಾಯಿತೆಂದು ಪೋಜುದಾರನಿಗೇನು, ಸ್ವತಃ ಆ ಊರಿನವನೂ ನಂಬಲಾಗುತ್ತಿರಲಿಲ್ಲ.
ತಿರುಗಿ ಚಾವಡಿಗೆ ಬಂದು ಗುಡಸೀಕರನಿಗೆ ಬುಲಾವ್ ಕಳಿಸಿದ. ಅವನು ಇಲ್ಲವೆಂದು ತಿಳಿಯುತ್ತಲೂ ನಿನ್ನೆಯ ಸಿಟ್ಟೆಲ್ಲ ಅವನ ಮೇಲೆ ತಿರುಗಿತು. ಅವನೇ ಬಂದು ಊರಲ್ಲಿ ದೋ ಪಾರ್ಟಿ ಉಂಟೆಂದೂ, ತನ್ನ ಪಾರ್ಟಿಯವನನ್ನು ಗೌಡನ ಪಾರ್ಟಿಯ ನಿಂಗೂ ಕೊಂದು ಗುಡಿಸಲಲ್ಲಿಟ್ಟು ಬೆಂಕೀ ಹಚ್ಚಿ ಸುಟ್ಟನೆಂದೂ ಇದಕ್ಕೆ ಗೌಡನ ಬೆಂಬಲವಿತ್ತೆಂದೂ, ಇಂದಿನ ಹಬ್ಬದ ದಿನ ಅನೇಕರ ಖುನಿ ಆಗಲಿವೆಯೆಂದೂ ವಕೀಲಿ ಓದಿದ್ದರೂ ದಡ್ಡತನದಿಂದ ಬಾಯಿಗೆ ಬಂದದ್ದನ್ನೆಲ್ಲ ಒದರಿ ಬರೆದುಕೊಟ್ಟಿದ್ದನಂತೆ. ಅದನ್ನೆಲ್ಲ ಹೇಳಿ ಪೂಜುದಾರ, ಅವನೇನು ಕಮ್ಮಿ?- ಬಾಯಿಗೆ ಬಂದ ಹಾಗೆ ಬಯ್ದು ಹೊರಟ. ಹಾಲು ಕುಡಿದು ಹೋಗಬೇಕೆಂದು ಗೌಡ ವಿನಂತಿಸಿಕೊಂಡ. ನಾಲ್ಕೈದು ತತ್ತೀ ಒಡೆದು ತಿಂದು ಚರಿಗೆ ಹಾಲು ಕುಡಿದು ಪೋಜುದಾರ ಜೀಪು ಹತ್ತಿದ. ಪೀಡೆ ಹೋಯಿತು. ಅವನು ಅತ್ತ ಹೋದೊಡನೆ ಸೀರೆ ಉಟ್ಟ ನಿಂಗೂನ್ನ ನೋಡಿ ಗೌಡ, ದತ್ತಪ್ಪ “ಹೋ, ಹೋ’ ಎಂದು ನಕ್ಕರು.
ನಿನ್ನೆ ನಿಂಗೂನ್ನ ಚಡಪಡಿಕೆ ನೋಡಲಾರದೆ ಲಗಮವ್ವ “ಕರಿಮಾಯಿಗೆ ಬೇಡಿಕೊ. ಪಾರ ಮಾಡುತಾಳು” ಎಂದಿದ್ದಳಂತೆ. ನಿಂಗೂ ಅವಳು ಹೇಳಿದಂತೆಯೇ “ಹಡದವ್ವಾ, ಇದರಿಂದ ನನ್ನ ಪಾರುಮಾಡು, ಸೀರೀ ಉಟ್ಟ ನಿನ ಮುಂದ ಕುಣಿತೀನು” ಎಂದು ಬೇಡಿಕೊಂಡನಂತೆ. ಹೀಗೆ ಹರಕೆ ಹೊತ್ತವನು ಕರಿಮಾಯಿ ಪಾರುಮಾಡುವ ತನಕ ಕೂಡ ಕಾಯದೆ ಸೀರೆ ಉಟ್ಟುಬಿಟ್ಟಿದ್ದ. ಕರಿಮಾಯಿಯ ಮಹಿಮೆಗೆ ಏನೆನ್ನೋಣ! ಅದರಿಂದ ಅವನಿಗೆ ಲಾಭವೇ ಆಗಿತ್ತು.
ಹೊರಗಿನ ಪೀಡೆ ಹೋಯಿತೇನೋ ನಿಜ. ಆದರೆ ಗುಡಸೀಕರನ ಮನಸ್ಸಿನಲ್ಲಿ ಸೇಡುಳಿಯಿತು. ಆ ದಿನ ಪೋಜುದಾರನೊಂದಿಗೆ ಅವನೂ ಜೀಪಿನಲ್ಲಿ ಬಂದಿದ್ದ. ಆದರೆ ಜನಗಳನ್ನು ಎದುರಿಸಲಾರದೆ ದೂರದಲ್ಲೇ ಇಳಿದು ಕಳ್ಳದಾರಿಯಿಂದ ಮನೆಸೇರಿದ್ದ. ಮಾರನೇ ದಿನ ಮುಂಜಾನೆ ಪೋಜುದಾರನ ಬುಲಾವ್ ಬಂದಾಗ ಮನೆಯಲ್ಲಿದ್ದರೂ ಇಲ್ಲವೆಂದು ತಂಗಿಯಿಂದ ಹೇಳಿಸಿದ್ದ. ಅಂದೇ ರಾತ್ರಿ ತಲೆಮರೆಸಿಕೊಂಡು ಬೆಳಗಾವಿಗೆ ಹೋಗಿ ಎಂಟು ದಿನ ಇದ್ದು ಊರಿಗೆ ಬಂದ. ಅವಮಾನದಿಂದ ವಿಕಾರಗೊಂಡ ಅವನ ಮುಖವನ್ನು ಗುರುತಿಸುವುದೇ ಕಷ್ಟವಾಗಿತ್ತು. ಬಂದಮೇಲೂ ತಾನೇನೂ ಮಾಡಿಲ್ಲದವನಂತೆ ಭಂಡತನದಿಂದಲೇ ಇದ್ದ. ಜನ ಅನ್ನುವಷ್ಟು ಅಂದು ಸುಮ್ಮನಾದರು.
ಗೌಡ ಗುಡಸೀಕರನ ಬಗ್ಗೆ ಯೋಚಿಸಲೇಬೇಕಾಗಿತ್ತು. ಹುಡುಗ ಯಾವುದನ್ನೂ ತನ್ನ ಮೂಗಿನ ನೇರದಿಂದಲೇ ನೋಡುತ್ತಿದ್ದ. ಹಾಗೆ ನೋಡಿದಾಗ ಎದುರಿಗೆ ಏನಿದ್ದರೂ, ಊರು ಸಹ ಎರಡಾಗಿ ಕಾಣಿಸುತ್ತಿತ್ತು. ನಂತರ ಬಂದ ಹೋಳಿ ಹಬ್ಬದಲ್ಲಿ ಇದು ಗೌಡನಿಗೂ ಖಾತ್ರಿಯಾಗಿ ಬಿಟ್ಟಿತು.
ಹೋಳೀ ಹಬ್ಬ
ಶಿವಪುರದ ಪಾಲಿಗೆ ಗಂಡಸರ ಹಬ್ಬವೆಂದರೆ ಇದೊಂದೇ. ಈ ಊರ ಹೋಳಿಹುಣ್ಣೀಮೆಯೆಂದರೆ ಸುತ್ತ ಹದಿನಾಲ್ಕು ಹಳ್ಳಿಗೆಲ್ಲ ಪ್ರಸಿದ್ಧವಾಗಿತ್ತು. ಗಂಡಸರು ಸಂಕೋಚವಿಲ್ಲದೆ ಹಿರಿನಿಂಗ ಕಿರಿನಿಂಗನ್ನೋ ಬೇಧವಿಲ್ಲದೆ ಹಬ್ಬದಲ್ಲಿ ಭಾಗವಹಿಸುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು ಅಥವಾ ಊರಿನ ಮದುವೆಯಾಗದ ಉಡಾಳರಿಗೂ, ಸೂಳೆಯರ ತಂಡಕ್ಕೂ ಹಾಡಿನ ಜಿದ್ದಾ ಜಿದ್ದಿ ಸ್ಪರ್ಧೆಯಾಗುತ್ತದಲ್ಲ ಅದಕ್ಕಿರಬಹುದು. ಅಥವ ಹೀಗೂ ಇರಬಹುದು; ಗೋಕಾವಿ ಕರದಂಟು, ತುಕೋಳ ತಂಬಾಕು, ನಿಪ್ಪಾಣಿಬೀಡಿ- ಹೀಗೆ ಒಂದೊಂದೂರು ಒಂದೊಂದಕ್ಕೆ ಪ್ರಸಿದ್ಧವಾದಂತೆ ಶಿವಪುರದ ಸೂಳೆ ಎಂಬ ಮಾತು ಇರೋಣದರಿಂದ ಸಹಜವಾಗಿಯೇ ಇಲ್ಲಿಯ ಸೂಲೆಯರು ಚೆಲುವೆಯರು. ಅಷ್ಟೇ ಯಾಕೆ ಒಬ್ಬ ಜನಪದ ಕವಿಯ ಪ್ರಕಾರ-
ಇಡೀ ಜಗತಾಗ ಎಲ್ಲೂ ಇಲ್ಲರಿ
ಇಂಥಾ ಮೋಜಿನ ಹುಡುಗೇರಾ ||
ತುಂಬ ನಿತಂಬಾ ಹುಬ್ಬ ಕುಣಿಸತಾರ
ನಿಂತಲ್ಲೆ ಬೆವರ್‍ಯಾರ ಪೈಲ್ವಾನರಾ ||
ತೊಡಿಗೋಳ ಹುರಿಮಾಡಿ ಉಸರ ಹಾಕತಾರ
ಬಾಸಿಂಗ ಕಾಣದ ಹುಡುಗೋರಾ ||
ಏನಂತ ಹೇಳಲಿ ಶಿವಾಪುರ ಸೂಳೇರ
ಅಸಲ ಸೊಂಟದ ಸಡಗರಾ ||
-ಎಂದೂ ಇರುವುದರಿಂದ ಇದೂ ಕಾರಣವಾಗಿರಬಹುದು. ಅಥವಾ ಬೇರೆ ಕಾರಣಗಳು ಇರಬಹುದು. ಅಂತೂ ಈ ಊರ ಹೋಳೀ ಹಬ್ಬ ಪ್ರಸಿದ್ಧವೆಂಬುದಂತೂ ನಿಜ.
ಇದು ಈ ಊರವರಿಗೂ ತಿಳಿದದ್ದೆ. ಆದರಿಂದಲೇ ಹೋಳೀ ಹುಣ್ಣಿಮೆ ಇನ್ನೂ ಹತ್ತು ಹನ್ನೆರಡು ದಿನ ಇರುವಾಗಲೇ ಊರಿನ ಜನ ಮಾನಸಿಕ ಸಿದ್ಧತೆ ಮಾಡಿಕೊಳ್ಳುತ್ತಾರೆ. ತದಿಗೆಯ ಚಂದ್ರನನ್ನು ನೋಡಿದೊಡನೆ ಮಕ್ಕಳೆಲ್ಲ ಓಣಿಯಲ್ಲಿ ಸೇರಿ ಹೊಯ್ಕೊಳ್ಳತೊಡಗುತ್ತವೆ. ಒಂದೆರಡು ಗಂಟೆ “ಹೊಯ್ಕೊಳ್ಳುವ ಸೇವೆ” ಮಾಡಿ, ಮಂದಿ ಮಲಗಿದ ಮೇಲೆ ಪಕ್ಕದ ಹಿತ್ತಲಗಳಿಗೆ ಹಾರಿ ಕುಳ್ಳು (ಬೆರಣಿ) ಕಟ್ಟಿಗೆ ಕದ್ದು ಹಾಳು ಮನೆಯಲ್ಲಿ ಸಂಗ್ರಹಿಸಿ ಮಲಗಲಿಕ್ಕೆ ಹೋಗುತ್ತವೆ. ಹುಣ್ಣಿಮೆ ಬರುವವರೆಗೆ ಪ್ರತಿರಾತ್ರಿ ಈ ಕಾರ್ಯಕ್ರಮ ಚಾಚೂ ತಪ್ಪದೆ ನಡೆಯುತ್ತದೆ.
ವಯಸ್ಸಿನಲ್ಲಿ ಇವರಿಗಿಂತ ದೊಡ್ಡ ಹುಡುಗರು, ಆದರೆ ಮದುವೆಯಾಗದವರು, ಕರಿಮಾಯಿಯ ಗುಡಿಯಲ್ಲಿ ರಾತ್ರಿ ಸೇರಿ ಹಳೆಯ ಹೋಳೀ ಪದ ಜ್ಞಾಪಿಸಿಕೊಳ್ಳುತ್ತ, ಹೊಸ ಪದ ಹೊಸೆಯತೊಡಗುತ್ತಾರೆ. ಈ ಹಬ್ಬವನ್ನು ಒಟ್ಟು ಎರಡು ದಿನ ಆಚರಿಸುತ್ತಾರೆ. ಹುಣ್ಣಿಮೆಯ ದಿನ ಗೌಡನ ನೇತೃತ್ವದಲ್ಲಿ ಹಿರಿಯರು, ಪಂಚರು ವಾದ್ಯ ಸಮೇತ ಕಾಡಿಗೆ ಹೋಗಿ ಎಸಳಾದ ಮರದ ಟೊಂಗೆಯೊಂದನ್ನು ಕಡಿದು ತಂದು ಕರಿಮಾಯಿಯ ಗುಡಿಯ ಮುಂದೆ ನಿಲ್ಲಿಸುತ್ತಾರೆ. ಮಕ್ಕಳು ಕದ್ದು ತಂದ ಕುಳ್ಳು ಕಟ್ಟಿಗೆಗಳನ್ನೆಲ್ಲ ತಂದು ಅದರ ಸುತ್ತ ಗುಂಪಿ ಹಾಕುತ್ತಾರೆ. ಆ ದಿನ ಮನೆಯಲ್ಲಿ ಹೋಳಿಗೆಯೂಟ, ರಾತ್ರಿ ಊರಿನ ಉತ್ಸಾಹಿಗಳು ತಯಾರು ಮಾಡಿದ ಆಟ, ಮೋಜು, ಸೋಗು ನಡೆಯುತ್ತವೆ.
ಮಾರನೇ ದಿನವೇ ಧೂಳವಾಡ. ಹೊತ್ತು ಹುಟ್ಟುವ ಮುಂಚೆಯೇ ಗೌಡನ ನೇತೃತ್ವದಲ್ಲಿ ಜನರೆಲ್ಲ ಕಾಮನನ್ನು, ಅರ್ಥಾತ್ ಮರದ ಟೊಂಗೆಯನ್ನು ನಿಲ್ಲಿಸಿದ ಸ್ಥಳಕ್ಕೆ ವಾದ್ಯ ಸಮೇತ ಬರುತ್ತಾರೆ. ಅವರೆಲ್ಲ ಕಾಮನ ಸುತ್ತ ಗಿಹಿಗಿಟ್ಟುತ್ತ ನಿಂತ ದೃಶ್ಯ ನೋಡಬೇಕು. ಒಬ್ಬರ ಮೈಮೇಲೂ ಸರಿಯಾಗಿ ಬಟ್ಟೆ ಇರುವುದಿಲ್ಲ. ಒಬ್ಬೊಬ್ಬರೂ ಈ ಹಬ್ಬಕ್ಕೆಂದೇ ಇಟ್ಟ ಹಳೇ, ಹರಿದ ಚಿಂದಿ ಬಟ್ಟೆಗಳನ್ನು ಹೊರತೆಗೆದು ಹಾಕಿಕೊಂಡಿರುತ್ತಾರೆ. ಸೊಂಟದ ಸುತ್ತ ಚಿಂದಿ ಬಟ್ಟೆಯ ಹಿಂಡು ಹಿಂಡು ಗಂಡಸರು ಬಾಯ್ಗೆ ಕೈ ಒಯ್ಯುವ ಅವಸರದಲ್ಲಿರಲು, ಮುದುಕರು ಲಗಮವ್ವನ ನಿತಂಬಗಳನ್ನೇ ನೋಡುತ್ತ ಹಳೆಯ ಕಾಲ ನೆನಪಿಸಿಕೊಂಡು ಸಂಭ್ರಮದಲ್ಲಿರಲು, ನೋಟ ಕಾಣದೆ ಅವಕಾಶ ಸಿಕ್ಕಲ್ಲಿ ನುಸುಳುತ್ತ ಸಣ್ಣ ಮಕ್ಕಳು ಚಡಪಡಿಸುತ್ತಿರಲು ಗೌಡ ಕಾಮನ ಗುಂಪಿಗೆ ಬೆಂಕಿ ಹಚ್ಚುತ್ತಾನೆ. ಕೂಡಲೇ ಎಲ್ಲರೂ ಅಕ್ಷರಶಃ ದನಿ ಮುಗಿಲು ಮುಟ್ಟುವ ಹಾಗೆ ಲಬೋ ಲಬೋ ಅಂತ ಹೊಯ್ಕೊಳ್ಳುತ್ತಾರೆ. ವಾದ್ಯದವರು ವಾದ್ಯ ಬಾರಿಸುತ್ತಾರೆ. ಅವರು ಹೊಯ್ಕೊಳ್ಳುವುವುದರ ಮೇಲಿಂದಲೇ ಬೇಕಾದರೆ ಅವರವರ ವಯಸ್ಸು ಹೇಳಿ ಬಿಡಬಹುದು. ಮುದುಕರು ಒಂದೆರಡು ಸಲ ಹೊಯ್ಕೊಂಡು ಸುಮ್ಮನಾದರೆ ನಡು ವಯಸ್ಸಿನವರು ಅವರಿಗಿಂತ ಹೆಚ್ಚು, ಮದುವೆಯಾಗದ ಹುಡುಗರು ಇನ್ನೂ ಹೆಚ್ಚು. ಮಕ್ಕಳು ನಿಲ್ಲಿಸುವುದೇ ಇಲ್ಲ.
ಅದೆಲ್ಲ ಸುಟ್ಟು ಬೂದಿಯಾದ ಮೇಲೆ ಲಗಮವ್ವ ಒಂದು ಹರಿವಾಣದಲ್ಲಿ ಬೂದಿ ತುಂಬಿಕೊಂಡು ಊರ ಸೀಮೆಯಗುಂಟ ಸಿಂಪಡಿಸಿ ಬರುತ್ತಾಳೆ. ಅಂದರೆ ಸೀಮೆಯಾಚೆಯ ರೋಗ-ರುಜಿನಾದಿಗಳು ಊರಿಗೆ ಬರುವುದಿಲ್ಲವೆಂದೂ, ಆ ಭಾಗ ಧನ-ಧಾನ್ಯಗಳಿಂದ ತುಂಬಿ ತುಳುಕುವಿದೆಂದೂ ನಂಬಿಕೆ. ಇಷ್ಟೊತ್ತಿಗಾಗಲೇ ಹೊತ್ತು ಮೂರು ಮಾರು ಏರಿರುತ್ತದೆ. ಸೀಮೆ ಕಟ್ಟಿದ ಲಗಮವ್ವ ಸೀದಾ ಹೊಲಗೇರಿಗೆ ಹೋಗಿ ಸೂಳೆಯರನ್ನೆಲ್ಲ ಕಲೆಹಾಕಿ ಗುಡಿಗೆ ಹೊರಡುತ್ತಾಳೆ. ಹಾಡಿನ ಜಿದ್ದಾದ ಮೇಲೆ ಬಣ್ಣ ಗೊಜ್ಜಾಡಬೇಕಲ್ಲ, ಸೂಳೆಯರು ಸಾಮಾನ್ಯವಾಗಿ ಹರಕು ಸೀರೆ ಉಟ್ಟಿರುತ್ತಾರೆ. ಅವರ ಸೀರೆ ಎಷ್ಟೆಷ್ಟು ಹರಿದಿದ್ದರೆ ರಸಿಕರ ಬಾಯಿ ಅಷ್ಟಷ್ಟು ತೆರೆದಿರುತ್ತವೆ.
ಹಾಗೆ ಇವರ ತಂಡ ಗುಡಿಯ ಕಡೆ ಹೊರಟಾಯಿತು. ಹುಡುಗರು ತಂಡತಂಡವಾಗಿ ಹೊಯ್ಕೊಳ್ಳುತ್ತ ಬೆನ್ನು ಹತ್ತುತ್ತಾರೆ. ಮಧ್ಯೆ ಮಧ್ಯೆ ಅವರಿಗೂ ಇವರಿಗೂ ಹ್ಯಾವದ ಮಾತು, ದೀಡೀ ದಿಕ್ಕಟ್ಟು, ಕುಚೇಷ್ಟೆಗಳು, ಕೊಡುಕೊಳೆ ನಡೆದಿರುತ್ತದೆ, ಉದಾ: “ಏಳೂರು ನೀರು ಕುಡಿದಲ್ಲದ ಈ ಮಣಕಿನ ಬೆದಿ ನಿಲ್ಲಾಣಿಲ್ಲಲೇ” ಎಂದು ಗಂಡು ಹಿಂಡಿನಿಂದ ಮಾತು ಬಂದರೆ “ಅಯ್ಯ, ತೊಯ್ಸಿಕೊಂಡ ಕಾಗೀ ಹಾಂಗ ಮಾರಿ ಮಾಡಿಕೊಂಡ ಎಷ್ಟ ಮಾತಾಡತೈತಿ ನೋಡಽ” ಎಂದು ಆ ಕಡೆಯಿಂದ ಬರುತ್ತದೆ. “ಹಿಡಿದ ಹಿಂಡಿದರ ಮೈಯಾಗ ತಟಕ ರಸ ಇಲ್ಲ; ಬಾಯಿ ನೋಡ ವಟ ವಟಾ” ಎಂದು ಈ ಕಡೆಯಿಂದ ಬಂದರೆ “ಸೀರೀ ಮರೀಗಿ ಸಿಂಬಳಾ ಒರಸತಾಳ, ಗಲ್ಲ ಕಡದರ ಗುಲ್ಲ ಮಾಡತಾಳ, ಯಾರಲೇ ಹುಡುಗಾ?” ಎಂದೊಂದು ಚಿಗುರು ದನಿ ಮೂಡಿದರೆ ಉಳಿದ ಹಿಂಡೆಲ್ಲ ಅವರಲ್ಲಿನ ಒಬ್ಬಳ ಹೆಸರು ಹೇಳಿ ಹೊಯ್ಕೊಳ್ಳತೊಡಗುತ್ತಾರೆ. ಹೀಗೆ ಸಭ್ಯತೆಯಿಂದ ಸುರುವಾದದ್ದು ಯಾವ ಕೊನೆ ತಲುಪೀತೆಂದು ಹೇಳಲಿಕ್ಕಾಗುವುದಿಲ್ಲ. ಗುಡಿಯ ತನಕ ಇಂಥ ಕೊಂಕು ಬಾಣಗಳ ಸುರಿಮಳೆ ಹಾಗೇ ಸಾಗೇ ಇರುತ್ತದೆ.
ಪ್ರತಿಯೊಬ್ಬ ಸೂಳೆಯ ಕೈಯಲ್ಲಿ ಈ ದಿನ ಆತ್ಮರಕ್ಷಣೆಗೆ ಒಂದೊಂದು ಮುಳ್ಳಿನ ಸಿಂಧೀ ಝಳಿಕಿ ಇರುತ್ತದೆ. ಯಾಕೆಂದರೆ ಬಣ್ಣ ಗೊಜ್ಜುವಾಗ, ಹೇಳಿ ಕೇಳಿ ಶಿವಾಪುರದ ಹುಡುಗರಾದ್ದರಿಂದ ಸೊಂಟದ ವಿಷ ಇಳಿಯುವತನಕ ಅವಕ್ಕೆ ಮನುಷ್ಯರ ಮಾತೇ ತಿಳಿಯುವುದಿಲ್ಲವಾದ್ದರಿಂದ ಏನಾದೀತು, ಏನಾಗಲಿಕ್ಕಿಲ್ಲ ಎಂದು ಹೇಳಬರುವಂತಿಲ್ಲ. ಈ ಹೊತ್ತು ಯಾರೇನು ಮಾಡಿದರೂ, ಯಾರೂ, ಸ್ವತಃ ದೇವರೂ ಕೇಳಬಾರದು. ಮುದಿ ಸೂಳೆಯರಿಗಂತೂ ಕೈಕೊಟ್ಟ ಹಳೇ ಮಿಂಡರ ಸೇಡು ತೀರಿಸಿಕೊಳ್ಳುವುದಕ್ಕೆ ಇದು ಒಳ್ಳೇ ಸಂಧರ್ಭ. ಜನಗಳಲ್ಲಿ ಹಿಗ್ಗಿ ನುಗ್ಗಿ ಮೈ ನೆತ್ತರಾಡುವ ಹಾಗೆ ಸಿಂಧೀ ಝಳಕಿಯಿಂದ ಬಾರಿಸುತ್ತಾರೆ. ಅವರು ತಾಕತ್ತಿದ್ದರೆ ಎದುರಿಸುತ್ತಾರೆ; ಇಲ್ಲವೆ ಹುಡುಗರ ಹಿಂದೆ ಅಡಗಿ ಅಡಗಿ ಓಡಿಹೋಗುತ್ತಾರೆ. ಇದು ಅವರವರ ಪ್ರೀತಿ, ಸೊಕ್ಕು, ಧಿಮಾಕು, ದಿಗರಿಗೆ ಸೇರಿದ್ದು. ಯಾಕೆಂದರೆ ಏಟು ತಿಂದಷ್ಟೂ ಅದು ಹೆಮ್ಮೆ ಪಡುವ ವಿಷಯ-ಗಂಡಸರಿಗೆ.
ಗುಡಿಯ ಕಟ್ಟೆಗೆ ಬಂದಾದ ಮೇಲೆ ಹಾಡುವ ಎರಡು ತುಂಡುಗಳೂ ಎದುರು ಬದುರು ನಿಲ್ಲುತ್ತವೆ. ಮಧ್ಯದಲ್ಲಿ ಹಲಗೆಯವರು ಅರೆ ನಗ್ನರಾದ ತೆರೆಬಾಯಿ ಗಂಡು ಹಿಂಡು ಸುತ್ತ ಸೇರುತ್ತದೆ. ಚಾವಡಿ ಕಟ್ಟೆಯ ಮೇಲೆ ಗೌಡ, ಅವನ ಸುತ್ತ ಹಕ್ಕಿನವರು, ಅಂದರೆ ಪಂಚರು, ಕುಲಕಣ್ಣಿ-ಕೂರುತ್ತಾರೆ. ಗೌಡ ಹಾಡುಗಾರಿಕೆ ಸುರುವಾಗಲೆಂದು ಅಪ್ಪಣೆ ಕೊಟ್ಟ ಕೂಡಲೇ ಎರಡೂ ತಂಡದ ನೇತಾರರು ಗೌಡನಿಗೂ, ಪಂಚರಿಗೂ ನಮಸ್ಕರಿಸಿ ಸುರುಮಾಡುತ್ತಾರೆ.
ಅವರ ಮೇಲೆ ಇವರು, ಇವರ ಮೇಲೆ ಅವರು ವ್ಯಂಗ್ಯದ ಪದ ಹೇಳುತ್ತ ನಡು ನಡುವೆ ರಸಿಕರ ಕೇಕೆ, ವವ್ವಾ, ಭಲೆಗಳೊಂದಿಗೆ ಹಾಡಿನಂತ್ಯದ ಹುಡುಗರ ಹೊಯ್ಕೊಳ್ಳುವುದರೊಂದಿಗೆ ಹಾಡುಗಾರಿಕೆ ಒಂದೆರಡು ತಾಸು-ಹಾಗೆ ರಂಗೇರಿದರೆ ಇನ್ನೂ ಒಂದೆರಡು ತಾಸು ಮುಂದುವರಿಯುತ್ತದೆ. ಮುಗಿದಾದ ಮೇಲೆ ಗೌಡ ಇಬ್ಬರಿಗೂ ಖುಷಿಯಾಗಲಿ ಅಂದರೆ ಒಂದೊಂದು ರೂಪಾಯಿ ಕೊಡುತ್ತಾನೆ. ಪಂಚರೂ ಕೊಡುತ್ತಾರೆ. ಅಲ್ಲಿಗೆ ಹಿರಿಯರ ಭಾಗ ಮುಗಿಯಿತು. ಮುಂದೆ ಹುಡುಗರದೇ ಆಟ. ಸೂಳೆಯರಿಗೆ ಬಣ್ಣ ಗೊಜ್ಜುತ್ತ ಅವರಿಂದ ಸಿಂಧೀ ಗರಿಯ ಏಟು ತಿನ್ನುತ್ತ ಆಟವಾಡುತ್ತಾರೆ. ಇದು ತಲೆತಲಾಂತರದಿಂದ ನಡೆದು ಬಂದ ಪದ್ಧತಿ.
ಆದರೆ ಈ ಸಲ ಹಾಗಾಗಲಿಲ್ಲ. ಗೌದನೊಬ್ಬನನ್ನು ಬಿಟ್ಟು ಉಳಿದವರೆಲ್ಲ ಬಂದಾಗಿತ್ತು. ಗುಡಿಯ ಕಟ್ಟೆಯ ಮೇಲೆ ಹಕ್ಕಿನವರು ಕುಳಿತುಕೊಂಡು ಗೌಡನಿಗಾಗಿ ಕಾಯುತ್ತಿದ್ದರು. ಹಾಡಿನ ತಂಡದವರು ತಂತಮ್ಮಲ್ಲೆ ಹಾಡಲಿರುವ ಪದಗಳ ಹೊಳಹು ಹಾಕುತ್ತ ಸೇರಿಸಬೇಕಾದ ವಿವರಗಳನ್ನು ಚರ್ಚಿಸುತ್ತ ಗುಂಪಿನ ಮೇಲೆ ಅದರಿಂದಾಗಬಹುದಾದ ಪರಿಣಾಮಗಳನ್ನು ಕಲ್ಪಿಸಿಕೊಳ್ಳುತ್ತ ಸಂತೋಷಿಸುತ್ತಿದ್ದರು. ನಾಯೆಲ್ಯಾ ಹಲಗಿ ಕಾಸಿ ಅದರ ನಾದ ಹದ ಮಾಡತೊಡಗಿದ್ದ. ಈ ವರ್ಷ ಸೂಳೆಯರ ತಂಡದಲ್ಲಿ ದುರ್ಗಿಯಿದ್ದುದೊಂದು ವಿಶೇಷ ಆಕರ್ಷಣೆಯಾಗಿತ್ತು. ಕೆಲವರು ಆಗಾಗ ದೀಡಿ ಮಾತು ಹೇಳಿ ದುರ್ಗಿಯ ಗಮನ ತಮ್ಮ ಕಡೆ ಸೆಳೆಯುತ್ತಲೂ, ಸೆಳೆದದ್ದಕ್ಕೆ ಹೆಮ್ಮೆಪಡುತ್ತಲೂ ಇದ್ದರು. ಮಾತು ಹೊಳೆಯದ ಮಂದಮತಿಗಳು ಎಲ್ಲರಿಗಿಂತ ಜೋರಾಗಿ ನಕ್ಕು, ಹಾಗೆ ನಕ್ಕರಾದರೂ ದುರ್ಗಿಯ ಗಮನ ತಮ್ಮ ಕಡೆ ಹರಿಯುವಂತೆ ಮಾಡಲು ಖಟಪಟಿ ಮಾಡುತ್ತಿದ್ದರು. ತಡವಾದದ್ದಕ್ಕೆ ತಡೆಯದೆ ಒಂದೆರಡು ಎಳೇ ಹಸುಳೆಗಳು ತಮಗಾಗಿ ಕಾದಿರುವಂತೆ ಹೊಯ್ಕಳ್ಳಲಾರಂಭಿಸಿ ಹಿರಿಯರ “ಬಾಯ್ಮುಚ್ರೆಲೇ, ಛೀ, ಥೂ”ಗಳಿಗೆ ಪಕ್ಕಾಗಿ ಸುಮ್ಮನಾದವು.
ಅಷ್ತರಲ್ಲಿ ಗುಡಸೀಕರನ ಸವಾರಿ ಆಗಮಿಸಿತು. ಕಳ್ಳ ಸಿದ್ರಾಮ ಕೂತ, ನಿಂತ ಮಂದಿಯನ್ನು ಬದಿಗೆ ಸರಿಸಿ ಹಾದಿ ಮಾಡುತ್ತ ಮುಂದೆ ಮುಂದೆ ಬಂದ. ಹಿಂದೆ ಗುಡಸೀಕರನೂ, ಅವನ ಹಿಂದೆ ಮೆಂಬರರೂ ಬರುತ್ತಿದ್ದರು. ಬಂದವರು ಇವರೇ ಎಂದು ಗೊತ್ತಾಗಿ ಜನ ಮತ್ತೆ ಮೊದಲಿನಂತಾದರು. ಕಳ್ಳ ಸಿದ್ರಾಮನನ್ನೂ ದಾಟಿ ಗುಡಸೀಕರ ನೇರವಾಗಿ ಕಟ್ಟೆಯ ಕಡೆ ನಡೆದ. ಕಟ್ಟೆಯಾಗಲೇ ಹಕ್ಕಿನ ಕುಳಗಳಿಂದ ಭರ್ತಿಯಾಗಿತ್ತು. ಗೌಡನಿಗಾಗಿ ಜಮಖಾನೆ ಹಾಸಿ, ಹಿಂದೊಂದು ತೆಕ್ಕೆಯಿಟ್ಟು ಒಬ್ಬರು ಕೂರುವಷ್ಟು ಮಾತ್ರ ಜಾಗ ಖಾಲಿಬಿಟ್ಟಿದ್ದರು. ಗುಡಸೀಕರ ನೆಟ್ಟಗೆ ಕಟ್ಟೇಯೇರಿ ಕುಳಿತ ಕುಳಗಳನ್ನು ದಾಟಿ ಗೌಡನ ಜಾಗದಲ್ಲೇ ಕೂತುಬಿಟ್ಟ!
ಕೂತ ನಿಂತವರೆಲ್ಲ ಒಮ್ಮೆಲೇ ಒಂದು ಕ್ಷಣ ಸ್ತಬ್ಧರಾಗಿ ಆ ಕಡೆ ನೋಡತೊಡಗಿದರು. ಮೆಲ್ಲಗೆ ತಮ್ಮತಮ್ಮಲ್ಲೇ ಗುಸುಗುಸು ಸುರುಮಾಡಿದರು. ಜನ ಇದನ್ನು ನಿರೀಕ್ಷಿಸಿರಲಿಲ್ಲ. ಆಗಬಾರದ್ದು ಆಗಿಹೋದಂತೆ ಹಿರಿಯರು ಕೈ ಕೈ ಹಿಸುಕಿಕೊಂಡರು. ನಾಯೆಲ್ಯಾ ಹಲಗೆ ಹದಮಾಡುವುದನ್ನು ಬಿಟ್ಟು ಕಾಲೆತ್ತರಿಸಿ ಗೌಡನ ಸ್ಥಳದಲ್ಲಿ ಕೂತ ಸರಪಂಚನನ್ನು ನೋಡಿದ. ದತ್ತಪ್ಪನ ಮುಖದ ಮೋಜು ಮಾಯವಾಯಿತು.
ಎಲ್ಲರ ಕಣ್ಣು ತನ್ನನ್ನೇ ಇರಿಯುತ್ತಿದ್ದುದು, ಎಲ್ಲರ ಪಿಸು ನುಡಿಗೆ ತಾನೇ ವಸ್ತುವಾದದ್ದು ಸರಪಂಚನಿಗೂ ತಿಳಿಯಿತು. ತನ್ನ ಪಾಡಿಗೆ ತಾನು ಏನನ್ನೂ ಗಮನಿಸಿಲ್ಲವೆಂಬಂತೆ ಸುಮ್ಮನಿರಲು ಯತ್ನಿಸಿದ. ಸಾಧ್ಯವಾಗಲಿಲ್ಲ. “ಎಲಡಿಕಿ ಚೀಲ ತಂದಿಯೇನಲೇ ನಿಂಗೂ?” ಎಂದು ಕಟ್ಟೆಯ ಹತ್ತಿರ ಕೈಕಟ್ಟಿ ನಿಂತ ನಿಂಗೂನನ್ನು ಕೇಳಿದ. ಅದನ್ನವನು ಸಾಮಾನ್ಯವೆಂಬಂತೆ ಹೇಳಿದರೂ ಅದು ಎಲ್ಲರಿಗೂ ಕೇಳಿಸುವಷ್ಟು, ಹೆದರಿದ ಹುಡುಗರು ಜೋರಾಗಿ ಮಾತಾಡುವಂತೆ ದನಿ ಎತ್ತರವಾಗಿತ್ತು.ತನ್ನ ಮಾತಿಗುತ್ತರವಾಗಿ ಯಾರಾದರೂ ಮಾತಾಡಬೇಕೆಂಬ ಆಸೆಯಿತ್ತು. ಅಲ್ಲಿ ಕೂರಬಾರದು, ಏಳಬಾರದು, ಕೂತರೆ ಎಲ್ಲರ ಕಣ್ಣು ಎದುರಿಸಬೇಕು, ಎದ್ದರೆ ಅವಮಾನ. ಏನಾದರೂ ಮಾಡುತ್ತಾನೆಂದರೆ ನಿಂಗೂ ಏನೂ ಹೇಳಲಾರದೆ ಒಂದು ಬಾರಿ ಹಲ್ಲು ಕಿಸಿದು ಜನಗಳನ್ನು ನೋಡಿದ ಅಷ್ಟೆ.
ದತ್ತಪ್ಪನ ಚಡಪಡಿಕೆ ಸ್ಪಷ್ಟವಾಗಿತ್ತು. ಆದರೆ ಬಾಯಿಬಿಟ್ಟು ಹೇಳಲೊಲ್ಲ. ಇಷ್ಟರಲ್ಲೇ ಗೌಡ ಬರಬಹುದು. ಅವನನ್ನೆಲ್ಲಿ ಕೂರಿಸಬೇಕು? ಹಾಗೇ ಕೂತ, ನಿಂತವರ ಅಸಮಧಾನವೂ ಸ್ಪಷ್ಟವಾಗಿತ್ತು. ಪಂಚಾಯ್ತಿ ಮೆಂಬರರು, ತಾವೇ ತಪ್ಪುಮಾಡಿದಂತೆ, ಅದನ್ನು ತೋರಗೊಡದೆ ಹರಕಂಗಿಯ ಜೇಬುಗಳಲ್ಲಿ ಏನೋ ಹುಡುಕುತ್ತಿದ್ದಂತೆ, ಮರೆತವರು, ಏನೋ ಜ್ಞಾಪಿಸಿಕೊಳ್ಳುತ್ತಿದ್ದಂತೆ ಅಭಿನಯಿಸತೊಡಗಿದರು. ಕೊನೆಗೆ ಕಳ್ಳ ತನ್ನ ಅಭಿನಯ ಸಾಲದೆಂದು ಕಂಡುಕೊಂಡು ಎದುರಿಗಿದ್ದ ಬಾಳೂನಿಗೆ “ಏ ಬಾಳೂ, ಎಲಡಿಕೆ ಚಂಚಿ ತಂದಿಯೇನಲಾ?” ಎಂದು ಕೇಳಿದ. ಕೊನೇ ಪಕ್ಷ ಅವನು ಇಲ್ಲವೆಂದಾದರೂ ಹೇಳಿಯಾನೆಂದು, ಬಾಳೂ ಎಲಡಿಕೆ ತಿನ್ನುತ್ತಿದ್ದವನು ಚಂಚಿಯನ್ನು ಎಡಗೈಯಲ್ಲಿ ಹಿಡಿದುಕೊಂಡು ಬಲಗೈ ಬೆರಳುಗಳನ್ನು ತುಟಿಗಂಟಿಸಿ ಪಿಚಕ್ ಎಂದು ಎಲ್ಲರಿಗೂ ಕೇಳಿಸುವಂತೆ. ಉಗುಳಿ ಇಲ್ಲವೆಂಬಂತೆ ಕೈಮಾಡಿದ. ಕಳ್ಳ, ಅವನು ತನ್ನ ಮೇಲೆ ಉಗುಳಿದ ಹಾಗೆ ಮುಖ ಸಿಂಗರಿಸಿಕೊಂಡು ಮಂದಿ ನೋಡಿದರೇನೋ ಎಂಬಂತೆ ಸುತ್ತ ನೋಡಿದ.
ಲಗಮವ್ವನಿಗೆ ಸುತ್ತ ಬಿಗಿದ ಮೌನ ತಡೆಯಲಾಗಲಿಲ್ಲ. “ಇಲ್ಲಿ ಯಾರೂ ಗಂಡಸರಽ ಇಲ್ಲೇನ್ರಿ?” ಎನ್ನುತ್ತ ಎದ್ದು ನಿಂತು ಏನೋ ಹೇಳಬೇಕೆಂದಿದ್ದಳು. ಅಷ್ಟರಲ್ಲಿ ಚೇರ್‍ಮನ್ ಇಡೀ ಸಭೆಗೆ ತಾನೇ ಹಿರಿಯನೆಂಬಂತೆ ತನ್ನ ಅಪ್ಪಣೆಗಾಗಿ ಎಲ್ಲರೂ ಕಾಯುತ್ತಿದ್ದಂತೆ-
“ಹೂ ಲಗಮವ್ವಾ, ಇನ್ನು ಸುರುಮಾಡಿರಿ” ಎಂದ. ನಿಂಗೂ ಸ್ವಲ್ಪ ಧೈರ್ಯ ತಾಳಿ-
“ಅದು ಗೌಡ್ರು ಕೂರೋ ಜಾಗ; ಅವರು ಬರೋ ಹೊತ್ತಾತು, ಆ ಜಾಗಾ ಬಿಟ್ಟ ಇಳೀತಿ?”
-ಎಂದು ಹೇಳುತ್ತಿರುವಂತೆಯೇ-
“ಬರಲಿ ಬರಲಿ, ಅವರಿಗೂ ಇಲ್ಲೇ ಜಾಗ ಮಾಡಿ ಕೊಡೋಣ; ಅದಕ್ಯಾಕಿಷ್ಟ ತಲೀ ಕೆಡಿಸಿಕೊಳ್ತಿ?”
-ಎಂದು ನಿರ್ಲಕ್ಷ್ಯ ನಟಿಸುತ್ತಾ ಹೇಳಿ,
“ಹೂ ಲಗಮವ್ವಾ, ಸುರು ಮಾಡರಿನ್ನ”
-ಎಂದ. ಲಗಮವ್ವ ಇವನ ಕಡೆ ಬೆನ್ನ ತಿರುಗಿಸಿ ಕೂತಳಷ್ಟೆ. ಎಲ್ಲೇ ನಿಂತಿದ್ದ ರಮೇಶ, ಇವನೂ ಒಬ್ಬ ಮೆಂಬರನೇ, ಸಂಧರ್ಭದ ಗಾಂಭೀರ್ಯ ಮುರಿಯುತ್ತ-
“ಸುರು ಮಾಡವಾ ಲಗಮವ್ವಾ, ಊರ ಚೇರ್ಮ್ಮರಽ ಹೇಳತಾರಂದರ ಕಿಮ್ಮತ್ತಿಲ್ಲೇನ? ಏ ನಾಯೆಲ್ಯಾ ಬಾರಿಸಲೇ ಹಲಗಿ”
-ಎಂದು ಚೇರ್‍ಮನ್ನರ ಅಭಿಮಾನದ ಪರವಾಗಿ ಮಾತಾಡಿದ. ತನ್ನನ್ನೇ ಕುರಿತು ರಮೇಶ ಹೇಳಿದ್ದರಿಂದ ಏನೂ ಮಾಡಲೂ ತೋಚದೆ ನಾಯೆಲ್ಯಾ ಎದ್ದು ನಿಲ್ಲುತ್ತಿದ್ದ; ಅಷ್ಟರಲ್ಲಿ ಲಗಮವ್ವ ಕೂತಲ್ಲಿಂದಲೇ-
“ನಮಗೇನೂ ಅವಸರಿಲ್ಲರೀ. ಗೌಡ ಬರಲಿ, ಸಾವಕಾಶ ಸುರು ಮಾಡೋಣಂತ” ಎಂದಳು. ಇದನ್ನು ಕೇಳಿ ನಾಯೆಲ್ಯಾ ಕುಕ್ಕರಿಸಿದ. ಸರಪಂಚನ ಮುಖ ಇಷ್ಟಿದ್ದದ್ದು ಇಷ್ಟಾಯಿತು. ಈ ಒರಟುತನ ಅವನ ನಿರೀಕ್ಷೆಗೆ ಮೀರಿದ್ದು. ಹೇಗೆ ಎದುರಿಸಬೇಕೆಂದು ಗೊತ್ತಾಗದೆ ಚಡಪಡಿಸಿದ. ಅವನ ಮುಖದಲ್ಲಿ ಚಡಪಡಿಕೆ ಅವನ ಮೂಗಿನಷ್ಟೇ ಸ್ಪಷ್ಟವಾಗಿ ಕಂಡುಬರುತ್ತಿತ್ತು. ಎಲ್ಲರ ಕಣ್ಣುಗಳು ತನ್ನನ್ನು ಇರಿಯುವಂತೆ ಅನ್ನಿಸಿತು. ಎಲ್ಲರ ಮನಸ್ಸುಗಳಲ್ಲಿ ತಾನು ರಾಡಿಯಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿರುವಂತೆ ಅನ್ನಿಸಿತು. ಎದುರಿಸಲಾರದೆ ಕಿಸೆಗೆ ಕೈಬಿಟ್ಟು ಸಿಗರೇಟು ತೆಗೆದು ಹೊತ್ತಿಸಿ ಪುಸ್ ಪುಸ್ ಎಂದು ಹೊಗೆ ಬಿಟ್ಟ. ಬೇರೆ ಸಂದರ್ಭದಲ್ಲಾಗಿದ್ದರೆ ಜನ ಆ ಸಿಗರೇಟು, ಆ ಹೊಗೆ, ಅದರ ವಾಸನೆಯೊಂದಿಗೆ ಆಟವಾಡಬಹುದಿತ್ತು.
ಆಶ್ಚರ್ಯವೆಂದರೆ ದತ್ತಪ್ಪ ಸುಮ್ಮನೇ ಕೂತಿದ್ದ. ತಾನು ತೋರಬೇಕಾದ ಪ್ರತಿಕ್ರಿಯೆ ಜನರೇ ತೋರುತ್ತಿದ್ದಾರೆಂದೋ, ಗೌಡ ಬರಲಿ, ನೋಡಿಕೊಳ್ಳೋಣವೆಂದೋ-ಅಂತೂ ಸುಮ್ಮನಿದ್ದ. ಪರಿಸ್ಥಿತಿಯನ್ನು ಗಮನಿಸಿ ಒಬ್ಬ ಎಳೇ ಬಾಲಕ ಲಬೊ ಲಬೊ ಹೊಯ್ಕೊಂಡ. ಎಲ್ಲರೂ ಹೊಯ್ಕೊಂಡರು. ಇದು ತನ್ನನ್ನು ಕುರಿತಾಗಿಯೇ ಎಂದು ಗುಡಸೀಕರ ಬಲ್ಲ. ಅಷ್ಟರಲ್ಲಿ ಗುಂಪಿನಂಚಿನ ಒಬ್ಬ “ಗೌಡರು ಬಂದರು, ಬಂದರು” ಎಂದ. ಎಲ್ಲರೂ ಆ ಕಡೆ ಮುಖ ಹೊರಳಿಸಿದರು. ಗೌಡ ಅವಸರವಸರವಾಗಿ ಬರುತ್ತಿದ್ದ. ಇಂದಿನ ಹಾಡುಗಾರಿಕೆ ನಿರಂಬಳ ಸಾಗೀತೆಂದು ಯಾರಿಗೂ ಅನಿಸಲಿಲ್ಲ. ಗೌಡನಿಗೂ ಸರಪಂಚನಿಗೂ ಜಗಳವಾಗಬಹುದೆಂದು ಕೂಡ ಕೆಲವರು ಕಲ್ಪಿಸಿದರು. ಎಲ್ಲರ ಕಣ್ಣಲ್ಲಿ ವಿಚಿತ್ರ ಕುತೂಹಲ ಚಂಚಲಿಸಿತು.
ಜನ ಎದ್ದು ಗೌಡನಿಗೆ ಹಾದೀ ಮಾಡಿಕೊಟ್ಟರು. ಕೆಲವರು “ಶರಣ್ರೀಯೆಪ್ಪ” ಎಂದರು. ಗೌಡ ಪ್ರತಿ ನಮಸ್ಕರಿಸುತ್ತ ನಡೆದ. ತನ್ನ ಸ್ಥಳದಲ್ಲಿ ತೆಕ್ಕೆಗೆ ಆಧಾರವಾಗಿ, ತನ್ನತ್ತ ನೋಡದೆ, ಸಿಗರೇಟು ಸೇದುತ್ತ ಕೂತ ಸರಪಂಚನನ್ನು ನೋಡಿದ. ಎದ್ದು ನಿಂತ ದತ್ತಪ್ಪನ ಮುಖ ನೋಡಿದ. ಪರಿಸ್ಥಿತಿಯ ಅರಿವಾಗಿ ಹೋಯ್ತು. ಅವರಿವರನ್ನು ಹೆಸರುಗೊಂಡು ಕರೆದು “ಕೂಡ್ರಿ ಕೂಡಪಾ,” ಎನ್ನುತ್ತ ನೇರ ಕಟ್ಟೆಗೆ ಹೋದ. “ಶರಣರೀ ಸರಪಂಚರ” ಅಂದ, ದತ್ತಪ್ಪನ ಪಕ್ಕದಲ್ಲೇ ಸ್ಥಳ ಮಾಡಿಕೊಂಡು ಕೂರುತ್ತ “ಹೂ ಲಗಮವ್ವ ನೋಡೋಣ ಈ ವರ್ಷ ಏನೇನ ಹಾಡ ಕಟ್ಟೀರಿ, ಸುರುಮಾಡರಿ” ಅಂದ. ಏನೂ ಆಗಿಲ್ಲವೆಂಬಂತೆ. ಗೌಡನ ಮಾತು ಕೇಳಿ ದತ್ತಪ್ಪ ತಲೆ ಭಾರ ಇಳಿವಿದಷ್ಟು ಹಗುರಾದ. ಜನರಲ್ಲಿ ಗುಜು ಗುಜು ಇತ್ತು. ಅವರ ಮಾತು ಕೇಳಿಸುತ್ತಿರಲಿಲ್ಲ ನಿಜ; ಅವರ ಕೈ ಬಾಯಿ ನೋಡಿಯೇ ಹೇಳಬಹುದಿತ್ತು: ಅವರು ತಕರಾರು ತೆಗೆಯುತ್ತಿದ್ದಾರೆಂದು. ಗೌಡನಿಗೆ ಅರಿವಾಗಿ ದನಿದೋರಿದ:
“ನಮ್ಮ ಲಗಮವ್ವ ವರ್ಷಕ್ಕೊಂದು ಏನಾರ ಹೊಸಾ ಚೀಜ ತಂದಽ ಇರತಾಳ ನೋಡ, ದತ್ತೂ” ಎಂದು ಪಂಚರತ್ತ ನೋಡಿ ದುರ್ಗಿಯತ್ತ ಗಮನ ಸೆಳೆದ. “ಅಯ್ಯಽ ಇದು ಅಬಾಯೀ ಮಗಳ್ರಿ” ಎಂದು ಹೇಳಿ ‘ಹೋಗಽ ಗೌಡನ ಪಾದ ಹಿಡದ ಬಾ” ಎಂದು ಎದ್ದು ತಲೆಬಾಗಿ ನಿಂತ ದುರ್ಗಿಗೆ ಹೇಳಿದಳು. ದುರ್ಗಿ ಅಷ್ಟೂ ಜನರ ಕಣ್ಣಿಗೆ ಗುರಿಯಾಗಿ, ಎಳಕರ ಮನಸ್ಸಿಗೆ ಮುದವಾಗಿ, ಮದವಾಗಿ, ಆದ್ದರಿಂದ ನಾಚುತ್ತ, ಅದನ್ನು ಸಂತೋಷಿಸುತ್ತ ತಲೆ ತುಂಬ ಸೆರಗು ಹೊತ್ತು ಗೌಡನತ್ತ ಹೊರಟಳು. ಹೋಗಿ ಕಾಲು ಮುಟ್ಟಿ ನಮಸ್ಕರಿಸಿದಳು. ಪಕ್ಕದ ಹಿರಿಯರ ಕಾಲು ಮುಟ್ಟಿದಳು. ಅಥವಾ ನಾಚಿಕೆಯ ಅತಿಶಯದಲ್ಲಿ ಯಾರ್‍ಯಾರದೋ ಕಾಲು ಮುಟ್ಟಿ ಬೆದರಿದ ಮಣಕಿನಂತೆ ಓಡಿಬಂದಳು. ಹಾಡುಗಾರಿಕೆ ಸುರುವಾಯಿತು. ಲಗಮವ್ವ ಎದ್ದು ನಿಂತು,
ಕಲಿಯುಗ ಕಾಲಿಟ್ಟಿತು ಧರ್ಮ
ಉಳಿಯಲಿಲ್ಲ ಚೂರಾ |
ಕಲಿತವರ ಕಾಲಾಗ ಲೌಕಿಕವೆಂಬೋದು
ಅಧರ್ಮವಾಯಿತು ಪೂರಾ ||
-ಎಂದು ಸುರುಮಾಡಿ “ಕಲಿತ ಕೋತಿ”ಗಳ ಭಂಡತನವನ್ನು ಬಯಲಿಗೆಳೆದಳು. ಇದು ಎದುರು ತಂಡಕ್ಕೆಸೆದ ಸವಾಲಾಗಿರಲಿಲ್ಲ. ಆದರೆ ಜನ ಈ ಹಾಡಿನಿಂದ ಎಷ್ಟು ಖುಷಿಪಟ್ಟರೆಂದರೆ ಹಾಡಿನಂತ್ಯದ ಹೊಯ್ಕೊಳ್ಳುವಿಕೆಗೆ ಮುದುಕರೂ ಸೇರಿದರು. ಆ ಹಾಡನ್ನು ತಾವೇ ಹೇಳಿದಂತೆ ಆನಂದಪಟ್ಟರು. ಹಾಡು ಯಾರನ್ನು ಕುರಿತದ್ದೆಂದು ಇವರಿಗೆ ಹೇಳಿಕೊಡಬೇಕೆ? ಗುಡಸೀಕರನ ಮುಖ ಇನ್ನೂ ಅಸಭ್ಯವಾಯಿತು. ಒಳಗೆ ಕತ ಕತ್ ಕುದಿಯುತ್ತಿದ್ದನೆಂಬುದನ್ನು ಅವನ ಕಣ್ಣ ಜ್ವಾಲೆಗಳೇ ಹೇಳುತ್ತಿದ್ದವು. ಗೌಡ ಮುಗುಳ್ನಕ್ಕು ಸುಮ್ಮನಾದರೆ, ದತ್ತಪ್ಪ ಜೋರಾಗಿಯೇ ನಕ್ಕ. ಜನ ಸಿಳ್ಳು ಹಾಕಿ ನಕ್ಕರು. ಕೆಲವರು ರುಂಬಾಲು ಹಾರಿಸಿ ನಕ್ಕರು. ಈ ಥರಾವರಿ ನಗೆಗಳನ್ನು ಸಂಯಮಿಸುವುದು ಗೌಡನಿಂದಲೂ ಸಾಧ್ಯವಿರಲಿಲ್ಲ.
ಪಂಚಾಯ್ತಿ ಮೆಂಬರರೆಲ್ಲ ಮುರುಟಿದ್ದರು. ಈ ನಗೆಗಳು ಗುಡಸೀಕರನ ಒಳಗಿನ ಬೆಂಕಿಗೆ ಹುಲ್ಲಾದವು. ಭಗ್ಗನೇ ಎದ್ದು ಕಟ್ಟೆಯಿಳಿದು, ಈಗಷ್ಟೇ ಹೊತ್ತಿಸಿದ ಸಿಗರೇಟನ್ನು ನೆಲಕ್ಕೆಸೆದು ತುಳಿದು, ಹೊಸಕಿ, ಬಿಟ್ಟ ಬಾಣದ ಹಾಗೆ ಹಿಂಡಿನಿಂದ ಮರೆಯಾದ. ಪಂಚಾಯ್ತಿ ಮೆಂಬರರು ಒಬ್ಬೊಬ್ಬರಾಗಿ ಬಾಲದ ಹಾಗೆ ಸಾಲಾಗಿ ಹಿಂಬಾಲಿಸಿದರು.
ಸಣ್ಣ ಮಗನ ಮೇಲೆ ಕೈಮಾಡಿದ
ಗುಡಸೀಕರ ತಾನೇನು ಮಾಡುತ್ತಿದ್ದೇನೆಂದು ಅರಿವಿಲ್ಲದೆ ತನಗೆ ಬಣ್ಣ ಎರಚಬಂದ ಬಾಳೂನ ಸಣ್ಣ ಮಗನನ್ನು ಹಿಂದುಮುಂದು ನೋಡದೆ ದನ ಬಡಿದಂತೆ ಬಡಿದ. ಅದು ನಡೆದದ್ದು ಹೀಗೆ-
ಲಗಮವ್ವನ ಹಾಡು ಕೇಳಿ, ಅಲ್ಲಿ ಕೂರಲಾರದೆ ಎದ್ದು ಬಂದನಲ್ಲ, ಸೀದಾ ಮನೆ ಹೊಕ್ಕ. ಹೊಕ್ಕವನೇ ದಡ ದಡ ಜಿನೆಯೇರಿ ಮಹಡಿ ಹತ್ತಿದ. ಹತ್ತಿದವನೇ ಅತ್ತಿತ್ತ ಅಲೆದಾಡಿದ. ಸಿಗರೇಟು ಹೊತ್ತಿಸಿದ. ಅಲ್ಲೇ ಇದ್ದ ಪಲ್ಲಂಗದ ಮೇಲೆ ಕುಕ್ಕರಿಸಿದ. ಕೂತಿರಲಾರದೆ ನಿಂತ. ನಿಂತಿರಲಾರದೆ ಅಡ್ಡಾಡಿದ. ಮತ್ತೆ ಕೂತ. ಮತ್ತೆ ನಿಂತ. ಸಿಗರೇಟು ಸೇದಿದ. ಎಸೆದ, ನಿಂತ, ಕೂತ.
ಮೆಂಬರರು, ಅದೇ ಹಿಂಬಾಲಕರು, ಸಪ್ಪಳ ಮಾದದೆ ಜಿನೆಹತ್ತಿ ಹಾಸಿದ್ದ ಜಮಖಾನದ ಮೇಲೆ ಗುಂಪಾಗಿ, ತುಟಿ ಎರಡು ಮಾಡದೆ, ಮುದುಡಿ ಇಷ್ಟಿದ್ದವರು ಇಷ್ಟಿಷ್ಟೇ ಆಗಿ, ಚಲಿಸದೆ ಕಲ್ಲಿನ ಗೊಂಬೆಗಳ ಹಾಗೆ ಕೂತರು. ಗುಡಸೀಕರ ಬಹಳ ಹೊತ್ತಿನ ತನಕ ಇವರನ್ನು ಗಮನಿಸದಂತೆ ಅಡ್ಡಾಡಿದ. ಕೂತು ಸಿಗರೇಟು ಹೊತ್ತಿಸುವಾಗ ಥಟ್ಟನೇ ತನ್ನ ಕಾಲಿಗೂ ನಮಸ್ಕರಿಸಿದ ದುರ್ಗಿಯ ನೆನಪಾಯಿತು. ಕಿಸೆಯಿಂದ ಐದರ ಎರಡು ನೋಟು ತೆಗೆದು ಕಳ್ಳನ ಕೈಗಿಡುತ್ತ “ಹೋಗು, ಸರಪಂಚ ಸಾಹೇಬರ ಕೊಟ್ಟಾರಂತ ಹೇಳಿ ದುರ್ಗಿಗೆ ಕೊಟ್ಟ ಬಾರಲೇ” ಎಂದ. ಸಿದರಾಮ ಓಡಿಹೋಗಿ ಹತ್ತು ರೂಪಾಯಿ ತಗೊಂಡು ಹೊರಟ. ಅವನು ಇನ್ನೂ ಇಪ್ಪತ್ತು ಹೆಜ್ಜೆ ಹೋಗಿರಲಾರ. ಅಂಡೂರಾಮೂ, ಉರ್ಪ್‌ರಮೇಶ ಎದ್ದು “ಅವ ಮೊದಲಽ ಕಳ್ಳ. ಕೊಡತಾನೋ ಇಲ್ಲೋ ನೋಡಿ ಬರತೇನ್ರೀ” ಎಂದು ಹೇಳುತ್ತ ಹೋಗಿಬಿಟ್ಟ. ಜಿಗಸು ಸಾತೀರ ಎದ್ದು “ಛೇ, ಛೇ, ಅವ ಮೊದಲ ಕುಡಕಽ ಏನ ಮಾಡತಾನೋ ನೋಡತೇನ್ರಿ” ಎಂದು ಅವನೂ ಹೋದ. ಕೊನೆಯವ ಆಯೀಮೆರೆ ಮಿಂಡ ಏನೂ ಹೇಳದೆ, ಯಾಕೆಂದರೆ ಏನೂ ಹೊಳೆಯದೆ ಕಳಚಿಕೊಂಡ.
ಗುದಸೀಕರನಿಗೆ ಇವರು ಬೇಕೂ ಆಗಿರಲಿಲ್ಲ. ಹೇಗೆ ಸೇಡು ತೀರಿಸಿಕೊಳ್ಳಬೇಕೆಂದು ದಾರಿ ತೋಚದೆ ಒಂದೇ ಸಮನೆ ಒದ್ದಾಡುತ್ತಿದ್ದ. ಹೊಯ್ಕೊಂಡ ಎಲ್ಲರ ನಾಲಿಗೆ ಸೀದು ಹೋಗುವ ಹಾಗೆ ಮಾಡುವ ಮಾಂತ್ರಿಕ ತಾನಾಗಿದ್ದರೆ, ಗೌಡ, ದತ್ತಪ್ಪ, ಲಗಮಿಯರನ್ನು ಜೇಲಿಗೆ ಕಳಿಸುವ ಅಧಿಕಾರಿ ತಾನಾಗಿದ್ದರೆ-ಅಂದುಕೊಂಡ. ತಕ್ಷಣ ಇನ್ನೊಂದು ಹೊಳೆಯಿತು: ಅರರೇ, ದುರ್ಗಿಗೆ ಈಗಷ್ಟೇ ಕೊಟ್ಟುಕಳಿಸಿದ ದುಡ್ಡನ್ನು ತುಂಬಿದ ಸಭೆಯಲ್ಲಿ ಆಗಲೇ ಕೊಟ್ಟಿದ್ದರೆ ಈ ಮಕ್ಕಳು ಕೊಡುವ ನಾಕಾಣೆ, ಎಂಟಾಣೆಗಿಂತ ಆ ಹತ್ತು ರೂಪಾಯಿ ಎಲ್ಲರ ಕಣ್ಣಲ್ಲಿ ಹೊಳೆಯುತ್ತಿತ್ತು. ಲಗಮವ್ವನಿಗೆ. ಗೌಡನಿಗೆ, ದತ್ತೂನಿಗೆ, ಹೊಯ್ಕಂಡ ಬಿಕನಾಸಿಗಳಿಗೆ ಎಲ್ಲರಿಗೂ ತನ್ನ ಬೆಲೆ ತಿಳಿಯುತ್ತಿತ್ತು. ಮಾತು ಮಿಂಚಿಹೋಗಿತ್ತು. ಅಷ್ಟರಲ್ಲಿ ತಂಗಿ ಗಿರಿಜವ್ವ ಊಟಕ್ಕೆ ಕರೆದಳು.
ಇಳಿ ಹೊತ್ತಾಗಿತ್ತು. ಓಣಿಯಲ್ಲಿ ಎಳೇ ಹುಡುಗರು ಬಣ್ಣ ಎರಚುತ್ತ ಹೊಯ್ಕಳ್ಳುತ್ತ, ನಗಾಡುತ್ತ ಗದ್ದಲ ಮಾಡುತ್ತಿದ್ದವು. ಅದನ್ನು ಕೇಳಿ ಉಂಡು ಮಲಗಿದ್ದ ಗುಡಸೀಕರನಿಗೆ ಎಚ್ಚರವಾಯಿತು. ಗದ್ದಲ ಸಮ ಸಮೀಪ ಬಂದು ತನ್ನ ಮನೆಯ ಮುಂದೆಯೇ ನಡೆಯುತ್ತಿರುವುದು ಗೊತ್ತಾಯಿತು. ಕೂಡಲೇ ಧಡಫಡ ಕೆಳಗಿಳಿದು ಹೋದ.
ಗಿರಿಜವ್ವ ಬಾಗಿಲಲ್ಲಿ ನಿಂತುಕೊಂಡು ಹುಡುಗರ ಬಣ್ಣದಾಟ ನೋಡಿ, ಎಲ್ಲರಿಗೂ ಕೇಳಿಸುವಂತೆ ನಗುತ್ತಿದ್ದಳು. “ನಾಚಿಕಿ ಬರಾಣಿಲ್ಲ? ಗಂಡ ಹುಡುಗೋರ್‍ನ ನೋಡಿಕೋತ ನಿಂತೀದಿ, ನಡಿ ಒಳಗ” ಎಂದು ಗದರಿಸಿ, ಒಳಗೆ ಕಳಿಸಿ ಆ ಸ್ಥಳದಲ್ಲಿ ತಾನು ನಿಂತುಕೊಂಡ. ಹುಡುಗರು ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಹೋಗಿ ಬಣ್ಣ ಹಚ್ಚುತ್ತಿದ್ದರು. ಓಡಿಹೋದವನು ಸಿಕ್ಕೊಡನೆ ಹೋಹೋಽ ಹೋ ಹೊಯ್ಕೊಳ್ಳುತ್ತ ಬಣ್ಣ ಜೊಗ್ಗುತ್ತಿದ್ದರು. ಒಬ್ಬ ಹುಡುಗ, ಬಾಳೂನ ಸಣ್ಣ ಮಗ- ಗುಡಸೀಕರ ನಿಂತುದನ್ನು ನೋಡಿ, “ಸರಪಂಚ ಸಿಕ್ಕನ ಬರ್ರ್ಯೋ” ಎಂದು ಹೊಯ್ಕೊಳ್ಳುತ್ತ ಬಣ್ಣ ಎರಚಿದ. ಉಳಿದವರೂ ಬಂದು ಎರಚಿದರು. ಗುಡಸೀಕರ ಕೆಂಡಕೆಂಡವಾದ. ತಾನೇನು ಮಾಡುತ್ತಿದ್ದೇನೆಂದು ಅರಿವು ಬಿಟ್ಟು ಓಡಿಹೋಗಿ ಎಳೇ ಹುಡುಗನ್ನ ಹಿಡಿದೆಳೆದು ಎಲ್ಲೆಂದರಲ್ಲಿ ಕೈ ಬಾಯಿ ಎನ್ನದೆ ದನ ಬಡಿದಂತೆ ಬಡಿಯತೊಡಗಿದ. ಹುಡುಗ ಕಿರುಚಿ, ಕೂಗಿ ಒದರಿದರೂ ಬಿಡಲಿಲ್ಲ. ತಪ್ಪಿಸಿಕೊಂಡು ನಿಂತ ಎಳೆಯರ ಹಿಂಡಿನಲ್ಲಿ ಅಡಗಿದರೆ ಅಟ್ಟಿಸಿಕೊಂಡು ಓಡಿಹೋಗಿ ಹೊಡೆದ. ಕೈ ಸೋತು ಒದ್ದ. ಕಾಲು ಸೋತು ಹೊಡೆದ. ಹುಡುಗ “ಸತ್ತಿನ್ರೋ ಎಪ್ಪಾ” ಎಂದು ಆರ್ತನಾಗಿ ಕೂಗಿದ. ಉಳಿದ ಹುಡುಗರು ಗಾಬರಿಯಾಗಿ ಬಿಡಿಸಿಕೊಳ್ಳಲಾರದೆ, ಓಡಲಾರದೆ, ಕೂಗಲಾರದೆ ಒಂದರ ಹೊಂದೊಂದು, ಒಂದರ ಆಶ್ರಯದಲ್ಲಿನ್ನೊಂದು ಮುದುಡಿ ನಿಂತವು. ದೂರದಲ್ಲಿ ಹೊರಬಂದ ಹೆಂಗಸರ ಗುಂಪು ಬಂದು ಬಿಡಿಸಿಕೊಳ್ಳಲು ಧೈರ್ಯಸಾಲದೆ ಮರುಗುತ್ತಿದ್ದರು. ಸುದೈವದಿಂದ ನಿಂಗೂ ಓಡಿಬಂದು ಹುಡುಗನ್ನ ಬಿಡಿಸಿಕೊಂಡ.
“ಎಳೇ ಹುಡುಗನ ಮ್ಯಾಲ ಕೈ ಮಾಡ್ತೀ, ಬುದ್ಧಿ ಎಲ್ಲಿಟ್ಟಿಯೋ ನಮ್ಮಪ್ಪಾ?” ಎಂದ. ತಾನು ಮಾಡಿದ್ದು ತಪ್ಪೆಂದು ಅರಿವಾಯ್ತೋ ಏನೊ? ಗುಡಸೀಕರ ಮನೆಯೊಳಕ್ಕೆ ಸುಮ್ಮನೆ ನಡೆದ. ನಿಂಗೂ ಸುಮ್ಮನಾಗಲಿಲ್ಲ. “ಕನ್ನಡಿ ನೋಡಿಕೊಳ್ಳೋ ನಮ್ಮಪ್ಪಾ” ಅಂದ, ನಿಜ. ಗುಡಸೀಕರ ಆವೇಶದಲ್ಲಿ ಕೂದಲು ಕೆದರಿಕೊಂಡು ಅಸಹ್ಯವಾಗಿದ್ದ. ನಿಂಗೂನ ಮಾತು ಕೇಳಿ ಹೋಗುತ್ತಿದ್ದವನು ನಿಂತು:
“ಯಾಕಲೇ?” ಅಂದ.
“ಆ ಹುಡುಗನ ಮ್ಯಾಲ ಕೈ ಎತ್ತಿಧಾಂಗ ನನ್ನ ಮ್ಯಾಲ ಎತ್ತಬಾರದ? ತೋರಿಸ್ತೀನಿ” ಎಂದು ನಿಂಗೂ ಸವಾಲು ಹಾಕಿದ. ಗುಡಸೀಕರನಿಗೆ ಅಷ್ಟು ಸಾಕಾಯ್ತು. ಏನೋ ಮಾಡಲು ಹೋಗಿ ಏನೋ ಮಾಡಿದ್ದ. ಯಾರದೋ ಮೇಲಿನ ಸಿಟ್ಟನ್ನ ಯಾರದೋ ಮೇಲೆ ಹಾಕಿದ್ದ. ಅದನ್ನು ನಿಂಗೂ ಗಮನಿಸಿದ್ದ. ಇವನಿಗೂ ಅದು ತಿಳಿಯಿತು. ಸಣ್ಣವನಾಗಿ, ತಿರುಗುತ್ತರ ಕೊಡದೆ ಒಳಕ್ಕೆ ಹೋದ.
ಹುಡುಗನ ಮೈತುಂಬಾ ಬಾಸಳ ನೋಡಿ ಬಾಳೂ ವೀರಾವೇಶ ತಾಳಿದ. ದತ್ತಪ್ಪ ಬುದ್ಧಿ ಹೇಳಿ ಬಿಡಿಸಬೇಕಾದರೆ ಬೆವರು ಇಳಿಯಿತು. ಎಲ್ಲ ಕೇಳಿ “ಇವ ತನ್ನ ಗೋರಿ ತಾನಽ ತೋಡಿಕೊಳ್ಳಾಕ ಹತ್ಯಾನ” ಎಂದು ಗೌದ ಹೇಳಿದರೆ “ಇಲ್ಲಾ ಊರ ಗೋರಿ ತೋಡಾಕಹತ್ಯಾನೆಂದು” ಬಾಳೂ ಸಿಟ್ಟಿನಲ್ಲಿ ಅಂದ.
ಚತುಷ್ಟಯರು
ಗುಡಸೀಕರ ಕೊಟ್ಟ ಹತ್ತರ ಹಗರಣ ಸೇರೇದಂಗಡಿ ತೆಗೆಯಬೇಕೆಂಬ ನಿರ್ಧಾರದಲ್ಲಿ ಕೊನೆಗೊಂಡಿತು.
ಗುಡಸೀಕರನ ಹಿಂಬಾಲಕರು, ಅಂದರೆ ಗ್ರಾಮ ಪಂಚಾಯಿತಿಯ ಇತರೇ ಮೆಂಬರರೆಂದರೆ-ಕಳ್ಳ ಸಿದರಾಮ, ಅಂಡೂರಾಮಯ್ಯ, ಜಿಗಸೂ ಸಾತೀರ ಹಾಗೂ ಆಯೀ ಮೆರಿಮಿಂಡ, ಇವರೂ ಗುಡಸೀಕರನ ಸರಿಕರೆ, ಕೂಡಿ ಕಲಿತವರೆ. ಆದರೆ ಗುಡಸೀಕರ ಬೆಳಗಾವಿಗೆ ಹೆಚ್ಚಿನ ಶಿಕ್ಷಣಕ್ಕೆ ಹೋದ. ಇವರು ಹೋಗಲಿಲ್ಲ, ಅಷ್ಟೆ. ಇವರನ್ನು ದತ್ತಪ್ಪ ಒಮ್ಮೆ “ಚತುಷ್ಟಯರು” ಎಂದು ಕರೆದ; ಬಹುಶಃ ಮಹಾಭಾರತದ ದುಷ್ಟ ಚತುಷ್ಟಯದ ನೆನಪಾಗಿ. ಈಗಲೂ ಅವನು ನಾಲ್ವರನ್ನೂ ಒಟ್ಟಾಗಿ ಕರೆಯುವುದು ಹೀಗಯೇ. ನಾವು ಇನ್ನು ಮೇಲೆ ನಮ್ಮ ಕಥೆಯಲ್ಲಿ ಅವರನ್ನು ಹಾಗೇ ಕರೆಯೋಣ.
ಆದರೆ ದುಷ್ಟ ಚತುಷ್ಟಯಕ್ಕೂ ಇವರಿಗೂ ಅರ್ಥಾತ್ ಸಂಬಂಧವಿಲ್ಲ. ಮೊದಲನೆಯದಾಗಿ ಇವರು ದುಷ್ಟರಲ್ಲ. ಊರಿನ ಇತರೆಯವರಿಗಿಂತ ಭಿನ್ನರಲ್ಲ. ಅಷ್ಟಿಷ್ಟು ಕಲಿತದ್ದರ ಬಗ್ಗೆ ಸ್ವಲ್ಪ ಸೊಕ್ಕಿದೆ. ಅಷ್ಟೂ ಇಲ್ಲದಿದ್ದರೆ ಹ್ಯಾಗೆ? ಇನ್ನೊಬ್ಬರು ಹಿಂದೆ ಒತ್ತದ ಹೊರತು ಮುಂದೆ ಹೆಜ್ಜೆ ಹಾಕುವವರಲ್ಲ. ಹೆಜ್ಜೆ ಹಾಕಿದ ಮೇಲೆ ಒದಗುವ ಪರಿಣಾಮಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವವರೂ ಅಲ್ಲ. ಕಂದಕವೋ, ದಿನ್ನೆಯೋ, ಹೆಜ್ಜೆ ಹಾಕಿದರಾಯ್ತು, ಕಣ್ಣು ಮುಚ್ಚಿಕೊಂಡು. ಚತುಷ್ಟಯರೆಂದು ಒಟ್ಟಾಗಿ ಕರೆದರೂ ಇವರಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ವ್ಯಕ್ತಿತ್ವವಿದ್ದುದನ್ನು ನಿರಾಕರಿಸಲಾಗದು.
ಇವರಲ್ಲೆಲ್ಲ ಕಳ್ಳಸಿದರಾಮ ನೋಡುವುದಕ್ಕೂ ಧಾಂಡಿಗನಾದವನು. ಚಿಕ್ಕಂದಿನಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದು ತನ್ನ ಹೆಸರಿಗೆ ಆ ವಿಶೇಷಣ ಅಂಟಿಸಿಕೊಳ್ಳಬೇಕಾಯಿತು. ಆದರೆ ಅದಲ್ಲ ಅವನ ವೈಶಿಷ್ಟ್ಯ. ಅಂಗಾಲಿನಿಂದ ನೆತ್ತಿಯ ತನಕ ಅವನ ಹಟ. ಯಾವುದೇ ನೀರಸ ಘಟನೆಯನ್ನು ರಸವತ್ತಾಗಿ, ನಾಟಕೀಯವಾಗಿ ಕೇಳುವವರ ಕಣ್ಣಿಗೆ ಕಟ್ಟುವಂತೆ ಹೇಳಬಲ್ಲವನಾಗಿದ್ದ. ಒಮ್ಮೆ ಗುಡಸೀಕರ ದಿನಪತ್ರಿಕೆ ಓದಿ “ನೋಡೋ ಕಳ್ಳಾ; ಜಿನ್ನಾ ಬಂದು ಗಾಂಧೀಜಿಗೆ ಭೇಟ್ಯಾಗಿದ್ದನಂತ. ಮುಸಲ್ಮಾನರಿಗೇ ಒಂದು ಪ್ರತ್ಯೇಕ ದೇಶ, ಪಾಕೀಸ್ತಾನ ಬೇಕಂತ ಕೇಳಿದಾನಂತ” ಎಂದು ಹೇಳಿದ. ಹತ್ತೇ ಹತ್ತು ಶಬ್ದದ ಈ ಸಂಗತಿಯನ್ನು ಕಳ್ಳ ಮೆರೆಮಿಂಡನಿಗೆ ಹೇಳಿದ್ದು ಹೀಗೆ:
ದೇಶದಾಗ ಏನೇನ ನಡದೈತಿ ಗೊತ್ತೈತೇನಲೇ? ಮೊನ್ನಿ ಮಂಗಳವಾರ ದಿನ ಗಾಂಧೀ ಗುಡಿಸಲದಾಗ ಕುಂತಿದ್ನಂತ, ಸೇಂಗಾ ತಿನ್ನಕೋತ. ಅಷ್ಟೊತ್ತಿಗೆ ಜಿನ್ನಾ ಬಂದ. “ಶರಣರೀ ಗಾಂದೆಪ್ಪ” ಅಂದ.
“ಬಾರೋ ಜಿನ್ನಾ ಸಾಬ, ಬಾ ಕುಂದರ ಬಾ. ಎಲ್ಲಾ ಆರಾಮ? ಮಳಿ ಬೆಳಿ ಹೆಂಗ ನಿಮ್ಮ ಕಡೆ?”
-ಅಂದ(ಗಾಂಧೀಜಿ)
(ಜಿನ್ನಾ)”ಎಲ್ಲಾ ಆರಾಮೈತಿ ಖರೆ: ನಮ್ಮ ಹುಡುಗೋರು ಭಾಳ ತಕರಾರ ತಗ್ಯಾಕ ಹತ್ಯಾವರಿ. ನೂರ ವರ್ಷ ಕೂಡಿದ್ದರೂ ಅಣ್ಣಾ ತಮ್ಮಾ ಬ್ಯಾರ್‍ಯಾಗೋದೇನೂ ತಪ್ಪಾಣಿಲ್ಲಾ, ಅದಕ್ಕ ಈಗಽ ದೇಶದಾಗ ನಮಗಷ್ಟ ಪಾಲಾ ಕೊಡಸಂತ ಗಂಟುಬಿದ್ದಾರ.”
“ನಿನಾಪ್ನ! ಬ್ಯಾರ್‍ಯಾಗಿ ಏನ ಸುಖ ಉಣತೀರಿ? ನೆರಿ ಹೊರಿ ನಾಕ ಮಂದಿ ಹೆದರತಾರ, ಏನಪಾ. ಕೂಡಿದ್ದ ಅಣ್ಣತಮ್ಮರಿಗೆ ಹುಲಿ ಹಾದಿ ಬಿಡತೈತಿ. ಇಂದಽ ಬ್ಯಾರೆ ಆದರ ಇಲೀ ಹಂತಾ ಇಲಿ ಅಂಜಾಕಿಲ್ಲಾ. ಅಕ್ಕಪಕ್ಕ ನಿಮ್ಮನ್ನ ನುಂಗಿ ನೀರು ಕುಡೀತಾರ. ಎಚ್ಚರಲೆ ಪಾಲಾ ಬೇಡಂತ ಹೇಳವರಿಗೆ. ಇಲ್ಲದಿದ್ದರ ಕರತಾ, ಬುದ್ಧೀ ರೀತಿ ಹೇಳೋಣು.”
-ಎಂದರಂತ ಗಾಂಧೀಜಿ! ಈ ಕಳ್ಳ ಸಿದರಾಮ ನಟ ಭಯಂಕರನೆನ್ನುವುದು ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕೆ?
ಬಯಲಾಟದಲ್ಲಿ ಖಳನಾಯಕರ, ಅದರಲ್ಲೂ ರಾಕ್ಷಸ ಪಾತ್ರ ವಹಿಸುವುದೆಂದರೆ ಅವನಿಗೆ ಬಲು ಸುಖ. ಆ ಪಾತ್ರ ವಹಿಸಿದ ಒಂದಿಬ್ಬರು ಹಳೇ ನಟರು ಅಟ್ಟದ ಮೇಲೆ ಬಂದು ಗರ್ಜಿಸಿದಾಗ, ಗರ್ಭಿಣಿಯರ ಗರ್ಭಪಾತವಾಯಿತೆಂಬಂತೆ ಕಥೆ ಕೇಳಿದ್ದ. ತನ್ನ ಜೀವಮಾನದಲ್ಲಿ ತನ್ನ ಪಾತ್ರ ನೋಡಿ ಕೊನೇ ಪಕ್ಷ ಒಬ್ಬ ಗರ್ಭಿಣಿಯಾದರೂ ಗರ್ಭಪಾತ ಮಾಡಿಕೊಳ್ಳುವ ಹಾಗಾಗಬೇಕೆಂದು ಇವನ ಆಸೆ. ಅದಕ್ಕಾಗಿ ಒಬ್ಬನೇ ಇದ್ದಾಗಲೆಲ್ಲ ಅಂಥ ಗರ್ಜನೆಯನ್ನೇ ಅಭ್ಯಾಸ ಮಾಡುತ್ತಿದ್ದ! ಬಂಜೆಯರಿಗೆ ಗೆಜ್ಜೆ ಕಾಲಿನ ಮಕ್ಕಳನ್ನು ಕೊಡುವ ಕರಿಮಾಯಿ ಅವನ ಆಸೆ ಈಡೇರಿಸದಿರಲಿ.
ಎರಡನೆಯವನೇ ಅಂಡೂರಾಮಯ್ಯ ಉರ್ಫ್‌ರಮೇಸ. ಇವನ ಮೂಲ ನಾಮಾಂಕಿತ ರಾಮಯ್ಯ ಎಂದು. ಅವನು ಅಂಡು ಇರಬೇಕಾದ ಪ್ರಮಾಣಕ್ಕಿಂತ ದೊಡ್ಡದಾಗಿರುವುದರಿಂದ ಈ ವಿಶೇಷಣ ಸೇರಿಕೊಂಡಿತ್ತು. ಗುಡಸ್ಯಾಗೋಳ ಹೋಗಿ ಗುಡಸೀಕರ ಆದಂತೆ ಪಂಚಾಯ್ತಿ ಮೆಂಬರ್ ಆದ ಮೇಲೆ ಇವನೂ ಅಂಡೂ ರಾಮಯ್ಯ ಹೋಗಿ ರಮೇಸ ಆದ. ಹಾಗೇ ಸಹಿ ಕೂಡ ಮಾಡುತ್ತಿದ್ದ. ಗುಡಸೀಕರನಿಗೆ ಜನ ಹೆದರುತ್ತಿದ್ದರು. ಹಾಗೆಂದು ಕರೆದರು. ಇವ ಹೆಸರು ಬದಲಾಯಿಸಿದರೂ ಜನ ಮಾತ್ರ ಇವನನ್ನು ಅಂಡೂ ರಾಮಯ್ಯ ಎಂದೇ ಕರೆಯುತ್ತಿದ್ದರು. ಇಂಗ್ಲಿಷ್ ಕಲಿತವನಲ್ಲ. ಆದರೂ ಮಾತಿಗೊಮ್ಮೆ “ಎಸೆಸ್” ಎನ್ನುತ್ತಿದ್ದ. ಮತ್ತು ಹಾಗೆ ಎಸೆಸ್ ಎನ್ನುವ ಅವಕಾಶಕ್ಕಾಗಿ ತನ್ನ ಯಾವುದೇ ಅಭಿಪ್ರಾಯ ಬದಲಿಸಲೂ ಸಿದ್ಧನಿದ್ದ.
ಮೂರನೆಯವ ಆಯೀ ಮರೆಮಿಂಡ. ಇವನ ಎಡಗಣ್ಣು ಸಣ್ಣದಾಗಿ ಆಗಾಗ ಕಣ್ಣೀರು ಸುರಿಸುತ್ತಿದ್ದುದರಿಂದ ಒಂದು ಕಣ್ಣಿನಿಂದ ಅತ್ತಂತೆಯೂ ಇನ್ನೊಂದರಿಂದ ನಕ್ಕಂತೆಯೂ ಕಾಣಿಸುತ್ತಿದ್ದುದೊಂದೇ ಇವನ ವಿಶೇಷ. ಕೊನೆಯವ ಜಿಗಸು ಸಾತೀರ. ಇವನ ತಾಯಿ ನಡೆಯುವಾಗ ಹೆಜ್ಜೆ ಗತಿಗೆ ತಕ್ಕಂತೆ ಅವಳ ಜೋಡೆದೆ ಟನಕ್ ಟನಕ್ ಜಿಗಿಯುತ್ತಿದ್ದವು. ಆದ್ದರಿಂದ ಅವಳಿಗೆ ಮಂದಿ ಮೂಲ ಹೆಸರು ಬಿಟ್ಟು ಕೊನೆಗೆ ಮರೆತು, ಜಿಗಸೂ ಎಂದೇ ಕರೆಯುತ್ತಿದ್ದರು. ತಾಯಿಯಿಂದ ಮಗನಿಗೂ ಜಿಗಸೂ ಸಾತೀರನೆಂದೇ ಹೆಸರು ಬಂತು. ಇದ್ದ ನಾಲ್ವರಲ್ಲಿ ಕಚ್ಚೆ ಹರುಕುತನದ ಖ್ಯಾತಿ ಇವನೊಬ್ಬನಿಗೇ ಇತ್ತು. ಅದು ಹೀಗೆ: ಎಳೆಯರ ಕಳ್ಳ ಹಾದರದ ಕೇಸುಗಳನ್ನು ಹ್ಯಾಗೋ ಹೊಂಚಿ ಪತ್ತೆ ಹಚ್ಚುತ್ತಿದ್ದ. ಅವರು ಕ್ರಿಯೆಯಲ್ಲಿ ಸಿಕ್ಕಿಬಿದ್ದೊಡನೆ ಹುಡುಗಿಯೊಬ್ಬಳನ್ನೇ ಪ್ರತ್ಯೇಕಿಸಿ, ಅವಳ ತಂದೆ-ತಾಯಿಗಳಿಗೆ ಹೇಳುವುದಾಗಿ ಬೆದರಿಸುತ್ತಿದ್ದ. ಹಾಗೂ ಅದರ ಪ್ರಯೋಜನವನ್ನು ಚಕ್ರಬಡ್ಡಿ ಸಮೇತ ಪಡೆಯುತ್ತಿದ್ದ.
ಇವರಿಗೆಲ್ಲ ಒಂದು ಸಾಮಾನ್ಯ ವಿಷಯವೆಂದರೆ ಊರಿನ ಎಲ್ಲರಂತೆ ಇವರೂ ಹಣವಂತರಲ್ಲ. ಹಣ ಅಕಸ್ಮಾತ್ ಕಂಡರೋ ಬೆಳಗಾವಿಯ ಕನಸುಗಳಿಂದ ಉದ್ರಿಕ್ತರಾಗುತ್ತಿದ್ದರು. ಗುಡಸೀಕರ ಈ ದಿನ ಕೊಟ್ಟ ಹತ್ತು ರೂಪಾಯಿಗಳಿಂದ ಹುಚ್ಚುಹತ್ತುವಷ್ಟು ಪರವಶವಾದದ್ದು ಈ ಕಾರಣಕ್ಕೇ.
ಕಳ್ಳಸಿದರಾಮ ಗುಡಸೀಕರ ಕೊಟ್ಟ ಹತ್ತು ರೂಪಾಯಿಗಳನ್ನು ತಗೊಂಡು ಹೊರಬಿದ್ದು ಇನ್ನೂ ಹತ್ತು ಹೆಜ್ಜೆ ಇಟ್ಟಿರಲಿಲ್ಲ. ಅಂಡೂರಾಮಯ್ಯ ಉರ್ಫ್‌ರಮೇಸ ಬಂದು ಕೂಡಿಕೊಂಡ. ಬಂದವನು ಐದು ರೂಪಾಯಿ ದುರ್ಗಿಗೆ ಕೊಟ್ಟು ಇನ್ನೈದು ಕುಡಿಯೋಣವೆಂದು ಸೂಚನೆ ಕೊಟ್ಟ. “ಹೀಂಗ ಹೇಳ್ತೀಯೇನೋ? ಸರಪಂಚಗ ಹೇಳ್ತಿನ್ನೋಡು” ಎಂದು ಸಿದರಾಮ ಹೇಳಿದೊಡನೆ “ಎಸೆಸ್” ಎನ್ನುತ್ತ ತಣ್ಣಗಾದ. ಅಷ್ಟರಲ್ಲಿ ಜಿಗಸೂ ಸಾತೀರ ಇವರನ್ನು ಕೂಡಿಕೊಂಡು “ನೀವಿಬ್ಬರೊಳಗ ಒಬ್ಬನೂ ನಂಬಿಗಸ್ತನಲ್ಲಂತ: ಒಬ್ಬ ಕಳ್ಳ, ಇನ್ನೊಬ್ಬ ಕುಡುಕ. ನನ್ನ ಕೈಗಿ ಕೊಡು. ನಾನಽ ದುರ್ಗಿಗೆ ಕೊಡತೀನಿ” ಎಂದು ಹೇಳಿದ. ಉಳಿದಿಬ್ಬರು ಏಳರಲ್ಲಿ ಹುಟ್ಟಿದವರೆ? “ನಾನೇ ಕೊಡುತ್ತೇನೆಂದು ಕಳ್ಳ ಹೇಳಿದ. ಎಸೆಸ್ ನಾನು ಸಾಕ್ಷಿ ಹೇಳುತ್ತೇನೆಂದು ರಮೇಶ ಹೇಳಿದ. ಅಷ್ಟರಲ್ಲಿ ಆಯೀಮೆರೆಮಿಂಡನೂ ಅವರನ್ನು ಕೂಡಿಕೊಂಡ. “ಏ, ನಿಮ್ಮ ಮ್ಯಾಲ ಸರಪಂಚಗ ನಂಬಿಕಿಲ್ಲಂತ. ನೀನಽ ಇಸಕೊಂಡ ಹೋಗಿ ದುರ್ಗಿಗೆ ಕೊಡಂತ ಹೇಳ್ಯಾರ, ಕೂಡಲೇ ಕಳ್ಳ” ಎಂದ.
“ಬಂದ ನೋಡ್ರಲೇ ನಂಬಿಗಸ್ಥ! ಅಲ್ಲಪಾ, ನಿನ್ನ ಮ್ಯಾಲ ಅಷ್ಟ ವಿಶ್ವಾಸ ಇದ್ದಿದ್ದರ ನಿನ್ನ ಬಿಟ್ಟ ನನ್ನ ಕೈಯಾಗ ಯಾಕ ಕೊಡುತ್ತಿದ್ದರು ರೊಕ್ಕಾನ? ಹೋಗ ಹೋಗಲೇ” ಎಂದ ಕಳ್ಳ.
ಯಾರೊಬ್ಬರೂ ಸಿದರಾಮನನ್ನು ಬಿಟ್ಟು ಅಗಲಲೊಲ್ಲರು. ಕಳ್ಳನಂತೂ ಅಷ್ಟೂ ಹಣ ದುರ್ಗಿಗೆ ಕೊಡುವುದಿಲ್ಲವೆನ್ನುವುದು ಖಾತ್ರಿ. ಯಾಕೆಂದರೆ ಅವರ ದೇವರ ಗುಣ ಅವರಿಗೆ ಗೊತ್ತಿಲ್ಲವೆ? ಹ್ಯಾಗೋ ಮಾಡಿ ಕಳ್ಳ ಉಳಿಸಿಕೊಳ್ಳುವ ದುಡ್ಡಿನಲ್ಲಿ ನಾಲ್ವರೂ ಕುಡಿಯಬೇಕೆಂದು ಮೂವರ ಹಂಚಿಕೆ. ಎಷ್ಟೆಂದರೂ ಸರಪಂಚ ದುರ್ಗಿಯ ಹತ್ತಿರ ಹೋಗಿ ದುಡ್ಡಿನ ಬಗ್ಗೆ ವಿಚಾರಿಸಲಾರ. ಅಷ್ಟಾಗಿ ಎಂದೋ ವಿಚಾರಿಸಿದರೆ ಅವಳು ಸುಳ್ಳು ಹೇಳಿದಳೆಂದೋ, ಮರೆತಿದ್ದಾಳೆಂದೋ ಹೇಳಿ ಪಾರಾಗಬಹುದು. ಎಷ್ಟೆಲ್ಲ ಕಲ್ಪಕ ಶಕ್ತಿಯಿದ್ದವರು ಒಂದು ಹುಸಿ ಹೇಳಲಿಕ್ಕಾಗುವುದಿಲ್ಲವೆ?
ಆದರೆ ಕಳ್ಳನ ತರ್ಕವೇ ಬೇರೆ. ಈ ನರಿಗಳನ್ನು ಓಡಿಸಿ ತಾನೊಬ್ಬನೇ ದುರ್ಗಿಯ ಹತ್ತಿರ ಹೋಗಿ ಐದು ಕೊಟ್ಟು ಮಿಕ್ಕ ಐದರಲ್ಲಿ ಬೆಳಗಾವಿಗೆ ಹೋಗಿ ಮಜಾ ಮಾಡಿ ಬರಬೇಕೆಂದು ಅವನ ಉಪಾಯ. ಆದರೆ ಅವರೋ ಬಿಟ್ಟು ಹೋಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ದಿನಾ ಮಾತಿಗೊಮ್ಮೆ “ಕಳ್ಳ, ಕಳ್ಳ” ಎನ್ನುತ್ತಿದ್ದವರು ಇಂದು ಬಾಯ್ತುಂಬ “ಸಿದರಾಮಾ” ಎಂದು ಕರೆದರು. ಇಲ್ಲದ ಸದ್ಗುಣಗಳನ್ನು ಅವನ ಮೇಲೆ ಹೇರಿದರು. ಹಿಂದಿನ ಅನೇಕ ಘಟನೆಗಳಲ್ಲಿ ಹಾಸ್ಯಾಸ್ಪದನಾಗಿದ್ದ ಅವನನ್ನು ನಾಯಕನನ್ನಾಗಿಸಿ ಬಣ್ಣಕಟ್ಟಿ ವರ್ಣಿಸಿದರು. ಜಿಗಸು ಸಾತೀರ ಸಿದರಾಮನನ್ನು ಬೆಳಗಾವಿಗೆ ಕರೆದೊಯ್ದು ಅಲ್ಲಿ ತನ್ನ ಖರ್ಚಿನಲ್ಲಿ ಸಿನಿಮಾ ತೋರಿಸುವುದಾಗಿ ಭರವಸೆ ಕೊಟ್ಟ. ಬೆಳಗಾವಿಯ ಹುಡುಗಿಯರ ಜೋಡು ಹೆಳಲುಗಳನ್ನೂ, ಹೆಳಲಿನ ಕೊನೆಯ ಟೇಪುಗಳನ್ನೂ ವರ್ಣನೆ ಮಾಡಿದ. ನಿಜ ಹೇಳಬೇಕೆಂದರೆ ಅವನು ಒಂದು ಬಾರಿಯೂ ಬೆಳಗಾವಿ ಕಂಡವನಲ್ಲ. ಆ ಹತ್ತು ರೂಪಾಯಿಗೆ ಕಳ್ಳನಂತೂ ಬಿಡಿಸಲಾರದ ಗಂಟು. ಯಾಕೆಂದರೆ ಹಣ ಅವನಲ್ಲೇ ಇದೆ. ಆತ ತನ್ನನ್ನೂ ಖರ್ಚು ಮಾಡುವುದರಲ್ಲಿ ಸೇರಿಸಿಕೊಳ್ಳಬೇಕೆಂದು ಮೂವರ ಹವಣಿಕೆ. ದಿನಾ ಬೆಳಗ್ಗೆದ್ದು ಪರಸ್ಪರ ಮುಖ ನೋಡುವವರು, ಅವರವರ ಗೆರೆ ಅವರವರಿಗೆ ಗೊತ್ತಿಲ್ಲವೆ? ಸದರಿ ಮಾತುಗಳನ್ನು ಹೇಳುವವರೂ ನಂಬಿರಲಿಲ್ಲ. ಸಿದರಾಮ ಮೊದಲೇ ಕಳ್ಳ; ಅವನ್ಯಾಕೆ ನಂಬುತ್ತಾನೆ? ಅವರಿಂದ ಪಾರಾಗುವುದಕ್ಕಾಗಿ.
“ತಗಿ, ತಗಿಯೋ, ಈಗಽ ಹೋಗಿ ದುರ್ಗಿಗೆ ಕೊಟ್ಟ ಬರ್ತೀನಿ.”
ಎಂದು ದಾಪುಗಾಲು ಹಾಕಿ ನಡೆದ. ಆದರೆ ಅವರ್‍ಯಾರೂ ತಿರುಗಲಿಲ್ಲ, ಬೆನ್ನುಹತ್ತಿದರು.
ಹಾಗೇ ನಡೆದುಕೊಂಡು ಸಿದರಾಮನ ಮನೆಯ ತನಕ ಬಂದರು. ಸಿದರಾಮ ನಟನಲ್ಲವೆ?-ಮನಸ್ಸು ಬದಲಿಸಿದಂತೆ ಮಾಡಿ-
“ಛೇ, ಹಸವಾಗೇತಿ, ಊಟ ಮಾಡಿ ಆಮ್ಯಾಲ ದುರ್ಗಿಗೆ ಕೊಟ್ಟ ಬರ್ತೀನಿ” ಎಂದು ಹೇಳಿ ಮನೆಯೊಳಕ್ಕೆ ನಡೆದ. ಅಂಡೂ ರಾಮಯ್ಯ ಉರ್ಫ್ ರಮೇಸನಿಗೆ ಸಿಟ್ಟು ಬಂತು.
*****
ಮುಂದುವರೆಯುವುದು