“ತುಂಬಾ ದೊಡ್ಡ ಪ್ರಮಾದವಾಗಿಬಿಟ್ಟಿದೆ…! “ತಮ್ಮಲ್ಲೇ ಹಳಿದುಕೊಂಡರು ಪ್ರೊ.ಸ್ಟ್ಯಾನ್ಲಿ. ಆಗಿನಿಂದ ಅವರು ಅದನ್ನೇ ಮೂರು ಬಾರಿ ನುಡಿದಿದ್ದರು. ಎದುರಿಗೆ ಕುಳಿತಿದ್ದ ಅವರ ಸಹಾಯಕರಾದ ಡಾ. ನೇಹಾ ಮತ್ತು ಸೈಂಟಿಸ್ಟ್ ದೇವ್ ಇಬ್ಬರಿಗೂ ಈ ವಿಜ್ಞಾನಿ ಏನೋ ಎಡವಟ್ಟು ಮಾಡಿಕೊಂಡಿರುವುದು ಗೊತ್ತಾಗಿತ್ತು. ಅದರೆ ಚಿತ್ರ ಸಂಪೂರ್ಣವಾಗಿ ಎದುರಿಗೆ ಬಾರದೆ ಪರಿಸ್ಥಿತಿ ಎನೆಂದು ಅರಿವಾಗುತ್ತಿಲ್ಲ.
“ಪ್ರೊಫೆಸರ್. ನೀವು ಪೂರ್ತಿ ವಿಷಯ ಹೇಳಿದರೆ ನಾವು ಏನಾದರೂ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸಮಯ ಸರಿದು ಹೋದಷ್ಟು ಕೇಸು ಜಟಿಲಗೊಳ್ಳಬಹುದು…! “ದೇವ್ ನುಡಿಯುತ್ತಿದ್ದರೆ,
“ಐ ನೊ ದ್ಯಾಟ್ ಯು ಕ್ಯಾನ್ ಹೆಲ್ಪ್ ಬಟ್… ಅದು ಅಷ್ಟು ಸುಲಭದಲ್ಲಿ ಸಾಧ್ಯ ಇಲ್ಲ. ಮಿ.ದೇವ್. ಯಾಕೆಂದರೆ ಅವನು ತಪ್ಪಿಸಿಕೊಂಡು ಬಿಟ್ಟಿದಾನೆ. ಯಾವಾಗ ಏನು ಅನಾಹುತ ಮಾಡುತ್ತಾನೋ ಗೊತ್ತಾಗ್ತಾ ಇಲ್ಲ….”
“ಮೈ ಗಾಡ್… ಯಾರು… ಮಿಲ್ಟನ್ ಕಾಣೆಯಾಗಿದ್ದಾನಾ..? “ಅಂದಾಜಿಸುತ್ತಾ ಬಗ್ಗಿದ ದೇವ್.
“ಹೌದು ದೇವ್. ಅವನು ತಪ್ಪಿಸಿಕೊಂಡಿದ್ದಾನೆ. ಜೊತೆಗೆ ನನ್ನ ಫಾರ್ಮುಲಾ ಕೂಡಾ ಯಶಸ್ವಿಯಾಗಿ ಕೊಂಡೊಯ್ದುಬಿಟ್ಟಿದಾನೆ…”
“ಯಾವುದು…?”
“ಆಪರೇಶನ್ ಥರ್ಡ್ ಐ…”
“ರಿಯಲ್ಲಿ…? ಸರ್ ಇಸ್ ಇಟ್ ಪಾಸಿಬಲ್..? “ನಂಬಿಕೆಯಾಗದೆ ಪ್ರಶ್ನಿಸಿದಳು ನೇಹಾ.
“ಹೌದು. ನೇಹಾ. ಮಿಲ್ಟನ್ ಯಾವತ್ತೋ ಒಂದಿನ ಕೈ ಕೊಡ್ತಾನೆ ಅಂತಾ ದೇವ್ ಹೇಳಿದಾಗ ನಾನು ನಂಬಿರಲಿಲ್ಲ. ಅಷ್ಟು ಮಾತ್ರ ಮೊದ್ದನ೦ತಿರುವವ ಅದ್ಹೇಗೆ ತಾನೆ ನಮ್ಮ ಪ್ರಯೋಗವನ್ನ ಕದಿಯುತ್ತಾನೆ ಎಂದುಕೊ೦ಡಿದ್ದೆ. ಆದರೆ ದೇವ್ ಹೇಳಿದ ಹಾಗೆ ಆಗಿದೆ. ಅವನು ಕೇವಲ ನನ್ನ ಫಾರ್ಮುಲಾ ಮಾತ್ರ ಕದ್ದಿಲ್ಲ. ಅದರ ವ್ಯವಸ್ಥಿತವಾಗಿ ಇಂಪ್ಲಾಂಟ್ ಕೂಡಾ ಮಾಡಿಸಿಕೊಂಡಿದ್ದಾನೆ … ನೋಡಿ…”ಎನ್ನುತ್ತಾ ಏಳೆಂಟು ದಿನಪತ್ರಿಕೆಗಳನ್ನು ಎದುರಿಗೆ ಹರಡಿದರು.
ಅವೆಲ್ಲವನ್ನು ಅವರು ನೋಡಿಲ್ಲವೆಂದಲ್ಲ. ಆದರೆ ಅದಕ್ಕೆಲ್ಲಾ ಕಾರಣ ಮಿಲ್ಟನ್ ಎಂದು ಮಾತ್ರ ಅಂದಾಜಿರಲಿಲ್ಲ. ಯಾರು ಯಾರನ್ನೋ ಲೇಸರ್ ಗನ್ನಿನಿಂದ ಶೂಟ್ ಮಾಡಿದ ಸುದ್ಡಿಗಳು… ಕರೆಂಟ್ ಶಾಕ್‌ನಿಂದ ಆದ ಸಾವೇ ಎಂದು ಇನ್ವೆಸ್ಟಿಗೇಶನ್ ನಡೆಯುತ್ತಿರುವ ನ್ಯೂಸ್‌ಗಳು ಅಲ್ಲಿದ್ದವು. ಅದಕ್ಕಿಂತಲೂ ದಾರುಣವಾದುದೆಂದರೆ ಮೊನ್ನೆಯಷ್ಟೆ ನಡೆದ ಹನ್ನೆರಡು ವರ್ಷದ ಬಾಲಕಿಯೊಬ್ಬಳನ್ನು ಇದೇ ತಂತ್ರಜ್ಞಾನ ಉಪಯೋಗಿಸಿ ಮಿಲ್ಟನ್ ಕಣ್ಣು ಕಾಣದಂತೆ ಮಾಡಿಬಿಟ್ಟಿದ್ದಾನೆ. ಸಾಯಿಸುವುದು ಬೇರೆ. ಆದರೆ ಈ ರೀತಿ ಪ್ರಮುಖ ಅಂಗಗಳನ್ನು ದೇಹದಿಂದಲೇ ಒರೆಸಿ ಹಾಕಿಬಿಡುವುದು ಬೇರೆ. ಅದಕ್ಕಾಗೇ ಪ್ರೊ.ಸ್ಟ್ಯಾನ್ಲಿ ಅಷ್ಟೊಂದು ತಳಮಳಿಸುತ್ತಿದ್ದರು.
“ಹೀಗೆ ನಿಮ್ಮ ಫಾರ್ಮುಲಾವನ್ನು ಉಪಯೋಗಿಸುದರ ಜೊತೆಗೆ, ಬೇಕಿದ್ದಾಗ ಅದನ್ನು ನಿಲ್ಲಿಸಿಬಿಡುವಂತೆ ಮಾಡಲು ಯಾವುದಾದರೊ ಕೌಂಟರ್ ರೂಲ್ ಅದಕ್ಕಿರಬೇಕಲ್ಲವಾ…? ”
“ಎಲ್ಲದಕ್ಕೂ ಒಂದು ಕೌಂಟರ್ ರೂಲ್ ಇದ್ದೇ ಇರುತ್ತದೆ ದೇವ್. ಆದರೆ ಯಾವುದೊಂದು ಪ್ರಯೋಗ ಪೂರ್ತಿಯಾಗೋ ಮುಂಚೆನೆ ಅದರ ಉಪಯೋಗಕ್ಕಿಳಿದರೆ ಕೌಂಟರ್‌ರೂಲಿನ ಮನೆ ಹಾಳಾಗಲಿ ಅಟ್ಲೀಸ್ಟ್ ಅದನ್ನು ತಡೆಯೋದಾದರೂ ಹೇಗೆ ಸಾಧ್ಯ…? ”
“ಶಿಟ್… ಅಷ್ಟಕ್ಕೂ ಮಿಲ್ಟನ್ ಅದನ್ನು ನಿರಂತರವಾಗಿ ಉಪಯೋಗಿಸಕ್ಕೆ ಆಗುತ್ತೆ ಅಂತೀರಾ…? ”
“ಎಸ್. ಅದನ್ನು ನಿರಂತರವಾಗಿ ಉಪಯೋಗಿಸಲು ಮಿಲ್ಟನ್‌ನಿಂದ ಸಾಧ್ಯವಿದೆ. ಬೇರಾರೋ ಆಗಿದ್ದರೆ ಸಾಧ್ಯವಿರಲಿಲ್ಲವೇನೋ. ಆದರೆ ಅವನು ನನ್ನೊಂದಿಗೆ ಈ ಪ್ರಯೋಗಾಲಯದಲ್ಲಿ ಪಳಗಿದೋನು. ಹೋಗುವಾಗ ಸಾಕಷ್ಟು ಪರಿಕರಗಳನ್ನು ಇಲ್ಲಿಂದ ಎತ್ತಿಕೊಂಡೇ ಹೋಗಿದಾನೆ. ಪ್ರಮುಖವಾಗಿ ನಾನು ತುಂಬಾ ಜತನದಿಂದ ಕಾಯ್ದಿರಿಸಿದ್ದ ಆ ಮಣಿಗಳನ್ನು ಕೂಡಾ ಒಂದಷ್ಟು ತೆಗೆದುಕೊಂಡು ಹೋಗಿದ್ದಾನೆ. ಮುಖ್ಯವಾಗಿ ಅದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳಿರುವ ಫೈಲ್‌ನ್ನು ರೆಕಾರ್ಡ್ ಮಾಡಿಕೊಂಡು ಹೋಗಿದ್ದಾನೆ. ಅಲ್ಲದೇ ಈಗಾಗಲೇ ನಡೆಯುತ್ತಿರುವ ಅನಾಹುತವನ್ನು ನೋಡಿದರೆ ಖಂಡಿತವಾಗಲೂ ಆತ ಅದನ್ನು ವ್ಯವಸ್ಥಿತವಾಗಿ ಪ್ರಯೋಗಿಸಿದ್ದಾನಲ್ಲದೇ ಇನ್ನು ಮೇಲೆ ಕೂಡಾ ಅದನ್ನು ಉಪಯೋಗಿಸಬಲ್ಲ ಎಂದೆನ್ನಿಸುತ್ತಿದೆ.”
“ಪ್ರೊಫೆಸರ್ ಖಂಡಿತವಾಗಿಯೂ ಮಿಲ್ಟನ್ ಅಂತಹದ್ಡೊಂದು ದೊಡ್ಡ ದುರಾಕ್ರಮಣವನ್ನು ಎಸಗುವ ಮುಂಚೆ ಅವನನ್ನು ಹಿಡಿಯಬೇಕು. ಬೈ ದಿ ಬೈ… ಅವನನ್ನು ಹಿಡಿದರೆ ವಾಪಸ್ಸು ಅವನಿಂದ ಆ ಶಕ್ತಿಯನ್ನು ಕಿತ್ತುಕೊಳ್ಳಲು ಸಾಧ್ಯವಾ…? ”
“ಅದನ್ನ ಹೇಗೋ ಮಾಡಬಹುದು. ಒತ್ತಾಯದಿಂದ ಇಲ್ಲ ಬಲಾತ್ಕಾರದಿಂದಲಾರೂ ಮಾಡಬಹುದು… ಒಮ್ಮೆ ಮಣಿಯನ್ನು ಕಿತ್ತರೇ ಮುಗಿಯಿತಲ್ಲ. ನಂತರ ಎಲ್ಲಾ ಸರಿಯಾಗೇ ನಡೆಯುತ್ತೇ…”
“ದೆನ್ ಡೋಂಟ್ ವರಿ ಪ್ರೊಫೆಸರ್. ಆದರೆ ಅವನ ಕೈಗೆ ನೀವು ಮಾತ್ರ ಕನಿಷ್ಠ ಹದಿನೈದು ದಿನವಾದರೂ ಸಿಗದಂತಿದ್ದರೆ ಅವನನ್ನು ಯಶಸ್ವಿಯಾಗಿ ಹಿಡಿಯಬಹುದೆಂದುಕೊಳ್ಳುತ್ತೇನೆ…”
“ಓಕೆ… ನಾನು ಲ್ಯಾಬ್ ಬಿಟ್ಟು ಎಲ್ಲೂ ಹೋಗುವುದೇ ಇಲ್ಲ ”
“ನೋ.. ನೀವು ಲ್ಯಾಬ್ ಬಿಟ್ಟು ಬೇರೆಲ್ಲೂ ಇರಲಾರಿರಿ ಎಂದು ಮಿಲ್ಟನ್‌ಗೆ ಕೂಡಾ ಚೆನ್ನಾಗೇ ಗೊತ್ತಿದೆ. ಸೋ. ಆದಷ್ಟು ನಿಮ್ಮನ್ನು ಇಲ್ಲಿಯೇ ಹಿಡಿಯಲು ಅವನು ಯತ್ನಿಸುತ್ತಾನೆ. ಅದಕ್ಕಾಗಿ ಸಧ್ಯ ನಿಮ್ಮ ಸ್ಥಾವರವನ್ನು ಇಲ್ಲಿಂದ ಬದಲಾಯಿಸೋಣ. ಅದಕ್ಕೂ ಮೊದಲು ಮಾಡಬೇಕಾದ ಕೆಲಸಗಳಿವೆ. ನಾನು ಮತ್ತೇ ನಿಮ್ಮನ್ನು ನೋಡುತ್ತೇನೆ…”ಎದ್ದು ನಿಂತ ದೇವ್. ಅವನನ್ನೇ ಹಿಂಬಾಲಿಸಿದಳು ನೇಹಾ. ತಲೆಗೆ ಕೈ ಹೂಡಿ ಕುಳಿತುಕೊಂಡರು ಪ್ರೊಫೆಸರ್.
*
*
*
ಸೌರ ಶಕ್ತಿಯನ್ನು ವಿಶೇಷವಾಗಿ ಅಭ್ಯಸಿಸುತ್ತಿದ್ದ ವಿಜ್ಞಾನಿ ಪ್ರೊ.ಸ್ಟ್ಯಾನ್ಲಿಗೆ ಇದ್ದಕ್ಕಿದ್ದಂತೆ ಒಮ್ಮೆ ಈ ಶಕ್ತಿಯನ್ನು ಜೈವಿಕವಾಗಿ ನಮಗೆ ಬೇಕೆಂದಾಗ ಬೇಕಾದಂತೆ ಬಳಸಿಕೊಳ್ಳಬಾರದೇಕೆ ಎಂಬ ಯೋಚನೆ ಮೂಡಿಬಂತು. ಸೋ. ಕೂಡಲೇ ಆ ದಿಕ್ಕಿನಲ್ಲಿ ಯೋಚನೆಗಳನ್ನು ಹರಿಬಿಟ್ಟಾಗ ತಲುಪಿದ ಹಂತವೇ… ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಅದನ್ನು ಬೇಕೆಂದಾಗ ಸುಡುವ ಕಿರಣವಾಗಿ ಬದಲಾಯಿಸುವ ಯೋಜನೆ. ಅಸಲಿಗೆ ಅದು ಅವರ ಕನಸಿನ ಯೋಜನೆ. ಅದಕ್ಕೆ ಪೂರಕವಾಗಿ ದಕ್ಷಿಣ ಅಫ್ರಿಕಾದ “ಕೌಮಾರೋ “ಪ್ರಾಂತ್ಯದಲ್ಲಿ ಸಿಗುವ ಮಣಿಗಳು (ಕ್ವಾರ್ಟ್ಸ್ ) ಒಂದು ವಿಷೇಶ ಶಕ್ತಿಯನ್ನು ಹೊಂದಿದ್ದು ಹಗಲಿನಲ್ಲಿ ಸೂರ್ಯನ ಶಕ್ತಿಯನ್ನು ಹೀರಿಕೊಂಡು ರಾತ್ರಿಯಲ್ಲಿ ಮರುತ್ಪತ್ತಿಗೊಳಿಸುತ್ತವೆ ಎಂಬುದು.
ಈ ಸುದ್ಡಿಯ ಹಿನ್ನೆಲೆಯಲ್ಲಿ ಅದರ ಬೆನ್ನು ಬಿದ್ದ ವಿಜ್ಞಾನಿಯ ತಲೆಯಲ್ಲಿ ಅದ್ಭುತ ಯೋಜನೆಯೊಂದು ರೂಪಗೊಂಡಿತು. ಆ ಅಂಗವಾಗಿ ಅವರು ಮೊದಲು ತಮ್ಮ ಜ್ಯೂನಿಯರ್ ಆಗಿದ್ದ ದೇವ್ ಮತ್ತು ಮಿಲ್ಟನ್‌ರನ್ನು ಸಂಪರ್ಕಿಸಿ ತಮ್ಮ ಯೋಜನೆಯ ಶ್ರೇಯಸ್ಸಿಗೆ ಬೆಂಬಲವನ್ನು ಕೋರಿದರು. ಅದರಂತೆ ಅವರ ಮುಂದೆ ವಾದ ಮ೦ಡಿಸಿದಾಗ ಮೊದಲ ಆಕ್ಷೇಪವನ್ನು ಎತ್ತಿದವನೇ ಸೈಂಟಿಸ್ಟ್ ದೇವ್.
“ಬೇಡ ಪ್ರೋಫೆಸರ್. ಅಕಸ್ಮಾತಾಗಿ ನೀವು ಈ ರೀತಿಯಲ್ಲಿ ಕಥೆ ಹೇಳಿದಂತೆ ಹೇಳುತ್ತಿರುವ ವಿಷಯ ನಿಜವಾಗಿ, ನಿಮ್ಮ ಯೋಜನೆ ಯಶಸ್ವಿಯಾಗಿ ಆ ಶಕ್ತಿ ಕೈಗೂಡಿಬಿಟ್ಟರೆ ಅದರಿಂದ ಇನ್ನಿಲ್ಲದ ಅದ್ಭುತವೇನೋ ಘಟಿಸಬಹುದು ಆದರೆ ಅಕಸ್ಮಾತ ಅದೇನಾದರು ದುರುಳರ ಕೈಗೆ ಸಿಕ್ಕಿದರೆ ಇನ್ನಿಲ್ಲದ ಅಪಾಯವಾಗುತ್ತದೆ…”
“ಛೇ… ಹಾಗೆಲ್ಲ ಇಲ್ಲ ದೇವ್. ಇಲ್ಲಿ ನೋಡು. ಅಕಸ್ಮಾತ ನಾವು ಹಾಗೆ ಶಕ್ತಿಯನ್ನು ಹಿಡಿದುಕೊಳ್ಳಲು ಸಾಧ್ಯವಾಗೋದೇ ಆದರೆ ಅದಕ್ಕಿಂತ ಹೆಮ್ಮೆ ಇನ್ನೇನಿದೆ. ಏನು ಬೇಕಾದರೂ ಮಾಡಬಹುದು..”
“ಅಸಲಿಗೆ ಇದು ಸಾಧ್ಯ ಅಂತೀರಾ…ಪ್ರೊಫೆಸರ್…? “ಅಲ್ಲಿಯವರೆಗೂ ಸುಮ್ಮನಿದ್ದ ಮಿಲ್ಟನ್ ಹುಬ್ಬೇರಿಸಿದ.
’ ಖಂಡಿತಕ್ಕೂ ಸಾಧ್ಯವಿದೆ ಮಿಲ್ಟನ್…”
“ಆದರೆ ಒಂದು ವೇಳೆ ಹಾಗೆ ಹಿಡಿದಿಡುವ ಶಕ್ತಿ ಕರೆಕ್ಟಾಗಿ ಬಿಡುಗಡೆಯಾಗದಿದ್ದರೆ…? ”
“ಎಸ್… ನನಗೂ ಅಂಥಹದ್ದೊಂದು ಸಂಶಯ ಇದ್ದೇ ಇತ್ತು. ಅಸಲಿಗೆ ಅದನ್ನು ಈ ರೀತಿಯಲ್ಲಿ ಹೇಳಬಹುದು. ನೋಡು ಸೂರ್ಯನಿಂದ ಬೀರಲ್ಪಡುವ ಬೆಳಕು ಎಲ್ಲೆಂದರಲ್ಲಿ ಚದುರುವಾಗ ಬೀರುವ ಕಿರಣಗಳನ್ನು ಗ್ರಹಿಸುವ ಕ್ರಿಯೆ ಮೂಲಕ ಈ ಮಣಿಗಳು ತಮ್ಮ ಬೆಳಕಿನ ಅರ್ಥಾತ್ ಶಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತವೆ… ಹೌದೇ…? ”
“ಹೌದು. ಇದರಲ್ಲೇನು ವಿಶೇಷ ಪೊಫೆಸರ್. ಯಾಕೆಂದರೆ ಈಗಾಗಲೇ ಈ ಕ್ವಾರ್ಟ್ಸ್‌ಗಳನ್ನು ಕೆಲವು ವಿದುನ್ಮಾನ ಯಂತ್ರಗಳಲ್ಲಿ, ಟೈಮರ್ ಸೆಟ್ಟಿಂಗ್ ಇತ್ಯಾದಿ ಕೆಲಸದಲ್ಲಿ ಉಪಯೋಗಿಸುತ್ತಲೇ ಇದ್ದಾರಲ್ಲ. …”
“ಎಸ್. ನನಗೂ ಅದೇ ಬೇಕಾಗಿರುವುದು. ಅಂದರೆ ಅವರೆಲ್ಲಾ ಈ ಮಣಿಯಿಂದ ಶಕ್ತಿಯನ್ನು ಹೀರಿಸಿ ನಂತರ ತಮಗೆ ಬೇಕಾದ ಹೊತ್ತಿನಲ್ಲಿ ಬೇಕಾದ ಹಾಗೆ ಅದರಿಂದ ರಿಲೀಸ್ ಮಾಡುತ್ತಿದ್ದಾರೆ…. ಹೌದೇ …? ”
“ಹೌದು …”
“ಅದೇ ರೀತಿಯಲ್ಲಿ ನಾನು ಕೂಡಾ ಈ ಮಣಿಯನ್ನು ಮಾನವ ಸಂಪರ್ಕಕ್ಕೇ ತರುವುದರ ಮೂಲಕ ಅವರುಗಳೆಲ್ಲಾ ಅದನ್ನು ನಿಯಂತ್ರಣಕ್ಕೆಂದು ಹೇಗೆ ಮೆಶಿನ್‌ಗಳನ್ನು ಅವಲಂಬಿಸಿದ್ದಾರೋ ಹಾಗೆ ನಾನು ಮಾನವನನ್ನೇ ಈ ಕ್ವಾರ್ಟ್ಸ್‌ಗೆ ಅಳವಡಿಸುತ್ತೇನೆ. ಸೂರ್ಯನ ಬೆಳಕನ್ನು ಸಂಸ್ಕರಿಸಿ ಬಿಡುವ ಮೂಲಕ ಭೂತಗನ್ನಡಿಯ ರೇಸು ಕಾಗದವನ್ನು ಕ್ಷಣಾರ್ಧದದಲ್ಲಿ ಸುಟ್ಟು ಹಾಕುತ್ತದೆ ಹೌದೇ…? ”
“ಹೌದು. ಅದರಲ್ಲಿ ಸಾಂದ್ರೀಕೃತಗೊಳ್ಳುವ ಆ ಬೆಳಕಿನ ಕಿರಣಗಳು ವಕ್ರೀಭವನದ ಪರಿಣಾಮಕ್ಕೊಳಪಡುತ್ತಲೇ ಕನ್ನಡಿಯ ಪ್ಯಾರಾಬೋಲಿಕ್ ಇಫ್ಹೇಕ್ಟಿಗೆ ಒಳಪಡುವುದರಿಂದಾಗಿ ಸಂಪೂಣ೯ ಬೆಳಕಿನ ಶಕ್ತಿ ಒಂದು ಕಿರಣವಾಗಿ ಹೊರಬರುತ್ತದೆ. ಅದಕ್ಕೆ ಕಾರಣ ಮನುಶ್ಯ ನಿರ್ಮಿತ ಪುಟ್ಟ ಕನ್ನಡಿ. ನಾನು ಅದಕ್ಕಿಂತಲೂ ಪವರ್‌ಫುಲ್ ಆದ ಕನ್ನಡಿ ಮತ್ತು ಅದಕ್ಕೂ ಹೆಚ್ಚಿನ ರೇಡಿಯಸ್ ಇಫೇಕ್ಟ್ ಇರುವ ಮಸೂರ ಬಳಸುತ್ತೇನೆ…”
“ಅದಾವುದು ಅಂತಹ ಮಸೂರ …? ”
“ಯೋಚಿಸು… ಅದಕ್ಕೂ ಮೊದಲು ನನ್ನ ಸೂತ್ರ ಹೇಗೆ ಕೆಲಸ ಮಾಡುತ್ತದೆ ಗೊತ್ತೆ..? ಭೂತ ಕನ್ನಡಿಯನ್ನು ನೇರವಾಗಿ ಬಿಸಿಲಿಗೆ ಹಿಡಿಯುವುದರ ಮೂಲಕ ಕೆಲವು ಕ್ಷಣಗಳಲ್ಲಿ ಕಾಗದದ ಚೂರು ಬೆಂಕಿಗಾಹುತಿಯಾಗುವುದನ್ನು ಗಮನಿಸಿರಬಹುದು. ಅಲ್ಲಿ ನಡೆಯುತ್ತಿದ್ದ ತಂತ್ರಜ್ಞಾನವೆಂದರೆ ಇಷ್ಟೆನೆ. ಸೂರ್ಯನ ಕಿರಣವನ್ನು ಲೆನ್ಸ್ ಮುಖಾಂತರ ಕೇಂದ್ರೀಕರಿಸುವುದರಿಂದ ಆ ಲೆನ್ಸ್‌ನ ವ್ಯಾಪ್ತಿಯೊಳಗೆ ಬರುವ ಎಲ್ಲ ಶಾಖವೂ ಕೇಂದ್ರೀಕರಣಗೊಂಡು ಕಿರಣದ ರೂಪದಲ್ಲಿ ಹೊರಹೊಮ್ಮುವಾಗ ಪ್ರಖರವಾಗಿ ಬರುತ್ತದೆ ಮತ್ತು ಒ೦ದೆಡೆಗೆ ಕೇಂದ್ರೀಕೃತಗೊಳ್ಳುವುದರಿಂದ ಕೆಲವೇ ಸೆಕೆಂಡುಗಳಲ್ಲಿ ಕಾಗದವನ್ನು ಸುಟ್ಟುಬಿಡುತ್ತದೆ. ಅದನ್ನೇ ಆಧಾರವಾಗಿಸಿಕೊಳ್ಳೋದಾದರೆ ಸೂರ್ಯನ ಕಿರಣಗಳಿಂದಲೇ ಅಂತಹ ಶಕ್ತಿಯುತ ಕಿರಣವನ್ನು ಪಡೆಯಬಾರದೇಕೆ…? ಹಾಗೆ ಪಡೆಯಬಹುದಾದಲ್ಲಿ ಮತ್ತು ಅಂತಹ ಏನನ್ನೂ ಸುಟ್ಟು ಬಿಡುವ ತಾಕತ್ತಿನ ಕಿರಣವನ್ನು ನಾವು ಕೈಗೆಟುಕಿಸಿಕೊಳ್ಳುತ್ತೇವೆ ಎಂದಾದಲ್ಲಿ ಅದರ ಹೆಸರನ್ನು ಹೀಗೆ ಕರೆಯಬಹುದು. ಅದೆಂದರೆ…
… ಇನ್ಫ್ರಾರೆಡ್ ಲೇಸರ್ ಬೀಂ… !
ಹೀಗೆ ಸೂರ್ಯನಿಂದ ಇನ್ಫ್ರಾರೆಡ್ ಲೇಸರ್ ಬೀಂ ಪಡೆಯಬಹುದೆ…? ಸಾಧ್ಯವಿದೆ ಎನ್ನುತ್ತದೆ ವಿಜ್ಞಾನ. ಕಾರಣ ಈಗಾಗಲೇ ಸಾಬೀತಾಗಿರುವಂತೆ ಯಾವುದೇ ಒಂದು ಬೆಳಕಿನ ಕಿರಣದ ಕೇಂದ್ರದಿಂದ ಬಾಹ್ಯ ಕಿರಣಗಳನ್ನು ವಿಭಜಿಸಿದರೆ ಅದು ಲೇಸರ್ ಕಿರಣವಾಗಿ ಬದಲಾಗುತ್ತದೆ…. ಇದನ್ನೆ ಕೊಂಚ ಬಯಾಲಜಿ ಮತ್ತು ಜಿಯಾಲಜಿಯನ್ನು ಬೆರೆಸಿ ಉಪಯೋಗಿಸುವುದರ ಮುಖಾಂತರ ಕಣ್ಣಿನಿಂದಲೂ ಬೀಂಗಳನ್ನು ಹೊರಡಿಸಬಹುದೆನ್ನುತ್ತೇನೆ ನಾನು.
ಕಾರಣ ಲೇಸರ್ ಬೀ೦ನ್ನು ಉಪಯೋಗಿಸುವುದರ ಮುಖಾಂತರ ಎಷ್ಟೇ ದೂರದ ಗುರಿಯನ್ನು ಹತ್ತಿರವಾಗಿಸಿಕೊಳ್ಳುವುದು ಸಾಧ್ಯವಿದೆ ಎ೦ದಾಗ ಮತ್ತು ಲೇಸರ್ ಬೀಂ ಉಪಯೋಗಿಸಿ ಖಂಡಾಂತರ ಕ್ಷಿಪಣಿಗಳಂತಹ ಯುದ್ಧಾಸ್ತ್ರಗಳನ್ನೇ ನಾಶಪಡಿಸಬಹುದೆನ್ನುವ ಸತ್ಯ ನಮ್ಮೆದುರಿಗಿರುವಾಗ ಅದನ್ನು ಪಳಗಿಸಿ ಜೈವಿಕವಾಗಿ ಹೊರಹೊಮ್ಮಿಸುವುದು ಕಷ್ಟವೇನಲ್ಲ. ಅಸಲಿಗೆ ಸೂರ್ಯ ಕೂಡಾ ಒ೦ದು ಜೈವಿಕ ಶಕ್ತಿಯ ಆಗರವೇ ತಾನೆ.
ಯಾಕೆಂದರೆ ಜಿಯಾಲಜಿಯಲ್ಲಿ ಪಾಂಡಿತ್ಯವಿದ್ದವರಿಗೆ ಈ ಸೌರ ಶಕ್ತಿಯನ್ನು ಬಳಸಿಕೊಳ್ಳುವ ಕ್ವಾರ್ಟ್ಸ್‌ಗಳ ಬಗ್ಗೆ ವಿವರಿಸಬೇಕಾದ ಅಗತ್ಯವಿಲ್ಲ. ಅದರಲ್ಲೂ ದಕ್ಷಿಣ ಆಫ್ರಿಕಾದ “ಕೌಮಾರೋ “ಗಣಿಗಳಲ್ಲಿ ಲಭ್ಯವಿರುವ ಅತ್ಯುನ್ನತ ಮಟ್ಟದ ಕ್ವಾರ್ಟ್ಸ್ ಇವತ್ತಿಗೂ ಜಗತ್ತಿನಲ್ಲಿ ಹೆಸರುವಾಸಿ. ಅವು ಹೇಗೆ ತಮ್ಮಲ್ಲಿ ಶಕ್ತಿಯನ್ನು ಶೇಖರಿಸಿ ಮರುತ್ಪತ್ತಿ ಮಾಡಬಲ್ಲವೋ ಹಾಗೇ ನಾನು ಬೇಕೆಂದಾಗ ಅವು ತೀಕ್ಷ್ಣತಮಗೊಳ್ಳಬೇಕು ಮತ್ತು ಅವು ನಮ್ಮದೇಹದಲ್ಲಿ ಅಡಗಿಸಬೇಕು…”
“ಅಂದರೆ ಕ್ವಾರ್ಟ್ಸ್ ಗಳನ್ನು ಮಾನವ ದೇಹದೊಂದಿಗೆ ಸಮ್ಮಿಳನಗೊಳಿಸುವುದೇ … ? ”
“ಹೌದು ಹೀಗೆ ಮಾಡುವುದರ ಮುಖಾಂತರ ಅದರ ಉಪಯೋಗವನ್ನು ನಾನು ಮನಸ್ಸಿನ ನಿಯಂತ್ರಣಕ್ಕೆ ಬಿಡಬಹುದೆಂದುಕೊಂಡಿದ್ದೇನೆ… ”
“ಆದರೆ ಆ ಕ್ವಾರ್ಟ್ಸ್ ದೇಹದ ಮೇಲೆ ಯಾವುದಾದರೂ ಪರಿಣಾಮ ಬೀರಿದರೆ…? ಅಷ್ಟಕ್ಕೂ ಅದನ್ನು ದೇಹದ ಯಾವ ಭಾಗದಲ್ಲಿ ಇಂಪ್ಲಾಂಟ್ ಮಾಡಲಿದ್ದೀರಿ …? ”
“ನೋಡುತ್ತಿರು. ಅದಕ್ಕೂ ಮೊದಲು ನಿನ್ನ ಎರಡನೆಯ ಸಂದೇಹ… ಕ್ವಾರ್ಟ್ಸ್ ದೇಹದ ಮೇಲೆ ಯಾವುದೇ ಪರಿಣಾಮ ಬೀರಲಾರವು. ಯಾಕೆಂದರೆ ಈ ಕ್ವಾರ್ಟ್ಸ್ ಕಲ್ಲುಗಳಿಗೆ ಶೇಕಡಾ ನೂರರಷ್ಟು ಸೂರ್ಯನ ಬೆಳಕಿನ ಶಾಖ ಮತ್ತು ಉಷ್ಣತೆಯನ್ನು ಹಿಡಿದುಕೊಳ್ಳುವ ತಾಕತ್ತಿದೆ. ಆದರೆ ಅಷ್ಟೊಂದು ಪ್ರಮಾಣದ ಭಾರಿ ಹೀರುವಿಕೆಯನ್ನು ಅರಗಿಸಿಕೊಂಡೂ ಕೂಡಾ ಈ ಕಲ್ಲುಗಳು ಯಾವುದೇ ರಾಸಾಯನಿಕ ಅಥವಾ ಭೌತಿಕ ( ಕೆಮಿಕಲ್ ಪ್ರಾಪರ್ಟೀಸ್) ಬದಲಾವಣೆಗಳನ್ನು ತೋರದೆ ಸುಮ್ಮನಿರುತ್ತವೆ. ಈ ಒಂದು ಗುಣವನ್ನೇ ಬಳಸಿಕೊಳ್ಳಲು ಹೊರಟಿರುವ ನಾನು ಅದರಿಂದ ಪ್ರಖರ ಉಷ್ಣವನ್ನು ಪ್ರತಿಫಲಿಸುತ್ತೇನೆ. ಜೊತೆಗೆ ಈ ಪ್ರಯೋಗ ಯಶಸ್ಸಾದರೆ ಪರಶಿವನಿಗಿದ್ದ ಮೂರನೆಯ ಕಣ್ಣು ಸುಳ್ಳೆಂದು ಸಾಬೀತು ಮಾಡುತ್ತೇನೆ. ನನ್ನ ಪ್ರಯೋಗದ ಮನುಶ್ಯನೂ ಕೂಡಾ ಶಿವನಂತೆ ಈಗಿರುವ ಕಣ್ಣನ್ನೇ ಬಳಸಿಕೊಂಡು … ಇನ್ಫ್ರಾರೆಡ್ ಲೇಸರ್ ಬೀಂ ನ್ನು ಬಿಡುಗಡೆಗೊಳಿಸಬಲ್ಲ. ಆಗ ಮೂರನೆಯ ಕಣ್ಣೆ ಬೇಕಿಲ್ಲ. ಮಾಮೂಲಿನ ಕಣ್ಣು ಕೂಡಾ ಆ ಕೆಲಸವನ್ನು ಮಾಡುತ್ತದೆ. ”
“ಮೈ ಗಾಡ್ ಕಣ್ಣಿನಲ್ಲಿ ಕ್ವಾರ್ಟ್ಸ್ ಹೂಡಿ ಅದರಿಂದ ಪ್ರತಿಫಲನವನ್ನು ಬೀಂ ಆಗಿ ಪಡೆಯುವುದೇ… ? ”
“ಹೌದು. ಹೇಗೆಂದರೆ ಒಮ್ಮೆ ಸಾಕಷ್ಟು ನಡು ಹಗಲಿನ ಪ್ರಖರ ಸೂರ್ಯನ ಬೆಳಕು ಕಣ್ಣನ್ನು ಪ್ರವೇಶಿಸುತ್ತಿದ್ದಂತೆ ಮಾಮೂಲಿನ ಕಣ್ಣಿನಲ್ಲಿ ನಡೆಯುವ ಆಕ್ಟಿವಿಟೀಸ್‌ಗಳ ಜೊತೆಯಲ್ಲಿ ಕೇವಲ ಬಿಂಬ ಸಂವಹನದ ಹೊರತಾಗಿ ಉಳಿದೆಲ್ಲ ಬೆಳಕು ಈ ಕ್ವಾರ್ಟ್ಸ್‌ನ ಮೇಲೆ ಬೀಳುವುದರೊಂದಿಗೆ ಅಲ್ಲಿ ಸಾಕಷ್ಟು ಶಕ್ತಿಯ ಸಂಗ್ರಹಣ ಆಗೇ ಆಗುತ್ತದೆ. ಇಲ್ಲಿ ನೈಸರ್ಗಿಕವಾಗಿ ದೊರೆಯುವ ಹರ್ಬಲ್ ಶೈಲಿಯ ಕ್ವಾರ್ಟ್ಸನ್ನು ನಾವು ಕಣ್ಣಿನ ಮಾಮೂಲಿನ ವ್ಯವಸ್ಥೆಗೆ ತೊಂದರೆಯಾಗದಂತೆ ಇಂಪ್ಲಾಂಟ್ ಮಾಡಲು ಸಾಧ್ಯವಾದಲ್ಲಿ ಈ ವಾದಕ್ಕೆ ಹೆಚ್ಚಿನ ಬೆಂಬಲ ಸಿಗುವುದರಲ್ಲಿ ಆಶ್ಚರ್ಯವೇನಿಲ್ಲ ಮತ್ತದು ಸಾಧ್ಯವಿದೆ ಕೂಡಾ.
ಯಾಕೆಂದರೆ ಮಿಂಚು ಹುಳುಗಳಾಗಲಿ… ರಾತ್ರಿ ಬೆಳಕು ಸೂಸುವ ಇತರೆ ಕೀಟಗಳಾಗಲಿ, ಕೆಲವೊಂದು ರಾತ್ರಿ ಬೆಳಕು ಬೀರುವ ಜೈವಿಕ ಸಸ್ಯಗಳಾಗಲಿ ನಮ್ಮ ಮುಂದಿರುವ ಸಣ್ಣ ಉದಾಹರಣೆಗಳೆ… ಒಮ್ಮೆ ಹೀಗೆ ಕಣ್ಣಿನಲ್ಲಿ ಹಗಲೆಲ್ಲಾ ಸೂರ್ಯನ ಶಕ್ತಿಯನ್ನು ಸಂಗ್ರಹಿಸಲು ಸಾಧ್ಯವಾಗುವಂತೆ ನಾವು ಹರ್ಬಲ್ ಕ್ವಾರ್ಟ್ಸ್‌ನ ಮೂಲಕ ಸಾಧಿಸಿದರೆ ಅಷ್ಟೆ, ಅದರಿಂದ ಹೊರಹೊಮ್ಮುವ ಬೆಳಕು ನೇರವಾಗಿ ಹೊರಕ್ಕೆ ಬಾರದೆ ಮೊದಲು ಕಣ್ಣಿನ ಒಳ ಆವರಣವಾದ ರೆಟಿನಾದ ವಕ್ರ ಮೇಲ್ಮೈ ಮೇಲೆ ಬೀಳುತ್ತದೆ. ಒಮ್ಮೆ ಅಲ್ಲಿಂದ ಹೊರಕ್ಕೆ ಚಿಮ್ಮಿಸಬೇಕೆಂದರೆ ಸಹಜವಾಗೇ ಭೂತಗನ್ನಡಿಯ ಥಿಯರಿಯಂತೆ ಅದು ಸಾಂದ್ರೀಕೃತಗೊಂಡು ದೃಷ್ಠಿಯ ಪಾಯಿಂಟಿನ ಕಡೆಗೆ ನುಗ್ಗುತ್ತದೆ.
ಅಸಲಿಗೆ ಈ ಮೊದಲೇ ಹೇಳಿದಂತೆ ಯಾವುದೇ ಒಂದು ಬೆಳಕಿನ ಕಿರಣದ ಕೇಂದ್ರದಿಂದ ಬಾಹ್ಯ ಕಿರಣಗಳನ್ನು ವಿಭಜಿಸಿದರೆ ಅದು ಲೇಸರ್ ಕಿರಣವಾಗಿ ಬದಲಾಗುತ್ತದೆ ಮತ್ತು ಆ ಕೆಲಸವನ್ನು ಈಗಾಗಲೇ ಕಣ್ಣಿನಲ್ಲಿ ದೃಷ್ಟಿ ಸಂಬಂಧಿ ಕ್ರಿಯೆಯಲ್ಲಿ ನಡೆಯುತ್ತಲೇ ಇದೆ. ಆದ್ರೆ ಇಲ್ಲಿಯವರೆಗೂ ಕಣ್ಣಿನಿಂದ ಕೇವಲ ವಸ್ತುವಿನ ಪ್ರತಿಫಲನವನ್ನು ಸ್ವೀಕರಿಸಿ ಪ್ರತಿಬಿಂಬವನ್ನು ಮೂಡಿಸುವ ಕೆಲಸವಾಗುತ್ತಿಡ್ದುದರಿಂದ ನಮಗೆ ಕಣ್ಣನ್ನು ಹೀಗೂ ಉಪಯೋಗಿಸಬಹುದು ಎನ್ನುವ ಅರಿವಿರಲಿಲ್ಲ. ಅಸಲಿಗೆ ಸಾಧನೆಯ ಮೂಲಕ ಕಣ್ಣನ್ನು ಎಷ್ಟೊಂದು ಪವರ್ ಫುಲ್ ಆಗಿ ಬಳಸುತ್ತಾರೆನ್ನುವುದು ಗೊತ್ತೇ ಇದೆ. ಅವರೆಲ್ಲಾ ಕಣ್ಣಿನಿಂದ ಕಿರಣಗಳನ್ನು ಯಾವ ರೀತಿಯಲ್ಲಿ ಸಂಕುಚಿಸಿ ದೃಷ್ಠಿಯನ್ನು ಹೊರಹಾಕುತ್ತಾರೋ ಅದೇ ಕ್ರಿಯೆಯನ್ನು ಇಲ್ಲಿ ಬಳಸಿಕೊಳ್ಳಬೇಕಾಗುತ್ತದೆ.
ಹಾಗೆ ಒಮ್ಮೆ ವಕ್ರ ಮೇಲ್ಮೈ ಮೇಲೆ ಬೀಳುವ ಬೆಳಕು ಸಹಜವಾಗೇ ಲೇಸರ್ ಆಗಿ ಬದಲಾಗುತ್ತಾ, ಅದೂ ಸಾಂದ್ರೀಕೃತಗೊಂಡು ಹೊಮ್ಮುವ ಬೆಳಕಿನ ಕಿರಣವಾಗಿದ್ದರಿಂದ ಸಾಕಷ್ಟು ಪವರ್ ಫುಲ್ ಆಗಿ ನುಗ್ಗಿ ಬರುತ್ತದೆ. ಜೊತೆಗೆ ಭೂತಗನ್ನಡಿಗೆ ಹೋಲಿಸಿದರೆ ರೆಟಿನಾದ ಒಳಮೈ ರೇಡಿಯಸ್ ತುಂಬಾ ಹೆಚ್ಚು. ಹಾಗಾಗಿ ಪ್ರತಿಫಲಿಸುವ ಕಿರಣಗಳ ಮಟ್ಟ ಕೂಡಾ ತುಂಬಾ ಹೆಚ್ಚು. ಅದನ್ನು ಸರಿಯಾಗಿ ದೃಷ್ಟಿಯನ್ನು ಕುಗ್ಗಿ ಪ್ರಯೋಗಿಸುವುದರ ಮೂಲಕ ಉಪಯೋಗಿಸಿದರೆ ಅದು ಬರಿ ಸುಡುವುದೇನು… ನೇರವಾಗಿ ಸೀಳಿ ಬಿಡಬಲ್ಲಷ್ಟು ಪ್ರಖರವಾಗಿ ಕಿರಣದ ರೂಪದಲ್ಲಿ ಬರುತ್ತದೆನ್ನುವುದರಲ್ಲಿ ಸಂಶಯವೇ ಇಲ್ಲ.
ಇನ್ನು ಕಣ್ಣನ್ನು ಕುಗ್ಗಿಸಿ ಪ್ರಯೋಗಿಸುವುದೆಂದರೇನು… ? ಅಸಲಿಗೆ ನಾವು ಯಾವುದೇ ದೂರದ ಅಥವಾ ತುಂಬಾ ಹತ್ತಿರದ ವಸ್ತು ಅಥವಾ ದೃಶ್ಯಗಳನ್ನು ನೋಡುವಾಗ ಮಾಡುವ ಕಣ್ಣಿನ ವ್ಯತ್ಯಾಸಾತ್ಮಕ ಪರಿಧಿಯಿಂದ ಹೊರಬೀಳುವ ಮತ್ತು ಒಳ ಬರುವ ಬೆಳಕಿನ ಕಿರಣದಿಂದಾಗಿ ಸ್ಪಷ್ಟತೆ ಹೆಚ್ಚಾಗುತ್ತದೆ. ಕೆಲವೊಮ್ಮೆ ನೇರವಾಗಿ ಕಾಣದ ಚಿತ್ರಗಳು ಕಣ್ಣಿನ ಕುಗ್ಗಿಸಿ ನೋಡುವ ದೃಷ್ಟಿಗೆ ಸ್ಪಷ್ಟವಾಗೇ ಗೋಚರಿಸುತ್ತವೆ. ( ಟಿ.ವಿ.ಯಲ್ಲಿ ಕೆಲವು ಚಿತ್ರಗಳನ್ನು ಬೇಕೆಂದೆ ಮಸುಕಾಗಿಸಿದ್ದನ್ನು ಈ ವಿಧಾನದ ಮೂಲಕ ಸ್ಪಷ್ಟವಾಗೇ ನೋಡಬಹುದು. ಆದರೆ ಇದನ್ನು ಸಾಧಿಸಲು ಕೊಂಚ ಪ್ರಯತ್ನಿಸಬೇಕಾಗುತ್ತದೆ ) ಆಗ ಕಣ್ಣಿನ ರೆಟಿನಾಗೆ ಪೂರೈಸುವ ಬೆಳಕಿನ ಕಿರಣಗಳ ಸಾ೦ದ್ರತೆ ಮಾಮೂಲಿನದಕ್ಕಿಂತ ಶೇ. ಐವತ್ತಕ್ಕೂ ಹೆಚ್ಚು. ಇದನ್ನೇ ರಿವರ್ಸಾಗಿ ಉಪಯೋಗಿಸಿದಾಗ ಅಗತ್ಯದಷ್ಟು ಬೆಳಕು ತೂರಿ ಹೋಗುತ್ತದೆ. ಹೀಗೆ ತೂರಿ ಹೋಗುವ ದೃಷ್ಟಿಯ ಕಿರಣಗಳ ಜೊತೆಯಲ್ಲಿ ಕಣ್ಣಿನ ಒಳಾವರಣದಲ್ಲಿ ಸ್ಥಾಪಿತಗೊಳ್ಳುವ ಕ್ವಾರ್ಟ್ಸ್ ಮಣಿಗಳು ಬೆಳಕನ್ನು ಸಂಕುಚಿಸಿ ಹೊರಬಿಟ್ಟರೆ ಎದುರಿಗಿರುವ ಯಾವುದೇ ಪದಾರ್ಥ ಮಟಾಶ್… “ದೊಡ್ಡದಾಗಿ ಕೈಯೆತ್ತಿ ಘೋಷಿಸಿದರು ಪ್ರೊಫೆಸರ್ ಸ್ಟ್ಯಾನ್ಲಿ.
ಅವರೆಷ್ಟು ಉತ್ಸುಕರಾಗಿದ್ದರೆಂದರೆ ಇನ್ನು ಕೆಲವೇ ದಿನದಲ್ಲಿ ಅವರು ಮಾನವನ ಮಾಮೂಲಿನ ಕಣ್ಣಿಗೆ ಪರಶಿವನ ಶಕ್ತಿಯನ್ನು ತುಂಬುವುದು ಖಚಿತವಾಗಿತ್ತು. ಆದರೆ ಇದನ್ನು ದೇವ್ ವಿರೋಧಿಸಿದ್ದ. ಇದರಿಂದ ಯಾವುದೇ ಉಪಯೋಗ ಇದೆ ಎನ್ನುವುದಕ್ಕಿಂತಲೂ ಏನಾದರೂ ಅವಘಡ ನಡೆಯುವ ಸಂದರ್ಭವೇ ಜಾಸ್ತಿ ಎಂದರೂ ವೃದ್ಧ ವಿಜ್ಞಾನಿ ಕಿವಿಗೊಡಲಿಲ್ಲ. ಕೇವಲ ಆರು ತಿಂಗಳ ಅವಧಿಯಲ್ಲಿ ಅದನ್ನು ಕೈವಶ ಮಾಡಿಕೊಂಡರು. ಪ್ರಾಯೋಗಿಕ ಪರೀಕ್ಷೆಗಳು ನಡೆದವು. ಫಲಿತಾಂಶ ಅದ್ಭುತವಾಗಿತ್ತು. ಅದಾದ ಕೆಲವೇ ದಿನದಲ್ಲಿ ಮಿಲ್ಟನ್ ಅದನ್ನು ಅಪಹರಿಸಿ ತನ್ನೊಂದಿಗೆ ಒಯ್ದು ಬಿಟ್ಟಿದ್ದ. ಅಕ್ಷರಶ: ಅದನ್ನು ತನ್ನ ಮೇಲೆ ಪ್ರಯೋಗಿಸಿಕೊಂಡಿದ್ದನಲ್ಲದೇ ತನಗೆ ಬೇಕಾದಂತೆ ಅದನ್ನು ಉಪಯೋಗಿಸಲು ಆರಂಭಿಸಿದ್ದ.
ಅವನನ್ನು ತಡೆಯುವ ಮುಂಚೆ ಒಮ್ಮೆ ಆ ಕಣ್ಣನ್ನು ತೆರೆದು ಕಿರಿದುಗೊಳಿಸಿ ಪ್ರಯೋಗಿಸಿದರೆ ಸಾಕಿತ್ತು. ಸುಮಾರು ಐವತ್ತು ಅರವತ್ತು ಮೀಟರ್ ದೂರದವರೆಗಿನ ವ್ಯಕ್ತಿ ವಸ್ತುಗಳೆಲ್ಲಾ ಪ್ರೊಫೆಸರ್ ಹೇಳಿದಂತೆ ಮಟಾಶ್. ಆದರೆ ಅದರ ದುರುಪಯೋಗ ವ್ಯವಸ್ಥಿತವಾಗಿ ಮಿಲ್ಟನ್ ಆರಂಭಿಸಿದ್ದ. ಜೊತೆಗೆ ಅದರ ಮುಂದಿನ ಗುರಿ ಪ್ರೊಫೆಸರ್ ಎನ್ನುವುದರಲ್ಲಿ ಯಾವುದೇ ಸಂಶಯವಿರಲಿಲ್ಲ. ಕಾರಣ ಆ ಪ್ರಯೋಗಕ್ಕೆ ಸಂಬಂಧಿಸಿದ ಇಬ್ಬರನ್ನು ಅವನು ಆಗಲೇ ಬಲಿತೆಗೆದುಕೊಂಡಾಗಿತ್ತು. ಅದರ ಜೊತೆಗೆ ತನ್ನ ಚಟಕ್ಕೆ ಒಬ್ಬನನ್ನು ಕೊಂದಿದ್ದ. ಇನ್ನೋರ್ವಳನ್ನು ತೀಟೆಗೆ ಬಳಸಿಕೊಂಡು ಅರ್ಧ ಸುಟ್ಟಿದ್ದ. ಸಹಜವಾಗೇ ಪ್ರೊಫೆಸರ್ ಸಾವಿನ ಬಾಗಿಲಿಗೆ ಬಂದು ನಿಂತಿದ್ದರು.
*
*
*
ಮಿಲ್ಟನ್‌ನನ್ನು ತಲುಪಬೇಕಾದ ಒಂದೇ ಒಂದು ದಾರಿಯೆಂದರೆ ಅವನಿಗೆ ಈಗ ಪ್ರೊಫೆಸರ್ ಇಲ್ಲಿದ್ದಾರೆಂದು ತಿಳಿಯ ಪಡಿಸುವುದು. ಇಲ್ಲವಾದರೆ ಅವನು ಇಷ್ಟೊತ್ತಿಗೆ ಇಲ್ಲಿಗೆ ಬರುತ್ತಾನೆಂದು ತಿಳಿದುಕೊಂಡು ಹೊ೦ಚು ಹಾಕಿ ಹಿಡಿಯಬೇಕು. ಒಮ್ಮೆ ಅವನು ಕಣ್ಬಿಟ್ಟು ಬೆಂಕಿಯುಗುಳುವ ಮುಂಚೆ ಹಿಡಿದು ನಿಲ್ಲಿಸಿದರೆ ನಂತರ ಅವನನ್ನು ಆಪರೇಶನ್ ಟೇಬಲ್‌ಗೆ ಹೊತ್ತೊಯ್ಯುವುದು ಕಷ್ಟವೇನಲ್ಲ. ಆದರೆ ಅದು ಅಷ್ಟು ಸುಲಭವಲ್ಲ. ಯಾಕೆಂದರೆ ಅವನಿಗೂ ಗೊತ್ತು ಒಮ್ಮೆ ತಾನು ಅದನ್ನು ಅಪಹರಿಸಿದ ನಂತರ ಪ್ರೊಫೆಸರ್ ತನ್ನ ಹಿಂದೆ ಬಿದ್ದಿರುತ್ತಾನೆಂದು ಅಥವಾ ಪೋಲಿಸ್… ಆದರೆ ಅವನು ದೇವ್ ದೇವ್ ಕೂಡಾ ಹೀಗೆ ಹಿಂಬಾಲಿಸಬಹುದೆಂದು ಅಂದಾಜಿಸಲಿಲ್ಲ.
ಕೂಡಲೇ ದೇವ್ ಮತ್ತು ನೇಹಾ ಇಬ್ಬರೂ ಮಿಲ್ಟನ್‌ನ ಮೊಬೈಲ್ ನಂಬರನ್ನು ತೆಗೆದುಕೊಂಡು ಅದರ ಆಧಾರದ ಮೇಲೆ ಅವನನ್ನು ಟ್ರೇಸ್ ಮಾಡಲು ಯತ್ನಿಸಿದರು. ಅದೂ ಆಗಲಿಲ್ಲ. ಮಿಲ್ಟನ್ ತುಂಬಾ ಅಗತ್ಯವಿದ್ದಾಗ ಮಾತ್ರ ಮೊಬೈಲ್ ಬಳಸಲಾರಂಭಿಸಿದ್ದ. ಅಲ್ಲದೆ ಈ ಮೊದಲೇ ಎಸಗಿದ ಅಪರಾಧಗಳನ್ನು ಗಮನಿಸಿದರೆ ಅವನು ಅದಕ್ಕಾಗಿ ಕೈಗೊಂಡಿರಬಹುದಾದ ತಯಾರಿಯೂ ಕೂಡಾ ಅದ್ಭುತವಾಗಿದ್ದು ಕಂಡು ಬಂತು. ಕೂಡಲೇ ಅವನು ಮೇಯಿಲ್ ಡೌನ್ ಮಾಡುತ್ತಿದ್ದಾನೋ ಇಲ್ಲವೋ ಎನ್ನುವುದನ್ನು ಹ್ಯಾಕಿಂಗ್ ಮಾಡುವುದರ ಮೂಲಕ ಪತ್ತೆ ಹಚ್ಚಿದ ನೇಹಾ ಅವನನ್ನು ಬಲೆಗೆ ಹಾಕಲು ಒಂದು ಉಪಾಯ ಸೂಚಿಸಿದಳು. ಅದರಂತೆ ಒಮ್ಮೆ ಮಿಲ್ಟನ್ ಮೊಬೈಲಿನಲ್ಲಿ ದೇವ್‌ನಿಗೆ ಭೇಟಿಯಾದ.
“ಮಿಲ್ಟನ್ ದಯವಿಟ್ಟು ಇಲ್ಲಿವರೆಗೆ ಆಗಿದ್ದನ್ನು ನಾವು ಯಾರಿಗೂ ತಿಳಿಸುವುದಿಲ್ಲ. ಆದ್ದರಿಂದ ನೀನು ಆ ಆಪರೇಶನ್‌ನಿಂದ ಹೊರಕ್ಕೆ ಬಂದು ಬಿಡು. ..”
“ಹ್ಹ… ಹ್ಹ… ಹ್ಹಾ… ನೋಡು ದೇವ್ ಮೊದಲಿನಿಂದಲೂ ನಾನು ನಿಮ್ಮಷ್ಟು ಬುದ್ಧಿವಂತನಲ್ಲ. ಆದರೆ ಈ ಬಾರಿ ಮೋಸ ಹೋಗಲಿಲ್ಲ. ಅಷ್ಟಕ್ಕೂ ನನಗೆ ಬೇಕಾದ್ದನ್ನೆಲ್ಲಾ ಪಡೆಯುತ್ತಿದ್ದೇನೆ. ನಿಮ್ಮ ಕೈಗೆ ಸಿಕ್ಕರೆ ಅಷ್ಟೆ. ನನ್ನನ್ನು ನನ್ನ ಈ ಪವರ್ ಫುಲ್ ಕಣ್ಣನ್ನು ಇನ್ನಿಲ್ಲದಂತೆ ತೆಗೆದು ಬಿಸಾಡುತ್ತೀರ. ಮಿ.ದೇವ್ ಅದೆಲ್ಲಾ ಆಗೋಲ್ಲ. ಸಧ್ಯ ನಿನ್ನ ಮೇಲೆ ನನ್ನ ಕಣ್ಣು ಬಿದ್ದಿಲ್ಲ ಅದಕ್ಕೆ ಖುಷಿಪಡು..”ಎಂದ.
“ನೋ.. ಮಿಲ್ಟನ್ ನೋಡು… “ಇನ್ನೇನೊ ಹೇಳಲಿದ್ದಳು ನೇಹಾ. ಅಷ್ಟರಲ್ಲಿ ಆ ಕಡೆಯಿಂದ ಕರ್ಕಶವಾಗಿ ನುಡಿದ ಮಿಲ್ಟನ್.
“ಏಯ್ ಹುಡುಗಿ ನೀನು ತುಂಬ ಬುದ್ಧಿವಂತೆ ಅಂದ್ಕೋಬೇಡ. ಏನಾದರೂ ಮಾಡಿ ನನ್ನನ್ನು ಹಿಡಿಯಲು ಬೀಸುತ್ತಿರುವ ಉಪಾಯವಿದು. ನೆನಪಿಟ್ಟುಕೋ. ನನಗೆ ಬೇಕಾದ ಹೆಣ್ಣನ್ನು … ವಸ್ತುವನ್ನು ನಾನು ಬೇಕಾದ ರೀತಿಯಲ್ಲಿ ಪಡೆಯಬಲ್ಲೆ. ನೀನು ಅದಕ್ಕೆ ಬಲಿಯಾಗಬಾರದೆಂದಿದ್ದರೆ ಆ ಮುದುಕನ್ನ ಅವನ ಪಾಡಿಗೆ ಬಿಟ್ಟು ನನಗೆ ಬಲಿ ಕೊಟ್ಟು ಬಿಡು. ಇಲ್ಲದಿದ್ದರೆ ಅವನಿಗಿಂತಲೂ ಮೊದಲು ನೀವು ಬಲಿಯಾಗುತ್ತೀರ.. ಹುಶಾರ್..”ಎಂದವನೇ ಸಂಪರ್ಕ ಕತ್ತರಿಸಿದ.
ಇನ್ನು ಅವನೊಡನೆ ಮಾತಾಡಿ ಉಪಯೋಗ ಇಲ್ಲ ಎನ್ನಿಸಿತು. ಆದರೆ ಯಾವುದೇ ಕಾರಣಕ್ಕೂ ಪ್ರೊಫೆಸರ್ ಅವನ ಕಣ್ಣಿಗೆ ಬೀಳದಂತೆ ರಕ್ಷಿಸಿಕೊಳ್ಳಬೇಕು. ಅದು ಮುಖ್ಯ. ಆದರೆ ಅದು ಅಷ್ಟು ಸುಲಭದಲ್ಲಿ ಸಾಧ್ಯವಿರಲಿಲ್ಲ. ಕಾರಣ ತುಂಬ ಹತ್ತಿರದಲ್ಲೇ ಪ್ರೊಫೆಸರ್ ತುಂಬಿದ ಸಭೆಯನ್ನು ಉದ್ದೇಶಿಸಿ ಮಾತಾಡಬೇಕಿತ್ತು. ಮತ್ತದಾಗಲೇ ಜಗಜ್ಜಾಹೀರಾದ ವಿಷಯವಾಗಿತ್ತು. ಅಲ್ಲಿ ಪ್ರೊಫೆಸರ್‌ನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಬಹುಶ ಪೊಫೆಸರ್ ತಮ್ಮ ಪ್ರಯೋಗಕ್ಕೇ ಬಲಿಯಾಗುತ್ತಾರಾ…? ಗೊತ್ತಿಲ್ಲ… ತಲೆ ಕೆದರಿಕೊಳ್ಳುತ್ತಾ ಲ್ಯಾಬ್ ನತ್ತ ಸರಿದು ಹೋದರು ಇಬ್ಬರು.
*
*
*
ಆ ಸಭಾ ಭವನ ಇನ್ನಿಲ್ಲದಂತೆ ತುಂಬಿದೆ. ಪ್ರೊಫೆಸರ್ ಯಾವ ಮಾರ್ಗವಾಗಿ ಬರುವುದೋ ಅದನ್ನು ಮೊದಲೇ ನಿರ್ಧರಿಸಿ ತಕ್ಕ ಬಂದೋಬಸ್ತು ಮಾಡಲಾಗಿತ್ತು. ಆದರೆ ಈ ಎಲ್ಲ ಗಡಿಬಿಡಿಯ ಮಧ್ಯೆ ಎಲ್ಲೊ ಒಂದು ಕಡೆಯಿಂದ ಮಿಲ್ಟನ್‌ನ ದೃಷ್ಠಿಗೆ ನಿಲುಕಿದರೂ ಸಾಕಲ್ಲ. ಪ್ರೊಫೆಸರ್ ಕಥೆ ಮುಗಿದಂತೆನೆ. ಅದಕ್ಕಾಗಿಯೇ ಪ್ರೊಫೆಸರಿಗೆ ಒಳಗಿನ ಕೋಣೆಯಿಂದಲೇ ಭಾಷಣ ಮಾಡುವಂತೆಯೂ ಅದನ್ನು ಕ್ಯಾಮೆರಾಗಳ ಮೂಲಕ ಎಲ್ಲರೆದುರಿಗೆ ಸ್ಕ್ರೀನ್ ಮೇಲೆ ಪ್ರಸಾರ ಮಾಡುವುದೆಂದು ಯೋಜಿಸಲಾಯಿತು. ಅದೇ ರೀತಿಯಲ್ಲಿ ಎಲ್ಲ ಸಿದ್ಧತೆಗಳು ಜರುಗಿದವು. ಪ್ರೊಫೆಸರ್ ಗುಪ್ತವಾಗಿ ಬಂದು ಆ ಕೋಣೆಯನ್ನು ಸೇರಿಕೊಂಡರು. ಕೆಲವೇ ಕ್ಷಣದಲ್ಲಿ ಅವರ ಭಾಷಣ ಆರಂಭವಾಗಲಿತ್ತು. ಆದರೆ ಈ ಮೊದಲೇ ಅಲ್ಲಿಗೆ ಬಂದು ಸೇರಿದ್ದ ಮಿಲ್ಟನ್ ನಿಧಾನಕ್ಕೆ ಪ್ರೊಫೆಸರ್ ಕೋಣೆಯಲ್ಲಿ ಕಾಲಿಟ್ಟ.
“ನೋ.. ಮಿಲ್ಟನ್ ಏನೂ ಮಾಡ್ಬೇಡ..”ಕೂಗಿದರು ಪ್ರೊಫೆಸರ್.
“ಪ್ರೊಫೆಸರ್ ಸ್ಟ್ಯಾನ್ಲಿ. ತುಂಬಾ ಉಪಕಾರ ಮಾಡಿದ್ದೀಯ ಈ ಪ್ರಯೋಗ ಕಂಡು ಹಿಡಿದು. ಅದಕ್ಕಾಗಿ ನಿನಗೆ ಯಾವುದೇ ಚಿತ್ರ ಹಿಂಸೆಯಾಗದಂತೆ ಕೊಂದು ಬಿಡುತ್ತೇನೆ. ನೇರವಾಗಿ ಎದೆಗೆ ಹಾಯಿಸಲಾ ಲೇಸರ್ ಬೀಂ ನ್ನು. “ವಿಕಟವಾಗಿ ನಕ್ಕ ಮಿಲ್ಟನ್. ಆಗ ಎದ್ದು ನಿಂತರು ಪ್ರೊಫೆಸರ್ ಅವನೆದುರಿಗೆ,
“ಮೂರ್ಖಾ ನಿನ್ನಂತವರು ಇದ್ದೇ ಇರುತ್ತಾರೆ ಎಂದು ನಾನದಕ್ಕೆ ಪರ್ಯಾಯವನ್ನು ಕಂಡುಕೊಂಡಿದ್ದೆ. ಅದನ್ನು ಪ್ರಯೋಗಾತ್ಮಕವಾಗಿ ಪ್ರಯೋಗಿಸಿರಲಿಲ್ಲ ಅಷ್ಟೆ. ಅದೇನು ಮಾಡುತ್ತೀಯೊ ಮಾಡಿಕೊ. ನಿನ್ನಿಂದ ಹೇಗೆ ಬದುಕಿಕೋ ಬೇಕು ನನಗೆ ಗೊತ್ತು…”ಎನ್ನುತ್ತಾ ಆಚೆ ತಿರುಗಿದರು.
“ಪ್ರೊಫೆಸರ್ … “ಎನ್ನುತ್ತಾ ಮಿಲ್ಟನ್ ಒಮ್ಮೆ ಜೋರಾಗಿ ಕಿರುಚಿ ಅವರೆದುರಿಗೆ ಕಣ್ಣನ್ನು ಉಜ್ಜುತ್ತಾ ಕಿರಿದುಗೊಳಿಸಿ ತೀಕ್ಷ್ಣವಾಗಿ ದಿಟ್ಟಿಸಿ ಬೀಂನ್ನು ಹರಿಸಲು ಯತ್ನಿಸಿದ. ಅಷ್ಟೊತ್ತಿಗೆ ಅಲ್ಲೆಲ್ಲಾ ಕರೆಂಟು ಹೊರಟು ಹೋಗಿ ಕತ್ತಲು ಕೋರೈಸಿತು.
“ಎಯ್..”ಎಂದು ಕಿರುಚಿದ ಮಿಲ್ಟನ್. ಮುಂದಿನ ಎರಡು ಸೆಕೆಂಡುಗಳಲ್ಲಿ ಬೆಳಕು ಮರಳಿತು. ಅಷ್ಟು ದೂರದಲ್ಲಿದ್ದಾರೆ ಪ್ರೊಫೆಸರ್. ಮಿಲ್ಟನ್ ಬೀಂ ನ್ನು ತೂರಿ ಅವರ ಮೇಲೆ ಬಿಟ್ಟ. ಆಗ ನಡೆಯಿತಾ ಘಟನೆ…. ಸರಕ್ಕನೆ ಪ್ರೊಫೆಸರ್ ತಿರುಗಿದಂತೆ ಆಯಿತು. ಮರುಕ್ಷಣದಲ್ಲಿ ನೂರಾರು ಕಿರಣಗಳು ಅವನ ಸುತ್ತಲೂ ತೂರಿ ಬಂದವು. ಮುಖ್ಯವಾಗಿ ಅವನ ಕಣ್ಣಿಗೆ ಇನ್ನಿಲ್ಲದ ಘಾಸಿಯಾಗುವಂತೆ ಚಿಮ್ಮಿಬಂದ ಕಿರಣಗಳು ಅವನನ್ನು ಘಾಸಿಗೊಳಿಸಿ ಕೆಡವಿದವು. ನೆಲಕ್ಕೆ ಬಿದ್ದ ಮಿಲ್ಟನ್ ಒದ್ದಾಡ ತೊಡಗಿದ. ಕಣ್ಣುಗಳಲ್ಲಿ ಬೆಂಕಿ ಇಟ್ಟ ಅನುಭವ. ಎದ್ಡು ನಿಲ್ಲಲಾಗುತ್ತಿಲ್ಲ. ಆ ಪಕ್ಕದಿಂದ ಆ ಸದ್ಡು ಕೇಳಿಸಿತು.
“ಮಿಲ್ಟನ್. ನಿನಗೆ ಈ ಮೊದಲೇ ಎಚ್ಚರಿಸಿದ್ದೆ. ಆದರೆ ನೀನು ಕೇಳಲಿಲ್ಲ. ಈಗ ಅನುಭವಿಸು. ನೀನು ಎಲ್ಲಿಂದಾದರೂ ಪ್ರೊಫೆಸರ್ ಮೇಲೆ ಗುರಿಯಿರಿಸಿಕೊಂಡು ಬಂದೆ ಬರುತ್ತಿ ಎಂದು ನನಗೆ ಗೊತ್ತಿತ್ತು. ಅದಕ್ಕೆ ಈ ರೂಮನ್ನು ವಿಶೇಷವಾಗಿ ವ್ಯವಸ್ಥೆಗೊಳಿಸಲಾಗಿತ್ತು. ರೂಲಿಂಗ್ ಮೀರರ್‌ಗಳ ಮೇಲೆ ಬೀಳುವ ಬೆಳಕು ಎಲ್ಲವೂ ಒಂದೇ ಕೋನದಲ್ಲಿ ಪ್ರತಿಫಲಿಸುವಂತೆ ಲೆಕ್ಕಾಚಾರ ಮಾಡಿ ಯಾವ ಕೋನಗಳಿಗೂ ತಿರುಗುವಂತೆ ಹೊಂದಿಸಲಾಗಿತ್ತು.
ನಿನಗೆ ಬರಬೇಕಾದ ದಾರಿ ಒಂದೇ ಒಂದು. ಅಲ್ಲಿಂದ ಹೇಗೆ ನೋಡಿದರೂ ಇಂಥಲ್ಲೇ ನಿನ್ನ ದೃಷ್ಠಿ ಬೀಳುತ್ತೆ ಎಂದು ಅಂದಾಜಿಸಿದ ನನ್ನ ಊಹೆ ತಪ್ಪಾಗಲಿಲ್ಲ. ಅದಕ್ಕೆ ರೂಲಿಂಗ್ ಮೀರರ್‌ಗಳನ್ನು ಹೊಂದಿಸಿಟ್ಟು ಅಕಸ್ಮಾತ ಮೊದಲ ಬಾರಿಗೆ ನಿನಗೆ ಘಾಸಿಯಾಗದಿದ್ದರೆ ನಂತರದಲ್ಲಾದರೂ ನಿನ್ನ ನೇರಕ್ಕೆ ಹೊಂದಿಕೆಯಾಗುವಂತೆ ಚಲಿಸುವ ಕನ್ನಡಿಗಳ ಬ್ರಹತ್ ವ್ಯವಸ್ಥೆ ಮಾಡಿಸಿದ್ದೆ. ಅದಕ್ಕೆ ತಕ್ಕಂತೆ ಕರೆಂಟು ಹೋದಾಕ್ಷಣ ಕಕ್ಕಾಬಿಕ್ಕಿಯಾದ ನೀನು ಬೆಳಕು ಬಂದ ತಕ್ಷಣ ಮಾನವನ ಸಹಜ ಸ್ವಭಾವದಂತೆ ಬೆಳಕಿನ ಮೂಲದತ್ತ ದೃಷ್ಠಿ ಹರಿಸಿದೆ.
ಅಷ್ಟೊತ್ತಿಗಾಗಲೇ ತಡವಾಗಿತ್ತು. ನಿನಗೆ ಕಂಡಿದ್ಡು ಪ್ರೊಫೆಸರ್ ಬಿಂಬ ಮಾತ್ರ. ಕೂಡಲೇ ಪ್ರತಿಕ್ರಿಯಿಸಿದ್ದಿ. ನಿನ್ನ ಕಣ್ಣಿನಿಂದ ಹೊರಟ ಬೀಂಗಳು ತಮ್ಮ ಕೆಲಸ ಪೂರೈಸಿದ್ದವು. ನೀನು ಉರಿಸಿದ ಬೆಂಕಿಯ ಕಿರಣ ನಿನಗೇ ಹಿಂದಿರುಗಲು ನಾನು ಮಾಡಿದ ವ್ಯವಸ್ಥೆ ತುಂಬಾ ಸರಿಯಾಗಿ ಕಾರ್ಯ ನಿರ್ವಹಿಸಿದವು. ಎಷ್ಟೆಂದರೂ ಅದು ಗಾಜು. ಬಿದ್ದ ಬೆಳಕಿನ ಕಿರಣಗಳನ್ನು ಅದೇ ವೇಗ ಮತ್ತು ಕೋನದಲ್ಲಿ ಹಿಂದಿರುಗಿಸುತ್ತೆ. ನೀನು ಕಣ್ಣನ್ನು ತೆರೆಯುತ್ತಿದ್ದಂತೆ ಎಲ್ಲೆಡೆಯಿಂದ ಕೇಂದ್ರೀಕೃತವಾಗಿ ಹೊರಟ ಕಿರಣಗಳು ಪ್ರತಿಫಲಿಸಿ, ನಿನ್ನ ಮೇಲೆ ಮುಖ್ಯ ನಿನ್ನ ಕಣ್ಣಿಗೇ ದಾಳಿ ಮಾಡಿದವು. ಅದರ ಮೇಲೆ ಅದೇ ಮೀರರ್‌ಗಳ ಪ್ಯಾರಾಬೊಲಿಕ್ ಏಫ್ಹೆಕ್ಟ್ ಕೂಡಾ ಅದರೊಂದಿಗೆ ಇದ್ದುದರಿಂದ ನೀನೀಗ ಸಂಪೂರ್ಣ ದೃಷ್ಠಿಯನ್ನು ಕಳೆದುಕೊಂಡಿದ್ದರೂ ಹೆಚ್ಚೇನಲ್ಲ. ಪ್ರೊಫೆಸರಿಂದ ಪಡೆದಿದ್ದ ಮೂರನೆಯ ಕಣ್ಣಿನ ಬದಲಾಗಿ ನಿನ್ನ ಎರಡೂ ಕಣ್ಣು ಹೋದರೂ ಆಶ್ಚರ್ಯವೇನಿಲ್ಲ.”ಸ್ಪಷ್ಟವಾಗಿ ನುಡಿದ ದೇವ್.
“ಪ್ರೊಫೆಸರ್ ಬನ್ನಿ “ಎನ್ನುತ್ತ ಹೊರಕ್ಕೆ ಹೋಗಿ ಬಾಗಿಲು ಹಾಕಿಕೊಂಡ. ಎದ್ಡು ನಿಂತ ಮಿಲ್ಟನ್‌ಗೆ ಸುತ್ತಲೂ ಗಾಡಾಂದಾಕಾರದ ವಿನಹ ಇನ್ನೇನು ಕಾಣಲಿಲ್ಲ. ಎರಡು ನಿಮಿಷ ಹಾಗೆ ಕಳೆದ. ಅಷ್ಟರಲ್ಲಿ ಹೊರಗಿನಿಂದ ಪ್ರೊಫೆಸರ್ ಭಾಷಣ ಕೇಳಿ ಬರಲಾರಂಭಿಸಿತು.
“ಎಸ್. ಯಾವುದೇ ಕಾರಣದಿಂದಲೂ ವಿಜ್ಞಾನ ಮಾನವನ ಕೈಯ್ಯಲ್ಲಿ ಆಟಿಕೆಯಂತಾಗಬಾರದು…”ಇತ್ಯಾದಿ. … ಇತ್ಯಾದಿ… ಜೋರಾಗಿ ಕಿರುಚಬೇಕೆಂದವನು ಸುಮ್ಮನಾಗಿ ಬಿಟ್ಟ ಮಿಲ್ಟನ್ ಹೊರಗಡೆ ಹೋಗಬೇಕೆಂದು ಕೊಂಡು ಅತ್ತ ಹೆಜ್ಜೆ ಸರಿಸಿದ. ಎದುರಿಗೆ ಕತ್ತಲೆಯ ಪರದೆ ಎದ್ದು ನಿಂತಿತ್ತು. ಸುತ್ತಲೂ ಬರಿ ಕತ್ತಲು… ಕತ್ತಲು… ಅಸ್ಪಷ್ಟ ಬೆಳಕು… ದೃಷ್ಠಿ ಸಹಕರಿಸಲಿಲ್ಲ.
*****