[೧]
ಜಡಿಮಳೆಯ ಅಡಿಯಲ್ಲೇ ದಾಪುಗಾಲು ಹಾಕುತ್ತಿದ್ದರು ಬೀರಾನ್ ಕೋಯಾ. ನಾಲ್ಕು ಹೆಜ್ಜೆಗಳಿಗೊಮ್ಮೆ ರಪ್ಪನೆ ರಾಚುವ ಮಳೆಗಾಳಿ ಮುದಿ ಕೋಲುದೇಹವನ್ನು ಥರಗುಟ್ಟಿಸುತ್ತಿತ್ತು. ಎರಡೂ ಕೈಗಳಿಂದ ಅಮುಕಿ ಹಿಡಿದಿದ್ದ ಕೊಡೆಯನ್ನು ಸ್ವಲ್ಪ ವಾಲಿಸಿದ ಕೋಯಾ ಕೈಗಡಿಯಾರಕ್ಕೆ ಕಣ್ಣು ನೆಟ್ಟರು. ವಾಟರ್ ಪ್ರೊಫ್ ‘ಸೀಕೋ; ಐದು ದಾಟುತ್ತಲಿತ್ತು. ನಡಿಗೆ ಚುರುಕಾಯಿತು. ಮುತ್ತುಚ್ಚೇರ ಜುಮ್ಮಾ ಮಸೀದಿಯ ಪಕ್ಕದ ಕಾಲು ಹಾದಿ ಹೊಕ್ಕು ಬೀಚ್ ರೋಡಿಗೆ ಕಾಲಿರಿಸುವಷ್ಟರಲ್ಲಿ ಮಳೆಯ ಬಿರುಸು ಕಡಿಮೆಯಾಗತೊಡಗಿತು.
ಬೀಚ್ ರೋಡಿನ ಎಡಕ್ಕೆ ಸಿಮೆಂಟ್ ಬಂಗಲೆಗಳಿವೆ; ಬಣ್ಣ ಬಣ್ಣದ ಕಾರುಗಳನ್ನಿಡಲು ಕಬ್ಬಿಣದ ಬಾಗಿಲುಗಳಿರುವ ಶೆಡ್ಡುಗಳಿವೆ. ಬೀಚ್ ರೋಡಿನ ಬಲಕ್ಕೆ ಜಾರುವ ಮರಳ ನೆಲದ ಮೇಲೆ ಸೋಗೆ ಗುಡಿಸಲುಗಳ ಉದ್ದದ ಓರೆಕೋರೆ ಸಾಲಿದೆ. ಮನೆಗಳ ಎದುರು ರಸ್ತೆಯಂಚಿನಲ್ಲಿ ಮಕ್ಕಳು ಗೋಲಿಯಾಡಲು ತೋಡಿರುವ ಸಣ್ಣಪುಟ್ಟ ಗುಣಿಗಳಿವೆ. ಗುಡಿಸಲುಗಳ ಬೆನ್ನ ಹಿಂದೆ ಎತ್ತರವಾಗಿ ಕಾಣಿಸುವ ಬಂಡೆಗೋಡೆಯ ನೆತ್ತಿಯ ಮೇಲೆ ಕಡಲ ಮೊನೆಗಳು ತುಂತುರು ಹನಿಗಳಾಗಿ ಸಿಡಿದು ಹಾರುತ್ತಿರುವುದನ್ನು ರಸ್ತೆಯಿಂದಲೇ ನೋಡಬಹುದು. ಸಿರಿತನ ಮತ್ತು ಬಡತನಗಳನ್ನು ಸೀಳಿ ನಡುವೆ ಮಲಗಿರುವ ಕಪ್ಪು ಟಾರು ರಸ್ತೆ ನಯವಾಗಿ ಜಾರುತ್ತದೆ.
ಮಸೀದಿಯ ಬದಿಯಿಂದ ಆರಂಭಿಸಿ ಸೋಗೆ ಗುಡಿಸಲುಗಳನ್ನು ಒಂದೊಂದಾಗಿ ಎಣಿಸುತ್ತಾ ಹೋಗುವುದಾದರೆ ‘ರುಖಿಯಾಬಿ’ ಯ ಮನೆ ಹದಿನೇಳನೆಯದ್ದು. ಬಂದರು ಸಾಹುಕಾರ ಹಸನ್ ಸಾಹೇಬರ ಮನೆಗೆ ಕೆಲಸಕ್ಕೆ ರುಖಿಯಾಬಿ ಮುಂಜಾನೆ ಹೋದರೆ ಮತ್ತೆ ಮರಳುವುದು ಸೂರ್ಯ ಮುಳುಗಿದ ಬಳಿಕವೇ. ನಾಲ್ಕು ವರ್ಷಗಳ ಕೆಳಗೆಯೇ ‘ದೊಡ್ಡವಳಾಗಿದ್ದ’ ಮಗಳು ಉನ್ನೀಸಾ ಹೊರಗೆ ಕಾಲಿಟ್ಟವಳಲ್ಲ. ಚಹದ ಪೆಟ್ಟಿಗೆಗಳ ತೆಳುಹಲಗೆಗಳನ್ನು ಜೋಡಿಸಿ ಕಟ್ಟಿದ ಮುಂಬಾಗಿಲು ಯಾವಾಗಲೂ ಮುಚ್ಚಿಕೊಂಡೇ ಇರುತ್ತದೆ.
ನಡುರಸ್ತೆಯಲ್ಲಿ ಒಂದು ಕ್ಷಣ ನಿಂತ ಕೋಯಾರವರು ಕತ್ತಿನ ಸಂದಿಯಲ್ಲಿ ಕೊಡೆಯನ್ನು ಸಿಕ್ಕಿಸಿ ಎರಡೂ ಕೈಗಳಿಂದ ಉಟ್ಟಿದ್ದ ಅಡ್ಡಮುಂಡವನ್ನು ಸಡಿಲಿಸಿ ಮತ್ತೆ ಬಿಗಿಯಾಗಿ ಕಟ್ಟಿಕೊಂಡರು. ರಾತ್ರಿಯ ನಮಾಜಿಗೆ ಮೊದಲು ಏನಾದರೊಂದು ಬಗೆಯ ತೀರ್ಮಾನ ಆಗಲೇಬೇಕು. ಶೇಕ್ ಮರ್ಸೂಕ್ ಮುಸ್ತಫಾ ಅರಬಿಯವರು ರಾತ್ರಿ ಹತ್ತರ ತನಕ ಒಲಂಪಿಯಾ ಲಾಡ್ಜ್‌ನಲ್ಲಿ ಕಾಯುತ್ತೇನೆ ಎಂದಿದ್ದಾರೆ.
ರುಖಿಯಾಬಿಯ ಮನೆ ಹತ್ತಿರವಾಗುತ್ತಿದ್ದಂತೆ ನಡಿಗೆ ನಿಧಾನಿಸಿತು. ಯೋಚನೆಗಳಿಂದ ದೇಹ ಭಾರವಾಗತೊಡಗಿತು. ಕಳೆದೆರಡು ವಾರಗಳಿಂದ ಕೋಯಾರವರು ರುಖಿಯಾಬಿಯ ಮನೆಗೆ ಹೋಗುತ್ತಿರುವುದು ಇದೀಗ ಐದನೇ ಸಲ. ಏನಲ್ಲ ಹೇಳಿ ಪುಸಲಾಯಿಸುವುದು ಸಾಧ್ಯವೋ ಅಷ್ಟೆಲ್ಲ ಪ್ರಯತ್ನಗಳನ್ನೂ ಮಾಡಿಯಾಗಿತ್ತು. ರುಖಿಯಾಬಿ ಯಾವುದಕ್ಕೂ ಕರಗುವ ಲಕ್ಷಣ ತೋರಿಸಿರಲಿಲ್ಲ. ಆದರೂ ಕೋಯಾರವರು ಆಸೆ ಬಿಟ್ಟವರಲ್ಲ. ರುಖಿಯಾಬಿ ಒಪ್ಪದೇ ಹೋದರೆ ಕಡಿಮೆಯೆಂದರೂ ಎರಡು ಸಾವಿರದ ಗಂಟು ಮುಳುಗಿ ಹೋದಂತೆಯೇ.
ಈ ಸೀಜನ್‌ನಲ್ಲಿ ಬಂದ ಒಂಭತ್ತು ಮಚ್ವೆಗಳಲ್ಲಿ ಅತ್ಯಂತ ದೊಡ್ಡದು ಶೇಕ್ ಮರ್ಸೂಕ್ ಮುಸ್ತಫಾರದ್ದು. ನಡುವಯಸ್ಸಿನ ಎತ್ತರದ ಅರಬಿ ನೆಲಕ್ಕೆ ಕಾಲಿಡುತ್ತಿದ್ದಂತೆಯೇ ಬೀರಾನ್ ಕೋಯಾ ಪರಿಚಯ ಮಾಡಿಕೊಂದಿದ್ದರು. ಕೋಯಾರವರ ವ್ಯವಹಾರದ ಬಂಡವಾಲವೆಂದರೆ ಅರಬಿಕ್ ಭಾಷೆ. ಈ ವಿಷಯದಲ್ಲಂತೂ ಅದೊಂದು ಟ್ರಂಪ್ ಕಾರ್ಡ್ ಇದ್ದ ಹಾಗೆ. ಹೆಣ್ಣಿಗೆ ಕೊಡಬೇಕಾದ ಮಹರ್ ನಿಶ್ಚಯ ಮಾಡುವವರೂ ಇವರೇ. ಅರಬಿಯ ಭಾಷೆ ಹುಡುಗಿಯ ಮನೆಯವರಿಗೆ ಬಾರದು; ಹುಡುಗಿಯ ಭಾಷೆ ಅರಬರಿಗೆ ಬಾರದು. ಕೋಯಾರವರ ದೊಡ್ಡ ಸಂಸಾರ ಬದುಕುತ್ತಿರುವುದೇ ಈ ವ್ಯತ್ಯಾಸದಲ್ಲಿ. ಅರಬಿ ಐದಕ್ಕೆ ಸೈ ಎಂದರೆ ಹುಡುಗಿಯ ಮನೆಗೆ ಒಂದು ಸಾವಿರ ದಕ್ಕಿದರೂ ಅದೃಷ್ಟವೆನ್ನಬೇಕು. ಕೋಯಾರ ಕುಲ ಕಸುಬೇ ಇದು. ಬೀರಾನ್ ಕೋಯಾ ಸ್ವತಃ ಹೇಳುವುದನ್ನು ನಂಬುವುದಾದರೆ ಇದು ಅವರ ಹದಿಮೂರನೇ ಸೀಜನ್ನು. ನಿಜವಾಗಿ ನೋಡುವುದಾದರೆ ಐದನೆಯದೋ ಅಥವಾ ಆರನೆಯದೋ ಇದ್ದೀತು. ಏಳೆಂಟು ವರ್ಷಗಳ ಕೆಳಗೆ, ಅಂದರೆ ಅವರ ಚಿಕ್ಕಪ್ಪ ಮೈದಿನ್ ಕೋಯಾರವರು ಬದುಕಿದ್ದ ತನಕ ಅಸಿಸ್ಟೆಂಟ್ ಆಗಿಯೇ ಕೆಲಸ ಮಾಡುತ್ತಿದ್ದುದು.
ಮೂರು ತಿಂಗಳ ಸೀಜನ್‌ಗಾಗಿ ಇಡೀ ವರ್ಷದ ತಯಾರಿ ಬೇಕು. ಹದ್ದಿನ ಕಣ್ಣುಗಳಿಂದ ಮನೆ ಮನೆ ಇಣುಕಿ ನೋಡಬೇಕು. ಈ ಬಾರಿ ಬಹಳ ಒದ್ದಾಡಿದರೂ ಕಣ್ಣಿಗೆ ಬಿದ್ದದ್ದು ಎರಡು ಮಾತ್ರ. ಬೀಚ್ ರೋಡಿನ ರುಖಿಯಾಬಿಯ ಮಗಳು ಉನ್ನೀಸ ಮತ್ತು ಪೇಟೆ ಬೀದಿಯ ಸಾರಮ್ಮ. ಸಾರಮ್ಮನಿಗಾದರೋ ಈ ಮೊದಲೇ ಒಂದು ಮದುವೆಯೂ ಆಗಿ ಒಂದು ಮಗು ಕೂಡಾ ಇದೆ. ಕೋಯಾರವರ ಅದೃಷ್ಟಕ್ಕೆ ಅವಳ ಗಂಡ ತಲಾಖ್ ಕೊಟ್ಟಿದ್ದ. ಕೋಯಾರವರು ನಿರೀಕ್ಷಿಸಿದಂತೆಯೇ ಮುಸ್ತಫಾ ಅರಬಿ ಒಪ್ಪಿದ್ದು ಉನ್ನೀಸಳನ್ನು. “ಮಹರ್ ಒಂದೆರಡು ಸಾವಿರ ಹೆಚ್ಚೇ ಆದರೂ ಚಿಕ್ಕ ಹುಡುಗಿಯೇ ಇರಲಿ” ಎಂದು ನಕ್ಕಿದ್ದರು. ಹಾಗೆಂದು ಸಾರಮ್ಮಳಿಗೆ ಬೇರೊಂದು ಅರಬಿ ಹುಡುಕುವುದು ದೊಡ್ಡ ಸಮಸ್ಯೆಯೇ ಆಗಿರಲಿಲ್ಲ. ಕೋಯಾರವರು ಬೆರಳು ತೋರಿಸಿದಲ್ಲಿ ಕಣ್ಣು ಮುಚ್ಚಿ ನಡೆಯಲು ತಯಾರು ಅವಳು. ಆದರೆ ಅವಳ ವ್ಯವಹಾರದಲ್ಲಿ ಐನೂರು ಗಿಟ್ಟಿದರೂ ಜಾಸ್ತಿಯೇ. ಹೆಚ್ಚು ಕಡಿಮೆ ಮಾಡಿದರೆ ನಡುರಸ್ತೆಯಲ್ಲೇ ಕೋಯಾರ ಕಚ್ಚೆಗೆ ಕೈಹಾಕುವಷ್ಟು ಜೋರಿನವಳು.
ಅಳುಕುತ್ತಲೇ ರಸ್ತೆಯಂಚಿನಿಂದಿಳಿದ ಕೋಯಾ ಮರಳ ನೆಲದಲ್ಲಿ ಹೆಜ್ಜೆ ಕೀಳುತ್ತಾ ರುಖಿಯಾಬಿಯ ಬಾಗಿಲಿಗೆದುರು ನಿಂತು ಸುತ್ತಲೂ ಕಣ್ಣು ಹಾಯಿಸಿದರು. ನೀರಿಳಿಸುತ್ತಿದ್ದ ಕೊಡೆಯನ್ನು ಮಡಚಿ ಸೂರುಗಂಭಕ್ಕೆ ತೂಗುಹಾಕಿ ತಮ್ಮ ಅಡ್ಡಮುಂಡನ್ನೆತ್ತಿ ಮುಖ ಒರೆಸಿಕೊಂಡರು. ಕಡಲ ಭೋರ್ಗರೆಯುವ ಸದ್ದು ಇಲ್ಲವಾದಲ್ಲಿ ಅವರ ಎದೆ ಬಡಿತಕ್ಕೆ ಬಾಗಿಲು ತೆರೆಯಬೇಕಿತ್ತು. ತಮ್ಮ ಧರ್ಮಕಾರ್ಯದಲ್ಲಿ ನೆರವಾಗುವಂತೆ ಅಲ್ಲಾಹುವನ್ನು ದಯನೀಯವಾಗಿ ಪ್ರಾರ್ಥಿಸಿದ ಕೋಯಾ ಅನುಮಾನದಿಂದಲೇ ಬಾಗಿಲು ತಟ್ಟಿದರು.
ಬಾಗಿಲು ತೆರೆದವಳು ಉನ್ನೀಸಾ. ಎದೆ ಬಿರಿಯುವ ಔವನದ ಕೆಂಪು ಹುಡುಗಿ ಬಾಗಿಲಿನೆತ್ತರಕ್ಕೆ ನಿಂತು ಕಣ್ಣು ಅರಳಿಸುತ್ತಿದ್ದಳು. ಕೋಯಾರವರ ಎದೆಬಡಿತ ನಿಂತಂತಾಗಿತ್ತು. ಆರಿಹೋದ ನಾಲಗೆಯನ್ನು ತೇವ ಮಾಡಿಕೊಂಡ ಕೋಯಾ ಪ್ರಯಾಸದಿಂದಲೇ ಪ್ರಯತ್ನಿಸಿದರು. “ರುಖಿಯಾ ಬರಲಿಲ್ವ?” ಇಲ್ಲವೆಂದು ತಲೆಯಾಡಿಸಿದ ಹುಡುಗಿ ಕೋಯಾರವರ ಮುಖವನ್ನೇ ದಿಟ್ಟಿಸುತ್ತಿದ್ದಳು. ಗಲಿಬಿಲಿಗೊಂಡಿದ್ದ ಕೋಯಾ, “ಹಾಗಾದರೆ ಮತ್ತೆ ಬರ್‍ತೇನೆ” ಎಂದವರೇ ತಿರುಗಿಯೂ ನೋಡದೆ ಕೊಡೆಯನ್ನೆತ್ತಿ ಬಿಡಿಸಿಕೊಂಡು, ಮರಳ ನೆಲದಲ್ಲಿ ವೇಗವಾಗಿ ನಡೆದರು; ತಪ್ಪಿಸಿಕೊಂಡು ಓಡುವವರಂತೆ. ನಡುರಸ್ತೆಗೆ ತಲುಪಿದ ಕೋಯಾ ನಿಡಿದಾದ ಉಸಿರುಬಿಟ್ಟು ರುಖಿಯಾಬಿಯ ಗುಡಿಸಲತ್ತ ಕಣ್ಣು ಹಾಯಿಸಿದರು. ಬಾಗಿಲು ಹಿಂದಿನಂತೆಯೇ ಮುಚ್ಚಿಕೊಂಡಿತ್ತು. ಚಿರಿಪಿರಿ ಮಳೆ ನಿಲ್ಲುವ ಹಾಗೆ ಕಾಣಿಸಲಿಲ್ಲ. ನಿಂತಲ್ಲೇ ನಿಲ್ಲಲಾಗದ ಹಸನ್ ಸಾಹೇಬರ ಮನೆಯ ದಾರಿಯಲ್ಲಿ ನಿಧಾನವಾಗಿ ಕಾಲೆಳೆಯಲಾರಂಭಿಸಿದರು.
ಸೀಸನ್ ಬಂತು ಎಂದರೆ ಬೀಚ್‌ರೋಡಿನಲ್ಲಿ ಕಾರುಗಳ ಓಡಾಟ ಜೋರಾಗುತ್ತದೆ. ಕಡಲ ಕರೆಯಲ್ಲಿ ಲಂಗರು ಬಿಡುವ ಅರಬಿ ಮಚ್ವೆಗಳು ನೀರಮೇಲೆ ತಕಪಕ ಕುಣಿಯತೊಡಗಿದವೆಂದರೆ ಇಡೀ ಮುತ್ತುಚ್ಚೇರ ಗಿಜಿಗುಟ್ಟುತ್ತದೆ. ಮಿನಾರಿನೆತ್ತರ ಬೆಳೆದ ಅರಬಿ ವರ್ತಕರು ರಸ್ತೆಯಲ್ಲಿ ನಡೆಯುವಾಗ ಅತ್ತರ್‍ನ ವಾಸನೆ ಹರಡುತ್ತದೆ. ಪಕ್ಕದ ಪೇಟೆಯಲ್ಲಿರುವ ಮಾಳಿಗೆ ಹೋಟೆಲುಗಳ ರೂಮುಗಳೆಲ್ಲ ಫುಲ್ ಆಗುವುದೂ ಮಸೀದಿಗಳ ಎದುರು ಪಕೀರರುಗಳ ಸಾಲು ಉದ್ದವಾಗುವುದೂ ಇದೇ ಸೀಸನ್ಗಳಲ್ಲಿ. ಬಂದರು ಸಾಹುಕಾರರುಗಳೆಲ್ಲ ಈ ದಿನಗಳಲ್ಲಿ ಚುರುಕಾಗುತ್ತಾರೆ-ಅರಬಿ ವರ್ತಕರ ಎಲ್ಲ ‘ಬೇಕು’ಗಳ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಸುಮಾರು ಮೂರು ತಿಂಗಳ ಕಾಲ ಇಲ್ಲಿಯೇ ಮೊಕ್ಕಾಂ ಮಾಡುವ ಅರಬಿಗಳು ಖುಷಿಯಾಗಿದ್ದಷ್ಟೂ ಒಳ್ಳೆಯದು ಈ ಬಂದರು ಸಾಹುಕಾರರುಗಳಿಗೆ. ಸಂತೋಷದಲ್ಲೇ ಇರುವ ಅರಬಿ ವರ್ತಕರು ಈ ಸಾಹುಕಾರರುಗಳ ಮರ, ಬಿದಿರುಗಳನ್ನು ಒಂದಕ್ಕೆರಡು ಕೊಟ್ಟು ಕೊಂಡುಹೋಗುತ್ತಾರೆ. ವರ್ತಕರ ಯೋಗಕ್ಷೇಮದ ಹೊಣೆಹೊರುವ ಬೀರಾನ್ ಕೋಯಾ ಸಹಜವಾಗಿಯೇ ಸಾಹುಕಾರರುಗಳಿಗೆ ಹೆಚ್ಚು ಬೇಕಾದವರು.
ಬೀಚ್ ರೋಡಿನ ಎಡಭಾಗದಲ್ಲಿ ಬಣ್ಣಬಣ್ಣದ ಬಲ್ಬುಗಳು ಬೆಳಗಲಾರಂಭಿಸಿದ್ದವು. ಬಲಭಾಗದ ಗುಡಿಸಲುಗಳ ಸೋಗೆ ಸಂದಿಯಿಂದ ಚಿಮಿಣಿ ಬೆಳಕು ಮಿಣುಕುತ್ತಿದ್ದವು. ರುಖಿಯಾಬಿಯೊಂದಿಗೆ ಹೇಳಬೇಕಾದ ಮಾತುಗಳನ್ನು ಉರುಹೊಡೆಯುತ್ತಾ ನಡೆಯುತ್ತಿದ್ದರು ಬೀರಾನ್ ಕೋಯಾ.
ತಲೆಯ ಮೇಲೆ ಸೆರಗೆಳೆದುಕೊಂಡು ತುಂತುರುಮಳೆಗೆ ಕಾಗೆಯಂತೆ ಒದ್ದೆಯಾಗುತ್ತಾ ರುಖಿಯಾಬಿ ಬರುವುದು ಕಾಣಿಸಿದಾಗ ಕೋಯಾರವರ ಎದೆಬಡಿತ ನೂರು ದಾಟಿತು. ರಸ್ತೆಯಂಚಿನಲ್ಲಿ ನಿಂತು ನಿರೀಕ್ಷಿಸಲಾರಂಭಿಸಿದ ಕೋಯಾರಿಗೆ ಒಂದು ಕ್ಷಣ ‘ಅಯ್ಯೋ ಪಾಪ’ ಅನ್ನಿಸಿಬಿಟ್ಟಿತ್ತು. ತಕ್ಷಣದಲ್ಲೇ ಸಾವರಿಸಿಕೊಂಡು ಎದೆ ಕಲ್ಲು ಮಾಡಿಕೊಂಡರು. ಕರುಣೆಗೆ ಈ ವ್ಯವಹಾರದಲ್ಲಿ ಅವಕಾಶವೇ ಇಲ್ಲ. ಪಾಪ ಎಂದು ಸುಮ್ಮನೆ ಕೂತರೆ ಊಟ ಮಾಡುವುದು ಹ್ಯಾಗೆ? ಆರನೇ ಮಗಳು ಹಲೀಮ ದೊಡ್ಡವಳಾಗಿ ಎರಡು ವರ್ಷವಾದರೂ ಒಬ್ಬ ಹುಡುಗನ ಕತ್ತಿಗೆ ಕಟ್ಟಲು ತಮ್ಮಿಂದಾಗಿರಲಿಲ್ಲ. ಎದೆಯೆತ್ತರ ಬೆಳೆದು ನಿಂತಿರುವ ಪ್ರೀತಿಯ ಕೊನೆ ಮಗಳನ್ನು ಯಾವನೋ ಒಬ್ಬ ಅರಬಿಯೊಂದಿಗೆ ‘ನಿಖಾ’ ಮಾಡಿಸಲು ಮನಸ್ಸು ಒಪ್ಪುವುದಿಲ್ಲ. ಮಸೀದಿಯ ಬಳಿಯಲ್ಲಿ ಸೈಕಲು ಅಂಗಡಿ ನಡೆಸುತ್ತಿದ್ದ ‘ಉಸ್ಮಾನ್’ನ ಮೇಲೆ ಕಣ್ಣಿಟ್ಟು ಒಂದು ವರ್ಷವೇ ಆಯಿತು. ಅದು ಇದು ರಾಜಕೀಯ ಮಾತನಾಡುತ್ತಾ ಸೂಚ್ಯವಾಗಿ ಹಲೀಮಳ ಬಗ್ಗೆ ತಿಳಿಸಿಯೂ ಇಟ್ಟಿದ್ದರು. ಅವನಂತೂ ಕಡ್ಡಿ ಮುರಿದ ಹಾಗೆ ಹೇಳಿಬಿಟ್ಟಿದ್ದ, “ನೋಡಿ ಕೋಯಾ, ನನಗೆ ಅಪ್ಪ ಮಾಡಿಟ್ಟ ಗಂಟೇನೂ ಇಲ್ಲ. ನೀವೇ ನೋಡ್ತಾ ಇದ್ದೀರಿ. ಈಗ ಇರುವ ನಾಲ್ಕು ಲಟ್ಟಸ್ ಸೈಕಲ್‌ನ ಬಾಡಿಗೆಯಲ್ಲಿ ಒಂದು ಸಂಸಾರ ನಡೆಸಲು ಹೊರಟರೆ ಪಂಕ್ಚರ್ ಆಗುವುದಕ್ಕೆ ಅನುಮಾನವೇ ಇಲ್ಲ. ಕಡಿಮೆಯೆಂದರೂ ಇನ್ನೊಂದಾರು ಸೈಕಲ್ ಇದ್ದರೆ ಮದುವೆಯ ಬಗ್ಗೆ ಆಲೋಚನೆ ಮಾಡಬಹುದು. ಬಂಗಾರ-ಗಿಂಗಾರ ಅಂತ ನಾನು ಚರ್ಚೆ ಮಾಡುವುದಿಲ್ಲ. ನಿಮಗೆ ಇಷ್ಟವಿದ್ದಷ್ಟು, ಎಂಟೋ-ಹತ್ತೋ ಪವನು ಹಾಕಿದ್ರೆ ಸಾಕು. ಕ್ಯಾಶ್ ಮಾತ್ರ ಐದು ಸಾವಿರಕ್ಕೆ ಒಂದು ನಯಾಪೈಸೆ ಕಡಿಮೆಯಾದ್ರೆ ಈ ಸುದ್ದಿ ಮಾತೇ ಆಡುವುದು ಬೇಡ.” ಆತ ಹೇಳಿದ್ದರಲ್ಲೂ ನ್ಯಾಯವಿದೆಯೆನ್ನಿಸಿತ್ತು ಕೋಯಾರವರಿಗೆ. ಐದು ಸಾವಿರಕ್ಕೆ ಕಮ್ಮಿಗೆ ಈಗೆಲ್ಲ ಯಾವ ಹುಡುಗ ‘ನಿಖಾ’ಗೆ ಕುಳಿತುಕೊಳ್ತಾನೆ? ಈ ರುಖಿಯಾಬಿ ಒಮ್ಮೆ ‘ಹೂಂ’ ಅಂದರೆ ಸಾಕು; ಮೂರು ಸಾವಿರ ಹ್ಯಾಗಾದರೂ ಉಳಿಸಬಹುದು; ಉಸ್ಮಾನ್‌ನೊಡನೆ ಮಾತನಾಡಲು ಅಷ್ಟಾದರೂ ಬೇಕೇ ಬೇಕು. ಮನೆಯಲ್ಲೇ ತಾಪತ್ರಯ ನೂರು ಇರುವಾಗ ಊರಿನವರ ಬಗ್ಗೆ ಕರುಣೆ ತೋರಿಸುವುದು ಹ್ಯಾಗೆ? ತಾವೇನು ಧರ್ಮಬಾಹಿರವಾದದ್ದೇನೂ ಮಾಡಹೊರಟಿಲ್ಲವಲ್ಲ? ತಮ್ಮೊಳಗೇ ಸಮರ್ಥನೆ ನಡೆಸಿಕೊಂಡರು ಬೀರಾನ್ ಕೋಯ.
ಇನ್ನೂ ನಲವತ್ತು ತುಂಬಿರದಿದ್ದರೂ ಐವತ್ತರ ಮುದುಕಿಯಂತೆ ಕಾಣುವ ರುಖಿಯಾಬಿ, ದಾರಿಗಡ್ಡವಾಗಿ ನಿಂತಿದ್ದ ಕೋಯಾರನ್ನು ಕಂಡು ಬೆಚ್ಚಿಬಿದ್ದಳು. ಅವರೇಕೆ ಕಾದು ಕುಳಿತಿದ್ದಾರೆಂಬುದೂ ಅವಳಿಗೆ ಗೊತ್ತಿತ್ತು.
“ಇಷ್ಟು ಹೊತ್ತಾಯ್ತು ನೋಡು ರುಖಿಯಾ, ನಿನ್ನ ಕಷ್ಟ ನೋಡಿದ್ರೆ ಈ ಬದುಕೇ ಬೇಡ ಅಂತ ಕಾಣ್ತಿದೆ. ಯಾವುದಕ್ಕೂ ಅಲ್ಲಾಹು ಬರೆದಿಡಬೇಕು…ತ್ಚು….ತ್ಚು….”ಲೊಚಗುಟ್ಟಿದ ಕೋಯಾರವರು ತುಟಿ ಪಿಟ್ಟೆನ್ನದೆ ನಡೆಯುತ್ತಿದ್ದ ರುಖಿಯಾಬಿಯ ಅಂಚಿನಲ್ಲೇ ಕಾಲು ಹಾಕಿದರು.
ಅಮ್ಮನಿಗಂಟಿಕೊಂಡೇ ಮನೆಯೊಳಗೆ ನುಗ್ಗಿದ ಕೋಯಾರವರನ್ನು ತಿರಸ್ಕಾರದಿಂದ ನೋಡಿದ ಉನ್ನಿಸಾ, “ಉಮ್ಮ, ನಾನು ಮರಿಯಮ್ಮನ ಮನೆಗೆ ಹೋಗಿ ಬರ್‍ತೇನೆ. ನಿನ್ನೆ ಹೊಸ ಸೀರೆ ತಂದಿದ್ದಾರಂತೆ. ನೋಡಿಕೊಂಡು ಬರ್‍ತೇನೆ” ಎಂದವಳೇ ಹೊರಗೆ ಚಿಮ್ಮಿದಳು.
ಮುಂಬಾಗಿಲ ಮೂಲೆಯಲ್ಲಿ ಒದ್ದೆ ಕೊಡೆಯನ್ನು ಇರಿಸಿದ ಕೋಯಾ ಅಲ್ಲಿಯೇ ಇದ್ದ ಮಣೆಯೊಂದರ ಮೇಲೆ ಕುಳಿತು “ಹ್ಯಾಗೆ ಬೆಳೆದುಬಿಟ್ಟಿದ್ದಾಳಲ್ಲ ಹುಡುಗಿ?” ಎಂದು ಅರ್ಥಗರ್ಭಿತವಾಗಿ ನಕ್ಕರು. ಮನೆಯ ಹಿಂಭಾಗದಲ್ಲಿ ಕಡಲು ಗರ್ಜಿಸುತ್ತಿರುವುದು ಗುಡಿಸಲ ಒಳಗೆಲ್ಲ ಪ್ರತಿಧ್ವನಿಸುತ್ತಿತ್ತು. ಒಳಬಾಗಿಲಿಗೊರಗಿ ಮರದ ಕೊರಡಿನಂತೆ ನಿಂತಿದ್ದ ರುಖಿಯಾಬಿಗೆ ಬೀರಾನ್ ಕೋಯಾ ಹೇಳುತ್ತಿರುವ ಮಾತುಗಳ ಬಗ್ಗೆ ಗಮನವಿದ್ದಿರಲಿಲ್ಲ. ಅವರು ಹೇಳಬಯಸುವುದನ್ನೆಲ್ಲ ಅವಳೀಗಾಗಲೇ ಅರ್ಥ ಮಾಡಿಕೊಂಡಿದ್ದಳು.
ರುಖಿಯಾಬಿಗೆ ಬೀರಾನ್ ಕೋಯಾ ಅಪರಿಚಿತರೇನೂ ಆಗಿಲ್ಲ-ಅವರ ಚಿಕ್ಕಪ್ಪ ಮೈದಿನ್ ಕೋಯಾರವರೇ ಅವಳಿಗೆ ಅರಬ್ಬಿಯೊಬ್ಬನೊಡನೆ ‘ನಿಖಾ’ ಮಾಡಿಸಿದ್ದು. ಆಗ ರುಖಿಯಾಬಿಯ ಮನೆ ಪೇಟೆಬೀದಿಯಲ್ಲಿತ್ತು. ನೆರೆಮನೆಯ ಆಮಿನಾಬಿಗೂ ಅದೇ ದಿನ ‘ನಿಖಾ’ ಆಗಿತ್ತು. ಏನು ಕಾರಣವೋ ಏನೋ ಅದೇ ದಿನ ರಾತ್ರಿ ಅವಳು ಬಾವಿಗೆ ಹಾರಿಕೊಂಡಿದ್ದಳು. ಊರಲ್ಲೆಲ್ಲ ಗಲಾಟೆಯಾಗಿತ್ತು. ಪೋಲೀಸು ಜೀಪು ಕೂಡಾ ಬಂದಿತ್ತಂತೆ. ರುಖಿಯಾಬಿ ಮಾತ್ರ ಒಂದು ವಾರ ಕೋಣೆಯೊಳಗಿಂದ ಹೊರಗೆ ತಲೆಹಾಕಿರಲಿಲ್ಲ. ಹೋಟೆಲಿನ ದೊಡ್ಡ ಕೋಣೆಯಲ್ಲಿ ಇಬ್ಬರೇ. ಊಟ-ತಿಂಡಿ ಎಲ್ಲವೂ ಕೋಣೆಗೇ ಬರುತ್ತಿತ್ತು. ಹಾಗೆ ನೋಡಿದರೆ ಆ ಅರೆಬಿ ನಿಜಕ್ಕೂ ಒಳ್ಳೆಯವರೇ. ಎದ್ದು ನೆಟ್ಟಗೆ ನಿಂಟರೆ ಸೂರಿನಲ್ಲಿ ತೂಗುತ್ತಿದ್ದ ಫ್ಯಾನು ತಲೆತಾಗಬೇಕು; ಅಷ್ಟು ಎತ್ತರ. ಮೂರು ತಿಂಗಳು ಮೂರು ದಿನದ ಹಾಗೆ ಕಳೆದು ಹೋಗಿತ್ತು. ರುಖಿಯಾಬಿ ಮೊನ್ನೆ ಮೊನ್ನೆಯವರೆಗೂ ಕಣ್ಣೀರಿಟ್ಟು ಹೇಳುತ್ತಿದ್ದಳು. “ಅವರು ಎಲ್ಲ ಅರೆಬಿಗಳಂತಾಗಿದ್ದರೆ ತಲಾಖ್ ಕೊಟ್ಟೇ ಹೋಗಬಹುದುತ್ತು. ಬರ್‍ತೇನೆ ಅಂತ ಸುಳ್ಳು ಹೇಳಿ ಹೋಗುವ ಅಗತ್ಯವಿರಲಿಲ್ಲ. ಹೋದವರಿಗೆ ಏನಾಯಿತೋ ಏನೋ….”
ಒಂದೇ ಸಮನೆ ಮಾತಾಡುತ್ತಿದ್ದ ಕೋಯಾರವರು, ರುಖಿಯಾಬಿಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದಾಗ ಅಧೀರರಾದರು. ಈವತ್ತು ರಾತ್ರಿ ನಮಾಜಿಗೆ ಮೊದಲು ರುಖಿಯಾಬಿಯನ್ನು ಒಪ್ಪಿಸಲೇಬೇಕು. ಆ ಅರಬಿ ಇನ್ನೊಂದು ಬಾರಿ ಅವಕಾಶ ಕೊಡಲಾರ. ತೆಗೆದುಕೊಂಡಿದ್ದ ಅಡ್ವಾನ್ಸು ಇನ್ನೂರು ಖರ್ಚಾಗಿ ಹೋಗಿದೆ. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾ ಕೊನೆಗೆ ಮಾತೆಲ್ಲ ಮುಗಿದಂತಾಗಿ ಭುಸುಗುಡುತ್ತಾ-ಉರುಳಾಡುತ್ತಾ ಬಂದ ಮೂರಾಳೆತ್ತರದ ತೆರೆಯೊಂದು ಕಡಲ ಕರೆಯಲ್ಲಿ ತನ್ನ ಶಕ್ತಿಯನ್ನೆಲ್ಲಾ ಕಳಕೊಂಡಂತೆ ಪ್ರಶ್ನಿಸಿದ್ದರು, “ಏನು ಹೇಳ್ತಿ?”
ರುಖಿಯಾಬಿ ಬಂಡೆಗೋಡೆಯಂತೆ ನಿಂತಿದ್ದಳು. ಉತ್ತರಿಸಬೇಕೆಂಬ ಯೋಚನೆಯೂ ಅವಳೊಳಗಿರಲಿಲ್ಲ.
ರುಖಿಯಾಬಿ ಸುಲಭದಲ್ಲಿ ಕರಗುವ ಹೆಣ್ಣಲ್ಲವೆಂಬುದನ್ನು ಅವರ ಚಿಕ್ಕಪ್ಪ ಮೈದಿನ್ ಕೋಯಾರವರೇ ಒಮ್ಮೆ ಹೇಳಿದ್ದರು. “ನೀಯತ್ತು ಅಂತ ಏನಾದ್ರೂ ಇದ್ದರೆ ಅದು ರುಖಿಯಾಳಲ್ಲಿ. ಇದ್ದುದರಲ್ಲಿ ಒಳ್ಳೆಯ ಅರಬಿ ನೋಡಿ ನಿಖಾ ಮಾಡಿದ್ದೆ. ನನಗೂ ಹೇಳದೇ ಹೋಗಿಬಿಟ್ಟ ಆ ಅರಬಿ. ಮರ್ಯಾದೆಯಲ್ಲಿ ನಾಲ್ಕು ಜನರ ಎದುರು ತಲಾಕ್ ಕೊಟ್ಟು ಹೋಗಿರುತ್ತಿದ್ದರೆ ರಗಳೆಯೇ ಇರಲಿಲ್ಲ. ಮುಂದಿನ ಸೀಜನ್‌ಗೆ ಖಂಡಿತ ಬರ್‍ತೇನೆ ಅಂತ ಕುರಾನಿನ ಮೇಲೆ ಆಣೆಹಾಕಿ ಹೋಗಿದ್ದನಂತೆ. ಆದರೆ ಮುಂದಿನ ಸೀಜನ್ ಸಾಯಲಿ, ನಾಲ್ಕು ಸೀಜನ್ ಕಳೆದರೂ ಅರಬಿಯ ಅಡ್ರೆಸ್ ಕೂಡಾ ಇಲ್ಲ. ಆ ಹೆಣ್ಣು ಮಾತ್ರ ಒಂದು ಮಗುವನ್ನು ಹಿಡಿದುಕೊಂಡು ಈ ವರ್ಷ ಬಂದಾರು, ಮುಂದಿನ ವರ್ಷ ಬಂದಾರು ಅಂತ ಕಡಲು ನೋಡ್ತಾ ಕೂತದ್ದಲ್ಲದೇ ನನ್ನ ಒಂದು ಮಾತೂ ಕೂಡಾ ಕೇಳಲು ತಯಾರಾಗಲಿಲ್ಲ. ನಾಲ್ಕನೇ ವರ್ಷ ಮತ್ತೊಂದು ನ್ಯಾಯವಾದ ಪಾರ್ಟಿ ಬಂದಿತ್ತು. ರುಖಿಯಾಬಿಯನ್ನು ಅವಳ ಮಗುವಿನ ಸಮೇತ ಕರೆದುಕೊಂಡು ಹೋಗಲು ರೆಡಿಯಾಗಿದ್ದ. ಉಹುಂ….ನನ್ನಿಂದ ಸಾಧ್ಯವಾಗಲಿಲ್ಲ. ನನ್ನ ಸರ್ವಿಸ್‌ನಲ್ಲಿ ಇಂಥ ಹುಡುಗಿಯನ್ನು ಕಂಡಿಲ್ಲ. ಇಡೀ ಕೊಪ್ಪರಿಗೆಯನ್ನು ತಂದು ಎದುರು ಈಡ್ತೇವೆ ಎಂದ್ರೂ ತಲೆ ಎತ್ತಿ ನೋಡಲಿಲ್ಲ. ಯಾರಲ್ಲಾದ್ರೂ ಹೇಳಿಸುವ ಅಂದ್ರೆ ಅವಳಿಗೆ ಯಾರಿದ್ದಾರೆ?” ನೆನಪಿಸಿಕೊಳ್ಳುತ್ತಿರುವಂತೆಯೇ ಬೀರಾನ್ ಕೋಯಾ ನವಿರಾಗಿ ನಡುಗಿದರು. ಚಿಕ್ಕಪ್ಪನವರ ಕಾಲದಲ್ಲಿ ಅರಬಿ ಮದುವೆಗಳೆಂದರೆ ನಮಾಜು ಮಾಡಿದಷ್ಟೇ ಸಾಮಾನ್ಯ ಸಂಗತಿ. ನಿಖಾವನ್ನು ಮಸೀದಿಯಲ್ಲೇ ಮಾಡಬೇಕು ಅಥವಾ ಈಗಿನ ಕ್ರಮದಂತೆ ನಾಲ್ಕಾರು ಜನರ ಸಾಕ್ಷಿ ಬೇಕು ಎಂಬೆಲ್ಲ ರೂಲ್ಸುಗಳೇನೂ ಇರಲಿಲ್ಲ. ಎಲ್ಲೆಂದರಲ್ಲಿ ನಿಖಾ ನಡೆದುಹೋಗುತ್ತಿತ್ತು. ಅಲ್ಲದೆ ನಿಖಾ ನಡೆಸಲು ಎಷ್ಟು ಹೊತ್ತು ಬೇಕು? ಆನೆ ಕುದುರೆ ಏನೂ ಆಗಬೇಕಾಗಿರಲಿಲ್ಲ. ಮನಸ್ಸು ಮಾಡಿದರೆ ಗಂಟೆಗೆ ಎಂಟು ನಿಖಾ ಮುಗಿಸಿಬಿಡಬಹುದು. ಯಾವುದಕ್ಕೂ ಈಗ ರುಖಿಯಾಬಿ ಒಪ್ಪಬೇಕಲ್ಲ?
“ನೋಡು ರುಖಿಯಾ, ನನಗೆ ಈ ಮುಸ್ತಫಾ ಅರಬಿ ಚೆನ್ನಾಗಿ ಗೊತ್ತು” ಬೀರಾನ್ ಕೋಯಾ ಮತ್ತೆ ಆರಂಭಿಸಿದರು. “ಅಂತಿಂಥ ಚಿಲ್ಲರೆ ಅರಬಿಯಾಗಿರುತ್ತಿದ್ದರೆ ನಿನ್ನ ಮನೆಗೆ ಕಾಲಿಡುವ ಮಗ ನಾನಲ್ಲ. ಮತ್ತೆ ನಿನಗೇ ಗೊತ್ತಿದೆ-ಈ ಈರಲ್ಲಿ ಹುಡುಗಿಯರಿಗೇನೂ ಬರವಿಲ್ಲ ಅಂತ. ನಾನು ಬರೇ ಸುದ್ದಿ ಕೊಟ್ರೆ ಆಯಿತು. ಹುಡುಕಿಕೊಂಡು ಬರ್‍ತಾರೆ. ಮಹರ್ ಹಣ ಪೂರ್ತಿ ನಾನೇ ಇಟ್ಟುಕೊಂಡರೂ ನಾಲಿಗೆ ಆಡಿಸುವವರಲ್ಲ, ಅರಬಿಗಳ ಹೆಂಡತಿಯಾಗುವುದೆಂದರೆ ಏನು ಕುಶಾಲಾ? ಕಾಲಿಗೂ ಬಂಗಾರದ ಪೈಜಣಿಗೆ ಹಾಕಿದವರಿದ್ದಾರೆ. ಅದೆಲ್ಲ ಅವರವರ ಹಣೆಯಲ್ಲಿ ಬರೆದದ್ದು. ಇಲ್ಲದಿದ್ರೆ ನೀನು ಈವತ್ತು ಈ ಅವಸ್ಥೆಯಲ್ಲಿ ಇರಬೇಕಿತ್ತಾ. ಒಂದು ಮಾತಂತೂ ತಿಳ್ಕೋ, ನಿನಗೆ ಇದಕ್ಕಿಂತ ಒಳ್ಳೆಯ ಸಂಬಂಧ ಬೇರೆ ಈ ಜನ್ಮದಲ್ಲಿ ಸಿಗಲಿಕ್ಕಿಲ್ಲ.”
ರುಖಿಯಾಬಿ ಕಲ್ಲಿನಂತೆಯೇ ನಿಂತಿದ್ದಳು. ಕೆನ್ನೆಯ ಇಳಿಜಾರದಲ್ಲಿ ತೊಟ್ಟು ತೊಟ್ಟಾಗಿ ಉರುಳಿ ಬೀಳುತ್ತಿದ್ದ ಕಣ್ಣೀರ ಬಿಂದುಗಳು ಮೊಣಕೈ ಮೇಲೆ ಬಿದ್ದು ಒಡೆದು ಹೋಗುತ್ತಿದ್ದವು.
ಕೋಯಾರವರು ಮತ್ತೆ ಪುಸಲಾಯಿಸತೊಡಗಿದರು. “ನಾನು ಮುಸ್ತಫಾರಿಗೆ ಕಡ್ಡಿ ಮುರಿದ ಹಾಗೆ ಹೇಳಿಬಿಟ್ಟಿದ್ದೇನೆ. ನಮ್ಮ ಉನ್ನೀಸಾ ಬಂಗಾರದ ತುಂಡಿನಂಥ ಹುಡುಗಿ. ಕೆಳಗೆ ಇಟ್ಟರೆ ಇರುವೆ ಕಚ್ಚೀತು, ಮೇಲೆ ಇಟ್ಟರೆ ಕಾಗೆ ಕೊಂಡುಹೋದೀತು ಅಂತ ಬೆಳೆದ ಮಗು. ಕಣ್ಣೀರು ಎಂದರೇನು ಅಂತ ಅವಳು ಕಲೀಲಿಲ್ಲ. ಅದೇ ಆರು ತಿಂಗಳ ವಾಯಿದೆ ಹೇಳಿದ್ದೇನೆ. ಅಷ್ಟರೊಳಗೆ ವೀಸಾ ಮಾಡಿ ಕರಕೊಂಡು ಹೋಗುವುದಾದರೆ ಮಾತ್ರ ಈ ಸಂಬಂಧ ಆದೀತು ಎಂದು ಖಡಕ್ಕಾಗಿಯೇ ಹೇಳಿದ್ದೇನೆ. ನಿನಗೆ ಗೊತ್ತಿದೆ. ನಿನ್ನ ಮಾತೆಂದರೆ ಒಂದು ಪೆಟ್ಟು-ಎರಡು ತುಂಡು. ನಿನ್ನ ಮಗಳು ಒಮ್ಮೆ ಕಡಲು ದಾಟಿದಳು ಅಂದರೆ ಸಾಕು; ನಿನ್ನ ಮನೆಗೆ ಬಂಗಾರದ ತಗಡು ಹೊದಿಸಬಹುದು.
ಬಾಯಿ ಪಾಠ ಒಪ್ಪಿಸುವಂತೆ ಸದ್ದು ಮಾಡುತ್ತಿದ್ದ ಕೋಯಾರವರಿಗೆ ತಮ್ಮ ಅನುಭವದ ಮಾತುಗಳೆಲ್ಲ ಖಾಲಿಯಾಗುತ್ತಿರುವಂತೆ ಅನ್ನಿಸತೊಡಗಿತು. ತಣ್ಣಗೆ ಭಯ ಮೊದಲಿಟ್ಟಿತು. ರುಖಿಯಾಬಿ ಒಪ್ಪದೇ ಹೋದರೆ ತಮ್ಮ ಮಗಳು ಹಲೀಮ ಮನೆಯೊಳಗೇ ಕೊಳೆಯಬೇಕಾಗುತ್ತದೆ ಎಂಬ ಯೋಚನೆಯಿಂದ ಅವರ ಮಾತುಗಳಿಗಿಂತ ಸ್ವರವೇ ಹೆಚ್ಚಾಗತೊಡಗಿತು. ಯಾವುದಕ್ಕೂ ರುಖಿಯಾಬಿ ಜಗ್ಗುವುದಿಲ್ಲ ಎಂದು ಖಂಡಿತವಾದ ಬಳಿಕ ಬೆದರಿಸಲೇ ಆರಂಭಿಸಿಬಿಟ್ಟರು.
“ನಾನು ಹೇಳಲಿಲ್ಲ ಅಂತ ಬೇಡ. ನನ್ನ ಮಾತು ಕೇಳಿದೀ ಬಚಾವ್. ಇಲ್ಲ ಅಂದ್ರೆ ನಾನು ಸುಮ್ಮನಿರುವ ಮಗ ಅಲ್ಲ. ನಿನ್ನ ಮಗಳಿಗೆ ಈ ಜೀವಮಾನದಲ್ಲಿ ಒಂದು ಹುಡುಗ ಸಿಗದ ಹಾಗೆ ಮಾಡುವ ದಾರಿ ನನಗೆ ಗೊತ್ತುಂಟು. ಆ ತಾಕತ್ತು ನನಗಿದೆ. ನೀನೇ ಹೇಳು, ಅಪ್ಪ ಯಾರು ಅಂತಲೇ ಗೊತ್ತಿಲ್ಲದ ನಿನ್ನ ಮಗಳನ್ನು ಕಟ್ಟಿಕೊಳ್ಳಲು ಯಾವ ಹುಡುಗ ಓಡಿ ಬರ್‍ತಾನೆ? ಏನೂಂತ ತಿಳ್ಕೊಂಡಿದ್ದಿ? ನಿನ್ನ ಅರಮನೆಯಲ್ಲಿ ಬಂಗಾರದ ಗಟ್ಟಿ ಇಟ್ಟುಕೊಂಡಿದ್ದೀಯಾ? ಹುಂ, ನಾನು ಕೋಪ ಬಂದ್ರೆ ಸೈತಾನನಿಗಿಂತಲೂ ಕಡೆ, ಹಾಂ….!”
ಕಡಲ ತೆರೆಗಳು ಗುಡಿಸಲನ್ನೇ ಕಿತ್ತೆಸೆಯುವಂತೆ ಘರ್ಜಿಸುತ್ತಿದ್ದವು. ಹಾವಿನ ಜಾತಿಯ ಆ ಮುದುಕನಿಂದ ತಪ್ಪಿಸಿಕೊಳ್ಳುವುದೇ ಸಾಧ್ಯವಿಲ್ಲ ಅನ್ನಿಸಲಾರಂಭಿಸಿತು ರುಖಿಯಾಬಿಗೆ. ಉನ್ನೀಸಾ ದೊಡ್ಡವಳಾಗಿ ಎರಡು ವರ್ಷವೇ ದಾಟಿದೆ. ಅವಳ ಮದುವೆಯ ಬಗ್ಗೆ ಯೋಚಿಸುವ ಧೈರ್ಯವೂ ತನಗಿಲ್ಲ. ಮುತ್ತುಚ್ಚೇರದ ಯಾವ ಹುಡುಗನೂ ತಂದೆ ಯಾರೆಂದು ಗೊತ್ತಿಲ್ಲದ ಈ ಹುಡುಗಿಯನ್ನು ಕಟ್ಟಿಕೊಳ್ಳಲಾರ. ದುಡ್ಡಿನ ಆಸೆಯಿಂದಲಾದರೂ ಯಾರಾದರೂ ಬಂದಾರೆನ್ನುವುದಕ್ಕೆ ತನ್ನಲ್ಲಿ ಏನಿದೆ? ಯಾವನಾದರೂ ಒಬ್ಬ ಮುದಿ ಸಾಹುಕಾರನ ಎರಡನೆಯವಳೋ ಅಥವಾ ನಾಲ್ಕನೆಯವಳಾಗಿಯೇ ಬದುಕಬೇಕಾದ ಹಣೆಬರಹ ಮಗಳದ್ದು. ಇದಕ್ಕಿಂತ ಅರಬಿಯೊಬ್ಬನೊಡನೆ ‘ನಿಖಾ’ ನಡೆಸಿ ಅದೃಷ್ಟವನ್ನಾದರೂ ಪರೀಕ್ಷೆ ಮಾಡಿದರೆ ಹ್ಯಾಗೆ? ಆತ ಕರೆದುಕೊಂಡು ಹೋದರೆ ಒಳ್ಳೇಯದೇ ಆಯಿತು. ತಲಾಖ್ ಹೇಳಿ ಹೋದರೂ ಪರವಾಗಿಲ್ಲ. ಮದುವೆಯೇ ಆಗದಿದ್ದರೆ ಮನೆಯಲ್ಲಿಯೇ ಉಳಿಸುವುದೆಂದರೂ ಕಷ್ಟವೇ. ರಾತ್ರಿ ಹಗಲು ಮಗಳನ್ನು ಕಾಯುವುದು ಸಾಧ್ಯವೇ? ಮದುವೆಯಾದ ಬಳಿಕ ಮನೆಯಲ್ಲೇ ಉಳಿದರೂ ಅಪವಾದದ ಮಾತು ಕೇಳಬೇಕಾಗುವುದಿಲ್ಲ….ಹಾಗಾದರೆ ಒಪ್ಪಿಬಿಡಲೆ?
ಕಟ್ಟೆಯೊಡೆದಂತೆ ಸ್ವರವೆಬ್ಬಿಸಿ ಅಳುತ್ತಾ ಕುಸಿದು ಕುಳಿತಳು ರುಖಿಯಾಬಿ. ಕಡಲಿಗಡ್ಡವಾಗಿ ಕಟ್ಟಿದ್ದ ಬಂಡೆಗೋಡೆಯಾದರೂ ಒಡೆದು ಹೋಗಿ ಎಲ್ಲವೂ ಮುಳುಗಿ ಹೋಗಿದ್ದರೆ ? ಅನ್ನಿಸಿತು.
ಬೀರಾನ್ ಕೋಯಾರಿಗೆ ಗಾಬರಿ-ಸಂತೋಷ ಎರಡೂ ಒಟ್ಟಿಗೇ ಆಯಿತು. ಮೆದುವಾಗಿರುವಾಗಲೇ ಬಡಿಯುವುದು ಸುಲಭ ಎಂಬುದನ್ನು ಅನುಭವದಿಂದ ಕಲಿತಿದ್ದರು.
“ಅಳಲಿಕ್ಕೆ ಏನಾಗಿದೆ ಈಗ? ನಾನೇನು ಬಲಾತ್ಕಾರ ಮಾಡಿದ್ದೇನಾ? ಇಷ್ಟವಿದ್ದರೆ ಹೂಂ ಎಂದರಾಯಿತು. ಇಲ್ಲವಾದರೆ ನನ್ನ ದಾರಿ ನಾನು ನೋಡ್ತೇನೆ. ಒತ್ತಾಯ ಯಾವ ಮಗ ಮಾಡ್ತಾನೆ? ನನ್ನ ಲಾಭಕ್ಕ ನಾನು ಇಷ್ಟೆಲ್ಲ ಹೇಳುವುದು? ಒಂಟಿ ಹೆಂಗಸಿಗೆ ಇಷ್ಟು ಹಟ ಇದ್ದರೆ ಅಲ್ಲಾಹು ಮೆಚ್ಚುವುದಿಲ್ಲ.”
“ದೊಡ್ಡ ಮಸೀದಿಯ ‘ಇಮಾಂ’ ಈ ಮದುವೆಗೆ ಬರ್‍ತಾರಾ?” ರುಖಿಯಾಬಿ ಪ್ರಶ್ನಿಸಿದ್ದಳು”
ಬೀರಾನ್ ಕೋಯಾ ತಕ್ಷಣ ಹುಷಾರಾದರು. ಮುಳುಗುತ್ತಿದ್ದ ‘ಮಚ್ವೆ’ ಮತ್ತೆ ತೇಲುವ ಸೂಚನೆ ನೀಡಿತ್ತು. ಲಾಲಿಸುವ ಧ್ವನಿಯಲ್ಲೇ ಹೇಳಿದರು, “ಎಅಮ್ಥದ್ದು ರುಖಿಯಾ ನೀನು ಹೇಳುವುದು? ನನಗೇನು ನಿನ್ನ ಮೇಲೆ ಹಗೆ ಉಂಟಾ? ನನ್ನನ್ನು ಇಲ್ಲಿಗೆ ಕಳಿಸಿದ್ದು ಯಾರು ಅಂತ ತಿಳಿದಿದ್ದಿ? ನಿನ್ನ ಸಂಗತಿ ಪೂರಾ ಅವರಿಗೆ ಗೊತ್ತಿದೆ. ಅವರೇ ಬಂದು ನಿಖಾ ನಡೆಸಿದ್ರೆ ಆಯ್ತಲ್ಲ?”
ರುಖಿಯಾಬಿಗೆ ಹೊಸ ಪ್ರಶ್ನೆಗಳಾವುವೂ ತೋಚಲಿಲ್ಲ. ಇಡಿಯಾಗಿ ಮುಳುಗಿದವಳಂತೆ ಮೊಣಕಾಲ ನಡುವೆ ತಲೆಯಿರಿಸಿ ಅಳತೊಡಗಿದಳು.
ತಕ್ಷಣ ಎದ್ದು ಹೊರಟು ನಿಂತ ಕೋಯಾ ಹೇಳಿದರು, “ನಾಳೆ ನಾಡಿದ್ದರಲ್ಲಿ ಸ್ವಲ್ಪ ಹಣ ತಂದುಕೊಡ್ತೇನೆ. ಈ ವಾರದ ಒಳಗೆ ಎಲ್ಲ ಮುಗಿದುಹೋಗಬೇಕು. ನನಗೆ ನೂರು ರಗಳೆ ಉಂಟು.”
[೨]
“ಹಲ್ಕಾ ಹರಾಮಿಗಳು!”
ಮುತ್ತುಚ್ಚೇರ ಯೂತ್‌ಲೀಗ್‌ನ ಬಗ್ಗೆ ಮಾತನಾಡುವಾಗಲೆಲ್ಲ ಬೀರಾನ್ ಕೋಯಾ ಬಳಸುತ್ತಿದ್ದ ಮಾತು “ಹಲ್ಕಾ ಹರಾಮಿಗಳು!” “ಕೊನೆಗಾಲ ಸಮೀಪಿಸುತ್ತಿದೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕಾ? ಬಡಹುಡುಗಿಯರನ್ನು ಒಂದು ನೆಲೆಗೆ ಮುಟ್ಟಿಸುವ ಕೆಲಸ ತಾನು ಮಾಡುತ್ತಿದ್ದರೆ ಈ ಹರಾಮಿಗಳು ಯಾಕೆ ಅಡ್ಡಗಾಲು ಹಾಕಬೇಕು? ಹೂಂ… ಎಷ್ಟು ಹಾರಾಡ್ತಾರೋ ನೋಡುವ. ಸಾಯಲಿಕ್ಕಿಲ್ಲವೇ ಇವರೆಲ್ಲ? ನರಕದಲ್ಲಿ ಕುದಿಯುವ ಎಣ್ಣೆ ಇರುವುದು ಇವರಿಗಲ್ಲದೆ ಮತ್ಯಾರಿಗೆ?” ಪುರುಸೊತ್ತಾದಾಗಲೆಲ್ಲ ಯೂತ್ ಲೀಗ್‌ನ ಬಗ್ಗೆಯೇ ನಂಜು ಕಾರುತ್ತಿದ್ದರು ಬೀರಾನ್ ಕೋಯಾ. ಅವರ ಕುಲಕಸುಬಿಗೇ ತಲೆನೋವು ತಂದಿದ್ದರು ಈ ಹುಡುಗರು.
ಮುತ್ತುಚ್ಚೇರ ಯೂತ್ ಲೀಗ್‌ಗೆ ತನ್ನದೇ ಆಗಿರುವ ಗೊಂದಲಮಯ ಇತಿಹಾಸವೂ ಇದೆ. ಅವರ ಚಿಕ್ಕಪ್ಪ ಮೈದಿನ್ ಕೋಯಾರವರ ಕಾಲದಲ್ಲೇ ತಲೆಯೆತ್ತಿದ ಯುವ ಸಂಘಟನೆ ಇದು.
ಯಾವನೋ ಒಬ್ಬ ಹರಾಮಿ ಹುಡುಗ ಹತ್ತಾರು ಹುಡುಗರನ್ನು ಕಲೆ ಹಾಕಿ ಒಂದು ಸಂಘವನ್ನೇ ಸ್ಥಾಪಿಸಿಬಿಟ್ಟಿದ್ದ. ನಾಲ್ಕು ಇಂಗ್ಲಿಷ್ ಅಕ್ಷರ ಓದಿದ ಈ ಹಲ್ಕಾ ಹುಡುಗರದ್ದು ಏನು ಅಹಂಕಾರ! ಆರಂಭದ ಎರದು ವರ್ಷಗಳಲ್ಲಂತೂ ಅವರ ಹಾರಾಟವನ್ನು ಹಿಡಿದು ನಿಲ್ಲಿಸುವ ಜನ ಇಲ್ಲ. ಒಂದೇ ಒಂದು ಅರಬಿ ಮದುವೆ ನಡೆಸಲು ಬಿಟ್ಟವರಲ್ಲ ಅವರು. ಸೀಜನ್ ಶುರುವಾಯಿತು ಅಂದರೆ ಸಾಕು; ದೊಣ್ಣೆ ಹಿಡಿದುಕೊಂಡೇ ಬೀದಿ ಬೀದಿ ಅಲೆಯುತ್ತಿದ್ದರು. ಮನೆ ಮನೆ ನುಗ್ಗಿ ಅರಬಿಗಳು ಇದ್ದಾರಾ ಎಂದು ವಿಚಾರಿಸಿಕೊಳ್ಳುತ್ತಿದ್ದರು. ಕೋಯಾರವರಿಗೆ ಎಲ್ಲಕ್ಕಿಂತ ದೊಡ್ಡ ಬೇಸರದ ಸಂಗತಿಯೆಂದರೆ ದೊಡ್ಡ ಜಮಾತಿನ ಇಮಾಂ ಕೂಡ ಈ ಹರಾಮಿ ಹುಡುಗರ ಎದುರು ಬಾಲ ಆಡಿಸಿದ್ದು. ಅರಬಿ ಮದುವೆಗೆ ಅವಕಾಶವಿಲ್ಲದ್ದರಿಂದ ಊರಿನ ಮರ ಬಿದಿರಿನ ಸಾಹುಕಾರರೆಲ್ಲ ಕಂಗಾಲು. ಅರಬಿಗಳಿಗೆ ಬೇಸರವಾದರೆ ಇವರಿಗೆ ಹಣ ಕೊಡುವವರು ಯಾರು? ಮರ ಬಿದಿರು ಎಲ್ಲವೂ ಗೋಡೌನ್‌ನಲ್ಲಿಯೇ ಕುಂಬಾಯಿತು. ಬಾಯಿಬಿಟ್ಟು ಹೇಳುವಂತಿಲ್ಲ. ಒಂದೆರಡು ಚಿಲ್ಲರೆ ಪೇಪರ್‌ನವರೂ ಇದನ್ನು ಭಾರೀ ಸುದ್ದಿ ಎಂದು ಅಚ್ಚು ಹಾಕಿಸಿಬಿಟ್ಟಿದ್ದರು. ಒಟ್ಟಿನಲ್ಲಿ ಹರಾಮಿಗಳ ಕಾಲ ಅದು.
ಅಲ್ಲಾಹುವಿನ ದಯೆ. ಕುಂಞಾಲಿ ಹಾಜಿಯವರು ಇಲ್ಲದೇ ಹೋಗಿದ್ದರೆ ಕೋಯಾರವರ ಕುಟುಂಬ ಇಷ್ಟರಲ್ಲೇ ಕಡಲಪಾಲಾಗಬೇಕಿತ್ತು. ತಲೆ ಎಂದರೆ ಅವರದ್ದು. ಎರಡು ಬಾರಿ ಮಕ್ಕಕ್ಕೆ ಹೋಗಿ ಬಂದವರು. ಡಬ್ಬಲ್ ಹಾಜಿಯೆಂದೇ ಜನರು ಅವರನ್ನು ಕರೆಯುತ್ತಿದ್ದುದು.
ಆ ಒಂದು ಸೀಜನ್‌ನಲ್ಲಿ ಕುಂಞಾಲಿ ಹಾಜಿಯವರ ಮನೆಗೆ ಒಂದು ದೊಡ್ಡ ಅರಬಿ ಪಾರ್ಟಿ ಬಂದಿತ್ತು. ಏನಿಲ್ಲವೆಂದರೂ ಒಂದು ನಲವತ್ತು ಐವತ್ತು ಸಾವಿರ ಗಿಟ್ಟುವ ವ್ಯವಹಾರ, ಮೂರು ವರ್ಷಗಳಿಂದ ಗೋಡೌನಿನಲ್ಲಿ ಕುಂಬಾಗುತ್ತಿದ್ದ ಎಲ್ಲ ಮರವನ್ನೂ ಹೇಳಿದ ಕ್ರಮಕ್ಕೆ ಕೊಳ್ಳುವ ಗಿರಾಕಿ. ಈ ಊರಲ್ಲೇ ನಾಲ್ಕು ತಿಂಗಳು ಇದ್ದು ಹೋಗುವ ಅರಬಿ. ಆದ್ದರಿಂದ ಏನಾದರೊಂದು ವ್ಯವಸ್ಥೆ ಆಗಬೇಕಿತ್ತು ಬಲೆ ಬೀಸಿಯೇ ಬಿಟ್ಟರು.
ಮುತ್ತುಚ್ಚೇರ ಯೂತ್ ತನ್ನ ನಾಲ್ಕನೆಯ ವಾರ್ಷಿಕೋತ್ಸವ ನಡೆಸಿತ್ತಷ್ಟೆ. ಆಗ ಸಂಘದ ಜತೆ-ಕಾರ್ಯದರ್ಶಿಯಾಗಿದ್ದವನು ಉಬೇದುಲ್ಲ. ಬಂದರಿನ ಗ್ಯಾರೇಜೊಂದರಲ್ಲಿ ಮೆಕ್ಯಾನಿಕ್. ಅಪ್ಪ-ಅಮ್ಮ ಇಬ್ಬರೂ ಬದುಕಿಲ್ಲ. ಇರುವ ಒಬ್ಬಳು ಅಕ್ಕನ ನಡತೆ ಅಷ್ಟಕ್ಕಷ್ಟೆ; ಮದುವೆಯಾದ ವಾರದಲ್ಲೇ ತಲಾಖ್ ಪಡೆದ ಹೆಣ್ಣು. ನಾಲ್ಕೈದು ವರ್ಷಗಳಿಂದ ದುಬೈ ಕೆಲಸದ ಬಗ್ಗೆ ಹಗಲು ಕನಸು ಕಾಣುತ್ತಿದ್ದ ಉಬೇದುಲ್ಲ ಬಹಳ ಸುಲಭವಾಗಿಯೇ ಕುಂಞಾಲಿ ಹಾಜಿಯವರ ಬಲೆಯಲ್ಲಿ ಸಿಕ್ಕಿಬಿದ್ದ. ಒಂದೇ ವಾರದೊಳಗೆ ಪಾಸ್‌ಪೋರ್ಟು-ವೀಸಾ ರೆಡಿಯಾಗಿಬಿಟ್ಟಿತು. ಯೂತ್‌ಲೀಗ್‌ನೊಳಗೆ ಗುಸುಗುಸು ಆರಂಭವಾಗುತ್ತಿದ್ದಂತೆಯೇ ಉಬೇದುಲ್ಲ ಯಾರಲ್ಲೂ ಹೇಳದೇ ಕೇಳದೇ ಹಡಗು ಹತ್ತಿಬಿಟ್ಟ. ಅವನ ಅಕ್ಕನೊಡನೆ ಕುಂಞಾಲಿ ಹಾಜಿಯವರ ಅರಬಿ ಅತಿಥಿ ‘ನಿಖಾ’ ಮಾಡಿಕೊಂಡ. ಯೂತ್‌ಲೀಗ್‌ನ ನೈತಿಕತೆಗೆ ಇದೊಂದು ದೊಡ್ಡ ಆಘಾತ. ವಾರದೊಳಗೆ ಯೂತ್‌ಲೀಗ್ ಎರಡು ಹೋಳಾಯಿತು. ಅರಬಿ ಮದುವೆಯ ವಿಧಿ-ವಿಧಾನಗಳನ್ನು ಅಲ್ಪಸ್ವಲ್ಪ ಸುಧಾರಿಸುವ ನಿಲುವನ್ನು ಒಂದು ಗುಂಪು ವಾದಿಸಿದರೆ, ಮತ್ತೊಂದು ಗುಂಪು ಈ ಪದ್ಧತಿಯನ್ನೇ ನಿಲ್ಲಿಸಿಬಿಡಲು ಪಟ್ಟು ಹಿಡಿಯಿತು. ಮುತ್ತುಚ್ಚೇರದ ಸಾಹುಕಾರರುಗಳೆಲ್ಲ ಮೊದಲ ಗುಂಪಿಗೆ ಬಹಿರಂಗವಾಗಿಯೇ ಬೆಂಬಲ ಸಾರಿದಾಗ ಒಂದೆರಡು ಹೊಡೆದಾಟವೂ ಆಯಿತು. ಪೋಲೀಸು-ಪಂಚಾಯಿತಿ ಎಲ್ಲ ನಡೆದ ಬಳಿಕ ಯೂತ್ ಲೀಗ್ ಕಚೇರಿಗೆ ಎರಡು ದೊಡ್ಡ ಬೀಗ ತೂಗಾಡಿತು. ಮುಂದೆ ನಾಲ್ಕು ವರ್ಷ ಇದ್ದೂ ಸತ್ತಂತಿದ್ದ ಈ ಸಂಘಟನೆ ಕಳೆದೆರಡು ವರ್ಷಗಳಿಂದ ಮತ್ತೆ ತಲೆಯೆತ್ತಲಾರಂಭಿಸಿದ್ದು ಕೋಯಾರವರ ಎದೆಯೊಳಗೆ ಚಳಿ ಕುಳ್ಳಿರಿಸಿತ್ತು. ಈ ಹುಡುಗರು ಹಿಂದಿನವರಂತೆ ದೊಣ್ಣೆ ಹಿಡಿದು ಓಡಾಡುತ್ತಿಲ್ಲವಾದರೂ, ಕೋಯಾರ ವ್ಯವಹಾರಗಳಾವುದೂ ರಾಜಾರೋಷವಾಗಿ ನಡೆಯುವುದು ಸಾಧ್ಯವಿರಲಿಲ್ಲ. ಎಲ್ಲವೂ ಗುಟ್ಟಿನಲ್ಲಿಯೇ ಗಪ್‌ಚುಪ್ ಎಂದೇ ಆಗಬೇಕು. ದಕ್ಷಿಣ ಜಮಾತಿನ ಖಾಜಿಯವರು ಇನ್ನೂ ಕೋಯಾರವರ ಧರ್ಮಕಾರ್ಯವನ್ನು ಬೆಂಬಲಿಸುತ್ತಿರುವುದೊಂದೇ ಕೋಯಾರವರಿಗೆ ಸಮಾಧಾನ ನೀಡಿದ ಸಂಗತಿ. ‘ನಿಖಾ’ ನಡೆಸಲು ಎಲ್ಲಿಗೆ ಬರಹೇಳಿದರೂ ಓಡಿ ಬಂದು ನಡೆಸಿಕೊಟ್ಟು ಹೋಗುತ್ತಿದ್ದರು. ಒಂದೈವತ್ತು ರೂಪಾಯಿ ಜಾಸ್ತಿಯೇ ಕೇಳಿದರೂ ಬೇರೆ ಯಾವ ರೀತಿಯ ರಗಳೆಯೂ ಇಲ್ಲ. ಮಹರ್ ಹಣ ಎಷ್ಟು ಎಂದೆಲ್ಲ ತಲೆ ಹರಟೆ ಮಾಡುವ ಜನ ಅಲ್ಲ. ಈ ಖಾಜಿಯವರು ಏನಾದರೂ ಆ ಹಲ್ಕಾ ಹರಾಮಿಗಳ ಎದುರು ಹೆದರಿ ಕುಳಿತಿದ್ದರೆ….ಅಬ್ಬಾ! ಕೋಯಾರವರಿಗೆ ಇದನ್ನು ಯೋಚಿಸುತ್ತಿರುವಾಗಲೇ ಭಯವಾಗುತ್ತದೆ.
ಈ ಬಾರಿಯೂ ಅವರು ಭಯಪತ್ಟಂತೆಯೇ ಆಗಿಬಿಟ್ಟಿತ್ತು. ರುಖಿಯಾಬಿಯ ಮನೆಗೆ ಕೋಯಾರವರು ಹೋಗಿಬರುತ್ತಿರುವ ಸುದ್ದಿ ತಿಳಿದ ಕಾರ್ಯದರ್ಶಿ ಖಾದರ್ ಮರುದಿನ ಸಂಜೆಯೇ ತುರ್ತು ಸಭೆ ಕರೆದುಬಿಟ್ಟ. ಏನೇ ಆದರೂ ಈ ಈ ಮದುವೆ ನಡೆಯದ ಹಾಗೆ ಮಾಡಬೇಕು ಎಂಬುದೇ ಸರ್ವಾನುಮತದ ತೀರ್ಮಾನವಾಗಿ ಹೋಯಿತು. “ಪೋಲೀಸರಿಗೆ ಕಂಪ್ಲೇಂಟು ಕೊಟ್ಟರೆ ಹ್ಯಾಗೆ?” ಎಂದು ಹೊಸ ಸದಸ್ಯನೊಬ್ಬ ಅತ್ಯುತ್ಸಾಹದಿಂದ ಹೇಳಿದಾಗ ಉಪಾಧ್ಯಕ್ಷ ಕಾಸಿಂ, “ಅದರಿಂದ ನಯಾಪೈಸೆ ಉಪಯೋಗವಿಲ್ಲ. ಅವರೇನು ಮಾಡಿಯಾರು ಇದರಲ್ಲಿ? ಧರ್ಮಸಮ್ಮತವಾಗಿಯೇ ‘ನಿಖಾ’ ನಡೆಯುತ್ತದೆ ಎಂದು ಎರಡೂ ಕಡೆಯವರು ಸ್ಟೇಟ್‌ಮೆಂಟ್ ಕೊಟ್ಟರೆ ಮುಗಿಯಿತು. ಈಗಿರುವ ‘ಲಾ’ದಲ್ಲಿ ಇದಕ್ಕೇನೂ ದಾರಿಯಿಲ್ಲ.” ಎಂದ. ಒಂದು ತಾಸಿನ ಚರ್ಚೆಯಾದ ಬಳಿಕ ಕಾರ್ಯದರ್ಶಿ ಕಾಸಿಂ ತೀರ್ಮಾನ ಹೇಳಿದ. “ನಮಗಿರುವುದು ಒಂದೇ ದಾರಿ, ನಾವೆಲ್ಲ ಒಟ್ಟು ಕೂಡಿ ಹೋಗಿ ರುಖಿಯಾಬಿಯನ್ನು ಕಂಡು ತಿಳಿವಳಿಕೆ ಹೇಳಬೇಕು. ಅಗತ್ಯಬಿದ್ದರೆ ಉಪವಾಸ ಮುಷ್ಕರವನ್ನೂ ಮಾಡಬೇಕಾದೀತು” ಸಭೆ ಬರ್ಖಾಸ್ತುಗೊಂಡು ಹೊರಬರುತ್ತಿದ್ದಂತೆ ದೊಡ್ಡ ಹೊಟ್ಟೆಯ ಆದಂ ಅಸಹನೆಯಿಂದ ಗೊಣಗಿದ್ದ. “ರುಖಿಯಾಬಿ ಒಪ್ಪದಿದ್ದರೆ ಕೋಯಾನ ಕಾಲು ಮುರಿದು ಹಾಕುವುದೊಂದೇ ಮಾರ್ಗ. ಉಪವಾಸ ಕೂರುವುದು ನನ್ನಿಂದ ಸಾಧ್ಯವಿಲ್ಲ. ರಂಜಾನ್‌ನಲ್ಲೂ ವ್ರತ ಹಿಡಿದ ಜನ ಅಲ್ಲ ನಾನು.”
ಕಾಸಿಂ ನಗುತ್ತಲೇ ಉತ್ತರಿಸಿದ್ದ. “ರಂಜಾನ್ ತಿಂಗಳ ವ್ರತಕ್ಕಿಂತ ಹೆಚ್ಚು ಪುಣ್ಯ ಈ ಉಪವಾಸದಲ್ಲಿ ಸಿಗುತ್ತದೆ.”
[೩]
ಬೀರಾನ್ ಕೋಯಾ ಬೆಳಿಗ್ಗೆಯೇ ಬಂದು ನೂರರ ಐದು ಹೊಸಾ ನೋಟುಗಳನ್ನು ಕೊಟ್ಟು ಹೇಳಿದ್ದರು. “ಈಗ ಇಷ್ಟು ತೆಗೆದುಕೋ. ಒಂದೆರಡು ಸೀರೆ ಲಂಗ ಅರ್ಜೆಂಟ್ ತೆಗೆದುಕೊಂಡಿಡು. ದುಡ್ಡು ಒಮ್ಮೆಲೇ ಕೊಟ್ಟರೆ ಖರ್ಚಾಗಿ ಹೋದೀತೆಂದು ಈಗ ಇಷ್ಟೇ ತಂದಿದ್ದೇನೆ. ನಾನಿರುವಾಗ ನೀನು ಹೆದರುವ ಅಗತ್ಯವಿಲ್ಲ. ನಿನ್ನ ಮಗಳು ನನ್ನ ಮಗಳು ಬೇರೆ ಅಲ್ಲ. ಒಟ್ಟಿನಲ್ಲಿ ಎಲ್ಲ ಸರಿಯಾಗಿ ಮುಗಿದು ಹೋದರೆ ಸಾಕು.”
ರುಖಿಯಾಬಿಯ ಆಲೋಚನಾ ಶಕ್ತಿಯೇ ಹುದುಗಿ ಹೋಗಿತ್ತು. ಕೋಯಾ ಕೊಟ್ಟ ಹಣವನ್ನು ಅಲ್ಲಿಯೇ ಗೋಡೆಯಲ್ಲಿದ್ದ ತೂಬಿನಲ್ಲಿರಿಸಿ ಹಸನ್ ಸಾಹೇಬರ ಮನೆಗೆ ಹೋಗಿದ್ದಳು. ದಿನವಿಡೀ ಕೆಲಸ; ಬೆನ್ನು ನೆಟ್ಟಗೆ ಮಾಡುವಷ್ಟು ಪುರುಸೊತ್ತು ಕೂಡಾ ಇಲ್ಲ. ಯಾರಲ್ಲೂ ಹೆಚ್ಚಿಗೆ ಮಾತಾಡದೆ ಸಂಜೆಯಾಗುತ್ತಲೇ ಮನೆಯತ್ತ ಕಾಲೆಳೆದಳು. ಈವತ್ತೇ ಪೇಟೆಗೆ ಹೋಗಿ ಸೀರೆ ತಂದರೆ ಹ್ಯಾಗೆ? ಎಂಬ ಯೋಚನೆ ಕ್ಷೀಣವಾಗಿ ಹುಟ್ಟಿಕೊಳ್ಳುತ್ತಿದ್ದಂತೆಯೇ ಸತ್ತುಹೋಗಿತ್ತು. ಯಾವುದೂ ಬೇಡವೆನಿಸಿ ಅನ್ಯಮನಸ್ಕಳಂತೆ ಹೆಜ್ಜೆ ಹಾಕುತ್ತಿದ್ದಳು.
ಮನೆಯೆದುರಿನ ಮರಳ ದಿನ್ನೆಯ ಮೇಲೆ ಯುವಕರ ಗುಂಪೊಂದು ಕುಳಿತಿರುವುದನ್ನು ದೂರದಿಮ್ದಲೇ ನೋಡಿದ ರುಖಿಯಾಬಿ ನವುರಾಗಿ ನಡುಗಿದಳು. ಯಾರಿರಬಹುದು? ಮಗಳಿಗೆ ಏನಾದರೂ ತೊಂದರೆಯಾಗಬಹುದೆ> ಎದೆ ನೂರು ದಾಟಿತು. ಅಕ್ಕಪಕ್ಕದ ಗುಡಿಸಲುಗಳ ಅಂಗಳಗಳಲ್ಲಿ, ಸೋಗೆ ಸಂದಿಗಳಲ್ಲಿ ಹತ್ತಾರು ಜೋಡಿಕಣ್ಣುಗಳು ಮುಂದೇನಾಗುವುದೋ ಎಂದು ಕಾತರಿಸುತ್ತಾ ರುಖಿಯಾಬಿಯನ್ನೇ ದಿಟ್ಟಿಸುತ್ತಿದ್ದವು. ಒಂದೊಂದೇ ನಡುಗುವ ಹೆಜ್ಜೆಗಳೊಂದಿಗೆ ಮನೆಗೆ ಹತ್ತಿರವಾಗುತ್ತಿದ್ದ ರುಖಿಯಾಬಿಯನ್ನು ಕಂಡ ಹುಡುಗರ ಗುಂಪು ನಿಧಾನವಾಗಿ ಎದ್ದು ನಿಂತಿತು. ಎಲ್ಲಾ ಹುಡುಗರ ಕಣ್ಣುಗಳೂ ತನ್ನತ್ತವೇ ಇರುವುದರಿಂದ ಮುಜಗರಗೊಂಡ ರುಖಿಯಾಬಿ ತಲೆ ತಗ್ಗಿಸಿದಳು. ಗುಂಪನ್ನು ಹಾದು ಇನ್ನೇನು ಮನೆಯಂಗಳಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ ಒಬ್ಬ ಎದುರು ನಿಂತು, “ನಿಮ್ಮಲ್ಲಿ ಸ್ವಲ್ಪ ಮಾತನಾಡಬೇಕು” ಎಂದು ತಡೆದ.
ಗಾಬರಿಯಿಂದ ಕಲ್ಲುಕಟ್ಟಿದ ರುಖಿಯಾಬಿ ಕಣ್ಣು ಪಿಳಿಪಿಳಿ ಮಾಡಿದಳು.. ಯುವಕರೆಲ್ಲ ಹತ್ತಿರ ಬಂದು ರುಖಿಯಾಬಿಯ ಸುತ್ತ ನಿಂತರು. ‘ರುಖಿಯಾಬಿಯವರೇ,’ ಸ್ವಾಗತಭಾಷಣ ಮಾಡುತ್ತಿರುವವನಂತೆ, ಉಪಾಧ್ಯಾಕ್ಷ ಕಾಸಿಂ ಆರಂಭಿಸಿದ. “ನಿಮಗೆ ನಮ್ಮ ಮುತ್ತುಚ್ಚೇರ ಯೂತ್ ಲೀಗ್‌ನ್ ಬಗ್ಗೆ ಗೊತ್ತಿರಬಹುದು. ನಿಮ್ಮಂತಹ ಬಡ ಹೆಂಗಸರಿಗೆ ಸಹಾಯ ಮಾಡುವ ಆಸೆಯಿಂದ ನಾವೆಲ್ಲ ಇದರಲ್ಲಿ ಕೆಲಸ ಮಾಡುತ್ತಿದ್ದೇವೆ. ನನ್ನ ಹೆಸರು ಕಾಸಿಂ. ನಾವೆಲ್ಲ ಇದೇ ಊರವರು. ನಮಗೂ ಅಕ್ಕ ತಂಗಿಯರಿದ್ದಾರೆ. ನಿಮ್ಮಂತಹ ತಾಯಂದಿರೂ ಇದ್ದಾರೆ. ಅದರೆ ನಮ್ಮ ಸಮಾಜ…..”
ಅಷ್ಟರಲ್ಲಿ ನಡುವೆ ಬಾಯಿ ಹಾಕಿದ ಆದಂ “ಆ ಮುದುಕ ಕೋಯಾ ನಿಮ್ಮ ಮನೆಗೆ ಯಾವಾಗ ಬಂದದ್ದು?” ಎಂದು ಪ್ರಶ್ನಿಸಿದ.
“ನೀನು ಸುಮ್ಮನಿರು ಆದಂ” ಎಂದು ಆದಂನನ್ನು ಬದಿಗೆ ಸರಿಸಿದ ಕಾರ್ಯದರ್ಶಿ ಖಾದರ್ ರುಖಿಯಾಬಿಯತ್ತ ತಿರುಗಿ ವಿನಯದಿಂದಲೇ ಹೇಳಿದ “ನೋಡಿಯಮ್ಮ ಈ ಅರಬಿಗಳನ್ನು ಮದುವೆಯಾಗಿ ಈ ಊರಿನ ಯಾವ ಹೆಣ್ಣೂ ಉದ್ಧಾರವಾಗಿದಿಲ್ಲ, ಎರಡು ಮೂರು ತಿಂಗಳನ್ನು ಹಣ್ಣು ತಿಂದು ಗೊರಟು ಬಿಸಾಡಿ ಹೋಗಿಬಿಡುತ್ತಾರೆ. ನಾಲ್ಕು ದಿನದ ಖರ್ಚಿಗೆ ಅವರು ಹಣ ಕೊಡಬಹುದು. ಆದರೆ ನಿಮ್ಮ ಮಗಳು ನಂತರ ಏನು ಮಾಡಬೇಕು? ನೀವೇ ಯೋಚಿಸಿ. ನಿಮಗೆ ಕಷ್ಟ ಹೌದು ಆದರೇ ನಿಮ್ಮ ಮಗಳ ಒಳ್ಳೇದಕ್ಕೇ ನಾವು ಹೇಳ್ತೇವೆ……..”
“ಆ ದಲ್ಲಾಲಿ ಈವತ್ತು ಬಂದಿದ್ನಾ?” ಆದಂ ದೊಡ್ಡ ಸ್ವರದಲ್ಲಿ ಪ್ರಶ್ನಿಸಿದ. ಯಾರೋ ಮತ್ತೊಬ್ಬ ಅವನನ್ನು ಹಿಂದಕ್ಕೆ ಎಳೆದುಕೊಂಡ ” ಆ ದಲ್ಲಾಲಿಯ ಕಾಲು ಮುರಿದು ಹಾಕದಿದ್ರೆ ನಾನು ಅಪ್ಪನಿಗೆ ಹುಟ್ಟಿದವನಲ್ಲ…… ಹಾಂ” ಎನ್ನುತ್ತಲೇ ಆದಂ ಹಿಂದಕ್ಕೆ ಸರಿದು ಮರಳ ಮೇಲೆ ಕುಕ್ಕರಗಾಲಲ್ಲಿ ಕುಳಿತು ಮಣ ಮಣ ಮಾಡತೊಡಗಿದ.
ಯೂತ್ ಲಿಗ್‌ನ ಎಲ್ಲ ಸದಸ್ಯರೂ ಕೆಲವೊಮ್ಮೆ ಸರದಿಯಂತೆ ಕೆಲವೊಮ್ಮೆ ಒಟ್ಟಾಗಿ ಮಾತಾಡಿದರೂ. ಯಾವುದಕ್ಕೂ ಎದುರು ಹೇಳದ ರುಖಿಯಾಬಿ ಎಲ್ಲರ ಮಾತನ್ನೂ ಸರಿಯಾಗಿ ಕೇಳಿಸಿಕೊಂಡಳು. ಎದುರು ವಾದಿಸಬೇಕಾದ ಮಾತುಗಳನ್ನೇನೂ ಹುಡುಗರು ಹೇಳಿರಲಿಲ್ಲ. ಎಲ್ಲರದೂ ಒಂದೇ ಸಲಹೇ ” ಈ ಅರಬಿ ಮದುವೆಗೆ ಒಪ್ಪಬೇಡ. ಬೀರಾನ್ ಕೋಯಾ ನಂಬಿಗಸ್ತರಲ್ಲ,”
ಎಲ್ಲರ ಮಾತೂ ಮುಗಿದಮೇಲೆ ರುಖಿಯಾಬಿ ತಿರ್ಮಾನ ಹೇಳುವವಳಂತೆ ಪ್ರಶ್ನಿಸಿದಳು “ಹಾಗಾದರೆ ನಾಳೆ ಕೋಯಾರವರು ಬಂದಾಗ ಈ ಸಂಬಂಧ ಬೇಡ ಎಂದು ಹೇಳಬೇಕಾ?”
” ಹೌದು…. ಹೌದು….” ಎಲ್ಲರೂ ಒಕ್ಕೊರೊಲಲ್ಲಿ ಹೇಳಿದರು.
“ಬೆಳಿಗ್ಗೆ ಅವರು ಹಣ ತಂದುಕೊಟ್ಟಿದ್ದಾರೆ ಅದನ್ನೇನು ಮಾಡಲಿ?”
“ವಾಪಸ್ಸು ಕೊಟ್ಟುಬಿಡಿ” ಎಂದ ಖಾಸಿಂ ತಕ್ಷಣ.
” ಸರಿಯಪ್ಪಾ ಮಕ್ಕಳೆ, ನೀವು ಹೇಳಿದ ಹಾಗೆ ಮಾಡ್ತೇನೆ. ಆಮೇಲೆ?”
” ಏನು ಆಮೇಲೆ?” ಆದಂ ಮತ್ತೆ ಗುಂಪಿನ ಎದುರು ಬಂದು ನಿಂತಿದ್ದ.
“ನನ್ನ ಮಗಳಿಗೆ ಮದುವೆಯಾಗಬೇಕಲ್ಲ?”
“ಯಾರು ಬೇಡ ಅಂದದ್ದು. ಮಾಡಲೇ ಬೇಕಾದದ್ದು ಯಾರು ಅಡ್ಡ ಬರ್‍ತಾರೆ ನಾನು ನೋಡಿಕೊಳ್ಳುತ್ತೇನೆ.” ಆದಂ ತೋಳೇರಿಸಿ ಸುತ್ತಲೂ ಕಣ್ಣು ಹಾಯಿಸಿದ. ಉಪಾಧ್ಯಕ್ಷ ಖಾಸಿಂ ಸಮಾಧಾನದಿಂದಲೇ ಭರವಸೆ ನೀಡಿದ, “ನೀವೇನೂ ಆ ವಿಷಯದಲ್ಲಿ ಯೋಚನೆ ಮಾಡುವುದು ಬೇಡ. ನಮ್ಮ ನಮ್ಮ ಸಂಘಟನೆಯಿಂದಲೇ ನಾವು ಮದುವೆ ನಡೆಸಿಕೊಡ್ತೇವೆ. ಹಣದ ಜವಾಬ್ದಾರಿ ನಮಗೆ ಬಿಟ್ಟುಬಿಡಿ.”
ವಿಷಾದದ ನಗು ನಕ್ಕು ರುಖಿಯಾಬಿ, ಉತ್ಸಾಹದಿಂದ ಮಾತು ಹರಿಸುತ್ತಿದ್ದ ಹುಡುಗರನ್ನೆಲ್ಲ ಅನುಕಂಪದಿಂದೆಂಬಂತೆ ನೋಡಿದಳು. ಅಕ್ಕ ಪಕ್ಕದ ಮನೆ ಮಂದಿಗಳೆಲ್ಲ ತನ್ನನ್ನೇ ಗಮನಿಸುತ್ತಿದ್ದಾರೆಂಬುದು ಅರಿವಾಗೆ ಮುಜುಗರವಾಯಿತು. ನಿರ್ಧಾರದ ಧ್ವನಿಯಲ್ಲಿ ಬಹಳ ಸ್ಪಷ್ಟವಾಗಿ ಹೇಳ ತೊಡಗಿದಳು. ನೋಡಿ ಮಕ್ಕಳೆ ನನಗೆ ಒಬ್ಬ ಮಗ ಇರುತ್ತಿದ್ದರೆ ಖಂಡಿತವಾಗಿಯೂ ನಿಮ್ಮೊಟ್ಟಿಗೆ ಕಳಿಸಿಕೊಡ್ತಿದ್ದೆ. ನೀವು ಮಾಡುತ್ತಿರುವ ಕೆಲಸ ಅಲ್ಲಾಹೂ ಮೆಚ್ಚುವಂಥದ್ದು. ಆದರೆ ನನಗಿರುವುದು ಮಗನಲ್ಲ, ಮಗಳು. ಅವಳಿಗೆ ಮದುವೆ ಮಾಡಲೇ ಬೇಕು. ಹಣವನ್ನು ಹ್ಯಾಗಾದರೂ ಜೋಡಿಸಿಕೊಂಡೇನು. ಸ್ವಲ್ಪ ಬಂಗಾರ ನನ್ನದೇ ಇದೆ. ನನಗೆ ಈಗ ಬೇಕಾಗಿರುವುದು ನನ್ನ ಮಗಳನ್ನು ‘ನಿಖ ಮಾಡಿಕೊಳ್ಳುವ ಒಬ್ಬ ಹುಡುಗ. ಈಗ ನೀವೇ ಹೇಳಿಬಿಡಿ, ನಿಮ್ಮಲ್ಲೇ ಯಾರಾದರೊಬ್ಬರು ನನ್ನ ಮಗಳಿಗೆ ಜೀವನ ಕೊಡುವುದಾದರೆ ಈಗಲೇ ಕೋಯಾರ ಮುಖಕ್ಕೆ ಹಣ ಬಿಸಾಡಿ ಬರ್‍ತೇನೆ. ಹೇಳಿ, ನಿಮ್ಮಲ್ಲಿ ಯಾರು ತಯಾರಿದ್ದೀರಿ?”
ಮುತ್ತುಚ್ಚೇರ ಯೂತ್ ಲೀಗ್‌ನ ಬಾಯಿ ಕಟ್ಟಿ ಹೋಗಿತ್ತು. ರುಖಿಯಾಬಿಯ ಪ್ರಶ್ನೆ ತೀರಾ ಅನಿರಿಕ್ಷಿತ. ಸಂಘಟನೆಯ ಆದರ್ಶದ ಕಲ್ಪನೆಯೆಲ್ಲ ಅವಳ ಒಂದು ಪ್ರಶ್ನೆಯ ಎದುರು ನುಚ್ಚುನೂರಾಗಿದ್ದವು. ಮುಖ ಮುಖ ನೋಡಿಕೊಂದ ಯುವಕರು ತಲೆ ತಗ್ಗಿಸಿ ಗುಸುಗುಸು ಮಾತನಾಡಲು ಯತ್ನಿಸಿ ನಾಚಿಕೆಯಿಂದ ಸುಮ್ಮನಾದರು.
ಸೆರಗಿನ ತುದಿಯಿಂದ ಕಣ್ಣೊರೆಸಿಕೊಳ್ಳುತ್ತ ರುಖಿಯಾಬಿ ಹೇಳಿದಳು, “ನನಗೆ ಗೊತ್ತಿತ್ತು ಮಕ್ಕಳೇ, ನೀವ್ಯಾರೂ ಇದಕ್ಕೆ ತಯಾರಾಗಲಿಕ್ಕಿಲ್ಲ ಎಂದು. ಅದರಲ್ಲಿ ನಿಮ್ಮ ತಪ್ಪೇನೂ ಇಲ್ಲ. ಹತ್ತು ಹದಿನೈದು ಸಾವಿರ ಕೊಟ್ಟು ನಿಮ್ಮನ್ನು ಕೊಂಡುಕೊಳ್ಳುವ ಸಾಹುಕಾರರು ಈ ಊರಲ್ಲಿ ಸಾವಿರ ಇದ್ದಾರು. ನನಗೆ ಅದೆಲ್ಲ ಹ್ಯಾಗೆ ಸಾಧ್ಯ? ನನ್ನ ಮಗಳ ಹಣೆಯಲ್ಲಿ ಹೀಗೆಯೇ ಆಗಬೇಕೆಂದು ಬರೆದಿದ್ದರೆ ನೀವೇನು ಮಾಡಬಲ್ಲಿರಿ?”
ಗುಂಪಿನ ನಡುವೆಯೇ ದಾರಿ ಬಿಡಿಸಿಕೊಂಡು ನಡೆದ ರುಖಿಯಾಬಿ ಮನೆಯೊಳಗೆ ಸೇರಿಕೊಂಡು ಬಾಗಿಲಿಕ್ಕಿಕೊಂಡಳು.
ಮೆದು ಮರಳ ನಡುವೆ ಹೂತು ಹೋದ ಕಾಲುಗಳನ್ನು ಪ್ರಯಾಸದಿಂದ ಎಳೆದೆಳೆದು ಹೆಜ್ಜೆ ಹಾಕಿದ ಮುತ್ತುಚ್ಚೇರ ಯೂತ್ ಲೀಗ್‌ನ್ ಸದಸ್ಯರುಗಳು ಬೀಚ್ ರೋಡಿನ ಕಪ್ಪು ಟಾರು ರಸ್ತೆಯಲ್ಲಿ ತಲೆ ತಗ್ಗಿಸಿ ನಡೆದರು. ಒಂದು ವೇಳೆ ಬೀರಾನ್ ಕೋಯಾ ದಾರಿಯಲ್ಲಿ ಎದುರಾಗಿರುತ್ತಿದ್ದರೆ ಈ ಯುವಕರು ಅವರನ್ನು ಹರಿದು ಚಿಂದಿ ಮಾಡಿಬಿಡುತ್ತಿದ್ದರೇನೋ.
ಆದರೆ ಬೀರಾನ್ ಕೋಯಾ ಸುಮ್ಮನೆ ಕುಳಿತುಕೊಂಡಿರಲಿಲ್ಲ ರುಖಿಯಾಬಿಯ ಮನೆಗೆ ಹಲ್ಕಾ ಹರಾಮಿಗಳು ಹೊರಟಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣದಲ್ಲೇ ಹಸನ್ ಸಾಹೇಬರ ಮರದ ಮಿಲ್ಲಿಗೆ ಧಾವಿಸಿದ್ದರು.
ಬೀರಾನ್ ಕೋಯಾರವರಿಗೆ ಸಹಾಯ ಮಾಡುವುದೆಂದರೆ ಅದು ತಮಗೇ ಸಹಾಯ ಮಾಡಿಕೊಂಡಂತೆ ಎಂಬುದನ್ನು ಅನುಭವದಿಂದ ಕಲಿತಿರುವ ಹಸನ್ ಸಾಹೇಬರು, ಕೋಯಾರವರನ್ನು ಸಮಾಧಾನಪಡಿಸುತ್ತಾ, “ನೀವು ಒಂದು ಕೂದಲಿನಷ್ಟೂ ಹೆದರುವುದು ಬೇಡ ಕೋಯಾ. ಎಲ್ಲ ನಾನು ಸರಿ ಮಾಡಿಬಿಡ್ತೇನೆ. ರುಖಿಯಾ ನನ್ನ ಮನೆಯ ಕೆಲಸದ ಹೆಂಗ್ಸು ಅಂತ ಅದ್ಮೇಲೆ ನೀವ್ಯಾಕೆ ತಲೆಬಿಸಿ ಮಾಡುವುದು? ನಿಮ್ಮ ಕೆಲಸ ನೀವು ನಡೆಸಿ” ಎಂದರು. ಸಮಾಧಾನದ ಉಸಿರುಬಿಟ್ಟ ಕೋಯಾ ಮೆಟ್ಟಿಲಿಳಿಯುತ್ತಿದ್ದಂತೆ ಸಾಹೇಬರು ಕುಳಿತಲ್ಲಿಂದಲೇ ಹೇಳಿದರು, “ನಿಮಗೆ ಆ ಉಮರಬ್ಬನ ಪರಿಚಯ ಇರಬೇಕಲ್ಲಾ? ರುಳಿಯಾಳನ್ನು ಆವತ್ತು ನನ್ನ ಮನೆಗೆ ಮೊದಲು ಕರಕೊಂಡು ಬಂದವನು ಅವನು. ಅವಳಿಗೆ ಏನೋ ದೂರದಲ್ಲಿ ಅಣ್ಣ ಅಗ್ಬೇಕೂಂತ ಕಾಣ್ತದೆ. ಅವನನ್ನೂ ‘ನಿಖಾ’ ದ ಸಮಯದಲ್ಲಿ ಬರಲಿಕ್ಕೆ ಹೇಳಿ. ನಾವು ನಾವೇ ಕೂಡಿಕೊಂಡು ಮಾಡಿದೆವು ಅಂತ ಅಪವಾದ ಬರಬಾರ್‍ದು ನೋಡಿ.”
ಬೀರಾನ್ ಕೋಯಾ ತಲೆಯಾಡಿಸುತ್ತಾ ಹೊರಟರು.
[೪]
ಮರುದಿನ ಕೆಲಸಕ್ಕೆಂದು ಸಾಹೇಬರ ಮನೆಗೆ ಹೋಗಿದ್ದ ಅಮ್ಮ, ಸೂರ್ಯ ನಡುನೆತ್ತಿಗೆ ಬರುವ ಮೊದಲೇ ಮರಳಿ ಬಂದದನ್ನು ಕಂಡ ಉನ್ನೀಸಾ ಅಚ್ಚರಿಪಡುತ್ತಿದ್ದಂತೆಯೇ, ಮನೆಯೊಳಗೆ ನುಸುಳುತ್ತಲೇ ಕುಸಿದುಬಿದ್ದು ನೆಲಕ್ಕೆ ಹಣೆ ಜಜ್ಜುತ್ತಾ ಅಳುವುದನ್ನು ಕಂಡು ಹೆದರಿಬಿಟ್ಟಳು. ಸಾಹೇಬರ ಮನೆಯಲ್ಲಿ ಏನಾದರೂ ಗಲಾಟೆಯಾಗಿರಬಹುದೇ ಎಂಬ ಅನುಮಾನವೂ ಹುಟ್ಟಿತು. ಹಿಂದಿನ ದಿನ ಸಂಜೆಗೆ ಮನೆಯೆದುರು ಗುಂಪುಗತ್ಟಿದ್ದ ಹುಡುಗರನ್ನು ಒಂದೇ ಪ್ರಶ್ನೆಯಿಂದ ಬಾಯಿ ಮುಚ್ಚಿಸಿದ್ದ ಅಮ್ಮ ಇಂದು ಇಷ್ಟು ಅಳಬೇಕಾದರೆ ಏನಾದರೊಂದು ಅನಾಹುತವಾಗಿರಲೇಬೇಕೆಂದು ತರ್ಕಿಸಿದಳು. ಈ ಎಲ್ಲ ಹಗರಣಗಳಿಗೂ ತಾನೊಬ್ಬಲೇ ಕಾರಣ ಎಂಬ ಅರಿವು ಬಹಳ ಹಿಂಸೆ ಮಾಡಿತು.
ರುಖಿಯಾಬಿ ಒಂದೇ ಸಮನೆ ಬಿಕ್ಕಿಬಿಕ್ಕಿ ಅಳುತ್ತಿದ್ದಳು. ಹಿಂದಿನ ಸಂಜೆ ಹುಡುಗರನ್ನು ಹಿಂದಕ್ಕೆ ಕಳುಹಿಸಿದ ಬಳಿಕ ರುಖಿಯಾಬಿ ಹುಚ್ಚು ಹಿಡಿದವಳಮ್ತೆ ಕೂತುಬಿಟ್ಟಿದ್ದಳು. ಮಗಳ ಒತ್ತಾಯಕ್ಕೆ ಊಟ ಮಾಡಿದಂತೆ ನಟಿಸಿದಳಷ್ಟೆ. ಹುಡುಗರ ಮಾತಿನಂತೆ ಅರಬಿ ಮದುವೆಯನ್ನು ನಿರಾಕರಿಸಿದರೆ ಏನಾದೀತು? ಹುಡುಗರು ಬೆನ್ನ ಹಿಂದೆ ಇದ್ದಾರೆಂದ ಮೇಲೆ ಕೋಯಾರವರಿಗೆ ಹೆದರುವ ಅಗತ್ಯವೇನೂ ಇಲ್ಲ. ಆದರೆ ಉನ್ನೀಸಳಿಗೆ ಮದುವೆಯಾಗುವುದು ಯಾವಾಗ? ಮನೆಯೆದುರು ಗುಂಪು ಕಟ್ಟಿ ನಿಂತ ಹುಡುಗರಾರೂ ಮದುವೆಯಾಗಲಾರರು, ಈ ಬಗ್ಗೆ ಆಸೆಯೂ ಇಲ್ಲ. ಹಾಗದರೆ ಮಗಳ ಮದುವೆ? ಬೀರಾನ್ ಕೋಯಾರ ಮಾತುಗಳನ್ನೇನೂ ನಂಬುವ ಹಾಗಿಲ್ಲ. ಆದರೂ ಆ ಅರಬಿ ನಿಜವಾಗಿಯೂ ಒಳ್ಳೆಯವರೇ ಆಗಿದ್ದರೆ? ಕರೆದುಕೊಂಡು ಹೋಗಲೂ ಸಾಕು. ಅರಬಿಯೊಂದಿಗೆ ಮದುವೆಯಾಗಿ ಸುಖವಾಗಿ ಹೋದ ಹುಡುಗಿಯರೂ ಇಲ್ಲದಿಲ್ಲ. ಮಗಳಿಗೆ ಈ ಅರಬಿ ಮದುವೆಯಿಂದ ಸುಖವಿದೆಯೆಂದು ಅಲ್ಲಾಹು ಬರೆದಿದ್ದರೆ ಅಡ್ಡಿ ಮಾಡುವುದ್ಯಾಕೆ? ಆದದ್ದು ಆಗಿ ಹೋಗಲಿ. ದೊಡ್ಡ ಜಮಾತಿನ ‘ಇಮಾ’ಗೆ ಕೂಡಾ ಗೊತ್ತುಂಟಂತೆ. ಅವರೇ ನಿಂತು ‘ನಿಖಾ’ ನಡೆಸಿಯಾರೆ? ಛೆ! ಇರಲಾರದು. ಅವರು ಇಂಥದ್ದಕ್ಕೆಲ್ಲ ಬರುವ ವ್ಯಕ್ತಿಯಲ್ಲ. ಹಾಗಾದರೆ ಬೀರಾನ್ ಕೋಯಾ ಮೋಸ ಮಾಡಿಬಿಟ್ಟರೆ?….. ರಾತ್ರಿಯಿಡೀ ನಿದ್ರೆಯಿಲ್ಲದೆ ಹೊರಳಾಡಿದ್ದಳು. ಒಪ್ಪುವುದೇ ಬಿಡುವುದೇ? ಎಂಬ ಗೊಂದಲದಲ್ಲಿ ಹಣ್ಣಾಗಿದ್ದಳು.
ಬೆಳಿಗ್ಗೆ ಎಂದಿನಂತೆ ಹಸನ್ ಸಾಹೇಬರ ಮನೆಗೆ ಹೋದವಳಿಗೆ ದೊಡ್ಡ ಅಚ್ಚರಿಯೇ ಕಾದು ಕುಳಿತಿತ್ತು. ಏಳೆಂಟು ವರ್ಷಗಳಿಂದೀಚೆಗೆ ಸಾಹುಕಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದರೂ ಒಮ್ಮೆಯಾದರೂ ಸಾಹುಕಾರರು ಕರೆದು ಮಾತನಾಡಿಸಿದವರಲ್ಲ. ಅವರ ಎದುರು ನಿಂತು ತಲೆಯೆತ್ತಿ ನೋಡಿದವಳೂ ಅಲ್ಲ.
ಇಂದು ಬಾಗಿಲಲ್ಲೇ ತಡೆದು ನಿಲ್ಲಿಸಿ ಮಾತನಾಡಿಸಿದಾಗ ಸಂಕೊಚದಿಂದ ಮುದುಡಿದ್ದಲು. ಸಾಹೇಬರ ಮಾತು ಕೂಡಾ ಬೆಣ್ಣೆಯಿಂದ ಕೂದಲು ಎಳೆದಂತೆ. ಎದುರು ವಾದಿಸಲಾಗದೆ ಕರುವಿನಂತೆ ತಲೆ ತಗ್ಗಿಸಿ ಆಲಿಸಿದ್ದಲು. ಎಲ್ಲವನ್ನೂ ಹೇಳಿದ ಸಾಹೇಬರು ಕೊನೆಯಲ್ಲಿ ತೀರ್ಮಾನವನ್ನೂ ಹೇಳಿಬಿಟ್ಟಿದ್ದರು. “ನೀನೇನೂ ಹೆದರುವುದು ಬೇಡ. ನನ್ನ ನಂಬಿಕೆ ಉಂಟಲ್ಲಾ ನಿನಗೆ? ನಾಳೆ ಬೆಳಿಗ್ಗೆಯೇ ನನ್ನ ಮನೆಯಲ್ಲಿ ‘ನಿಖಾ’ ಏರ್ಪಾಡು ಆಗಿದೆ. ಆ ಪೋಲೀ ಹುಡುಗರ ಮಾತು ಕೇಳಿಕೊಂಡು ಕೂತರೆ ನಾಳೆ ಊಟಕ್ಕೆ ಏನು ಮಾಡ್ತಿ? ಆ ಹುಡುಗರು ನಿನಗೆ ಅನ್ನ ಹಾಕ್ತಾರಾ? ನಿನಗೆ ಈ ಊರಲ್ಲಿ ನಾನಲ್ಲದೆ ಬೇರೆ ಯಾರಿದ್ದಾರೆ? ಪಾಸ್ ಪೋರ್ಟ್ ಮಾಡಿ ನಿನ್ನ ಮಗಳನ್ನು ಕಡಲು ದಾಟಿಸುವ ಜವಾಬ್ದಾರಿ ನನ್ನದು; ಆಯ್ತಲ್ಲಾ? ಕೋಯಾರವರಿಗೆ ನಾನು ಹೇಳಿದ್ದೇನೆ. ಎರಡು ಸಾವಿರ ಕ್ಯಾಷ್ ಕೊಟ್ಟುಬಿಡಿ ಎಂದು…. ಈವತ್ತು ನೀನು ಕೆಲಸ ಮಾಡುವುದು ಬೇಡ. ಈಗ ಮನೆಗೆ ಹೋಗು.”
ಸಾಹೇಬರ ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಬಿಕ್ಕಳಿಸತೊಡಗಿದಳು. ಗಲಿಬಿಲಿಗೊಂಡ ಉನ್ನೀಸಾ ನಿಧಾನವಾಗಿ ಅಮ್ಮನ ಬಳಿ ನಡೆದು ಕುಕ್ಕರಗಾಲಲ್ಲಿ ಕುಳಿತು ರಟ್ಟೆ ಹಿಡಿದು ಎಬ್ಬಿಸಲು ಯತ್ನಿಸಿದಳು.
ದಿಗ್ಗನೆ ಎದ್ದು ಕುಳಿತ ರುಖಿಯಾಬಿ ಮಗಳ ಮುಂದೆಲೆ ಹಿಡಿದು ಹಿಂದೆ ಮುಂದೆ ಜಗ್ಗಾಡುತ್ತಾ “ಇದೆಲ್ಲವೂ ನಿನ್ನಿಂದ, ನೀನು ಹುಟ್ಟುವಾಗಲೇ ಸತ್ತುಹೋಗಿದ್ದರೆ ಚೆನ್ನಾಗಿತ್ತು” ಎಂದು ಸೋಗೆಯಸೂರು ಹಾರಿಹೋಗುವಂತೆ ಅಬ್ಬರಿಸಿ ಹಿಂದಕ್ಕೆ ಬಲವಾಗಿ ದಬ್ಬಿದಳು. ಅಮ್ಮನ ಅನಿರೀಕ್ಷಿತ ಆಕ್ರಮಣದಿಂದ ತತ್ತರಿಸಿದ ಉನ್ನೀಸಾ ಅಂಗಾತ ಬಿದ್ದುಬಿಟ್ಟಳು. ಮಣ್ಣಿನ ನೆಲ ತಲೆಗೆ ಜೋರಾಗಿಯೇ ಬಡಿದದ್ದರಿಂದ ಕಣ್ಣು ಕತ್ತಲೆ ಬಂದಂತಾಗಿ ಹಾಗೆಯೇ ಎಡಕ್ಕೆ ವಾಲಿ ಮಲಗಿಕೊಂಡಳು. ಮಗಳು ಬಿದ್ದಲ್ಲಿಂದ ಏಳದಿರುವುದನ್ನು ಗಮನಿಸಿದ ರುಖಿಯಾಬಿ ಗಬಕ್ಕನೆ ಅವಳನ್ನು ಎತ್ತಿ ಎದೆಗವಚಿಕೊಂಡು ಇಡೂ ಮುತ್ತುಚ್ಚೇರವೇ ಬೆಚ್ಚಿಬೀಳುವಂತೆ ರೋದಿಸತೊಡಗಿದಳು.
ಅಕ್ಕಪಕ್ಕದ ಗುಡಿಸಲ ಹೆಂಗಸರು ಒಬ್ಬೊಬ್ಬರಾಗಿ ಒಳಗೆ ತೂರಿಕೊಂಡರು. ತಲೆಗೊಂದರಂತೆ ಸಮಾಧಾನದ ಮಾತು ಹೇಳತೊಡಗಿದರು. ತಮ್ಮತಮ್ಮ ಅನುಭವದಲ್ಲಿ ಕಂಡಂತೆ ಅರಬಿ ಕಲ್ಯಾಣಗಳ ಒಳಿತು ಕೆಡಕುಗಳ ಬಗ್ಗೆ ಚರ್ಚೆ ನಡೆಸಿದರು. ರುಖಿಯಾಬಿ ಮಾತ್ರ ಯಾರೊಂದಿಗೂ ಮುಖಕೊಟ್ಟು ಮಾತನಾಡಲಿಲ್ಲ. ನೂರು ಪ್ರಶ್ನೆಗಳಲ್ಲಿ ಒಂದಕ್ಕೆ ‘ಹೂಂ’ ಮತ್ತೊಂದಕ್ಕೆ ‘ಉಹೂಂ’ ಎನ್ನುವುದರಲ್ಲೇ ಕಾಲಕಳೆದಳು.
ಇಡೀ ದಿನ ಮನೆಯಲ್ಲಿ ಒಲೆ ಉರಿಯಲಿಲ್ಲ. ಮರುದಿನ ಬೆಳಿಗ್ಗೆ ಉನ್ನೀಸಳನ್ನು ಗುಡಿಸಲ ಒಳಗೆ ಕೂಡಿಹಾಕಿ ಮುಂಬಾಗಿಲಿಗೆ ಬೀಗ ಜಡಿದು ಹಸನ್ ಸಾಹೇಬರ ಮನೆಯತ್ತ ದಾಪುಗಾಲು ಹಾಕಿದ್ದಳು.
ಸೂರ್ಯ ಮೇಲೇರಿ ಬರುತ್ತಿದ್ದಂತೆ ಹಸನ್ ಸಾಹೇಬರ ಬಂಗಲೆಯೆದುರು ಕಪ್ಪು ಕಾರೊಂದು ಬಮ್ದು ನಿಂತಿತು. ಜಗಲಿ ಹಾರಿ ಬಂದ ಬೀರಾನ್ ಕೋಯಾ ಕಾರಿನ ಹಿಂಭಾಗದ ಬಾಗಿಲು ತೆರೆದು ಶೇಕ್ ಮರ್ಸೂಕ್ ಮುಸ್ತಾಫಾರನ್ನು ಲಗುಬಗೆಯಿಂದ ಇಳಿಸಿಕೊಂಡರು. ಅತ್ತರಿನ ಸುವಾಸನೆ ಚಾವಡಿಯನ್ನು ಮುಟ್ಟಿತು. ಗಂಭೀರವಾಗಿ ಹೆಜ್ಜೆ ಬದಲಿಸುತ್ತಾ ಬಂದ ಎತ್ತರ್ದ ಅರಬಿಯನ್ನು ಮೆಟ್ಟಲ ಬಳಿ ಸ್ವತಃ ಹಸನ್ ಸಾಹೇಬರೇ ಕೈಹಿಡಿದು ಸ್ವಾಗತಿಸಿದರು. ಚಾವಡಿಯಲ್ಲಿ ಅದಾಗಲೇ ನಾಲ್ಕೈದು ದೊಡ್ಡ ಮುಂಡಾಸಿನವರು ಕುಳಿತಿದ್ದರು. ರುಖಿಯಾಬಿಯ ದೂರದ ಅಣ್ಣ ಉಮರಬ್ಬ ಹೊಸ ಮುಂಡ ತಲೆಗೊಂದು ರುಮಾಲು ಸುತ್ತಿ ಮೂಲೆಯಲ್ಲಿದ್ದ ಬೆತ್ತದ ಕುರ್ಚಿಯಲ್ಲಿ ಶಿಸ್ತಾಗಿ ಕುಳಿತಿದ್ದ. ಒಳಬಾಗಿಲ ಹಸಿರು ಪರದೆಯ ಎಡೆಯಿಂದ ಬಳೆಗಳ ಕಣಕಣ ಆಗೊಮ್ಮೆ-ಈಗೊಮ್ಮೆ ತಪ್ಪಿಸಿಕೊಂಡು ಚಾವಡಿಗೆ ನುಗ್ಗುತ್ತಿತ್ತು. ಮೆತ್ತನೆಯ ಸೋಫಾದಲ್ಲಿ ಇಡಿಯಾಗಿ ತುಂಬಿಕೊಂಡಿದ್ದ ಮುಸ್ತಫಾರವರು ಹರಕು-ಮುರುಕು ಹಿಂದುಸ್ಥಾನಿಯಲ್ಲಿ ಸಾಹೇಬರೊಂದಿಗೆ ಮಾತು ಬದಲಿಸುವ ಪ್ರಯತ್ನ ನಡೆಸಿದ್ದರು. ಬೀರಾನ್ ಕೋಯಾ ನಿಂತಲ್ಲಿ ನಿಲ್ಲದೆ, ಕುಳಿತಲ್ಲಿ ಕುಳ್ಳಿರದೆ ಗಳಿಗೆಗೊಮ್ಮೆ ವಾಚು ನೋಡಿಕೊಳ್ಳುತ್ತಾ ಶತಪಥ ನಡೆದಾಡುತ್ತಿದ್ದರು. ಕ್ಷಣಕ್ಷಣಕ್ಕೂ ಕಾತರದಿಂದ ರಸ್ತೆ ದಿಟ್ಟಿಸುತ್ತಿದ್ದರು. ಒಮ್ಮೆ ‘ನಿಖಾ’ದ ಕಾರ್ಯಕ್ರಮ ಮುಗಿದುಹೋದರೆ ಸಾಕೆನ್ನಿಸುತ್ತಿತ್ತು. ಹಲ್ಕಾ ಹರಾಮಿ ಹುಡುಗರದ್ದು ಯಾವ ಕ್ಷಣದಲ್ಲೂ ನಂಬುವಂತಿರಲಿಲ್ಲ. ಗುಂಪುಕಟ್ಟಿಕೊಂಡು ಇಲ್ಲಿಗೇ ಬಂದರೂ ಅಚ್ಚರಿಪಡಬೇಕಾಗಿಲ್ಲ. ರಾತ್ರಿಯಿಡೀ ಭಯದಿಂದ ನಿದ್ರೆ ಹಾಳುಮಾಡಿಕೊಂಡಿದ್ದರು. ಹಿತ್ತಲಲ್ಲಿ ಪರಪರ ಸದ್ದಾದಾಗಲೆಲ್ಲ ಹುಡುಗರು ಬಂದರೆಂದೇ ಬೆಚ್ಚಿ ಬೀಳುತ್ತಿದ್ದರು. ಏನಾದರೂ ಹೆದರಿ ಸುಮ್ಮನಿರುವಂತಿಲ್ಲ; ಮಗಳು ಹಲೀಮಳಿಗೆ ಮದುವೆಯಾಗಬೇಕಾದರೆ ಇಲ್ಲಿ ‘ನಿಖಾ’ ನಡೆಯಲೇ ಬೇಕು. ಅರಬಿ ಇನ್ನೂ ಕೂಡಾ ಪೂರ್ತಿ ದುಡ್ಡು ಕೊಟ್ಟಿರಲಿಲ್ಲ. ಎಲ್ಲ ಮುಗಿದು ಹೋದರೆ ಸಂಜೆಯಾಗುವ ಹೊತ್ತಿಗೆ ಮೂರು ಸಾವಿರ ಗಿಟ್ಟುವುದು ಗ್ಯಾರಂಟಿ.
ಗೇಟಿನ ಬಳಿ ರಿಕ್ಷವೊಂದು ಬಂದು ನಿಂತಿತು. ದಕ್ಷಿಣ ಜಮಾತಿನ ಖಾಜಿಯವರು ರಿಕ್ಷದಿಂದಿಳಿದರು. ಕುಪ್ಪಳಿಸಿ ಧಾವಿಸಿದ ಬೀರಾನ್ ಕೋಯಾ ಸೊಂಟದ ಪಟ್ಟಿಯಿಂದ ಹಣ ತೆಗೆದು ರಿಕ್ಷದವನಿಗೆ ಕೊಟ್ಟರು.
ಚಾವಡಿ ಚುರುಕಾಯಿತು. ಚಿಕ್ಕ ಹುಡುಗನೊಬ್ಬ ಒಳಗಿನಿಂದ ಕೆಂಪು ಮಕಮಲ್ಲಿನ ಜಮಖಾನೆಯನ್ನು ಹೊತ್ತು ತಂದು ಚಾವಡಿಯ ನಡುವೆ ಹರಡಿದ. ಖಾಜಿಯವರ ಅನುಮತಿಯನ್ನು ಕಣ್ಸನ್ನೆಯಲ್ಲೇ ಗಿಟ್ಟಿಸಿಕೊಂಡ ಕೋಯಾ, ಮುಸ್ತಫಾರನ್ನು ಕೈ ಹಿಡಿದು ಎಬ್ಬಿಸಿ ಜಮಖಾನೆಯ ಮೇಲೆ ಕುಳ್ಳಿರಿಸಿ ಅರಬಿಕ್‌ನಲ್ಲಿ ಏನೋ ಹೇಳಿ ನಕ್ಕರು. ಅತ್ತಿತ್ತ ಪಿಳಿಪಿಳಿ ದಿಟ್ಟಿಸಿದ ಉಮರಬ್ಬ ತನ್ನನ್ನು ಯಾರೂ ಗಮನಿಸದಿರುವುದನ್ನು ಕಂಡು ಬೇಸರವೆನ್ನಿಸಿದರೂ, ಶಿಸ್ತಿನಿಂದ ನಡೆದು ಬಂದು ಮುಸ್ತಫಾರ ಎದುರು ಕುಳಿತ.
ಗೋಡೆಯ ಬಳಿ ನಿಂತು ದೊಡ್ಡ ಮುಂಡಾಸಿನವರೊಬ್ಬರೊಡನೆ ಪಿಸಿಪಿಸಿ ಮಾತನಾಡುತ್ತಿದ್ದ ಖಾಜಿಯವರು ಉಮರಬ್ಬನತ್ತ ಬೊಟ್ಟುಮಾಡಿ “ಅದು ಯಾರು?” ಎಂದು ಪ್ರಶ್ನಿಸಿದರು.
“ಅದು ರುಖಿಯಾಳಿಗೆ ಅಣ್ಣನಾಗಬೇಕು. ನಾನೇ ಬರಲು ಹೇಳಿದ್ದು” ಹಸನ್ ಸಾಹೇಬರು ಉತ್ತರಿಸಿದರು.
“ಹುಡುಗಿಯ ತಾಯಿಯ ಕಡೆಯವನೋ?” ಖಾಜಿಯವರ ಮತ್ತೊಂದು ಪ್ರಶ್ನೆಗೆ ಎದ್ದು ನಿಂತ ಉಮರಬ್ಬ ‘ಹೌದು’ ಎಂದ. ಪಕಪಕನೆ ಸ್ವರವೆಬ್ಬಿಸಿ ನಕ್ಕ ಖಾಜಿಯವರು, ಬೀರಾನ್ ಕೋಯಾರತ್ತ ತಿರುಗಿ ಹೇಳಿದರು. “ಎಂಥದ್ದು ಕೋಯಾ? ನಿಮಗೂ ಗೊತ್ತಿಲ್ವಾ? ಇಷ್ಟು ವರ್ಷ ಸರ್ವಿಸು ಆದದ್ದು ದಂಡ. ಹುಡುಗಿಯ ತಾಯಿಯ ಕಡೆಯವರು ‘ನಿಖಾ’ಕ್ಕೆ ಕೈಕೊಡುವ ಕ್ರಮ ಈ ಭೂಲೋಕದಲ್ಲಿ ಎಲ್ಲಾದ್ರೂ ಉಂಟಾ?”
ಬೀರಾನ್ ಕೋಯಾ ತುಟಿ ಕಚ್ಚಿಕೊಂಡರು. “ಗಡಿಬಿಡಿಯಲ್ಲಿ ಏನೇನೋ ಆಗಿಹೋಯಿತು ಖಾಜಿಯವರೇ; ಹುಡುಗಿಗೆ ತಂದೆಯ ಕಡೆಯವರು ಅಂತ ಯಾರೂ ಇಲ್ಲ. “ನಿಖಾ ನಡೆಸಿಕೊಡುವ ಖಾಜಿಯವರೇ ಕುಳಿತುಕೊಳ್ಳಬಹುದು ಅಂತ ಶಾಸ್ತ್ರದಲ್ಲಿ ಉಂಟಲ್ಲಾ? ನೀವೇ ಸುಧಾರಿಸಿಬಿಡಿ. ನಿಮಗೆ ಮೊದಲೇ ಹೇಳಲು ಮರೆತುಹೋಯಿತು” ಎಂದ ಕೋಯಾ, ಖಾಜಿಯವರಿಗೆ ಕಣ್ಸನ್ನೆಯಲ್ಲಿ ಮತ್ತೊಂದು ಮಾತು ರವಾನಿಸಿದರು.
ಅವಮಾನಿತನಾದ ಉಮರಬ್ಬ ನಾಚಿಕೆಯಿಂದ ತಲೆತಗ್ಗಿಸಿ ಮೂಲೆ ಸೇರಿದ. ತಾನಿಲ್ಲಿಗೆ ಬರಲೇಬಾರದಿತ್ತು. ಕೋಯಾರವರ ಮಾತು ಕೇಳಿ ಮರ್ಯಾದೆ ಕಳೆದುಕೊಂಡಂತಾಯಿತು ಎಂದು ಹಳಹಳಿಸಿದ. ಮುಂಜಾನೆಯ ನಮಾಜಿನ ಭಾಂಗ್ ಕೇಳಿಸುತ್ತಿರುವಂತೆಯೇ ಬೀರಾನ್ ಕೋಯಾ ಬಂದು ಹೇಳಿದ್ದರು. ರುಖಿಯಾಳನ್ನು ಕಂಡು ಮಾತನಾಡಲು ಸಾಧ್ಯವಾಗಿದ್ದಿರಲಿಲ್ಲ. ಇಲ್ಲೇ ಒಳಗಿರಬಹುದೆಮ್ದು ಕಾಣುತ್ತದೆ. ‘ನಿಖಾ’ ಮುಗಿದನಂತರ ಮಾತನಾಡಿದರಾಯಿತು ಎಂದು ಯೋಚಿಸುತ್ತಾ ಕುಳಿತ.
ಹಸನಬ್ಬನ ಇರವನ್ನೇ ಮರೆತ ಖಾಜಿಯವರು ‘ನಿಖಾ’ದ ಗಡಿಬಿಡಿಯಲ್ಲಿ ಮುಳುಗಿದರು. ಒಳಬಾಗಿಲ ಹಸಿರು ಪರದೆಯ ನಡುವಿನಲ್ಲಿ ಹಲವಾರು ಉಬ್ಬು ತಬ್ಬುಗಳು ಮುದ್ರೆಯೂರತೊಡಗಿದ್ದವು. ಎದುರುಬದುರಾಗಿ ಕುಳಿತುಕೊಂಡ ಖಾಜಿ ಮತ್ತು ಮುಸ್ತಫಾರವರು ಹಸ್ತಲಾಘವ ಶೈಲಿಯಲ್ಲಿ ಕೈಜೋಡಿಸಿದರು.
ವಾಗ್ದಾನದ ಮಾತು ಇನ್ನೇನು ಆರಂಭವಾಗಬೇಕು…..ಅಷ್ಟರಲ್ಲಿ,
“ನಿಲ್ಸಿ!” ಸಿಡಿಲಿನಂತೆ ಆರ್ಭಟ ಕೇಳಿಸಿತ್ತು, ಒಳಬಾಗಿಲ ಹಸಿರು ಪರದೆ ಹಗ್ಗ ಕಡಿದುಕೊಂಡು ನೆಲದ ಮೇಲೆ ದೊಪ್ಪನೆ ಬಿತ್ತು. ಕೂಡಿದ್ದ ಮಂದಿಯೆಲ್ಲ ನಿಂತಲ್ಲೇ ಕುಳಿತಲ್ಲೇ ಕಲ್ಲಾಗಿಬಿಟ್ಟರು. ಬೆಪ್ಪರಂತೆ ಕಣ್ಣು ಪಿಳಿಪಿಳಿ ಮಾಡಿದರು. ಧರ್ಮಕಾರ್ಯದಲ್ಲಿ ಅಪಚಾರ! ‘ನಿಖಾ’ ನಡೆಯುವ ಜಾಗದಲ್ಲಿ ಹೆಂಗಸು! ಕೆದರಿದ ಕೂದಲ, ಬೆಂಕಿಕಾರುವ ಕಣ್ಣುಗಳ ರುಖಿಯಾಬಿ ಬಾಣದಂತೆ ನುಗ್ಗಿ ಅರಬಿಯ ಕೈ ಹಿಡಿದಿದ್ದ ಖಾಜಿಯವರ ಮುಂಗೈಯನ್ನು ಹಿಡಿದೆಳೆದುಬಿಟ್ಟಳು! ಎಲ್ಲವೂ ಮಿಂಚಿನ ವೇಗದಲ್ಲಿ ನಡೆದು ಖಾಜಿಯವರ ರಕ್ತ ತಣ್ಣಗಾಗಿಬಿಟ್ಟಿತ್ತು.
“ನಿಲ್ಸಿ!, ಈ ನಿಖಾ ಕಬೂಲು ಆಗಲಾರದು! ಈ ಮದುವೆಗೆ ಹುಡುಗಿಯ ಸಮ್ಮತಿಯಿಲ್ಲ, ನಿಲ್ಸೀ…..ನಾನೊಪ್ಪುವುದಿಲ್ಲ….!” ರುಖಿಯಾಬಿಯ ಕೀರಲು ದನಿ ರಸ್ತೆಗೆ ಕೇಳಿಸುತ್ತಿತ್ತು.
ತಬ್ಬಿಬ್ಬಾಗಿದ್ದ ಬೀರಾನ್ ಕೋಯಾ ತಕ್ಷಣ ಚೇತರಿಸಿಕೊಂಡು ಎದ್ದು ನಿಂತರು. ಕೋಪದಿಂದ ನಡುಗುತ್ತಿದ್ದರು. “ಏಯ್….ಸೈತಾನ್” ಎಂದು ಅಬ್ಬರಿಸಿ ರುಖಿಯಾಬಿಯತ್ತ ಕೈಯೆತ್ತಿಕೊಂಡೇ ನುಗ್ಗಿದರು. ಎರಡು ಹೆಜ್ಜೆ ಹಿಂದಕ್ಕೆ ಸರಿದ ರುಖಿಯಾಬಿ ಕಟಕಟನೆ ಹಲ್ಲು ಕಡಿಯುತ್ತಾ ಚಿಟಾರನೆ ಚೀರಿ, ಇಡೀ ದೇಹವನ್ನು ಬಿಲ್ಲಿನಂತೆ ಮುಂದಕ್ಕೆ ಬಗ್ಗಿಸಿ ಕ್ಯಾಕರಿಸಿ ಥೂಕ್ಕೆಂದು ಉಗಿದೇಬಿಟ್ಟಳು. ಬೀರಾನ್ ಕೋಯಾರ ನೆತ್ತಿಯ ಮೇಲೆ ಥೊಪ್ಪೆಂದು ಅಂಟಿಕೊಂಡ ಹಳದಿ ಎಂಜಲ ಮುದ್ದೆ ನಿಧಾನವಾಗಿ ಜಾರುತ್ತಾ ಅವರ ಬಲರೆಪ್ಪೆಯನ್ನು ಆವರಿಸಿಬಿಟ್ಟಿತು. ಅವಮಾನದ ಆಘಾತಕ್ಕೆ ಬೀರಾನ್ ಕೋಯಾರ ಎದೆ ಬಡಿತವೇ ನಿಂತಂತಾಯಿತು. ಕೈ ಕಾಲು ಸ್ವಾಧೀನ ತಪ್ಪಿದಂತಾಗಿ ‘ಯಾ ಅಲ್ಲಾ’ ಎನ್ನುತ್ತಲೇ ಕುಸಿದು ಕುಳಿತುಬಿಟ್ಟರು. ಅದುವರೆಗೆ ಗರ ಬಡಿದವರಂತೆ ಕುಳಿತಿದ್ದ ಹಸನ್ ಸಾಹೇಬರು ಧಡಕ್ಕನೆ ಎದ್ದು ಮುಂದೆ ಸಾಗಿ ರುಖಿಯಾಬಿಯ ರಟ್ಟೆಗೆ ಕೈ ಹಾಕುವಷ್ಟರಲ್ಲಿ ಮೂಲೆಯಲ್ಲಿ ಕುಳಿತಿದ್ದ ಉಮರಬ್ಬ ಚಂಗನೆ ಜಿಗಿದು ಸಾಹೇಬರ ಭುಜ ಹಿಡಿದು ಗೋಡೆಯತ್ತ ದಬ್ಬಿಬಿಟ್ಟ.
ಇಡೀ ಮುತ್ತುಚ್ಚೆರವೇ ಎಚ್ಚರಗೊಳ್ಳುವಂತೆ ರುಖಿಯಾಬಿ ಅರಚುತ್ತಿದ್ದಳು. “ನಾನೊಪ್ಪುವುದಿಲ್ಲಾ…ಮುತ್ತುಚ್ಚೇರದ ಯಾವ ಹೆಣ್ಣೂ ಇದಕ್ಕೆ ಒಪ್ಪುವುದಿಲ್ಲಾ….ಇದನ್ನು ಅಲ್ಲಾಹು ಕೂಡಾ ಒಪ್ಪುವುದಿಲ್ಲಾ”
ಚಾವಡಿಯೊಳಗೆ ಬಾಂಬು ಸಿಡಿದಂತಾಗಿತ್ತು. ಸೇರಿದ್ದವರಿಗೆಲ್ಲ ತಮ್ಮೆದುರು ಏನಾಗುತ್ತಿದೆ. ತಾವೇನು ನೋಡುತ್ತಿದ್ದೇವೆ ಎನ್ನುವುದೊಂದೂ ಅರ್ಥವಾಗದಷ್ಟು ಗಲಿಬಿಲಿ. ಧರ್ಮಸಮ್ಮತವಾದ ಮಂಗಳ ಕಾರ್ಯವನ್ನು ಧಿಕ್ಕರಿಸಿ ಬೊಬ್ಬಿರಿಯುತ್ತಾ ಮೆಟ್ಟಲಿಳಿದು ಹೋಗುತ್ತಿರುವ ಕೂಲಿ ಕೆಲಸದ ಹೆಂಗಸೊಬ್ಬಳನ್ನು ತಡೆದು ನಿಲ್ಲಿಸುವ ಎದೆಗಾರಿಕೆ ಚಾವಡಿಯೊಳಗಿದ್ದ ಯಾವ ಗಂಡಸಿಗೂ ಇರಲಿಲ್ಲ.
ಮುತ್ತುಚ್ಚೇರದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಒಬ್ಬಳು ಹೆಣ್ಣು ಪ್ರತಿಭಟಿಸಿದ್ದಲು! ಪ್ರತಿಭಟಿಸಿ ಬಯಸುವ ನೂರಾರು ಹೆಣ್ಣುಗಳ ಮೊದಲ ಧ್ವನಿಯೆಂಬಂತೆ….
*****
ಕೀಲಿಕರಣ: ಸೀತಾಶೇಖರ್-ಸಹಾಯ -ನಂದಿನಿ