ಆಭಾ

ಆಗಿನ್ನೂ ಸಮಿತಾ ರೂಮಿಗೆ ಬಂದವಳು ಸ್ನಾನ ಮಾಡಿ ಚಹಾ ಕುಡಿಯುತ್ತ ಕುಳಿತಿದ್ದಳಷ್ಟೆ. ಬೆಲ್ಲಾಯಿತು. ತೆರೆದರೆ ಆಭಾ. ಆಭಾ ಏನು ಮೊದಲೇ ಗುರುತಿನವಳಲ್ಲ. ಒಳಗೆ ಬರಬರುತ್ತಲೇ ಕೈಕುಲುಕಿದಳು. ತನ್ನ ಹೆಸರು ಹೇಳುತ್ತ ಚಪ್ಪಲಿಯನ್ನು ಆಚೆಗೊಂದು ಈಚೆಗೊಂದು ತಬ್ಬಲಿಬೀಳುವಂತೆ ಎಸೆದು, ಬಿದಿರಿನ ಒರಗು ಕುರ್ಚಿಯಲ್ಲಿ ಶಹಜಾದಿಯಂತೆ ಕುಳಿತು ಮಾತಿಗಾರಂಭಿಸಿದಳು. ತಾನು, ಉದ್ಯೋಗ, ತನ್ನ ಪತಿ, ಮಗಳು ಅವಳ ಹೆಸರು, ವಯಸ್ಸು…. ಸಮಿತಾ ಹುಂಗುಡುತ್ತಲೇ ಇದ್ದಳು. ಕಂಡ ಕೂಡಲೆ ಉದ್ದ ಪರಿಚಯ ಹೇಳಿಕೊಳ್ಳುವ ಧೈರ್ಯ ಇದು; ಎದುರಿಗಿರುವವರು ಖಂಡಿತಾ ಆಲಿಸಿಯೇ ಆಲಿಸುತ್ತಾರೆಂಬ ಧೈರ್ಯ. ಧೈರ್ಯವೋ ಇದು ಅಹಂಕಾರವೊ. ಸತ್ಯ ನೋಡಿದರೆ ಇಷ್ಟು ವಿವರ ಬೇಕೆ ತನಗೆ ಈಗ? ಅವಳಿನ್ನೂ ಬಂದಿದ್ದಾಳಷ್ಟೇ. ತಾನಾದರೂ ಈಗ ಬಂದು ಸುಧಾರಿಸಿಕೊಳ್ಳುತ್ತಿರುವವಳು. ಕಂಡ ಕೂಡಲೇ ವಿವರ ಕೇಳುವ ತವಕವೂ ತನ್ನದಲ್ಲ. ಹೇಳುವ ತಹತಹವಿದ್ದವರಿಗೆ ಕೇಳುಗರ ಗೋಜೇ ಇರುವುದಿಲ್ಲ ಬಹುಶಃ. ಸದ್ಯ ಬೇರೆ ಮಾತೇ ಇಲ್ಲದ ಹಾಗೆ ಆಕೆ ಮುಂದುವರಿದು ಪತಿ-ಸಂಶೋಧಕ, ಮಗಳು ಬ್ರಿಲಿಯಂಟ್, ಪತಿಯ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಲು ಹಾತೊರೆವ ಎಕ್ಸಲೆಂಟ್ ವಿದ್ಯಾರ್ಥಿ ವಿದ್ಯಾರ್ಥಿನಿಯರು, ತನ್ನ ಕವಿತೆಗಳು, ಪ್ರಾಧ್ಯಾಪಕಿಯಾಗಿರುವ ತನ್ನ ಜನಪ್ರಿಯತೆ – ಮಾತನ್ನೇ ಪ್ಯಾಕ್ ಮಡಿತಂದು ಬಿಡಿಸುತ್ತಿರುವ ಆಭಾ. ಮುಖದ ರೇಖೆ, ಕುಳಿತುಕೊಳ್ಳುವ ಮಟ್ಟು, ಹಾವಭಾವ ಎಲ್ಲ – ವಿಚಿತ್ರ ಚಡಪಡಿಕೆಯ ಮತ್ತೊಂದು ಮಗ್ಗುಲಿನಂತಿತ್ತು. ಅಂತೂ ನಡುವೊಮ್ಮೆ ಮಾತು ಕಡಿದು,

“ಹಸಿವೆ!”

“ಊಟಕ್ಕೆ ಹೋಗೋಣ. ಕೈಕಾಲು ಮುಖ ತೊಳೆದುಕೊಂಡು ಬಾ” ಇಬ್ಬರೂ ಊಟ ಮುಗಿಸಿ ಮತ್ತೆ ರೂಮು ಸೇರಿದರು. ಗಂಟೆ ಆಗಲೇ ಒಂಭತ್ತಾಗುತ್ತಾ ಬಂದಿತ್ತು. ವಯಸ್ಸು ಮತ್ತು ರಾತ್ರಿ ಎಂತಹ ಗಾಢ ಸಂಬಂಧ ಅಲ್ಲವ? ಎಂದಳು ಆಭಾ ಸೀರೆ ಬದಲಿಸುತ್ತ. “ಎಷ್ಟು ಸುಂದರ ರಾತ್ರಿಗಳು, ಸುಂದರ ಕನಸುಗಳು” – ಎಂದು ಹಾಡುತ್ತ ಜೊತೆಗೆ “ಎಷ್ಟು ಸುಂದರ ನೈಟಿಗಳು” ಎಂದೂ ಸೇರಿಸಿ ನಕ್ಕು ಅದನ್ನೇ ಶಿಳ್ಳಿನಲ್ಲಿ ಮೆದುವಾಗಿ ನುಡಿಸುತ್ತಾ ಹೇಗಿದೆ ಎಂಬಂತೆ ಕುಶಾಲಿನ ಹುಬ್ಬೇರಿಸಿದಳು. ಸಮಿತಾಗೆ ಊರು ಬಿಟ್ಟು ಬಹಳ ದೂರ ಬಂದ ಭೀತಿ ಪ್ರಥಮತಃ ಆವರಿಸಿತು. ಯಾಕೋ ಪರಪುರುಷನೊಂದಿಗೆ ಇದ್ದಂತೆ ಅಸ್ವಸ್ಥಳಾದಳು. ತೋರಿಕೊಲ್ಳದೆ – “ಚಿನ್ನಾಗಿದೆ”.

ಸಿಗರೇಟು ಹಚ್ಚಿದಳು ಆಭಾ. ಸಮಿತಾ ಹೊಗೆಯೋಡಿಸಿಕೊಳ್ಳುವುದನ್ನು ನೋಡಿ ಸಿಗರೇಟಿನ ಎಡೆಯಲ್ಲಿಗಯೇ ನಕ್ಕಳು ಹೊರತು ನಂದಿಸಲಿಲ್ಲ. ಕಟ್ಟುನಿಟ್ಟಿನ, ದಾಕ್ಷಿಣ್ಯದ ಮನೆಯಲ್ಲಿ ಬೆಳೆದುಬಂದವಳು ಸಮಿತಾ, ಮಾತಾಡದೆ ಕುಳಿತಳು. ಮಾತಾಡದೆ ಕುಳಿತುಕೊಳ್ಳಬಹುದು. ಆದರೆ ಜೊತೆಯಲ್ಲಿದ್ದವರಿಗೆ ಮಾತಾಡಬೇಡಿ ಎನ್ನಲಾದೀತೆ? ಆಭಾ ಮತ್ತೆ ಕಲ್ಕತ್ತ, ಕಾಲೇಜು, ತನ್ನ ಲವ್ಲಿ ಸಂಸಾರ, ಸಾಹಿತ್ಯ. ….ಹೇಳಲಾರದ ಅಸ್ವಸ್ಥತೆಯಲ್ಲಿ, ಮುತ್ತುತ್ತಿದ್ದ ನಿದ್ದೆಯಲ್ಲಿ ಕೇಳು‘ವಂತೆ’ ಇದ್ದ – ಸಮಿತಾಗೆ ನಿದ್ದೆ ಬಂತು. ಫೋನು ಟ್ರಿಣಿಗುಟ್ಟಿದಾಗಲೇ ಎಚ್ಚರ. ಫೋನು! ಎಂದಳು ಆಭಾ ಅದನ್ನೆ ನಿರೀಕ್ಷಿಸುತ್ತ ಕುಳಿತಂತೆ. ರಿಸೀವರ್ ಎತ್ತಿ ಮಾತಾಡಿ ಮುಗಿಸಿಟ್ಟರೆ ಮರುಕ್ಷಣಕ್ಕೆ ಮತ್ತೆ. ಮತ್ತೊಂದು ಕ್ಷಣಕ್ಕೆ ಮತ್ತೆ. ಕೊನೆಗೆ “ನಾಳೆ ನೋಡುತ್ತೇವಲ್ಲ” – ಫೋನಿಟ್ಟು ಪ್ಲಗ್ ತೆಗೆದು “ರಾಸ್ಕಲ್” ಎಂದಳು. ಸಿಟ್ಟಿನ ಲೇಪವೇ ಇಲ್ಲದೆ. ಹಾಗೆಂದರೆ ಯಾರು ಕೇಳುವಳೆಂದರೆ ಕೇಳದೆ ಸಮಿತಾ ನಿದ್ದೆ ನಟಿಸಿದಾಗೆ “ಸೆಖೆ. ಸ್ನಾನ ಮಾಡಿ ಬರುತ್ತೇನೆ.” ಆಕೆಯ ಎಚ್ಚರ ತಿಳಿದಿರುವಂತೆ ಹೇಳುತ್ತ ಬಚ್ಚಲಿಗೆ ನಡೆದಳು ಆಭಾ…..

ಇನ್ನು ಎರಡು ದಿನವಿಡೀ ಹೀಗೆಯೇ? ಸಮಿತಾಗೆ ಚಿಂತೆಯಲ್ಲಿ ಮೈಮರೆತು ನಿದ್ದೆ ಬರದು. ಮಂಪರು, ಎಚ್ಚರ. ಕಣ್ಣು ತೆರೆದು ನೋಡಿದರೆ ಮಂದ ಬೆಳಕಲ್ಲಿ ಆಭಾ ಕೈಮೈ ಹೇಗೆಂದರೆ ಹಾಗೆ ಚೆಲ್ಲಿಕೊಂಡು ಮಲಗಿರುವುದು ಕಾಣಿಸಿತು. ನಿದ್ದೆಯುಸಿರು. ಮೊದಲ ಭೇಟಿಯೆಂದೂ ನೋಡದೆ ಎಷ್ಟು ಮಾತು! ಪಯಣದುದ್ದಕ್ಕೂ ಯೋಚಿಸಿ ಯೋಚಿಸಿ ದಣಿದು ತೊಪ್ಪೆಯಾದವರು ಮಾತ್ರ ಹೀಗೆ ತುತ್ತತುದಿಯಲ್ಲಿ ಸಿಕ್ಕಿದವರೊಡನೆ ಎಲ್ಲವನ್ನೂ ಕಕ್ಕಿಬಿಡುವರೇನೋ. “ಮಗಳು ಉಜ್ವಲಾ. ಅವಳು ಮನೆಯಲ್ಲಿ ಇರುವುದೇ ಬೇಡ ಅಂತ ಹಾಸ್ಟೆಲಿಗೆ ಸೇರಿಸಿದೆ. ಹಾಸ್ಟೆಲು. ಯಾಕಿಲ್ಲ, ಸುಮ್ಮನೆ. (ತನ್ನೊಳಗೇ ಎಂಬಂತೆ ಮೆಲ್ಲಗೆ) ಹೆಚ್ಚು ಸೇಫ್ ಅಲ್ಲವೆ? ಪರಿಚಯವೆಂಬುದು ತುತ್ತ ತುದಿಯಲ್ಲಿ ಒಂದು ಬಗೆಯ ಸ್ವಗತವೂ ಆಗಿಬಿಡುವ ಚೋದ್ಯವೇ! ತನಗೆ ತಾನೇ ಯಾರೆಂದು ಕೇಳಿಕೊಂಡು ನಿಂತುಬಿಡುವ ಕ್ಷಣವೂ. ಯಾರೆಂದು ಕಂಡುಕೊಳ್ಳುವ ಕ್ಷಣವೂ?
*
*
*

ಬೆಳಗಾಯಿತು. ಈ ಊರಿನಲ್ಲಿಯೂ ಸೂರ್ಯನಿದ್ದಾನೆ! ಕಿರಣ ತಟ್ಟಿ ಎಬ್ಬಿಸುತ್ತಾನೆ. ತನ್ನೂರಿನಲ್ಲಿ ಮಾತ್ರ ಅಂತಿದ್ದೆನಲ್ಲ. ಅಲ್ಲಿರುವಷ್ಟು ಉರಿಗತ್ತಿನಲ್ಲಲ್ಲವಾದರೂ ಬೆಚ್ಚಗಿದ್ದ. ಬೆಳಗಿನ ಚಿತ್ರದ ಮುಸುಕನ್ನು ನಿಧಾನವಾಗಿ ತೆರೆಯುತ್ತಾ ಇದ್ದ. ಆಭಾಳನ್ನು ಕರೆದು ತೋರಿಸುವ ಅಂತ ಅತ್ತ ತಿರುಗಿದರೆ ಹೊದಿಕೆಯೆಲ್ಲ ಅಸ್ತವ್ಯಸ್ತ ತಳಿದುಕೊಂಡು ಕವುಚಿ ಮಲಗಿದ್ದಳು ಆಭಾ. ಉರುಳಾಡಿದ ಕುರುಹಂತೆ ಕೂದಲೆಲ್ಲ ಸಿಕ್ಕಾಗಿ ಕೆದರಿತ್ತು. ಥೊ. ಇವಳಿಗೊಂದು ಮಲಗಲೂ ಯಾರೂ ಹೇಳಿಕೊಡಲಿಲ್ಲವೆ?…. ‘ಮಲಗಲೂ ಹೇಳಿಕೊಡುವುದು!’ ತನ್ನೊಳಗೇ ನಗುತ್ತ ಸಮಿತಾ ಅವಳ ಹೊದಿಕೆ ಸರಿಪಡಿಸಿ ಕೂದಲು ಸರಿಸಿ “ಹೆ. ಸರಿ ಮಲಕೊ. ಒಳ್ಳೆ ಗಂಡಸರಂತೆ ಮಲಗಿದ್ದೀಯಲ್ಲ.”

ಕಣ್ಣತೆರೆಯದೇ ಎಂದಳು ಆಭಾ “ಹಾಗಾದರೆ ಗಂಡಸುತನ ಎಲ್ಲೆಲ್ಲ ಇರುತ್ತದಪ್ಪ!…. ಮಲಗುವುದರಲ್ಲಿಯೂ ಇದೆ ಎಂದರೆ!…. ಅಥವಾ ಇರುವುದು ಅಲ್ಲಿ ಮಾತ್ರವ?…. ಬಿಡು. ನಾನೊಂದು ರೀತಿ ಗಂಡಸೇ. ಇಲ್ಲವಾದರೆ ಇಷ್ಟೊತ್ತಿಗೆ…. (ಅದನ್ನಿಲ್ಲಿಗೇ ಬಿಟ್ಟು)…. ನಿನ್ನದೆಲ್ಲ ಮುಗಿಸಿಕೊ. ನಾನು ಆಮೇಲೆಯೇ ಏಳುವುದು” ಮಗ್ಗುಲಾದಳು. ಚಹಾ ಬಂದರೂ “ಆಮೇಲೆ”. ಸಮಿತಾ ತನ್ನ ಪಾಡಿಗೆ ತಾನು ಹೊರಟು “ಏಳು. ನಾನು ರೆಡಿಯಾಗಿಯಾಯಿತು. ಸರಿಯಾಗುತ್ತದೆ ಇನ್ನು.”

ಸಮಿತಾ ಹೇಳಿದ್ದು ಇನ್ನು ಎದ್ದರೆ ಸರಿಯಾಗುತ್ತದೆ ಎಂಬರ್ಥದಲ್ಲಾದರೆ ಆಭಾ ಮಿಂಚು ಹೊಡೆದಂತೆ ಎದ್ದು ಅವಳ ಕೈ ಹಿಡಿದು “ಸತ್ಯ ಹೇಳು. ಎಲ್ಲ ಸರಿಯಾಗುತ್ತದೆಯೇ?” – ಯಾಕೆ ಹಾಗೆನ್ನುತ್ತಿ ಮುಂತಾಗಿ ವಿವರ ಕೇಳದೇನೆ ಸಂತೈಸಬೇಕು, ಹಾಗೆ. ಸಮಿತಾ ಹಾಗೆಯೇ ಸಂತೈಸಿದಳು “ಎಲ್ಲ ಸರಿಯಾಗುತ್ತದೆ, ಖಂಡಿತ.”

ಎಷ್ಟು ಹೊತ್ತಾದರೂ ಹೊರಟು ಮುಗಿಯದ ಆಭಾ, ಸಮಿತಾ ಕಡೆ ತಿರುಗಿ ಹುಬ್ಬೇರಿಸಿ “ಸತ್ಯಕ್ಕೂ ನೀನು ಹೊರಟಾಯಿತಾ?”
“ಹುಂ”
“ಹೀಗೆ!”
“ಹೂಂ.”
“ಛೆ. ತುಟಿಗೆ ಲಿಪ್ಸ್ಟಿಕ್ ಹಚ್ಚಿಕೊಳ್ಳುವುದಾದರೂ ಅಭ್ಯಾಸಮಾಡಿಕೊಳ್ಳಬೇಕು ಕಣೆ. ಇಕ. ಹೊಸತು. ನಾನಿನ್ನೂ ಯೂಸ್ ಮಾಡದ್ದು. ಹಚ್ಚಿಕೊ.”
“ಬೇಡ. ಥ್ಯಾಂಕ್ಸ್. ಬೇಗ ಹೊರಡು ನೀನೀಗ.”

ಕನ್ನಡಿ ಮುಂದೆ ನಿಂತಂತೆ, ಎಂದಳು ಆಭಾ, “ಒಂದು ವಯಸ್ಸು. ಆ ವಯಸ್ಸಿನವರೆಗೆ ನೀನು ಹೇಗಿದ್ದರೂ ಸರಿಯೆ. ಯೌವನವಿರುತ್ತದೆ ನೋಡು. ಕಾಸ್ಮೆಟಿಕ್ಸ್ ಎಲ್ಲ ಬೇಕಾಗುವುದು ಆ ವಯಸ್ಸಿನ ನಂತರವೇ. ನಮ್ಮಲ್ಲೊಂದು ರಿಸರ್ಚ್ ಹುಡುಗಿ ಬರುತ್ತಾಳಲ್ಲ…. (ಅದನ್ನಲ್ಲಿಗೆ ಬಿಟ್ಟು, ಪುಟ ಮಗುಚಿದ ಹಾಗೆ) ಹೊ. ನಿನಗೆ ನೀನು ಏನೂ ಹಾಕಿಕೊಳ್ಳುವುದಿಲ್ಲ ಅಂತ ಜಂಭ.”

“ಹೌದು ಜಂಭ.”

“ಮರೀ ಇದೆಲ್ಲ ಬೇಕು. ಇಲ್ಲದಿದ್ದರೆ ನಿನ್ನ ಗಂಡ ನಿನ್ನನ್ನು ದೂರ ಮಾಡುತ್ತಾನೆ. ಅಷ್ಟೇ ಅಲ್ಲ ನಿನ್ನನ್ನು ನೋಡುವಾಗ ಯಾರ ಕಣ್ಣಲ್ಲಿಯೂ ಕುತೂಹಲವಿರುವುದಿಲ್ಲ. ಪಾರ್ಟಿಗಳಲ್ಲಿ ನೀನು ಎದ್ದು ಕಾಣುವುದಿಲ್ಲ. ಬಣ್ಣ ಕಂಡರೆ ಸವರುವ ಮಾತಾಡುವ ಗಂಡು ಜಾತಿಯನ್ನು ಮಂಗ ಮಾಡುವುದು ಸುಲಭ. ನೋಡೀಗ. ನಾನು ಹೋದೊಡನೆ ಎಲ್ಲ ನನ್ನ ಕಡೆಗೇ ಹೇಗೆ ನೋಡುತ್ತಾರೆ ಅಂತ.” ಆದರೆ…. ಈ ಮಾತುಗಳು ಅವಳ ಒಡಲಿನವೇ ಅಂತ ತನಗೆ ನಂಬಿಕೆ ಯಾಕೆ ಬರುತ್ತಿಲ್ಲ? ಅವಳ ಮಾತಿನಲ್ಲಿ ಅವಳಿಲ್ಲ; ಮುಂಗೈವರೆಗೂ ತೋಳಿನ, ತುದಿಯಲ್ಲಿ ಮೊಗ್ಗಿನಂತೆ ಕಸೂತಿ ಮಾಡಿದ ಸುಂದರ ರವಕೆ ತೊಟ್ಟಿದ್ದಳು ಆಭಾ. ತನ್ನ ಗೌರವರ್ಣದೊಂದಿಗೆ ಒಳಜೀವಂತಿಕೆ ಪುಟಿದು ಕಾಣುವಂತೆ ಕಡುನೀಲಿ ಬಣ್ಣದ ಸೀರೆಯುಟ್ಟಿದ್ದಳು. “ನಮ್ಮಲ್ಲೊಂದು ರಿಸರ್ಚ್ ಹುಡುಗಿ ಬರುತ್ತೆ ಎಂದೆನಲ್ಲ, ನನ್ನ ಗಂಡನ ಶಿಷ್ಯೆ….” – ಮತ್ತೆ ಆ ಸಾಲು ಕಳೆದೇಹೋದಂತೆ ತನ್ನ ಬಾಕ್ಸ್ನಲ್ಲಿ ಇನ್ನೇನನ್ನೋ ಹುಡುಕುವಂತೆ ಅದು ಸಿಕ್ಕಿದಂತೆ ಉಸಿರುಬಿಟ್ಟು “ಅಬ್ಬ ತಂದಿಲ್ಲ ಅಂತ ಜೀವ ಹೋಯಿತು ಒಮ್ಮೆ. ಏನು ಮರವೆಯವಳು ನಾನು ಗೊತ್ತ” ಎನ್ನುತ್ತ ಏನನ್ನೋ ಎತ್ತಿಕೊಂಡಳು.

“ನಾನೊಂದು ಸುತ್ತು ಕಾಲಾಡಿಕೊಂಡು ಬರುತ್ತೇನೆ. ನೀನು ರೆಡಿಯಾಗುತ್ತಾ ಇರು. ಮುಗಿಯುವುದರೊಳಗೆ ಬಂದು ಬಿಡುತ್ತೇನೆ.” ಸಮಿತಾ ಹೊರಟುಹೋದಳು. ಸೂರ್ಯರಶ್ಮಿ ಬೆಚ್ಚನೆ ಹಾಸಿತ್ತು. ನಡೆದರೆ ಎಲ್ಲಿ ನಲುಗುವುದೋ ಎಂದು ಜಾಗರೂಕತೆಯಿಂದ ಹೆಜ್ಜೆ ಹಾಕುವಂತೆ. ತಣ್ಣಗಿನ ಬೆಳಗಿನಲ್ಲಿ ಒಬ್ಬರೇ ನಡೆಯುವುದೆಂದರೆ ಅಂತರಂಗಕ್ಕೆ ಮೌನವಾಗಿ ಸುತ್ತು ಬಂದಂತೆ. ಪ್ರಿಯತಮವಾದ ಏನನ್ನೋ ನೆನೆಯುತ್ತ ಭಾವಾರ್ದ್ರಗೊಳ್ಳುವ ಸುಖದಂತೆ. ಉಕ್ಕುಕ್ಕಿ ಬರುವ ಕಣ್ಣೀರಿನ ಸುಖವದು. ಏನು, ಯಾರನ್ನು, ಯಾಕೆ ಏನೊಂಚೂರೂ ಸುಳಿವು ಸಿಗದೆ ಒಂದೇ ಸವನೆ, ಕೇಳಿಯೂ ಇಲ್ಲದ ಹೆಸರೊಂದನ್ನು ತೀಕ್ಷ್ಣ ಮಧುರವಾಗಿ ಕರೆಯುತ್ತ ಹೊರಟಂತೆ….

ಯಾರೋ ‘ಮೇಡಂ’ ಅಂತ ಕರೆದಂತಾಯಿತು. ಹಿಂತಿರುಗಿ ನೋಡಿದರೆ ಹೋಟೆಲು ಹುಡುಗ. ಓಡಿ ಬರುತ್ತಿದ್ದ. “ಅಲ್ಲಿ ಮೇಡಂ ನಿಮ್ಮನ್ನು ಕರೆಯುತ್ತಿದ್ದಾರೆ.”

ಸಮಿತಾ ಧಾವಂತದಿಂದ ರೂಮಿಗೆ ಓಡಿ ಬಂದು ನೋಡಿದರೆ ಆಭಾ ಕಣ್ಣುಮುಚ್ಚಿ ಮಲಗಿದ್ದಳು. ಆಗಷ್ಟೇ ಅಲಂಕರಿಸಿಕೊಂಡೆದ್ದೆಲ್ಲ ಅತ್ತಿತ್ತಾಗಿ ಮುಖ ತುಂಬ ಚಿತ್ತಾಗಿ ಹರಡಿತ್ತು. ನೀಡಿಕೊಂಡ ಕೈಬೆರಳ ತುದಿಯಿಂದ ಕೂಡ ವೇದನೆ ಹೊಮ್ಮುವಂತೆ ಕಾಣುತ್ತಿತ್ತು. ಬಂದು ಹತ್ತಿರ ಕುಳಿತ ಸಮಿತಾಳ ಮಡಿಲಲ್ಲಿ ಮುಖ ಮರೆಸಿ “ನಾ ಬರುವುದಿಲ್ಲ. ಯಾಕೊ ಧೈರ್ಯವೇ ಸಾಲುವುದಿಲ್ಲ. ಕನ್ನಡಿ ಮುಂದೆ ನಿಂತರೆ ಕಳೆದುಹೋದಂತನಿಸುತ್ತದೆ.”

“ಸಣ್ಣ ಮಕ್ಕಳಂತಾಡಬೇಡ ಆಭಾ. ಏನಾಯಿತೀಗ?…. ಹೊರಡು ಹೊತ್ತಾಯಿತು.”

“ಇಲ್ಲ. ನಿನಗದು ತಿಳಿಯುವುದಿಲ್ಲ. ನೀನು ಹೋಗು, ಯಾರಿಗೂ ಹೇಳಬೇಡ. ಕೇಳಿದವರಿಗೆ ಅವಳಿಗೆ ತಲೆನೋವು ಎಂದುಬಿಡು.” ವಿಹ್ವಲತೆಯಿಂದ ಸಣ್ಣಗೆ ಕಂಪಿಸುತ್ತಿದ್ದಳು ಆಭಾ. “ಬಾಗಿಲು ಲಾಕ್ ಮಾಡಿಕೊಂಡು ಹೋಗು”….
* * * *

ಸಂಜೆ ಸಮಿತಾ ಮರಳಿ ಬಂದಾಗಲೂ ಆಕೆ ಇನ್ನೂ ಮಲಗಿದಲ್ಲೇ ಇದ್ದಳು. ದಿಂಬಿನ ಪಕ್ಕದಲ್ಲೇ ಆಶ್ಶಟ್ರೇ….. ಕೋಣೆಯಿಡೀ ತುಂಬಿದ ಸಿಗರೇಟು ಘಾಟು. ಹೊಟ್ಟೆ ತೊಳೆಸುವಂತಾಯಿತು. ಸಮಿತಾ ಬಂದದ್ದು ತಿಳಿಯಿತೆಂಬಂತೆ ಕಣ್ಣುಮುಚ್ಚಿಕೊಂಡೇ ಕೇಳಿದಳು “ಏನು, ಹೇಗಾಯಿತು ಎಲ್ಲ?”

“ಆಗುವಂತೆಯೇ. ಅಂಥಾ ವಿಶೇಷವೇನೂ ಇಲ್ಲ.”

“ಕೇಳಿದರೆ ಯಾರಾದರೂ ನನ್ನನ್ನು?”

“ಓ! ಕೇಳದೆ? ಯಾರಾದರೂ ಏನು? ಎಲ್ಲರೂ. ವಾಸುದೇವ್, ರಮೇಶ್, ರಮಾಕಾಂತ್, ಕ್ಷಮಾ, ಕೃಷ್ಣಾ, ಮುತ್ತಪ್ಪ…. ಎಲ್ಲರೂ. ತಲೆನೋವು ಮಲಗಿಬಿಟ್ಟಿದ್ದಾಳೆ ಎಂದೆ. ಮತ್ತೆ, ಒಬ್ಬರಂತೂ , ಯಾರೋ ನಿರ್ಗುಣ ರಾವ್ ಅಂತೆ. ವ್ಹಾ ಏನು ಒಂದು ಹೆಸರೆಂದರೆ! ಬೇರೆ ಯಾವುದೂ ಸಿಗಲಿಲ್ಲ ಬಹುಶಃ! ತಲೆನೋವೇ ಅಂತ ಸೀದಾ ಇಲ್ಲಿಗೇ ಹೊರಟರು ‘ತಲೆನೋವಿನ ಬೇಗಂ’ನನ್ನು ನೋಡಿಕೊಂಡೇ ಬರುತ್ತೇನೆ ಅಂತ ನಗುತ್ತ. ದಯವಿಟ್ಟು ಹೋಗಬೇಡಿ ಆಕೆ ಭಯಂಕರ ಸುಸ್ತಾಗಿದ್ದಾಳೆ ಎಂದೆ. ಪುಣ್ಯ. ಹೆಜ್ಜೆ ಮುಂದಿಟ್ಟವರು ಹಿಂದೆ ಬಂದರು!”

“ಹೂಂ?!”
“ಅದಿರಲಿ ಆಭಾ. ನಿಜಕ್ಕೂ ಏನಾಯಿತು ಹೇಳು.”
“ಏನೋ ನನಗೆ ಗೊತ್ತಿದ್ದರೆ…..”
“ಭಾರೀ ಗಮನವಿಟ್ಟು ಅಲಂಕರಿಸಿಕೊಂಡರೆ ಆಗುವುದು ಹಾಗೇ ಮತ್ತೆ.”
ಜೋರಾಗಿ ನಕ್ಕಳು ಆಭಾ. “ನಿನಗೆ ನನ್ನನ್ನು ಕಂಡರೆ ಹೊಟ್ಟೆಕಿಚ್ಚು.”
“ಹೊಟ್ಟೆಕಿಚ್ಚು! ನಾ ಹೇಳಿದ್ದು, ನಿನಗೆ. ಸ್ವಂತದ ದೃಷ್ಟಿಯೇ ತಾಕುತ್ತದೆ ಅಂತ”
“ನಿಜವಾದ ಕಷ್ಟ ಗೊತ್ತಾ? ಸುಮ್ಮನೆ ಹಿಂದೆ ಬೀಳುತ್ತವೆ ಅವು. ಅರ್ಥವೇ ಇಲ್ಲ, ಏನಂತಿ?”
“ಏನಾದರೂ ಹೊಟ್ಟೆಗೆ ತೆಗೆದುಕೊಂಡೆದ್ದೀಯ?”
“ಹೂಂ.”
“ಏನು?”
“ಸಿಗರೇಟು.”
ಮನಸ್ಸು ಎಷ್ಟೋ ಸಲ ಸುಳಿವೇ ಕೊಡದೆ ಮುಖದ ಮೇಲೆ ಭಾವಗಳನ್ನು ಕಳಿಸುತ್ತದೆ. ಸಮಿತಾಳ ಮುಖ ನೋಡಿ ದೊಡ್ಡದಾಗಿ ನಕ್ಕಳು ಆಭಾ. “ಹೋಗುವುದರೊಳಗೆ ನಿನಗೆ ಸಿಗರೇಟು ಅಭ್ಯಾಸ ಮಾಡಿಸದಿದರೆ ನಾನು ಆಭಾ ಅಲ್ಲ.”
“ಓಹೋ?”
“ಒಮ್ಮೆ ರುಚಿ ಹತ್ತಲಿ ಆಮೇಲೆ ನೀನೇ ಬಿಡುವುದಿಲ್ಲ.”
“ನಾನೊಂದು ಚಹಾಕ್ಕೆ ಹೇಳುತ್ತೇನೆ.”
“ಚಹಾ ಬೇಡ. ಇಬ್ಬರೂ ಹೊರಗೆ ಹೋಗೋಣ. ಸ್ವಲ್ಪ ಬೀರ್ ಬಿದ್ದರೆ ಎಲ್ಲ ಸರಿಯಾಗುತ್ತದೆ.”
“ಬೀರ್!”
“ಕಾಲ ಎಲ್ಲುಂಟು ನೀನೆಲ್ಲಿದ್ದಿ?! ಬೀರ್‍ಗೇ ಇಷ್ಟು ಹೆದರಿದರೆ! ಇದೆಲ್ಲ ಒಂದು ಬಗೆಯ ಬಿಡುಗಡೆ ಹುಡುಗೀ.”

“ಸರಿಯೆ. ಬೀರ್‍ವರೆಗೆ ಯಾಕೆ ಹೋಗಬೇಕು? ನೈಟಿ ಬಂದಾಗ, ನೈಟಿ ಹಾಕುವುದೂ ಬಿಡುಗಡೆಯೇ ಆಗಿತ್ತು. ಬಿಗಿ ಉಡುಪು ಕಳಚಿ, ಗೊತ್ತಲ್ಲ? ಫೈನ್, ನೈಸ್, ಬ್ಯೂಟಿಫುಲ್, ವಂಡರ್‍ಫುಲ್, ಫೆಂಟಾಸ್ಟಿಕ್ ಅಂತೆಲ್ಲ ಗಟ್ಟಿಯಾಗಿ ಉದ್ಗರಿಸುವುದೂ ಬಹುಶಃ ನಿನ್ನ ಮಟ್ಟಿಗೆ ಬಿಡುಗಡೆಯೇ. ಹ್ಞಂ? ಆದರೆ ಬಿಡುಗಡೆ ಆ ಮೂಲಕವೇ ಬೇಕು ಅಂತ ಸಹಜವಾಗಿ ಅನಿಸಬೇಕಲ್ಲ? ನಾವು ಇಷ್ಟು ಬೇಗ ಉದ್ಗಾರಗಳನ್ನು ಒಗೆಯುವವರೂ ಅಲ್ಲ, ಸ್ವಲ್ಪ ಬೇರೆ. ಕ್ಷಮಿಸಬೇಕು.” ಇದ್ದಕ್ಕಿದ್ದಂತೆ ಆವೇಶದಿಂದ ಅವಳು ಬಹುವಚನಕ್ಕೆ ಹಾರಿದ ವೈಖರಿಗೆ ಕಣ್ಣು ತುಂಬ ನಕ್ಕಳು ಆಭಾ.

“ಫೆಂಟಾಸ್ಟಿಕ್ ಸ್ಪೀಚ್…. ಹಮ್ಮು ನಿನಗೆ.”

“ಹಮ್ಮು ಅಂತ ಕಂಡರೆ ಹಮ್ಮು, ಇರಲಿ. ಹಮ್ಮಿಗೆ ಅಲ್ಲಿ ಏನುಂಟಂತ ಬೇಕಲ್ಲ.” ಬಾಗಿಲ ಬೆಲ್. ಅದು ತನಗೇ ಖಂಡಿತ ಎಂಬಂತೆ, ತನಗೆ ಮೊದಲೇ ತಿಳಿದಿರುವಂತೆ ಆಭಾ ಓಡಿ ಹೋಗಿ ಬಾಗಿಲು ತೆರೆದು ಬಂದವರೊಡನೆ ಮಾತಾಡಿ ಒಳಬಂದು “ಈಗ ಬಂದೆ. ನನ್ನ ಫ್ರೆಂಡ್ ಬಂದಿದ್ದಾನೆ. ಒಂದೇ ನಿಮಿಷ.” ಎಂದವಳು ಕನ್ನಡಿ ಮುಂದೆ ಕ್ಷಣವೂ ನಿಲ್ಲದೆ ಬೆಳಿಗ್ಗೆಯಿಂದ ಸಂಜೆಯವರೆಗೂ ಹೊರಳಾಡಿದ ಆ ಅಸ್ತವ್ಯಸ್ತ ಸ್ಥಿತಿಯಲ್ಲಿಯೇ ಅದರ ಖೆರೇ ಇಲ್ಲದಂತೆ, ಮೇಲೊಂದು ಶಾಲನ್ನು ಅವಸರದಿಂದ ಹೊದೆದುಕೊಂಡು ಸರಸರನೆ ಹೊರ ನಡೆದುಬಿಟ್ಟಳು! ಬೆಳಿಗ್ಗೆ ಇದೇ ಆಭಾಳೇ ಗಂಟೆಗಟ್ಟಲೆ ಕನ್ನಡಿ ಮುಂದೆ ನಿಂತದ್ದು!? ಬಾಗಿಲೆಳೆದುಕೊಂಡು ಹೋದ ಸದ್ದು ಎಂದರೆ – ‘ಎಲ್ಲಿಗೆಂತ ಕೇಳಬೇಡ.” ಎಂದಂತೆ!

ಸೆಮಿನಾರ್‍ನಲ್ಲಿ ಬೆಳಿಗ್ಗೆಯಿಂದ ಕೇಳಿದ ಮಾತುಗಳನ್ನು ಮೆಲುಕುತ್ತ ಟಿಪ್ಪಣಿ ಮಾಡಿಕೊಳ್ಳುತ್ತ ಕುಳಿತಳು ಸಮಿತಾ. ಸುಮಾರು ಒಂದು ಒಂದೂವರೆ ಗಂಟೆಯೇ ಕಳೆದಿರಬಹುದು. ಬಾಗಿಲು ತೆರೆದ ಸದ್ದಿನೊಂದಿಗೆ ಕಮಟು ವಾಸನೆ ರೂಮಿನೊಳಗೆ ಹಾಸಿ ಬಂದಂತಾಗಿ ತಲೆಯೆತ್ತಿ ನೋಡಿದರೆ ಆಭಾ. ಸಮಿತಾ ಕೇಳಬಹುದಾದ ಪ್ರಶ್ನೆಗಳನ್ನು ಮರೆಸುವಂತೆ ಗೆಲುವಿನ ರುಮುರುಮು ದನಿಯಲ್ಲಿ “ಓ! ಏನು ಭಾರೀ ಟಿಪ್ಪಣಿಯ! ನಾನು ನಿನ್ನ ಹಾಗೆಯೇ – ಅದಕ್ಕೇ ಎಷ್ಟು ಪಾಪ್ಯುಲರ್ ಗೊತ್ತಾ ನಾನು?” ತನ್ನ ಜನಪ್ರಿಯತೆಯ ಉದಾಹರಣೆಗಳನ್ನು ಒಗೆಯುತ್ತ ಕುರ್ಚಿಗೊರಗಿದಳು. ಉದಾಹರಣೆಗಳೆಲ್ಲ ಸಾಗುತ್ತಿರುವಾಗ ಕೇಳಿದಳು ಸಮಿತಾ. “ನೇರ ಹೇಳಿಬಿಡು. ಯಾರು ಬಂದದ್ದು?”

ಸಿಕ್ಕಿಬಿದ್ದು ಖುಶಿಯಾದಂತೆ ಕಾಲ್ಬೆರಳಲ್ಲಿ ಖುಶಿ ಬಾರಿಸುತ್ತ “ನೀನು ನಾನೆಣಿಸಿದ ಹಾಗಿಲ್ಲ….ಜೋರಿದ್ದಿ. ಯಾರೆಂದರೆ…. ಅದೇ…. ನಿನ್ನ ನಿರ್ಗುಣ ರಾವ್!” –
(“ಸ್ಸಿ. ‘ನಿನ್ನ’ ಎನ್ನಬೇಡ.”)
*
*
*
ರಾತ್ರಿ ಊಟ ಮುಗಿಸಿ ಒಂದು ರೌಂಡು ವಾಕಿಂಗ್ ಹೋಗಿ ರೂಮಿಗೆ ಬಂದವಳೇ, ಇದೇ ಸ್ವಲ್ಪ ಹೊತ್ತಿಗೆ ಮುಂಚೆ ಗೆಲುವಿದ್ದದ್ದೇ ಸುಳ್ಳೆಂಬಂತೆ ದಣಿವಾದಳು ಆಭಾ. ತಲೆ ನಿಜವಾಗಿಯೂ ಈಗ ಸಿಡಿಯುತ್ತಿದೆ, ಒಡೆದೇ ಹೋಗುತ್ತದೆ ಎನ್ನುತ್ತಾ ಹಾಸಿಗೆಯಲ್ಲಿ ಉರುಳಿಕೊಂಡಳು.

“ತಲೆನೋವು ಬರಬೇಕಾದ್ದು ನಂಗೆ. ನಿಂಗೆ ಹೇಗೆ ಬಂತದು?”

“ನಿಂಗೇನು ತಮಾಷೆ” ಆಭಾ ಎದ್ದು ಕನ್ನಡಿ ನೋಡಿದಳು. ತನ್ನ ತಲೆ ತಾನೇ ಸವರಿಕೊಳ್ಳುತ್ತ ಮತ್ತೆ ಮಲಗಿದಳು. ಹಣೆಯೊತ್ತಿಕೊಂಡು ನರಳತೊಡಗಿದಾಗ “ಮಾತ್ರೆ ಬೇಕಾ? ಇದೆ ನನ್ನ ಬಳಿ.” ಎಂದಳು ಸಮಿತಾ.

“ಹೂಂ…. ಎರಡು ಕೊಡು…..”

“ಎರಡ! ಬೇಡ. ಒಂದೂ ಕೊಡುವುದಿಲ್ಲ, ಹೋಗು. ಕಣ್ಣು ಮುಚ್ಚಿ ಮಲಕೊ ಎಲ್ಲ ಸರಿಯಾಗುತ್ತದೆ.” ‘ಸರಿಯಾಗುತ್ತದೆ’ ಎಂಬ ಶಬ್ದ ಕೇಳಿದ್ದೇ ಏನಾಗುವುದೋ ಆಭಾಗೆ. ಸಮಿತಾಳ ಕೈ ಹಿಡಿದು “ಸರಿಯಾಗುತ್ತದೆ ಅಲ್ಲವೆ ಖಂಡಿತ?”

“(ಅರೆ!) ಹೂಂ. ನಾನು ಯಾರಂತ ಮಾಡಿದೆ? ದೇವರೇ. ಸರಿಯಾಗುತ್ತದೆ ಎಂದ ಮೇಳೆ ಸರಿಯಾಗುತ್ತದೆ. ಹೆದರಬೇಡ.”

“ನಗಬೇಡವೆ….. ಸತ್ಯಕ್ಕೂ ಹೇಳು. ನನ್ನ ವಯಸ್ಸು ಕಾಣುತ್ತದ, ಇಲ್ಲ ಅಲ್ಲವೆ?” ಮರುಳು ಆಭಾ. ವಯಸ್ಸು ಎಷ್ಟಾಗಿರಬಹುದು?
*
*
*
ಪಿಸುಮಾತು ಕೇಳಿದಂತಾಗಿ ಸಮಿತಾಗೆ ಎಚ್ಚರವಾಯಿತು. ನೋಡಿದರೆ ಆಭಾ ಫೋನಿನಲ್ಲಿ ಮಾತಿನ ಸಂಭ್ರಮದಲ್ಲಿ ತೇಲಿ ಹೋಗಿದ್ದಾಳೆ. ಆ ಅಪರಾತ್ರಿಯಲ್ಲಿ ಸಿಂಗರಿಸಿಕೊಂಡು. ಫ್ರೆಶ್ ಆಗಿ. ಫೋನಿನ ಆಚೆಗೆ ತಾನು ಕಾಣಿಸುತ್ತಿದ್ದೇನೆ ಎಂಬಷ್ಟು ದೃಢ ನಂಬಿಕೆಯಲ್ಲಿ ಹಾವಭಾವ ತುಂಬಿದ ಮಾತಿನಲ್ಲಿ ತಲ್ಲೀನಳಾಗಿದ್ದಾಳೆ. ಸಮಿತಾ ತೆರೆದ ಕಣ್ಣಲ್ಲಿ ತನ್ನನ್ನೇ ನೋಡುತ್ತಿರುವುದನ್ನು ಗಮನಿಸಿ ರೆಪ್ಪೆ ಮಿಟುಕಿದಳು. ಪಕ್ಕದಲ್ಲೇ ಸಿಗರೇಟು ಪ್ಯಾಕು, ಲೈಟರ್. ಸಿಗರೇಟು ಉರಿಸುತ್ತಾ ಕುಳಿತ ಭಂಗಿಯೋ. ಮುಗಿಯುತ್ತಲೇ ಸೀದಾ ಬಂದು ವಿಲಾಸೀ ಮೂಡಿನಲ್ಲಿ ಸಮಿತಾ ಮುಖದ ನೇರಕ್ಕೇ ಹೊಗೆಬಿಟ್ಟಳು. “ಶ್ ಸೇದುವವಳು ಆಚೆಗೆ ಹೋಗು. ಕಿರಿಕಿರಿ ಮಾಡಬೇಡ” – ನಗುತ್ತಾ ಎದ್ದು ತುದಿಯಲ್ಲಿ ಕುಳಿತಳು ಆಭಾ. ಆಶ್ಚರ್ಯ. ನಿನ್ನೆ ಇವಳೇ ಏನು ತನ್ನಲ್ಲಿ ಭೀತಿ ಹುಟ್ಟಿಸಿದವಳು! ಒಂದೇ ದಿನದಲ್ಲಿ ಆ ವಿಚಿತ್ರ ಭೀತಿ ಓಡಿತು ಹೇಗೆ? ನಿದ್ದೆ ಎನ್ನುವುದು ನಾವೇ ಒಂದಷ್ಟು ಹೊತ್ತು ತಿಳಿಯದಂತೆ ಒಳಹೊಕ್ಕು ಮೌನ ಚಿಂತಿಸುವ ಸಮಯವೇ? ನಮಗೂ ಸುಳಿವು ಕೊಡದಂತೆ ತೀರ್ಮಾನಗಳನ್ನು ಮಾಡುತ್ತ ಮಿದುಳಿನಲ್ಲಿ ಬಿಂಬಿಸಿಡುವ ಹೊತ್ತೇ ಅದು! ಎಂತಲೇ ನಿದ್ದೆಯಿಂದ ನಿದ್ದೆಗೆ ನಾವು ಬೆಳೆಯುತ್ತೇವೆ ಎಂಬ ಮಾತು? ಬೆಳೆಯುವುದೋ ಬದಲಾಗುವುದೋ?
*
*
*
“ಇವತ್ತು ಸುರುವಿಗೇ ಕವಿಗೋಷ್ಠಿ. ನೆನಪಿದೆಯಲ್ಲ. ಬೇಗ ಹೊರಡು. ನಿನ್ನೆಯ ಹಾಗೆ ಮಾಡಬೇಡ.”
“ಬೇಜಾರು ಕಣೆ. ನನ್ನ ಕವಿತೆಯನ್ನ ನೀನೇ ಓದಿಬಿಡು.”
“ನನಗೇನು ಗ್ರಹಚಾರವಲ್ಲ.”
“ಎಂಥ ಫಸ್ಟ್ ಕ್ಲಾಸ್ ವಿಮರ್ಶೆ! ಥ್ಯಾಂಕ್ ಯೂ.”
ಸಮಿತಾ ಹೊರಡತೊಡಗಿದಳು “ಪುಣ್ಯಾತಗಿತ್ತಿ ಸ್ವಲ್ಪ ಅತ್ತ ತಿರುಗು.”
“ಏನಿದೆ ಅಂಥದ್ದು?….. ಇಲ್ಲಿ ಕೇಳು. ಸ್ನೇಹ ಎಂದರೆ ಹೇಗಿರಬೇಕು ಗೊತ್ತಾ? ನಡುವೆ ನಾಚಿಕೆ ಒಂದು ಚೂರೂ ಕೂಡ ಇರಬಾರದು.
“ಅಂತಹ ಸ್ನೇಹವೆಲ್ಲಿ ಬಂತೀಗ ಎರಡು ದಿನದೊಳಗೆ?”
“ಇಷ್ಟು ಬೇಕಷ್ಟಾಯಿತು. ಸ್ನೇಹವಿಲ್ಲದೆ ಒಂದು ಕ್ಷಣ ಕೂಡ ಹೀಗೆ ಜೊತೆಗಿರಲು ಸಾಧ್ಯವಿಲ್ಲ ತಿಳಕೊ.”
“ನಿನಗೆ ‘ಜೊತೆಗಿರುವ’ ಎಂಬ ಶಬ್ದದ ಅರ್ಥವೇ ಗೊತ್ತಿಲ್ಲ ಬಹುಶಃ, ಅದು ಏನು ಗೊತ್ತಾ? (ವಾಕ್ಯ ಅಲ್ಲಿಗೇ ಕಡಿದು)….. ನಾನು ಸಣ್ಣದಿರುವಾಗ ಮದುವೆ ಮನಗೆ ಹೋದಾಗೆಲ್ಲ ಯಾಕೆ ಗಂಡಸನ್ನೇ ಮದುವೆಯಾಗಬೇಕು ಅನ್ನಿಸುತ್ತಿತ್ತು. ಅಜ್ಜನೊಡನೆ ಹೇಳುತ್ತಿದ್ದೆ ಕೂಡ. ನಾನು ಮದುವೆಯಾಗುವುದು ಹುಡುಗಿಯನ್ನೇ ಅಂತ!”
ಅದಕ್ಕೂ ಇದಕ್ಕೂ ಏನು ಸಂಬಂಧ ಈಗ?….. ಹ್ಞೂಂ?…. ಏನೇ ಇರಲಿ – “ನನ್ನನ್ನೆಂದೂ ಮದುವೆಯಾಗಬೇಡ. ನಾನೊಲ್ಲೆ.”

ಗಹಗಹಿಸಿ ನಕ್ಕಳು ಆಭಾ. ಲಘುವಾಗಿ ನೇರ ಮಾತಾಡುತ್ತ ಆಡುತ್ತ ಎಷ್ಟು ಬೇಗ ಒಳಮುಖವಾಗುತ್ತಾಳೆ ಹೊರಬರುತ್ತಾಳೆ ಈ ಆಭಾ. ಅವಳ ನಗೆಯೊ, ತುಟಿಯ ಮೇಲಿನ ತೆಳ್ಳನೆಯ ಮೀಸೆಯೋ! ಅವಳನ್ನೇ ನೋಡುತ್ತ ನಿಂತಂತೆ ಗಂಡಸರು ಹೆಂಗಸರ ಹಾಗೆ ಹೆಂಗಸರು ಗಂಡಸರ ಹಾಗೆ ಕಾಣಿಸಿದರೆ ಏನು ತಮಾಷೆ ಅನಿಸಿ ತನಗೇ ಅನಿರೀಕ್ಷಿತವಾಗಿ ನುಡಿದಳು ಸಮಿತಾ – “ಇದ್ದಾನಲ್ಲ ಆ ನಿರ್ಗುಣ ರಾವ್. ಥು. ಥೇಟ್ ಹುಡುಗಿ. ನಡೆಯುವುದೂ ಸ್ವರವೂ….”

“ಅಲ್ಲೇಬಿದ್ದೆ ನೀನು. ‘ಥು” ಯಾಕೆ? ಹುಡುಗಿಯರಂತೆ ಇದ್ದರೆ ಏನೀಗ? ಹುಡುಗಿಯರೆಂದರೆ ಕಡಿಮೆ ಅಂತ ನೀನೇ ಹೇಳಿದ ಹಾಗಾಯಿತಲ್ಲ.”

“ಅರೆ ನಾನೆಲ್ಲಿ ಹಾಗೆ ಹೇಳಿದೆ? ಗಂಡಸಿನಂತೆ ಇರುವ ಹೆಂಗಸಿಗೆ ಗಂಡುಬೀರಿ, ಸ್ತ್ರೀ ವೇಷ ಅಂತೆಲ್ಲ ಹೇಳುವುದಿಲ್ಲವ? ಏನಂದರೂ ಗಂಡು ಗಂಡಿನಂತೆಯೇ ಹೆಣ್ಣು ಹೆಣ್ಣಿನಂತೆಯೇ ಇರಬೇಕಪ್ಪ. ಅಂದರೆ ಅವರ ಆಕೃತಿಯಲ್ಲಿ. ಮೇಲುಕೀಳು ಎಂಬ ಅರ್ಥದಲ್ಲಿ ಹೇಳುವುದಲ್ಲ ನಾನು…..”

“ಅರ್ಥ! ನನ್ನನ್ನು ಕೇಳು. ಅರ್ಥ ಎಂಬುದೇ ಇಲ್ಲ. ಈ ಸಾಲು ಇವತ್ತಿನ ‘ಚಿಂತನ’, ಬರಕೊ.”
“ಈಗಷ್ಟೇ ಅರ್ಥಗಿರ್ಥ ಅಂತೆಲ್ಲ ಮಾತು ಹೊಡೆದೆ ಮತ್ತೆ?”
ನಗುತ್ತ ಕನ್ನಡಿ ಮುಂದೆ ನಿಂತು

ಎಷ್ಟೆಲ್ಲ ಬಣ್ಣಗಳು ಬಣ್ಣಗಳಿಗೆ
ಬಣ್ಣದ ಬಣ್ಣದ ಗಳಿಗೆಗಳಿಗೆ

-ಕೆನ್ನೆಗೆ ರಂಗು ಹಚ್ಚಿಕೊಳ್ಳುತ್ತ ಹಾಡತೊಡಗಿದಳು ಆಭಾ. ಕನ್ನಡಿಯಲ್ಲಿಯೇ ಸಮಿತಾಳ ಕಡೆ ನೋಡಿ “ಹೇಗಿದೆ ಪದ್ಯ?” ಸಮಿತಾ ಬಾಯಿ ತೆರೆಯುವ ಮೊದಲೇ ಅವಳೇ ಮುಂದುವರೆಸಿದಳು “ಫೆಂಟಾಸ್ಟಿಕ್!…. ಇಲ್ಲವಾದರೆ ಆ ಹುಡುಗಿಗೆ ಏನುಂಟು?…… ರಿಸರ್ಚ್….. ನಿಜಕ್ಕೂ ಏನು ಗೊತ್ತಾ? ಬದುಕು ಎಂದರೆ ಹುಡುಕುವುದು…. ಮತ್ತೆ ಮತ್ತೆ ಹುಡುಕುವುದು…… ಬಣ್ಣಹುಡುಕುವುದು….”

“ಒಂದು ತಿದ್ದುಪಡಿ. ನಮಗೆ ಬೇಕಾದ ಬಣ್ಣ.”
“ಸಿಕ್ಕಿದರೆ, ಬಿಟ್ಟು…..”
“ಹೆದರಿಸಬೇಡ ಆಭಾ. ಸುಮ್ಮನೆ ಹೊರಡು.”
“ಹೆದರಿಕೆಯೆ? ಯಾಕೆ? ಈ ಮದುವೆ ಎನ್ನುವುದು ಗೊತ್ತ. ನಲ್ವತ್ತು ವರ್ಷದ ನಂತರ ರದ್ದಾಗಿ ಸಂಬಂಧಗಳೆಲ್ಲ ರೀಶಫಲ್ ಆಗಬೇಕು…..”
“ಮಂಡೆ. ಇವತ್ತೂ ನಿನ್ನೆಯ ಹಾಗೆ ಮಾಡಬೇಡ ಮತ್ತೆ. ಹೊರಡು….. ಹೊರಡು….”
*
*
*
ಕವಿಗೋಷ್ಠಿಯಲ್ಲಿ ತನ್ನ ಕವಿತರೆಯನ್ನು ಓದಿದಳು ಆಭಾ.
ಎಷ್ಟೆಲ್ಲ ಬಣ್ಣಗಳು ಬಣ್ಣಗಳಿಗೆ
ಬಣ್ಣ ಬಣ್ಣದ ಗಳಿಗೆಗಳಿಗೆ
ಎಷ್ಟು ಸುಂದರ ರಾತ್ರಿಗಳು ಕನಸುಗಳಿಗೆ….

ಮುಂದರಿಸಿದಳು. ಹುಟ್ಟಾ ಪ್ರಸನ್ನಮುಖಿಯಂತೆ ಮುಖದಲ್ಲಿ ಉದ್ದ ನಗೆ ಸಿದ್ಧವಾಗಿಟ್ಟು, ಅದನ್ನು ಕೊಂಚವೂ ಅಳಿಸಿಕೊಳ್ಳದೆ ಎಲ್ಲರ ನಡುವೆ ಲಕಲಕ ಓಡಾಡಿಕೊಂಡಿದ್ದ ಬಗೆಯೆಂದರೆ! ನೋಡಿದರೇ ಸಾಕು ಎದುರಿನವರಲ್ಲಿ ಮಾತು ಹುಟ್ಟಬೇಕು. ಜಡ ತೊಲಗಿ ಚೇತನವಾಗಬೇಕು. ಅದೆಲ್ಲ ಸರಿ –

“ಅದೆಲ್ಲ ಸರಿ ಆಭಾ. ನಿನ್ನ ಸ್ವರಕ್ಕೆ ಹೆದರಿಯೇ ಅದನ್ನು ಕವಿತೆ ಅಂತ ಒಪ್ಪಿಬಿಡಬೇಕು, ಹಾಗೆ ಓದಿದೆಯಲ್ಲ! ಅದೊಂದು ಒಳ್ಳೆಯ ಕವಿತೆಯಾಗಿದ್ದೂ…..”

“ಹೂಂ?!”

“ನೀನದಕ್ಕೆ ಅವಮಾನ ಮಾಡಿದೆ. ನಿನ್ನ ನೀನೇ ಅವಮಾನಿಸಿದಂತೆ. ಉಳಿದವರು ಅದನ್ನು ಕವನವೆಂದು ಗಣಿಸದೇ ಹೋದರೆ ಎಂದು ನೀನೇ ಅನುಮಾನಿಸಿದಂತೆ. ಸತ್ಯಕ್ಕೂ ಹೇಳಬೇಕೆಂದರೆ ಆ ನಿನ್ನ ‘ನಿರ್ಗುಣಿ” ಭಜನ್ ಹೇಗಿತ್ತು ಗೊತ್ತಾ? ನೀನು ನಿಶ್ಚಲಳಾಗಿ ಓದಿದ್ದರೂ ಅಥವಾ ‘ನಿರ್ಗುಣ’ ದಲ್ಲಿ ಓದಿದ್ದರೂ ಅದರ ಪ್ರಕಾಶ ತಟ್ಟುತ್ತಿತ್ತು.” ಆಭಾ ಅವಳದ್ದೇ ವಿಶಿಷ್ಟ ಮಿಟುಕಿನಲ್ಲಿ ನಕ್ಕಳು.

“ನೀನು ನನಗಿಂತ ಸೂಕ್ಷ್ಮವಿದ್ದೀ….. ಆದುದರಿಂದ ಇಕೊ. ಕೇಳು. ನನಗೊಬ್ಬ ಗೆಳತಿಯಿದ್ದಳು. ಊಟ ತಿಂಡಿ ನಿದ್ದೆ ಆಟ ಎಲ್ಲದಕ್ಕೂ ನಾನು ಅವಳು ಜೊತೆ. ಏನೆಲ್ಲಾ ಆಡುತ್ತಿದ್ದೆವು ನಾವು. ಮನೆಯಾಟವಾಡಿದ್ದಂತೂ ಸ್ವಲ್ಪ ಸಲವಲ್ಲ. ಪ್ರತಿಸಾರಿಯೂ ಅವಳು ಹೆಂಡತಿ, ನಾನು ಗಂಡ. ಬಿಡು. ಆ ಸಂಸಾರವೇ ಚೆನ್ನಾಗಿತ್ತು. ಈ ನಿರ್ಗುಣ ರಾವ್ ಗೊತ್ತಲ್ಲ ನಿನಗೆ, ಒಂದು ರೀತಿಯಲ್ಲಿ ಅವಳನ್ನೇ ಹೋಲುತ್ತಾನೆ! ಅವನನ್ನು ಕಂಡಾಗೆಲ್ಲ ಅವಳ ನೆನಪಾಗುತ್ತದೆ. ಏನು ವಿಚಿತ್ರ ನೋಡು. ಅರ್ಥವಾಗುತ್ತ ನಿನಗೆ?”

“ಹ್ಞಂ?!”
*
*
*
ಅದೇ ಸಂಜೆ ಹೊರಟಳು ಆಭಾ. ಸಮಿತಾಳನ್ನು ಆಲಂಗಿಸಿ “ಆಲ್ ದಿ ಬೆಸ್ಟ್.”
“ನಿನಗೂ ಅದೇ!”

ನಕ್ಕಳು. “ಅಪ್ಪಟ ದಕ್ಷಿಣಾದಿ, ತಿರುಪತಿ, ನೀನು….. ನನಗೂ ಅದೇ ಅಂದರೆ ನಾನು ಬರುವ ಸಲ ಇನ್ನಷ್ಟು ಒಳ್ಳೆಯ ಕವಿಯತ್ರಿ ಆಗಬೇಕು. ಎಂದರೆ ಕ್ಷಣಕ್ಷಣಗಳನ್ನು ಇನ್ನಷ್ಟು ಸುಡಬೇಕು. ಶಬ್ದ ಶಬ್ದಗಳನ್ನು ಸುಡಬೇಕು. ಜೊತೆಗೆ ಪ್ರತಿ ಅಕ್ಷರ ವ್ಯಂಜನ ವಿಸರ್ಗ ಅನುಸ್ವಾರ ಅನುಸ್ವರಗಳನ್ನೂ ಅನಿವಾರ್ಯವಾಗಿ. ಅವು ಕರಟದಂತೆ ಕಾಯುತ್ತ ಸಮಯ ನೋಡಿ ಇಕ್ಕಳದಲ್ಲಿ ಟಪ್ಪೆಂದು ಹೆಕ್ಕಿ ಕವನದಕ್ಷರ ಜೋಡಿಸಿಕೊಳ್ಳಬೇಕು. ಎಷ್ಟೆಲ್ಲ ಶ್ರಮ ನೋಡು. ಇಷ್ಟಾಗುವಾಗ ಸ್ವತಃ ನಾನೇ ದಹಿಸಿ ಹೋಗಬಹುದಲ್ಲವೆ? ಅದೇನು ದೊಡ್ಡದಲ್ಲ ಬಿಡು….. ಅಥವಾ ಈ ಎಲ್ಲದರ ಬದಲು ಸುಮ್ಮನೆ ಕಾರ್ಪೋರೇಶನ್ ಇಲೆಕ್ಷನ್ನಿಗೆ ನಿಂತರೆ ಹೇಗೆ? ಗೆದ್ದರೆ ನಗರ ಗುಡಿಸಿ ಚೊಕ್ಕ ಮಾಡಿದ ಹಾಗಾದರೂ ಆಗುತ್ತದೆ!” ಕ್ಷಣದಲ್ಲಿ ನಗುವ ಕ್ಷಣದಲ್ಲಿ ವಿಷಾಧಿಸುವ ಲಘುವಾಗುವ ಗೂಢವಾಗುವ ಕ್ಷಣಕ್ಷಣದಲ್ಲಿ ಭಾವ ಪಲ್ಲಟಗೊಳ್ಳುವ ಆಭಾ. “ಇಷ್ಟಕ್ಕೂ ಈಗ ಸಿಗರೇಟು ಸುಡುವುದನ್ನೇ ಹೇಳಿಕೊಡಲಿಲ್ಲವಲ್ಲ ನಾನು ನಿನಗೆ. ಹೋ, ಹಾಗಾದರೆ ನಾನಿನ್ನು ಆಭಾ ಅಲ್ಲ!” ಸಿಗರೇಟು ಹೊಗೆ ಸುರುಳಿ ಸುರುಳಿಯೊಳಗೆ ನಗೆ ಹೊರಳುವಂತೆ ನಕ್ಕಳು.

ಕಳಿಸಿಕೊಡಲು ಕೆಳಾಂಗಣಕ್ಕೆ ಹೋದರೆ ಅಲ್ಲಿ ಟ್ಯಾಕ್ಸಿ ನಿಂತಿತ್ತು. ಆಕೆ ಹತ್ತಿರ ಹೋಗುತ್ತಿದ್ದಂತೆ ಅವಳಿಗಾಗಿಯೇ ಕಾಯುತ್ತಿರುವ ಹಾಗೆ ಬಾಗಿಲು ತೆರೆಯಿತು. ಅರೆ! ನಿರ್ಗುಣ ರಾವ್! ತೆರೆದ ಬಾಗಿಲಲ್ಲಿ “ಬಾ. ಇಲ್ಲಿ ಕುಳಿತುಕೊ” ಕರೆಯುತ್ತಿದ್ದ. ಆಕೆ ಒಳಗೆ ಕುಳಿತದ್ದೇ ಅವಳನ್ನೊತ್ತಿಕೊಂಡು ಬಾಗಿಲು ಬೀಸಿದೆ. ಟ್ಯಾಕ್ಸಿ ಹೊರಟಿತು. ಆ ಹೊತ್ತಿನ ಸುತ್ತ ಹೊರಡುವ ಟ್ರೈನ್ ಹತ್ತುವವರೆಲ್ಲ ಒಟ್ಟಿಗೆ ಹೊರಟಿದ್ದಾರೆ. ಸ್ಟೇಷನ್ನಿನಲ್ಲಿ ಬೇರೆಯಾಗುತ್ತಾರೆ…. (ಯೇ?) ಕೈಯಾಡಿಸುತ್ತಿದ್ದಳು ಆಭಾ, ವೇಗವಾಗಿ. ಕಣ್ಮರೆಯಾಗುವವರೆಗೂ. ಅದೇನದು ಸಂಭ್ರಮವೋ ಚಡಪಡಿಕೆಯೋ, ಬಿಟ್ಟೇ ಕೊಡದ ಮಿಶ್ರಣ.

ಸಮಿತಾ ರೂಮಿಗೆ ಮರಳಿದಳು. ಹೊಗೆಯ ಘಾಟು ಇನ್ನೂ ಕರಗಿರಲಿಲಲ. ಪರದೆ ಸರಿಸಿ ಕಿಟಕಿ ಬಾಗಿಲು ಅಗಲಕ್ಕೆ ತೆರೆದಿಟ್ಟಳು. ಫ್ಯಾನ್ ಸ್ವಿಚ್ ಹಾಕಿ ಬೆಳಗಿನ ಪೇಪರನ್ನೇ ಹಿಡಿದು ಕುಳಿತಳು, ಸುಮ್ಮನೆ ನೋಡುತ್ತ. ಅಲ್ಲಿದ್ದರೂ ಅಲ್ಲಿಲ್ಲದ ಮನಸ್ಸು. ಬಂದ ಲಾಗಾಯ್ತಿನಿಂದ ಕಂಡ ಆಭಾಳ ಚಿತ್ರ ಮತ್ತೆ ಮತ್ತೆ ಕಣ್ಣೆದುರು. ಕನ್ನಡಿ ಮುಂದಿನ ತಳಮಳದಂತಿದ್ದಳಲ್ಲವೆ ಆಭಾ? ಹೊಗೆಯಾಚೆ ಹೊಳೆಯುವ ಅವಳ ದೃಷ್ಟಿ ಅರ್ಥವಾದಂತೆ ಅರ್ಥವಾಗದಂತೆ ಅತ್ತಂತೆ ನಕ್ಕಂತೆ ಕೆಡುಕು ಒಳಿತುಗಳ ನಡುವಿನ ವಿಲವಿಲದಂತೆ. ಆ ಹುಡುಗಿಯ ಕಥೆ ಎತ್ತುವ ಅಲ್ಲಿಗೇ ಬಿಡುವ ಆಭಾ. ತಾನೂ ವಿವರ ಕೇಳಿಲಿಲ. ಕಡೆಗೂ ಅವಳು ಹೇಳಲಿಲ್ಲ. ಏನಂದು ಕೊಂಡಿರಬಹುದು ಆಕೆ? ತಾನೇಕೆ ಅವಳ ಉಮೇದು ಕೆಳಿಸಲಿಲ್ಲ? ಯಾವ ಭಯ? ಅದು ಭಯವೆ… ಹೌದೆ?

ಪೇಪರಿಂದ ಕಣ್ಣೆತ್ತಿ ನೋಡಿದರೆ ಅಲ್ಲಿ ಮೇಜಿನ ಮೇಲೆ ಸಿಗರೇಟು ಲೈಟರ್! ಅಯ್ಯ, ಬಿಟ್ಟೇ ಹೋಗಿದ್ದಾಳೆ! ಇನ್ನೇನು ಬಿಟ್ಟು ಹೋಗಿದ್ದಾಳೊ ಪುಣ್ಯಾತಗಿತ್ತಿ ಅಂತ ಸುತ್ತ ನೋಡಿದರೆ ಕನ್ನಡಿ ಮುಂದೆ ಅವಳ ಪ್ರಿಯ ಮೇಕಪ್ ಬಾಕ್ಸ್. ದೇವರೆ, ತನ್ನ ಜೀವವನ್ನೇ ಮರೆತು ಹೋಗಿದ್ದಾಳಲ್ಲ! ಅಥವಾ ಇನ್ನಿದೆಲ್ಲ ಬೇಡ ಅನಿಸಿರಬಹುದೆ? ಕೃಷ್ಣನ ಕೊಳಲಿಗೆ ಹೊರಟ ಗೋಪಿಯಂತೆ.
*
*
*
ಊರಿಗೆ ಬಂದವಳೇ ಅವೆರಡನ್ನೂ ಪ್ಯಾಕ್ ಮಢಿ ರಿಜಿಸ್ಟರ್ ಪಾರ್ಸೆಲ್ ಮಾಡಿದಳು ಸಮಿತಾ. ಅದು ಹೋದ ಹಾಗೆಯೇ ಹಿಂದೆ ಬಂತು ಯೋಚಿಸುತ್ತ ರಾತ್ರಿ ಫೋನ್ ಮಾಡಿದರೆ ಆಚಿಂದ ಪುರುಷ ಧ್ವನಿಯೊಂದು “ಆಕೆ ಸತ್ತು ಹೋಗಿಯಾಯಿತು. ಗೊತ್ತಿಲ್ಲವ ನಿಮಗೆ?” ಫೋನ್ ಕುಕ್ಕಿಟ್ಟ ಸದ್ದು.

“ಫೆಂಟಾಸ್ಟಿಕ್ ಆಭಾ. ಆಲ್ ದಿ ಬೆಸ್ಟ್.”
ತನ್ನ ಉದ್ಗರವೆ ಇದು!?
ಆಭಾಳ ನೆನಪಲ್ಲಿ ಶಹಜಾದೆಯಂತೆ ಕುಳಿತು ನಿಡಿದುಸಿರು ಬಿಟ್ಟಳೂ ಸಮಿತಾ.
ಧುಮ್ಮಿಕ್ಕ ಹೊರಟ ಒಳದುಗುಡವೊಂದು ಸ್ವಂತ ಏಕಾಂತ ಕ್ಷಣದಲ್ಲಿಯೂ ಝಿಲ್ಲನೆ ಅಳುಕಿ ಅಲ್ಲಿಯೇ ಗಂಟಲುಕಟ್ಟಿಕೊಂಡಿತು.
*****

ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.