ಭೀತಿಮೀಮಾಂಸೆ

“ಕನ್ನಡ ನುಡಿ”ಯ ವಿಶೇಷ ಸಂಚಿಕೆಗೆ ಏನು ಬರೆಯೋಣ ಎಂದು ಆಲೋಚಿಸುತ್ತಿದ್ದಾಗ, ಮನಸ್ಸಿಗೆ ಗೆಲುವಾದ ಯಾವ ವಿಷಯವೂ ಬರಲಿಲ್ಲ. ಅನೇಕ ಪ್ರಶ್ನೆಗಳು ಮಾತ್ರ ತಲೆ ಹಾಕಿದವು. ಐಶ್ವರ್ಯವಂತರಿಂದ ಬಡವರಿಗೆ ತೊಂದರೆಯೋ, ಬಡವರಿಂದ ಬಡವರಿಗೆ ತೊಂದರೆಯೋ ಇದನ್ನು ಆಲೋಚಿಸಿ ನಾನು ಬಡವರಿಂದಲೇ ಬಡವರಿಗೆ ತೊಂದರೆ ಎಂಬ ನಿರ್ಧಾರಕ್ಕೆ ಬಂದೆ. ಈ ವಾದಸರಣಿ ಕ್ರಾಂತಿಕಾರಕವಾದುದರಿಂದ ನಾನು ಇಲ್ಲಿ ಈಗ ಬರೆಯುವುದಕ್ಕೆ ಅಂಜುತ್ತೇನೆ. ಅಂಜಿಕೆಗೆ ಮಾತು ಬಂದಿತಲ್ಲಾ. ಜಗತ್ತು ಯಾರಿಂದ ನಡೆಯುತ್ತದೆ ಎಂಬ ಪ್ರಶ್ನೆಗೆ, ಅಂಜಿ ನಡೆಯುವವರಿಂದಲೇ ಎಂಬ ಉತ್ತರ ಸದುತ್ತರವಲ್ಲವೇ? ಇಲ್ಲಿ ಕ್ರಾಂತಿಯ ಮಾತಿಲ್ಲ. ಶಕ್ತಿ ಪೂಜೆಯ ಈ ಉತ್ಸವ ದಿನಗಳಲ್ಲಿ ಇದರ ವಿವೇಚನೆಯನ್ನು ನಾನು ಏಕೆ ಸ್ವಲ್ಪ ಮಾಡಬಾರದು. ತಾಳಿದವ ಬಾಳಿಯಾನು-ಸರಿಯೆ, ಯಾರಿಲ್ಲವೆಂದರು? ಆದರೆ ಅಂಜುವವ ತಾನೆ ತಾಳಿಯಾನು! ಬಾಳಬೇಕೆಂಬ ಆಸೆಯ ತಳಹದಿಯಲ್ಲಿಯೇ ಅಂಜಿಕೆಯ ಆಸ್ತಿ ಭಾರವಿದೆ. ಜೀವನಮೀಮಾಂಸೆಗೆ ಈ ಭಯದ ವೇದಾಂತ ಬಹಳ ಮುಖ್ಯ.

ಭಯವನ್ನು ಯಾಕೆ ದುರ್ಗುಣವೆಂದು ಕರೆದರೋ, ಧೈರ್ಯ ಏಕೆ ಸದ್ಗುಣವಾಯಿತೋ, ನನಗಂತೂ ಇನ್ನೂ ಅರ್ಥವಾಗಿಲ್ಲ. ಭಯದಿಂದ ಧೈರ್ಯ ಹುಟ್ಟಿತೋ, ಧೈರ್ಯದಿಂದ ಭಯ ಹುಟ್ಟಿತೋ ಹೇಳುವವರಿದ್ದಾರೆಯೇ? ತುಪ್ಪಕ್ಕೆ ದೊನ್ನೆ ಆಧಾರವೋ, ದೊನ್ನೆಗೆ ತುಪ್ಪವೋ ಎಂಬ ತರ್ಕದಶ್ಟು ಸುಲಭವಲ್ಲ ಈ ಸಮಸ್ಯೆ. ಮೊಟ್ಟೆಯಿಂದ ಕೋಳಿಯೋ ಕೋಳಿಯಿಂದ ಮೊಟ್ಟೆಯೋ ಎನ್ನುವಷ್ಟು ಗಹನ.

ಬ್ರಹ್ಮಾಂಡದ ಸೃಷ್ಟಿ ಲಯಗಳಿಗೆ ಭಯ ಕಾರಣವೋ ಅಲ್ಲವೋ ನನಗೆ ತಿಳಿಯದು. ಅದರ ಸ್ಥಿತಿಗಂತೂ ಭಯವೇ ಮೂಲಕಾರಣ. ಭಯದಲ್ಲಿ ವೈಷ್ಣವಾಂಶವಿದೆ. “ಭಯಾದಗ್ನಿಸ್ತಪತಿ”, “ತೇನ ವಿನಾ ತೃಣಮಪಿ ನ ಚಲತಿ” ಇತ್ಯಾದಿ ಸೃತಿವಾಕ್ಯ ಪ್ರಮಾಣಗಳಿಂದಲೂ ಮತ್ತು “ಭಯಂ ಚಾಭಯಮೇವ ಚ” ಎಂಬ ಗೀತೋಪನಿಷತ್ತಿನ ಭಗವದ್ವಾಕ್ಯಗಳಿಂದಲೂ ಇದ್ದ ಸಿದ್ಧ. ಭಯವೆಂದರೆ ಭವ, ಅಭಯವೆಂದರೆ ವೈರಾಗ್ಯ-ಪ್ರಪಂಚದಲ್ಲಿ ವಿರಕ್ತರಂತೂ ಅಪರೂಪ. ಅಂದರೆ ಜಗತ್ತು ನಡೆಯುವುದು ಭಯಶಾಲೀನರಿಮ್ದ. ಪ್ರಾಣಕ್ಕಿಮ್ತಲೂ ಪ್ರಿಯವಾದುದು ಯಾವುದು, ಅದನ್ನು ನಡೆಯಗೊಡಿಸುವ ಭಯಕ್ಕಿಂತ ಉಪಕಾರವಾದ ಗುಣ ಮತ್ತಾವುದು? ಸೂರ್‍ಯನಿಗೆ ತೇಜಸ್ಸು ಹೇಗೆಯೋ ಹಾಗೆಯೇ ಪ್ರಾಣವಂತನಿಗೆ ಭಯ. ಯಾರಿಗೆ ಪ್ರಾಣದ ಮೇಲೆ ಆಸೆ ಇಲ್ಲವೋ ಆತನಿಗೆ ಮಾತ್ರ ಭವಿಲ್ಲ. ಅಂಥವನು ಏನೂ ಇಲ್ಲದವನು. “ನಾಹಮಸ್ಮೀತಿ ಸಾಹಸಂ.” ಅಂಥವರ ಮಾತು ಬಾಳಬೇಕೆಂಬ ನಮಗೇಕೆ? ಅಂಥವರಿಂದ ಲೋಕಕ್ಕೆ ತಾನೆ ಏನು ಪ್ರಯೋಜನ?

ಪ್ರಪಂಚದಲ್ಲಿ ಯಾವ ಯಾವವಕ್ಕೆ ಅಧ್ಯಾತ್ಮಿಕವಾದ ಬೆಲೆ ಇದೆಯೋ ಅವೆಲ್ಲಕ್ಕೂ ಭೀತರೇ ಆಶ್ರಯರು. ‘ದಯವೇ ಧರ್ಮದ ಮೂಲ’ ಎಂಬ ಮಾತಿನ ತಥ್ಯ ಸಂದೇಹಾಸ್ಪದವಾಗಿದೆ. ಭಯವೇ ಧರ್ಮದ ಮೂಲ ಎಂದರೆ ಸಮಂಜಸವಾದೀತು. ಪರ್ಷಿಯಾದೇಶದ ಪ್ರಾಚೀನ ಮತ ಯಾರಿಂದ ಈವರೆಗೆ ಉಳಿದಿದೆ? ಭೀತರಾಗಿ ಈ ದೇಶಕ್ಕೆ ಓಡಿಬಂದ ಝರತಿಷ್ಟ್ರಾನುಯಾಯಿಗಳಿಂದ ಅಲ್ಲವೇ/ ಮುಸಲ್ಮಾನರ ಮತ ಯಾರಿಂದ ಅಭಿವೃದ್ಧಿ ಹೊಂದಿತು? ಭಯಾರ್ತರು ಅದಕ್ಕೆ ತಲೆವಾಗಿ ತಮ್ಮ ತನುಮನಗಳನ್ನು ಕೋಟಿಗತ್ಟಲೆ ತೆತ್ತುದರಿಂದ ತಾನೆ. ಷೇಕ್ಸ್‌ಪಿಯರ್, ಷೆಲ್ಲಿ ಮುಂತಾದ ಪಾಶ್ಚಾತ್ಯ ಜನಾಂಗದ ಕವಿಗಳೂ, ಅವರ ಅಮೋಘವಾದ ಸಂಸ್ಕೃತಿಯೂ, ವಿಜ್ಞಾನವೂ ಯಾರ ಆಶ್ರಯವನ್ನು ಪಡೆದು ಈ ದೇಶದಲ್ಲಿ ಮನ್ನಣೆ ಪಡೆಯಿತು? ಆಂಗ್ಲಭೀತರಾದ ನಮ್ಮಿಮ್ದಲ್ಲವೆ? ಭಕ್ತಿಗೂ ಗೌರವಕ್ಕೂ ಭಯವೇ ಅಲ್ಲವೆ ವಾಹನ? ಯುದ್ಧಗಳಾಗುತ್ತಿರುವಾಗ ಉಳಿಯುವವರಾರು? ಸೋಲನ್ನೊಪ್ಪಿಕೊಳ್ಳುವವರಾರು? ಸಂಧಿಪ್ರಿಯರಾರು? ಶಾಂತಿ ಯಾರ ಇಷ್ಟ? ನಮ್ಮ ಪುರಾತನ ಸಂಸ್ಕೃತಿಗೆ ಯಾರಿಂದ ಉಳಿವು? ಎಲ್ಲ ಅಪಾಯಕ್ಕೂ ಹೆದರಿ, ವಿಪತ್ಪರಂಪರೆಗಳನ್ನು ತಾಳಿಕೊಂಡು, ಎಡವಿದರೆ ಅಂಜುತ್ತಾ, ಸಮಯ ಬಂದಾಗ ಪಲಾಯನ ಸೂತ್ರವನ್ನು ಅವಲಂಬಿಸುತ್ತಾ, ಕ್ರೋಧವಶರಾಗಬೇಕಾದ ಕಾಲದಲ್ಲಿ ಸ್ಥಿತಪ್ರಜ್ಞರಾಗುತ್ತಾ, ಅಮೂಲ್ಯವಾದ ಜೀವನವನ್ನು ಸಾಹಸಕ್ಕೀಡು ಮಾಡದೆ, ಸಾಮ್ರಾಜ್ಯಗಳು ಉಳಿಯಲಿ ಅಳಿಯಲಿ ಶಾಂತಚಿತ್ತರಾಗಿ, ಬಾಳುವೆಯನ್ನು ಅಂಜಲಿಪ್ರಮುಖರನ್ನಾಗಿ ಮಾಡಿ ನಡೆಯುವ ಭಯಶರಣ್ಯರಾದ ನೂರಕ್ಕೆ ತೊಂಬತ್ತೊಂಬತ್ತು ಜನ ಸತ್ಪ್ರಜೆಗಳಿಂದಲ್ಲವೇ “ಶತೇಷು ಜಾಯತೇ ಶೂರಃ” ಎಂಬ ಸುಭಾಷಿತ ಈಗ ನೆನಪಿಗೆ ಬಂದು ನನ್ನ ಈ ವಾದಕ್ಕೆ ಪೋಷಕವಾಗಿದೆ. ಸೃಷ್ಟಿಶಕ್ತಿಗೆ ಅಂಜಿಕೆಯುಳ್ಳವರಲ್ಲಿಯೆ ಹೆಚ್ಚು ವಾತ್ಸಲ್ಯ.

ಅಂದರೆ ಸಭ್ಯ ಜೀವನಕ್ಕೆ ಭಯವೇ ಮೂಲ. ಅದರ ಅಸ್ತಿವಾರದ ಮೆಲೆ ಧರ್ಮ, ಸಂಸ್ಕೃತಿ, ಶಿಸ್ತು, ಶಾಂತಿ, ಇತ್ಯಾದಿ, ಇತ್ಯಾದಿ ಸದ್ಗುಣಗಳು ಮೇಲೆಮೇಲೆ ಗೋಪುರಾಕಾರವಾಗಿ ಬೆಳೆದು ಮುಗಿಲನ್ನು ಮುಟ್ಟಿವೆ. ಇಂಥ ಅಮೂಲ್ಯ ಗುಣಸಂಪನ್ನರಾದ ನಮ್ಮ ಸ್ತ್ರೀಪುರುಷರು ಧನ್ಯರೇ ಸರಿ.

ಆದರೆ ಇದು ಹುಟ್ಟು ಗುಣ. ಭೂಗರ್ಭದಲ್ಲಿರುವ ಖನಿಜಗಳಂತೆ, ಇದನ್ನು ವೃದ್ಧಿಮಾಡುವುದು ದುಸ್ಸಾಧ್ಯ. ಬೇಕಾದರೆ ಅಗೆದು ತೋಡಿ ಹೊರತಂದು ಬಳಸಿಕೊಳ್ಳಬಹುದು ಅಷ್ಟೆ. ನಮ್ಮ ಮನಸ್ಸಿನಲ್ಲಿ ಇದರ ಪ್ರಮಾಣ ನಿಯತವಾದದ್ದು. ಅದಕ್ಕೆ ಮಿತಿಯುಂಟು. ಅದನ್ನು ಹೊರತುಳುಕಿದಷ್ಟೂ ಅದರ ಪರಿಮಾಣ ಮನಸ್ಸಿನಲ್ಲಿ ಕಡಿಮೆಯಾಗುತ್ತದೆ. ಚೆಲ್ಲಿಹೋದುದು ಹೋದ ಹಾಗೆಯೇ ಸರಿ; ಅದನ್ನು ತಿರುಗಿ ತಂದುಕೊಂಡು ಮನಸ್ಸಿಗೆ ತುಂಬಿಕೊಳ್ಳುವ ಹಾಗಿಲ್ಲ. ಅದು ಜನತೆಯಲ್ಲಿ ಕಡಿಮೆಯಾದಷ್ಟೂ ರಾಷ್ಟ್ರಕ್ಕೂ ಸಮಾಜ ಸಂಸ್ಕೃತಿಗಳಿಗೂ ಕೇಡು. ಅದರ ಒರತೆ ಇಂಗಿದ ಮನುಷ್ಯ ಕ್ರಾಂತಿಮೂಲನಾಗುತ್ತಾನೆ. ಸುವ್ಯವಸ್ಥಿತವಾದ ಯಾವ ಸಂಸ್ಥೆಗೂ ಆತನಿಂದ ಅಪಾಯ. ಜನತೆ ಭೀತಿಪ್ರರೂಢರಾದಾಗಲ್ಲವೇ ನಿರ್ಭೀತ ಪುರುಷರ ಅವತಾರವಾಗಿ ಜಗತ್ಕ್ರಾಂತಿಯಾಗುವುದು? ಆದುದರಿಂದ ಮಾನವನ ಮನಸ್ಸಿನಲ್ಲಿ ಅದನ್ನು ಆದಷ್ಟು ಸುರಕ್ಷತೆಯಿಂದ ಕಾಪಿಡುವುದು ರಾಜ್ಯತಂತ್ರದ ಪ್ರಮುಖನೀತಿಯಾಗಬೇಕು ಎನ್ನಿಸುತ್ತದೆ. ಜನದ ಚಿತ್ತದಿಂದ ಅದರ ಪ್ರಮೋಚನವನ್ನು ಆದಷ್ಟು ಕಡಿಮೆಮಾಡಿ ದೇಶಭದ್ರತೆಗೋಸ್ಕರ ಈ ಅಮೂಲ್ಯವಾದ ಗುಣವನ್ನು ನಾವು ಅಲ್ಲಿಯೇ ಉಳಿಸಿಕೊಳ್ಳಬೇಕು. ಅನಿವಾರ್ಯವಾದಾಗ ಹೊರತು ಅದನ್ನು ಹೊರತೋಡಬಾರದು. ನಾಡಹಬ್ಬದ ಶಕ್ತಿ ಪೂಜಾಕಾಲದಲ್ಲಿ ನಾವು ಎಲ್ಲರೂ ಈ ವೈಷ್ಣವಾಂಶದ ಸಂಗ್ರಹಣೋಪಾಯವಲ್ಲವೇ ಚಿಂತಿಸಬೇಕಾದುದು?

ಭಯಕ್ಕೆ ಸಲ್ಕೆ ಮಾನವಂ
ಇಲ್ಲ-ಅವನೆ ದಾನವಂ!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.