ಇಸ್ಲಾಮಿನ ಮರುಚಿಂತನೆ

ಮೂಲ: ಜಿಯಾವುದ್ದೀನ್ ಸರದಾರ್
ಕನ್ನಡಕ್ಕೆ: ಅಕ್ಷರ ಕೆ.ವಿ.

ಪಾಕಿಸ್ತಾನಿ ಮೂಲದ ಲೇಖಕ ಜಿಯಾವುದ್ದೀನ್ ಸರದಾರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಚಿಂತಕರೆಂದು ಹೆಸರು ಗಳಿಸಿದವರು. ಹೊಸದಾಗಿ ರೂಪುಗೊಳ್ಳುತ್ತಿರುವ ‘ಭವಿಷ್ಯಶಾಸ್ತ್ರ’ವೆಂಬ ಜ್ಞಾನ ಶಾಖೆಗೆ ಸಂಬಂಧಿಸಿದಂತೆ ಅವರು ಮಹತ್ವದ ಲೇಖನ ಮತ್ತು ಪುಸ್ತಕಗಳನ್ನು ರಚಿಸಿದ್ದಾರೆ; ಅಂಥ ಚಿಂತನೆಗಳನ್ನು ಕುರಿತ ‘ಫ್ಯೂಚರ್ಸ್’ ಎಂಬ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಲಂಡನ್ನಿನ ಸಿಟಿ ಯುನಿವರ್ಸಿಟಿಯ ವಸಾಹತೋತ್ತರ ಅಧ್ಯಯನ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ಇವರು ಇಸ್ಲಾಮ್ ಧರ್ಮ, ಸಮಾಜ ಮತ್ತು ಅದರ ಭವಿಷ್ಯದಬಗ್ಗೆ-‘ಇಸ್ಲಾಮಿಕ್‌ಫ್ಯೂಚರ್ಸ್: ದ ಶೇಪ್ ಆಫ್ ಐಡಿಯಾಸ್ ಟು ಕಮ್’ ಮತ್ತು ‘ದಿ ಫ್ಯೂಚರ್ ಆಫ್ ಮುಸ್ಲಿಮ್ ಸಿವಿಲೈಜೇಷನ್’ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸೆಪ್ಟೆಂಬರ್ ೧೧ರ ಬಳಿಕದ ಜಾಗತಿಕ ವಿದ್ಯಮಾನಗಳನ್ನು ತುಂಬ ಬೇರೆಯದೇ ಕಣ್ಣಿನಿಂದ ನೋಡುವ ಇವರ ಪ್ರಸ್ತುತ ಲೇಖನವನ್ನು ‘ಸೆಮಿನಾರ್’ ಪತ್ರಿಕೆಯ ಜನವರಿ ಸಂಚಿಕೆಯಿಂದ ಲೇಖಕರ ಅನುಮತಿಯೊಂದಿಗೆ ಅನುವಾದಿಸಲಾಗಿದೆ.

ಇಸ್ಲಾಮಿನೊಳಗೇ ಗಂಭೀರವಾದ ಮರುಚಿಂತನೆ ನಡೆಯಬೇಕಾಗಿರುವುದು ಈಗ ಬಹುಕಾಲದಿಂದ ಅಗತ್ಯವಾಗಿರುವ ಒಂದು ಸಂಗತಿಯಾಗಿದೆ. ಮುಸ್ಲಿಮರು ತುಂಬ ದೀರ್ಘಕಾಲದಿಂದಲೂ ಹಳೆಯ ವ್ಯಾಖ್ಯಾನಗಳನ್ನೇ ಅವಲಂಬಿಸುತ್ತ ಅದನ್ನೇ ನಂಬುತ್ತಲೂ ಬಂದುಬಿಟ್ಟಿದ್ದಾರೆ. ಆದ್ದರಿಂದಲೇ ಇವತ್ತಿನ ಈ ಸಮಕಾಲೀನ ಜಗತ್ತಿನಲ್ಲಿ ನಾವು ತುಂಬ ನೋವನ್ನು ಅನುಭವಿಸತೊಡಗಿದ್ದೇವೆ; ಯಾಕೆ ನಮಗೆ ಆಧುನಿಕತೆಯೊಂದಿಗೆ ತುಂಬ ಸಮಸ್ಯೆಗಳಾಗುತ್ತಿವೆಯೆಂದು ಒದ್ದಾಡತೊಡಗಿದ್ದೇವೆ. ಈಗ ಒಂದು ಶತಮಾನದ ಈಚಿನಿಂದಲೂ ಹಲವು ವಿದ್ವಾಂಸರು ಮತ್ತು ಚಿಂತಕರು, ‘ಇಜ್ತಿಹಾದ್’ ನ ಒಂದು ಪ್ರಯತ್ನವನ್ನು, ಅರ್ಥಾತ್ ಇಸ್ಲಾಮವನ್ನು ಪುನರ್‌ನಿರ್ಮಿಸುವ ತಾರ್ಕಿಕವಾದ ಮರುಚಿಂತನೆಯ ಚಳುವಳಿಯೊಂದನ್ನು, ಆರಂಭಿಸುವುದು ಅಗತ್ಯವಾಗಿದೆಯೆಂದು ಹೇಳುತ್ತಲೇ ಬಂದಿದ್ದಾರೆ.

ಕಳೆದ ಶತಮಾನದ ಆದಿಯಲ್ಲಿ, ಜಮಾಲುದ್ದೀನ್ ಆಫ್ಘನಿ ಮತ್ತು ಮೊಹಮೊದ್ ಅಬ್ದುಲ್ಲ ಅವರಿಬ್ಬರೂ ಇಂಥ ಹೊಸ ‘ಇಜ್ತಿಹಾದ್’ ಗಾಗಿ ಕರೆಕೊಟ್ಟಿದ್ದರು. ಆಮೇಲೆ ಉದ್ದಕ್ಕೂ ಹಲವು ಧೀಮಂತರು, ಶಾಸ್ತ್ರಜ್ಞರು ಮತ್ತು ಸಂತರು ಈ ಕರೆಗೆ ದನಿಗೂಡಿಸುತ್ತಲೇ ಬಂದಿದ್ದಾರೆ-ಮೊಹಮೊದ್ ಇಕ್ಬಾಲ್, ಮಲಿಕ್‌ಬಿನ್‌ನಬ್ಬಿ, ಅಬ್ದುಲ್ ಖಾದಿರ್ ಔಧಾ ಮೊದಲಾದವರೆಲ್ಲ ಸೇರಿದಂತೆ. ಹಾಗಿದ್ದರೂ ಇದುವರೆಗೂ ಯಾವುದೇ ಒಂದು ಮುಸ್ಲಿಮ್ ಸಮಾಜವೂ ‘ಇಜ್ತಿಹಾದ್’ನ್ನು ಕೈಗೊಳ್ಳಲು ವಿಫಲವಾಗಿದೆ. ಯಾತಕ್ಕೆ?

ಕಳೆದ ಸೆಪ್ಟೆಂಬರ್ ೧೧ರ ಈಚೆಗೆ ಈ ಯಾತಕ್ಕೆಂಬ ಪ್ರಶ್ನೆಗೆ ಇನ್ನಷ್ಟು ತುರ್ತು ಒದಗಿಬಂದಿದೆ. ಆ ದಿನದ ದುರ್ಫಟನೆಯು ಇನ್ನಾವುದೇ ಸಂಗತಿಗಿಂತ ಹೆಚ್ಚಾಗಿ ನಮಗೆ ಕಾಣಿಸಿಕೊಟ್ಟದ್ದೆಂದರೆ – ನಾವು ಇಸ್ಲಾಮಿನ ತತ್ವಾದರ್ಶಗಳಿಂದ ಬಹಳ ದೂರ ಸರಿದುಬಿಟ್ಟಿದ್ದೇವೆ ಎಂಬ ಸತ್ಯವನ್ನೇ. ಇಸ್ಲಾಂ ಎಂಬುದು ಒಂದು ಬಿಡುಗಡೆಯ ಶಕ್ತಿಯಾಗಿ, ಸಮಾನತೆಯ ಉದ್ದೇಶವನ್ನಿಟ್ಟುಕೊಂಡ ಒಂದು ಸಾಮಾಜಿಕ ಸಾಂಸ್ಕೃತಿಕ – ಬೌದ್ಧಿಕ ಚಲನಶೀಲತೆಯಾಗಿ ಮತ್ತು ನ್ಯಾಯ ಹಾಗೂ ಮಾನವೀಯತೆಗಳ ಪ್ರತಿಪಾದಕ ಮಾರ್ಗವಾಗಿ ಕಾಣಿಸುವ ಬದಲು ಈಗ ಅದು ಸ್ವತಃ ರೋಗಿಷ್ಟವೆಂಬಂತೆ ಗೋಚರಿಸತೊಡಗಿದೆ. ನನಗನ್ನಿಸುವ ಪ್ರಕಾರ, ಹಲವು ಶತಮಾನಗಳ ಕಾಲದಿಂದ ಉದ್ದಕ್ಕೂ, ಹಿಂದಿನ ಮತ್ತು ಇಂದಿನ ಪಶ್ಚಿಮದ ಜಗತ್ತು ಇಸ್ಲಾಮನ್ನು ಪ್ರತಿನಿಧಿಸಿದ ಮತ್ತು ಮುಸ್ಲಿಮರನ್ನು ರಾಕ್ಷಸರಂತೆ ಕಾಣಿಸಿದ ನಿರೂಪಣೆಗಳನ್ನು ನಾವೀಗ ಸ್ವತಃ ನಮ್ಮ ಮೇಲೆ ಅನ್ವಯಿಸಿಕೊಳ್ಳಲು ಅರಂಭಿಸಿಬಿಟ್ಟಿದ್ದೇವೆ. ಅಂದರೆ, ಪಶ್ಚಿಮವು ನಮ್ಮೆಲ್ಲರನ್ನು ಸಾಮೂಹಿಕವಾಗಿ ಯಾವ ವೇಷದಲ್ಲಿ ಕಾಣಿಸಿಸುತ್ತ ಬಂದಿದೆಯೋ ಅದೇ ವೇಷವನ್ನು ನಾವೀಗ ಸ್ವತಃ ಧರಿಸಲು ತೊಡಗಿದ್ದೇವೆ ಎಂಬುದನ್ನು ತುಂಬ ವಿಷಾದದಿಂದಲೇ ಒಪ್ಪಿಕೊಳ್ಳಬೇಕಾಗಿದೆ.

ಆದರೆ, ಇದಕ್ಕಾಗಿ ಪಶ್ಚಿಮವನ್ನು ಬಯ್ಯುವುದು, ಇದು ನಮಗೆ ಹೊರತಾಗಿದ್ದ ಅಧುನಿಕತೆಯೊಂದನ್ನು ನಮ್ಮ ಮೇಲೆ ಹೇರಿದ್ದರಿಂದ ಉಂಟಾದ ಸಮಸ್ಯೆ ಎಂದು ಹೇಳಿಕೊಳ್ಳುವುದು, ಇವೆಲ್ಲ ಈಗ ನನಗೆ ಕೇ‌ಅಲ ಬೌದ್ಧಿಕ ದಾರಿದ್ರ್ಯವೆಂದು ಕಾಣತೊಡಗಿದೆ. ನಿಜ, ಪಶ್ಚಿಮದ ಜಗತ್ತಿನ ಮೇಲೆ, ಅದರಲ್ಲೂ ಮುಖ್ಯವಾಗಿ ಅಮೇರಿಕಾದ ಮೇಲೆ, ಅವು ಉತ್ತರಿಸಬೇಕಾದ ಹಲವು ಮುಖ್ಯ ಆರೋಪಗಳೇನೋ ಇವೆ. ಮತ್ತು, ಯುರೋಪು-ಅಮೇರಿಕಾದ ವಿದೇಶ ನೀತಿಗಳು ಮಾಡಿರುವ ಅನ್ಯಾಯ ಮತ್ತು ಮೆರೆದ ಯಜಮಾನಿಕೆಗಳೇ ಈ ಸಮಸ್ಯೆಗೆ ಕಾರಣವೆಂಬುದನ್ನು ಈಗಾಗಲೇ ಮುಸ್ಲಿಮರು ಬೆಟ್ಟು ಮಾಡಿಯೂ ತೋರಿಸಿದ್ದಾರೆ. ಆದರೂ ಇವೆಲ್ಲ ಈ ಸಮಸ್ಯೆ ಒಂದು ಭಾಗ ಮಾತ್ರ ಮತ್ತು ನನ್ನ ಪ್ರಕಾರ ಇದು ಅಪರಿಹಾರ್ಯವಾದ ವಿಧಿಯೇನೂ ಆಗಬೇಕಿರಲಿಲ್ಲ. ಯಜಮಾನಿಕೆಯೆಂಬುದು ಯಾವಾಗಲೂ ಹೇರಲ್ಪಡುವಂಥದು ಮಾತ್ರವೇ ಅಲ್ಲ, ಕೆಲವೊಮ್ಮೆ ಅದನ್ನು ನಾವೇ ಅಹ್ವಾನಿಸಿಕೊಳ್ಳುತ್ತೇವೆ ಕೂಡಾ. ಇಸ್ಲಾಮಿನ ಒಳಗಿರುವ ಆಂತರಿಕ ಸ್ಥಿತಿ ಇಂಥ ಒಂದು ಮುಕ್ತ ಅಹ್ವಾನವನ್ನು ಕೊಡುವಂತಿದೆ.
*
*
*
ಇದುವರೆಗೂ ನಾವು ‘ಇಜ್ತಿಹಾದ್’ನ ಕರೆಗೆ ಓಗೊಡದೆ ಉಳಿದಿರುವುದಕ್ಕೆ ಕೆಲವು ಮುಖ್ಯವಾದ ಕಾರಣಗಳೂ ಇದ್ದಾವೆ. ಇವುಗಳಲ್ಲಿ ಆತ್ಯಂತ ಪ್ರಮುಖವಾದ ಒಂದೆಂದರೆ ನಮ್ಮ ಪವಿತ್ರ ಗ್ರಂಥಗಳು – ನಮ್ಮ ಎಲ್ಲ ನಂಬಿಕೆಗಳಿಗೆ ಚೌಕಟ್ಟನ್ನು ಹಾಕಿಕೊಡುವ ಕುರಾನ್ ಮತ್ತು ಪ್ರವಾದಿ ಮೊಹಮ್ಮದ್‌ರ ಉದಾಹರಣೆಗಳು – ಇತಿಹಾಸದಲ್ಲಿ ಗಡ್ಡೆಗಟ್ಟಿ ಕೂತುಬಿಟ್ಟಿರುವುದು. ಯಾವುದೇ ಒಂದು ಪಠ್ಯದ ಜತೆಗೆ ನಮ್ಮ ಸಂಬಂಧಿಸಿಯಂತೂ ಈ ಮಾತು ಇನ್ನಷ್ಟು ಸತ್ಯ. ಆದರೆ ಆಯಾ ಪಠ್ಯಗಳನ್ನು ವ್ಯಾಖ್ಯಾನಿಸುವ ಸಂದರ್ಭಗಳು ನಮ್ಮ ಕಾಲದ ಸಂದರ್ಭಗಳಿಗೆ ಸಂವಾದಿಯಾಗಿಲ್ಲದೆ ಹೋದರೆ ಆಗ ಅಂಥ ವ್ಯಾಖ್ಯಾನಗಳೇ ಅರ್ಥಹೀನವಾಗಿ ಬಿಡುತ್ತವೆ; ಇವತ್ತಿನಲ್ಲಿ ನಿಂತ ನಮಗೆ ಅವು ಅನುಪಯುಕ್ತವೂ ಆಗಿಬಿಡುತ್ತವೆ.

ಇನ್ನು ಕೇವಲ ಐತಿಹಾಸಿಕ ವ್ಯಾಕ್ಯಾನಗಳನ್ನೇ ನಾವು ಮಾಡುತ್ತ ಕುಳಿತರೆ, ಅವು ನಮ್ಮನ್ನೂ ಇಥಾಸದ ಕಡೆಗೇ ಸೆಳೆಯುತ್ತವೆ; ಪುರಾತನಕಾಲದ ಪಳೆಯುಳಿಕೆಗಳಂಥ ಸನ್ನಿವೇಶಗಳಿಗೆ ನಮ್ಮನ್ನು ಕರೆದೊಯ್ದು ಮುಟ್ಟಿಸುತ್ತವೆ. ಅಥವಾ ಇನ್ನೂ ಅಪಾಯಕಾರಿಯೆಂದರೆ ಅವು ಇತಿಹಾಸದಲ್ಲೂ ಇದ್ದಿರದಂಥ ಕಲ್ಪಿತ- ರಮ್ಯ ಸನ್ನಿವೇಶಗಳಿಗೆ ನಮ್ಮನ್ನು ತಲುಪಿಸುತ್ತವೆ. ಆದ್ದರಿಂದಲೇ ಇವತ್ತು ಏನಾಗಿಹೋಗಿದೆಯೆಂದರೆ -ಮುಸ್ಲಿಮರಿಗೇನೋ ಇಸ್ಲಾಮಿನೊಂದಿಗೆ ತುಂಬ ಗಾಢವಾದ ಬಂಧವಿದೆ; ಆದರೆ ಸ್ವತಃ ಇಸ್ಲಾಂ ಒಂದು ಲೋಕದೃಷ್ಟಿಯಾಗಿ ಮತ್ತು ನೀತಿವ್ಯವಸ್ಥೆಯಾಗಿ ನಮ್ಮ ನಿತ್ಯ ಜೀವನಕ್ಕೆ ಸಂಗತವಾಗಿ ಕೂಡಿಕೊಳ್ಳಲು ಸಾದ್ಯವಾಗದೆ ಅದು ಕೇವಲ ಪೂಜೆ-ಆಚರಣೆಗಳಲ್ಲಿ ಮಾತ್ರ ಉಳಿದುಕೊಂಡಿದೆ. ಆದ್ದರಿಂದಲೇ ಇಲ್ಲಿ ಮತ್ತು ಹೊಸಚಿಂತನೆಗಳು ಉದ್ಭವಿಸಲಿಕ್ಕೆ ಅಗತ್ಯವಾದ ಸಂಧರ್ಭವೇ ಅಸಾದ್ಯವಾಗಿ ಪರಿಣಮಿಸಿಬಿಟ್ಟಿದೆ.

ವ್ಯಾಖ್ಯಾನಗಳ ನಿಲುಗಡೆಯೆಂದರೆ ಅದು ‘ಇಜ್ತಿಹಾದ್’ನ ಬಾಗಿಲುಗಳನ್ನು ಮುಚ್ಚಿದಂತೆಯೇ ಸರಿ. ಇದು ಇವತ್ತಿನ ಮುಸ್ಲಿಮರ ಚಿಂತನೆ ಮತ್ತು ಕ್ರಿಯೆಗಳ ಮೇಲೆ ವಿನಾಶಕರ ಪರಿಣಾಮವನ್ನು ಉಂಟುಮಾಡಿದೆ. ನಿರ್ಧಿಷ್ಟವಾಗಿ ಹೇಳುವುದಾದರೆ ಇದು ಮುಖ್ಯವಾಗಿ ಮೂರು ರೀತಿಯ ಅದ್ಯಾತ್ಮಿಕ ಗಂಡಾಂತರಗಳನ್ನು ಸೃಷ್ಟಿಸಿದೆಯೆಂದು ನಾನು ಸೂಚಿಸುತ್ತೇನೆ. ಮೊದಲನೆಯದು, ಷರೀಯತ್‌ನ್ನು ದೈವಿಕವೆಂದು ಎತ್ತರಕ್ಕೇರಿಸಿ ಕೂರಿಸಿದ್ದು; ಎರಡನೆಯದು, ಇದರಿಂದಾಗಿ ನಂಬುವವರಸಮೂಹಕ್ಕೆ ಇವತ್ತು ಯಾವುದೇ ಕ್ರಿಯಾಸಾದ್ಯತೆಯೂ ಉಳಿಯದಂತಾಗಿರುವುದು ಮತ್ತು ಮೂರನೆಯದು ಇಸ್ಲಾಮನ್ನೂ ರಾಷ್ಟ್ರವೆಂಬ ಕಲ್ಪನೆಯನ್ನೂ ಜತೆಗೂಡಿಸಿದ್ದು. ಇವುಗಳನ್ನು ಒಂದೊಂದಾಗಿ ನಾನು ವಿವರಿಸುತ್ತೇನೆ.

ಸಾಧಾರಣವಾಗಿ ‘ಇಸ್ಲಾಮಿ ಕಟ್ಟಲೆ’ ಯೆಂದು ಭಾಷಾಂತರಿಸಲಾಗುವ ಷರೀಯತ್ ಎಂಬುದು ದೈವಿಕವಾದದ್ದು. -ಎಂದು ಬಹುತೇಕ ಮುಸಲ್ಮಾನರು ಭಾವಿಸಿದ್ದಾರೆ. ಆದರೆ ಷರೀಯತ್ನಲ್ಲಿ ಅಂಥ ದೈವಿಕವಾದದ್ದೇನೂ ಇಲ್ಲ. ನಿಜವಾಗಿ, ಇಸ್ಲಾಮ್‌ನಲ್ಲಿ ಯಾವುದನ್ನಾದರೂ ದೈವಿಕವೆಂದು ಕರೆಯಬಹುದಾದದ್ದು ಇದ್ದರೆ ಅದು ಕುರಾನ್ ಮಾತ್ರವೇ ಸರಿ. ಷರೀಯತ್ ಎಂಬುದು ಮನುಷ್ಯನಿರ್ಮಿತವಾದದ್ದು, ಅದು ಒಂದು ನಿರ್ಧಿಷ್ಟ ಸಂಧರ್ಭದಲ್ಲಿ ದೈವಿಕ ಆಶಯಗಳನ್ನು ಅರ್ಥೈಸಿ ಹೇಳುವಂಥದು. ಈ ಕಾರಣದಿಂದಲೇ ಷರೀಯತ್‌ನ ಬಹುಭಾಗದಲ್ಲಿರುವುದು ‘ಫಿಖ್’ಗಳೆಂದು ಕರೆಯಲಾಗುವನೀತಿಸೂಚನೆಗಳು. ಇವೆಲ್ಲವೂ ಶಾಸ್ತ್ರೀಯ ಯುಗದ ನ್ಯಾಯಾಧಿಪತಿಗಳಿಂದ ಉಕ್ತವಾದ ನ್ಯಾಯ ಸಲಹೆಗಳೇ ಹೊರತು ಹೆಚ್ಚೇನೂ ಅಲ್ಲ.

ಅಬ್ಬಾಸಿದ್ ದೊರೆಯ ಕಾಲದವರೆಗೂ ‘ಫಿಖ್’ ಎಂಬ ಶಬ್ದವೇ ಚಾಲ್ತಿಯಲ್ಲಿರಲಿಲ್ಲ. ಆ ಕಾಲದಲ್ಲೇ ಅದನ್ನು ಸೃಷ್ಟಿಸಿ ಸೂತ್ರಪ್ರಾಯವಾಗಿ ನಿರೂಪಿಸಲಾಯಿತು. ಮತ್ತು ಹಾಗೆ ‘ಫಿಖ್’ ಎಂಬುದಕ್ಕೆ ಆ ಅಬ್ಬಾಸಿದ್ ಕಾಲದ ಮುಸ್ಲಿಂ ಸಮಾಜದಲ್ಲಿ ಅಂಥ ಕಟ್ಟಲೆಯ ಸ್ವರೂಪ ಒದಗುವುದಕ್ಕೆ ಮೂರು ರೀತಿಯ ಹಿನ್ನೆಲೆಗಳಿದ್ದವು-ಆ ಕಾಲದಲ್ಲಿ ಮುಸ್ಲಿಂ ಇತಿಹಾಸವು ತನ್ನ ವಿಸ್ತರಣೆಯ ಹಂತದಲ್ಲಿತ್ತು ಮತ್ತು ಅಂಥ ಕಾಲದ ಮುಸ್ಲಿಂ ಸಾಮ್ರಾಜ್ಯಶಾಹಿಯ ತರ್ಕಗಳನ್ನು ಆ ಕಟ್ಟಲೆಗಳು ಅಂತರ್ಗತಗೊಳಿಸಿಕೊಂಡಿದ್ದವು. ಉದಾಹರಣೆಗೆ, ಧರ್ಮತ್ಯಾಗವನ್ನು ನಿಷೇಧಿಸಿ ‘ಫಿಖ್’ ವಿಧಿಸಿದ ನಿಯಮಗಳೆಲ್ಲ ಇದೇ ಕಾರಣದಿಂದ ಉಧ್ಬವಿಸಿದ್ದು.

ಇದಲ್ಲದೆ ಆಗ ಪ್ರಪಂಚವು ಹೆಚ್ಚು ಸರಳವಾಗಿದ್ದು ಅದನ್ನು ಕಪ್ಪುಬಿಳುಪುಗಳಾಗಿ ವಿಂಗಡಿಸಲು ಸಾಧ್ಯವಿತ್ತು. ಆದ್ದರಿಂದಲೇ ಜಗತ್ತನ್ನು ಆಗ ದರಾಲ್ ಇಸ್ಲಾಮ್ ಮತ್ತು ದರಾಲ್ ಹರ್ಬ್‌ಗಳೆಂದು ಬೇರ್ಪಡಿಸಬಹುದಾಗಿತ್ತು. ಅದಕ್ಕಿಂತ ಮುಖ್ಯವಾಗಿ, ಆಗ ಕಾನೂನನ್ನು ಮಾಡುತ್ತಿದ್ದವರು ಸ್ವತಃ ಸಮಾಜವನ್ನು ನಿರ್ವಹಿಸುತ್ತಿದ್ದವರೂ ಆಗಿರದೇ ಇದ್ದುದರಿಂದ, ಆಗ ಕಾನೂನು ಕೇವಲ ತತ್ವವಾಗಿತ್ತು; ಅದನ್ನು ಮಾರ್ಪಡಿಸುತ್ತಹೋಗುವುದು ಅಗತ್ಯವಾಗಿರಲಿಲ್ಲ. ಜತೆಗೆ, ಕಾನೂನಿನ ನಿರ್ಮಾಪಕರಿಗೆ ಆ ಕಾನೂನುಗಳ ಅನ್ವಯದಲ್ಲಿ ಒದಗುವ ತೊಡಕುಗಳ ಪರಿವೆಯೂ ಇರಲಿಲ್ಲ; ಆದುದರಿಂದಾಗಿಯೇ ಅವುಗಳನ್ನು ಮರುವಿಮರ್ಶಿಸುವ ಮರುನಿರೂಪಿಸುವ ಅಗತ್ಯಗಳೂ ಹುಟ್ಟಲಿಲ್ಲ. ಇವತ್ತು ನಮಗೆ ದೊರೆಯುವ ಈ ಎಲ್ಲ ‘ಫಿಖ್’ಗಳೂ ಇಂಥ ವಿಭಜನೆಯ ಸನ್ನಿವೇಷದಲ್ಲೇ ಉದ್ಭವಿಸಿದ್ದು-ಆಗ ಕಾನೂನು ಮಾಡುವವರು ಮತ್ತು ಆಳುವವರು ಬೇರೆಯಾಗಿದ್ದುದಲ್ಲದೆ, ಅದು ಗತಕಾಲದ ಮುಸ್ಲಿಂ ‘ಸ್ವರ್ಣಯುಗ’ವೊಂದನ್ನು ಮಾದರಿಯಾಗಿ ಇರಿಸಿಕೊಂಡಂಥದಾಗಿತ್ತು. ಅದನ್ನೆಲ್ಲ ಮರೆತು, ಈಗ ನಾವು ‘ಫಿಖ್’ಗಳನ್ನು ದೈವಿಕವೆಂದು ಕರೆಯತೊಡಗಿದರೆ, ಆಗ ನಾವು ಕೇವಲ ಪುರಾತನಕಾಲದ ‘ಫಿಖ್’ಗಳಿಗೆ ದೈವಿಕ ಸಮ್ಮತಿಯನ್ನು ಆರೋಪಿಸಿದಂತೆ ಆಗುತ್ತದೆ, ಅಷ್ಟೇ.

ವಾಸ್ತವದಲ್ಲಿ ಇವತ್ತು ಹಲವು ಮುಸ್ಲಿಂ ದೇಶಗಳು ಷರೀಯತ್‌ನ್ನು ಸರ್ವೋನ್ನತವೆಂದು ವಿಧಿಸಿದಾಗ ಆಗಿರುವ ಪರಿಣಾಮ ಕೂಡ ಇದೇ. ಹೀಗೆ ಮಾಡಬೇಕೆಂದು ಬೇಡಿಕೆಯು ಇವತ್ತು ಇಂಡೋನೇಷ್ಯಾದಿಂದ ನೈಜೀರಿಯಾದವರೆಗಿನ ಮುಸ್ಲಿಮರಿಂದ ಇದ್ದರೂ ಇದನ್ನು ನಿಜವಾಗಿಯೂ ಅನ್ಚಯಿಸತೊಡಗಿದರೆ ಆಗ ನಮಗೆ ಇದ್ದಕ್ಕಿದ್ದಂತೆ ಈ ‘ಫಿಖ್’ಗಳ ಮೂಲಸಂದರ್ಭಕ್ಕೂ ನಡುವಿನ ವೈರುದ್ಧ್ಯಗಳು ದೊಡ್ಡದಾಗಿ ಕಾಣಿಸಿ ತೊಂದರೆ ಕೊಡಲಿಕ್ಕೆತೊಡಗುತ್ತವೆ. ಆದ್ದರಿಂದಲೇ ಇಂಥ ಷರೀಯತ್ ಕಟ್ಟಲೆಯನ್ನು ವಿಧಿಸಿದ ಎಲ್ಲ ಕಡೆಗಳಲ್ಲೂ ಈ ವೈರುದ್ಧ್ಯಢಾಳಾಗಿ ಕಂಡು ಮುಸ್ಲಿಂ ಸಮಾಜಗಳು ಮಧ್ಯಯುಗೀನ ರೂಪವೆಂಬ ವರ್ಣನೆ ಪಡೆದುಕೊಳ್ಳುತ್ತವೆ.

ನಾವಿವತ್ತು ಸೌದಿ ಅರೇಬಿಯಾದಲ್ಲಿ, ಸುಡಾನಿನಲ್ಲಿ, ತಾಲಿಬಾನ್ ನಿಯಂತ್ರಿತ ಆಫ್ಗಾನಿಸ್ತಾನದಲ್ಲಿ ಕಾಣಬಹುದಾದ ಪ್ರಕ್ರಿಯೆ ಇದೇ. ಫಿಖ್‌ಗಳಿಗೆ ಮತ್ತು ಇಸ್ಲಾಮಿನ ಒಂದಲ್ಲೊಂದು ಶಾಖೆಯ ನಿಯಮಗಳಿಗೆ ಸಂಕುಚಿತ ಅರ್ಥದಲ್ಲಿ ಬದ್ಧರಾಗಲು ತೊಡಗಿಬಿಟ್ಟರೆ ಆಗ ಇಡೀ ಸಮಾಜಕ್ಕೆ ಪಳೆಯುಳಿಕೆಯ ಸ್ವರೂಪ ಒದಗಿ ಬಂದುಬಿಡುತ್ತದೆ; ಸಮಕಾಲೀನ ವಾಸ್ತವಗಳಿಗೆ ಸ್ಪಂದಿಸುವ ಗುಣ ನಷ್ಟವಾಗಿಬಿಡುತ್ತದೆ. ಆಗ ನಾವು ನಮ್ಮ ಎಲ್ಲ ಸಮಸ್ಯೆಗಳನ್ನೂ ಷರೀಯತ್ ಪರಿಹರಿಸುತ್ತದೆ ಎಂಬ ಸಾಧಾರಣೀಕೃತ ನಂಬಿಕೆಗಳಿಗೆ ತಲುಪುತ್ತೇವೆ. ಹಾಗೂ ಇಂಥ ನಂಬಿಕೆಗಳು ರೂಢಿಗೆ ಬಂದೊಡನೆ ಸ್ಥಾಪಿತ ಹಿತಾಸಕ್ತಿಗಳಿರುವ ಒಂದು ಗುಂಪು ಷರೀಯತ್‌ನ ಎಲ್ಲೆಗಳನ್ನು ಹೇಗಾದರೂ ಮಾಡಿ ಭದ್ರವಾಗಿ ಕಾಪಾಡಲು ಹವಣಿಸತೊಡಗುತ್ತದೆ; ಅದರಿಂದ ತನಗೆ ಉದ್ಭವಿಸುವ ಅಧಿಕಾರ ಮತ್ತು ಮೇಲ್ಮೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸತೊಡಗುತ್ತದೆ. ಹೀಗೆ, ಸವಕಲಾಗಿರುವ ಕಾನೂನಿನ ಸಮೂಹವೊಂದನ್ನು ಷರೀಯತ್ ಎಂದು ಕರೆಯುವುದಲ್ಲದೆ ಅದು ದೈವಿಕವಾದ್ದರಿಂದ ಅದನ್ನು ಬದಲಾಯಿಸಲು ಅಸಾದ್ಯವೆಂದೂ ಸಾಧಿಸುವ ಪ್ರಯತ್ನ ಮೊದಲಾಗುತ್ತದೆ.

ಷರೀಯತ್‌ನ್ನು ಈರೀತಿ ದೈವಿಕತೆಯ ಮಟ್ಟಕ್ಕೆ ಮೇಲೆತ್ತುವುದರಿಂದ ಆಗುವ ಇನ್ನೊಂದು ಸಮಸ್ಯೆಯೆಂದರೆ-ಹಾಗೆ ಮಾಡಿದಾಗ ಈ ಧರ್ಮವನ್ನು ನಂಬಿರುವವರಿಗೆ ಯಾವುದೇ ಕ್ರಿಯಾಸಾಧ್ಯತೆಗೆ ಅವಕಾಶವಿಲ್ಲವಾಗುತ್ತದೆ. ಕಾನೂನು ಎಂಬುದು ಪೂರ್ವದಿಂದಲೇ ದತ್ತವಾಗಿ ಬಂದಂಥದು ಎಂದು ಭಾವಿಸಿಕೊಂಡಾಗ ಜನರು ಇದನ್ನು ಅನುಸರಿಸುವುದನ್ನು ಬಿಟ್ಟರೆ ಇನ್ನೇನೂ ಮಾಡಲಿಕ್ಕೆ ಅವಕಾಶ ಉಳಿಯುವುದಿಲ್ಲ. ಇದರ ಫಲವಾಗಿ ನಂಬಿಕೆಯಿರುವ ಜನರು ಸತ್ಯವನ್ನು ಕ್ರಿಯಾಶೀಲವಾಗಿ ಆವಿಷ್ಕರಿಸುವ ಮಾರ್ಗವನ್ನು ಹಿಡಿಯುವ ಬದಲು ಸಿದ್ಧ ಸತ್ಯಗಳನ್ನು ಸ್ವೀಕರಿಸುವುದಷ್ಟಕ್ಕೇ ಸೀಮಿತರಾಗಬೇಕಾಗುತ್ತದೆ.

ವಾಸ್ತವದಲ್ಲಿ ನೋಡಿದರೆ, ಷರೀಯತ್ ಎಂಬುದು ಕೇವಲ ಒಂದಿಷ್ಟು ನಿಯಮಗಳ ಗುಚ್ಛವೇ ಹೊರತು ಹೆಚ್ಚೇನಲ್ಲ; ಅದು ಮುಸ್ಲಿಮ್ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮೌಲ್ಯವ್ಯವಸ್ತೆಯೊಂದರ ಚೌಕಟ್ಟು ಮಾತ್ರ. ಆದರೆ ಈ ನಿಯಮಗುಚ್ಛವೇ ಆಗಲಿ ಮೌಲ್ಯದ ಚೌಕಟ್ಟೇ ಆಗಲಿ ಸ್ಥಿರವಾಗಿ ಉಳಿದುಬಂದದ್ದಲ್ಲ, ಅದು ಬದಲಾಗುವ ಸನ್ನಿವೇಶಗಳಿಗೆ ತಕ್ಕಂತೆ ಚಲನಶೀಲವಾಗಿ ಬದಲಾಗುತ್ತ ಹೋಗುವಂತದ್ದು. ಆ ಕಾರಣದಿಂದಲೇ ಷರೀಯತ್ ಎಂಬುದನ್ನು ಕಾನೂನು ಎಂದು ತಿಳಿಯುವ ಬದಲು ಸಮಸ್ಯೆಗಳನ್ನು ಪರಿಹರಿಸುವ ಒಂದು ವಿಧಾನ ಮಾತ್ರವೆಂದು ನಾವು ತಿಳಿಯಬೇಕು. ಈ ಚೌಕಟ್ಟನ್ನು ಆಧಾರವಾಗಿಟ್ಟುಕೊಂಡು ಧಾರ್ಮಿಕರು ಮತ್ತೆಮತ್ತೆ ಕುರಾನಿನ ವ್ಯಾಕ್ಯಾನಗಳನ್ನು ಮಾಡುತ್ತಹೋಗಬೇಕು; ಪ್ರವಾದಿ ಮೊಹಮದ್‌ರ ಬದುಕನ್ನು ಬದಲಾಗುತ್ತ ಹೋಗುವ ಕಣ್ಣುಗಳಿಂದ ನೋಡುತ್ತ ಹೋಗಬೇಕು. ಪ್ರತಿಯೊಂದು ಯುಗವೂ ಕುರಾನಿಗೆ ತನ್ನದೇ ಆದ ಹೊಸ ವ್ಯಾಕ್ಯಾನವನ್ನು ಕೊಟ್ಟುಕೊಳ್ಳುವುದು ತುಂಬ ಅಗತ್ಯ, ಹಾಗೆಯೇ ಷರೀಯತ್‌ನ್ನೂ ಮತ್ತು ಇಡಿಯ ಮುಸ್ಲಿಮ್ ಧರ್ಮವನ್ನೂ ಪ್ರತಿಯುಗದಲ್ಲೂ ಆಯಾ ಸಂಧರ್ಭಕ್ಕನುಸಾರವಾಗಿ ಮರುಚಿಂತನೆಗೆ ಒಳಪಡಿಸುವುದು ಅನಿವಾರ್ಯ. ಇಸ್ಲಾಮಿನಲ್ಲಿ ಯಾವತ್ತೂ ಬದಲಾಗದೇ ಉಳಿಯುವ ಒಂದೇ ಒಂದು ಸಂಗತಿಯೆಂದರೆ ಅದು ಕುರಾನಿನ ಪಠ್ಯಮಾತ್ರ; ಅದು ಯಾವತ್ತೂ ಬದಲಾಗುತ್ತ ಹೋಗುವ ಅದರ ವ್ಯಾಕ್ಯಾನಗಳಿಗೆ ಒಂದು ಭಿತ್ತಿಯಾಗಿ ನಿಲ್ಲುವಂಥದು.
*
*
*
ಇಸ್ಲಾಮ್ ಎಂಬುದು ನಿಜವಾಗಿ ಒಂದು ಧರ್ಮವೇ ಅಲ್ಲ; ಅದು ಹಲವು ದೃಷ್ಟಿಗಳನ್ನು ಸಂಶ್ಲೇಷಿಸಿಕೊಂಡ ಒಂದು ಲೋಕ ಗ್ರಹಿಕೆ. ಅರ್ಥಾತ್ ಇಸ್ಲಾಮ್ ಎಂಬುದು-ವಾಸ್ತವದ ಎಲ್ಲ ಮಗ್ಗುಲುಗಳನ್ನೂ ಸಮಾಹಿತಗೊಳಿಸಿಕೊಂಡು ಮನುಷ್ಯನ ಬದುಕಿನ ಎಲ್ಲ ಮಾರ್ಗಗಳ ಬಗ್ಗೆಯೂ ಒಟ್ಟಾಗಿ ಒಂದು ನೈತಿಕ ನೊಟವನ್ನು ಒದಗಿಸುವಂಥ ಗ್ರಹಿಕೆ. ಮನುಷ್ಯಕುಲ ಎದುರಿಸುವ ಎಲ್ಲ ಸಮಸ್ಯೆಗಳಿಗೂ ಸಿದ್ಧವಾದ ಉತ್ತರಗಳು ಇಸ್ಲಾಮಿನಲ್ಲಿಲ್ಲ; ಆದರೆ ಅಂಥ ಉತ್ತರಗಳನ್ನು ಆವಿಷ್ಕರಿಸಲಿಕ್ಕೆ ಸಾಧ್ಯವಾಗುವಂತೆ ಅದು ಮುಸ್ಲಿಮರಿಗೆ ಒಂದು ನೈತಿಕ-ನ್ಯಾಯಬದ್ಧ ಚೌಕಟ್ಟನ್ನು ನಿರ್ಮಿಸಿಕೊಟ್ಟಿದೆ. ಹಾಗೆ ತಿಳಿಯದೇ ನಾವು ಷರೀಯತ್‌ನ್ನೇ ದೈವಿಕವೆಂದೂ ಎಲ್ಲ ಕಾನೂನುಗಳೂ ಅದರಲ್ಲೇ ಅಡಕವಗಿವೆಯೆಂದೂ ಭಾವಿಸಿಬಿಟ್ಟರೆ, ಆಗ ಇಸ್ಲಾಮೆಂಬುದು ಕೇವಲ ಸರ್ವಾಧಿಕಾರಿ ಸಿದ್ಧಾಂತವಾಗಿಬಿಡುತ್ತದೆ. ಇವತ್ತಿನ ಹಲವಾರು ಇಸ್ಲಾಮಿ ಚಳುವಳಿಗಳು ಮಾಡುತ್ತಿರುವುದು ಇದನ್ನೇ- ಪಾಕಿಸ್ತನ ಮತ್ತು ಭಾರತದ ’ಜಮಾತ್-ಏ-ಇಸ್ಲಾಮಿ’ ಹಾಗೂ ಮುಸ್ಲಿಮ್ ಬ್ರದರ್‌ಹುಡ್ ಮೊದಲಾದ ಸಂಘಟನೆಗಳು ಇದನ್ನೇ ಮಾಡತೊಡಗಿವೆ. ಮತ್ತು ಆ ಮೂಲಕ ಇಸ್ಲಾಮನ್ನು ಒಂದು ಸರ್ವಾಧಿಕಾರಿ ಸಿದ್ಧಾಂತವಾಗಿ ಅಪಾರ್ಥಗೊಳಿಸಿವೆ.

ಈಗ ನಾನು ಈ ಹಿಂದೆ ಪ್ರಸ್ತಾಪಿಸಿದ ಮೂರನೆಯ ಗಂಡಾಂತರದ ವಿಷಯಕ್ಕೆ ಬರುತ್ತೇನೆ. ಮೇಲೆ ಹೇಳಿದ ಸರ್ವಾಧಿಕಾರಿ ಸಿದ್ಧಾಂತವನ್ನು ಒಂದು ರಾಷ್ಟ್ರಪ್ರಭುತ್ವದ ಸನ್ನಿವೇಶದಲ್ಲಿ ಇಟ್ಟುಬಿಡಿ, ಮತ್ತು ಕೇಂದ್ರದಲ್ಲಿ ದೈವಿಕ ಆದೇಶವಾಗಿರುವ ಷರೀಯತ್‌ನ್ನು ಕೂರಿಸಿಬಿಡಿ, ಆಗ ನಿಮಗೆ ಇಸ್ಲಾಮಿಕ್ ಪ್ರಭುತ್ವ ಸಿಕ್ಕಿಬಿಡುತ್ತದೆ. ಇವತ್ತಿನ ಎಲ್ಲ ಇಸ್ಲಾಮಿಕ್ ಪ್ರಭುತ್ವಗಳೂ- ಇರಾನ್, ಸೌದಿ ಅರೇಬಿಯಾ ಮತ್ತು ಸುಡಾನಿನಿಂದ ಮೊದಲುಗೊಂಡು ಆ ಮಾರ್ಗವನ್ನು ಹಿಡಿಯಲು ಆಶಿಸುತ್ತಿರುವ ಪಾಕಿಸ್ತಾನದವರೆಗೆ ಎಲ್ಲ ಪ್ರಭುತ್ವಗಳೂ-ಇಸ್ಲಾಮನ್ನು ಇಂಥ ಮೂರ್ಖ ಸರಳೀಕರಣಕ್ಕೆ ತಂದಿಟ್ಟಿವೆ. ಆದರೆ ಹೀಗೆ ಇಸ್ಲಾಮ್ ಒಂದು ರಾಜಕೀಯ ಸಿಧಾಂತವಾಗುತ್ತಿದಂತೆಯೇ ಅದು ಸ್ಥಾಪಿತ ಹಿತಾಸಕ್ತಿಯ ಒಂದು ಗುಂಪಿನ ಯೊಜನೆಗಳ ಸಾಧನವೂ ಆಗಿಬಿಡುತ್ತದೆ. ಮತ್ತು ಆಗ ಅದು ತನ್ನ ಮಾನವೀಯತೆಯನ್ನು ಕಳೆದುಕೊಂಡು ಒಂದು ರಣರಂಗವಾಗಿ ಮಾರ್ಪಡುತ್ತದೆ-ಆ ರಣರಂಗದಲ್ಲಿ ನೀತಿ-ತರ್ಕ- ನ್ಯಾಯಗಳೆಲ್ಲವೂ ಭಾವನೆಯ ಬಲಿಪೀಠದಲ್ಲಿ ಆಹುತಿಯಾಗುತ್ತವೆ.

ಅಲ್ಲದೆ, ಸರ್ವಾಧಿಕಾರಿ ರಾಜಕೀಯ ಸಿಧಾಂತದಿಂದ ಸಂಪೂರ್ಣ ಸರ್ವಾಧಿಕಾರಿ ವ್ಯವಸ್ಥೆಯ ನಡುವಿನ ಅಂತರ ಒಂದೇ ಮೆಟ್ಟಿಲು ಮಾತ್ರ. ಅಂಥ ವ್ಯವಸ್ಥೆಯಲ್ಲಿ ಮನುಷ್ಯಬದುಕಿನ ಎಲ್ಲ ಸನ್ನಿವೇಶಗಳೂ ಪ್ರಭುತ್ವದ ಅಧೀನಕ್ಕೆ ಒಳಗಾಗುತ್ತವೆ ಇಂಥ ಪ್ರಭುತ್ವ ಬೆಂಬಲಿತ ರಾಜಕೀಯ ಸಿದ್ಧಾಂತಗಳಲ್ಲಿ ನ್ಯಾಯನೀತಿಯ ಪ್ರಶ್ನೆಗಳು ಅಪ್ರಸ್ತುತವಾಗುತ್ತವೆ ಮಾತ್ರವಲ್ಲ ಇದರಿಂದಾಗಿ ಇದುವರೆಗಿನ ಎಲ್ಲ ಮುಸ್ಲಿಂ ಇತಿಹಾಸವನ್ನೂ ನಾವು ಇಸ್ಲಾಮಿಗೆ ಹೊಂದದೇ ಇರವಂಥದು ಎಂದು ಕಳಚಿ ಹಾಕಬೇಕಾಗುತ್ತದೆ.

ಅದ್ದರಿಂದಲೆ, ಇಸ್ಲಾಮಿಕ್ ಪ್ರಭುತ್ವಗಳು ಒಂದು ’ಗತಕಾಲದ ಸ್ವರ್ಣಯುಗ’ ವನ್ನು ಹುಡುಕಿಕೊಳ್ಳುತ್ತವೆ ಮತ್ತು ಇಂಥ ಗತಕಾಲವು ವರ್ತಮಾನವನ್ನು ನಿರಾಕರಿಸುವಂಥದೂ ಭವಿಷ್ಯವನ್ನು ಹಾಸ್ಯಸ್ಪದಗೊಳಿಸುವಂಥದು ಆಗಿಬಿಡುತ್ತದೆ. ಕಡೆಗೆ ನಮಗೆ ಉಳಿಯುವುದು ಕೇವಲ ಗೊಂದಲಮಯವಾದ ಪ್ರವಾದಿತನವೊಂದೇ. ಇಂಥ ಸ್ಥಿತಿಯನ್ನು ನಾವು ಈಗಾಗಲೇ ತಾಲೀಬಾನಿನ ಆಡಳಿತದಲ್ಲಿ ಕಂಡಿದ್ದೇವೆ; ಅಲ್ಲಿ ಕ್ರಿಯಾಶೀಲತೆಯಿರುವ ಎಲ್ಲ ರೀತಿಯ ರಾಜಕಾರಣಕ್ಕೂ ಪಕ್ಷವಾತ ತಗುಲಿ ಅರ್ಥಹೀನವಾದ ಕರ್ಮವಿಧಿಗಳೇ ರಾಷ್ಟ್ರದ ಬುನಾದಿಯಾಗುವ ವ್ಯಂಗ್ಯ ಉದ್ಭವಿಸಿದ್ದನ್ನು ನೋಡಿದ್ದೇವೆ.

ಇಸ್ಲಾಮನ್ನು ರಾಷ್ಟ್ರದ ಚೌಕಟ್ಟಿನಲ್ಲಿ ಕೂರಿಸುವ ಇಂಥ ದರ್ಶನದಿಂದಾಗಿಯೇ ಮುಸ್ಲಿಂ ರಾಜಕಾರಣವೆನ್ನುವುದು ಒಂದು ಧಾರ್ಮಿಕ- ಆಧ್ಯಾತ್ಮಿಕ ಕೆಲಸವೋ ಎಂಬಂತೆ ಕಾಣತೊಡಗುತ್ತದೆ. ಇಂಥ ವಿಚಿತ್ರ ಸ್ಥಿತಿಯಲ್ಲಿ ಯಾವ ಕಾರ್ಯವನ್ನು ಬೇಕಾದರೂ ಇಸ್ಲಾಮಿಯೆಂದು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತದೆ; ರಾಜಕೀಯ ಹುನ್ನಾರಗಳಿಗೆ ಇದು ಒಂದು ನೆಪವಾಗಿ ಪರಿವರ್ತಿತವಾಗುತ್ತದೆ. ಕ್ರಾಂತಿಕಾಲದ ಇರಾನಿನಲ್ಲಿ ನಾವು ನೋಡಿದ್ದು ಇದನ್ನೇ.

ಈ ರೀತಿ, ನಾನು ಈವರೆಗೆ ವಿವರಿಸಿದ ಮೂರು ಆಧ್ಯಾತ್ಮಿಕ ಗಂಡಾಂತರಗಳೇನಿವೆ ಅವೆಲ್ಲವೂ ಇಸ್ಲಾಮಿ ನಂಬಿಕೆಗಳ ಸರಳೀಕರಣದಿಂದ ಉದ್ಭವಿಸಿದಂಥವು ಮತ್ತು ಈಗ ಇಸ್ಲಾಮಿ ಸಮಾಜಗಳಲ್ಲಿ ಸ್ವತಃಸಿದ್ಧವೆಂಬಂತೆ ಕಾಣಿಸಿಕೊಳ್ಳುತ್ತಿರುವಂಥವು. ಇಸ್ಲಾಮಿನೊಳಗೆ ಇಂಥ ಸರಳೀಕರಣ ನಡೆಯತೊಡಗಿದ್ದು ಈಚಿನ ಬೆಳವಣಿಗೆಯೇನೂ ಅಲ್ಲವಾದರೂ ಅದು ಇಂಥ ಅಸಂಗತ ಮಟ್ಟಕ್ಕೆ ತಲುಪಿದ್ದು ಮಾತ್ರ ಈಚಿನ ಕಾಲಗಳಲ್ಲಿ. ಹಾಗಾಗಿ ಇವತ್ತು ಯಾವ ಇಸ್ಲಾಮಿ ಚಿಂತನೆಗಳು ನಮನ್ನು ಹೆಚ್ಚು ಹೆಚ್ಚು ಮಾನವೀಯ ಮೌಲ್ಯಗಳ ಕಡೆಗೆ ಕರೆದೊಯ್ಯಬೇಕಾಗಿತ್ತೋ ಅವೇ ಮೌಲ್ಯಗಳು ನಮನ್ನು ವಿರುದ್ಧ ದಿಕ್ಕಿಗೆ ಸಾಗಿಸುತ್ತಿರುವ ವಿಪರ್ಯಾಸವನ್ನು ನಾವು ಕಾಣತೊಡಗಿದ್ದೇವೆ. ಉದಾಹರಣೆಗೆ, ಕರುಣೆ ಮತ್ತು ಪ್ರೀತಿಯನ್ನಾಧರಿಸಿ ಪ್ರತಿ ಸಂದರ್ಭದಲ್ಲೂ ನ್ಯಾಯವೆಂಬ ಪರಿಕಲ್ಪನೆಯನ್ನು ಹೊಸತಾಗಿಯೇ ಸೃಷ್ಟಿಸಿಕೊಳ್ಳಬೆಕಾದ ಇಸ್ಲಾಮಿನ ಸೂಕ್ಷ್ಮ ಸುಂದರ ಮಾರ್ಗವೇನಿದೆ ಅದು ಇವತ್ತು ಯಾಂತ್ರಿಕ ಸೂತ್ರಗಳಾಗಿ ಗಡ್ಡೆಗಟ್ಟಿದೆ. ಜನರಾದರೋ ತಮಗೆ ಸ್ವತಃ ಯೋಚನೆ ಮಾಡುವ ಯಾವ ಜವಬ್ದಾರಿಯೂ ಇಲ್ಲವೆಂದೂ ಉತ್ತರಿಸಬೇಕಾದ ಎಲ್ಲ ಪ್ರಶ್ನೆಗಳನ್ನೂ ಯಾವತ್ತೋ ಬದುಕಿದ್ದ ಶಾಸ್ತ್ರೀಯ ಉಲೆಮಾಗಳು ಈಗಾಗಲೇ ಉತ್ತರಿಸಿಬಿಟ್ಟಿದ್ದಾರೆಂದೂ ಭಾವಿಸಿ ಒಪ್ಪಿಕೊಳ್ಳತೊಡಗಿದ್ದಾರೆ. ಮತ್ತು ಈ ಎಲ್ಲದನ್ನೂ ಇಸ್ಲಾಮ್ ಎಂಬ ಹಣೆಪಟ್ಟಿಯಲ್ಲಿ ಕೂರಿಸಲಾಗಿದೆಯಾದ್ದರಿಂದ ಇವನ್ನು ಪ್ರಶ್ನಿಸುವುದೂ ಇವುಗಳ ವಿರುದ್ಧ ವಾದಿಸಿವುದೂ ಪಾಪಕ್ಕೆ ಸಮಾನವೆಂದು ಪರಿಗಣಿತವಾಗತೊಡಗಿದೆ.
*
*
*
ಇಸ್ಲಾಮ್‌ನಲ್ಲಿ ಇಂಥ ಸರಳೀಕರಣ ಆರಂಭವಾಗಿದ್ದು ಪಂಡಿತ ಎಂಬರ್ಥವನ್ನು ಸೂಚಿಸುವ ‘ಆಲಿಮ್’ ಎಂಬ ಶಬ್ದದ ಅಪಾರ್ಥದಿಂದಲೇ. ಈ ಆಲಿಮ್ ಅಂದರೆ ಯಾರು? ಈ ಆಲಿಮ್ ಒಬ್ಬ ಅಧಿಕಾರಯುಕ್ತ ವ್ಯಕ್ತಿಯಾದದ್ದು ಹೇಗೆ?- ಎಂಬ ಪ್ರಶ್ನೆಯನ್ನೇ ತೆಗೆದುಕೊಳ್ಳಿ. ಆರಂಭಕಾಲದ ಇಸ್ಲಾಮಿನಲ್ಲಿ ಯಾರು ‘ಇಲ್ಮ್’ ನ್ನು ಪಡೆದಿದ್ದರೋ ಅವರು ‘ಆಲಿಮ್’ ಎನ್ನಿಸಿಕೊಂಡಿದ್ದರು ಮತ್ತು ಆಗ ಇಲ್ಮ್ ಎಂಬುದಕ್ಕೆ ತುಂಬ ವಿಶಾಲಾರ್ಥದಲ್ಲಿ ಜ್ಞಾನವೆಂಬ ಅರ್ಥಪ್ರತೀತಿಯಿತ್ತು. ಹಳೆಯ ವಿದ್ವಾಂಸರುಗಳಾದ ಆಲ್ ಕಿಂಡಿ. ಆಲ್ ಫರಿಬಿ. ಇಬ್ನ್ ಸಿನಾ. ಆಲ್ ಘಜಲಿ ಮತ್ತು ಇಬ್ನ್‌ಕೌಲ್‌ದುನ್ ಅವರೆಲ್ಲರೂ ಕೊಟ್ಟ ಜ್ಞಾನವೆಂಬುದರ ವಿವರಣೆಯಲ್ಲಿ ನಾವು ಈ ಅರ್ಥವನ್ನೇ ಕಾಣಬಹುದಾಗಿದೆ. ಶಾಸ್ತ್ರೀಯ ಇಸ್ಲಾಮಿನಲ್ಲಿ ನಿಜವಾಗಿ, ಜ್ಞಾನವೆಂಬುದರ ವ್ಯಾಖ್ಯಾನ ಮತ್ತು ಅದರ ವರ್ಗೀಕರಣಗಳು ಪ್ರಮುಖ ಬೌದ್ಧಿಕ ಚಟುವಟಿಕೆಗಳಾಗಿದ್ದವು. ಆದ್ದದಿಂದಲೇ ಆಗ ಉಲೆಮಾಗಳೆಂಬುವವರು ಸಮೂಹಕ್ಕೆ ಎಲ್ಲ ಧೀಮಂತರೂ ವಿಜ್ಞಾನಿಗಳೂ ತಾತ್ವಿಕರೂ ಮತ್ತು ಧರ್ಮಶಾಸ್ತ್ರಜ್ಞರೂ ಸೆರಿದವರಾಗಿದ್ದರು. ಆದರೆ, ಅಬ್ಬಾಸಿದ್ ಯುಗದಲ್ಲಿ ’ಇಜ್ತಿಹಾದ್’ ನ ಬಾಗಿಲುಗಳನ್ನು ಮುಚ್ಚಿದಮೇಲೆ ’ಇಲ್ಮ್’ ಎನ್ನುವುದು ಕ್ರಮೇಣ ಧಾರ್ಮಿಕ ಜ್ಞಾನಕ್ಕೆ ಸೀಮಿತವಾಗಿ ಬಳಕೆಯಾಗತೊಡಗಿತು. ಹಾಗೂ ಉಲೆಮಾಗಳು ನಿಧಾನವಾಗಿ ಕೇವಲ ಧರ್ಮಶಾಸ್ತ್ರಜ್ಞರು ಮಾತ್ರವೇ ಆಗಿ ಸೀಮಿತಗೊಳ್ಳತೊಡಗಿದರು.

ಹಾಗೆಯೇ, ‘ಇಜ್ಮಾ’ ಎಂಬ ಪರಿಕಲ್ಪನೆಯೂ ಕೂಡಾ. ಇಸ್ಲಾಮಿನ ಸಾಮುದಾಯಿಕ ಬದುಕಿನ ಕೇಂದ್ರ ಪ್ರತೀಕವಾಗಿದ್ದ ಆ ಶಬ್ದವು ಕ್ರಮೇಣ ಆಯ್ದ ಕೆಲವೇ ಜನರ ಏಕಸ್ವಾಮ್ಯಕ್ಕೆ ಪ್ರತಿನಿಧಿಯಾಗಿಬಿಟ್ಟಿತು. ‘ಇಜ್ಮಾ’ ಎಂಬ ಶಬ್ದಕ್ಕೆ ಜನರ ಒಟ್ಟಭಿಪ್ರಾಯ ಎಂಬರ್ಥ. ಈ ಪರಿಕಲ್ಪನೆಯು ಮೂಲದಲ್ಲಿ, ಆ ಕಾಲದ ಮುಸ್ಲಿಂ ಸಮುದಾಯದ ಮೊದಲ ನಾಯಕರೂ ಆಗಿದ್ದ ಪ್ರವಾದಿ ಮೊಹಮೊದ್‌ರ ಕಾಲದ್ದು. ಆಗ ಪ್ರವಾದಿಮೊಹಮೊದ್‌ರು ಯಾವುದೇ ನಿರ್ಧಾರ ಕೈಗೊಳ್ಳುವ ಸಮಯದಲ್ಲಿ ಆಗಿನ್ನೂ ಸಂಖ್ಯೆಯಲ್ಲಿ ಸೀಮಿತವಾಗಿದ್ದ ಇಡೀ ಮುಸ್ಲಿಂ ಸಮುದಾಯವನ್ನು ಮಸೀದಿಗೆ ಕರೆದು ಅವರ ಅಭಿಪ್ರಾಯ ಪಡೆಯುತ್ತಿದ್ದರು. ಅಲ್ಲಿ ಚರ್ಚೆ ನಡೆಯುತ್ತಿತ್ತು; ಪರ-ವಿರೋಧಭಿಪ್ರಾಯಗಳು ಮಂಡಿತವಾಗುತ್ತಿದ್ದವು; ಅಂತಿಮವಾಗಿ ಇಡಿಯ ಸಮಾಜವು ಒಂದು ಸಮಾನಾಭಿಪ್ರಾಯಕ್ಕೆ ತಲುಪುತ್ತಿತ್ತು.

ಆರಂಭಕಾಲದ ಇಸ್ಲಾಮಿನ ಸಾಮುದಾಯಿಕ ಜೀವನದಲ್ಲಿ, ಹೀಗೆ, ಒಂದು ಪ್ರಜಾಸತ್ತಾತ್ಮಕ ಕ್ರಮ ಅಡಕವಾಗಿತ್ತು ಆದರೆ ಕಾಲಕ್ರಮೇಣ ಧರ್ಮಗುರುಗಳು ಮತ್ತು ಪಂಡಿತರು ಜನವರ್ಗವನ್ನು ಈ ಪ್ರಕ್ರಿಯೆಯಿಂದ ತೆಗೆದುಹಾಕಿದ್ದರಿಂದ ಈ ಶಬ್ದಕ್ಕೆ ‘ಧರ್ಮಪಂಡಿತರ ಸಮಾನಾಭಿಪ್ರಾಯ’ವೆಂಬ ಅರ್ಥ‌ಉತ್ಪನ್ನವಾಯಿತು. ಈ ಕಾರಣದಿಂದಲೇ ಇವತ್ತು ಮುಸ್ಲಿಮ್ ಜಗತ್ತಿನಲ್ಲಿ ಸರ್ವಾಧಿಕಾರ, ಧರ್ಮಾಧಿಕಾರ ಮತ್ತು ಏಕಾಧಿಪತ್ಯಗಳೆಲ್ಲ ಪ್ರತಿಷ್ಠೆಗೆ ಅರ್ಹವಾಗಿಬಿಟ್ಟಿರುವುದು ಅಶ್ಚರ್ಯದ ಸಂಗತಿಯಲ್ಲ. ಇವತ್ತು ಇಸ್ಲಾಮಿನ ಎಲ್ಲ ಅರ್ಥವಿವರಣೆಗಳ ಬಗ್ಗೆಯೂ ಏಕಸ್ವಾಮ್ಯವನ್ನು ಪಡೆದಿರುವ ಅಧಿಕೃತ ಧಾರ್ಮಿಕ ಆವರಣವೇನಿದೆ ಅದನ್ನು ನೋಡಿಯೇ ಇವತ್ತಿನ ಇಸ್ಲಾಮಿ ರಾಜಕೀಯ ವಲಯಗಳು ತಮ್ಮ ಪ್ರತಿಷ್ಠೆ- ರೂಢಿಗಳನ್ನು ರೂಪಿಸಿಕೊಂಡಿವೆ. ಉಲೆಮಾಗಳೆಂಬ ಹೆಸರಿನಲ್ಲಿ ಇವತ್ತು ಸಂದಿಗ್ಧಾರ್ಥದಲ್ಲಿ ಮಾತಾಡುವ ಮುಲ್ಲಾಗಳು ಸೇರಿಕೊಂಡಿದ್ದಾರೆ; ಅವರೇ ಇವತ್ತು ಮುಸ್ಲಿಂ ಸಮಾಜವನ್ನು ತಾತ್ವಿಕ ಸರಳೀಕರಣ ಮತ್ತು ಧರ್ಮಾಂಧತೆಗಳ ಕಡೆಗೆ ತಳ್ಳತೊಡಗಿದ್ದಾರೆ.

ಇಂಥದೇ ಅರ್ಥಪಲ್ಲಟದ ಗತಿ ಇನ್ನೂ ಹಲವಾರು ಪರಿಕಲ್ಪನೆಗಳಿಗೂ ಒದಗಿಬಂದಿದೆ. ಜಾಗತಿಕ ಮಟ್ಟದಲ್ಲಿ ಮುಸಲ್ಮಾನರ ಅಧ್ಯಾತ್ಮಿಕ ಸಮುದಾಯವನ್ನು ಸೂಚಿಸುವ “ಉಮ್ಮಾ’ ಎಂಬ ಪರಿಕಲ್ಪನೆಯನ್ನು ನೋಡಿ. ಈಗ ಈ ಪರಿಭಾಷೆಯನ್ನು ಒಂದು ರಾಷ್ಟ್ರಪ್ರಭುತ್ವವೆಂಬುದಕ್ಕೆ ಸಂವಾದಿಯಾಗಿ ಉಪಯೋಗಿಸಲಾಗುತ್ತಿದೆ. ‘ನನ್ನ ದೇಶದ ನಿಲುವು ತಪ್ಪೇ ಸರಿಯೇ’ ಎಂದು ಚರ್ಚಿಸಲಾಗುವಂತೆಯೇ ಇವತ್ತು ನಮ್ಮ ಉಮ್ಮಾದ ನಿಲುವು ಸರಿಯೇ ತಪ್ಪೇ ಎಂದೂ ಮಾತಾಡಲಾಗುತ್ತಿದೆ. ಇಂಥ ‘ಉಮ್ಮಾ ಪ್ರಜ್ಞೆ’ ಉಮ್ಮಾ ಐಕಮತ್ಯ’ ಗಳೆಂಬ ಕಲ್ಪನೆಗಳನ್ನಿಟ್ಟುಕೊಂಡೇ ಇವತ್ತು ಸದ್ದಾಂಹುಸೇನನಂಥ ನಿರಂಕುಶಪ್ರಭುವನ್ನು ಸಮರ್ಥಿಸಲಾಗಿತ್ತದೆ.

ಹಾಗೆಯೇ ‘ಜೆಹಾದ್’ ಎಂಬ ಶಬ್ದವು ಇವತ್ತು ತೀರ ಸರಳೀಕರಣಗೊಂಡು ಧರ್ಮಯುದ್ಧವೆಂಬ ಏಕೈಕ ಅರ್ಥಕ್ಕೆ ವಾಹಕವಾಗಿಬಿಟ್ಟಿದೆ. ಈ ಅನುವಾದ ಅತ್ಯಂತ ವಿಕೃತವಾದದ್ದು, ಕಾರಣ, ಇಂಥ ಅನುವಾದದಲ್ಲಿ ಈ ಶಬ್ದಕ್ಕೆ ಬೌದ್ಧಿಕ ಮತ್ತು ಸಾಮಾಜಿಕ ಅರ್ಥವ್ಯಾಪ್ತಿಯೂ ಇರುವುದನ್ನು ಮರೆಮಾಚಲಾಗಿದೆ. ಅದಕ್ಕಾಗಿಯೇ ಇವತ್ತು ಜೆಹಾದ್ ಅಂದರೆ, ಭಯೋತ್ಪಾದನೆಯು ಸೇರಿದಂತೆ ಏನಕೇನಪ್ರಕಾರದಲ್ಲಿ ನಡೆಸುವ ಯಾವುದೇ ಯುದ್ಧವೂ ಆಗಬಹುದಾಗಿದೆ. ಹಾಗಾಗಿ ಇವತ್ತು ಯಾರ ಮೇಲೆ ಯಾರು ಬೇಕಿದ್ದರೂ ಜೆಹಾದ್‌ನ್ನು ಸಾರಬಲ್ಲವರಾಗಿದ್ದಾರೆ; ಅದಕ್ಕೆ ಯಾವ ನೈತಿಕ-ತಾರ್ಕಿಕ ನಿರ್ಬಂಧವೂ ಇಲ್ಲದಂತಾಗಿದೆ. ಜೆಹಾದ್ ಪಡೆದಿರುವ ಈ ಅರ್ಥಕ್ಕೂ ಅದರ ಮೂಲಾರ್ಥಕ್ಕೂ ಏನೇನು ಸಂಬಂಧವಿಲ್ಲ. ಜೆಹಾದ್ ಪಡೆದಿರುವ ಈ ಅರ್ಥಕ್ಕೂ ಹಲವು ಧ್ವನ್ಯರ್ಥಗಳಿವೆ-ಅದು ಒಂದು ವೈಯಕ್ತಿಕ ಹೋರಾಟ, ಬೌದ್ಧಿಕ ಪ್ರಯತ್ನ ಮತ್ತು ಸಾಮಾಜಿಕ ಸಂಘಟನೆ ಎಲ್ಲವೂ ಹೌದು. ಆದರೆ ಈ ಅರ್ಥಗಳೆಲ್ಲ ಈಗ ಅಳಿಸಿಹೋಗಿವೆ. ಹಾಗೆಯೇ ಇಸ್ಲಾಮಿಕ್ ಕಟ್ಟಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯೆಂಬ ಅರ್ಥವನ್ನು ಸೂಚಿಸುವ ಒಂದು ಪ್ರಮುಖ ಕಲ್ಪನೆಯಾದ ‘ಇಸ್ತಿಸ್ಲಾಹ್’ ಎಂಬುದು ಇವತ್ತು ಇಸ್ಲಾಮಿಕ್ ಪ್ರಜ್ಞೆಯಿಂದಲೇ ಕಾಣೆಯಾಗಿದೆ. ಮತ್ತು, ನಾನು ಮೊದಲೇ ಹೇಳಿದ ಹಾಗೆ, ‘ಇಜ್ತಿಹಾದ್’ ಅನ್ನುವುದು ಈಗ ಕೇವಲ ಧಾರ್ಮಿಕ ಹಂಬಲವಷ್ಟೇ ಆಗಿ ನಿರ್ವಿಣ್ಣಗೊಂಡಿದೆ.

ಇನ್ನು, ಈ ಎಲ್ಲ ತಾತ್ವಿಕ ಅರ್ಥಾಂತರ ಮತ್ತು ಅಪಮೌಲ್ಯಗಳ ಹಿಂಸೆಗಿಂತ ಹೆಚ್ಚು ಗಂಭೀರವಾದದ್ದು ಸ್ವತಃ ಕುರಾನ್ ಮತ್ತು ಪ್ರವಾದಿ ಮೊಹಮೊದ್‌ರ ಹೇಳಿಕೆಗಳನ್ನು ಅಪಾರ್ಥಗೊಳಿಸಿರುವ ರೀತಿ. ಮುಸ್ಲಿಂ ವಿದ್ವಾಂಸ ಫಜಲುರ್ ರೆಹಮಾನ್ ಅವರು, ಈಗೀಗ ಕುರಾನಿನ ಸಂದರ್ಭ ವಿಚ್ಛೇದಿತ ವ್ಯಾಖ್ಯಾನಗಳು ಬರಲಾರಂಭಿಸಿವೆಯೆಂದು ಹಿಂದೆ ದೂರಿದ್ದರು.; ಅದೀಗ ನಿತ್ಯ ಸಾಮಾನ್ಯವಾಗಿಬಿಟ್ಟಿದೆ. ಕುರಾನಿನ ಸಂದರ್ಭ ತಪ್ಪಿಸಿ ಉಲ್ಲೇಖಗಳನ್ನು ಮಾಡುವ ಮೂಲಕ ಇವತ್ತು ಯಾವುದೇ ಕೆಲಸವನ್ನೂ ಎಂಥಾ ಕೆಲಸವನ್ನೂ ಸಮರ್ಥಿಸಿಕೊಳ್ಳುವುದು ಸಾಧ್ಯವಾಗಿಬಿಟ್ಟಿದೆ.

ಉದಾಹರಣೆಗೆ, ಸೆಪ್ಟಂಬರ್ ೧೧ರ ಘಟನೆಯ ಬಳಿಕ ಹಲವಾರು ತಾಲೀಬಾನ್ ಬೆಂಬಲಿಗರು ಮತ್ತು ಬ್ರಿಟನ್ನಿನ ಅವರ ಕೆಲವು ಸಹಾನುಭೂತಿಗಾರರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳಲಿಕ್ಕೆ ಕುರಾನಿನ ಈ ಉಕ್ತಿಯನ್ನು ಉಲ್ಲೇಖಿಸಿದರು-‘ನಾವು ಧರ್ಮವನ್ನು ನಂಬದಿರುವ ಜನಗಳ ಹೃದಯದಲ್ಲಿ ಭಯವನ್ನು ಹುಟ್ಟಿಸುತ್ತೇವೆ. ಅವರು ಧರ್ಮದ ಸಮ್ಮತಿಯಿಲ್ಲದ ಬೇರೆ ದೇವರುಗಳನ್ನು ನಂಬುವಂಥವರಾದ್ದರಿಂದ ಅವರ ಮನೆಗಳು ನರಕಗಳಾಗುವಂತೆ ನಾವು ಮಾಡುತ್ತೇವೆ’(೩:೧೪೯). ಆದರೆ, ಈ ಉಕ್ತಿಗೆ ಆ ತಾಲೀಬಾನ್ ಬೆಂಬಲಿಗರು ಆರೋಪಿಸಿದ ಅರ್ಥಕ್ಕೂ ಕುರಾನಿನ ನಿಜವಾದ ಅರ್ಥಸಂದರ್ಭಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಕುರಾನ್‌ನಲ್ಲಿ ಈ ನಿರ್ದಿಷ್ಟ ಉಕ್ತಿಯು ಪ್ರವಾದಿ ಮೊಹಮೊದ್‌ರನ್ನು ಉದ್ದೇಶಿಸಿಯೇ ಹೇಳಲ್ಪಟ್ಟಿದೆ. ಸಂದರ್ಭ ಹೀಗೆ-ಆಗ ನಡೆಯುತ್ತಿದ್ದ ಉಹಾದ್‌ನ ಕದನದಲ್ಲಿ ಪ್ರವಾದಿಗಳ ಪರವಾಗಿದ್ದ ಸೈನ್ಯವು ಸಣ್ಣದಾಗಿತ್ತು, ಯುದ್ಧಸಜ್ಜಿತವೂ ಆಗಿರಲಿಲ್ಲ. ಅದು ಆಗ ತನಗಿಂತ ದೊಡ್ಡದಾದ ಮತ್ತು ಸಜ್ಜಿತವಾದ ಸೈನ್ಯವನ್ನು ಎದುರಿಸಬೇಕಾಗಿತ್ತು. ಆದ್ದರಿಂದಲೇ ಅವರು ಆ ಯುದ್ಧದ ಪರಿಣಾಮದ ಬಗ್ಗೆ ಚಿಂತಿತರಾಗಿದ್ದರು. ಅದಕ್ಕೆ ಪ್ರತಿಯಾಗಿ ಕುರಾನ್ ಪ್ರವಾದಿಯವರಿಗೆ ಸಮಾಧಾನ ಹೇಳಲಿಕ್ಕೆ ಈ ಉಕ್ತಿಯನ್ನು ಬಳಸುತ್ತದೆ ಮತ್ತು ಆ ಮೂಲಕ ಶಸ್ತ್ರಸಜ್ಜಿತವಲ್ಲದ ಸೈನ್ಯ ಕೂಡಾ ತನ್ನ ನಂಬಿಕೆಯ ಮೂಲಕ ಎದುರಾಳಿಗಳನ್ನು ಸೋಲಿಸುವುದಾಗಿ ಆಶ್ವಾಸನೆ ಕೊಡುತ್ತದೆ. ಇದನ್ನು ಆ ಕಾಲದಲ್ಲಿ ಸಂಭವಿಸುತ್ತಿದ್ದ ನಿರ್ದಿಷ್ಟ ವಿದ್ಯಮಾನಗಳ ಸಂದರ್ಭದಲ್ಲಿಟ್ಟು ನೋಡಬೇಕೇ ಹೊರತು ಈ ಮಾತನ್ನು ಎಲ್ಲ ಮುಸಲ್ಮಾನರಿಗೂ ಸಲ್ಲುವಂತೆ ಕೊಟ್ಟ ಸಾರ್ವತ್ರಿಕ ಕರೆ ಎಂಬಂತೆ ಗ್ರಹಿಸಲಾಗದು.

ಅದೇ ರೀತಿ ಈಗೀಗ ತೀರಾ ತೀವ್ರಗಾಮಿ ನಡೆವಳಿಕೆಗಳನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ ಕೂಡಾ ‘ಹಾದಿತ್’ ಗಳನ್ನು ಎತ್ತಿ ಹೇಳುವ ರೂಢಿ ಆರಂಭವಾಗಿದೆ. ಇಷ್ಟರ ಮೇಲೆ, ಸ್ವತಃ ಪ್ರವಾದಿಗಳ ರೂಪ ಚಹರೆಗಳನ್ನೂ ಅವರ ಬಟ್ಟೆ ಗಡ್ಡಗಳನ್ನೂ ಈಗೀಗ ಒಂದು ಅನುಕರಣೆಯ ಪದಾರ್ಥವೆಂಬಂತೆ ಕಾಣಲಾಗುತ್ತಿದೆ. ಅದಕ್ಕಾಗಿಯೇ ಈಗ ಇಬ್ಬ ‘ಒಳ್ಳೆಯ ಮುಸಲ್ಮಾನ’ ನು ಕೇವಲ ಗಡ್ಡ ಬಿಟ್ಟರಷ್ಟೇ ಸಾಲದು; ಆತನ ಗಡ್ಡದ ಉದ್ದ ಮತ್ತು ಆಕಾರಗಳೂ ಕೂಡ ನಿಯಮಬದ್ಧವಾಗಿರಬೇಕು! ಹೀಗೆ ಪ್ರವಾದಿಗಳನ್ನೂ ಕೂಡಾ ಕೇವಲ ಅವರ ಸಂಜ್ಞೆ ಲಾಂಛನಗಳಿಗೆ ಇಳಿಸಿ ಸರಳೀಕರಿಸುವ ರೂಢಿ ಚಾಲ್ತಿಗೆ ಬಂದಿದೆ. ಆದರೆ, ಅವರ ಇನ್ನಾವುದೇ ಗುಣಗಳು-ಅವರ ನಡವಳಿಕೆಯ ಸಾತ್ವಿಕತೆ, ಅವರ ಕ್ರಿಯೆಗಳ ಹಿಂದೆ ಕಾಣುತ್ತಿದ್ದ ನೈತಿಕ ಪ್ರಜ್ಞೆ, ಅವರ ವಿನಯ ಮತ್ತು ಕರುಣೆ ಮೊದಲಾಗಿ ಅವರು ಪ್ರತಿಪಾದಿಸಿದ ಎಲ್ಲ ಗುಣಗಳ ಸಮೂಹವು ಇವತ್ತು ಅನುಕರಣೀಯವಾಗಿ ಕಾಣದೆ ಕೇವಲ ಮೇಲುಮೇಲಿನ ಬಿಂಬಗಳಿಗೆ ಅವರನ್ನು ಸರಳೀಕರಿಸಲಾಗುತ್ತಿದೆ.

ಇವೆಲ್ಲದರ ಸಂಚಿತ ಪರಿಣಾಮವಾಗಿಯೇ ನಾನು ಮೊದಲು ಹೇಳಿದ ಗಂಡಾಂತರಗಳು ಉದ್ಭವವಾಗಿವೆ. ಇಸ್ಲಾಮಿನ ಪ್ರಸಿದ್ಧ ಸೂತ್ರಗಳ ಈ ವಿಕೃತ ಸರಳೀಕರಣವೇ ಇವತ್ತು ಭಯೋತ್ಪಾದಕ ಹುನ್ನಾರಗಳಿಗೂ ನೈತಿಕ ಅಧಃಪತನಕ್ಕೂ ಕುಮ್ಮಕ್ಕು ಕೊಡತೊಡಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ನಾನು ವಾದಿಸುತ್ತ ಬಂದಿದ್ದೆ-ಇಸ್ಲಾಮ್ ನಾಗರಿಕತೆ ಇವತ್ತು ಛಿದ್ರಛಿದ್ರವಾಗಿ ನಾಶವಾಗಿರುವುದರಿಂದ ನಾವೀಗ ಇದನ್ನು ‘ಒಂದೊಂದೇ ಇಟ್ಟಿಗೆ’ಗಳನ್ನಿಟ್ಟು ಮರುನಿರ್ಮಿಸಬೇಕಾಗಿದೆ-ಎಂಬುದಾಗಿ. ಈಗ ನೋಡಿದರೆ, ಇದನ್ನು ಇಟ್ಟಿಗೆ ಇಟ್ಟಿಗೆಯಾಗಿ ಮಾತ್ರವಲ್ಲ ಇದರ ‘ಒಂದೊಂದು ಚಿಂತನೆ’ಗಳನ್ನೂ ನಾವಿವತ್ತು ಹೊಸಹೊಸತಾಗಿ ಚಿಂತಿಸಿ ಮರುರೂಪಿಸಬೇಕಾದ ಕಾಲ ಬಂದಿರುವಂತೆ ಕಾಣುತ್ತಿದೆ.

ಈ ಕೆಲಸವನ್ನು ನಾವು ತುಂಬ ಸರಳವಾದ ಒಂದು ನೆಲೆಯಿಂದ ಆರಂಭಿಸಬೇಕು. ಮೊತ್ತಮೊದಲಿಗೆ, ಇಡೀ ಜಗತ್ತಿನ ಸತ್ಯವೆಲ್ಲವೂ ಮುಸ್ಲಿಮರ ಏಕಸ್ವಾಮ್ಯದಲ್ಲಿದೆ ಎಂಬ ಯೋಚನೆಯನ್ನು ನಾವೀಗ ಕೈಬಿಡಬೇಕು. ಯಾವುದು ಸರಿ, ಯಾವುದು ಒಳ್ಳೆಯದು, ಯಾವುದು ನ್ಯಾಯ-ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಅಥವಾ ಅಂಥ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಹೊರಡುವ ಬೌದ್ಧಿಕ ಅಭಿಮಾನಿಗಳು ಕೇವಲ ಇಸ್ಲಾಮ್ ಧರ್ಮಕ್ಕೆ ಸೀಮಿತವಾದ ಸಂಗತಿಗಳಲ್ಲ ಎಂಬುದನ್ನು ನಾವಿವತ್ತು ಅರಿಯಬೇಕು. ಮನುಕುಲದ ಉಳಿದ ಸಮುದಾಯಗಳಂತೆಯೇ ನಾವೂ ಕೂಡಾ ನಮ್ಮನಮ್ಮದೇ ಪವಿತ್ರ ನಂಬಿಕೆಗಳನ್ನು ಆಧರಿಸಿಕೊಂಡು, ಅವುಗಳನ್ನು ಬಳಸಿಕೊಂಡು, ಈ ಉತ್ತರಗಳನ್ನು ಹುಡುಕುವ ಸಾಹಸದಲ್ಲಿ ತೊಡಗಿಕೊಳ್ಳಬೇಕು; ಮತ್ತು ಆ ಮೂಲಕವೇ ನಮ್ಮ ಸಮಕಾಲೀನ ಜಗತ್ತನ್ನು ಅರ್ಥೈಸುವ ಮತ್ತು ಬದಲಾಯಿಸುವ ಪ್ರಯತ್ನವನ್ನು ನಡೆಸಬೇಕು.
*
*
*
*
ಇಸ್ಲಾಮಿನ ಇಂಥ ನವೀನ ಮತ್ತು ಸಮಕಾಲೀನ ವ್ಯಾಖ್ಯಾನಕ್ಕೆ ದಾರಿಯೆಂದರೆ-ನಾವೀಗ ಎದುರಿಸುತ್ತಿರುವ ಆಧ್ಯಾತ್ಮಿಕ ಗಂಡಾಂತರಗಳನ್ನು ಎದುರಿಸಿ ನಿಲ್ಲುವುದು ಹಾಗೂ ಸರಳೀಕರಣದಿಂದ ದೂರಸರಿದು ಸಂಶ್ಲೇಷಣೆಯ ಕಡೆಗೆ ನಡೆಯುವುದು. ಹೀಗೆ ಮಾಡಲು ಮೊತ್ತಮೊದಲು ಮುಸ್ಲಿಮರು ವೈಯಕ್ತಿಕವಾಗಿ ಮತ್ತು ಸಮುದಾಯಗಳಾಗಿ ತಮ್ಮ ಕ್ರಿಯಾಶಕ್ತಿಗಳನ್ನು ಮರಳಿ ಸಂಪಾದಿಸಿಕೊಳ್ಳುವುದು ಅಗತ್ಯ, ತಮ್ಮ ಹಕ್ಕು ಮತ್ತು ಧರ್ಮದ ತಿಳಿವಳಿಕೆಯುಳ್ಳವರಾಗಿ ಇಸ್ಲಾಮಿನ ಮೂಲತತ್ವವನ್ನು ವ್ಯಾಖ್ಯಾನಿಸುವ ಕೆಲಸಕ್ಕೆ ಕೈಹಾಕಬೇಕು. ಮತ್ತು ಈಗ ಷರೀಯತ್‌ನ ಹೆಸರಿನಲ್ಲಿ ಚಾಲ್ತಿಯಲ್ಲಿರುವ ನಿಯಮಗಳನ್ನು ಪ್ರಶ್ನಿಸಬೇಕು; ರೂಢಿಯಲ್ಲಿರುವ ಹಲವಾರು ಫಿಖ್‌ಗಳು ಇವತ್ತಿನ ಕಾಲಕ್ಕೆ ತೀರಾ ಅಪ್ರಸ್ತುತವಾಗಿರುವುದನ್ನು ಎತ್ತಿಹೇಳಬೇಕು ಹಾಗೂ ಇಸ್ಲಾಮ್ ಎಂಬುದು ನಿರ್ದಿಷ್ಟ ಭೌಗೋಲಿಕ ಪ್ರದೇಶಗಳೊಳಗೆ ಸೀಮಿತವಾಗಿರುವ ಒಂದು ರಾಷ್ಟ್ರವೆಂಬ ಅಸಂಬದ್ಧ ನಿಲುವನ್ನು ವಿರೋಧಿಸಬೇಕು.

ನಾವು ನಮ್ಮ ನಂಬಿಕೆಯನ್ನು ನಿಜವಾಗಿಯೂ ಗೌರವಿಸುವುದಾದರೆ, ಅದರ ವ್ಯಾಖ್ಯಾನ ಮತ್ತು ನಿರ್ವಹಣೆಯ ಜವಾಬ್ದಾರಿಗಳನ್ನು ಅರೆತಿಳುವಳಿಕೆಯ ನಾಯಕರಿಗಾಗಲೀ ಕೇವಲ ಧರ್ಮಪಂಡಿತರಿಗಾಗಲಿ ವಹಿಸಿಕೊಡದೆ ಅದರಲ್ಲಿ ನಾವೂ ಪಾಲ್ಗೊಳ್ಳಬೇಕು. ಈ ನಾಯಕರು ಮತ್ತು ಪಂಡಿತರಿಗೆ ಸಮಕಾಲೀನ ಜಗತ್ತಿನ ಸಮಸ್ಯೆಗಳ ಪರಿಚಯವಿಲ್ಲ ಮಾತ್ರವಲ್ಲ ಜ್ಞಾನ ಮತ್ತು ಸಾಂಸ್ಕೃತಿಕ ಆಯಾಮಗಳ ಬಗ್ಗೆ ಅವರಲ್ಲಿ ಅಪಾರ ನಿರ್ಲಕ್ಷ್ಯ ತುಂಬಿಕೊಂಡಿದೆ. ಇಸ್ಲಾಮನ್ನು ನಾವು ಬಹುಕಾಲದಿಂದ ವಿಶೇಷಜ್ಞರ ವಲಯಕ್ಕೆ ಬಿಟ್ಟುಕೊಟ್ಟಿದ್ದೇವೆ; ಮತ್ತು ಈಗ ಆ ವಿಶೇಷಜ್ಞರು ೧೧ನೆಯ ಶತಮಾನವನ್ನು ತಿಳಿದುಕೊಂಡಿರುವಷ್ಟು ನಾವಿವತ್ತು ಬದುಕುತ್ತಿರುವ ಕಾಲಮಾನವನ್ನು ಅರಿತುಕೊಂಡವರಾಗಿಲ್ಲ. ಈ ವಿಶೇಷಜ್ಞರು ‘ಇಜ್ತಿಹಾದ್’ ಎಂಬ ಘನಾವಾದ ಪರಿಕಲ್ಪನೆಯನ್ನು ಹೂಲಿ ಅದನ್ನು ದೂರ ಇತಿಹಾಸದ ಒಂದು ನೆನಪಾಗಿಸುವುದಕ್ಕೆ ನಾವೀಗ ಅವಕಾಶ ಕೊಡಬಾರದು.

ಆದ್ದರಿಂದಲೇ ಇವತ್ತು ಪ್ರಪಂಚದಾದ್ಯಂತ ಇರುವ ಎಲ್ಲ ಸಾಮಾನ್ಯ ಮುಸಲ್ಮಾನರೂ ಇಸ್ಲಾಮಿನ ಪ್ರಸ್ತುತ ಸ್ಥಿತಿಯ ಬಗ್ಗೆ ತಮಗಿರುವ ಕಳಕಳಿಯನ್ನು, ಪ್ರಶ್ನೆಗಳನ್ನು, ತಮ್ಮೊಳಗೆ ನಡೆಯುತ್ತಿರುವ ನೈತಿಕ ಒಳತೋಟಿಗಳನ್ನು ಕ್ರಿಯಾಶೀಲವಾಗಿ ಅಭಿವ್ಯಕ್ತಿಸುವ ಮೂಲಕ ಈ ಧರ್ಮದ ತತ್ವಗಳನ್ನು ಪುನರಾವಿಷ್ಕರಿಸಿ ಅದನ್ನು ವಿಶಾಲವಾದ ಭಿತ್ತಿಯಲ್ಲಿ ಮರುಸ್ಥಾಪಿಸುವ ಅಗತ್ಯ ತುರ್ತಾಗಿ ಉದ್ಭವಿಸಿದೆ. ಇಂಥ ಮರುಸ್ಥಾಪನೆಯಲ್ಲಿ-ಇಜ್ಮಾ ಎಂಬುದು ಎಲ್ಲ ನಾಗರಿಕರ ಸಮಾನಾಭಿಪ್ರಾಯವನ್ನು ಒಳಗೊಳ್ಳುವಂತಾಗಬೇಕು; ಅದು ಜನಗಳನ್ನು ಒಳಗೊಳ್ಳುವುದಕ್ಕೆ ಮತ್ತು ಜನರಿಗೆ ಜವಾಬ್ದಾರಿಯುತವಾದ ಆಳ್ವಿಕೆಯನ್ನೊದಗಿಸಲಿಕ್ಕೆ ಪೂರಕವಾಗಿರುವಂತಾಗಬೇಕು. ಜಿಹಾದ್ ಎಂಬುದನ್ನು ಅದರ ಎಲ್ಲ ಆಧ್ಯಾತ್ಮಿಕ ಅರ್ಥಗಳೊಂದಿಗೆ ಅರ್ಥೈಸಿಕೊಳ್ಳುವಂತಾಗಬೇಕು; ಅದು ಎಲ್ಲ ಸ್ಥಳಗಳಲ್ಲಿರುವ ಎಲ್ಲ ಜನರೂ ತಮ್ಮ ನಿತ್ಯ ಬದುಕಿನ ಶಾಂತಿ ಮತ್ತು ನ್ಯಾಯಕ್ಕಾಗಿ ನಡೆಸುವ ಹೋರಾಟಗಳಿಗೆ ಅನ್ವರ್ಥವಾಗಬೇಕು. ಉಮ್ಮಾ ಎಂಬ ಪರಿಕಲ್ಪನೆಯನ್ನು ಈಗಿರುವ ತೀರಾ ಸೀಮಿತ ಅರ್ಥದಿಂದ ಬಿಡುಗಡೆಗೊಳಿಸಿ ಅದನ್ನು ವಿಶಾಲಜಗತ್ತಿನ ಸಂದರ್ಭದಲ್ಲಿ ಪುನರ್ ನಿರೂಪಿಸಲು ಸಾಧ್ಯವಾಗಬೇಕು.

ಉಮ್ಮಾ ಎನ್ನುವುದು ‘ತಾವು ಮುಸ್ಲಿಮರೆಂದು ಹೇಳಿಕೊಳ್ಳುವ ಎಲ್ಲ ಜನಗಳ ಸಮುದಾಯ’ ಮಾತ್ರವೇ ಅಲ್ಲ-ಎಂದು ಅನ್ವರ್ ಇಬ್ರಾಹಿಮ್ ಅವರು ವಾದಿಸಿದ್ದಾರೆ. ಬದಲು, ಅವರ ಅಭಿಪ್ರಾಯದಲ್ಲಿ ಅದು-‘ಮುಸ್ಲಿಮರು ತಮ್ಮ ಧರ್ಮದ ಜನರ ನಡುವೆ, ಬೇರೆ ಧರ್ಮ-ಸಮುದಾಯಗಳ ಜನರೊಂದಿಗೆ ಮತ್ತು ಒಟ್ಟೂ ಭೌತಿಕ ಜಗತ್ತಿನೊಂದಿಗೆ ಕೂಡಿ ಹೇಗೆ ಒಂದು ಸಮುದಾಯವಾಗಿ ರೂಪುಗೊಳ್ಳಬೇಕೆಂಬುದರ ಕುರಿತು ಇರುವಂಥ ಒಂದು ನೈತಿಕ ನಿಲುವು’. ಅರ್ಥಾತ್ ಈ ವ್ಯಾಖ್ಯೆಯ ‘ಉಮ್ಮಾ’ದಲ್ಲಿ ಮುಸಲ್ಮಾನರಲ್ಲದವರೂ ಕೂಡಿಕೊಳ್ಳುತ್ತಾರೆ; ನ್ಯಾಯಕ್ಕಾಗಿ ಹೋರಾಡುವ ಎಲ್ಲ ದಮನಿತ ಸಮುದಾಯಗಳೂ ಈ ಸಮೂಹಕ್ಕೆ ಸೇರಿಕೊಳ್ಳುತ್ತಾರೆ. ಇಂಥ ಸಂಶ್ಲೇಷಣೆಯ ಕಡೆಗೆ ನಡೆಯುವ ಹೋರಾಟವೇ ಇವತ್ತು ನಿಜವಾಗಿ ಇಸ್ಲಾಮಿನ ನಿಜವಾದ ಅರ್ಥವನ್ನು ಸಮೀಪಿಸುವ ಚಳುವಳಿಯಾಗಬಲ್ಲದು. ಯಾಕೆಂದರೆ ಇಸ್ಲಾಮ್ ಎನ್ನುವುದು ನಿಜವಾದ ಅರ್ಥದಲ್ಲಿ-ಜಗತ್ತನ್ನು ನೋಡುವ ಮತ್ತು ಸಂಘಟಿಸಿಕೊಳ್ಳುವ ನೈತಿಕವಾದ ಒಂದು ದೃಷ್ಟಿ; ಶಾಂತಿಯುತವಾಗಿ ಬದುಕುವ ಒಂದು ನಾಗರಿಕ ಸಂಸ್ಕೃತಿ;ಎಲ್ಲರನ್ನೂ ಒಳಗೊಳ್ಳುವ ಒಂದು ಆಡಳಿತ ವಿಧಾನ ಮತ್ತು ತಿಳಿವು-ಆಸ್ತಿತ್ವ-ಕ್ರಿಯೆಗಳ ಬಗ್ಗೆ ಏಕೀಕೃತವಾದ ನಿಲುವುಗಳನ್ನಿಟ್ಟುಕೊಂಡಿರುವ ಒಂದು ಸಮಗ್ರ ಜೀವನ ಪದ್ಧತಿ.

ಸೆಪ್ಟಂಬರ್ ೧೧ರ ಘಟನೆಯು ಪರೋಕ್ಷವಾಗಿಯಾದರೂ ಇಂಥ ಒಂದು ಉತ್ತಮ ಅಪೇಕ್ಷೆಗಳನ್ನು ಉತ್ತೇಜಿಸಿ ಉದ್ದೀಪಿಸುವಂತಾದರೆ, ಮತ್ತು ಆ ಮೂಲಕ ಇಸ್ಲಾಮಿನ ಮೂಲತತ್ವಗಳ ಹುಡುಕಾಟಕ್ಕೆ ಪ್ರೇರಕವಾಗುವಂತಾದರೆ, ಆಗ ನಿಜವಾಗಿಯೂ ಅಂದು ಉರುಳಿದ ಎರಡು ಗೋಪುರಗಳ ಸುಟ್ಟ ಬೂದಿಯಿಂದ ಹೊಸತೊಂದು ಫೀನಿಕ್ಸ್ ಪಕ್ಷಿ ಮೇಲೆದ್ದು ಬಂದಂತಾದೀತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.