ನನಗೆ ಗುರು ಇಲ್ಲ

ಈತ ನನ್ನೂರಿನ ಬಾಂಧವ. ಒಂದೇ ಒಂದು ಮುಖ್ಯ ರಸ್ತೆ ಇರುವ ಆ ಊರಿಗೆ ಎರಡೋ ಮೂರೋ ಸಣ್ಣ ರಸ್ತೆಗಳು. ದೊಡ್ಡ ಬೀದಿ ಅಂತನ್ನಿಸಿಕೊಂಡಿರುವ ರಸ್ತೆಯಲ್ಲಿ ಬರೀ ಲಿಂಗಾಯಿತರ ಪಾಳಿ. ಊರಿಗೆ ಒಂದು ದೇವಸ್ಥಾನ ಅಂತ ಇರಲೇಬೇಕು ಅಂತ ಸ್ಠಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಅಂತ ಸಾರಿದವನನ್ನೂ ಸಹ ಮೂರ್ತೀಕರಿಸಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಸಾಂಗವಾಗಿ ಪೂಜೆ ಪುನಸ್ಕಾರ ನಡೆಯಲು ಐನೋರನ್ನು ನೇಮಿಸಿ, ಅವರಿಗೆ ಪಕ್ಕದಲ್ಲಿಯೇ ಅನುಕೂಲವಾಗುವಂತೆ ಮನೆಯನ್ನು ಕಟ್ಟಿಕೊಟ್ಟು ಊರಿನ ಸಮಸ್ತರನ್ನೂ ಒಂದು ಬಂಧಕ್ಕೆ ಒಳಪಡುವಂತೆ ಮಾಡುವುದರಲ್ಲಿ ಊರಿನ ಪ್ರಮುಖರು ಯಶಸ್ವಿಯಾಗಿದ್ದರು. ಜಂಗಮನಿಗೆ ದೇವಸ್ಥಾನ ಕಟ್ಟಿಸಿದರೇನಾಯಿತು? ಅದರ ತುಂಬ ಅವನದೇ ವಚನಗಳನ್ನು ಮುದ್ದಾಗಿ ಬಿಳಿ ಬಣ್ಣದಲ್ಲಿ ಬರೆಯಿಸಿಲ್ಲವೇ? ಗೌರಿ ಗಣಪತಿಯ ಹಬ್ಬವೆಂದರೆ ಊರಿನ ಹಬ್ಬ. ಮನೆ ಮನೆಯಲ್ಲಿ ಗಣೇಶನನ್ನು ಇಡುವ ಸಂಪ್ರದಾಯವಿರಲಿಲ್ಲ. ಊರ ಗಣೇಶ ಅಂತ ದೊಡ್ಡ ಮೂರ್ತಿಯನ್ನು ಚಂದಾ ಹಣದಿಂದ ಕೊಂಡು ತಂದು ಪ್ರತಿಷ್ಠಾಪಿಸುವ, ಗಣಪತಿ ಬಿಡುವ ದಿನದ ತನಕ ಪ್ರತಿನಿತ್ಯ ಪೂಜೆ, ಹರಿಕಥೆ ಇತ್ಯಾದಿಗಳು ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ದೇವಸ್ಥಾನ ಕಮಿಟಿಯವರದ್ದು. ದೇವಸ್ಥಾನದ ಕಟ್ಟೆಯೆನ್ನುವುದು ಊರಿನ ಸಮಸ್ತ ರಾಜಕೀಯವನ್ನಷ್ಟೇ ಅಲ್ಲದೆ ರಾಜ್ಯದ, ದೇಶದ ಆಗುಹೋಗುಗಳನ್ನು ಚರ್ಚಿಸಲು ನೆರೆಯುವ ಒಂದು ಪಟ್ಟಾದ ಜಾಗ. ಅಂದ ಹಾಗೆ ನಿಮಗೇ ಗೊತ್ತಿರುವ ಹಾಗೆ ಅಂತ ಜಾಗಗಳಲ್ಲಿ ಬರೀ ಗಂಡುತಲೆಗಳೇ ಕಾಣುತ್ತವೆ. ಹೆಂಗಸರು ರಾಜಕೀಯ ಚರ್ಚಿಸುವುದೇ? ಅದೂ ಸಾರ್ವಜನಿಕ ಅಂತನ್ನಿಸಿಕೊಳ್ಳುವ ಬಿಡುಬೀಸಾದ ದೇವಸ್ಥಾನದ ಕಟ್ಟೆಯಲ್ಲಿ? ನಿಮಗೆಲ್ಲೋ ಭ್ರಾಂತು. ಹೆಂಗಸರು ಏನಿದ್ದರೂ ಅನಿವಾರ್ಯ ಪರಿಸ್ಥಿತಿಗಳಲ್ಲಿ ದೇವಸ್ಥಾನದ ಎದುರಿಗೆ ಹಾದುಹೋಗುವಾಗ, ರಸ್ತೆಗೇ ಕಾಣುವ ಬಸವಣ್ಣನಿಗೆ ವಾರೆ ತಿರುಗಿ ಕೈ ಮುಗಿದು ಮೆತ್ತಗೆ ಗಲ್ಲ ಬಡಿದುಕೊಂಡು ಹೋಗಬಹುದು ಅಷ್ಟೆ. ಇಲ್ಲ, ಆ ಊರಿಗೆ ಸೇರಿರದ ಅಕ್ಕಪಕ್ಕದ ಹಳ್ಳಿಹೆಂಗಸರು ಅಸಹಜ ನಾಚಿಕೆಯಲ್ಲಿ ಮೈ ಕುಗ್ಗಿಸಿಕೊಂಡು ನಡೆಯದೇ ಸಲೀಸಾಗಿ ನಡೆಯುವುದು ಒಮ್ಮೊಮ್ಮೆ ಕಾಣಿಸಬಹುದು. ಹಾಗೆ ಕಂಡ ಹೆಂಗಸರ ಬಗ್ಗೆ, ಅವರು ಊರವರಾಗಲೀ, ಅಲ್ಲದಿರಲಿ, ಕಟ್ಟೆಯಲ್ಲಿ ನೆರೆದಿರುವ ಬಿಳಿ ತಲೆಗಳು ವ್ಯಂಗ್ಯವಾಗಿ, ಕುಹಕವಾಗಿ ಅಥವಾ ಸ್ವಲ್ಪ ’ಹಿಂಬದಿ ಮುಂಬದಿ’ ಅಂತ ಅಶ್ಲೀಲವಾಗಿ ಮಾತನಾಡಿದರೆ, ಪಾಪ ಕ್ಷಮಿಸಿಬಿಡಿ. ಎಷ್ಟಾದರೂ ಈ ತರಹದ ಪೋಲಿತನ ಗಂಡಸರು ಅಂತನ್ನಿಸಿಕೊಂಡಿರುವರಿಗೆ ಸಹಜವೇ ತಾನೆ? ಅಲ್ಲಿ ಬಿಳೀ ತಲೆಗಳೇ ಕಂಡರೆ ಕರೀತಲೆಗಳು ಏನು ಮಾಡುತ್ತಿರುತ್ತವೆ ಅಂದಿರಾ? ಛೆ! ಈ ಕೆಲಸವಲ್ಲದ ಕೆಲಸ ಮಾಡಲು ಅವಕ್ಕೇನು ಮರುಳೆ? ಸಂಜೆಯಾಯಿತೆಂದರೆ, ಕಟ್ಟೆಮೇಲೆ ನೆರೆದರೆ ಊರಿನ ಲಿಕ್ಕರ್ ಶಾಪುಗಳನ್ನು ಉದ್ಧಾರ ಮಾಡುವವರು ಯಾರು? ಹಾಗಂತ ಅವರೇನೂ ಆ ಷಾಪುಗಳಲ್ಲೇ ಕುಡಿಯುತ್ತಾ ಕೂರಲು ಅವೇನು ಸಾರಾಯಿ ಗಡಂಗು ಕೆಟ್ಟುಹೋದವೇ? ಬಿಸಿರಕ್ತದ ಯುವಕರು ಚೈನಿ ಹೊಡೆಯಲು ಸ್ವಲ್ಪ ಊರಹೊರಗೆ ಇರುವ ಯಾವುದಾದರೂ ತೋಟದ ಮನೆಗಳಿಲ್ಲವೆ? ಅಲ್ಲಿ ಗುಂಡು ಬಾಡು ಇತ್ಯಾದಿ ಇತ್ಯಾದಿಗಳ ಸಮಾರಾಧನೆ ಸಾಂಗವಾಗಿ ನಡೆಯುವಂತೆ ಏರ್ಪಾಡಾಗಿರುವಾಗ, ಕಟ್ಟೆ ಮೇಲೆ ಕೈಲಾಗದವರೊಂದಿಗೆ ಕಾಲಹರಣ ಮಾಡಲು ಅವರಿಗೇನು ಹುಚ್ಚೆ? ಬೆಪ್ಪೆ? ಇಷ್ಟಾಗುವಾಗ ಮನೆಯ ಹೆಂಗಸರು ಮತ್ತು ಮಕ್ಕಳು ಏನು ಮಾಡುತ್ತಿರುತ್ತಾರೆ ಎನ್ನುವುದೂ ಒಂದು ಒಳ್ಳೆಯ ಪ್ರಶ್ನೆಯೇ. ಸಂಜೆ ಏಳರ ಹೊತ್ತಿಗೆ ಕೈ ಕಾಲು ಮುಖ ತೊಳೆದು, ಮುಸ್ಸಂಜೆ ದೀಪ ಹಚ್ಚಿಟ್ಟು, ಟಿವಿ ಅಂತಕ್ಕಂಥಾದ್ದರ ಮುಂದೆ ಕೂತರೆ ಹೆಂಗೆಳೆಯರನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿರುವಂತಹ ದಾರಾವಾಹಿಗಳಿಲ್ಲವೇ, ಹತ್ತರ ತನಕ ಕಾಲ ತಳ್ಳಲು? ಟಿವಿ ಬರುವ ಮುಂಚೆ ಹೇಗಿತ್ತು ಅನ್ನುವುದು ಗೊತ್ತಿಲ್ಲ. ಬಂದ ಮೇಲೆ ಈ ದಿನಚರಿ ಅಂತೂ ನಿತ್ಯಕಾಯಕವಾಯಿತು. ಹತ್ತರ ತನಕ ಊಟ ಮಾಡುತ್ತಲೇ, ಸ್ಕೂಲಿನ ಹೋಂವರ್ಕ್ ಮಾಡುತ್ತಲೇ ನೋಡುವ ಹೃದಯ ಕರಗಿಸುವ ದಾರಾವಾಹಿಗಳು ಮುಗಿದ ಮೇಲೆ ನಂತರದ್ದೆಲ್ಲಾ ಭೀಭತ್ಸಪ್ರಧಾನ. ಕೊಲೆ, ರಕ್ತಪಾತ, ದಾಯಾದಿಜಿದ್ದು, ಅನೈತಿಕ ಸಂಬಂಧ ಇತ್ಯಾದಿಗಳನ್ನು ರೋಮಾಂಚಕವಾದ ಕಾಮೆಂಟರಿಯೊಂದಿಗೆ ನೋಡದಿದ್ದರೆ, ಆಮೇಲೆ ನಿದ್ದೆಯೇ ಬರುವುದಿಲ್ಲ. ಬೆಳಕು ಹರಿದರೆ, ಇದ್ದೇ ಇದೆಯಲ್ಲ ನಿತ್ಯದ ರಗಳೆ. ಪಾಪ, ಮುಗ್ಧ ಹೆಂಗಸರು, ಮಕ್ಕಳು ಈ ದಿನಚರಿಯಲ್ಲಿ ತೃಪ್ತರು.

ಇರಲಿ, ನಾನು ಹೇಳಬೇಕೆಂದು ಕೊಂಡಿದ್ದು ನಿಜವಾಗಿ ಬೇರೆಯೇ. ಸರಿಯಾಗಿಯೇ ಪ್ರಾರಂಭಿಸಿದ್ದೆ ಆ ನನ್ನೂರಿನ ಬಾಂಧವ ಅಂತ. ಮಾತು ಎಲ್ಲೆಲ್ಲಿಗೋ ಹೋಯಿತು. ನನಗಿಂತ ಕೆಲವು ವರ್ಷಗಳಿಗೆ ಹಿರಿಯನಾದ ಇವನನ್ನು ಬಾಲ್ಯದಲ್ಲಿ ನೋಡುತ್ತಿದ್ದಾಗ ಯಾವಾಗಲೂ ಜಿಗಿಯುವೆ ಜಿಂಕೆಯ ತರಹ ಕಾಣಿಸುತ್ತಿದ್ದ. ಗುಂಡು ಮುಖದಲ್ಲಿ ಯಾವತ್ತಿಗೂ ಬಾಡದ ನಗೆ. ಕಣ್ಣುಗಳಲ್ಲಿ ಅದಮ್ಯ ಉತ್ಸಾಹ. ಅವನನ್ನು ನೋಡಿದಾಗಲೆಲ್ಲಾ ನನ್ನ ಬಾಲ್ಯದ ಕಣ್ಣುಗಳಿಗೆ ಅವ ಪುಟಿಯುವ ಫ಼ುಟ್ಬಾಲಿನಂತೆ ಕಾಣಿಸುತ್ತಿದ್ದ. ಎಷ್ಟರ ತನಕ ಓದಿದನೋ, ಓದು ತಲೆಗೆ ಹತ್ತಿತೋ ಇಲ್ಲವೋ ಗೊತ್ತಾಗಲಿಲ್ಲ. ನನ್ನ ಓದಿಗೆ ನಾನು ದೂರ ಹೋಗಬೇಕಾದ್ದರಿಂದ, ಪೇಟೆ ಬಿಟ್ಟು ತೋಟದ ಮನೆಗೆ ಮನೆಯವರು ಸ್ಥಳಾಂತರಿಸಲ್ಪಟ್ಟಿದ್ದರಿಂದ, ಸ್ವಲ್ಪ ವರ್ಷಗಳು ಇವನ ಬಗ್ಗೆ ಅಲ್ಲಲ್ಲಿ ಅವರಿವರು ಹೇಳುವ ಮಾತುಗಳಿಂದ ಇವನ ವ್ಯಕ್ತಿತ್ವ ನನ್ನ ತಲೆಯಲ್ಲಿ ಕಟ್ಟಿಕೊಳ್ಳುತ್ತಾ ಹೋಯಿತು.
uಟಿಜeಜಿiಟಿeಜ‌ಇಪ್ಪತ್ತೆರಡಕ್ಕೇ ಮದುವೆಯಾಗಿ ವರ್ಷವೊಂದೋ ಎರಡರಲ್ಲಿ ತಂದೆಯಾದ. ಅಪ್ಪನ ತೋಟ ನಳನಳಿಸುವಂತೆ ಮಾಡಿದ್ದಲ್ಲದೇ ತನ್ನ ಶ್ರಮದಿಂದ ತೋಟದ ಹರವನ್ನು ಹೆಚ್ಚಿಸಿದ ಮಗ ಅಂತ ನನ್ನ ಅಪ್ಪ ಮೆಚ್ಚಿಗೆಯಿಂದ ಮಾತಾಡುತ್ತಿದ್ದದ್ದು ನೆನಪಿದೆ.ಊರಿನ ಕಾರ್ಯಕ್ಕೆ ಪಂಚೆ ಕಟ್ಟಿ, ತಲೆಯ ಮೇಲೊಂದು ಮುಂಡು ಸುತ್ತಿ, ರಂಗಕ್ಕಿಳಿದನೆಂದರೆ ಥಕಥೈಯೇ ಸೈ. ಊರ ಗಣೇಶನನ್ನು ಆರಿಸಿ ತರುವುದರಿಂದ ಹಿಡಿದು, ವಿದ್ಯುಕ್ತವಾಗಿ ಪೂಜೆ ಮಾಡಿ, ಅದಕ್ಕೆ ಮಂಟಪವನ್ನು ಕೈಯಾರೆ ಕೆತ್ತಿ, ಪ್ರತಿಷ್ಟಾಪಿಸಿ, ದಿನ ನಿತ್ಯದ ಸಾಯಂಕಾಲದ ಪೂಜೆಯನ್ನು, ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸುವ ಕೆಲಸಗಳನ್ನು ನಿರ್ವಹಿಸುವುದಷ್ಟೇ ಅಲ್ಲ, ತಿಂಗಳ ನಂತರ ಗಣೇಶನನ್ನು ’ಬಿಡುವ” ಕಾರ್ಯಕ್ರಮದ ಮುಕ್ಕಾಲು ಪಾಲು ಅವನದೇ. ಝಗಮಗಿಸುವ ಬೆಳಕಲ್ಲಿ ಆಳೆತ್ತರದ ಗಣೇಶನನ್ನು ಅವ ಮಂಟಪದಲ್ಲಿ ಭವ್ಯಾಗಿ ಕಟ್ಟಿಕೂರಿಸುತ್ತಿದ್ದ ರೀತಿಗೆ ಬೆರಗಾಗಿ ನಿಂತು ನೋಡುತ್ತಿದ್ದ ನನ್ನ ಬಾಲ್ಯದ ಕಣ್ಣುಗಳನ್ನು ಹೇಗೆ ಮರೆಯಲಿ? ಹರೆಯಕ್ಕೆ ಬೇಕಾದ ಶೋಕು, ಬಿಂಕದ ಆಚೆ ನಿಂತು ಸಾದಾ ಪಂಚೆ, ಬನೀನು, ಮುಂಡುಗಳೊಂದಿಗೆ ಗಣೇಶನ ಮಂಟಪವನ್ನು ಹತ್ತಿ ಇಳಿದು, ಸರಸರ ಕೆಲಸ ಮಾಡುತ್ತಿದ್ದ ಪರಿಗೆ ಚಳುಕು ಹೊಡೆದವಳಂತೆ ನೋಡುತ್ತಾ ನಿಲ್ಲುತ್ತಿದ್ದದ್ದು ಇನ್ನೂ ನೆನಪಿದೆ. ಹಾಗಂತ ಅವನೇನೂ ಸದ್ದಿಲ್ಲದೇ ಕೆಲಸ ಮಾಡುವ ಆಸಾಮಿ ಅಲ್ಲ. ದೊಡ್ಡಧ್ವನಿಯಲ್ಲಿ ಮಾತಾಡುತ್ತಾ ಕೆಲಸ ಮಾಡುತ್ತಿದ್ದರೆ ಸುತ್ತ ಹತ್ತು ಮನೆಗಳಿಗೆ ಅವನ ಇರವು ಗೊತ್ತಾಗುತ್ತಿತ್ತು. ಕೆಲಸ ಕದಿಯುವ ಹಡೆಗಳಿಗೆ ಯಾವ ಮುಲಾಜೂ ಇಲ್ಲದೆ ಸೊಂಟದ ಕೆಳಗಿನ ಮಾತುಗಳಲ್ಲಿ ಹೊಡೆದೆಬ್ಬಿಸುತ್ತಿದ್ದ. ’ಮುಕಳಿ ಮುಚ್ಚಿಕೊಂಡು ಕೆಲಸ ನೋಡೋ ಲೇಯ್, ಎದ್ದು ಬಂದು ಒಂದು ಬಿಟ್ಟಾ ಅಂದ್ರೆ, ಮಗನೆ, ತರಡು ಬೀಜ ಮುರುಟಿ ಹೋಗಬೇಕು” ಅಂತ ಬೈದರೆ ಎಂತಾ ಹಡೆಯೂ ಎಲ್ಲವನ್ನೂ ಮುಚ್ಚಿಕೊಂಡು ಕೆಲಸ ಮಾಡಬೇಕು. ಅದು ಬರೀ ದಪ್ಪ ದನಿಯ, ಒರಟು ಮಾತುಗಳ ಶಕ್ತಿಯಾಗಿರಲಿಲ್ಲ. ಮಾಡುವ ಕೆಲಸವನ್ನು ಎದೆಗೊತ್ತಿಕೊಂಡು ಮಾಡುವವನ ನೈತಿಕ ಶಕ್ತಿಯಾಗಿತ್ತು.

ಊರಿನ ಒಂದು ಮುಸ್ಲಿಮ್ ಕುಟುಂಬದ ಮೂವರು ತುಂಬಿ ಹರಿಯುತ್ತಿದ್ದ ಕೆಂಪುಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಮುಳುಗಿ ಸತ್ತಿದ್ದರು. ಸಾಬೂನು ಬಿತ್ತು ಅಂತ ಬಾಗಿದ ಸಣ್ಣ ವಯಸ್ಸಿನ ಹುಡುಗ ಜಾರಿ ಬಿದ್ದಾಗ, ಅವನನ್ನು ಎತ್ತಲು ಅವನ ಅಪ್ಪ, ಅವನ ಹಿಂದೆ ಚಿಕ್ಕಪ್ಪ ಎಲ್ಲರೂ ಸುಳಿಗೆ ಸಿಕ್ಕಿ ಸಾವನ್ನಪ್ಪಿದಾಗ, ಇಡೀ ಊರೇ ಲಕ್ವ ಹೊಡೆದಂತೆ ತತ್ತರಿಸಿತ್ತು. ಸುಳಿಗೆ ಸಿಕ್ಕ ಹೆಣಗಳನ್ನು ಎತ್ತುವವರಿಲ್ಲ. ಆ ಕುಟುಂಬದ ಆಕ್ರಂದನ ಹೃದಯ ಕತ್ತರಿಸುವಂತಿದ್ದಾಗ, ಛಳುಕು ಹೊಡೆದವರಂತೆ ಎಲ್ಲರೂ ನಿಂತವರೇ, ಇಳಿಯುವವರು ಯಾರೂ ಇಲ್ಲ. ಈಜಿನಲ್ಲಿ ಫಟಿಂಗ ಅಂತ ಹೆಸರು ತಗೊಂಡ ಇವನನ್ನು ಪರಿಸ್ಥಿತಿಯ ಭಾರಕ್ಕೆ ಬೆದರಿದ ಜನ ಇಳಿಯಗೊಡಲೊಲ್ಲರು. ಕೊನೆಗೆ ಅವನ ಅಪ್ಪನೇ ಧೈರ್ಯ ಮಾಡಿ, “ಇಳೀ ಮಗಾ, ಏನಾಗುತ್ತೋ ನೋಡೋಣ” ಅಂದಾಗ ಕಾದಿದ್ದವನಂತೆ ಧಡಮ್ಮನೆ ಧುಮುಕಿದ್ದ. ಸುಳಿಯನ್ನು ಸುತ್ತಲು ಬೇಕಾಗಿರುವುದು, ಧೈರ್ಯಕ್ಕಿಂತ ಜಾಣ್ಮೆ, ವಿರುಧ್ಧವಾಗಿ ಈಜುವ ಹಮ್ಮಿಗಿಂತ ಅದರ ಗತಿಯಲ್ಲೇ ಸುತ್ತಿ, ಆಯದ ಹೊತ್ತನ್ನು ಲೆಕ್ಕ ಹಾಕಿ, ಚಳಕ್ಕನೆ ಸುಳಿಯ ಮೋಹದಿಂದ ತಪ್ಪಿಸಿಕೊಳ್ಳುವ ಛಾತಿ ಬೇಕು ಅನ್ನುವುದು ಗೊತ್ತಿದ್ದವ. ಗಂಟೆಯೊಂದರಲ್ಲಿ ಒಂದಾದ ಮೇಲೊಂದು ಹೆಣಗಳನ್ನು ಎತ್ತಿ ಮೇಲೆ ಹಾಕಿದಾಗ ನೆರೆದಿದ್ದ ಜನ ಸ್ತಬ್ಧ. ಅದಾದ ನಂತರ ನೀರಿಗೆ ಬಿದ್ದ ಹೆಣವನ್ನೆತ್ತಲು ಈತ ಖಾಯಂ ಪಾರ್ಟಿ ಆಗಿಬಿಟ್ಟ. ಮುಂಚಿನಂತೆ ಅವಘಡಗಳಲ್ಲಿ ಜನ ದಿಕ್ಕು ತೋಚದೆ ನಿಲ್ಲುತ್ತಿರಲಿಲ್ಲ. ಅವನ ತೋಟದ ಮನೆಯ ದಿಕ್ಕು ಎಲ್ಲರಿಗೂ ಗೊತ್ತಿತ್ತು. ತಾದಾತ್ಮ್ಯದಿಂದ ತನ್ನ ತೋಟದ ಕೆಲಸದಲ್ಲಿ ಕಳೆದು ಹೋಗುತ್ತಿದ್ದವನು ಯಾವ ಅನಾಹುತದ ಸುದ್ದಿ ಕೇಳಿದರೂ ನಿಮಿಷವೆರಡಲ್ಲಿ ಹಾಜರಾಗುತ್ತಿದ್ದ. ದೂರದ ಊರಿಂದ ಮದುವೆಯಾಗಿ ಊರಿಗೆ ಬಂದ ಧಾರವಾಡದ ಚೆಲುವೆಯೊಬ್ಬಳು, ಸರಿಯಾಗಿ ಒಂದು ವಾರದಲ್ಲಿ, ರಾತ್ರಿಯ ಊಟ ಮುಗಿಸಿ, ತಟ್ಟೆ ಹಿಂದೆ ಇಟ್ಟು ಬರುತ್ತೇನೆ ಅಂತ ಹೋಗಿ, ಮನೆಯ ಹಿಂದಿನ ಬಾವಿಗೆ ಹಾರಿದಾಗ, ಊಟವಿನ್ನೂ ಮುಗಿಯದ ಜನ ಅಡಿಗೆ ಮನೆಯಲ್ಲಿ ’ಅದೇನು ಗುಡುಂ ಅಂತ ಶಬ್ದ ಕೇಳಿಸಿತಲ್ಲ” ಅಂತ ಅಂದುಕೊಂಡರೇ ಹೊರತು ಬೇರೆ ಎಣಿಸಲಿಲ್ಲ. ’ಏಲ್ಲಿ ಹೋದಳು ಇವಳು, ತಟ್ಟೆ ಇಟ್ಟು ಬರುತ್ತೇನೆ ಅಂತ ಹೋದವಳು, ಇಷ್ಟೊತ್ತಾದರೂ…’ ಅಂತ ಗೊಣಗುವಾಗ ಮಾತ್ರ ಹಟಾತ್ತಾಗಿ ಗುಡುಂ ಶಬ್ದದ ಸಾಧ್ಯತೆ ಹೊಳೆದಿದ್ದು! ಹತ್ತು ನಿಮಿಷದಲ್ಲಿ ಪ್ರತ್ಯಕ್ಷವಾದ ಇವ, ಬಂದವನೇ ಯಾರನ್ನೂ ನೋಡದೇ, ಪಂಚೆ ಸುತ್ತಿಟ್ಟು, ರವ್ವನ್ನುವ ಕತ್ತಲಲ್ಲಿ ಬಾಗಿ ಬಾವಿಯ ಬುಡ ಸೇರಿ ಹಸಿಮೈಯ ಹೆಣ್ಣಿನ ಹೆಣವನ್ನು ಹೊತ್ತು ತಂದಿದ್ದ. ಮತ್ತೊಮ್ಮೆ ವರ್ಷಗಟ್ಟಲೆಯಿಂದ ಹಾಳುಬಿಟ್ಟ ಬಾವಿಯೊಂದರಲ್ಲಿ ಊರಿನ ಮುಸ್ಲಿಮ್ ಮೇಷ್ಟರೊಬ್ಬರು ಬಿದ್ದು ಜೀವ ಕಳೆದುಕೊಂಡಾಗ, ಜೊಂಡಿನಂತೆ ಜವ್ವನೆ ಬೆಳೆದುಕೊಂಡಿದ್ದ ಪಾಚಿಯಲ್ಲಿ ನೀರಿನ ಸುಳುಹೂ ಕಾಣದೆ ಇದನ್ನು ಹೇಗಪ್ಪಾ ನಿಭಾಯಿಸುತ್ತಾನೆ ಇವನು ಅಂತ ಸುತ್ತಲಿನ ಜನ ದಂಗು ಬಡಿದಿದ್ದಾಗ, ಮನಸ್ಸೊಮ್ಮೆ ಅಳುಕಿದರೂ, ’ಹೆಣವನ್ನ ಹಾಗೇ ಬಿಡೋಕಾಗುತ್ತಾ, ಮತ್ತೆ, ನಾನು ಹೋಗಿ ಮೊದ್ಲು ಜಾಲಾಡಿ ಹುಡುಕ್ತೀನಿ, ಹತ್ತು ನಿಮಿಷದ ಮೇಲೆ ಬುಟ್ಟಿ ಸಮೇತ ಹಗ್ಗ ಬಿಡಿ’ ಅಂತ ಹೇಳಿ ಧುಮುಕಿದವನು ಹೆಣವನ್ನು ಮರದ ತೊಟ್ಟಿಲಲ್ಲಿ ಹಾಕಿ ಮೇಲೆ ಬಂದರೆ, ಮೈಯಿಂದ ನಾರುನಾರಾಗಿ ಇಳಿಯುತ್ತಿದ್ದ ಪಾಚಿ! ಅಯ್ಯಬ್ಬ! ಅಂತ ಹೇವರಿಸಿಕೊಂಡರು ಕೆಲವರು. ’ಏನ್ ನೋಡ್ತಾ ನಿಂತಿದೀರಾ, ಎರಡು ಕೊಡಪಾನ ನೀರು ತರೋದು ಬಿಟ್ಟು?’ ಅಂತ ಜಬರಿಸಿ ನೀರು ತರಿಸಿ, ತಲೆಯಿಂದ ಸುರಿದುಕೊಂಡು ಪಂಚೆ ಸುತ್ತಿಕೊಂಡು ಹೋಗಿದ್ದನಂತೆ. ಇವು ಅವನು ನೀರಿನಿಂದ ಹೆಣ ಎತ್ತಿದ ಕೆಲವು ಘಟನೆಗಳು ಮಾತ್ರ.

ಯಾವುದಾದರೂ ರಾಜ್ ಕುಮಾರ್ ಚಿತ್ರದ ಕಥೆ ಹೇಳ್ತಾ ಇದೀನಿ ಅಂತ ಅನ್ನಿಸ್ತಾ ಇದೆಯಾ? ಖಂಡಿತ ಇಲ್ಲ. ಚಿತ್ರದ ಗುಂಗು ಕೆಲವು ಗಂಟೆಗಳು, ಕೆಲವು ದಿನಗಳು, ಅಥವಾ ಕೆಲವು ವರ್ಷಗಳು ಮಾತ್ರ. ಈತ ನನ್ನನ್ನು ಎಷ್ಟೋ ಸಲ ಚಕಿತಗೊಳಿಸಿದ್ದಾನೆ. ಇವನದ್ದು ಎಂಥಾ ದೈತ್ಯಶಕ್ತಿಯಪ್ಪಾ ಅಂತ ಬೆರಗುಗೊಂಡಿದ್ದೇನೆ. ಅದು ಬರೀ ನೀರಿಗೆ ಧುಮುಕಿ ಹೆಣ ಎತ್ತಿದ್ದಾಗಿದ್ದರೆ, ಅಷ್ಟಿರುತ್ತಿರಲಿಲ್ಲ. ದಶಕಗಳೆರಡರ ಹಿಂದೆ, ಅಪ್ಪ ವೀರಭದ್ರನ ದೇವಸ್ಥಾನ ಕಟ್ಟಿಸಲು ಓಡಾಡುತ್ತಿದ್ದಾಗ, ಏಳಡಿ ಎತ್ತರದ ವಿಗ್ರಹವನ್ನು ಈತ ಕಪ್ಪು ಶಿಲೆಯಲ್ಲಿ ಕೆತ್ತುತ್ತಿದ್ದಾನೆ ಅಂದಾಗ ಶಿಲೆಯಾಗಿಬಿಟ್ಟಿದ್ದೆ ನಾನು. ಅವನಿಗೆ ಅದೂ ಬರುತ್ತದಾ ಅಂತ ಕೇಳಿದಾಗ ಅಪ್ಪ,”ಹೋ… ಏನ್ ಮಾತಾಡ್ತಿಯ ನೀನು. ಮರದಲ್ಲಿ, ಕಲ್ಲಿನಲ್ಲಿ ಎಷ್ಟು ಮೂರ್ತಿಗಳನ್ನ ಮಾಡಿದಾನೆ, ಏನ್ ಕತೆ? ಎಲ್ಲೆಲ್ಲಿಂದ ಜನ ಬಂದು ಅವನ ಕೈಲಿ ಕೆಲಸ ಮಾಡಿಸ್ತಾರೆ, ಎಷ್ಟು ದೇವಸ್ಥಾನಗಳಿಗೆ ಅವನು ಮೂಲವಿಗ್ರಹ ಮಾಡಿದಾನೆ!” ಅಂದಾಗ ಸುಸ್ತು ಹೊಡೆದಿದ್ದೆ. ಪ್ರತಿಷ್ಠಾಪನೆಗೆ ಬಾ ಅಂತ ಅಪ್ಪ ಒತ್ತಾಯವಾಗಿ ಹೇಳಿದ್ದರು. ಹೋಗಲಿಕ್ಕಾಗದವಳು, ನಂತರ ಊರಿಗೆ ಹೋದಾಗ ವಿಗ್ರಹ ನೋಡುವ ಕುತೂಹಲದಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ. ಕಪ್ಪು ಕಲ್ಲಿನಲ್ಲಿ ವಾರೆಯಾಗಿ ನಿಂತ ವೀರಭದ್ರ ಧೀಮಂತವಾಗಿ ಕಂಡಿದ್ದ. ಕೈ ಮುಗಿದಿದ್ದೆ–ವೀರಭದ್ರನಿಗಲ್ಲ. ಶಿಲ್ಪಿಗೆ.
uಟಿಜeಜಿiಟಿeಜ ಇವನನ್ನು ರಾಜ್ ಕುಮಾರ್ ತರಹದ ಹೀರೋ ತರಹ ಚಿತ್ರಿಸುತ್ತಿದ್ದೇನೆ ಅಂತ ನೀವು ಭಾವಿಸಿದರೆ ತಪ್ಪು ಅಂತ ಧೈರ್ಯವಾಗಿ ಹೇಳಬಲ್ಲೆ. ಯಾಕೆಂದರೆ, ರಾಜ್ ಕುಮಾರ್ ಪಾತ್ರ ನೀರಿಗೆ ನೆಗೆದರೂ ಮುಳುಗುತ್ತಿರುವವರನ್ನ ಬದುಕಿಸಿ ನಮ್ಮಿಂದ ಭೇಷ್ ಗಿರಿ ದಕ್ಕಿಸಿಕೊಳ್ಳುತ್ತದೆ. ಸತ್ತು ಹೋಗಿರುವ ಹೆಣಗಳನ್ನು ಕಾಯಕದ ನಿಷ್ಠೆಯಿಂದ ಎತ್ತುವ ಕೆಲಸವನ್ನು ಮಾಡುವ ಪಾತ್ರವನ್ನು ಸೃಷ್ಟಿಸಿದ್ದಾರೊ ಇಲ್ಲವೋ ಗೊತ್ತಿಲ್ಲ. ಇನ್ನೊಂದು ಅಂಶದಲ್ಲಿ ಈತ ಬೇರೆ ಅಂತನ್ನಿಸಿಕೊಳ್ಳುತ್ತಾನೆ. ಊರಲ್ಲಿ ಯಾರು ಸತ್ತರೂ ಇವನು ಹೋಗಿ ಮಾಡುವ ಶವಸಂಸ್ಕಾರದ ಕಾರ್ಯ. ರಾಜನಾಗಿದ್ದರೂ, ವಸಿಷ್ಟ ವಿಶ್ವಾಮಿತ್ರರ ಅಟ್ಟಹಾಸದ ನಡುವೆ , ಸ್ಮಶಾನ ಕಾಯುವ ಚಾಂಡಾಲನಾಗಬೇಕಾದ ದುರ್ವಿಧಿಗೆ ಸಿಕ್ಕ ಹರಿಶ್ಚಂದ್ರ ಮಾಡುವ ಶವಸಂಸ್ಕಾರದಂತೆ ಅಲ್ಲ. ಮನೆ ಮಠ, ತೋಟ ಗದ್ದೆ, ಆಳುಕಾಳು ಇತ್ಯಾದಿಗಳಿರುವ ಆಸ್ತಿವಂತನಾಗಿಯೂ, ಊರಲ್ಲಿ ಯಾರೇ ಸಾಯಲಿ, ಹೇಗೆ ಸಾಯಲಿ, ಹೆಣಕ್ಕೆ ಸ್ನಾನ ಮಾಡಿಸುವುದರಿಂದ ಹಿಡಿದು, ಸಮಾಧಿಯ ಒಳಗೆ ಇಳಿಸಿ, ಮಗುವಿನಂತೆ ಮಲಗಿಸುವವರೆಗೂ ಇವ ಅತ್ತಿತ್ತ ನೋಡಲಾರ. ಊರಲ್ಲಿ ಯಾರೊಂದಿಗಾದರೂ ಜಗಳ ಕಾಯಬೇಕಾದಾಗ, ಆಡುವಷ್ಟು ಜಗಳವಾಡಿ ಕೊನೆಗೆ, ಅವರು ಹಿರಿಯರಿರಲಿ, ಯಾರೇ ಇರಲಿ, ವಾರೆಗಣ್ಣಿಂದ ನೋಡುತ್ತ ತುಂಟತನದಿಂದ “ನೋಡೀ, ನೋಡಿ, ನನ್ನ ಕೈಲಿ ಜಗಳ ಆಡಿದ್ರೆ ಒಳ್ಳೇದಾಗೋಲ್ಲ, ಕಡೆಗಾಲಕ್ಕೆ, ಅದೇ, ನೀವು ಗೊಟಕ್ ಅಂತೀರಲ್ಲಾ, ಆವಾಗ ಯಾರು ಬರಬೇಕು? ನಾನು ತಾನೇ, ನಿಮಗೆ ಮೋಕ್ಷ ತೋರಿಸೋದೂ?’ ಅಂತ ಹೇಳಿ ತಾನೂ ನಕ್ಕು ಅವರನ್ನೂ ನಗಿಸಿ ಜಗಳ ಮುಗಿಸುತ್ತಾನೆ. ತಾನೇ ನೀರಿನಿಂದ ಮೆಲೆತ್ತಿದ ಹೆಣಗಳನ್ನೂ ಸಂಸ್ಕರಿಸಿ ಮಣ್ಣು ಮಾಡುವತನಕ ಇವನ ಕೆಲಸ ಮುಗಿಯುವುದಿಲ್ಲ. ಕಲ್ಲಿನಲ್ಲಿ ಕಲೆಯನ್ನು ಮೂಡಿಸುವ ತಾದಾತ್ಮ್ಯತೆಯಲ್ಲಿಯೇ ಹೆಣಗಳನ್ನೂ ನಿಭಾಯಿಸುತ್ತಾನೆ.

ಈತನನ್ನು ಮುಖತಃ ಮಾತನಾಡಿಸಬೇಕೆಂದು ಅಂದುಕೊಂಡು ವರ್ಷಗಳೇ ಕಳೆದುಹೋದವು. ಈಗ ನನ್ನ ಅಪ್ಪ ಬದುಕಿನಲ್ಲಿ ಬೇಸತ್ತು, ಮಕ್ಕಳ ಸ್ವಾರ್ಥ ದೌರ್ಜನ್ಯಗಳಿಂದ ನೊಂದು ನೀರಿಗೆ ಬಿದ್ದು ಸತ್ತಾಗ, ಮತ್ತೊಮ್ಮೆ ಅವನನ್ನು ನೋಡುವ ಸಂದರ್ಭ ಬಂತು. ಕಡೆ ಗಳಿಗೆಯಲ್ಲಿ ಅಪ್ಪ ಅವನಿಗೇ ಪತ್ರವೊಂದನ್ನೂ ಬರೆದಿದ್ದ. ಅವನೇ ತನ್ನ ಶವಸಂಸ್ಕಾರ ಮಾಡಬೇಕೆಂದು ಪ್ರಾರ್ಥಿಸಿಕೊಂಡಿದ್ದ. ತಾನು ಸಾಯುವ ದಿನ ಅವನು ಊರಲ್ಲಿರುತ್ತಾನೆ ಎನ್ನುವುದನ್ನು ಖಾತರಿ ಮಾಡಿಕೊಂಡೇ ಸಾವನ್ನು ತಬ್ಬಿಕೊಂಡಿದ್ದ. ಅಪ್ಪನ ಹೆಣವನ್ನು ಮಗುವೋ ಎಂಬಂತೆ ಎತ್ತಿ, ಗುಂಡಿಯ ಒಳಗಿಳಿಸಿ ನಿಂತ ಅವನನ್ನು ನೋಡಿದಾಗ ಬದುಕಿರುವಾಗ ಯಾಕೆ, ಸತ್ತಾಗಲೂ ಯಾವ ಕೆಲಸಕ್ಕೂ ಬಾರದ ಅಪ್ಪನ ಮಕ್ಕಳ ಕಡೆಗೆ ಒಮ್ಮೆ ಕಣ್ಣು ಹಾಯಿಸಿದ್ದೆ. ತಿಂಗಳ ತಿಥಿಗೆ ಅಮ್ಮನ ಮನೆಗೆ ಹೋದಾಗ ಇವನನ್ನು ಭೇಟಿ ಮಾಡಿಯೇ ತೀರಬೇಕು ಅಂತ ನಿಶ್ಚಯಿಸಿಕೊಂಡು ಫೋನ್ ಮಾಡಿದರೆ, ’ಬನ್ನಿ, ಬನ್ನಿ, ಖಂಡಿತ ಬನ್ನಿ” ಅಂದ.

ತೋಟದ ಮಧ್ಯೆ ಇರುವ ಅವನ ಮನೆ ಸರಳವಾಗಿತ್ತು. ಮನೆ ತುಂಬ ಇದ್ದ ಎಲ್ಲಾ ಅಳತೆಯ ಕಲಾಕೃತಿಗಳು, ಪ್ರತಿಯೊಂದೂ ಅವನವೇ. ಮೊದಲ ಕೋಣೆಯಲ್ಲಿಯೇ ಎದುರಾದ ವಾರೆಯಾಗಿ ಅರ್ಧ ಮಲಗಿರುವ ಗಣಪತಿ. ಕಣ್ಣು ಹಾಯಿಸುತ್ತಿದ್ದವಳ ದೃಷ್ಟಿಯ ಜಾಡು ಹಿಡಿದು, ’ಅದಾ! ನೋಡಿ, ಎಲ್ಲಿಂದಾನೋ ಬರ್ತಿದ್ದಾಗ, ದಾರೀಲಿ ಒಂದು ಮರ ಬಿದ್ದಿತ್ತು. ಟೊಳ್ಳು ಬಿದ್ದ ಮರ. ನೋಡೋಣ ಏನ್ ಮಾಡಕಾಗುತ್ತೆ ಅಂತ ಅದರ ಕಾಂಡದ ಒಂದು ಭಾಗವನ್ನು ತಗೊಂಡು ಬಂದೆ. ಅದ್ರಿಂದ ಮೂಡಿದ್ದು ಈ ನಮ್ ಗಣಪತಿ”–ಬಿಟ್ಟ ಬಾಯಿ ನಾನು ಮುಚ್ಚಿದ್ದರೆ ಕೇಳಿ. ಪುಟ್ಟದ್ದೇನೂ ಅಲ್ಲ. ಕೋಣೆಯಲ್ಲಿ ಪ್ರಧಾನವಾಗಿ ನಿಂತ ಭವ್ಯ ಗಣಪತಿ, ಭವ್ಯವಾಗಿದ್ದಷ್ಟೇ ಮಗುವಿನಂತೆ ಮುದ್ದಾಗಿಯೂ ಇದ್ದ. “ನೋಡಿ, ಇವೆಲ್ಲಾ, ಯಾವ್ಯಾವುದೋ ದೇವಸ್ಥಾನಗಳಿಗೆ ಹೋಗಬೇಕಾದ ಮೂಲವಿಗ್ರಹಗಳು. ಇದು ವೀರಭದ್ರೇಶ್ವರ, ನಿಮ್ಮ ಅಪ್ಪಾಜಿ ಕಟ್ಟಿಸಿದ್ರಲ್ಲ್ಲ, ಆ ದೇವಸ್ಥಾನಕ್ಕೆ ಮೂಲವಿಗ್ರಹ ಮಾಡುವ ಮೊದಲು ಅದರ ಪ್ರತಿಕೃತಿಯನ್ನು ಚಿಕ್ಕದಾಗಿ ಮಾಡ್ಕೊಂಡೆ. ಹಾಗಿದ್ರೇ ತಾನೆ ಅಳತೆಯ ನಿಖರತೆ ಬರೋದು. ಆ ಮಿನಿಷ್ಟ್ರ ಹೆಂಡತಿ ನಮ್ಮನೆಗೆ ಬಂದಿದ್ದಾಗ, ಇದಕ್ಕೆ ಎಷ್ಟಾದ್ರೂ ಕೊಡ್ತೀನಿ, ಕೊಡಿ ಅಂತಂದ್ರು. ನಾನು ಅದನ್ನ ಯಾವ ಕಾಲಕ್ಕೂ ಯಾರಿಗೂ ಕೊಡಲಾರೆ. ಇದು ನೋಡಿ ವಿಶಿಷ್ಟ ಭಂಗಿಯ ಗಣಪತಿ, ಇದಕ್ಕೆ ತುಂಬಾ ಬೇಡಿಕೆ ಇದೆ. ಈ ವೀಣಾಪಾಣಿ ಸರಸ್ವತಿಯನ್ನ ಇನ್ನೊಂದು ವಾರದಲ್ಲಿ ಪೂರ್ಣ ಮಾಡಬೇಕು. ಅಲ್ಲಿ ಕಾಣಿಸ್ತಾ ಇದೆಯಲ್ಲಾ, ಕಲ್ಲುಗಳು, ಅವನ್ನೇ ನಾನು ಉಪಯೋಗಿಸೋದು. ಮೈಸೂರಿನ ಹತ್ತಿರದಿಂದ ನಾನೇ ನನ್ನ ಲಾರಿಯಲ್ಲಿ ಲೋಡು ತಗೊಂಡು ಬರ್ತೀನಿ… ಇದು ನೋಡಿ ಆನೆ…ಇದನ್ನ ಕಲಿಯೋಕೆ ನಾನೆಷ್ಟು ಕಷ್ಟಪಟ್ಟೀದೀನಿ ಗೊತ್ತಾ? ಮಲೆಯಾಳಿಗಳು ಮಾತ್ರ ಅಧ್ಬುತವಾದ ಆನೆಗಳನ್ನ ಮಾಡಬಲ್ಲರು. ಇನ್ಯಾರಿಗೂ ಸುಲಭವಾಗಿ ಬರೋಲ್ಲ…”

’ಮತ್ತೆ ನೀವು ಮಾಡಿದೀರಲ್ಲ…ಯಾರು ಹೇಳಿಕೊಟ್ರು?”

“ಯಾರೂ ಇಲ್ಲ. ನನ್ಗೆ ಗುರು ಇಲ್ಲ. ಮೂರ್ತಿಗಳನ್ನ ತದೇಕವಾಗಿ ಗ್ರಹಿಸ್ತೀನಿ, ಅದಕ್ಕೆ ಬೇಕಾದ ವಿವರಗಳನ್ನೆಲ್ಲ ಓದಿಕೊಂಡು ಮನನ ಮಾಡ್ತೀನಿ. ಮನಸ್ಸನ್ನ ಕೇಂದ್ರೀಕರಿಸಿದರೆ ಮಾತ್ರ ಮಾಡೋಕೆ ಸಾಧ್ಯ.”

’ಯಾವಾಗಿಂದ ಇದನ್ನ ಮಾಡೊಕೆ ಶುರು ಮಾಡಿದ್ರಿ?”–ಏನೊ ಮಹಾ ಸಂದರ್ಶಕಳಂತೆ ಕೇಳಿದೆ. ಆತ ಮೆಲುಧ್ವನಿಯಲ್ಲಿ ಉತ್ತರ ಕೊಟ್ಟ.

“ನಾನು ಮದುವೆಯಾಗಿ, ಮಕ್ಕಳ ತಂದೆಯೂ ಆದ ಮೇಲೆ”

“ನಿಮ್ಮನೇಲಿ ಯಾರದ್ರೂ ಇದನ್ನ ಮಾಡಿದ್ರ?”

“ಇಲ್ಲ, ಯಾರೂ ಇಲ್ಲ. ಯಾರಿಗೂ ಇದರ ಗಂಧವೂ ಗೊತ್ತಿರಲಿಲ್ಲ”

“ಮತ್ತೆ, ನಿಮಗೆ ಹೇಗೆ ಇದನ್ನ ಮಾಡಬೇಕೆನ್ನಿಸ್ತು?”

“ಗೊತ್ತಿಲ್ಲ, ಹೇಗೆ ಮಾಡಬೇಕೆನ್ನಿಸ್ತು ಅಂತ. ನನ್ನ ತೋಟ, ಗದ್ದೆ, ಊರ ಕಾರ್ಯ, ಹೆಣ ಎತ್ತೋದು, ಶವಸಂಸ್ಕಾರ ಇತ್ಯಾದಿಗಳ ಮಧ್ಯೆಯೂ ಮನಸ್ಸು ಚಿರವಾಗಿ ಇರುವುದನ್ನ ಮಾಡಬೇಕು ಅಂತ ತುಡೀತಾ ಇತ್ತು. ಬಹುಶಃ ಸಾವನ್ನ ಹತ್ತಿರದಿಂದ ನೋಡೀ ನೋಡೀ ಇರಬಹುದು. ನನ್ನ ಸಾವಿನ ನಂತರವೂ ನಾನು ಉಳಿಯುವಂತಹ ಏನನ್ನಾದರೂ ಮಾಡಬೇಕು ಅನ್ನೊ ಸಣ್ಣ ದನಿ ಅದ್ಯಾವಾಗ ಪ್ರಚಂಡ ಶಕ್ತಿ ಪಡ್ಕೋತೋ ಗೊತ್ತಿಲ್ಲ. ಸಣ್ಣದಾಗಿ ಕೆತ್ತಲಾರಂಭಿಸಿದೆ. ಸಿಕ್ಕಿದ್ದೆಲ್ಲವನ್ನೂ ಓದಿದೆ. ನನ್ನ ತುಡಿತ ಒಂದು ಆಕಾರ ಪಡೆದುಕೊಳ್ಳುತ್ತಿದ್ದ ಹಾಗೆ ಮನಸ್ಸು ವಿಚಿತ್ರ ಶಾಂತಿಯನ್ನು ಅನುಭವಿಸುತ್ತಿತ್ತು. ಈಗಲೂ ಅಷ್ಟೇ, ನಾನು ತುಂಬ ನೆಮ್ಮದಿಯಿಂದಿರುವ ಗಳಿಗೆಗಳೆಂದರೆ, ಈ ಮೂರ್ತಿಗಳನ್ನು ಕೆತ್ತುವಾಗ, ಮತ್ತು ಶವಸಂಸ್ಕಾರದಲ್ಲಿ ತೊಡಗಿಸಿಕೊಂಡಾಗ. ಒಂದು ಸೃಷ್ಟಿ, ಇನ್ನೊಂದು ಲಯ. ಆದ್ರೆ ಅವೆರಡೂ ಯಾವ್ದೋ ಹಂತದಲ್ಲಿ ಒಂದೇ ಅಂತನ್ನಿಸುತ್ತೆ.”

’ಶವಸಂಸ್ಕಾರ ಯಾವಗಿಂದ ಮಾಡ್ತಾ ಇದೀರ?’

ನನ್ನ ಪೆದ್ದು ಪ್ರಶ್ನೆಗೆ ಅವ ನಕ್ಕರೂ ಸೌಹಾರ್ದದಿಂದ ಉತ್ತರಿಸಿದ.

’ಅದೆಲ್ಲ ಯೂನಿವರ್ಸಿಟಿಯಿಂದ ಕಲಿತು ಬಂದು ಶುರು ಮಾಡೊ ಅಂತದ್ದಲ್ಲ. ಯಾವುದೋ ಪರಿಸ್ಥಿತಿಯಲ್ಲಿ ಯಾರೂ ಇಲ್ಲದಿದ್ದಾಗ ಮಾಡಬೇಕಾದ ಅನಿವಾರ್ಯ ಅಮೇಲೆ ಅಭ್ಯಾಸವಾಗಿ ಬಿಡುತ್ತೆ. ಅದರಲ್ಲಿ ನಿಷ್ಠೆಯೂ ಬಂದುಬಿಡುತ್ತೆ. ಅದೂ ಕಾಯಕವೇ ಅಲ್ವಾ? ಮನಸ್ಸನ್ನ, ಬುದ್ಧಿಯನ್ನ, ಅತ್ಮವನ್ನ ತೊಡಗಿಸಿಕೊಂಡು ಮಾಡೋ ಕೆಲ್ಸ. ನಾನು ಪೋಸ್ಟ್ ಮಾರ್ಟಮ್ ಮಾಡಲು ಕಲಿತದ್ದೂ ಹಾಗೆಯೇ”

“ಅದೂನಾ!”–ಮತ್ತೊಮ್ಮೆ ಬಾಯಿ ಕಳೆಯುವ ಸ್ಥಿತಿ ನನ್ನದು.
uಟಿಜeಜಿiಟಿeಜ”ಹೌದು. ಕೆಲವನ್ನು ಮಾಡುವಾಗ ಗಮನಿಸಿದೆ. ಈಗ ನಾನೇ ಚಕಚಕನೆ ಮಾಡಿ ಅಗತ್ಯದ ಸಾಮಗ್ರಿಯನ್ನು ಆಸ್ಪತ್ರೆಯವರಿಗೆ ಒದಗಿಸುತ್ತೇನೆ. ಅನಿವಾರ್ಯತೆ ಅಂದರೆ ಅದೇ ಅಲ್ಲವಾ?”

“ಅಸಹಜ ಸಾವುಗಳ ಸಂಧರ್ಭದಲ್ಲಿ ಹೇಗನ್ನಿಸುತ್ತೆ?”

“ತುಂಬ ಬೇಜಾರಾಗುತ್ತೆ. ನಿಮ್ಮ ಅಪ್ಪಾಜಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಎಂಥಾ ಬದುಕಿ ಬಾಳಿದ ವ್ಯಕ್ತಿ. ಎಷ್ಟೆಲ್ಲಾ ಸಂಪಾದನೆ ಮಾಡಿದರು, ದೇವಸ್ಥಾನ ನಿಂತು ಕಟ್ಟಿಸಿದರು, ಊರಿಗೆ ಒಳ್ಳೇದಾಗಲಿ ಅಂತ. ಮಕ್ಕಳಿಗೆಲ್ಲಾ ಆಸ್ತಿ ಕೊಟ್ಟರು. ಅಂಥಾ ಮನುಷ್ಯ ಈ ತರಹ ಸಾಯುವ ಪರಿಸ್ಥಿತಿ ಬಂದಾಗ ಮನಸ್ಸಿಗೆ ತುಂಬಾ ವ್ಯಥೆಯಾಗುತ್ತೆ. ಇನ್ನೂ ಕೆಲವು ಚಿಕ್ಕ ವಯಸ್ಸಿನವರು ಸಾವನ್ನು ತಾವಾಗೇ ತಂದುಕೊಂಡಾಗ, ಮನಸ್ಸು ಸ್ತಬ್ಧವಾಗಿಬಿಡುತ್ತೆ. ಎಷ್ಟು ಹದಿವಯಸ್ಸಿನ ಹೆಣ್ಣುಮಕ್ಕಳು ಈ ಊರಲ್ಲಿ ಹಾಗೆ ಸತ್ತಿಲ್ಲ. ಆ ದೇಹಗಳನ್ನ ಮುಟ್ಟಿ ಸ್ನಾನ ಮಾಡಿಸುವಾಗ ಬದುಕಿ ಬಾಳುವ ಜೀವಗಳು ಹೀಗೆ ಹೋಗಬೇಕಾಯಿತೇ ಎಂದು ಮಮ್ಮಲ ಮರುಗುವಂತೆ ಮಾಡಿಬಿಡುತ್ತದೆ. ಆದರೆ ಕಾರ್ಯ ಮುಗಿಯಬೇಕಲ್ಲ? ಮನಸ್ಸನ್ನು ತಹಬದಿಗೆ ತಂದು ನಿರ್ಲಿಪ್ತತೆಯಿಂದ ಸಧ್ಯಕ್ಕೆ ಕೆಲಸ ಮಾಡಬೇಕಾಗುತ್ತದೆ. ಮರುಗಲು ನಂತರ ಸಮಯ ಇದೆಯಲ್ಲ?”

“ತುಂಬ ಘೋರ ಅನ್ನಿಸಿದ ಸಾವು?”

“ಹ್ಹಾಂ, ನಿಮ್ಮನೆಯಿಂದ ಸ್ವಲ್ಪ ಆಚೆ ಒಬ್ಬ ಹದಿವಯಸ್ಸಿನ ಹುಡುಗ ಮನೆಯ ಅಟ್ಟದ ಮೇಲೇ ನೇಣು ಹಾಕ್ಕೊಂಡಿದ್ದ. ನಾಲ್ಕು ದಿನವಾದರೂ ಮನೆಯವರಿಗೆ ಗೊತ್ತಿಲ್ಲ. ಎಲ್ಲೋ ಹೋಗಿದ್ದಾನೆ ಅಂತ ಸುಮ್ಮನಿದ್ದರು. ಯಾವಾಗ ಕೆಟ್ಟ ವಾಸನೆ ಬರಲಾರಂಭಿಸಿತೋ, ಸ್ವಲ್ಪ ಎಚ್ಚರವಾದರು. ಹೆಣ ಕೊಳೆತು ಅದರ ನೀರು, ಅಟ್ಟದಿಂದ ಸೋರಿ ಕೆಳಗಿಳಿಯುವಾಗ ಪರಿಸ್ಥಿತಿ ಅರ್ಥವಾಗಿದ್ದು. ಯಾರೂ ಹೆಣವನ್ನು ಇಳಿಸಲು ತಯಾರಿಲ್ಲ. ಮೂರ್ಛೆ ಬರಿಸುವಷ್ಟು ನಾತ. ಏನಾದರೂ ಆಗಲಿ ಅಂತ ನುಗ್ಗಿದೆ. ನನ್ನ ತಮ್ಮ ಸ್ವಲ್ಪ ಧೈರ್ಯವಿರುವವನು. ಅವನನ್ನೂ ಕರೆದುಕೊಂಡು ಅಟ್ಟ ಹತ್ತಿ ಹೋದರೆ, ಕೆಳಗೆ ದಬ್ಬುವಷ್ಟು ಗಬ್ಬು. ನಾಲಗೆ ಹೊರಚಾಚಿ ವಿಕಾರವಾಗಿತ್ತು. ಮುಟ್ಟಿದರೆ ನಾಲಗೆಯೇ ಕೈಗೆ ಬಂತಲ್ಲ! ಅದನ್ನ ಸೀದಾ ಶರ್ಟಿನ ಜೇಬಿಗೆ ಹಾಕಿಕೊಂಡು, ಹಗ್ಗದಿಂದ ಹೆಣವನ್ನು ಇಳಿಸಿ ಕೆಳಗೆ ತರುವ ಹೊತ್ತಿಗೆ ಇನ್ನು ಜನ್ಮದಲ್ಲಿ ಅನ್ನ ತಿನ್ನಲು ಸಾಧ್ಯವಾ ಅಂತನ್ನಿಸಿತ್ತು. ಏನು ಮಾಡುತ್ತೀರಾ? ಹೆಣ ಅದು. ಅದಕ್ಕೊಂದು ಗತಿ ಕಾಣಿಸಲೇಬೇಕಲ್ಲಾ!

ಅಯ್ಯಬ ಎನ್ನುವಂತೆ ಕಣ್ನುಮುಚ್ಚಿದ್ದು ನೋಡಿ ಮೆಲುವಾಗಿ ನಕ್ಕ

“ಯಾರ ಹೆಣವನ್ನು ಬೇಕಾದರೂ ಸಂಸ್ಕಾರ ಮಾಡುತ್ತೀರ?”

ನನ್ನ ಪ್ರಶ್ನೆ ಅರ್ಥವಾದವನಂತೆ ನಕ್ಕ.

’ಯಾರದ್ದಾದರೂ. ಅದರಲ್ಲಿ ಜಾತಿಭೇದ ಇಲ್ಲ. ಹೆಣಕ್ಕೆ ಯಾವ ಜಾತಿ? ಬದುಕಿರುವಾಗ ಮಾತ್ರ ಆ ಹೀನ ಲೆಕಾಚಾರ. ಅಸ್ಪೃಶ್ಯನೊಬ್ಬನ ಹೆಣವನ್ನು ನೀರಿನಿಂದ ಎತ್ತಿ ನಾನೇ ಸಂಸ್ಕಾರ ಮಾಡಿದ್ದೆ. ಯಾವನಾದರೂ ಕೇಳಿದ್ದರೆ ಆಗ ವಿಚಾರಿಸ್ಕೋತಾ ಇದ್ದೆ. ನನ್ನನ್ನು ಯಾರೂ ಕೇಳುವುದೂ ಇಲ್ಲ. ಗೊತ್ತು, ವಾಪಾಸ್ ಏನು ಸಿಗುತ್ತೆ ಅಂತ”. ಐವತ್ತರ ಹರೆಯದಲ್ಲಿದ್ದರೂ ಮೂವತ್ತರಂತೆ ಕಾಣುವ ಅವ ದೊಡ್ಡದಾಗಿ ನಕ್ಕಾಗ ಇನ್ನೂ ಚಿಕ್ಕವನಂತೆ ಕಂಡ.

’ನಿಮ್ಮ ಮಕ್ಕಳಿಗೆ ಕೆತ್ತನೆಯಲ್ಲಿ ಆಸಕ್ತಿ ಇದೆಯಾ?”

“ನನಗೆ ಮೂರು ಜನ ಮಕ್ಕಳು. ಮಗಳನ್ನು ಮದುವೆ ಮಾಡಿಕೊಟ್ಟಿದ್ದೇನೆ. ಒಬ್ಬ ಮಗ ಸೋಪಿನಲ್ಲಿ ಮೂರ್ತಿಗಳನ್ನ ಮಾಡಿದ್ದಾನೆ. ನಾನೇನೂ ಹೇಳಿಕೊಟ್ಟಿಲ್ಲ. ದಿನಾ ನೋಡುವುದರಿಂದ ಇರಬಹುದು, ಒಬ್ಬನೇ ಕೂತು ಅರ್ಧ ಗಂಟೆಯಲ್ಲೊಂದು ಸೋಪಿನ ಗಣೇಶನನ್ನ ಮೊನ್ನೆ ಮಾಡಿದ್ದ.”

“ದಿನದ ಹೊತ್ತಿನಲ್ಲಿ ಕೆತ್ತನೆ ಮಾಡುತ್ತೀರ?”

“ಹೌದು. ಸಾಮಾನ್ಯವಾಗಿ ಬೆಳಗಿನ ಸ್ನಾನ ಪೂಜೆ ಮುಗಿಸಿ ಕೂತಾಗ ಮನಸ್ಸು ತುಂಬ ನಿರ್ಮಲವಾಗಿರುತ್ತೆ. ಮನಸ್ಸು ಸ್ವಲ್ಪ ಕುಂದಿದರೂ ಏಕಾಗ್ರತೆ ತಪ್ಪಿಬಿಡುತ್ತೆ. ಸುಮಾರು ನಾಲ್ಕು ಗಂಟೆಯ ಕಾಲ ಒಂದೇ ಸಮ ಕೂತು ಮಾಡಬಹುದು, ಮನಸ್ಸು ನೆಮ್ಮದಿಯಿಂದಿದ್ದರೆ. ನಮ್ಮ ಮನೆಯಿಂದ ಕೆಳಗಡೆ ಒಂದು ದೇವಸ್ಠಾನ ಕಟ್ಟಿಸಿದ್ದೇವೆ, ಜನರಿಂದ ಹಣ ಎತ್ತಿ. ಅದೂ ಯಾರೂ ಮುಂದೆ ಬರಲೊಲ್ಲರು. ಕೊನೆಗೆ “ಒಂದು ದೇವಸ್ಥಾನ ಇರಬಾರದಾ, ಹತ್ತಿರದಲ್ಲಿ?” ಅಂತ ಗದರಿಸಿದ್ದಕ್ಕೆ, ದುಡ್ಡು ಬಿಚ್ಚಿದರು…’

“ಹೌದಾ, ದೇವಸ್ಥಾನಗಳು ಇರಬೇಕಾ?”

ಮತ್ತೆ ಅದೇ ನಗು.

“ಹೌದು, ದೇವಸ್ಥಾನಗಳು ಎಲ್ಲರಿಗೂ ಬೇಕು. ರಾಜಕೀಯ, ರಕ್ತಪಾತ ಮಾಡಲು ಅಲ್ಲ. ನಮ್ಮೆಲ್ಲರ ತಲ್ಲಣ, ತಳಮಳಗಳನ್ನ ನಿವೇದಿಸಿಕೊಳ್ಳೋದಕ್ಕೆ ದೇವಸ್ಥಾನಗಳು ಇರಬೇಕು.”

ಹೊರಡುವ ಮುನ್ನ, ಮೆಲ್ಲಗೆ ಹೇಳಿದೆ. “ನಿಮಗೆ ನಿಮ್ಮ ಅಪ್ಪ ಅಮ್ಮ ಸರಿಯಾದ ಹೆಸರನ್ನೇ ಇಟ್ಟಿದಾರಲ್ಲ? ವರಪ್ರಸಾದ ಅಂತ?”

ನಕ್ಕು ವಿನಯದಿಂದ ಕೈಮುಗಿದು ಅವ ಅಂದ,

“ಹೋಗಿ ಬನ್ನಿ. ದೇವರು ಒಳ್ಳೆಯದು ಮಾಡಲಿ.”
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.