ಅಯ್ಯೋ ಪಾಪ, ಮತ್ತೇನು ಹೇಳಿಯಾನು?

ಇತ್ತೀಚೆಗೆ ಪ್ರಸಿದ್ಧ ಚಿತ್ರನಿರ್ದೇಶಕ ಎಂ.ಎಸ್. ಸತ್ಯು ಅವರ ಜೊತೆ ಮಾತಾಡುವಾಗ, ಕನ್ನಡದ ಸಣ್ಣ ಕತೆಗಳನ್ನು ಆಧರಿಸಿ ತಾವು ಮಾಡಿದ ಒಂದು ಟೆಲಿಸಿರಿಯಲ್ ಬಗ್ಗೆ ಹೇಳುತ್ತ, ಮಾಸ್ತಿಯವರ ‘ಆಚಾರವಂತ ಆಚಾರ್ಯರು’ ಎಂಬ ಕತೆಯನ್ನು ಓದಿದ್ದೀರಾ? ಎಂದು ಕೇಳಿದರು. ನನಗದು ಮರೆತುಹೋಗಿತ್ತು. ಸತ್ಯು ಆ ಕತೆಯನ್ನು ವಿವರವಾಗಿ, ಸುಮಾರು ಎಂಟು ಹತ್ತು ನಿಮಿಷಗಳಲ್ಲಿ ಹೇಳಿದರು. ಅವರಿಂದ ಕೇಳಿದ ಕತೆ ಎಷ್ಟು ಇಷ್ಟವಾಯಿತು ಅ೦ದರೆ ಸಿಕ್ಕಿದ ಮೊದಲ ಅವಕಾಶದಲ್ಲಿ ಕತೆಯನ್ನು ಮತ್ತೆ ಓದಿದೆ. ಮತ್ತು ಪೆಚ್ಚಾದೆ. ಸತ್ಯು ಅವರು ಹೇಳಿದ ರೀತಿ, ಅವರು ಅದರ ವಿವರಗಳನ್ನು ಕಟ್ಟಿದ ಬಗೆ ಎಲ್ಲವೂ ಎಷ್ಟು ಚಿತ್ರವತ್ತಾಗಿತ್ತೆಂದರೆ ಮಾಸ್ತಿಯವರ ಕತೆ ಸಪ್ಪೆ ಅನಿಸಿಬಿಟ್ಟಿತು. ಕತೆ ಅದೇ. ಸತ್ಯು ಯಾವ ಹೊಸ ಘಟನೆಯನ್ನೂ ಸೇರಿಸಿರಲಿಲ್ಲ. ಮಾಸ್ತಿಯವರ ಬಹುತೇಕ ಕತೆಗಳ ಹಾಗೆ ಇದೂ ಕೂಡ. ಯಾರೋ ಯಾರಿಗೋ ಹೇಳಿದ ಕತೆಯನ್ನು ಮಾಸ್ತಿ ಓದುಗರಿಗೆ ಹೇಳಿದ್ದರು. ಸತ್ಯು ನನಗೆ.

ಸತ್ಯು ಅವರಿಂದ ಕತೆ ಕೇಳಿದಾಗ ಆದ ಅನುಭವ ನನಗೆ ಮಾಸ್ತಿಯವರ ಕತೆ ಓದಿದಾಗ ಆಗದಿರುವುದಕ್ಕೆ ಕಾರಣ, ಕತೆ ಒಬ್ಬರಿಂದೊಬ್ಬರಿಗೆ ದಾಟಿ ಹೋಗುವ ಪ್ರಕ್ರಿಯೆಯಲ್ಲಿ ಪಡೆಯುವ ಮರುಹುಟ್ಟುಗಳಿರಬಹುದು. ಅಂದರೆ ಮಾಸ್ತಿಯವರ ಕತೆಯನ್ನು ಸತ್ಯು ಗ್ರಹಿಸಿದ ರೀತಿ ಆ ಕತೆಯ ನನ್ನ ಓದಿಗಿಂತ ಭಿನ್ನವಾಗಿತ್ತು. ಒಬ್ಬ ಚಿತ್ರನಿರ್ದೇಶಕರಾಗಿ ಅವರು ಅದರ ಚಿತ್ರಕ ಶಕ್ತಿಯನ್ನು ಕೂಡ ಗಮನಿಸಿದ್ದರು. ಮಾಸ್ತಿ ಎರಡು ವಾಕ್ಯದಲ್ಲಿ ಹೇಳಿದ್ದನ್ನು ಸತ್ಯು ವಿವರಗಳಲ್ಲಿ ಕಂಡಿದ್ದರು. ಈ ಕತೆ ಬರೆಯಲು ಯೋಗ್ಯ, ನಾಲ್ಕು ಜನರಿಗೆ ಹೇಳಲು ಯೋಗ್ಯ ಎಂದು ಯಾವ ಕಾರಣಗಳಿಗಾಗಿ ಮಾಸ್ತಿಯವರಿಗೆ ಅನಿಸಿ ಅವರಿದನ್ನು ಬರೆದಿದ್ದರೋ ಬಹುಶಃ ಅದಕ್ಕಿಂತ ಹೆಚ್ಚಿನ ಅಥವಾ ಬೇರೆಯಾದ ಕಾರಣಗಳಿಗಾಗಿ ಸತ್ಯು ಅವರಿಗೆ ಈ ಕತೆ ಮುಖ್ಯವೆಂದು ಅನಿಸಿದೆ. ಒಬ್ಬ ಹೆಂಗಸು ಮನೆ ಬದಲಾಯಿಸುವ ಸನ್ನಿವೇಶವನ್ನು ಮಾಸ್ತಿ ಒಂದು ವಾಕ್ಯದಲ್ಲಿ ಹೇಳಿದ್ದರೆ ಸತ್ಯು ಅವರಿಗೆ ಅದು ವಿವರ ವಿವರಗಳಲ್ಲಿ ಕಂಡಿದೆ ಅವರ ಒಳಗಿನ ಯಾವುದೋ ತಂತಿಯನ್ನು ಮೀಟಿದೆ. ಈ ಕತೆಯನ್ನು ಕೇಳಿದಾಗ ನನ್ನಲ್ಲಿ ಅದು ಹುಟ್ಟಿಸಿದ ಅನುರಣನಗಳು, ಮತ್ತು ಈ ಕತೆ ಮುಖ್ಯವೆಂದು ನನಗೆ ಅನಿಸಿದ್ದಕ್ಕೆ ಇರುವ ಕಾರಣಗಳು ಬಹುಶಃ ಸತ್ಯು ಅವರ ಕಾರಣಗಳಿಗಿಂತ ಬೇರೆಯಾಗಿರಬಹುದು. ಈ ದಿಕ್ಕಿನಲ್ಲಿ ನೋಡುತ್ತ ಹೋದಂತೆ ಒ೦ದು ಕತೆ ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಸಾಧ್ಯತೆಗಳ ಅಗಾಧತೆಯ ಬಗ್ಗೆ ಕೌತುಕವಾಗುತ್ತದೆ. ಹೀಗೆಯೇ ಯಾರೋ ಹೇಳಿದ ಒಂದು ಘಟನೆ ಕತೆಯಾಗುತ್ತದೆ. ಅವರು ಕಂಡಿರದ ಸಾಧ್ಯತೆಗಳು ಕಾಣುತ್ತವೆ. ರಾಮಾನುಜನ್ ಹೇಳಿದ ಕತೆ ಎರಡು ಬೇರೆ ಬೇರೆ ನಾಟಕಗಳಾಗುತ್ತವೆ.

ಯಾರೋ ಯಾರಿಗೋ ಹೇಳಿದ ಕತೆಯನ್ನು ನಿಮಗೆ ಹೇಳುತ್ತಿದ್ದೇನೆ ಎಂಬಂತೆ ಇರುವ ಮಾಸ್ತಿಯವರ ಬಹುತೇಕ ಕತೆಗಳ ಸಂರಚನೆಯನ್ನು ಗಮನಿಸಿದರೆ ಇದರ ಹಿಂದೆ ಎರಡು ಮುಖ್ಯ ಭಾವಗಳು ಕಾಣುತ್ತವೆ: ಒಂದು, ಈ ಕತೆಯ ಅನೇಕ ಸಾಧ್ಯತೆಗಳಲ್ಲಿ ಒಂದನ್ನು ನಿಮಗೆ ಹೇಳುತ್ತಿದ್ದೇನೆ ಎಂಬುದನ್ನು ಸೂಚಿಸುವ ಮೂಲಕ ಓದುಗ ಹಾಗೂ ಲೇಖಕ ಇಬ್ಬರಿಂದಲೂ ಅವರು ಬಯಸುವ ನಮ್ರತೆ. ಇನ್ನೊಂದು, ಕತೆ ಮರುಹುಟ್ಟು ಪಡೆಯುವ ಈ ಪ್ರಕ್ರಿಯೆ ನಿಮ್ಮೊಳಗೂ ಶುರುವಾಗಲಿ ಎಂಬ ಒತ್ತಾಯ ಮತ್ತು ಶುರುವಾಗುತ್ತದೆಂಬ ಭರವಸೆ. ಹೀಗೆಯೇ ಕತೆಯೊಂದು ಬೇರೆ ಬೇರೆ ಮನಸ್ಸುಗಳಲ್ಲಿ, ಒ೦ದು ಮಾಧ್ಯಮದಿಂದ ಇನ್ನೊಂದರಲ್ಲಿ ಮರುಹುಟ್ಟು ಪಡೆಯುವ ಸಾಧ್ಯತೆಗಳ ಬಗ್ಗೆ ಹೇಳುತ್ತ ಅಡಿಗರು ‘ನಮ್ಮಲ್ಲಿ ಮಹಾಭಾರತ ಮತ್ತು ರಾಮಾಯಣಗಳ ನಂತರ ಕತೆಗಳು ಹುಟ್ಟಿಲ್ಲ’ ಎಂದಿದ್ದರು. ಒಂದು ಕಾದ೦ಬರಿಯೋ, ಕತೆಯೋ ಸಿನೇಮಾ ಆದಾಗ ಅದು ಮೂಲ ಕೃತಿಯಂತೆ ಇಲ್ಲ ಎಂದು ವಿವಾದಗಳು ಏಳದೇ ಇದ್ದರೆ `ಏನೋ ತಪ್ಪಿದಂತಾಗುತ್ತದೆ. ಗ್ರಹಿಕೆಯ ಕ್ರಮದಲ್ಲಿರುವ ವ್ಯತ್ಯಾಸವಲ್ಲದೇ, ಮಾಧ್ಯಮವೂ ಬದಲಾದಾಗ ಆಗುವ ಪರಿವರ್ತನೆಯ ಪ್ರಮಾಣವನ್ನು ಪರಿಗಣಿಸಿದರೆ ಇಂಥ ವಿವಾದಗಳು ಅನಗತ್ಯ ಅನಿಸಬಹುದು.

ಕತೆ, ಕತೆಗಾರನಿಂದ ಹೊರ ಹೋಗಿ ಓದುಗನಲ್ಲಿ ಮರುಹುಟ್ಟು ಪಡೆದು ಸಾರ್ಥಕವಾಗುತ್ತದೆ. ನಮ್ಮ ಜಾನಪದ ಸಾಹಿತ್ಯದಲ್ಲಿ ಇದು ಅನೇಕ ರೂಪಗಳಲ್ಲಿ ಕಾಣಸಿಗುತ್ತದೆ. ಕತೆಯನ್ನು ಯಾರಿಗೂ ಹೇಳದೇ, ಒಳಗೇ ಇಟ್ಟುಕೊಂಡಾತನ ಹೊಟ್ಟೆ ಉಬ್ಬಿದ್ದು ಅಂಥ ಒಂದು ರೂಪಕ, ಒಂದು ಕೃತಿಯ ಕುರಿತಾದ ಚರ್ಚೆ, ವಿಮರ್ಶೆ, ಜಗಳ, ಅಸಂತೋಷ ಎಲ್ಲವೂ ಅದರ ಜೀವಂತಿಕೆಯ ಚಿಹ್ನೆಗಳು, ಬದುಕಿರುವ ಮನುಷ್ಯರ ಜೊತೆಯ ವಾಗ್ವಾದ, ಸಂವಾದ, ಜಗಳಗಳ ಹಾಗೆ. ತಲೆಮಾರಿನಿಂದ ತಲೆಮಾರಿಗೆ ಹೊಸ ಹುಟ್ಟು ಪಡೆದು ಇನ್ನೂ ಜೀವಂತವಾಗಿರುವ ಸಾಹಿತ್ಯ ಕೃತಿಗಳ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಓದಿದ್ದನ್ನೇ ಮತ್ತೆ ಓದುತ್ತೇವೆ. ಇಲ್ಲಿ ‘ಕತೆ’ ಕೆರಳಿಸುವ ಕುತೂಹಲ ಅಮುಖ್ಯವಾಗುತ್ತದೆ. ಅದು ಎಬ್ಬಿಸುವ ಅನುರಣನಗಳು ಮುಖ್ಯವಾಗುತ್ತವೆ.

ಕಳೆದುಹೋದ ಗಳಿಗೆಗಳು ಪುನರ್ಜನ್ಮ ಪಡೆದಂತೆ ಎದ್ದು ಬರುವುದನ್ನು ಅನುಭವಿಸುವುದು ಲೇಖಕನ ರೋಮಾಂಚನಗಳಲ್ಲಿ ಮುಖ್ಯವಾದದ್ದು. ಎಲ್ಲೋ ಆಳದಲ್ಲಿ ಹೂತುಹೋದ ವಿವರಗಳು, ಆವರೆಗೂ ಕಳೆದೇಹೋದಂತಿದ್ದ ಘಟನೆಗಳು ಬರೆಯುವ ಕ್ಷಣಗಳಲ್ಲಿ ಪೂರ್ಣ ವಿವರಗಳೊಂದಿಗೆ ಎದ್ದುಬರುತ್ತವೆ. ಹೊಸ ಬೆಳಕಿನಲ್ಲಿ ಕಂಗೊಳಿಸುತ್ತವೆ. ಬರೆಬರೆಯುತ್ತ ಅದು ಒದಗಿಬರುವುದನ್ನು ಕಾಣುತ್ತ, ಕೌತುಕಪಡುತ್ತ, ಈ ಅನಾವರಣ ಹುಟ್ಟಿಸಿದ ರೋಮಾಂಚನವನ್ನು ಅನುಭವಿಸುವುದು ಸೃಷ್ಟಿಕ್ರಿಯೆಯ ಖುಷಿಗಳಲ್ಲೊಂದು. ಹೀಗೆ, ಒಂಟಿಯಾಗಿ ಪಡೆದದ್ದರ ಅನನ್ಯತೆಯಿರುವುದು ಬರೆವ ಕ್ಷಣದ ಖಂಡತುಂಡ ಪ್ರಾಮಾಣಿಕತೆಯಿಂದಾಗಿ. ಅನುಭವವೊಂದು ಕಥನವಾಗುವ, ಹಾಗಾಗುತ್ತ ಆಗುತ್ತ ಅದಕ್ಕೆ ತಕ್ಕ ಆಕಾರ, ರೂಪ ಪಡೆದು ಭಾಷೆಯಲ್ಲಿ ಮೈತಾಳುವ ಈ ಸೃಜನಕ್ರಿಯೆಯನ್ನು ಸ್ಫೂರ್ತಿಯೋ, ಪ್ರತಿಭೆಯೋ ಅಥವಾ ಬರೀ ಅದೃಷ್ಟವೋ ಅಥವಾ ಎಲ್ಲವೂ ಕೂಡಿ ಬಂದ ಕ್ಷಣವೋ ಇದೇ ಎಂದು ಮಾತಲ್ಲಿಡುವುದಂತೂ ಕಷ್ಟ. ‘ಕಥನವೇ ಎಲ್ಲ ಉತ್ತಮ ಗದ್ಯ ಸಾಹಿತ್ಯದ ಮೂಲ. ಲೇಖಕನಲ್ಲಿ ಈ ಕಥನಶಕ್ತಿ ಇಲ್ಲದಿದ್ದಲ್ಲಿ, ಯಾವುದೇ ರೂಪಕ, ಪ್ರತಿಮೆಗಳಿ೦ದಾಗಲೀ, ಭಾಷೆಯ ಆಟದಿಂದಾಗಲೀ, ವೈಚಾರಿಕತೆಯ ಲೇಪದಿಂದಾಗಲೀ ಈ ಅವಗುಣವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ’ ಎಂದು ಶ್ರೇಷ್ಠ ಕತೆಗಾರ ಸಿಂಗರ್‌ ಸೃಜನಶೀಲ ಗದ್ಯದ ಬಗ್ಗೆ ಹೇಳುತ್ತಾನೆ.

ಸೃಷ್ಟಿಕ್ರಿಯೆಯ ಕ್ಷಣಗಳಲ್ಲಿ ಅಗತ್ಯವಾದ ತಾದಾತ್ಮ್ಯ ಮತ್ತು ನಂತರದ ನಿರ್ಮೋಹವನ್ನು ಮಾಸ್ತಿಯವರಿಗೆ ಸ೦ಬ೦ಧಿಸಿದ ಈ ಘಟನೆ ಹೇಳುತ್ತದೆ: ತಮ್ಮ ಕೊನೆಯ ಕೆಲವು ಕತೆಗಳನ್ನು ಮಾಸ್ತಿ ಹೇಳಿ ಬರೆಸಿದ್ದರು. ಅಂಥ ಒಂದು ಕತೆಯನ್ನು ಪಡೆಯಲು ನನ್ನ ಸಂಪಾದಕ ಮಿತ್ರರೊಬ್ಬರು ಹೋಗಿದ್ದಾಗ ಮಾಸ್ತಿ ಅತ್ತಿಂದಿತ್ತ ಶಥಪಥ ನಡೆಯುತ್ತ ತಾವು ಹೇಳಿ ಬರೆಸಿದ ಕತೆಯನ್ನು ಓದಿಸಿ ಕೇಳಿಸಿಕೊಳ್ಳುತ್ತಿದ್ದರು. ಕತೆಯ ನಡುವೆ ಪಾತ್ರವೊಂದರ ಮಾತು ಕೇಳಿಸಿಕೊಂಡ ಅವರು ‘ಅಯ್ಯೋ ಪಾಪ ಅದಲ್ಲದೇ ಮತ್ತೇನು ಹೇಳಿಯಾನು?’ ಅಂದರಂತೆ!!
*****
ಭಾವನಾ ಏಪ್ರಿಲ್ ೨೦೦೦

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.