ಒಂದು ಬದಿ ಕಡಲು – ಆಯ್ದ ಭಾಗ

ಅಧ್ಯಾಯ ಒಂದು

– ೧ –

‘ಮಳೆ ಬಂದರೂ ಕಾಯೂದೇ… ’ ಅಂದಳು ಯಮುನೆ.
ಬೆಳಗಿನ ಎಂಟು ಗಂಟೆಯ ಹೊತ್ತಿಗೆ, ಮನೆಯ ಹಿಂಭಾಗದ ಹಿತ್ತಿಲ ಕೊನೆಯಲ್ಲಿರುವ ಗೇರು ಮರದ ಕೆಳಗೆ ಪಂಢರಿಯೂ ಅವಳ ಸೊಸೆ ಯಮುನೆಯೂ ಕಾದು ಕೂತಿದ್ದರು. ಅವರು ಇದ್ದಲ್ಲಿಂದ ನೆರೆಯ ದೇವರಾಯನ ಮನೆಯ ಹಿಂಬಾಗಿಲು ಮತ್ತು ಅಲ್ಲಿಂದ ಹೊರಟು ಅವನ ಹಿತ್ತಿಲ ತುದಿಯಲ್ಲಿರುವ ಪಾಯಖಾನೆಯನ್ನು ತಲುಪುವ ಕಾಲುಹಾದಿ ಸ್ಪಷ್ಟವಾಗಿ ಕಾಣುತ್ತಿತ್ತು. ಮಳೆ ನಿಂತು ಹೊಳವಾಗಿದ್ದರೂ ಮೋಡಗಳು ದಟ್ಟವಾಗಿದ್ದವು. ಸೂರ್ಯನ ಸುಳಿವಿರಲಿಲ್ಲ. ಮರದಿಂದ ಆಗಾಗ ತೊಟ್ಟಿಕ್ಕುವ ಭಾರವಾದ ಹನಿಗಳು ಕೆಳಗೆ ಒದ್ದೆ ಎಲೆಗಳ ಮೇಲೆ ಬಿದ್ದು ತಪ್‌ತಪ್ ಸದ್ದಾಗುತ್ತಿತ್ತು. ಸೊಂಟ ಬಿದ್ದ ಮುದುಕನ ಹಾಗೆ, ಬುಡದಲ್ಲೇ ಬಗ್ಗಿ ಅಡ್ಡಡ್ಡ ಬೆಳೆದಿದ್ದ ಗೇರು ಮರದ ಕಾಂಡದ ಮೇಲೆ ಇಬ್ಬರೂ ಕೂತಿದ್ದು, ಕೂತು ಬೇಜಾರಾಗಿ ಒರಗಿ ನಿಂತು, ಮತ್ತೆ ಮಾಡುವುದಕ್ಕೇನೂ ತೋಚದೇ ಕೆಳಗೆ ಬಿದ್ದ ಎಲೆಗಳನ್ನು ಕಾಲಿನಿಂದ ತಳ್ಳಾಡಿಸುತ್ತ, ಕಣ್ಣಿಗೆ ಬಿದ್ದ ಜಿಗ್ಗು ಹೆಕ್ಕಿ ಒಂದೆಡೆ ಹಾಕುತ್ತ, ಕಳೆ ಹುಡುಕಿ ಕೀಳುತ್ತ ಕಾದರು. ಮತ್ತೆ ಮಳೆ ಮೊದಲಾದರೂ ಹಿಡಿದ ಕೆಲಸ ಬಿಡಬಾರದೆನ್ನುವ ಹಟವನ್ನು ಪರಸ್ಪರ ಹೇಳಿಕೊಂಡರು.
uಟಿಜeಜಿiಟಿeಜ
‘ಈವತ್ತು ಇದಕ್ಕೆಲ್ಲ ಒಂದು ಗತಿ ಕಾಣಿಸೇ ಬಿಡ್ತೇನೆ…’ ಪಂಢರಿ ಸೊಸೆಗೆ ಕೇಳಿಸುವಂತೆ ಮಾತ್ರ ಹೇಳಿದರೂ ಅವಳ ಹರಿತ ದನಿ ಇನ್ನಷ್ಟು ಹರಿತವಾಗಿ ಕೇಳಿಸಿತು.

omಜu bಚಿಜi ಞಚಿಜಚಿಟu, iಟಟusಣಡಿಚಿಣioಟಿ bಥಿ Pಡಿಚಿmoಜ P ಖಿ‌ಈ ಇಬ್ಬರು ವಿಧವೆಯರು ನೆರೆಮನೆಯ ದೇವರಾಯನಿಗಾಗಿ ಹಿತ್ತಿಲಲ್ಲಿ ಕಾಯುತ್ತ ಕೂತು ಸುಮಾರು ಹೊತ್ತಾಗಿತ್ತು. ನಿತ್ಯ ಇಷ್ಟು ಹೊತ್ತಿಗೆ ಪಾಯಖಾನೆಗೆ ಹೋಗುತ್ತಿದ್ದ ಅವನು ಇನ್ನೂ ಬಂದಿರಲಿಲ್ಲ. ‘ಬಂದು ಹೋಗಿಲ್ಲ ಅಲ್ಲವೇ?’ ಎಂದು ತನ್ನ ಸಂಶಯವನ್ನು ಯಮುನೆ ಆಡಿತೋರಿಸಿದೊಡನೆ ಪಂಢರಿ ‘ಇಲ್ಲವೇ ಇಲ್ಲ… ನನಗೆ ಅವರು ಬರುವ ಹೊತ್ತು ಚೆನ್ನಾಗಿ ಗೊತ್ತು…ಬರದೇ ಎಲ್ಲಿ ಹೋಗ್ತಾರೆ?… ತಿಂದದ್ದು ಎಲ್ಲಿ ಹೋಗ್ತದೆ?….’ ಎಂದು ಮುಖ ಓರೆ ಮಾಡಿ ನಕ್ಕಳು. ತುಸು ಮುಂದೆ ಬಿದ್ದ ದಪ್ಪನೆಯ ಹಸಿ ಜಿಗ್ಗನ್ನು ಎರಡು ಹೆಜ್ಜೆ ಮುಂದೆ ಹೋಗಿ ಎತ್ತಿಕೊಂಡು, ಮುರಿಯಹೋದಾಗ ನಡುವೆ ಬಗ್ಗಿದ ಅದನ್ನು ಬಲಹಾಕಿ ಒತ್ತಿ ತುಂಡರಿಸಿ ಪಕ್ಕದಲ್ಲೇ ಒಟ್ಟಿದ್ದ ರಾಶಿಯ ಮೇಲೆ ಎಸೆದಳು. ಬೆಳ್ಳಗಿನ ಅವಳ ಮೋರೆಯ ಮೇಲೆ ಈ ಮಳೆಗಾಲದಲ್ಲೂ ಹರಿಯತೊಡಗಿದ ಬೆವರ ಹನಿಗಳನ್ನು ಸೆರಗಿನಿಂದ ಒರೆಸಿಕೊಂಡಳು.

ಸಾಧಾರಣ ಹೆಂಗಸರಿಗಿಂತ ಸುಮಾರು ಅರ್ಧ ಅಡಿ ಎತ್ತರವಾಗಿದ್ದ ಪಂಢರಿ ತುಸು ತೋರವಾಗಿದ್ದರೂ ಅವಳ ಎತ್ತರ ಅದನ್ನು ಮುಚ್ಚಿಹಾಕಿತ್ತು. ಅಲ್ಲಲ್ಲಿ ಬೆಳ್ಳಗಾಗಿದ್ದ ದಟ್ಟ ಗುಂಗುರು ಕೂದಲು ಪ್ರಯಾಸದಿಂದ ತುರುಬಿನಲ್ಲಿ ಸೇರಿಕೊಂಡಂತಿತ್ತು. ದವಡೆಯನ್ನು ಒಂದರ ಮೇಲೊಂದಿಟ್ಟು ಅಮುಕುವ ಅಭ್ಯಾಸದಿಂದಾಗಿ ಅವಳು ಹಾಗೆ ಮಾಡಿದಾಗೆಲ್ಲ ಕೆನ್ನೆಯ ಎಲುಬುಗಳು ಅಲುಗಾಡುವುದು ಕಾಣುತ್ತಿತ್ತು. ಅವಳು ಅವಡುಗಚ್ಚಿದ್ದೇ ಕಪೋಲದ ನರವೊಂದು ಉಬ್ಬಿನಿಲ್ಲುವುದು. ಒಂದಿಷ್ಟು ಓಡಾಡಿದರೂ ಸಾಕು ಅವಳ ಮೈಯಿಂದ ಬೆವರು ಧಾರಾಕಾರ ಹರಿಯುವುದು. ಬೋಳು ಹಣೆಯ ಮೇಲೆ ಯಾವಾಗಲೂ ಬೆವರಿನ ಸಾಲು. ಅವಳ ರವಿಕೆಯ ಬೆನ್ನು, ತೋಳು, ಕಂಕುಳೆಲ್ಲ ಸದಾ ತೇವವಾಗಿದ್ದು ಒದ್ದೆ ರವಿಕೆ ತೊಟ್ಟವಳಂತೆ ಕಾಣಿಸುವಳು. ಎಷ್ಟೋ ವರ್ಷಗಳ ಹಿಂದೆ ಈ ರೀತಿ ಬೆವರಿಳಿಯುವ ಬಗ್ಗೆ ಒಂದಿಷ್ಟು ಔಷಧಿ ಮಾಡಿದ್ದರೂ ಅದರ ಮೂಲಕಾರಣ ಸರಿಯಾಗಿ ಗೊತ್ತಾಗದೇ ಹಳದೀಪುರದ ವೈದ್ಯರು ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವಂತೆ ಹೇಳಿದ್ದರು. ಅಂದಿನಿಂದ ಪಂಢರಿ ಸದಾ ಒಂದು ತಿರಗಣೆ ತಂಬಿಗೆಯಲ್ಲಿ ನೀರು ಇಟ್ಟುಕೊಂಡೇ ಇರುವಳು.
ಪಂಢರಿಯ ಮಾತೆತ್ತಿದರೆ ಜನರ ಕಣ್ಣ ಮುಂದೆ ಬರುವುದು ಒಂದೇ ಕೈಯಿಂದ ಅವಳು ಆ ಭಾರವಾದ ತಂಬಿಗೆಯನ್ನು ಅನಾಯಾಸವಾಗಿ ಎತ್ತಿ, ಬಾಯನ್ನು ಅಗಲಿಸಿ ಗಟಗಟನೇ ಒಳಗೆ ನೀರು ಸುರಿದುಕೊಳ್ಳುವ ದೃಶ್ಯ. ಆ ಎಂದು ತೆರೆದೂ ತೆರೆದೂ ಇನ್ನಷ್ಟು ಅಗಲವಾಗಿದೆಯೇನೋ ಎಂದು ಭಾಸವಾಗುವ ಅವಳ ಬಾಯಿ. ತೋರ ತೋಳು. ಬೆಳ್ಳಗಿನ ಹೊಟ್ಟೆ. ಬೆವರಿನಿಂದ ತೊಯ್ದ ಒದ್ದೆ ಒದ್ದೆ ರವಿಕೆ. ಅವಳು ನೀರು ಕುಡಿಯುತ್ತಿದ್ದಂತೆ, ಗಟಗಟ ಸದ್ದಿಗೆ ಜೊತೆಜೊತೆಯಾಗಿ ಹಿಂದೆ ಮುಂದೆ ಅಲುಗಾಡುವ ಅವಳ ಗಂಟಲ ಗಂಟು. ಒಂದೇ ಒಂದು ಹನಿ ಆಚೆ ಬೀಳದ ಹಾಗೆ ಕುಡಿದರೂ, ಕುಡಿದು ಮುಗಿದ ಬಳಿಕ ಸೆರಗಿನಿಂದ ಬಾಯಿ ಒರೆಸಿಕೊಳ್ಳುವಳು. ‘ತಂಬಿಗೆ ಪಂಢರಿ’ ಎಂದು ಅವಳಿಗೆ ಅಡ್ಡ ಹೆಸರು ಬೀಳುವುದಕ್ಕೆ ಕಾರಣವಾದ ಈ ಹಿತ್ತಾಳೆಯ ತಂಬಿಗೆ ಸದಾ ಮಿರಮಿರ ಮಿಂಚುತ್ತಿತ್ತು. ಸತತ ಉಪಯೋಗದಿಂದ ಅದರ ತಿರಗಣೆಯ ಮುಚ್ಚಳ ಅತಿ ನಯವಾಗಿತ್ತು. ಮುಚ್ಚಳವನ್ನು ತಂಬಿಗೆಯ ಬಾಯಿಗೆ ಇಟ್ಟು ಒಂದು ಸಲ ತಿರುಗಿಸಿದರೆ ಸಾಕು ಗರಗರನೇ ಸುತ್ತಿ ಸುತ್ತಿ ತಳದವರೆಗೂ ಹೋಗಿ ಗಕ್ಕನೇ ಕೂತುಬಿಡುವುದು. ಮಕ್ಕಳಿಗೆಲ್ಲ ಅದನ್ನು ಮುಟ್ಟಿ ತಿರುಗಿಸುವ ಆಸೆಯಾದರೂ ಪಂಢರಿಯ ಹತ್ತಿರ ಹೋಗಿ ಕೇಳುವ ಧೈರ್ಯ ಯಾರಿಗೂ ಇರಲಿಲ್ಲ. ಅವಳಂತೂ ಒಂದು ಕ್ಷಣವೂ ಅದನ್ನು ಬಿಟ್ಟು ಇರುತ್ತಿರಲಿಲ್ಲ. ಎಂಥ ಗಹನ ಹರಟೆಯ ನಡುವೆಯೂ ಅವಳ ಎಡದ ಕೈ ಆಗಾಗ, ಅವಳಿಗೇ ಅರಿವಿಲ್ಲದ ಹಾಗೆ ತಂಬಿಗೆಯನ್ನು ಮುಟ್ಟಿ ಮುಟ್ಟಿ ಅದರ ಇರವನ್ನು ಪರಿಶೀಲಿಸುತ್ತಿರುವುದು.
‘ಇವರನ್ನು ಕಾಯುವ ಕರ್ಮ ಬಂತಲ್ಲ ನಮಗೆ.. ಅದೇನೋ ಹೇಳ್ತಾರಲ್ಲ ಹಾಗೆ ಕಾಯಬೇಕಾಯ್ತಲ್ಲ…’
ಜಿಗ್ಗು ಆರಿಸುತ್ತ ಪಂಢರಿ ಗೊಣಗಿದಳು. ಅದೇನೋ ಅಂದರೆ ಹೆಣ ಕಾದ ಹಾಗೆ ಅನ್ನುವುದು ಮನಸ್ಸಿಗೆ ಥಟ್ಟನೇ ಹೊಳೆದರೂ ಇಬ್ಬರೂ ಅದನ್ನು ಬಾಯಿಬಿಟ್ಟು ಹೇಳಲಿಲ್ಲ.
‘ನಾವು ಸುಮ್ಮನೇ ಇರ್‍ತೀವಿ ಅಂತ ತಿಳ್ಕೊಂಡಿದಾನಲ್ಲ ಮುದುಕ’
ಯಮುನೆ ಹೀಗೆಂದಾಗ, ತಾವು ಸುಮ್ಮನೇ ಇರುವವರಲ್ಲ ಎಂದು ತಿಳಿದೂ ಈ ಸಾಹಸಕ್ಕೆ ಕೈ ಹಾಕಿರಬೇಕಾದರೆ ಇದರ ಹಿಂದೆ ಬೇರೇನೋ ಇರಬಹುದೇ ಎಂಬ ಸಂಶಯ ಪಂಢರಿಯ ಮನಸ್ಸಿನೊಳಗೆ ಒಂದು ಕ್ಷಣ ಮಿಂಚಿಹೋಯಿತು. ಅವಳು ಸೊಸೆಯತ್ತ ನೋಡಿದಳು. ತುಸುವೇ ಅರಳಿದಂತಿರುವ ಹೊರಳೆಗಳು, ಹೌದೋ ಅಲ್ಲವೋ ಎಂಬಂತೆ ಉಬ್ಬಾಗಿರುವ ಮುಂದಿನ ಹಲ್ಲುಸಾಲು, ಮುಡಿತುಂಬ ಕೂದಲು ಯಮುನೆ ಹೆದೆಯೇರಿಸಿದ ಬಿಲ್ಲಿನಂತೆ ಬೊಡ್ಡೆಗೆ ಆತು ನಿಂತಿದ್ದಳು.

ತಲೆ ಎತ್ತಿ ಆಕಾಶ ನೋಡಿ ಯಮುನೆ ‘ನಿಮಗೆ ಚಾ ಮಾಡಿಕೊಟ್ಟು ನಾ ಮೀನು ಪೇಟೆಗೆ ಹೋಗಿ ಬರ್‍ತೆ’ ಅಂದಳು.
ವೇಳೆಯ ಯಾವುದೇ ಕಟ್ಟುಪಾಡುಗಳಿಲ್ಲದ ಅವರ ಜೀವನಕ್ಕೆ ಅವರವರೇ ಹೀಗೆ ಪರಸ್ಪರ ಕಟ್ಟು ಹಾಕಿಕೊಳ್ಳುವರು. ‘ನಿನ್ನ ಸ್ನಾನ ಆಗಿದ್ದೇ ನಾನು ಮಾಡ್ತೆ’ ‘ನೀ ಮಸಾಲೆ ಅರೆದ ಮೇಲೆ ನಾನು ತಪ್ಪಲೆ ಇಡ್ತೆ’ ಹೀಗೆ ಇನ್ನೊಬ್ಬರ ಯಾವುದೋ ಕೆಲಸಕ್ಕೋ, ವೇಳಾಪಟ್ಟಿಗೋ ತಮ್ಮನ್ನು ತಳಕು ಹಾಕಿಕೊಳ್ಳಲು ನೋಡುತ್ತಿದ್ದರು. ಮನೆಯ ಎದುರಿನ ರಸ್ತೆಯಲ್ಲಿ ಹಾದುಹೋಗುವ ಶಾಲೆಯ ಮಕ್ಕಳನ್ನು ನೋಡಿ ‘ಶಾಲೆಯ ಮಕ್ಕಳು ಗಂಜಿ ಊಟಕ್ಕೆ ಬಂದೇ ಬಿಟ್ಟರಲ್ಲ… ಯಮುನಾ, ಇನ್ನೂ ಸ್ನಾನ ಆಗಿಲ್ಲವಲ್ಲ ನಿನ್ನದು’ ಎಂದು ಅವಸರ ಮಾಡುತ್ತಲೋ, ಅವರ ಬೀದಿಯ ಕೊನೆಯ ಮನೆಯ ಶಿನ್ನ ಊಟಕ್ಕೆ ಬಂದುದರ ಮೇಲಿನಿಂದ ‘ಶಿನ್ನ ಊಟಕ್ಕೆ ಬಂದೇ ಬಿಟ್ಟನಲ್ಲೇ… ಇನ್ನೂ ನಮ್ಮದು ತಪ್ಪಲೆ ಇಟ್ಟೇ ಆಗಿಲ್ಲವಲ್ಲ…’ ಅನ್ನುತ್ತಲೋ ತಮ್ಮ ದೈನಿಕಗಳನ್ನು ಹೊರಜಗತ್ತಿನ ಜೊತೆ ಜೋಡಿಸಲು ಪ್ರಯತ್ನಿಸುವರು. ಶಾಲೆಯ ಮಕ್ಕಳು ಗಂಜಿಯ ಊಟಕ್ಕೆ ಹೋದರೂ, ಶಿನ್ನ ಅವನ ಪಾಡಿಗೆ ಅವನ ಮನೆಗೆ ಊಟಕ್ಕೆ ಬಂದರೂ ಇವರಿಗೆ ಆಗಬೇಕಾದುದೇನೂ ಇಲ್ಲ. ಆದರೆ ಅದೆಲ್ಲ ಯಾವ ರೀತಿಯಿಂದಲೂ ತಮಗೆ ಸಂಬಂಧಪಟ್ಟದ್ದಲ್ಲವೆಂದು ಅವರು ಮಾತ್ರ ಭಾವಿಸಿಕೊಂಡಿಲ್ಲ. ತಾವು ಯಾವುದೇ ಬಂಧನಗಳಿಲ್ಲದ ಅತಂತ್ರ ಒಂಟಿಜೀವಗಳೆಂದು ಗೊತ್ತಿದ್ದರೂ, ಊರಿನ ಚಲನೆಗಳ ಜೊತೆ ಹೇಗೋ ಕೊಂಡಿ ಹಾಕಿಕೊಳ್ಳಲು ಯತ್ನಿಸುವರು. ಶಿನ್ನನ ಹೆಂಡತಿ ಒಂದೇ ವಾರದಲ್ಲಿ ಮರಳಿ ತವರಿಗೆ ಯಾಕೆ ಹೋದಳು ಎಂದು ಕೌತುಕ, ಅವಳ ಅತ್ತೆಯ ವಾತದ ಕಾಲಿಗೆ ಪಂಢರಿಯೇ ಅಮದಳ್ಳಿಯಿಂದ ತರಿಸಿಕೊಟ್ಟ ಎಣ್ಣೆ ಮುಗಿಯಿತೋ ಎಂಬ ಆತಂಕ, ಶಾಲೆಗೆ ಭೇಟಿಕೊಟ್ಟ ಇನ್ಸ್‌ಪೆಕ್ಟರು ಶಂಭು ಮಾಸ್ತರರ ಮೇಲೆ ಏನೋ ಶರಾ ಬರೆದರೆಂಬ ಬಗ್ಗೆ ಕಳವಳ – ಹೀಗೆ ಅವರಿಗೆ ಕಾಳಜಿ ಮಾಡಿಕೊಳ್ಳಲು ಹಲವು ಸಂಗತಿಗಳಿದ್ದವು. ‘ಹೌದೋ ವಾಮನಾ… ನಿನ್ನ ಅಣ್ಣ ಅವನ ಹೆಂಡತಿಗೆ ಪೌಳಿಯ ಸರ ಮಾಡಿಸಿದನಂತೆ ಹೌದೇನೋ?’ ಎಂದು ಅವನು ಎದುರಿಸಲು ಇಷ್ಟಪಡದ ಪ್ರಶ್ನೆಯನ್ನು ಕೇಳುವರು. ಅವರ ಪ್ರಶ್ನೆಗೆ ಉತ್ತರಿಸದೇ ಹೋಗುವ ಧೈರ್ಯ ತೋರಿಸುವವರು, ಈ ಇಬ್ಬರು ವಿಧವೆಯರ ಬಾಯಿಗೆ ತಾನಾಗಿ ಬಂದು ಬೀಳುವವರು ಈ ಊರಲ್ಲಿ ಯಾರೂ ಇರಲಿಲ್ಲ.
‘ಈ ಮಳೆಯಲ್ಲಿ ಮೀನು ಸಿಕ್ಕ ಹಾಗೇ… ಚಿಪ್ಪು ಮೀನು ಸಿಕ್ಕರೆ ತಾ’ ಎಂದು ಪಂಢರಿ ಹೇಳುತ್ತಿದ್ದಂತೆ ದೇವರಾಯ ಬರುವುದು ಕಣ್ಣಿಗೆ ಬಿತ್ತು. ಅವನು ಪಾಯಖಾನೆಯತ್ತ ನಡೆಯುತ್ತಿದ್ದ ಹಾಗೆ ಇಬ್ಬರೂ ಇನ್ನೊಂದು ದಿಕ್ಕಿಗೆ ತಿರುಗಿ, ಬಗ್ಗಿ, ಏನೋ ಹೆಕ್ಕುವ ನಟನೆ ಮಾಡಿದರು. ಅವನು ಹಿಂದಿರುಗಿ ಬಂದಾಗಲೇ ಅವನನ್ನೆದುರಿಸಲು ತಕ್ಕ ಸಮಯವೆಂದು ಗೊತ್ತಿದ್ದ ಇಬ್ಬರೂ ಮನಸ್ಸಿನಲ್ಲೇ ಸಿದ್ಧರಾಗತೊಡಗಿದರು. ಅವಸರವಾಗಿ ಹೋದ ದೇವರಾಯ ಒಳಸೇರಿಕೊಂಡು, ಕ್ಯಾಕರಿಸುತ್ತ ಕೆಮ್ಮುತ್ತ ಹಾಡುತ್ತ, ಇತರ ಸದ್ದುಗಳನ್ನು ಅಡಗಿಸಲು ಪ್ರಯತ್ನಿಸಿದ. ‘ತಾನನಾ… ತನಾ ಆ‌ಆ‌ಆ‌ಆ’ ಎಂದು ಅವನು ಹೊರಡಿಸಿದ ದನಿ ಮತ್ತು ಅದನ್ನೂ ಮೀರಿ ಬಂದ ಸದ್ದುಗಳು ಈ ಇಬ್ಬರು ಹೆಂಗಸರನ್ನು ತಲುಪಿದ್ದರೂ, ಅದು ಕಿವಿಗೆ ಬೀಳಲಿಲ್ಲವೆಂಬಂತೆ, ತಮ್ಮ ಪಾಡಿಗೆ ತಾವು ಇರುವಂತೆ ನಟಿಸುತ್ತ, ಜಿಗ್ಗು ಹೆಕ್ಕುವುದರಲ್ಲಿ ತೊಡಗಿಕೊಂಡರು.
uಟಿಜeಜಿiಟಿeಜ
– ೨ –

ಪಂಢರಿ ವಿಧವೆಯಾದಾಗ ಅವಳಿಗೆ ಇಪ್ಪತ್ತು ವರ್ಷ. ಯಮುನೆಯ ಗಂಡ ತೀರಿಹೋದಾಗ ಅವಳಿಗೂ ಇಪ್ಪತ್ತು ವರ್ಷ. ನೋವಾದಲ್ಲೇ ಮರಳಿ ಮರಳಿ ಪೆಟ್ಟಾಗುವಂತೆ, ಕಾಲಚಕ್ರ ತಿರುತಿರುಗಿ ಇವರ ಮನೆಗೇ ದುರಂತವನ್ನು ಹೊತ್ತು ತರುವಂತೆ ಯಮುನೆಯ ಗಂಡ ಶಂಕರ ಮದುವೆಯಾದ ಒಂದು ವರ್ಷದೊಳಗೇ ತೀರಿಕೊಂಡ. ಶಾಲೆಯಲ್ಲಿ ಮಾಸ್ತರನಾಗಿದ್ದ ಅವನು ಒಂದು ದಿನ ಗಂಜಿ ಊಟಕ್ಕೆ ಮನೆಗೆ ಬಂದವನು ಜಗುಲಿಯಲ್ಲಿ ಕುಳಿತು ‘ಅಮ್ಮಾ’ ಎಂದು ಕರೆದ. ಅವನು ಬಂದದ್ದು ತಿಳಿದು ಬೇಗ ಬೇಗ ಮಣೆ ಹಾಕಿ, ಎಲೆಯಲ್ಲಿ ಗಂಜಿ ಬಡಿಸಿ, ಮೇಲೆ ಕಲ್ಲುಪ್ಪು ಹಾಕಿ, ಬದಿಯಲ್ಲಿ ನೀರಿನ ಚೆಂಬು ಇಟ್ಟು ಯಮುನೆ ಆಚೆ ಬಂದಾಗ ಅವನು ಆರಾಮ ಖುರ್ಚಿಯಲ್ಲಿ ಕೂತಲ್ಲೇ ತಲೆ ಮುಂದಕ್ಕೆ ವಾಲಿಸಿ ಕುಸಿದಿದ್ದು ಕಾಣಿಸಿತು. ಅವನ ಛತ್ರಿ ಇನ್ನೂ ಕೈಯಲ್ಲೇ ಇತ್ತು. ‘ಇವರೇ ಇವರೇ’ ಎಂದು ಕಂಗಾಲಾಗಿ ಕರೆಯುತ್ತ, ಅತ್ತೆಯನ್ನು ಕೂಗುತ್ತ ಯಮುನೆ ಅವನತ್ತ ಧಾವಿಸಿದಳು. ಎರಡೂ ಅಂಗೈಗಳ ನಡುವೆ ಅವನ ತಲೆ ಹಿಡಿದು ಎತ್ತಲು ಪ್ರಯತ್ನಿಸಿದ ಕ್ಷಣದಲ್ಲಿಯೇ ಅವನು ಇನ್ನಿಲ್ಲ ಎಂದು ಅವಳಿಗೆ ಗೊತ್ತಾಗಿಹೋಯಿತು. ಅವನು ಕರೆದದ್ದು ಯಾಕೆ? ಅವನಿಗೆ ಗೊತ್ತಾಗಿತ್ತೇ? ಹೊಂಚು ಹಾಕಿದ ವಿಧಿ ಬರುವುದನ್ನವನು ಕಂಡಿದ್ದನೇ? ಅಯ್ಯೋ ದೇವರೇ ಅವನು ಕರೆದಾಗ ತಕ್ಷಣ ಬಾರದೇ ಮಣೆ ಹಾಕುತ್ತ ಕೂತೆನಲ್ಲ ಎಂದೆಲ್ಲ ಅವಳು ನಾನಾ ರೀತಿಯಾಗಿ ಪರಿತಪಿಸಿದಳು.

ತಕ್ಷಣ ಊರಿನ ಜನ ಕಿಕ್ಕಿರಿದು ಸೇರಿದರು. ಈ ಸುದ್ದಿಯನ್ನು ನಂಬಲು ಸಾಧ್ಯವಿಲ್ಲದ ಹಾಗೆ ‘ಶಂಕರನನ್ನು ಈಗ ತಾನೆ ಆ ಮುರ್ಕಿಯಲ್ಲಿ ನೋಡಿದೆನಲ್ಲ’, ‘ಸಂಜೆ ಬೇಲೆ ಕಡೆಗೆ ಹೋಗುವ ಅಂತ ಹೇಳಿದನಲ್ಲ’, ಮುಂತಾಗಿ ಮಾತಾಡುತ್ತ ತಮ್ಮ ಕಳವಳವನ್ನು ಮುಚ್ಚಿಡಲು ಪ್ರಯತ್ನಿಸಿದರು. ಒಳಗೆ ಅತ್ತೆ ಸೊಸೆಯರಿಗೆ ಸಮಾಧಾನ ಹೇಳಹೋದವರು, ಅವರು ಮಾತಿಲ್ಲದೇ ಕೂತದ್ದು ನೋಡಿ, ಯಾವುದಕ್ಕೂ ಪ್ರತಿಕ್ರಿಯಿಸದ್ದನ್ನು ನೋಡಿ ಏನು ಹೇಳಬೇಕೋ ತೋಚದೇ ಸುಮ್ಮನೇ ತಿರುಗಿ ಬಂದರು. ಅಳದವರಿಗೆ ಹೇಗೆ ಸಮಾಧಾನ ಮಾಡಬಹುದೆಂದು ಅವರಿಗೂ ಗೊತ್ತಾಗಲಿಲ್ಲ. ಯಾವ ಮಾತುಗಳಿಗೂ ಅವರ ದುಃಖ ನಿಲುಕುವಂತಿರಲಿಲ್ಲ. ಮನೆತುಂಬ ಸೇರಿದ ಜನ ಅಪ್ಪಿತಪ್ಪಿ ಅಡಿಗೆ ಮನೆಯತ್ತ ಹಾದಾಗ, ಮಣೆಯೆದುರು ಎಲೆಯ ಮೇಲೆ ಬಡಿಸಿಟ್ಟ ಗಂಜಿ ಕಂಡು ಕಳವಳಗೊಂಡರು. ಗಂಜಿಯ ಮೇಲೆ ಬಡಿಸಿದ ಉಪ್ಪು ಕರಗಿ ಕಂದು ರಸವಾಗಿ ಎಲೆಯ ಒಂದು ಪಕ್ಕ ಮಡುಗಟ್ಟಿತ್ತು. ಎಲ್ಲವೂ ಏರುಪೇರಾದ ಈ ಕ್ಷಣದ ಮುಂಚೆ ಇಲ್ಲೊಂದು ಸಹಜ ದೈನಿಕ ಜರುಗುತ್ತಿತ್ತು ಎಂಬುದನ್ನು ಒತ್ತಿ ಒತ್ತಿ ಹೇಳುವಂತೆ ಇದ್ದ ಆ ದೃಶ್ಯವನ್ನು ಗಮನಿಸಿದರೂ, ತಮ್ಮೊಳಗೆ ದಾಖಲಿಸಿಕೊಳ್ಳಲು ಅಂಜಿದವರಂತೆ ಅದನ್ನು ನಿರ್ಲಕ್ಷಿಸಿದರು.

ಶಂಕರನ ದೇಹವನ್ನು ಒಯ್ಯುವಾಗ ಮಾತ್ರ ಪಂಢರಿಯೂ ಯಮುನೆಯೂ ‘ಅಯ್ಯೋ ಒಯ್ಯಬೇಡಿ’ ಎಂದು ಗದ್ದಲ ಎಬ್ಬಿಸಿ ಸುತ್ತಲಿನವರನ್ನು ತಳ್ಳಿಹಾಕುತ್ತ, ತಡೆಯಲು ಪ್ರಯತ್ನಿಸಿದರು. ನಾಲ್ಕೈದು ಜನ ಸೇರಿ ಇವರಿಬ್ಬರ ರಟ್ಟೆ ಹಿಡಿದು ನಿಲ್ಲಿಸಬೇಕಾಯಿತು.
ಆ ರಾತ್ರಿ ಹೊತ್ತಿಸಿಟ್ಟ ದೀಪದ ಬದಿಯಲ್ಲಿ, ತುದಿಯನ್ನು ಹಾಲಿನ ಬಟ್ಟಲಲ್ಲಿ ಇಳಿಬಿಟ್ಟು ಮೇಲಿನ ಮೊಳೆಯೊಂದಕ್ಕೆ ನೇತು ಹಾಕಿದ ನೂಲಿನ ನೆರಳು ಅಲ್ಲಾಡುವುದನ್ನು ನೋಡುತ್ತ ಕೂತಾಗ ಅವರಿಗೆ ಮುಂದಿನ ದಿನಗಳ ಚಿತ್ರ ಮೂಡತೊಡಗಿತ್ತು. ಅತ್ತೆ ತಮ್ಮ ಅಕಾಲ ವೈಧವ್ಯದ ಬಗ್ಗೆ ಹಿಂದೆಲ್ಲ ಹೇಳುತ್ತಿದ್ದ ಮಾತುಗಳು ಯಮುನೆಯ ಚಿತ್ತಕ್ಕೆ ಬಂದು ಅಧೀರಳಾದಳು. ಹನ್ನೆರಡನೆಯ ದಿನದ ಕರ್ಮಗಳನ್ನೆಲ್ಲ ದಾಯಾದಿ ರಘುವೀರ ಬಂದು ಪೂರೈಸಿಕೊಟ್ಟ. ಇಪ್ಪತ್ತು ವರ್ಷದ ಯಮುನೆಯ ಹಣೆ ಬೋಳಾಯಿತು. ಕೈಯಲ್ಲಿದ್ದ ಬಳೆಗಳನ್ನು ಪಂಢರಿಯೇ ಹಟಹಿಡಿದು ಇರಿಸಿದಳು. ‘ಆಡುವವರಿಗೇನು? ಅವರ ಬಾಯಲ್ಲಿ ಸೆಗಣಿ ಬೀಳಲಿ?’ ಎಂದಳು ಪಂಢರಿ. ಅವಳು ಅವುಡುಗಚ್ಚಿ ಆಡಿದ ಈ ಮಾತಿನ ಅರ್ಥದ ಗಹನತೆ, ಅದರ ಹಿಂದೆ ಇದ್ದ ಧೈರ್ಯ ಮತ್ತು ಧಾಡಸಿತನ, ಯಮುನೆಗೆ ಮುಂದೆ, ಆ ದೊಡ್ಡ ಮನೆಯಲ್ಲಿ ಪಂಢರಿಯ ಜೊತೆ ಇರುತ್ತ, ಒಬ್ಬರಿಗೊಬ್ಬರು ಆಸರೆಯಾಗುತ್ತ ಕಳೆಯುವ ದಿನಗಳಲ್ಲಿ, ಹಲವು ರೀತಿಗಳಲ್ಲಿ ಗೊತ್ತಾಯಿತು.

ಸಾಯುವ ಮುಂಚೆ ಶಂಕರ ‘ಅಮ್ಮಾ’ ಎಂದು ಕರೆದಿದ್ದರಿಂದ ಪಂಢರಿ ಸೊಸೆಯ ಬಗ್ಗೆ ಮೊದಲಿನ ಅಸಹನೆ ತೋರಿಸುವುದನ್ನು ಬಿಟ್ಟಳು. ಈ ಮನೆ ಕಟ್ಟುವಾಗ ಸರಿಯಾಗಿ ಶಾಂತಿ ಮಾಡಿಸದೇ ಇದ್ದುದೇ ಈ ಕುಟುಂಬದ ದುರಂತಕ್ಕೆ ಕಾರಣವೆಂದು ಅನೇಕರು ಒಳಗೊಳಗೇ ನಂಬಿದ್ದರೂ ದೊಡ್ಡ ಬಾಯಿಯ ಈ ಇಬ್ಬರು ಹೆಂಗಸರಿಗೆ ಏನನ್ನಾದರೂ ಹೇಳುವ ಧೈರ್ಯ ಮಾತ್ರ ಯಾರಿಗೂ ಇರಲಿಲ್ಲ. ಎಲ್ಲವನ್ನೂ ಕಳಕೊಂಡ ಅವರಿಗೆ ಯಾವುದರದೂ ಎಗ್ಗಿಲ್ಲವೇನೋ ಎಂದು ಜನರಿಗೆ ಕೆಲವೊಮ್ಮೆ ಅನಿಸುತ್ತಿತ್ತು. ಮಾತಿಗೋ ಮರ್ಯಾದೆಗೋ ಅಂತೂ ಈ ಜೋಡಿಯ ಎದುರು ಬಾಯಿಕಟ್ಟಿದಂತಾಗುತ್ತಿದ್ದರು.

ಮುರ್ಡೇಶ್ವರದ ಹತ್ತಿರ ಗೇಣಿಗೆ ಕೊಟ್ಟ ತುಂಡು ಹೊಲ ಬಿಟ್ಟರೆ ಅವರಿಗೆ ಇದ್ದುದು ಮನೆಯ ಹಿತ್ತಲು ಮಾತ್ರ. ಅಲ್ಲಿ ಬಸಳೆ ತೆಂಗು ಮಾವು ಹಲಸು ಹೀಗೆ ತಮಗೆ ನಿತ್ಯದ ಊಟಕ್ಕೆ ಬೇಕಾದದ್ದು ಮಾತ್ರವಲ್ಲದೆ ಯಾವುದನ್ನು ಮಾರಲು ಸಾಧ್ಯವೋ ಅದೆಲ್ಲವನ್ನೂ ಬೆಳೆಸಿದರು. ‘ಎಂಥ ದಿನಗಳು ಬಂದವು ನೋಡು…. ನಮ್ಮಲ್ಲಿ ಈ ರೀತಿ ಮನೆಯಲ್ಲಿ ಬೆಳೆದದ್ದನ್ನು ಮಾರಾಟ ಮಾಡಿಯೇ ಗೊತ್ತಿರಲಿಲ್ಲ…. ಇನ್ನು ಇವರಿಂದ ಏನೇನು ಕಲಿಯಬೇಕೋ…’ ಮುಂತಾದ ಮಾತುಗಳಿಗೆ ಅವರು ಕಿವಿಗೊಡದೇ ಹುಚ್ಚು ಹಿಡಿದವರ ಹಾಗೆ ತೋಟವನ್ನು ಸಲಹುತ್ತ ಇದ್ದು ಬಿಟ್ಟರು. ಹುಣ್ಣಿಮೆ ಅಮವಾಸ್ಯೆಯೆನ್ನದೇ, ರಾತ್ರಿ ಹಗಲೆನ್ನದೇ, ಹೊತ್ತಲ್ಲದ ಹೊತ್ತಲ್ಲಿ ಅವರು ತೋಟದಲ್ಲಿ ಇರುತ್ತಾರೆಂಬ ಪ್ರತೀತಿಯಿಂದಾಗಿ ಹೋಳಿ ಹುಣ್ಣಿಮೆಯ ಹೊತ್ತಿಗೆ ಕೂಡ ಅವರ ಹಿತ್ತಿಲಿನಿಂದ ಒಂದು ಕಡ್ಡಿಯನ್ನೂ ಕದಿಯಲಾಗುತ್ತಿರಲಿಲ್ಲ. ಇಂಥ ದುರಂತಗಳು ವೈರಾಗ್ಯ ಹುಟ್ಟಿಸುವ ಬದಲು ಅವರೊಳಗಿನ ಜೀವನದ ಛಲವನ್ನು ಕೆಣಕಿದವೇ ಎಂದನಿಸುವಷ್ಟು ಲೌಕಿಕರಾಗಿ ಕಾಣುತ್ತಿದ್ದರು. ಊರಿನ ಜನ ತಮ್ಮ ಜೊತೆ ಒಡನಾಡುವಾಗ ತುಸು ಕನಿಕರ ತೋರಿಸುತ್ತಾರೆ ಎಂಬ ಭಾವನೆ ಬಂದರೂ ಸಾಕು ಕೆರಳಿಬಿಡುತ್ತಿದ್ದರು. ಈ ಅನುಕಂಪವನ್ನು ಮೀರಲೆಂಬಂತೆ ಎಷ್ಟೋ ಬಾರಿ ಅವರಾಗಿಯೇ ಕಾಲು ಕೆದರಿ ಜಗಳ ಕಾಯುತ್ತಿದ್ದರು.
ಅವರ ತೋಟವನ್ನು ನೋಡಿದರೆ, ಅತ್ತೆ ಸೊಸೆಯರ ಪ್ರಾಣಪಕ್ಷಿಯೇ ಅಲ್ಲಿದೆಯೆಂದು ಗೊತ್ತಾಗುತ್ತಿತ್ತು. ಅಲ್ಲಿಯ ಪ್ರತಿ ಗಿಡಬಳ್ಳಿಯ ಪರಿಚಯವೂ ಅವರಿಗಿತ್ತು. ಪ್ರತಿ ಪಾತಿಯಲ್ಲಿ ಹುಯ್ದ ನೀರೆಷ್ಟು, ಯಾವುದಕ್ಕೆ ಎಷ್ಟು ಗೊಬ್ಬರ ಬಿದ್ದಿದೆ, ಯಾವ ಮರದ ಕಾಯಿಗಳು ಹಣ್ಣುಗಳಾಗಲು ಎಷ್ಟು ದಿನ ಬೇಕು, ಹಲಸಿನ ಮರಕ್ಕೆ ಎಷ್ಟು ಹಣ್ಣು ಬಿಟ್ಟಿದೆ ಇತ್ಯಾದಿ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳು ಅವರಿಗೆ ಉಸಿರಾಟದ ಹಾಗೆ ಸರಾಗವಾಗಿದ್ದವು. ಅಲ್ಲಿ ಬಿದ್ದ ಪ್ರತಿ ಅನ್ಯ ಹೆಜ್ಜೆಯ ಗುರುತು ಅವರಿಗೆ ತಕ್ಷಣ ಗೊತ್ತಾಗುತ್ತಿತ್ತು. ಇಬ್ಬರ ಸತತ ಆರೈಕೆಯಿಂದ ತೋಟ ಸ್ವಚ್ಛವಾಗಿ ಮಡಿಸಿಟ್ಟ ಬಟ್ಟೆಯ ಹಾಗೆ ಇತ್ತು.
uಟಿಜeಜಿiಟಿeಜ
– ೩ –

ಈವತ್ತು ಇಬ್ಬರೂ ಕಾದು ಕುಳಿತಿರುವುದಕ್ಕೆ ಕಾರಣ ಹುಡುಕಲು ಹೋದರೆ ಅದು ಎರಡು ಹಿತ್ತಿಲ ನಡುವಿನ ಬಾಂದಿನ ಕಲ್ಲಿಗೂ, ಅಲ್ಲಿಂದ ಕೆಲವು ವರ್ಷ ಹಿಂದೆ ಹೋದರೆ ಮರದಿಂದ ತಾನಾಗಿ ಕಳಚಿ ಬಿದ್ದ ಒಂದು ಮಾವಿನಕಾಯಿಗೂ, ಅದಕ್ಕೂ ಹಿಂದೆ ಹೋದರೆ ದೇವರಾಯನ ಮನೆಯಲ್ಲಿದ್ದು ಓದಲು ಬಂದ ಪುರಂದರನವರೆಗೂ ಹೋಗುತ್ತದೆ.

ಶರಾವತಿ ಸಮುದ್ರ ಸೇರುವುದು ಹೊನ್ನಾವರದಲ್ಲಿ. ಲಾಂಚುಗಳು, ಮೀನುದೋಣಿಗಳು, ದೊಡ್ಡ ತೆಪ್ಪಗಳು, ಇನ್ನೂ ದೊಡ್ಡ ಮಚವೆಗಳು, ನದಿ ದಾಟುವವರು, ದಾಟಿ ಬಂದವರು, ಮೀನು ಮಾರುವವರು, ತರಕಾರಿ ಬುಟ್ಟಿ ಹೊತ್ತವರು, ಅನಗತ್ಯ ಧಾವಂತದಲ್ಲಿ ಅತ್ತಿಂದಿತ್ತ ಓಡಾಡುವವರು – ಹೀಗೆ ಯಾವುದೋ ಭರಭರಾಟೆಯಲ್ಲಿರುವ ಬಂದರಿನಿಂದ ಏರುಮುಖವಾಗುತ್ತ ಊರೊಳಗೆ ಬರುವ ರಸ್ತೆಯ ಬಲಪಕ್ಕಕ್ಕೆ ಇರುವುದು ಕೋಟೆಗುಡ್ಡ. ಅದೇ ರಸ್ತೆ ಮುಂದಕ್ಕೆ ಹೋಗಿ ಕವಲೊಡೆಯುವುದು ಮೊಹರಮ್ ಹಬ್ಬಕ್ಕೆ ಕೆಂಡ ಹಾಯುವ ಜಾಗದ ಎದುರಿಗೆ. ಗುಡ್‌ಲಕ್ ಹೊಟೇಲು ಇರುವುದು ಅಲ್ಲಿಯೇ. ಅಲ್ಲೇ ಎಡಪಕ್ಕದಲ್ಲಿ ಹೋಗುವ ಕಿರಿದಾದ ಓಣಿಯ ಬಾಯಿಯಲ್ಲಿ ಒಂದು ಕಲ್ಲಿನ ಮೇಲೆ ‘ಬಂದರ ಓಣಿ ನಂ ೨’ ಎಂದು ಬರೆದಿದೆ. ಇದನ್ನು ಹಿಡಿದು ಬಂದರೆ ಎಡಕ್ಕೆ ಮೊಟ್ಟ ಮೊದಲು ಕಾಣಿಸುವ ಹಂಚಿನ ಮನೆಯೇ ದೇವರಾಯನದು. ಅದರ ಪಕ್ಕದಲ್ಲೇ ಇರುವುದು ಪಂಢರಿಯ ಮನೆ. ಎರಡೂ ಅಷ್ಟೇನೂ ದೊಡ್ಡ ಮನೆಗಳಲ್ಲದಿದ್ದರೂ ಮಾಡಿಗೆ ಹೆಂಚು ಹೊದೆಸಿದ್ದರಿಂದ ತುಸು ಘನತೆಯಲ್ಲಿ ನಿಂತಂತೆ ಕಾಣುತ್ತಿದ್ದವು. ದಣಪೆಯ ಭಾಗವೊಂದನ್ನು ಬಿಟ್ಟರೆ ಎರಡೂ ಮನೆಗಳ ಎದುರಿನ ಪಾಗಾರವನ್ನು ದಟ್ಟವಾದ ಹಸಿರು ಮುಚ್ಚಿಹಾಕಿತ್ತು. ದೇವರಾಯನ ಮನೆಯ ದಣಪೆಯಿಂದ ಜಗುಲಿಯವರೆಗಿನ ಕಾಲುಹಾದಿಗೆ ನಡುನಡುವೆ ಕಲ್ಲು ಚಪ್ಪಡಿಗಳನ್ನು ಹಾಕಲಾಗಿತ್ತು. ಮಳೆಗಾಲದಲ್ಲಿ ಕೆಸರಿನಿಂದ ಕಾಲು ಕೊಚ್ಚೆಯಾಗದೇ ನಡೆಯಬೇಕೆಂದರೆ ಈ ಚಪ್ಪಡಿಗಳ ಮೇಲೆ ಕಾಲಿಟ್ಟು ಕುಪ್ಪಳಿಸಬೇಕಿತ್ತು.
ಎರಡೂ ಮನೆಗಳಿಗೆ ಹಿಂಭಾಗದಲ್ಲಿ ದೊಡ್ಡ ದೊಡ್ಡ ಹಿತ್ತಿಲುಗಳಿವೆ. ದೇವರಾಯನ ಮನೆಯ ಹಿತ್ತಿಲು ಎತ್ತರದ ಮರಗಳಿಂದ, ಮನಸ್ವೀ ಬೆಳೆದ ದಾಸಾಳ ಆಬೋಲಿ ಗಿಡಗಳಿಂದ, ಬೆಳೆದು ನಿಂತ ಹುಲ್ಲಿನಿಂದ, ಕೀಳದ ಕಳೆಯಿಂದ ಅಂಕೆ ಮೀರಿ ಹೋದಂತೆ ಕಾಣುವುದು. ಪಂಢರಿಯ ಮನೆಯ ಹಿತ್ತಿಲಲ್ಲೂ ಎತ್ತರದ ಮರಗಳು, ನಾನಾ ಹೂಬಳ್ಳಿಗಳು ತರಕಾರಿ ಗಿಡಗಳು ಇತ್ಯಾದಿ ದೇವರಾಯನ ಭಾಗಕ್ಕಿಂತ ಜಾಸ್ತಿಯೇ ಇದ್ದರೂ ಅವರದು ಸ್ವಚ್ಛವಾಗಿ ಬೆಳೆಸಿದ, ಅಂಕೆಯಲ್ಲಿಟ್ಟು ಸಲಹಿದ ತೋಟದ ಹಾಗೆ, ವಿಧೇಯ ಮತ್ತು ಜಾಣ ಮಗುವಿನ ಹಾಗೆ ಕಾಣುವುದು.
ವರ್ಷಗಳ ಹಿಂದೆ ಪುರಂದರನನ್ನು ಜೊತೆಯಲ್ಲಿ ಕರೆದುಕೊಂಡು ದೇವರಾಯನ ಈ ಮನೆಗೆ ವಾಸುದೇವ ಬಂದಾಗ ಸಂಜೆಯಾಗಿತ್ತು.
‘ತಾರಿ ದಾಟಲಿಕ್ಕೆ ಕಾದು ಕಾದು ಇಷ್ಟು ಹೊತ್ತಾಯಿತು. ಎಲ್ಲಾ ಮೀನು ದೋಣಿ ಹತ್ತಿ ಹೋಗಿದ್ದಾರೆ ಕಾಣ್ತದೆ. ಇಲ್ಲಿ ಜನರನ್ನು ದಾಟಿಸಲಿಕ್ಕೆ ನಾಲ್ಕು ಆಳು ಇಲ್ಲ.’
ಜಗುಲಿ ಏರುತ್ತಿದ್ದ ಹಾಗೆ ವಾಸುದೇವ ಹೊತ್ತು ಮೀರಿ ಬಂದದ್ದರ ಕಾರಣ ವಿವರಿಸತೊಡಗಿದ. ಬಿಳಿಯ ಧೋತರ, ಬಿಳಿಯ ಟೊಪ್ಪಿಗೆ, ಬಿಳಿಯ ಪೈರಣದಲ್ಲಿ ಅವನ ಕಪ್ಪು ಬಣ್ಣ ಎದ್ದು ಕಾಣುತ್ತಿತ್ತು. ನಕ್ಕರೆ, ಓರಣವಾಗಿ ಜೋಡಿಸಿಟ್ಟಂತೆ ತೋರುವ ಹಲ್ಲುಗಳು. ದೊಡ್ಡ ಮೂಗು. ನುಣ್ಣಗೆ ಬೋಳಿಸಿದ ಮೀಸೆಯಿಲ್ಲದ ಮುಖ.
ಕೈಯಲ್ಲಿದ್ದ ಚೀಲವನ್ನು ಪಡಸಾಲೆಯ ಒಂದು ಬದಿಯಲ್ಲಿದ್ದ ಆರಾಮ ಕುರ್ಚಿಗೆ ಒರಗಿಸಿಟ್ಟ.
ವಾಸುದೇವನ ಜೊತೆ ಬಂದ ಹುಡುಗ ಹಿಂಜರಿಯುತ್ತ, ಅವನ ಹಿಂದೆಯೇ ನಡೆದು ಬಾಂಕಿನತ್ತ ಹೋಗಿ ಕೂತದ್ದನ್ನು ಗಮನಿಸುತ್ತಿದ್ದ ಕಾವೇರಿ ‘ಇವನು ಯಾರು?’ ಅಂದಳು.
‘ಗುರುತಾಗಲಿಲ್ಲವೇ? ನನ್ನ ತಂಗಿ ಸಾವಿತ್ರಿಯ ಮಗ ಪುರಂದರ.’
‘ಅರೆ ಹೌದಲ್ಲ. ನಾನು ನೋಡಿದ್ದು ಎಷ್ಟೋ ವರ್ಷಗಳ ಹಿಂದೆ. ಅಲ್ಲಲ್ಲ, ಮೂರು ವರ್ಷಗಳ ಹಿಂದೆ ನಮ್ಮ ಗೋವಿಂದ ನಾಯಕರ ಮಗಳ ಮದುವೆಯಲ್ಲಿ. ಆದರೂ ಬೆಳೆಯುವ ಹುಡುಗರ ಗುರುತು ಹತ್ತುವುದು ಸ್ವಲ್ಪ ಕಷ್ಟವೇ ಅನ್ನು… ಅಪ್ಪನ ಹಾಗೇ ಕಾಣುತ್ತಾನೆ…’ ಪುರಂದರನಿಗೆಂದೂ ನೋಡಿ ನೆನಪಿರದ ಅಪ್ಪನನ್ನು ನೆನೆಸಿಕೊಳ್ಳುತ್ತ ಗುರುತು ಹಿಡಿದಳು.
ಒರಟು ಅನಿಸುವಷ್ಟು ಗುಂಗುರಾಗಿದ್ದ ಕೂದಲು, ತುಸು ದಪ್ಪ ಕೆಳ ತುಟಿ, ಬೆಳ್ಳಗಿನ ಮೋರೆಯ ಮೇಲೆ ಎದ್ದು ತೋರುವ ದಟ್ಟ ಹುಬ್ಬುಗಳು – ಉದ್ದ ಚಡ್ಡಿ ಮತ್ತು ಶರಟು ಹಾಕಿಕೊಂಡು ಸಂಕೋಚದಲ್ಲಿ ಬಾಂಕಿನ ತುದಿಗೆ ಕೂತ ಹುಡುಗನನ್ನು ನೋಡುತ್ತ ಕಾವೇರಿ ‘ಹಾಗೇ, ಅಪ್ಪನ ಹಾಗೇ…’ ಎಂದು ಮತ್ತೊಮ್ಮೆ ಹೇಳಿ ‘ನಿನಗೆ ಪಾನಕ ಕೊಡಲೇನೋ?’ ಎಂದು ಕೇಳಿದಳು. ಪುರಂದರ ಒಪ್ಪಿಗೆಯಲ್ಲಿ ತಲೆಯಾಡಿಸಿದ.
‘ಇವರು ಟಪ್ಪರ್ ಹಾಲ್ ಕಡೆಗೆ ಹೋದವರು ಇನ್ನೂ ಬಂದಿಲ್ಲ. ಇನ್ನೇನು ಬರುವ ಹೊತ್ತಾಯಿತು. ಕೂತುಕೋ… ಚಾ ಮಾಡ್ತೇನೆ…’ ಕಾವೇರಿ ವಾಸುದೇವನ ಜೊತೆ ಉಪಚಾರದ ಮಾತಾಡಿ ಒಳಹೋದಳು.
ವಾಸುದೇವ ತನ್ನ ಟೊಪ್ಪಿಗೆ ತೆಗೆದು ಗೋಡೆಗಿದ್ದ ಗಿಳಿಗೂಟಕ್ಕೆ ಸಿಕ್ಕಿಸಿದ. ಎಡ ಅಂಗೈಯಿಂದ ತಲೆಯನ್ನೊಮ್ಮೆ ಸವರಿಕೊಂಡ. ನಡುಮನೆಗೆ ಹೋಗುವ ಬಾಗಿಲ ಪಕ್ಕದಲ್ಲಿದ್ದ ಆರಾಮ ಖುರ್ಚಿಯ ಮೇಲೆ ಕೂತುಕೊಂಡು ‘ಸ್’ ಎಂದು ಉಸಿರುಬಿಟ್ಟ.
ಪುರಂದರ ಕೂತ ಪಡಸಾಲೆಗೆ ಕಟ್ಟಿಗೆಯ ಕಟಾಂಜನವಿತ್ತು. ಅದಕ್ಕೆ ಹಸಿರು ಬಣ್ಣ. ಒಳಗೆ ಬರುತ್ತಿದ್ದ ಹಾಗೆ ಎದುರಾಗುವುದು ನಡುಮನೆಗೆ ಹೋಗುವ ಬಾಗಿಲು. ಆ ಬಾಗಿಲಿನ ಎರಡೂ ಪಕ್ಕ ದ್ವಾರಪಾಲಕರಂತೆ ಎರಡು ಆರಾಮ ಖುರ್ಚಿಗಳು. ಇತ್ತ ಕಡೆ ಕರಿ ಮರದ ಬಾಂಕು. ಅದರ ಒಂದು ಬದಿಯಲ್ಲಿ ನಾಲ್ಕು ಬೆತ್ತದ ಕೈಬೀಸಣಿಗೆಗಳು. ಪಡಸಾಲೆಯಲ್ಲಿ ಕೂತು ಕಟಾಂಜನದ ಆಚೆ ನೋಡಿದರೆ ಬಲಭಾಗದಲ್ಲಿರುವ ಬಾವಿಯ ಕಟ್ಟೆ, ಅದರ ಪಕ್ಕದ ಕೊಟ್ಟಿಗೆ ಮತ್ತು ಅದಕ್ಕೆ ತಾಗಿಯೇ ಇದ್ದ ಬಚ್ಚಲು ಮನೆ, ಪಾಗಾರದ ಆಚೆ ರಸ್ತೆ, ರಸ್ತೆಯ ಮೇಲೆ ಓಡಾಡುವ ಜನ – ಎಲ್ಲವೂ ಕೂತಲ್ಲಿಂದಲೇ ಕಾಣುತ್ತಿತ್ತು. ಪಡಸಾಲೆಯ ಗೋಡೆಗೆ ಹಳೆಯ ದೊಡ್ಡ ಗಡಿಯಾರ. ಮತ್ತು ಕಟ್ಟು ಹಾಕಿಸಿದ ಹಲವಾರು ಫೋಟೋಗಳು.
ಗೋಡೆಯ ಮೇಲೆ ತನ್ನ ಮಾವ ವಾಸುದೇವ ಮತ್ತು ಅವನ ಹೆಂಡತಿ ಕಸ್ತೂರಿ ಜೊತೆಯಾಗಿ ಕೂತು ತೆಗೆಸಿದ ಫೊಟೋ ಇದ್ದುದನ್ನು ಪುರಂದರ ಗಮನಿಸಿದ. ಒಂದು ಕುರ್ಚಿಯ ಮೇಲೆ ಕಸ್ತೂರಿ ಕೂತಿದ್ದಳು ಮತ್ತು ಪಕ್ಕದಲ್ಲಿ ವಾಸುದೇವ ನಿಂತಿದ್ದ. ಕುರ್ಚಿಯ ಪಕ್ಕ ಒಂದು ಸ್ಟ್ಯಾಂಡಿನ ಮೇಲೆ ಹೂ ಗುಚ್ಛವೊಂದಿತ್ತು. ಹಿಂದೆ ಕಪ್ಪು ಪರದೆಯಿತ್ತು. ಈ ಫೋಟೋದ ಪಕ್ಕದಲ್ಲಿ ಅದೇ ಹಿನ್ನೆಲೆಯಲ್ಲಿ, ಅದೇ ಕುರ್ಚಿ ಹೂಗುಚ್ಛಗಳು, ಅದೇ ಭಂಗಿಯಲ್ಲಿ ಇನ್ನೂ ಮೂರು ಜೋಡಿಗಳಿದ್ದವು. ಪುರಂದರ ಪೋಟೋಗಳನ್ನು ನೋಡುತ್ತಿರುವುದನ್ನು ಗಮನಿಸಿದ ವಾಸುದೇವ ಎದ್ದು ಹತ್ತಿರ ಹೋಗಿ ನಿಂತು, ಅವುಗಳನ್ನು ಒಂದೊಂದಾಗಿ ಪುರಂದರನಿಗೆ ವಿವರಿಸಿದ:
‘ಸರಿಯಾಗಿ ನೋಡು. ಈ ಮನೆಗೆ ಬೇಕಾದವರೆಲ್ಲರೂ ಈ ಫೋಟೋಗಳಲ್ಲಿದ್ದಾರೆ. ನಾಲ್ಕೂ ತಂಗಿಯರ ಫೋಟೋಗಳಿವೆ. ನಾಲ್ಕು ಜೋಡಿ. ಎಲ್ಲಾ ಒಂದೇ ದಿನ, ಒಂದೇ ಕಡೆ, ಹುಬ್ಬಳ್ಳಿಯಲ್ಲಿ ತೆಗೆದ ಫೋಟೋಗಳು. ದೇವರಾಯ ಮಾತ್ರ ಕಟ್ಟು ಹಾಕಿಸಿ ಇಟ್ಟುಕೊಂಡಿದ್ದಾನೆ. ನಾವೆಲ್ಲ ಅಂದುಕೊಂಡೆವೇ ಹೊರತು ಮಾಡಲಿಲ್ಲ. ಈ ಮೊದಲನೇ ಫೋಟೋದಲ್ಲಿರುವುದು ಕಾವೇರಿ ಮತ್ತು ಅವಳ ಗಂಡ ದೇವರಾಯ. ಕಾವೇರಿ ಎಲ್ಲರಿಗೆ ಅಕ್ಕ. ಅವಳ ಎರಡನೇ ತಂಗಿ ನಿನ್ನ ಕಸ್ತೂರಿ ಅತ್ತೆ ಅಂದರೆ ನನ್ನ ಹೆಂಡತಿ. ಅದರ ಪಕ್ಕದಲ್ಲಿರುವುದು ಮೂರನೆಯ ತಂಗಿ ಮಥುರಿ ಮತ್ತು ಅವಳ ಗಂಡ ಅನಂತ. ಅವರಿಬ್ಬರೂ ಈಗ ಇಲ್ಲ. ಅವರಿಗೊಬ್ಬ ಮಗಳಿದ್ದಾಳೆ. ಅವಳನ್ನು ಈ ನಾಲ್ಕನೆಯ ತಂಗಿ ಗೋದಾವರಿ ಮತ್ತು ಗಂಡ ಸರ್ವೋತ್ತಮ ಸಾಕಿಕೊಂಡಿದ್ದಾರೆ. ಅಕ್ಕತಂಗಿಯರ ಫೋಟೋಗಳ ನಂತರ ಅಲ್ಲಿ ಕೊನೆಯಲ್ಲಿ ಸೂಟು ಹಾಕಿಕೊಂಡ ಬೇರೆ ಥರದ ಫೋಟೋ ಇದೆಯಲ್ಲ ಅದು ಇವರೆಲ್ಲರ ತಮ್ಮ ಮಂಜುನಾಥನದು. ಅವನ ಹೆಂಡತಿ ಗಿರಿಜೆ. ಅವನೀಗ ಹುಬ್ಬಳ್ಳಿಯಲ್ಲಿ ಇರುವುದು. ಬ್ಯಾಂಕಿನಲ್ಲಿ ಕೆಲಸ.’
ಫೋಟೋಗಳನ್ನೇ ನೋಡುತ್ತ ಪುರಂದರ ಮನಸ್ಸಿನಲ್ಲೇ ಹೆಸರುಗಳನ್ನು ಮರುಕಳಿಸಿಕೊಳ್ಳತೊಡಗಿದ. ಬಾಲ್ಯದಲ್ಲಿ ಪರವಡಿ ಹೇಳುವಾಗ ಋತುಗಳನ್ನು ಹೇಳುವಂತೆ ದೇವರಾಯ-ಕಾವೇರಿ ವಸಂತ ಋತು, ವಾಸುದೇವ-ಕಸ್ತೂರಿ ಗ್ರೀಷ್ಮ ಋತು, ಅನಂತ-ಮಥುರಿ ಶರತ ಋತು, ಸರ್ವೋತ್ತಮ-ಗೋದಾವರಿ ಶಿಶಿರ ಋತು ಅಂದುಕೊಂಡ. ಎಲ್ಲವೂ ರಿ ಅಕ್ಷರದಿಂದ ಕೊನೆಯಾಗುವ ಹೆಸರುಗಳು. ಕಾವೇರಿ-ಕಸ್ತೂರಿ-ಮಥುರಿ-ಗೋದಾವರಿ. ಎಷ್ಟು ಪ್ರಯತ್ನಿಸಿದರೂ ಮಂಜುನಾಥ-ಗಿರಿಜೆಗೆ ಎಲ್ಲಿಯೂ ಪ್ರಾಸ ಹೊಂದಲಿಲ್ಲ.
ಗೋಡೆಗೆ ನೇತು ಹಾಕಿದ ದೊಡ್ಡ ಗಡಿಯಾರದ ಪೆಂಡುಲಮ್ ಟಿಕ್ ಟಿಕ್ ಅನ್ನುತ್ತ ತೂಗುತ್ತಿತ್ತು. ಅದು ಢಣಾ ಢಣಾ ಎಂದು ಗಂಟೆ ಬಾರಿಸಲು ಶುರುಮಾಡುವುದಕ್ಕೂ, ದಣಪೆಯಲ್ಲಿ ದೇವರಾಯ ಬರುವುದು ಕಾಣಿಸಲಿಕ್ಕೂ, ಕಾವೇರಿ ಒಳಗಿನಿಂದ ಚಾ ಮತ್ತು ಪಾನಕ ತಗೊಂಡು ಬರುವುದಕ್ಕೂ ಸರಿಹೋಯಿತು.
ಆಮೇಲೆ ದೇವರಾಯ ಮತ್ತು ವಾಸುದೇವ ಪಡಸಾಲೆಯಲ್ಲಿ ಮಾತಾಡುತ್ತ ಕೂತರು. ವಾಸುದೇವ ಚಾ ಕುಡಿದ. ಪುರಂದರನ ಬಗ್ಗೆ ಹೇಳಿದ. ಹೆಸರು ಕೇಳಿದ್ದೇ ದೇವರಾಯ ‘ಓಹೋ ಪುರಂದರದಾಸರು’ ಅಂದ. ಶಾಲೆಯಲ್ಲಿ ಹೀಗೆ ಕಿಚಾಯಿಸಿಕೊಂಡು ರೋಸಿಹೋಗಿದ್ದ ಪುರಂದರನಿಗೆ ಇಲ್ಲೂ ಅದನ್ನು ಕೇಳಿ ರಗಳೆಯಾಯಿತು. ‘ಮತ್ತೆ ಪಾನಕ ಬೇಕೇನೋ?’ ಎಂಬ ಕಾವೇರಿಯ ಉಪಚಾರದ ಮಾತು ಕೂಡ ರುಚಿಸಲಿಲ್ಲ.
ಆಮೇಲೆ ನಡುಮನೆಗೆ ಹೋಗಿ ವಾಸುದೇವ ಮತ್ತು ದೇವರಾಯ ಮಾತಾಡಿದರು. ಕಾವೇರಿಯೂ ಅಲ್ಲಿ ಇದ್ದಳು. ನಡುಮನೆಯಿಂದ ತುಂಡು ತುಂಡು ಮಾತುಗಳು ಕೇಳಿಬಂದವು.
‘ಹುಡುಗನ ಸಲುವಾಗಿ ಮಾಡುತ್ತಿದ್ದೇನೆ. ಅವನು ಓದಿ ಮುಂದೆ ಬಂದರೆ ಸಾಕು. ಗಂಡ ಹೋದ ಮೇಲೆ ಸಾವಿತ್ರಿ ಸಾಕಷ್ಟು ಅನುಭವಿಸಿಯಾಗಿದೆ. ಈಗ ಒಂದು ವರ್ಷದ ಮಟ್ಟಿಗೆ ಇಲ್ಲಿ ಇದ್ದರೆ ಸಾಕು. ಮೆಟ್ರಿಕ್ ಪಾಸಾದ ಮೇಲೆ ಮುಂದಿನ ವರ್ಷ ಬೇರೆ ಕಡೆ ಹೋಗುವುದು ಇದ್ದೇ ಇದೆ…’
‘ಬೇಕಾದರೆ ಈಗಲೇ ಬಂದು ಇದ್ದು ಬಿಡಲಿ. ನಮಗೇನೂ ಹೊರೆಯಲ್ಲ’
‘ಸ್ವಲ್ಪ ದಿನ ಬಿಟ್ಟು ಕರಕೊಂಡು ಬರುತ್ತೇನೆ. ಈ ಸಲ ಎಂಆರ್‌ಎಸ್ ಮಾಸ್ತರರ ಸ್ಪೆಶಲ್ ಕ್ಲಾಸುಗಳು ರಜೆ ಮುಗಿಯುವ ಹತ್ತು ದಿನ ಮೊದಲೇ ಶುರುವಾಗುತ್ತವಂತೆ…’
uಟಿಜeಜಿiಟಿeಜ


– ೪ –

ಈ ಮನೆಗೆ ಬಂದ ಮೇಲೆ, ಬೆಳಕು ಹರಿಯುವ ಮುಂಚೆಯೇ ಎದ್ದು ಓದಲು ಕೂರುತ್ತಿದ್ದ ಪುರಂದರನಿಗೆ ದಿನವೊಂದು ಹುಟ್ಟುವಾಗಿನ ಎಲ್ಲ ಸದ್ದುಗಳು ಪರಿಚಿತವಾಗಿದ್ದವು. ಆ ನೀರವದಲ್ಲಿ ಎಂದಾದರೊಮ್ಮೆ ಧಪ್ ಎಂದು ಬೀಳುತ್ತಿದ್ದ ಮಾವಿನ ಕಾಯಿಗಳಂತೂ ಅವನ ಗಮನವನ್ನು ವಿಶೇಷವಾಗಿ ಸೆಳೆಯುತ್ತಿದ್ದವು. ಕಾಯಿಯೊಂದು ಎಲೆಗಳ ಎಡೆಯಿಂದ ಹಾದು ಅವುಗಳನ್ನು ಸವರಿಕೊಂಡು ಬರುವಾಗಿನ ಸೂಕ್ಷ್ಮ ಸದ್ದು ಅವನನ್ನು ತಲುಪಿ, ಅದು ಧೊಪ್ಪೆಂದು ಬೀಳುವವರೆಗೂ ಅವನು ನಿರೀಕ್ಷೆಯಲ್ಲಿ ಕಾಯುವುದು – ಒಂದು ದೀರ್ಘ ಕ್ರಿಯೆಯ ಹಾಗೆ ತೋರಿದರೂ, ಇದೆಲ್ಲವೂ ಆ ಕಾಯಿ ತೊಟ್ಟಿನಿಂದ ಕಳಚಿ ನೆಲ ತಾಗುವವರೆಗಿನ ಕ್ಷಣಮಾತ್ರದ ಅವಧಿಯಲ್ಲಿ ಜರುಗಿಹೋಗುತ್ತಿತ್ತು. ಅವನಿಗೆ ಮಾವೆಂದರೆ ಬಲು ಇಷ್ಟ. ಅದರಲ್ಲೂ ಈಗ ಬೀಳುವ ಕಾಯಿಗಳಲ್ಲಿ, ತುಸು ತಡೆದು ಬಲಿತ, ಅಪರೂಪದ ಇಷಾಡಗಳಿರುವುದು ಗೊತ್ತಿದ್ದರಿಂದ ಬೆಳಕು ಹರಿಯುತ್ತಲೇ ಎದ್ದು ಅವುಗಳನ್ನು ಆರಿಸತೊಡಗಿದ. ತಾನು ಆರಿಸಿದ ಕಾಯಿಗಳನ್ನು ನಡುಮನೆಯ ತನ್ನ ಮಂಚದ ಕೆಳಗೆ ಹುಲ್ಲು ಹಾಸಿ ಇಡತೊಡಗಿದ.

ಇನ್ನೂ ರಜೆಯ ಮನಸ್ಥಿತಿಯಲ್ಲೇ ಇದ್ದವನಿಗೆ, ಬೆಳಗಿನ ಹೊತ್ತು ಓದಿನ ನಡುವೆ, ಬಿಡುವು ಪಡೆಯಲು ಮಾವಿನಕಾಯಿ ಆರಿಸುವ ಕೆಲಸ ಒದಗಿ ಬಂತು. ಅದಕ್ಕೂ ಮೊದಲು ದೇವರಾಯನಾಗಲೀ, ಕಾವೇರಿಯಾಗಲೀ ಹಿತ್ತಿಲಿಗೆ ಹೋದಾಗ ಕಣ್ಣಿಗೆ ಕಂಡರೆ ಮಾತ್ರ ಬಿದ್ದ ಕಾಯಿಗಳನ್ನು ಹೆಕ್ಕಿ ತರುತ್ತಿದ್ದರೇ ಹೊರತು ತಾವಾಗಿ ಹೋಗಿ ಹುಡುಕುತ್ತಿರಲಿಲ್ಲ. ಹಾಗಾಗಿ ಬೀಳುವ ಬಹುತೇಕ ಕಾಯಿಗಳನ್ನು ಪಕ್ಕದ ಮನೆಯ ಯಮುನೆಯೇ ಎತ್ತಿಟ್ಟುಕೊಳ್ಳುತ್ತಿದ್ದಳು.

ಪುರಂದರ ಬೆಳಗಿನ ಹಿತ್ತಲಿನ ಭೇಟಿ ಮುಗಿಸಿ, ಕೈಯಲ್ಲಿ ಆರಿಸಿದ ಕಾಯಿಗಳನ್ನು ಹಿಡಿದು ಬರುವಾಗ ದೇವರಾಯ ಎದುರಾದರೆ ‘ಬಿದ್ದ ಕಾಯಿ ಆರಿಸ್ತೀಯಲ್ಲ, ನಿನಗೆ ಬೇರೆ ಕೆಲಸವಿಲ್ಲ… ಬಿದ್ದ ಕಾಯಿ ಕೊಳೆಯೂದೇ… ಕೆಲಸವಿಲ್ಲದ ಬಡಿಗ…’ ಅನ್ನುತ್ತಿದ್ದ. ‘ನೋಡುವಾ ನೋಡುವಾ… ಲೆಕ್ಕ ಇಡುತ್ತೇನೆ… ನೂರಕ್ಕೆ ಐದು ರೂಪಾಯಿ…’ ಎಂದು ಪುರಂದರ ಉತ್ತರಿಸುತ್ತಿದ್ದ.
ಪಂಢರಿಯ ಮನೆಗೆ ಹುಡುಗಿಯೊಬ್ಬಳು ಬಂದಿರುವುದು ಮತ್ತು ಅವಳೂ ತನ್ನಂತೆಯೇ ಬೆಳಗಿನ ಜಾವ ಮಾವಿನಕಾಯಿ ಹೆಕ್ಕುವುದು ಪುರಂದರನಿಗೆ ತಿಳಿದದ್ದು ಒಂದು ದಿನ ಅವಳನ್ನು ಹಿತ್ತಿಲಲ್ಲಿ ನೋಡಿದಾಗಲೇ. ಅವನು ನಸುಕಿನಲ್ಲೆದ್ದು ತೋಟಕ್ಕೆ ಬಂದಾಗ ಆ ಹುಡುಗಿ ಎರಡೂ ಕೈಯಲ್ಲಿ ಕಾಯಿಗಳನ್ನು ಹಿಡಿದುಕೊಂಡು ಪಂಢರಿಯ ಮನೆಯೊಳಗೆ ಹೋಗುವುದು ಕಾಣಿಸಿತು. ಮನೆಯ ಹಿಂಬಾಗಿಲ ಮೆಟ್ಟಿಲು ಹತ್ತುತ್ತಿದ್ದ ಅವಳು ತಿಳಿ ನೀಲಿ ಬಣ್ಣದ ಚೌಕಳಿಯ ಲಂಗ ಮತ್ತು ಬಿಳಿಯ ರವಿಕೆ ಹಾಕಿಕೊಂಡಿದ್ದಳು. ಎರಡೂ ಜಡೆಗಳು ಬೆನ್ನ ಮೇಲೆ ಬಿದ್ದಿದ್ದವು. ಹೀಗೆ ಕ್ಷಣಮಾತ್ರ ಕಣ್ಣಿಗೆ ಬಿದ್ದು ಪಕ್ಕದ ಮನೆಯೊಳಗೆ ಕಣ್ಮರೆಯಾದವಳು ತನ್ನ ಮೋಟು ಜಡೆಗಳಿಗೆ ಬಣ್ಣದ ರಿಬ್ಬನ್ನು ಕಟ್ಟಿಕೊಂಡಿದ್ದಳೇ ಅಥವಾ ಅದು ತನ್ನ ಭಾಸವೇ ಎಂಬ ಅನುಮಾನ ಪುರಂದರನಿಗೆ ಈ ದೃಶ್ಯವನ್ನು ನೆನೆಸಿದಾಗೆಲ್ಲ ಉಂಟಾಗುತ್ತಿತ್ತು.
ಆ ದಿನವೇ ಅವಳ ವಿವರಗಳು ತಿಳಿದವು: ಹೆಸರು ಮೋಹಿನಿ. ಪಂಢರಿಗೆ ದೂರದ ಸಂಬಂಧವಾಗಬೇಕು. ರಜೆಯ ಕೊನೆಯ ಕೆಲವು ದಿನಗಳನ್ನು ಕಳೆಯಲು ಇಲ್ಲಿ ಬಂದಿದ್ದಾಳೆ. ಪುರಂದರನ ವಯಸ್ಸಿನವಳೇ. ಅಷ್ಟೇ ಅಲ್ಲ, ಅವನ ಹಾಗೆಯೇ ಬರುವ ವರ್ಷ ಮೆಟ್ರಿಕ್ ಪರೀಕ್ಷೆಗೆ ಕೂರುತ್ತಿದ್ದಾಳೆ.

ಮರುದಿನ ಎಂದಿಗಿಂತ ಮೊದಲೇ ಪುರಂದರನಿಗೆ ಎಚ್ಚರವಾಗಿ, ಪೂರ್ತಿ ಬೆಳಕು ಹರಿಯುವ ಮುಂಚೆಯೇ ಕಾಯಿ ಆರಿಸಿಕೊಂಡು ಹಿಂದಿರುಗಿದ. ಪಕ್ಕದ ಹಿತ್ತಿಲಿನಲ್ಲಿ ಅವಳು ಕಂಡಾಳು ಎಂದು ಒಳಬರಲು ತುಸು ತಡಮಾಡಿದ. ಅವಳ ಸುಳಿವಿರಲಿಲ್ಲ. ಮುಂಜಾವಿನ ತಂಪು ಹವೆ, ದೂರದ ಕೇರಿಯಿಂದ ಕೇಳಿಸಿದ ಕೋಳಿಯ ಕೂಗು, ಆಗಷ್ಟೇ ಶುರುವಾದ ಕಾಗೆಗಳ ಕಲರವ, ಕೈಯಲ್ಲಿದ್ದ ಎರಡು ಕಾಯಿಗಳಿಂದ ಅಂಗೈಗೆ ಅಂಟಿದ ಸೊನೆಯ ತೇವ – ಇಷ್ಟರ ಜೊತೆಗೆ ಮೋಹಿನಿಯೂ ಕಣ್ಣಿಗೆ ಬಿದ್ದಿದ್ದರೆ ಅವನಿಗೆ ಮುಂಜಾವು ಇನ್ನಷ್ಟು ಗೆಲುವನ್ನುಂಟು ಮಾಡುತ್ತಿತ್ತು. ಆವತ್ತು ತಡವಾಗಿ ಬಂದ ಮೋಹಿನಿಗೆ ತನಗಿಂತ ಮೊದಲೇ ಪುರಂದರ ಬಂದು ಹೋಗಿರುವುದು ಗೊತ್ತಾಯಿತು.
ಅವಳ ಸ್ವಭಾವದಲ್ಲಿಯೇ ಇದ್ದ ಸ್ಪರ್ಧೆಯ ಹುರುಪನ್ನು ಹುರಿದುಂಬಿಸಲಿಕ್ಕೆ ಇಷ್ಟು ಸಾಕಾಯಿತು. ಅವಳು ಮರುಮುಂಜಾನೆ ಅವನಿಗಿಂತ ಮೊದಲೇ ಎದ್ದು ಕಾಯಿ ಹೆಕ್ಕಿ ಮುಗಿಸಿದಳು. ಈ ಸೂಕ್ಷ್ಮ ಗೊತ್ತಾದ ನಂತರ ಪುರಂದರನೂ ಸ್ಪರ್ಧೆಯಲ್ಲಿ ಹಿಂದೆ ಬೀಳಲಿಲ್ಲ. ದೇವರಾಯನ ಬೆಳ್ಳಿಯ ಬಣ್ಣದ ಜರ್ಮನ್ ಅಲಾರಂ ಗಡಿಯಾರವನ್ನು ಇಸಕೊಂಡು ಇನ್ನೂ ಕತ್ತಲಿದ್ದಾಗಲೇ ಏಳತೊಡಗಿದ. ಬೇಗನೇ ಏಳುವ ಈ ಆತಂಕದಿಂದಾಗಿ ಕೆಲವೊಮ್ಮೆ ರಾತ್ರಿ ಅಪವೇಳೆಯಲ್ಲಿ ಎಚ್ಚರಾಗತೊಡಗಿತು. ಗಡಿಯಾರದ ಹೊಳೆಯುವ ಮುಳ್ಳುಗಳಿಂದ ವೇಳೆ ತಿಳಿದು ಮತ್ತೆ ಮಲಗಿದರೆ ಏಳುವುದು ಅಲಾರಂ ಬಡಿದಾಗಲೇ.

ಅದೆಷ್ಟೋ ಬಾರಿ ಪುರಂದರನೂ ಮೋಹಿನಿಯೂ ಪರಸ್ಪರ ನೋಡಿದ್ದರೂ ಮಾತಾಡಿರಲಿಲ್ಲ. ಅವರವರ ಹಿತ್ತಿಲ ಭಾಗದಲ್ಲಿ ಹುಡುಕಾಡಿ ಬಿದ್ದ ಕಾಯಿ ಹೆಕ್ಕಿ ಹೋಗುತ್ತಿದ್ದರು ಅಷ್ಟೆ. ಕಾಯಿ ಹೆಕ್ಕಲು ಶುರುಮಾಡಿದ ತರುವಾಯ ಬಿದ್ದ ಕಾಯಿಯ ಮೇಲೆ ಯಾರ ಸ್ವಾಮ್ಯ ಎಂದು ತಿಳಿಯುವ ಅವಶ್ಯಕತೆಯಿಂದಾಗಿ ಎರಡೂ ಹಿತ್ತಿಲ ನಡುವಿನ ಸರಹದ್ದಿಗೆ ಪ್ರಾಮುಖ್ಯತೆ ಬಂತು. ಮುಂದುಗಡೆ ಎರಡೂ ಮನೆಗಳ ನಡುವೆ ಪಾಗಾರ ಇದ್ದರೂ ಹಿಂದಿನ ಭಾಗದಲ್ಲಿ ಮಾತ್ರ ಬೇಲಿ ಕೂಡ ಇರಲಿಲ್ಲ. ಮುಂದುಗಡೆ ಇದ್ದ ಪಾಗಾರದ ನೇರಕ್ಕೆ ಹಿಂದಿನ ಹಿತ್ತಿಲೂ ಭಾಗವಾಗಿದೆಯೆಂದು ಭಾವಿಸಲಾಗಿತ್ತು. ಅವರವರು ಹಿತ್ತಿಲು ಇಟ್ಟುಕೊಂಡ ರೀತಿಯಲ್ಲೇ ಅವರ ಪಾಲಿನ ತೋಟ ಯಾವುದೆಂಬುದು ತಿಳಿಯುತ್ತಿತ್ತೇ ಹೊರತು ಎರಡೂ ಹಿತ್ತಿಲುಗಳನ್ನು ಬೇರೆ ಮಾಡಲು ನಡುವೆ ಮತ್ತೇನೂ ಇರಲಿಲ್ಲ. ಈಗ ಬಿದ್ದ ಹಣ್ಣನ್ನು ಎತ್ತಿಕೊಳ್ಳುವ ಹುರುಪಿನಿಂದಾಗಿ ನಡುವಿನ ಗಡಿಯನ್ನು ಇಬ್ಬರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಭಾವಿಸಿಕೊಂಡರು.

ಮೊದಮೊದಲು ಬರೀ ನಸುಕಿಗೆ ಮಾತ್ರ ಸೀಮಿತವಾಗಿದ್ದ ಸ್ಪರ್ಧೆ ನಂತರ ಹಗಲಿಗೂ ಹಬ್ಬಿತು. ಹಿತ್ತಿಲಲ್ಲಿ ಆಗುವ ಸಣ್ಣಸಣ್ಣ ಸದ್ದಿಗೂ ಕಿವಿಗೊಡತೊಡಗಿದರು. ಯಾವ ಹೊತ್ತೇ ಆಗಲಿ, ಒಂದು ಕಾಯಿ ಬಿದ್ದ ಸದ್ದಾದರೆ ಸಾಕು, ಬಿಟ್ಟ ಬಾಣದ ಹಾಗೆ ಮೋಹಿನಿ ಧಾವಿಸುವಳು. ಆ ಹೊತ್ತಿಗೆ ಮನೆಯಲ್ಲಿದ್ದರೆ ಪುರಂದರನೂ ಪ್ರತ್ಯಕ್ಷನಾಗುವನು. ಇಬ್ಬರೂ ಪೈಪೋಟಿಯಲ್ಲಿ ಹುಡುಕಾಡುವರು. ಎಷ್ಟೋ ಬಾರಿ ಸಂಜೆಗತ್ತಲಲ್ಲಿ ಸಹ ಮೋಹಿನಿ ಕಾಯಿ ಹೆಕ್ಕಲು ಧಾವಿಸಿದ್ದಿದೆ. ಎಲ್ಲಿ ಏನು ಸದ್ದಾದರೂ ಅವಳ ಕಿವಿ ಚುರುಕಾಗುವುದು. ಹಗಲು ರಾತ್ರಿ ಇಬ್ಬರಿಗೂ ಅದೇ ಧ್ಯಾಸವಾಯಿತು. ರಾತ್ರಿಯ ನೀರವದಲ್ಲಿ ಸಣ್ಣ ಸಣ್ಣ ಚಲನೆಗಳೂ ಕೂಡ ದೊಡ್ಡ ಶಬ್ದಕ್ಕೆ ಕಾರಣವಾಗುತ್ತಿದ್ದವು. ಭೊಸೊಲ್ಲನೇ ಬೀಳುವ ತೆಂಗಿನ ಮಡಲು, ಹಕ್ಕಿ ಕುಕ್ಕಿ ದುರ್ಬಲವಾದ ಯಾವುದೋ ಕಾಯಿ, ಒಣಗಿದ ಜಿಗ್ಗು, ರೆಂಬೆಯ ಮೇಲೆ ಕೂತಲ್ಲೇ ಮಿಸುಕಾಡುವ ಹಕ್ಕಿಯ ರೆಕ್ಕೆಯ ಧಡಪಡ ಹೀಗೆ ತೋಟದ ಸಾಮಾನ್ಯ ಸದ್ದುಗಳಿಂದ ಮಾವಿನಕಾಯಿ ಬಿದ್ದ ಸದ್ದನ್ನು ಪ್ರತ್ಯೇಕಿಸುವ ತರಬೇತಿ ಇಬ್ಬರ ಕಿವಿಗಳಿಗೆ ನಿಧಾನವಾಗಿ ಒದಗತೊಡಗಿತ್ತು. ಕಾಯಿ ಬಿದ್ದ ಸದ್ದಾದದ್ದೇ, ಅದು ಯಾವ ಮರದ್ದು ಎಲ್ಲಿ ಬಿದ್ದಿದೆ ಎಂದು ತಿಳಿಯುವ ತನಕ ಪುರಸತ್ತಿಲ್ಲ. ಇಬ್ಬರೂ ಏನೂ ಮಾತಾಡದೇ, ಬಿದ್ದ ಹಣ್ಣಿಗಾಗಿ ಮೊದಲು ನಡುವಿನ ಸರಹದ್ದಿನಲ್ಲಿ, ನಂತರ ತಮ್ಮ ತಮ್ಮ ಹಿತ್ತಿಲಲ್ಲಿ ಹುಡುಕುತ್ತಿದ್ದರು. ಇನ್ನೊಬ್ಬರಿಗೆ ಕಾಯಿ ಸಿಕ್ಕಿತೋ ಎಂದು ಕಡೆಗಣ್ಣಿನಲ್ಲಿ ಗಮನಿಸುತ್ತಿದ್ದರು.

ಹೀಗೆ ಈ ಸ್ಪರ್ಧೆಯನ್ನು, ಒಬ್ಬರ ಮೇಲೊಬ್ಬರು ಪೈಪೋಟಿ ನಡೆಸುವ ಆಟವನ್ನು ದಿನೇ ದಿನೇ ಮುನ್ನಡೆಸುವುದು ಕೇವಲ ಮಾವಿನಕಾಯಿಗಳಲ್ಲ ಎಂಬುದು ಪುರಂದರನಿಗೂ ಗೊತ್ತಾಗಲಿಲ್ಲ. ಓದಿನ ಏಕಾಗ್ರತೆಗೆ ಭಂಗ ಬಂದಿದ್ದೂ ಗೊತ್ತಾಗಲಿಲ್ಲ. ಸ್ವಂತ ಭಾವನೆಗಳು ಸ್ಪಷ್ಟವಾಗಿರದ ಮಧುರ ಕಾಲವೊಂದನ್ನು ಅವನು ಹಾದು ಹೋಗುತ್ತಲಿದ್ದ.
uಟಿಜeಜಿiಟಿeಜ
– ೫ –

ಹೀಗಿರುವ ದಿನಗಳಲ್ಲಿ ಒಂದು ಮಧ್ಯಾಹ್ನ ಕಾವೇರಿ ಸೊಪ್ಪಿನ ತಂಬಳಿಯನ್ನು ಪುರಂದರನ ಮೂಲಕ ಪಂಢರಿಯ ಮನೆಗೆ ಕಳಿಸಿಕೊಟ್ಟಳು. ತಂಬಳಿಯನ್ನು ಒಂದು ಗಿಂಡಿಯಲ್ಲಿ ಹಿಡಿದುಕೊಂಡು ಪುರಂದರ ಎಂದಿನಂತೆ ಹಿತ್ತಿಲು ಹಾದು ಹಿಂಬಾಗಿಲಿನಿಂದ ಹೋದ. ಪಂಢರಿಯ ಮನೆಯ ಹಿಂದಿನ ಚಿಕ್ಕ ಜಗುಲಿಗೆ ನೆರಳು ಬೀಳುವಂತೆ ಸೋಗೆಯ ಚಪ್ಪರವಿತ್ತು. ಎರಡು ಮೆಟ್ಟಿಲು ಹತ್ತಿದರೆ ಜಗುಲಿ. ಅಲ್ಲಿಯೇ ಪಕ್ಕದಲ್ಲಿ ಒರಳು ಕಲ್ಲು ಹೂತಿದ್ದರು. ಮತ್ತೆ ಎರಡು ಮೆಟ್ಟಿಲು ಹತ್ತಿ ಹೋದರೆ ಅಡಿಗೆ ಮನೆ.
ಪುರಂದರ ಮನೆಯ ಹಿಂದಿನ ಜಗುಲಿಯಲ್ಲಿ ಕಾಣಿಸಿಕೊಂಡಾಗ, ಅಡಿಗೆ ಮನೆಯಲ್ಲಿದ್ದ ಪಂಢರಿ ಗಮನಿಸಿದಳು.
‘ಬಾರೋ, ಬಾ ಒಳಗೆ’
ಅವನು ಕ್ಷಣಕಾಲ ಅಲ್ಲೇ ನಿಂತಿದ್ದರಿಂದ ಒಳಬರಲು ಅನುಮಾನಿಸಿದನೆಂದು ಭಾವಿಸಿ ಮತ್ತೆ ಕರೆದಳು. ‘ಒಳಗೆ ಬರಲಿಕ್ಕೆ ನಾಚಬೇಡವೋ… ಇಲ್ಲಿ ನಿನಗೆ ಕೊಡಲಿಕ್ಕೆ ಹುಡುಗಿ ಇಟ್ಟುಕೊಂಡಿದ್ದೀನೇನೋ…. ಬಾ ಒಳಗೆ ಬಾ…’ ಬೇರೆ ಹೊತ್ತಿನಲ್ಲಾದರೆ ಪುರಂದರನಿಗೆ ಸಹಜವಾಗಿ ಕಾಣುತ್ತಿದ್ದ ಈ ಮಾತು ಈಗ ಒಳಗೆ ಮೋಹಿನಿ ಇರುವುದರಿಂದ ವಿಶೇಷ ಅರ್ಥಗಳನ್ನು ಕೊಟ್ಟಿತು.
ಇನ್ನೂ ತಡಮಾಡಿದರೆ ಪಂಢರಿಯ ಬಾಯಿಯಿಂದ ಬೇರೆ ಏನು ಬಂದೀತೋ ಎಂದು ಹೆದರಿ ಲಗುಬಗನೆ ಒಳಗೆ ಹೋದ. ಮಣೆಯ ಮೇಲೆ, ಕಾಲು ಮಡಚಿ, ಮೋಹಿನಿ ಕೂತಿದ್ದಳು. ಅವಳೆದುರಿನ ತಟ್ಟೆಯಲ್ಲಿ ಮೊಳಕೆ ಬಂದ ಹಸಿರು ಕಾಳು. ಪಕ್ಕದಲ್ಲಿ ಯಮುನೆ. ಇಬ್ಬರೂ ತಲೆ ಬಗ್ಗಿಸಿ ಸಿಪ್ಪೆ ಸುಲಿಯುತ್ತಿದ್ದರು. ಬಗ್ಗಿ ನಿಂತ ಪಂಢರಿ ಒಲೆಯ ಮೇಲಿಟ್ಟ ಪಾತ್ರೆಯೊಂದರಲ್ಲಿ ಸೌಟು ಹಾಕಿ ತಿರುವುತ್ತಿದ್ದಳು. ಒಲೆಯಿಂದ ತೆಳ್ಳನೆಯ ಹೊಗೆ ಏಳುತ್ತಿತ್ತು. ಸೌಟನ್ನು ಪಾತ್ರೆಯಲ್ಲಿ ಬಿಟ್ಟು, ‘ಏನೋ ಅದು?’ ಎಂದು ಕೇಳುತ್ತ ಅವನಿಂದ ತಂಬಳಿಯ ಗಿಂಡಿಯನ್ನು ಇಸಕೊಂಡಳು. ಅವನು ಉತ್ತರ ಹೇಳುವುದರೊಳಗೆ ಅದರಲ್ಲಿದ್ದುದನ್ನು ನೋಡಿದಳು.
‘ಓಹೋ ತಂಬಳಿ.. ಕಾವೇರಕ್ಕನ ಹಾಗೆ ತಂಬಳಿ ಮಾಡುವವರೇ ಇಲ್ಲ…’
‘ಆಯಿತು, ನಾನು ಬರ್‍ತೇನೆ’
‘ಊಟ ಆಯ್ತೇನೋ?’
‘ಇಲ್ಲ’
‘ಅದಕ್ಕೇ ಅವಸರ’ ಎಂದು ಪಂಢರಿ ನಕ್ಕಳು. ಬಗ್ಗಿ ಕಾಳು ಸುಲಿಯುತ್ತಿದ್ದ ಮೋಹಿನಿ ಮುಖವೆತ್ತಿ ನೋಡಿದಳು. ಅವಳ ಮೋರೆಯ ಮೇಲೆಯೂ ನಗುವಿತ್ತು. ಅದನ್ನು ಗಮನಿಸಿದವಳಂತೆ ಪಂಢರಿ, ‘ಮೋಹಿನಿ, ಇವನೂ ನಿನ್ನ ಹಾಗೇ ಈ ವರ್ಷ ಮೆಟ್ರಿಕ್ ಪರೀಕ್ಷೆ ತಗೊಳ್ತಾನೆ… ಕಾವೇರಿ ಹೇಳ್ತಾ ಇದ್ದಳು, ದಿನಾ ಬೆಳಿಗ್ಗೆ ಎದ್ದು ಓದಲಿಕ್ಕೆ ಕೂರ್‍ತಾನಂತೆ. ನೀನೂ ಚಲೋ ಅಭ್ಯಾಸ ಮಾಡಿ ಒಳ್ಳೇ ನಂಬರು ತಗೋಬೇಕು…’ ಅಂದಳು.
ಬೇಸಿಗೆಯ ಬಿರುಬಿಸಿಲಿನಿಂದ ಒಳಬಂದಿದ್ದ ಅವನ ಕಣ್ಣುಗಳಿನ್ನೂ ಅಡಿಗೆ ಮನೆಯ ನಸು ಬೆಳಕಿಗೆ ಪೂರ್ತಿ ಹೊಂದಿಕೊಂಡಿರಲಿಲ್ಲ. ಹಿತ್ತಿಲಿನಲ್ಲಿ ದೂರದಿಂದ ಕಂಡದ್ದಕ್ಕಿಂತ ಈಗ, ಇಷ್ಟು ಹತ್ತಿರದಲ್ಲಿ ಮೋಹಿನಿ ಬೇರೆಯಾಗಿ ಕಂಡಳು. ಮುಂದಕ್ಕೆ ಬಗ್ಗಿ ಕೂತಿದ್ದರಿಂದ ಎರಡೂ ಜಡೆಗಳು ಹೆಗಲಿನಿಂದ ಮುಂದೆ ಇಳಿಬಿದ್ದಿದ್ದವು. ತುದಿಯಲ್ಲಿ, ಜಡೆಯ ಬಿಗಿ ಹೆಣೆತದಿಂದ ಸ್ವತಂತ್ರವಾದ ಗುಂಗುರು ಕೂದಲು ದಪ್ಪ ಗೊಂಡೆಯಾಗಿ ಅರಳಿತ್ತು. ಅವಳು ತನ್ನ ಹಾಗೇ ಈ ಸಲ ಮೆಟ್ರಿಕ್ ಪರೀಕ್ಷೆಗೆ ಕೂರುತ್ತಾಳೆಂಬ ಸಾಮ್ಯವೇ ಅವನಲ್ಲಿ ಪುಳಕವನ್ನುಂಟು ಮಾಡಿತು. ಒಂದು ಕ್ಷಣ ಅವನು ಕಣ್ಣಿಟ್ಟು ನೋಡಿದ್ದರಿಂದ ಮೋಹಿನಿಯೂ ನಾಚಿದಳು. ಅವಳ ದೊಡ್ಡ ಕಣ್ಣುಗಳು ತನ್ನನ್ನೇ ನಿರುಕಿಸಿದವೆಂಬ ಭಾಸದಲ್ಲಿ ಪುರಂದರ ಖುಷಿ ಮತ್ತು ಕಳವಳಗಳು ಸೇರಿದ ಭಾವನೆಯಲ್ಲಿ ಸಿಲುಕಿದ.
‘ಯಾವ ಊರಲ್ಲಿ ಶಾಲೆಗೆ ಹೋಗುವುದು?’ ಶಬ್ದಗಳು ಬಾಯಿಯಲ್ಲೇ ಸಿಕ್ಕಿ ಹಾಕಿಕೊಂಡಂತೆ, ಪುರಂದರ ತಡವರಿಸುತ್ತ ಪ್ರಶ್ನೆಯನ್ನು ಪೂರ್ತಿ ಮಾಡಿದ.
‘ಕುಮಟೆ.’
‘ಓ… ಗಿಬ್ ಹೈಸ್ಕೂಲಿನಲ್ಲಿ…’ ಅವನಿಂದ ಪ್ರಶಂಸೆಯ ಉದ್ಗಾರ ಹೊರಟಿತು.
‘ಹೌದೇ ಮೋಹಿನಿ… ನಿಂದು ಶಾಲೆಯಲ್ಲಿ ಎಷ್ಟನೇ ನಂಬರು?’ ಎಂದು ಯಮುನೆ ಕೇಳಿದಳು.
ಇಲ್ಲಿಯವರೆಗೂ ಅವರ ಉಪದೇಶದಿಂದ ಅಭಿಮಾನಭಂಗವಾಗಿದ್ದ ಮೋಹಿನಿ ತಲೆಯೆತ್ತಿ ಸ್ಪಷ್ಟ ದನಿಯಲ್ಲಿ ಹೇಳಿದಳು.
‘ಒಂದು’
ಈ ಉತ್ತರವನ್ನು ಅಪೇಕ್ಷಿಸದಿದ್ದ ಮೂವರಿಗೂ ಆಶ್ಚರ್ಯವಾಯಿತು. ಪುರಂದರನಿಗೆ, ಯಾಕೆಂದು ಅರ್ಥವಾಗದ ಕಾರಣಕ್ಕೆ ಖುಷಿಯೂ, ಅದೇನೋ ಬಗೆಯ ಹೆಮ್ಮೆಯೂ ಆಯಿತು. ಮತ್ತೆ ಅವಳನ್ನು ದಿಟ್ಟಿಸಿ ನೋಡಿದ. ಅವಳ ಕಣ್ಣುಗಳು ಈ ಸಲ ನೆಲ ನೋಡಲಿಲ್ಲ. ಇಬ್ಬರೂ ಹೀಗೆ ಪರಸ್ಪರ ದೃಷ್ಟಿ ನೆಟ್ಟು ಹಟದಿಂದ ಸೋಲೊಪ್ಪದೇ ನಿಂತರು. ನಂತರ ಒಮ್ಮೆಲೇ ಅವಳು ದೃಷ್ಟಿ ಹೊರಳಿಸಿದಳು. ಕಣ್ಣಿನ ಆ ಚಂಚಲ ಚಲನೆಯಲ್ಲಿ ಸೋಲಿಗಿಂತ ಹೆಚ್ಚಾಗಿ ಹೆಣ್ಣಿನ ನಾಚಿಕೆ ಕಂಡಂತಾಗಿ ಪುರಂದರ ಅಧೀರನಾದ.
‘ಬರ್‍ತೇನೆ’ ಮೊದಲ ಸಲ ಹೇಳಿದಾಗ ಗಂಟಲಲ್ಲಿಯೇ ಹೂತುಹೋದ ದನಿ ಅವನಿಗೇ ಕೇಳಿಸಲಿಲ್ಲವಾದ್ದರಿಂದ ಎರಡನೇ ಸಲ ಹೇಳಿ ಹೊರಟ. ಹೆಜ್ಜೆಗೆ ಉಲ್ಲಾಸ ಬಂದಿತ್ತು.
ಮನೆ ತಲುಪುವಷ್ಟರಲ್ಲಿ ಅವಳ ಬಗ್ಗೆ ಅಕ್ಕರೆ ಉಕ್ಕಿ ಬಂತು. ಅದೇ ಗುಂಗಿನಲ್ಲಿರುವಾಗ ಊಟ ಮಾಡಿದ್ದೂ ಗೊತ್ತಾಗಲಿಲ್ಲ. ‘ಏನು?… ರಾಯರ ಚಿತ್ತ ಈವತ್ತು ಎಲ್ಲಿದೆ?’ ಎಂದು ದೇವರಾಯ ತಮಾಷೆ ಮಾಡುವಷ್ಟು ಅವನ ಅನ್ಯಮನಸ್ಕತೆ ಎದ್ದು ತೋರುವಂತಿತ್ತು.
ಅದೇ ಮಧ್ಯಾಹ್ನ, ಹಗಲುಗನಸಿನಲ್ಲಿದ್ದವನಂತೆ ಪುರಂದರ ಚಾಪೆಯ ಮೇಲೆ ಬಿದ್ದುಕೊಂಡಿದ್ದ. ಅವನ ಚಿತ್ತಭಿತ್ತಿಯಲ್ಲಿ ಹಾದು ಹೋಗುತ್ತಿದ್ದ ಊಹಾಚಿತ್ರಗಳ ನಡುವೆಯೂ ಹಿತ್ತಲಲ್ಲಿ ಕಾಯಿ ಬಿದ್ದ ಸದ್ದು ಕೇಳಿಸಿತು. ಅದು ಮಾವಿನಕಾಯಿ ಬಿದ್ದ ಸದ್ದೇ ಅನ್ನುವುದು ಖಾತ್ರಿಯಾಗಿ, ಮೋಹಿನಿಯೂ ಆ ಸದ್ದು ಕೇಳಿ ಖಂಡಿತ ಬರುತ್ತಾಳೆಂದು ಹೊಳೆದು, ಎದ್ದು ಹಿತ್ತಲಿಗೆ ಓಡಿದ. ಅಲ್ಲಿ ಅವಳು ನೆಲಕ್ಕೆ ಕಣ್ಣು ಕೀಲಿಸಿ ನಡೆದಾಡುತ್ತಿದ್ದಳು. ಆಗ ಎರಡೂ ಹಿತ್ತಿಲ ನಡುವಿನ ಜಾಗದಲ್ಲಿದ್ದ ಒಂದು ಕಾಯಿ ಇಬ್ಬರ ಕಣ್ಣಿಗೂ ಒಟ್ಟಿಗೇ ಬಿತ್ತು. ಅವಳಿಗಿಂತ ಒಂದು ಗಳಿಗೆ ಮುಂಚೆ ತಲುಪಿದ ಪುರಂದರ ಆ ಕಾಯಿಯನ್ನು ಎತ್ತಿಕೊಂಡುಬಿಟ್ಟ.
‘ಅದು ಈ ಕಡೆಯಲ್ಲವೇ ಬಿದ್ದಿದ್ದು?’ ಮೋಹಿನಿ ಹಟ ಬಿಡದೇ ಕೇಳಿದಳು.
ಸ್ವಲ್ಪ ಹೊತ್ತಿಗೆ ಮುಂಚೆ ಅವಳ ಬಗ್ಗೆ ಉಕ್ಕಿದ ನಿರ್ವ್ಯಾಜ್ಯ ಮಮತೆಯಿಂದ ಹುಟ್ಟಿದ ಆತ್ಮವಿಶ್ವಾಸದಿಂದ ಪುರಂದರನಿಗೆ ಈಗ ಸಲಿಗೆಯಿಂದ ವರ್ತಿಸಬೇಕೆಂದು ಅನಿಸಿತು. ಎರಡು ಹೆಜ್ಜೆ ಮುಂದೆ ಹೋಗಿ, ಅವಳ ಹತ್ತಿರ ಸರಿದು ‘ಇಲ್ಲ… ಇದು ನೋಡು ಈ ಹಿತ್ತಿಲು ಇರುವುದು ಇಲ್ಲಿಯವರೆಗೆ’ ಅಂದ. ಆ ಮಾತಿನಲ್ಲಿ ಸ್ವಲ್ಪ ಖುಷಾಲು, ಅವಳನ್ನು ಸ್ವಲ್ಪ ರೇಗಿಸಬೇಕೆಂಬ ಭಾವ ಇತ್ತು. ಅವಳು ಮಾತ್ರ ಹಾಗೆ ಭಾವಿಸಲಿಲ್ಲವೆಂಬುದು ಮುಂದಿನ ಮಾತುಗಳಿಂದ ಸ್ಪಷ್ಟವಾಯಿತು.
ನೆಲವನ್ನೇ ನೋಡುತ್ತಿದ್ದ ಮೋಹಿನಿ, ಅವನ ಮೋರೆಯ ಮೇಲಿನ ಮುಗುಳ್ನಗುವನ್ನು ನೋಡಲೇ ಇಲ್ಲ. ಕದನಕ್ಕೆ ಸಿದ್ಧಳಾದಂತೆ ಮಾತಾಡಿದಳು.
‘ಈ ಗಡಿಯೇ ಸರಿ ಇಲ್ಲ. ಇಲ್ಲೊಂದು ಬೇಲಿಯೂ ಇಲ್ಲ. ಈ ಜಾಗದಲ್ಲಿ ಎಲ್ಲಿ ಬಿದ್ದರೂ ಯಾರದೆಂದು ಸರಿಯಾಗಿ ಗೊತ್ತಾಗುವುದಿಲ್ಲ.’
ತನ್ನ ಮಾತಿನ ಹಗುರತೆಯಲ್ಲಿದ್ದ ಆಹ್ವಾನವನ್ನು ಸ್ವೀಕರಿಸುವ ಬದಲು ಅದನ್ನು ರಣಕಹಳೆಯಂತೆ ಕೇಳಿಸಿಕೊಂಡಳೆಂಬುದು ಗೊತ್ತಾಗಿ ಗಲಿಬಿಲಿಗೊಂಡ. ಅವಳಿಗೆ ಅಷ್ಟು ಹತ್ತಿರ ನಿಂತಿದ್ದರಿಂದ ಅವನ ಉಸಿರೇ ಹಿಡಿದಂತಾಗಿಬಿಟ್ಟಿತ್ತು.
‘ಇದನ್ನು ನೀನೇ ತಗೋ’ ಎಂದು ಹೇಳಬೇಕೆಂದು, ಪುರಂದರ ಕೈಮುಂದೆ ಮಾಡಿ ಕಾಯಿಯನ್ನು ಕೊಡಬೇಕೆಂದು ಮನಸ್ಸನ್ನು ತಯಾರಿ ಮಾಡುವ ಮುನ್ನವೇ ‘ಇದರ ಬಗ್ಗೆ ಪಂಢರಿಮಾಯಿಯನ್ನು ಕೇಳುತ್ತೇನೆ’ ಎಂದು ಸಟ್ಟನೇ ತಿರುಗಿ ಮನೆಯತ್ತ ಹೊರಟುಬಿಟ್ಟಳು.
ಅವಳನ್ನು ಕರೆಯಬೇಕೆಂದು, ಕರೆದು ಅವಳಿಗೆ ಕಾಯಿ ಕೊಡಬೇಕೆಂದು ಅಂದುಕೊಂಡರೂ ಅವನ ಬಾಯಿಯಿಂದ ‘ಮೋಹಿನಿ’ ಎಂಬ ಶಬ್ದ, ಅವಳನ್ನು ಕರೆಯುವಷ್ಟು ಜೋರಾಗಿ, ಅವಳಿಗೆ ಕೇಳಿಸಿ ಅವಳು ತಿರುಗಿ ನೋಡುವಷ್ಟು ಗಟ್ಟಿಯಾಗಿ, ಹೊರಡಲೇ ಇಲ್ಲ. ಅವನು ಮನಸ್ಸಿನಲ್ಲೇ ಪಿಸುಗುಟ್ಟಿದ್ದು ಅವನಿಗೇ ಕೇಳಿಸಲಿಲ್ಲ. ಅವಳು ಒಮ್ಮೆಯೂ ತಿರುಗಿ ನೋಡದೇ, ದುಡದುಡನೇ ಮನೆಯ ಹಿಂದಿನ ಮೆಟ್ಟಲು ಹತ್ತಿ ಒಳಗೆ ಹೋದುದು ನಿಂತಲ್ಲಿಂದ ಕಾಣಿಸಿತು. ಯಾಕೆ ತನ್ನ ಬಾಯಿ ಕಟ್ಟಿಬಿಟ್ಟಿತು, ತಾನು ಕರೆದೇ ಬಿಟ್ಟಿದ್ದರೆ, ಅವಳಿಗೆ ಹಣ್ಣು ಕೊಟ್ಟುಬಿಟ್ಟಿದ್ದರೆ ಮುಂದೆ ನಡೆದ ಏನೇನೋ ನಡೆಯುತ್ತಲೇ ಇರಲಿಲ್ಲವಲ್ಲ ಎಂದು ಮುಂದೆ ನೂರು ಸಲ ಅನ್ನಿಸಿದ್ದಿದೆ. ಎಂತೆಂಥ ಸೂಕ್ಷ್ಮಗಳ ಮೇಲೆ ದೊಡ್ಡ ದೊಡ್ಡ ಘಟನೆಗಳೆಲ್ಲ ನಿಂತಿದ್ದಾವೆ: ತನ್ನ ಬಾಯಿಯಿಂದ ಹೊರಡದೇ ಇದ್ದ ‘ಮೋಹಿನೀ’ ಅನ್ನುವ ಒಂದು ಶಬ್ದದ ಮೇಲೆ!
uಟಿಜeಜಿiಟಿeಜಗೆದ್ದರೂ ಹತಾಶನಾದ ಅರಸನ ಹಾಗೆ ಕೈಯಲ್ಲಿ ಕಾಯಿ ಹಿಡಿದ ಪುರಂದರ ಮನೆಗೆ ಬಂದು, ತಾನು ಮಲಗುವ ಮಂಚದ ಅಡಿಗೆ ಹಾಸಿಟ್ಟ ಹುಲ್ಲುಹಾಸಿನ ಮೂಲೆಯಲ್ಲಿ ಅದನ್ನು ಜೋಪಾನವಾಗಿ ಇಟ್ಟ. ಅವಳಿಗೆ ಸೇರಿದ ವಸ್ತುವೊಂದು ತನ್ನ ಹತ್ತಿರ ಇದ್ದು, ಅದನ್ನು ಜತನದಿಂದ ಕಾಪಾಡಿ ಅವಳಿಗೆ ಹಿಂತಿರುಗಿಸಬೇಕೆಂಬ ಭಾವನೆಯೊಂದು ಅವನಲ್ಲಿ ಹುಟ್ಟಿ ಮರೆಯಾಯಿತು. ಅವಳಿಗೆ ತಾನು ಯಾವ ರೀತಿಯಲ್ಲೂ ನೋವುಂಟುಮಾಡಬಾರದೆಂಬ ನಿರ್ಧಾರದಿಂದ ಹೆಚ್ಚಿನ ಜವಾಬ್ದಾರಿ ಬಂದಂತಾಯಿತು. ಮಂಚದ ಮೇಲೆ ಎರಡು ಕ್ಷಣ ಸುಮ್ಮನೇ ಕೂತ.
ಎದ್ದು, ಮಾವಿನಕಾಯಿಯನ್ನು ಎತ್ತಿಕೊಂಡು ಕಿಟಕಿಯ ಹತ್ತಿರ ಹೋಗಿ ಬೆಳಕಿನಲ್ಲಿ ನೋಡಿದ. ಅದರ ತೊಟ್ಟು ಕಳಚಿದ ಜಾಗದಲ್ಲಿ ಸೊನೆ ಒಸರಿ ಕಂದು ಬಣ್ಣಕ್ಕೆ ತಿರುಗತೊಡಗಿತ್ತು. ಸೊನೆಯ ತೇವಕ್ಕೆ ಅಂಟಿಕೊಂಡ ಮಣ್ಣಿನ ಕಣಗಳು ಬೆಳಕಿಗೆ ಪುಟ್ಟ ಮಣಿಗಳಂತೆ ಹೊಳೆಯುತ್ತಿದ್ದವು. ಮಂಚದ ಕೆಳಗಿನಿಂದ ಗೋಣಿಯ ತುಂಡೊಂದನ್ನು ಎಳೆದು, ಅದರ ತುದಿಯಿಂದ ಕೈಲಿದ್ದ ಕಾಯಿಯನ್ನು ಒರೆಸಿದ. ಒರೆಸಿದಂತೆಲ್ಲ ಸೊನೆ ಉಳಿದ ಭಾಗಕ್ಕೂ ತಾಕುತ್ತ ಅಂಟಂಟಾಯಿತು. ಮತ್ತೆ ಮತ್ತೆ ಹಟದಿಂದೆಂಬಂತೆ ಉಜ್ಜಿ ಉಜ್ಜಿ ಒರೆಸಿ ಕಾಯಿಯನ್ನು ಸ್ವಚ್ಛಮಾಡಿದ. ಅಂಗೈಯಲ್ಲಿ ಹಿಡಿದು ಸವರಿದ. ಮೂಸಿದ. ಸೊನೆಯ ಘಾಟು ವಾಸನೆ ಎಂದೂ ಇಲ್ಲದಷ್ಟು ಹಿತವಾಗಿತ್ತು. ಇನ್ನೂ ಹಸಿರಾಗಿದ್ದ ಕಾಯಿ ಹಣ್ಣಾಗಲು ಕನಿಷ್ಟ ಐದಾರು ದಿನಗಳಾದರೂ ಬೇಕೆಂದು ತೋರಿತು. ಇದನ್ನು ಅವಳಿಗೆ ತಲುಪಿಸುವುದು ಹೇಗೆಂಬ ಬಗ್ಗೆ ಅವನ ಕಲ್ಪನೆ ನಾನಾ ದಿಕ್ಕಿನಲ್ಲಿ ಹರಿಯತೊಡಗಿತು.

ಅವಳು ಮತ್ತೆ ಹಿತ್ತಲಿಗೆ ಬಂದಾಗ ಅವಳಿಗೆ ಕೊಟ್ಟರೆ ಹೇಗೆ? ಯಾಕೆ ಕೊಡುತ್ತಿದ್ದೀಯಾ ಅಂದರೆ ಏನು ಹೇಳುವುದು? ಅಥವಾ ಅವಳ ಮನೆಗೇ ಹೋಗಿ ಕೊಟ್ಟರೆ? ಆಗ ಅಲ್ಲಿ ಪಂಢರಿಮಾಯಿಯೋ ಯಮುನೆಯೋ ಇದ್ದರೆ? ನಿಮ್ಮ ಕಾಯಿ ನಮ್ಮ ಜಾಗದಲ್ಲಿ ಬಿದ್ದಿತ್ತು ಅಂದರೆ ಹೇಗೆ? ಎಂದೂ ಕಾಯಿ ಕೊಡಲು ಬರದವನು ಈವತ್ತು ಯಾಕೆ ಬಂದ ಅಂದರೆ? ಅವಳಿಗೇ ನೇರವಾಗಿ ಕೊಡುವುದೇ ಒಳ್ಳೆಯದು. ಕೊಡುವಾಗ ‘ಇದು ನಡುವಿನ ಜಾಗದಲ್ಲಿ ಬಿದ್ದಿತ್ತು ಎಂದು ನಾನೇ ತಪ್ಪು ತಿಳಕೊಂಡಿದ್ದೆ, ನಿಜವಾಗಿ ನೋಡಿದರೆ ಇದು ನಿನಗೇ ಸೇರಬೇಕಾದ ಕಾಯಿ’ ಎಂದು ಹೇಳಿಬಿಡುವುದು.

ಆದರೆ ಮನಸ್ಸಿನಲ್ಲಿ ಅಂದುಕೊಂಡಾಗ ಸರಳವಾಗಿ ತರ್ಕಬದ್ಧವಾಗಿ ಕಾಣುತ್ತಿದ್ದ ಸಂಗತಿಗಳು ಮತ್ತು ಮಾತುಗಳು ನಿಜದಲ್ಲಿ ಆಡಬೇಕೆಂಬ ನಿರ್ಧಾರ ಕೈಗೊಂಡ ಒಡನೆಯೇ ಬಹು ಕಠಿಣವಾಗಿ, ಅಸಹಜವಾಗಿ ತೋರುತ್ತಿದ್ದವು. ಅಂದುಕೊಂಡ ರೀತಿಯಲ್ಲಿ ಈ ಎಲ್ಲ ಮಾತುಗಳನ್ನು ತಾನು ಆಡುವುದು ಶಕ್ಯವೇ ಇಲ್ಲ ಅನ್ನುವುದು ಅವನಿಗೂ ಗೊತ್ತಿತ್ತು. ಮನಸ್ಸಿನಲ್ಲಿಯೇ ಈ ಸಂದರ್ಭಗಳನ್ನೆಲ್ಲ ಪುನಃ ಪುನಃ ಕಲ್ಪಿಸಿಕೊಂಡರೂ ಅವಳ ರೂಪ ಸರಿಯಾಗಿ ಹೇಗಿತ್ತು ಅನ್ನುವುದು ಕಣ್ಣ ಮುಂದೆ ಬರುತ್ತಿರಲಿಲ್ಲ. ‘ಮೋಹಿನಿ’ ಎಂದು ಅವಳನ್ನು ಕರೆಯುವುದೇ ಅಥವಾ ಹೆಸರು ಹಿಡಿದು ಕರೆಯುವ ಅವಶ್ಯಕತೆಯೇ ಇಲ್ಲದ ಹಾಗೆ ಅವಳ ಎದುರು ಹೋಗಿ ಸೀದಾ ಮಾತು ಶುರುಮಾಡಿಬಿಡುವುದೇ ಎಂಬುದು ಬಹಳ ಕಾಲ ಬಗೆಹರಿಯದ ಪ್ರಶ್ನೆಯಾಯಿತು. ‘ಮೋಹಿನಿ’ ‘ಮೋಹಿನಿ’ ಎಂದು ಪದೇ ಪದೇ ಮನಸ್ಸಿನಲ್ಲೇ ಹೇಳಿಕೊಂಡಾಗ ಅದು ಮೋಹಕವಾಗಿ ತೋರತೊಡಗಿತು.

ಕಿಟಕಿಯ ಬಳಿ ಹೋಗಿ ಹಿಂಬದಿಯ ಹಿತ್ತಲಿನತ್ತ ನೋಡಿದ. ಬೇಸಿಗೆಯ ಬಿಸಿಲು. ಗಾಳಿಯಿಲ್ಲದ ತಟಸ್ಥ ತೋಟ. ಮರಗಳ ಎಡೆಯಿಂದ ಬಿದ್ದ ಬಿಸಿಲಿನಿಂದಾಗಿ ಉಂಟಾದ ನೆರಳಿನ ಚಿತ್ತಾರ. ಪಕ್ಕದ ಹಿತ್ತಿಲಿನಲ್ಲಿಯೂ ಯಾರೂ ಇರಲಿಲ್ಲ. ಎಲ್ಲವೂ ಸ್ತಬ್ಧವಾಗಿತ್ತು. ಏನೂ ಮಾತಾಡದೇ, ಏನೂ ಹೇಳದೇ ಈ ಹಣ್ಣನ್ನು ಅವಳ ಕಣ್ಣಿಗೆ ಬೀಳುವ ಹಾಗೆ ಇಟ್ಟರೆ ಹೇಗೆಂದು ಯೋಚಿಸಿದ. ಆದರೆ ಇದು ಬಿದ್ದ ಹಣ್ಣಲ್ಲ, ನಾನೇ ಇಟ್ಟಿದ್ದು ಎಂದು ಅವಳಿಗೆ ಗೊತ್ತಾಗುವುದು ಹೇಗೆ? ಪುರಂದರನಿಗೆ ಒಂದು ಉಪಾಯ ಹೊಳೆಯಿತು. ಮಾವಿನಕಾಯಿಯ ಮೇಲೆ ತನ್ನ ಉಗುರಿನಿಂದ ಇಂಗ್ಲಿಷಿನ ಎಂ ಅಕ್ಷರವನ್ನು ಮೂಡಿಸಿದ. ಕಾಯಿಯ ಎಳೆಯ ಮೈಮೇಲೆ ಉಗುರು ಊರಿದಲ್ಲಿ ತುಸು ತೇವವಾಯಿತು. ಸ್ವಲ್ಪ ಹೊತ್ತಿಗೆ ಅದು ಕಪ್ಪಾಗಿ ಎದ್ದು ಕಾಣುತ್ತದೆಂಬುದು ಅವನಿಗೆ ಗೊತ್ತು.

ದೇವರಾಯ ಮತ್ತು ಕಾವೇರಿ ಒಳಗಿನ ಕೋಣೆಯಲ್ಲಿದ್ದಾರೆಂಬುದನ್ನು ಖಾತರಿಪಡಿಸಿಕೊಂಡು, ಕೈಯಲ್ಲಿ ಆ ಕಾಯಿಯನ್ನು ಹಿಡಿದು ಮೆಲ್ಲನೆ ಹಿತ್ತಿಲಿಗೆ ಹೋದ. ಏನನ್ನೋ ಹುಡುಕುವವನಂತೆ ಬಗ್ಗಿ, ಮೊದಲು ಎತ್ತಿಕೊಂಡ ಜಾಗದಲ್ಲಿಯೇ ಕಾಯಿಯನ್ನು ಇಟ್ಟು, ಕೈಯಿಂದ ದೂಡಿ ಪಂಢರಿಯ ಹಿತ್ತಿಲ ಕಡೆಗೆ ಅದನ್ನು ಉರುಳಿಸಿದ. ಅದು ಉರುಳಿ ಎಂ ಅಕ್ಷರ ಮೇಲ್ಗಡೆ ಕಾಣುವ ಹಾಗೆ ತಿರುಗಿ ನಿಂತಿದ್ದು ಶುಭಚಿಹ್ನೆಯಂತೆ ತೋರಿತು. ಅದನ್ನೊಮ್ಮೆ ಸಮಾಧಾನದಿಂದ ನೋಡಿ, ಅನುಮಾನ ಬರದ ಹಾಗೆ ಸಹಜ ನಡಿಗೆಯಲ್ಲಿ ನಡೆದು, ಬರುವಾಗ ಒಂದು ಕರಮಲಕಾಯಿಯನ್ನು ಕಿತ್ತು, ಕಚ್ಚಿ, ಹುಳಿ ಸಹಿಸಲು ಮುಖ ಕಿವಿಚಿಕೊಳ್ಳುತ್ತ ಮನೆ ಸೇರಿದ.

ಮನೆಗೆ ಹಿಂತಿರುಗಿ ಈ ಬಗ್ಗೆ ಯೋಚಿಸತೊಡಗಿದಂತೆ, ಅವಳು ಮೃದುವಾಗಿ ವರ್ತಿಸಿದ ಒಂದೂ ಘಟನೆ ಮನಸ್ಸಿಗೆ ಬರಲಿಲ್ಲ. ಒಮ್ಮೆಯೂ ಅವನ ಬಗ್ಗೆ ಆಸಕ್ತಿ ಇರುವಂಥ ಯಾವ ಚಿಹ್ನೆಯನ್ನೂ ಅವಳು ತೋರಿಸಿರಲಿಲ್ಲ. ಅವಳ ಲಕ್ಷ್ಯವೆಲ್ಲ ಮಾವಿನ ಕಾಯಿಯನ್ನು ಹೆಕ್ಕುವುದರತ್ತಲೇ. ಕಾಯಿ ಕಂಡದ್ದೇ ಗಬಕ್ಕನೇ ಎತ್ತಿಕೊಂಡು ಹೋಗುವುದರತ್ತ ಗಮನವೇ ಹೊರತು, ಪುರಂದರನತ್ತ ಅಕಸ್ಮಾತ್ ನೋಡಿದರೂ ಅದು ತಾನು ಗೆದ್ದೆನೆಂಬುದನ್ನು ತೋರಿಸಲು ಮಾತ್ರವೇ ಹೊರತು ಅದರಲ್ಲಿ ಒಂದಿಷ್ಟೂ ಮೃದುತ್ವ ಇರುತ್ತಿರಲಿಲ್ಲ. ಹೀಗೆ ಯೋಚನೆ ಹರಿದಂತೆಲ್ಲ ಪುರಂದರನಿಗೆ, ಮಾವಿನಕಾಯಿಯನ್ನು ಅಲ್ಲಿ ಇಟ್ಟು ತಪ್ಪು ಕೆಲಸ ಮಾಡಿದೆನೆಂಬ ಅಳುಕು ಹುಟ್ಟತೊಡಗಿತು. ವಾರದ ಹಿಂದಿನ ಘಟನೆಯೊಂದು ವಿವರಗಳಲ್ಲಿ ನೆನಪಾಯಿತು.

ಆ ದಿವಸ ಇನ್ನೂ ಬೆಳಕು ಹರಿಯುವ ಮುನ್ನವೇ ಅವಳು ಕತ್ತಲಲ್ಲಿ ತಡಕಾಡುವುದನ್ನು ಕಂಡು ಅಕ್ಕರೆಯಾಗಿ, ಎಲ್ಲ ಅವಳೇ ಹೆಕ್ಕಲಿ ಎಂದು ಮರೆಯಲ್ಲಿ ಕಾದಿದ್ದ. ಅವಳ ನಂತರ ಹಿತ್ತಲಿಗೆ ಹೋಗುವುದೆಂದರೆ ಅವನಿಗೆ ಖುಷಿ. ಸ್ವತಃ ನೋಡದೇ ಇದ್ದಾಗಲೂ, ಅವಳು ಬಂದು ಹೋಗಿರುವುದು ಅದು ಹೇಗೋ ಜೀವಕ್ಕೆ ಗೊತ್ತಾಗುತ್ತಿತ್ತು. ಬೆಳಗಿನ ಆ ಗಾಳಿಯಲ್ಲಿ, ಅವಳ ಭೇಟಿಯ ಸುಳಿವಿರುತ್ತಿತ್ತು. ಹಿತ್ತಿಲ ತುದಿಗೆ ನಿಂತು ಕಣ್ಣು ಹಾಯಿಸಿದರೆ ಸಾಕು, ಎಲ್ಲೆಲ್ಲಿ ಅವಳ ಹೆಜ್ಜೆಯಿಂದ ಹುಲ್ಲಿನ ಮೇಲಿನ ಮುಂಜಾವು ಕಲಕಿದೆಯೆಂಬುದು ತಿಳಿಯುವುದು. ಈ ಸೂಕ್ಷ್ಮ ತನಗೆ ಮಾತ್ರ ಎಟಕುವುದೆಂಬ ಅರಿವಿನಿಂದ, ಅವಳ ಜೊತೆ ಏನೋ ಸಂಬಂಧ ಏರ್ಪಟ್ಟ ಭಾಸವಾಗುತ್ತಿತ್ತು. ಮರೆಯಿಂದ ನೋಡುತ್ತ ನಿಂತಾಗ, ಅವಳ ಕಾಲಿಗೆ ಮುಳ್ಳೊಂದು ಚುಚ್ಚಿದ್ದು, ಅವಳು ಒಂದೇ ಕಾಲಲ್ಲಿ ನಿಂತು, ಜೋಲಿ ತಪ್ಪದೇ ಇನ್ನೊಂದು ಕಾಲನ್ನು ಎತ್ತಿ, ಅಂಗಾಲನ್ನು ತೆರೆದು ಹಿಡಿದು, ಮುಳ್ಳನ್ನು ಕಿತ್ತು ಪಕ್ಕಕ್ಕೆ ಬೀಸಾಕಿದ್ದು ಕಾಣಿಸಿತು. ಅವಳ ಕೈಯಲ್ಲಿ ಎರಡು ಕಾಯಿಗಳಿದ್ದವು. ಒಳಗೆ ಹೋಗುವ ಮುನ್ನ ಮತ್ತೊಮ್ಮೆ ಹಿತ್ತಿಲ ನೆಲದತ್ತ ದೃಷ್ಟಿ ಹರಿಸಿದಳು. ಅವಳು ತನಗಾಗಿ ಕಾಯಬಹುದು ಅಥವಾ ಈ ಕಡೆ ಒಮ್ಮೆಯಾದರೂ ನೋಡಬಹುದೆಂದು ಪುರಂದರ ಭಾವಿಸಿದ್ದು ತಪ್ಪಾಯಿತು. ಕಾಯುವಿಕೆಯಲ್ಲಿರುವ ನಿರೀಕ್ಷೆ, ಹಿಂಜರಿತ, ಅನಿಶ್ಚಯದ ಚಲನೆ, ನಡಿಗೆಯನ್ನು ನಿಧಾನಿಸಿ ವಿಲಂಬಿಸುವ ಸಾವಧಾನ – ಯಾವುದೂ ಅವಳಲ್ಲಿ ಕಾಣಿಸಲಿಲ್ಲ.
ಕಾಯಿಗಳನ್ನು ಕೈಯಲ್ಲಿ ಹಿಡಿದುಕೊಂಡು, ಇತ್ತ ಕಡೆ ಒಮ್ಮೆಯೂ ನೋಡದೇ, ದಡದಡ ಹೆಜ್ಜೆಗಳನ್ನಿಡುತ್ತ ಸೀದಾ ಮನೆಗೆ ಹೋಗಿಬಿಟ್ಟಳು.
uಟಿಜeಜಿiಟಿeಜ
– ೬ –

ಈ ಹಿಂದಿನ ಹಿತ್ತಿಲಿನ ಗಡಿಯೇ ಎರಡೂ ಮನೆಗಳ ನಡುವಿನ ಮನಸ್ತಾಪಕ್ಕೆ ಕಾರಣವಾಗಲು ತಡವಾಗಲಿಲ್ಲ. ಈ ವ್ಯಾಜ್ಯಕ್ಕೆ ಮೂಲವಾದ ಘಟನೆಗೆ ತಾವು ಕಾರಣರೆಂಬ ಸಂಗತಿ ಮೋಹಿನಿ ಮತ್ತು ಪುರಂದರ ಇಬ್ಬರಿಗೂ ಗೊತ್ತಿತ್ತು. ನಡುವೆ ಬಿದ್ದ ಮಾವಿನಕಾಯಿ ಯಾರಿಗೆ ಸೇರಬೇಕೆಂಬ ಕಾರಣದಿಂದ ಎದ್ದ ಗಡಿಯ ಪ್ರಶ್ನೆಯನ್ನು ಮೋಹಿನಿ ಮೊದಲು ಯಮುನೆಗೂ, ನಂತರ ಪಂಢರಿಗೂ ದಾಟಿಸಿದ್ದಳು. ಇಬ್ಬರೂ ರಮಾಕಾಂತ ಮಾಸ್ತರನ ಸಲಹೆ ಕೇಳಿದರು. ಅವನು ಶಾಲೆಯಲ್ಲಿ ಯಮುನೆಯ ಗಂಡ ಶಂಕರನ ಸಹೋದ್ಯೋಗಿಯಾಗಿದ್ದ. ಪಂಢರಿಗೆ ಅವನ ಮೇಲೇನೋ ವಿಶ್ವಾಸವಿತ್ತು. ಅವನನ್ನು ನೋಡಿದರೆ ಶಂಕರನ ನೆನಪಾಗುತ್ತಿತ್ತು. ಶಂಕರನಂತೆಯೇ ಅವನೂ ತಲೆಗೂದಲಿಗೆ ಎಣ್ಣೆ ಹಚ್ಚಿ ಹಿಂದಕ್ಕೆಳೆದು ಪುಗ್ಗೆಯಾಕಾರದಲ್ಲಿ ಬಾಚಿಕೊಳ್ಳುತ್ತಿದ್ದ.
ರಮಾಕಾಂತ ಗಡಿಯನ್ನು ನಿರ್ಧರಿಸಲು ಬಾಂದಿನ ಕಲ್ಲು ಹುಡುಕಿದ. ಅದು ಸಿಕ್ಕಿದ್ದು ದೇವರಾಯನ ಹಿತ್ತಿಲಲ್ಲಿ, ಅರ್ಧ ಮಾರು ಒಳಗೆ. ಅದರಿಂದಾಗಿ ಎದ್ದ ಗೊಂದಲ ನಿವಾರಿಸಿ, ಸರಿಯಾದ ಗಡಿ ನಿರ್ಧರಿಸಲು ಗ್ರಾಮಠಾಣೆಯಿಂದ ಬಾಂದಿನವರನ್ನು ಕರೆಸಬೇಕಾಯಿತು. ಅವರು ಬಂದು ಅಳೆದು, ಅಂತೂ ಎಲ್ಲವೂ ಮುಗಿದು ಎರಡು ಹಿತ್ತಿಲ ನಡುವೆ ಬೇಲಿ ಬಂದಿತ್ತು. ಈ ಬೇಲಿ ಈವರೆಗೂ ಅವರು ಭಾವಿಸಿದ ಗಡಿಗಿಂತ ಅರ್ಧ ಮಾರು ಒಳಗೆ ಬಂದು ದೇವರಾಯನ ಹಿತ್ತಿಲ ಅಷ್ಟು ಭಾಗವನ್ನು ಕಡಿಮೆ ಮಾಡಿತು. ಆ ಹೆಚ್ಚಿನ ಭಾಗ ಪಂಢರಿಯ ವಶಕ್ಕೆ ಬಂದರೂ, ಇದನ್ನೆಲ್ಲ ದೇವರಾಯ ತನ್ನ ಹಿತ್ತಿಲು ನುಂಗಲು ಮಾಡಲು ನಡೆಸಿದ ಸಂಚೆಂಬಂತೆ ಅವಳು ವರ್ಣಿಸತೊಡಗಿದ್ದು ಕಿವಿಗೆ ಬಿದ್ದಿದ್ದರಿಂದ ಎರಡೂ ಮನೆಗಳ ನಡುವೆ ಮೊದಲಿನ ಸಂಬಂಧ ಉಳಿಯಲಿಲ್ಲ. ಮೇಲುನೋಟಕ್ಕೆ ಏನೂ ಆಗದ ಹಾಗೆ ತೋರಿಸಿಕೊಂಡರೂ ಒಳಗೊಳಗೇ ಅಸಹನೆ ಬೆಳೆಯತೊಡಗಿತು. ಬೇಲಿಯ ನಡುವೆ ದಣಪೆ ಇಟ್ಟಿದ್ದರೂ ಆಚಿಂದೀಚೆ ಓಡಾಡುವುದು ಕಡಿಮೆಯಾಯಿತು.
ಇಷ್ಟಕ್ಕೆಲ್ಲ ಕಾರಣಳಾದ ಮೋಹಿನಿ ರಜೆ ಮುಗಿದದ್ದೇ ಹೊರಟು ಹೋಗಿದ್ದಳು.
ಇದೆಲ್ಲ ನಡೆಯುವಾಗ, ಬಾಂದಿನವರು ಅಳೆಯಲು ಬರುವ ಹಿಂದಿನ ಸಂಜೆ ಕಿವಿಗೆ ಬಿದ್ದ ಸಂಭಾಷಣೆಯಿಂದ ಪುರಂದರ ಎಷ್ಟು ಕುಗ್ಗಿಹೋದನೆಂದರೆ ಮತ್ತೊಮ್ಮೆ ಅವನು ಮಾವಿನಕಾಯಿ ಹೆಕ್ಕಲು ಹೋಗಲಿಲ್ಲ. ಅಡಿಗೆ ಮನೆಯಲ್ಲಿ ದೇವರಾಯ ಮತ್ತು ಕಾವೇರಿ ಮಾತಾಡುತ್ತಿದ್ದುದು ಹೊರಗೆ ಓದುತ್ತ ಕೂತವನಿಗೆ ಕೇಳಿಸುತ್ತಿತ್ತು.
‘ಏನಂದ ಆ ಮಾಸ್ತರು? ಇಷ್ಟು ಹೊತ್ತು ನಿಮ್ಮ ಜೊತೆ ಮಾತಾಡುತ್ತಿದ್ದನಲ್ಲ?’ ಎಂದು ಕಾವೇರಿ ಕೇಳಿದಳು.
‘ಅದೇ ಹಳೆಯ ಕತೆ. ಹಿತ್ತಿಲಲ್ಲಿರುವ ಬಾಂದಿನ ಕಲ್ಲು ಎಲ್ಲಿ ಇರಬೇಕು ಅಂತ. ನಾಳೆ ಬಾಂದಿನವರು ಅಳೆಯಲು ಬರುತ್ತಾರಂತೆ.’
‘ಆವತ್ತು ಮುಸ್ಸಂಜೆಯಲ್ಲಿ ಅವನು ಬಂದು ಅತ್ತೆ ಸೊಸೆಯ ಜೊತೆ ಹಿತ್ತಿಲಲ್ಲಿ ತಡಕಾಡುವಾಗಲೇ ನನಗೆ ಏನೋ ಅನುಮಾನ ಬಂದಿತ್ತು. ಯಾಕೆ ಬಂದಿದ್ದಾರೆ ಸ್ವಲ್ಪ ನೋಡೋ ಎಂದು ಪುರಂದರನಿಗೆ ಹೇಳಿದೆ. ಇವನು ಪೈರಾಣ ಹಾಕಿಕೊಂಡು ತಲೆಬಾಚಿಕೊಂಡು ಶೃಂಗಾರ ಮುಗಿಸಿ ಹೋಗಿ ನೋಡುವ ವೇಳೆಗೆ ಅವರೆಲ್ಲ ಹೊರಟು ಹೋಗಿದ್ದರು…’
‘ಇಷ್ಟು ವರ್ಷ ಕಣ್ಣಿಗೆ ಬಿದ್ದರೂ ಆ ಕಲ್ಲು ಬಾಂದಿನ ಕಲ್ಲು ಇರಬಹುದೆಂದು ನಾವು ಯೋಚಿಸಲಿಲ್ಲ. ಅದು ಅಡ್ಡ ಬಿದ್ದು ಬಿಟ್ಟಿತ್ತು ನೋಡು…’
‘ಹಿಂದೆ ಯಾವಾಗಲೋ ಯಾರೋ ಗೊತ್ತಾಗದೇ ಅದನ್ನು ಇತ್ತ ಕಡೆ ಎತ್ತಿ ಹಾಕಿರಬಹುದು.’
‘ನಾನೂ ರಮಾಕಾಂತನಿಗೆ ಅದನ್ನೇ ಹೇಳಿದೆ. ಈಗ ಒಂದು ಸಲ ಮನಸ್ಸಿನಲ್ಲಿ ಸಂಶಯದ ಬೀಜ ಹೊಕ್ಕ ಮೇಲೆ ಅದನ್ನು ಸರಿಮಾಡುವುದು ಸಾಧ್ಯವಿಲ್ಲ. ಬಾಂದಿನವರು ಬಂದು ಅಳೆಯಲಿ ಅಂದೆ.’
‘ಅವರು ಆ ಕಲ್ಲು ಸರಿಯಾದ ಜಾಗದಲ್ಲಿದೆ ಅಂದರೆ?’
‘ಹಾಗಾದರೆ ಆ ಜಾಗ ಅವರಿಗೆ ಸೇರುತ್ತದೆ. ಇಷ್ಟು ದಿವಸ ನಾವು ತಪ್ಪು ತಿಳಕೊಂಡಿದ್ದೆವು ಅಷ್ಟೆ. ನೋಡು ಕಾವೇರಿ, ಈವತ್ತು ಇನ್ನೊಂದು ಅಂಥದೇ ಕಲ್ಲು ನಮ್ಮ ಪಾಯಖಾನೆಯ ಹತ್ತಿರ ನೋಡಿದೆ. ಅದೂ ಅರ್ಧ ಮಾರು ನಮ್ಮ ಹಿತ್ತಿಲ ಒಳಗೇ ಇತ್ತು. ಅದನ್ನು ನೋಡಿದ ಮೇಲೆ ಇಷ್ಟು ದಿವಸ ಈ ಗಡಿ ಸರಿಯಾಗಿರಲಿಲ್ಲ ಅಂತ ಅನಿಸಿತು. ಇರಲಿ… ಈಗ ಬಾಂದಿನವರು ಬರಲಿ. ಮುಂದಿನದು ಆಮೇಲೆ ನೋಡುವಾ…’
‘ಇಷ್ಟು ದಿನ ಇಲ್ಲದ ಅನುಮಾನ ಈಗ ಯಾಕೆ ಇವರಿಗೆ ಬಂತು? ಆ ಮಾಸ್ತರನೇ ಏನಾದರೂ ಹಚ್ಚಿಕೊಟ್ಟಿದ್ದಾನೋ ಅಂತ…’
‘ಅವನದೇನೂ ತಪ್ಪಿಲ್ಲ. ಯಾಕೆ ಇದು ಈಗ ಪಂಢರಿಯ ತಲೆಗೆ ಬಂತು ಅಂತ ನಾನೇ ಅವನನ್ನು ಕೇಳಿದೆ. ಇದಕ್ಕೆ ಕಾರಣ ಯಾರು ಗೊತ್ತೇನು? ಮಾವಿನ ಹಣ್ಣು ಹೆಕ್ಕಲು ಬರುತ್ತಿತ್ತಲ್ಲ ಆ ಹುಡುಗಿ. ಪುರಂದರನ ಜೊತೆ ಜಿದ್ದಿಗೆ ಬಿದ್ದು ಎರಡು ಹಿತ್ತಿಲ ನಡುವೆ ಬಿದ್ದ ಕಾಯಿ ಯಾರಿಗೆ ಸೇರಬೇಕೆಂದು ಪಂಢರಿಯ ಹತ್ತಿರ ಕೇಳಿದ್ದಾಳೆ. ಅಲ್ಲಿಂದ ಮುಂದೆ ಎಲ್ಲ ಚೌಕಶಿ ಶುರುವಾಗಿದೆ. ಈ ದಾಸಪ್ಪನಿಗೆ ಹೇಳಿದ್ದೆ – ಬೇಡವೋ ಬಿದ್ದ ಕಾಯಿ ಹೆಕ್ಕಬೇಡ, ಅದು ಕೊಳೆಯೂದೇ ಅಂತ. ಇಷ್ಟು ಸದ್ದಾದರೆ ಸಾಕು, ಜನ್ಮದಲ್ಲಿಯೇ ಮಾವಿನಕಾಯಿ ಕಂಡಿಲ್ಲದವನ ಹಾಗೆ ದುಡುದುಡು ಓಡುತ್ತಿದ್ದ. ಈಗ ನೋಡು ಒಂದು ಕಾಯಿಯ ಆಸೆಗೆ ಎಲ್ಲಿಯವರೆಗೆ ತಂದಿಟ್ಟ… ದರವೇಶಿ…’
‘ಹಾಗಾದರೆ ಏನು ಮಾಡುವುದು ಈಗ?’
‘ಹೆದರಬೇಡವೇ. ನನಗೇನೂ ಆ ಹಿತ್ತಿಲು ಅರ್ಧ ಮಾರು ಹೋದರೆ ಬೇಜಾರಿಲ್ಲ. ಅವರದು ಅವರಿಗೆ ಸೇರಲಿ… ಅದರ ಆಸೆ ನಾವು ಮಾಡಬಾರದು. ವಿಧವೆಯರ ತಟ್ಟೆಗೆ ಕೈಹಾಕುವ ಪ್ರಸಂಗ ನಮಗೆ ಬಂದಿಲ್ಲ…’
ವಾಕ್ಯದ ಕೊನೆಗೆ ದೇವರಾಯ, ತುಸು ತಡೆದು ಹೇಳಿದ ದರವೇಶಿ ಎಂಬ ಶಬ್ದ ಪುರಂದರನೊಳಗೆ ನಿಂತುಬಿಟ್ಟಿತು.
uಟಿಜeಜಿiಟಿeಜ
– ೭ –

ಈ ಬಾಂದಿನ ಕಲ್ಲೇ ಈವತ್ತು ಕೂಡ ಪಂಢರಿ ಮತ್ತು ಯಮುನೆ, ದೇವರಾಯನಿಗೆ ಕಾದು ಕೂರಲು ಕಾರಣವಾಗಿತ್ತು.
ಈ ಬೆಳಿಗ್ಗೆ ಎದ್ದು ಯಮುನೆ ಎಂದಿನಂತೆ ಹಿತ್ತಿಲಿಗೆ ಬಂದು ನೋಡಿದಾಗ ಬಾಂದಿನ ಕಲ್ಲು ಇರಲಿಲ್ಲ. ಪ್ರತಿಷ್ಠಾಪನೆ ಮಾಡಿದ ದೇವರೋ ಎಂಬಂತೆ ಹಿತ್ತಿಲಿಗೆ ಕಾಲಿಟ್ಟಾಗಲೆಲ್ಲ ಅದನ್ನು ನೋಡುವುದು ಅತ್ತೆ ಸೊಸೆಯರಿಬ್ಬರಿಗೂ ಈ ವರ್ಷಗಳಲ್ಲಿ ಅಭ್ಯಾಸವಾಗಿ ಹೋಗಿತ್ತು. ಅದೊಂದು ವಿಜಯದ ಸಂಕೇತವೆಂಬಂತೆ, ತಮ್ಮ ಆಸ್ತಿಯನ್ನು ಕಾಯುವ ಭೂತರಾಯನ ಗುತ್ತದಂತೆ ಭಾಸವಾಗುತ್ತಿತ್ತು. ವರ್ಷಗಟ್ಟಲೇ ಗುಪ್ತವಾಗಿದ್ದು ಒಮ್ಮೆಲೇ ಪ್ರಕಟವಾದ ದೇವರಂತಿದ್ದ ಕಲ್ಲು ಇಂದು ಬೆಳಿಗ್ಗೆ ಕಣ್ಣಿಗೆ ಬೀಳದೇ ಇದ್ದುದು ಅಪಶಕುನದ ಹಾಗೆ ಯಮುನೆಗೆ ಕಂಡಿತು. ದಿಗಿಲಾಗಿ ಒಳಗೋಡಿ ಅತ್ತೆಗೆ ಹೇಳಿದಳು. ಮುಂದಿನ ಸಾರಾಸಾರ ವಿಚಾರ ಮಾಡುವ ಮೊದಲೇ, ಯಾವುದೇ ಸಾಕ್ಷ್ಯಾಧಾರವಿಲ್ಲದೇ ಅತ್ತೆ ಸೊಸೆಯರಿಬ್ಬರೂ ಅದು ದೇವರಾಯನ ಕೆಲಸವೆಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದರು. ಅವನು ಪಾಯಖಾನೆಗೆ ಹೋಗಿ ಹಿಂದಿರುಗುವ ಹೊತ್ತಲ್ಲಿ ಅವನನ್ನು ಕೆಣಕಬೇಕು ಮತ್ತು ಪ್ರಸಂಗ ಬಂದರೆ ಅವನನ್ನು ಎದುರಿಸಬೇಕೆಂದು ನಿರ್ಧರಿಸಿ ಅವನಿಗಾಗಿ ಕಾಯುತ್ತ ಕೂತಿದ್ದರು.

ಈವತ್ತು ಯಾಕೋ ಸಮಯವೇ ಹೋಗುತ್ತಿಲ್ಲ ಎಂದು ಇಬ್ಬರಿಗೂ ಅನಿಸಿತು. ಅಥವಾ ತಾವು ಕೂತಿರುವುದನ್ನು ನೋಡಿ ಅವನು ತಡ ಮಾಡುತ್ತಿರುವನೇ ಎಂಬ ಸಂಶಯವೂ ಸುಳಿದು ಹೋಯಿತು. ಅಷ್ಟರಲ್ಲಿ ಬಾಗಿಲು ತೆರೆದು ದೇವರಾಯ ಹೊರಬಂದ. ವಯಸ್ಸಾದರೂ ಬೆನ್ನು ಬಾಗಿರಲಿಲ್ಲ. ಆರಡಿ ಎತ್ತರದ ಅವನು ಬಾಗಿಲು ದಾಟಿ ಹೊರಬರುವಾಗ ಬಗ್ಗಬೇಕಾಗುತ್ತಿತ್ತು. ಪೂರ್ತಿ ನರೆತ ಕೂದಲು. ಬಿಳಿಯ ಕುರುಚಲು ಗಡ್ಡ. ತೋಳಿನ ಮೇಲಿನ ಚರ್ಮ ಸುಕ್ಕುಗಟ್ಟಿತ್ತು. ದೇವರಾಯ ಬರುವುದು ಕಾಣಿಸಿದೊಡನೆ ಪಂಢರಿ ಮತ್ತು ಯಮುನೆ ಎರಡೂ ಹಿತ್ತಿಲ ನಡುವಿನ ಬೇಲಿಯ ಹತ್ತಿರ ಬಂದು, ದೊಡ್ಡ ದನಿಯಲ್ಲಿ ಅವನ ಕಿವಿಗೆ ಬೀಳುವಂತೆ ಪರಸ್ಪರ ಮಾತಾಡತೊಡಗಿದರು.
‘ನಾಚಿಕೆಯಿದ್ದರಲ್ಲವೇ?… ಸೆಗಣಿ ತಿಂದರೆ ಬಾಯಿಗೆ ವಾಸನೆ ಬರ್‍ತದೆ ಅಂತ ಗೊತ್ತಿಲ್ಲವೇನೆ ಇವರಿಗೆ…’ ಪಂಢರಿಯ ಗಂಟಲು ದೊಡ್ಡದಾಗಿತ್ತು. ಸಿಟ್ಟಿಗೆ ಅವಳ ಮೋರೆಯಿಂದ ಇನ್ನಷ್ಟು ಬೆವರು ಹರಿಯುತ್ತಿರುವ ಹಾಗೆ ತೋರುತ್ತಿತ್ತು.
ದೇವರಾಯನಿಗೆ ಈ ಮಾತು ಕೇಳಿಸಿದರೂ, ಅದು ತನಗೆ ಆಹ್ವಾನ ಎಂದು ಗೊತ್ತಾದರೂ ಕೊಳಚೆಯಲ್ಲಿ ಕಲ್ಲು ಎಸೆದರೆ ಸಿಡಿಯುವುದು ತನ್ನ ಮೇಲೆಯೇ ಎಂದುಕೊಂಡು ಈ ಜೋಡಿಯ ಎದುರು ಬಾಯಿಬಿಡಬಾರದೆಂದು ನಿರ್ಧರಿಸಿ ಮೌನವಾಗಿ ನಡೆದ.
‘ಹೇಳಿದಷ್ಟೂ ಜಾಸ್ತಿನೇ ಮಾಡ್ತಾರೆ… ನಾಯಿಬಾಲ ನಳಿಕೆಯಲ್ಲಿ ಹಾಕಿದಷ್ಟೇ ಹೊತ್ತು…’ ಅಂದಳು ಯಮುನೆ.
‘ನಮ್ಮ ಜಾಗ ನುಂಗಲು ನೋಡಿದರು. ಅದು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡ ಮೇಲೂ ನಾಚಿಕೆ ಇಲ್ಲವಲ್ಲ. ಮತ್ತೆ ಇವರ ಕಾಟ ಶುರುವಾಯಿತಲ್ಲ. ಛೀ ಅಂದರೆ ಬಾ ಅಂದ ಹಾಗೆ ಇವರಿಗೆ ಕೇಳಿಸುತ್ತದೆಯಲ್ಲ…’
ಆ ಮಾತಿಗೆ ದೇವರಾಯ ನಿಂತ. ಅವನು ಮುಂದೆ ನಡೆದಂತೆಲ್ಲ ಅವನ ಜೊತೆ ಜೊತೆಗೇ ತಮ್ಮ ಹಿತ್ತಿಲ ಭಾಗದಲ್ಲಿ ಅತ್ತೆ ಸೊಸೆಯರೂ ಕಾಲು ಹಾಕುತ್ತಿದ್ದರು. ಪಂಢರಿ ಯಮುನೆಯನ್ನು ಉದ್ದೇಶಿಸಿ ಮತ್ತೆ ಮಾತು ಮುಂದುವರಿಸಿದಳು:
‘ಬೊಂಬಾಯಿಯಲ್ಲಿ ಇದೇ ಕೆಲಸ ಮಾಡಿಕೊಂಡಿದ್ದರೋ ನೋಡ್ತೆ… ಇವರಿಗೆ ಚಲೋದಾಗುದಿಲ್ಲವೇ… ಎಷ್ಟಿದ್ದರೂ ಮನುಷ್ಯನಿಗೆ ಆಸೆ ನೋಡು… ಊರು ದೂರ ಕಾಡು ಹತ್ತಿರ ಆದ ವಯಸ್ಸಲ್ಲೂ ಇನ್ನೊಬ್ಬರ ಹೇಲು ಪುಕ್ಕಟೆ ಸಿಕ್ಕರೂ ಒಳಗೆ ಹಾಕಿಕೊಳ್ಳುವ ಬುದ್ಧಿ ಹೋಗಿಲ್ಲ ನೋಡು…’
ಇನ್ನು ದೇವರಾಯನಿಗೆ ತಡೆದುಕೊಳ್ಳುವದಾಗಲಿಲ್ಲ. ನಿಂತ. ಅವಳತ್ತ ತಿರುಗಿ ‘ಏನೇ ತಾಟಕಿ’ ಎಂದುಬಿಟ್ಟ.
ಅತ್ತೆಸೊಸೆಯರಿಬ್ಬರೂ ಇದಕ್ಕಾಗಿಯೇ ಕಾದಿದ್ದವರೆಂಬಂತೆ ಒಮ್ಮೆಲೇ ಗಂವ್ವೆಂದು ಮುನ್ನುಗ್ಗಿ ಬಂದರು. ಯಾವ ಮಾತು ಯಾರು ಆಡಿದರೆಂಬುದು ಕೂಡ ಗೊತ್ತಾಗದ ಹಾಗೆ ಒಂದೇ ಸಮನೆ ಕೂಗಾಡತೊಡಗಿದ ಅವರ ದನಿ ದೇವರಾಯ ಸುಮ್ಮನೇ ಇದ್ದಷ್ಟೂ ಏರುತ್ತೇರುತ್ತ ಹೋಯಿತು. ಅವನಿಗೆ ಮಾತ್ರ ಇದರ ಕಾರಣ ಗೊತ್ತಾಗಲಿಕ್ಕೆ ಬಹಳ ಹೊತ್ತು ಹಿಡಿಯಿತು.
‘ಬೇರೆಯವರ ತುತ್ತು ಕಸಿದುಕೊಳ್ಳುವ ಬುದ್ಧಿ ಯಾಕೆ? ದೇವರು ಕೊಟ್ಟಿದ್ದನ್ನು ತಿಂದು ಬಿದ್ದಿರಬಾರದೇನು?’
‘ಗೆರಟೆ ಹಿಡಿದವರ ಹಾಗೆ ಆಡಿದರೆ ಒಂದು ದಿನ ಅಂಥ ಪರಿಸ್ಥಿತಿಯೂ ಬರುತ್ತದೆ…’
‘ಬೇರೆಯವರಿಗೆ ಹೇಳುವುದು ತತ್ವಜ್ಞಾನ… ತಾನು ತಿನ್ನುವುದು ಮಾತ್ರ ಎಮ್ಮೆ ಸೆಗಣಿ…’
‘ತೆಗೆದೇಬಿಟ್ಟಿರಲ್ಲ… ಕಲ್ಲು ತೆಗೆದು ಹಾಕಿದ ಮಾತ್ರಕ್ಕೆ ಎಲ್ಲ ಸುಳ್ಳಾಗಿ ಹೋಗುತ್ತದೆ ಎಂದು ಮಾಡಿದ್ದೀರೇನು? ಎಲ್ಲಿ ಹೋಯಿತು ಬಾಂದಿನ ಕಲ್ಲು?…’
ಮರ್ಮಭೇದಕವಾದ ಅವರ ಮಾತುಗಳಿಂದ ದೇವರಾಯನ ಸಹನೆ ಮೀರಿತು. ಅವರು ಬಾಂದಿನ ಕಲ್ಲು ಇದ್ದ ಜಾಗವನ್ನು ತೋರಿಸುತ್ತ ಕಿರಿಚಾಡುತ್ತಿದ್ದಾಗ ಅವನಿಗೆ ಈ ಎಲ್ಲದರ ಮೂಲ ಕಾರಣ ಏನೆಂಬುದು ಹೊಳೆದಿತ್ತು. ಅಲ್ಲಿ ಈಗ ಬರಿ ಸಣ್ಣದೊಂದು ಹೊಂಡ ಮಾತ್ರ ಇತ್ತು. ಸುತ್ತಲಿನ ಹಸಿರು ಹುಲ್ಲಿನ ನಡುವೆ ಹೊಂಡದ ಕೆಳಗಿನ ಹಸಿ ಮಣ್ಣು ಕಾಣುತ್ತಿತ್ತು. ಯಾರೋ ಅದನ್ನು ಹೊತ್ತು ಹಾಕಿದ್ದಾರೆಂಬುದು ಸ್ಪಷ್ಟವಿತ್ತು. ದೇವರಾಯನಿಗೂ ಆಶ್ಚರ್ಯವೇ ಆಯಿತು. ಅವನು ಅದನ್ನು ನೋಡುತ್ತ ನಿಂತುದನ್ನು ನೋಡಿ ಇಬ್ಬರೂ ಹೆಂಗಸರು ಮತ್ತೆ ತಮ್ಮ ಮಾತಿನ ಪ್ರಹಾರ ಮುಂದುವರಿಸತೊಡಗಿದರು.

ದೇವರಾಯನಿಗೆ ಇದನ್ನು ಮುಂದುವರಿಸುವ ಮನಸ್ಸಿರಲಿಲ್ಲ. ತಾನು ಕಲ್ಲು ತೆಗೆದಿಲ್ಲವೆಂದು ಅವರಿಗೆ ಹೇಳಲು ನೋಡಿದ. ಅವರು ಯಾವುದನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ‘ಕಲ್ಲು ಹೋದರೆ ಹೋಯಿತು… ಇನ್ನೊಂದು ತಂದು ಹಾಕುವ…’ ಅಂದ.
‘ರಾತ್ರಿ ಯಾವಾಗಲೋ ತೆಗೆದು ಹಾಕಿ ಈಗ ಇನ್ನೊಂದು ತಂದು ಹಾಕುವ ನಾಟಕ ಮಾಡುತ್ತಿದ್ದಾರಲ್ಲ… ಅಹಹಹಾ… ಹಾಕುತ್ತೇನೆ ಅಂದರೆ ಅರ್ಥ ಅದನ್ನು ತೆಗೆದದ್ದು ನೀವೇ ಎಂದು ಒಪ್ಪಿಕೊಂಡಂತೆ ಆಯಿತಲ್ಲ… ಅದಕ್ಕೇನು ರೆಕ್ಕೆ ಬಂದು ಹಾರಿ ಹೋಯಿತೇನು?…’
ಕಿರಿಚಾಡುತ್ತಿದ್ದ ಗಯ್ಯಾಳಿಗಳನ್ನು ಕಡೆಗಣಿಸಿ ದೇವರಾಯ ನಡೆಯತೊಡಗಿದಾಗ ಅವರಿಗೆ ಇನ್ನಷ್ಟು ರೋಷ ಬಂತು. ‘ಎಲ್ಲಿದೆ ಬಾಂದಿನ ಕಲ್ಲು? ಎಲ್ಲಿದೆ? ಎಲ್ಲಿದೆ?….’ ಎಂದು ಕೂಗುತ್ತ ಹಿಂಬಾಲಿಸತೊಡಗಿದರು.
‘ಸುಮ್ಮನೇ ನನ್ನ ತಲೆ ತಿನ್ನಬೇಡಿ… ಹಾಳಾಗಿ ಹೋಗಿ…’ ಎಂದು ಅವನು ಮನೆಯತ್ತ ತಿರುಗುತ್ತಿದ್ದಂತೆ ಬೇಲಿಯ ನಡುವಿನ ಸಂದಿಯಿಂದ ಅತ್ತೆಸೊಸೆಯರಿಬ್ಬರೂ ಇತ್ತ ಕಡೆಯ ಹಿತ್ತಿಲಿಗೆ ಕಾಲಿಟ್ಟರು.
ಬೈಯುತ್ತ, ನಡುನಡುವೆ ಬಾಂದಿನ ಕಲ್ಲು ನೆನಪಾಗಿ ‘ಎಲ್ಲಿದೆ? ಎಲ್ಲಿದೆ?’ ಎಂದು ಕೂಗುತ್ತ ಅವನಿಗೆ ಅಡ್ಡ ಹಾದು ಅವನು ಮುಂದೆ ಹೋಗದ ಹಾಗೆ ಎದುರು ನಿಂತುಬಿಟ್ಟರು.
ಅವರ ಮಾತುಮಾತಿಗೂ ದೇವರಾಯನ ಸಿಟ್ಟು ಏರುತ್ತ ಏರುತ್ತ ಏರುತ್ತ ಹೋಗಿ ಕೈಯಲ್ಲಿದ್ದ ಚೆಂಬನ್ನು ಕೆಳಗೆ ಒಗೆದ. ಮಾತಾಡಲು ಪ್ರಯತ್ನಿಸಿದಾಗ ತುಟಿಗಳು ಥರಥರನೇ ನಡುಗಿದವು. ‘ಇಲ್ಲಿದೆ ಬಾಂದಿನ ಕಲ್ಲು…’ ಎಂದು ತನ್ನ ಪಂಚೆಯನ್ನು ಪೂರ್ತಿಯಾಗಿ ಮೇಲಕ್ಕೆ ಎತ್ತಿ ತೋರಿಸಿಯೇಬಿಟ್ಟ.
ತಾರಕದಲ್ಲಿ ನಡೆಯುತ್ತಿದ್ದ ಕೂಗಾಟಗಳು ಕ್ಷಣಾರ್ಧದಲ್ಲಿ ಗಪ್ಪೆಂದು ನಿಂತುಹೋದವು.
ಥಕ್ಕಾಗಿ ನಿಂತ ಅವರಿಬ್ಬರನ್ನೂ ಕಡೆಗಣಿಸಿ ಚೆಂಬನ್ನು ಎತ್ತಿಕೊಂಡು ದೇವರಾಯ ಮನೆಯತ್ತ ನಡೆದ.
ಬಚ್ಚಲಿನತ್ತ ಹೋಗುತ್ತಿದ್ದ ಹಾಗೆ ಎದುರಿಗೆ ಬಂದು ಮಾತಾಡದೇ ಸುಮ್ಮನೇ ನಿಂತ ಕಾವೇರಿಯನ್ನು ಗಮನಿಸಿ ‘ಥತ್ ಮಾನ ಮರ್ಯಾದೆ ಇಲ್ಲದ ಹೊಲಸು ಬಾಯಿ ಭೋಸಡಿಯರು…’ ಎಂದು ತನಗೆ ತಾನೇ ಎಂಬಂತೆ ಹೇಳಿದ. ಅದು ಯಾರನ್ನು ಕುರಿತು ಹೇಳಿದ ಮಾತೆಂಬುದು ಅವಳಿಗೆ ಗೊತ್ತಾಯಿತು.
‘ಏನಂತೆ?’ ಅಂದಳು ಕಾವೇರಿ.
‘ಎರಡೂ ಹಿತ್ತಿಲ ನಡುವಿನ ಬಾಂದಿನ ಕಲ್ಲನ್ನು ಯಾರೋ ಕಿತ್ತು ಹಾಕಿದ್ದಾರೆ. ಅದಕ್ಕೇ ಈ ಮಾರಿಜೋಡಿಯ ಹಾರಾಟ ಶುರುವಾಗಿದೆ…’
‘ಆ ಮಾಸ್ತರನದೇ ಕಿತಾಪತಿ ಇರಬೇಕು ಎಲ್ಲ. ಹಚ್ಚಿಕೊಡುವದೊಂದೇ ಕೆಲಸ ಅವನಿಗೆ…’
‘ಈ ಮೂರ್ಖ ಹೆಂಗಸರ ಕೈಯಲ್ಲಿ… ಥತ್…’ ದೇವರಾಯ ಸ್ನಾನ ಮಾಡಲು ಬಚ್ಚಲಿನತ್ತ ನಡೆದ.
‘ನಿನ್ನೆ ಸಂಜೆ ಕೆಸುವಿನ ಗಡ್ಡೆ ನೆಡಲಿಕ್ಕೆ ಪಾತಿ ಮಾಡೋ ಎಂದು ಆಯುಗೆ ಹೇಳಿದ್ದೆ. ಅವನೇನಾದರೂ ಗೊತ್ತಾಗದೇ ಕಲ್ಲು ಕಿತ್ತು ಹಾಕಿದನೋ ಏನೋ’ ಕಾವೇರಿ ಹೇಳಿದ್ದು ದೇವರಾಯನ ಕಿವಿಯ ಮೇಲೆ ಬೀಳುವ ಮೊದಲೇ ಅವನು ಬಚ್ಚಲ ಮನೆಯೊಳಗೆ ಹೋಗಿಬಿಟ್ಟಿದ್ದ.
ಬಚ್ಚಲಿನ ಬಾಗಿಲನ್ನು ಓರೆ ಮಾಡಿದ್ದೇ ಒಳಗೆ ಕತ್ತಲು ತುಂಬಿಕೊಂಡಿತು. ಒಲೆಯ ಬೆಂಕಿ ಸಣ್ಣದಾಗಿ ಉರಿಯುತ್ತಿದ್ದರೂ ಹಂಡೆಯ ನೀರು ಚೆನ್ನಾಗಿಯೇ ಕಾದಿತ್ತು. ಬಚ್ಚಲಿನ ಗಿಡ್ಡ ಗೋಡೆಯ ಮೇಲೆ ಮಾಡು ಇಳಿದಿತ್ತು. ಗೋಡೆ ಮತ್ತು ಮಾಡಿನ ನಡುವಿನ ಸಂದಿನಿಂದ ಒಳಬರುವ ಬೆಳಕು, ಕವಿದ ಮೋಡದಿಂದಾಗಿ ಕ್ಷೀಣವಾಗಿತ್ತು. ಕತ್ತಲೆಗೆ ನಿಧಾನ ಕಣ್ಣು ಹೊಂದಿಕೊಂಡು ಬಚ್ಚಲ ಒಳಗಿನದೆಲ್ಲ ಸ್ಪಷ್ಟವಾಗತೊಡಗಿತು. ಹಂಡೆಯ ಹಿತ್ತಾಳೆಯ ಮುಚ್ಚಳ ಆ ಮಂದ ಬೆಳಕಿನಲ್ಲೂ ಹೊಳೆಯುತ್ತಿತ್ತು. ಮುಚ್ಚಳ ತೆಗೆಯುತ್ತಿದ್ದಂತೆ ಹಂಡೆಯ ಬಾಯಲ್ಲಿ ಹಬೆಯಾಡಿತು. ಅಗಲ ಬಾಯಿಯ ಒಂದು ದೊಡ್ಡ ಬೋಗುಣಿಯಲ್ಲಿ ನೀರು ತೋಡಿಕೊಳ್ಳತೊಡಗಿದ.
‘ಗಜಾನನಾ.. ಗಣಪತೇ… ಮೂಷಿಕವಾಹನಾ..’ ಎಂದು ತನ್ನ ಇಷ್ಟದೈವವಾದ ಗಣಪತಿಯನ್ನು ನೆನೆಯುತ್ತ, ಅಂಕೋಲೆಯಿಂದ ಬಿಡಾರ ಕಟ್ಟಿಕೊಂಡು ಇನ್ನು ಮುಂದೆ ಇಲ್ಲಿಯೇ ನೆಲೆಸಲು ಬರಲಿರುವ ಸರ್ವೋತ್ತಮ ಮತ್ತು ಗೋದಾವರಿಯರ ಬಗ್ಗೆ ಯೋಚಿಸುತ್ತ ನೀರು ಹುಯ್ದುಕೊಳ್ಳತೊಡಗಿದ.
uಟಿಜeಜಿiಟಿeಜ
– ೮ –

ನಡುಮನೆಯ ಅಟ್ಟದ ಮೇಲಿನ ಸಾಮಾನುಗಳನ್ನು ಸರಿಯಾಗಿ ಜೋಡಿಸಿಟ್ಟು ಗೋದಾವರಿ ಸರ್ವೋತ್ತಮರ ಬಿಡಾರದ ವಸ್ತುಗಳನ್ನು ಇಡಲು ಅಲ್ಲಿ ಜಾಗ ಮಾಡಿಕೊಡಬೇಕೆಂದು ಕಾವೇರಿ ನಾಲ್ಕು ದಿನಗಳಿಂದ ಹೇಳುತ್ತಲೇ ಬಂದಿದ್ದರೂ ಅದಕ್ಕೆ ಮುಹೂರ್ತ ಬಂದಿದ್ದು ಮಾತ್ರ ಅವರು ಬರಲಿರುವ ದಿನವೇ. ದೇವರಾಯ ಬೇಗ ಬೇಗ ಸ್ನಾನ ಮುಗಿಸಿ, ಇನ್ನೂ ಅವಸರದಲ್ಲಿ ದೇವರ ಪೂಜೆ ಮುಗಿಸಿ ಅಟ್ಟ ಹತ್ತಲು ತಯಾರಿ ನಡೆಸಿದ. ಯಾವಾಗಲೂ ಬಚ್ಚಲ ಗೋಡೆಗೆ ಒರಗಿಸಿ ಇಡುತ್ತಿದ್ದ ಏಣಿ ಅಲ್ಲಿರಲಿಲ್ಲ.
‘ಇದು ಆಯುವಿನದೇ ಕೆಲಸ… ತೆಗೆದ ಕೈಯಿಂದ ಮತ್ತೆ ಅಲ್ಲಿ ವಾಪಸು ಇಡುವುದಿಲ್ಲ’ ಆಯುವನ್ನು ಬೈಯುತ್ತ ಏಣಿ ಹುಡುಕತೊಡಗಿದ. ಹಿತ್ತಿಲ ಬಾಗಿಲಿನಾಚೆ, ಗೋಡೆಗೆ ಒರಗಿಸಿಟ್ಟ ಏಣಿಯನ್ನು ಪತ್ತೆ ಮಾಡಿ, ಮುಂಬಾಗಿಲಿನಿಂದ ತಂದರೆ ತಡವಾಗುತ್ತದೆಂದು ಅಡಿಗೆ ಮನೆಯೊಳಗಿನಿಂದಲೇ ಹಾದು ಬಂದ. ಅಲ್ಲಿ ಏಣಿಯನ್ನು ಅಡ್ಡಡ್ಡ ತಿರುಗಿಸಿ ನಡುಮನೆಯ ಬಾಗಿಲಲ್ಲಿ ತೂರಿಸುವಾಗ, ನಾಗೊಂದಿಯ ಮೇಲೆ ಸಾಲಾಗಿಟ್ಟ ಬಣ್ಣದ ಸೌತೆಯೊಂದಕ್ಕೆ ಏಣಿಯ ತುದಿ ತಗುಲಿ ಅದು ಕೆಳಗೆ ಉರುಳಿ, ತೆಂಗಿನ ಕಾಯಿ ತುರಿದಿಟ್ಟ ತಟ್ಟೆಯ ಅಂಚಿಗೆ ಬಿದ್ದು, ತಟ್ಟೆ ಫಳಾರೆಂದು ಚಿಮ್ಮಿ ಕಾಯಿತುರಿಯೆಲ್ಲ ಚೆಲ್ಲಾಪಿಲ್ಲಿಯಾಗಿ ಹೋಯಿತು.
‘ಇರುವ ಕೆಲಸ ಕಡಿಮೆಯೆಂದು ಇದೊಂದು…’ ರಂಗೋಲಿಯಂತೆ ಹರಡಿಬಿದ್ದ ಬೆಳ್ಳನೆಯ ಕಾಯಿತುರಿ ಬಳಿಯುತ್ತ ಕಾವೇರಿ ಗೊಣಗತೊಡಗಿದಳು. ‘ಯಾವಾಗಿನಿಂದಲೋ ಹೇಳುತ್ತಿದ್ದೇನೆ.. ಕಿವಿಯ ಮೇಲೇ ಹಾಕಿಕೊಳ್ಳಲಿಲ್ಲ… ಈಗ ಅವರು ಬರುವ ವೇಳೆಗೆ ಇವರು ಅಟ್ಟ ಹತ್ತಿ ಕೂತುಕೊಳ್ಳುತ್ತಾರೆ… ಇಷ್ಟು ದಿವಸ ಮಾಡದೇ ಇದ್ದದ್ದು ಈಗಲೇ ಯಾಕೆ? ಮಧ್ಯಾಹ್ನದ ಮೇಲೆ ಮಾಡಬಹುದಲ್ಲ… ನನಗೆ ಗೊತ್ತು… ಅಟ್ಟ ಹತ್ತಿದ್ದೇ ಅಲ್ಲಿಂದಲೇ ಕರೆಯುತ್ತಾರೆ… ನಾನು ಅಲ್ಲಿ ಹೋಗಿ ಮೋರೆ ಮೇಲೆ ಮಾಡಿ ಉತ್ತರ ಕೊಡುತ್ತ ನಿಂತರೆ ಇಲ್ಲಿ ಅಡಿಗೆ ಆಗಬೇಕಲ್ಲ… ಅವರು ಮೊದಲ ಮೋಟರಿಗೇ ಬರುವವರು…’

ದೇವರಾಯ ಏನೂ ಹೇಳದೇ ಏಣಿಯನ್ನು ನಡುಮನೆಗೆ ತಂದು ಗೋಡೆಗೆ ಆನಿಸಿದ.
ಈ ಮನೆ ಮೊದಲಿನಿಂದಲೂ ಹೀಗೆ ಇದ್ದಿದ್ದಲ್ಲ. ಮಳೆಯ ಝಡಿ ಹೊಡೆಯುತ್ತದೆಂದು ಜಗುಲಿಯ ಮಾಡು ಮುಂದೆ ಮಾಡಿದ್ದು, ಸಾಮಾನು ಇಡಲು ನಡುಮನೆಯ ಅಟ್ಟ ಮಾಡಿಸಿದ್ದು, ಮಳೆಗಾಲದಲ್ಲಿ ಪಾತ್ರೆ ಗಲಬರಿಸಲಿಕ್ಕಾದರೂ ಮೂಲೆಯಲ್ಲಿ ಮೋರಿ ಬೇಕೆಂದು ಅಡಿಗೆ ಮನೆಯನ್ನು ಹಿಂದಕ್ಕೆ ಬೆಳೆಸಿದ್ದು ಹೀಗೆ ಅದು ಕಾಲಾಂತರದಲ್ಲಿ ಬದಲಾಗುತ್ತ ಬಂದಿತ್ತು. ಆದರೆ ಎಲ್ಲಕ್ಕೂ ಮೊದಲು ಮಾಡಿಸಿದ್ದು ನಡುಮನೆಯ ಅಟ್ಟ. ಅದು ದೇವರಾಯ ಮುಂಬೈಯಿಂದ ಬಿಡಾರ ಸಮೇತ ಬಂದ ಮೇಲೆ ಕಟ್ಟಿಸಿದ್ದು. ಸಾಮಾನುಗಳನ್ನು ತುಂಬಿ ತಂದ ಪೆಠಾರಿಗಳನ್ನು ಇಡಲು ಮನೆಯಲ್ಲಿ ಸರಿಯಾದ ಜಾಗವಿಲ್ಲದೇ ಹೋದಾಗ ಅಟ್ಟ ಮಾಡಿಸುವ ಯೋಚನೆ ಮಾಡಿದ್ದು ದೇವರಾಯನೇ. ನಡುಮನೆಯ ಮಾಡು ಎತ್ತರವಾಗಿದ್ದರಿಂದ ಅಟ್ಟಕ್ಕೆ ಪ್ರಶಸ್ತವಾಗಿತ್ತು.
ನಡುಮನೆಗೆ ಕಿಟಕಿಗಳಿಲ್ಲದಿದ್ದರೂ ಅಟ್ಟ ಕಟ್ಟುವ ಮೊದಲು ಮೇಲಿನ ಗವಾಕ್ಷಿಗಳಿಂದ ಬೆಳಕು ಸಾಕಷ್ಟು ಬರುತ್ತಿತ್ತು. ಅಟ್ಟ ಮಾಡಿಸಿದ ನಂತರ ಬೆಳಕೆಲ್ಲ ಅಲ್ಲೇ ಕಟ್ಟಿಬಿದ್ದು ಕೆಳಗೆ ನಸುಗತ್ತಲಾಯಿತು. ಆಮೇಲೆ ಮಾಡಿನ ನಾಲ್ಕು ಹೆಂಚು ತೆಗೆದು ಗಾಜು ಹಾಕಿಸಿದರೂ ಹೆಚ್ಚು ಪ್ರಯೋಜನವಾಗಲಿಲ್ಲ. ಗೇರು ಎಣ್ಣೆ ಬಳಿದು ಕಪ್ಪಾದ ಕಟ್ಟಿಗೆಯ ತೊಲೆಗಳಿಂದ ಮಾಡಿದ ಅಟ್ಟ ನಡುಮನೆಯ ಮುಕ್ಕಾಲು ಭಾಗವನ್ನು ಮುಚ್ಚಿಹಾಕಿತ್ತು. ಅಡಿಗೆ ಮನೆಯ ಒಲೆಗೆ ಹಸಿ ಕಟ್ಟಿಗೆ ಬಿದ್ದ ದಿನವಂತೂ ನಡುಮನೆಯಲ್ಲಿ ಹೊಗೆ ತುಂಬಿ ಬೆಳಕು ಇನ್ನೂ ಕ್ಷೀಣಿಸಿ ಗವಿಯಲ್ಲಿ ಹೊಕ್ಕಂತಾಗುತ್ತಿತ್ತು.

ಆದರೆ ಅಟ್ಟದ ಮೇಲೆ ಹತ್ತಿ ಬಂದರೆ, ಅದೂ ಮಧ್ಯಾಹ್ನದ ಹೊತ್ತು, ಬೆಳಕಿಂಡಿಯಿಂದ ಬೇಕಾದಷ್ಟು ಬೆಳಕು ಬರುತ್ತಿತ್ತು. ದೇವರಾಯ ಅಟ್ಟ ಹತ್ತುವುದು ವರ್ಷಕ್ಕೆರಡು ಸಲ ಮಾತ್ರ – ಚೌತಿಯ ಮೊದಲು ಮತ್ತು ನಂತರ. ಚೌತಿಯ ಮೊದಲು ಗಣಪತಿಯ ಕಟ್ಟಿಗೆಯ ಪೀಠ ಹಾಗೂ ಅಡಿಗೆಯ ದೊಡ್ಡ ಪಾತ್ರೆಗಳನ್ನು ತೆಗೆಯಲು ಮತ್ತು ಚೌತಿಯ ನಂತರ ಅವುಗಳನ್ನು ಮರಳಿ ಇಡಲು ಅಟ್ಟ ಹತ್ತುವುದು ಬಿಟ್ಟರೆ ಮತ್ತೆ ಅಲ್ಲಿ ಕಾಲಿಡುವ ಪ್ರಸಂಗವೇ ಬರುತ್ತಿರಲಿಲ್ಲ. ಪುರಂದರ ಇಲ್ಲಿರುವಾಗ ಅವನೇ ಆ ಕೆಲಸ ಮಾಡುತ್ತಿದ್ದ. ಅಲ್ಲಿ ಹತ್ತಿ ಕೂರುವುದೆಂದರೆ ಅವನಿಗೆ ಬಹಳ ಉಮೇದು. ಅಲ್ಲಿದ್ದ ನಾನಾ ಸಾಮಾನುಗಳನ್ನು ನೋಡುತ್ತ ಮೈಮರೆತು ಕೂತವನನ್ನು ಇಳಿಸಲು ಹತ್ತು ಬಾರಿ ಕರೆಯಬೇಕು. ಅಟ್ಟ ಹತ್ತುವದೆಂಬ ಮಾತು ಬಾಯಲ್ಲಿ ಪೂರ್ತಿಯಾಗುವುದರೊಳಗೆ ಏಣಿ ತಂದು ಹತ್ತಿದನೇ.
ಅಡಿಗೆ ಮನೆಯತ್ತ ಮುಖ ಮಾಡಿ ‘ನಾ ಹತ್ತತೇನೆ’ ಎಂದು ಕಾವೇರಿಗೆ ಕೇಳಿಸುವಂತೆ ಹೇಳಿ, ಅವಳ ಉತ್ತರಕ್ಕೆ ಕಾಯದೇ ದೇವರಾಯ ಅಟ್ಟ ಹತ್ತಿದ. ತುಂಡು ಪಂಚೆ ಉಟ್ಟು, ಬರಿಮೈಯಲ್ಲಿ ಮೇಲೆ ಹತ್ತಿ ಹೋದ ನಂತರ, ಹೊಗೆಗೆ ಕಪ್ಪುಹಿಡಿದು ಜೋಲಾಡುವ ಜೇಡರ ಬಲೆಗಳನ್ನು ನೋಡಿ ಸ್ನಾನ ಮಾಡುವ ಮೊದಲೇ ಈ ಕೆಲಸ ಮಾಡಬೇಕಿತ್ತು ಅಂದುಕೊಂಡ. ಅಟ್ಟ ಹತ್ತಿ ಬರುತ್ತಿದ್ದಂತೆ, ಬೆಳಕಿಂಡಿಯಿಂದ ತೂರಿಬಂದ ಬಿಸಿಲಿನೊಳಗೆ ಹೊಗೆ ಮತ್ತು ಧೂಳಿನ ಹುಡಿ ಕಂಬದಂತೆ ನಿಧಾನ ಚಲಿಸುತ್ತಿರುವುದು ಕಾಣಿಸಿತು. ಅವನು ಕಾಲಿಟ್ಟು ಚಲಿಸಿದ ಹಾಗೆ ಧೂಳಿನ ಕಣಗಳು ಬುಸ್ಸನೆ ಎದ್ದು ಬಿಸಿಲ ಕಂಬದಲ್ಲಿ ಕೋಲಾಹಲ ಎಬ್ಬಿಸುತ್ತಿದ್ದವು. ಪ್ರತಿ ವರ್ಷ ತೆಗೆಯುವ ಚೌತಿಯ ಸಾಮಾನುಗಳೆಲ್ಲ ಮುಂದೆಯೇ ಇಡಲಾಗಿದ್ದವು. ಇನ್ನೊಂದು ತಿಂಗಳೊಳಗೆ ತೆಗೆಯಬೇಕಾದ ಇವುಗಳನ್ನೆಲ್ಲ ಬದಿಗೆ ಸರಿಸಿಟ್ಟು ಬರಲಿರುವವರ ಬಿಡಾರದ ಗಂಟು ಪೆಟ್ಟಿಗೆಗಳನ್ನು ಹಿಂದೆ ಇಡಲು ಜಾಗ ಮಾಡುವುದೇ ಒಳ್ಳೆಯದೆಂದು ತೋರಿತು. ಒಂದೊಂದಾಗಿ ಎತ್ತಿ ಬದಿಗಿಡತೊಡಗಿದ. ಚೌತಿಯ ಮಂಟಪ, ಕಟ್ಟಿಗೆಯ ಪೀಠ, ಬಂಗಾರದ ಬಣ್ಣ ಹಚ್ಚಿದ ಪ್ರಭಾವಳಿ, ಮಂಟಪದ ಹಿಂದೆ ಕಟ್ಟುವ ಪರದೆ, ಫಲಾವಳಿ ಕಟ್ಟಲು ಬೇಕಾಗುವ ಕಟ್ಟಿಗೆಯ ಚೌಕಟ್ಟು, ಪೇರಿಸಿಟ್ಟ ಮಣೆಗಳು, ಅಡಿಗೆಯ ದೊಡ್ಡ ಪಾತ್ರೆಗಳು, ಸೌಟುಗಳು ಎಲ್ಲವೂ ಅಲ್ಲಿದ್ದವು. ಅವುಗಳನ್ನೆಲ್ಲ ಅಲ್ಲಲ್ಲೇ ಬದಿಗೆ ಸರಿಸಿಟ್ಟು ಮುಂದೆ ಹೋದರೆ ಅಲ್ಲಿ ನಾಲ್ಕು ದೊಡ್ಡ ಪೆಠಾರಿಗಳಿದ್ದವು. ಅವುಗಳ ಪಕ್ಕದಲ್ಲೇ ನೀರು ಕಾಯಿಸುವ ಚಿಕ್ಕ ತಾಮ್ರದ ಬಂಬು ಇತ್ತು.

omಜu bಚಿಜi ಞಚಿಜಚಿಟu, iಟಟusಣಡಿಚಿಣioಟಿ bಥಿ Pಡಿಚಿmoಜ P ಖಿಸಿಲಿಂಡರಿನಂಥ ಆ ತಾಮ್ರದ ಬಂಬಿನ ಹೊಟ್ಟೆಯ ಮಧ್ಯದಿಂದ ಉದ್ಭವಿಸಿ ಬಂದಂತೆ ತೋರುವ ಉದ್ದ ಕೊಳಾಯಿ ಬೆಂಕಿ ಉರಿಸಲು ಇದ್ದ ಜಾಗವಾಗಿತ್ತು. ಕೆಳಗೆ ಬೂದಿ ಹಿಡಿಯಲೊಂದು ಅಗಲ ಕರಂಡಕ. ಆ ಬಂಬನ್ನು ದೇವರಾಯನಿಗೆ ಕೊಡಿಸಿದವನು ದಿನಕರ. ಮುಂಬೈಯಲ್ಲಿ ಮೊದಲು ಇಬ್ಬರೂ ಒಂದೇ ಮನೆಯಲ್ಲಿ ಇದ್ದರು. ಹೋದ ಹೊಸದರಲ್ಲಿ ದೇವರಾಯ ತಣ್ನೀರು ಸ್ನಾನ ಮಾಡುತ್ತಿದ್ದ. ಅಲ್ಲಿಯ ಹವೆಗೆ ಬಿಸಿನೀರಿನ ಅಗತ್ಯವೇ ಇರಲಿಲ್ಲ. ಆದರೆ ಮದುವೆಯ ನಂತರ, ‘ಸಂಸಾರ ಅಂದ ಮೇಲೆ ಬಿಸಿನೀರಿಗೆ ವ್ಯವಸ್ಥೆಯಿರಬೇಕು’ ಎಂದು ಹೇಳಿ ಈ ಪುಟ್ಟ ಬಂಬನ್ನು ದಿನಕರ ಕೊಡಿಸಿದ್ದ. ನೆನಪಿನ ಸುರಂಗದೊಳಗೆ ಹಿಂದೆ ಹಿಂದೆ ಹೋಗಿ ನೋಡಿದರೆ ಎಲ್ಲವೂ ಯಾವಾಗಲೋ ಜರುಗಿಹೋದ ಹಾಗೆ, ಬೇರೆ ಯಾರಿಗೋ ಆದ ಅನುಭವದ ಹಾಗೆ ತೋರುತ್ತಿತ್ತು. ಮೊದಲ ಹೆಂಡತಿ, ಎರಡನೇ ಹೆಂಡತಿ – ಎರಡೆರಡು ಸಲ ಮದುವೆ, ಆ ಅತ್ತೆ ಮಾವಂದಿರು ಮತ್ತು ಅವರ ಮನೆಯವರು, ಒಂದು ಕಾಲದಲ್ಲಿ ತನ್ನ ಸಂಬಂಧೀಕರಾದ ಅವರೆಲ್ಲ ಎಲ್ಲಿದ್ದಾರೋ, ಬದುಕಿದ್ದಾರೋ ಇಲ್ಲವೋ, ಹೇಗೆ ಎಲ್ಲವೂ ಒಂದು ಕೊಂಡಿ ತಪ್ಪಿದ್ದೇ ಕಳಚಿ ಬಿದ್ದು ಹೋಯಿತು… ಬಾಣಂತನಕ್ಕೆಂದು ಹೋದ ಇಬ್ಬರೂ ಹೆಂಡತಿಯರು ಮರಳಿ ಬರಲೇ ಇಲ್ಲ. ಅವರ ಶವಸಂಸ್ಕಾರಕ್ಕೂ ಅವನು ಇರಲಿಲ್ಲ. ಎರಡು ಸಾರಿಯೂ ಸುದ್ದಿ ತಿಳಿದು ಮುಂಬೈಯಿಂದ ಅವನು ಬಂದು ತಲುಪುವಾಗ ನಾಲ್ಕು ದಿನಗಳಾಗಿ ಹೋಗಿದ್ದವು…

ಮೂರನೆಯ ಮದುವೆಯ ವೇಳೆಗೆ ಅವನ ಜೀವನದ ಅಪೇಕ್ಷೆಗಳೂ ಬದಲಾಗಿದ್ದವು. ಮತ್ತು ಕಾವೇರಿಯೂ ಮೊದಲ ಹೆಂಡತಿಯರಿಗಿಂತ ವಯಸ್ಸಿನಲ್ಲಿ ತುಸು ದೊಡ್ಡವಳಾದುದರಿಂದ ಬೇಗ ಹೊಂದಿಕೊಂಡಳು. ತವರಿಗಿಂತ ಬೇರೆ ಏನಿದ್ದರೂ ಒಳ್ಳೆಯದೆಂಬ ಭಾವನೆಯಲ್ಲಿ ಬಂದವಳ ಆಸೆಗಳೂ ಸಹ ಬಹಳ ಕಡಿಮೆ ಇದ್ದವು. ತನಗೆ ಮಕ್ಕಳಾಗದಿದ್ದ ಬಗ್ಗೆ ಅವಳು ಹೆಚ್ಚು ಸಂಕಟಪಟ್ಟಂತೆ ತೋರಲಿಲ್ಲ. ಮೊದಲ ಹೆಂಡತಿಯರ ಸಾವಿನ ಕಾರಣ ತಿಳಿದಿದ್ದ ಅವಳಿಗೆ ಆ ಬಗ್ಗೆ ವಿನಾಕಾರಣ ಭಯವಿತ್ತು. ಉದ್ದ ಮೂಗು, ತಲೆತುಂಬ ಕೂದಲು, ಶಾಂತವಾದ ಕಣ್ಣುಗಳು, ಎತ್ತರದಲ್ಲಿ ಒಂದು ಮುಷ್ಟಿ ಹೆಚ್ಚೇ ಅನ್ನಬಹುದಾದ ನಿಲುವು – ಒಟ್ಟಿನಲ್ಲಿ ಅವಳದು ದೇವರಾಯನಿಗೆ ಜೋಡಿಯಾಗುವ ಆಕಾರ. ಈ ಮದುವೆ ತಾಳಿದ್ದರಿಂದ, ನಿಧಾನವಾಗಿ ಸಂಬಂಧಗಳು ಊರತೊಡಗಿದವು.

‘ಅಲ್ಲಿ ಬಿಸಿ ನೀರು ತೋಡುವ ಸೌಟು ಇದೆಯಲ್ಲ. ಅದನ್ನೊಂದು ತೆಗೆದು ಬಿಡಿ. ಅದು ಹಸಿರು ಪೆಠಾರಿಯೊಳಗೆ ಇದೆ…’ ಕಾವೇರಿ ಕೆಳಗಿನಿಂದ ಹೇಳಿದ್ದು ಕೇಳಿಸಿ ದೇವರಾಯ ಪೆಠಾರಿಗಳತ್ತ ಜರುಗಿದ.

‘ಆಯಿತೇ? ಅವರು ಬರುವ ಹೊತ್ತಾಯಿತಲ್ಲ… ಆಯಾಸವಾದರೆ ನೀವು ಕೆಳಗೆ ಬನ್ನಿ. ಆಮೇಲೆ ಆಯುವಿಗೆ ಹೇಳಿ ಸರಿಮಾಡಿಸುತ್ತೇನೆ.’
‘ಯಾಕೆ ಇಷ್ಟು ಅವಸರ? ಬರುವವರು ಹೊಸಬರಲ್ಲ’ ಎಂದು ಗೊಣಗು ದನಿಯಲ್ಲಿ ಹೇಳಿ ಹಸಿರು ಪೆಠಾರಿಯತ್ತ ಸರಿದು ಅದರ ಮುಚ್ಚಳ ತೆಗೆದ. ಅದರ ತುಂಬ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳು ತುಂಬಿದ್ದವು.

ಅವುಗಳನ್ನು ನೋಡುತ್ತಿರುವಂತೆ ಅಪ್ರಯತ್ನವಾಗಿ ಇದು ದಿನಕರನ ತಾಯಿ ಕೊಟ್ಟಿದ್ದು, ಈ ಎಣ್ಣೆಯ ಗಿಂಡಿ ಬಾಲ್ಯದಿಂದಲೂ ಮನೆಯಲ್ಲಿ ಇದ್ದಿದ್ದು, ಈ ತಪ್ಪಲೆ ಗೋದಾವರಿ ಕೊಟ್ಟಿದ್ದು ಹೀಗೆ ಸಾಲುಸಾಲಾಗಿ ಅವುಗಳಿಗೆ ಸಂಬಂಧಿಸಿದ ಜನ ನೆನಪಾಗತೊಡಗಿದರು. ಜರ್ಮನ್ ಸಿಲ್ವರಿನ ಹರಿವಾಣವನ್ನು ನೋಡಿ ಮುಂಬೈ ಬಿಡುವ ಮುಂಚಿನ ಸತತ ಅನಾರೋಗ್ಯದ ಹತ್ತು ದಿನಗಳು ನೆನಪಾದವು. ಆ ದಿನಗಳಲ್ಲಿ ಅವನು ಇದೇ ಹರಿವಾಣದಲ್ಲಿ ಗಂಜಿ ಕುಡಿಯುತ್ತಿದ್ದುದು. ಅವನೇ ನಂಬಿದಂತೆ, ಹೊನ್ನಾವರಕ್ಕೆ ಬರಲು ಅವನ ಇಷ್ಟದೈವವಾದ ಗಣಪತಿಯ ಪ್ರೇರಣೆಯಾದದ್ದು ಜ್ವರ ಹಿಡಿದು ಹತ್ತು ದಿನ ಮಲಗಿದ ಆ ಕಾಲದಲ್ಲೇ.
’ಬಂದರು ಬಂದರು… ನೀವು ಇನ್ನೂ ಅಲ್ಲೇ ಇದ್ದೀರಲ್ಲ…’ ಎಂದು ಕಾವೇರಿ ಹೇಳಿದ್ದು ಕೇಳಿ ದೇವರಾಯ ಅಟ್ಟ ಇಳಿಯಲು ಹೊರಟ. ಕೆಳಗೆ ಸುನಂದೆಯ ದನಿ ಕೇಳಿಸಿತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ