ಆಫೀಸು ಬಿಟ್ಟವನೇ ಅನಂತ ಫ್ಲೋರಾಫೌಂಟನ್ ಹತ್ತಿರದ ಬಸ್ ಸ್ಟ್ಯಾಂಡಿನಲ್ಲಿ ಕ್ಯೂದಲ್ಲಿ ನಿಂತು `ಎಚ್’ ರೂಟ ಬಸ್ಸಿಗಾಗಿ ಕಾಯುತ್ತಿದ್ದ, ಚೌಪಾಟಿಗೆ ಹೋಗಲು. ಆದರೆ ಕ್ಯೂದಲ್ಲಿ ನಿಂತು ಅದಾಗಲೇ ೧೫ ಮಿನಿಟುಗಳಾದರೂ ಒಂದೂ ಬಸ್ಸು ಬರದೇ ಮನಸ್ಸು ರೋಸಿಹೋಗಿತ್ತು. ಆಫೀಸು ಬಿಟ್ಟಿದ್ದೇ ಅಲ್ಲಿ ಬರುತ್ತಿರುವಾಗ, ಒಂದು ಬಸ್ಸು ಅದೇ ನಿಲ್ದಾಣಕ್ಕೆ ಬರುತ್ತಿದ್ದುದು ಕಂಡು, ಬೂಟುಹಾಕಿದ ಕಾಲುಗಳಿಂದಲೇ ಓಡಿದ್ದ. ಏದುತ್ತ, ತೇಕುತ್ತ ನಿಲ್ದಾಣವನ್ನೇನೋ ತಲುಪಿದ; ಆದರೆ ಬಸ್ಸಿನಲ್ಲಿ ತನಗೊಬ್ಬನಿಗಷ್ಟೇ ಜಾಗ ಸಿಗದೇ ಹೋಗಬೇಕೆ? ಆ ಕಂಡಕ್ಟರನೂ ಎಷ್ಟು ಉದ್ಧಟ! ಒಬ್ಬನನ್ನು ಹೆಚ್ಚಿಗೆ ತೆಗೆದುಕೊಂಡಲ್ಲಿ ಅವನ ಅಪ್ಪನ ಗಂಟು ಹೋಗುತ್ತಿತ್ತೇ? ಹೊರಟು ನಿಂತ ಬಸ್ಸನ್ನು ಗಂಟೆ ಹೊಡೆದು ನಿಲ್ಲಿಸಿ ತನ್ನನ್ನು ಇಳಿಸಿದನಲ್ಲ! `ಈ ಜಗತ್ತೇ ನಿಷ್ಕರುಣ’ ಎನಿಸಿತು ಅನಂತನಿಗೆ. ಅಬ್ಬಬ್ಬ! ಬರಿಯೇ ಬಸ್ಸಿನಲ್ಲಿ ಜಾಗ ಸಿಗದೆ ನಿರಾಸೆಯಾದುದಕ್ಕೆ ಇಷ್ಟು ದೊಡ್ಡ ಉದ್ಗಾರವೆ?
ಏಕೊ, ಇತ್ತಿತ್ತ ಅನಂತನ ಮನಸ್ಸಿನ ರೀತಿಯೇ ಒಂದು ತರವಾಗಿದೆ. ಏನೋ ಒಂದು ಅಸಮಾಧಾನ, ಎಂತಹದೋ ಅಸ್ವಸ್ಥತೆ ಅವನ ಮನಸ್ಸಿನ ಶಾಂತಿಯನ್ನು ಕದಡಿವೆ. ತನ್ನ ಮನಸ್ಸಿನ ವಿರುದ್ಧ ನಡೆದ ಸಣ್ಣ ಪುಟ್ಟ ಸಂಗತಿಗಳಿಗೂ ಸಿಡಿದೇಳುತ್ತಿದ್ದ, ಕ್ಷೋಭೆಗೊಳ್ಳುತ್ತಿದ್ದ.
ಕಳೆದ ಏಳು ವರುಷಗಳ ತನ್ನ ಮುಂಬಯಿ ಜೀವನದಲ್ಲಿ ಹಾಸು ಹೊಕ್ಕಾಗಿ ನಿಂತ, ನಿತ್ಯ ಪರಿಚಯದ ಈ ರುಕ್ಷ ಆಫೀಸು ಕೆಲಸ; ದಣಿಸುವ ಬಸ್ ಕ್ಯೂ; ರುಚಿಯಿಲ್ಲದ ಬದಲಿಲ್ಲದ ಹೊಟೆಲ್ ಊಟ (ಊಟಕ್ಕೂ ಕ್ಯೂ ಮತ್ತೆ!) ಎಲ್ಲವೂ ಇತ್ತಿತ್ತ ಹೊಸ ಅರ್ಥ, ಹೊಸ ರೂಪ ತಳೆದು ಮನಸ್ಸನ್ನು ವ್ಯಗ್ರಗೊಳಿಸುತ್ತಿವೆ. ಬಾಳೆಲ್ಲ ಬರಿದು ಎನಿಸಹತ್ತಿದೆ. ಮುಂಬಯಿ ಜೀವನದ ವಿವಿಧ ರೀತಿ-ನೀತಿಗಳಿಗೆ ಅತಿ ಸಹಜವಾಗಿ ಹೊಂದಿಕೊಂಡ ಅನಂತನಲ್ಲಿ, ಒಮ್ಮಲೇ ಅರಿವು ಬಂದಂತಾಗಿ ಜೀವನ ಬೇಸರ ಬೇಸರ ಎನಿಸುತ್ತಿದೆ.
ಮೊದಲಿನ ಬಸ್ಸು ಹೊರಟು ಅದಾಗಲೇ ಇಪ್ಪತ್ತು ಮಿನಿಟುಗಳಾದರೂ ಇನ್ನೊಂದು ಬಸ್ಸು ಬರುವ ಲಕ್ಷಣ ತೋರಲಿಲ್ಲ. ಕ್ಯೂ ಭರದಿಂದ ಬೆಳೆಯುತ್ತಲಿತ್ತು. ಕ್ಯೂದಲ್ಲಿ ತನ್ನದೇ ಮೊದಲ ಸ್ಥಾನ. ತನ್ನಂತೆಯೇ ಬಸ್ಸಿಗಾಗಿ ಕಾಯುವ ಜನ ಅನೇಕರಿದ್ದಾರಲ್ಲ ಎನ್ನುವ ನಿತ್ಯದ ಸಮಾಧಾನ ಇಂದು ಅನಂತನಿಗಿಲ್ಲ. ಕ್ಷಣ ಕ್ಷಣಕ್ಕೂ ಅವನ ಮನಸ್ಸಿನ ಅಸ್ವಸ್ಥತೆ ಮಾತ್ರ ಹೆಚ್ಚುತ್ತಿತ್ತು.
ತನ್ನ ಜೀವನ ಈಗ ಒಂದು ಸ್ಥಿಮಿತಕ್ಕೆ ಬಂದಿದೆ, ಅದರ ಇತಿ ಮಿತಿ ತನಗೆ ತಿಳಿದಿದೆ ಎಂದು ತಿಳಿದ ಅನಂತ, ಇಂದು ಕ್ಷುಲ್ಲಕ ಕಾರಣಗಳಿಂದಲೂ ತನ್ನ ಮನಸ್ಸಿನ ಶಾಂತಿಯನ್ನು ಕಳಕೊಳ್ಳಲು ಕಾರಣವೇನು?
ಕಳೆದ ಐದಾರು ದಿನಗಳಲ್ಲಿ ಅನಂತನ ಜೇವನದಲ್ಲಿ ನಡೆದ ಒಂದು ದೊಡ್ಡ ಘಟನೆಯೆಂದರೆ ಅವನ ಗೆಳೆಯ-ಈಗ ಅವನು `ಪೇಯಿಂಗ್‍ಗೆಸ್ಟ್’ (ಪೀಜೀ) ಆಗಿ ನಿಂತ ಯಜಮಾನನ ಮಗ – ಅರವಿಂದನ ಮದುವೆ. ಆದರೆ ಈ ಮದುವೆಗೂ ತನಗೂ ಸಂಬಂಧವೇನು? ಸಂಬಂಧ ಇದೆಯೆ? ಇಲ್ಲವೆ? ತನಗಿಂತ ಎಷ್ಟೋ ವರುಷಗಳಿಂದ ಚಿಕ್ಕವನಾದ, ಒಮ್ಮೆ ತನ್ನ ವಿದ್ಯಾರ್ಥಿಯೂ ಆಗಿದ್ದ ಈ ಅರವಿಂದನ ಲಗ್ನದಿಂದ ತನ್ನ ಮನ:ಶಾಂತಿ ಏಕೆ ಕದಡಬೇಕು? ಅರವಿಂದನ ವಿಷಯದಲ್ಲಿ ತನಗೆ ಅಸೂಯೆಯೆ? ಮದುವೆಯನ್ನೇ ಮಾಡಿಕೊಳ್ಳಲಾರೆನೆಂದು ಮನ:ಪೂರ್ವಕಗಿಯೇ ನಿಶ್ಚಯಿಸಿದ್ದ ತನ್ನಲ್ಲಿ ಅಸೂಯೆ ಹುಟ್ಟುವ ಮಾತೆಲ್ಲಿ ಬಂತು?
ಬಸ್ ನಿಲ್ದಾಣದಲ್ಲಿ ನಿಂತು ನಿಂತು ಬೇಸರ ಬಂದಾಗ, ಬಸ್ಸೊಂದು ದೂರದಲ್ಲಿ ಬರುವುದು ತೋರಿತು॒.॒. `ಉಶ್! ಕೊನೆಗೂ ಬಂದಿತಲ್ಲ’ ಎಂಬ ಬಿಡುಗಡೆಯ ನಿಶ್ವಾಸ ಬಿಟ್ಟು ನಿಂತಲ್ಲಿಯೇ ಬಸ್ ಹತ್ತುವ ಸಿದ್ಧತೆಯ ಚಲನೆ ಮಾಡಿದ, ಅನಂತ. ಆದರೆ ಅವನ ದುರ್ದೈವ; ಇಲೆಕ್ಟ್ರಿಕ್ ಹೌಸ್ ಸ್ಟಾಪಿನಲ್ಲೇ ತುಂಬಿ ಬಂದ ಬಸ್ಸು ಈತ ನಿಂತ ನಿಲ್ದಾಣದಲ್ಲಿ ಇಳಿಯುವವರಾರೂ ಇಲ್ಲದ್ದರಿಂದ, ನಿಲ್ಲದೇ ಮುಂದೆ ಸಾಗಿತು. ಬಸ್ಸಿನಲ್ಲಿ ಒಂದೂ ಜಾಗ ಖಾಲಿಯಿಲ್ಲ ಎಂಬ ಸಂಕೇತದ (ಅವಿರತ) ಗಂಟೆ ಬಾರಿಸುತ್ತ ‘ನೋ ಸೀಟ್ ಪ್ಲೀಸ್’ ಎಂದು ಒದರಿದ ಕಂಡಕ್ಟರನ ಮೇಲೆ ಅನಂತನಿಗೆ ಬಂದ ಸಿಟ್ಟು ಅಷ್ಟಿಷ್ಟಲ್ಲ. Ňಥೂ ! ಇವರ ಮನೆ ಹಾಳಾಗ. ಇಲ್ಲಿಂದಲೇ ಒಂದು ಸ್ಪೆಶಲ್ ಬಸ್ಸು ಹೊರಡಿಸಿದರಾಗದೆ? ಇಷ್ಟೆಲ್ಲ ಜನ ಇಲ್ಲಿ ಕ್ಯೂದಲ್ಲಿ ಬಳಲುತ್ತಿರುವಾಗ॒.॒.ňňಆದರೆ ಇದು ದಿನ ನಿತ್ಯದ್ದೇ ಮಾತು. ಇಂದೇ ಏಕೆ ನೀನು ಇಷ್ಟು ಸಿಡಿಮಿಡಿಗೊಳ್ಳಬೇಕು? – ಎಂದು ವಿವೇಕ ಕೇಳಿದ ಪ್ರಶ್ನೆಗೆ ಅನಂತನ ಒಳಮನಸ್ಸು ಇನ್ನಿಷ್ಟು ಉದ್ವಿಗ್ನಗೊಂಡಿತ್ತು.
ಈ ಕ್ಯೂದಲ್ಲಿ ನಿಂತು ಹೀಗೆ ತೊಳಲುವುದಕ್ಕಿಂತ ಹೀಗೆಯೇ ನಡೆಯುತ್ತ `ಮರೀನ್ ಡ್ರಾȂವ್’ದ ಗುಂಟ ಚೌಪಾಟಿಗೆ ಹೋದರೆ ಹೇಗೆ? ಆದರೆ ಒಬ್ಬಂಟಿಗನಾಗಿ ಹೋಗುವುದೆಂದರೆ ಬೇಸರ. ಕ್ಯೂದಲ್ಲಿ ತನ್ನದೇ ಮೊದಲ ಸ್ಥಾನ. ಇನ್ನೊಂದು ಬಸ್ಸು ಬಂದರೆ ಜಾಗ ಸಿಕ್ಕೀತು ಎಂಬ ಆಸೆ. ಇಷ್ಟು ಹೊತ್ತು ನಿಂತಾಗಿದೆ, ಇನ್ನೂ ಕೆಲ ಹೊತ್ತು. ಅಷ್ಟರಲ್ಲಿ ಅಪರಿಚಿತ ದನಿಯೊಂದು ಇವನನ್ನು ಕರೆಯಿತು. Ňಹಲ್ಲೋ ಮಿಸ್ಟರ್ ಕುಲಕರ್ಣಿň ಎಂದು. ಯಾರಿರಬಹುದೆಂದು ಹಿಂತಿರುಗಿ ನೋಡಿದಾಗ, ಮೋರೆಯೆಲ್ಲ ನಗುವಾಗಿಸಿ ತನ್ನೆಡೆ ಬರುತ್ತಿದ್ದ ವ್ಯಕ್ತಿಯೊಂದನ್ನು ‘ಈತನೇ ಇರಬಹುದೇ ತನ್ನನ್ನು ಕರೆದವನು? ‘ ಎಂಬಂತೆ ಅನಂತ ನೋಡುತ್ತಿದ್ದಾಗ, ಹೊಸ ಆಗಂತುಕನು ಭರದಿಂದ ಅವನನ್ನು ಸಮೀಪಿಸಿ, ಅತಿ ಉತ್ಸಾಹದಿಂದ ಕೈ ಮುಂದೆ ಚಾಚಿ, Ňಅನಂತ ಕುಲಕರ್ಣಿಯವರಲ್ಲವೇ? ň ಎಂದು ಕೇಳಿದ. Ňನನ್ನ ಪರಿಚಯ ಸಿಗಲಿಲ್ಲವೆ? ಗಜಾನನ – ನಿಮ್ಮ ವರ್ಗದ ನಾರಾಯಣ ಪಾಟೀಲ – ಅವರ ತಮ್ಮň. Ňಆಂ! ಪಾಟೀಲ ನಾರಾಯಣನ ತಮ್ಮ!! ಓಹೊಹೋ, ಇಷ್ಟು ದೊಡ್ಡವನಾಗಿದ್ದೀಯಾ! ನಾನು ಧಾರವಾಡ ಬಿಟ್ಟಾಗ ಇನ್ನೂ ಇಷ್ಟು ಸಣ್ಣವನಿದ್ದೆň ಎಂದು ಆನಂದದಿಂದ ಗಜಾನನ ಮುಂದೆ ಮಾಡಿದ ಕೈಯನ್ನು ಕುಲುಕಿದ.
ಗಜಾನನನ ಮೋರೆಯಲ್ಲಿ ಅರಳಿದ ನಗೆಯಲ್ಲಿ ಆರೋಗ್ಯ ತುಂಬಿ ತುಳುಕಾಡುತ್ತಿತ್ತು. ಅರೆಕ್ಷಣದಲ್ಲಿ ಅನಂತ ತನ್ನ ಮನದ ಬೇಸರವನ್ನು ಮರೆತ. ಆದರೆ ಆ ಮರೆವಿನ ಹಿಂದೆಯೇ ಒಂದು ಅಧೀರತೆ ಮನೆ ಮಾಡಿತ್ತು. ಏಕೋ, ಇತ್ತಿತ್ತ ತುಂಬ ಚಟುವಟಿಕೆಯ ಊತ್ಸಾಹದ, ಸಾಮರ್ಥ್ಯ ತುಂಬಿದ ತಾರುಣ್ಯದ ಸಾನಿಧ್ಯದಲ್ಲಿ ಅನಂತನ ಮನಸ್ಸು ಅಧೀರಗೊಳ್ಳುತ್ತಿತ್ತು.
Ňಮುಂಬಯಿಗೆ ಯಾವಾಗ ಬಂದೆ? ň ನಗುತ್ತ ಕೇಳಿದ ಅನಂತ.
Ňಈಗ ಎರಡು ತಿಂಗಳಾದುವು. ನಾನು ಬಿ.ಎ. ಪಾಸಾದೆ, ಎರಡನೇ ವರ್ಗದಲ್ಲಿ. ಇಲ್ಲೇ ಸೆಕ್ರೆಟಾರಿಯೆಟ್ಟಿನಲ್ಲಿ ಕೆಲಸಕ್ಕಿದ್ದೇನೆ. ಆಯ್ ಏ. ಎಸ್ಸಕ್ಕೂ ಕೂಡ್ರುವ ಮನಸ್ಸಿದೆ. ಸಾಂತಾಕ್ರೂಝಿನಲ್ಲಿ ಗೆಳೆಯರೊಬ್ಬರ ಮನೆಯಲ್ಲಿರುತ್ತೇನೆ. ಇನ್ನೂ ಸ್ವಂತದ ಮನೆ ಸಿಕ್ಕಿಲ್ಲ; ಬೋರಿವ್ಲಿಯಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಸಿಗುವ ಸಂಭವವಿದೆ. ň ಗಜಾನನನ ಮಾತಿನಲ್ಲಿ ಹುರುಪು ಇತ್ತು. ತನ್ನ ಭವಿಷ್ಯತ್ತಿನ ಕುರಿತು ಅಪಾರ ವಿಶ್ವಾಸವಿತ್ತು. ಅನಂತ ಅತಿ ಆದರ, ಕೌತುಕ ತುಂಬಿದ ಭಾವದಿಂದ ಅವನ ಮಾತನ್ನು ಆಲಿಸುತ್ತಿದ್ದ.
Ňಬೋರಿವ್ಲಿ ಎಂದರೆ ಬಹಳೇ ದೂರವಾಯಿತು ಅಲ್ಲವೆ? ಮುಂಬಯಿಯಲ್ಲಿ ಮನೆ ಸಿಗುವುದೇ ಕಠಿಣವಂತೆ. ನಿಮಗೆ ಮಾತ್ರ ಒಳ್ಳೆ ಮನೆ ಸಿಕ್ಕಿರ ಬೇಕು — ನೀವು ಮುಂಬಯಿಗೆ ಬಂದು ಬಹಳ ವರುಷಗಳಾದುವು. ň ಗಜಾನನ ಅತಿ ಸಹಜವಾಗಿ ಕೇಳಿದ ಈ ಪ್ರಶ್ನೆಯಿಂದ ಅನಂತ ಒಮ್ಮಲೇ ಮ್ಲಾನಗೊಂಡ. ಅವನ ಇಂದಿನ ಮನ:ಸ್ಥಿತಿಯಲ್ಲಂತೂ ಈ ಪ್ರಶ್ನೆ ಅತೀವ ಗಾಸಿಗೊಳಿಸಿತು.
Ňಇಲ್ಲ, ನನಗೂ ಈ ವರೆಗೆ ಮನೆ ಸಿಗಲಿಲ್ಲ. (ಸಿಗುವ ಆಸೆಯೂ ಇಲ್ಲ. ನನಗೇಕೆ ಮನೆ?) ಗಿರಗಾಂವದಲ್ಲಿ ಒಂದು ಮಹಾರಾಷ್ಟ್ರಿಯನ್ ಕುಟುಂಬದಲ್ಲಿ `ಪೇಯಿಂಗ್ ಗೆಸ್ಟ್’ ಅಂತ ಇದ್ದೇನೆ ň ಅನಂತ ನುಡಿದ.
ಅಹುದೆ? `ಟೈಮ್ಸ್ ಆಫ ಇಂಡಿಯಾ’ ದಲ್ಲಿ ಬಹಳೇ ಬರುತ್ತಿವೆ ಜಾಹೀರಾತುಗಳು-?.ಉ. ಂಛಿಛಿđĉĉđಜಚಿಣąđಟಿ ಕುರಿತು. ಕೋಣೆಗಳೆಷ್ಟೊ? ಸಲುಗೆಯಿಂದ ಕೇಳಿದ ಗಜಾನನ.
Ňಕೋಣೆಗಳ ಪ್ರಶ್ನೆಯೇ ಇಲ್ಲ; ಒಂದೇ ಒಂದು ಕೋಣೆ. ಹಾಗೆ ನೋಡಿದರೆ ಕೋಣೆಯೇ ಅಲ್ಲ. ಬಾಲ್ಕನಿಯೊಂದನ್ನು ಎಲ್ಲ ಬದಿಯಿಂದಲೂ ಬ್ಲಾȂಂಡ್ಸು (ತಟ್ಟಿ) ಗಳಿಂದ ಮುಚ್ಚಿ ರೂಮಿನ ರೂಪ ತಂದಿದ್ದಾರೆň ಅನಂತನ ಮಾತಿನಲ್ಲಿ ತನ್ನ ಬಗ್ಗೆ ತನಗೇ ಕನಿಕರ ತುಂಬಿತ್ತು.
Ňಅಂದರೆ ನಿಮಗೆ ಮದುವೆ ಆಗಲಿಲ್ಲವೇ? ň ಗಜಾನನ ಈ ಪ್ರಶ್ನೆ ಕೇಳಲೂ ನಿಲ್ದಾಣಕ್ಕೆ ಬಸ್ಸು ಬರಲೂ ಸರಿಯಾಯಿತು.
Ňಓ ನನ್ನ ಬಸ್ಸು ಬಂದಿತು. ಇನ್ನೊಮ್ಮೆ ಎಂದಾದರೂ ಭೇಟಿಯಾಗೋಣ? ň ಎಂದವನೇ ಅನಂತ ತ್ವರೆಯಿಂದ ಬಸ್ಸು ಹತ್ತಿ ಜಾಗ ಹಿಡಿದು ಕುಳಿತ. ಬಸ್ಸಿನಲ್ಲಿ ಬರಿಯೇ ಇಬ್ಬರಿಗಷ್ಟೇ ಸ್ಥಳವಿತ್ತು. ಕೊನೆಗೊಮ್ಮೆ ಬಸ್ಸು ಸಿಕ್ಕಿತಲ್ಲ ಎಂದು ಹಿಗ್ಗಿದ ಅನಂತ. ಬಸ್ಸು ಹೊರಟಿತು. ಗಜಾನನ ಕಣ್ಮರೆಯಾದ. ಆದರೆ ಕಿವಿಯಲ್ಲಿನ್ನೂ ಅವನ ಕೊನೆಯ ಪ್ರಶ್ನೆ ಮಾರ್ದನಿಗೈಯುತ್ತಿತ್ತು:
Ňನಿಮಗೆ ಲಗ್ನ ಆಗಲಿಲ್ಲವ? ň
ತನ್ನಂತಹವನಿಗಲ್ಲ ಮದುವೆ. ಮನೆ, ಮದುವೆ, ಸಂಸಾರ ಎಂದರೆ ಹೋರಾಟ, ಹೋರಾಡುವ ಶಕ್ತಿ ತನ್ನಲ್ಲಿ ಉಳಿದಿದೆಯೆ? ಏಕೋ, ಇದ್ದಲ್ಲೇ ತಾನು ಹಣ್ಣಾಗುತ್ತಿದ್ದೇನೆ. ಒಣಗುತ್ತಿದ್ದೇನೆ. ತನ್ನಂತಹನಿಗಲ್ಲ ಮದುವೆ. ಅನಂತ ತನ್ನ ನೊಂದ ಮನಸ್ಸನ್ನು ಸಮಾಧಾನಗೊಳಿಸುತ್ತಿದ್ದ.
ಗಜಾನನನ ಉತ್ಸಾಹದ ಮೂರ್ತಿ ಕಣ್ಣ ಮುಂದೆ ನಿಂತಿತು. ಮೊನ್ನೆ ಮೊನ್ನೆ ‘ಕಚ್ಚೆಯುಟ್ಟು ತಿರುಗುತ್ತಿದ್ದ’ ಪೋರ, ಇಂದು ಇಷ್ಟು ದೊಡ್ಡವನಾಗಿ ಬೆಳೆದು ನಿಂತಾನಲ್ಲ! ಏಳು ವರುಷಗಳ ಹಿಂದೆ ತಾನೂ ಮೊದಲೊಮ್ಮೆ ಮುಂಬಯಿಗೆ ಬಂದಾಗ ತನ್ನಲ್ಲೂ ಇಂತಹದೇ ಉತ್ಸಾಹ, ಧೈರ್ಯ, ಸ್ಥೈರ್ಯ ಇರಲಿಲ್ಲವೇ? ಅಂದು ತನ್ನ ಬಿ.ಏ. ಪರೀಕ್ಷೆ ಮುಗಿಸಿ ನೌಕರಿಗೆಂದು ಮುಂಬಯಿಗೆ ಬಂದಾಗ ಏನೆಲ್ಲ ಸುಖದ ಕನಸನ್ನು ಕಟ್ಟಿ ಬಂದಿರಲಿಲ್ಲ! ಮುಂಬಯಿಯಲ್ಲಿ ಒಂದು ದೊಡ್ಡ ನೌಕರಿ ಹಿಡಿದು, (ಮುಂಬಯಿಯಲ್ಲಿ ನೌಕರಿಗೆ ಬರಗಾಲವೆ?) ಸಣ್ಣದೊಂದು ಮನೆಯನ್ನು ಮಾಡಿ ತಾಯನ್ನು ಕರೆಸಿಕೊಳ್ಳಬೇಕು. ಮುಂದೆ ಶಕ್ಯವಾದಲ್ಲಿ (ಅದರಲ್ಲೇನು ಅಶಕ್ಯ?) ತನ್ನ ಸೋದರಮಾವನ ಮಗಳಾದ ಸುಮತಿಯನ್ನು (ಅವಳೆಂದರೆ ತನಗೆ ಅದೆಷ್ಟು ಪ್ರೀತಿ!) ಮದುವೆಯಾಗಿ ಸುಖದ ಸಂಸಾರ ಹೂಡಬೇಕು. ಆಹಾ! ಎಂತಹ ಸೊಗಸಾದ ಕನಸು! ಆದರದು ಇಂದಿಗೂ ಕನಸಾಗಿಯೇ ಉಳಿದಿದೆ. ಮುಂದೆಯೂ ನನಸಾಗುವ ಆಸೆಯಿಲ್ಲ. ತಾಯಿ ತೀರಿ (ತಾನು ಇಂದು ತಂದೆ-ತಾಯಿ ಇಲ್ಲದ ಅನಾಥ) ಇದಾಗಲೇ ನಾಲ್ಕು ವರ್ಷಗಳಾಗಿವೆ. ಸುಮತಿಯ ಲಗ್ನ ಬೇರೊಬ್ಬನೊಡನೆ ಆಗಿ ಈಗ ಅವಳು ಮೂರು ಮಕ್ಕಳ ತಾಯಿ ಆಗಿದ್ದಾಳೆ- (ಎರಡು ಗಂಡು, ಒಂದು ಹೆಣ್ಣು ಎಂದು ಮೊನ್ನೆಯೇ ಯಾರೋ ಹೇಳಿದ್ದು ನೆನಪಿದೆ).
Ňಟಿಕೆಟ್ ಪ್ಲೀಜ್ň
Ňಏಕ್ ಚೌಪಾಟಿň
Ňಕಿಧರ್ಸೇ? ň
Ňಫೌಂಟನ್ň
ಅನಂತನ ಅಂತರ್ಮುಖತೆಗೆ ಭಂಗಬಂದಿತು. ಬಸ್ಸು ಧೋಬೀ ತಲಾವ, ಪ್ರಿನ್ಸೆಸ್ಸ್ ರೋಡ್ ದಾಟಿ, ಚಿರಾ ಬಝಾರದ ಜನದಟ್ಟಣೆಯ ಮಾರ್ಗದಿಂದ ಸಾಗಿತ್ತು. ಇಕ್ಕೆಲದ ಫೂಟ್ ಪಾಥಿನ ಮೇಲೆ ಲೆಕ್ಕವಿಲ್ಲದಷ್ಟು ಜನ. ಇಕ್ಕೆಲದ ಕೇರಿಗಳಲ್ಲಿ ಲೆಕ್ಕವಿಲ್ಲದಷ್ಟು ಮನೆಗಳು- ಒಂದರ ಹಿಂದೊಂದು, ಒಂದರ ಮೇಲೊಂದು – ಎಷ್ಟೆಲ್ಲ ಮನೆಗಳು! ಆದರೆ ಒಂದರಲ್ಲೂ ತನಗೆ ಜಾಗವಿಲ್ಲ. ಜಾಗವಿದ್ದಿದ್ದರೆ-ಇಂತಹ ಈ ಸುವಿಶಾಲ, ಪ್ರಚಂಡ ಮುಂಬಯಿ ನಗರದಲ್ಲಿ ತನಗೊಂದು ಮನೆ ಸಿಕ್ಕಿದ್ದರೆ॒.॒ ಸುಮತಿ ಇಂದು ತನ್ನ ಹೆಂಡತಿಯಾಗುತ್ತಿದ್ದಳೆ?
ತಾನು-ಸುಮತಿ!
ಆಗಬಹುದಿತ್ತೇ ಸುಮತಿಯೊಡನೆ ತನ್ನ ಲಗ್ನ?
ಯಾರು ಬಲ್ಲರು?
ಮಾವನ ಮನೆಯಲ್ಲೇನೋ ಎಲ್ಲರೂ ಚೇಷ್ಟೆ ಮಾಡುತ್ತಿದ್ದರು. ಮಾವನೂ ಸ್ಪಷ್ಟವಾಗಿ ಲಗ್ನದ ಮಾತನ್ನು ಎತ್ತಿರದಿದ್ದರೂ, ತಾನು ಮುಂಬಯಿಗೆ ಬಂದ ಕೆಲವು ತಿಂಗಳವರೆಗೆ ತಪ್ಪದೇ ಪತ್ರ ಬರೆಯುತ್ತಿದ್ದರು, ತನ್ನ ಕ್ಷೇಮಸಮಾಚಾರ ವಿಚಾರಿಸುತ್ತಿದ್ದರು, ಹಣವನ್ನೂ ಕಳಿಸಿದ್ದರು-ತನಗೆ ನೌಕರಿ ಸಿಗುವ ಮೊದಲು. ಆದರೆ ಇಷ್ಟರಿಂದಲೇ ಅವರಿಗೆ ತನ್ನನ್ನು ಅಳಿಯನನ್ನಾಗಿ ಮಾಡಿಕೊಳ್ಳುವ ಇಚ್ಛೆಯಿತ್ತು ಎಂದು ಹೇಗೆ ಹೇಳಬಹುದು? ಆದರೆ ಇಷ್ಟೊಂದು ನಿಜ: ಅವರಿಗೆ ತನ್ನ ಭವಿಷ್ಯತ್ತಿನ ಕುರಿತು ಆಸ್ಥೆಯಿತ್ತು, ಕಳಕಳಿಯಿತ್ತು. ಆದರೆ ತಾನೇ ಅವರನ್ನೆಲ್ಲ- ತನ್ನ ತಾಯಿ, ತನ್ನ ಸೋದರಮಾವ, ಸುಮತಿಯನ್ನು ಕೂಡ ನಿರಾಶೆಗೊಳಿಸಿದೆ. ಮುಂಬಯಿಯಂತಹ ಉದ್ಯೋಗ, ಉದ್ಯಮಗಳ ಆಗರವಾದ ಈ ವಿಶಾಲ ನಗರಕ್ಕೆ ಬಂದು ಅವಿಶ್ರಾಂತ ಶ್ರಮದಿಂದ ದೊರಕಿಸಿದುದು ಯುನಿವ್ಹರ್ಸಿಟಿ ಆಫೀಸಿನಲ್ಲಿ ಒಂದು ಕಾರಕೂನಿಕೆಯ ಕೆಲಸ. ಬೇಸಿಕ್ ಸೆಲರಿ ಹಾಗೂ ಎಲೋವನ್ಸಿಸ್ ಕೂಡಿ ೧೫೦ ರೂ. ತಿಂಗಳಿಗೆ. ಸಾಲದೆ ಇಷ್ಟೆಲ್ಲ ಹಣ ಸುಖದ ಸಂಸಾರ ಹೂಡಲು!
ಮೊದಲಿನ ಎರಡು ವರ್ಷಗಳವರೆಗೂ ಮಾವನಿಂದ ಸರಿಯಾಗಿ ಪತ್ರ ಬರುತ್ತಿದ್ದವು. ತಾನೂ ಬರೆಯುತ್ತಿದ್ದ, ಸಣ್ಣದೊಂದು ಮನೆ ದೊರಕಿಸಲು ತಾನು ನಡೆಸಿದ ಹೋರಾಟ, ಅದರಲ್ಲಿಯ ತನ್ನ ಸೋಲು ಇತ್ಯಾದಿಯ ಕುರಿತು, ಹೆಚ್ಚಿನ ಪಗಾರದ ನೌಕರಿಯ ಬಗ್ಗೂ ಪ್ರಯತ್ನ ನಡೆದಿತ್ತು. ಎರಡು ವರ್ಷಗಳ ಅನಂತರ ಮಾತ್ರ ಮಾವನ ಪತ್ರಗಳು ಕ್ರಮೇಣ ವಿರಲವಾಗುತ್ತ ಬಂದು, ಒಂದು ದಿನ ನಿಂತೇ ಬಿಟ್ಟವು. ಆಮೇಲೆ ಒಮ್ಮೆಲೇ ಕೈಸೇರಿದುದು ಸುಮತಿಯ ಮದುವೆಯ ಆಮಂತ್ರಣ ಪತ್ರಿಕೆ. ಹುಡುಗನಿಗೆ ಧಾರವಾಡದಲ್ಲೇ ಕೆಲಸವಂತೆ. ದೊಡ್ಡದಲ್ಲ-ತನ್ನಂತಹದೇ ಕಾರಕೂನಿಕೆಯ ಕೆಲಸ. ಆದರೂ ನಿಲ್ಲಲು ಮನೆಯಿದೆ. ಸಂಸಾರ ಹೂಡುವ ತಾಕತ್ತಿದೆ. ಸುಮತಿಯೂ ಅವನಿಗೆ ತಕ್ಕ ಹೆಂಡತಿ- ಎಂತಹ ಕಷ್ಟ ಬಂದರೂ ಸಹಿಸಿಕೊಂಡು ಹೋಗುವ ಧೈರ್ಯದ ಹುಡುಗಿ ಎಷ್ಟು ಸೌಮ್ಯ ಸ್ವಭಾವ! ಎಂತಹ ತಾಳ್ಮೆ! ತನಗೊಂದು ಇರಲು ಮನೆಯಿದ್ದರೆ ಆಗಬಹುದಿತ್ತೇನೋ ಅವಳೊಡನೆ ಮದುವೆ॒॒
ಅನಂತ ವಿಚಾರಮಗ್ನನಾಗಿದ್ದಾಗಲೇ ಬಸ್ಸು ಆಪೆರಾಹೌಸ್ ದಾಟಿ ಸೆಂಢರ್ಸ್ಟಬ್ರಿಜ್ ಏರುತ್ತಿತ್ತು. ಚೌಪಾಟಿಗೆ ಹೋಗುವ ಜನರೆಲ್ಲ ಇಳಿಯುವ ಸಿದ್ಧತೆಯಲ್ಲಿದ್ದರು. ಅಬ್ಬಾ! ಎಷ್ಟು ಬೇಗ ಬಂದಿತು ಬಸ್ಸು-ಬಂದದ್ದೇ ತಿಳಿಯಲಿಲ್ಲ!
ಬಸ್ಸಿನಿಂದ ಇಳಿದವನೇ ಅನಂತ ಚೌಪಾಟಿಯ ಮೇಲಿನ ಜನಸಮುದಾಯದಲ್ಲಿ ಒಂದಾದ. ಅಬ್ಬಬ್ಬ! ಚೌಪಾಟಿಯ ಮೇಲೆ ಏನೊಂದು ಗದ್ದಲ, ಗುಲ್ಲು-ಬದಿಯಲ್ಲೇ ಹಬ್ಬಿಕೊಂಡ ಸಾಗರದ ಅಬ್ಬರದಂತೆ! ಈ ಗದ್ದಲದಲ್ಲಿ ಅನಂತ ತುಸು ಹೊತ್ತು ಬಹಿರ್ಮುಖನಾದ. ಕಿಕ್ಕಿರಿದು ತುಂಬಿದ ಈ ಜನ ಸಂಡಣಿಯಲ್ಲಿ ಒಂದಾಗಿ ತನ್ನ ಪ್ರತ್ಯೇಕತೆಯನ್ನು ಕಳೆದುಕೊಳ್ಳವುದರಲ್ಲಿಯೇ ತನ್ನ ವೈಯಕ್ತಿಕ ಅಸಮಾಧಾನವನ್ನು ಕಳೆಯಲು ಯತ್ನಿಸಿದ.
ಫೂಟ್‍ಪಾಥಿನ ಮೇಲೆ ಎಷ್ಟೆಲ್ಲ ಜನ!
ಎಷ್ಟು ಬಗೆಯ ಜನ!!-
ಗಂಡಸರು, ಹೆಂಗಸರು-(ಹುಡುಗಿಯರು ಕೂಡ)
ಈ ಎಲ್ಲ ಜನರಿಗೆ ಮನೆಗಳಿವೆಯೆ? ಇಷ್ಟೆಲ್ಲ ಜನರಿಗೆ ಮನೆ ಒದಗಿಸಿದ ಈ ಮುಂಬಯಿ, ತನಗೊಬ್ಬನಿಗಷ್ಟೇ॒.॒. ಹುಚ್ಚು. ತನ್ನಂತೆಯೇ ಪರರ ಮನೆಯ ಬಾಲ್ಕನಿಯಲ್ಲೋ, ಅಡುಗೆಯ ಮನೆಯಲ್ಲೋ ಮಲಗುವ ಜನ ಇವರಲ್ಲೆಷ್ಟೋ! ತನ್ನಂತೆಯೇ ಕೂಡ್ರಲೂ ರೂಮು ಇಲ್ಲದೆ, ಆಫೀಸು ಬಿಟ್ಟ ಮೇಲೆ ಅಲ್ಲಿ ಇಲ್ಲಿ ವೇಳೆ ಕಳೆದು, ರಾತ್ರಿ ಮಲಗಲಷ್ಟೇ ಮನೆ (ಹೆರವರದು) ಸೇರುವ ಜನ ಅದೆಷ್ಟೋ!
ಅನಂತ ನಡೆಯುತ್ತ ನಡೆಯುತ್ತ ಚರ್ನಿರೋಡ್ ಸ್ಟೇಶನ್ ದಾಟಿ, ಹೆಣ್ಣು ಮಕ್ಕಳ ಹಾಸ್ಟೆಲನ್ನು ಸಮೀಪಿಸಿದ್ದ. Ňಇಲ್ಲೇ ಕೂತರೆ ಹೇಗೆ?ň ಎನ್ನುತ್ತ ಸಮುದ್ರ ತೀರದ ಗುಂಟ ಕಟ್ಟಿದ ಕಲ್ಲು ಕಟ್ಟೆಯ ಮೇಲೆ ಒಂದೆಡೆ ಕುಳಿತ. ಕುಳಿತು ತನ್ನ ನಿತ್ಯದ ಆಟದಲ್ಲಿ ತಲ್ಲೀನನಾದ: ಫೂಟ್‍ಪಾಥಿನ ಮೇಲೆ ನಡೆಯುವ ಜನರ ಮೋರೆಯ ಮೇಲೆ ಆಡುವ ವಿವಿಧ ಭಾವವಿಲಾಸವನ್ನು ಅವಲೋಕಿಸಿ, ಅದರ ಹಿಂದೆ ಅಡಗಿದ ಭಾವನೆಗಳನ್ನೂ ವಿಚಾರಗಳನ್ನೂ ತರ್ಕಿಸುವುದರಲ್ಲಿ.
ದೂರದಲ್ಲಿ ಬರುವ ಒಂದು ಮಹಾರಾಷ್ಟ್ರಿಯನ್ ಜೋಡಿಯನ್ನು ಕಂಡು ಎದೆ ಧಸ್ ಎಂದಿತು, Ňಅರವಿಂದನಿರಬಹುದೇ?ň ಎಂದು. ಅರವಿಂದನ ಹೆಂಡತಿಯನ್ನು ತಾನು ಇನ್ನೂ ನೋಡಿರಲಿಲ್ಲ. ಪುಣೆಯಲ್ಲಿ ಜರುಗಿದ ಅವರ ಲಗ್ನಕ್ಕೆ ತನಗೆ ಹೋಗಲಾಗಲಿಲ್ಲ, ಆಫೀಸಿನ ಕೆಲಸದ ಮೂಲಕ (ಇದು ನಿಜವೆ?) ಪುಣೆಯಿಂದಲೇ `ಹನಿಮೂನಿ’ ಗೆಂದು ಮಹಾಬಲೇಶ್ವರಕ್ಕೆ ಹೋದ ಅವರು ಇಂದೇ ಬರುವವರಿದ್ದರು-ಇದಾಗಲೇ ಬಂದಿರಬೇಕು. ಇಂದು ತಾನು ನೇರವಾಗಿ ಮನೆಗೆ ಹೋಗಿದ್ದರೆ ಅವಳ ಭೆಟ್ಟಿಯಾಗುತ್ತಿತ್ತು. ಆದರೆ॒॒
ಏಕೋ ಆ ಪ್ರಸಂಗವನ್ನು ಎದುರಿಸಲು ಅವನ ಮನಸ್ಸು ಅಧೀರಗೊಳ್ಳುತ್ತಿತ್ತು. ಅವ್ಯಕ್ತ ಭೀತಿಯಿಂದ ನಡುಗುತ್ತಿತ್ತು. ಎಂತಹ ಭೀತಿ? ಎಂತಹ ಅಧೀರತೆ? ಅನಂತನಿಗೇ ಗೊತ್ತಿರಲಿಲ್ಲ. ಆದರೆ ಅವನ ವಿವೇಕ ಇಂತು ಸಮರ್ಥಿಸುತ್ತಿತ್ತು:
ಇಷ್ಟು ದಿನ ತಾನು, ಅರವಿಂದ-ಇಬ್ಬರೂ ಉಪಯೋಗಿಸುತ್ತಿದ್ದ ಕೋಣೆ ಇಂದಿನಿಂದ ಅರವಿಂದ ಹಾಗೂ ಅವನ ಹೆಂಡತಿಯ ಕೋಣೆಯಾಗಲಿದೆ. ಮನೆಯಲ್ಲೆಲ್ಲ ಒಬ್ಬ ಹೊಸ ಹೆಣ್ಣು (ಗೆಳೆಯನ ಹೆಂಡತಿಯಾದರೇನಂತೆ!) ಓಡಾಡುತ್ತಿರುವಾಗ, ತನೊಬ್ಬನೇ ಬಾಲ್ಕನಿಯಲ್ಲಿ ಒಂದು ಮೂಲೆಯಲ್ಲಿ ಮುದುಡಿ ಕೂಡ್ರುವುದಕ್ಕಿಂತ, ಇಲ್ಲಿ ತುಸು ಹೊತ್ತು ಕಳೆದು ಇಲ್ಲಿಂದಲೇ ಹೊಟೆಲ್ಲಿಗೆ ಹೋಗಿ ಆದಷ್ಟು ರಾತ್ರಿ ಮಾಡಿ ಮನೆ ಸೇರಿದರೆ ಬಾಲ್ಕನಿಯಲ್ಲಿ ಮಲಗುವ ತನಗೆ ಯಾರಿಂದಲೂ ತೊಂದರೆಯಿಲ್ಲ, ತನ್ನಿಂದಲೂ ಇತರರಿಗೆ ತೊಂದರೆಯಿಲ್ಲ.
ಅಂತೆಯೇ ಅವನು ಆಫೀಸು ಬಿಟ್ಟಿದ್ದೇ ನೇರವಾಗಿ ಇಲ್ಲಿಗೆ ಬಂದದ್ದು. ಚೌಪಾಟಿಯ ಮೇಲೆ ಸಂಜೆ ಕಳೆದು, ಅಲ್ಲಿಂದ ನಡೆಯುತ್ತ `ಬೆನ್ ಹೆಮ್ ಹಾಲ್ ಲೇನಿ’ ನ `ವಸಂತಭುವನ’ ದಲ್ಲಿ ಊಟ ಮುಗಿಸಿ ಹೊಟೆಲ್ ಮಾಲಕನ ಹತ್ತಿರ ಕೆಲಹೊತ್ತು ಹರಟೆ ಹೊಡೆದು, ಅಲ್ಲಿಂದ ಹೊರಬಿದ್ದು, ಬದಿಯ ಎಲೆ ಅಂಗಡಿಯೊಂದರಲ್ಲಿ `ಬನಾರಸಿ ಮಸಾಲೆ’ ಯೊಂದನ್ನು ಕೊಂಡು ಅಗಿಯುತ್ತ ಅನಂತ ತನ್ನ ರೂಮಿನತ್ತ ಸಾಗಿದ್ದ॒॒
ತಾನು ಇಂದಿನಿಂದ ಬಾಲ್ಕನಿಯಲ್ಲಿ ಮಲಗಬೇಕು-ಒಬ್ಬನೇ! ತಾನು ಮೊತ್ತಮೊದಲು ಈ ಮನೆಯಲ್ಲಿ `ಪೀಜೀ’ ಎಂದು ಇರಲು ಬಂದಾಗ, ತನಗೆ ಈ ಬಾಲ್ಕನಿಯ ಕೋಣೆಯನ್ನೇ ಕೊಟ್ಟಿದ್ದರೂ, ತನ್ನ ಪರಿಚಯ ಬೆಳೆದ ಬಳಿಕ ತನ್ನನ್ನು ತಮ್ಮ ಮನೆಯವನೇ ಎಂಬಂತೆ ನೋಡಿಕೊಳ್ಳತ್ತಿದ್ದ ಮನೆಯ ಯಜಮಾನ, ಯಜಮಾನತಿ ಅಂದಿದ್ದರು, ತುಂಬಿದ ಮಮತೆಯಿಂದ : Ňಅನಂತ ರಾಯರೇ, ತುರ್ತಕ್ಕೆ ಮನೆಯಲ್ಲಿ ನಾವು ಮೂರೇ ಮಂದಿ; ನಮ್ಮಲ್ಲಿ ಅತಿಥಿಗಳು ಬಂದು ಇಲ್ಲವೆ ಬೇರೆ ಯಾವುದೇ ರೀತಿಯಿಂದ ಅಡಚಣೆಯಾದಾಗ ಮಾತ್ರ ನೀವು ಬಾಲ್ಕನಿಯ ಕೋಣೆಯಲ್ಲಿ ಮಲಗಬಹುದು. ಉಳಿದ ದಿನಗಳಲ್ಲಿ ಅರವಿಂದನ ಕೋಣೆಯಲ್ಲೇ ಮಲಗಲು ಅಡ್ಡಿಯಿಲ್ಲ.ň ಅಂತೆಯೇ ತನಗೆ ಈವರೆಗೆ (ಮೊದಲ ಐದಾರು ದಿನ ಬಿಟ್ಟು) ಬಾಲ್ಕನಿಯಲ್ಲಿ ಮಲಗುವ ಪ್ರಸಂಗ ಬಂದಿರಲ್ಲಿಲ್ಲ. ಆದರೆ ಇಂದಿನಿಂದ?.॒. ವಿಚಿತ್ರ ವೇದನೆಯೊಂದು ಅನಂತನ ಮನವನ್ನು ತಿರುಗಿ ಆವರಿಸಿತ್ತು. ಅರವಿಂದ ಈಗ ಏನು ಮಾಡುತ್ತಿರಬಹುದು? ರಾತ್ರೆ ಹತ್ತಿರ ಹತ್ತಿರ ಬಂದಿದೆ. ಊಟವನ್ನು ಆಗಲೇ ಮುಗಿಸಿ ತನ್ನ ಮುದ್ದಿನ ಮಡದಿಯೊಡನೆ ಕೋಣೆ ಸೇರಿರಬಹುಕು. ಅವರಿನ್ನೂ ಬಾಲ್ಕನಿಯಲ್ಲಿದ್ದು ತನ್ನನ್ನು ಮಾತನಾಡಿಸಿದರೆ?.॒. ಅದರಲ್ಲೇನಂತೆ?.॒.. ಆದರೂ ಈ ಪ್ರಸಂಗವನ್ನು ಎದುರಿಸಲು ಅನಂತನ ಮನಸ್ಸು ಇನ್ನೂ ಸಿದ್ಧವಿರಲಿಲ್ಲ.
ಅನಂತ ಮನೆ ತಲುಪಿದಾಗ ಬಾಲ್ಕನಿಯಲ್ಲಿ ದೀಪವಿರಲಿಲ್ಲ. ಸಾವಕಾಶ ಮಾಳಿಗೆಯ ಮೆಟ್ಟಿಲುಗಳನ್ನು ಏರಿ, ಕೋಣೆಯ ಬಾಗಿಲನ್ನು ತೆರೆದು ಒಳಗೆ ಹೋಗಿ ಬಾಗಿಲನ್ನು ಹಾಕಿಕೊಂಡ, ಸದ್ದು ಮಾಡದೆ ದೀಪ ಹಚ್ಚಿದ. ಬಾಲ್ಕನಿಯಿಂದ ಬದಿಯ ಕೋಣೆಗೆ ಹೋಗುವ ಬಾಗಿಲು ಮುಚ್ಚಿತ್ತು. ಅನಂತನಿಗೆ ಸಮಾಧಾನವಾಯಿತು. ಲಗುಬಗೆಯಿಂದ ಡ್ರೆಸ್ಸು ಬದಲಿಸಿ, ಅದಾಗಲೇ ಅಲ್ಲಿ ತಂದಿಟ್ಟ ತನ್ನ ಹಾಸಿಗೆ ಹಾಸಿ, ದೀಪ ಆರಿಸಿ ಹಾಸಿಗೆಯಲ್ಲಿ ಅಡ್ಡಾದ. ಬದಿಯ ರೂಮಿನಲ್ಲಿ ಇನ್ನೂ ದೀಪವಿತ್ತು. ಏನೋ ಗುಜು ಗುಜು ದನಿ, ಬಳೆಗಳ ಸದ್ದು: `ಬಂದಿದ್ದಾರೆ’ ಅನಿಸಿತು ಅನಂತನಿಗೆ. ಮರುಕ್ಷಣ ಮನಸ್ಸಿನಲ್ಲೇನೋ ಕಳವಳ.
ಏಳು ದಿನಗಳ ಹಿಂದೆ ತನ್ನೊಡನೆ ಹರಟೆಯೊಡೆಯುತ್ತ, ತನ್ನ ಸಮಸಮೀಪ ಮಲಗುತ್ತಿದ್ದ ಅರವಿಂದ, ಇಂದು ಅದೇ ಕೋಣೆಯಲ್ಲಿ ಬೇರೊಬ್ಬರೊಡನೆ-ಒಬ್ಬ ಹೆಣ್ಣಿನೊಡನೆ ಮಲಗಿದ್ದ. ತಾನು ಪಾಪ ಇಲ್ಲಿ ಬಾಲ್ಕನಿಯಲ್ಲಿ ಏಕಾಂಗಿಯಾಗಿ ಮಲಗಿದ್ದಾಗ, ತನ್ನ ಬದಿಯ ಕೋಣೆಯಲ್ಲೇ-ಅಷ್ಟು ಸಮೀಪ-ತನ್ನ ಗೆಳೆಯ, ತನಗಿಂತ ಎಷ್ಟೋ ಸಣ್ಣವನಾದ ಅರವಿಂದ-ತನ್ನ ಹರೆಯದ ಮಡದಿಯೊಡನೆ (ಅವಳು ರೂಪದಲ್ಲಿ ಹೇಗಿರಬಹುದು?) ಸುಖವಾಗಿ ಮಲಗಿದ್ದ.
ಅರವಿಂದ ನಿಜಕ್ಕೂ ಭಾಗ್ಯವಂತ! ಏಳೇ ವರುಷಗಳ ಹಿಂದೆ ತಾನು ಗೆಳೆಯರೊಬ್ಬರ ಮುಖಾಂತರ ಈ ಮನೆಯಲ್ಲಿ `ಪೀಜೀ’ ಎಂದು ನಿಲ್ಲಲು ಬಂದಾಗ, ಅರವಿಂದನಿನ್ನೂ ಮೆಟ್ರಿಕ್ಕಿನಲ್ಲಿ ಓದುತ್ತಿದ್ದ ಹಸುಗೂಸು. ಇನ್ನೂ ಮೀಸೆಯ ಗೆರೆಯೂ ಮೂಡಿತ್ತೋ ಇಲ್ಲವೋ! ಎಷ್ಟೋ ವಿಷಯಗಳಲ್ಲಿ ತನ್ನಿಂದಲೇ ಟ್ಯೂಶನ್ ಪಡೆಯುತ್ತಿದ್ದ. ನೋಡು-ನೋಡುತ್ತಿರುವಾಗ ಆಳೆತ್ತರದ ತರುಣನಾಗಿ ಬೆಳೆದು ಈಗ ಎಂ. ಎ. ಪಾಸಾಗಿದ್ದಾನೆ. ಪರೀಕ್ಷೆಯ ಪರಿಣಾಮವಾದ ಕೆಲವೇ ದಿನಗಳಲ್ಲಿ ಅತಿ ಸುಲಭವಾದ ರೀತಿಯಲ್ಲೇ ಇಲ್ಲಿಯದೇ ಕಾಲೇಜೊಂದರಲ್ಲಿ ಲೆಕ್ಚರರ್‍ಶಿಪ್! ನೌಕರಿ ದೊರೆತ ಎರಡೇ ತಿಂಗಳಲ್ಲಿ ಅಕಸ್ಮಾತ್ತಾಗಿ ಒಂದು ದಿನ ಮದುವೆಯ ಸಂಬಂಧ ಹೇಳಿಬಂದು ಮದುವೆಯೂ ಆಗಿಬಿಟ್ಟಿತಲ್ಲ!
ಪರರ ಜೀವನದಲ್ಲಿ ಇಂತಹ ಸಂಗತಿಗಳು ಎಷ್ಟು ಸಹಜವಾಗಿ, ಎಷ್ಟು ತೀವ್ರಗತಿಯಲ್ಲಿ ನಡೆಯುತ್ತವೆ!
ತಾನು ಮಾತ್ರ ಇದ್ದಲ್ಲೇ ಹಣ್ಣಾಗುತ್ತಿದ್ದೇನೆ, ಇದ್ದಂತೆಯೇ ಒಣಗುತ್ತಿದ್ದೇನೆ-ಎನಿಸಿತು ಅನಂತನಿಗೆ.
ನಿಜವಾಗಿ ನೋಡಿದರೆ ಇವು ಅನಂತನ ಮಾತುಗಳಲ್ಲ. ಹಿಂದೊಮ್ಮೆ ಇಂತಹದೇ ಒಂದು ದು:ಖದ ಮನ:ಸ್ಥಿತಿಯಲ್ಲಿ ತನ್ನ ಮನಸ್ಸಿನ ನೋವನ್ನೆಲ್ಲ ತನ್ನೊಬ್ಬ ಗೆಳೆಯನ ಮುಂದೆ ತೋಡಿಕೊಂಡಿದ್ದ, ಅವನ ಸಹಾನುಭೂತಿಯನ್ನೇ ಬಯಸಿ. ಗೆಳೆಯನಿಗೆ ಇವನ ಬಗ್ಗೆ ಕನಿಕರವೆನಿಸಿದರೂ ಇವನ ಅಭಿಮಾನ ಕೆರಳಿಸಲೆಂದೇ ತುಸು ನಿಷ್ಠುರವಾಗಿಯೇ ನಿಡಿದಿದ್ದ : Ňನೀನು ನಿನ್ನ ಜನ್ಮದಲ್ಲಿ ಒಮ್ಮೆಯಾದರೂ ನಗುತ್ತ, ಹರುಷದಿಂದ ಮಾತನಾಡಿದ್ದೀಯಾ? ಮುಖ್ಯತ: ನೀನೊಬ್ಬ ದೊಡ್ಡ ಅಂಜುಬುರುಕ, ಅಳಬುರುಕ. ನಿನ್ನಲ್ಲಿ ಇಲ್ಲದುದು ಬಾಳನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸ ಹಾಗೂ ಉತ್ಸಾಹ. ಮನೋವಿಜ್ಞಾನದ ಭಾಷೆಯಲ್ಲಿ ಹೇಳಬೇಕಾದರೆ ನೀನೊಬ್ಬ ದು:ಖಪ್ರಿಯ ಜೀವಿ-ಒಚಿĕđಛಿĄąĕಣąಛಿ ?đėಟ. ಹೀಗೆಯೇ ನಡೆದಲ್ಲಿ ನೀನು ಇದ್ದಲ್ಲೇ ಹಣ್ಣಾಗುತ್ತಿ-ಇದ್ದಂತೆಯೇ ಒಣಗುತ್ತೀ, ನೋಡು.
ಸಹಾನುಭೂತಿ ಬಯಸಿ ಬಂದವನಿಗೆ ಇಂತಹ ಕಠಿಣ ಮಾತುಗಳೆ! ಆದರೆ ಅಚ್ಚರಿಯೆಂದರೆ, ಮೊದಮೊದಲು ತನ್ನನ್ನು ಅತಿಯಾಗಿ ನೋಯಿಸಿದ ಈ ಮಾತುಗಳೇ ಮುಂದೆ ತಾನೇ ತನ್ನೊಳಗೆ ತಿರುತಿರುಗಿ ಅಂದುಕೊಂಡಾಗ ಒಂದು ಬಗೆಯ ಸಮಾಧಾನ ಕೊಡುತ್ತಿದುವು-ನೋಯುತ್ತಿರುವ ಹುಣ್ಣಿನ ಮೇಲೆ ಮೃದುವಾಗಿ ಆಡುವ ಬೆರಳುಗಳಂತೆ. ತನ್ನಲ್ಲಿ ಅಡಗಿದ ಯಾವುದೋ ಸತ್ಯದೆಡೆ ಬೆರಳು ಮಾಡುತ್ತಿರಬೇಕು ಆ ಮಾತುಗಳು॒॒
ಅರವಿಂದನ ಕೋಣೆಯಲ್ಲಿಯ ದೀಪ ನಂದಿತು!
ಬಳೆಗಳ ಕಿಂಕಿಣ!
ಏನೋ ಗುಜು ಗುಜು ಧ್ವನಿ!॒
ಅನಂತನ ಕುತೂಹಲ ಕೆರಳಿ ಮೈ ಜುಂ ಎಂದಿತು. ಒಲ್ಲೆ ಒಲ್ಲೆನೆನ್ನುತ್ತಲೂ ಅನಂತ ಮೈಯಲ್ಲ ಕಿವಿಯಾಗಿಸಿ ಕೇಳುತ್ತಿದ್ದ, ಬದಿಯ ಕೋಣೆಯಲ್ಲಿಯ ಚಟುವಟಿಕೆಗಳ ಸದ್ದನ್ನು:
Ň॒.॒.ಯಾಕೆ?॒.॒ ಚಳಿಯಾಗುತ್ತದೆಯಿ?॒॒.॒ň
Ň॒.॒..ಶೀ!! ॒.॒.ನಾಚಿಕೆň
Ň॒.॒..ನಾಚಿಕೆ! ॒.॒ಇನ್ನೂ?ň
ಥೂ ಇದೇನು! ತುಸು ಸಾವಕಾಶ ನುಡಿಯಬಾರದೆ? ಗಿಆನು ಇಲ್ಲಿ ಮಲಗಿದ್ದೇನೆ ಎನ್ನುವ ಅರಿವೂ ಇರಬಾರದೇ?-ಅನಂತನ ಸುಸಂಸ್ಕೃತ ಮನಸ್ಸು ತಿರಸ್ಕಾರ ವ್ಯಕ್ತಪಡಿಸಿತು. ಆದರೆ?॒ ॒ಹೃದಯದಲ್ಲೋ ಅಲ್ಲೋಲ-ಕಲ್ಲೋಲ. ಮರುಕ್ಷಣ ತನ್ನ ಸ್ಥಿತಿಗೆ ತನಗೇ ಮರುಕವೆನಿಸಿತು. ತಾನಿದ್ದೇನೆ ಎನ್ನುವ ಅರಿವೇ ಇಲ್ಲ ಇವರಿಗೆ. ತಾನು ಇದ್ದರೇನು? ಇರದಿದ್ದರೇನು? .॒..
Ňಕೆಲವೇ ದಿನಗಳಲ್ಲಿ ಬೋರಿವಿಲ್ಲಿಯಲ್ಲಿ ಮನೆ ಸಿಗುವ ಸಂಭವವಿದೆ. ň ಗಜಾನನನ ಮಾತು ನೆನಪಿಗೆ ಬಂತು. ಪ್ರಯತ್ನ ಪಟ್ಟರೆ ತನಗೂ ಸಿಗುತ್ತಿತ್ತೋ ಏನೋ. ಆದರೆ ಅಷ್ಟು ದೂರ! ಅಯ್ಯೋ! ಆ ಟ್ರೇನಿನಲ್ಲಿಯ ನೂಕು ನುಗ್ಗಾಟ, ಆ ಗುಂಗಾಡುಗಳ ಕಾಟ! ಮೇಲಾಗಿ ರೂಮು ಹಿಡಿದರೂ ಲಗ್ನವಾಗಿ ಸಂಸಾರ ಹೂಡುವ ಧೈರ್ಯ, ಹುಮ್ಮಸ್ಸು ಈಗ ತನಗೆ ಉಳಿದಿವೆಯೆ? ಮನೆ, ಹೆಂಡತಿ, ಮಕ್ಕಳು ಬೇನೆ ಬೇಸರಿಕೆ-ಬೇಡಪ್ಪ ಬೇಡ! ತನ್ನಂತಹನಿಗಲ್ಲ ಹೇಳಿದ್ದು ಮನೆ, ಮದುವೆ.॒.
Ňಸ್ವಲ್ಪ ಇತ್ತಿತ್ತ॒.॒.ň
ಎಲ್ಲೋ ಹರಿದಾಡುತ್ತಿದ್ದ ಅನಂತನ ಮನಸ್ಸು ತಿರುಗಿ ಬದಿಯ ರೂಮಿನತ್ತ ಸಾಗಿತು. ಅನಂತ ತಾನರಿಯದೇ ತನ್ನ ಶ್ವಾಸೋಚ್ಛ್ವಾಸವನ್ನೂ ನಿಲ್ಲಿಸಿ ಕೇಳುತ್ತಿದ್ದ: ಮಂಚ `ಕಿರ್` ಎಂದಿತು.
ಏನು ಮಾಡುತ್ತಿರಬಹುದು?
ಥೂ ! ತನಗೇನಂತೆ!
ಏನೋ ಗುಜುಗುಜು-
ಎರಡು ಹರೆಯದ ದೇಹಗಳು ಒಂದನ್ನೊಂದು ಅಪ್ಪಿಕೊಂಡ ಅಸ್ಪಷ್ಟ ಚಿತ್ರ ಕಣ್ಣ ಮುಂದೆ ನಿಂತು ಅನಂತನ ದೇಹದಲ್ಲಿ ಮಿಂಚು ಸಂಚರಿಸಿತು. ತುಸು ದೊಡ್ಡಕ್ಕೆ ಮಾತನಾಡಬಾರದೆ? ತಾನು ಕೇಳಿದರೆ ಇವರದೇನು ಗಂಟು ಹೋಗುತ್ತದೆಯೆ?-ಅನಂತನ ಮನಸ್ಸು ಭುಸುಗುಟ್ಟಿತು.
Ňತುಸು ಸಾವಕಾಶ॒.॒ň
ಏನು?
ಏನಿದ್ದರೇನು?
ಮಾತು ನಿಂತೇಬಿಟ್ಟಿತಲ್ಲ!
ನಿಂತೇಬಿಟ್ಟಿತೇ?
ಇಲ್ಲವೆ? ಏನೋ ಗುಜುಗುಜು!
ಏನಿರಬಹುದು?
ತನಗೇನಂತೆ?
ತಾ ಕೇಳಬಾರದೆ?
ಅದೂ ತಪ್ಪೇ?
ಬರಿಯೆ ಮಾತು ಕೇಳಿದರೇನಂತೆ? ಅನಂತನ ಮನಸ್ಸಿನಲ್ಲಿ ಏನೋ ಗುದ್ದಾಟ. ಕೊನೆಗೆ ಅನಂತನ ಜಾಗೃತ-ಸುಸಂಸ್ಕೃತ ಪ್ರಜ್ಞೆಯನ್ನು ಮೀರಿನಿಂತ ಅಗಾಧ ಶಕ್ತಿಯೊಂದು, ಅವನನ್ನು ಸಾವಕಾಶ ಹಾಸಿಗೆಯಿಂದ ಹೊಡೆದೆಬ್ಬಿಸಿ- Ňಬಾ, ಇಲ್ಲಿ ಬಾ, ಕಿವಿ ಹಚ್ಚು, ಕೇಳುň ಎಂದಿತು. ಅನಂತ ಮೆಲ್ಲನೆ ತನ್ನ ಹಾಸಿಗೆಯಿಂದ ಎದ್ದು, ಹುಚ್ಚನಂತೆ ಬದಿಯ ಕೋಣೆಯ ಬಾಗಿಲಿಗೆ ಕಿವಿ ಹಚ್ಚಿ ಕೇಳುತ್ತಿದ್ದ; ಆ ಬದಿಯಲ್ಲಿ ಮಲಗಿ ಸುಖಿಸುತ್ತಿದ್ದ ನವದಂಪತಿಗಳ ಏಕಾಂತದ ಸಂಭಾಷಣೆಯನ್ನು-ಅನಾಗರಿಕ ಕಿವಿಗಳ ಹೆದರಿಕೆಯಿಲ್ಲದೆ ಹೊರಟ ಮಾತನ್ನು:-
“ತುಸು ಸಾವಕಾಶ ( ಮಾತನಾಡಬಾರದೆ?) ”
“ನಾಳೆಯೇ ಹೇಳುತ್ತೀರಲ್ಲ, ಹಾಗಾದರೆ? ”
“ಏನೆಂದು? ”
“ಬೇರೆಯೆಡೆ ರೂಮು ಹಿಡಿಯಲು”
“ಅವನಿದ್ದರೆ ತೊಂದರೆಯೆ? ”
“ತೊಂದರೆಯಲ್ಲ.॒ ಏನೋ ಸಂಕೋಚ॒ ॒ಮೇಲಾಗಿ ಇದ್ದುದೊಂದು ಬಾಲ್ಕನಿ.॒.. ಆರಾಮವಾಗಿ ಕೂಡ್ರೋಣ ಎಂದರೆ॒”
“ಇಷ್ಟೆಲ್ಲ ವರುಷ ನಮ್ಮಲ್ಲಿದ್ದವ॒.॒ ಮೇಲಾಗಿ ಅಪ್ಪ ಒಪ್ಪುತ್ತಾರೋ ಇಲ್ಲವೋ: ಕುಳಿತಲ್ಲಿ ೪೦ ರೂ. ಬಾಡಿಗೆ. ”
“ಅವರನ್ನು ಒಪ್ಪಿಸುವ ಕೆಲಸ ನನ್ನದು. ”
“ಇಂತಹ ಸುಖದ ಸಮಯದಲ್ಲಿ ಅವನ ಹೆಸರೇಕೆ? .॒. ತುಸು ಹತ್ತಿರ ಬಾರಲ್ಲ॒”
ಅನಂತನಿಂದ ಮುಂದೆ ಕೇಳುವುದಾಗಲಿಲ್ಲ; ಯಾರೋ ಬಾರು ಕೋಲಿನಿಂದ ಬೆನ್ನ ಮೇಲೆ ಹೊಡೆದಂತಾಗಿತ್ತು. ಅದಾಗಲೇ ಹಾಸಿಗೆಯ ಮೇಲೆ ಕುಳಿತ ಅವನ ಮನಸ್ಸು ಯಾವುದೋ ಅವ್ಯಕ್ತ ಭೀತಿಯಿಂದ ಕಂಪಿಸಿತು. ಮೈ ಬೆವರಿತು. ತುಸು ಹೊತ್ತಿನಲ್ಲಿ ಏನೆಲ್ಲ ನೆನೆದು ಅವನ ಕಣ್ಣು ತುಂಬಿ ಬಂದುವು. ಎಂದೋ ಕಳಕೊಂಡ ಅಪ್ಪ-ಅಮ್ಮಂದಿರ ಚಿತ್ರ ಕಣ್ಣ ಮುಂದೆ ಕಟ್ಟಿ, ಸಣ್ಣ ಮಗುವಿನಂತೆ ಅತ್ತು ಬಿಟ್ಟ:
ತಾನಿಂದು ಈ ಜಗತ್ತಿನಲ್ಲಿ ಅನಾಥ!
ತಾನಿಂದು ಯಾರಿಗೂ ಬೇಡಾಗಿದ್ದೇನೆ!!
ಅಂದು ರಾತ್ರಿ ಕತ್ತಲಲ್ಲಿ ಹಾಸಿಗೆಯಲ್ಲಿ ಏಕಾಂಗಿಯಾಗಿ ಕುಳಿತಾಗ, ಅವನ ಗಂಡು ಕಣ್ಣುಗಳಿಂದ ಉದುರಿದ ಕಂಬನಿಗಳ ಅರ್ಥವೇನು?-
ತನ್ನ ಬಾಳಿನ ನಿರರ್ಥಕತೆಯ ಅರಿವೆ?
ತನ್ನ ಅನಾಗರಿಕತೆಯ ಬಗ್ಗೆ ಪಶ್ಚಾತ್ತಾಪವೆ?
ನಾಳೆಯ ಚಿಂತೆಯೆ?
ಇಲ್ಲವೆ, ಎಲ್ಲವೂನೊ?
ಯಾರು ಬಲ್ಲರು?
ಬದಿಯ ಕೋಣೆಯಲ್ಲಿ ಏಕಾಂತದ ಪಿಸುದನಿ, ಬಳೆಗಳ ಕಿಂಕಿಣ, ಮಂಚದ ಕಿರಕಿರ ಕ್ಷಣಕ್ಕೊಮ್ಮೆ ನಡೆದೇ ಇದ್ದವು. ಆದರೆ ಅನಂತ ಈಗ ಅವಕ್ಕೆಲ್ಲ ಕಿವುಡನಾಗಿದ್ದ.
*****