ಪಾಳು ಗುಮ್ಮಟದ ಮೈಗೆ
ಪಾರಿವಾಳದ ತೇಪೆ
ಹಸಿರು ಚಾದರದಂಚಿಗೆ
ಹೊಳೆವ ಜರದೋಜ್ಹಿ ಕೈ ಕೆಲಸ
ಮಂಡಿಯೂರಿ, ಬೆನ್ನಬಗ್ಗಿಸಿ
‘ಅಲ್ಲಾ….. ಹೂ…..!’
ಮುಂಜಾನೆ ಹೊನ್ನ ಬೆಳಕು
ಶಹರಿನ ತುಂಬ ತಣ್ಣನೆ ಗಾಳಿ
ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ
ಸಹಸ್ರ ಲಿಂಗದ ಹಾಗೆ;
ಈ ಊರ ಮೈ ತುಂಬ ಬಂಡೆಗಳು
ಇದ್ದಕ್ಕಿದ್ದಂತೆ ಎದ್ದು ನಿಲ್ಲುವ
ಬಿಡಿ ಬಿಡಿ ಬೆಟ್ಟಗಳು
ಅದರ ತುದಿಗೊಂದೊಂದು ಕಥೇ.
*ಹುಸೇನ್ ಸಾಗರದಲ್ಲಿ ವರ್ಷಕ್ಕೊಮ್ಮೆ
ಕೈಲಾಸಕ್ಕೊಂದು ಕಳ್ಳದಾರಿ.
* ಗಣೇಶ ಚತುರ್ಥಿಯ ಸಮಯದಲ್ಲಿ ಹೈದರಾಬಾದಿನ ಗಣಪತಿ ವಿಗ್ರಹಗಳನ್ನು ಸಾಮಾನ್ಯವಾಗಿ ‘ಹುಸೇನ್ ಸಾಗರ’ದಲ್ಲೇ ವಿಸರ್ಜನೆ ಮಾಡುವುದು.
*****