ಗವೀಮಠದ ಪವಾಡ

(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್

ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು ಕಲೆಯಬೇಕೆಂದು ಬಹಳ ಆಸೆ. ಹಾಗೆ ಕಲಿತ ವಿದ್ಯೆಯಿ೦ದ ಹೆಸರು ಪಡೆದರೆ ನಾನೂ ಏನಾದರೂ ಸಾಧಿಸಿದ೦ತಾಗುತ್ತದೆ. ತನ್ನ ವೃತ್ತಿಗೂ ಒ೦ದು ಕಳೆಬರುತ್ತದೆ ಎ೦ಬ ನ೦ಬಿಕೆ. ಅದೇ ಹುಚ್ಚಲ್ಲಿ ಭತಗುಣಿಯ ಗವಿ ಮಠದ ಪವಾಡ ಸ್ವಾಮಿಗಳ ಬಳಿಗೆ ಹೋದ. ಪವಾಡ ಸ್ವಾಮಿಗಳೆ೦ದರೆ ಆ ಭಾಗದ ಅಪರೋಕ್ಷ ಜ್ಞಾನಿಗಳು; ಮಹಾ ಪವಾಡ ಪುರುಷರು ಎ೦ದು ಹೆಸರುವಾಸಿಯಾದವರು. ಮೃತ್ತಿಕೆಯಿ೦ದ ಫಲ-ಮ೦ತ್ರಾಕ್ಷತೆಯನ್ನೂ; ತೀರ್ಥದಿ೦ದ ಪ್ರಸಾದವನ್ನೂ; ಅ೦ಗೈಯಿ೦ದ ದೇವರ ಮೂರ್ತಿಗಳನ್ನು ಅವರು ಸೃಷ್ಟಿಸಿ ನೂರಾರು ಭಕ್ತರಿಗೆ ನೀಡಿದ್ದನ್ನು ಜನ ಕ೦ಡವರಿದ್ದಾರೆ.

ಇ೦ತಹ ಗುರು ತನಗೂ ಒಲಿದರೆ, ನಾನೂ ಸಮಾಜದಲ್ಲಿ ದೊಡ್ಡ ರಖಮಿನ ಚೀಜು ಆಗಬಹುದು ಎ೦ಬ ಮಹದಾಸೆಯಲ್ಲಿ ಒಂದು ನಸುಕಿನಲ್ಲಿ ಅರ್ಚಕ ಗೋವಿ೦ದ ಗವೀಮಠವನ್ನು ತಲುಪಿದ. ಸ್ವಾಮಿಗಳು ಅಗ ಜಳಕ ಮುಗಿಸಿ ಅಧ್ಯಯನದಲ್ಲಿದ್ದರು. ಅರ್ಚಕ ಗೋವಿಂದ ಅವರ ಮು೦ದೆ ಹೋಗಿ ಶಿರಸಾಷ್ಟಾ೦ಗ ಪ್ರಣಾಮಗೈದ. ಸ್ವಾಮಿಗಳು ನಸು ನಗುತ್ತಲೇ ಆದರದಿಂದ ಬರಮಾಡಿಕೊಂಡರು. ಉಪಹಾರವಾಗುವವರೆಗೂ ಬಂದ ಕಾರಣವನ್ನು ತಿಳಿಸುವುದು ಬೇಡ ಎಂದು ತಿಳಿಸಿದರು. ಮಠದ ಉಪಹಾರವೆ೦ದರೆ ಅಳ್ಳಿಟ್ಟು-ಮಜ್ಜಿಗೆ, ಆಮೇಲೆ ಹೊಟ್ಟೆಗೆ ಶಮನ ನೀಡುವ ಬಿಸಿ ನೀರು. ಉಪಹಾರದ ಅನಂತರ ಗೋವಿಂದ ಬಂದ ಕಾರಣವನ್ನು ತಿಳಿಸಿ “ನನಗೆ ತಂತ್ರಾಚಾರ, ಮ೦ಡಲ ವಿದ್ಯೆ; ಪವಾಡಗಳನ್ನು ಕಲಿಸಿಕೊಡಿ” ಎಂದು ಅಂಗಲಾಚಿದ.

ನೀವು ಬಹಳ ಒಳ್ಳೆಯ ಅರ್ಚಕರು-ವೈದಿಕರು ಎಂದು ಹೆಸರು ಮಾಡಿದ್ದೀರೆಂದು ಕೇಳಿ ಬಲ್ಲೆ. ಆದರೆ, ನಾನು ನನ್ನೆಲ್ಲ ಜ್ಞಾನವನ್ನು ನಿಮಗೆ ನೀಡಿದ ಮೇಲೆ ಎಷ್ಟೋ ಪ೦ಡಿತರು ಮಾಡುವಂತೆ, ವಿನಯ, ಸಮಾಜಕ್ಕೆ ಒಳಿತಾಗುವಂತೆ ಕೆಲಸ ಮಾಡುವ ಸೇವಾ ಮನೋಭಾವವನ್ನು ನೀವು ತೋರಿಸದೇ ಹೋಗಬಹುದೆಂಬ ಆತಂಕ ನನಗೆ” ಎಂದು ಅನುಮಾನವನ್ನು ವ್ಯಕ್ತಪಡಿಸಿದರು ಪವಾಡ ಸ್ವಾಮಿಗಳು.

ಅದಕ್ಕೆ ಅರ್ಚಕ ಗೋವಿಂದ, “ಇಲ್ಲ ಮಹಾಸ್ವಾಮಿ, ಹಾಗೆ ಯಾವತ್ತೂ ಮಾಡಲು ಸಾಧ್ಯವೇ ಇಲ್ಲ. ನೀವು ಎಂಥ ಅಪರಾತ್ರಿಯಲ್ಲಿ ಕರೆದರೂ, ಗುರು ಸೇವೆಯೆಂದು ಓಡಿ ಬರುತ್ತೇನೆ. ನನ್ನ ಸ್ವಾರ್ಥಕ್ಕಾಗಿ ಎ೦ದೂ ನೀವು ಕಲಿಸಿದ ವಿದ್ಯೆಯನ್ನು ಬಳಸುವುದಿಲ್ಲ” ಎಂದು ಆಣೆಭಾಷೆ ಮಾಡಿದ.

ಇರಲಿ, ಇರಲಿ ಎ೦ದು ಕಣ್ಸನ್ನೆ ಮಾಡುತ್ತ ಪವಾಡ ಸ್ವಾಮಿಗಳು ಅರ್ಚಕರ ಕೈ ಹಿಡಿದುಕೊಂಡು ಮಠದ ಸೋಪಾನವನ್ನು ಇಳಿದು ಹೋದರು. ಹೋಗುವ ಮೊದಲು ಅಡುಗೆಯವನಿಗೆ “ರಾತ್ರಿಯೂಟಕ್ಕೆ ಹುಗ್ಗಿಯನ್ನು ಸಿದ್ಧಪಡಿಸಬೇಕು. ಆದರೆ ನಾನು ಹೇಳುವವರೆಗೂ ಒಲೆಗೆ ಬೆ೦ಕಿ ಹಾಕಿ ಅಡುಗೆ ಮಾಡುವುದು ಬೇಡ” ಎಂದು ಕೈ ಸನ್ನೆ ಮಾಡಿ ಅಣತಿ ನೀಡಿದರು. ಅನ೦ತರ ನಿಧಾನಕ್ಕೆ ನಡೆಯತೊಡಗಿದ೦ತೆ ಅರ್ಚಕ ಗೋವಿ೦ದ ಅವರನ್ನು ಹಿ೦ಬಾಲಿಸಿದ.

ಪಾವಟಿಗೆಗಳನ್ನು ಇಳಿದು ಹೋದ೦ತೆ ಎದುರಾದದ್ದು ಗುಹೆಯಂಥ ಕೋಣೆ. ಅಲ್ಲಿ ಪುಸ್ತಕಗಳ ರಾಶಿಯೇ ಇತ್ತು. ಗುಹೆಯ ತು೦ಬ ಪುಸ್ತಕಗಳ; ದಶಾ೦ಗದ ಮಿಶ್ರಣಗಳ ವಾಸನೆ. ಅಲ್ಲಿದ್ದ ಮ೦ದ ನ೦ದಾದೀಪ ಕಣ್ಣಿಗೆ ಕತ್ತಲೆಯನ್ನು ಹೊ೦ದಿಸಿ ಕೊಡುತ್ತಲೇ, ಇದು ಗುಹೆಯಲ್ಲ ಅತಿ ದೊಡ್ಡ ಕೋಣೆ ಎ೦ದು ಅರಿವಿಗೆ ಬ೦ತು. ಎಷ್ಟೋ ಹೊತ್ತು ಕಳೆದಂತೆ ಭಾಸವಾಯಿತು. ಪುಸ್ತಕಗಳ ಸಾಲುಗಳನ್ನು ಹಾಯುತ್ತ, ಹಾಯುತ್ತ ಹೋದ೦ತೆ ಮೂಲೆಯಲ್ಲಿ ಯಾರೋ ಇಬ್ಬರು ನಿಂತಂತೆ ಮಸುಕು ಮಸುಕಾಗಿ ಕಂಡಿತು.

ನೋಡಿದರೆ-ವೆ೦ಕ ಮತ್ತು ನಾಣಿ ಕ೦ಡರು. ಅರ್ಚಕ ಗೋವಿಂದನಿಗೆ ಅವರನ್ನು ಕ೦ಡದ್ದೇ ಆಶ್ಚರ್ಯ, ಸ೦ತೋಷ ಎರಡೂ ಒಟ್ಟಿಗೆ ಆದವು. ಅವರು ಅವನ ಚಿಕ್ಕಪ್ಪನ ಕುರಿತು ಸುದ್ದಿಯೊಂದನ್ನು ತಂದಿದ್ದರು. ಅರ್ಚಕ ಗೋವಿ೦ದನ ಚಿಕ್ಕಪ್ಪ ಶ್ರೀಮಠದ ಧರ್ಮಾಧಿಕಾರಿಗಳಾಗಿದ್ದವರು. ಸಾಕಷ್ಟು ನಾಮ-ಧನ ಬಲವನ್ನು ಹೊ೦ದಿದ್ದರು. ಧರ್ಮಾಧಿಕಾರಿಗಳು ತುಂಬ ಅಸ್ವಸ್ಥರಾಗಿದ್ದರು. ಕೊನೆಯ ಕ್ಷಣಗಳನ್ನು ಎಣೆಸುತ್ತಿದ್ದ ಅವರು ಅಂತಿಮ ದರ್ಶನ ಪಡೆಯಬೇಕೆಂದಿದ್ದರೆ ತಕ್ಷಣ ಹೊರಟು ಬಾ, ಎಂಬ ಸಂದೇಶವನ್ನು ಸೋದರನ ಪುತ್ರನಿಗೆ ಸುದ್ದಿ ಕಳುಹಿಸಿದ್ದರು. ಚಿಕ್ಕಪ್ಪನ ಅಸ್ವಾಸ್ಥ್ಯ ಸುದ್ದಿ ಗೋವಿಂದನ ಸ್ವಾಸ್ಥವನ್ನು ಕೆಡಿಸಿತು. ಮೊದಲನೆಯದ್ದು, ತನ್ನ ಚಿಕ್ಕಪ್ಪ ಮರಣಶಯ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕಾಗಿದ್ದರೆ, ಇನ್ನೊಂದು ತಾನು ಪವಾಡ ವಿದ್ಯೆ ಕಲಿಯುವ ಅವಕಾಶ ತಪ್ಪಿಹೋಗುತ್ತದೆ ಎಂಬುದಕ್ಕಾಗಿತ್ತು. ಕೊನೆಗೆ, ಬಹಳ ವಿಚಾರ ಮಾಡಿ, ಅಳೆದು-ತೂಗಿ, ತಾನೀಗ ಬರಲಾಗುವುದಿಲ್ಲ, ನನ್ನ ಅನಿವಾರ್ಯತೆಗೆ ಕ್ಷಮಿಸಿ- ಎಂದು ಪತ್ರವನ್ನು ಅರ್ಚಕ ಗೋವಿಂದ ಬರೆದು ಕಳುಹಿಸಿದ.

ಒಂದು ವಾರ ಕಳೆಯಿತು. ಶೋಕದ ಮುಖ ಹೊತ್ತು ಸಂದೇಶಕರು ಮತ್ತೆ ಬಂದರು. ಧರ್ಮಾಧಿಕಾರಿಗಳು ಇಹಲೋಕವನ್ನು ತ್ಯಜಿಸಿದರೆಂದೂ ನಿಮ್ಮನ್ನು ಧರ್ಮಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆಯೆಂದೂ ಸುದ್ದಿ ತಿಳಿಸಿ, ಕೃಪಾಶೀರ್ವಾದ ಬೇಡಲೆ೦ಬ೦ತೆ ಗೋವಿಂದನ ಪಾದಗಳಿಗೆ ನಮಸ್ಕರಿಸಿದರು.

ಇದನ್ನೆಲ್ಲ ಗಮನಿಸುತ್ತಿದ್ದ ಪವಾಡ ಸ್ವಾಮಿಗಳು, “ನಮ್ಮ ಮಠದಲ್ಲಿ ತಾವಿರುವಾಗಲೇ ಇಂಥ ಸುದ್ದಿ ಬಂದಿರುವುದು ಬಹಳ ಸಂತೋಷ” ಎ೦ದು ಖುಷಿಯನ್ನು ವ್ಯಕ್ಯಪಡಿಸಿದರು. ನೀವು ಒ೦ದು ಸ್ಥಾನ ಪಡೆದಿರುವುದರಿ೦ದ ನನಗೂ ಅದರಿ೦ದ ಉಪಕಾರವಾಗುವ೦ತೆ ನಡೆದುಕೊಳ್ಳಿ ಎ೦ಬ೦ತೆ-“ಈಗ ತೆರವಾಗಿರುವ ಅರ್ಚಕ ಸ್ಥಾನಕ್ಕೆ, ದಯವಿಟ್ಟು ನನ್ನ ಮಗನನ್ನು ಆಯ್ಕೆ ಮಾಡಿ” ಎಂದು ಅರ್ಚಕ ಗೋವಿಂದನನ್ನು ಬೇಡಿಕೊಂಡರು.

ಆಗಿನ್ನೂ ಧರ್ಮಾಧಿಕಾರಿಯಾಗಿ ಆಯ್ಕೆಯಾಗಿದ್ದ ಗೋವಿಂದ, ಕೊ೦ಚ ಯೋಚಿಸಿ, “ಆ ಸ್ಥಾನವನ್ನು ನನ್ನ ಸೋದರನಿಗೆ ಕೊಡಬೇಕೆಂದು ಇದೀಗ ನನಗೆ ಅ೦ತಃಪ್ರೇರಣೆಯಾಗಿದೆ. ಮತ್ತೊ೦ದು ಅವಕಾಶ ಸಿಕ್ಕಾಗ ನಿಮ್ಮ ಮಗನಿಗೆ ಸೂಕ್ತ ಸ್ಥಾನ ಕೊಡುವೆ. ಆದರೆ, ಅದಕ್ಕಾಗಿ ನೀವು ನನ್ನೊಂದಿಗೆ ಉಜ್ಜಯಿನಿ ನಗರಕ್ಕೆ ಬರಬೇಕಾಗುವುದು” ಎಂದು ನುಡಿದ.
ಅದಕ್ಕೆ ಒಪ್ಪಿದ ಪವಾಡ ಸ್ವಾಮಿಗಳು ತಮ್ಮ ಮಗನನ್ನು ಕರೆದುಕೊಂಡು ಗೋವಿಂದನೊಂದಿಗೆ ಉಜ್ಜಯಿನಿ ನಗರಕ್ಕೆ ಹೊರಟರು. ಹೊಸದಾಗಿ ಧರ್ಮಾಧಿಕಾರಿಯಾಗಿದ್ದ ಗೋವಿಂದನಿಗೆ ಭರ್ಜರಿ ಸನ್ಮಾನ ಮಾಡಲಾಯಿತು.

ಆರು ತಿಂಗಳು ಕಳೆಯಿತು.

ಒಂದು ದಿನ ವ್ಯಕ್ತಿಯೊಬ್ಬ ಧಾವಂತದಲ್ಲಿ ಬಂದ. “ನಿಮ್ಮನ್ನು ಈ ಪ್ರಾಂತ್ಯದ ಧರ್ಮಾಧ್ಯಕ್ಷರನ್ನಾಗಿ ನಿಯಮಿಸಿಲಾಗಿದೆ. ನಿಮ್ಮ ಈಗಿನ ಪದವಿಗೆ ಉತ್ತರಾಧಿಕಾರಿಯನ್ನು ಸೂಚಿಸಿ” ಎಂದು ಹೇಳಿದ. ವಿಷಯ ತಿಳಿದ ಪವಾಡ ಸ್ವಾಮಿಗಳು, “ಧರ್ಮಾಧಿಕಾರಿಗಳೇ, ನೀವು ಈ ಹಿಂದೆ ಮಾತು ಕೊಟ್ಟಂತೆ, ಈ ಪದವಿಯನ್ನು ನನ್ನ ಮಗನಿಗೆ ನೀಡಿ” ಎಂದು ಬೇಡಿಕೊಂಡರು.

ಆದರೆ, ಧರ್ಮಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಗೋವಿಂದ ಪ್ರಭುಗಳು, “ಈ ಹುದ್ದೆಯನ್ನು ನನ್ನ ತಂದೆಯ ಕಿರಿಯ ತಮ್ಮ, ಅಂದರೆ, ಚಿಕ್ಕಪ್ಪನಿಗೆ ಕೊಡಲು ತೀರ್ಮಾನಿಸಲಾಗಿದೆ. ಆ ಮೂಲಕ ನಮ್ಮ ಇನ್ನೊಬ್ಬ ಚಿಕ್ಕಪ್ಪನವರ ಆತ್ಮಕ್ಕೆ ಶಾ೦ತಿ ಲಭಿಸಲಿ ಎ೦ಬುದು ನಮ್ಮ ಅ೦ಬೋಣ. ನಿಮ್ಮ ಮಗನಿಗೆ ಒಳ್ಳೆಯ ಹುದ್ದೆ ಬೇಕಿದ್ದರೆ, ನಮ್ಮೊಂದಿಗೆ ಕಾಶಿಗೆ ಆಗಮಿಸ ಬೇಕಾಗಬಹುದು” ಎಂದರು.

ಸರಿ ಎಂದು ಪವಾಡ ಸ್ವಾಮಿಗಳು ತಮ್ಮ ಮಗನನ್ನು ಕರೆದುಕೊಂಡು ಗೋವಿಂದ ಪ್ರಭುವಿನೊಂದಿಗೆ ಕಾಶಿಗೆ ಹೊರಟರು.
ಅಲ್ಲಿ, ಸಭೆ, ಪ್ರವಚನ, ವಿದ್ವತ್‌ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಜತೆಗೆ, ಹೊಸದಾಗಿ ಧರ್ಮಾಧ್ಯಕ್ಷರಾಗಿದ್ದ ಗೋವಿಂದ ಪ್ರಭುಗಳಿಗೆ ಸನ್ಮಾನವೂ ನಡೆಯಿತು.

*
*
*
ಎರಡು ವರ್ಷ ಕಳೆದವು.
ಒಮ್ಮೆ ಮಹಾಪ್ರಧಾನ ಗುರುಗಳ ಸಂದೇಶಕರು ಬಂದು, “ಗೋವಿಂದ ಪ್ರಭುಗಳೇ, ನಿಮ್ಮನ್ನು ಮಹಾಪ್ರಧಾನ ಗುರುಗಳ ಆಪ್ತ ದಿವಾನರನ್ನಾಗಿ ಆಯ್ಕೆ ಮಾಡಲಾಗಿದೆ. ನಿಮ್ಮ ಈಗಿನ ಹುದ್ದೆಗೆ ಉತ್ತರಾಧಿಕಾರಿಗಳನ್ನು ಸೂಚಿಸಲು ಕೋರಲಾಗಿದೆ” ಎಂದರು.

ಪವಾಡ ಸ್ವಾಮಿಗಳಿಗೆ ಈ ವಿಷಯ ತಿಳಿದು, ಗೋವಿಂದ ಪ್ರಭುವಿನ ಬಳಿ ಬಂದರು. ಹಳೆಯ ಆಣೆ-ಭಾಷೆಯನ್ನು ನೆನಪಿಸಿ, ಈಗ ನೀವು ತೆರವು ಮಾಡುವ ಹುದ್ದೆಗೆ ನನ್ನ ಮಗನನ್ನು ನಿಯಮಿಸಿ” ಎಂದು ಕೇಳಿಕೊಂಡರು.

ಆದರೆ, ಮಹಾಪ್ರಧಾನ ಗುರುಗಳ ಆಪ್ತ ದಿವಾನರಾಗಿ ಅಧಿಕಾರ ಸ್ವೀಕರಿಸಲಿದ್ದ ಗೋವಿಂದ ಪ್ರಭುಗಳು, “ಈ ಹುದ್ದೆಯನ್ನು ನನ್ನ ತಾಯಿಯ ಅಣ್ಣ, ಅಂದರೆ, ನಮ್ಮ ಸೋದರ ಮಾವನಿಗೆ ನೀಡಲು ನಿರ್ಧರಿಸಿದ್ದೇನೆ. ನಿಮ್ಮ ಮಗನಿಗೆ ಉಚಿತ ಸ್ಥಾನಮಾನ ಬೇಕಿದ್ದರೆ, ನಮ್ಮೊ೦ದಿಗೆ ಹರಿದ್ವಾರಕ್ಕೆ ಬನ್ನಿ” ಎಂದರು. ಪವಾಡ ಸ್ವಾಮಿಗಳು ಆರಂಭದಲ್ಲಿ ಪ್ರತಿಭಟಿಸಿದರೂ, ಸಲಹೆಯನ್ನು ಒಪ್ಪದೇ ಬೇರೆ ದಾರಿ ಕಾಣದೆ ಮಗನನ್ನು ಕರೆದುಕೊಂಡು ಹರಿದ್ವಾರಕ್ಕೆ ಹೊರಟರು.
ಅಲ್ಲಿ ಮತ್ತೆ ಪ್ರವಚನ, ಸನ್ಮಾನ, ಅ೦ಬಾರಿ ಮೆರವಣಿಗೆ, ಪಲ್ಲಕಿ ಉತ್ಸವಗಳು ನಡೆದವು.
*
*
*
ನಾಲ್ಕು ವರ್ಷ ಗತಿಸಿದವು. ವಯಸ್ಸಿನ ಭಾರದಿಂದ ಮಹಾಪ್ರಧಾನ ಗುರುಗಳು ತೀರಿಕೊಂಡರು. ಧಾರ್ಮಿಕ ವಿಧಿ-ನಿಯಮ ಹಾಗೂ ಸತ್‌ಸ೦ಪ್ರದಾಯವನ್ನು ಪಾಲಿಸಿಕೊ೦ಡು ಹೋಗುವ ನಿಟ್ಟಿನಲ್ಲಿ ಆಪ್ತ ದಿವಾನರಾಗಿದ್ದ ಗೋವಿಂದ ಪ್ರಭುಗಳನ್ನೇ ಮಹಾಪ್ರಧಾನ ಗುರುಗಳನ್ನಾಗಿ ಘೋಷಣೆ ಮಾಡಲಾಯಿತು. ಇದನ್ನು ತಿಳಿದ ಪವಾಡ ಸ್ವಾಮಿ, ಮಹಾಪ್ರಧಾನ ಗುರುಗಳ ಬಳಿ ಬಂದು, ಶಿರಸಾಸ್ಟಾಂಗ ನಮಸ್ಕಾರ ಮಾಡಿದರು. ಅವರ ಪಾದದ ಬಳಿ ಕುಳಿತು ತಮ್ಮ ಹಳೆಯ ಬೇಡಿಕೆಯನ್ನು ಮುಂದಿಟ್ಟು, ತೆರವಾದ ಸ್ಥಾನವನ್ನು ತಮ್ಮ ಮಗನಿಗೆ ದಯಪಾಲಿಸುವಂತೆ ಕೇಳಿಕೊಂಡರು.

ಅದಾಗ ಜಗದ್ಗುರುಗಳಾಗಿ ಅಧಿಕಾರ ಸ್ವೀಕರಿಸಿದ್ದ ಗೋವಿಂದ ಮಹಾಪ್ರಭುಗಳು ಭಯಕ೦ರ ಕುಪಿತರಾದರು. ರೋಷದಿಂದ ಪವಾಡ ಸ್ವಾಮಿಗಳಿಗೆ ನುಡಿದರು-“ನಾವೂ ನಿಮ್ಮ ಬೇಡಿಕೆಗಳನ್ನು ಕೇಳಿ, ಕೇಳಿ ಬೇಸತ್ತಿದ್ದೇವೆ. ನೀವು ಹೀಗೆಯೇ ನಮ್ಮನ್ನು ಸತಾಯಿಸುತ್ತಿದ್ದರೆ, ನಿಮಗೆ ತುರ೦ಗವಾಸದ ಸವಿಯನ್ನು ತೋರಿಸಬೇಕಾಗುತ್ತದೆ. ಮಠದ ಉಗ್ರಾಣದ ಪಾರುಪತ್ಯಗಾರರಾಗಲೂ ಯೋಗ್ಯತೆಯಿಲ್ಲದ; ಧರ್ಮ-ಕರ್ಮ ತಿಳಿಯದ ಮೂಢರಿಗೆ ಸೆರೆವಾಸವೇ ಸರಿಯಾದ ಮದ್ದು ಎ೦ದು ಕಾಣುತ್ತದೆ! ನೀವೀಗ ಗವೀಮಠದಲ್ಲಿ ಪವಾಡಗಳನ್ನು; ಮಾಂತ್ರಿಕ ಮಹಾವಿದ್ಯೆಯನ್ನು ಕಲಿಸುವ ಗುರುವಾಗಿ ಉಳಿದಿಲ್ಲವೆಂದು ನಮಗೆ ತಿಳಿದಿದೆ.”

ಬಡಪಾಯಿ ಪವಾಡ ಸ್ವಾಮಿಗಳಿಗೆ ಈಗ ಉಳಿದಿದ್ದು, ಬಂದ ದಾರಿಗೆ ಸುಂಕವಿಲ್ಲ ಎಂದು ಗವೀಮಠಕ್ಕೆ ತೆರಳುವುದು. ಬಲು ದೂರದ ಹಾದಿ. ಏನು ಮಾಡುವುದು? ಹೀಗಾಗಿ, ಅವರು ಗೋವಿಂದ ಮಹಾಪ್ರಭುಗಳಿಗೆ, “ಆಯಿತು, ಮಹಾ ಜಗದ್ಗುರುಗಳೇ. ನಾನು ಮರಳಿ ನಮ್ಮೂರಿಗೆ ತೆರಳುವೆ. ಪ್ರಯಾಣಕ್ಕೆ, ಹಸಿವು-ನೀರಡಿಕೆಗೆ, ಆಸರೆಯಾಗಿ ಒಂದಿಷ್ಟು ದಾರಿಬುತ್ತಿಯ ಗಂಟಿನ ವ್ಯವಸ್ಥೆ ಮಾಡಿಕೊಟ್ಟರೆ ಉಪಕಾರವಾಗುತ್ತದೆ.”

ಪವಾಡಸ್ವಾಮಿಯ ಈ ಬೇಡಿಕೆ ಆಸೆಬುರುಕುತನದ ಪರಮಾವಧಿ ಎ೦ದು ಅನ್ನಿಸಿ, ಇನ್ನಷ್ಟು ಕೆಂಡಾಮಂಡಲ ಕೋಪಕ್ಕೆ ಒಳಗಾದ ಗೋವಿಂದ ಮಹಾಪ್ರಭುಗಳು, “ಇಲ್ಲ ಸಾಧ್ಯವೇ ಇಲ್ಲ. ಹಾಗೇ ಹಿಡಿ ಊಟವೂ ಇಲ್ಲದೇ ಇಲ್ಲಿಂದ ತೊಲಗಿ. ನಿಮ್ಮಿಂದಾಗಿ ನಮಗೆ ತಲೆ ರೋಸಿದೆ. ಒಳ್ಳೆಯ ಹಾಡಾಯಿತು ನಿಮ್ಮದು. ರಿಪಿಯ೦ತೆ ಬೆನ್ನುಹತ್ತಿ ನಮ್ಮ ಜೀವನವನ್ನೇ ನರಕವಾಗಿಸಿದ್ದೀರಿ. ಮನುಷ್ಯರ ಆಸೆಬುರುಕತನಕ್ಕೂ ಒ೦ದು ಮಿತಿಯೆನ್ನುವುದು ಇರುತ್ತದೆ. ನೀವು ಹಪಾಪಿಯ೦ತಾಗಿದ್ದೀರಿ ಎಂದು ಕಿರುಚಿದರು!
ಆಗ ಪವಾಡಸ್ವಾಮಿಗಳು ತಮ್ಮ ಮುಖದ ಚಹರೆಯನ್ನು ತುಸು ತುಸುವೇ ವಿಚಿತ್ರವಾಗಿ ಬದಲಾಯಿಸಿ, ಅತಿ ಗಡುಸಾದ ಧ್ವನಿಯಲ್ಲಿ- “ಹಾಗಾದರೆ, ಈ ರಾತ್ರಿ, ಗವೀಮಠದ ಒಣ ಹುಗ್ಗಿಯೇ ನನಗೆ ಗತಿ ಎಂದ ಹಾಗಾಯಿತು” ಎಂದು ಒಸಡಿಯನ್ನು ಸೊಟ್ಟ ಮಾಡಿ ಕುಹಕದಿಂದ ನುಡಿದರು. ಅನಂತರ, ಅಡುಗೆಯವನನ್ನು ಕರೆದು “ಸರಿಯಪ್ಪ, ಇನ್ನೇನು ಮಾಡೋದು ಒಣ ಹುಗ್ಗಿಯನ್ನೇ ಬೇಯಿಸು. ರಾತ್ರಿಯೂಟ ತಯಾರು ಮಾಡುವ ಕೆಲಸ ನಿನಗೆ ತಪ್ಪಲಿಲ್ಲ” ಎ೦ದರು.

ತಕ್ಷಣವೇ ಗೋವಿಂದನಿಗೆ ತಾನಿನ್ನೂ ಗವೀಮಠದ ಸೋಪಾನದ ಕೆಳಗಿರುವ ಗುಹೆಯಲ್ಲಿರುವ; ಸ್ವಾಮಿಗಳ ಬಳಿಗೆ ಪವಾಡ ವಿದ್ಯೆ ಕಲಿಯಲು ಬಂದಿರುವ ಸಾಮಾನ್ಯ ಅರ್ಚಕ ಗೋವಿ೦ದ ಎಂದು ಹೊಳೆದು ಹೋಯಿತು! ನಾಚಿಕೆಯಲ್ಲಿ ಮುಖದ ಬಣ್ಣವೇ ಬದಲಾಗಿ ಮಾತುಗಳೇ ಹೊರಡಲಿಲ್ಲ. ಕೈಕಾಲು ಸೇದಿ ಹೋದ೦ತಾದವು. ಹಾಗಾದರೆ ಇಲ್ಲಿಯವರೆಗೂ ನಡೆದದ್ದೇನು?

ಪವಾಡ ಸ್ವಾಮಿಗಳು ತೀರ ಮೆತ್ತಗಿನ ಧ್ವನಿಯಲ್ಲಿ ಆತನಿಗೆ ನುಡಿದರು “ವಿದ್ಯೆ ಕಲಿಯುವ ಮೊದಲು ಬೇಕಾಗುವ ವಿನಯ, ವಿದ್ಯೆ ಕಲಿತಾದ ಮೇಲೆ ಯಾವುದೇ ಸ್ವಜನ ಪಕ್ಷಪಾತಕ್ಕೆ ಒಳಗಾಗದಂತೆ ಅದನ್ನು ಉಪಯೋಗಿಸುವ ಪರಿಪೂರ್ಣತೆ, ನಿನ್ನ ನಿಷ್ಠೆ, ಕಲಿಕೆಯ ಸಾಮರ್ಥ್ಯಗಳನ್ನು ಪರೀಕ್ಷಿಸಲು ಇಷ್ಟು ಸಾಕು. ಈ ಪರೀಕ್ಷೆಯಲ್ಲಿ ಗೆಲ್ಲುತ್ತಿಯೋ ಇಲ್ಲವೋ ಎಂದು ನೋಡಲು ಈ ಗುಹೆಯಲ್ಲಿ ನೀನು ಈ ವರೆಗೆ ಅನುಭವಿಸಿದ್ದನ್ನು ನಾನೇ ಸೃಷ್ಟಿಸಿದ್ದು. ಅಂದರೆ ನೀನು ಅನುಭವಿಸಿದ್ದೆಲ್ಲ ಕೇವಲ ಕನಸು ಅಥವ ಭ್ರಮೆಯಾಗಿತ್ತು. ಬೇಕಾದರೆ ಇದನ್ನು ಪವಾಡ ಎಂದು ತಿಳಿದುಕೋ. ಹಾಗೆ ನೋಡಿದರೆ ನನಗೆ ಯಾವ ಪವಾಡಗಳನ್ನೂ ಮಾಡಲು ಬರದು. ಜನ ಹುಚ್ಚರು. ಏನೋ ನೋಡುತ್ತಾರೆ. ಏನೋ ಭ್ರಮಿಸುತ್ತಾರೆ. ಆಮೇಲೆ ಅವರು ಪವಾಡ ಮಾಡಿದರು ಅ೦ದುಕೊಳ್ಳುತ್ತಾರೆ.

ತಮಗೆ ಏನು ಬೇಕೋ ಅದನ್ನು ಕ೦ಡುಕೊಳ್ಳೋಕೆ ಅವರಿಗೆ ಯಾರಾದರೂ ಬೇಕು. ಇಲ್ಲದಿದ್ದರೆ, ಮನಸಿಗೆ ನೆಮ್ಮದಿ-ಜೀವನಕ್ಕೆ ಸಮಾಧಾನ ಅ೦ತ ಒ೦ದು ಬೇಕಲ್ಲ, ಅದು ಸಿಗುವುದಿಲ್ಲ. ಮನುಷ್ಯ ತನ್ನ ಸುತ್ತಮುತ್ತ ನೋಡಿ, ತನಗೆ ತಾನೇ ಕಲಿಯೋದೇ ಶ್ರೇಷ್ಠ ಅನ್ನುವವನು ನಾನು. ಮೇಲಾಗಿ, ಸನ್ಯಾಸಿಯಾದ ನನಗೆಲ್ಲಿಯ ಮಗ? ಇಲ್ಲದೆ ಇರುವ ಮಗನಿಗೇಕೆ ಅಧಿಕಾರ, ಸ್ಥಾನಮಾನ? ಅದನ್ನ ತಿಳಿದುಕೊಳ್ಳೋಕೂ ನೀನು ಪ್ರಯತ್ನಿಸಲಿಲ್ಲ. ನಿನ್ನಂಥ ಸ್ವಾರ್ಥಿಗೆ ನಮ್ಮ ಮಠದಲ್ಲಿ ಊಟ ನೀಡುವುದು ಕೂಡ ನಿಷಿದ್ಧ. ಹೋಗಿ ಬಾ. ಬೆಳಿಗ್ಗೆ ತಿ೦ದ ಅಳ್ಳಿಟ್ಟು-ಮಜ್ಜಿಗೆಯೇ ಸಾಕು ನಿನಗೆ, ಎಂದು ಹೇಳಿ, ಬಾಗಿಲವರೆಗೂ ಹೋಗಿ, ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿ, ಗೋವಿಂದನನ್ನು ಬೀಳ್ಕೊಟ್ಟರು. ಒಳಗೆ ಬರುತ್ತಲೇ ಇಬ್ಬರ ಹುಗ್ಗಿಯನ್ನೂ ನಾನೇ ತಿನ್ನಬೇಕಾಗುತ್ತದೆ. ಹ್ಞು೦ ಇರಲಿ, ಇದು ಕೂಡ ಪ್ರಕೃತಿಯ ಇಚ್ಛೆಯೇ ಇರಬೇಕು, ಮೂಢಮತಿಗಳಿಗೆ ಹೊಟ್ಟೆಯದೇ ಚಿ೦ತೆ, ಎ೦ದು ನಸು ನಕ್ಕು ,ಅಧ್ಯಯನಕ್ಕೆ ಕೂರಲು ಸೋಪಾನದ ಮೆಟ್ಟಿಲುಗಳನ್ನು ಹತ್ತತೊಡಗಿದರು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.