ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು;
“ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”.
ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ
ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ
ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ ಚಾಮುಂಡೀ.
ತಾಂಡವಕ್ಕೆ ಹಾಸ್ಯ ಲಾಸ್ಯ ಬೆರೆಸುವ ರಣಚಂಡೀ.
“ದಿಕ್ಕು ದಿಕ್ಕು ಕತ್ತಲಿಸಿತು ಪ್ರಳಯವೇ ಇದು ಬಂತೆ
ಮುಳುಗಿಸುವುದೋ ತೇಲಿಸುವುದೊ ಕಾಲವೆ ಎಂಬಂತೆ.”
” ಥಕ ಥೈ ಥೈ ದಿಕಿ ತಟ ತೋಂ ಇದೇ ಕಾಲ ಮಳೆಯದೋ
ಹಳ್ಳ ಕೊಳ್ಳ ಗಿರಿದರಿಯಲಿ ಹರಿಯುತ್ತಿಹ ಹೊಳೆಯದೋ
ಬರಲಿಹ ಬೆಳೆ ಪಯಿರಿನಲ್ಲಿ ಕುತುಕದಿಂದ ಕುಣಿವುದೋ
ಋತುರಾಜನ ಋತುಜಾತದ ಜೀವನದಲಿ ಋಣವಿದೋ
ಓ ಕುಮಾರ, ಬೇಗ ಬಾರ, ತುಂಬಿ ತಾರ, ಬೆಳೆಯನು.
ಕಾರ್ತಿಕದಲಿ ಭೂಮಿ ಕಾಂಬ ಶಾರದೀಯ ತಳೆಯನು
ಆಹಾ ಸಖಿ, ಆಹಾ ಸುಖಿ, ಸಾವಿರ ಶಿಖಿ ಹೊತ್ತಿವೆ.”
“ಕುಣಿಯೊ ಕುಣಿ ಸಹಸ್ರ ಮುಖಿ ಆಸೆ ತಲೆಯನೆತ್ತಿದೆ
ಅನ್ನ ಅನ್ನ ಬುಸುಗುಡುತಿದೆ ಮಾನವ ನಾಗರವು
ತೆರೆ ತೆರೆಯಲಿ ತೆರೆಯಿತು ನವದುಃಖದ ಸಾಗರವು
ತಾರಕ ಸಂಹಾರಕನಾಗುತ ಅಗೊ ಕಂದರ್ಪ
ದರ್ಪದಿಂದ ಹೆಡೆ ಸೆಡೆಯುತತಾಂಡವಿಸಿತು ಸರ್ಪ.”
“ಶಕ್ತಿ ಕಂದ ಶಿವನಂದನ ಶಿಖಿ ಸ್ಕಂದನ ಕರೆವೆ
ವಾಹನವಾಗಲು ಅರ್ಪಿಸಿ ಅವನಲಿ ಮೈದೆರೆವೆ.
ಅಗ್ನಿದೇಹಿ ಆತ್ಮಸ್ನೇಹಿ ಬಾರೋ ಬಾ” ಷಣ್ಮುಖಾ
ಚತುರಂಗದ ಚಾತುರ್ಯದ ಜ್ಞಾನ ಕರ್ಮ ಸಮ ಸುಖಾ.
ಶುಖಿಗಂಡನೆ ಮೈಗೊಂಡನೆ ಕಂಗೆಂಡನೆ ತೋರೈ
ದೇವತೆಗಳ ಸೇನಾಪತಿ ಭೂರಂಗಕೆ ಬಾರೈ.”
“ಶಿಖಿ ಶಿಖಿ ಸಹಸ್ರನಖಿ ವರ್ಷಾ ವೀಣೆಯನೆ
ಬಾಜಿಸಿ ಪರ್ಜನ್ಯವ ಕರೆ ಅಂತರ್ಜ್ಞಾನಿಯನೆ”.
ಕಣಕಣದಲಿ ಕಣ್ ಕುಣಿಯಲಿ ಪರಮೇಷ್ಠಿಯ ಕಂಡು
ಸಾಮಾಷ್ಟಿಕ ಕ್ಷೇತ್ರದಲ್ಲಿ ವ್ಯಕ್ತಿಯ ಸುಖವುಂಡು
ಐಕ್ಯಸಮದ ಠಾಯಿಯಲ್ಲಿ ಬಹುವಧು ಉದ್ದೀಪ್ತ
ಆ ತುರಾಯಿ ಕುಣಿಸಿ ಕುಣೀ ಓ ಪ್ರಾಜ್ಞಾ ಸುಪ್ತಾ.
ಅಕ್ಷರದೀ ಬ್ರಹ್ಮಕೃತ್ಯ ನಿತ್ಯದ ಈ ನೃತ್ಯ
ಚಿತ್ರದಲಿ ಚಿತ್ರಿಸುತಿರೆ ಮರ್ತ್ಯವಹುದಮರ್ತ್ಯ.
ಪುರಷನಿದಿರು ಪ್ರಕೃತಿ ಕುಣಿವುದೆಂದು ಸಾಂಖ್ಯಸೂತ್ರ
ಪ್ರಕೃತಿ ಸಾಕ್ಷಿ ಪುರುಷ ನಾಟ್ಯ ನವೋನವ ವಿಚಿತ್ರ.
ಇದೆ ಪೌರುಷ, ಇದೇ ಸೌರಸ, ಇದೇ ಚೌರಸವೆಂದು
ನೆತ್ತಿ ಹೊತ್ತ ಆತ್ಮಶಿಖಿಯ ಪ್ರಣಾಮವ ಕಂಡು
ಬೇಸಗೆ ಸೆಖೆ ಶಿಖೆಗಂಡಿತು ಶತದಳ ಮುಖ ಉರಿಯೇ
ಹುಬ್ಬಿನ ಮಬ್ಬಿನ ಬಸಿರ್ ಬಂಗಾರದ ಬಾಯ್ದೆರೆಯೇ
ಗೌರೀಶಂಕರ ತಲೆಯೆತ್ತಿದೆ ಸೇತುವೆ ಎಂದೋ
ಧಿಮಕಿಡುತಿದೆ ಆ ಕುಮಾರಿ ಆ ಸೇತುವೆಯಿಂದೋ?
ಹಾ ಭಯವೋ ಓ ನಿದ್ದೆಯೋ ಮಿಥುನದ ಒಲವೋ
ರೌದ್ರದ ಮೊರೆಹೇಸಿಗೆ ಹೊರೆ ಮಾನವ ದಳವೋ.
(`ಅರಳು ಮರಳು’ ಸಂಕಲನದಿಂದ)
ನೃತ್ಯ ಯಜ್ಞ: ಕಾವ್ಯ ಬರಿ ವಿಲಾಸವಲ್ಲ.
ಕೆಲವು ಕವನಗಳು ಸಹೃದಯನಿಗೆ ಬೇಗ ಒಲಿಯುತ್ತವೆ. ತಮ್ಮೆಲ್ಲ ಅರ್ಥವನ್ನು ಬೇಗ ಬಿಚ್ಚಿಕೊಡುತ್ತವೆ. ಆದರೆ ಈ ರೀತಿಯ ಕವನ ಬೇರೆ ರೀತಿಯದು. ಎಷ್ಟೇ ಏಕಾಗ್ರತೆಯಿಂದ ಪ್ರಯತ್ನಿಸಿದರೂ ಪೂರ್ಣ ಕೈಗೆ ಸಿಗದಂಥದು. ಮೈಯೊಳಗೆ ಮಿಂಚು ಇಳಿದರೂ ಶರೀರ ಸಿಗದೆ ಮಾಯವಾಗಿ ಹೋಗುತ್ತದೆ. ಮಣಿಮಿಂಚಿನ ಬಿತ್ತನೆ ಇದು. ಇಂಥ ಕವನಗಳನ್ನು ಬೆನ್ನಟ್ಟಿ ಹೋಗುವ ವಿಮರ್ಶಕ ಆ ಪ್ರಯಾಣದಲ್ಲೆ ತಾನೂ ಬೆಳೆಯುತ್ತಾ ಹೋಗುತ್ತಾನೆ.
ಕುರ್ತಕೋಟಿಯವರ ಎರಡು ಪುಟದ ಬರವಣಿಗೆ, ಮೊಕಾಶಿಯವರಲ್ಲಿ ಸಣ್ಣ ಉಲ್ಲೇಖ ಬಿಟ್ಟರೆ ಕನ್ನಡ ವಿಮರ್ಶೆ ಅಷ್ಟಾಗಿ ಪ್ರಾಧಾನ್ಯ ನೀಡಿಲ್ಲದ ಈ ಕವನ ಬೇಂದ್ರೆಯವರ ಅತ್ಯುತ್ತಮ ಕವನಗಳಲ್ಲೊಂದು. ಎಪ್ಪತ್ತೇಳರ ರಾತ್ರಿಯಲ್ಲೊಂದರಲ್ಲಿ ಕಂಡ ಈ ನವಿಲನ್ನು ಅನೇಕ ಬಾರಿ ಬೆನ್ನಟ್ಟಿ ಹೋಗಿದ್ದರೂ, ಅದರ ಪೂರ್ಣ ಅನುಭವ ಸಿಕ್ಕಿಲ್ಲ. ಆದರೂ ರಿಲೇಕೋಲನ್ನು ಮುಂದೆ ಒಯ್ದಿದ್ದೇನೆ.
ಶ್ರದ್ದಾಂಜಲಿಯ ಪ್ರಯತ್ನ ಈ ನವಿಲಿನ ಕಡೆಗೆ ಮತ್ತೆ ಹೀಗುವಂತೆ ಮಾಡಿದೆ.
– ೨ –
ಬೇಂದ್ರೆಯವರ ಕಾವ್ಯದಲ್ಲಿ ನವಿಲು ಬಹುಮುಖೀ ಪ್ರತಿಮೆ. ಮುಖ್ಯವಾಗಿ ಅದು ಜೀವಚೈತನ್ಯವನ್ನು, ಕಲೆಯನ್ನು, ಪ್ರೇಮವನ್ನು ಸೂಚಿಸುತ್ತದೆ. ಹಾಗೆ ನೋಡಿದರೆ, ಪ್ರೇಮ ಬೇಂದ್ರೆ ಕಾವ್ಯದ ಪ್ರಮುಖ ವಸ್ತು; ಇದು ಉನ್ನತ ಸ್ಥಿತಿಯಲ್ಲಿ ಅವರ ಮಹತ್ವದ ಜೀವನ ದರ್ಶನವೂ ಹೌದು. ಈ ಕವನದ ಪ್ರಾರಂಭವೇ ನವಿಲಿನ ಕುಣಿತದಿಂದ. ಅದೂ ಪ್ರಣಯಾವೇಶದ ಕುಣಿತದಿಂದ. ಹೆಣ್ಣು ನವಿಲಿನ ಒಲವಿನ ಆಹ್ವಾನದಿಂದ ರೋಮಾಂಚನಗೊಂಡು ಗಂಡು ನವಿಲಿನ ಕುಣಿತ ಅದು.
ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು;
“ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”.
ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ
ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ
ಈ ಹಂತದಲ್ಲೇ ಕವನದುದ್ದಕ್ಕೂ ಹರಿದು ಬರುವ ಒಂದು ಮುಖ್ಯ ಸಂಗತಿಯನ್ನು ಗಮನಿಸಬೇಕಾದ ಅಗತ್ಯವಿದೆ. ಈ ಕವನ ಶಿಲ್ಪ ಡೈಲೆಕ್ಟಿಕಲ್ ಎಂದು ಕರೆಯಬಹುದಾದ ಸಂಯೋಜನೆಯೊಂದ ನಿರ್ಮಾಣಗೊಂಡಿರುವಂಥದು. ಇಡೀ ಕವನ ದ್ವಂದ್ವಮಾನ ಶಕ್ತಿಗಳ ಅಂತರ-ಪ್ರಕ್ರಿಯೆಯಾಗಿಯೇ ಬೆಳೆಯುತ್ತಾ ಹೋಗುತ್ತದೆ. ಗಂಡು – ಹೆಣ್ಣು, ಸಮಷ್ಟಿ-ವ್ಯಷ್ಟಿ, ಮಳೆ- ಉರಿ, ನವಿಲು-ಸರ್ಪ, ಮರ್ತ್ಯ-ಅಮರ್ತ್ಯ ಹೀಗೆ, ಈ ದ್ವಂದ್ಯಗಳು ಉದ್ದಕ್ಕೂ ಕವನದ ಪ್ರತಿಮಾಶರೀರವನ್ನು ನಿರ್ಮಿಸಿವೆ. ಅತ್ಯಂತ ಆಳದಲ್ಲಿಇದು ಕವಿಯ ತಾತ್ವಿಕತೆಯೂ ಹೌದು. ಈ ದ್ವಂದ್ವ ಪ್ರತಿಮಾನಿರ್ಮಾಣಗಳೇ ಈ ಕವನಕ್ಕೆ ಅದ್ಭುತವಾದ ಸಕ್ತಿಯನ್ನು ನೀಡಿರುವುದು.
ಕವನದ ಉದೃತ ಭಾಗ ಮತ್ತು ಅದರ ಮುಂದಿನ ಬೆಳವಣಿಗೆಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಬೇಂದ್ರೆಯವರ ಜೀವನ ಮೀಮಾಂಸೆಯ ಕೆಲವು ಮುಖ್ಯ ನೆಲೆಗಳನೆರವನ್ನೂ ಪಡೆಯಬೇಕಾಗುತ್ತದೆ. ಈ ಕವಿಯ ಪ್ರಕಾರ ಪ್ರೇಮ ಯಾವಾಗಲೂ ಸೃಜನಶೀಲತೆಯ ಮೂಲಭೂತ ಅಗತ್ಯತೆ. ಜೀವನದ ಇತ್ಯಾತ್ಮಕ ಶಕ್ತಿಗಳನ್ನು ಕ್ರಿಯಾಶೀಲವನ್ನಾಗಿ ಮಾಡಬಲ್ಲ ಶಕ್ತಿ ಇರುವುದು ಅದೊಂದಕ್ಕೆ ಮಾತ್ರ. `ಸಖೀಗೀತ’ದ ಆಶಯ ಇದೇ.
ಈ ಸಾಲುಗಳಲ್ಲಿ ಅದನ್ನು ನೋಡಬಹುದು.
ಅದು ಇದೆ ಎದೆಯಲ್ಲಿ ಬೆಳಕಿನ ಬದಿಯಲ್ಲಿ
ರಸಗಂಗಾ ನದಿಯಲ್ಲಿ ಅದರುಗಮ
ಹೆಸರದಕೆ ಪ್ರೀತಿಯ ಹಿಗ್ಗಿನ ರೀತಿಯ ಆತ್ಮದ ನೀತಿಯ ಮ್ಧುಸಂಗಮ
(ಸಖೀಗೀತ)
ಇದು ಮುಗ್ಧ ಅಥವಾ ಲೋಲುಪ ಪ್ರೇಮದ ಆರಾಧನೆಯಲ್ಲ ಎಂಬುದು ಸ್ಪಷ್ಟವಾಗುತ್ತಾ ಹೋಗುತ್ತದೆ. `ನೃತ್ಯಯಜ್ಞ’ ಕವನದ ನವಿಲಿನ ಪ್ರಣಯ ನೃತ್ಯವನ್ನು ಅರ್ಥ ಮಾಡಿಕೊಳ್ಳಬೇಕಾದದ್ದು ಈ ಹಿನ್ನೆಲೆಯಲ್ಲಿಯೇ. ಈ ಮೊರೆವ ಕತ್ತಲು, ಮಳೆ, ಪ್ರಳಯವನ್ನು ನೆನಪಿಸುವ ಈ ವಾಸ್ತವದಿಂದ ಪ್ರಣಯ ಮಾತ್ರ ಅವರಿಬ್ಬರನ್ನು ಕಾಡಿದೆ. ಸೃಜನಶೀಲತೆಯತ್ತ ಒಯ್ದಿದೆ. ಕವನದ ಅನೇಕ ದ್ವಂದ್ವಮಾನ ಪ್ರತಿಮೆಗಳಲ್ಲಿ ಒಂದರ ಹಿಂದೆ ಸುಂದರ ಲಾಸ್ಯವನ್ನು ಇಲ್ಲಿ ಕಾಣಬುದುದು. ಪ್ರಳದಂತಿದ್ದ ಸ್ಥಿತಿ ಮುಂದಿನ ಸಾಲುಗಳಲ್ಲಿ ಶುಷ್ಟಿಗೆ ತಿರುಗುತ್ತದೆ. ( ೧೯೩೮ ರ `ಉಯ್ಯಾಲೆ’ ಸಂಕಲನದ `ಪ್ರಳಯ-ಸೃಷ್ಟಿ’ ಸಾನೆಟ್ಟಿನಲ್ಲಿ ಈ ಡಲೆಕ್ಟಿಕಲ್ ಪ್ರತಿಮೆ ಬೇರಿದೆ. ಅಲ್ಲಿ ಕೂಡ ನವಿಲಿನದೇ ಚಿತ್ರ). ಈ ಸ್ಥಿತಿ ಹಸಿರನ್ನು, ಸ್ಮೃದ್ಧತೆಯನ್ನು ತರುತ್ತದೆ. ಆದ್ದರಿಂದಲೇ, ಮಳೆಯ ಕುಣಿತ ಎರ್ರಾಬಿರ್ರಿಯಾಗದೆ ನೃತ್ಯದ ಲಯಕ್ಕೆ ತಿರುಗುತ್ತದೆ. ರೋಮಾಚಕಾರಿ ಚಿತ್ರಣ ಈ ಸಾಲುಗಳಲ್ಲಿದೆ.
” ಥಕ ಥೈ ಥೈ ದಿಕಿ ತಟ ತೋಂ ಇದೇ ಕಾಲ ಮಳೆಯದೋ
ಹಳ್ಳ ಕೊಳ್ಳ ಗಿರಿದರಿಯಲಿ ಹರಿಯುತ್ತಿಹ ಹೊಳೆಯದೋ
ಬರಲಿಹ ಬೆಳೆ ಪಯಿರಿನಲ್ಲಿ ಕುತುಕದಿಂದ ಕುಣಿವುದೋ
ಋತುರಾಜನ ಋತುಜಾತದ ಜೀವನದಲಿ ಋಣವಿದೋ
ಹಾಗಾದರೆ ಮೊದಲ ಸಾಲುಗಳಲ್ಲಿ ಕಂಡ ವಿರೋಧದ ಸ್ತಿತಿ ಮಾಯವಾಗಿ ಪೂರ್ಣ ಸಾಮರಸ್ಯ ಮೂಡುವುದೇ? ಮೇಲೆ ಉದ್ಧರಿಸಿದ ಸಾಲುಗಳಲ್ಲಿ ಈ ಸೂಚನೆಯೇನೊ ಸಿಗುತ್ತದೆ. ಪ್ರಳಯ-ಸೃಷ್ಟಿಗಳ ಮುಖಾಮುಖಿಯೇನೊ ಆಯಿತು. ಆದರೆ ಕವನದ ಮೊದಲಲ್ಲೇ ಕಂಡ ನವಿಲಿನ ಪ್ರತಿ-ಪ್ರಹಿಮೆ ಎಲ್ಲಿ? ಈ ಸಾಲುಗಲ್ಲಿ ಮೂಡುವ ಪ್ರತಿಮೆ ಸರ್ಪದ್ದೇ.
ಅನ್ನ ಅನ್ನ ಬುಸುಗುಡುತಿದೆ ಮಾನವ ನಾಗರವು
ತೆರೆ ತೆರೆಯಲಿ ತೆರೆಯಿತು ನವದುಃಖದ ಸಾಗರವು
ತಾರಕ ಸಂಹಾರಕನಾಗುತ ಅಗೊ ಕಂದರ್ಪ
ದರ್ಪದಿಂದ ಹೆಡೆ ಸೆಡೆಯುತತಾಂಡವಿಸಿತು ಸರ್ಪ
– ಈ ವಿರೊಧದ ನಾಟ್ಯ ಕೂಡಾ ಬೇಂದ್ರೆ ತಾತ್ವಿಕತೆಗೆ ಸಹಜವಾದದ್ದು. ಜೀವನ ಬರೀ ನವಿಲಿನ, ನಲಿವಿನ ಕುಣಿತ ಎಂದು ನಂಬುವಷ್ಟು ಅಶಿಕ್ಷಿತ ಮುಗ್ದತೆ ಬೇಂದ್ರೆಯವರಿಗಿಲ್ಲ. `ಕೋಲುಸಖಿ ಚಂದ್ರಮುಖಿ, ಕೋಲೆ ನಾದ ಲೀಲೆ” ಎಂದು ಕುಣಿವಾಗಲೇ “ ಅತ್ತಣಿಂದ ಬೇಟೆಗಾರ ಬರುವ” ಸಂಜ್ಞೆಯೂ ಕೆಲಸ ಮಾಡುತ್ತಿರುತ್ತದೆ. ಇಲ್ಲಿಯೂ ಅಷ್ಟೆ, ನವಿಲಿನ ಜೊತೆಗೆಯೇ ಸರ್ಪ. ಇವಿಲ್‌ನ ಅನಿವಾರ್ಯ ಅಸ್ತಿತ್ವವನ್ನು ಈ ಭಾಗ ಅತ್ಯಂತ ನಾಟಕೀಯವಾಗಿ ಪ್ರತಿನಿಧಿಸುತ್ತದೆ. ಅದಕ್ಕೆ ಮುಖಾಮುಖಿಯಾಗಲೇಬೇಕು. ಹೋರಾಡಲೇ ಬೇಕು. “ಅನ್ನ ಅನ್ನ ಬುಸುಗುಡುತಿದೆ ಮಾನವ ನಾಗರವು” ಎಂಬ ಸಾಲು ಸ್ವಾರಸ್ಯಕರವಾದದ್ದು. ಜೀವನದಲ್ಲಿ ಸೃಷ್ಟಿಶೀಲತೆಗೆ ಯಾವಾಗಲೂ ಪರಮವಿರೋಧಿಯಾದವುಗಳೆಂದರೆ ಬಡತನ, ಹಸಿವು. ಈ ಸಾಲಿನಲ್ಲಿ ಸಣ್ಣಗೆ ಮಿಂಚಿ ಹೋದ ಸಾಮಾಜಿಕ ನಿಲುವು ಮತ್ತೆ ಕೊನೆ ಸಾಲಿನಲ್ಲಿ ವಾಪಸಾಗುತ್ತದೆ.
ಆದರೆ ನವಿಲು ತಾನೇ ಸರ್ಪವನ್ನು ಕೊಲ್ಲಲಾರದಲ್ಲ. ಪ್ರೇಮ ಉನ್ನತ ಶಕ್ತಿಯಾಗಿ ಪರಿವರ್ತನೆಯಾದಾಗ ಮಾತ್ರ ಅದಕ್ಕೆ ಆ ಶಕ್ತಿ ಬರುತ್ತದೆ. ಇದಾಕಾಗಿಯೇ ಬೇಂದ್ರೆವರಲ್ಲಿ ಪ್ರೇಮಿ-ಕವಿ-ಭಕ್ತ ಈ ಮೂವರನ್ನೂ ರೂಪಿಸುವುದು ಒಂದೇ ದ್ರವ್ಯ. ಈ ಕಾಮ “ಮನದಾಚೆಗೇನೊ ಅರಿತು” ಚಿರಭಕ್ತಿಯಾಗಿ ಪರಿವರ್ತಿತವಾಗುತ್ತದೆ. ಈ ತಾತ್ವಿಕತೆಯನ್ನು ಬೇಂದ್ರೆ “ಕನ್ನಡ ಮೇಘದೂತ”ದ ಪೀಠಿಕೆಯಲ್ಲಿ ಹೇಳುತ್ತಾರೆ. ದಿವ್ಯಶಕ್ತಿಯ ಗಳಿಕೆ ಆ ಪ್ರಕ್ರಿಯೆ.
ನವಿಲು ಸಹಜವಾಗಿ ಆ ಸರ್ಪವನ್ನು ಕೊಲ್ಲಲು ತನಗಿಂತ ದೊಡ್ಡದಾದ ಇನ್ನೊಂದು ಶಕ್ತಿಯೊಂದಕ್ಕೆ ಪ್ರಾರ್ಥಿಸುತ್ತದೆ. ಪ್ರೀತಿಯ, ಆರ್ತತೆಯ, ಗಾಢಶ್ರದ್ಧೆಯ ಪ್ರಾರ್ಥನೆ ಅದು.ನವಿಲಿನ ಒಡೆಯನಾದ ಕುಮಾರಸ್ವಾಮಿಗೆ ಆಹ್ವಾನ. ನವಿಲು ಕುಣಿಯುತ್ತದೆ. ಒಲಸ್ವು ಉನ್ನತ ಸ್ಥಿತಿಗೇರುವ ಸೂಚನೆ.
“ಶಕ್ತಿ ಕಂದ ಶಿವನಂದನ ಶಿಖಿ ಸ್ಕಂದನ ಕರೆವೆ
ವಾಹನವಾಗಲು ಅರ್ಪಿಸಿ ಅವನಲಿ ಮೈದೆರೆವೆ.
ಅಗ್ನಿದೇಹಿ ಆತ್ಮಸ್ನೇಹಿ ಬಾರೋ ಬಾ” ಷಣ್ಮುಖಾ
ಚತುರಂಗದ ಚಾತುರ್ಯದ ಜ್ಞಾನ ಕರ್ಮ ಸಮ ಸುಖಾ.
ಶುಖಿಗಂಡನೆ ಮೈಗೊಂಡನೆ ಕಂಗೆಂಡನೆ ತೋರೈ
ದೇವತೆಗಳ ಸೇನಾಪತಿ ಭೂರಂಗಕೆ ಬಾರೈ.”
– ೩ –
ಕವನ ಮೈಝುಮ್ಮೆನ್ನುವಂಥ ನೆಲೆಗೆ ಹಾರುವುದು ಮುಂದಿನ ಸಾಲಿನಿಂದ. ಅಥವಾ ಇಲ್ಲಿಯತನಕ ಬೇರೆ ಬೇರೆ ರೂಪಗಳಲ್ಲಿ ಹರಿದು ಬರುತ್ತಿದ್ದ ಆಶಯವೊಂದು ಥಟ್ಟನೆ ನಿರ್ದಿಷ್ಟ ರೂಪವನ್ನು ತಳೆಯುತ್ತದೆ. ಇಲ್ಲಿಯತನಕ, ಜೀವನದ ಒಟ್ಟಾರೆ ಪ್ರತಿಮೆಯನ್ನು ಅನುಭವಿಸುತ್ತ ಬಂದ ನಾವು ಮುಂದಿನ ಸಾಲುಗಳಲ್ಲಿ ಥಟ್ಟನೆ ಕಲಾಮಯೂರವನ್ನು ಕಾಣುತ್ತೇವೆ. ಅದು ಕಾಣಿಸುವ ಪರಿಯಂತೂ ಅನನ್ಯವಾದದ್ದು.
“ಶಿಖಿ ಶಿಖಿ ಸಹಸ್ರನಖಿ ವರ್ಷಾ ವೀಣೆಯನೆ
ಬಾಜಿಸಿ ಪರ್ಜನ್ಯವ ಕರೆ ಅಂತರ್ಜ್ಞಾನಿಯನೆ”.
ಕಣಕಣದಲಿ ಕಣ್ ಕುಣಿಯಲಿ ಪರಮೇಷ್ಠಿಯ ಕಂಡು
ಸಾಮಾಷ್ಟಿಕ ಕ್ಷೇತ್ರದಲ್ಲಿ ವ್ಯಕ್ತಿಯ ಸುಖವುಂಡು
ಐಕ್ಯಸಮದ ಠಾಯಿಯಲ್ಲಿ ಬಹುವಧು ಉದ್ದೀಪ್ತ
ಆ ತುರಾಯಿ ಕುಣಿಸಿ ಕುಣೀ ಓ ಪ್ರಾಜ್ಞಾ ಸುಪ್ತಾ.
ಮಳೆಯೆಂಬ ವೀಣೆಯನ್ನು ಸಾವಿರ ಉಗುರುಗಳಲ್ಲಿ ಬಾರಿಸಲಾಗುತ್ತಿದೆಯಂತೆ. ಇಲ್ಲಿ ಬರುವ ವೀಣೆಯಿಂದಾಗಿ ಕವನ ನಿರ್ದಿಷ್ಟವಾಗಿ ಕಲೆಯ ಚಿಂತನೆಯ ಕಡೆಗೆ ತಿರುಗಿದೆಯೆಂದು ಹೇಳಬಹುದಾದರೂ, ಇದರ ಸೂಚನೆ ಹಿಂದಿನ ಸಾಲುಗಳಲ್ಲೇ ಇದೆ.ಅಥವಾ ಈ ಸಾಲುಗಳ ಬೆಳಕಿನಿಂದ ಹಿಂದಿನ ಸಾಲುಗಳನ್ನು ಬೇರೆ ರೀತಿಯಲ್ಲಿ ಅರ್ಥೈಸಬಹುದು. ಕಲೆಯೆಂಬ, ಕಾವ್ಯವೆಂಬ ನವಿಲು ತನಗಿಂತ ಉನ್ನತ ಶಕ್ತಿಯೊಂದರ ವಾಹನವಾಗಬೇಕು. ಅದು ತಾನೇ ಸ್ವಯಂಪೂರ್ಣವಲ್ಲ. ಕಾವ್ಯ ಅಗ್ನಿದೇಹಿ, ಆತ್ಮಸ್ನೇಹಿ ಆಗುವುದು ಆಗಲೇ. ಅದು ಆಯುಧವೂ ಆಗುತ್ತದೆ. ಪ್ರಾಣಸ್ನೇಹಿತನೂ ಆಗುತ್ತದೆ. ಈ ಕವನದ ಬಗ್ಗೆ ಒಂದೇ ಸಾಲಿನ ವಿವರಣೆ ಕೊಟ್ಟಿರುವ ಕವಿ ಹೇಳುತ್ತಾರೆ “ ಸಾಹಿತ್ಯ-ಕಾವ್ಯ ಬರೀ ವಿಲಾಸವಲ್ಲ. ಅದು ಕಲ್ಯಾಣ ಕರೆಯುವ ಮಯೂರ ನೃತ್ಯ ಯಜ್ಞರೂಪ.”
ಮೇಲೆ ಉದ್ಧರಿಸಿರುವ ಪದ್ಯಭಾಗದಲ್ಲಿ ಬೇಂದ್ರೆಯವರ ಕಾವ್ಯದರ್ಶನದ ಅತ್ಯಂತ ಸೂಕ್ಷ್ಮವಾದ ಒಳನೋಟಗಳನ್ನು ಕಾಣಬಹುದು. ಕಾವ್ಯದ ಬೇರು ಇರುವುದೇ ಸಮಷ್ಟಿ-ವ್ಯಷ್ಟಿಗಳು ಬೆರೆವ ನೆಲೆಯಲ್ಲಿ; ಕಾವ್ಯ ಅತ್ಯಂತ ಎತ್ತರದ ಅನುಭವ ಲೋಕಗಳನ್ನು ಒಳಗೊಳ್ಳುವುದು ಸುಪ್ತಪ್ರಜ್ಞೆಯಲ್ಲಿ ಹುದುಗಿರುವ ಶಕ್ತಿಯನ್ನು ಕೂಡಿಕೊಂಡಾಗ. ಆ ಶಕ್ತಿಯ ತುರಾಯಿ ಕುಣಿದಾಗಲೇ ಕಾವ್ಯಕ್ಕೊಂದು ಹೊಸ ತೇಜಸ್ಸು. ಅಕ್ಷರದ ಈ ಬ್ರಹ್ಮಕೃತ್ಯದ ಈ ನಿತ್ಯನೃತ್ಯ ನಡೆದರೆ ಮರ್ತ್ಯವೇ ಅಮರ್ತ್ಯವಾಗುತ್ತದೆ. ಈ ಪುರುಷ ನಾಟ್ಯವನ್ನು ಪ್ರಕೃತಿ ಬೆರಗಿನಿಂದ ನೋಡುತ್ತದೆ. ಮತ್ತೆ ಅದೇ ಗಂಡು-ಹೆಣ್ಣಿನ ಪುನರಾವರ್ತನೆ. ಕಾವ್ಯಸೃಷ್ಟಿ ಮತ್ತು ಜೀವನಕ್ಕೆ ಸಂಬಂಧಿಸಿದ ಹಾಗೇ ಅತ್ಯಂತ ಸೂಕ್ಷ್ಮವಾದ, ಸಂಕೀರ್ಣವಾದ ಅನುಭವಗಳಿಗೆ ಇದು ಶರೀರ ನೀಡಿದೆ ಎಂಬುದು ಸ್ಪಷ್ಟ.
– ೪ –
ಇಷ್ಟಕ್ಕೆ ನಿಂತಿದ್ದರೆ ಅಥವಾ ಇದೇ ವಿನ್ಯಾಸದಲ್ಲಿ ಮುಂದುವರಿದಿದ್ದರೆ ಈ ಕವನ ಬಹುಶಃ ಇಷ್ಟೊಂದು ಮಹತ್ವದ ಸ್ಥಾನವನ್ನು ಪಡೆಯುತ್ತಿರಲಿಲ್ಲ. ಏಕೆಂದರೆ ಇಲ್ಲಿಯತನಕ ಕವನದ ವಿನ್ಯಾಸ ಕ್ರಮ ಬೇಂದ್ರೆಯವರ ಶ್ರೇಷ್ಠ ಪ್ರಾತಿನಿಧಿಕ ಕವನಗಳ ವಿನ್ಯಾಸವೇ ಆಗಿದೆ. ಅದರ ಲಕ್ಷಣ – ಜೀವನದಲ್ಲಿ ಪರಸ್ಪರ ವಿರುದ್ಧದ ಶಕ್ತಿಗಳನ್ನು, ದ್ವಂದ್ವಗಳನ್ನು ತೀವ್ರವಾಗಿ ಮುಖಾಮುಖಿಯಾಗಿಸುವುದು. ನಂತರ ಈ ಘರ್ಷಣೆ ಪರಿವರ್ತನೆಯಾಗುತ್ತದೆ. `ಬೇಟೆಯಲ್ಲ, ಬೇಟವೆಲ್ಲ, ಬೇಟದ ಬಗೆ’ ಎಂಬ ಅರಿವು ಮೂಡಿ ಅದು ಮೂಲ ಪ್ರೇಮದಲ್ಲಿ ಒಂದಾಗುತ್ತದೆ. ಚಕ್ರ ತಿರುಗಿ ಸಾಮರಸ್ಯಕ್ಕೆ ನಿಲ್ಲುತ್ತದೆ. ಕುತೂಹಲದ ಸಂಗತಿ ಎಂದರೆ, ಈ ವಿನ್ಯಾಸಕ್ಕೆ ವಿರುದ್ಧವಾದ ಕವನಗಳೂ ಬೇಂದ್ರೆಯವರಲ್ಲಿ ಸಾಕಷ್ಟಿವೆ. ಅಂಥ ಒಂದು ವಿಶಿಷ್ಟಕೃತಿ ಇದು.
ಮೇಲೆ ಉದಾಹರಿಸಿದ ಭಾಗದಿಂದಾಚೆಗೆ ಈ ಕವನ ನಿಗೂಢವಾಗಿ ಬೆಳೆಯತೊಡಗುತ್ತದೆ. ಕುಮಾರಸ್ವಾಮಿಯ ಅವತಾರದ ಮೇಲೆ ಮೂಡಿದ್ದ ಸಾಮರಸ್ಯ ಒಡೆದು ಹೋಗುತ್ತದೆ. ಇಲ್ಲಿ ಕೆಲವು ಸಾಲುಗಳ ನಿರ್ದಿಷ್ಟ ಅರ್ಥಪೂರ್ಣವಾಗಿ ಈ ಲೇಖಕನಿಗೆ ದೊರೆತಿಲ್ಲ. ಆದರೂ ಸಮರಸದ ಜೀವನ ಮಾಯವಾಗಿದೆ ಎಂಬುದಂತೂ ಸ್ಪಷ್ಟವಗಿ ಅನುಭವಕ್ಕೆ ಬರುತ್ತದೆ. ಮತ್ತೆ ಜೀವನದ ಮೂಲಸ್ವರೂಪದ ಕಡೆಗೆ ಕವನ ತೀವ್ರತೆಯತ್ತ ಧಾವಿಸುತ್ತದೆ. ಅಲ್ಲಿ ಕಂಡಿದ್ದೇನು? ಕೊನೆಯ ಈ ಎರಡು ಸಾಲುಗಳ ಶಬ್ಧವಂತೂ ರುದ್ರಸೌಂದರ್ಯದ ಶೃಂಗ.
ಹಾ ಭಯವೋ ಓ ನಿದ್ದೆಯೋ ಮಿಥುನದ ಒಲವೋ
ರೌದ್ರದ ಮೊರೆಹೇಸಿಗೆ ಹೊರೆ ಮಾನವ ದಳವೋ.
ಅಶಿಕ್ಷಿತ ಆಶಾವಾದತ್ತ ಜಾರಬಹುದಾಗಿದ್ದ ಸ್ಥಿತಿ ಈಗ ಇಲ್ಲವಾಗಿದೆ. ಭೀತಿ, ಆತಂಕ ಇಲ್ಲಿ ದೊರೆಯುತ್ತದೆ. ಆದರೆ ಹಾಗೆಂದು ನಿರಾಶಾವಾದವೂ ಇದಲ್ಲ. ನೀಷೆ ಹೇಳಿದ: ಸರಳ ಆಶಾವಾದ ಪೊಳ್ಳು ಮನಸ್ಸಿನದು. ನಿರಾಶಾವಾದ ಶಿಥಿಲ ಮನಸ್ಸಿನದು. ಅತ್ಯಂತ ಗಟ್ಟಿ ಮನಸ್ಸಿನ ಸ್ಥಿತಿ ಎಂದರೆ ರುದ್ರ ಆಶಾವಾದ. ಈ ರೀತಿಯ ಸ್ಥಿತಿಯನ್ನು ನಾವಿಲ್ಲಿ ಕಾಣುತ್ತೇವೆ. ಮನುಷ್ಯ ಜೀವನದ ಅದು ಮಿತಿಗಳೆಂದರೆ ಆಹಾರ, ಭಯ, ನಿದ್ರೆ,ಚಿಂತೆ, ಮೈಥುನ. ಇವುಗಳನ್ನು ಮೂಲರೂಪದಲ್ಲಿ ಎದುರಿಸಿದಾಗ ಮನುಷ್ಯ ಚೇತನ ತತ್ತರಿಸಿ ಹೋಗುತ್ತದೆ, ಮಂಕು ಹಿಡಿದು ಕೂರುತ್ತದೆ. ಇವುಗಳ ಜೊತೆಗೆ ರೌದ್ರ ಹಾಗು ಹೇಸಿಗೆಗೆಗಳ ಹೊಡೆತ ಬೇರೆ. ಇವುಗಳ ವಿರುದ್ಧ ಹೋರಾಡುವಾಗ ಜೀವನದಲ್ಲಿ ಸಾಮರಸ್ಯ ಎಲ್ಲಿರಲು ಸಾಧ್ಯ? ಈ ರೌದ್ರದ ಮೊರೆ ಹೇಸಿಗೆ ಹೊರೆಯ ಮುಂದೆ ಮಾನವ ಹೂವಿನ ಎಸಳಿದ್ದಹಾಗೆ. ಈ ಸುಕುಮಾರ ಹೂವೆತ್ತ ನಿಲ್ಲಬಲ್ಲದು! ಭೀತಿಯ ನೀರಿನಲ್ಲಿ ಪೂರಾ ಮುಳುಗಿದ ಹಾಗೆ, ಉಸಿರು ಕಟ್ಟುವ ಸ್ಥಿತಿ. ಅದರ `ಮಾನವದಳವೋ’ ಎಂಬ ಪದಕ್ಕೆ ಇನ್ನೊಂದು ಅರ್ಥವೂ ಇದೆ. ಇವೆರಡರ ಮುಂದೆ ಮಾನವ ದಳ ಅಂದರೆ ಸೇನೆ ಸಜ್ಜಾಗಿ ನಿಂತಿದೆ. ಹೋರಾಟ ನಡೆಯುತ್ತಲೇ ಇರುತ್ತದೆ.
ಈ ಸೃಷ್ಟ್ಯಾತ್ಮಕ ಸಂಧಿಗ್ಧತೆ ಕೊನೆಯ ಸಾಲಿನಲ್ಲಿ ಮೂಡಿ ಬಂದು ಇಡೀ ಕವನದ ಬೆಳವಣಿಗೆಯನ್ನು ಇನ್ನೊಂದು ನಿಟ್ಟಿನಿಂದ ನೋಡಲು ಸಾಧ್ಯವಾಗುವಂತೆ ಮಾಡುತ್ತದೆ.
*****