ಆಬೋಲೀನ

ದಿನವೂ ನಮ್ಮ ಮನೆಗೆ ಹೂವು ತರುವ ಹುಡುಗಿ ಅಂದು ಅಬ್ಬಲಿಗೆ ಹೂವು ತಂದಾಗ ನನಗೇಕೋ ಒಮ್ಮೆಲೇ ಆಬೋಲೀನಳ ನೆನಪು ಬಂತು. ಅಬ್ಬಲಿಗೆ ತನ್ನ ಮೆಚ್ಚುಗೆಯ ಹೂವು: ಕೊಳ್ಳಬೇಕು ಅನ್ನಿಸಿತು. ಆದರೆ ಮರುಗಳಿಗೆ, ಈ ಹೂವು ತನ್ನೊಡನೆ ತಂದ-ನಮ್ಮನ್ನು ಎಂದೋ ಅಗಲಿದ ನನ್ನ ಪ್ರೀತಿಯ ಗೆಳತಿ ಆಬೋಲೀನಳ ನೆನಪಿನಿಂದ ಜೀವ ಕಳವಳಿಸಿತು. ನನ್ನ ಮೋರೆಯ ಮೇಲೆ ಆಗ ಯಾವ ಭಾವ ಮೂಡಿತ್ತೊ: ಹತ್ತಿರವೇ ನಿಂತ ಇವರು ಕೇಳಿದರು: ಏನಾಯಿತೇ ಸುಮತಿ, ಕೊಳ್ಳಲ್ಲ-ನಿನ್ನ ಪ್ರೀತಿಯ ಹೂವು ಎಂದು ಒತ್ತಾಯಪಡಿಸಿದರು. ಹೂ ಜಡೆಯನ್ನೇನೋ ಕೊಂಡೆ: ಆದರೆ ಮೊದಲಿನ ಉತ್ಸಾಹದಿಂದಲ್ಲ. ಇತ್ತಲಾಗಿ ಅನೇಕ ದಿನಗಳಿಂದ ಹೀಗೆ ಬಂದಿರದ ಆಬೋಲೀನಳ ನೆನಪು ಅಂದೇ ಏಕೆ ಬಂತೋ!
ಹೂವು ಮುಡಿದು, ಶೃಂಗರಿಸಿಕೊಂಡು ಅಂದು ಗಾಳಿವಿಹಾರಕ್ಕೆ ಹೊರಗೆ ಹೋದಾಗ ಇವರಿಗೆ ನನ್ನ ಮನಸ್ಸನ್ನು ಕದಡಿದ ಆಬೋಲೀನಳ ಕತೆ ಹೇಳಿದೆ.

ಆಬೋಲೀನ ನನ್ನ ಹುಟ್ಟಿದೂರಿನ ಕ್ರಿಶ್ಚನ್ ಹುಡುಗಿಯೊಬ್ಬಳು-ನಮ್ಮ ಮನೆಯ ಮುಂದಿನ ಓಣಿಯ ಆಚೆಕೇರಿಯ ಕೈತಾನನ ಮಗಳು. ಮನೆಯಲ್ಲಿ ಆಡುವ ಭಾಷೆ ಕೊಂಕಣಿ. ಕೊಂಕಣಿಯಲ್ಲಿ ಅಬ್ಬಲಿಗೆ ಹೂವಿಗೆ ‘ಆಬೋಲೆಂ’ ಎನ್ನುತ್ತಾರೆ. ಆಬೋಲೀನ ಹೆಸರು ಈ ಹೂವಿನ ಹೆಸರಿನಿಂದಲೇ ಬಂದಿರಲಿಕ್ಕಿಲ್ಲವಷ್ಟೇ? ಏನೋ! ಆದರೆ ಆಬೀಲೀನಳು ಮಾತ್ರ ನಿಜಕ್ಕೂ ಹೂವಿನಂತಹ ಹುಡುಗಿ. ಕೋಮಲ ಮನಸ್ಸಿನವಳು: ಸಿಹಿಯಾದ ಹೃದಯದವಳು. ಅಂತೆಯೇ ಬಂದಿರಬೇಕು ಅವಳ ನೆನಪು ಅಂದು ಹೂವು ಕೊಳ್ಳುವಾಗ.

ಅಬ್ಬಲಿಗೆ ವಾಸನೆಯಿಲ್ಲದ ಹೂ-ಅಲ್ಲ ವಾಸನೆ ಹೊರಚೆಲ್ಲದ ಹೂ. (ಏಕೋ ನಿರ್ಗಂಧ ಕುಸುಮದ ಕಲ್ಪನೆಯೇ ನನಗೆ ಸಹಿಸದು.)ಆಬೋಲೀನಳೂ ಒಳಮನಸ್ಸಿನ ಹುಡುಗಿ, ಒಳ ವಿಚಾರದ ಹುಡುಗಿ-ಈ ವಾಸನೆ ಕೊಡದ ಅಬ್ಬಲಿಗೆ ಹೂವಿನಂತೆ.

ಆಬೋಲೀನಳ ಬಗ್ಗೆ ಇಂತಹ ವಿಚಾರ ಬಂದಾಗೆಲ್ಲ ನನಗೆ ತಪ್ಪದೇ ಕಣ್ಣಮುಂದೆ ಕಾಣುತ್ತಿದ್ದುದು ಅವಳ ಲಗ್ನದ ದಿನ-ಹೆಣ್ಣು ಮಕ್ಕಳಿಗೆ ತಮ್ಮ ಜೀವನದಲ್ಲೇ ಅತ್ಯಂತ ಸುಖದ ದಿನ-ಮದುಮಕ್ಕಳ ಮೆರವಣಿಗೆಯಲ್ಲಿ ನೋಡಿದ ಅವಳ ಮೋರೆ. ಅವಳು ಈ ಲಗ್ನಕ್ಕೆ ಹೇಗೆ ಒಪ್ಪಿಕೊಂಡಳೋ? ಅವಳೇ ಒಪ್ಪಿಕೊಂಡಳೆ? ಇಲ್ಲವೇ ತಂದೆಯ ಬಲಾತ್ಕಾರವೇ? ಹಾಗಾದರೆ ಅವಳಿಗೆ ತನಗಾದ ಅನ್ಯಾಯದಿಂದ ಸಿಟ್ಟೇ? ದುಃಖವೇ? ಇಲ್ಲ-ಇಂತಹ ಯಾವ ಭಾವವೂ ಆ ಮೋರೆಯ ಮೇಲೆ ಮೂಡಿರಲಿಲ್ಲ. ಅತಿ ಶಾಂತ, ಅತಿ ಮುಗ್ಧ-ನಿಷ್ಪಾಪ ಮಗುವಿನಂತೆ. ಆನಂದವೋ ದುಃಖವೋ ಯಾವುದರ ಲವಲೇಶವೂ ಅವಳ ಮೋರೆಯಲ್ಲಿ ಕಾಣಲಿಲ್ಲ, ಆಗ.

ಆದರೂ ನನಗನಿಸಿತ್ತು, ನಮಗೆಲ್ಲ ಅನಿಸಿತ್ತು-ಊರಿಗೆ ಊರೇ ಮರುಗಿತ್ತು. ಈ ಮದುವೆಯಲ್ಲೇನೋ ಮೋಸವಿದೆ. ಇದು ಆಬೋಲೀನಳು ಬಯಸಿದ ಮದುವೆಯಲ್ಲ. ಯಾವ ಹುಡುಗಿಯೂ ಜನ್ಮಜನ್ಮಾಂತರದಲ್ಲಿ ಪಡೆಯಬಾರದಂತಹ ಒಬ್ಬ ದುಷ್ಟ ಹುಂಬನನ್ನು-ಮನವೇಲನನ್ನು-ಹೂವಿನಂತಹ ಆಬೋಲೀನ ಮದುವೆಯಾಗಲು ಒಪ್ಪುವುದೆಂತು?

ಅದಾಗಲೇ ನಮ್ಮ ಕೇರಿಯಲ್ಲಿ ಈ ಲಗ್ನವನ್ನು ಕುರಿತು ತರ್ಕ ಕುತರ್ಕ ನಡೆದಿದ್ದವು. ಆದರೆ ನನಗೆ ಮಾತ್ರ ಈ ಲಗ್ನದ ವಿಷಯ ತಿಳಿದದ್ದು, ಲಗ್ನಕ್ಕಿಂತ ಎಷ್ಟೋ ದಿನಗಳ ಮೊದಲೇ-ನನ್ನ ತಂದೆತಾಯಂದಿರ ಮುಖಾಂತರ.

ತಂದೆಯವರಿಗೆ ಅಂಗಡಿಯಿಂದ ಬರಲು ರಾತ್ರೆ ಹತ್ತರ ಮೇಲಾಗುತ್ತಿತ್ತು. ಅಷ್ಟು ಹೊತ್ತಿಗೆ ನಾವು ಮಕ್ಕಳೆಲ್ಲ ಊಟ ಮುಗಿಸಿ ನಿದ್ದೆಹೋಗುತ್ತಿದ್ದೆವು. ಆಗ ಸೆಖೆಯ ದಿನಗಳಾದ್ದರಿಂದ ನಾವೆಲ್ಲ ಹೊರಗೆ, ಚಪ್ಪರದ ಕೆಳಗೆ ಅಂಗಳದಲ್ಲೇ ಮಲಗುತ್ತಿದ್ದೆವು; ತಾಯಿ, ನನ್ನ ತಮ್ಮ-ತಂಗಿಯರು, ನಾನು ಒಂದೆಡೆ; ಹಾಗೂ ಇನ್ನೊಂದೆಡೆ ನಮ್ಮಿಂದ ಎರಡು ಮಾರು ಜಾಗ ಬಿಟ್ಟು ತಂದೆಯವರು. ಅಂದು ತಂದೆಯವರು ಊಟ ಮುಗಿಸಿ ಹಾಸಿಗೆಗೆ ಬಂದಾಗ ಹೇಗೋ ನನಗಿನ್ನೂ ಎಚ್ಚರವಿತ್ತು. ತಂದೆಯವರು ಹಾಸಿಗೆಯಲ್ಲಿ ಕುಳಿತು ಬೀಡಿ ಸೇದುತ್ತಿದ್ದರು.

ಕೆಲಹೊತ್ತಿನ ನಂತರ ತಾಯಿಯವರು ತಮ್ಮ ಊಟ, ಒಳಗಿನ ಕೆಲಸ ಮುಗಿಸಿ, ಜಗಲಿಯ ಮೇಲಿನ ಕಂದೀಲಿನ ದೀಪವನ್ನು ಸಣ್ಣದು ಮಾಡಿ, ನನ್ನ ಬಳಿಯ ಹಾಸಿಗೆಯಲ್ಲಿ ಅಡ್ಡಾದರು. ಅಂಗಳದಲ್ಲಿಯ ನಸುಗತ್ತಲೆಯಲ್ಲಿ ತಂದೆಯವರು ಬಾಯಲ್ಲಿಯ ಬೀಡಿಯ ಬೆಂಕಿ ವಿಚಿತ್ರ ಕಾಣುತ್ತಿತ್ತು. ಸುತ್ತಲೆಲ್ಲ ನೀರವತೆ. ಹಗಲೆಲ್ಲ ದುಡಿದು ದಣಿದ ಕೇರಿಗೆ ಕೇರಿಯೇ ನಿದ್ದೆಯ ಸಿದ್ಧತೆಯಲ್ಲಿತ್ತು. ಎಲ್ಲೋ ದೂರ ಒಕ್ಕಲ ಕೇರಿಯಿಂದ ಕೇಳಿಬರುತ್ತಿದ್ದ ಗುಮ್ಟೆಗಳ ಸದ್ದೋ, ಅಗೇರ ಮುರ್ಕುಂಡೀ ಮನೆಯ ನಾಯಿಗಳ ಬೊಗಳೋ ಅಷ್ಟೇ ಈ ನೀರವತೆಯನ್ನು ಕದಡುತ್ತಿದ್ದವು ಆಗೀಗ. ಅದಾಗ ತಂದೆಯವರು ಪಿಸುದನಿಯಲ್ಲಿ ಅಮ್ಮನ ಹತ್ತಿರ ಮಾತನಾಡಹತ್ತಿದರು. ದನಿಯಲ್ಲಿ ನಮ್ಮ ನಿದ್ದೆ ಕೆಡಬಾರದು ಎಂಬ ಹೇತುವಿಗಿಂತ ಹೆಚ್ಚಾಗಿ ತಾವು ಆಡಲಿರುವ ವಿಷಯ ತುಂಬ ಅಂತರಂಗದ್ದು ಎನ್ನುವುದು ವ್ಯಕ್ತವಾಗುತ್ತಿತ್ತು. ಅಂತರಂಗದ ಮಾತೇ ಹಾಗೆ; ಸುತ್ತಲೂ ಕೇಳಲು ನಮ್ಮನ್ನು ಬಿಟ್ಟು ಇನ್ನೊಬ್ಬರಿಲ್ಲದಿದ್ದರೂ ತಗ್ಗಿದ ದನಿಯಲ್ಲಿ ಆಡುತ್ತೇವೆ! ಮಾತುಗಳು ಎಂಥಹುದೋ ಭೀತಿಯಿಂದ, ಕಾತರತೆಯಿಂದ ಹೆಪ್ಪುಗಟ್ಟಿದಂತೆ ತಡೆತಡೆದು ಸಾವಕಾಶ ಬರುತ್ತಿದ್ದವು. ನನಗೆ ಈಗಲೂ ನಿಚ್ಚಳವಾಗಿ ನೆನಪುಳ್ಳ ನನ್ನ ಚಿಕ್ಕಂದಿನ ಕೆಲವೇ ಒಂದು ಅನುಭವಗಳಲ್ಲಿ ಈ ಸಂಭಾಷಣೆಯೂ ಒಂದು:
“ಇಂದು ಕೈತಾನ ಬಂದಿದ್ದ ಅಂಗಡಿಗೆ.”
“ಹೂಂ?”
“ಆಬೋಲೀನಳ ಮದುವೆ ನಿಶ್ಚಯವಾಗಿದೆಯಂತೆ.”
“ಹೂಂ.?”
“ನಿನಗೆ ಗೊತ್ತಿತ್ತೇ?”
“ಪದ್ಮಾವತಿ ಏನೋ ಅಂದಂತ್ತಿತ್ತು.”
“ನೀನು ನನಗೇನೂ ಹೇಳಲಿಲ್ಲವಲ್ಲ?”
“ತಾನಾಗಿಯೇ ಗೊತ್ತಾಗುತ್ತಿತ್ತು…..ಮುಚ್ಚಿಡುವ ಸಂಗತಿಯೇನಲ್ಲ…..”
“ಆದರೆ ….. ಹುಡುಗ….?”
“ಮನವೇಲನಲ್ಲವೇ?”
“ಅಹುದು….ಒಳ್ಳೇ ಬಂಗಾರದಂತಹ ಹುಡುಗಿ….ಎಲ್ಲರನ್ನೂ ಬಿಟ್ಟು ಆ ಫಟಿಂಗನಿಗೆ….”
“ನೀವು…(ಕೈತಾನನನ್ನು)ಕೇಳಲಿಲ್ಲವೆ?”
“ಕೇಳದೇ ಇರಲಾಗುತ್ತದೆಯೆ? ಸರಿಯಾಗಿ ಏನೂ ಹೇಳಲಿಲ್ಲ. ಏನೋ ಸುತ್ತುಸುತ್ತಾಗಿ ಪಾದ್ರಿಯ ಒತ್ತಾಯ ಎಂದ.”
“ವಯಸ್ಸು ಇನ್ನೂ ತೀರ ಚಿಕ್ಕದು….ಬರಿಯೆ ಹದಿನಾಲ್ಕೋ ಹದಿನೈದೋ!….ಪಾದ್ರಿಯ ಒತ್ತಾಯ ಎಲ್ಲಿ ಬಂತು?”
“ಅಂದಂತೆ ಮನವೇಲನಿಗೆ ಮುವ್ವತ್ತರ ಮೇಲೇ ಆಗಿರಬೇಕು. ಈಗಾಗಲೇ ಇಬ್ಬರು ಹೆಂಡಂದಿರನ್ನು ಕಳಕೊಂಡವ….ದುರ್ವ್ಯಸನಿ…”
“ಅಂದ ಬಳಿಕ ಕಣ್ಣಿದ್ದ ಯಾರೂ ಒತ್ತಾಯ ಪಡಿಸುವ ಮಾತು ಅಲ್ಲವಲ್ಲ?”
“ಏನೋ…..ಕೈತಾನನಿಗೂ ಈ ಮದುವೆ ಒಪ್ಪಿಗೆ ಇದ್ದಂತಿಲ್ಲ…..ಹೋಗುವಾಗ ಕಣ್ಣಲ್ಲಿ ನೀರು ಕಂಡಂತಿತ್ತು.
“ಹಣಕ್ಕಾಗಿ ಬಂದಿದ್ದನೇ?”
“೫೦ ರೂಪಾಯಿ ಬೇಕಿತ್ತು- ಕೊಟ್ಟೆ.”
“ಮದುವೆಗೆ ಕಾರಣ ಬೇರೆಯೇ ಏನೋ ಇರಬೇಕು.”
“ಪದ್ಮಾವತಿಗೆ ಗೊತ್ತಿದೆಯೇ?”
“ಹುಡುಗಿ ಮೇಲೆ ಕಾಣಿಸುವಷ್ಟು ಸಂಭಾವಿತಳಲ್ಲ ಎಂದಳು.”
“ಛೇ ಛೇ! ಅವಳಿಗೆ ಎಂದಿಗೂ ಸಂಶಯವೇ! ಆದರೆ ಆಬೋಲೀನಳ ವಿಷಯಕ್ಕೂ?”
“ನಾನು ಹಾಗೆಯೇ ಅಂದೆ.”
“ಏನಂತೆ?”
“ಎರಡು ತಿಂಗಳು ಹೋಗಿವೆಯಂತೆ.”
“ಅಯ್ಯೋ ಭಗವಂತ ಯಾರು?”
“ಅವನೇ…”
“ಮನವೇಲ?”
“ಹೂಂ.”

ಕತ್ತಲೆಯಲ್ಲಿ ಹೊರಟ ಈ ಮಾತುಗಳನ್ನು ಆಡಿದವರ ಮೋರೆಗಳು ನನಗೆ ಕಾಣಿಸುತ್ತಿರಲಿಲ್ಲ; ಅವನ್ನು ನೋಡುವ ಧೈರ್ಯವೂ ನನಗೆ ಇರಲಿಲ್ಲ. ಆದರೆ ಆ ಮಾತುಗಳ ಹಿಂದೆ ಆಬೋಲೀನಳ ಬಗ್ಗೆ ಇದ್ದ ಅಪಾರ ಪ್ರೀತಿ, ಕಳವಳ, ಅವಳ ಭವಿಷ್ಯತ್ತನ್ನು ಕುರಿತಿದ್ದ ಚಿಂತೆ ಭೀತಿ ಇವು ನನ್ನ ಮನಸ್ಸಿನ ಮೇಲೆ ನಾಟುತ್ತಿದ್ದವು.

ಪದ್ಮಾವತಿ ನಮ್ಮ ನೆರೆಮನೆಯ ಹೆಂಗಸು. ನಾವೆಲ್ಲ ಕರೆಯುವುದು ಪದ್ಮಕ್ಕ ಎಂದು ಪದ್ಮಕ್ಕನಿಗೆ ಆಬೋಲೀನಳ ಕುರಿತು ವಿವರ ಪೂರ್ಣ ಮಾಹಿತಿ ಇದ್ದಂತಿತ್ತು. ಅದು ಅವಳಿಗೆ ಹೇಗೆ ಯಾವಾಗ ದೊರಕಿತೊ ದೇವರೊಬ್ಬ ಬಲ್ಲ. ಆದರೆ ಇಷ್ಟೊಂದು ನಿಜ: ಊರಲ್ಲಿ ನಡೆಯುವ ಇಂತಹ ಎಲ್ಲ ಸಂಗತಿಗಳು ತಿಳಿಯುವುದೇ ಅವಳಿಗೆ ಮೊದಲು! ಆದರೆ ಆಬೋಲೀನಳ ಬಗ್ಗೆ ತಿಳಿದ ಸಂಗತಿ ನಿಜವಾದುದೇ? ದೇವರೇ ಅದು ಸುಳ್ಳಾಗಲಿ!….

ಆದರೆ ಅದು ಸುಳ್ಳಾಗುವ ಬಗೆ ಹೇಗೆ? ಇಂತಹ ಯಾವುದೇ ಕಾರಣ ಇದ್ದ ಹೊರತು ಕೈತಾನ ತನ್ನ ಒಬ್ಬಳೇ ಮಗಳಾದ ಆಬೋಲೀನಳನ್ನು, ಹದಿನಾಲ್ಕು ವರುಷದ ಎಳೆಮಗುವನ್ನು-ಮನವೇಲನಂತಹ ಹುಂಬನಿಗೆ ಕೊಡಲು ಒಪ್ಪುವುದೆಂತು? ಪದ್ದಕ್ಕ ತಂದ ಸುದ್ದಿಯೇ ನಿಜ ಹಾಗಾದರೆ.
ಆಬೋಲೀನ ಲಗ್ನವಾಗುವ ಮೊದಲೇ ಗರ್ಭಿಣಿ? ಹದಿನಾಲ್ಕು ವರುಷದ ಹೊಟ್ಟೆಯಲ್ಲಿ ಇನ್ನೊಂದು ಮಗು?

ಈ ಸಂಗತಿ ನನಗೂ ಗೊತ್ತಿತ್ತು. ಸ್ವತಃ ಆಬೋಲೀನಳ ಬಾಯಿಯಿಂದಲೇ ತಿಳಿದಿತ್ತು. ಅದೂ ಯಾವ ರೀತಿಯಲ್ಲಿ! ನೆನಪು ಮಾಡಿದರೆ ಈಗಲೂ ಜೀವ ಬೆಚ್ಚುತ್ತದೆ!

ಕೈತಾನನ ಮನೆ ನಮ್ಮ ಮನೆಯ ಇದಿರಿನ ಕೇರಿಯಲ್ಲೇ ಇತ್ತು-ಓಣಿಯ ಆ ಬದಿಯಲ್ಲಿ. ಉದ್ಯೋಗದಿಂದ ಗಾಣಿಗನವ. ಖೊಬ್ಬರಿ ಹಾಗೂ ಸುರಗೀಕಾಯಿಗಳ ಎಣ್ಣೆಯನ್ನು ನಮ್ಮ ಹಾಗೂ ನೆರೆಯ ಹಳ್ಳಿಗಳಲ್ಲಿ ಮಾರುತ್ತಿದ್ದ. ಮನೆಯಲ್ಲಿ ಮೂರೇ ಮಂದಿ-ಕೈತಾನ, ಆಬೋಲೀನ ಹಾಗೂ ಅವಳ ಕಿರಿಯ ತಮ್ಮ ಬಸ್ತ್ಯಾಂವ. ಕೈತಾನ ತನ್ನ ಹೆಂಡತಿಯನ್ನು ಕಳಕೊಂಡು ಆಗ ಹತ್ತು ವರ್ಷಗಳ ಮೇಲೆ ಆಗಿರಬೇಕು. ಅವಳು ಸಾಯುವಾಗ ಬಸ್ತ್ಯಾಂವ ಒಂದು ವರ್ಷದ ಕೂಸು. ತಮ್ಮ ಬಾಲ್ಯದಲ್ಲಿಯೇ ತಾಯನ್ನು ಕಳಕೊಂಡ ಈ ತಬ್ಬಲೀ ಜೀವಿಗಳಿಗೆ ಕೈತಾನನೇ ತಾಯಿಯಾದ. ಅವನು ಅವರಿಬ್ಬರನ್ನು ನೋಡಿಕೊಂಡು ಬಂದ ರೀತಿಯಲ್ಲಿ ಮಮತೆ, ವಾತ್ಸಲ್ಯ ಅಪಾರ. ನಾನು ಚಿಕ್ಕಂದಿನಲ್ಲಿ ಕೈತಾನನ ಮನೆಗೆ ಹೋಗಿದ್ದೇನೆ, ಲೆಕ್ಕವಿಲ್ಲದಷ್ಟು ಸಲ. ಸಾಲೆ ಬಿಟ್ಟ ಬಳಿಕ ಸಂಜೆ ತಿರುಗಾಡ ಹೋಗುವುದು ಒಂದೇ ಆಬೋಲೀನಳ ಮನೆಗೆ ಇಲ್ಲವೇ ಚಾ ಅಂಗಡಿಯ ಸರ್ವೋತ್ತಮನ ತಂಗಿ ಸರಸ್ವತಿಯ ಮನೆಗೆ. ಆದರೆ ತುಸು ದೊಡ್ಡವಳಾದ ಬಳಿಕ ಸರ್ವೋತ್ತಮನ ಬಗ್ಗೆ ನನಗೆ ಚೇಷ್ಟೆ ಮಾಡುತ್ತಿದ್ದರಿಂದ ನಾನು ಅಲ್ಲಿ ಹೋಗುವುದನ್ನೇ ಬಿಟ್ಟುಕೊಟ್ಟಿದ್ದೆ. ಆಬೋಲೀನಳ ಮನೆಯವರೇ ನನ್ನ ಚಿಕ್ಕಂದಿನ ಗೆಳೆಯರು; ಕೈತಾನ, ಆಬೋಲೀನ, ಬಸ್ತ್ಯಾಂವ-ಎಲ್ಲರೂ.

ಇವರು ಮೂವರೂ ತಮ್ಮ ಮನೆಯ ಉದ್ಯೋಗವಾದ ಗಾಣದ ಕೆಲಸದಲ್ಲಿ ನಿರತರಾದಾಗ ನೋಡುತ್ತ ನಿಲ್ಲುವುದೆಂದರೆ ನನಗೊಂದು ಹಬ್ಬ. ಕೈತಾನ ಹಾಗೂ ಬಸ್ತ್ಯಾಂವ ಅತಿ ಉತ್ಸಾಹದಿಂದ ಗಾಣದ ನೊಗವನ್ನು ತಾವೇ ಹೊತ್ತು ಸುತ್ತು ತಿರುಗುತ್ತಿದ್ದರು. ಆಬೋಲೀನ ಗಾಣದ ಮೇಲೆ ಏರಿ ಕೂತು ಗಾಣದ ಒರಳಿನಲ್ಲಿ ಹಿಂಡಿಯನ್ನು ಸರಿಪಡಿಸುತ್ತ ಇವರಿಬ್ಬರನ್ನು ಹುರಿದುಂಬಿಸುತ್ತಿದ್ದಳು-ಹಾಡುತ್ತ, ನಗುತ್ತ.

ಒಂದು ರೀತಿಯಿಂದ ಕೈತಾನ ಹಾಗೂ ಬಸ್ತ್ಯಾಂವರಿಗೆ ಆಬೋಲೀನಳೇ ತಾಯಿ ಎನ್ನಬೇಕು. ಕೈತಾನನೇ ತನ್ನ ತಾಯ ಮುಂದೆ ಇಂತಹ ಉದ್ಗಾರ ತೆಗೆದ ನೆನಪಿದೆ. ಅವಳು ಅವರಿಬ್ಬರನ್ನು ನೋಡಿಕೊಳ್ಳುವ ರೀತಿಯೇ ಹಾಗೆ: ಮನೆಯ ಯಜಮಾನಿಯಾಗಿ. ಬಸ್ತ್ಯಾಂವ ಏನೂ ಅರಿಯದ ಕೂಸು. ಕೈತಾನ ಮುದುಕನಲ್ಲದಿದ್ದರೂ ವಯಸ್ಸು ದಾಟಿದವ. ಮನೆ ನಡೆಸಿಕೊಂಡು ಹೋಗುವ ಜವಾಬುದಾರಿಯೆಲ್ಲ ಆಬೋಲೀನಳ ಮೇಲೆ. ವಯಸ್ಸು ಬರಿಯೇ ಹದಿನಾಲ್ಕು ಆದರೂ ಅವಳ ದೇಹದ ಬೆಳವಣಿಗೆಯಿಂದ, ಸಂಸಾರ ನಡೆಸುವ ದಕ್ಷತೆಯಿಂದ ಅವಳ ವಯಸ್ಸನ್ನು ನಂಬುವುದು ಕಷ್ಟ. ತುಂಬಿದ ದಷ್ಟಪುಷ್ಟ ಮೈ; ಎತ್ತರದ ನಿಲುವು; ನೀಳವಾದ ಕೂದಲು; ಸಾದಗಪ್ಪು ಮೈ ಬಣ್ಣ-ಸುಂದರಳಲ್ಲ, ಬಲು ಮೋಹಕಳು.

ನಾನಂದು ಸಂಜೆ ಸಾಲೆ ಬಿಟ್ಟವಳೇ ಕೈತಾನನ ಮನೆಗೆ ಹೋದಾಗ ಗಾಣದ ಮನೆಯಲ್ಲಿ ಯಾರೂ ಇರಲಿಲ್ಲ. ಅಚ್ಚರಿಯಾಯಿತು. ಆಬೋಲೀನಳನ್ನು ಹುಡುಕುತ್ತ ಹಿಂದಿನ ಜಗಲಿಗೆ ಹೋದೆ. ಅವಳು ಹಿಂದಿನ ಅಂಗಳದಲ್ಲಿಯ ಬಾವಿ ಕಟ್ಟೆಯ ಬಳಿಯಲ್ಲಿ ಕುಳಿತಿದ್ದಳು. ಬಿಚ್ಚಿದ ತನ್ನ ಕೂದಲನ್ನು ಬೆನ್ನಮೇಲೆ ಹರಹಿ ಮುಂದಿಟ್ಟುಕೊಂಡ ಕನ್ನಡಿಯಲ್ಲಿ ತನ್ನನ್ನು ನೋಡಿಕೊಳ್ಳುವುದರಲ್ಲಿ ಮಗ್ನಳಾಗಿದ್ದಳು. ನಾನು ಸದ್ದು ಮಾಡದೆ ಹಿಂದಿನಿಂದ ಹೋಗಿ ಅತಿ ಸಮೀಪ ಬಂದ ಬಳಿಕ ಕೇಳಿದೆ:
“ಏನೇ, ಇಂದು ಯಾರು ನೋಡಲು ಬರುತ್ತಾರೆಯೇ? ಇಷ್ಟರಲ್ಲೇ ಸಿಂಗರಿಸಿಕೊಳ್ಳ ಹತ್ತಿದ್ದೀ?”
ಅನಿರೀಕ್ಷಿತವಾಗಿ ಬಂದ ಈ ಪ್ರಶ್ನೆಯಿಂದ ಅವಳು ಬೆಚ್ಚಿಬಿದ್ದಳು. ಅಚ್ಚರಿಯಿಂದ ತನ್ನ ಮೋರೆಯನ್ನು ನನ್ನೆಡೆ ತಿರುವಿದಾಗ ಕಂಡೆ: ಅವಳ ಮುಗ್ಧ ಕಣ್ಣುಗಳಲ್ಲಿ-ನೀರು!
“ಅರೆ! ಅಳ್ತಾ ಇದ್ದೀಯೇನೇ? ಏನಾಯಿತೇ?”
ಅವಳು ಲಗುಬಗೆಯಿಂದ ತನ್ನ ಕಿರಗಣೆಯ ತುದಿಯಿಂದ ಕಣ್ನನ್ನು ಒರೆಸುತ್ತ ಅಂದಳು. ಹಾರಿಕೆಯ ದನಿಯಲ್ಲಿ:
“ಇಲ್ಲ, ಏನಿಲ್ಲ. ಏಕೋ ಅಮ್ಮನ ನೆನಪಾಯಿತು.”
ನನಗೆ ಈ ಮಾತಿನಲ್ಲಿ ವಿಶ್ವಾಸ ಕೂತಿರಲಿಕ್ಕಿಲ್ಲ-ಆ ಭಾವದಿಂದ ನಾನು ಅವಳೆಡೆ ನೋಡಿರಬೇಕು. ನನ್ನ ದೃಷ್ಟಿಯಿಂದ ತಪ್ಪಿಸಿಕೊಳ್ಳಲೆಂಬಂತೆ ಬಿಚ್ಚಿದ ತನ್ನ ಕೂದಲನ್ನು ಸರಿಪಡಿಸಿಕೊಳ್ಳುತ್ತ ಕೇಳಿದಳು:
“ಇಂದು ಸಾಲೆಯಿಂದ ಬೇಗ ಬಂದಿಯೇನೇ?” ನನಗೂ ಆಗ ಮೊದಲೊಮ್ಮೆ ಅರಿವಾಯಿತು: ನಾನು ದಿನಕ್ಕಿಂತ ಒಂದು ತಾಸು ಮುಂಚಿತವಾಗಿಯೇ ಬಂದದ್ದು. ನನ್ನಲಕ್ಷ್ಯ ಇನ್ನೂ ಕಂಬನಿಗೆರೆದ ಅವಳ ಕಣ್ಣುಗಳಲ್ಲೇ ನೆಟ್ಟಿತ್ತು. ಅವಳು ಕೇಳಿದ ಪ್ರಶ್ನೆಗೆ ಉತ್ತರ ಕೊಡದೇ ನಾ ಕೇಳಿದೆ:
“ಇಂದು ಗಾಣ ಇಲ್ಲವೇನೇ?”
“ಇಂದು ಗಾಣದ ಕೆಲಸ ಬೇಗ ಮುಗಿಯಿತು. ಅಪ್ಪ, ಬಸ್ತ್ಯಾಂವ ಇಬ್ಬರೂ ಗೋಕರ್ಣಕ್ಕೆ ಹೋಗಿದ್ದಾರೆ. ನಾಳೆ ವೆಂಕಟರಮಣ ದೇವರ ಉತ್ಸವ ತಾನೇ?”
“ಓಹೋ! ಎಣ್ಣೆ ಕೊಡಲು ಹೋಗಿದ್ದಾರೆಯೇ?”
“ಅಹುದು.”
ಆಬೋಲೀನಳ ಮಾತಿನಲ್ಲಿ ಉತ್ಸಾಹವಿರಲಿಲ್ಲ. ಅವಳು ಇನ್ನೂ ನನ್ನ ಜಗತ್ತಿಗೆ ಬಂದೇ ಇರಲಿಲ್ಲ. ಅವಳಿಗೆ ಸದ್ಯ ನಾನು ಬರಲೇ ಬಾರದಿತ್ತು ಎಂದು ಅನಿಸಿರಬಹುದು. ನನಗೆ ಏನು ಮಾಡಬೇಕೋ ತೋಚಲಿಲ್ಲ. ಅದಾಗ ಅವಳೇ ಬಾಯಿ ಬಿಟ್ಟಳು-ಕನಸಿನಿಂದ ಎಚ್ಚೆತ್ತವಳಂತೆ:
“ಸುಮತೀ, ಮಕ್ಕಳು ಹೇಗೆ ಹುಟ್ಟುತ್ತವೆ, ಗೊತ್ತಿದೆಯೆ?”
ಇವಳಿಗೆ ಹುಚ್ಚು ಹಿಡಿದಿಲ್ಲವಷ್ಟೇ? ಇದೆಂತಹ ಪ್ರಶ್ನೆ! ಹುಡುಗಾಟಿಕೆಯೇ? ಆದರೆ ಆಬೋಲೀನಳ ಭೀತಗೊಂಡ ಕಣ್ಣುಗಳು, ನಿರ್ವಿಣ್ಣವಾದ ಮೋರೆ ನೋಡಿದಾಗ ಅನಿಸಿತು, ಇದು ಬರಿಯ ಚೇಷ್ಟೆಯ ಮಾತು ಅಲ್ಲವೆಂದು. ಆದರೂ ಮಾತನ್ನು ಚೇಷ್ಟೆಯ ಮೇಲೆ ಒಯ್ಯಲೆಂದು ನಾನೆಂದೆ, ಬಲವಂತದ ನಗೆ ನಗುತ್ತ:
“ಈಗ ಯಾಕೆ ಈ ಪ್ರಶ್ನೆ? ಇನ್ನೂ ಲಗ್ನವೂ ಆಗಿಲ್ಲ. ಇದಾಗಲೇ ಮಗುವಿನ ಆಸೆಯೆ?”
“ಲಗ್ನ ಆಗುವ ಮೊದಲು ಮಗು ಹುಟ್ಟುವುದಿಲ್ಲವೆ?”
ಆಬೋಲೀನಳ ಮೋರೆಯ ಮೇಲೆ ಭಯಗ್ರಸ್ತ ಮುಗ್ಧತೆಯಿತ್ತು.
“ಛೇ! ಇದೆಂತಹ ಮಾತೇ!” ನಗು ನಟಿಸುತ್ತ ಎಂದೆ. ಸತ್ಯವನ್ನು ಕೂಡಲೇ ಎದುರಿಸುವ ಧೈರ್ಯ ಆಗ ನನಗಿರಲಿಲ್ಲ. ಅವ್ಯಕ್ತ ಭೀತಿಯಿಂದ ಮನ ನಡುಗಿತು.
“ಹಾಗಾದರೆ ನಾನು….?”
ಅವಳ ತುಟಿ ನಡುಗಹತ್ತಿದವು. ಮೋರೆ ಇನ್ನೂ ಬಿಳುಪೇರಹತ್ತಿತು. ಕಣ್ಣಲ್ಲಿ ನೀರು ತುಂಬ ಹತ್ತಿತು. ಅವಳ ಅಳು ನೋಡಿ ನನಗೂ ಅಳಬೇಕು ಅನ್ನಿಸಿತು.
“ಛೇ ಆಬೋಲಿನ್, ಇದೇನು ಹುಚ್ಚುತನವೇ?”
“ಇಲ್ಲ ಸುಮತೀ, ನನಗೇಕೋ ಭಯವಾಗ್ತಾ ಇದೆ. ಅಮ್ಮ ಇದ್ದಿದ್ದರೆ….
ಅವಳು ನಿಜಕ್ಕೂ ಅಳಹತ್ತಿದಳು.
“ಅಳಬೇಡವೆ ಅಳಬೇಡವೇ ಆಬೋಲಿನ್.”
“ಬಸುರಾದರೆ ಹೇಗೆ ತಿಳಿಯುತ್ತದೆಯೇ?”
ಆಬೋಲೀನಳ ಕಂಬನಿ ತುಂಬಿದ ಪ್ರಶ್ನೆ: ಹೇಗೆ ತಿಳಿಯುತ್ತದೆ? ನನಗೇನು ಗೊತ್ತಿರಬೇಕು? ನನಗಾಗ ಇನ್ನೂ ಹನ್ನೆರಡು ವರುಷ. ಆದರೆ ‘ಗರ್ಭ ನಿಂತರೆ ಹೊಟ್ಟೆ ದೊಡ್ಡದಾಗುತ್ತದೆ’ ಎನ್ನುವ ಅರ್ಥದ ಮಾತು ಗೊತ್ತಿತ್ತು. ಹಾಗೆಯೇ ಏನೋ ಅಂದೆ. ಆ ಮಾತಿನಲ್ಲಿ ಏನೋ ಬೆಳಕು ಕಂಡಳು ಎಂಬಂತೆ ನನ್ನನ್ನು ತನ್ನೆಡೆ ಎಳಕೊಂಡು ನನಗೆ ಇವಳು ಏನು ಮಾಡುತ್ತಾಳೆ ಎನ್ನುವುದರ ಕಲ್ಪನೆ ಬರುವ ಮೊದಲೇ ತನ್ನ ಕಿರಗಣಿಯ ದಾರ ಬಿಚ್ಚಿ ನನ್ನ ಕೈಯನ್ನು ತನ್ನ ಹೊಟ್ಟೆಯ ಮೇಲಿಟ್ಟು ಕೇಳಿದಳು:
“ನೋಡು ನೋಡು ನಾನು ಬಸುರಿಯೇ?”
ಅಚಾನಕವಾಗಿ ಬಂದ ಅವಳ ಈ ಕೃತ್ಯ, ಅವಳ ನಡುಗುವ ಕೈಗಳು, ಕಂಪಿಸುವ ದನಿ ಇವೆಲ್ಲವುಗಳಿಂದ ಭೀತಿಗೊಂಡ ನನ್ನ ಒಳಜೀವ ಚಿಟ್ಟನೆ ಚೀರಿತ್ತು. ಅವಳ ಕೈಗಳಿಂದ ಬಲುಮೆಯಿಂದ ಬಿಡಿಸಿಕೊಂಡವಳೇ ಓಡಿದೆ, ನನ್ನ ಮನೆಯತ್ತ-
“ಇಲ್ಲ, ಇಲ್ಲ ನನಗೇನೂ ಗೊತ್ತಿಲ್ಲ”ಎನ್ನುತ್ತ. ನಾನು ಓಡೋಡುತ್ತ ದಣಪೆ ದಾಟುವಾಗ ಆಬೋಲೀನಳು ಕುಳಿತಲ್ಲಿಂದಲೇ ಒದರಿ ಹೇಳಿದಳು:
“ಯಾರಿಗೂ ಹೇಳಬೇಡ ಸುಮತೀ, ನನ್ನಾಣೆಯಿದೆ.” ನೆನೆದರೆ ಕೈಗೇ ಹತ್ತುವದೇನೋ ಎಂಬ ಅನಿಸಿಕೆ-ಅಂದು ಮುಟ್ಟಿದ ಆ ನುಣುಪಾದ, ತಂಪಾದ ಮಿದು ಮಿದು ಬತ್ತಲೆ ಹೊಟ್ಟೆ!
ಆ ಇಡಿಯ ಸಂಜೆ ನಾನದರ ವಿಷಯ ವಿಚಾರಿಸುತ್ತಲೇ ಇದ್ದೆ. ಚಿಂತಿಸುತ್ತಲೇ ಇದ್ದೆ: ಅವಳ ಈ ಕೃತ್ಯದ ಅರ್ಥವೇನು? ಅಮ್ಮನಿಗೆ ಹೇಳಲೇ? ಹೇಳಲೇಬೇಕೇ! ಯಾರಿಗಾದರೂ ಹೇಳಬೇಕು. ನನ್ನೊಬ್ಬಳಿಗೇ ತಿಳಿದ ಆ ಪಾಪದ ಗುಟ್ಟಿನ ಹೊಣೆಗಾರಿಕೆ(ಯಾರಿಗೂ ಹೇಳಬೇಡ, ನನ್ನಾಣೆಯಿದೆ) ನನ್ನನ್ನು ಹಿಂಡುತ್ತಿತ್ತು.

ಮಕ್ಕಳು ಹೇಗೆ ಹುಟ್ಟುತ್ತವೆ ಎನ್ನುವುದರ ಕಲ್ಪನೆ ಇರದಿದ್ದರೂ ಲಗ್ನದ ಮೊದಲು ಮಕ್ಕಳು ಹುಟ್ಟುವುದು ಮಹಾಪಾಪ, ದೊಡ್ಡ ಅನರ್ಥ ಎಂಬುದರ ಅಂಧುಕ ಅರಿವು ಇತ್ತು. ಅಯ್ಯೋ ಆಬೋಲೀನ!….ತಿರುಗಿ ತಿರುಗಿ ಅದೇ ಚಿತ್ರ ಕಣ್ಣಮುಂದೆ; ಅವೇ ಪ್ರಶ್ನೆ ಕಿವಿಯಲ್ಲಿ!

ಆ ಪಾಪದ ಗುಟ್ಟನ್ನು ನನ್ನಲ್ಲಿ ಇಟ್ಟುಕೊಳ್ಳಲೂ ಆರೆ ಇನ್ನೊಬ್ಬರಿಗೆ ಹೇಳಲೂ ಆರೆ ಎಂಬ ಸ್ಥಿತಿಯಲ್ಲಿ ತೊಳಲುತ್ತಿರುವಾಗಲೇ ಒಂದು ದಿನ ಕೇಳಿದ್ದು ತಂದೆ-ತಾಯರ ಸಂಭಾಷಣೆಯನ್ನು. ಮನವೇಲನಂತಹ ದುಷ್ಟಹುಂಬನನ್ನು, ದುರ್ವ್ಯಸನಿಯನ್ನು ಆಬೋಲೀನ ಲಗ್ನವಾಗುವ ಪ್ರಸಂಗ ಒದಗಿತಲ್ಲ ಎಂದು ಮನ ಮಿಡುಕಾಡಿದರೂ ಆ ಸಂಭಾಷಣೆಯನ್ನು ಆಲಿಸುವಾಗ ಎಂತಹುದೋ ಗುಪ್ತ ಆನಂದದಿಂದ ನನ್ನ ಮನಸ್ಸು ಹರುಷಗೊಂಡಂತಿತ್ತು. ಕೊನೆಗೂ ಈ ಗುಟ್ಟನ್ನು ಕಾಪಾಡುವ ಹೊಣೆಗಾರಿಕೆಯಿಂದ ಬಿಡುಗಡೆಹೊಂದಿದೆನಲ್ಲ ಎಂದೇ? ಇಲ್ಲವೇ ಆಬೋಲೀನಳ ಮೇಲೆ ಒದಗಿ ಬಂದ ಆಪತ್ತಿಗೂ ಒಂದು ಪರಿಹಾರ ದೊರಕಿತಲ್ಲ ಎಂದೇ? ಏನೋ….ಆದರೆ-
ಪದ್ದಕ್ಕ ತಂದ ಸುದ್ದಿ-ಅಲ್ಲ, ಸ್ವತಃ ಆಬೋಲೀನಳ ಬಾಯಿಯಿಂದ ನಾನೇ ತಿಳಿದ ಸಂಗತಿ ಕೂಡ ಸುಳ್ಳಾಗಿತ್ತು ಎನ್ನುವುದು ಮಾತ್ರ ನಮ್ಮೆಲ್ಲರ ಕಲ್ಪನೆಗೆ ಮೀರಿದ್ದಾಗಿತ್ತು! ಅಹುದು, ಅದೆಲ್ಲ ಸುಳ್ಳಾಗಿತ್ತು. ಆದರೆ ಸತ್ಯ ಸಂಗತಿ ನಮಗೆಲ್ಲ ತಿಳಿಯುವ ಹೊತ್ತಿಗೆ ಎಲ್ಲವೂ ತೀರ ತಡವಾಗಿತ್ತು: ಆಬೋಲೀನಳ ಮದುವೆಯಾಗಿ ಅದಾಗಲೇ ಹಲವು ತಿಂಗಳು ಕಳೆದುಹೋಗಿದ್ದವು.

ನಾನಂದು ಸಂಜೆ ಸಾಲೆಯಿಂದ ಬಂದಾಗ ಅಮ್ಮ ಅದೇ ಹಾಲು ಕರೆಯಲೆಂದು ಕೊಟ್ಟಿಗೆಗೆ ಹೋಗುತ್ತಿದ್ದಳು. ನನಗೂ ಬೇರೆ ಏನೂ ಕೆಲಸವಿಲ್ಲದ್ದರಿಂದ ನಾನೂ ಬರುತ್ತೇನೆಂದು ಅವಳ ಜತೆಗೆ ನಡೆದೆ. ನಾವಿಬ್ಬರೂ ಕೊಟ್ಟಿಗೆಯಲ್ಲಿದ್ದಾಗ ಕೈತಾನ ಬಂದ. ಬಂದ ರೀತಿಯಲ್ಲೇ ಏನೋ ವಿಶೇಷವಿದ್ದಂತಿತ್ತು. ಮೇಲಾಗಿ ಆಬೋಲೀನಳ ಮದುವೆಯ ನಂತರ ಕೈತಾನ ನಮ್ಮ ಮನೆಗೆ ಬರುವುದೇ ಅಪರೂಪವಾಗಿತ್ತು. ಎಣ್ಣೆ ಕೊಡಲು ಬಸ್ತ್ಯಾಂವನೆ ಬರುತ್ತಿದ್ದ.

ಹೆಚ್ಚಿನ ಅನರ್ಥ ಒದಗುವ ಮೊದಲೇ ಲಗ್ನ ಜರುಗಿದರೂ ಈ ಲಗ್ನದ ಹಿಂದಿನ ‘ಗೋಪ್ಯ’ ದ ಬಗ್ಗೆ ಮಾತ್ರ ಜನರ ಬಾಯನ್ನು ಮುಚ್ಚಲಾಗಲಿಲ್ಲ. ಆಡಿಕೊಳ್ಳುವವರು ಆಡಿಕೊಳ್ಳುತ್ತಲೇ ಇದ್ದರು. ತುಂಬ ಮಾನವಂತ, ಸಜ್ಜನನಾದ ಕೈತಾನ ಈ ಮದುವೆಯನ್ನು ಮನಸ್ಸಿಗೆ ಹಚ್ಚಿಕೊಂಡದ್ದು ಅಚ್ಚರಿಯಲ್ಲ. ತನ್ನ ಬಾಳಿನ ಸರ್ವಸ್ವವಾದ ಮುದ್ದಿನ ಮಗಳು ಅಯೋಗ್ಯನೊಬ್ಬನನ್ನು ಮದುವೆಯಾಗುವ ಪ್ರಸಂಗ ಬಂದಿತಲ್ಲ ಎಂಬ ದುಃಖದೊಂದಿಗೆ ತಮ್ಮ ಕುಟುಂಬದ ಮರ್ಯಾದೆಗೇ ಕಲಂಕ ತಂದ ಈ ದುರ್ಘಟನೆಯಿಂದ ಅವನು ಜರ್ಜರಿತನಾದ. ಆದುದರಿಂದಲೇ ಅವನು ಆಗೀಗ ನಮ್ಮ ಮನೆಗೆ ಬಂದಾಗ ಈ ಲಗ್ನದ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ. ಈ ಲಗ್ನದ ವಿಷಯ ಅವನು ನಮ್ಮ ತಂದೆಯವರಿಗೆ ಹೇಳಿದ ಮಾತಿಗಿಂತ ಹೆಚ್ಚಾಗಿ(:ಪಾದ್ರಿಯ ಒತ್ತಾಯ)ಏನನ್ನೂ ಹೇಳಿರಲಿಲ್ಲ. ಅವನು ನಮ್ಮೊಡನೆ ನಡಕೊಳ್ಳುವ ರೀತಿ ನೋಡಿದರೆ ‘ನಿಮಗೆಲ್ಲ ಗೊತ್ತಿದೆ’ ಎಂಬುದನ್ನುಗ್ರಹೀತ ಹಿಡಿದೇ ನಡೆದಂತಿತ್ತು. ನಾವೂ ‘ಏನೂ ಗೊತ್ತಿಲ್ಲ’ಎಂದು ನಟಿಸುವದೆಂತು? ಆದರೂ ಬಾಯಿ ಬಿಟ್ಟು ಕೇಳಲಾಗುತ್ತಿರಲಿಲ್ಲ. ಅಂತೆಯೇ ನಮ್ಮ ನಡುವಿನ ಸೌಹಾರ್ದದಲ್ಲಿ ಒಂದು ಬಗೆಯ ಕೃತ್ರಿಮತೆ ಬಂದು ನೆಲೆಸಿತ್ತು.

ಆಬೋಲೀನ ನಮ್ಮ ಮನೆಯವರಿಗೆಲ್ಲ ಅತಿ ಮೆಚ್ಚುಗೆಯ ಹುಡುಗಿ. ಲಗ್ನವಾದಂದಿನಿಂದ ಅವಳನ್ನು ಕಾಣಲೇ ಇಲ್ಲ. ಅವಳ ಆರೋಗ್ಯದ ಬಗ್ಗೆ ಕೇಳಬೇಕು, ಸೌಖ್ಯದ ಬಗ್ಗೆ ವಿಚಾರಿಸಬೇಕು ಎಂಬ ಬಯಕೆ. ಆದರೆ ಅವಳ ಬಗ್ಗೆ ಮಾತನಾಡುವುದೆಂದರೆ ಅವಳ ಲಗ್ನದ ಬಗ್ಗೆ ಮಾತು ತೆಗೆದಂತೆಯೆ! ಆದರೂ ಕಳವಳ; ತಾಯಿಯಿಲ್ಲದ ಮಗು! ಏನೂ ಅರಿಯದ ಹುಡುಗಿ. ಎಲ್ಲಿ ಕೈ ತಪ್ಪಿತೋ; ಈಗ ಹೇಗಿರುವಳೋ; ಗಂಡನ ಮನೆಯವರು ಹೇಗೆ ನಡೆಸಿಕೊಳ್ಳುತ್ತಾರೋ’ ನಾವೂ ಕೇಳಲಿಲ್ಲ ಕೈತಾನನೂ ಹೇಳಲಿಲ್ಲ….
ಕೈತಾನ ಬಂದುದನ್ನು ಕಂಡು ಅಮ್ಮ ಕೇಳಿದಳು:
“ಏನು ಕೈತಾನ?”
“ಹಾಲು ಹಿಂಡಾಯಿತೇ?”
“ಏಕೆ? ಹಾಲು ಬೇಕಿತ್ತೇ?”
“ಇಲ್ಲಮ್ಮ, ಇನ್ನು ಈ ಬಾಯಿ ಹಾಲು ಹೇಗೆ ಕುಡಿದೀತು? ಬರಿಯ ಮಣ್ಣು….”
ಕೈತಾನ ತನ್ನ ಎರಡೂ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಕೊಟ್ಟಿಗೆಯ ಬಾಗಿಲಲ್ಲೇ ಕುಳಿತುಬಿಟ್ಟ.
“ನನ್ನ ಬಾಯಲ್ಲಿ ಮಣ್ಣು ಹಾಕಿದನಮ್ಮ….”
“ಛೀ, ಕೈತಾನ, ದೀಪ ಹಚ್ಚುವ ಹೊತ್ತು….”
ಅಮ್ಮ ಇನ್ನೂ ಹಾಲು ಹಿಂಡುತ್ತಿದ್ದಳು.
“ಕೊನೆಗೂ ಆ ದುಷ್ಟ ನಮ್ಮನ್ನೆಲ್ಲ ಮೋಸಗೊಳಿಸಿದ….ಆಬೋಲೀನ ಬಸುರಿಯಲ್ಲ….”
“ಆಂ!!”
ಕೈತಾನ ಒಡೆದ ಸುದ್ದಿಯಿಂದ, ಅದಕ್ಕೆ ಉತ್ತರವಾದ ಅಮ್ಮನ ಉದ್ಗಾರದಿಂದ ನಮ್ಮ ನಡುವೆ ಇಷ್ಟು ದಿನ ನಿಂತುಕೊಂಡ ಕೃತ್ರಿಮತೆಯ, ನಟನೆಯ ಗೋಡೆ ಕ್ಷಣಾರ್ಧದಲ್ಲಿ ಮುರಿದು ಬಿದ್ದಿತ್ತು.
“ಎಲ್ಲವೂ ನನ್ನದೇ ತಪ್ಪು; ಅಯ್ಯೋ ಏನೂ ಅರಿಯದ ಎಳೆ ಕಂದನನ್ನು….”
ಕೈತಾನ ಅಳಹತ್ತಿದ.
“ಛೇ, ಕೈತಾನ, ಹೀಗೆ ಅತ್ತು ಏನು ಪ್ರಯೋಜನ?”
“ಪಾಪ….ಆ ಮಗುವಿಗೆ….ಬಸುರಾಗುವುದೆಂದರೆ….ಏನು….ಎನ್ನುವುದೇ ಗೊತ್ತಿರಲಿಲ್ಲ….”
ಕೈತಾನ ಬಿಕ್ಕುತ್ತ ನುಡಿದ.
ನನ್ನ ಮನ ತಿರುಗಿ ಗೊಂದಲಿಸಿತು. ಕೈಕಾಲುಗಳಲ್ಲಿ ನನಗೆ ಅರ್ಥವಾಗದ ನಡುಕ ಸೇರಿಕೊಂಡಿತು. ಇದು ನಿಜವೇ? ನಾನಂದು ಮುಟ್ಟಿನೋಡಿದ ಹೊಟ್ಟೆಯ ಅರ್ಥ ಇದುವೇನೇ? ಹಾಗಾದರೆ ಈ ಎಲ್ಲ ಅನರ್ಥದ ಹೊಣೆ ನನ್ನ ಮೇಲೂ ಇದೆಯೇ?….ಆದರೂ ಕೈತಾನ ಅಂದಿರಲಿಲ್ಲವೇ: ‘ಎಲ್ಲವೂ ನನ್ನದೇ ತಪ್ಪು’ ಎಂದು? ತುಸು ಸಮಾಧಾನ-ಸ್ವತಃ ತಂದೆಯಾದವನೇ ತನ್ನ ಮಗಳನ್ನು ಅರಿಯದ ಸಾಮರ್ಥ್ಯ ಇಲ್ಲದಿದ್ದರೆ ನನಗೇನು ತಿಳಿಯಬೇಕು? ಆದರೂ ಜೀವ ಕಳವಳಿಸಿತು. ಇನ್ನು ಅಲ್ಲಿ ನಿಲ್ಲುವುದು ಕಷ್ಟವೆನಿಸಿತು. ಅಂತೆಯೇ ಅಂದೆ:
“ಅಮ್ಮ, ಮನೆಗೆ ಹೋಗೋಣವೇ?”
“ಹೌದು ಸುಮತಿ, ಮನೆಗೆ ಹೋಗೋಣ. ಆ ಕರುವನ್ನು ಬಿಟ್ಟುಬಿಡು, ಕುಡಿಯಲಿ” ಎಂದವಳೇ ಹಾಲು ಹಿಂಡುವುದನ್ನು ಅರ್ಧಕ್ಕೇ ಬಿಟ್ಟು ಎದ್ದು ನಿಂತಳು; ಹಾಗೂ ಇನ್ನೂ ಕುಳಿತೇ ಇದ್ದ ಕೈತಾನನಿಗೆ ಅಂದಳು:
“ನಡೆ ಕೈತಾನ, ಮನೆಗೆ ಹೋಗೋಣ. ಅಲ್ಲಿಯೇ ಹೇಳುವಿಯಂತೆ ಎಲ್ಲವನ್ನು.”
ಕೈತಾನ ಎಲ್ಲ ಹೇಳಿದ. ಆದರೆ ಉಕ್ಕುಕ್ಕಿ ಬರುತ್ತಿದ್ದ ದುಃಖದಿಂದ, ನಡುನಡುವೆ ಸೇರಿಕೊಳ್ಳುತ್ತಿದ್ದ ಸಂಕೋಚದಿಂದ ಅವನ ಕತೆ ತುಂಡುತುಂಡಾಗಿ ಬರುತ್ತಿತ್ತು. ಮೇಲಾಗಿ ಅವನು ಹೇಳಿದುದೆಲ್ಲವನ್ನು ಅರಿಯುವ ಶಕ್ತಿ ನನ್ನಲ್ಲಿತ್ತು ಎಂದೂ ಹೇಳಲಾರೆ. ಆದರೆ ಇಂದಿನ ಬೆಳೆದ ದೃಷ್ಟಿಯಿಂದ ಅದನ್ನೆಲ್ಲ ವಿಮರ್ಶಿಸಿದಾಗ ಅಂದು ಅರ್ಧಮರ್ಧವಾಗಿ, ಬಿಟ್ಟು ಬಿಟ್ಟು ಕೇಳಿದುದೇ ತಿಳಿದುದೇ ಒಂದು ಹೊಸ ಅರ್ಥ ತಳೆದು, ಜೀವಕಳೆ ಧರಿಸಿ ತಂತಾನೆ ಹೆಣೆದುಕೊಂಡು ನಿಲ್ಲುತ್ತದೆ-ಆ ಇಡಿಯ ದುರಂತಕತೆ ನನ್ನ ಕಣ್ಣ ಮುಂದೆ-ನಿನ್ನೆಯೇ ನಡೆದುದೆಂಬಂತೆ!

ಒಂದು ದಿನ ಮಧ್ಯಾಹ್ನದ ಹೊತ್ತಿಗೆ ಚಕ್ರಖಂಡೇಶ್ವರದ ಹಿಂದಿನ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಪರಮೇಶ್ವರಿ ಹಾಗೂ ಇನ್ನೊಬ್ಬ ದೀವರ ಹೆಂಗಸು ಕೆಲಸದ ದಣಿವಾರಿಸಲೆಂದು ಗದ್ದೆಯ ತಡಿಯಲ್ಲಿ ನಿಂತ ನೇರಿಲ ಮರವೊಂದರ ನೆರಳಲ್ಲಿ ಕುಳಿತು ಕವಳ ಜಗಿಯುತ್ತಿರುವಾಗ ಮುಂದಿನ ಗುಂದೆಯ ಮೇಲಿನ ಸುರಗೀ ಮರಗಳ ನಡುವೆ ಯಾರೋ ಕ್ಷೀಣಸ್ವರದಲ್ಲಿ ‘ಅಯ್ಯೋ’ ಎಂದಂತೆ ಕೇಳಿಸಿತು. ಇಬ್ಬರೂ ತಲೆಯೆತ್ತಿ ನೋಡಿದಾಗ ಕಣ್ಣ ಮುಂದೆ ನಂಬಲಾಗದ ದೃಶ್ಯ. ಮನವೇಲನ ಬಿಗಿದ ಅಪ್ಪುಗೆಯಲ್ಲಿ ಯಾವಳೋ ಒಬ್ಬ ಹರೆಯದ ಹುಡುಗಿ.ಹುಡುಗಿ ತೋರಿಸುತ್ತಿದ್ದ ಪ್ರತೀಕಾರವನ್ನು ಲೆಕ್ಕಿಸದೆ ಅವಳ ಮೋರೆಯನ್ನೆಲ್ಲ ಮುದ್ದಿಸುತ್ತಿದ್ದ, ಮನವೇಲ. ಅನಪೇಕ್ಷಿತವಾಗಿ ನೋಡ ಸಿಕ್ಕ ಈ ನೋಟವನ್ನು ಎವೆಯಿಕ್ಕದೇ ನೋಡುತ್ತಿದ್ದ ಆ ಇಬ್ಬರು ಹೆಂಗಸರು ಒಮ್ಮೆಲೇ ಜಿಗುಪ್ಸೆಪಟ್ಟವರಂತೆ “ಇಶ್ಯಿಶ್ಯೀ! ಇವರಿಗೆ ಬಂದ ರೋಗವೇ!ಹಗಲಿಗೇ?” ಎಂದು ಮೋರೆಯನ್ನು ತಿರುವಿಯೇ ಕುಳಿತರು. ಗುಂದೆ ಅವರಿಂದ ದೂರವಿತ್ತು. ಮನವೇಲನ ಗುರುತು ಸಿಕ್ಕರೂ ಅವನ ತೋಳುಗಳಲ್ಲಿ ಬಂಧಿತಳಾದವಳ ಪರಿಚಯ ಸಿಗಲಿಲ್ಲ. ಮೇಲಾಗಿ ಅವರಲ್ಲಿ ನಡೆಯುತ್ತಿದ್ದ ಮಾತುಕತೆಯೂ ಕೇಳಿಸುತ್ತಿರಲಿಲ್ಲ; ಕೇಳಿಸಿದ್ದರೂ ಅರ್ಥವಾಗುತ್ತಿರಲಿಲ್ಲ. ಅವರು ಮೋರೆ ತಿರುವಿ ಕುಳಿತ ಹೊತ್ತಿಗೇ ಮನವೇಲ ತನ್ನ ಗುಂಡು ಅಂಗೈಯನ್ನು ಹುಡುಗಿಯ ಹೊಟ್ಟೆಯ ಮೇಲೆ ಆಡಿಸಿ ಅಂದಿದ್ದ ನಟಿಸಿದ ಭಯದ ದನಿಯಲ್ಲಿ:
“ಅರೇ! ನಿನಗೆ ಹೊಟ್ಟೆ ಬಂದಿದೆ-ನೀನು ಬಸುರಿ!!ಎರಡು ತಿಂಗಳಾದರೂ ಆಗಿರಬೇಕು. ಅಯ್ಯೋ!ನಾನಂದು ಬರಿಯ ಚೇಷ್ಟೆಗೆ ಅಂದ ಮಾತು ನಿಜವಾಗಬೇಕೇ? ಇದೇನನರ್ಥ!” ಎಂದವನೇ ಮನವೇಲ ಹುಡುಗಿಯನ್ನು ತನ್ನ ಅಪ್ಪುಗೆಯಿಂದ ಚೆಲ್ಲಿಕೊಟ್ಟು ತನಗೆ ಒಪ್ಪಿಗೆಯಿಲ್ಲದ ಅನರ್ಥ ನಡೆಯಿತೆನ್ನುವ ಭಯ, ತಾತ್ಸಾರ ನಟಿಸುತ್ತ ಅಲ್ಲಿಂದ ಜಾರಿಕೊಂಡ. ಮೊದಲೊಮ್ಮೆ ತಿರಸ್ಕಾರದಿಂದ ಮೋರೆ ತಿರುವಿ ಕುಳಿತ ಆ ದೀವರ ಹೆಂಗಸರು ತಮ್ಮ ಕುತೂಹಲವನ್ನು ತಡೆಯಲಾಗದೇ ಕಳ್ಳದೃಷ್ಟಿಯಿಂದ ಗುಂದೆಯೆಡೆ ನೋಡಿದಾಗ ಅವರಿಗೆ ಅಲ್ಲಿ ಮನವೇಲ ಕಾಣಿಸಲಿಲ್ಲ. ಅವನಿಂದ ಬಿಡಿಸಿಕೊಂಡ ಹುಡುಗಿ ಮಾತ್ರ ತ್ವರೆಯಿಂದ ಗುಂದೆಯನ್ನಿಳಿದು ಓಡುತ್ತ ರಸ್ತೆ ಸೇರುತ್ತಿದ್ದಳು. ರಸ್ತೆ ಸೇರಿದಮೇಲೆ ಮಾತ್ರ ಅವಳ ಗುರುತು ಸಿಗದಿರಲಿಲ್ಲ.
“ಇದೆ! ನಮ್ಮ ಆಬೋಲೀನಳಲ್ಲವೇ?-ಕೈತಾನನ ಮಗಳು! ಈ ಧಂದೆಗೆ ಬಂದಳೋ ನೋಡ್ತೆ.”
ನುಡಿದವಳು ಪರಮೇಶ್ವರಿಯಲ್ಲ; ಅವಳ ಜೊತೆಗಾರ್ತಿ.
“ಇಲ್ಲಕ್ಕ ಅದಿನ್ನೂ ಕೂಸು-ಬುದ್ಧಿಯಿಲ್ಲದ್ದು. ಇವನು ಫಟಿಂಗ.”
“ನೀನು ಸುಮ್ಮನಿರೆ, ನನಗೆ ಹೇಳಬೇಡ ಅದರ ಅಪ್ಪಂತತನ. ಕಿರಿಸ್ತಾನರ ಹುಡುಗಿ! ಈಗೆಲ್ಲ ತಿಳೀತು. ಅಂದು ದೇವಸ್ಥಾನದಲ್ಲಿ ತೆಣೆಯಮೇಲೆ ಗಂಡಸಿನ ಜೊತೆಗೆ ಮಲಗಿದ ಹಾದರಗಿತ್ತಿ ಇವಳೇ! ನಾನು ಗದ್ದೆಯಿಂದ ಮನೆಗೆ ಹೋಗುತ್ತೇನೆ;ಇವರು….ಥೂ! ನನಗಂದು ಯಾರೆಂದು ತಿಳಿಯಲಿಲ್ಲ. ‘ಪಾಪ ಪಾಪ’ ಎನ್ನುತ್ತ ಕಣ್ಣು ಮುಚ್ಚಿಕೊಂಡೇ ಮನೆಗೆ ನಡೆದೆ….”
*
*
*
ಈ ಘಟನೆ ನಡೆದದ್ದು ಈಗ ಅವರಿಬ್ಬರೂ ಕೂಡಿಯೇ ನೋಡಿದ ಘಟನೆಗಿಂತ ಎರಡು ತಿಂಗಳ ಮೊದಲು:
ಅಂದು ಅಂಬೋಲೀನ ಗುಂದೆಗಳಲ್ಲೆಲ್ಲ ಅಲೆದು ಸುರಗೀ ಕಾಯಿಗಳನ್ನು ಹೆಕ್ಕಿ, ಬುಟ್ಟಿಯಲ್ಲಿ ತುಂಬಿ ದೇವಸ್ಥಾನಕ್ಕೆ ಬಂದಾಗ ಬಿಸಿಲಲ್ಲಿ ಕಾದ ಜೀವಕ್ಕೆ ‘ಇಲ್ಲಿ ತಂಪಾಗಿದೆ; ತುಸು ಹೊತ್ತು ಕೂಡ್ರೋಣ’ ಎನಿಸಿರಬೇಕು. ಅಂತೆಯೇ ದೇಗುಲ ಹೊಕ್ಕು ಪಡಸಾಲೆಯಲ್ಲಿಯ ತೆಣೆಯೊಂದರಲ್ಲಿ ಹಾಯಾಗಿ ಕುಳಿತಳು. ಕುಳಿತಲ್ಲೇ ಸಣ್ಣ ಜೊಂಪು ಹತ್ತಿರಬೇಕು. ಇವಳ ಚಟುವಟಿಕೆಗಳನ್ನೆಲ್ಲ ಸಮೀಪದ ಗೇರಮರವೊಂದರಿಂದ ಅವಲೋಕಿಸುತ್ತಿದ್ದ ಮನವೇಲ ಬಂದ-ಹದ್ದಿನಂತೆ. ಬಂದವನೇ ಅವಳ ಮೇಲೆ ಬಗ್ಗಿ ಅವಳನ್ನು ತನ್ನ ತೋಳುಗಳಲ್ಲಿ ಬಿಗಿದಪ್ಪಿದ. ಆಬೋಲೀನ ಎಚ್ಚರಾಗಿ ಕಣ್ಣು ತೆರೆಯುವ ಮೊದಲೇ ಮನವೇಲನ ಪಾಪಯುಕ್ತ ತುಟಿಗಳು ಅವಳ ತುಟಿಗಳನ್ನು ಮುದ್ದಿಸುತ್ತಿದ್ದವು. ಅವನ ಉನ್ಮತ್ತ ಕೈಗಳು ಅವಳ ಅಂಗಾಂಗಗಳ ಮೇಲೆ ಆಡಹತ್ತಿದವು. ಗಂಡಸಿನ ಆಲಿಂಗನದ ಈ ಅನುಭವವು ಆಬೋಲೀನಳ ಕಲ್ಪನೆಗೂ ಮೀರಿದ್ದು. ಅನೂಹ್ಯವಾಗಿ, ಅಚಾನಕವಾಗಿ ಒದಗಿದ ಈ ಘಟನೆಯಿಂದ ಅವಳು ಥಥ್ಥರ ನಡುಗಿದಳು. “ಅಯ್ಯೋ”ಎಂದು ಚೀರುತ್ತ ಅವಳು ಬಿಡಿಸಿಕೊಳ್ಳುತ್ತಿರುವಾಗ ಮನವೇಲ ಅಂದಿದ್ದ ದುಶ್ಯಾಸನ-ನಗೆ ನಗುತ್ತ: “ಈಗಲಾದರೂ ಒಪ್ಪುತ್ತೀಯೋ ಇಲ್ಲವೋ ನನ್ನನ್ನು ಮದುವೆಯಾಗಲು? ನನ್ನ ಎಂಜಲ ನಿನ್ನ ತುಟಿಯಲ್ಲಿದೆ. ಈಗ ನೀನು ಬಸುರಾಗುತ್ತಿ.”
ಮುಂದೆ ನಡೆದ ಎಲ್ಲ ದುರಂತಕ್ಕೆ ನಾಂದಿ ಇಟ್ಟಿದ್ದು ಇಲ್ಲಿ-ಈ ದೇಗುಲದಲ್ಲಿ, ಈ ಈಶ್ವರಲಿಂಗದ ಸಾಕ್ಷಿಯಲ್ಲಿ!….
“ಈಗಲಾದರೂ ಒಪ್ಪುತ್ತೀಯೋ ಇಲ್ಲವೋ?” ಎಂದಿದ್ದ ಮನವೇಲ. ಅಂದರೆ ಈ ಮೊದಲೇ ಹಲವು ಸಲ ಅವನು ಅಂಬೋಲೀನಳನ್ನು ಭೆಟ್ಟಿಯಾಗಿ ಅವಳನ್ನು ಮಾತನಾಡಿಸಿರಬೇಕು. ಆಗಲೇ ಈ ಮುಗ್ಧಜೀವದ ಅಜ್ಞಾನದ ನೆಲೆಯರಿತಿರಬೇಕು. ಇವಳನ್ನು ತನ್ನ ಬಲೆಯಲ್ಲಿ ಹಾಕಬೇಕಾದರೆ ಇಂತಹ ದುಷ್ಟ ಬೆದರಿಕೆಯೇ ಸಾಕು ಎಂದು ಬಗೆದಿರಬೇಕು….
ಚಿಕ್ಕಂದಿನಲ್ಲೇ ತಾಯಿಯನ್ನು ಕಳಕೊಂಡ ಹಸುಳೆ. ಮನೆಯಲ್ಲಿದ್ದ ಇನ್ನಿಬ್ಬರೂ ಗಂಡಸರು-ವಯಸ್ಸು ದಾಟಿದ ತಂದೆ, ಎಳೆಯ ತಮ್ಮ. ಇಡೀ ದಿನ ಕಳೆಯುತ್ತಿದ್ದುದು ಮನೆಗೆಲಸ, ಗಾಣದ ಕೆಲಸದಲ್ಲಿ; ಒಬ್ಬರ ತಾಪತ್ರಯಕ್ಕಿಲ್ಲ, ತಂಟೆಗಿಲ್ಲ. ಸಾಲೆ ಕಲಿತವಳಲ್ಲ. ತಮ್ಮ ಜಾತಿಯವರ ಕೇರಿಯಿಂದ ದೂರವಾದ ಮನೆ.ಹೇಳಿ ಕೇಳಿ ಗೊತ್ತಿದ್ದುದು ನಮ್ಮ ಮನೆ ಮಾತ್ರ. ಅಲ್ಲಿಯೂ ಸಲಿಗೆ ಬರಿಯೇ ನನ್ನ ಹತ್ತಿರ, ಇಂತಹ ವಾತಾವರಣದಲ್ಲಿ ಬೆಳೆದ ಆ ಅಜ್ಞ ಮುಗುದೆಗೆ ತನ್ನ ನಿತ್ಯ ಪರಿಚಯದ ‘ತಂದೆ-ಮಗಳು’,‘ಅಕ್ಕ-ತಮ್ಮ’-ಈ ಸಂಬಂಧಗಳ ಹೊರತಾಗಿ ಇವುಗಳಿಂದ ತೀರ ಭಿನ್ನವಾದ ಇನ್ನೊಂದು ‘ಗಂಡು-ಹೆಣ್ಣಿ’ನ ಸಂಬಂಧ ಇದೆ ಎಂಬ ಅರಿವು ಇದ್ದರೂ ಆ ಸಂಬಂಧದ ವೈಚಿತ್ರವೇನು? ವೈಶಿಷ್ಟ್ಯವೇನು? ಎನ್ನುವುದರ ಜ್ಞಾನ ಮಾತ್ರ ಇರಲಿಲ್ಲ. ಹೀಗಿರುವಲ್ಲಿ ಅವಳು ಮನವೇಲನ ಬೆದರಿಕೆಯಿಂದ ಕಂಗಾಲಾದುದರಲ್ಲಿ ಅಚ್ಚರಿಯೇನು?
*
*
*
ಅನಿರೀಕ್ಷಿತವಾದ ಗಂಡು ಬಾಹುಗಳ ಆಲಿಂಗನ, ಕಲ್ಪನಾತೀತವಾದ ಗಂಡುತುಟಿಗಳ ಚುಂಬನ ಇವೆಲ್ಲವುಗಳಲ್ಲಿ ಜೀವ ಹಿಂಡುವ ಭೀಕರತೆಯಿತ್ತು. ಜೊತೆಗೆ ಅರ್ಥವಾಗದ ಸುಖವಿತ್ತು. ಆದರೆ ಈ ಭಯಂಕರ ಗಂಡಸಿನ ಎಂಜಲ! ಇದರಲ್ಲಿ ಇರಬಹುದೇ ತನ್ನ ಬಸಿರನ್ನು ಚಿಗುರಿಸುವ ಮಾಯಾ ಶಕ್ತಿ? ಇದು ನಿಜವೇ? ತಾ ಬಸುರಿಯೆ? ಬಸುರಾಗುವುದೆಂದರೆ ಇದೇನೆ? ಇಷ್ಟೇನೇ?-ಗಂಡಸಿನ ಅಪ್ಪುಗೆಯಲ್ಲಿ ಮಲಗಿದಾಗ, ಅವನ ಕೈ ತನ್ನ ಮೈಮೇಲೆಲ್ಲ ಹರಿದಾಡುತ್ತಿರುವಾಗ ಅವನ ತುಟಿಯ ಎಂಜಲ ತಿನ್ನುವುದು? ಇಲ್ಲ ಇಲ್ಲ, ಇದರಲ್ಲೇನೋ ಮೋಸವಿದೆ. ಅಥವಾ ಹಾಗೆಂದು ನಂಬಿ ಇಷ್ಟು ದಿನ ಸುಮ್ಮಗುಳಿದೇ ಕೆಟ್ಟೆನೆ? ಇಲ್ಲವಾದರೆ ತಾನಾಗಿ ಮುತ್ತಿಡಲು ಬಂದ ಮನವೇಲನಂತಹ ಗಂಡಸೂ ಬೆದರಿ ತನ್ನನ್ನೇಕೆ ತೊರೆದು ದೂರ ಸರಿಯುತ್ತಿದ್ದ? ಅಯ್ಯೊ! ಇದೆಂತಹ ಅನರ್ಥ. ಲಗ್ನವಾಗುವ ಮೊದಲು ತಾ ಬಸುರಿ! ಮುಂದೆ ತನ್ನ ಗತಿ?…
ಗುಂದೆ ಇಳಿದವಳೇ ಆಬೋಲೀನ ಅವಸರ ಅವಸರವಾಗಿ ರಸ್ತೆ ಸೇರಿ ಓಡಿಯೇ ಮನೆ ಸೇರಿದ್ದಳು. ಅದೇ ದಿನ ಸಂಜೆ ನಾನವಳ ಭೆಟ್ಟಿಗೆ ಹೋದದ್ದು-ಹುಚ್ಚಿಯಂತೆ ಅವಳು ತನ್ನ ಬತ್ತಲೆ ಹೊಟ್ಟೆಯನ್ನು ನನಗೆ ತೋರಿಸಿದ್ದು. ಅಂದು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಈ ದೀವರ ಹೆಂಗಸರಿಂದಲೇ ತಿಳಿದಿದ್ದು, ಪದ್ದಕ್ಕನಿಗೆ, ಊರಿನ ಉಳಿದ ಅನೇಕರಿಗೆ ಈ ಗುಂದೆಯ ಪ್ರಕರಣ. ಇಂದೆಲ್ಲ ಅರ್ಥವಾಗುತ್ತದೆ; ಆದರೆ ಅಂದು?….
ಅಂದು-
ನಾನು ಅಂಬೋಲೀನಳು ಕೇಳಿದ ಪ್ರಶ್ನೆಗೆ ಹೆದರಿ ಅವಳ ಹಿಡಿತದಿಂದ ಬಿಡಿಸಿಕೊಂಡು ಮನೆಗೆ ಓಡಿಹೋದ ತುಸು ಸಮಯದ ಬಳಿಕವೇ ಮನವೇಲ ತಿರುಗಿ ಆಬೋಲೀನಳನ್ನು ಭೆಟ್ಟಿಯಾದ. ಮನೆಯಲ್ಲಿ ಅವಳನ್ನು ಬಿಟ್ಟು ಯಾರೂ ಇಲ್ಲದ್ದನ್ನು ನೋಡಿ ಮನೆಯ ಹಿಂದಿನ ಪಾಗಾರದ ಅಡ್ಡ ನಿಂತು ಅವಳ ಹೆಸರಿನಿಂದ ಕೂಗಿದ. ಇನ್ನೂ ಬಾವಿಕಟ್ಟೆಯ ಬಳಿಯಲ್ಲೇ ಇದ್ದ ಆಬೋಲೀನ ಅವನ ದನಿಯಿಂದ ಬೆಚ್ಚಿಬಿದ್ದಳು. ಅಲ್ಲಿಂದ ಎದ್ದು ಮನೆಯ ಒಳಗೆ ಓಡಿ ಹೋಗಬೇಕು ಎನ್ನುವಾಗ ಮನವೇಲ ಎಂದ, ಯಾಚಿಸುವ ದನಿಯಲ್ಲಿ:
“ಒಂದು ಕ್ಷಣ ತಡೆ ಆಬೋಲೀನ್…ನೋಡು, ಯಾರಾದರೂ ಕೇಳಿದರೆ ನನ್ನ ಹೆಸರು ಹೇಳಬೇಡ, ದಮ್ಮಯ್ಯ…ಎರಡು ತಿಂಗಳೆಂದೂ ಹೇಳಬೇಡ…ಬೇಗ ಏನಾದರೂ…ಅದೆ! ಯಾರೋ ಬಂದರು…”ಎಂದವನೇ ಅಲ್ಲಿಂದ ಕಾಣದಾದ. ಒಳಗೆ ಬಂದವನು ಬಸ್ತ್ಯಾಂವ. ಆಬೋಲೀನಳಿಗೆ ತುಂಬ ಧೈರ್ಯವೆನಿಸಿತು. ಆದರೆ ಬಸ್ತ್ಯಾಂವ ಒಬ್ಬನೇ ಬಂದುದನ್ನು ನೋಡಿ ಕೇಳಿದಳು:
“ಅಪ್ಪ ಬರಲಿಲ್ಲವೇ, ಬಸ್ತ್ಯಾವ್?” ದನಿಯಲ್ಲಿ ನಡುಕವಿತ್ತು.
“ಅಪ್ಪ ಇಗರ್ಜಿಗೆ ಹೋಗಿದ್ದಾನೆ. ಪಾದ್ರಿ ನಾವು ಮಧ್ಯಾಹ್ನ ಗೋಕರ್ಣಕ್ಕೆ ಹೋಗುವಾಗಲೇ ನಮ್ಮನ್ನು ಭೆಟ್ಟಿಯಾಗಿ ಸಂಜೆ ತಮ್ಮನ್ನು ಕಾಣಲು ಹೇಳಿದ್ದರು” ಎಂದಬಸ್ತ್ಯಾಂವ. ಆಬೋಲೀನಳಿಗೆ ಕಣ್ಣಲ್ಲಿ ಕತ್ತಲೆ ಬಂದಂತಾಗಿ ನಿಂತಲ್ಲೆ ಕುಸಿದಳು. ಬಸ್ತ್ಯಾಂವ ಗಾಬರಿಯಾಗಿ,
“ಏನಾಯಿತ್ರ್ ಅಕ್ಕ?” ಎಂದು ಅವಳನ್ನು ಹಿಡಿಯಹೋದ.
“ನನಗೇಕೋ ಮೈಯಲ್ಲಿ ಸರಿಯಿಲ್ಲ. ನಾನು ತುಸು ಹೊತ್ತು ಇಲ್ಲಿಯೇ ಕೂಡ್ರುತ್ತೇನೆ. ಅಡುಗೆಯ ಮನೆಯಲ್ಲಿ ನಿನಗೆ ತಿನ್ನಲಿಕ್ಕೆ ಇಟ್ಟಿದ್ದೇನೆ; ಹೋಗಿ ತಿನ್ನು, “ಎಂದಳು ತನ್ನನ್ನು ಸಾವರಿಸಿಕೊಳ್ಳುತ್ತ. ಏನೂ ಅರಿಯದ ಬಸ್ತ್ಯಾಂವ ಕಕ್ಕಾವಿಕ್ಕಿಯಾಗಿ ಅವಳನ್ನೇ ಕೆಲಹೊತ್ತು ನೋಡಿ, ಕೊನೆಗೆ ತನ್ನ ತಿನ್ನುವ ಚಪಲವನ್ನು ತಡೆಯಲಾಗದೇ ಒಳಗೆ ನಡೆದ.
ಆಬೋಲೀನಳಿಗೆ ಕುಳಿತಲ್ಲೇ ತನಗೆ ತುಂಬ ದಣಿವಾದಂತೆ ಎನಿಸಿತು. ತನ್ನ ಅರಿವಿಗೆ ಮೀರಿದ ಅದ್ಭುತ ಕರಾಳ ಶಕ್ತಿಗಳು ತನ್ನನ್ನು ಎಲ್ಲೆಡೆಯಿಂದಲೂ ಮುತ್ತಿ ಗಾಸಿಗೊಳಿಸುವಂತೆ ಭಾಸವಾಯಿತು. ಪಾದ್ರಿ ಅಪ್ಪನನ್ನು ಕರೆಸಿದ್ದಾರೆ, ಯಾಕೆ? ಅವರಿಗೂ ತಿಳಿದಿದೆಯೇ ತನಗೇ ಇನ್ನೂ ತಿಳಿಯದ ಸಂಗತಿ? ಅಮ್ಮ ಇದ್ದಿದ್ದರೆ?…ಅವಳ ಅಂಗಾಂಗಗಳೆಲ್ಲ ನಿರ್ವಿಣ್ಣವಾದವು. ಕುಳಿತಲ್ಲಿಂದ ಏಳುವ ಶಕ್ತಿಯೇ ತನ್ನಲ್ಲಿ ಉಳಿದಿಲ್ಲ ಎನಿಸಿತು. ಒಂದೇ ದಿನದಲ್ಲಿ ಎಷ್ಟೊಂದು ಜೀವ ಹಿಂಡುವ ಅನುಭವ! ಕತ್ತಲೆ! ಕತ್ತಲೆ! ಎಲ್ಲೂ ಬೆಳಕೇ ತೋರದಲ್ಲ!
ದೀಪ ಹಚ್ಚುವ ಹೊತ್ತಾದುದರಿಂದ ಆಬೋಲೀನ ಮೆಲ್ಲನೆ ಎದ್ದು ಕೈಕಾಲು ತೊಳೆದು ದೇವರ ಕೋಣೆ ಹೊಕ್ಕು ಮೇರಿ ಹಾಗೂ ಕ್ರೈಸ್ತರ ಮೂರ್ತಿಗಳ ಮುಂದೆ ಮೇಣದ ಬತ್ತಿ ಹಚ್ಚಿ ಮೊಣಕಾಲೂರಿ ಪ್ರಾರ್ಥಿಸಹತ್ತಿದಳು:
“ಸಾಂತಾ ಮೊರೀಯೇ, ದೇವಾಚೇ ಮಾಯೇ ಆಮೀಂ
ಪಾಪಿಯಾಂ ಖಾತೀರ್ ವಿನೋತಿ ಕೋರ್ ಆತಾಂ
ಆನೀ ಅಮ್ಚಾ ಮೋರ್ನಾಂ ಚಾ ಕಾಳೀಂ. ಆಮೇನ್…
ಶಾರ್ಣಾ ಎತಾಂ ತುಕಾ ರಾಣಿಯೇ, ಕಾಕುಳ್ತೇಚೇ ಮಾಯೇ
ತುಂ ಅಮ್ಚೊ ಜೀವ್, ತುಂ ಅಮ್ಚೊ ಬೊರ್ವೊಂಸೊ,
ತುಕಾ ಶಾರ್ಣಾ ಎಂತಾಂ…”

ಇಗರ್ಜಿಯ ಮೆಟ್ಟಿಲುಗಳನ್ನು ಹತ್ತುತ್ತಿದ್ದ ಕೈತಾನ ತಿರುತಿರುಗಿ ಮಧ್ಯಾಹ್ನ ತನ್ನನ್ನು ಆ ಸಂಕದ ಬಳಿಯಲ್ಲಿ ಸಂಧಿಸಿ ಮಾತನಾಡಿಸಿದ ಪಾದ್ರಿಯ ಗಂಭೀರ ಮುಖಭಾವವನ್ನೇ ನೆನಸುತ್ತಿದ್ದ. “ನಿನ್ನ ಹತ್ತಿರ ಮಾತನಾಡುವುದಿದೆ; ಸಂಜೆ ಬಂದು ಭೆಟ್ಟಿಯಾಗುವೆಯಾ?” ಎಂದು ಕೇಳಿದರು ಪಾದ್ರಿ. ಎಂದೂ ಹಾಗೆ ಕರೆದವರಲ್ಲ. ಇಂದೇ ಏಕೆ?
ಇಗರ್ಜಿ ಒಂದು ಸಣ್ಣ ಗುಡ್ಡದ ತುದಿಗೆ ಇದೆ. ಇಗರ್ಜಿಯ ಅಂಗಳದಲ್ಲಿ ಶತಪಥ ಹಾಕುತ್ತಿದ್ದ ಪಾದ್ರಿ ಕೈತಾನನನ್ನು ಕಂಡ ಕೂಡಲೇ ಅಂದರು:
“ಬಾ ಕೈತಾನ, ನಿನ್ನದೇ ದಾರಿ ನೋಡುತ್ತಿದ್ದೆ.”
ಪಾದ್ರಿಯ ದನಿಯಲ್ಲಿ ಇನ್ನೂ ಮಧ್ಯಾಹ್ನದ್ದೇ ಗಾಂಭೀರ್ಯವಿತ್ತು.
“ಏನು ಗುರುಗಲೇ, ಏಕೆ ಕರೆಸಿದಿರಿ?”
ಪಾದ್ರಿ ಅವನನ್ನು ಸಮೀಪ ಕರೆಯಿಸಿ, ಅಂಗಳದ ಪಶ್ಚಿಮಕ್ಕಿದ್ದ ದೊಡ್ಡ ಕಲ್ಲುಕಟ್ಟೆಯ ಮೇಲೆ ತಮ್ಮ ಬಳಿಯಲ್ಲೇ ಕೂಡ್ರಿಸಿಕೊಂಡು ಕೆಲಹೊತ್ತು ಮೌನವಾಗಿ ಉಳಿದರು. ಕೈತಾನನ ದುಗುಡ ಇನ್ನೂ ಹೆಚ್ಚಿತು. ಕೊನೆಗೆ ಕೇಳಿದರು ಪಾದ್ರಿ, ಅತಿ ಶಾಂತ ದನಿಯಲ್ಲಿ:
“ನಿನ್ನ ಹೆಂಡತಿ ಸತ್ತು ಬಹಳ ವರುಷಗಳಾದುವು ಅಲ್ಲವೆ?”
“ಅಹುದು ತಂದೆ, ಹತ್ತು ವರುಷಗಳ ಮೇಲಾದುವು”
(ಆದರೆ ಈಗೇಕೆ ಅವಳ ಮಾತು?)
“ಅವಳು ಸಾಯುವಾಗ ಆಬೋಲೀನ್…”
“ಮೂರೋ ನಾಲ್ಕೋ ವರುಷದವಳು.”
“ಈಗ ಪ್ರಾಯಕ್ಕೆ ಬರುವ ಹುಡುಗಿ…”
ಕೈತಾನ ಮಾತಾಡಲಿಲ್ಲ.
ಪಾದ್ರಿಯೇ ಮುಂದುವರೆಸಿದರು:
“ತಾಯನ್ನು ಕಳಕೊಂಡು ಹುಡುಗಿಯ ಜೋಪಾನ ತುಂಬ ಕಾಳಜಿಯಿಂದ ಆಗಬೇಕಾಗುತ್ತದೆ. ಅಲ್ಲವೇ?”
ಕೈತಾನನಿಗೆ ಇದಾವುದರ ಅರ್ಥವೇ ಆಗುತ್ತಿರಲಿಲ್ಲ. ಆದರೂ ನುಡಿದ:
“ಆಬೋಲೀನ ಬಹಳ ಚುರುಕು ಹುಡುಗಿ; ನನ್ನನ್ನು ತನ್ನ ಮಗುವಿನಂತೆ ನೋಡಿಕೊಳ್ಳುತ್ತಾಳೆ.”
“ಅಲ್ಲೇ ತಪ್ಪಿದ್ದು. ನೀನು ಅವಳನ್ನು ತಂದೆಯಂತೆ ನೋಡಿಕೊಳ್ಳಲಿಲ್ಲ. ಪ್ರಾಯಕ್ಕೆ ಬರುವ ಹುಡುಗಿ…”
“ನಿಮ್ಮ ಮಾತಿನ ಅರ್ಥ….?”
“ಹುಡುಗಿಗೆ ತನ್ನ ಶೀಲಕ್ಕಿಂತ ಪವಿತ್ರವಾದುದು ಬೇರೊಂದಿದೆಯೆ?”
“ಆದರೆ ನನ್ನ ಆಬೋಲೀನ ಹೂವಿನಂತಹಳು: ಪವಿತ್ರಳು.”
ಕೈತಾನನ ಮಾತಿನಲ್ಲಿ ಬಿರುಸಿತ್ತು.
“ಅವಳು ತನ್ನ ಕೌಮಾರ್ಯವನ್ನು ಕಳಕೊಂಡಿದ್ದಾಳೆ.”
ಈ ಗಂಭೀರವಾದ ಆಪಾದನೆಯಿಂದ ಕೈತಾನನ ಮೇಲೆ ಸಿಡಿಲೆರಗಿದಂತಾಯಿತು. ಅಯ್ಯೋ! ತಾನಿದೇನು ಕೇಳುತ್ತಿದ್ದೇನೆ! ತನ್ನ ಆಬೋಲೀನ ಕುಮಾರಿಯಲ್ಲ!
“ಇಲ್ಲ ಇಲ್ಲ ತಂದೆಯೇ, ಇದರಲ್ಲೇನೋ ತಪ್ಪಿದೆ.”
“ನನಗೆಲ್ಲ ತಿಳಿದಿದೆ ಕೈತಾನ, ನಿನ್ನ ಮಗಳನ್ನೇ ಕೇಳಿನೋಡು. ಅವಳು ತಾಯಿಯಾಗಲಿದ್ದಾಳೆ. ನನಗೆ ನಿಮ್ಮ ಮೇಲೆ ದ್ವೇಷವೇ, ಇಲ್ಲದ ಆರೋಪ ಹೊರಿಸಲು? ನನಗಿದಾವುದರಲ್ಲೂ ಸಂತೋಷವಿಲ್ಲ ಕೈತಾನ. ಬಹಳ ದುಃಖಪಟ್ತಿದ್ದೇನೆ, ನೊಂದುಕೊಂಡಿದ್ದೇನೆ. ಹಲವಾರು ದಿನಗಳ ಮೊದಲೇ ಗಾಳಿ ಸುದ್ದಿ ಕೇಳಿದಂತಿತ್ತು. ಆದರೂ ನಿನ್ನ ಮೇಲೆ ವಿಶ್ವಾಸವಿಟ್ಟು ಸುಮ್ಮಗುಳಿದೆ…‘ಅವನ’ ಹೆಸರು ತಿಳಿದಿದೆ. ಇದಕ್ಕೆ ಬೇರೆ ಉಪಾಯವೇ ಇಲ್ಲ. ಅವರಿಬ್ಬರ ಮದುವೆ. ಅವನೂ ಇದಕ್ಕೆ ಒಪ್ಪಿರಲಿಲ್ಲ. ಎಲ್ಲ ತಪ್ಪನ್ನು ಆಬೋಲೀನಳ ಮೇಲೆ ಹೊರಿಸಲು ಯತ್ನಿಸಿದ. ನಾನೇ ತಿಳಿಹೇಳಿ ಒಪ್ಪಿಸಿದ್ದೇನೆ. ಮನೆಗೆ ಹೋಗಿ ಆಬೋಲೀನಳನ್ನು ವಿಚಾರಿಸು…”
ಕೈತಾನನಿಗೆ ಮುಂದೆ ಕೇಳುವ ಶಕ್ತಿಯಿರಲಿಲ್ಲ. ಅವನ ಇಳಜೀವ ಆಗಲೇ ಮೂರ್ಛೆ ಹೋಗುವ ಸ್ಥಿತಿಯಲ್ಲಿತ್ತು. ಇದೆಂತಹ ಅನರ್ಥ! ಪಾದ್ರಿಯ ಕಿವಿಯವರೆಗೂ ಮುಟ್ಟಿರಬೇಕಾದರೆ ಸುದ್ದಿ ಊರೆಲ್ಲ ಹರಡಿರಬೇಕು. ಅಯ್ಯೊ ದೇವರೇ! ಪಾದ್ರಿ ಅಂದಂತೆ ನಾನೇ ದುರ್ಲಕ್ಷ್ಯ ಮಾದಿದೆ. ಎಲ್ಲವನ್ನೂ ಆ ಮಗುವಿಗೇ ವಹಿಸಿದೆ. ಆದರೂ ನನ್ನ ಆಬೋಲೀನ ಅಂತಹಳಲ್ಲ…ಅಂತಹಳಲ್ಲ…ಎನ್ನುತ್ತ ಮನೆಯತ್ತ ಸಾಗಿದ್ದ ಕೈತಾನ.

ದೇವರ ಮೂರ್ತಿಯ ಮುಂದೆ ಮೊಣಕಾಲೂರಿ ಪ್ರಾರ್ಥಿಸುತ್ತಿದ್ದ ಆಬೋಲೀನಳಿಗೆ ಜಗಲಿಯ ಮೇಲಿನ ಹೆಜ್ಜೆಯ ಸದ್ದು ತನ್ನ ತಂದೆಯದೆಂದು ಗುರುತಿಸಲು ಹೊತ್ತು ಹಿಡಿಯಲಿಲ್ಲ. ಎಡಬಿಡದೆ ತನ್ನತ್ತಲೇ ಬರುತ್ತಿದ್ದ ಆ ಹೆಜ್ಜೆಯ ಸಪ್ಪಳಕ್ಕೆ ಸಾವೇ ತನ್ನೆಡೆಗೆ ಬರುತ್ತಿದೆ ಎಂಬಂತೆ ಗಡಗಡ ನಡುಗಿದಳು. “ತಾಯೇ ಮೇರೀ ನೀನೇ ಕಾಯಬೇಕು; ನಾನು ನಿರಪರಾಧಿ, ಏನೂ ಅರಿಯದವಳು” ಎಂದು ಪ್ರಾರ್ಥಿಸಿದಳು. ಕೈತಾನ ಬಂದವನೇ ಅಧೀರ ಹೆಜ್ಜೆ ಇಡುತ್ತ ದೇವರ ಮನೆಯಲ್ಲಿದ್ದ ಆಬೋಲೀನಳನ್ನು ಸಮೀಪಿಸಿದ. ಆಬೋಲೀನಳನ್ನು ಕುರಿತು ಮೊದಲೊಮ್ಮೆ ಅತ್ಯಂತ ಸಿಟ್ಟು, ಆ ನಂತರ ತಿರಸ್ಕಾರ ಮೂಡಿದ್ದವು. ಆದರೆ ದೇವರ ಮೂರ್ತಿಯ ಮುಂದೆ ಒರಗಿದ ಆ ಚಿಕ್ಕ ದೇಹವನ್ನು ಕಂಡಕೂಡಲೇ ವಾತ್ಸಲ್ಯವೇ ಬಾಯಿ ಬಿಟ್ಟು ಕರೆಯಿತು:
“ಮಗೂ ಆಬೋಲೀನ”
ಆಬೋಲೀನಳಿಂದ ಯಾವ ಉತ್ತರವೂ ಬರಲಿಲ್ಲ. ಅವಳು ತನ್ನ ನಡುಕವನ್ನು ಅಡಗಿಸಲು ಇನ್ನಷ್ಟು ಬಗ್ಗಿದಳು. ಆದರೂ ಸಾಧ್ಯವಾಗಲಿಲ್ಲ. ಮೇಣಬತ್ತಿಯ ಬೆಳಕಿನಲ್ಲಿಕೈತಾನನಿಗೆ ಈ ನಡುಕ ಕಂಡಿರಲಿಕ್ಕಿಲ್ಲ. ತನ್ನ ಕರೆಗೆ ಓ ಬರದಿದ್ದನ್ನು ಕಂದು ಅಂದ:
“ಇಗರ್ಜಿಗೆ ಹೋಗಿ ಬಂದೆ; ಪಾದ್ರಿ ಬರಹೇಳಿದ್ದರು.”
ತಂದೆಯ ಮಾತನ್ನು ಕೇಳಿದ ಮೇಲೂ ತನ್ನ ಭಯ, ದುಃಖ ತಡೆಯಲಾಗಲಿಲ್ಲ. ಒಡನೆಯೇ ತನ್ನ ಜಾಗದಿಂದ ಎದ್ದು ತನ್ನ ತಂದೆಯ ಕಾಲುಗಳನ್ನು ಗಟ್ಟಿಯಾಗಿ ಹಿಡಿದು, ಸಂಯಮದ ಕಟ್ಟೆಯೊಡೆದು ಹರಿಯುತ್ತಿದ್ದ ತನ್ನ ಕಂಬನಿಗಳಿಂದ ಅವನ ಪಾದಗಳನ್ನು ಒದ್ದೆ ಮಾಡಿದಳು. ಪಾದ್ರಿ ಹೇಳಿದ ಮಾತು ನಿಜ ಹಾಗಾದರೆ-ನಿಜ ಹಾಗಾದರೆ! ಇಲ್ಲದಿದ್ದರೆ ಈಗ ತಾನು ನೋಡುತ್ತಿದ್ದುದರ ಅರ್ಥವೇನು?
“ಅಯ್ಯೋ ಮಗು, ಇದೇನಾಯಿತು! ಇದು ನಿಜವೇ?”
ಕೈತಾನ ನಿಂತಲ್ಲೇ ಕುಳಿತು ತನ್ನ ಕಾಲ ಮೇಲೆ ಒರಗಿದಾ‌ಅಬೋಲೀನಳ ಬೆಂನ್ನಮೇಲೆ ವಾತ್ಸಲ್ಯದ ಕೈಯಾಡಿಸಿದ. ಇದರಿಂದ ಅವಳ ಅಳು ಇನ್ನೂ ಹೆಚ್ಚಾಯಿತೇ ಹೊರತು ಅವಳ ಬಾಯಿಯಿಂದ ಯಾವ ಶಬ್ದವೂ ಹೊರಬೀಳಲಿಲ್ಲ. ಆದರೆ ‘ಅದು’ ಹೌದು, ‘ಅದೆಲ್ಲ’ ನಿಜ ಎನ್ನುವುದಕ್ಕೆ ಇನ್ನೆಂತಹ ಸಾಕ್ಷಿ ಬೇಕಿತ್ತು?
“ಅಳಬೇಡ ಕಂದಾ ಅಳಬೇಡ. ದೇವರಿದ್ದಾನೆ, ಅವನೇ ರಕ್ಷಿಸುವ.”
ಕೈತಾನ ಆಬೋಲೀನಳ ಬೆನ್ನಮೇಲೆ ಕೈಯಾಡಿಸುತ್ತಲೇ ಇದ್ದ. ದೊಡ್ಡವಳಾದಮೇಲೆ ತಂದೆ ತನ್ನನ್ನು ಮುಟ್ಟಿದ್ದು ಇದೇ ಮೊದಲು. ತಿರುಗಿ ಗಂಡಸಿನ ಸ್ಪರ್ಷ; ಆದರೆ ಎಷ್ಟು ಬೇರೆ ರೀತಿಯದು! ಎಂತಹ ತುಂಬಿದ ಮಮತೆಯಿತ್ತು ಅದರಲ್ಲಿ, ಎಂತಹ ಸಂರಕ್ಷಣೆಯ ಆಶ್ವಾಸನ! “ಇದೆಲ್ಲ ಹೇಗಾಯಿತು?”
ತನ್ನ ದನಿಯ ಗುರುತು ತನಗೇ ಹತ್ತಿತೋ ಇಲ್ಲವೋ ಕೈತಾನನಿಗೆ.
“ಈಶ್ವರ ದೇಗುಲದಲ್ಲಿ.”
ಆಬೋಲೀನಳ ತುಸು ಶಾಂತವಾಗುತ್ತಲಿದ್ದ ಅಳು ಇನ್ನೊಮ್ಮೆ ಹೆಚ್ಚಿತು. ಆದರೆ ಅವಳ ಬಾಯಿಯಿಂದ ಬಂದ ಎರಡೇ ಶಬ್ದಗಳಿಂದ ಕೈತಾನನ ಕಣ್ಣಮುಂದೆ ಎಂದಿಗೂ ಕತ್ತಲೆ ಇದ್ದಂತಿದ್ದ ಆ ದೇವಸ್ಥಾನದ ಪಡಸಾಲೆಯಲ್ಲಿ ತನ್ನ ಮಗಳು ಹಾಗೂ ‘ಅವನು’ ಒಂದೆಡೆ…..ಎಷ್ಟೆಷ್ಟೋ ಅಸಹ್ಯ ಚಿತ್ರಗಳು ಕಣ್ಣಮುಂದೆ ನಿಂತವು. ಆದರೆ ತಾನು ಹೀಗೆ ಕಲ್ಪಿಸಿಕೊಂಡದ್ದಕ್ಕೂ, ತನ್ನ ಮಗಳು ಉಚ್ಚರಿಸಿದ ಆ ಎರಡು ಶಬ್ದಗಳಿಗೂ ಯಾವ ಸಂಬಂಧವೂ ಇರಲಿಲ್ಲ ಎನ್ನುವುದು ತಿಳಿಯುವ ಬಗೆ ಹೇಗೆ?
“ಎಷ್ಟು ತಿಂಗಳು?”
“ಎರಡು.”
ಮನವೇಲ ಹೇಳಿರಲಿಲ್ಲವೇ?-ಯಾರಾದರೂ ಕೇಳಿದರೆ ಎರಡು ತಿಂಗಳೆಂದು ಮಾತ್ರ ಹೇಳಬೇಡ ಎಂದು? ದುಷ್ಟ! ಮಾಡುವುದೆಲ್ಲವನ್ನೂ ಮಾಡಿ ಈಗಲೂ ಮೋಸಗೊಳಿಸುವೆಯಾ? ಪಾದ್ರಿಗೆ ತಿಳಿದಿದೆ; ಅಪ್ಪನಿಗೆ ಗೊತ್ತಾಗಿದೆ; ಊರಿಗೆ ಊರೇ….ಅಯ್ಯೋ! ಅಂದೇ ತನಗೆ ಅನ್ನಿಸಿತ್ತು-ಆ ದೀವರ ಹೆಂಗಸು ಕೊನೆಗೂ ತನ್ನನ್ನು ಗುರುತಿಸಿರಬೇಕು….ಈಗಲೂ ಸತ್ಯವನ್ನು ಬಚ್ಚಿಟ್ಟರೆ ತನಗೆ ಉಳಿಗಾಲ ಇಲ್ಲವೆಂದು ಅರಿತೇ ನುಡಿದಿದ್ದಳು, ಇಲ್ಲದ ಧೈರ್ಯ ತಂದುಕೊಂಡು:
“ಎರಡು ತಿಂಗಳು”
ಕೂಡಲೇ ಮದುವೆ ಮಾಡಿದರೆ ಜನರ ಬಾಯನ್ನು ಮುಚ್ಚಬಹುದು ಎಂದೆನಿಸಿತು, ಕೈತಾನನಿಗೆ:
“ಯಾರು?”
“ಮನವೇಲ.”
ಈಗಲೂ ಆ ಮೋಸಗಾರ ಮನವೇಲನನ್ನು ಉಳಿಸುವ ಯತ್ನಮಾಡಲಿಲ್ಲ ಆಬೋಲೀನ. ಆದರೆ ಇದೆಲ್ಲದರಿಂದ ತನ್ನ ಬಲಿ ತಗೊಳ್ಳಲೆಂದೇ ಮನವೇಲ ಸಿದ್ಧಗೊಳಿಸಿಟ್ಟ ಯಮಪಾಶಕ್ಕೆ ತಾನಾಗಿ ಕೊರಳು ಸೇರಿಸುತ್ತಿದ್ದೇನೆ ಎನ್ನುವ ಅರಿವು ಮಾತ್ರ ಆ ಮುಗ್ಧ ನಿಷ್ಪಾಪ ಜೀವಕ್ಕೆ ಕೊನೆಗೂ ಬರಲಿಲ್ಲ.
ಮುಂದಿನ ಐದಾರು ದಿನಗಳಲ್ಲೇ ಆಬೋಲೀನಳ ಲಗ್ನವು ನಿಶ್ಚಯವಾಗಿ ಒಂದು ದಿನ ಮದುವೆಯೂ ಆಗಿಬಿಟ್ಟಿತು-ಪಾದ್ರಿಯ, ಧರ್ಮದ ಆಶೀರ್ವಾದ ಪಡೆದು.
ಹೊಣೆಗೇಡಿ ನಿಂದಕರು ಹಲವರು ಈ ಮದುವೆಯನ್ನು ಕುರಿತು ಏನಿಲ್ಲದ್ದೊಂದು ಆಡಿಕೊಂಡರೂ ವಿಶಾಲಹೃದಯದ, ಮಾನವ ಅಂತಃಕರಣದ ಕೆಲವು ಸಜ್ಜನರು ಮಾತ್ರ ಸಮಾಧಾನ ತೋರಿದರು. ಮನವೇಲನೇನೋ ಈ ಹುಡುಗಿಗೆ ಯೋಗ್ಯನಾದ ವರನಲ್ಲ. ಆದರೂ ಬಂದೊದಗಿದ ಅನರ್ಥಕ್ಕೆ ಒಂದು ಪರಿಹಾರ ದೊರಕಿತಲ್ಲ. ಇಲ್ಲವಾದರೆ ಹುಡುಗಿಯ ಆಯುಷ್ಯವೇ ಹಾಳಾಗುವ ಸಂದರ್ಭ. ಇದೆಲ್ಲವನ್ನೂ ಸಕಾಲದಲ್ಲಿ ಕಂಡುಹಿಡಿದ ಪಾದ್ರಿಯನ್ನೂ ಹೆಚ್ಚಿನ ‘ಗಲಾಟೆ’ಯಾಗುವ ಮೊದಲೇ ಲಗ್ನ ಜರುಗಿಸಿದ ಅವರ ದೂರದೃಷ್ಟಿಯನ್ನೂ ಜನರು ಹೊಗಳದೇ ಇರಲಿಲ್ಲ.
ಆದರೆ ಮನವೇಲನ ಧೂರ್ತ ಕಪಟ ಪಾದ್ರಿಯನ್ನೂ ಮೋಸಗೊಳಿಸಿತ್ತು ಎನ್ನುವುದರ ಕಲ್ಪನೆ ಮಾತ್ರ ಆಗ ಯಾರಿಗೂ ಬಂದಿರುವುದು ಶಕ್ಯವಿರಲಿಲ್ಲ.

ಚಕ್ರಖಂಡೇಶ್ವರ ದೇವಸ್ಥಾನದಲ್ಲಿ ಮನವೇಲನ ಅಪ್ಪುಗೆಯಲ್ಲಿ ಆಬೋಲೀನಳನ್ನು ಕಂಡದ್ದು ಬರಿಯ ಆ ದೀವರ ಹೆಂಗಸು ಒಬ್ಬಳೇ ಆಗಿರಲಿಲ್ಲ. ಮನವೇಲನ ಕೇರಿಯವರೇ ಇಬ್ಬರು ಕ್ರಿಶ್ಚಿಯನ್ನರು ನೋಡಿದ್ದರು. ನೋಡಿದ ಸಂಗತಿ ಇನ್ನು ಕೆಲವರ ಕಿವಿಗೆ ಮುಟ್ಟುವ ಹೊತ್ತಿಗೆ ಬೇರೆಯ ಒಂದು ರೂಪ ತಳೆದು ಮುಂದೆ ಕೆಲವು ದಿನಗಳ ನಂತರ ಇಗರ್ಜಿಯ ಪಾದ್ರಿಯ ಕಿವಿಗೂ ಮುಟ್ಟುವುದರಲ್ಲಿತ್ತು. ಆದರೆ ಮನವೇಲನನ್ನು ಬಲ್ಲವರು ಅವನ ಗೊಡವೆಗೆ ಹೋಗಲು ಅಂಜುತ್ತಿದ್ದರಿಂದಲೋ ಏನೋ ಆ ವಿಷಯ ಹೆಚ್ಚು ಗದ್ದಲವಾಗದೇ ಆ ಘಟನೆಯನ್ನೇ ಮರೆಯುವ ಸ್ಥಿತಿ ಬಂತು. ಪಾಪ! ಮುದುಕ ಕೈತಾನನಿಗೆ ಮಾತ್ರ ಇದರ ಸುಳಿವು ಕೊನೆಗೂ ಹತ್ತಲಿಲ್ಲ.
ಹೀಗಿರುವಾಗ ಒಂದು ದಿನ, ಪಾದ್ರಿ ಕೈತಾನನನ್ನು ಇಗರ್ಜಿಗೆ ಕರೆ ಕಳಿಸಿದುದರ ಏಳೆಂಟು ದಿನಗಳ ಮೊದಲು-ಆಬೋಲೀನ ನಿತ್ಯದಂತೆ ಗುಂದೆಗಳಿಂದ ಸುರಗೀಕಾಯಿಗಳನ್ನು ಹೆಕ್ಕಿ ಮನೆಗೆ ಬರುತ್ತಿರುವಾಗ ಹಾದಿಯಲ್ಲಿ ಮನವೇಲನ ಕೇರಿಯ ಹುಡುಗಿಯೊಬ್ಬಳು(ಪುಲ್ಲು ಎಂದು ಅವಳ ಹೆಸರು)ಭೇಟಿಯಾದಳು. ಸಾಧಾರಣ ಆಬೋಲೀನಳದೇ ವಯಸ್ಸಿನವಳು-ಇಲ್ಲ, ತುಸು ದೊಡ್ಡವಳು. ಆದರೆ ಬಲು ಧೂರ್ತಳು. ಗುಂದೆಗಳಲ್ಲಿ ಇಲ್ಲ ಗದ್ದೆಗಳಲ್ಲಿ ಬಿದ್ದ ಸಗಣಿಯನ್ನು ಒಟ್ಟುಗೂಡಿಸಲು ಬಂದಾಗ ಇಲ್ಲವೇ ಇಗರ್ಜಿಗೆ ಹೋದಾಗ ಆಗೀಗ ಮಾತನಾಡಿ ಪರಿಚಯವೇ ಹೊರತು ಹೆಚ್ಚಿನ ಸಲಿಗೆಯಿದ್ದವಳಲ್ಲ. ಆದರೆ ತನ್ನಂತೆಯೇ ಒಂದು ಹೆಣ್ಣು ಜೀವ ತಾನೆ! ತನ್ನನ್ನು ಅನೇಕ ದಿನಗಳಿಂದ ಕಾಡುತ್ತಿದ್ದ ದುಷ್ಟ ಭೀತಿಯೊಂದನ್ನು ಹೆಣ್ಣಿನೊಂದಿಗೆ ಹಂಚಿಕೊಳ್ಳಬೇಕೆಂಬ ಆಂತರಿಕ ಒತ್ತಡ ಅಚಾನಕವಾಗಿ ಭೆಟ್ಟಿಯಾದ ಈ ಹುಡುಗಿಯಲ್ಲೂ ಒಬ್ಬ ಆಪ್ತಳನ್ನು ಕಾಣಲು ಹಚ್ಚಿರಬೇಕು. ಇಲ್ಲ, ನನ್ನ ಅಪ್ಪ ಹೇಳುವಂತೆ ಮುಂದೆ ನಡೆಯಲಿದ್ದ ದುರಂತದ ಸೂತ್ರಧಾರಿಯಾದ ವಿಧಿ ಇವರಿಬ್ಬರು ಹೀಗೆ ಭೆಟ್ಟಿಯಾಗುವುದನ್ನೇ ಕಾಯುತ್ತಿರಬೆಕು. ಒಟ್ಟಿನಲ್ಲಿ ಪುಲ್ಲು ಭೆಟ್ಟಿಯಾದುದೇ ‘ಯಾವಾಗೊಮ್ಮೆ ನೀನು ಸಿಗುವೆ; ನಿನ್ನನ್ನು ಕೇಳುವೆ’ ಎಂದು ಕಾಯುತ್ತ ನಿಂತವಳ ರೀತಿಯಲ್ಲಿ ಆಬೋಲೀನ ಕೇಳಿದಳು- ಈ ಘಟನೆಯ ಎಂಟು ದಿನಗಳ ನಂತರ ನನ್ನನ್ನು ಕೇಳಿದುದನ್ನೇ-“ಪುಲ್ಲು, ಮಕ್ಕಳು ಆಗುವುದು ಹೇಗೆ? ಗೊತ್ತೇ?” ಮುಗ್ಧ ಸ್ವಭಾವದ ಆಬೋಲೀನಳಿಗೆ ತಾನು ಕೇಳಿದ ಪ್ರಶ್ನೆಗೆ ಪುಲ್ಲು ಯಾವ ಅರ್ಥ ಹಚ್ಚಬಹುದು ಎಂಬುದರ ಕಲ್ಪನೆ ಆಗ ಇರಲಿಲ್ಲ. ಆದರೆ ಪುಲ್ಲು ಮಾತ್ರ ಈ ಪ್ರಶ್ನೆಯ ಹಿಂದಿನ ಗುಟ್ಟೆಲ್ಲ ತನಗೆ ಗೊತ್ತಿದೆ ಎನ್ನುವ ಹಾಗೆ ಅತ್ಯಂತ ತಿರಸ್ಕಾರದಿಂದ “ಹೋಗೇ” ಎಂದು ಆಬೋಲೀನಳ ಮೇಲೆ ಹರಿಹಾಯ್ದು ಅಲ್ಲಿಂದ ಕಾಲ್ದೆಗೆದವಳೇ ಅವಸರ ಅವಸರವಾಗಿ ತನ್ನ ಕೇರಿಯತ್ತ ಸಾಗಿದಳು- ‘ನಿನ್ನ ಜೊತೆಯಲ್ಲಿ ಕಾಣಿಸಿಕೊಳ್ಳುವುದೂ ಅಪರಾಧವಾದೀತು’ ಎನ್ನುವ ಭಾವ ಪ್ರಕಟಿಸುತ್ತ. ಇದೆಲ್ಲದರಿಂದ ಆಬೋಲೀನ ಇನ್ನಷ್ಟು ಕಂಗೆಟ್ಟಳು.
ಪುಲ್ಲು ಮನೆ ಮುಟ್ಟಿದುದೇ, ನಡೆದುದರ ವರದಿಯನ್ನು ತಾಯಿಗೆ ಮುಟ್ಟಿಸಿದಳು. ಕೇಳಿದ ತಾಯಿ ‘ಅಬ್ಬಾ’ ಎಂದಳು. ಕೆಲವು ದಿನಗಳ ಮೊದಲು ಕೇಳಿದ ಚಕ್ರಖಂಡೇಶ್ವರದ ಪ್ರಕರಣ ಆಬೋಲೀನಳ ಈ ನಿಷ್ಪಾಪ ಪ್ರಶ್ನೆಗೆ ಒಂದೇ ಅರ್ಥ ಸೂಚಿಸಿತು. ಆಗ ಗಾಳಿಯಲ್ಲಿ ತೂರಿ ಬಂದ ಆ ಸಣ್ಣ ‘ಪುಚ್ಛ’ವೂ ಈಗ ಜೀವಕಳೆ ಧರಿಸಿ, ಬಲಿತು ದೊಡ್ಡ ‘ಕಾಗೆ’ಯೇ ಆಗಿ ಕೇರಿಯಲ್ಲಿ ಅಲ್ಲಲ್ಲಿ ಹಾರಾಡಿತು-ಕಾವ್‌ಗುಟ್ಟಿತು! ಕೇರಿಯ ಮಾನವಂತರು ಕೆಲವರು ಹುಡುಗಿಯ ಭವಿಷ್ಯದ ಬಗ್ಗೆ ಕಳವಳಪಟ್ಟು ಸುದ್ದಿಯನ್ನು ಪಾದ್ರಿಯ ಕಿವಿಯಲ್ಲಿ ಹಾಕಿದರು. ಸುದ್ದಿ ಬಂದ ದಿನವೇ ಪಾದ್ರಿ ಮನವೇಲನನ್ನು ಕರೆಕಳಿಸಿದರು. ಊಹಿಸಿ ನೋಡಿದಲ್ಲಿ ಇದು ಗುಂದೆಯ ಪ್ರಕರಣದ ಮುನ್ನಾದಿನ ಎಂದು ಗೊತ್ತಾಗುವುದು.
ಮನವೇಲ ಪಾದ್ರಿಯನ್ನು ಭೆಟ್ಟಿಯಾಗಲು ನಡೆದ.
ಕೇರಿಯಲ್ಲೆಲ್ಲ ಹರಡಿದ ಸುದ್ದಿ ಮನವೇಲನ ಕಿವಿಗೂ ಮುಟ್ಟದೇ ಇರುತ್ತದೆಯೆ? ಆಬೋಲೀನ ಪುಲ್ಲೂಗೆ ಕೇಳಿದ ಪ್ರಶ್ನೆಯ ಹಿಂದಿನ ನಿಜವಾದ ಗುಟ್ಟನ್ನು ಅವನೊಬ್ಬನೇ ಬಲ್ಲವನಾಗಿದ್ದ. ಆದರೆ ಸುದ್ದಿ ಕೇಳಿದಾಗ ಅವನಿಗೂ ಮೊದಲು ಆಶ್ಚರ್ಯವಾಗದಿರಲಿಲ್ಲ. ಅಂದು ದೇಗುಲದಲ್ಲಿ ತಾನು ಹಾಕಿದ್ದ ಆ ದುಷ್ಟ ಭೀತಿ ಇಷ್ಟು ಬೇಗ ಫಲಕಾರಿಯಾಗಬಹುದೆಂದು ಅವನು ಊಹಿಸಿರಲಿಕ್ಕಿಲ್ಲ. ಅಥವಾ ಯಾರು ಬಲ್ಲರು, ಆ ಬೆದರಿಕೆಯನ್ನು ಹಾಕುವಾಗ ಯಾವ ದುಷ್ಟ ಉದ್ದೇಶವನ್ನೂ ಇಟ್ಟುಕೊಂಡಿರಲಿಕ್ಕಿಲ್ಲ. ಹುಡುಗಿಯ ಭೋಳೇತನದ ನೆಲೆಯರಿತ ಅವನು ಬರಿಯ ಚೇಷ್ಟೆಗೆಂದೇ ಹಾಗೆ ಅಂದಿರಲೂಬಹುದು. ಆದರೆ ಇದೆಲ್ಲ ಮುಂದೆ ಎಡೆಗೊಟ್ಟ ದುರಂತದಿಂದ ಸಂಪ್ತಗೊಂಡ ನಾವು ಮಾತ್ರ ಮನವೇಲವ ಈ ಕೃತಿಗೆ ಒಂದೇ ಅರ್ಥವನ್ನು ಹಚ್ಚಿರಬಹುದು-ಇಂತಹ ಒಂದು ಧೂರ್ತ ಉದ್ದೇಶವನ್ನೇ ಇಟ್ಟುಕೊಂಡೇ ಅವನು ಅವಳನ್ನು ಹಾಗೆ ಬೆದರಿಸಿರಬೇಕೆಂದು. ಆದರೆ ಇಷ್ಟೊಂದು ನಿಜ: ತಾನು ಹಾಕಿದ ಬೆದರಿಕೆಯನ್ನು ಆಬೋಲೀನ ನಿಜಕ್ಕೂ ನಂಬಿದ್ದಾಳೆ ಎಂದು ತಿಳಿದ ಮೇಲೆ ಮಾತ್ರ ಅವಳ ಭೀತಿಯ ಲಾಭ ಪಡೆಯಲು ಆತ ಹಿಂಜರಿಯಲಿಲ್ಲ. ಅದಾಗಲೇ ಕೇರಿಯಲ್ಲಿ ಹಬ್ಬಿದ ಸುದ್ದಿಯೂ ಅವನಿಗೆ ಪ್ರೋತ್ಸಾಹವಿತ್ತಿತ್ತು. ಅಷ್ಟೇ ಅಲ್ಲ, ಅದುವೇ ಅವನಿಗೆ ಮುಂದಿನ ದಾರಿಯನ್ನೂ ಸೂಚಿಸಿತು. ಆ ದಾರಿಯನ್ನು ಕುರಿತು ವಿಚಾರಿಸುತ್ತಲೇ ಮನವೇಲ ಇಗರ್ಜಿಯ ಮೆಟ್ಟಿಲುಗಳನ್ನು ಏರುತ್ತಿದ್ದ…..
ಎಂದಿಗೂ ಇಗರ್ಜಿಯ ಮೆಟ್ಟಿಲುಗಳನ್ನು ಏರಿ ಗೊತ್ತಿರದ ಮನವೇಲನನ್ನು ಕಂಡು ಪಾದ್ರಿಗೆ ಅಚ್ಚರಿಯಾಗದೇ ಇರಲಿಲ್ಲ- ತಮ್ಮ ಕರೆಗೆ ಮನ್ನಣೆಯಿತ್ತು ಅವನು ಬರಬಹುದು ಎಂಬುದರಲ್ಲಿ ಅವರಿಗೆ ನಂಬುಗೆ ಇದ್ದಿರಲಿಲ್ಲ. ಹೇಳಿಕೇಳಿ ಹುಂಬನವ: ಅವನನ್ನು ಕಂಡು ತುಸು ಹೆದರಿಕೆಯೂ ಆಯಿತು. ಅಳುಕುವ ಮನಃಸ್ಥಿತಿಯಲ್ಲೇ ಅವನನ್ನು ಸ್ವಾಗತಿಸಿದರು:
“ಬಾ ಮನವೇಲ….ನಿನ್ನ ಹತ್ತಿರ ಮಾತಾಡಬೇಕಿತ್ತು.”
“ಅಹುದೇ?”ಎಂದು ಕೇಳಿದ. ಮನವೇಲನ ಮಾತಿನಲ್ಲೂ ವಿಚಿತ್ರ ನಡುಕವಿತ್ತು.
“ಬಾ, ಆ ಬದಿಯ ಕಲ್ಲು ಬಂಡೆಯ ಮೇಲೆ ಹೋಗಿ ಕೂಡ್ರೋಣ. ಗಾಳಿಯೂ ಚೆನ್ನಾಗಿ ಬರುತ್ತದೆ ಅಲ್ಲಿ. ಇಂದು ಸ್ವಲ್ಪ ಸೆಕೆಯಲ್ಲವೆ?” ಎನ್ನುತ್ತ ಮನವೇಲನ ಜೊತೆಗೆ ಇಗರ್ಜಿಯ ಹಿಂಬದಿಯಲ್ಲಿ ಗುಡ್ಡದ ಅಂಚಿಗೆ ಇದ್ದ-ತಾವು ನಿತ್ಯ ಸಂಜೆ ಗಾಳಿ ಸೇವನೆಗೆಂದು ಕೂಡ್ರುವ-ಕಲ್ಲುಬಂಡೆಯ ಬಳಿ ಬಂದರು. ಮನವೇಲನನ್ನು ಒಂದೆಡೆಯಲ್ಲಿ ಕೂಡ್ರಲು ಹೇಳಿ ಅತಿ ಮಮತೆಯಿಂದ ಕೇಳಿದರು:
“ಮನವೇಲ….”
“ಏನು ತಂದೆ?”
ಮನವೇಲನ ದನಿಯಲ್ಲಿ ಅಸಾಧಾರಣ ಮಾರ್ಧವತೆಯಿತ್ತು, ನಮ್ರತೆಯಿತ್ತು. ಮಬ್ಬುಗತ್ತಲೆಯ ಶಾಂತಿಯಲ್ಲಿ ಕೇಳಿದ ಮನವೇಲನ ದನಿಯ ಮಾರ್ದವತೆ ಪಾದ್ರಿಯ ಮನಸ್ಸನ್ನು ತಟ್ಟದಿರಲಿಲ್ಲ. ತಾವು ಅವನೊಡನೆ ಆಡಲಿರುವ ಮಾತಿನ ಗಾಂಭೀರ್ಯದಿಂದ ತಮಗೆ ತಾವೆ ಬೆದರಿಕೊಂಡಿದ್ದ ಪಾದ್ರಿಗೆ ಮನವೇಲನ ಮಾತಿನಲ್ಲಿಯ ನಮ್ರತೆಯಿಂದ ಧೈರ್ಯ ಬಂದಿತು.
“ನಿನಗೀಗ ಎಷ್ಟು ವಯಸ್ಸು?”
“ಮುವ್ವತ್ತರ ಮೇಲಾಯಿತು…. ಏಕೆ?”
“ಇನ್ನೂ ಮದುವೆಯಾಗುವ….”
ಆಗಿನಿಂದ ಗೋಣು ಬಗ್ಗಿಸಿ ನೆಲದತ್ತ ನೋಡುತ್ತ ಕುಳಿತ ಮನವೇಲ ಒಮ್ಮೆಲೇ ಕತ್ತೆತ್ತಿ ತಮ್ಮೆಡೆಗೆ ನೋಡಿದ ರೀತಿಗೆ ಪಾದ್ರಿಗೆ ಮಾತನ್ನು ಪೂರ್ಣಗೊಳಿಸುವ ಧೈರ್ಯವಾಗಲಿಲ್ಲವೇನೋ, ಅವರು ಅರ್ಧಕ್ಕೇ ತಡೆದರು. ತುಸು ಹೊತ್ತಿನ ಮೇಲೆ:
“ನಿನ್ನ ಎರಡನೇ ಹೆಂಡತಿ ಸತ್ತು….”
“ಐದು ವರ್ಷಗಳ ಮೇಲಾಯಿತು.” ಪಾದ್ರಿ ತಮ್ಮ ಪ್ರಶ್ನೆಯನ್ನು ಪೂರ್ಣಗೊಳಿಸುವ ಮೊದಲೇ ಬಂದ ಮನವೇಲನ ಉತ್ತರದಲ್ಲಿ ತುಸು ಕಾಠಿಣ್ಯವಿತ್ತು. ಹೀಗೆ ಸುತ್ತು ಮಾತೇಕೆ? ನೇರವಾಗಿ ಮಾತನಾಡಿರಲ್ಲ ಎಂದು ಆಹ್ವಾನಿಸುವಂತಿತ್ತು ಅವನ ಮಾತಿನ ಧಾಟಿ. ಪಾದ್ರಿಯೂ ಮೊದಲಿನ ಸಂಕೋಚ ಬದಿಗಿಟ್ಟು ಬಹು ಗಂಭೀರ ರೀತಿಯಲ್ಲಿ ಹೇಳಿದರು:
“ನಿನ್ನ ಮೇಲೆ ಒಂದು ಆರೋಪ ಬಂದಿದೆ.”
ಮನವೇಲನೂ ಅತಿ ಶಾಂತಚಿತ್ತನಾಗಿ ಉತ್ತರವಿತ್ತ. ‘ನಿಮ್ಮ ಮಾತು ನನಗೆ ಎಳ್ಳಷ್ಟೂ ಅನಪೇಕ್ಷಿತವಲ್ಲ’ ಎನ್ನುವವನ ಹಾಗೆ.
“ನನಗೆ ಗೊತ್ತಿದೆ.”
“ಏನು?”
“ಒಬ್ಬ ಹುಡುಗಿ ನನ್ನಲ್ಲಿ ಪ್ರೇಮ ತೋರಿದ್ದಾಳೆ.”
“ಮುಂದೆ?”
“ನನಗೆ ಅವಳಲ್ಲಿ ಪ್ರೀತಿಯಿಲ್ಲ.”
“ಏಕೆ?”
“ಇದೆಂತಹ ಪ್ರಶ್ನೆ ಗುರುಗಳೇ? ಇದು ಪ್ರೇಮ ಮಾಡುವ ವಯಸ್ಸೇ ನನ್ನದು. ಇದಾಗಲೇ ಇಬ್ಬರು ಹೆಂಡಂದಿರನ್ನು ಕಳಕೊಂಡ ನನ್ನಲ್ಲಿ ಲಗ್ನದ ಬಗ್ಗೆಯೇ ವೈರಾಗ್ಯ ಮೂಡುವ ಹೊತ್ತಿನಲ್ಲಿ…”
ಮನವೇಲನ ದನಿಯಲ್ಲಿ ವ್ಯಕ್ತವಾದ ಪರಿಪೂರ್ಣ ಪ್ರಾಮಾಣಿಕತೆ ಪಾದ್ರಿಯ ಹೃದಯವನ್ನು ಕಲಕಿತು. ತಾವು ಈ ಮೊದಲು ಅವನ ಬಗೆಗೆ ಇಟ್ಟುಕೊಂಡ ಅಭಿಪ್ರಾಯದ ಬಗ್ಗೆ ತಮಗೇ ಕೆಡುಕೆನಿಸಿತು. ಇದು ಪೂರ ಕಲ್ಲುಬಂಡೆಯಲ್ಲ; ಇದರ ಗರ್ಭದಲ್ಲೂ ಮಾನವತೆಯ ತೇವು ಇದೆ! ಮೇಲಾಗಿ ಮನವೇಲನು ಈವರೆಗೆ ಹೇಳಿದ ಕತೆಯ ಧಾಟಿಯನ್ನು ಗಮನಿಸಿದರೆ ಅವನ ಕೇರಿಯ ಗೃಹಸ್ಥರಿಂದ ಬಂದ ದೂರಿನಲ್ಲೇ ಏನೋ ತಪ್ಪು ಇರುವ ಸಂಭವವಿದೆ! ಪಾದ್ರಿ ಮನವೇಲನ ಬಾಯಿಯಿಂದಲೇ ಪೂರ್ಣ ಕತೆಯನ್ನು ತಿಳಿಯಲು ತವಕ ಪಟ್ಟರು.
ಮನವೇಲ ಮುಂದುವರಿದ:
“ಮೇಲಾಗಿ ಈ ಹುಡುಗಿ ಏನೂ ಅರಿಯದ ಕೂಸು.”
“ಹೆಸರು?”
“ಮನವೇಲನಿಂದ ಕೆಲಹೊತ್ತು ಮಾತೇ ಹೊರಡಲಿಲ್ಲ. ಇಬ್ಬರೂ ಮೌನವಾಗಿ ಕುಳಿತಿದ್ದರು. ಆಗ ಮನವೇಲನೇ ನುಡಿದ:
“ಆಬೋಲೀನ”
ಅವನ ಬಾಯಲ್ಲಿ ಆ ಹೆಸರು ಹೇಗೋ ಕೇಳಿಸಿತು.
“ಓ!!”
“ಏನು ತಂದೆ?”
“ಮುಂದೆ?”
“ಈಶ್ವರ ಗುಡಿಯ ಹಿಂದಿನ ಗದ್ದೆಗಳಲ್ಲಿ ನಾನು ದುಡಿಯುತ್ತಿರುವಾಗ ಅಲ್ಲಿಯ ಗುಂದೆಗಳಲ್ಲಿ ಸುರಗೀ ಕಾಯಿಗಳನ್ನು ಹೆಕ್ಕಲು ಬರುತ್ತಿದ್ದಳು. ಅಲ್ಲಿ ನಮ್ಮ ಪ್ರೇಮ ಕೂಡಿತು…ನಾನು ನನ್ನ ಇತಿಹಾಸ ಎಲ್ಲವನ್ನೂ ಹೇಳಿದೆ. ಅವಳ ಕೃತ್ಯದ ಪರಿಣಾಮ ಏನಾಗಬಹುದು ಎಂದೆಲ್ಲ ವಿಸ್ತರಿಸಿ ಹೇಳಿದೆ. ಕೇಳಲಿಲ್ಲ, ನನ್ನನ್ನು ಬಿಟ್ಟು…”
ಮನವೇಲನ ಮಾತಿನಲ್ಲಿ ಲಜ್ಜೆ ಸೇರಿಕೊಂಡಿತು.
ಪಾದ್ರಿ ಇನ್ನೂ ಮೌನ ತಳೆದಿದ್ದರು.
“ನಾನು ಹೆಂಡಂದಿರನ್ನು ಕಳಕೊಂಡು ಹುಚ್ಚನಾದವ. ಆಬೋಲೀನಳಂತಹ ಸುಂದರ ಪ್ರಾಯದ ಹುಡುಗಿ ತಾನಾಗಿ ನನ್ನ ಅಪ್ಪುಗೆಯಲ್ಲಿ ಬರಬೇಕಾದರೆ…”
ಮತ್ತೆ ಮೌನ.
“ಆಗಬಾರದುದೆಲ್ಲ ಆಗಿಬಿಟ್ಟಿತು.”
ಮಬ್ಬುಗತ್ತಲೆ ದಟ್ಟವಾಗಹತ್ತಿತು. ಗಾಳಿಯಲ್ಲಿ ತುಸು ತಂಪು ಸೇರಹತ್ತಿತು. ಮುಂದೆ ಬರಲಿರುವ ದುಷ್ಟ ಸಂಗತಿಯ ಪೂರ್ವಪ್ರಜ್ಞೆಯಿಂದ ಎಂಬಂತೆ ಪಾದ್ರಿಯ ಮನ ಕಳವಳಿಸಿತು. ಅದಾಗ ಮನವೇಲನ ಮಾತು:
“ಆಬೋಲೀನ ಎರಡು ತಿಂಗಳ ಗರ್ಭಿಣಿ.”
ಸಿಡಿಲೆರಗಿದಂತಾಯಿತು: ಪಾದ್ರಿಯ ಜೀವದ ತಂತೋ ತಂತುಗಳಲ್ಲಿ ನಡುಕ ಸೇರಿಕೊಂಡಿತು. ಅಯ್ಯೋ! ಇದೆಂತಹ ಪಾಪ: ಪಾದ್ರಿಯ ಭಯಭೀತ ಮೋರೆ ಆ ನಸುಗತ್ತಲೆಯಲ್ಲೂ ಮನವೇಲನ ದೃಷ್ಟಿಯಿಂದ ಮರೆಯಾಗಲಿಲ್ಲ.
“ಅಯ್ಯೋ ತಂದೆ, ಇದೇನಾಗಿಬಿಟ್ಟಿತು! ಇದಕ್ಕೆ ಪರಿಹಾರವಿಲ್ಲವೇ?”
“ಮದುವೆ” ಬಹು ಗಂಭೀರವಾಗಿ ಸಾರಿದರು, ಪಾದ್ರಿ.
“ಅಲ್ಲವೇ” ಅದಕ್ಕೇ ನಾನು ಇಲ್ಲಿ ಬಂದದ್ದು. ನೀವು ಕರೆಕಳಿಸುವ ಮೊದಲೇ ಬರುವವನಿದ್ದೆ. ಎಲ್ಲರಿಗೂ ಗೊತ್ತಾಗುವ ಮೊದಲೇ ಯಾವನಾದರೂ ಒಬ್ಬ ಹುಡುಗನೊಡನೆ….”
“ಯಾರೊಬ್ಬನೊಡನೆ ಅಲ್ಲ.” ಸಿಟ್ಟಿನಿಂದ ಗುಡುಗಿದರು ಪಾದ್ರಿ. “ಅವಳ ಮದುವೆ ನಿನ್ನೊಡನೆ.”
“ನನ್ನೊಡನೆ” ಆದರೆ ನನಗೆ ಮದುವೆಯಾಗುವ ಇಚ್ಛೆ ಎಳ್ಳಷ್ಟೂ ಇಲ್ಲವಲ್ಲ! ಮೇಲಾಗಿ ಮದುವೆಯಾಗಲು ಇಚ್ಛೆ ಇಲ್ಲದ ನನ್ನನ್ನು ಬಲೆಯಲ್ಲಿ ಹಾಕಲೆಂದೇ…”
“ಬೇಡ ಬೇಡ ಮನವೇಲ, ಇಂತಹ ಕೆಟ್ಟ ಮಾತುಗಳನ್ನು ಆಡಬೇಡ. ನಿನ್ನ ಕೈಯಿಂದ ಆದ ಪಾಪಕ್ಕೆ ಮದುವೆಯೇ ಪ್ರಾಯಶ್ಚಿತ್ತ…”
ಮುಂದಿನ ಅರ್ಧಗಂಟೆಯವರೆಗೆ ಪಾದ್ರಿಯ ಉಪದೇಶ ನಡೆದೇ ಇತ್ತು. ಅದೇ ಹೊತ್ತಿಗೆ ಮನವೇಲನಿಂದ ತನ್ನಲ್ಲಾದ ಪರಿವರ್ತನೆಯ ನಟನೆ! ಕೊನೆಗೂ ಮನವೇಲನನ್ನು ಈ ಮದುವೆಗೆ ಒಪ್ಪಿಸಿ(!) ಅವನನ್ನು ಬೀಳ್ಕೊಡುವ ಹೊತ್ತಿಗೆ ದೊಡ್ಡ ಸುಕೃತವೊಂದನ್ನು ಮಾಡಿದ ಸಮಾಧಾನದಿಂದ ಪಾದ್ರಿಯ ಮನಸ್ಸು ಪುಲಕಿತವಾಗಿತ್ತು.
ಆದರೆ ಇದೆಲ್ಲವೂ ಮನವೇಲ ಹೂಡಿದ ದೊಡ್ಡ ಕಪಟನಾಟಕ. ಈ ಕಪಟದಿಂದ ತಾವು ಮೋಸ ಹೋಗಿದ್ದೇವೆ-ಮೋಸ ಹೋಗುವಷ್ಟು ಅಜಾಗರೂಕತೆ ಅಲ್ಲ ಮೌಡ್ಯ ತೋರಿಸಿದ್ದೇವೆ. ಎನ್ನುವ ಅರಿವು ಪಾದ್ರಿಗೆ ಬರುವ ಹೊತ್ತಿಗೆ ಮಾತ್ರ ಪರಿಸ್ಥಿತಿ ಎಲ್ಲರ ಕೈ ಮೀರಿತ್ತು-ಆಬೋಲೀನ ನಮ್ಮನ್ನೆಲ್ಲ ತೊರೆದು ನಡೆದುಬಿಟ್ಟಿದ್ದಳು, ತನ್ನ ತವರುಮನೆಗೆ-ತನ್ನ ತಾಯ ಬಳಿಗೆ!

೧೦

ಒಂದರ್ಥದಲ್ಲಿ ಆಬೋಲೀನಳು ಸುಖವನ್ನೇ ಬೇಡಿ ಬಂದಿರಲಿಲ್ಲ ಎನ್ನಬೇಕು. ಇಲ್ಲವಾದರೆ ಮನವೇಲನೊಂದಿಗೆ ಲಗ್ನವಾದ ಮೇಲೂ ಅವಳು ಸುಖದ ಸಂಸಾರವನ್ನೇ ಸಾಗಿಸಬಹುದಿತ್ತು. ಚಿಕ್ಕ ವಯಸ್ಸಿಗೇ ಲಗ್ನವಾಗಿ ಸುಖದ ಸಂಸಾರ ಹೂಡಿದವರಿಲ್ಲವೇ? ನಾನು ಹುಟ್ಟುವಾಗ ನನ್ನ ತಾಯಿಗೆ ಇನ್ನೂ ಹದಿನಾರು ವರುಷವಂತೆ. ತಮ್ಮ ವಯಸ್ಸಿನಲ್ಲಿ ಅನೇಕ ವರುಷಗಳ ಅಂತರವಿದ್ದೂ ಪ್ರೀತಿಯಿಂದ ತಿಳಿವಳಿಕೆಯಿಂದ ಸುಖ ಸಮಾಧಾನದ ಬದುಕನ್ನು ಬದುಕಿದ ಗಂಡ ಹೆಂಡಿರಿಲ್ಲವೇ? ಮನವೇಲ ವ್ಯಸನಿಯೇನೋ ಅಹುದು. ಹೆಂಡಂದಿರ ಸಾವಿನಿಂದ ಸಂಸಾರದ ಸುಖವನ್ನೇ ಕಾಣದ್ದರಿಂದ ಅಡ್ಡದಾರಿ ಹಿಡಿದಿರಬಹುದು. ಆದರೆ ಆಬೋಲೀನಳಂತಹ ತಾನು ಬಯಸಿದ ಹುಡುಗಿಯನ್ನು ಲಗ್ನವಾದ ಮೇಲೂ ಅವನು ಹಾಗೆಯೇ ಇರುತ್ತಿದ್ದನೆಂದು ಯಾರು ಹೇಳಬಹುದಿತ್ತು? ನಿಜಕ್ಕೂ, ಆಬೋಲೀನಳ ಕತೆ ಒಂದು ಸುಖದ ಸಂಸಾರದಲ್ಲೇ ಕೊನೆಗೊಂಡಿದ್ದರೆ ನಾವು ಮನವೇಲನನ್ನು ಕುರಿತು ಸಹಾನುಭೂತಿ, ಸಮಾಧಾನದ ಮಾತನ್ನೇ ಆಡಬಹುದಿತ್ತು. ಆಗ, ಈಗ ಹೇಳಿದ ಕತೆ ಬೇರೆಯೇ ಒಂದು ರೂಪವನ್ನು ತಳೆಯಬಹುದಿತ್ತು.
ಮನವೇಲ-ಆಬೋಲೀನರಿಗೆ ಮನೆತುಂಬ ಮಕ್ಕಳಾಗಿ ಅವರು ಸುಖದಿಂದ ನಲಿದಾಡುತ್ತಿರುವುದನ್ನು ಕಂಡು ಆ ಊರಿಗೆ ಹೊಸಬರಾದವರು ಯಾರಾದರೂ ಅನ್ನಬಹುದಿತ್ತು: ‘ಸೊಗಸಾದ ಜೋಡಿ. ಎಂತಹ ಮುದ್ದಾದ ಮಕ್ಕಳು!’(ಆಬೋಲೀನಳಿಗೆ ಹುಟ್ಟಿದ ಮಕ್ಕಲು ಇನ್ನು ಹೇಗಾಗಬಹುದಿದ್ದವು?) ಆಗ ಆಬೋಲೀನಳಿಗೆ ಕತೆ ಗೊತ್ತಿದ್ದವರು ಅವರಿಗೆ ಈ ಕತೆಯನ್ನು ಒಂದು ಪ್ರಣಯ ಕತೆಯ ಮೆರುಗನ್ನು ಕೊಟ್ಟೇ ಹೇಳಬಹುದಿತ್ತು. ಆಗ ಆ ಹೊಸಬರು ಕೇಳುತ್ತಿದ್ದರು ನಗುತ್ತ: ‘ಇದು ನಿಜವೇ? ಆ ಹುಡುಗಿ ಆ ವಯಸ್ಸಿಗೆ ಅಷ್ಟು ಅಜ್ಞಳಿದಳೇ? ಮನವೇಲನೂ ಬಹು ಧೂರ್ತ! ಪಾಪ! ಅವನಾದರೂ ಏನು ಮಾಡಿಯಾನು? ತಾನು ಪ್ರೀತಿಸಿದ ಹುಡುಗಿ. ಬಾಯಿ ಬಿಟ್ಟು ಕೇಳಿದರೆ ಕೊಡುತ್ತಿರಲಿಲ್ಲ; ನಾಟಕ ಹೂಡಿದ. ಅಡ್ಡಿಯಿಲ್ಲ ಚಂದವಾದ ಸಂಸಾರ….”

ಆದರೆ ಎಲ್ಲ ಆಗಬಹುದಿತ್ತು. ಆದರೆ ಆಗಲಿಲ್ಲ.
ಹಾಗೆ ಆಗುವುದು ಶಕ್ಯವೂ ಇರಲಿಲ್ಲ. ಯಾಕೆಂದರೆ ಅಂದು ಈಶ್ವರ ಗುಡಿಯಲ್ಲಿ ಈಶ್ವರ ಲಿಂಗದ ಸಾಕ್ಷಿಯಲ್ಲಿ ಆಬೋಲೀನಳ ತುಟಿಯಲ್ಲಿಟ್ಟ ಮನವೇಲನ ಎಂಜಲ ಅವಳ ಒಡಲನ್ನು ಚಿಗುರಿಸುವ ಅಮೃತವಾಗಿರದೇ ಪ್ರಾಣ ಹೀರುವ ವಿಷವಾಗಿತ್ತು!
ಲಗ್ನವಾದ ಮೊದಲ ಮೂರು ತಿಂಗಳು ಆಬೋಲೀನಳು ಸುಖದಲ್ಲೇ ಕಳೆದಳು ಎನ್ನುವುದಕ್ಕಿಂತ ಹೆಚ್ಚು ಕಷ್ಟವಿಲ್ಲದೇ ಕಳೆದಳು ಎನ್ನುವುದು ಸಮಂಜಸವೇನೋ. ಅವಳ ಮಾವನ ಮನೆಯವರು ನಮ್ಮ ಹಳ್ಳಿಯಲ್ಲಿಯ ಕ್ರಿಶ್ಚನ್ನರಲ್ಲೇ ತುಸು ಒಳ್ಳೆಯ ಕುಟುಂಬ. ತಮ್ಮ ಹುಡುಗ ಆಬೋಲೀನಳನ್ನು ‘ಈ ರೀತಿ’ ಯಾಗಿ ಮದುವೆಯಾದುದು ಅವರಾರಿಗೂ ಸಮ್ಮತವಿರಲಿಲ್ಲ. ಆದರೆ ಇದೆಲ್ಲದರ ತಪ್ಪನ್ನು ಅವನ ಮೇಲೆ ಹೊರಿಸಲೂ ಸಿದ್ಧರಿರಲಿಲ್ಲ. ಅವನು ಏನೆಂದರೂ ಗಂಡಸು, ಹೆಂಡಂದಿರನ್ನು ಕಳಕೊಂಡವ. ಇವಳು ಹೆಣ್ಣು. ಇವಳಿಗೆ ಬುದ್ಧಿ ಇರಬೇಡವೇ? ಎಲ್ಲ ತಪ್ಪು ಇವಳದೇ ಎನ್ನುವಂತಿತ್ತು ಅವರು ಇವಳೊಡನೆ ನಡಕೊಂಡ ರೀತಿ. ಆದರೆ ಬಾಯಿ ಬಿಟ್ಟು ಏನನ್ನೂ ಹೇಳುವಂತಿರಲಿಲ್ಲ. ಯಾಕೆಂದರೆ ಲಗ್ನಕ್ಕೆ ಕಾರಣವಾದ ಪ್ರಕರಣ ಎಲ್ಲರಿಗೂ ಗೊತ್ತಿದ್ದ ‘ಗೋಪ್ಯ’ ವಾಗಿತ್ತು. ಮೇಲಾಗಿ ಅವಳಿಗೇನಾದರೂ ಆಡಿ ಮನವೇಲನನ್ನು ಎದುರಿಸುವ ಧೈರ್ಯವೂ ಇರಲಿಲ್ಲ. ಆದರೂ ಮನೆಯಲ್ಲೊಂದು ಬಗೆಯ ತಾತ್ಸಾರದ, ಅಸಮ್ಮತಿಯ ವಾತಾವರಣ. ಆಬೋಲೀನಳಿಗೆ ಮೊದಮೊದಲು ಹೇಗೋ ಅನ್ನಿಸಿತು. ಆದರೆ ಕೊನೆಗೆ ಇದೆಲ್ಲ ಅಭ್ಯಾಸವಾಯ್ತು. ಆದರೆ ಅವಳ ಹೊಟ್ಟೆಯಲ್ಲಿಯ ಆ ಚಿಕ್ಕ ಜೀವ ಪಿಂಡ?-ಅದು ಮಾತ್ರ ಬೆಳೆಯಲೇ ಇಲ್ಲ! ದೊಡ್ಡದಾಗಲೇ ಇದ್ದ! ಈ ಸಂಗತಿ ಮನೆಯ ಹೆಂಗಸರ ಸೂಕ್ಷ್ಮದೃಷ್ಟಿಗೆ ತಿಳಿಯದಿರಲಿಲ್ಲ. ಇಲ್ಲವಾದರೆ, ಲಗ್ನದ ಮೊದಲೇ ‘ಎರಡು ತಿಂಗಳು’ ಅನ್ನುವವಳು ಈಗ ಲಗ್ನವಾಗಿ ಮೂರು ತಿಂಗಳಾದರೂ ಗರ್ಭಧಾರಣೆಯ ಯಾವ ಲಕ್ಷಣವೂ ತೋರಬೇಡವೆಂದರೆ! ಮನೆಯವರಿಗೆ ತುಸು ಕುತೂಹಲವೆನಿಸಿತು. ಹೀಗಿರುವಾಗ ಒಂದು ದಿನ ಆಬೋಲೀನ ‘ಹೊರಗೆ ನಿಂತದ್ದು’ ಹೇಗೋ ಅವಳ ನಾದಿನಿಗೆ ಗೊತ್ತಾಯಿತು. ಅವಳಿಗೆ ತನ್ನ ಕುತೂಹಲವನ್ನು ತಡೆಯಲಾಗಲಿಲ್ಲ. ಕೇಳಿಯೇ ಬಿಟ್ಟಳು:
“ನೀನು ಮುಟ್ಟಲ್ಲವೇನೇ?”
“ಅಹುದು” ಎಂದಳು ಆಬೋಲೀನ ತನ್ನ ಮಾತಿನ ಅರ್ಥ ಏನೆಂದು ಅರಿಯದೇನೆ.
“ಅರೆ! ಅಂದರೆ ನೀನು ಬಸುರಿಯಲ್ಲ!”

ಮಾತಿನಲ್ಲಿ ಆರೋಪವಿತ್ತು; ನೀನು ಬಸುರಿಯೆಂದು ಇಷ್ಟು ದಿನ ನಮ್ಮನ್ನೆಲ್ಲ ಮೋಸಗೊಳಿಸಿದ್ದೀಯೆಂದು. ಆದರೆ ಆಬೋಲೀನಳಿಗೆ ಅದರ ಅರಿವಾಗದೇ ಒಂದು ಅತ್ಯಂತ ಸುಖದ ಸುದ್ದಿಯನ್ನೇ ಕೇಳಿದವಳೆಂಬಂತೆ ಕೇಳಿದಳು:
“ನಿಜಕ್ಕೂ ? ನಾ ಬಸುರಿಯಲ್ಲವೆ?”

ಪ್ರಶ್ನಿಸಿದ್ದು ನಾದಿನಿಯನ್ನಲ್ಲ-ತನ್ನನ್ನೇ!ಅವಳಿಗೆ ಅಂದೇ ಅನ್ನಿಸಿತ್ತು-ಲಗ್ನಾನಂತರದ ‘ಆ’ಹೊಚ್ಚ ಹೊಸ ಅನುಭವ ಬಂದ ಮೊದಲ ದಿನವೇ ತಿಳಿದಿತ್ತು: ಹೆಣ್ಣುತನದ ಎಷ್ಟೋ ಗೂಢಗಳ ಬಗ್ಗೆ ತಾನಿನ್ನೂ ಅಜ್ಞಳಿದ್ದೇನೆ ಎಂದು. ಆದರೆ ನಾದಿನಿ ತನ್ನ ಬಗ್ಗೆ ತೆಗೆದ ಆ ಒಂದು ಉದ್ಗಾರದಿಂದ ಸ್ತ್ರೀಸಹಜವಾದ ಜ್ಞಾನ ಒಮ್ಮೆಲೇ ಸ್ಪೂರ್ತಿಗೊಂಡಂತಾಗಿ ತಾನು ಆ ಒಂದು ಕ್ಷಣದಲ್ಲಿ ಬೆಳೆದುಬಿಟ್ಟಿದ್ದೇನೆ ಎಂಬ ಅನುಭವದ ಪ್ರೌಢಕಳೆ ಅವಳ ಮೋರೆಯ ಮೇಲೆ ಮಿಂಚಿತು. ‘ತಾನು ಬಸುರಿಯಲ್ಲ’; ತನಗೆ ಮೊದಲಿನಿಂದಲೂ ಅನಿಸಿತ್ತು. ಆದರೆ ಯಾರನ್ನು ಕೇಳುವುದು? ಹೇಗೆ ಕೇಳುವುದು?

ತಡವಾಗಿಯಾದರೂ ಹುಟ್ಟಿದ ಈ ಅಜ್ಞಾನದಿಂದ ಆಬೋಲೀನ ಅತ್ಯಂತ ಹರುಷಗೊಂಡಳು. ಅತಿ ನಿರ್ದೋಷವಾದ, ನಿರ್ಮಲವಾದ ಆನಂದ ಅವಳ ಅಂಗಾಂಗಗಳಲ್ಲಿ ನಲಿದಾಡಹತ್ತಿತು: ತಾನು ಕೊನೆಗೂ ‘ಪಾಪಿ’ಯಲ್ಲ ಹಾಗಾದರೆ. ತಾನು ನಿರ್ದೋಷಿ. ಆ ಆನಂದದ ಸುದ್ದಿಯನ್ನು ತಂದೆಗೆ ತಿಳಿಸಬೇಕು-ಕೂಡಲೇ ತಿಳಿಸಬೇಕು ಎಂದು ಅವಳ ಮನ ಆತುರಗೊಂಡಿತ್ತು. ಅವಳಿಗೆ ಗೊತ್ತಿತ್ತು ತನ್ನ ತಂದೆ ತನ್ನ ಪಾಪವನ್ನು ಎಷ್ಟೊಂದು ಮನಸ್ಸಿಗೆ ಹಚ್ಚಿಕೊಂಡಿದ್ದಾನೆ ಎಂದು.

ಮನೆಯಲ್ಲಾಗ ನಾದಿನಿ ಒಬ್ಬಳೇ ಇದ್ದಳು. ಮಾವ, ಗಂಡ ಕಾರವಾರಕ್ಕೆ ಹೋಗಿದ್ದರು, ಸಂತೆಗೆ-ಕಲ್ಲಂಗಡಿ-ಬೆಲ್ಲಗಡ್ಡೆ ಮಾರಲು. ಅತ್ತೆ ಎಲ್ಲೋ ಕೇರಿಯ ಮೇಲೆ ಹರಟೆ ಹೊಡೆಯಲು ಹೋಗಿದ್ದಳು. ಮೈದುನರಿಬ್ಬರೂ ಗದ್ದೆಯಿಂದ ಹಿಂದಿರುಗಿರಲಿಲ್ಲ. ಕೂಡಲೇ ಹೊರಟರೆ ಹೊತ್ತು ಮುಳುಗುವ ಮೊದಲೇ ತಂದೆಯ ಮನೆ ಸೇರಬಹುದು. ತಂದೆಯ ಮನೆ ಅಲ್ಲಿಂದ ಒಂದು ಮೈಲು ದೂರ. ವಿಚಾರ ಬಂದದ್ದೇ ಆಬೋಲೀನ ತಡಮಾಡಲೇ ಇಲ್ಲ. ನಾದಿನಿಗೆ ಹೇಳಿದವಳೇ ತಂದೆಯ ಮನೆಗೆ ನಡೆದೇಬಿಟ್ಟಳು. ಅತ್ಯಂತ ಉತ್ಸಾಹದ ಮನಸ್ಥಿತಿಯಲ್ಲೇ ತಂದೆಯನ್ನು ಕಂಡಳು. ಅದೇ ದಿನ ಸಂಜೆ ಕೈತಾನ ನಮ್ಮನೆಗೆ ಬಂದದ್ದು, ನಾವು ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿರುವಾಗ. ತಂದೆ ಮಗಳು ಇಬ್ಬರಿಗೂ ಆನಂದವಾಗಿತ್ತು. ಇನ್ನಾದರೂ ತಮ್ಮ ನಿರ್ಧೋಷ ಜನರಿಗೆ ಗೊತ್ತಾಗದಿರದು ಎಂದು. ಆದರೆ ಆಬೋಲೀನ ತಿರುಗಿ ಗಂಡನ ಮನೆ ಸೇರುವುದರೊಳಗೆ ಸಿದ್ಧವಾದ ಘೋರ ಪ್ರತ್ಯಾರೋಪ! ಅದು ಮಾತ್ರ ಯಾರನ್ನೂ ದಂಗುಬಡಿಸುವಂತಹುದಾಗಿತ್ತು. ಅದುವೇ ಆಬೋಲೀನಳ ಭವಿಷ್ಯತ್ತನ್ನೂ ನಿರ್ಧರಿಸಿತು:
‘ತನಗೂ ಆಬೋಲೀನಳಿಗೂ ಲಗ್ನದ ಮೊದಲೇ ಸಂಬಂಧ ಇದ್ದುದು ನಿಜ. ಅದಕ್ಕೂ ಅವಳೇ ಕಾರಣ. ತನಗೆ ಅವಳನ್ನು ಲಗ್ನವಾಗುವ ಇಚ್ಛೆ ಎಳ್ಳಷ್ಟೂ ಇಲ್ಲ ಎಂಬುದನ್ನರಿತೇ ‘ತಾನು ಗರ್ಭಿಣಿ’ ಎಂದು ಸುಳ್ಳು ಸುದ್ದಿ ಹಬ್ಬಿಸಿರಬೇಕು, ತನ್ನ ಮೇಲೆ ನೈತಿಕ ಒತ್ತಡ ತರಲು. ಇದೆಲ್ಲ ಯಾರಿಗೆ ಗೊತ್ತು? ಈ ಮೋಸ ಮೊದಲೇ ಗೊತ್ತಿದ್ದರೆ ತಾನೆಂದೂ ಅವಳನ್ನು ಲಗ್ನವಾಗುತ್ತಿರಲೇ ಇಲ್ಲ!’

ಎಂತಹ ಕ್ರೂರ ಆರೋಪ!

ಇದರಿಂದ ಮಾತ್ರ ಕೈತಾನ, ಆಬೋಲೀನ ತಲೆಯೆತ್ತಲಿಲ್ಲ. ಅಲ್ಲಿಗೇ ಆಬೋಲೀನಳ ಸುಖದ ಕತೆ ಮುಗಿದಿತ್ತು. ಇಂತಹ ಒಂದು ಸುದ್ದಿಗಾಗಿಯೇ ಕಾದು ಕುಳಿತ ಜನ ‘ಅಬ್ಬಾ’ ಎಂದಿತು. ಹದಿನಾಲ್ಕು ವರುಷದ ಈ ಎಳೆಯ ಹುಡುಗಿಗೆ ಏನೊಂದು ಚಾತುರ್ಯ! ಗಂಡನನ್ನು ದೊರಕಿಸುವ ಈ ಹೊಸ ಉಪಾಯ ಇನ್ನೂ ಕೇಳಿ ಗೊತ್ತಿರಲಿಲ್ಲ ಬಿಡು. ಪಾಪ! ಮನವೇಲ ಹೇಳಿ ಕೇಳಿ ಕೆಟ್ಟವನೆಂದು ಅವನ ಮೇಲೆ ಇಂತಹ ಆರೋಪ ಹೊರಿಸಬಹುದೆ?’-ಜನರ ಬಾಯಿಗೆ ಪೂರ ಬಂದಿತ್ತು. ತಮ್ಮ ಮಾತಿನಿಂದ ಯಾರು ಸತ್ತರೇನು ಬದುಕಿದರೇನು?’-ಬಾಯತಿಂಡಿ ಹೋದದ್ದು ಗೊತ್ತು: ಆಡಿಯೇ ಆಡಿದರು. ಆಬೋಲೀನಳಿಗೆ ಈ ನಿಂದೆ ಕೇಳಿ ಕೇಳಿ ಬದುಕಿರುವುದಕ್ಕಿಂತ ಸಾಯುವುದೇ ಲೇಸೆನ್ನಿಸಿತು.

ಹೀಗೆಯೇ ಕೆಲವು ತಿಂಗಳು ಕಳೆದವು. ಆದರೆ ದಿನ ಹೋದಂತೆ ಆಬೋಲೀನ ಸೊರಗುತ್ತ ನಡೆದಳು. ರಕ್ತ-ಕ್ಷಯ ಹಿಡಿದವರಂತೆ ಕೃಶವಾಗುತ್ತ ನಡೆದಳು. ತನ್ನ ಮೋಸ ಬಯಲಿಗೆ ಬಂದದ್ದು ಮನಸ್ಸಿಗೆ ಹತ್ತಿರಬೇಕು ಎಂದರು ಕೆಲವರು. ಸೂಕ್ಷ್ಮದೃಷ್ಟಿಯ ಇನ್ನೂ ಹಲವರು. “ಗಂಡ ವ್ಯಸನಿ ಎಲ್ಲಿ ‘ರೋಗ’ ಹಚ್ಹ್ಚಿಕೊಂಡಿದ್ದನೋ, ಹುಡುಗಿಗೆ ಬಾಧಿಸಿರಬೇಕು,” ಎಂದರು. ತಿಂಗಳ ಮೇಲೆ ತಿಂಗಳು ಉರುಳಿದಂತೆ ಕೊನೆಯ ಸಂಶಯವೇ ಬಲಗೊಳ್ಳಹತ್ತಿತು. ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತು. ಮೊದಲೇ ಸಾವು ಹೊಕ್ಕ ಮನಸ್ಸು ಈ ನೋವನ್ನು ಸಹಿಸಲಾರದಾಯಿತು. ಈ ನೋವಿನಿಂದ ಬಳಲುತ್ತಿರುವಾಗಲೇ ಒಂದು ದಿನ ತನ್ನ ತಂದೆಯ ಮನೆಗೆ ಬಂದಾಗ ಕೇಳಿದ್ದು ನಾವೆಲ್ಲ , ಹೃದಯ ಒಡೆಯುವ ಆ ಬೊಬ್ಬೆ.

ನಮ್ಮ ಮನೆಯವರೆಲ್ಲರೂ ಓಡಿ ಹೋದಾಗ ತಿಳಿದಿತ್ತು: ಆ ರಾತ್ರೆ ಆಬೋಲೀನ ಮನೆಯ ಬಾವಿಯಲ್ಲಿ ಹಾರಿಕೊಂಡಿದ್ದಳು. ಮುಂಜಾನೆ ಮನೆಯವರಿಗೆ ತಿಳಿಯುವ ಹೊತ್ತಿಗೆ ಸತ್ತು ಹೆಣವಾಗಿದ್ದಳು. ಸುದ್ದಿ ಕೇಳಿ ನಾನೂ ಓಡಿದ್ದೆ. ಅದಾಗಲೇ ಹೆಣವನ್ನು ಮೇಲೆ ತೆಗೆದಿದ್ದರು. ಅಯ್ಯೋ! ಆಗ ನಾ ಕಂಡ ದೃಶ್ಯ! ವಿಕೃತಗೊಂಡ ಆ-ಬೇಡ. ಅದನ್ನೆಲ್ಲ ಬಣ್ಣಿಸಿ ಈಗ ಏನು ಬಂದದ್ದು-ಎಲ್ಲವೂ ಮುಗಿದುಹೋದಮೇಲೆ?

ಹೂವಿನ ಹೆಸರಿನ-ಹೂವಿನಂತಹ ಹೆಣ್ಣು ಜೀವವೊಂದು ಅರಳುವ ಮೊದಲೇ ಮಣ್ಣು ಕೂಡಿದ ಮೇಲೆ? ಸುಖ ಬಯಸಿ ಬಂದ ಜೀವ ಸುಖ ಕಾಣುವ ಮೊದಲೇ ಕಣ್ಣು ಮುಚ್ಚಿದ ಮೇಲೆ?
*****
೧೯೫೭

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.