ಬಾಬು ಕಥೆ ಕೇಳಲೆಂದೇ ಅವರ ಮನೆಗೆ ಹೋಗುವುದು. ಅದು ಊರಿನಲ್ಲೇ ದೊಡ್ಡದಾಗಿರುವ ಕಪ್ಪು ಮಾಡಿನ ಮನೆ. ಅಲ್ಲಿಯವರೆಗೆ ಬಾಬು ಅಷ್ಟು ದೊಡ್ಡ ಮನೆಯನ್ನು ಕಂಡುದ್ದಿಲ್ಲ. ಅಲ್ಲಿ ಶಕಕ್ಕ ಅವನಿಗೆ ಒಂದು ಚಾಕಲೇಟು ಕೊಟ್ಟು ಕಥೆ ಹೇಳುತ್ತಾಳೆ. ಅವನೊಂದಿಗೆ ಚಂದು, ಗೌತಮಿ, ಪ್ರಿಯಾಗಿ, ಪಚ್ಚು ಹೀಗೆ ವಾಡೆಯ ಅವನ ಸಂಗತಿಯ ಹುಡುಗ ಹುಡುಗಿಯರೆಲ್ಲ ಬಾಯಿ ಬಿಟ್ಟುಕೊಂಡು ಕಥೆ ಕೇಳುತ್ತಾರೆ. ಬಾಬು ಮಾತ್ರ ಅಲ್ಲಿ ಕಥೆ ಹೇಳುವುದಿಲ್ಲ. ಅಲ್ಲಿ ಶಾಲೆಯ ಮಾಸ್ತರು ಕೊಟ್ಟ ಪಾಠ ಓದಬೇಕೆಂದಿಲ್ಲ. ಶಾಲೆಯಲ್ಲಿ ನಡೆದದ್ದನ್ನು ಹೇಳಬಹುದು. ಮಾಸ್ತರು ಯಾರಿಗಾದರು ಹೊಡೆದದ್ದನ್ನು, ಮಹಾಮಾಯಿ ದೇವಳದ ಕೆರೆಯಲ್ಲಿ ಮೀಸಾಡಿದ್ದನ್ನು, ಶಾಲೆಯ ಹತ್ತಿರವಿದ್ದ ಬಸ್ತ್ಯಾಂವ್‌ನ ಹಿತ್ತಲಲ್ಲಿ ಗೇರು, ಮಾವಿನಹಣ್ಣು ಕದ್ದದ್ದನ್ನು ಹೇಳಬಹುದು. ಗುಡ್ಡ ಹತ್ತಿದ್ದನ್ನು, ಹತ್ತುವಾಗ ಅಲ್ಲಿ ಮರಗಳಲ್ಲಿ ಕಂಡ ಹಸಿರು ಹಾವುಗಳ ಬಗ್ಗೆ ಹೇಳಿ ಶಕಕ್ಕನಿಗೆ ಹೆದರಿಸಬಹುದು. ಆಗ ಅವಳು ಹೇಳುತ್ತಿದ್ದಳು ‘ಅಲ್ಲೆಲ್ಲ ಹೋಗಬೇಡಿ, ಮಕ್ಕಳೆ. ಹಸಿರು ಹಾವುಗಳು ನಮ್ಮ ಕಣ್ಣನ್ನೇ ಕಚ್ಚುತ್ತವೆ’.
ಶಕಕ್ಕ ಎಂದರೆ ಅವಳು ಹೇಳುವ ಕಥೆಗಳೆಂದರೆ ಬಾಬುಗೆ ಜೀವ. ಅವಳು ಯಾರಿಗೂ ಹೊಡೆಯುವುದಿಲ್ಲ; ಕಥೆ ಹೇಳುತ್ತಾಳೆ. ಯಾವ ಕಥೆಯೆಂದರೆ ಆ ಕಥೆ. ಅವಳಿಗೆ ಗೊತ್ತಿಲ್ಲದ ಕಥೆ ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದು ಬಾಬುವಿನ ನಂಬಿಕೆ. ಅವಳು ಬಹಳಷ್ಟು ದಪ್ಪ ದಪ್ಪ ಪುಸ್ತಕಗಳನ್ನು ಓದುವುದನ್ನು ಅವನು ನೋಡಿದ್ದ. ಇಷ್ಟೆಲ್ಲ ಕಥೆಗಳು ಅವಳಿಗೆ ಹೇಗೆ ಗೊತ್ತು ಎನ್ನುವುದು ಅವನಿಗೆ ಗೊತ್ತಿಲ್ಲ. ಅವಳು ಹೇಳುವ ಯಾವ ಕಥೆಯನ್ನೂ ಅವನು ತಪ್ಪಿಸಿದವನಲ್ಲ. ಕಥೆ ಅವನನ್ನು ಅಲ್ಲಿಗೆ ಎಳೆದುಕೊಂಡು ಹೋಗುತ್ತಿತ್ತು. ಶಾಲೆಗೆ ರಜೆ ಇದ್ದಾಗ ಅವನು ಶಕಕ್ಕ ಹೇಳುವ ಕಥೆ ಕೇಳಲು ಹೋಗಬಹುದು.
ರಜೆಯಲ್ಲಿ ಮಳೆ ಬೀಳುವಾಗ ಓಡಾಡುತ್ತ ನೀರು ಹರಿಯುವ ಊರಿನ ಓಣಿಗಳನ್ನು ಅವನು ಅಲೆಯುತ್ತ, ನೀರಲ್ಲಿ ಕೈಗೆ ಸಿಗದ ಸಣ್ಣ ಮೀನುಗಳನ್ನು ಹಿಡಿಯಲು ಪ್ರಯತ್ನಿಸುತ್ತ, ಅವುಗಳನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ. ಆದರೆ ಅದಕ್ಕೆಲ್ಲ ಒಂದು ದಿನ ತಡೆ ಬಿದ್ದಿತು. ಮೀನುಗಳ ಹಿಂದೆ, ಹಕ್ಕಿಗಳ ಹಿಂದೆ ಅಲೆಯುವಾಗಲೇ ಬಣ್ಣದ ಹೂಗಳಿದ್ದ ಕೊಡೆ ಸೂಡಿಕೊಂಡು ಮನೆಗೆ ಮರಳುತ್ತಿದ್ದ ಶಕಕ್ಕ ಬಾಬುವಿನ ರೆಟ್ಟೆಯನ್ನು ಹಿಡಿದೆತ್ತಿ ‘ನೀರಲ್ಲಿ ಯಾಕೆ ಆಡುತ್ತಿಯೋ ಮರಿ, ಕೈಕಾಲು ಚೊಕ್ಕವಾಗಿ ತೊಳೆದುಕೊಂಡು ನಮ್ಮ ಮನೆಗೆ ಬಾ. ನಿನಗೊಂದು ಚಲೋ ಕಥೆ ಹೇಳುತ್ತೇನೆ’ ಅಂದಿದ್ದಳು. ಸುಮ್ಮನೆ ತಲೆ ಅಲುಗಿಸಿದ ಬಾಬು ಅಲ್ಲಿ ನಿಂತಿರಲೇ ಇಲ್ಲ. ಗುಪ್ಪು ಕಿತ್ತು ಮನೆ ಮುಟ್ಟಿದ ಮೇಲೆಯೇ ಅವನು ಹಿಂತಿರುಗಿ ನೋಡಿದ್ದು. ಬಹಳ ಸಲ ಆ ಓಣಿಯಲ್ಲಿ ಪರಿಮಳದ ಸುಳಿ ಗಾಳಿಯ ತುಣುಕಿನಂತೆ ಬರುವ ಅವಳನ್ನು ಬಾಬು ನೋಡಿದ್ದಿತ್ತು. ಅದಕ್ಕೂ ಮೊದಲು ಮಹಾಮಾಯಿ ದೇವಳದ ದೀಪೋತ್ಸವದಲ್ಲಿ. ಅವಳು ಅದೆಂಥದ್ದೋ ಹೊಲಿಗೆ ಕ್ಲಾಸಿಗೆ ಅದೇ ದಾರಿಯಲ್ಲಿ ಹೋಗಿ ಬರುವಾಗ ಕಣ್ಣಿಗೆ ಬೀಳುತ್ತಿದ್ದಳು.
ಶಕಕ್ಕ ಅಷ್ಟಕ್ಕೇ ಬಾಬುವನ್ನು ಬಿಡಲಿಲ್ಲ. ಬೆಳಿಗ್ಗೆ ಅವರ ಮನೆ ಮುಂದಿನಿಂದ ಶಾಲೆಗೆ ಹೋಗುವಾಗ ದಣಪೆಗೆ ಚಾಚಿಕೊಂಡು, ಕೈಯಲ್ಲಿ ಹೂವಿನ ಚೆಬ್ಬೆ ಹಿಡಿದು ನಿಂತಿದ್ದ ಅವಳು ’ರಾಜಕುಮಾರ ಶಾಲೆಗೆ ಹೋಗ್ತಿದ್ದಾನೊ. ಸಂಜೆಗೆ ಮನೆಗೆ ಬಾರೋ. ನಿನ್ನ ದೋಸ್ತರೆಲ್ಲ ಬರುತ್ತಾರೆ. ಬರ್‍ತೀಯಲ್ಲ ಬಾಬು?’ ಎಂದು ಕೇಳಿದ್ದಕ್ಕೆ ಇವನು ಬರೀ ತಲೆ ಅಲುಗಿಸಿ ದೊಡ್ಡ ಹೆಜ್ಜೆಗಳನ್ನು ಹಾಕಿದ್ದ; ಅವಳು ಹಿಂದಿನಿಂದ ಬರುತ್ತಿದ್ದಾಳೆ ಎಂಬಂತೆ.
ಅವರ ಮನೆಗೆ ಹೋಗಲು ನಿಜಕ್ಕೂ ಅವನಿಗೆ ಮನಸ್ಸಿರಲಿಲ್ಲ. ಅಲ್ಲಿಗೆ ಹೋದರೆ ಅವನು ಬೇಣದಲ್ಲಿ ಹಕ್ಕಿಯ ಮೊಟ್ಟೆಗಳನ್ನು, ಹಣ್ಣುಗಳನ್ನು ಹುಡುಕಿಕೊಂಡು ಅಲೆಯುವುದಕ್ಕೆ ಆಗುತ್ತಿರಲಿಲ್ಲ.
ಕಪ್ಪು ತಗಡಿನ ಮಾಡಿನ ಅವರ ಮನೆಯನ್ನು ಹೊರಹಾದಿಯಲ್ಲಿ ನಿಂತು ನೋಡಿದರೆ ಯಾರಲ್ಲಾದರೂ ಹೆದರಿಕೆ ಹುಟ್ಟಿಸುವಂತೆ ಇತ್ತು. ಅದೇ ಮನೆಯಿಂದ ಬರುವ ನಿತ್ಯಾನಂದ ಬಾಬುವಿನ ಕ್ಲಾಸಿನವನು. ಅವನನ್ನು ಅವರ ಪೇಟೆ ಅಂಗಡಿಯ ಕಾರಕೂನ ದಿನಾಲೂ ಶಾಲೆಗೆ ಬಿಟ್ಟು ಹೋಗುತ್ತಿದ್ದ. ಮುಂದಿನ ಸಾಲಿನಲ್ಲಿ ಮೊದಲಿಗನನ್ನಾಗಿ ಅವನ್ನು ದೊಡ್ಡವರ ಮನೆಯವನು ಎಂದು ಮಾಸ್ತರು ಕೂರಿಸಿದ್ದರು. ಅವನು ಶಾಲೆ ಬಿಟ್ಟೊಡನೆ ಹೊರಗೆ ಕಾದಿರುತ್ತಿದ್ದ ಅವರ ಅಂಗಡಿಯ ಕಾರಕೂನನೊಂದಿಗೆ ಮನೆಗೆ ಹೋಗುತ್ತಿದ್ದ.
ಈ ನಿತ್ಯಾನಂದ ಆಗಾಗ ಶಾಲೆಗೆ ಬರುತ್ತಿರಲಿಲ್ಲ. ಎಲ್ಲಿಗೆ ಹೋಗಿದ್ದೆ ಎಂದು ಯಾರಾದರೂ ಕೇಳಿದರೆ ಶಿರಸಿಯ ಬೆಟ್ಟದಲ್ಲಿರುವ ಅವರ ಅಜ್ಜನ ಮನೆಯ ಊರಿನ ಹೆಸರನ್ನು ಯಾವಾಗಲೂ ಹೇಳುತ್ತಿದ್ದ. ಒಂದು ಸಲ ಅವನು ಬಹಳ ದಿನ ಶಾಲೆಗೇ ಬಂದಿರಲಿಲ್ಲ. ಊರಿಗೆ ಹೋಗಿ ಬಂದ ನಿತ್ಯಾನಂದ ಅವನ ಅಮ್ಮನೊಂದಿಗೆ ಬಾಬುವಿನ ಮನೆಗೆ ಬಂದಿದ್ದ. ಅಮ್ಮ ಮಗ ಇಬ್ಬರೂ ಒಳಗೆ ಬರದೇ ಹೊರಗಿನ ಚಿಟ್ಟೆಯ ಮೇಲೆ ಕೂತು ಬಾಬುವಿನ ಅಮ್ಮನೊಂದಿಗೆ ಮಾತನಾಡುತ್ತಿದ್ದರು. ನಿತ್ಯನಿಗೆ ಇಷ್ಟು ದಿವಸ ಮಾಸ್ತರು ಏನು ಕಲಿಸಿದ್ದರು ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ಅದಕ್ಕಾಗಿ ಅವನು ಅಮ್ಮನನ್ನು ಮುಂದುಮಾಡಿ ಕರೆದುಕೊಂಡು ಬಂದದ್ದು. ಬಾಬುವಿಗೆ ಅವನ್ನೆಲ್ಲ ಅವನಿಗೆ ಹೇಳುವ ಮನಸ್ಸು ಇರಲಿಲ್ಲ. ಅವನೊಂದಿಗೆ ಮಾತನಾಡದ ನಿತ್ಯಾನಂದ ಅವನಿಗೆ ಚೂರೂ ಸೇರುತ್ತಿರಲಿಲ್ಲ.
ಬಾಬುವಿನ ಅಪ್ಪ ಆಗಾಗ ಹೇಳುತ್ತಿದ್ದ ಶಕಕ್ಕನ ಮನೆಯವರ ಬಗ್ಗೆ. ‘ಬೇರೆಯವರ ಮನೆ ಹಾಳು ಮಾಡದೇ ಇಷ್ಟು ದೊಡ್ಡ ಸಂಸ್ಥಾನ ಕಟ್ಟಿಸಲು ಆಗುವುದಿಲ್ಲ. ಪಾಪ ಆ ಮಂತ್ರಿ ಸಾಹುಕಾರರ ಮನೆಯವರು ಇವರಿಗೆ ಏನು ಮಾಡಿದ್ದರು. ಅವರಿಗೆ ಮಾಡಬಾರದ ಅನ್ಯಾಯ ಮಾಡಿಬಿಟ್ಟರು. ಅವರ ನೆಲಗಟ್ಟೇ ತೊಳೆದುಹೋಯಿತು. ಘನ ಜನರ ಶಾಪ ತಪ್ಪುವುದಿಲ್ಲವೇ. ಒಬ್ಬ ಮಳ್ಳ, ಅವಳದು ಏನೋ ಆಯ್ತು… ಥೋ… ಥೋ…’ ಎಂದಿದ್ದ ಅಮ್ಮನ ಮುಂದೆ.
‘ನಮಗೆಲ್ಲ ಅದ್ಯಾಕೆ… ಸುಮ್ಮನಿರಿ. ನಮ್ಮ ಮುಂದೆ ಹೇಳಿದ್ದೇ ಆಯ್ತು. ಬೇರೆ ಯಾರ ಮುಂದೆಯೂ ಹೇಳಬೇಡಿ. ನೀವು ಹೇಳಿದ್ದು ಬೇರೆ ವೇಷ ಹಾಕಿಕೊಂಡು ಅವರ ಕಿವಿಗೆ ಬೀಳ್ತದೆ’ ಎಂದು ಅಪ್ಪ ಮುಂದೆ ಮಾತನಾಡದಂತೆ ಅಮ್ಮ ಅಡ್ಡ ಮಾತು ಆಡಿದ್ದಳು.
‘ಮನೆ ಹಾಳು ಮಾಡೂದು’ ಅಂದರೇನೆಂದು ಬಾಬುವಿಗೆ ಗೊತ್ತಿರಲಿಲ್ಲ. ಅದೊಂದು ಭಯಂಕರ ವಿಷಯವೇ ಇರಬೇಕು; ಯಕ್ಷಗಾನದಲ್ಲಿ ಬರುವಂಥ ರಾಕ್ಷಸ ವೇಷದ ರೀತಿಯದು. ಈ ವೇಷದ ಆರ್ಭಟ ಜೋರಾಗಿಯೇ ಇರುತ್ತದೆ. ‘ಇಲ್ಲ, ಶಕಕ್ಕನ ಮನೆಗೆ ನಾನು ಹೋಗುವುದಿಲ್ಲ’ ಎಂದು ಬಾಬು ಅಲ್ಲಿಗೆ ಹೋಗುವುದನ್ನು ಮನಸ್ಸಿನಿಂದ ತೆಗೆದುಹಾಕಿದ್ದ. ಇದರೊಂದಿಗೆ ಅವನಿಗೆ ಶಕಕ್ಕನ ತಮ್ಮ ಮಳ್ಳಮನುವಿನ ಹೆದರಿಕೆ ಬೇರೆ ಇತ್ತು. ಅವನು ಎಲ್ಲಾದರೂ ಹೊಡೆದರೆ ಎಂದು.
ಬಾಬು ಅಲ್ಲಿಗೆ ಹೋಗುವುದನ್ನು ಬಹಳ ದಿನ ತಪ್ಪಿಸಿಕೊಳ್ಳಲು ಆಗಲಿಲ್ಲ. ಅವನ ಅಕ್ಕ ಪದ್ಮಕ್ಕನೇ ಇವನು ‘ಸಿಕ್ಕರೆ ಬಿಟ್ಟನಂತೆ’ ತಿರುಗುತ್ತಿದ್ದುದ್ದನ್ನು ನೋಡಿ ಕೈಹಿಡಿದು ಎಳೆದುಕೊಂಡು ಹೋಗಿ ಶಕಕ್ಕನ ಮುಂದೆ ಬಿಟ್ಟಳು. ಬಾಬುವನ್ನು ನೋಡಿದ ಅವಳು ‘ಅರೆ! ಬಾರೋ ರಾಜಕುಮಾರ, ಇವತ್ತು ನಮ್ಮ ನೆನಪಾಯಿತೊ ನೋಡ್ತೆ. ಬಾ ಕೂತುಕೋ’ ಎಂದು ಅವನನ್ನು ಕೆಂಪು ಜಮಖಾನದ ಮೇಲೆ ಕೂರಿಸಿದ್ದಳು.
‘ಇವನು ಮನೆಯಲ್ಲಿದ್ದರೆ ಹೇಳಿದ ಮಾತು ಕೇಳುವುದಿಲ್ಲ. ನಾನು ಹೋಗ್ತೆ’ ಎಂದು ಪದ್ದಕ್ಕ ಹೋಗಿದ್ದಳು. ಶಾಲೆಯಲ್ಲಿ ಇರುವಂತೆ ಕಪ್ಪು ಹಲಗೆಯಾಗಲಿ, ಬಿಳಿಯ ಕಡುವಾಗಲಿ ಅಲ್ಲಿ ಇರಲಿಲ್ಲ. ಅವನು ತನ್ನ ಸುತ್ತ ನೋಡಿದರೆ ವಾಡೆಯ ಸರಸ್ವತಿ, ಚಂದು, ಪ್ರಿಯಾಗಿ ಎಲ್ಲರೂ ಇದ್ದರು. ಆದರೆ ಅವರ ಮನೆಯ ನಿತ್ಯಾನಂದನೇ ಅಲ್ಲಿ ಇರಲಿಲ್ಲ. ಇದರಿಂದಾಗಿ ಬಾಬುವಿಗೆ ತುಸು ಸಮಾಧಾನವಾಯ್ತು. ಪದ್ದಕ್ಕನ ಮೇಲಿನ ಸಿಟ್ಟು ಕಡಿಮೆಯಾಗುತ್ತ ಬಂತು.
ನಮ್ಮ ಬಾಬು ಬಂದಿದ್ದಾನೆ. ಅವನಿಗೆ ಕಥೆಯನ್ನು ಅರ್ಧದಲ್ಲಿ ಹೇಳಿದರೆ ಗೊತ್ತಾಗೂದಿಲ್ಲ. ಮೊದಲಿನಿಂದ ಹೇಳ್ತೆ ಎಂದು ಮಹಾಭಾರತದ ದೇವಯಾನಿ, ಶರ್ಮಿಷ್ಠೆಯ ಕಥೆಯನ್ನು, ಅವರ ಜಿದ್ದನ್ನು ಹೇಳಿದಳು. ಪಾಪ ಶರ್ಮಿಷ್ಠೆಗೆ ಪುರೂರವ ಹಾಂಗೆ ಮಾಡೂಕಾಗಿತ್ತು ಎಂದು ಕಥೆ ಯನ್ನು ಮುಗಿಸಿದ್ದಳು. ಬಾಬು ಕಣ್ಣು ಅಗಲ ಮಾಡಿಕೊಂಡು ಕೇಳಿದ್ದ. ಅವನ ಮುಂದೆ ಅರಮನೆ ಶಕಕ್ಕನ ಮನೆಯಾಗಿ ಬದಲಾಗಿತ್ತು. ಶಕಕ್ಕ ಶಮಿಷ್ಠೆಯ ಹಾಗೆ ಶಾಪಗ್ರಸ್ತ ಸುಂದರಿಯಾಗಿದ್ದಳು.
ಅಮ್ಮ ಬಾಬುವಿನ ಮುಂದೆಯೇ ಪದ್ಮಕ್ಕನಿಗೆ ಆಗಾಗ ಹೇಳುವುದಿತ್ತು.
ನೋಡು ದೊಡ್ಡ ಮನೆಯ ಶಕುಂತಲಳನ್ನು. ಬರೀ ಶಾಲೆಗೆ ಹೋಗಿ ಕಲಿತರೆ ಆಗಲಿಲ್ಲ. ನಯ, ನಾಜೂಕು ಕೆಲಸವನ್ನು ನಿಮ್ಮಂಥ ಪ್ರಾಯದ ಹೆಣ್ಣುಮಕ್ಕಳು ಅವಳನ್ನು ನೋಡಿ ಕಲಿಯಬೇಕು. ಅವಳಿಗೆ ಗೊತ್ತಿಲ್ಲದ ಕೆಲಸ ಯಾವುದೂ ಇಲ್ಲ ಅಂತೇನೆ. ಆದರೆ ಬಾಳುವೆಯ ವಿಷಯದಲ್ಲಿ ಅನ್ಯಾಯ ಆಗಿಬಿಟ್ಟಿತು. ಅದೊಂದು ಆಗದಿದ್ದರೆ ಎಲ್ಲವೂ ಸಮಾ ಇರುತ್ತಿತ್ತೇನೊ…’
ಹೀಗೆಲ್ಲ ಅಂದು ಅಮ್ಮ ಕ್ಷಣಕಾಲ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಕೂತಿರುವುದನ್ನು ಬಾಬು ಆಗಾಗ ನೋಡುವುದಿತ್ತು.
ಶಕಕ್ಕನಿಗೆ ಏನಾಗಿದೆ? ಅಮ್ಮನಿಗೆ ಬಾಬು ಕೇಳಿದರೆ ಅದೆಲ್ಲ ಸಣ್ಣಮಕ್ಕಳಿಗೆ ಯಾಕೋ. ನೀನು ಅಂಗಿಯನ್ನು ಸಮಾ ಹಾಕಿಕೊಳ್ಳುವುದನ್ನು ಮೊದಲು ಕಲಿ. ಅದನ್ನೆಲ್ಲ ದೊಡ್ಡವನಾದ ಮೇಲೆ ತಿಳಿದುಕೊಳ್ಳಬಹುದು’ ಅಮ್ಮ ಕಣ್ಣು ದೊಡ್ಡದು ಮಾಡಿದ್ದಳು ಬಾಬುವನ್ನು ಹೆದರಿಸುವಂತೆ, ನಿನಗೆ ಅದೆಲ್ಲ ಬೇಡ ಎನ್ನುವಂತೆ. ಪದ್ದಕ್ಕನಿಗೆ ಅದನ್ನು ಕೇಳಿದರೆ ಹೋಗೊ, ಹೋಗೊ, ದೊಡ್ಡವರ ವಿಚಾರ ನಿನಗೇನು ಗೊತ್ತಾಗುತ್ತದೆಯೊ. ಮಗ್ಗಿಯನ್ನೇ ಸರಿಯಾಗಿ ಹೇಳಲು ಬರುವುದಿಲ್ಲ ಇವನಿಗೆ. ಶಕಕ್ಕನ ವಿಷಯ ಬೇಕಂತೆ ಎನ್ನುತ್ತ ನಾಲಿಗೆ ಹೊರಗೆ ಹಾಕಿ ಅಣಕಿಸಿದ್ದಳು. ಅವಳಿಗೆ ತಾನು ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ, ತನಗೆ ಎಲ್ಲ ವಿಷಯ ಗೊತ್ತು, ಬುದ್ಧಿವಂತೆ ಎಂಬ ಅಹಂಕಾರ. ಬಾಬು ಅವಳು ಹೇಳಿದ ಮಾತನ್ನು ಒಂದೂ ಕೇಳುವುದಿಲ್ಲ. ಹಾಗೆಂದೇ ಅವಳು ‘ಬಾಬು ಹೀಗೆ ಮಾಡಿದ…’ ಎಂದು ಆಗಾಗ ಅಮ್ಮನ ಹತ್ತಿರ ಚಾಡಿ ಹೇಳುತ್ತಿರುತ್ತಾಳೆ. ಅಮ್ಮ ಎಲ್ಲ ಕೆಲಸ ಬಿಟ್ಟು ಅವನ ಮೇಲೆ ಕೂಗುವಂತೆ ಮಾಡುತ್ತಾಳೆ.
ಶಕಕ್ಕನನ್ನೇ ಕೇಳಬೇಕು. ಬೇಡ. ಅವಳು ಬೇಜಾರು ಮಾಡಿಕೊಳ್ಳಬಹುದು. ಬೇಡ ಶಕಕ್ಕ ಪಾಪದವಳು. ಎಲ್ಲದರ ಬಗ್ಗೆ ತಿಳಿದುಕೊಂಡಂತೆ ಮಾತನಾಡುವ ಚಂದುವಿನ ಹತ್ತಿರವೂ ಅವಳ ಬಗ್ಗೆ ಬಾಬು ಕೇಳಲಿಲ್ಲ.
*
*
*
ಈ ವಾರ ಶಕಕ್ಕನ ಕಥೆಗಳಿಗೆ ರಜೆ. ಓದಲು ಕೊಟ್ಟಿದ್ದ ಕಥೆಗಳ ಪುಸ್ತಕವನ್ನು ಬಾಬು ಮಧ್ಯಾಹ್ನ ಅವಳಿಗೆ ಕೊಟ್ಟು ಬರಲು ಹೋಗಿದ್ದ. ಬಣ್ಣ ಬಣ್ಣದ ಎಲೆಗಳು ತುಂಬಿರುವ ಗಿಡಗಳ ಅಂಗಳವನ್ನು ಹಾದು, ಚಿಕ್ಕು ಮರದ ಮೇಲಿರುವ ಇಣಚಿಯನ್ನು ಓಡಿಸಿ ಬಾಬು ಬಾಗಿಲಲ್ಲಿ ಬಂದು ನಿಂತಿದ್ದ.
‘ಅಕ್ಕಾ…’ ಎಂದು ಅವನು ಕರೆದರೂ ಒಳಗಿನಿಂದ ಯಾರೂ ಬರದಿದ್ದುದರಿಂದ ಚಿಲಕ ಹಿಡಿದು ಅಲುಗಾಡಿಸಿದ. ಒಳಗಿನಿಂದ ‘ಯಾರೂ..’ ಎಂಬ ಶಕಕ್ಕನ ದನಿಯ ಹಿಂದೆ ಅವಳೇ ಬಂದಳು.
ಅಡ್ಡ ಮಾಡಿದ ಬಾಗಿಲು ಪೂರ್ತಿ ತೆಗದು ಓಹೋ ನೀನೊ ಮದುಮಗ. ನಿನಗೇನು ಮಂಗಳಾರತಿ ಮಾಡಿ ಒಳಗೆ ಕರೆಯಬೇಕೇನೊ. ಹೊರಗಿನವರ ಹಂಗೆ ಮಾಡ್ತೀಯಲ್ಲ ಎಂದು ಸೆರಗಿನಿಂದ ಹಣೆಯ ಬೆವರನ್ನು ಒರೆಸುತ್ತ ಒಳಗೆ ಕರೆದುಕೊಂಡು ಹೋದಳು.
ಉಂಡಾಯ್ತೇನೊ. ಎಂಥ ಮೀನು ತಂದಿದ್ದರು ಇವತ್ತು ಎಂದು ಕೇಳುತ್ತ ಕೈಹಿಡಿದು ಕುರ್ಚಿಯ ಮೇಲೆ ಕೂಡಿಸಿದಳು.
ಎಂಥ ಮೀನು ಗೊತ್ತಿಲ್ಲ. ಆದರೆ ಮೀನಿನ ಪಳದಿ ಮಾತ್ರ ರುಚಿಯಾಗಿತ್ತು. ಮೀನಿಗೆ ಬಹಳ ಮುಳ್ಳಿತ್ತು. ಅದು ಇಷ್ಟು ದೊಡ್ಡದಿತ್ತು ಎಂದು ಹಸ್ತದವರೆಗೆ ಕೈಯನ್ನು ಮುಂದುಮಾಡಿ ತೋರಿಸಿದ ಬಾಬು.
ನೀನೆಂಥ ಗಂಡಸೋ. ಹೆಸರು ಗೊತ್ತಿಲ್ಲದೆ ಮೀನು ತಿನ್ನುವವ. ಮುಂದೆ ನಿನ್ನ ಹೆಂಡತಿ ಆಗುವವಳ ಹತ್ತಿರ ಹಿಂಗೇ ಮಳ್ಳನ ಹಂಗಿದ್ದರೆ ದಿನಾ ಬೈಸಿಕೊಳ್ತಿ. ಇಲ್ಲೇ ಕೂತುಕೊಂಡಿರು, ಒಳಗಿನ ಕೆಲಸ ಮುಗಿಸಿ ಬರ್‍ತೆ ಎಂದು ಬಾಬು ಕೊಟ್ಟ ಪುಸ್ತಕಗಳನ್ನು ತೆಗೆದಿಡುತ್ತ ಎದ್ದು ಹೋದವಳು ಬಹಳ ಹೊತ್ತಿನ ನಂತರ ಹೊತ್ತಿಲ್ಲ ಗೊತ್ತಿಲ್ಲ. ಯಾರಾದರೂ ಮನೆಯಲ್ಲಿ ಇಲ್ಲ ಎಂದು ಗೊತ್ತಾದರೆ ಸಾಕು, ಏನಾದರೂ ಕೇಳಿಕೊಂಡು ಬಂದುಬಿಡುತ್ತಾರೆ. ಎನ್ನುತ್ತ ಬಂದಿದ್ದಳು. ಅವಳು ಕೆಳಗೆ ಇಳಿದು ಹೋದಮೇಲೆ ’ಈಗಲೇ ಬೇಕೆಂದರೆ ಹೆಂಗೆ ಕೊಡುವುದು. ಮನೆಯಲ್ಲಿ ಯಾರೂ ಇಲ್ಲ, ನಾಳೆಗೆ ಬಾ’ ಎಂದು ಕೆಳಗಿನ ಬಾಗಿಲು ಹಾಕಿದ ಸದ್ದು ಬಾಬುವಿಗೆ ಕೇಳಿತ್ತು.
ಅಲ್ಲವೊ, ನೀನು ಯಶವಂತಣ್ಣನ ಮಗ ಸುಧೀರನ ಮದುವೆಗೆ ಹೋಗಲಿಲ್ಲವೇನೊ. ನಿಮ್ಮಂಥ ಸಣ್ಣ ಮಕ್ಕಳು ಹೋಗದೆ ಇನ್ಯಾರು ಹೋಗಬೇಕು. ನಿಮ್ಮ ಮನೆಯಲ್ಲಿ ಯಾರ್‍ಯಾರು ಹೋದರು?
ಪದ್ದಕ್ಕ ಹೋಗಿದ್ದಾಳೆ. ಅವಳ ದೋಸ್ತಿಯ ಅಕ್ಕನನ್ನೇ ಸುಧೀರಣ್ಣ ಮದುವೆಯಾಗುತ್ತಿರುವುದು ಎಂದು ಬಾಬು ಆ ಮದುವೆಗೆ ಅಕ್ಕ ಯಾಕೆ ಹೋಗಿದ್ದಾಳೆ ಎಂಬುದರ ಕಾರಣವನ್ನು ಹೇಳಿದ.
ನಿತ್ಯಾನಂದ ಕುಮಟೆಯಲ್ಲಿ ನಡೆಯುತ್ತಿರುವ ಆ ಮದುವೆಗೆ ಅಪ್ಪ ಅಮ್ಮನೊಂದಿಗೆ ನಿನ್ನೆಯೇ ಹೋಗಿದ್ದಾನೆಂದು ಅವರೆಲ್ಲ ಬರುವುದು ನಾಳೆಯೇ ಎಂಬುದು ಶಕಕ್ಕನಿಂದ ಗೊತ್ತಾಯಿತು. ಪದ್ದಕ್ಕ ಜೊತೆಗೆ ಕರೆದಾಗ ಹೋಗದಿದ್ದುದು ತಪ್ಪಾಯಿತೆಂದು ಆಗ ಅವನಿಗೆ ಅನಿಸಿತು. ಅಕ್ಕನ ಸಂಗತಿಗೆ ಹೋಗಿದ್ದರೆ ಬಹಳಷ್ಟನ್ನು ಅವನು ಅವಳಿಂದ ಅನ್ನಿಸಿಕೊಳ್ಳಬೇಕಿತ್ತು. ಬೇಡದಿದ್ದರೂ ಅವಳಿಂದ ತೋಳನ್ನು ಚೂಟಿಸಿಕೊಳ್ಳಬೇಕಿತ್ತು. ಅದಕ್ಕಾಗಿಯೇ ಅವನು ಮದುವೆಗೆ ಅಮ್ಮ ಹೋಗು ಎಂದರೂ ಹೋಗದಿದ್ದುದು.
ನೀನೀಗ ಮನೆಗೆ ಹೋಗಿ ಮಲಗಿಕೊಳ್ಳುವವನೊ, ಇಲ್ಲೇ ಇದ್ದು ಓದಿಕೊಳ್ಳುವವನೊ? ಬರುವವನು ಯಾಕೆ ಶಾಲೆಯ ಒಂದು ಪುಸ್ತಕ ಕೈಯಲ್ಲಿ ಹಿಡಿದುಕೊಂಡು ಬಂದಿಲ್ಲ? ಪ್ರಿಯಾಗಿ, ಚಂದು ಯಾರೂ ಇಂದು ಬರೂದಿಲ್ಲ. ನಿಮ್ಮ ಶಾಲೆಯ ಪರೀಕ್ಷೆ ಬಂತಲ್ಲ’ ಅಂದಳು ಶಕಕ್ಕ.
ಅಕ್ಕ ನೀನ್ಯಾಕೆ ಮದುವೆಗೆ ಹೋಗಲಿಲ್ಲ? ಕೇಳಿದ ಬಾಬು.
ಮದುವೆ?… ನನ್ನಂಥವರಿಗಲ್ಲ ಮದುವೆ ಅಲ್ಲ. ಅದನ್ನೆಲ್ಲ ಮುಂದೆ ನೋಡುವಾ. ಮೆತ್ತಿನ ಮೇಲೆ ಹೋಗುವಾ ಬಾ. ಅಲ್ಲಿ ಒಂದು ಚೂರು ಗಾಳಿ ಬರ್‍ತದೆ’ ಎಂದು ಮುಂದಿನ ಬಾಗಿಲನ್ನು ಚಾಚಿ ಶಕಕ್ಕ ಬಾಬುವನ್ನು ಎಬ್ಬಿಸಿದಳು. ಮನೆಯ ಹೊರಗಿದ್ದ ಮಾಳಿಗೆಯ ಮೆಟ್ಟಿಲುಗಳತ್ತ ಹೋದಾಗ ಬಿಸಿಲು ನೆತ್ತಿಯನ್ನು ಸುಡುತ್ತಿತ್ತು. ಪೇಟೆಗೆ ಹೋಗುವ ದಾರಿ ಜನರಿಲ್ಲದೆ ಗೆರೆ ಕೊರೆದಂತೆ ಬಿಸಿಲಿಗೆ ಹಳದಿಯಾಗಿ ಹೊಳೆಯುತ್ತಿತ್ತು.
ಬಾಬು ಇದೇ ಮೆತ್ತಿನ ಮೆಟ್ಟಿಲುಗಳನ್ನು ಹತ್ತಿ ಕಥೆ ಹೇಳುವ ಕೋಣೆಗೆ ಹೋಗುತ್ತಿದ್ದ. ಈಗ ಅಕ್ಕ ಕಥೆ ಹೇಳಿದರೂ ಹೇಳಬಹುದೆಂದು ಸಣ್ಣ ನಿರೀಕ್ಷೆ. ಆದರೆ ಶಕಕ್ಕ ಕರೆದುಕೊಂಡು ಹೋಗಿದ್ದು ಅವಳ ಕೋಣೆಗೆ. ಅಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಶಾರದಾದೇವಿ ಇವರೊಂದಿಗೆ ಬಾಬು ಗೊತ್ತು ಮಾಡಲಾಗದ ಗಡ್ಡದ ಸ್ವಾಮಿಗಳ ಚಿತ್ರಗಳನ್ನು ಗೋಡೆಗೆ ತೂಗು ಹಾಕಲಾಗಿತ್ತು. ಅವರಲ್ಲಿ ಕೆಲವರು ಅವನ ಮನೆಯಲ್ಲೂ ಇದ್ದವರು. ಬಾಬು ಅವನ್ನು ನೋಡುತ್ತಿದ್ದುದ್ದನ್ನು ನೋಡಿದ ಶಕಕ್ಕ ಅವನ್ನೆಲ್ಲ ಮುಂಬಯಿಯಿಂದ ಬರುವಾಗ ತಂದದ್ದು ಅಂದಳು. ಮೇಜಿನ ಮೇಲೆ ಹಣೆಗೆ ಗಂಧ ಹಚ್ಚಿದ ಗಂಡಸಿನ ಫೋಟೋ ಒಂದು ಇತ್ತು.
ನೀನು ಮುಂಬಯಿಯಲ್ಲಿ ಏನು ಮಾಡುತ್ತಿದ್ದೆ ಅಕ್ಕ?’
ಅದೆಲ್ಲ ಈಗ ಬೇಡ. ಮುಂದಿನ ಸಲ ಯಾರಿಗೂ ಹೇಳದ ಕಥೆಯನ್ನು ನಿನಗೆ ಹೇಳ್ತೆ. ನಿನ್ನ ಪರೀಕ್ಷೆಗಳೆಲ್ಲ ಮುಗಿಯಲಿ’ ಅಂದಳು.
ಬಾಬುವಿನ ಕಿವಿ ನೆಟ್ಟಗಾಯಿತು. ಪ್ರಿಯಾಗಿ, ಚಂದುವಿಗೂ?
ಇಲ್ಲ, ನಿನಗೊಬ್ಬನಿಗೆ ಮಾತ್ರ ಹೇಳ್ತೇನೆ’
ಎಂಥ ಕಥೆ ಅದು ಅಕ್ಕ?
ಹೊಸ ರೀತಿಯದು, ನೀನು ಇಲ್ಲಿಯವರೆಗೆ ಕೇಳದೆ ಇರುವಂಥದ್ದು
ಅದರಲ್ಲಿ ಯಾರ್‍ಯಾರು ಇರುತ್ತಾರೆ?
ಈಗೇ ಅದನ್ನೆಲ್ಲ ಹೇಳಿಬಿಟ್ಟರೆ ಎಂಥದ್ದು ಉಳಿಯುತ್ತದೆ ಅದರಲ್ಲಿ. ನಿನಗೆ ಅದನ್ನು ಕೇಳಲಿಕ್ಕೇ ಆಗುವುದಿಲ್ಲ ಕಡೆಗೆ
ಹೆಸರನ್ನಾದರೂ ಹೇಳಕ್ಕ
ಒಂದಲ್ಲ ಒಂದೂರಿನ ರಾಜಕುಮಾರಿಯ ಕಥೆ
ಇಷ್ಟನ್ನು ಹೇಳಿ ಶಕಕ್ಕ ಮತ್ತೆಲ್ಲಿಗೋ ಹೋಗಿ ಬಂದಳು. ಸುಮಾರು ಹೊತ್ತಿನಿಂದ ಅಲ್ಲಿ ಕೂತಿದ್ದರೂ ಬಾಬುವಿಗೆ ಅವಳ ತಮ್ಮ ಮಳ್ಳ ಮನು ಅಲ್ಲಿ ಕಂಡಿರಲಿಲ್ಲ. ‘ಅಕ್ಕ ಮನು ಅಣ್ಣ ಎಲ್ಲಕ್ಕ’ ಎಂದು ಕೇಳಿದ. ಅವನು ಇಲ್ಲಿಗೆ ಬರಲು ಶುರು ಮಾಡಿದ ಮೇಲೆ ಮನುವಿಗೆ ಮಳ್ಳ ಎಂದು ಚಾಳಿಸುವುದನ್ನು ಬಿಟ್ಟಿದ್ದರಿಂದ ಧೈರ್ಯದಿಂದ ಕೇಳಿದ.
ಅವನೂ ಮದುವೆಗೆ ಹೋಗಿದ್ದಾನೆ. ಯಾರಿಗಾದರೂ ಮನೆಯೊಳಗೇ ಎಷ್ಟು ಹೊತ್ತು ಎಂದು ಇರಲಿಕ್ಕಾಗುತ್ತದೆ. ನಿತ್ಯಾನಂದನ ಸಂಗಡ ಅವನೂ ಹೋಗಿದ್ದಾನೆ ಅಂದಳು ಶಕಕ್ಕ.
ಆ ಮಳ್ಳ ಮನುವಿನಿಂದಾಗಿಯೇ ಅವನಿಗೆ ಇಲ್ಲಿಗೆ ಬರಲು ಹೆದರಿಕೆ. ಮೊದಲೆಲ್ಲ ಹಾದಿಯಲ್ಲಿ ಹೋಗುತ್ತಿರುವ ಮನುವಿಗೆ ‘ಏ ಮಳ್ಳಾ’ ಅನ್ನುತ್ತಿದ್ದ. ಆಗ ಅವನು ‘ನಿಮ್ಮಪ್ಪ ಮಳ್ಳ’ ಎಂದು ಬಾಬುವನ್ನು, ಅವನ ದೋಸ್ತರನ್ನು ಕಲ್ಲು ಹಿಡಿದು ಅಟ್ಟಿಸಿಕೊಂಡು ಬರುತ್ತಿದ್ದ.
ಈಗ ಅವನು ಹಾಗೆಲ್ಲ ಅವನಿಗೆ ಮಳ್ಳ ಎಂದು ಹೇಳುವುದಿಲ್ಲ. ಮನು ಡಾಕ್ಟರು ಕೊಟ್ಟ ಗುಳಿಗೆಯನ್ನು ನುಂಗಿ ಮನೆಯಲ್ಲೇ ಆರಾಮಾಗಿ ಇರುತ್ತಾನೆ. ಅವನು ಹೆಚ್ಚು ಕೂತಿರುವುದು ಬಾವಿಕಟ್ಟೆಯ ಮೇಲೆ; ನೀರಲ್ಲಿ ಹಣಕಿ ನೋಡುತ್ತ.
ಒಣಗಿದ ಬಟ್ಟೆಗಳನ್ನು ಮಡಚಿಡುತ್ತಿದ್ದ ಶಕಕ್ಕ ಗೋಡೆಯ ಕಪಾಟು ತೆಗೆದಳು. ಒಂದು ಕ್ಷಣ ದಾಂಬರು ಗುಳಿಗೆಯ, ಬಟ್ಟೆಯ ಹಳೆಯ ವಾಸನೆ ಅಲ್ಲಿ ಹರಡಿತು. ಕಪಾಟಿನ ಚೌಕ ಗಾಜಿನ ಬಾಗಿಲ ಎತ್ತರಕ್ಕೆ ನಿಂತಿದ್ದ ಅವಳು ಬಹಳ ವರ್ಷಗಳಿಂದ ಕಪಾಟಿನ ಗಾಜಿನ ಹಿಂದೆಯೇ ಇದ್ದು ಆಗಷ್ಟೆ ಹೊರಗೆ ಬರುತ್ತಿದ್ದಂತೆ ಬಾಬುವಿಗೆ ಕಂಡಳು.
ಯಾವುದು ಚಂದ ಇದೆಯೋ ಈ ಸೀರೆಗಳಲ್ಲಿ? ಎಂದು ಬಾಬುವಿನ ಮುಂದೆ ನಾಲ್ಕೈದನ್ನು ಹಿಡಿದಳು. ಹಾಗೆ ಹಿಡಿದವಳು ನಿನಗೆಂಥದ್ದು ಗೊತ್ತಾಗುತ್ತದೆ. ಹೆಂಡತಿ ಬಂದ ಮೇಲೆ ಅವೆಲ್ಲ, ಈಗಲ್ಲ ಎಂದು ಗಿಣಿಹಸಿರು ಬಣ್ಣ ಸೀರೆಯನ್ನು ಬಾಬು ಕೂತಿದ್ದ ಮಂಚದ ಮೇಲೆ ಇಟ್ಟಳು.
ಸಂಜೆಗೆ ಭೂಮಿತಾಯಿ ದೇವಳಕ್ಕೆ ಹೋಗುವಾ. ಇಂದು ಅಲ್ಲಿ ದೇವರಿಗೆ ಬಹಳಷ್ಟು ಚಿನ್ನ ಹಾಕಿ ಸಿಂಗಾರ ಮಾಡಿರುತ್ತಾರೆ ಎಂದು ತನ್ನ ಸೀರೆಯನ್ನ ಸರಸರ ಕಳಚಿ ಇಟ್ಟಳು. ಅವನಿಗೆ ನಾಚಿಕೆಯಾಗಿ ಶೀ… ಶೀ…’ ಎಂದು ಕಣ್ಣು ಮುಚ್ಚಿಕೊಂಡ.
ಶಕಕ್ಕ ಅವನ ಮುಚ್ಚಿದ ಬೆರಳುಗಳನ್ನು ಬಿಡಿಸಿ ದೊಡ್ಡ ಗಂಡಸು ನೀನು. ತುಣ್ಣಿ ಬಿಟ್ಟುಕೊಂಡು ಓಡಾಡುವಾಗಿನಿಂದ ನಿನ್ನನ್ನು ಕಂಡಿದ್ದೇನೆ ಎಂದು ಹೊಸ ಸೀರೆಯನ್ನು ಉಟ್ಟು ಬಾಬುವಿನ ಮುಂದೆ ನಿಂತಳು. ಅದು ರೇಷ್ಮೆ ಸೀರೆಯೆಂದು ಬಾಬುವಿಗೆ ಗೊತ್ತು. ಅಂಥದ್ದನ್ನು ಅವನ ಅಮ್ಮ ಆಗಾಗ ಎಲ್ಲಿಗಾದರೂ ಹೋಗುವಾಗ ಉಡುತ್ತಿದ್ದಳು.
ಬಾಬುವಿಗೆ ಕಪಾಟಿನ ಕನ್ನಡಿಯಲ್ಲಿ ಮೊದಲಿಗೆ ಹೂ ಮುಡಿದ ಅವಳ ಉದ್ದ ಜಡೆ ಕಂಡಿತು. ಅವಳು ಹೂ ಮುಡಿದಿದ್ದನ್ನು ಮೊದಲು ಕಂಡಿರಲಿಲ್ಲ. ಅವಳು ಮದುವೆಗೆ ಸಿಂಗಾರ ಮಾಡಿದ ಮದುವಳತಿಯಂತೆ ಕಂಡಳು.
ಅಕ್ಕ ಎಷ್ಟು ಚಂದ ಕಾಣ್ತಿ… ಎಂದು ಕೂಗಿದ ಬಾಬುವಿಗೆ ಎಂಥದ್ದಕ್ಕೂ ಉಪಯೋಗ ಇಲ್ಲ ಇದು ಎಂದು ಅತ್ತರು ಬಾಟಲಿಯನ್ನು ತೆಗೆದುಕೊಂಡು ಅವನ ಅಂಗಿಗೆ ಹಚ್ಚಿ, ನೋಡು ನೀನೀಗ ಅರಬದ ಅತ್ತರಿನ ರಾಜಕುಮಾರನಾದೆ ಎಂದು ಕೆನ್ನೆ ಹಿಂಡಿ ಬಾಬುವಿನ ತಲೆಯನ್ನು ಹೊಟ್ಟೆಗೆ ಒತ್ತಿಕೊಂಡಳು. ಬಾಬುವಿಗೆ ಅತ್ತರಿನ ಸುಗಂಧಕ್ಕಿಂತ ಶಕುಂತಲಕ್ಕನ ಕಮ್ಮಗಿನ ಮೈವಾಸನೆ ಹಿತವೆನಿಸಿತು.
ಯಾರಿಗೂ ಇಲ್ಲಿಯದನ್ನು ಹೇಳಬೇಡ ಎಂದು ಅವಳು ಕಣ್ಣು ಒರೆಸಿಕೊಂಡು ಹೊಸ ಸೀರೆಯನ್ನು ಬಿಚ್ಚಿ ಹಾಕಿ, ಹಳೆಯದನ್ನು ಉಟ್ಟುಕೊಂಡಳು. ಅಕ್ಕ ಯಾಕೆ ಅತ್ತಳು, ತನ್ನ ಮುಂದೆ ಯಾಕೆ ಹೊಸ ಸೀರೆ ಉಟ್ಟುಕೊಂಡಳು ಎಂಬುದು ತಿಳಿಯದೆ ಅವಳು ‘ಏಳು ಕೆಳಗೆ ಹೋಗೋಣ’ ಎನ್ನುವವರೆಗೆ ಅವನು ಕೂತಿದ್ದ.
*
*
*
ಬಾಬು ಶಾಲೆಯಿಂದ ಸಂಜೆ ಬರುವಾಗಲೇ ತಡವಾಗಿತ್ತು. ಚಂದುವಿನ ಮನೆಯಲ್ಲಿ ಬೆಕ್ಕು ಮರಿ ಹಾಕಿತ್ತು. ಕಣ್ಣಿನ್ನೂ ಒಡೆಯದ ಅವುಗಳ ದಪ್ಪ ರೊಣೆಯನ್ನು ಮುಟ್ಟಿ ನೋಡಿದ್ದ. ಅವನ್ನು ನೋಡಿ ಬರುವಷ್ಟರಲ್ಲಿ ಹೊತ್ತು ಕಂತಲು ಬಂದಿತ್ತು.
ಅವನು ಅಮ್ಮ ಬೈಯುತ್ತಾಳೆ ಎಂಬ ಹೆದರಿಕೆಯಿಂದಲೇ ಅಡಗಿಕೊಳ್ಳುತ್ತ, ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತ ಸದ್ದಾಗದಂತೆ ಮನೆಯೊಳಗೆ ಬಂದದ್ದು.
ಇವನು ಬಂದಾಗ ಅಮ್ಮ ಅವನತ್ತ ನೋಡಲಿಲ್ಲ. ಯಾಕೆ ತಡವಾಯ್ತು, ಕಾಲು ತೊಳೆಯದೆ ಯಾಕೆ ಒಳಗೆ ಬಂದೆ ಎಂದು ಕೇಳಲಿಲ್ಲ. ಅವಳು ನಿತ್ಯಾನಂದನ ಅಮ್ಮ ದೇವಮ್ಮನ ಹತ್ತಿರ ಮಾತಿನಲ್ಲಿ ಗರ್ಕಾಗಿದ್ದಳು.
ದೇವಮ್ಮ ಬಂದರೆ ಬಾಬು ಅವಳ ಕಡೆಗೆ ಲಕ್ಷ್ಯ ಕೊಡುವುದಿಲ್ಲ. ಅವಳನ್ನು ಓರೆಗಣ್ಣಿನಲ್ಲಷ್ಟೆ ಆಗಾಗ ನೋಡುತ್ತಾನೆ. ಅವಳು ಒಂದು ಸಲವೂ ತನ್ನನ್ನು ಹತ್ತಿರ ಕರೆದು ಮಾತನಾಡಿಸುವುದಿಲ್ಲ ಎಂಬ ಸಿಟ್ಟು ಅವನಿಗೆ. ಆದರೆ ಇವತ್ತು ಅವರು ಮಾತನಾಡುತ್ತಿದ್ದು ಶಕಕ್ಕನ ವಿಚಾರ. ದೊಡ್ಡವರ ಮಾತುಗಳನ್ನು ಸಣ್ಣವರು ಆಲಿಸಬಾರದು ಎಂದು ಅಮ್ಮ ಹೇಳುತ್ತಿದ್ದುದು, ‘ಇವನಿಗೆ ದೊಡ್ಡವರ ಮಾತು ಕೇಳುವ ಚಟ ಇದೆ’ ಎನ್ನುವುದು ನೆನಪಾಗಿ, ಅಮ್ಮ ಬೈದರೆ ಎಂದು ಹೆದರಿಕೆಯಾದರೂ ಅವರ ಮಾತಿಗೆ ಕಿವಿಕೊಟ್ಟ.
ಹೆಂಗಾದರೂ ಆಗಲಿ, ಶಕುಂತಲಂದು ಈ ಸಲವಾದರೂ ಒಂದು ಆಗಿಬಿಟ್ಟರೆ ಸಾಕು. ಅವಳೊಂದು ಗಳಿದುಬಿಟ್ಟರೆ ಚಿಂತೆ ಇಲ್ಲ, ನೋಡು ದೇವಮ್ಮ ಎಂದು ಅಮ್ಮ ಹೇಳಿದ್ದಕ್ಕೆ ಅವಳು ತಲೆ ಅಲುಗಿಸುತ್ತಿದ್ದುದು, ಹೆಸರಿಗೆ ಪುಸ್ತಕ ಹಿಡಿದು ಕೂತ ಬಾಬುವಿಗೆ ಕಾಣಿಸುತ್ತಿತ್ತು.
ಈ ದೇವಮ್ಮ ಸಾಮಾನ್ಯದವಳಲ್ಲ. ಅವಳು ಕೆಟ್ಟವಳು ಎನ್ನುವುದರಲ್ಲಿ ಅವನಿಗೆ ಯಾವ ಅನುಮಾನವೂ ಇರಲಿಲ್ಲ. ಅವರ ಮನೆಗೆ ಹೋದಾಗ ಶಕಕ್ಕನಿಗೆ ‘ಎಲ್ಲ ಕಳಿದು ಕೂತಿ ನೋಡು. ಇಲ್ಲೇ ಉಳಿದು ನಮ್ಮ ಹೊಟ್ಟೆ ಉರಿಯುವಂಗೆ ಮಾಡ್ತಿ’ ಎಂದು ಬೈದುದಕ್ಕೆ ಅವಳು, ಅಳುತ್ತ ಬಾವಿಕಟ್ಟೆಯ ಕಡೆ ಕೊಡಪಾನ ತಕ್ಕೊಂಡು ಹೋಗಿದ್ದನ್ನು ಬಾಬು ನೋಡಿದ್ದ.
ಈಗಿನ ಹುಡುಗರು ಯಾರೂ ಒಪ್ಪುವುದಿಲ್ಲವೇ ಕಲಾವತಿ. ಇಡೀ ಚೌಕದ ಹಳ್ಳಿಗೆ ಇವಳದು ಗೊತ್ತಿರುದೇ. ಈ ಹುಡುಗರು ಮಾತನಾಡಲೂ ಕಬೂಲು ಆಗೂದಿಲ್ಲ ಅಂತೇನೆ. ಇಷ್ಟು ಬೇಗ ಇವಳದು ಹಿಂಗಾಗುತ್ತದೆ ಅಂದೆ ನಾವು ಕಂಡಿದ್ದವೆ… ಮನೆತನ, ಗುಣ ಎಲ್ಲ ಪರಾಂಬರಿಸಿ ನೋಡಿ ಮಾಡಿಕೊಂಡ ಸಂಬಂಧ, ಇಷ್ಟ ಬೇಗ ಹಿಂಗಾತೀದ ಅಂದೆ ಯಾರಿಗೆ ಗೊತ್ತಿತ್ತು? ನಾನು ನಿಮ್ಮ ಅಣ್ಣೋರಿಗೆ ಹೇಳ್ದೆ. ವಯಸ್ಸಾದ ಹುಡುಗರಾದರೂ ಅಡ್ಡಿ ಇಲ್ಲ. ಎರಡನೆ ಸಂಬಂಧ ಆದರೂ ಆಗೂದ- ನೋಡಿ ಅಂದೆ. ಕನ್ನೆಮಕ್ಕಳಿಗೆ ಮದುವೆ ಆಗೂದೆ ತ್ರಾಸ ಆಗೀದ. ಏನ್ ಮಾಡೂದ ಹೇಳು. ನಿನ್ನ ನದರಿಗೆ ಯಾರಾದರೂ ದೂರದವರು ಬಿದ್ರೆ ಹೇಳು ಎನ್ನುತ್ತ ಎದ್ದಳು.
ಬಾಬು ಅಲ್ಲೇ ಕೂತಿದ್ದರೂ ದೇವಮ್ಮ ಮಾತನಾಡಿಸಲಿಲ್ಲ. ಮತ್ತೆ ತನ್ನ ಮಾತನ್ನೇ ಉದ್ದ ಮಾಡಿದಳು.
ಏನ್ ಮಾಡೂದ ಹೇಳು. ಹೊತ್ತು ಗಳಿಸಲು ಹಿಂಗೆ ಊರಿನ ಮಕ್ಕಳಿಗೆ ಏನಾದ್ರು ಹೇಳ್ ಕುಡ್ತೀದ. ಅವಳ ತಲೆಯೂ ಹನಿಯಾಗಲಿ. ನಾವು ಯಾವುದಕ್ಕೂ ಅಡ್ಡ ಬರೂದಿಲ್ಲ. ಈ ಜೀವನ ನಡೂವಷ್ಟು ದಿನ ನಡೀಲೆ… ಎನ್ನುತ್ತ ಎದ್ದು ದಣಪೆ ದಾಟಿದ್ದನ್ನು, ಅವಳನ್ನು ಕಳಿಸಿದ ಅಮ್ಮ ಹೀರೆಕಾಯಿ ಚಪ್ಪರ ಸರಿ ಮಾಡಲು ಅತ್ತ ಸರಿದದ್ದನ್ನು ಬಾಬು ನೋಡಿದ. ಈಗ ಅವನದೇ ರಾಜ್ಯ ಮನೆಯಲ್ಲಿ. ಮುಖಕ್ಕೆ ಹಿಡಿದ ಪುಸ್ತಕ ಬಿಸಾಕಿ ದೀಪದ ಬೆಳಕಿಗೆ ಬಂದ ಬಣ್ಣದ ಹುಳಗಳನ್ನು ಹಿಡಿಯಲು ಶುರು ಮಾಡಿದ.
*
*
*
ಊರಿನ ಯಾರ ಮನೆಗೂ, ಯಾವ ಕಾರ್ಯಗಳಿಗೂ ಶಕಕ್ಕ ಹೋಗುವುದಿಲ್ಲವೆಂದು ಬಾಬುವಿಗೆ ಗೊತ್ತು. ಅಂಥವಳು ಆ ದಿನ ಅವರ ಮನೆಗೆ ಬಂದಿದ್ದಳು.
ಭೂಮಿತಾಯಿ ದೇವಸ್ಥಾನಕ್ಕೆ ಹೋಗಿ ಬರುವಾಗ ಅವಳು ಅವನನ್ನು ದಣಪೆಯ ಹೊರಗೆ ಬಿಟ್ಟಾಗ, ಮನೆಗೆ ಬರುವಂತೆ ಕೈಹಿಡಿದು ಅವನು ಎಳೆಯುತ್ತಿದ್ದರೂ ಬಂದಿರಲಿಲ್ಲ.
‘ಈಗ ಬೇಡ, ಮತ್ತೊಂದು ಸಲ ಬರುತ್ತೇನೊ’ ಎಂದರೂ ಅವನಿಗೆ ಸಮಾಧಾನವಾಗಿರಲಿಲ್ಲ, ಅಳುವೇ ಬಂದಿತ್ತು. ಬರುತ್ತೇನೆಂದು ಅವಳಿಂದ ಆಣೆ ತಕ್ಕೊಂಡ ಮೇಲೆ ಅವನು ಕೈಬಿಟ್ಟಿದ್ದ.
ಶಕಕ್ಕ ಬಂದದ್ದು ಬಾಬುವಿಗೆ ಸಂಭ್ರಮ. ಅಮ್ಮನೂ ಅವಳನ್ನು ನೋಡಿ ಬಾ ಬಾ, ಇಷ್ಟು ದಿನ ಬುಡದಲ್ಲಿದ್ದರೂ ಬಂದಿರಲಿಲ್ಲ. ವಿಷಯ ಎಲ್ಲ ಗೊತ್ತಾಯ್ತು. ಎಲ್ಲ ಚಲೋದಾಗಲಿ ಎಂದು ಒಳಗೆ ಅಡಿಗೆಮನೆಗೆ ಕರೆದುಕೊಂಡು ಹೋಗಿದ್ದಳು.
ಬಾಬು ಅವಳ ಹಿಂದೆಯೇ ಹೋಗಿದ್ದ. ಎಂಥಾ ಮಾಡ್ತಿಯೋ. ಹೆಚ್ಚಿಗೆ ಮಳ್ಳುಹರೀಬೇಡ. ಸರಿಯಾಗಿ ಅಭ್ಯಾಸ ಮಾಡು, ಅಭ್ಯಾಸ ಅಂದಿದ್ದಳು. ಆದರೆ ಅಮ್ಮ ದೊಡ್ಡವರ ಮಾತು ಕೇಳೂಕೆ ಯಾಕೆ ಬಂದೆ. ಹೋಗು, ಆಡಿಕೊ ಹೋಗು ಎಂದು ಅವನನ್ನು ಅಲ್ಲಿಂದ ಕಳಿಸಿದ್ದಳು.
ಅವನು ಮುಖ ಬಾಡಿಸಿಕೊಂಡು ಅಮ್ಮನ ಮೇಲೆ ಸಿಟ್ಟು ಮಾಡಿಕೊಂಡು ಹೊರಗಿನ ಕೋಣೆಯಲ್ಲಿ ಕೂತುಕೊಂಡಿದ್ದ. ಒಳಗಿನಿಂದ ಬರುವ ಪಿಸ ಪಿಸ ಮಾತುಗಳನ್ನು ಕೇಳಲು ಕಿವಿ ಇಟ್ಟರೂ ಕೇಳಲು ಆಗಿರಲಿಲ್ಲ. ಒಳಗಿನಿಂದ ಅಮ್ಮ ದಪ್ಪ ಗಂಟಲಿನಲ್ಲಿ ‘ಎಲ್ಲ ಸರಿಯಾಗ್ತದೆ’ ಎಂದದಷ್ಟೆ ಅವನಿಗೆ ಕೇಳಿಸಿದ್ದು.
ಶಕಕ್ಕ ಹೋಗುವಾಗ ಅಮ್ಮನ ಕಾಲಿಗೆ ಬಿದ್ದದ್ದನ್ನು, ಅಮ್ಮ ಸೆರಗಿನಿಂದ ಕಣ್ಣು ಒರೆಸಿಕೊಂಡದ್ದನ್ನು ಬಾಬು ಕೂತಲಿಲ್ಲಿಂದಲೇ ಬಾಗಿಲಿನಿಂದ ಹಣಕಿ ಒಳಗೆ ನೋಡಿದ್ದ.
ಒಳಗಿನಿಂದ ಅವರು ಬರುವಷ್ಟರಲ್ಲಿ ಬಾಬು ಚಿಟ್ಟೆಯ ಮೇಲೆ ಬಂದು ಕೂತಿದ್ದ. ಅವನ ಕೆನ್ನೆ ನೇವರಿಸಿ ಚಲೋದಾಗಿ ಓದಬೇಕು ಏನೊ ಎಂದು, ಅಮ್ಮನಿಗೆ ಬರ್‍ತೇನೆ ಕಲಾವತಕ್ಕ ಎಂದು ಹೋಗಿದ್ದಳು ಶಕಕ್ಕ.
ಬಾರೋ ಮನೆ ಹತ್ತಿರ ಎಂದು ಅವಳು ಹೇಳಿದಳಾದರೂ, ‘ನನ್ನನ್ನು ಸರಿಯಾಗಿ ಮಾತನಾಡಿಸಲಿಲ್ಲ’ ಎಂದು ಬಾಬುವಿಗೆ ಸಿಟ್ಟು ಬಂದು, ’ಮತ್ತೆ ಅಲ್ಲಿಗೆ ಹೋಗುವುದಿಲ್ಲ’ ಎಂದು ಅಂದುಕೊಂಡ.
*
*
*
ರಜೆಯಲ್ಲಿ ಹೋಗಿದ್ದ ಊರ ಮನೆಯಿಂದ ಬಾಬುವಿಗೆ ಬರಲು ಮನಸ್ಸೇ ಇರಲಿಲ್ಲ. ಅಮ್ಮನ, ಪದ್ಮಕ್ಕನ ಕಾಟ ತಡೆಯಲಾಗದೆ, ಮಾವ ‘ನಿನ್ನನ್ನು ಮತ್ತೆ ಕರೆದುಕೊಂಡು ಬರುತ್ತೇನೆ’ ಎಂದು ಅವನನ್ನು ನಂಬಿಸಿದ್ದರಿಂದ ಬಾಬು ಮನಸ್ಸಿಲ್ಲದ ಮನಸ್ಸಿನಿಂದ ಮನೆಗೆ ಬಂದಿದ್ದ.
ಬಣ್ಣದ ಪತಾಕೆಗಳ ತೇರು, ಬಂಡಿಹಬ್ಬ, ತಲೆಯಲ್ಲಿ ಸುತ್ತುತ್ತಲೇ ಇದ್ದ ಬಣ್ಣಗಳ ಗಿರಗಿಟ್ಲೆ ಇವನ್ನೆಲ್ಲ ಬಿಟ್ಟು ಬರಲು ಅವನಿಗೆ ಮನಸ್ಸಿರಲಿಲ್ಲ. ‘ಮತ್ತೆ ಹಬ್ಬ ಆಗುತ್ತದೆ, ಹೋಗುವಾ’ ಎಂಬ ಅಮ್ಮನ ಸಮಾಧಾನ ಅವನನ್ನು ಊರಿಗೆ ಕರೆದು ತಂದಿತ್ತು.
ಇವರು ಮನೆಗೆ ಬಂದ ಸುಳಿವು ಹಿಡಿದು ತುಸುಹೊತ್ತಿನಲ್ಲಿಯೇ ದೇವಮ್ಮ ಬಂದಿದ್ದಳು. ಅವಳು ಬಂದ ರೀತಿಯಲ್ಲೇ ಏನೋ ಹೇಳಬೇಕು ಎಂಬ ಅವಸರ ಅವಳ ನಡಿಗೆಯಲ್ಲಿತ್ತು. ಬಾ ಬಾ… ಎಂದು ಬಾಬುವಿನ ಅಮ್ಮ ಒಳಗೆ ಕರೆದು ಈಗಷ್ಟೆ ಅಂಕೋಲೆಯಿಂದ ಬಂದದ್ದು ಎಂದಳು. ಬಂದವಳೇ ಬೂಂದಿಲಾಡುವಿನ ಪೊಟ್ಟಣವನ್ನು ಅಮ್ಮನ ಕೈಯಲ್ಲಿಟ್ಟಳು. ಬಾಬುವಿಗೆ ಈ ಬೂಂದಿಲಾಡುಗಳನ್ನು ಮದುವೆ ಮನೆಗಳಲ್ಲಿ ನೋಡಿ, ನೋಡಿ ಅದನ್ನು ಕಂಡರೇ ಆಗುತ್ತಿರಲಿಲ್ಲ. ಅದನ್ನು ಅವನು ತಿನ್ನುವುದನ್ನು ಬಿಟ್ಟಿದ್ದ.
ದೇವರು ಕಣ್ಣು ಒಡೆದ ನೋಡು ಎಂದ ಅಮ್ಮನ ಜೋರಾಗಿರುವ ಧ್ವನಿ ತಗ್ಗಿದ್ದು ಅವನಿಗೂ ಕೇಳಿಸಿತು.
ಚಲೋ ಆಯಿತು ಕಲಾವತಿ. ನಿಮಗೆ ಯಾವುದಕ್ಕೂ ಹೇಳುವುದಕ್ಕೆ ಆಗಲಿಲ್ಲ
ಶಕುಂತಲ ಹೇಳಿ ಹೋಗಲು ಇಲ್ಲಿ ಬಂದಿದ್ದಳಲ್ಲ, ಅಷ್ಟು ಸಾಕು
ಶಕು ನಸೀಬು ಗಟ್ಟಿ ಅನ್ನಬೇಕು. ಹುಡುಗ ಒಪ್ಪಿಕೊಂಡುಬಿಟ್ಟಿದ್ದ. ಅವನಿಗೆ ಎಲ್ಲಾ ಗೊತ್ತಿತ್ತಂತೆ. ಆದರೆ ಅದರ ಬಗ್ಗೆ ಏನೂ ಹೇಳಲಿಲ್ಲ, ಕೇಳಲಿಲ್ಲ. ಮುಂಬಯಿಯಲ್ಲಿ ಎಲ್ಲಾ ನಡೀತದೆ ನೋಡು. ಅಲ್ಲೇ ಮಾಲೆ ಹಾಕಿಸಿ, ಹತ್ತು ಜನಕ್ಕೆ ಊಟ ಹಾಕಿದೆವು. ಅಷ್ಟಕ್ಕೆ ಮುಗೀತು. ಆದ್ರೆ ನಿನ್ನ ಕೂಡೆ ಒಂದು ವಿಚಾರ ಇದೆ ಕಲಾವತಿ ಎನ್ನುತ್ತ ದೇವಮ್ಮ ಸೆರಗಿನಿಂದ ಗಾಳಿ ಹಾಕಿಕೊಳ್ಳುತ್ತ ನೆಲದ ಮೇಲೆ ಕೂತಳು.
ಎಂಥದ್ದು ಹೇಳು
ಯಾರಲ್ಲೂ ಈ ವಿಚಾರ ಒಡೀಬೇಡ. ನಿನ್ನ ಕೂಡೆ ಇರ್‍ಲಿ. ನಮ್ಗೆ ಒಂದು ಸಲ ಆದದ್ದಕ್ಕೇ ತಡಕಣೂಕೆ ಆಗಲಿಲ್ಲ. ಯಾರಾದರೂ ನಿನ್ನ ಕೂಡೆ ಶಕುಂತಲ ಎಲ್ಲಿಗೆ ಹೋಗಿದ್ದಾಳೆ ಎಂದು ಕೇಳದ್ರೆ, ಅವರ ದೊಡ್ಡಪ್ಪನ ಮನೆಗೆ ಹೋಗಿದ್ದಾಳೆ ಎಂದೆ ಹೇಳಬೇಕ. ಜನರ ಬಾಯಲ್ಲಿ ಯಾವುದೂ ನಿಲ್ಲೂದಿಲ್ಲ ನೋಡು. ಬೇಕಾದ್ರೆ ಜನರಿಗೆ ಗೊತ್ತಾಗುವಾಗ ಆಗಲಿ. ನಮ್ಮಿಂದಲೇ ಗೊತ್ತಾಯ್ತು ಎಂದು ಆಗುವುದು ಬೇಡ. ಅವನಿಗೂ ಗೊತ್ತಿದೆ. ಆದರೆ ಅದನ್ನೇ ಮತ್ತೆಮತ್ತೆ ಜನ ಹೇಳಿದ್ರೆ ಚುಚ್ಚುತ್ತದೆ ನೋಡು. ಎಂದು ಅತ್ತಿತ್ತ ನೋಡಿ ದೊಡ್ಡ ಉಸಿರು ಬಿಟ್ಟಳು.
ಇವರ ಮಾತಲ್ಲೇ ಗರ್ಕಾಗಿದ್ದ ಬಾಬುವನ್ನು ಹತ್ತಿರಕ್ಕೆ ಎಳೆದು ದೇವಮ್ಮ ತಲೆ ಮೇಲೆ ಕೈ ಎಳೆದು ಮನೆಯಲ್ಲಿ ರಾಶಿ ಕೆಲಸ ಇದೆ. ಮತ್ತೊಂದು ಸಲ ಬರ್‍ತೆ ಕಲಾವತಿ ಎಂದು ನೆಲಕ್ಕೆ ಕೈ ಊರಿ ಎದ್ದಳು. ’ದೊಡ್ಡವರ ಮಾತು ಕೇಳುವುದನ್ನು ಕಲಿತಿದ್ದೀ’ ಎಂದು ಅಮ್ಮ ಬೈಯ್ಯಬಹುದು ಎಂದು ಬಾಬು ಅಂದುಕೊಂಡರೆ, ಅವಳು ಸುಮ್ಮನೆ ಇದ್ದಳು.
‘ಯಾರಿಗೂ ಹೇಳದ ಹೊಸ ಕಥೆಯನ್ನು ನಿನಗೊಬ್ಬನಿಗೆ ಹೇಳುತ್ತೇನೆ. ಕಡೆಗೆ ನೀನೇ ಅದನ್ನು ಎಲ್ಲರಿಗೂ ಹೇಳು…’ ಎಂದಿದ್ದಳು ಶಕಕ್ಕ. ಅವಳು ಮಾತು ತಪ್ಪುವವಳಲ್ಲ. ಊರಿನ ಬಂಡಿಹಬ್ಬದ ಉಮೇದಿಯಲ್ಲಿ ಅದನ್ನೆಲ್ಲ ಅವನು ಮರೆತೇ ಬಿಟ್ಟಿದ್ದ.
‘ಶಕಕ್ಕನ ಕಥೆಯನ್ನು ಇನ್ನು ಮೇಲೆ ಯಾರು ಹೇಳುತ್ತಾರೆ, ಕಥೆ ಹೇಳದೆ ಹೀಗೇಕೆ ಮಾಡಿದಳು…’ ಎಂದು ಬಾಬುವಿಗೆ ಬೇಜಾರಾಗಲು ಶುರುವಾಯಿತು.
ಅಮ್ಮನಿಗೆ ‘ಶಕಕ್ಕ ಎಲ್ಲಿಗೆ ಹೋದಳು. ಯಾವಾಗ ಇಲ್ಲಿಗೆ ಬರುತ್ತಾಳೆ, ಮಹಾಮಾಯಿ ದೇವಳದ ಉತ್ಸವಕ್ಕೆ ಬರಬಹುದೆ?’ ಎಂದು ಕೇಳಬೇಕೆಂದುಕೊಂಡ ಬಾಬುವನ್ನು ಕಳೆದ ವರ್ಷ ಅದೇ ಉತ್ಸವಕ್ಕೆ ಅವಳೇ ಕರೆದುಕೊಂಡು ಹೋಗಿದ್ದು ಮನಸ್ಸಿಗೆ ಬರತೊಡಗಿತು. ಸುಮ್ಮನೆ ಕಂಬಕ್ಕೆ ಒರಗಿ ಕೂತಿದ್ದ ಅಮ್ಮನನ್ನು ಏನನ್ನೂ ಕೇಳದೆ ಒಮ್ಮೆ ಅವಳತ್ತ ನೋಡಿ ಸುಮ್ಮನಾದ.
*****
ಈ ಕಥೆ ಯಾಕೆ ನನಗೆ ಇಷ್ಟ…
ಈವರೆಗೆ ಹತ್ತಾರು ಕಥೆಗಳನ್ನು ಬರೆದಿರುವ ನನಗೆ ಇಷ್ಟವಾದ ನನ್ನ ಕಥೆ ಯಾವುದೆಂದು ಹೇಳುವುದು ಕಷ್ಟವಾದದ್ದೇ. ಇದು ಒಂದು ರೀತಿಯಲ್ಲಿ ನೀವು ಪ್ರೀತಿಸಿದ ಹುಡುಗಿಯರಲ್ಲಿ ಯಾರು ಇಷ್ಟ ಎಂದು ಕೇಳಿದಂತೆ. ಯಾಕೆಂದರೆ ಒಂದೊಂದು ಹುಡುಗಿಯರಲ್ಲಿ ಒಂದೊಂದು ಅಂಶ ಮನಸ್ಸಿಗೆ ಬಂದು ಇಷ್ಟವಾಗಿರುತ್ತಾರೆ. ಪ್ರೀತಿಸುವುದೇ ಖುಷಿಯಾದ್ದರಿಂದ, ಈ ಕಥೆ ‘ಇನ್ನೊಂದೇ ಕಥೆ’ ನನ್ನ ಇತ್ತೀಚಿನ ಪ್ರೀತಿಯಾದ್ದರಿಂದ ಮತ್ತು ಇದರ ಬರವಣಿಗೆಯ ಖುಷಿ ಇನ್ನೂ ಮಾಸಿಲ್ಲವಾದ್ದರಿಂದ ಇದು ಇಷ್ಟ ಎಂದು ಸದ್ಯಕ್ಕೆ ಹೇಳಬಹುದು. ಈ ಇಷ್ಟ ಇನ್ನೊಂದು ಪ್ರೀತಿ (ಕಥೆ!) ಶುರುವಾಗುವವರೆಗೆ ಮಾತ್ರ ಇರಬಹುದೇನೊ!