ಈ ಬಾರಿ ಚಿಕ್ಕಮಗಳೂರಿಗೆ ‘ಪರ್ವ’ ಮುಹೂರ್ತಕ್ಕೆ ಹೋಗಿದ್ದಾಗ ವಿಷ್ಣುವರ್ಧನ್ ಹರ್ಷದ ಮಹಾಪೂರದಲ್ಲಿದ್ದರು. ಯಜಮಾನ ಚಿತ್ರದ ಯಶಸ್ಸಿನ ಖುಷಿ ಜತೆಗೆ ಬೇರೆ ಬೇರೆ ಊರುಗಳಿಗೆ ಹೋದಾಗ ಅಭಿಮಾನಿಗಳು ತೋರಿದ ವಾತ್ಸಲ್ಯದಿಂದ ಸಂಭ್ರಮಿಸುತ್ತಿದ್ದ ವಿಷ್ಣು ನಗೆ ಲಹರಿಗೂ ದಾರಿಮಾಡಿ ಹಲವು ಕಿರುಕಥೆಗಳನ್ನೂ ತೇಲಿಬಿಟ್ಟರು.
ಅವೆಲ್ಲದರ ಸೆಂಟ್ರಲ್ ‘ಥೀಂ’ ಅವಾರ್ಡ್
ಓದಿ-ನಕ್ಕು-ಮರೆತುಬಿಡಿ… ನೆನಪಿದ್ದರೆ ನಿಮ್ಮ ಗೆಳೆಯರಿಗೆ ಹೇಳಿ
ಇದ್ದರಿಬ್ಬರು ಗೆಳೆಯರು
ಈ ಇಬ್ಬರು ಚಿತ್ರರಂಗ ಪ್ರವೇಶಿಸಿದರು ಒಟ್ಟಿಗೆ.
ಒಂದು ಚಿತ್ರದಲ್ಲಿ ಹೀರೋ ಆದ ‘ಎ’. ನಂತರ ಮೋಬೈಲ್ ಬಂತು. ಕಾರ್ ಬಂತು. ಸ್ಟೈಲ್ ಬದಲಾಯಿತು. ದಿನಕ್ಕೊಂದು ಡ್ರೆಸ್. ಆನಂತರ ‘ಬಿ’ ಸಹಾ ಚಿತ್ರರಂಗದಲ್ಲಿ ಹೆಸರಾದ. ತಾನೂ ‘ಎ’ ತರಹವೇ ಆಗಬೇಕೆಂದು ಮೊಬೈಲ್ ಕೊಂಡ-ಅದೇ ಬಣ್ಣದ ಕಾರೂ ಕೊಂಡ. ಸ್ಟೈಲಿಷ್ ಕಿಂಗ ಎನ್ನವಂತೆ ತಾನೂ ಡ್ರೆಸ್ ಮಾಡಿದ. ಎ ದಿನಕ್ಕೊಂದು ಡ್ರೆಸ್ ಹಾಕಿದರೆ ಬಿ ಘಂಟೆಗೊಂದು ಡ್ರೆಸ್ ಹಾಕಿದ.
“ಎಲಾ ಇವ್ನ” ಎಂದಿದ್ದೇ ಎ ಒಂದು ಭರ್ಜರಿ ಬಂಗಲೆ ಕಟ್ಟಿಸಿದ.
ಬಿ ನಾನೇನು ಕಮ್ಮಿ ಎಂದು ಅದಕ್ಕಿಂತ ಭರ್ಜರಿ ಬಂಗಲೆ ಕಟ್ಟಿಸಿ ಮೀಸೆ ತಿರುವಿದ.
ಬಿ ಗೆ ಪಾಠಕಲಿಸಬೇಕೆಂದು ‘ಎ’ ದೊಡ್ಡ ಪ್ರಮಾಣದಲ್ಲಿ ಟ್ರಾನ್ಸ್‌ಪೋರ್ಟ್ ಬಿಸಿನೆಸ್ ಆರಂಭಿಸಿದ.
“ನಾನು ನಿನಗೇನು ಕಡಮೆ ಇಲ್ಲ’ ಎಂದು ‘ಬಿ’ ಅದೇ ಪ್ರಮಾಣದಲ್ಲಿ ತಾನೂ ಟ್ರಾನ್ಸ್‌ಪೋರ್ಟ್ ಬಿಸಿನೆಸ್ ಆರಂಭಿಸಿದ.
ಮುಂದಿನ ವರ್ಷ ಎ ಗೆ ಅಭಿನಯಿಸಿದ ಚಿತ್ರಕ್ಕೆ ಸೆಂಟ್ರಲ್ ಅವಾರ್ಡ್ ಬಂತು.
ಈಗ ಏನಂತೀರಿ ಮಿಸ್ಟರ್ ‘ಬಿ’ ಎಂದು ಗಹಗಹಿಸಿ ನಕ್ಕಾಗ ‘ಬಿ’ ಸೋತು-ಸಪ್ಪಗಾಗಿ “ಇಲ್ಲಪ್ಪ-ನಾನು ಅಷ್ಟು ಶ್ರೀಮಂತನಾಗಿಲ್ಲ ಇನ್ನೂ” ಎಂದು ಕೈ ಮುಗಿದನಂತೆ.
ಮಿತ್ರರ ಫೋನ್
ಅವಾರ್ಡುಗಳ ಅನೌನ್ಸ್ ಆದಾಗ ‘ಕಂಗ್ರಾಜುಲೇಷನ್ಸ್’ ಹೇಳುವಂಥ ಕರೆಗಳು ಫ್ಯಾನ್ಸ್‌ಗಳಿಂದ ಬೇಕಾದಷ್ಟು ಬರುತ್ತೆ. ಅಂಥ ಫೋನ್‌ಗಳು ಮನಸ್ಸಿಗೆ ಮುದ ನೀಡುತ್ತೆ. ಅವಾರ್ಡ್ ಬರಕ್ಕೆ ಮುಂಚೆ ಕೆಲವು ಫೋನ್ ಬಂದಾಗ ಮನಸ್ಸಿಗೆ ಕಿರಿಕಿರಿಯಾಗುತ್ತೆ. “ವಿಷ್ಣುಸಾರ್ – ಈ ಸಾರಿ ನಿಮಗೇ ಅವಾರ್ಡ್ ಬಂದಿರೋದು. ನಿಮ್ಮ ಹೆಸರು ರೆಕಮೆಂಡ ಮಾಡಿದೋನು ನಾನೇ, ಅಂತ ಆ ಸ್ಟೇಟ್‌ಮೆಂಟ್‌ಗೊಂದು ಒಗ್ಗರಣೆ ಬೇರೆ ಹಾಕ್ತಾರೆ. ಕ್ಲಿಷ್ಟವಾದ ಪಾತ್ರ ಕಷ್ಟಪಟ್ಟು ಅಭಿನಯಿಸಿರೋನು ನಾನು. ವರ ರೆಕಮಂಡೇಷನ್‌ನಿಂದ ನಂಗೆ ಅವಾರ್ಡ್ ಬರೋದಾದ್ರೆ ಆ ಅವಾರ್ಡ್‌ಗೇನು ಬೆಲೆ ಇರುತ್ತೆ?
ಮಿಸ್ಟರ್ ಪಾರ್ಥೇನಿಯಂ
ಇನ್ನೊಬ್ಬ ವ್ಯಕ್ತಿ ಇದ್ದಾನೆ. ಆತ ಒಬ್ಬ ಕ್ರಿಮಿ. ಹೆಸರು ಹೇಳಬಹುದು. ಬೇಡ ಈಗ. ಒಂದೇ ಮಾತಲ್ಲಿ ಹೇಳಬೇಕಾದ್ರೆ ಆತ ಪಾರ್ಥೇನಿಯಂ. ಅವನೊಂದು ಸರ್ತಿ ಫೋನ್ ಮಾಡಿ “ಸಾರ್ ಈ ಸಾರಿ ನಿಮಕುದಾ ಅವಾರ್ಡ್ ವಂದಿರಕು ಅಂತ ಅಷ್ಟೇ ಹೇಳಿದ್ದರೆ ಪರವಾಗಿರಲಿಲ್ಲ. ‘ನಾಳೆ ಇಂಥವರು ಫ್ಯಾಮಿಲಿ ಸಮೇತ ಬರ್‍ತಾರೆ. ಪಾಷ್ ಹೋಟೆಲ್‌ನಲ್ಲಿ ಅವರನ್ನ ಚೆನ್ನಾಗಿ ಟ್ರೀಟ್ ಪಣ್ಣಂಗೊ’ ಅಂದ. ಸುಮ್ನೆ ಫೋನ್ ಕುಕ್ಕಿದೆ. ಫ್ರೆಂಡ್ಸ್ ಯಾರೋ ಊರಿಂದ ಬಂದರೆ ಅವರಿಗೆ ಅತಿಥಿ ಸತ್ಕಾರ ಚೆನ್ನಾಗಿ ಮಾಡೋದು ನಮ್ಮ ಸಂಸ್ಕೃತಿ. ಓ ಕೆ…. ಆದರೆ ಅವರು ಅವಾರ್ಡ್ ಕೊಡೋರು. ಅವರನ್ನ ಆ ಕಾರಣಕ್ಕೆ ಚೆನ್ನಾಗಿ ಟ್ರೀಟ್ ಮಾಡಿ ಅಂದ್ರೆ ಕೋಪ ಬರುತ್ತೋ ಇಲ್ಲವೋ? ಇಂಥ ಚಮಚಾಗಿರಿ ಮಾಡಿ ಅವಾರ್ಡ್ ತಗೊಂಡ್ರೆ ಮನಸ್ಸಿಗೆ ತೃಪ್ತಿ ಇರುತ್ತಾ ನಾನ್‌ಸೆನ್ಸ್”.
ಒಂದೊಂದು ಅವಾರ್ಡ್‌ದು ಒಂದೊಂದು ಕಥೆ
ಫಿಲಂ ಫೇರ್ ಅವಾರ್ಡು, ಆ ಅವಾರ್ಡು ಈ ಅವಾರ್ಡು ಅಂತ ಈಗ ಅವರ್ಡುಗಳಲ್ಲೂ ಥರಾ ಥರಾ.
ಇನ್ನು ಸೆಂಟ್ರಲ್ ಅವಾರ್ಡು ಕಥೆ ಈಗ ಹಾದಿರಂಪ-ಬೀದಿರಂಪ.
‘ವೀರಪ್ಪನಾಯ್ಕ’ ಸಹ ಹಿಂದೆ ಸೆಂಟ್ರಲ್ ಅವಾರ್ಡ್‌ಗೆ ಹೋಗಿತ್ತು. ನೋಡಿದರೆ ತಾನೆ ಚೆನ್ನ-ಚಾರು ಹೇಳೋದು ಸಾಧ್ಯ. ವೀರಪ್ಪನಾಯಕ ಡಬ್ಬ ತೆಪ್ಪಗೆ ಬಿದ್ದಿತ್ತಂತೆ. ಆ ಡಬ್ಬ ತೆಗೆದು ನೋಡೋ ಮನಸೂ ಬರಲಿಲ್ಲ ಅವರಿಗೆ. ಹೀಗಾದರೆ ಯಾರಿಗೆ ಆದ್ರೂ ನ್ಯಾಯ ಸಿಕ್ಕೀತು ಹೇಗೆ?”
ಪುಟ್ಟಣ್ಣಾಜಿ ಮತ್ತು ನಾಗರಹಾವು
“ಕುಮಾರ್ ಅಂತ ಇದ್ದ ಹೆಸರನ್ನ ವಿಷ್ಣುವರ್ಧನ್ ಅಂತ ಹೆಸರು ಬದಲಿಸಿದ್ದೇ ನನ್ನ ಗುರುಗಳಾದ ಕಣಗಾಲ್ ಪುಟ್ಟಣ್ಣಾಜಿ. ಅವರು ‘ನಾಗರಹಾವು’ ಚಿತ್ರದ ಮೂಲಕ ನನ್ನಂಥ ಕಗ್ಗಲ್ಲನ್ನ ಸುಂದರ ಶಿಲ್ಪವಾಗಿ ಕೆತ್ತಿ ಆಶೀರ್ವದಿಸಿದರು. ಚಿತ್ರದುರ್ಗದ ಮಂದಿ ಮಾತ್ರ ಅಲ್ಲ ಇಡೀ ಕನ್ನಡ ಕುಲಕೋಟಿ ಅವತ್ತಿಂದ ಇವತ್ತಿನವರೆಗೂ ತಮ್ಮ ಪ್ರೀತಿ ಧಾರಾಳವಾಗಿ ಧಾರೆ ಎರೆದಿದ್ದಾರೆ. ಬೇಕಾದಷ್ಟು ಸನ್ಮಾನ ಮಾಡಿದ್ದಾರೆ. ಅವಾರ್ಡ್‌ಗಳು ಕೊಟ್ಟಿದ್ದಾರೆ. ‘ನಾಗರಹಾವು’ ಆಗ ಬೇಕಾದಷ್ಟು ಅವಾರ್ಡ್‌ಗಳು ಪಡೀತು. ಅಂಥ ಜನರ ಪ್ರೀತಿಯ ಸವಿ ಉಂಡವನು ನಾನು. ಇವತ್ತು “ಎಲ್ಲಿ ಹೋದವು ಆ ದಿನ” ಅಂತ ಪ್ಯಾಥೋಸ್ ಟ್ಯೂನ್‌ನಲ್ಲಿ ಹಾಡಬೇಕಾದ ದಿನ ಬಂದಿದೆ.”
ಒನ್ ಬೈಟು ಅವಾರ್ಡ್‌ಗಳು
“ಯಾವುದೇ ಒಂದು ಅವಾರ್ಡು ಹಿರಿಯರಿಗೆ-ಕಿರಿಯರಿಗೆ ಬಂದರೆ ಖುಷಿಯಾಗಿ ಸಂತೋಷ ಹಂಚಿಕೊಳ್ಳೋನು ನಾನು. ಆದರೆ ಅವಾರ್ಡನ್ನು ಒನ್‌ಬೈಟು ಮಾಡೋದು ಸರಿಯಲ್ಲ ಅಂತ ಮುಂಚಿನಿಂದ ಹೇಳ್ಕೊಂಡು ಬಂದಿದೀನಿ. ಅಂಥಾದ್ರಲ್ಲಿ ರಾಜ್ಯ ಪ್ರಶಸ್ತಿ ನಂಗೆ, ರಮೇಶ್‌ಗೆ ಒಟ್ಟಿಗೆ ಕೊಟ್ರು. ಮುಂದಾದರೂ ಹೀಗೆ ಮಾಡದೆ ಇರಲಿ ಅಂತ ಪಬ್ಲಿಕ್ ಆಗಿ ಅದನ್ನು ಡೈರೆಕ್ಟರ್‌ಗೆ ಕೊಡಿ ಅಂತ ಪ್ರಶಸ್ತಿ ಸಮಾರಂಭದಲ್ಲೇ ವಾಪಾಸ್ಸು ಮಾಡಿದೆ.”
ನಿಜವಾಗಿ ಅವಾರ್ಡ್‌ಗಳು ಬಂದಾಗ ತುಂಬ ಖುಷಿ ಆಗುತ್ತೆ ಅನ್ನೋದು ನಿಜ. ಆದರೆ ಬಗೆ ಬಗೆ ಲಾಬಿಯಿಂದ ಅವಾರ್ಡ್ ಬಂದರೆ ಏನು ಪ್ರಯೋಜನ? ಈಗಂತೂ ಸರಕಾರಿ ಅವಾರ್ಡ್ ರಿಜೆಕ್ಟ್ ಮಾಡಿದರೆ-ಅದಕ್ಕೂ ಒಂದು ಅವಾರ್ಡ್ ಕೊಡೋ ಸಂಪ್ರದಾಯ ಹೊಸದಾಗಿ ಈಗ ತಲೆ ಎತ್ತಿದೆ. ಇಂಥ ಅಂಶಗಳೂ ಚಿತ್ರರಸಿಕರಿಗೆ ತಿಳಿದಿರಲೆಂದೇ ವಿಷ್ಣು ಪುರಾಣದ ಅವಾರ್ಡ್ ಕಥೆಗಳನ್ನು ಹೇಳಿದ್ದು.
*****
(೪-೫-೨೦೦೧)