“ನವ ಮನುವು ಬಂದು ಹೊಸ ದ್ವೀಪಗಳಿಗೆ ಹೊರಟಾನ ,ಬನ್ನಿ” -ಬೇಂದ್ರೆ
ಕಳೆದ ತಿಂಗಳು ಪ್ರಕಟಿಸಿದ ದ್ವೀಪ ಚಿತ್ರಕ್ಕೆ ಶಿವಕುಮಾರ್ ಜಿ ವಿ ಬರೆದ ವಿಮರ್ಶೆಗೆ ಯಶಸ್ವಿನಿ ಹೆಗಡೆಯವರ ಪ್ರತಿಕ್ರಿಯೆ…
‘ಮರದ ಎಲೆ ದಿನಾ ಬಿದ್ದು, ಕಸ ಕೊಳಕು ಆಗುತ್ತೇಂತ ಮರಾನೇ ಕಡಿದು ಬಿಡಬಾರದು” -ದ್ವೀಪ ಸಿನಿಮಾ ನೋಡಿದ ಮೇಲೆ ಪ್ರಶಾಂತನ ಈ ಮಾತುಗಳು ಹೆಚ್ಚು ಕಾಡಲಾರಂಬಿಸಿದವೋ ಅಥವ ಪ್ರಶಾಂತನ ಈ ಮಾತುಗಳಿಂದಾಗಿ ದ್ವೀಪ ಹೆಚ್ಚು ಕಾಡಲಾರಂಭಿಸಿದೆಯೋ ಗೊತ್ತಾಗುತ್ತಿಲ್ಲ- ಹಾಗೆಯೇ ನಮ್ಮ ಆಯ್ಕೆಗಳ ಬಗೆಗೆ ಹುಟ್ಟಿಕೊಂದಿರುವ ಗೊಂದಲಗಳ ಪರಿಹಾರಕ್ಕೆ ಯತ್ನಿಸಿದಾಗಿನ ಸಂಕಟಗಳಿಗೆ ಒಂದು ರೂಪವೇ ಈ ಪ್ರತಿಕ್ರಿಯೆ ಎನ್ನಬಹುದೇನೊ.. ನಾನು ಅವನು ರಾತ್ರಿ ಊಟದ ಬಳಿಕ ಹಾಗೇ ಸ್ವಲ್ಪ ದೂರ ತಿರುಗಾಡುವಾಗ, ನಮ್ಮ ನಮ್ಮ ಅನ್ನಿಸಿಕೆಗಳನ್ನು ತೆರೆದಿಡುತ್ತಾ ಹೋಗುವ ವಾಡಿಕೆಯಲ್ಲಿ ಮೂಡಿದ ಚಿಂತನೆ- ಸಾಲುಗಳಲ್ಲಿ ಅಭಿವ್ಯಕ್ತಿಕಂಡುಕೊಂದಾಗ ಆಯ್ಕೆಗಳು ನಿಚ್ಚಳವಾದೀತು ಎಂಬುದರ ಪ್ರಯತ್ನವೇ ಈ ಪ್ರತಿಕ್ರಿಯೆಯೋ..
ಪರಂಪರೆ , ಒಂದು ಆಲದ ಮರ ಅಂದುಕೊಂಡರೆ , ಅದರ ಬಿಳಲುಗಳು ರೂಪಾಂತರಿತಗೊಂಡು , ಸುಪ್ತವಾಗಿಯೋ ಪ್ರಕಾಶವಾಗಿಯೋ , ಸುತ್ತ ಯಾವತ್ತೂ ಇರುವ ಗಾಳಿಯಂತೆ ಆಡುತ್ತಲೇ ಇರುತ್ತದೆ.
ಪರಂಪರೆ ಮತ್ತು ಅಧುನಿಕತೆ , ಎರಡೂ , ಮನೋ ನಿರ್ಮಿತಪ್ರಪಂಚಗಳು. ಪರಂಪರೆಯೇ ವಾಸ್ತವ, ಶ್ರೇಷ್ಠ , ಅಥ್ವಾ ಅಧುನಿಕತೇ ವಾಸ್ತವ ,ಶ್ರೇಷ್ಠ ಎಂದು ಹೇಳಹೊರಡುವುದು ಕಷ್ಟದ ಮಾತಾದೀತು !. ಯಾಕಂದ್ರೆ ಎರಡೂ ಪ್ರತಿನಿಧಿಸುವ , ಕಾಲ , ದೇಶ , ವ್ಯಕ್ತಿ , ಚರಿತ್ರೆ ಇವು ನಿರ್ಧಾರಕ ಅಂಶಗಳಾಗಿರಬಹುದಾದ ಸಾಧ್ಯತೆ ಇದ್ದೇ ಇರುತ್ತದೆ.
ಆಧುನಿಕತೆ ಮತ್ತು ಪರಂಪರೆ ಒಂದನ್ನೊಂದು ಸದಾ ಒತ್ತರಿಸುತ್ತಾ, ಚಿರಂತನವಾಗಿ
ಸಾಗುವ ಬೃಹದಲೆಗಳಂತೆ ನನಗೆ ಕಂಡಿವೆ. ಹಾಗಾಗಿ ಪಾರಂಪರಿಕ ಮೌಲ್ಯಗಳನ್ನೊಳಗೊಂಡ , ವಾಸ್ತವವಾದೀ ಅಧುನಿಕತೆಯನ್ನು ಒಪ್ಪಿಕೊಳ್ಳಬಹುದೇನೋ ಎಂದು ಯೋಚಿಸಿದೊಡನೆಯೇ , ಹಾಗಾದರೆ , ಬೇವಿನ ಕಡ್ಡಿಯಲ್ಲಿ – ಹಲ್ಲುಜ್ಜುವುದೋ , ಬೇವಿನೆಣ್ಣೆಯಲ್ಲಿ ( ಹಾಗೆಂದು ನಂಬಿಕೊಂಡು) ಮಾಡಿರುವ ನೀಮ್ ಪೇಸ್ಟ್ ನಲ್ಲಿ ಹುಲ್ಲುಜ್ಜೋಣವೋ ಎಂಬ ದಿನನಿತ್ಯ ಎದುರಾಗಬಹುದಾದ ಚಿಕ್ಕ ಪ್ರಶ್ನೆಯನ್ನೂ ಎದುರಿಸಲಾಗದೇ ಹೋಗುತ್ತೇವೆ. ಇಂಥ ಪರಿಸ್ಥಿತಿ, ಈ ತಾಕಲಾಟದ ಹೊರಗೆ ನಿಂತು ಪರಿಹಾರ ಪಡೆಯುವುದು ಅಂಥಾ ಸುಲಭವೇನಲ್ಲ ಅನ್ನೋದನ್ನು ಸೂಚಿಸುತ್ತದೆ.
ಇದೇ ರೀತಿಯ ಸಂದಿಗ್ಘತೆಯ ಕಥಾವಸ್ತುವಿರುವ ಗಿರೀಶ್ ಕಾಸರವಳ್ಳಿಯವರ “ದ್ವೀಪ” ಚಿತ್ರ , ಅನೇಕ ಪ್ರಶ್ನೆಗಳನ್ನು ಸಮಾಜದ ಮುಂದುತ್ತಾ ,ದ್ವೀಪವಾಗುವಿಕೆಯ ಎರಡು ಆಯಾಮಗಳನ್ನು ತೆರೆದಿಟ್ಟಿದೆ.
ಒಂದು ನಮ್ಮ ಅನ್ನಿಸಿಕೆಗಳಿಗೆ ಸ್ಪಂದನೆ ಇಲ್ಲದೆ ದ್ವೀಪವಾಗ್ತಾ ಹೋಗೋದು ; ಮತ್ತೊಂದು ಹಾಗೆ ದ್ವೀಪವಾಗ್ತಾ , ಮಡಗಡ್ಡಿದ ಭಾವನೆಗಳಿಗೆ ರೂಪಕೊಡುತ್ತಾ , ಹೊಸ ಸೃಷ್ಟಿ -ದೃಷ್ಟಿಯ ದಾರಿ ಹುಡುಕೋದು.
ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಲೂ ಅಷ್ಟೆ , ಒಂದು ಹೊರಗಿನ ದ್ವೀಪವಾಗುವಿಕೆಯನ್ನ , ವಿರೋಧಿಸುತ್ತಾ ತಾವು ದ್ವೀಪವೇ ಆಗತೊಡಗುತ್ತವೆ. ದುಗ್ಗಜ್ಜ – ಪಾರಂಪರಿಕ ನಂಬಿಕೆಗಳ ಹಿಡಿತಕ್ಕೆ ಸಿಕ್ಕಿ ದ್ವೀಪವಾದರೆ ,ಅವನ
ಮಗ ಗಣಪ ಸ್ವಂತಿಕೆಯಿಲ್ಲದ ಕಾರಣಕ್ಕೆ ದ್ವೀಪವಾಗುತ್ತನೆ ; ನಾಗಿ ,ಗಣಪನ ಪತ್ನಿ ,ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಶಕ್ತಿ ಇದ್ದವಳಾದರೂ ,ಸಾಮಾಜಿಕ (ದಾಂಪತ್ಯ) ಜೀವನಕ್ಕಾಗಿ ದ್ವೀಪವಾಗುತ್ತಾಳೆ; ನಾಗಿ , ದುಗ್ಗಜ್ಜ , ಗಣಪನ – ಪ್ರಪಂಚಕ್ಕೆ, ಅಣೆಕಟ್ಟಾಗಿ ಬರಬೇಕಿದ್ದ ಕೃಷ್ಣ , ತನ್ನಲ್ಲಿನ ವಯೋ ದೌರ್ಬಲ್ಯದ
[ ಕಾಮ ಒಂದೇ ಅಂತಲ್ಲ , ಅಧುನಿಕ – ತಂತ್ರದ- exಠಿosuಡಿe , ಅಹಮ್, ಎಳಸುತನ ಇತ್ಯಾದಿ .. ] ಕಾರಣಕ್ಕೆ , ದ್ವೀಪವಾಗುವಿಕೆಗೆ ಸಲಕರಣೆಯಾಗುತ್ತಾ ಹೋಗುತ್ತಾನೆ.
ಆಧುನಿಕತೆ ಅನ್ನೋದು ಪರಂಪರೆಯ ಬಸಿರನ್ನು ಸೀಳಿ ಹೊರಬರುವುದರಿಂದ ,ಸಂಪೂರ್ಣ ವಿರೋಧದ ಧ್ವನಿಯನ್ನು ಅದು(ಪರಂಪರೆ) ಉಳಿಸಿಕೊಳ್ಳಲು ಅಸಾಧ್ಯವೇನೋ ! ನನಗೆ ದುಗ್ಗಜ್ಜ, ಗಣಪ , ನಾಗಿ ಯಾರೊಬ್ಬರೂ ಆಧುನಿಕತೆಗೆ ಪೂರ್ಣ ಬೆನ್ನುಹಾಕಿದವರಾಗಿ ಕಾಣಲಿಲ್ಲ. ದುಗ್ಗಜ್ಜನಿಗೆ ತನ್ನ ನೇಮದ ಹಿನ್ನೆಲೆಯನ್ನು , ಅದರೊಡನೆ ಇದ್ದ ತನ್ನ
ಗೌರವವನ್ನು ಗಮನಿಸಿ ಸರ್ಕಾರ ಕೊಡುವ ಪರಿಹಾರವನ್ನು ಸ್ವೀಕರಿಸಲು ಆತನ ಸಮ್ಮತಿ ಇದೆ . ಅಷ್ಟನ್ನೂ ಮಾಡಲೊಪ್ಪದ ವ್ಯವಸ್ಥೆಯ ವಿರುಧ್ಧ ಆತನ ಹೋರಾಟ . ದುಗ್ಗಜ್ಜನ ಸಾವು ಪರಂಪರೆಯ ದುರಂತವಾಗಿ ಕಂಡರೂ , ಪರಂಪರೆ , ಅಧುನಿಕತೆಯ ಬಗೆಗೆ ತೋರುವ ಪಿತೃವಾತ್ಸಲ್ಯದ , ಪರಾಕಾಷ್ಠೆಯೇನೋ ಅನ್ನುವಂತಿದೆ. ಆತನಿಗೆ
ತನ್ನ ಸಾವಿನಿಂದ ಉಳಿದಿಬ್ಬರ ಹಾದಿ ಸುಗಮವಾದೀತು ಅನ್ನೋ ಭಾವನೆ ಇದ್ದರೂ ಆಶ್ಚರ್ಯವೇನಿಲ್ಲ. ಆದರೆ ತಮ್ಮದೇ ವೈಯುಕ್ತಿಕ ಕಾರಣಗಳಿಗಾಗಿ ಹೋರಾಟ ಮುಂದುವರೆಸುವ ದುಗ್ಗಜ್ಜನ ಮುಂದಿನ ಪೀಳಿಗೆಯವರಾದ – ನಾಗಿ , ಗಣಪರ ಹಾದಿ ಮಾತ್ರ ಬೇರೆ ಬೇರೆ. ನಾಗಿ ಮನುಷ್ಯ ಪ್ರಯತ್ನದ ದಾರಿ ಹಿಡಿದರೆ , ಗಣಪ ದೈವಿಕ ನಂಬಿಕೆಯ ದಾರಿ ಹಿಡಿಯುತ್ತಾನೆ. ಆ ನಿಟ್ಟಿನಲ್ಲಿ ಇಬ್ಬರೂ ತಮ್ಮ ಪ್ರಾಣವನ್ನೂ ಒತ್ತೆಯಿಡಲೂ ತಯಾರಾಗುತ್ತಾರೆ. [ಗಣಪ , ಹುಲಿಯಿಂದ ರಕ್ಷಣೆ ಪಡೆಯಲು ನಾಗಿ ಬಾಗಿಲಿಗೆ ಹೊಡೆದ ಎಲ್ಲಾ ಅಡ್ಡ ಹಲಗೆಗಳನ್ನೂ ಕಿತ್ತು ಬೆಂಕಿಗೆ ಹಾಕುತ್ತಾನೆ,ಅಲ್ಲದೆ
ಹುಲಿಯಿಂದ , ಅಣೆಕಟ್ಟಿನ ನೀರು ನುಗ್ಗಿಬರುವುದರ ಭಯದ ಪರಿಹಾರಾರ್ಥ, ಯಾವ ರೀತಿಯಲ್ಲೂ ಕ್ರಮ ಕೈಗೊಳ್ಳುವುದನ್ನು ನಿರಾಕರಿಸುತ್ತಾ ನಿಷ್ಕ್ರಿಯನಾಗಿ ಕಂಬಳಿ ಹೊದ್ದು ಮಲಗುತ್ತಾನೆ.] ನಾಗಿ ಮಾತ್ರ ತನ್ನ ಹೋರಟದ ಹಾದಿಯಲ್ಲಿ , ದುಗ್ಗಜ್ಜನ್ನ ನೇಮಕ್ಕೆ ಗಣಪ ಬಾರಿಸುವ ಡೋಲನ್ನೂ ಬಳಸಿಕೊಳ್ಳಲು ಒಂದು ಹಂತದಲ್ಲಿ ಮುಂದಾಗುತ್ತಾಳೆ.
[ಆಕೆ , ಪಾರಂಪರಿಕ ಶಕ್ತಿಯನ್ನು ಬಳಸಿಕೊಳ್ಳಲು , ತನಗೆ ತಿಳಿಯದೆಯೇ ಹೊರಟಿದ್ದಾಳೆಯೆ?!]
ಚಿತ್ರದ ಪ್ರತಿಯೊಂದು ಪಾತ್ರವೂ ತನ್ನ ನಿಸ್ಸಹಾಯಕತೆಯಲ್ಲಿ ಒಂದೊಂದು ರೀತಿ ವರ್ತಿಸುತ್ತಾರೆ. ನಾಗಿ,ದುಗ್ಗಜ್ಜ ಉದಾತ್ತ ನಿಲುವನ್ನು ತಳೆದರೆ , ಗಣಪನನ್ನು ಕ್ರೌರ್ಯ ಮುಸುಕುತ್ತದೆ. ಅಂಥದ್ದರಲ್ಲೂ ನಾಗಿ ಸ್ಫೋಟಗೊಳ್ಳದೇ ಇರುವುದು ಆಶ್ಚರ್ಯವೆ ಸರಿ. ಬಹುಶ ನಾಗಿ ಬಹು ಸಮತೋಲನದ ಪಾತ್ರ. ಆಕೆ ಮಕ್ಕಳಿಗೆ ಎಲೆಯಲ್ಲಿ
ಕೈಗಡಿಯಾರ ಮಾಡಿಕೊಡಬಲ್ಲಳು , ಹಾಗೇ ಮಾವನ ಎಲೆಯಲ್ಲಿ ಮಾಡಿದ ಕೊಡೆಯನ್ನು ಹಿಡಿದುಕೊಳ್ಳುವ ಮನಸ್ಸು ಮಾಡಬಲ್ಲಳು; ಮಾವನ ಡೋಲನ್ನು ನುಡಿಸಬಲ್ಲಳು ,ಅಂತೆಯೇ ಗಣಪನು ಪೇಟೆಯಲ್ಲಿ ಅಂಗಡಿಯಿಡುವ ಕನಸನ್ನೂ ಕಾಣಬಲ್ಲಳು; ಕೃಷ್ಣನ ಜೊತೆ ಪ್ರೀತಿಯಿಂದ ಇರಬಲ್ಲಳು ಮತ್ತು ಸಂದರ್ಭದಲ್ಲಿ ಅವನನ್ನು ಹೊರಗಟ್ಟಲೂಬಲ್ಲಳು.
ಕೃಷ್ಣ ಬರುವ ದೃಶ್ಯಗಳು ನನಗೆ ಅಸ್ವಾಭಾವಿಕ ಅಂತೇನೂ ಅನ್ನಿಸಲಿಲ್ಲ. ಕೃಷ್ಣ , ’ಮಳೆ ಹನಿ- ಪಾತ್ರೆಗಳ’ ಜೊತೆಯಾಡುವುದು , ಬದುಕಿನ ಏಕತಾನತೆಯನ್ನು , ಹೋಗಲಾಡಿಸುವಲ್ಲಿ ಸೃಜನಶೀಲತೆಯ ಶಕ್ತಿಯನ್ನು ಎತ್ತಿಹಿಡಿಯುತ್ತದೆ. ತನ್ನತನವನ್ನು ಉಳಿಸಿ, ಪ್ರತಿಷ್ಠಾಪಿಸಿಕೊಳ್ಳುವ ಯತ್ನದಲ್ಲಿರುವ ,ಗಣಪ ಮತ್ತು
ತನ್ನ ಹಿಂದಿನ ಬಾಂಬೆ ಜೀವನದ ವೈಫಲ್ಯವನ್ನು ನಿವರಿಸಿಕೊಂಡು , ಸಮಾಜಿಕ ಯಶಸ್ಸಿನ ಅನಿವಾರ್ಯತೆ ಇರುವ ಕೃಷ್ಣ , ಇವರೀರ್‍ವರ ನಡುವಿನ ಸಂಘರ್ಷ ಮತ್ತು ಪರಿಣಾಮವಾಗಿ ಗಣಪ ಸೃಜನಶೀಲವಾದ ಎಲ್ಲಾ ಪ್ರಯತ್ನವನ್ನು ಹೊಸಕಿಹಾಕುತ್ತಾ, “ದ್ವೀಪ”- ಒಂದನ್ನು ಹುಟ್ಟಿಹಾಕುವ ಕ್ರಿಯೆಯ ಚಾಲನೆಯನ್ನು
ಕಾಣಬಹುದು ಅಂತ ನನಗನ್ನಿಸ್ತಾ ಇದೆ.
ನಾಗಿ , ಕೃಷ್ಣನಿಗೆ ಎಣ್ಣೆ ಹಚ್ಚಿದ ಕೈ ಮೂಸಿನೋಡುವಲ್ಲಿ , ಅದು ಬರಿಯ ಮಾತೃವಾತ್ಸಲ್ಯವೋ ಎಂದು ಒಂದು ಸಣ್ಣ ಅನುಮಾನದ ಮೊಳಕೆ ಹುಟ್ಟುವುದು , ಪೇಟೆಗೆ ವಾಪಸ್ಸು ಹೋಗು ಎಂದು ಕೃಷ್ಣನನ್ನು ತಿರುಗಿ ಕಳಿಸುವಲ್ಲಿ ಮುಂದಾದರೂ , “ಇದ್ದೊಂದು ದೋಣಿಯನ್ನು ತೆಗೆದುಕೊಂಡೊಯ್ಯಬೇಡವೋ ” ಎಂದು ಅವನನ್ನು ತಡೆಯಲು ನೋಡುವುದು (ಗಣಪ ,ಮತ್ತೊಂದು ದೋಣಿ ಮಾಡಲಾರನೇ ? , ಅಥ್ವಾ ಇಬ್ಬರೂ ಸೇರಿ ಮಾಡಲಾರರೆ?) – ತಿರುಗಿ ದ್ವೀಪವಾಗುವ ,ಆಗಿಸಿಕೊಳ್ಳುವ ಎಲ್ಲ ಕ್ರಿಯೆಗೂ ಚಾಲನೆ ದೊರಕಿಸಿಕೊಡುವ ಕೀಲೆಣ್ಣೆಯೇನೋ ಎಂದು ಅನ್ನಿಸುವಂತಿದೆ. ಯಾಕೋ ನನಗೆ ಶಿವು ಅವರು ಅಭಿಪ್ರಾಯಪಟ್ಟಂತೆ ಅದ್ಯಾವುದೋ ಅಸಹಜ ಅನ್ನಿಸಲಿಲ್ಲ.ಆದರೆ ನೈತಾತ್ಮಕ ಅಂಶಗಳನ್ನು ಶಿವು ಚೆನ್ನಾಗಿ ಗುರುತಿಸಿದ್ದಾರೆ.
ಸಂಗೀತ ಮಾತ್ರ (ಇದ್ದೊಂದು ಟ್ಯೂನ್ನ ಹಾಗೆ ಕರೀಬಹುದಾದ್ರೆ :-)) ನನಗೆ ಹಿಡಿಸಿತು.
ಒಟ್ಟಾರೆ “ಚಿತ್ರಕ್ಕೆ ಏನು ಹೇಳಬೇಕಿದೆ” ಅನ್ನೋ ಪ್ರಶ್ನೆ ನನಗೂ ಬಹಳವಾಗಿ ಕಾಡಿದ್ದು ಹೌದು ..
ಅಣೆಕಟ್ಟೋ , ಸೀತಾ ಪರ್ವತವೋ ? ಪರಂಪರೆ -ಅಧುನಿಕತೆಯ ಆಯ್ಕೆಗೆ ಸಂಬಂಧಿಸಿದ ತಾಕಲಾಟಗಳೋ ! , ಅಥ್ವಾ ತಮ್ಮ ತಮ್ಮ ಆಯ್ಕೆಗೆ ತಕ್ಕಂತೆ ನಡೆಸುವ ಹೋರಾಟದ ದಾಖಲಾತಿಯೋ ! , ಅಥ್ವಾ ಈ ಎರಡು ಕಾರಣಗಳಿಂದ ಕಾಣುವ ಮನುಷ್ಯನ ನೆರಳುಗಳೋ ! .ಬಹುಶಃ ಇವೆಲ್ಲವೂ ಹೌದು .
ಫ಼ಿಲ್ಮ್ ಕೊನೆಗೆ ನಾಗಿನ ಜeಜಿoಛಿus ಮಾಡಬಾರದಾಗಿತ್ತು , ಒಂದು ಜೆಟ್ ವಿಮಾನದ ಹೊಗೆಯ ಗೆರೆ ಅವಳ ತಲೆ ಮೇಲೆ ಹೋಗೋ ಹಾಗೆ ಮಾಡಬೇಕಿತ್ತು ಅಂತ ಹಾರಾಡುತ್ತಿದ್ದೆ. ಈಗ ಅವಳನ್ನ ಜeಜಿoಛಿus ಮಾಡಿದಾಗಿನ ಹಿನ್ನಲೆಯಲ್ಲಿ , ಬೆಟ್ಟ ಗುಡ್ಡ ,ಸಸ್ಯ ಸಂಪತ್ತು , ಪಕ್ಷಿ ಸಂಕುಲ , ’ಸೀತ ಮಂಟಪ’, ಅದಕ್ಕೆ ಸದಾ ತಳಕು ಹಾಕಿಕೊಂಡಿರುವ ಹುಲಿ ರಾಯನ ಓಡಾದ ನೆನಪಿಗೆ ಬರುತ್ತಾ ದ್ವೀಪವಾಗುವ ವ್ಯಕ್ತಿಗಿಂತ ಎಲ್ಲವನ್ನೂ ಒಳಗೊಂಡ , ದ್ವೀಪವಾಗದೇ ಹೋಗುವ “ದ್ವೀಪ, – ಈ ಪ್ರಪಂಚವೇ ” (ಅಂದ್ರೆ ಸಮಷ್ಟಿ ) ಮುಖ್ಯ ಅನ್ನುವುದನ್ನು ಚಿತ್ರ ಧ್ವನಿಸುತ್ತಿದೆಯೇನೋ ! – ಎಂದು ಅನ್ನಿಸುತ್ತಿದೆ.
*****