ಚೇಳು

ಬಳ್ಳಾರಿ ಜಿಲ್ಲೆಯ ಆ ಪುಟ್ಟ ಊರಿನಲ್ಲಿ ಚೇಳುಗಳದೇ ದರ್ಬಾರು. ಜನಸಂಖ್ಯೆಯ ನೂರುಪಟ್ಟು ಚೇಳುಗಳಿವೆಯಾದ್ದರಿಂದ ಅವುಗಳ ದರ್ಬಾರಿಗೆ ಆಕ್ಷೇಪಣೆ ಮಾಡುವಂತಿಲ್ಲ. ಇಡೀ ಊರಿನಲ್ಲಿ ಎಲ್ಲಿ ಬೇಕೆಂದರಲ್ಲಿ ವಾಸಿಸುವ ಹಕ್ಕನ್ನು ಚೇಳುಗಳು ಪಡೆದಿವೆ. ಕಲ್ಲಿನ ಬುಡದಲ್ಲಿ, ಒರಳಿನ ತಳದಲ್ಲಿ, ಬೀಸೇಕಲ್ಲಿನ ಕುಣಿಯಲ್ಲಿ, ಅಕ್ಕಿ ಡಬ್ಬಿಯ ಒಳಗೆ, ತಾರಸಿಯ ಮೇಲೆ, ಹಗೇವಿನೊಳಗೆ, ಮಡಿಸಿಟ್ಟ ಕುಪ್ಪಸದಲ್ಲಿ, ಮಕ್ಕಳ ತೊಟ್ಟಿಲಿನಲ್ಲಿ, ಬಿಟ್ಟ ಜೋಡಿನೊಳಗೆ, ಪಾಯಿಖಾನೆಯಲ್ಲಿ ಕಳಚಿಟ್ಟ ಚಡ್ಡಿಯೊಳಗೆ – ಹೀಗೆ ‘ನಾನಿಲ್ಲದೆಡೆಯಿಲ್ಲ’ ಎನ್ನುವ ಭಗವಂತನ ಮತ್ತೊಂದು ಅವತಾರವೇನೋ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತವೆ. ಅವುಗಳ ಓಡಾಟವನ್ನು ಅರ್ಥಮಾಡಿಕೊಂಡ ಜನರು ತಮ್ಮ ಹಾಸಿಗೆಗಳನ್ನು ಗೋಡೆಯಿಂದ ಒಂದು ಅಡಿ ದೂರದಲ್ಲಿ ಹಾಸಿಕೊಂಡು ಅವುಗಳ ರಾತ್ರಿ ಸಂಚಾರಕ್ಕೆ ಭಂಗ ಬರದಂತೆ ನೋಡಿಕೊಳ್ಳುತ್ತಾರೆ. ಹೆಚ್ಚಾಗಿ ಕತ್ತಲ ಸಂದುಗೊಂದುಗಳಲ್ಲಿಯೇ ಇರಲು ಇಷ್ಟ ಪಡುವ ಈ ಚೇಳುಗಳು, ಬಿಸಿಲುಗಾಲಕ್ಕೆ ಧಗೆ ತಾಳಲಾರದೆ ವಾಯುವಿಹಾರಕ್ಕೆ ಬರುತ್ತವೆ. ಹೀಗೆ ವಾಯುವಿಹಾರಕ್ಕೆ ಹೊರಟ ಚೇಳಿನ ಬಡಿವಾರವನ್ನು ವರ್ಣಿಸುವುದು ಕಷ್ಟ! ತಮ್ಮ ನಾಜೂಕಾದ ಕೊಂಡಿಯನ್ನು ಲತೆಯಂತೆ ಬಳಕಿಸುತ್ತಾ, ನುಣುಪಾದ ಕಪ್ಪು ಮೈಯನ್ನು ಸಾಲಿಗ್ರಾಮದಂತೆ ಫಳಫಳನೆ ಹೊಳೆಯಿಸುತ್ತಾ, ಬುರುಖಾ ಹೊದ್ದ ಬೇಗಂಳಂತೆ ಗಂಭೀರವಾಗಿ ಗೋಡೆಯಂಚಿಗೆ ಸಾಗುತ್ತಿದ್ದರೆ ಕೊಲ್ಲುವದನ್ನು ಮರೆತು ನೋಡುತ್ತಾ ಕುಳಿತುಬಿಡೋಣವೆನ್ನಿಸುತ್ತದೆ. ಅದರ ತಂಟೆಗೆ ಯಾರಾದರೂ ಬಂದರೆ ಸುಮ್ಮನಿರುವದಿಲ್ಲ. ‘ವೃಶ್ಚಿಕ’ ರಾಶಿಯವರಿಗೂ ತಮ್ಮ ಕೊಂಡಿಯ ಪರಿಚಯವನ್ನು ಮಾಡಿಕೊಡುತ್ತವೆ. ದೊಡ್ಡಾಸ್ಪತ್ರೆಯ ಡಾಕ್ಟರರೂ ನಾಚುವಂತೆ ಇಂಜೆಕ್ಷನ್ ಮಾಡಿ ಔಷಧಿಯನ್ನು ಒಳ ಸೇರಿಸುತ್ತವೆ.

ಚೇಳನ್ನು ಕಚ್ಚಿಸಿಕೊಳ್ಳದ ಗಂಡುಗಲಿ (ಅಥವಾ ಹೆಣ್ಣುಹುಲಿ) ಆ ಊರಲ್ಲಿ ಯಾರೂ ಇಲ್ಲ. ತೊದಲು ನುಡಿ ಕಲಿಯುವದಕ್ಕೆ ಮುಂಚೆಯೇ ಮಕ್ಕಳಿಗೂ ಚೇಳಿನ ಕರಾಮತ್ತಿನ ಪರಿಚಯವಾಗಿರುತ್ತದೆ. ಹರಿದಾಡುವ ಚೇಳನ್ನು ಆಟಿಗೆ ಸಾಮಾನೆಂದು ಮಗು ಎಳೆದುಕೊಳ್ಳದಂತೆ ತಾಯಂದಿರು ಎಚ್ಚರ ವಹಿಸುತ್ತಾರೆ. ಹೊಸದಾಗಿ ಮದುವೆಯಾಗಿ ಬಂದ ಪರ ಊರಿನ ಹೆಣ್ಣುಮಗಳಿಗೆ ಮೊದಲ ಬಾರಿಗೆ ಚೇಳು ಕಡಿದು ಅವಳು ಲಬೋ ಲಬೋ ಹೊಡೆದು ಕೊಳ್ಳುವಾಗ ಹೆಂಗಸರೆಲ್ಲಾ ಕುವಾಡ ಮಾಡಿ “ಈವೊತ್ತು ಖರೇವಂದ್ರೂ ನಮ್ಮೂರಿನ ಹುಡುಗಿ ಆದಿ ನೋಡು…” ಎಂದು ನಗಾಡುತ್ತಾರೆ. ಊರಿಂದ ಬಂದ ನೆಂಟರಿಗೆ ಚೇಳು ಕುಟಿಕಿದಾಗ “ಅಂತೂ ನಮ್ಮೂರಿಂದ ಉಡುಗೊರಿ ಇಲ್ಲದೇ ಯಾರೂ ಹೋಗಂಗಿಲ್ಲ ನೋಡ್ರಿ…” ಎಂದು ಊರಿನ ಮಹಿಮೆಯನ್ನು ಕೊಂಡಾಡುತ್ತಾರೆ.

ದುರ್ಗಮ್ಮನ ಗುಡಿಯ ಹತ್ತಿರದ ಬೇವಿನ ಮರದ ಬುಡದಲ್ಲಿ ಗುಡಿಸಲಿನಲ್ಲಿ ವಾಸಿಸುವ ವೆಂಕಮ್ಮನೆಂಬ ಒಂಟಿ ಜೀವಕ್ಕೂ, ಚೇಳುಗಳಿಗೂ ಬಿಡಿಸದ ನಂಟು. ಡ್ರಾಯಿಂಗ್ ಮಾಸ್ತರ ಹುಲಿಕುಂಟೆಪ್ಪನ ಬಳಿ ಚೇಳಿನ ಸುಂದರ ಚಿತ್ರವನ್ನು ಬಿಡಿಸಿಕೊಂಡು, ಅದಕ್ಕೆ ಕಟ್ಟು ಹಾಕಿಸಿ ತನ್ನ ಮನೆಯ ಗೋಡೆಗೆ ನೇತು ಹಾಕಿದ್ದಾಳೆ. ಮನೆಯ ಮುಂದೆ ಅಂಗಳದಲ್ಲಿ ದಿನ ನಿತ್ಯ ವಿಭಿನ್ನ ಬಗೆಯ ಚೇಳಿನ ರಂಗವಲ್ಲಿಗಳನ್ನು ಹಾಕುತ್ತಾಳೆ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವಾಗ ಭಕ್ತಿಯಿಂದೊಮ್ಮೆ ಚೇಳನ್ನು ಪ್ರಾರ್ಥಿಸುತ್ತಾಳೆ. ಚೇಳು ವಿಶ್ವರೂಪದರ್ಶನವನ್ನು ಕೊಟ್ಟಾಗ ಕೈ ಮುಗಿದು ‘ಕಾಪಾಡಪ್ಪ ತಂದೆ’ ಎನ್ನುತ್ತಾಳೆ. ಹಾಗೆ ಕೈಮುಗಿದಾಗ ಅವಳ ಅಂಗೈ ಮೇಲಿರುವ ಚೇಳಿನ ಹಚ್ಚೆಯ ಚಿತ್ರ ನಿಜವಾದ ಚೇಳನ್ನು ನೋಡಿ ಕಣ್ಣು ಹೊಡೆಯುತ್ತದೆ. ವರ್ಷಕ್ಕೊಮ್ಮೆ ಬರುವ ಚೇಳಿನ ಅಮವಾಸ್ಯೆಯ ದಿನ ಉಪವಾಸ ಮಾಡಿ, ಸಂಜೆಗೆ ಊರಿನವರಿಗೆ ಪಾನಕ ಬೇಳೆಯನ್ನು ಹಂಚುತ್ತಾಳೆ.

ವೆಂಕಮ್ಮನ ದ್ವೇಷವನ್ನು ಕಟ್ಟಿಕೊಂಡು ಬದುಕಲು ಆ ಊರಲ್ಲಿ ಸಾಧ್ಯವಿಲ್ಲ. ದಾರಿಯಲ್ಲಿ ಎದುರಾದರೆ “ಬೇಸಿದ್ದೀಯೇನು ವೆಂಕಮ್ಮ…” ಎನ್ನದೆ ಯಾರೂ ಮುಂದಕ್ಕೆ ಹೋಗುವದಿಲ್ಲ. ತರಕಾರಿ ಮಾರುವವರು ಒಂದಿಷ್ಟು ತರಕಾರಿಗಳನ್ನು ಅವಳಿಗೆ ಪುಕ್ಕಟ್ಟೆ ಕೊಡದೆ ವ್ಯಾಪಾರಕ್ಕಿಳಿಯುವದಿಲ್ಲ. ಧವಸ-ಧಾನ್ಯ ಬೆಳೆಯುವ ರೈತರು ಸುಗ್ಗಿಯ ಕಾಲಕ್ಕೆ ವೆಂಕಮ್ಮನಿಗೆ ವರ್ಷಕ್ಕಾಗುವಷ್ಟು ಅಕ್ಕಿ-ಬೇಳೆಯನ್ನು ಕೊಟ್ಟ ನಂತರವೇ ತಮ್ಮ ಮನೆಯಲ್ಲಿ ಮೊದಲ ಅನ್ನವನ್ನು ಮಾಡುತ್ತಾರೆ. ಸರಕಾರಿ ಕೆಲಸದಲ್ಲಿರುವವರು ಅವಳ ಬಟ್ಟೆ ಬರೆ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಾರೆ. ಯಾರ ಮನೆಯಲ್ಲಿಯೇ ಶುಭ ಕಾರ್ಯವಾಗಲಿ, ವೆಂಕಮ್ಮನನ್ನು ಊಟಕ್ಕೆ ಕರೆಯುವದನ್ನು ಮರೆಯುವದಿಲ್ಲ.

ಈ ಎಲ್ಲಾ ಮರ್ಯಾದೆಗಳಿಗೆ ಕಾರಣವೆಂದರೆ, ವೆಂಕಮ್ಮನಿಗೆ ಚೇಳಿನ ಔಷಧಿ ಗೊತ್ತು. ಚೇಳು ಯಾರಿಗೇ ಕಡಿಯಲಿ ತಕ್ಷಣ ಅಲ್ಲಿಗೆ ತನ್ನ ಸಂಚಿಯನ್ನು ಸೊಂಟದ ಬಾಳೆಕಾಯಿಗೆ ಸಿಕ್ಕಿಸಿಕೊಂಡು ಓಡುತ್ತಾಳೆ. ಚೇಳು ಕಚ್ಚಿದ ಭಾಗವನ್ನು ನಾಜೂಕಾಗಿ ಸವರಿ, ತನ್ನ ಉಳುಕಿನ ಕಡ್ಡಿಯಿಂದ ಆ ಭಾಗವನ್ನು ಗುರ್ತು ಮಾಡಿಕೊಳ್ಳುತ್ತಾಳೆ. ಸಂಚಿಯಿಂದ ಎಲೆಗಳನ್ನು ತೆಗೆದು, ಕೈಯಲ್ಲಿ ಹಿಡಿದು, ಕಣ್ಣು ಮುಚ್ಚಿ ಪ್ರಾರ್ಥಿಸಿ, ಸೊಪ್ಪನ್ನು ಗಸಗಸನೆ ಅಂಗೈಯಲ್ಲಿ ತಿಕ್ಕಿ, ಅದರ ರಸವನ್ನು ಚೇಳು ಕಡಿದ ಜಾಗದಲ್ಲಿ ಹಿಂಡಿ, ಉಳಿದ ಸೊಪ್ಪನ್ನು ಆ ಭಾಗಕ್ಕೆ ಸವರಿ ಒದ್ದೆ ಬಟ್ಟೆ ಕಟ್ಟುತ್ತಾಳೆ. ಮನೆಯವರಿಂದ ಕೇಳಿ ಒಂದು ತಂಬಿಗೆ ನೀರು ಮತ್ತು ಒಂದು ಹರಿವಾಣವನ್ನು ತೆಗೆದುಕೊಳ್ಳುತ್ತಾಳೆ. ನೋವು ಕಡಿಮೆಯಾಗುವ ತನಕ ಒಂದೊಂದು ಗುಟುಕು ನೀರು ಬಾಯಲ್ಲಿಟ್ಟುಕೊಂಡು, ಮನಸ್ಸಿನಲ್ಲಿ ಚೇಳಿನ ಮಂತ್ರವನ್ನು ಪಠಿಸಿ, ಆ ನೀರನ್ನು ಬಾಯಿಯಲ್ಲಿಯೇ ಸದ್ದು ಮಾಡುತ್ತಾ ಗಲಗಲಿಸಿ ಆ ಹರಿವಾಣದಲ್ಲಿ ಉಗುಳುತ್ತಾಳೆ. ಚೇಳಿನ ವಿಷ ಇಳಿದಂತೆಲ್ಲಾ ಹರಿವಾಣದಲ್ಲಿನ ನೀರು ಹಸಿರಾಗುತ್ತಾ ಹೋಗುತ್ತದೆ. ಕೊನೆಗೆ ಆ ಹರಿವಾಣದ ನೀರು ತುಳುಕದಂತೆ ತೆಗೆದುಕೊಂಡು ಹೋಗಿ, ಭೂಮಿಯಲ್ಲಿ ಕುಣಿ ತೋಡಿ ಸುರುವಿ, ಮಣ್ಣು ಮುಚ್ಚುತ್ತಾಳೆ.

ಚೇಳಿನ ವಿಷವಿಳಿಸಿದ್ದಕ್ಕೆ ವೆಂಕಮ್ಮ ಹಣ ತೆಗೆದುಕೊಳ್ಳುವದಿಲ್ಲ. ಹಾಗೆ ಹಣ ತೆಗೆದುಕೊಂಡರೆ ಚೇಳಿನ ಔಷಧದ ಮಹತ್ವ ಇಲ್ಲದಂತಾಗುತ್ತದೆಂದು ಎಲ್ಲರಿಗೂ ಹೇಳುತ್ತಾಳೆ. ಅವಳು ಮನೆಗೆ ಹೋಗುವಾಗ ಒಂದಿಷ್ಟು ವೀಳ್ಯದ ಎಲೆ, ಎರಡು ಬೆಟ್ಟಡಿಕೆ, ತುದಿಗೆ ಸುಣ್ಣ ಮತ್ತು ಒಂದು ಬಾಳೆ ಹಣ್ಣು ಮಾತ್ರ ಕೇಳಿ ಪಡೆದುಕೊಳ್ಳುತ್ತಾಳೆ. ಬಾಳೆ ಹಣ್ಣನ್ನು ತಿಂದು, ಎಲೆ ಮತ್ತು ಒಂದು ಅಡಿಕೆಯನ್ನು ಅಲ್ಲಿಯೇ ಹಾಕಿಕೊಂಡು ನಾಲಿಗೆಯನ್ನು ಕೆಂಪಾಗಿಸಿಕೊಂಡು ಮನೆಗೆ ಬರುತ್ತಾಳೆ. ಉಳಿದ ಒಂದು ಅಡಿಕೆ ಬೆಟ್ಟನ್ನು ಅದಕ್ಕಾಗಿಯೇ ಇಟ್ಟ ಡ್ರಮ್ಮಿನೊಳಗೆ ಹಾಕುತ್ತಾಳೆ. ಈಗಾಗಲೇ ಆ ಡ್ರಮ್ಮು ತುಂಬುತ್ತಾ ಬಂದಿದೆ.

ವೆಂಕಮ್ಮನೊಂದಿಗೆ ದ್ವೇಷ ಕಟ್ಟಿಕೊಂಡರೆ ಎಂತಹ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದೆಂಬುದನ್ನು ವೆಂಕೋಬಾಚಾರ್ಯರಿಂದಲೇ ಕೇಳಿ ತಿಳಿದುಕೊಳ್ಳಬಹುದು. ಮಹಾಬ್ರಾಹ್ಮಣನಾದ ಈ ಆಚಾರಿಗೆ ಐವತ್ತು ದಾಟಿದರೂ ಚೇಳು ಕಡೆದಿರಲಿಲ್ಲ. ತಮ್ಮ ಮನೆಯಲ್ಲಿ ಉಗ್ರ ನರಸಿಂಹ ಸಾಲಿಗ್ರಾಮ ಇರುವದಾಗಿಯೂ, ಅದನ್ನು ಪೂಜೆ ಮಾಡುವದರಿಂದ ಯಾವುದೇ ಚೇಳು, ಹಾವುಗಳಂತ ಯಃಕಶ್ಚಿತ್ ಹುಳುಗಳು ತಮ್ಮನ್ನೇನೂ ಮಾಡಲಾರವೆಂದೂ ಎಲ್ಲರ ಮುಂದೆ ಜಂಭ ಕೊಚ್ಚಿಕೊಳ್ಳುತ್ತಿದ್ದರು. ಆದ್ದರಿಂದ ವೆಂಕಮ್ಮನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ದಾರಿಗೇನಾದರೂ ಅಡ್ಡ ಬಂದರೆ “ಹಾದಿ… ಹಾದಿ…” ಎಂದು ಗದರಿಸುವ ಧ್ವನಿಯಲ್ಲಿ ಕೂಗುತ್ತಿದ್ದರು. ವೆಂಕಮ್ಮನಿಗೆ ಅವಮಾನವಾದಂತಾಗಿ “ಭಟ್ಟ, ಒಂದಿನ ಮಾಡ್ತೀನಿ ತಡಿ” ಎಂದು ಹಲ್ಲು ಹಲ್ಲು ಕಡಿಯುತ್ತಿದ್ದಳು.

ವೆಂಕಮ್ಮನ ಮುಂದೆ ದೇಹಿ ಎನ್ನುವ ಕರಾಳ ದಿನವೊಂದು ಬಂದೇ ಬಿಟ್ಟಿತು. ಆವತ್ತು ದ್ವಾದಶಿ. ಎರಡು ಏಕಾದಶಿ ನಿರಾಹಾರ ಮಾಡಿ ಕಂಗೆಟ್ಟಿದ್ದ ಆಚಾರ್ಯರು ಬೆಳಿಗ್ಗೆ ಬೆಳಿಗ್ಗೆಯೇ ಭಾವಿಯ ಮೇಲೆ ಸ್ನಾನ ಮಾಡಿ ದೇವರ ಪೂಜೆಗೆ ಸಿದ್ಧರಾದರು. ಧೋತ್ರವನ್ನು ಉಟ್ಟುಕೊಳ್ಳುವ ವ್ಯವಧಾನವೂ ಇಲ್ಲದೆ, ಒದ್ದಿಯಾದ ಸಣ್ಣಂಗ ವಸ್ತ್ರವನ್ನು ಸುತ್ತಿಕೊಂಡೇ ದೇವರ ಕಟ್ಟೆಯನ್ನು ಹತ್ತಿದರು. ಪತ್ನಿ ರುಕ್ಮಿಣಮ್ಮನ ಅಡಿಗೆಯ ಸುವಾಸನೆ ನಾಸಿಕಾಗ್ರಗಳನ್ನು ಅರಳಿಸುತ್ತಿತ್ತು. ಸಂಧ್ಯಾವಂದನೆಯನ್ನು ಮಾಡಿದ ಆಚಾರ್ಯರು, ದೇವರಿಗೂ ಸ್ನಾನ ಮಾಡಿಸಲೆಂದು ಸಾಲಿಗ್ರಾಮವನ್ನಿಡುವ ಸಂಪುಟವನ್ನು ತೆರೆದದ್ದೇ ತಡ, ಬುಳುಬುಳು ಎಂದು ಮೈಮೇಲೆಲ್ಲಾ ಚಿಕ್ಕ ಚಿಕ್ಕ ಚೇಳುಗಳು ಏರಿಬಿಟ್ಟವು. ಪ್ರಾಣಂತಿಕವಾಗಿ ಕೂಗುತ್ತಾ ಪಡಸಾಲೆಗೆ ಬಂದ ಆಚಾರ್ಯರು ಥೈ ಥೈ ಎಂದು ಕುಣಿಯಲಾರಂಭಿಸಿದರು. ಮೈಮೇಲೇರಿದ್ದ ಚೇಳುಗಳನ್ನು ಇರುವೆಗಳನ್ನು ಹೊಸಕಿ ಹಾಕಿದಂತೆ ತಿಕ್ಕಲಾರಂಭಿಸಿದವು. ಚೇಳುಗಳು ಬಿಟ್ಟಾವೆಯೆ? ಸಿಕ್ಕ ಸಿಕ್ಕ ಕಡೆಗಳಲ್ಲಿ ಕಚ್ಚಿ ಬಿಟ್ಟವು. ಅಮ್ಮನ ಹೊಟ್ಟೆಯೊಡೆದು ಎರಡು ದಿನಗಳ ಹಿಂದಷ್ಟೇ ಹೊರ ಬಂದಿದ್ದ ನಲವತ್ತಕ್ಕೂ ಹೆಚ್ಚು ಚೇಳುಗಳು, ಹೊಸತಾಗಿ ಸೈಕಲ್ ಸವಾರಿ ಕಲಿತುಕೊಂಡ ಬಾಲಕರಂತೆ ಮೈಮೇಲೆಲ್ಲಾ ಹರಿದಾಡಿದವು. ತಮ್ಮ ಪುಟ್ಟಮ್ಮ ಕೊಂಡಿಗಳಿಗೆ ಮೊದಲ ರಂಗಪ್ರವೇಶವನ್ನು ಮಾಡಿಸಿಕೊಟ್ಟವು.

ರುಕ್ಮಿಣಮ್ಮಗೆ ಗಂಡನನ್ನು ಹೇಗೆ ನಿಭಾಯಿಸಬೇಕೋ ಗೊತ್ತಾಗದಂತಾಯ್ತು. ಹತ್ತಿರ ಹೋದರೆ ತಮ್ಮ ಮೈಗೂ ಚೇಳುಗಳು ಏರಿಯಾವೆಂಬ ಭಯ. ಸೀದಾ ದುರ್ಗಮ್ಮನ ಗುಡಿಗೆ ಏದುಸಿರು ಬಿಡುತ್ತಾ ಓಡಿ ಹೋಗಿ “ಬಾರವ್ವ ವೆಂಕಮ್ಮ, ಬಾರವ್ವ…” ಎಂದು ಕೂಗಿ ಕರೆದುಕೊಂಡು ಬಂದಳು. ವೆಂಕಮ್ಮ ಮನೆಗೆ ಬರುವ ವೇಳೆಗಾಗಲೇ ಆಚಾರ್ಯರು ಉಟ್ಟ ಸಣ್ಣಂಗವಸ್ತ್ರವನ್ನೂ ಕಿತ್ತೊಸೆದು ನೆಲದಲ್ಲಿ ಬಿದ್ದು ಹೊರಳಾಡುತ್ತಿದ್ದರು. ಹರಿದಾಡುತ್ತಿದ್ದ ಸಣ್ಣ ಸಣ್ಣ ಚೇಳುಗಳನ್ನು ನೋಡಿದ್ದೇ ವೆಂಕಮ್ಮನಿಗೆ ಪರಿಸ್ಥಿತಿ ಅರ್ಥವಾಯ್ತು. ಸಂಚಿಯಿಂದ ಸೊಪ್ಪನ್ನು ತೆಗೆದು ರಸ ಹಿಂಡಿದ್ದೇ ಇಡೀ ಮೈಗೆ ಹಚ್ಚಿದಳು. ಆಚಾರ್ಯರ ಮೂರು ನಾಲ್ಕು ಧೋತ್ರಗಳನ್ನು ಪಡೆದುಕೊಂಡು ಇಡೀ ಮೈಯನ್ನು ಅದರಿಂದ ಸುತ್ತಿದಳು. ಬಿಳಿಯ ಬಟ್ಟೆಗಳಲ್ಲಿ ಸುತ್ತಿಸಿ ಮಲಗಿಸಿದ ತನ್ನ ಗಂಡನನ್ನು ನೋಡಿ ರುಕ್ಮಿಣಮ್ಮಗೆ ಬರಬಾರದ ಆಲೋಚನೆಗಳೆಲ್ಲಾ ಬಂದವು. ಆ ದಿನದ ಹರಿವಾಣದ ನೀರು ಕಾಡು ಹಸಿರು ಬಣ್ಣವನ್ನು ತಾಳಿತ್ತು. ಅಂತೂ ರುಕ್ಮಿಣಮ್ಮನ ಮಾಂಗಲ್ಯಕ್ಕೆ ಅದೃಷ್ಟ ಕೈಕೊಡಲಿಲ್ಲ. ಆಚಾರ್ಯರ ಕೈಗೆ ಸಿಗದ ಕೆಲವು ಚೇಳುಗಳು ಮನೆಯ ಸಂದುಗೊಂದುಗಳಲ್ಲಿ ಸೇರಿಕೊಂಡು ಪ್ರಾಣ ಉಳಿಸಿಕೊಂಡವು. ಹೊಟ್ಟೆಯೊಡೆದು ಹೊರ ಹಾಕಿದ ಅವರಮ್ಮನ ವಂಶ ನಿರ್ವಂಶವಾಗದಂತೆ ನೋಡಿಕೊಂಡವು.

ಸಾಯಂಕಾಲದೊಳಗೆ ಇಡೀ ಊರಿನ ಎಲ್ಲಾ ಮನೆಗಳಿಗೂ ಹೋದ ವೆಂಕಮ್ಮ, “ಎಂಕೋಬಾಚಾರ್ಯರ ಮೈಮೇಲೆ ಒಂದು ಗುಲುಗುಂಜಿಯಷ್ಟು ಜಾಗಾನೂ ಬಿಡದಂಗೆ ಔಷಧಿ ಹಚ್ಚಿ ಬಂದೆ” ಎಂದು ಹೇಳಿಕೊಂಡು ಬಂದಳು. ವೆಂಕೋಬಾಚಾರ್ಯರನ್ನು ಮಾತನಾಡಿಸಲು ಹೋದ ಪ್ರತಿಯೊಬ್ಬರೂ “ವೆಂಕಮ್ಮ ಮೈಗೆಲ್ಲಾ ರಸ ಹಚ್ಚಿದಳಂತಲ್ಲಾ…” ಎಂದು ಏನೂ ವಿಶೇಷವಲ್ಲವೆಂಬಂತೆ ಹೇಳಿ ಆಚಾರ್ಯರನ್ನು ಭೂಮಿಗಿಳಿಸಿ ಬಂದರು.

ಮರುದಿನ ದೇವರ ಪೂಜೆಯ ಕಟ್ಟೆ ಹತ್ತಲೂ ವೆಂಕೋಬಾಚಾರ್ಯರು ಗಡಗಡ ನಡುಗಲಾರಂಭಿಸಿದರು. ರುಕ್ಮಿಣಮ್ಮನ ಹತ್ತಿರ “ವೆಂಕಮ್ಮನ್ನ ಕರಕೊಂಡು ಬಾರೆ” ಎಂದು ಅಂಗಲಾಚಿದರು. ವೆಂಕಮ್ಮ ಬಂದಾಗ ಅವಳನ್ನು ದೇವರ ಮನೆಯಲ್ಲಿ ಹೇಗಪ್ಪಾ ಕರೆದುಕೊಳ್ಳುವುದು ಎನ್ನುವ ಸಂಕಟ ಒಂದು ಕಡೆ, ಸಾಲಿಗ್ರಾಮವಿರುವ ಸಂಪುಟಕ್ಕೆ ಕೈಹಾಕಬೇಕಾದ ಸಂಕಟ ಮತ್ತೊಂದು ಕಡೆ. “ಏನೂ ಆಗಂಗಿಲ್ಲೇಳ್ರೀ ಆಚಾರ್ಯರೆ. ಡಬ್ಬಾ ತೆಗೀರಿ. ನಾನು ಎದುರೀಗೇ ನಿಂತೀನಲ್ಲ. ನರಸಿಂಹ ಸ್ವಾಮಿ ಕಲ್ಲು ಅಂತೀರಿ. ಸಿಂಹದ ಬದಲು ಚೇಳು ಬಂದು ಕೂತಿರೋದು ನಿಮ್ಮ ನಸೀಬ ಅಂದ್ಕೊಳ್ರಿ” ಎಂದು ಹುರುದುಂಬಿಸಿದಳು. ಆಚಾರ್ಯರು ನಡಗುವ ಕೈಯಲ್ಲಿ ಸಂಪುಟವನ್ನು ತೆರೆದರು. ಪುಣ್ಯಕ್ಕೆ ಚೇಳಿರಲಿಲ್ಲ. ತಾವೇ ತೊಳೆದು ಒರೆಸಿ ಮುಚ್ಚಿಟ್ಟ ಆ ಬೆಳ್ಳಿ ಸಂಪುಟದಲ್ಲಿ ಅದು ಹೇಗೆ ಅಷ್ಟೊಂದು ಚೇಳುಗಳು ಬಂದು ಸೇರಿಕೊಂಡವೋ? ಅವರು ಪೂಜೆ ಮಾಡುವ ಆ ಉಗ್ರ ನರಸಿಂಹನಿಗೇ ಗೊತ್ತು. ಆ ಘಟನೆಯ ನಂತರ ಆಚಾರ್ಯರು ಎಲ್ಲೇ ವೆಂಕಮ್ಮ ಎದುರಾದರೂ ಹಾದಿ ಬಿಟ್ಟು ನಿಲ್ಲುತ್ತಾರೆ. “ದೇವರ ಪೂಜಿ ಪಸಂದಾಗಿ ನಡೀತಾ ಐತಾ ಆಚಾರ್ರೇ?” ಎಂದು ವೆಂಕಮ್ಮ ಪ್ರಶ್ನೆ ಮಾಡುತ್ತಾಳೆ. “ಹೂಂನಮ್ಮ” ಎಂದು ವಿಧೇಯರಾಗಿ ಉತ್ತರಿಸುತ್ತಾರೆ.

ವೆಂಕಮ್ಮಗೆ ಆಗಲೇ ಕೂದಲು ನೆರೆತಿವೆ. ಹದಿನಾರು ವರ್ಷಕ್ಕೆ ಮದುವೆ ಮಾಡಿಕೊಂಡು ಈ ಊರಿಗೆ ಕಾಲಿಟ್ಟಾಗ ಅವಳು ಚೇಳನ್ನೇ ಕಂಡಿರಲಿಲ್ಲ. ಪಡಿ ಎಡವಿ ಮನೆಗೆ ಬಂದ ರಾತ್ರಿ ಗಂಡಹೆಂಡಿರಿಬ್ಬರನ್ನೂ ಕೂಡಿಸಿ ಆರತಿ ಮಾಡಿದ ಮೇಲೆ ದೊಡ್ಡ ತಾಮ್ರದ ಕೊಡದಲ್ಲಿ ಅಕ್ಕಿಯನ್ನು ಸುರುವಿ, ಅದರೊಳಗೆ ಬಂಗಾರದ ಉಂಗುರವನ್ನು ಬಚ್ಚಿಟ್ಟು ಇಬ್ಬರಿಗೂ ಹುಡುಕಲು ಹೆಂಗೆಳೆಯರು ಹೇಳಿದ್ದರು. ಆ ಚಿಕ್ಕ ಕಂಠದ ಕೊಡದಲ್ಲಿ ಒಬ್ಬರಿಗೊಬ್ಬರು ಕೈ ತಾಕಿಸಿಕೊಳ್ಳುತ್ತಾ, ಕೆಂಪೇರುತ್ತಾ, ಉಂಗುರವನ್ನು ಹುಡುಕುವದನ್ನು ಬೇಕೆಂತಲೇ ನಿಧಾನ ಮಾಡಿಬಿಟ್ಟರು. ಮದಲಿಂಗ ಕೊಮ್ಮಣ್ಣ ಅವಳ ಕೈಯನ್ನು ಚಿವುಟಲಾರಂಭಿಸಿದ. ವೆಂಕಮ್ಮ ಸರಸದಲ್ಲಿ ಕಡಿಮೆಯೆ? ಅವಳೂ ಜೋರಾಗಿಯೇ ಚಿವುಟಿದಳು. ಹಾಗೇ ಅವರಿಬ್ಬರ ಚಿವುಟುವ ಆಟ ಮುಂದುವರೆದಿತ್ತು. ಆದರೆ ಒಮ್ಮೆಲೇ ಪ್ರಾಣವೇ ಹೋಗುವಂತೆ ಕೊಮ್ಮಣ್ಣ ಚಿವುಟಿದಾಗ “ಅಯ್ಯಯಪ್ಪೋ…” ಎಂದು ವೆಂಕಮ್ಮ ಕೈಯನ್ನು ಹೊರತೆಗೆದುಕೊಂಡಳು. ಅವಳ ಬೆರಳ ತುದಿಗೆ ಕಚ್ಚಿಕೊಂಡಿರುವಂತೆಯೇ ಒಂದು ಹಚ್ಚನೆಯ ಚೇಳೂ ಹೊರಬಂತು! ಅಲ್ಲಿಯವರೆಗೆ ಮಾಡುತ್ತಿದ್ದ ಮದಲಗಿತ್ತಿಯ ಬಿಂಕ-ಬಡಿವಾರಗಳನ್ನು ಬದಿಗಿಟ್ಟು, ಥೈ ಥೈ ಎಂದು ಕುಣಿದು ಕೈಯಿಂದ ಚೇಳನ್ನು ಜಾಡಿಸಿದಳು. ಪುಣ್ಯಕ್ಕೆ ಚೇಳು ಬಾಯಿಂದ ಬೆರಳನ್ನು ಹಿಡಿದುಕೊಂಡಿತ್ತೇ ಹೊರತು, ಕೊಂಡಿ ಪ್ರವೇಶವನ್ನು ಮಾಡಿರಲಿಲ್ಲ. ಇವಳು ಕೈ ಕೊಡವಿದಾಗ ಚೇಳು ಇವರ ಮುಂದೆ ನಿಂತು ನೋಡುತ್ತಿದ್ದ ಜನರ ಮಧ್ಯೆದಲ್ಲಿ ಬಿತ್ತು. ರಥದ ಮುಂದೆ ತೆಂಗಿನಕಾಯಿಯನ್ನು ಒಡೆದಾಗ ಅದರ ಹೋಳುಗಳನ್ನು ಆರಿಸಿಕೊಳ್ಳಲು ನುಗ್ಗುವಂತೆ ಚಿಳ್ಳೆ-ಪಳ್ಳೆಗಳು ನುಗ್ಗಿ ಚೇಳನ್ನು ಬರಿಗಾಲಿನಲ್ಲಿಯೇ ಚಿಂದಿ ಮಾಡಿದರು. ಆ ರಾತ್ರಿ ಶೋಭಾನದ ಕೋಣೆಯಲ್ಲಿಯೂ ಚೇಳನ್ನು ನೆನೆಸಿಕೊಂಡು ಸಣ್ಣಗೆ ನಡಗುತ್ತಿದ್ದಳು. ಕೊಮ್ಮಣ್ಣ ಹಗೂರಕ್ಕೆ ಅವಳನ್ನು ತೆಕ್ಕೆಯಲ್ಲಿ ತೆಗೆದುಕೊಂಡು ಸಮಾಧಾನ ಮಾಡಿ, ತನ್ನ ಬೆರಳುಗಳನ್ನು ಹೆಣಿಕೆ ಹಾಕಿ ಅವಳ ಮೈಯ ಸಂದುಗೊಂದುಗಳಲ್ಲಿ ಕಚಗುಳಿ ಇಟ್ಟು “ಚೇಳು ಅಲ್ಲಿ ಬಂತು, ಚೇಳು ಇಲ್ಲಿ ಬಂತು…” ಎಂದು ನಗಿಸುತ್ತಾ ಅವಳನ್ನು ಗೆದ್ದ.

ಒಂದೇ ವರ್ಷದಲ್ಲಿ ವೆಂಕಮ್ಮಗೆ ಚೇಳಿನ ಪರಿಚಯ ಸಾಕಷ್ಟಾಯ್ತು. ಒಮ್ಮೆ ಹೊಲಕ್ಕೆ ಗಂಡನಿಗೆ ಬುತ್ತಿಯನ್ನು ತೆಗೆದುಕೊಂಡು ಹೋದಾಗ ಚಟ್ಣಿಯಿಡುವ ಸಿಲಾವರ್ ಡಬ್ಬಿಯಲ್ಲಿ ಚೇಳೊಂದನ್ನು ಇಟ್ಟು ಬಿಟ್ಟಿದ್ದಳು. ಯಾವುದೋ ಧ್ಯಾನದಲ್ಲಿ ಡಬ್ಬಿಯನ್ನು ತೆಗೆದ ಕೊಮ್ಮಣ್ಣ “ಇದರವ್ವನಾ…” ಎಂದು ಡಬ್ಬಿಯನ್ನು ಮಾರು ದೂರಕ್ಕೆ ಒಗೆದಿದ್ದ. ವೆಂಕಮ್ಮ ಬಿದ್ದು ಬಿದ್ದು ನಕ್ಕಿದ್ದಳು. ಕೊಮ್ಮಣ್ಣ ಹೆಂಡತಿಯಿಂದ ಆದ ಅವಮಾನ ಸಹಿಸಿಕೊಳ್ಳದೆ ಅವಳನ್ನು ಅಟ್ಟಿಸಿಕೊಂಡು ಹೊಲದ ತುಂಬೆಲ್ಲಾ ಓಡಾಡಿಸಿ, ಅವಳು ಕೈಗೆ ಸಿಕ್ಕಾಗ “ಚೋಳಿಡ್ತೀಯೇನಲೆ ಬೋಕಾಣಿ… ನಿಂಗೆ ಮಾಡ್ತೀನಿ ತಡಿ…” ಎಂದು ಹುಲಿಮುದ್ದುಗರೆದಿದ್ದ. ವೆಂಕಮ್ಮನ ನಗು, ಕೇಕೆಯ ಸದ್ದು ಕುರಿಮಟ್ಟಿ ಗುಡ್ಡ ಪ್ರತಿಧ್ವನಿಸಿತ್ತು.

ವೆಂಕಮ್ಮನ ಹೊಟ್ಟೆಯಲ್ಲಿ ಒಂದು ಮಗು ಅರಳಿದ್ದರೆ ಅವಳ ನಗು-ಕೇಕೆ ಎಡೆಯಿಲ್ಲದಂತೆ ಸಾಗುತ್ತಿತ್ತು. ಮೂರು ವರ್ಷವಾದರೂ ಅವಳ ಹೊಟ್ಟೆ ನಿಲ್ಲಲಿಲ್ಲ. ಕೊಮ್ಮಣ್ಣನ ಅಪ್ಪ-ಅಮ್ಮ ಹಾಹಾಕಾರ ಮಾಡಿಬಿಟ್ಟರು. ಹೋದಲ್ಲಿ ಬಂದಲ್ಲಿ ಮಗುವಿನ ಸುದ್ದಿ ಯಾವ ರೂಪದಲ್ಲಿ ಬಂದರೂ ಸಾಕು, ಸಂಕೋಚದಿಂದ ಹಿಡಿಯಾಗುತ್ತಿದ್ದಳು. ಬಸಿರಿ ಹೆಂಗಸರ ಹೊಟ್ಟೆಯನ್ನು ಆಸೆಗಣ್ಣಿಂದ ನೋಡಲಾರಂಭಿಸಿದಳು. ಬರೀ ಇಷ್ಟೇ ಆಗಿದ್ದರೆ ಹೇಗೋ ಸಹಿಸಿಕೊಂಡಿರಬಹುದಾಗಿತ್ತು. ಆದರೆ ಕೊಮ್ಮಣ್ಣಗೆ ಸಾಧು-ಸಂತರ ಬಗ್ಗೆ ಇನ್ನಿಲ್ಲದ ನಂಬಿಕೆ. ಊರಿಗೆ ಯಾವುದೇ ಸಾಧು ಬಂದರೂ ಸಾಕು, ಹೆಂಡತಿಯನ್ನು ಕರೆದುಕೊಂಡು ಹೋಗಿ, ಅವರ ಕಾಲಿಗೆ ಬೀಳಿಸಿ “ವಂಶ ನಿಲ್ಲೋ ಹಂಗೆ ಮಾಡು ಬಾಬಾ…” ಎಂದು ಬೇಡಿಕೊಳ್ಳುತ್ತಿದ್ದ. ವೆಂಕಮ್ಮ ಕೋರ್ಟಿನ ಕಟಕಟೆಯಲ್ಲಿ ನಿಲ್ಲುವಂತೆ ನಿಲ್ಲುತ್ತಿದ್ದಳು. ಯಾವುಯಾವುದೋ ಸಾಧು ಸನ್ಯಾಸಿಗಳು ಏನೇನೋ ಮಂತ್ರಿಸಿ ಕೊಟ್ಟರಾದರೂ ವೆಂಕಮ್ಮ ಕುಡಿಯೊಡೆಯಲಿಲ್ಲ. ತಿಂಗಳ ತನಕ ಯಾವ ಸನ್ಯಾಸಿಯೂ ಅದೇ ಊರಿನಲ್ಲಿ ನಿಲ್ಲುತ್ತಿರಲಿಲ್ಲವಾದ್ದರಿಂದ ಕೊಮ್ಮಣ್ಣ ಯಾರ ಮುಂದೆ ತನಗಾದ ಅನ್ಯಾಯವನ್ನು ಹೇಳಿಕೊಳ್ಳಬೇಕೋ ಗೊತ್ತಾಗದೆ ಕಂಗೆಡುತ್ತಿದ್ದ.

ಹೀಗಿರುವಾಗಲೇ ಭೈರವ ಬಾಬಾ ಆ ಊರಿಗೆ ಬಂದರು. ಭೈರವ ಬಾಬಾ ಮೌನವ್ರತ ಹಿಡಿದಿದ್ದರು. ಮೂವತ್ತರ ಆಸುಪಾಸಿನ ವಯಸ್ಸು. ಆರಡಿ ಎತ್ತರದ ಅಜಾನುಬಾಹು ಶರೀರ, ಯಾವುದೋ ನಿಗೂಢತೆಯನ್ನು ಸೂಚಿಸುವ ಆಕರ್ಷಕ ಕಣ್ಣುಗಳು, ಚೂಪಾದ ಮೂಗು, ಕಂದು ಬಣ್ಣ, ಕಾವಿ ವೇಷ – ಊರಿನೆಲ್ಲರಿಗೂ ಅವರ ಮೇಲೆ ಗೌರವವನ್ನು ಮೂಡಿಸಿತ್ತು. ದುರ್ಗಮ್ಮನ ಗುಡಿಯಲ್ಲಿ ತಂಗಿದ್ದ ಈ ಬಾಬಾ ಧ್ಯಾನಕ್ಕೆ ಕುಳಿತರೆ ಗಂಟೆಗಟ್ಟಲೆ ಈ ಪ್ರಪಂಚದ ಸಂಪರ್ಕವನ್ನು ಕಳೆದುಕೊಂಡಿರುತ್ತಿದ್ದರು. ಅವರ ವರ್ಚಸ್ಸನ್ನು ನೋಡಿದ್ದೇ ಕೊಮ್ಮಣ್ಣಗೆ ಮತ್ತೆ ಆಸೆ ಚಿಗುರೊಡೆಯಿತು. ವೆಂಕಮ್ಮನನ್ನು ಕರೆದುಕೊಂಡು ಹೋಗಿ ಕಾಲಿಗೆ ಬೀಳಿಸಿದ. ಬಾಬಾ ವೆಂಕಮ್ಮನನ್ನು ಒಮ್ಮೆ ಇಡಿಯಾಗಿ ನೋಡಿದ. ಅವರ ನೋಟದ ತೀಕ್ಷ್ಣತೆಗೆ ವೆಂಕಮ್ಮ ಸಣ್ಣಗೆ ಬೆವತಳು. ತನ್ನ ಕೈಯಿಂದ ಸಾಧ್ಯವಿಲ್ಲವೆಂದು ಬಾಬಾ ಕೈಯಾಡಿಸಿದರು. ಕೊಮ್ಮಣ್ಣ ಬಿಡಲಿಲ್ಲ. ದಿನನಿತ್ಯ ದುರ್ಗಮ್ಮನ ಗುಡಿಗೆ ಹೋಗಿ ಸೇವೆ ಮಾಡಲಾರಂಭಿಸಿದ. ಅವರು ಮೌನವ್ರತವನ್ನು ಹಿಡಿದಿದ್ದಾರೆಂಬ ವಿಷಯವೇ ಅವನಿಗೆ ಇನ್ನೂ ಹೆಚ್ಚಿನ ನಂಬಿಕೆಯನ್ನು ಅವರ ಮೇಲೆ ಉಂಟು ಮಾಡಿತ್ತು. ಕೊನೆಗೊಂದು ದಿನ ಬಾಬಾ ಮಣಿದರು. ಮೂರು ದಿನ ರಾತ್ರಿ ಹನ್ನೆರಡಕ್ಕೆ ವೆಂಕಮ್ಮನೊಬ್ಬಳೇ ಪೂಜೆಗೆ ಬರಬೇಕೆಂದು ಬರೆದು ತೋರಿಸಿದರು. ಕೊಮ್ಮಣ್ಣಗೆ ಅಷ್ಟೇ ಸಾಕಿತ್ತು – ಮಗ ಹುಟ್ಟಿದಂತೆಯೇ ಸಂಭ್ರಮಿಸಿದ.

ಮೊದಲ ದಿನ ಪೂಜೆಗೆ ಹೋಗಿ ಬೆಳಗಾಗುವದರಲ್ಲಿ ಸುಸ್ತಾಗಿ ಬಂದ ವೆಂಕಮ್ಮ ಮತ್ತೆ ತಾನು ಅಲ್ಲಿಗೆ ಹೋಗುವದಿಲ್ಲವೆಂದು ಹಠ ಹಿಡಿದಳು. ಕೊಮ್ಮಣ್ಣ ಎಗರಾಡಿ ಬಿಟ್ಟ. “ಬೋಸೂಡಿ, ದೇವರು ಬಂದಂಗೆ ಬಾಬಾ ಬಂದಾರೆ. ಇಲ್ಲದ ನಖರಾ ಮಾಡ್ತೀಯಾ? ಬಾಬಾಗೆ ಹೇಳ್ತೀನಿ ನೋಡು. ಶಾಪ ಕೊಟ್ಟರೆ ಸುಟ್ಟು ಬೂದಿಯಾಗ್ತೀಯ…” ಎಂದು ಕೂಗಾಡಿದ. ಎದುರು ಮಾತನಾಡದೆ ವೆಂಕಮ್ಮ ಎರಡನೆಯ ದಿನವೂ ಹೋಗಿ ಬಂದಳು. ಮೂರನೆಯ ದಿನ ಹೋಗುವದಕ್ಕೆ ಹಠ ಮಾಡಲಿಲ್ಲ. ಕೊಮ್ಮಣ್ಣಗೆ ಸಮಾಧಾನವಾದರೂ ಅವಳ ಮೌನ ಒಳಗೊಳಗೆ ಸಂಶಯದ ಕಿಡಿಯನ್ನು ಹೊತ್ತಿಸಿತು. ಬಾಬಾ ಅವನು ಪೂಜೆಯ ಹೊತ್ತಿನಲ್ಲಿ ಬರಲೇ ಬಾರದೆಂದು ಹೇಳಿದ್ದರು. ಆದರೂ ಮನಸ್ಸು ತಡೆಯಲಿಲ್ಲ.

ಅವನು ಊಹಿಸಿದ್ದಂತೆಯೇ ಅಲ್ಲಿ ಕೆಟ್ಟದ್ದೇ ನಡೆಯುತ್ತಿತ್ತು. ಪೂಜೆಯ ಸಾಮಾಗ್ರಿಗಳೆಲ್ಲಾ ಗುಡಿಯ ಪ್ರಾಂಗಣದಲ್ಲಿದ್ದವು. ಕಾವಿ ಬಟ್ಟೆ ಮತ್ತು ಸೀರೆ ಕುಪ್ಪಸಗಳು ಗರ್ಭಗುಡಿಯವರೆಗೆ ಚೆಲ್ಲಾಡಿದ್ದವು. ಗರ್ಭಗುಡಿಯಲ್ಲಿ ಬೆತ್ತಲೆಯ ದೇಹಗಳು ಉರುಳಾಡುತ್ತಿದ್ದವು. ಭೈರವಿ ಬಾಬಾ ಚಪಾತಿ ಹಿಟ್ಟನ್ನು ನಾದುವಂತೆ ವೆಂಕಮ್ಮನನ್ನು ಅನುಭವಿಸುತ್ತಿದ್ದ. ಕತ್ತಲಲ್ಲಿ ಕಣ್ಣನ್ನು ಹೊಂದಿಸಿಕೊಂಡು ನೋಡುತ್ತಾ ನಿಂತ. ತಡೆದುಕೊಳ್ಳಲಾರದಷ್ಟು ಉದ್ರೇಕಗೊಂಡ. ತನಗೆ ಉದ್ರೇಕವಾಗುತ್ತಿದೆ ಎಂದು ಗೊತ್ತಾಗಿ ಎಂಥದೋ ಕಸಿವಿಸಿಯಾಯ್ತು. ಮಾತನಾಡಲು ತೋಚದೆ ಮೂಲೆಯಲ್ಲಿರುವ ಕಂಬಕ್ಕೆ ಸುಸ್ತಾಗಿ ಒರಗಿ ಕುಳಿತ. ಸ್ವಲ್ಪ ಹೊತ್ತಿಗೆ ಸಿಟ್ಟಿನಿಂದ ಮೈ ಅದರುತ್ತಿತ್ತು. ಪ್ರಾಂಗಣದಲ್ಲಿ ಚೆಲ್ಲಿದ್ದ ಅವರ ಬಟ್ಟೆಗಳನ್ನು ಆಯ್ದು ದೇವಸ್ಥಾನದ ಅಂಗಳದಲ್ಲಿ ಹಾಕಿ ಬೆಂಕಿ ಕಡ್ಡಿ ಗೀರಿದ. ಉರಿ ಹತ್ತಿಕೊಂಡು ಕಿಡಿಕಾರಲಾರಂಭಿಸಿದ ತಕ್ಷಣ ಲಬೋ ಲಬೋ ಎಂದು ಬಾಯಿ ಬಡಿದುಕೊಂಡು ಹಳ್ಳಿಯ ಓಣಿ ಓಣಿಗಳನ್ನು ತಿರುಗಾಡಿದ. “ಬರ್ರಪ್ಪೋ ಬರ್ರಿ… ನನ್ನ ಹೆಂಡ್ತಿ ನಂಗೆ ಮೋಸ ಮಾಡಿ ಬಿಟ್ಟಾಳೆ ನೋಡ ಬರ್ರಪ್ಪೋ…” ಎಂದು ಕೂಗಿ, ಮನೆಗಳ ಬಾಗಿಲುಗಳನ್ನು ಬಡಿದು ಎಬ್ಬಿಸಿದ. ಜನರೆಲ್ಲಾ ಗುಡಿಯ ಮುಂದೆ ಜಮಾಯಿಸಿಬಿಟ್ಟರು. ವೆಂಕಮ್ಮ ಗರ್ಭಗುಡಿಯ ಕತ್ತಲ ಮೂಲೆಯಲ್ಲಿ ನಡಗುತ್ತಾ ಕುಳಿತುಬಿಟ್ಟಳು. ಭೈರವ ಬಾಬಾ ಧ್ಯಾನ ಮಾಡುತ್ತಾ ಮತ್ತೊಂದು ಮೂಲೆಗೆ ಕುಳಿತು ಬಿಟ್ಟ.

ಕೊಮ್ಮಣ್ಣ ಮೈಮೇಲೆ ಆವೇಶ ಬಂದವರಂತೆ “ಬಾರಲೇ ಬೋಳಿಮಗನೆ ಹೊರಗೆ. ಕಂಡವರ ಹೆಂಡಿರ ಕೂಡ ಮಲಗೋನು ನೀನೆಂತಾ ಬಾಬಾ…” ಎಂದು ಅವಾಚ್ಯ ಶಬ್ದಗಳಿಂದ ಕರೆಯಲಾರಂಭಿಸಿದ. ಜನರೆಲ್ಲಾ ಮುಂದೇನಾಗುತ್ತದೋ ಎಂದು ಕುತೂಹಲಿಗಳಾದರು. ಧ್ಯಾನದಲ್ಲಿದ್ದ ಬಾಬಾ ಕಣ್ಣು ತೆರೆದರು. ವೆಂಕಮ್ಮನ ಕಡೆಯೊಮ್ಮೆ ನೋಡಿ, ಹೊರಗೆ ನಿಧಾನ ನಡಿಗೆಯಲ್ಲಿ ಬೆತ್ತಲೆಯಾಗಿಯೇ ಹೊರಬಂದರು. ಅವರ ಮೇಲೆ ಕೈ ಮಾಡಲು ಕೊಮ್ಮಣ್ಣ ಮುಂದೆ ಬಂದ. ತಮ್ಮ ಬಲಗೈಯಿಂದ ಅವನನ್ನು ನೂಕಿದರು. ಕೊಮ್ಮಣ್ಣ ಮಾರು ದೂರ ಹೋಗಿ ಬಿದ್ದ. ನೂಕಿಸಿಕೊಂಡ ಸಂಕಟದಲ್ಲಿ “ಹೊಡಿರಲೇ ಆ ಕಳ್ಳಸನ್ಯಾಸಿನ್ನ…” ಎಂದು ಅಳುಬುರುಕು ಧ್ವನಿಯಲ್ಲಿ ಕೂಗಿಕೊಂಡ. ಜನರು ಮಾತ್ರ ಬಾಬಾನ ಮೇಲೆ ಕೈಮಾಡುವ ಧೈರ್ಯವನ್ನು ತೋರಿಸಲಿಲ್ಲ. ಎಷ್ಟೋ ಜನ ಬಾಬಾಗೆ ಕೈ ಮುಗಿದುಕೊಂಡೇ ನಿಂತು ಬಿಟ್ಟರು. ಭೈರವ ಬಾಬಾ ಮಂದಗತಿಯಲ್ಲಿ ನಡೆಯುತ್ತಾ ಕತ್ತಲಿನಲ್ಲಿ ಮರೆಯಾದರು.

ಬಾಬಾ ಮರೆಯಾದ ನಂತರ ನಾಟಕಕ್ಕೆ ರಂಗೇರಿತು. ವೆಂಕಮ್ಮ ತಮ್ಮ ನಡುವಿನ ಮಾಮೂಲಿ ಹೆಂಗಸಾದ್ದರಿಂದ ಜನ ತಮಗೆ ತೋಚಿದಂತೆ ಮಾತನಾಡಲಾರಂಭಿಸಿದರು. ಅವಳು ಬೆತ್ತಲೆಯಿದ್ದಾಳೆಂಬುದು ಗೊತ್ತಿದ್ದರೂ “ಬಾರೆಲೆ ಬೋಸೂಡಿ ಹೊರಗೆ…” ಎಂದು ಕೊಮ್ಮಣ್ಣ ಕರೆದ. ವೆಂಕಮ್ಮ ಹೊರಬರಲಿಲ್ಲ. ಗರ್ಭ ಗುಡಿಗೆ ನುಗ್ಗಿ ಅವಳನ್ನು ಎಳೆದು ತರುವ ಧೈರ್ಯ ಕೊಮ್ಮಣ್ಣನಿಗಿರಲಿಲ್ಲ. ನೆರೆದ ಜನರ ಮುಂದೆ “ಈವತ್ತಿಗೆ ಈಕಿ ನನ್ನ ಹೆಂಡತಿ ಅಲ್ಲ, ನಾನು ಆಕಿ ಗಂಡ ಅಲ್ಲ” ಎಂದು ಕೊಮ್ಮಣ್ಣ ಸಾರಿ, ನೆಲಕ್ಕೆ “ಹಾದರಗಿತ್ತಿ..” ಎಂದು ಕ್ಯಾಕರಿಸಿ ಉಗಿದು ಹೊರಟು ಹೋದ. ವೆಂಕಮ್ಮ ಹೊರಬರುತ್ತಾಳೇನೋ ಎಂದು ಸಾಕಷ್ಟು ಹೊತ್ತು ಕಾದಿದ್ದ ಜನರು ತಂತಮ್ಮ ಮನೆಗಳಿಗೆ ವಾಪಾಸಾದರು.

ವಿಷಯ ತಿಳಿದಿದ್ದೇ ವೆಂಕಮ್ಮನ ತಂದೆ-ತಾಯಿ ಮರುದಿನ ಬೆಳಿಗ್ಗೆ ಬಂದರು. ಬಸ್ಸಿಳಿದಿದ್ದೇ ಸೀದಾ ದುರ್ಗಮ್ಮನ ಗುಡಿಗೆ ಹೋದರು. ವೆಂಕಮ್ಮ ದುರ್ಗಮ್ಮನ ಸೀರೆಯನ್ನು ಸುತ್ತಿಕೊಂಡು ಕಂಬಕ್ಕೊರಗಿ ಕುಳಿತಿದ್ದಳು. ಅವಳಮ್ಮಗೆ ರೋಷ ಉಕ್ಕಿ ಬಂದಿದ್ದೇ ಮೈ ಕೈ ನೋಡದೆ ರಪರಪನೆ ಬಾರಿಸಿಬಿಟ್ಟರು. ಹೊಡೆದು ಹೊಡೆದು ಸುಸ್ತಾಗಿ ಅವಳ ಮುಂದೆಯೇ ಕುಳಿತು ಅಳಲಾರಂಭಿಸಿದರು. ಅವಳಪ್ಪ ಏನೊಂದೂ ಮಾತನಾಡದೆ ಕಂಬಕ್ಕೊರಗಿ ಕುಳಿತುಕೊಂಡಿದ್ದರು. ಅತ್ತಿದ್ದು ಮುಗಿದ ಮೇಲೆ ಅವಳಮ್ಮ “ಯಾಕೆ ವೆಂಕಿ ಇಂಥಾ ಹೇಲು ತಿನ್ನೋ ಕೆಲಸ ಮಾಡಿದಿ?” ಎಂದು ನೋವಿನಿಂದ ಕೇಳಿದರು. ವೆಂಕಮ್ಮ ಮಾತನಾಡದೆ ಸುಮ್ಮನೆ ಕುಳಿತಿದ್ದಳು. ಅವಳ ಮೌನಕ್ಕೆ ಕಿರಿಕಿರಿಗೊಂಡು “ಬೊಗಳೇ…” ಎಂದು ಘರ್ಜಿಸಿದರು. ವೆಂಕಮ್ಮ “ಹೆಂಗೋ ಏನೋ, ನಂಗೂ ಮಕ್ಕಳು ಆದರೆ ಸಾಕು ಅಂತ ಅನ್ನಿಸಿತ್ತವ್ವಾ…” ಎಂದು ಹೇಳಿದಳು. ಅವಳ ಮಾತಿಗೆ ಅವಳಮ್ಮ ಅಲ್ಲಾಡಿಬಿಟ್ಟಳು. ಮತ್ತೆ ಹೆಚ್ಚು ಹೊತ್ತು ಅಲ್ಲಿ ಕುಳಿತುಕೊಳ್ಳಲು ಇಷ್ಟವಿಲ್ಲದವರಂತೆ “ಬರ್ರಿ” ಎಂದು ಗಂಡನನ್ನು ಎಬ್ಬಿಸಿಕೊಂಡು ಹೋದಳು.

ಆ ದಿನ ವೆಂಕಮ್ಮ ಗುಡಿಯಲ್ಲಿಯೇ ಉಳಿದುಕೊಂಡಳು. ಹಸಿವೆಯಾದಾಗ ಹೋಟಲಿನ ಹಿತ್ತಲಿಗೆ ಹೋಗಿ ಮಾಣಿಯನ್ನು “ಒಂಚೂರು ಏನಾರ ತಿನ್ನಾಕೆ ಹಾಕಪ್ಪ…” ಎಂದು ಬೇಡಿಕೊಂಡಳು. ಯಜಮಾನನ ಕಣ್ಣು ತಪ್ಪಿಸಿ ಮಾಣಿ ತಿನ್ನಲು ಕೊಟ್ಟ. “ಹಿಂಗ್ಯಾಕೆ ಮಾಡಿದಿ ವೆಂಕಮ್ಮ. ಎಂಥಾ ಛಂದ ಸಂಸಾರ ಮಾಡಿಕೊಂಡಿದ್ಯಲ್ಲ…” ಎಂದು ಪೇಚಾಡಿದ. ವೆಂಕಮ್ಮ ಬಲಗೈಯಿಂದ ಹಣೆಯ ಮೇಲೆ ರೇಖೆಯನ್ನೆಳೆದು ತೋರಿಸಿದಳು. ಮತ್ತೆ ಹೆಚ್ಚಿಗೆ ಮಾತನಾಡದೆ ದುರ್ಗಮ್ಮನ ಗುಡಿಗೆ ಬಂದು ಅಡ್ಡಾದಳು. ಊರಿನ ಜನರು ಆ ಕಡೆ ಹಣಿಕೆ ಹಾಕಿ ಹಾಕಿ ನೋಡಿಕೊಂಡು ಹೋದರು. ರಾತ್ರಿ ಕತ್ತಲಾಗುತ್ತಿದ್ದಂತೆಯೇ ಹೆದರಿಕೆಯಾಗ ತೊಡಗಿತು. ನಾಳೆಗೆ ಹೇಗೆಂಬ ಚಿಂತೆ ಕಾಡತೊಡಗಿತು. ದುರ್ಗಮ್ಮಗೆ ಕೈ ಮುಗಿದು “ಕಾಪಾಡವ್ವ ತಾಯಿ. ತಪ್ಪಿಗೆ ಶಿಕ್ಷಾ ಮಾಡು, ಆದರೆ ದೀಪ ಆರಿಸಬ್ಯಾಡ” ಎಂದು ಬೇಡಿಕೊಂಡು ಮಲಗಿಕೊಂಡಳು.

ಬೆಳಕು ಹರಿಯುವದಕ್ಕೆ ಮುಂಚೆಯೇ ಯಾರೋ ವೆಂಕಮ್ಮನ ಮೈ ಅಲುಗಾಡಿಸಿದ್ದಕ್ಕೆ ಎಚ್ಚರವಾಯ್ತು. ಯಾರೋ ಗಂಡಸರು ಹತ್ತಿರಕ್ಕೆ ಕುಳಿತಿದ್ದರು. ಯಾರೆಂದು ಗೊತ್ತಾಗದೆ ಹೆದರಿಕೆಯಾಯ್ತು. ಆ ವ್ಯಕ್ತಿ ಅವಳ ಬಾಯಿಯ ಮೇಲೆ ಮೃದುವಾಗಿ ಬೆರಳಿಟ್ಟ. ಮೈಯ ವಾಸನೆಯಿಂದ ಭೈರವಿ ಬಾಬಾ ಎಂದು ಗೊತ್ತಾಯ್ತು. “ಮತ್ತಿನ್ನಾಕಪ್ಪ ಇಲ್ಲಿಗೆ ಬಂದಿ” ಎಂದು ಸಿಡುಕಿದಳು. ಮತ್ತೊಮ್ಮೆ ಮಾತನಾಡಬೇಡವೆಂಬಂತೆ ಅವಳ ಬಾಯಿಯ ಮೇಲೆ ಬೆರಳಿಟ್ಟ. ಈಗ ಮೈತುಂಬಾ ಕಾವಿಯ ಬಟ್ಟೆಯನ್ನು ಹೊದ್ದಿದ್ದ. ವೆಂಕಮ್ಮನನ್ನು ಎಬ್ಬಿಸಿಕೊಂಡು ಕೈ ಹಿಡಿದು ಎಳೆದುಕೊಂಡು ಹೋಗ ತೊಡಗಿದೆ. ವೆಂಕಮ್ಮ ಬಾಬಾ ತನ್ನನ್ನೆಲ್ಲಿ ಕರೆದುಕೊಂಡು ಹೋಗುತ್ತಾನೆಯೋ ಎಂದು ಭಯವಾಗಿ ಕೊಸರಾಡಿದಳು. ಬಾಬಾ ಬಿಡಲಿಲ್ಲ. “ಏನೂ ಆಗುವದಿಲ್ಲ, ಸುಮ್ಮನೆ ಬಾ” ಎನ್ನುವಂತೆ ಸಂಜ್ಞೆ ಮಾಡಿದ. ಸ್ವಲ್ಪ ಧೈರ್ಯ ಬಂದಂತಾಗಿ ವೆಂಕಮ್ಮ ಹಿಂಬಾಲಿಸಿದಳು.

ಬಾಬಾ ಸೀದಾ ಗಂಡಿ ನರಸಿಂಹಸ್ವಾಮಿಗೆ ಕರೆದುಕೊಂಡು ಬಂದ. ಗುಡ್ಡ ಸೀಳಿಕೊಂಡು ಅದರ ಮಧ್ಯದಲ್ಲಿ ನೀರು ಝುಳು ಝುಳು ಸದ್ದು ಮಾಡುತ್ತಾ ಹರಿಯುತ್ತಿತ್ತು. ಅಲ್ಲಿಗೆ ಬರುವ ವೇಳೆಗಾಗಲೇ ಬೆಳಕು ಹರಿದಿತ್ತು.

ಬಾಬಾ ವೆಂಕಮ್ಮನನ್ನು ನೀರಿದ ಮಧ್ಯದಲ್ಲಿರುವ ಒಂದು ಕಲ್ಲಿನ ಮೇಲೆ ಕೂಡಿಸಿದ. ಅವಳಿಂದ ಸ್ವಲ್ಪ ದೂರ ನಡೆದು ಹೋಗಿ, ಅವಳಿಗೆದುರಾಗಿ ಒಂಟಿ ಕಾಲಲ್ಲಿ ನಿಂತ. ತನ್ನ ಹೆಗಲಿಗೆ ಗಂಟು ಕಟ್ಟಿ ಹಾಕಿಕೊಂಡಿದ್ದ ಜೋಳಿಗೆಯನ್ನು ಮರಳೀನ ಮೇಲಿಟ್ಟ. ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಪ್ರಾರ್ಥಿಸಿದ. ನಂತರ ಒಂದೊಂದಾಗಿ ತನ್ನ ಬಟ್ಟೆಗಳನ್ನು ಬಿಚ್ಚಿ ದಡಕ್ಕೆ ಒಸೆದ. ಕೊನೆಗೆ ಕೌಪೀನ ಒಂದೇ ಉಳಿಯಿತು. ಅವಳೆಡೆಗೆ ಒಮ್ಮೆ ನೋಡಿ, ಆ ಕೌಪೀನವನ್ನು ಬಿಸಿಟು ಬೆತ್ತೆಲೆಯಾಗಿ ನಿಂತ. “ಇದೇನು ನಡಿಸಾನೆ ಈ ಬಾಬಾ ಮತ್ತೆ…” ಎಂದು ವೆಂಕಮ್ಮ ಮನಸ್ಸಿನಲ್ಲಿ ಜರಿದುಕೊಂಡಳು. ಕತ್ತಲಿನಲ್ಲಿ ಸ್ಪರ್ಶಕ್ಕೆ ಮಾತ್ರ ಸಿಕ್ಕಿದ್ದ ಅವನ ಬೆತ್ತಲೆಯನ್ನು ಬೆಳಕಿನಲ್ಲಿ ಮೆಚ್ಚುಗೆಯಿಂದ ನೋಡಿದಳು.

ಬಾಬಾ ದಡಕ್ಕೆ ಹೋಗಿ ತನ್ನ ಜೋಳಿಗೆಯ ಗಂಟನ್ನು ತಂದ. ನೀರಿನ ಮಧ್ಯದಲ್ಲಿ ನಿಂತು, ಮತ್ತೊಮ್ಮೆ ಕಣ್ಣು ಮುಚ್ಚಿ ಪ್ರಾರ್ಥಿಸಿ, ಗಂಟನ್ನು ಬಿಚ್ಚಿ, ಅದರಲ್ಲಿದ್ದದ್ದನ್ನೆಲ್ಲಾ ತನ್ನ ತಲೆಯ ಮೇಲೆ ಸುರುವಿಕೊಂಡ.

ವೆಂಕಮ್ಮ ಸಣ್ಣಗೆ ಕಿರುಚಿದಳು!

ದೊಡ್ಡ ದೊಡ್ಡ ಕಬ್ಬಿಣದ ಚೇಳುಗಳು ಮೈಮೇಲೆ ಜೇನು ಹುಳುಗಳು ಗೂಡನ್ನು ಮುತ್ತುವಂತೆ ಮುತ್ತಿದವು. ದೇಹದ ಭಾಗಗಳೊಂದನ್ನು ಬಿಡದಂತೆ ಅವನ ಮೈಯೆಲ್ಲಾ ಹಬ್ಬಿಕೊಂಡವು. ನೀರಿಗೆ ಬಿದ್ದ ಚೇಳುಗಳು ಈಜಿ ಮತ್ತೆ ಬಾಬಾನ ಮೈ ಏರಿದವು. ಬಾಬಾ ಕಣ್ಣು ಮುಚ್ಚಿಕೊಂಡಿದ್ದ. ಅವನ ಚರ್ಮದ ಬಣ್ಣ ಕಪ್ಪೆನ್ನುವಂತೆ ಚೇಳುಗಳು ಹರಿದಾಡಿದವು. ಅವುಗಳನ್ನು ರೇಗಿಸುವ ಉದ್ದೇಶದಿಂದ ಬಾಬಾ ನೀರಿನಲ್ಲಿ ಒಮ್ಮೆ ಮುಳುಗು ಹಾಕಿದ. ನೀರಿನ ಸ್ಪರ್ಶಕ್ಕೆ ಕೆರಳಿದ ಚೇಳುಗಳು ಅವನನ್ನು ಕಂಡಲ್ಲಿ ಕಚ್ಚಲಾರಂಭಿಸಿದವು. ಕೊಂಡಿ ಎತ್ತಿ ಎತ್ತಿ ಚುಚ್ಚುತ್ತಿರುವುದು ದೂರದಲ್ಲಿದ್ದ ವೆಂಕಮ್ಮನಿಗೂ ಕಾಣುತ್ತಿತ್ತು. ಅಪರೂಪಕ್ಕೆ ಚೇಳುಗಳು ವಿರಳವಾಗಿ ಚರ್ಮ ಕಾಣಿಸಿದರೆ, ಆ ಭಾಗ ಕೆಂಪಾಗಿ ಕಾಣುತ್ತಿತ್ತು. ದೊಡ್ಡದೊಂದು ನೇರಳೆಹಣ್ಣನ್ನು ಅಲ್ಲಲ್ಲಿ ಕಚ್ಚಿದಾಗ ಕೆಂಪನೆಯ ಒಳ ತಿರುಳು ಕಾಣುವಂತೆ ಬಾಬಾನ ಚರ್ಮ ಕಾಣಿಸುತ್ತಿತ್ತು.

ಹತ್ತು ನಿಮಿಷ ತುಟಿ ಪಿಟಕ್ಕೆನ್ನದೆ ನಿಂತ ಬಾಬ ನಂತರ ಒಂದೊಂದಾಗಿ ಆ ಚೇಳುಗಳನ್ನು ಮೈಯಿಂದ ಕಿತ್ತಿ ದೂರಕ್ಕೆ ಎಸೆದ. ಇಡೀ ಚೇಳುಗಳನ್ನು ತೆಗೆದು ಬಿಸಾಕಿದ ಮೇಲೆ ನದಿಯ ದಂಡೆಗೆ ನಡೆದ. ವೆಂಕಮ್ಮನನ್ನು ಕೈ ಸನ್ನೆ ಮಾಡಿ ಕರೆದ. ಹೆದರಿಕೆಯಿಂದಲೇ ಬಾಬಾನ ಬಳಿ ಹೋದಳು. ದಡದಲ್ಲಿದ್ದ ಗಿಡಗಳ ಗುಂಪಿನಲ್ಲಿ ನುಗ್ಗಿದ. ವೆಂಕಮ್ಮನೂ ಅವನ ಹಿಂದೆ ಹೋದಳು. ಅಲ್ಲಿ ಒಂದು ಮೂರೆಲೆಯ ಗಿಡವಿತ್ತು. ಅದರ ಎಲೆಗಳನ್ನು ಪರಪರನೆ ಕಿತ್ತಿ ಅವಳ ಉಡಿಗೆ ಹಾಕಿದ. ಮತ್ತೆ ಹಳ್ಳದ ದಡಕ್ಕೆ ಬಂದು, ಮರಳಿನ ಮೇಲೆ ಬೆರಳಿಂದ ಚೇಳಿನ ಮಂತ್ರವನ್ನು ಬರೆದ. ವೆಂಕಮ್ಮ ಅದನ್ನು ಗಟ್ಟಿಯಾಗಿ ಓದಿದಳು.

ಒಂದೆರಡು ಎಲೆಗಳನ್ನು ಕೈಯಲ್ಲಿ ಹಾಕಿ ತಿಕ್ಕಿ, ರಸವನ್ನು ಮೈಗೆ ಸುರುವಿಕೊಂಡು, ತಿಕ್ಕಿದ ಸೊಪ್ಪಿನಿಂದ ಮೈ ತೀಡಿಕೊಂಡ. ಮಂತ್ರವನ್ನು ಪಠಿಸುತ್ತಾ ಹಳ್ಳದ ನೀರನ್ನು ಬಾಯಲ್ಲಿ ಗಲಗಲಿಸಿ ಉಗುಳಿದ. ವೆಂಕಮ್ಮ ಅಂಜುತ್ತಂಜುತ್ತಲೇ ಉಳಿದ ಸೊಪ್ಪಿನಿಂದ ರಸ ಹಿಂಡಿ ಅವನ ಇಡೀ ಮೈಗೆ ಹಚ್ಚಿದಳು. ಮರಳ ಮೇಲೆ ಬರೆದ ಮಂತ್ರವನ್ನು ಓದುತ್ತಾ, ನೀರನ್ನು ಬಾಯಲ್ಲಿ ಹಾಕಿ ಗಲಗಲಿಸಿ, ಉಗಿದಳು. ನೀರು ಉಗಿದ ಮರಳು ಹಸಿರಾಗತೊಡಗಿತು.

ಒಂದು ಗಂಟೆಯ ನಂತರ ಬಾಬಾನ ಮೈಯ ಬಣ್ಣ ನಿಜ ವರ್ಣಕ್ಕೆ ತಿರುಗಿತು. ಎದ್ದು ಕುಳಿತ ಬಾಬಾ ಸ್ವಲ್ಪ ಹೊತ್ತು ಧ್ಯಾನಿಸಿದ. ನಿಧಾನಕ್ಕೆ ದಡದ ಮೇಲಿದ್ದ ತನ್ನ ವಸ್ತ್ರಗಳನ್ನು ಹಾಕಿಕೊಂಡ. ಜೋಳಿಗೆಯನ್ನು ಜಾಡಿಸಿದ. ಅದಕ್ಕೆ ಇನ್ನೂ ಅಂಟಿದ್ದ ಒಂದೆರಡು ಚೇಳುಗಳು ದೂರಕ್ಕೆ ಬಿದ್ದವು. ವೆಂಕಮ್ಮನ ಬಳಿ ಬಂದು ನಿಂತ. ವೆಂಕಮ್ಮನೂ ಎದ್ದು ನಿಂತಳು. ಅವಳ ಕಾಲಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿದ. ಅದನ್ನು ನಿರೀಕ್ಷಿಸದ ವೆಂಕಮ್ಮ ಎರಡು ಹೆಜ್ಜೆ ಹಿಂದಕ್ಕೆ ಸರಿದಳು. ಮೇಲಕ್ಕೆದ್ದ ಬಾಬಾ ಅವಳ ಬಳಿ ಬಂದು, ಅವಳ ಎರಡೂ ಕೈಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ತನ್ನ ಕೆನ್ನೆಗೆ ರಪರಪನೆ ಹೊಡೆಸಿಕೊಂಡ. ಅವನ ಕಣ್ಣಲ್ಲಿ ತೆಳುವಾಗಿ ನೀರಿತ್ತು. ಮತ್ತೆ ಹೆಚ್ಚು ಸಮಯ ನಿಲ್ಲದೆ ಅಲ್ಲಿಂದ ಹೊರಟು ಹೋದ. ಮತ್ತೆ ಅವನೆಂದೂ ವೆಂಕಮ್ಮನಿಗೆ ಕಾಣಿಸಿಕೊಳ್ಳಲಿಲ್ಲ.

ವೆಂಕಮ್ಮನ ಬದುಕಿಗೆ ದಾರಿಯಾಯ್ತು. ಬಾಬಾ ಮರೆಯಾದ ಮರುದಿನವೇ ಅವಳ ಚೇಳಿನ ಔಷದಿಯ ಮಹಾತ್ಮೆ ಜನರಿಗೆ ಗೊತ್ತಾಗುವಂತಹ ಪ್ರಸಂಗವೊಂದು ನಡೆಯಿತು. ಸ್ಟೀಲ್ ಸಾಮಾನಿನ ಅಂಗಡಿಯ ಲಕ್ಷ್ಮೀಚಂದ ಲಾಲನ ಏಕೈಕ ಪುತ್ರ ಏಳು ವರ್ಷದ ಪಂಕಜನಿಗೆ ಚೇಳು ಕಚ್ಚಿತು. ಅವನ ಪುಟ್ಟಮ್ಮ ಷೂನಲ್ಲಿ ಕೆಂಪು ಚೇಳೊಂದು ಅಡಗಿ ಕುಳಿತಿತ್ತು. ಆ ದಿನ ಶಾಲೆಗೆ ಹೋಗುವದಿಲ್ಲವೆಂದು ಅವನದು ಒಂದೇ ಹಠ. ಹೊಟ್ಟೆ ನೋವೆಂಬ ಕ್ಷುಲ್ಲಕ ಕಾರಣ ಕೊಟ್ಟ. ಕಮಲಾ ಬೇನ್‌ಳಿಗೋ ತನ್ನ ಗಂಡನಂತೆ ಇವನೂ ಎಲ್ಲಿ ಹೆಬ್ಬಟ್ಟಿನವನಾಗುತ್ತಾನೋ ಎಂಬ ಅಸಹಾಯಕತೆ. ಎರಡು ಬಾರಿಸಿ ಅವನನ್ನು ಶಾಲೆಗೆ ದೊಬ್ಬಿದಳು. ಮನೆಯಿಂದ ಹತ್ತು ಹೆಜ್ಜೆ ಇಡುವದರಲ್ಲಿ ಹುಡುಗ ಷೂ ಕಚ್ಚುತ್ತೆ ಅಂತ ಹಠ ಶುರು ಮಾಡಿದ. ಕಮಲಾ ಬೇನ್‌ಳಿಗೆ ಮತ್ತಷ್ಟು ಸಿಟ್ಟು ಬಂತು. ಇನ್ನೆರಡು ಬಾರಿಸಿದಳು. “ಇಸ್ಕೂಲಿಗೆ ಹೋಗೋದಕ್ಕೆ ಇಲ್ಲದ ನೆಪ ಮಾಡಬೇಡ…” ಎಂದು ಹೊಡೆಯುತ್ತಲೇ ಶಾಲೆಯತನಕ ಕರೆದುಕೊಂಡು ಹೋಗಿ, ಮಾಸ್ತರರಿಗೂ ಅವನ ಹಠವನ್ನು ಹೇಳಿ ಏನೇ ಮಾಡಿದರೂ ಮನೆಗೆ ಕಳುಹಿಸಬಾರದೆಂದು ತಾಕೀತು ಮಾಡಿ ಬಂದಳು. ಹುಡುಗ ಅಳುತ್ತಲೇ ಕುಳಿತುಕೊಂಡು. ಷೂನ ಕಗ್ಗಂಟನ್ನು ಬಿಚ್ಚಲು ಅವನಿಗೆ ತಿಳಿಯದು. ಚಪ್ಪಲಿಯನ್ನು ಹಾಕಿಯೇ ಗೊತ್ತಿಲ್ಲದ ಉಳಿದ ಹುಡುಗರಿಗೆ ಷೂ ಒಂದು ದೇವಲೋಕದ ಅಪರೂಪದ ವಸ್ತುವಾದ್ದರಿಂದ ಮುಟ್ಟಲೂ ಅಂಜಿಕೆ. ಅರ್ಧ ಗಂಟೆಯೊಳಗೆ ಎಚ್ಚರ ತಪ್ಪಿ ಬಿದ್ದ. ಮೈ ಬಣ್ಣ ಕಪ್ಪಾಗಲಾರಂಭಿಸಿತು. ಮಾಸ್ತರರಿಗೆ ಹೆದರಿಕೆಯಾಗಿ ಮನೆಗೆ ಎತ್ತಿಕೊಂಡು ಹೋದರು. ಅವನಮ್ಮ ಷೂ ಬಿಚ್ಚಿದಾಗ ಚಿಕ್ಕ ಚೇಳು ಹೊರಬಂತು. ಮಗುವಿನ ಪಾದಕ್ಕೆಲ್ಲಾ ಕಚ್ಚಿ ಬಿಟ್ಟಿತ್ತು. ಬಾಯಿ ಬಡಿದುಕೊಂಡು ಅಳಲಾರಂಭಿಸಿದಳು. ಸೇಠ್‌ಜಿ ಸಾಮಾನು ತರಲು ಬಳ್ಳಾರಿಗೆ ಹೋಗಿದ್ದ.

ಸುದ್ದಿ ವೆಂಕಮ್ಮನ ಕಿವಿ ತಲುಪಿದ್ದೇ ದೇವರಿಗೆ ಕೈ ಮುಗಿದು, ಸೊಪ್ಪನ್ನು ಸಂಚಿಯಲ್ಲಿಟ್ಟುಕೊಂಡು ಸೇಠ್‌ಜಿ ಮನೆಗೆ ಬಂದಳು. ಜನರಾಗಲೇ ಕಡಿದ ಜಾಗಕ್ಕೆ ಸುಣ್ಣ ಹಚ್ಚುವುದು, ಅರಿಷಿಣ ಹಚ್ಚುವದನ್ನು ನಡೆಸಿದ್ದರು. ಹುಡುಗ ಉಳಿಯುವದಿಲ್ಲವೆಂಬ ಗುಸುಗುಸು ಆಗಲೇ ಶುರುವಾಗಿತ್ತು. ಗುಂಪಿನ ನಡುವೆ ವೆಂಕಮ್ಮ ಬಂದಿದ್ದು ಜನರಿಗೆ ಇಷ್ಟವಾಗಲಿಲ್ಲ. “ಇಲ್ಲಿ ಯಾವ ಮಿಂಡನ್ನು ಹುಡುಕಿಕೊಂಡು ಬಂದಾಳೋ…” ಅಂತ ಯಾರೋ ಪಡ್ಡೆ ಹುಡುಗ ಅಂದಿದ್ದಕ್ಕೆ ಜನರೆಲ್ಲಾ ನಕ್ಕರು. ವೆಂಕಮ್ಮ ಮಾತ್ರ ಅವೊಂದನ್ನೂ ಗಮನಿಸದೆ ಸೀದಾ ಸೇಠ್‌ಜಿ ಹೆಂಡತಿಯ ಬಳಿ ಹೋಗಿ “ಔಷಧ ಮಾಡ್ಲೇನಮ್ಮ” ಎಂದು ಬೇಡಿಕೊಂಡಳು. ಕಮಲಾ ಬೇನ್‌ಗೆ ಯಾರಾದರೂ ಸರಿ, ಮಗುವನ್ನು ಬದುಕಿಸಿಕೊಟ್ಟರೆ ಸಾಕಿತ್ತು. ಒಪ್ಪಿಕೊಂಡಳು.

ವೆಂಕಮ್ಮಗೆ ಮೊದಲ ಪ್ರಯೋಗವದು. ಒಳಗೊಳಗೇ ಹೆದರಿಕೆಯಿತ್ತು. “ನೀನೇ ಕಾಪಾಡಬೇಕು ಬಾಬಾ” ಎಂದು ಮನಸ್ಸಿನಲ್ಲಿ ಧ್ಯಾನಿಸಿ ಸೊಪ್ಪು ತಿಕ್ಕಿದಳು. ಔಷದಿ ಹಚ್ಚುವಾಗ ಕೈ ನಡುಗುತ್ತಿತ್ತು. ಕೂಸಿನ ಪುಟ್ಟ ಕಾಲನ್ನು ತೊಡೆಯ ಮೇಲಿಟ್ಟುಕೊಂಡು ಗಂಧವನ್ನು ಸವರುವಂತೆ ಮೆತ್ತಗೆ ಸೊಪ್ಪಿನ ಮುದ್ದೆಯನ್ನು ಹಚ್ಚಿದಳು. ಮಂತ್ರ ಹೇಳುತ್ತಾ ನೀರನ್ನು ಹರಿವಾಣದಲ್ಲಿ ಉಗುಳಲಾರಂಭಿಸಿದಳು. ಕೇವಲ ಒಂದು ಗಂಟೆಯಲ್ಲಿ ಮಗು ಎದ್ದು ಕುಳಿತಿತು. ಕಮಲಾ ಬೇನ್‌ಗೆ ಕೇಳಿ ಎಲೆ, ಅಡಿಕೆ ಮತ್ತು ಬಾಳೆಹಣ್ಣನ್ನು ತೆಗೆದುಕೊಂಡಳು. ಮನೆಗೆ ವಾಪಾಸಾಗುವಾಗ ಜನರು ಸಪ್ಪಳವಿಲ್ಲದಂತೆ ದೂರ ಸರಿದು ದಾರಿ ಮಾಡಿಕೊಟ್ಟರು. ದುರ್ಗಮ್ಮ ತಾಯಿಯ ಸೀರೆಯನ್ನು ಉಟ್ಟುಕೊಂಡು ಹೋಗುತ್ತಿದ್ದ ವೆಂಕಮ್ಮ, ಸಾಕ್ಷಾತ್ ದೇವಿಯಂತೆ ಅವರ ಕಣ್ಣಿಗೆ ಕಂಡಳು.

ಸಾಯಂಕಾಲ ಸೇಠ್‌ಜಿ ವೆಂಕಮ್ಮನನ್ನು ಹುಡುಕಿಕೊಂಡು ದುರ್ಗಮ್ಮನ ಗುಡಿಗೆ ಬಂದ. ಗವ್ವೆನ್ನುವ ಕತ್ತಲೆಯಲ್ಲಿ ವೆಂಕಮ್ಮ ಕುಳಿತಿದ್ದಳು. ಅವಳ ಮುಂದೆ ಮಂಡೆಯೂರಿ ಕುಳಿತ ಸೇಠ್‌ಜಿ, ಅವಳ ಎರಡು ಕೈಗಳನ್ನು ಹಿಡಿದುಕೊಂಡು ಅಳಲಾರಂಭಿಸಿದ. “ಇರ್‍ಲಿ ಬಿಡಪ್ಪ, ಸಮಾಧಾನ ಮಾಡ್ಕೋ…” ಎಂದು ವೆಂಕಮ್ಮ ಹೇಳಿದರೂ ಸೇಠ್‌ಜೀಯ ಅಳು ನಿಲ್ಲಲಿಲ್ಲ. “ಇರೋದು ಒಬ್ಬನೇ ಮಗ… ಅವನೂ ಭಗವಾನ್ ಹತ್ತಿರ ಹೋಗಿದ್ರಿ ನನ್ನ ಗತಿ ಏನಿತ್ತು…” ಎಂದು ಮತ್ತಿಷ್ಟು ಕಣ್ಣೀರು ಸುರಿಸಿದ. ಅವನ ಭಾವೋದ್ವೇಗ ಮುಗಿಯುವ ತನಕ ಮತ್ತೊಂದು ಮಾತಾಡದೆ ಸುಮ್ಮನೆ ಕುಳಿತಳು. ಸಮಾಧಾನವಾದ ಮೇಲೆ ಸೇಠ್‌ಜಿ ತನ್ನ ಜೇಬಿನಿಂದ ನೂರು ರೂಪಾಯಿಯ ನೋಟಿನ ಎರಡು ಕಟ್ಟನ್ನು ಹೊರತೆಗೆದು ಅವಳ ಮುಂದಿಟ್ಟ. ತನ್ನ ಕೈ ಬೆರಳಿನ ಅಷ್ಟೂ ಉಂಗರಗಳನ್ನು ತೆಗೆದು ಆ ನೋಟಿನ ಕಂತೆಯ ಮೇಲಿಟ್ಟ. “ಇಲ್ಲ ಅನ್ನದಂಗೆ ತೊಗೋ ವೆಂಕಮ್ಮ” ಎಂದು ಬೇಡಿಕೊಂಡ. ಗುಡಿಯೊಳಗಿನ ನಂದಾದೀಪದ ಬೆಳಕು ಆ ಉಂಗುರಗಳ ಮೇಲೆ ಬಿದ್ದು ಅವು ಫಳ್ ಫಳ್ ಹೊಳೆದವು. ವೆಂಕಮ್ಮ ಹಣ ಮತ್ತು ಬಂಗಾರವನ್ನು ನಯವಾಗಿ ನಿರಾಕರಿಸಿದಳು. “ಔಷಧ ಮಾಡಿದ್ದಕ್ಕೆ ರೊಕ್ಕ ತೊಗೊಂಡ್ರೆ ಅದರ ಶಕ್ತಿ ಕಡಿಮಿ ಆಗ್ತೈತಪ್ಪ. ಮುಂದೆ ಯಾರಿಗನ್ನಾ ಚೇಳು ಕಚ್ಚಿದ್ರೆ ಔಷಧ ಮಾಡಬೇಕೋ ಬ್ಯಾಡೋ?” ಎಂದು ತಿಳಿ ಹೇಳಿದಳು. ಸೇಠ್‌ಜಿ ಮನಸ್ಸಿಲ್ಲದ ಮನಸ್ಸಿನಿಂದ ಹಣ ಮತ್ತು ಬಂಗಾರವನ್ನು ವಾಪಾಸು ತೆಗೆದುಕೊಂಡ. ಆದರೆ ಅವಳ ಸಹಾಯದ ಋಣ ತೀರಿಸಿಕೊಳ್ಳದೆ ಬದುಕಲು ಹೇಗೆ ಸಾಧ್ಯ? ಗುಡಿಯ ಹತ್ತಿರದಲ್ಲಿಯೇ ಗುಡಿಸಲೊಂದನ್ನು ಕಟ್ಟಿಕೊಟ್ಟ. “ನಿಂಗೆ ಯಾವಾಗೇ ಕಷ್ಟ ಆದರೂ ನನ್ನ ಮರಿಬೇಡ ವೆಂಕಮ್ಮ” ಎಂದು ಕಳಕಳೆಯಿಂದ ಬೇಡಿಕೊಂಡ.

ವೆಂಕಮ್ಮನ ಬದುಕು ನಿರಾತಂಕವಾಗಿ ಸಾಗಲಾರಂಭಿಸಿತು. ಪಕ್ಕದ ಹಳ್ಳಿಗಳವರೂ ಅವಳನ್ನು ಕರೆದುಕೊಂಡು ಹೋಗುತ್ತಿದ್ದರು. ದಿನದಲ್ಲಿ ಏನಿಲ್ಲವೆಂದರೂ ಒಂದೆರಡು ಚೇಳಿನ ಸಂಗತಿಗಳು ಬಂದೇ ಬರುತ್ತಿದ್ದವು. ಕೆಲವೇ ತಿಂಗಳುಗಳಲ್ಲಿ ಅವಳ ಹೆಸರು “ಚೇಳಿನ ವೆಂಕಮ್ಮ” ಎಂದಾಯ್ತು. ಚೇಳಿನ ಔಷಧಿಗೆ ಹಣ ತೆಗೆದುಕೊಳ್ಳುತ್ತಿರಲಿಲ್ಲವಾದ್ದರಿಂದ ಜನರು ಅವಳಿಗೆ ಯಾವುದೋ ರೂಪದಲ್ಲಿ ಸಹಾಯ ಮಾಡುತ್ತಿದ್ದರು. ಮತ್ತೊಬ್ಬರಿಗೆ ದೇಹಿ ಎನ್ನದಂತೆ ಬದುಕಲು ಸಾಧ್ಯವಾಯ್ತು.

ಪ್ರತಿ ಹುಣ್ಣಿಮೆಗೊಮ್ಮೆ ವೆಂಕಮ್ಮ ಬೆಳಗಿನ ಜಾವವೇ ಎದ್ದು, ಇನ್ನೂ ಕತ್ತಲಿದೆಯೆನ್ನುವಾಗಲೇ ಗಂಡಿ ನರಸಿಂಹಸ್ವಾಮಿಗೆ ಹೋಗುತ್ತಿದ್ದಳು. ಅವಳು ಗಂಡಿಯನ್ನು ಮುಟ್ಟುವ ವೇಳೆಗಾಗಲೇ ಬೆಳಕಾಗಿ ಬಿಟ್ಟಿರುತ್ತಿತ್ತು. ಅಡವಿಯಲ್ಲಿ ಎಲ್ಲೆಲ್ಲಿ ಔಷಧಿಯ ಗಿಡಗಳಿವೆಯೆಂದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ತಿಂಗಳಿಗೆ ಸಾಕಾಗುವಷ್ಟು ಸೊಪ್ಪನ್ನು ಹರಿದು ತನ್ನ ಸಂಚಿಯಲ್ಲಿ ತುಂಬಿ ಕೊಳ್ಳುತ್ತಿದ್ದಳು. ಯಾರೂ ಹಿಂಬಾಲಿಸಿ ಬಂದಿಲ್ಲವೆಂಬುದನು ಮತ್ತೆ ಮತ್ತೆ ಧೃಡ ಪಡಿಸಿಕೊಳ್ಳುತ್ತಿದ್ದಳು. ವಾಪಾಸು ಬರುವಾಗ ಹಳ್ಳದಲ್ಲಿ ಸ್ನಾನ ಮಾಡಿ, ಒದ್ದಿ ಮೈಯಲ್ಲಿ ನರಸಿಂಹಸ್ವಾಮಿ ಗುಡಿಗೆ ಹೋಗಿ ನಮಸ್ಕಾರ ಹಾಕಿ, ಪ್ರಾಂಗಣದಲ್ಲಿರುವ ಕೋತಿಗಳಿಗೆ ತಿನ್ನಲು ಶೇಂಗಾ ಕೊಟ್ಟು ಬರುತ್ತಿದ್ದಳು. ಹೋಗುವಾಗ ಕದ್ದು ಮುಚ್ಚಿ ಹೋಗುತ್ತಿದ್ದಳೇ ಹೊರತು ಬರುವಾಗ ಯಾರ ಮುಲಾಜಿ? ಅವಳನ್ನು ಎದುರುಗೊಂಡವರು “ಮದ್ದು ತರಲಿಕ್ಕೆ ಹೋಗಿದ್ದೀಯೇನು ವೆಂಕಮ್ಮ” ಎಂದು ಸಹಜವಾಗಿ ಮಾತನಾಡಿಸುತ್ತಿದ್ದರು. ಕಾಡನ್ನು ಸುತ್ತುವದರಿಂದ ಚೇಳಿನ ಔಷಧದ ಜೊತೆಗೆ ಇತರ ವೈದ್ಯಕೀಯ ಸಸ್ಯಗಳು ಅವಳಿಗೆ ಪರಿಚಯವಾದವು.

ಕಣವೆಳ್ಳಿಯ ತಾಯಕ್ಕನಿಗೆ ಹೇಗಾದರೂ ಮಾಡಿ ಈ ಮದ್ದಿನ ಗುಟ್ಟನ್ನು ತಿಳಿದುಕೊಳ್ಳಬೇಕೆಂಬ ದುರಾಸೆಯಿತ್ತು. ತಾಯಕ್ಕ ಅವರಿವರ ಮನೆಗಳಲ್ಲಿ ಕಸ ಮುಸರೆ ಮಾಡುವವಳು. ಕೈ ಶುದ್ಧ ಇಲ್ಲ. ಆಗೊಮ್ಮೆ ಈಗೊಮ್ಮೆ ಅಲ್ಲಿ ಇಲ್ಲಿ ಇಟ್ಟ ಹಣವನ್ನು ಸದ್ದಿಲ್ಲದೆ ಹೆಗರಿಸಿ ಬಿಡುತ್ತಿದ್ದಳು. ಮನೆಯವರೇನಾದರೂ ಅವಳ ಮೇಲೆ ಅನುಮಾನ ಮಾಡಿ ರಾಗವೆಳೆದರೆ ಮುಲಾಜಿಲ್ಲದೆ ಎದುರು ಮಾತನಾಡಿ ಅವರ ಬಾಯಿ ಮುಚ್ಚಿಸಿಬಿಡುವ ಗೈಯಾಳಿ. ಒಮ್ಮೆ ಅವಳಿಗೂ ಕೆಟ್ಟ ಗಳಿಗೆಯೊಂದು ಕೂಡಿ ಬಂತು. ಗೋಪಣ್ಣನ ಮನೆಯಲ್ಲಿ ದೇವರಿಗೆ ತಪ್ಪು ಕಾಣಿಕೆಯನ್ನು ಹಾಕಿಟ್ಟ ಸೇರನ್ನು ಅಟ್ಟದ ಮೇಲೆ ಇಟ್ಟಿರುತ್ತಿದ್ದರು. ಒಮ್ಮೆ ಮನೆಯವರೆಲ್ಲಾ ಯಾವುದೋ ಕೆಲಸದಲ್ಲಿ ಮಗ್ನರಾಗಿರುವಾಗ ತಾಯಕ್ಕ ಮೆಲ್ಲಗೆ ಅಟ್ಟದ ಮೇಲಿದ್ದ ಸೇರಿಗೆ ಕಾಲಿನ ಹೆಬ್ಬರಳಿನ ಮೇಲೆ ನಿಂತು ಕೈ ಹಾಕಿದಳು. ಒಳಗಿದ್ದ ಚೇಳು ಕಟುಂ ಎಂದು ಕಚ್ಚಿ ಬಿಟ್ಟಿತು. ಚೇಳು ಕಚ್ಚಿದ ತಕ್ಷಣ ಕೈ ಕೊಡವಿದ್ದರಿಂದ ಸೇರು ಸದ್ದು ಮಾಡಿ ನೆಲದ ಮೇಲೆ ಬಿದ್ದು ಚಿಲ್ಲರೆ ಹಣವೆಲ್ಲಾ ಚೆಲ್ಲಾಪಿಲ್ಲಿಯಾಗಿತ್ತು. ಮನೆಯವರೆಲ್ಲಾ ಜಮಾಯಿಸಿದ್ದರು. ಚೇಳು ಕಚ್ಚಿದ ಸಂಕಟ ಒಂದು ಕಡೆ, ಕಳ್ಳತನದಲ್ಲಿ ಸಿಕ್ಕಿ ಬಿದ್ದ ಸಂಕಟ ಇನ್ನೊಂದು ಕಡೆ. ಮಾತನಾಡದೆ ಕಸಬರಿಗೆಯೊಗೆದು ವೆಂಕಮ್ಮನ ಮನೆಗೆ ಬಂದಿದ್ದಳು. “ದೇವರ ರೊಕ್ಕಾನೆ ತುಡುಗು ಮಾಡಲಿಕ್ಕೆ ಹೋದರೆ ಸುಮ್ಮನೆ ಬಿಡ್ತಾನೇನೆ?” ಎಂದು ವೆಂಕಮ್ಮ ಕೆಣಕಿದ್ದಳು. “ಆ ಗೋಪಣ್ಣ ಮಾಡೋ ಘನಕಾರ್ಯೇವು ಏನು ಅಂತ ಗೊತ್ತೈತೇಳಬೆ. ವರ್ಷಕ್ಕೊಂದು ಸಾರಿ ಹಂಪಿಗೋಗಿ ಅದೋಟೂ ರೊಕ್ಕಾನ ತುಂಗಮ್ಮನ ಉಡಿನಾಗೆ ಚೆಲ್ಲಿ ಬರ್ತಾನೆ. ನಾನು ನಾಕು ಕಾಸು ತೊಗಂಡ್ರೆ ಏನಾದೀತು ಬಿಡು” ಎಂದು ತಾಯಕ್ಕ ಸಮಜಾಯಿಷಿ ಕೊಟ್ಟಳು. ಒಂದು ಗಂಟೆಯಲ್ಲಿಯೇ ವಿಷವೆಲ್ಲಾ ಇಳಿದಾಗ ತಾಯಕ್ಕಗೆ ಅಚ್ಚರಿಯಾಗಿತ್ತು. “ಅದೇನು ಸೊಪ್ಪು ನಂಗೂ ಚೂರು ತೋರಿಸಿ ಕೊಡಬೇ…” ಎಂದು ಬೇಡಿಕೊಂಡಳು. ಹಾವು ತುಳಿದಂತೆ ಬೆಚ್ಚಿ ಬಿದ್ದ ವೆಂಕಮ್ಮ “ಅಯ್ಯಯ್ಯವ್ವ, ನಿಂಗೆ ಹೇಳಿಕೊಟ್ಟು ನಾನೇನು ಮಣ್ಣು ತಿನ್ನಲೇನೇ?” ಎಂದು ದಬಾಯಿಸಿದ್ದಳು.

ಹುಣ್ಣಿಮೆಗೊಮ್ಮೆ ವೆಂಕಮ್ಮ ಗಂಡಿ ನರಸಿಂಹಸ್ವಾಮಿಗೆ ಹೋಗುವ ವಿಷಯ ಊರಲ್ಲಿ ಅಂತಹ ಗುಟ್ಟಿನ ಸಂಗತಿಯೇನೂ ಆಗಿರಲಿಲ್ಲ. ಒಂದು ಸಲ ತಾಯಕ್ಕ ಬೆಳಗಾಗುವದಕ್ಕೆ ಮುಂಚೆಯೇ ಎದ್ದು ವೆಂಕಮ್ಮನ ಮನೆಯ ಮುಂದಿನ ಹುಣಸೆ ಗಿಡದ ಹಿಂದೆ ಬಚ್ಚಿಟ್ಟು ಕೊಂಡಿದ್ದಳು. ವೆಂಕಮ್ಮ ಮನೆಯಿಂದ ಹೊರಬಿದ್ದಿದ್ದನ್ನು ನೋಡಿದ್ದೇ ಗೊತ್ತಾಗದಂತೆ ಹಿಂಬಾಲಿಸಿದಳು. ಆದರೆ ಚೇಳಿನ ನಡಿಗೆಯ ಸದ್ದನ್ನೇ ಪತ್ತೆ ಹಚ್ಚುವ ವೆಂಕಮ್ಮನಿಗೆ ಇದು ಗೊತ್ತಾಗುವದಿಲ್ಲವೆ? “ಮಾಡ್ತೀನಿ ಈ ಲೌಡಿಗೆ” ಎಂದು ನಿಶ್ಚಯಿಸಿಕೊಂಡಳು. ತಾಯಕ್ಕ ಹಿಂಬಾಲಿಸಿ ಬರುತ್ತಿರುವುದು ತನಗೆ ಗೊತ್ತೇ ಇಲ್ಲವೆಂಬಂತೆ ನಟಿಸಿ, ಸೀದಾ ಯಾವುದೋ ಗಿಡದ ಬಳಿ ಹೋಗಿ ಎಲೆಗಳನ್ನು ಹರಿದುಕೊಂಡು ವಾಪಾಸು ಬಂದಳು. ಗುಟ್ಟು ಗೊತ್ತಾದ ಖುಷಿಯಲ್ಲಿ ತಾಯಕ್ಕ ಚೀಲದ ತುಂಬ ತೊಪ್ಪಲು ಹರಿದುಕೊಂಡು ಬಂದಳು.

ಹಳ್ಳಿಗೆ ವಾಪಾಸಾದ ಮೇಲೆ ತಾಯಕ್ಕ ತನಗೂ ಚೇಳಿನ ಔಷಧಿ ಗೊತ್ತಿರುವದೆಂದು ಊರೆಲ್ಲಾ ಸಾರಿಕೊಂಡು ಬಂದಳು. ಚೇಳು ಕಡಿಸಿಗೊಳ್ಳುವವರಿಗೆ ಆ ಊರಲ್ಲಿ ಬರವೆ? ದಿನವೊಂದು ಕಳೆಯುವದರಲ್ಲಿ ಪ್ರಸಂಗ ಬಂತು. ಪಿಂಜಾರರ ಶಾಬೇಷಿ ಬೆಳಗಿನ ಹೊತ್ತಿಗೆ ಹಳ್ಳಕ್ಕೆ ಶೌಚ ಕಾರ್ಯಕ್ಕೆ ಹೋದಾಗ ಹಸಿರು ಚೇಳೊಂದು ಸೀದಾ ಕುಂಡೆಗೆ ಕೊಂಡಿ ಹಾಕಿತ್ತು. ವೆಂಕಮ್ಮ ಪಕ್ಕದೂರಿಗೆ ಹೋಗಿದ್ದರಿಂದ ತಾಯಕ್ಕನನ್ನೇ ಕರೆದರು. ತಾಯಕ್ಕ “ಏನೂ ಹೆದರಿಕೊಳ್ಳಬೇಡರಿ” ಎಂದು ಮನೆಯವರಿಗೆಲ್ಲಾ ಧೈರ್ಯ ಹೇಳಿ ಸೊಪ್ಪನ್ನು ಅರಿಯಲಾರಂಭಿಸಿದಳು. ಶಾಬೇಷಿ ಕಣ್ಣೆದುರಿಗೇ ಧೋತ್ರ ಬಿಚ್ಚಿ ಮಕಾಡೆ ಮಲಗಿದಾಗ ತಾಯಕ್ಕನಿಗೆ ಹೇಗೊ ಹೇಗೋ ಆಯಿತು. ಮೊದಲನೆ ಗಿರಾಕಿಗೆ ಚೇಳು ಬೇರೆಲ್ಲಿಯಾದರೂ ಕಚ್ಚಬಾರದಿತ್ತೇ ಎಂದು ವಿಷಾದಿಸಿದಳು. ಆದರೂ ಸಹಿಸಿಕೊಂಡು ಸೊಪ್ಪನ್ನು ಹಚ್ಚಿದಳು. ಪರಾಯ ಗಂಡಸಿನ ಕುಂಡೆಯನ್ನು ಸವರಿದ್ದು ಗಂಡನಿಗೆ ಗೊತ್ತಾದರೆ ಸುಮ್ಮನಿರುತ್ತಾನೆಯೆ? ಎಂದು ಹೆದರಿಕೆಯೂ ಆಯ್ತು. ತನ್ನ ಮೊದಲ ಮದ್ದಿನ ಪ್ರಯೋಗದ ಫಲಾಫಲವನ್ನು ಆತಂಕದಿಂದ ನಿರೀಕ್ಷಿಸುತ್ತಾ ಕುಳಿತಳು. ಹತ್ತು ನಿಮಿಷಕ್ಕೆ ವಿಷ ಇಳಿಯುವದಿರಲಿ, ಶಾಬೇಷಿ ಉರಿ ಉರಿಯೆಂದು ಬೊಬ್ಬೆ ಹಾಕಲಾರಂಭಿಸಿದ. “ಇದೇನು ತಾಯಕ್ಕ?” ಎಂದು ಜನರು ತಾಯಕ್ಕನನ್ನೂ ಕೇಳುವಂತೂ ಇರಲಿಲ್ಲ. ಅವಳೂ ಸೊಪ್ಪನ್ನು ತಿಕ್ಕಿದ್ದರಿಂದ ಕೈಗಳು ಜೇನು ಗೂಡಿನಲ್ಲಿಟ್ಟಂತೆ ಉರಿಯಲಾರಂಭಿಸಿದ್ದವು. “ವೆಂಕಮ್ಮ ಮೋಸ ಮಾಡಿ ಬಿಟ್ಟಳು” ಎಂದು ಬೊಬ್ಬೆ ಹೊಡೆಯಲಾರಂಭಿಸಿದಳು. ಯಾರೋ ಪುಣ್ಯಾತ್ಮರು ಸೈಕಲ್ಲಿನಲ್ಲಿ ಹೋಗಿ ವೆಂಕಮ್ಮನನ್ನು ಕೂಡಿಸಿಕೊಂಡು ಬಂದರು. ವೆಂಕಮ್ಮ ಆ ಉರಿಯನ್ನು ಇಬ್ಬರಿಗೂ ಉಪಶಮನ ಮಾಡಿ, ಚೇಳಿನ ವಿಷವನ್ನು ಇಳಿಸಿದ್ದಳು. “ಈ ಊರಾಗೆ ನೂರು ಜಾತಿ ಚೋಳು ಅದಾವೆ. ಅವನ್ನ ಗುರುತಿಸೋದು ಮೊದಲು ಕಲುತುಕೋ. ಆಮೇಲಕ್ಕ ಮೊದ್ದು ಹಾಕುವಿಯಂತೆ” ಎಂದು ತಾಯಕ್ಕನ ಸೋಟೆ ತಿವಿದಳು.

ಚೇಳಿನ ವಿಷವಿಳಿಸುವದರಲ್ಲಿ ವೆಂಕಮ್ಮ ಎಂದೂ ಎಡವಿರಲಿಲ್ಲ. ಹಸಿ ಗೋಡೆಗೆ ಹರಳು ಒಗೆದಂತೆ ಅವಳ ವಿಷ ನಾಟುತ್ತಿತ್ತು. ಆದರೆ ವೆಂಕಮ್ಮನೂ ಕಷ್ಟಕ್ಕೊಳಗಾದ ಸಂದರ್ಭವೊಂದು ಬಂದಿತ್ತು. ಆ ದಿನ ಮಧ್ಯಾಹ್ನದ ಹೊತ್ತಿನಲ್ಲಿ ಅವಳ ಸವತಿ ಹನುಮಕ್ಕ ಓಡುತ್ತಾ ಬಂದು ಕೊಮ್ಮಣ್ಣನಿಗೆ ಚೇಳು ಕಚ್ಚಿದ ವಿಷಯವನ್ನು ತಿಳಿಸಿದಳು. “ಬರ್ತಿಯಲ್ಲೇನಕ್ಕ?” ಎಂದು ಅನುಮಾನದಿಂದ ಕೇಳಿದ್ದಕ್ಕೆ “ಬರಲಾರದಂಗೆ ಸುಮ್ಮನೆ ಕೂತರೆ ಆ ಶಿವ ಮೆಚ್ಚುತಾನೇನವ್ವಾ?” ಎಂದಿದ್ದೇ ಹೊರಟಳು. ಹನುಮಕ್ಕ ಗೌರಿ ಹಬ್ಬ ಬರುತ್ತದಾದ್ದರಿಂದ ಕೇದಿಗೆಯನ್ನು ತರಲು ಕೊಮ್ಮಣ್ಣನನ್ನು ಕೇಳಿದ್ದಳು. ಕೊಮ್ಮಣ್ಣ ಬಂಡ್ರಿಯ ಕಡೆ ಹೋಗಿ ಕೇದಿಗೆಯನ್ನು ಕಿತ್ತುವಾಗ, ಕಾಲಿಗೆ ಚೇಳೊಂದು ಕಚ್ಚಿತ್ತು. ಕೇದಿಗೆ ಬನದ ನಾಗರಹಾವಿನ ಜೊತೆ ಗೆಳೆತನ ಮಾಡಿದ ಚೇಳೇ ಇರಬೇಕು. ವಿಷ ಭೀಕರವಾಗಿ ತನ್ನ ಪ್ರಭಾವವನ್ನು ಬೀರಲಾರಂಭಿಸಿತ್ತು. ಕೊಮ್ಮಣ್ಣನ ಮೈಯಲ್ಲಾ ಆಗಲೇ ಕಪ್ಪು ಬಣ್ಣಕ್ಕೆ ತಿರುಗಿತ್ತು. ಅತ್ಯಂತ ದೈನ್ಯತೆಯಿಂದ ವೆಂಕಮ್ಮನ ಕಡೆ ನೋಡಿದ. ವೆಂಕಮ್ಮ ಮದ್ದು ಹಾಕಲು ಶುರು ಮಾಡಿದಳು. ನೀರನ್ನು ಬಾಯಲ್ಲಿ ಹಾಕಿಕೊಳ್ಳುವಾಗ ಮನಸ್ಸು ಏಕಾಗ್ರತೆಯಿಂದ ಮಂತ್ರವನ್ನು ಪಠಿಸಬೇಕಿತ್ತು. ಆದರೆ ಕಣ್ಣು ಮುಚ್ಚಿದರೆ ಸಾಕು, ಅಂದು ದುರ್ಗಮ್ಮನ ಗುಡಿಯಲ್ಲಿ ತನ್ನ ಸೀರೆ ಹತ್ತಿ ಉರಿದ ದೃಶ್ಯ ಕಣ್ಣಿಗೆ ಬರತೊಡಗಿತು. ಕಿವಿಯಲ್ಲಿ “ಹಾದರಗಿತ್ತಿ” ಎಂಬ ಕೊಮ್ಮಣ್ಣನ ಕರ್ಕಶ ಮಾತುಗಳು ಕೇಳಲಾರಂಭಿಸಿದವು. ಮನಸ್ಸು ಏಕಾಗ್ರತೆಯನ್ನು ಕಳೆದುಕೊಂಡು ಬಿಟ್ಟಿತು. ಮುತ್ತುತ್ತಿರುವ ಕೆಟ್ಟ ನೆನಪುಗಳಿಗೆ ಹೆದರಿ ಕಣ್ಣು ತೆರೆದರೆ ಕೊಮ್ಮಣ್ಣನ ದೈನ್ಯ ತುಂಬಿದ ನೋಟ, ಅಸಹಾಯಕತೆಯಿಂದ ನಡಗುತ್ತಾ ನಿಂತ ಹನುಮಕ್ಕ. ಮತ್ತೆ ಕಣ್ಣು ಮುಚ್ಚಿ ಮಂತ್ರ ಹೇಳಲು ಪ್ರಾರಂಭಿಸಿದಳು. “ಈ ಯಪ್ಪ ನನ್ನ ಗಂಡ ಅಲ್ಲ. ಇವನಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಮನೆಯಾಗೆ ಸೇವೆ ಮಾಡಿಕೊಂಡಿರೋ ಮಾಮೂಲೀ ಹೆಂಗಸು ನಾನಲ್ಲ” ಎಂದೆಲ್ಲಾ ಮನಸ್ಸಿನಲ್ಲಿ ಅಂದುಕೊಳ್ಳಲಾರಂಭಿಸಿದಳು. ಆದರೂ ಏಕಾಗ್ರತೆ ಸಾಧಿಸಲಾಗಲಿಲ್ಲ. ಈ ಹೊತ್ತಿನಲ್ಲಿ ಒಂದು ಅಚಾತುರ್ಯ ನಡೆದು ಹೋಯಿತು. ಬಾಯಿಯಲ್ಲಿ ಬರೀ ಗಲಗಲಿಸಬೇಕಾದ ನೀರು ಅವಳ ಹೊಟ್ಟೆಯಲ್ಲಿ ಹೋಗಿ ಬಿಟ್ಟಿತು! ವೆಂಕಮ್ಮ ಕೆಮ್ಮಲಾರಂಭಿಸಿದಳು. ಕಣ್ಣುಗಳು ಕೆಂಪಗಾಗಿ ನೀರು ಸುರಿಸಲಾರಂಭಿಸಿದವು. ಉಸಿರಾಟವೂ ಕಷ್ಟವಾಯ್ತು. ಮೈಯ ಬಣ್ಣ ಕಪ್ಪಿಕ್ಕ ತೊಡಗಿತು. ಅಲ್ಲಿದ್ದವರೆಲ್ಲಾ ಏನಾಯ್ತಪ್ಪಾ ಎಂದು ಭಯಭೀತರಾಗಿ ನೋಡಲಾರಂಭಿಸಿದರು. ವೆಂಕಮ್ಮ ಒಂದು ಲೋಟ ನೀರು ತರಿಸಿಕೊಂಡು ಅದರಲ್ಲಿ ನಾಲ್ಕು ಚಮಚ ಉಪ್ಪು ಹಾಕಿಕೊಂಡು ಗಟಗಟನೆ ಕುಡಿದುಬಿಟ್ಟಳು. ಹೊಟ್ಟೆಯೊಳಗಿದ್ದದ್ದೆಲ್ಲಾ ವಾಂತಿಯಾಗಿ ಹೊರಬಂತು. “ಭೈರವಿ ಬಾಬಾ” ಎಂದು ಪ್ರಾರ್ಥಿಸಿದಳು. ಮನಸ್ಸು ಸ್ಥಿಮಿತಕ್ಕೆ ಬಂತು. ಚಿಕಿತ್ಸೆಯನ್ನು ಮುಂದುವರೆಸಿದಳು. ಅಂತೂ ಕೊಮ್ಮಣ್ಣ ಬದುಕುಳಿದ. ಹನುಮಕ್ಕ ಎಲೆ, ಅಡಿಕೆ ಮತ್ತು ಬಾಳೆ ಹಣ್ಣನ್ನು ತಂದು ಕೊಟ್ಟಾಗ ನಯವಾಗಿ ನಿರಾಕರಿಸಿದ ವೆಂಕಮ್ಮ ಮತ್ತೆ ಮಾತನಾಡದೆ ಮನೆಗೆ ವಾಪಾಸಾದಳು.

ಆವತ್ತೊಂದಿನ ವೆಂಕಮ್ಮ ಊಟ ಮಾಡಿ ಬೇವಿನ ಮರದ ಕೆಳಗೆ ಮಲಗಿದ್ದಳು. ವೈಶಾಖ ಮಾಸದ ಬಿಸಿಲಿದ್ದರೂ ಮರದ ನೆರಳಿನಲ್ಲಿ ತಣ್ಣನೆಯ ಗಾಳಿ ಬೀಸುತ್ತಿತ್ತು. ಗಿಡದಿಂದ ಬೇವಿನ ಹಣ್ಣುಗಳು ಆಗಾಗ ಬಿದ್ದು ಸದ್ದು ಮಾಡುತ್ತಿದ್ದವು. ಕೋತಿಗಳು ಹೆಚ್ಚಿನ ಗಲಾಟೆಯಿಲ್ಲದಂತೆ ಅಲ್ಲಿಲ್ಲಿ ಓಡಾಡಿಕೊಂಡಿದ್ದವು. ಆಗ ಇದ್ದಕ್ಕಿಂದ್ದಂತೆಯೇ ತಮ್ಮಟೆಯ ಸದ್ದು ಕೇಳಿ ಬಂತು. ವೆಂಕಮ್ಮ ಏನೋ ಅನಾಹುತವಾಯಿತೇನೋ ಎನ್ನುವಂತೆ ಬೆಚ್ಚಿ ಬಿದ್ದು ಎದ್ದು ಕೂತಳು. ಕೋತಿಗಳು ಭಯದಿಂದ ಕಿರುಚಿ ಮರವನ್ನೇರಿಬಿಟ್ಟವು.

ತಳವಾರ ಸಿದ್ಧಪ್ಪ ತಪ್ಪಡಿ ಬಡಿಯುತ್ತಿದ್ದ. ಹತ್ತಾರು ಚಿಳ್ಳೆ ಪಿಳ್ಳೆಗಳು ಆಗಲೇ ಅವನ ಸುತ್ತ ನೆರೆದಿದ್ದರು. ಹಿರಿಯರೂ ಮನೆಯಿಂದ ಹೊರಬಂದು ಗುಂಪು ಸೇರಲಾರಂಭಿಸಿದರು. ವೆಂಕಮ್ಮನೂ ಕಣ್ಣು ಉಜ್ಜಿಕೊಂಡು ಗುಂಪಿನ ಬಳಿ ಹೋದಳು. ಗುಂಪಿನ ಮಧ್ಯದಲ್ಲಿ ಗಾಣಿಗರ ಕೊಟ್ರೇಶಿ ಮಾತನಾಡಲಾರಂಭಿಸಿದ. “ಕೇಳ್ರಪ್ಪೋ ಕೇಳ್ರಿ… ಊರಿಗೆ ಉಪಕಾರ ಆಗೋ ಅಂಥಾ ಚಮತ್ಕಾರ ತೋರಿಸ್ತೀನಿ… ಎಲ್ಲರೂ ಬರಬೇಕು…” ಎಂದು ಕೂಗು ಹಾಕಿದ. ಅವನ ಕೈಯಲ್ಲಿ ಕೆಂಪು ದ್ರವ ತುಂಬಿದ ಒಂದು ಸೀಸೆಯಿತ್ತು. ಅಲ್ಲೇ ಹತ್ತಿರದಲ್ಲಿ ಒಂದು ದೊಡ್ಡ ಚೀಲ, ಅದರ ಪಕ್ಕದಲ್ಲಿ ಆ ಕೆಂಪು ದ್ರವ ತುಂಬಿದ ಹತ್ತಾರು ಬಾಟಲಿಗಳನ್ನು ಒಂದರ ಮೇಲೊಂದರಂತೆ ಸುಂದರವಾಗಿ ಜೋಡಿಸಿಟ್ಟಿದ್ದ.

ಹತ್ತು ನಿಮಿಷದಲ್ಲಿ ಸಮಸ್ತ ಊರಿನವರೆಲ್ಲರೂ ಅಲ್ಲಿ ನೆರೆದರು. ವೆಂಕಮ್ಮ ಅಂತಹ ಹೊಸ ಸಂಗತಿಗಳನ್ನು ನೋಡದೆ ಬಿಟ್ಟಾಳೆಯೆ? ಗುಂಪಿನಲ್ಲಿ ತೂರಿ ಮುಂದೆ ಬಂದು ಕುಳಿತುಬಿಟ್ಟಳು.

ಕೊಟ್ರೇಶಿ ಮುಂದುವರೆಸಿದ. “ಇದು ಅಂತಿಂಥಾ ಚಮತ್ಕಾರ ಅಲ್ಲ. ನೋಡಿದವರು ಕೈ ಚಿವುಟಿಗೊಂಡು ಮತ್ತೊಮ್ಮೆ ನೋಡಬೇಕು, ಕೇಳಿದವರು ‘ಅಯ್ ಬರೀ ಸುಳ್ಳು’ ಅನ್ನಬೇಕು, ಅಂಥಾದ್ದು…. ಕೇಳ್ರಪ್ಪೋ ಕೇಳ್ರಿ…” ಎಂದ. ಅವನ ಮುನ್ನುಡಿಯೇ ಜಾಸ್ತಿಯಾದದ್ದರಿಂದ ಕಿರಿಕಿರಿಗೊಂಡ ವೆಂಕಮ್ಮ “ಅದೇನಂಥಾದ್ದು ತೋರಿಸ್ತೀಯೋ ತೋರಿಸೋ ಕೊಟ್ರೇಶಿ, ಬರೀ ಮಾತೇ ಆಯ್ತಲ್ಲ” ಎಂದು ದಬಾಯಿಸಿದಳು. ಅದನ್ನು ತೋರಿಸೋದಕ್ಕೆ ಯಾರಾದ್ರೂ ಒಬ್ಬರ ಸಹಾಯ ಬೇಕಾಗ್ತದೆ ಎಂದು ಕೊಟ್ರೇಶಿ ಹೇಳಿದ. ವೆಂಕಮ್ಮನ ಉತ್ಸಾಹಕ್ಕೆ ಕೇಳಬೇಕೆ? “ನಾನೇ ಐದೀನಲ್ಲಪ್ಪ” ಎಂದು ಥೈ ಎಂದು ಎಗರಿ ಅವನ ಮುಂದೆ ನಿಂತಳು. ಕೊಟ್ರೇಶಿ ಒಂದು ಕೋಲಿನಿಂದ ವೃತ್ತವನ್ನೆಳೆದು ವೆಂಕಮ್ಮನನ್ನು ಅದರ ಮಧ್ಯೆ ಕೂಡೆಂದು ಹೇಳಿದ. ವೆಂಕಮ್ಮ ಚಕ್ಕಳ-ಮಕ್ಕಳ ಹಾಕಿಕೊಂಡು ಕುಳಿತಳು. ಕೊಟ್ರೇಶಿ ಹತ್ತಿರದಲ್ಲಿಟ್ಟಿದ್ದ ಚೀಲದಿಂದ ಹತ್ತು ಪ್ಲಾಸ್ಟಿಕ್ ಡಬ್ಬಗಳನ್ನು ಹೊರತೆಗೆದ. ಅವುಗಳ ಮುಚ್ಚಳವನ್ನು ತೆಗೆದು ನೆಲಕ್ಕೆ ಬೋರಲಾಗಿ ಬಡಿದ. ಅದರಲ್ಲಿದ್ದ ಚೇಳುಗಳು ನೆಲಕ್ಕೆ ಬಿದ್ದವು. ವೆಂಕಮ್ಮನ ಸುತ್ತಲೂ ಚೇಳುಗಳನ್ನು ಹರಡಿದ. ಅವುಗಳೆಲ್ಲವೂ ವೆಂಕಮ್ಮನ ಕಡೆ ಹೋಗಲಾರಂಭಿಸಿದವು. ಒಂದೆರಡು ಚೇಳು ಇನ್ನೊಂದು ದಿಕ್ಕಿಗೆ ಹೋಗಲಾರಂಭಿಸಿದಾಗ ಕೋಲಿನಿಂದ ಅದರ ದಿಕ್ಕನ್ನು ಬದಲಿಸಿದ. ಜನರೆಲ್ಲಾ ಚೋಳುಗಳನ್ನು ನೋಡಿ ಅಂಜಿ ಒಂದು ಹೆಜ್ಜೆ ಹಿಂದಕ್ಕಿಟ್ಟರು. ವೆಂಕಮ್ಮನಿಗೆಂತಹ ಭಯ? ಚೇಳಿನ ಜೊತೆಯಲ್ಲೇ ಬದುಕುವವಳು. ಅವನೇನು ಮಾಡ್ತಾನೋ ನೋಡೇ ಬಿಡುವ ಎಂದು ನಗುತ್ತಾ ಕುಳಿತಳು. ಕೊಟ್ರೇಶಿ ಕೆಂಪು ದ್ರಾವಣದ ಸೀಸೆಯ ಬಿರಡೆಯನ್ನು ತೆಗೆದು ಆ ದ್ರಾವಣವನ್ನು ತಾನು ಹಾಕಿದ ವೃತ್ತದ ಗುಂಟ ಸುರುವಿದ. ಒಂದು ವಿಶೇಷ ಪರಿಮಳ ಆ ದ್ರಾವಣಕ್ಕಿತ್ತು. ವೆಂಕಮ್ಮ ಉಸಿರೆಳೆದುಕೊಂಡಳು. ಈಗ ಚೇಳುಗಳು ಆ ವೃತ್ತದ ಕಡೆಗೆ ನಡೆಯಲಾರಂಭಿಸಿದವು. ಆ ದ್ರಾವಣದ ಸಂಪರ್ಕ ಬಂದಿದ್ದೇ ತಡ ಸ್ಥಗಿತಗೊಂಡವು. ಒಂದು ಕ್ಷಣದಲ್ಲಿ ವಿಲವಿಲನೆ ಒದ್ದಾಡಲಾರಂಭಿಸಿದವು. ವೆಂಕಮ್ಮ ಬಿಟ್ಟಗಣ್ಣಿಂದ ನೋಡಲಾರಂಭಿಸಿದಳು. ಯಾವುದೇ ಚೋಳೂ ಆ ಗೆರೆಯನ್ನು ದಾಟಲಾಗಲಿಲ್ಲ. ಬಾರಲು ಬಿದ್ದು ಅಲ್ಲಾಡತೊಡಗಿದವು. ಜನರೆಲ್ಲಾ ಸದ್ದಿಲ್ಲದೆ ಆ ಮೋಡಿಯನ್ನು ವೀಕ್ಷಿಸಲಾರಂಭಿಸಿದರು. ಒಂದೈದು ನಿಮಿಷದಲ್ಲಿ ಎಲ್ಲಾ ಚೇಳುಗಳೂ ಚಲನೆಯಿಲ್ಲದೆ ಸತ್ತು ಬಿದ್ದವು. ವೃತ್ತದಲ್ಲಿ ಕುಳಿತಿದ್ದ ವೆಂಕಮ್ಮ ನಡೆದ ಘಟನೆಯಿಂದ ಚೇತರಿಸಿಕೊಳ್ಳಲಾಗದೆ ಸಣ್ಣಗೆ ನಡುಗಲಾರಂಭಿಸಿದಳು.

ಎಲ್ಲಾ ಚೇಳುಗಳು ಸಾಯುವ ತನಕ ಸೊಲ್ಲೆತ್ತದೆ ನಿಂತಿದ್ದ ಜನಗಳು ಈಗ ಚಪ್ಪಾಳೆ ಹೊಡೆಯಲಾರಂಭಿಸಿದರು. “ವ್ಹಾ, ವ್ಹಾ” ಎಂದು ಕೊಟ್ರೇಶಿಯನ್ನು ಕೊಂಡಾಡಿದರು. ವೆಂಕಮ್ಮ ಮಾತ್ರ ಬೆಪ್ಪುತಕ್ಕಡಿಯಂತಾಗಿದ್ದಳು. ಕೊಟ್ರೇಶಿ ಹತ್ತು ರೂಪಾಯಿಗೊಂದರಂತೆ ಚೇಳಿನ ವಿಷದ ಬಾಟಲಿಗಳನ್ನು ಮಾರಿದ. ಮೆಣಸಿನಕಾಯಿ ಬೋಂಡಾದಂತೆ ಎಲ್ಲಾ ಬಾಟಲಿಗಳು ಖರ್ಚಾದವು. ಜನರೆಲ್ಲಾ ಮನೆಗೆ ತೆರಳಿದರು. ವೃತ್ತದಲ್ಲಿ ಹಾಗೇ ಕುಳಿತಿದ್ದ ವೆಂಕಮ್ಮನನ್ನು ಮಾತನಾಡಿಸಿದ ಕೊಟ್ರೇಶಿ “ನಿನಗೂ ಒಂದು ಬೇಕೇನಜ್ಜಿ?” ಎಂದು ಕೇಳಿದ. ವೆಂಕಮ್ಮನೂ ಹತ್ತು ರೂಪಾಯಿ ಕೊಟ್ಟು ಒಂದು ಬಾಟಲಿಯನ್ನು ಕೊಂಡಳು. ಆ ಬಾಟಲಿಯಲ್ಲಿ ತಿರುಗಿಸಿ ನೋಡಿ “ಚೇಳಿನ ಮೈಯಾಗೆ ವಿಷ ಐತೆ. ಅಂಥಾ ಚೇಳಿಗೂ ಸಾಯಿಸಂಥ ಈ ವಿಷ ಇನ್ನೆಂಥಾದಿದ್ದೀತು?” ಎಂದು ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡಳು. ಕೊಟ್ರೇಶಿಯೂ ತನ್ನ ಸರಂಜಾಮನ್ನು ತೆಗೆದುಕೊಂಡು ಮನೆಗೆ ಹೋದ ಮೇಲೆ ವೆಂಕಮ್ಮ ಅಲ್ಲಿದ್ದ ಚೇಳುಗಳನ್ನೆಲ್ಲಾ ಬಳಿದು ಒಂದು ಗುಂಡಿಯಲ್ಲಿ ಹೂತಿಟ್ಟಳು. ಸೋತ ಹೆಜ್ಜೆಯಿಂದ ದುರ್ಗಮ್ಮನ ಗುಡಿಗೆ ಹಿಂತಿರುಗಿದಳು.

ಊರಿನಲ್ಲಿ ಚೇಳಿನ ರಾಶಿ ರಾಶಿ ಹೆಣಗಳು ಬೀಳಲಾರಂಭಿಸಿದವು. ಆ ಕೆಂಪು ದ್ರಾವಣದ ವಾಸನೆಗೆ ಆ ಚೇಳುಗಳು ಎಲ್ಲೇ ಇರಲಿ ಆಕರ್ಷಣೆಗೊಂಡು ಅದರ ಹತ್ತಿರ ಬರುತ್ತಿದ್ದವು. ರಾತ್ರಿ ಮನೆಯ ಸುತ್ತಲೂ ಹಾಕಿ ಮಲಗಿಕೊಂಡರಾಯ್ತು, ಬೆಳಗಿನ ಹೊತ್ತಿಗೆ ಆ ದ್ರಾವಣದ ರೇಖೆಗುಂಟ ಸತ್ತು ಸೆಟೆದುಕೊಂಡ ಚೇಳಿನ ಹೆಣಗಳ ರಾಶಿ. ಜನರೆಲ್ಲಾ ದಿನ ಬೆಳಗಾದರೆ ತಮ್ಮ ಮನೆಯ ಮುಂದೆ ಎಷ್ಟು ಚೇಳು ಸತ್ತವೆಂದು ಮಾತನಾಡಿಕೊಳ್ಳಲಾರಂಭಿಸಿದರು. ಸತ್ತ ಚೇಳುಗಳು ಯಾವ ಜಾತಿಯವೆಂಬುದೂ ಕಂಡು ಹಿಡಿಯಲಾಗದಂತೆ ಚೇಳುಗಳು ಸೆಟೆದುಕೊಂಡಿರುತ್ತಿದ್ದವು. ಮಕ್ಕಳು ಮರಿಗಳು ಆ ದ್ರಾವಣವನ್ನು ಯಾವುದಾದರೂ ಕಲ್ಲಿನ ಸುತ್ತ ಹಾಕಿ ಕಲ್ಲನ್ನು ತೆಗೆದ ತಕ್ಷಣ ಅದರ ಬುಡದಲ್ಲಿದ್ದ ಚೇಳು ಹೊರಬಂದು ಸತ್ತು ಹೋಗುತ್ತಿತ್ತು. ಮಕ್ಕಳು ಕೇಕೆ ಹಾಕಿ ಕುಣಿಯುತ್ತಿದ್ದರು. ಅಂಗಳದ ಕಸ ಬಳಿದ ಹೆಂಗಸರು ಸತ್ತ ಚೇಳುಗಳನ್ನು ಮತ್ತೊಬ್ಬರ ಅಂಗಳಕ್ಕೆ ದೊಬ್ಬಿದ್ದಾರೆಂದು ಜಗಳಗಳಾದವು.

ಊರಿಗೆ ಉಪಕಾರ ಮಾಡಿದ ಕೊಟ್ರೇಶಿಯನ್ನು ಸನ್ಮಾನ ಮಾಡಲು ಜನರೆಲ್ಲಾ ನಿರ್ಧರಿಸಿದರು. ಆ ದಿನ ಮಾರಮ್ಮನ ಗುಡಿಯ ಮುಂದೆ ಸತ್ತ ಸಾವಿರಾರು ಚೇಳುಗಳ ರಾಶಿಯನ್ನು ಹಾಕಿ ಬೆಂಕಿ ಹಚ್ಚಿದರು. ಅದರ ಸುತ್ತಲೂ ಜನರು ತಮ್ಮಟೆ ಬಡಿದುಕೊಂಡು ನೃತ್ಯ ಮಾಡಿದರು. ಕೊಟ್ರೇಶಿಯನ್ನು ಅರಳಿ ಕಟ್ಟೆಯ ಮೇಲೆ ಕೂಡಿಸಿ ಊರ ಹಿರಿಯರಿಂದ ಶಾಲು ಹೊದೆಸಿ ಸನ್ಮಾನ ಮಾಡಿದರು. ಸುತ್ತ ಮುತ್ತಲ ಹತ್ತಾರು ಹಳ್ಳಿಗಳಿಂದ ಜನರು ಬಂದಿದ್ದರು. ಎಲ್ಲರೂ ಮುಗಿ ಬಿದ್ದು ಹತ್ತು ರೂಪಾಯಿಗೊಂದರಂತೆ ಚೇಳಿನ ವಿಷವನ್ನು ಕೊಂಡರು. ವೆಂಕಮ್ಮ ಚೇಳುಗಳ ಚಿತೆಯ ಬೆಂಕಿಯಲ್ಲಿ ಬೇಯುತ್ತಾ ನಿಂತಿದ್ದಳು. ಸತ್ತು ಚೇಳುಗಳು ಅವಳಲ್ಲಿ ವಿಚಿತ್ರ ಸಂಕಟವನ್ನುಂಟು ಮಾಡುತ್ತಿದ್ದವು. ಸುಡುತ್ತಿರುವ ಚೇಳಿನ ವಾಸನೆ ಮೂಗಿಗೆ ಗಪ್ಪನೆ ಅಡರುತ್ತಿತ್ತು.

ವೆಂಕಮ್ಮನ ವೈಭವಕ್ಕೆಲ್ಲಾ ಅಂತ್ಯ ಬಂತು. ತರಕಾರಿಯವಳು ಜಗಳ ಮಾಡಿ ತರಕಾರಿ ಕೊಡುವದನ್ನು ನಿಲ್ಲಿಸಿದಳು. ರೈತರು ಮಳೆ ಬಂದಿಲ್ಲವೆಂಬ ನೆಪವೊಡ್ಡಿ ತಾರಮ್ಮಯ್ಯ ಎಂದರು. ಹಾಲು ಮೊಸರಿನವರ ಮನೆಗೆ ಎರಡೆರಡು ಬಾರಿ ಹೋಗಿ ಬಂದರೂ ಉಪಯೋಗವಾಗಲಿಲ್ಲ. ದಿನಸಿ ಅಂಗಡಿಯವನು “ರೊಕ್ಕ ಮುಂದಿಟ್ಟು ಮಾತಾಡು ವೆಂಕಮ್ಮ” ಎಂದು ನೇರವಾಗಿಯೇ ದಬಾಯಿಸಿ ದೊಬ್ಬಿದ. ವೆಂಕಮ್ಮನ ಸಹಾಯವನ್ನು ಪಡೆದಿದ್ದ ಹಿರಿಯ ತಲೆಮಾರೆಲ್ಲಾ ಮುಪ್ಪಾಗಿ ಮನೆಯಲ್ಲಿ ಕುಳಿತಿತ್ತು. ಅವರ ಹತ್ತಿರ ಹೋಗಿ ದೂರಿದರೆ “ಈಗಿನ ಹುಡುಗರು ನಮ್ಮ ಮಾತು ಕೇಳ್ತಾರೇನು ವೆಂಕಮ್ಮ?” ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.

ಕೆಲವೇ ತಿಂಗಳುಗಳಲ್ಲಿ ವೆಂಕಮ್ಮ ಭಿಕ್ಷೆ ಬೇಡುವ ಸ್ಥಿತಿಗಿಳಿದಳು. ಊರಿಗೆ ಹೊಸಬರು ಯಾರಾದರೂ ಬಂದರೆ “ನಿಮ್ಮೂರಾಗೆ ಚೋಳುಗಳು ಅದಾವ? ನನ್ನ ಕರಕೊಂಡು ಹೋಗ್ತೀರಾ?” ಎಂದು ಆಸೆಯಿಂದ ಕೇಳುತ್ತಿದ್ದಳು. ಗೋಪಣ್ಣನ ಮನೆಗೆ ಬೆಂಗಳೂರಿನಿಂದ ಬಂದ ಅತಿಥಿಗಳೊಬ್ಬರು “ಸೊಳ್ಳೆಗೆ ಔಷಧ ಗೊತ್ತಿದ್ದರೆ ಹೇಳು, ನಮ್ಮೂರಿನಾಗೆ ಭಾಳ ಉಪಯೋಗಕ್ಕೆ ಬರ್ತದೆ” ಎಂದು ಸಲಹೆಯಿತ್ತರು. ಚೇಳೆಲ್ಲಿ, ಯಃಕಶ್ಚಿತ್ ಸೊಳ್ಳೆಯೆಲ್ಲಿ? ದುರ್ಗಮ್ಮನ ಗುಡಿಯಲ್ಲಿ ಭಕ್ತಾದಿಗಳು ಬಿಟ್ಟು ಹೋದ ಬಾಳೆಹಣ್ಣು ಕೊಬ್ಬರಿಗಳನ್ನು ಅವರು ಕಣ್ಮರೆಯಾಗುತ್ತಲೇ ಗಬಗಬನೆ ತಿನ್ನುತ್ತಿದ್ದಳು. ಕೋತಿಗಳು ಆಸೆಯಿಂದ ಹತ್ತಿರ ಬಂದರೆ ಕೋಲಿನಿಂದ ಹೊಡೆದು ಓಡಿಸುತ್ತಿದ್ದಳು. ತಿಂಗಳಿಗೊಮ್ಮೆ ತಪ್ಪದೆ ಗಂಡಿ ನರಸಿಂಹಸ್ವಾಮಿಗೆ ಹೋಗಿ ಸೊಪ್ಪು ತರುತ್ತಿದ್ದಳಾದರೂ, ಅದನ್ನು ಪ್ರಯೋಗಿಸಲು ಯಾರೂ ಸಿಗದೆ ಅವು ಒಣಗಿ ಹೋಗುತ್ತಿದ್ದವು.

ಒಂದು ದಿನವಂತೂ ಸಾಯಂಕಾಲವಾದರೂ ಏನೂ ತಿನ್ನಲು ಸಿಗಲಿಲ್ಲ. ಉಪವಾಸದಿಂದ ಹೊಟ್ಟೆ ನೋವು ಶುರುವಾಯ್ತು. ಸೀದಾ ಲಕ್ಷ್ಮೀಚಂದ ಸೇಠ್‌ಜಿ ಅಂಗಡಿಗೆ ಹೋದಳು. “ಭಾಳ ಹಸಿವಿ ಆಗ್ಯದೆ, ಊಟಕ್ಕೆ ಹಾಕಿಸಪ್ಪ” ಎಂದು ಬೇಡಿಕೊಂಡಳು. ಸೇಠ್‌ಜಿಗೆ ಕರುಳು ಚುರ್ ಅಂತು. ಅಂಗಡಿಯನ್ನು ಬಿಟ್ಟು ಅವಳನ್ನು ಮನೆಗೆ ಕರೆದುಕೊಂಡು ಹೋದ. ಕಮಲಾ ಬೇನ್‌ಗೆ ಹೇಳಿ ಹೊಟ್ಟೆ ತುಂಬುವಂತೆ ಊಟಕ್ಕೆ ಹಾಕಿಸಿದ. ಮಗ ಮತ್ತು ಸೊಸೆಯನ್ನು ಕರೆದು ಅವಳಿಗೆ ನಮಸ್ಕಾರ ಮಾಡಿಸಿದ. ಸೊಸೆಗೆ ವೆಂಕಮ್ಮ ತನ್ನ ಮಗನ ಪ್ರಾಣವನ್ನು ಉಳಿಸಿದ್ದನ್ನು ತಿಳಿಸಿದ. ಅವಳು ಮನೆಗೆ ಹೋಗುವಾಗ ಒಂದಿಷ್ಟು ಹಣವನ್ನು ಕೊಟ್ಟ. ವೆಂಕಮ್ಮ ಮೊದಲಿಗೆ ಬೇಡವೆಂದಳು. ಸೇಠ್‌ಜಿ “ಇರ್‍ಲಿ ತೊಗೋ ವೆಂಕಮ್ಮ. ಕಷ್ಟದಾಗೆ ಇದ್ದೀ…” ಎಂದು ಹುರಿದುಂಬಿಸಿದ. ಮರು ಮಾತನಾಡದೆ ಪಡೆದುಕೊಂಡಳು. ಮನೆಗೆ ಹೋಗುವಾಗ ಬಾಗಿಲ ತನಕ ಬಂದ ಸೇಠ್‌ಜಿ ಬಳಿ “ದಿನಾ ಬಂದರೆ ಉಂಬಾಕೆ ಇಕ್ತೀಯೇನಪ್ಪ?” ಎಂದು ದೈನ್ಯದಿಂದ ಕೇಳಿದಳು. “ಯಾವಾಗ ಹಸಿವಿ ಅನ್ನಿಸಿದ್ರೂ ಊಟಕ್ಕೆ ಬಾ ವೆಂಕಮ್ಮ. ಭಿಡೆ ಮಾಡ್ಕೋಬ್ಯಾಡ” ಎಂದು ಹೇಳಿದಾಗ ವೆಂಕಮ್ಮನ ಕಣ್ಣುಗಳು ತುಂಬಿದ್ದವು. “ದೊಡ್ಡ ಮನಿಷಾ ಇದೀಯಪ್ಪ” ಎಂದು ಸೇಠ್‌ಜಿಗೆ ಕೈ ಮುಗಿದಳು.

ಆ ಸಂಜೆ ವೆಂಕಮ್ಮ ಕಣವೆಳ್ಳಿ ತಾಯಕ್ಕನ ಮನೆಗೆ ಹೋದಳು. ತಾಯಕ್ಕ ಅಕ್ಕಿ ಹಸನು ಮಾಡುತ್ತಿದ್ದಳು. ವೆಂಕಮ್ಮ ಅತ್ಯಂತ ಕಳವಳದಿಂದ “ನಾನು ಭಾಳ ದಿನ ಇರಂಗಿಲ್ಲ ಅನ್ನಿಸಿಲಿಕ್ಕೆ ಹತ್ತದೆ ತಾಯಕ್ಕ. ಯಾಕೋ ಕೆಟ್ಟ ಕೆಟ್ಟ ಕನಸು ಬೀಳಲಿಕ್ಕೆ ಹತ್ತಾವೆ. ಆ ಶಿವನ ಪಾದ ಸೇರೋ ಕಾಲ ಹತ್ತಿರ ಬಂದಂಗದೆ” ಎಂದು ಹೇಳಿದಳು. ತಾಯಕ್ಕ “ಕೆಟ್ಟ ಮಾತು ಯಾಕೆ ಆಡ್ತಿ ಬಿಡ್ತು ಅನ್ನು” ಎಂದು ಗದರಿಸಿದಳು. ವೆಂಕಮ್ಮ ಮುಂದುವರೆಸಿದಳು “ಒಣಗಿದ ಕಡ್ಡಿ ಹಂಗೆ ಆಗೀನಿ. ಯಾವಾಗ ಫಳ್ ಅಂತೀನೋ ಗೊತ್ತಿಲ್ಲ. ಆದರೆ ಸಾಯೋಕಿಂತ ಮುಂಚೆ ಚೇಳಿನ ಔಷಧ ಯಾರಿಗನ್ನಾ ಹೇಳಿಕೊಟ್ಟು ಹೋಗಬೇಕು ಅಂತ ನಿಯಮ ಅದೆ. ನನ್ನ ಹೊಟ್ಟಿನಾಗೆ ಇಟ್ಟುಗೊಂಡು ಸತ್ತರೆ ಆ ಪರಮಾತ್ಮ ಮೆಚ್ಚಂಗಿಲ್ಲ. ನಾಳೆ ಹೆಂಗೂ ಹುಣ್ಣಿಮಿ ಅದೆ. ಗಂಡಿ ನರಸಿಂಹಸ್ವಾಮಿಗೆ ಹೋಗೋಣ ಬಾ” ಎಂದು ಕರೆದಳು. ತಾಯಕ್ಕ ಅವಳ ಮಾತಿಗೆ ನಕ್ಕು ಬಿಟ್ಟಳು. “ನಿಂಗೆಲ್ಲೋ ಹುಚ್ಚು ನೋಡು ವೆಂಕಮ್ಮ. ನೋಡಾಣ ಅಂದ್ರೂ ಜೀವಂತ ಇರೋ ಚೇಳು ಸಿಗದಂಗೆ ಆಗ್ಯದೆ. ನೀನು ನೋಡಿದ್ರೆ ಅದರ ಔಷಧದ ಮಾತು ಆಡಾಕೆ ಹತ್ತಿ. ಅವೆಲ್ಲಾ ಹಳೇ ಕಾಲದ್ದು ಇಚಾರ ಬಿಟ್ಟು ಬಿಡು. ಹೇಳಿಕೊಡು ಅಂತ ಬಂದ ಹೊತ್ತಿಗೆ ಮೋಸ ಮಾಡಿದಿ. ಈಗ ಹೇಳ್ತೀನಿ ಅಂತೀಯಲ್ಲಬೆ?” ಎಂದು ಖಾರವಾಗಿ ಮಾತನಾಡಿದಳು. ವೆಂಕಮ್ಮ ಮತ್ತೆ ಹೆಚ್ಚಿಗೆ ಮಾತನಾಡದೆ ಮನೆಗೆ ಹಿಂತುರಿಗಿದಳು.

ಆ ರಾತ್ರಿಯೇ ವೆಂಕಮ್ಮ ಗಂಡಿ ನರಸಿಂಹಸ್ವಾಮಿಗೆ ಹೋದಳು. ಕತ್ತಲಿನಲ್ಲಿಯೇ ತಡವರಿಸುತ್ತಾ ಹೋಗಿ ಚೇಳಿನ ಔಷದದ ಗಿಡದ ಮುಂದೆ ನಿಂತಳು. ಅಲ್ಲಿಯೇ ಸಣ್ಣ ಕುಣಿಯೊಂದನ್ನು ತೋಡಿ, ಅದರಾಗೆ ಮನೆಯಲ್ಲಿ ಬರೆದುಕೊಂದು ಬಂದಿದ್ದ ಚೇಳಿನ ಮಂತ್ರದ ಚೀಟಿಯನ್ನು ಒಂದು ಚಿಕ್ಕ ಕಬ್ಬಿಣದ ಡಬ್ಬದಲ್ಲಿ ಹಾಕಿ, ಅದನ್ನು ಕುಣಿಯಲ್ಲಿಟ್ಟು ಮಣ್ಣು ಮುಚ್ಚಿದಳು. ಕಣ್ಣು ಮುಚ್ಚಿ “ಭೈರವಿ ಬಾಬಾ, ನಂದೇನೂ ತಪ್ಪಿಲ್ಲ” ಎಂದು ಗಲ್ಲಗಲ್ಲ ಬಡಿದುಕೊಂಡಳು.

ಆ ರಾತ್ರಿ ತಾಯಕ್ಕನಿಗೆ ನಿದ್ದೆ ಬರಲಿಲ್ಲ. ಚೇಳಿನ ಮಂತ್ರವನ್ನು ಹೇಳಿ ಕೊಡಲು ಬಂದ ವೆಂಕಮ್ಮನನ್ನು ಹಾಗೆ ಅವಮಾನ ಮಾಡಿ ಕಳುಹಿಸಬಾರದಿತ್ತೆಂದು ಕಸಿವಿಸಿಯಾಗಲಾರಂಭಿಸಿತು. ಯಾತಕ್ಕನ್ನಾ ಕೆಲಸಕ್ಕೆ ಬರ್ತಿತ್ತು, ಕೇಳಿಸಿಕೊಂಡಿದ್ರೆ ತನ್ನ ಗಂಟೇನು ಹೋಗುತ್ತಿತ್ತು ಎನ್ನಿಸಲಾರಂಭಿಸಿತು. ಕೋಳಿ ಕೂಗುವದಕ್ಕೆ ಮುಂಚೆಯೇ ಎದ್ದು ವೆಂಕಮ್ಮನ ಮನೆಗೆ ಹೋದಳು. ಆಗಲೇ ಹೋಗಿ ಬಿಟ್ಟಿದ್ದಾಳೇನೋ ಎಂಬ ಅನುಮಾನವಾಗಲಾರಂಭಿಸಿತು. ಬಾಗಿಲು ಹಾಕಿತ್ತು. “ವೆಂಕಮ್ಮ” ಎಂದು ಕೂಗಿದಳು. ಉತ್ತರ ಬರಲಿಲ್ಲ. ಬಾಗಿಲನ್ನು ದೂಕಿದಳು. ತೆರೆದುಕೊಂಡಿತು. ವೆಂಕಮ್ಮ ನೆಲದ ಮೇಲೆ ಮಲಗಿದ್ದಳು. ತಾಯಕ್ಕ ಮತ್ತೊಮ್ಮೆ ವೆಂಕಮ್ಮ ಎಂದು ಕೂಗಿದಳು. ಉತ್ತರ ಬರಲಿಲ್ಲ. ಯಾಕೋ ಅನುಮಾನವಾಗಿ ಹತ್ತಿರ ಹೋಗಿ ಮೈ ಮುಟ್ಟಿದಳು. ಯಾವಾಗಲೋ ದೇಹ ಸೆಟೆದುಕೊಂಡಿತ್ತು. ಮೈ ಬಣ್ಣ ಕಾಗೆಯಂತೆ ಕಪ್ಪಾಗಿತ್ತು. ಚೇಳಿನ ವಿಷದ ಸೀಸೆ ಖಾಲಿಯಾಗಿ ಹತ್ತಿರದಲ್ಲೇ ಬಿದ್ದಿತ್ತು. ಗೋಡೆಗೆ ನೇತು ಹಾಕಿದ್ದ ಚೇಳಿನ ಪಠ ಮಾತನಾಡದೆ ಮೌನವಾಗಿತ್ತು.

ಮರುದಿನ ಸೇಠ್‌ಜೀಯೇ ಮುಂದೆ ನಿಂತು ವೆಂಕಮ್ಮನ ಶವಸಂಸ್ಕಾರದ ಖರ್ಚನ್ನು ನೋಡಿಕೊಂಡ. ಅದೇ ದಿನ ರಾತ್ರಿ ಯಾರೋ ಕಳ್ಳರು ಒಂದು ಡ್ರಮ್ಮಿನಷ್ಟು ಅಡಿಕೆಯನ್ನು ವೆಂಕಮ್ಮನ ಮನೆಯಿಂದ ಲಪಟಾಯಿಸಿಬಿಟ್ಟರು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.