ಕವಿಯ ಪೂರ್ಣಿಮೆ

ತುಂಬು ಗರ್ಭಿಣಿ ಅತ್ತಿಗೆಯ ತೇಜಃಪುಂಜ ನೋಟ ಕಸೂತಿ ನೂಲಿನ ಜೊತೆ ಏನೋ ಕನಸು ನೇಯುತ್ತಿತ್ತು. ಅಣ್ಣನ ದೃಷ್ಟಿ ಕಿಟಿಕಿಯ ಹೊರಗೆಲ್ಲೋ ಶೂನ್ಯವನ್ನು ತಡವರಿಸುತ್ತಿತ್ತು. ಕೋಣೆಯ ಒಳಗೆ ತುಂಬಿ ತುಳುಕುವ ಬೆಳಕು. ಅತ್ತಿಗೆಯ ಮುಡಿಯಿಂದ ಒಯ್ಯೊಯ್ಯನೆ ತೇಲಿ ಬರುವ ಘಮಘನಿಸುವ ದುಂಡುಮಲ್ಲಿಗೆ ಕಂಪು. ಕಿಟಕಿಯ ಅಂಚಿನಿಂದ ಕಣ್ಣಂಚನ್ನು ಸೇರುವ ಗಗನದ ಅಪಾರ ಶುಭ್ರ ನೀಲಿ… ತುಂಬಿದ ಬದುಕು- ತುಳುಕುವ ಬೆಳಕು- ಘಮಿಸುವ ಕಂಪು-ಗರಿಯಾಡಿಸುವ ಕನಸು-ಗಗನದ ಅನಂತತೆ-ನಡುವೆ ಸಾವು. ಎಲ್ಲವುದರ ಅನಿತ್ಯತೆಯನ್ನೂ ಸಾರುವ ಸಾವು. ಆನಂದನ ಎದೆ ನೋವಿನಿಂದ ತಳಮಳಗೊಂಡಿತು. ಎಳೆಯ ಬಿಸಿಲಿನಲ್ಲಿ ಗುಯ್‌ಗುಡುವ ದುಂಬಿಯೊಂದು ಹಾಸಿಗೆಯ ಬಳಿ ಸುಳಿದು ಅವನನ್ನು ಸೌಂದರ್ಯದ ಸಂದೇಶದಿಂದ ಪೀಡಿಸಿತು.ಅನಂತತೆಯ ನಡುವೆ ಈ ಮರ್ತ್ಯತೆ…ಮಣ್ಣು! ಮಣ್ಣು! ಕೊನೆಗೆಲ್ಲವೂ ಹಿಡಿಮಣ್ಣು! ಕೆಮ್ಮು ಎದೆ ಸೀಳಿ ಬಂದಿತು. ಸಾವರಿಸಿಕೊಂಡು ಸುತ್ತಲೂ ಬೆದರಿದವನಂತೆ ನೋಡಿದ. ನಸುಬಿಸಿಲಿನ ಕಿರಣಗಳು ಅತ್ತಿಗೆಯ ಕಣ್ಣಂಚು, ಮೂಗುಬಟ್ಟುಗಳ ಮೇಲೆ ಮಿನುಗುತ್ತಿದ್ದವು. ಸುಖಸ್ವಪ್ನ ಅವಳ ಕಣ್ಣಿಂದ ಜಾರಿತು. ಕೈಯ ಕಸೂತಿ ಯಾಂತ್ರಿಕವಾಗಿ ನಿಂತಿತು. ಏನನ್ನೋ ಮರೆಯಲೆತ್ನಿಸುವಂತೆ ಅಣ್ಣ ಕೊಠಡಿ ಬಿಟ್ಟು ತೆರಳಿದ. ಅತ್ತಿಗೆಯ ಕಣ್ಣೋಟ ಕನಲುತ್ತಿತ್ತು: ಈ ಇಪ್ಪತ್ತೈದು ವರ್ಷದ ತುಂಬು ಜೀವವೂ ಸಾವಿಗೆ ತುತ್ತೆ? ಬದುಕಿನ ಪಿಂಡ ಗರ್ಭದಲ್ಲಿ- ಸಾವನ್ನು ಕುರಿತು ಅವಳ ಕಣ್ಣಲ್ಲಿ. ತನ್ನ ಪಾಡಿನಿಂದ ಈ ಪುಟ್ಟ ಸಂಸಾರವನ್ನು ಕವಿದಿದ್ದ ದುಃಖವನ್ನು ಮರೆಮಾಚಲೆತ್ನಿಸಿ ಆನಂದ ನಸುನಕ್ಕ. ಅವನ ಕಣ್ಣುಗಳಲ್ಲಿ ನಗೆ ಮಿಂಚಿದಾಗ ತುಟಿ ಬಿಗಿದು ಮುಸುಕಿದ್ದ ಸಾವೂ ಅಂಜಿತು- ಎಂತಹ ನಿಮಿಷವದು. “ಅತ್ತಿಗೆ ಮಗುವಿಗೇನು ಹೆಸರಿಡುತ್ತಿ?” ಕಂದನ ಮಾತು ಸುಳಿದೊಡನೆ ಅತ್ತಿಗೆಯ ಮೊಗ್ಗು ಮುಖ ಅರಳಿತು : “ನಿನ್ನ ಹೆಸರು: ಗಂಡಾದರೆ ಆನಂದ, ಹೆಣ್ಣಾದರೆ ಆನಂದಿ” ಆಡಿ ತುಂಟ ನಗೆ ನಕ್ಕಳು. ಆನಂದ ಕಣ್ಣುಮುಚ್ಚಿ ಕೆಟ್ಟ ಯೋಚನೆ ಮರೆಯಲೆತ್ನಿಸಿ ಎಂದ : “ಅವನು ತುಂಬಿ ಬಾಳಿ ಬದುಕಲಿ- ಈ ನನ್ನ ಹೆಸರೇಕೆ?” ಅತ್ತಿಗೆಗೆ ಕರುಳು ಕಿವುಚಿದಂತಾಯ್ತು. ಜೀವಪಿಂಡವನ್ನು ತನ್ನ ಗರ್ಭದಲ್ಲಿ ನೇಯುತ್ತಿದ್ದ ತಾಯಿಗೆ ಆನಂದನ ಸಾವು ಸನಿಯದಲ್ಲಿದೆ ಎಂದು ನೆನೆಯುವುದು ಅಸಾಧ್ಯವಾಗಿತ್ತು. ಸತ್ತವರು ಎಂದೆಂದಿಗೂ ಈ ಲೋಕದಿಂದ ಅಗಲುವರೆ? ಇಷ್ಟು ಪ್ರೀತಿ ಈ ಬದುಕನ್ನು ತಬ್ಬಿರುವಾಗ ಅದು ಹೇಗೆ ಸಾಧ್ಯ? ಏನು ಬೆಳಕು ತುಂಬಿದೆ ಈ ಲೋಕದಲ್ಲೀಗ. ಇಲ್ಲ- ಆನಂದ ಹೋಗಲಾರ- ಹೋದರೂ ಬರುವನು.ಬಂದೇ ಬರುವನು. ಆದರೆ ಯಾವ ರೂಪದಲ್ಲೋ? ಬಂದರೂ ಎಲ್ಲಿ ಹಿಂದಿನ ನೆನಪುಳಿದೀತು? ಇಲ್ಲಿಂದ ಅಗಲಿದವನು ಮುಗಿಲ ಸೇರಿ ನಕ್ಷತ್ರವಾಗಿ ಸ್ವರ್ಗ ಸುಖ ಅನುಭವಿಸುತ್ತಾನೆ…ಮುಗಿದ ಮೇಲೆ ನೆಲದ ಮೇಲಿನ ತನ್ನವರ ನೆನಪಾಗುತ್ತದೆ…ನೀಲಿಯಂಚಿನಿಂದ ಮತ್ತೆ ಪ್ರೀತಿಯ ಬಾಂಧವರ ಹೊಟ್ಟೆಯಲ್ಲಿ ಜನಿಸಲು ಪ್ರಯಾಣ ಬೆಳೆಸುತ್ತಾನೆ. ಆದರೆ ಹಿಂದಿನ ಜನ್ಮದ ಎಲ್ಲ ನೆನಪೂ ಆ ಬೆಳಕು ಕರಗಿದಂತೆಲ್ಲಾ ಮಾಯವಾಗುತ್ತದೆ… ಪುನರಪಿ ಜನನಂ- ಪುನರಪಿ ಮರಣಂ| ಪುನರಪಿ ಜನನೀ ಜಠರೇ ಶಯನಂ… ಎಂದೋ ಹೇಳಿದ ಕಥೆ. ಆದರೆ ನೆನಪು ಉಳಿಯದಿದ್ದರೆ ಬಂದರೇನು? ಬಾರದಿದ್ದರೇನು? ಎಲ್ಲ- ಎಲ್ಲ ಒಂದೇ. -ಅತ್ತಿಗೆ ಕಣ್ಣೀರೊರೆಸಿಕೊಂಡು ಕಿಟಿಕಿಯ ಕಡೆ ನೋಡಿದಳು… ಆನಂದ ಸಂತೈಕೆಯ ಧ್ವನಿಯಲ್ಲಿ ಅತ್ತಿಗೆಯಲ್ಲಿ ಗೆಲುವು ತುಂಬಲು ಹೇಳಿದ : “ಹಾಗೇ ಕರಿ ಅತ್ತಿಗೆ… ನಾನಾಗ ನಿನ್ನ ‘ಅಮ್ಮಾ’ ಎಂದು ಕರೆಯುತ್ತೇನೆ…ತುಂಟಾಟದಲ್ಲಿ ಎಲ್ಲವನ್ನು ಎಲ್ಲಿ ಮರೆತಿರುತ್ತೇನೊ? ಆಗ ನೀನು ಕೋಪಿಸಿಕೊಳ್ಳದೆ ಎಲ್ಲವನ್ನೂ ನೆನಪು ಮಾಡಿಕೊಡು- ಆಯಿತಾ?…” ಅತ್ತಿಗೆ ಮಾತ್ರ ಮುಗ್ಧಳಂತೆ ತಲೆಯಾಡಿಸಿ, ಆನಂದನಿಗೆ ಕುಡಿಯಲು ಏನಾದರೂ ಮಾಡಿ ತರೋಣವೆಂದು ಒಳಹೋದಳು… ಆನಂದ ಮತ್ತೆ ಹುಟ್ಟುತ್ತಾನೆ. ಈ ಸಂಸಾರದಲ್ಲಿಯೇ ಬೆಳೆಯುತ್ತಾನೆ. ಎಲ್ಲ ನಾಟಕವೂ ಮೊದಲಿನಿಂದ ಪ್ರಾರಂಭವಾಗುತ್ತದೆ… ತೊದಲ್ನುಡಿ… ಅಂಬೆಗಾಲು…ಪ್ರೇಮ…ಮಮತೆ… -ಸುಖಮಯವಾದ ಯೋಚನೆ ಸಾವಿನ ಸಾನಿಧ್ಯದಲ್ಲಿ

*
*
*
ಕನಸುಗಳ ನಡುವೆ ತೂರಿಬಂದು ಎದೆಯನ್ನು ಹಿಂಡುತ್ತವೆ ಆ ನೆನಪುಗಳು! ಕಾಹಿಲೆ ಉಲ್ಬಣವಾಗುವ ಚಿಹ್ನೆ ಕಂಡುಬಂದಾಗ ಆನಂದ ಸುಶೀಗೆ ತಿಳಿಸದಂತೆ ಹೊರಟು ಬಂದಿದ್ದಾನೆ… ಅವಳು ಎಲ್ಲವನ್ನೂ ಮರೆಯಬಲ್ಲಳೆ? ಆ ಬೆಳದಿಂಗಳ ರಾತ್ರಿ, ಮದವೇರಿದ ತೇನೆಯ ಆ ಕೂಗು! ಕೈಯಲ್ಲಿ ಕೈಯಿಟ್ಟು ತುಟಿಗೆ ತುಟಿಯಿಟ್ಟು ಕಳೆದ ಅಮೃತ ಘಳಿಗೆಗಳು! ಮರೆಯಬಲ್ಲಳೆ?… ತಾಯಿ ಹೆರಳು ಹಾಕುವಾಗ ತಾನಾಡಿದ ಸವಿಮಾತನ್ನು ನೆನೆದು ನಾಚಿ ನಗುತ್ತಿದ್ದುದು ತಾಯಿಗೆ ಅರ್ಥವಾಗದೆ ಮಗಳಿಗೆ ಹುಚ್ಚು ಹಿಡಿಯಿತೆಂದು ಗೊಣಗುಟ್ಟಿದುದನ್ನು ಮರೆಯಬಲ್ಲಳೆ? ಸುಶೀ ಮರೆಯಬಲ್ಲಳೆ?… ಹೊರಗೆಲ್ಲೋ ಓಲಗದ ಧ್ವನಿ. ಯಾರದೋ ಮದುವೆ. ಈ ದಿನದಲ್ಲಿ ತನ್ನದೂ ಆಗಬೇಕಿತ್ತು. ಹಾಗೆಯೇ ಸುಶೀ ಜೊತೆ ವಾಙ್ನಿಶ್ಚಯವೂ ಆಗಿತ್ತು. ಆದರೆ ಈಗ ಏನಾಗಿ ಹೋಯಿತು? ಪ್ರೇಮದ ಮೊದಲ ಹುಚ್ಚಿನಲ್ಲಿ ಕಿಟಿಕಿಯ ಕಂಡಿಗಳಲ್ಲಿ ಕದ್ದು ಆಡಿದ ಮಾತುಗಳು, ಆ ಕಣ್ಣೋಟಗಳು, ಆ ಪ್ರೇಮಪತ್ರಗಳು, ಅನಂತತೆಯನ್ನು ಸವಿದ ಆ ಘಳಿಗೆಗಳು…ಏನು ಏನು ನಡೆದು ಹೋಯಿತು? ಯಾವ ದೇವರ ಪ್ರೀತಿಗೆ ನಡೆಯಿತು? ? ಮತ್ತೆ ತನ್ನ ಮರ್ತ್ಯತೆಯ ನೆನಪು ಬಂದಾಗ ಎನಿಸಿದ ಆ ನೋವು- ತಾರೆಗಳಂತೆ ಎಂದೆಂದೂ ಬದುಕಬೇಕೆಂದು, ಅವಳ ಉಸಿರ ಛಂದಕ್ಕೆ ಹಿತವಾಗಿ ತೂಗಾಡುವ ಮೃದು ಎದೆಯ ಮೇಲೊರಗಿ ಆ ಜೊಂಪಿನ ನಡುವಿನ ಹಿತವಾದ ಎಚ್ಚರಗಳಲ್ಲಿ ಸುಖ ಸ್ವಪ್ನ ನೇಯಬೇಕೆಂದು ಆಸೆ ಕಟ್ಟಿದ ಆ ದಿನಗಳು… ಎಲ್ಲ ಎಲ್ಲ ಏನಾಗಿ ಹೋಯಿತು? ಸುಶೀ ಮರೆತಾಳೆ?… ಜೀವನದ ಕರೆ ಮರೆಸದೆ ಇದ್ದೀತೆ? ? ಮತ್ತೆ ನೆನಪುಗಳು- ಆ ಹಿರಿಯ ಹಂಬಲದ ನೆಮಪುಗಳು. ಜನತೆಯ ವಾಣಿಯಾಗಬೇಕೆಂದು, ನಾಡಿನ ಕವಿಯಾಗಬೇಕೆಂದು ನಾನು ಪಟ್ಟ ಆಸೆ… ಆ ಬರೆಯುವ ಹುಚ್ಚು… ಬರೆದುದನ್ನು ಗೆಳೆಯರ ನಡುವೆ ಓದುತ್ತಿದ್ದಾಗ ಕಳೆದ ರಸನಿಮಿಷಗಳು…ತನಗೆ ಪ್ರಿಯರಾದವರು ತನ್ನಲ್ಲಿ ಒಬ್ಬ ಮಹಾಕವಿಯ ಶಕ್ತಿ ಕಂಡುದು. ಆ ಹಿರಿಯ ಕಲೆಗಾಗಿಯೇ ಇಷ್ಟು ದಿನ ಬದುಕಿದುದು… ಎಲ್ಲ ಎಲ್ಲ ಯಾರ ಲಾಲಿಗೆ?- ಮಣ್ಣು! ಮಣ್ಣು! ಹಿಡಿ ಮಣ್ಣೂ ಈ ಬದುಕು!! ಗಗನದ ನೀಲಿಯಲ್ಲಿ ಮುಗಿಲ ಸಂಕೇತಗಳಲ್ಲಿ ದೇವರು ಬರೆದ ಪ್ರಕೃತಿಯ ಅಮರ ಕಾವ್ಯವನ್ನು ಗುರುತಿಸುವ ತನಕವೂ ಬದುಕು ಉಳಿಯಲಿಲ್ಲ… ಈಗ ಉಳಿದಿರುವುದೊಂದೇ. ಗಗನದಂಚನ್ನು ನಿಟ್ಟಿಸಿ ನೋಡುತ್ತ,ದೃಷ್ಟಿ ಸೂನ್ಯವಾಗುವವರೆಗೂ ನೋಡುತ್ತ,,,ಗೌರವ ಪ್ರೇಮ ಹಿರಿಯ ಹಂಬಲ‌ಎಲ್ಲವೂ ಶೂನ್ಯತಮದಲ್ಲಿ ಕರಗುವವರೆಗೂ ನೋಡುತ್ತ…ಹಾಗೆಯೇ… ವಿಶ್ವನಾಥ ಆನಂದನ ಮಗ್ಗುಲಲ್ಲಿ ಬಂದು ಕೂತ. ಗೆಳೆಯನ ಬೇಸರವನ್ನು ದೂರ ಮಾಡಲು ಏನಾದರೂ ಓದಿ ಹೇಳುವುದು ಅವನ ಪದ್ಧತಿ… “ಏನಾದರೂ ಓದಲೇ?” ಆನಂದ ಬೇಡವೆಂದು ತಲೆಯಾಡಿಸಿದ. ಹಾಸಿಗೆಯ ದಿಂಬಿನಡಿ ಇದ್ದ ಚಿಕ್ಕ ಸೀಸೆಯೊಂದನ್ನು ಕೈಗೆ ತೆಗೆದುಕೊಂಡ. ಎದೆಯಲ್ಲಿನ ಅಸಾಧ್ಯ ನೋವನ್ನು ಪರಿಹರಿಸಲು ಯಾರಿಗೂ ತಿಳಿಯದಂತೆ ಅದರಲ್ಲಿನ ಮಾತ್ರೆಗಳನ್ನು ನುಂಗಿ ನಿದ್ದೆ ಹೋಗುವುದು ಆನಂದನ ಈಚಿನ ಅಭ್ಯಾಸವಾಗಿತ್ತು. ವಿಶ್ವನಾಥ ಗೆಳೆಯನ ಕೈಯಲ್ಲಿನ ಸೀಸೆಯನ್ನು ಕಿತ್ತುಕೊಳ್ಳಲು ಕೈಯೊಡ್ಡಿದ. ಆದರೆ ಆನಂದನು ಆಡಿದ ಮಾತಿನಿಂದ ಅವನಿಗೆ ತುಂಬಾ ಆಶ್ಚರ್ಯವಾಯಿತು. “ಎದೆಯಲ್ಲಿ ಎಷ್ಟು ನೋವಾದರೂ ಇನ್ನು ಇದನ್ನು ತಿನ್ನುವುದಿಲ್ಲ- ವಿಶ್ವ” ವಿಶ್ವನಾಥ ಏನೋ ಭಾರ ಕಳೆದಂತೆ ನಿಟ್ಟುಸಿರುಬಿಟ್ಟ. ಆನಂದ ಸ್ವಲ್ಪ ಗುಣಮುಖನಾಗಿರಬಹುದೆ? “ನೋವನ್ನು ಮರೆಯಲೆತ್ನಿಸುವ ಅವಶ್ಯಕತೆ ಇನ್ನಿಲ್ಲ. ಎಲ್ಲಿಯಾದರೂ ಅದನ್ನು ಹುಗಿದು ಬಾ” -ವಿಶ್ವನಿಗೆ ಅರ್ಥವಾಗಲಿಲ್ಲ. “ಸಾವು ಬರಲಿ, ಸಂತೋಷ. ನಿರ್ಲಿಪ್ತನಾಗಿ ಕೊನೆಯನ್ನು ಎದುರಿಸುತ್ತೇನೆ.” ಏನನೋ ಹೇಳಲು ಬಾಯ್ದೆರೆದ ವಿಶ್ವ. ಆನಂದನ ಗಂಭೀರ ಮುಖ ಮುದ್ರೆಯನ್ನು ನೋಡಿ ಸುಮ್ಮನಾದ. ನಿಮಿಷಗಳು ನಿಧಾನವಾಗಿ ಸರಿಯುತ್ತಿದ್ದವು. ಯಾವ ಭಾವಾತಿರೇಕಕ್ಕೂ ಎಡೆಗೊಡದೆ ನಿರ್ಧರ, ಕ್ಷೀಣ ಸ್ವರದಲ್ಲಿ ಆನಂದನೆಂದ: ಸುಶೀ ನನ್ನ ಸಾವನ್ನು ಕೇಳಿ ದುಃಖಿಸುವುದು ಬೇಡ. ಎಲ್ಲವನ್ನೂ ಮರೆಯಲಿ ನಾನು ಬರೆದ ಕಾಗದಗಳನ್ನೆಲ್ಲಾ ಸುಟ್ಟು ಬೂದಿ ಮಾಡಲಿ. ಅವಳಿಗೆ ತಕ್ಕವನನ್ನು ನೋಡಿ ಮದುವೆಯಾಗಲಿ, ಇದೇ ನನ್ನ ಕೊನೆಯ ಆಸೆ. ಖಂಡಿತಾ ತಿಳಿಸುವುದು ನಿನ್ನ ಕರ್ತವ್ಯ…ನೆರವೇರಿಸು…” ಉದ್ವೇಗದಿಂದ ವಿಶ್ವ ಉಸಿರಾಡುತ್ತಿದ್ದ. ಆದರೆ ಆನಂದ ಮಾವಿನ ಮರದ ಚಿಗುರೆಲೆಗಳ ಶ್ರೀಮಂತ ಸೌಂದರ್ಯವನ್ನು ದಿಟ್ಟಿಸಿ ನೋಡುತ್ತ ನಿಶ್ಚಲನಾಗಿ ಮುಂದುವರಿದ: “ದುಃಖಿಸುವ ಕಾರಣವಿಲ್ಲ- ಈ ಮರಣದಿಂದ ಬಹುಶಃ ನನ್ನ ಕೊನೆಯಾಗಲಾರದು. ಹುಟ್ಟಿದವರಿಗೆಲ್ಲಾ ಸಾವು ಖಂಡಿತ. ಆದರೆ ಆನಂದ ಬದುಕುತ್ತಾನೆ. ನಡಿನ ಕವಿಗಳ ನಡುವೆ ಬರುವ ಕಾಲಕ್ಕೆ ನನ್ನ ಹೆಸರೂ ಸೇರೀತು. ಆದರೆ ವಿಧಿ ಮಾತ್ರ ನನ್ನ ಹೆಸರನ್ನು ನೀರಿನ ಮೇಲೆ ಬರೆಯಿತು. ಸಣ್ಣ ಗಾಳಿ ಬೀಸುತ್ತಿತ್ತು. ಒಣಗಿದೆಲೆ ಉದುರುತ್ತಿತ್ತು. ಚಿಗುರೆಲೆ ಕುಣಿಯುತ್ತಿತ್ತು. ಇಬ್ಬರೂ ಬಹಳ ಹೊತ್ತು ಮೌನವಾಗಿದ್ದರು. ಒಳಗೆ ಅತ್ತಿಗೆ ಹಗಲುಗನಸು ಕಾಣುತ್ತ ಮನಸ್ಸಿನಲ್ಲಿಯೇ ಜೋಗುಳ ಹಾಡುತ್ತಿದ್ದಳು. ಇನ್ನುಳಿದ ಘಳಿಗೆಗಳನ್ನು ಎಣಿಸುತ್ತಿದ್ದ ಆನಂದ ಕ್ಷೀಣ ಸ್ವರದಲ್ಲಿ ಹೇಳಿದ. “ವಿಶ್ವ- ಎಲ್ಲಿ ಆ ಗೀತೆಯ ಶ್ಲೋಕವನ್ನು ಮತ್ತೊಮ್ಮೆ ಓದು” ವಿಶ್ವನಾಥ ಸುಶ್ರಾವ್ಯ ಗಂಭೀರ ಧ್ವನಿಯಲ್ಲಿ ಓದತೊಡಗಿದ: “ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ “ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ” -ಕನಸು ನೇಯುತ್ತಿದ್ದ ಅತ್ತಿಗೆ ಶ್ಲೋಕದ ಗಂಭೀರ ಧ್ವನಿಯನ್ನು ಕೇಳಿ ಬಾಗಿಲಲ್ಲಿ ಬಂದು ನಿಂತಳು.
*
*
*
ಆ ದಿನ ಕಳೆಯಿತು. ಮಾರನೆಯ ಬೆಳಗಾಯಿತು. ಇದೇ ತನ್ನ ಪಾಲಿಗುಳಿದ ಕೊನೆಯ ಇನವೆಂದು ಆನಂದ ನಿಶ್ಚಯಗೊಂಡ. ವಿಶ್ವನಾಥನನ್ನು ಗುಟ್ಟಾಗಿ ಕರೆದು ಹೇಳಿದ: “ನನ್ನ ಪರಿಸ್ಥಿತಿ ತೀರಾ ಉಲ್ಬಣಗೊಂಡಿದೆ. ಎಲ್ಲೂ ಹೋಗಬೇಡ…” ಬೆಳಗಿನಿಂದ ಅತ್ತಿಗೆ ಈ ಕಡೆ ಸುಳಿದಿಲ್ಲ. ಪ್ರಸವ ವೇದನೆ ಶುರುವಾಗಿರಬೇಕು. ಈ ಹೊತ್ತಿನಲ್ಲಿ ಮನೆಯವರಿಗೆ ತನ್ನಿಂದ ಏನೂ ತೊಂದರೆಯಾಗಬಾರದೆಂದು ಆನಂದನ ಆಸೆ. ವಿಶ್ವನಿಗೆ ಎಚ್ಚರಿಕೆಯ ಮಾತು ಕೊಟ್ಟ: “ಅಣ್ಣ ಅತ್ತಿಗೆಗೆ ನನ್ನ ವಿಷಯ ಏನೂ ಗೊತ್ತಾಗದಂತೆ ನೋಡಿಕೊ. ನಾನೆಂದೂ ತೀರಿಸಲಾರದ ಮಹದುಪಕಾರ ಮಾಡಿದಂತಾಗುತ್ತೆ. ನನ್ನಿಂದ ಈ ಹೊತ್ತಿಗೆ ನೋವು ತಟ್ಟಬಾರದು. ಈ ಮನೆಗೆ ಇದು ಶುಭ ಮಹೂರ್ತ. ನಮ್ಮ ಕುಲ ವರ್ಧಿಸುವ ದಿನ.” ಪರೀಕ್ಷೆ ಮಾಡಿ ಹೋಗಲು ದಿನದಂತೆ ಡಾಕ್ಟರರು ಬಂದರು. ಆನಂದನ ಮುಖದಲ್ಲಿ ಏನೋ ಗೆಲುವು. ಕಣ್ಣಿನಲ್ಲಿ ಏನೋ ತೀಕ್ಷ್ಣತೆ. ಮಾತಿನಲ್ಲಿ ತುಂಬಿ ತುಳುಕುವ ಆತ್ಮೀಯತೆ. ಡಾಕ್ಟರರೂ ಮೋಸ ಹೋದರು. ನೊಂದುವ ದೀಪಕ್ಕೆ ಹೆಚ್ಚು ಪ್ರಕಾಶವೆಂದು ಯಾರಿಗೆ ತಾನೇ ತಿಳಿದೀತು? ಅತ್ತಿಗೆಯ ಪರೀಕ್ಷೆಯೂ ನಡೆಯಿತು. ಹೆರಿಗೆಯಾಗುವುದು ನಡುರಾತ್ರೆಯಾಗಬಹುದೆಂದು ಎಲ್ಲರ ನಿರೀಕ್ಷೆ. ಚೊಚ್ಚಲ ಬಸುರು. ವೇದನೆ ಸ್ವಲ್ಪ ಹೆಚ್ಚಾಗಬಹುದು. ಆದರೆ ಏನೂ ಭಯವಿಲ್ಲ ಎಂದು ಡಾಕ್ಟರರು ಹೇಳಿದರು. ಆನಂದನಿಗೆ ಏನೇನೋ ಯೋಚನೆಗಳು: ಕೊನೆಯ ದಿನಗಳನ್ನು ಹೇಗೆ ಕಳೆಯುವುದೆಂಬುದು ಅರ್ಥವಾಗಲೊಲ್ಲದು. ಮಗ್ಗುಲಿನ ಕೋಣೆಯಿಂದ ಅತ್ತಿಗೆಯ ನರಳುವಿಕೆಯ ಕ್ಷೀಣಸ್ವರ. ತಾಯಿಗೆ ಅದು ಸುಮಧುರಯಾತನೆ. ಕುಲವರ್ಧಕ ಇಂದು ಈ ಮನೆಗೆ ಬರುತ್ತಾನೆ. ಅಣ್ಣ ಎಲ್ಲಿಲ್ಲದ ಗಡಿಬಿಡಿಯಿಂದ ಅತ್ತಿಂದಿತ್ತ ತಿರುಗುತ್ತಿದ್ದಾನೆ. ಹೊಸ ಬದುಕಿನ ಸ್ವಾಗತಕ್ಕೆ ಏನೇನೋ ಸನ್ನಾಹಗಳು ನಡೆಯಬೇಕು. ಇದರ ಜೊತೆ ಆನಂದ ಬರಲಿರುವ ಸಾವಿಗೂ ಸನಾಹ ಮಾಡಿಕೊಳ್ಳಬೇಕು. ಹೀಗೆ ಘಳಿಗೆಗಳು ಸಾವು ಜೀವಗಳ ನಡುವೆ ಜೋಕಾಲಿಯಾಡುತ್ತ ಕಳೆಯುತ್ತಿದ್ದವು-ನಿಧಾನವಾಗಿ. ವಿಪರೀತವಾದ ನೋವು ಮಿಂಚು ಹೊಯ್ದಂತೆ ನರನರಗಳನ್ನೂ ಹಿಂಡುತ್ತಿತ್ತು. ಆನಂದ ತುಟಿಪಿಟಕ್ಕೆನ್ನದೆ ಸಹಿಸುತ್ತಿದ್ದ. ಅತ್ತಿಗೆಯ ವೇದನೆಯಂತೆ ಇದೂ ವೆದನೆಯೆ. ಆದರೆ ತಾಯಿಯದು ಸುಮಧುರಯಾತನೆ. ಹೊಸಹುಟ್ಟಿಗಾಗಿ ಆ ನೋವು . ಆದರೆ ಇದು?… ಎಂದಿನಂತೆಯೇ ಈ ದಿನವೂ ಕೋಣೆಯ ತುಂಬ ಬೆಳಕು ತುಂಬಿದೆ. ಮಾವಿನ ಮರದ ರೆಂಬೆಗಳು ಜೋಕಾಲಿಯಾಡುತ್ತಿವೆ. ಆನಂದನಿಗೆ ಒಂದೇ ಯೋಚನೆ: ದೇವರ ದಯೆಯಿಂದ ತಾನು ಮಗುವುನ ಜನನವಾಗುವವರೆಗಾದರೂ ಬದುಕಿದರೆ ಲೇಸು. ಅಲ್ಲದೆ ಕೊನೆಯದಾಗಿ ಒಂದು ಆಸೆ ಉಳಿದಿದೆ. ಈ ರಾತ್ರಿ ಬೆಲದಿಂಗಳಿರುತ್ತದೆ. ಅದನ್ನು ನೋಡಿ ಸಾಯಬೇಕು. ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಬೆಳದಿಂಗಳ ರಾತ್ರಿಯೇ ಹುಟ್ಟಿದ್ದ. ಅದೇ ಹೊತ್ತಿಗೆ ಕೊನೆ ಸಮೀಪಿಸಿದರೆ ಎಂತಹ ಅದೃಷ್ಟ! ಕವಿ ಜೀವಕ್ಕೆ ಅದಕ್ಕಿಂತ ಹೆಚ್ಚಿನ ಸುಖ ಸಿಕ್ಕೀತೆ? ಒಂದು ದಿನದ ಸೌಂದರ್ಯವನ್ನೆಲ್ಲಾ ಆರಾಧಿಸಿ ಸಾಯುವುದಕ್ಕಿಂತ ಹೆಚ್ಚಿನ ಪುಣ್ಯ ಮರ್ತ್ಯರೆಲ್ಲಿಗೆ ದೊರೆತೀತು? ಇನ್ನು ಆನಂದನ ಪಾಲಿಗೆ ಕಳೆದ ದಿನಗಳನ್ನು ನೆನೆಯುವುದೊಂದೇ ಉಳಿದಿದೆ. ನೋಟ ಹರಿಸಿದಾಗ ಗೋಚರಿಸುವ ಮೂಲೆ ಮೂಲೆಯೂ ನೂರು ನೆನಪಿನ ಆಗರಗಳು. ಈಗವನು ಮಲಗಿದೆಡೆಯಲ್ಲೇ ಅವನಿಗೆ ತಾಯಿ ಜನ್ಮವಿತ್ತದು. ಆ ಮಾವಿನ ಮರದ ಅಡಿಯಲ್ಲಿಯೇ ಕೂತು ನೂರಾರು ಕನಸುಗಳನ್ನು ಹೆಣೆದುದು. ಅಲ್ಲಿಯೇ ಸುತ್ತಾಡುತ್ತಾ ಕುಮಾರವ್ಯಾಸನ ಕಾವ್ಯವನ್ನು ಸವಿದುದು. ಆ ಹೊಸ್ತಿಲನ್ನು ಬಾಲನಾಗಿದ್ದಾಗ ದಾಟಿದಾಗ ಬಲು ದೊಡ್ಡ ಹಬ್ಬ ನಡೆಯಿತಂತೆ… ಈ ನೆಲದ ಮೇಲೆಲಾ ಎಷ್ಟು ದಿನ ಅಂಬೆಗಾಲಿಕ್ಕಿ ಆಡಿದ್ದನೋ… ದೂರದಿಂದ ಕೇಳಿಬರುವ ತುಂಗೆಯ ಜೋಗುಳಕ್ಕೆ ಕಿವಿಗೊಟ್ಟು ಮಲಗಿ ಎಷ್ಟು ದಿನ ಮಲಗಿ ನಿದ್ದೆ ಮಾಡಿದ್ದನೊ. ಈ ಎಲ್ಲ ನೆನಪುಗಳ ಆಗರವಾದ ಜೀವ ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಎಲ್ಲಿ ಹೋಗಿಬಿಡುವುದೋ! ಬದುಕೆಲ್ಲ ಒಂದು ಹೋರಾಟ. ಸಾವಿನ ಕರಿಯ ಛಾಯೆಯನ್ನು ಸುಶೀ ಜೊತೆ ಆನಂದಮಯನಾಗಿದ್ದಾಗ ಕಂಡ ಮೊದಲಿನಿಂದ ಒಂದೇ ಸಮನೆ ಹೃದಯದಲ್ಲಿ ಏನೋ ಕಳಕಳಿ… ಈ ಆಸೆಗಳಿಗೆ. ಈ ಪ್ರೇಮಕ್ಕೆ, ಈ ಜೀವಕ್ಕೆ ಇದೇ ಕೊನೆಯೆ? ಉಳಿಯುವುವೆ? ನೆನಪೂ ಉಳಿಯುವುವೆ? ಒಮ್ಮೆ ತೆರಳಿದ ಮೇಲೆ ಮತ್ತೆಲ್ಲಿ ಮರಳುತ್ತೇವೆ? ಎಷ್ಟು ಅಲ್ಪವಾದ ಮರ್ತ್ಯವಾದ ಸುಖ!… ಆನಂದ ಫಕ್ಕನೆ ಎಚ್ಚೆತ್ತ, ವಿಶ್ವ ಮೆಲುದನಿಯಲ್ಲಿ ಗೆಳೆಯನ ನೋವು ಹಗುರವಾಗಲಿ ಎಂದು ಅನ್ನುತ್ತಿದ್ದ- “ನೈನಂ ಛಿಂದಂತಿ ಶಸ್ತ್ರಾಣಿ- ನೈನಂ ದಹತಿ ಪಾವಕಃ’


*
*
ದಿನ ಮೆಲ್ಲಮೆಲ್ಲನೆ ಸರಿದು ಸಂಜೆಯಾಯಿತು. ಆನಂದ ಸ್ವಲ್ಪ ಹೊತ್ತಿನ ಬದುಕಿಗಾಗಿ ಸವನ್ನು ಬಹುಕಷ್ಟದಿಂದ ದೂರ ತಳ್ಳುತ್ತ ಮಲಗಿದ್ದ. ವಿಶ್ವ ಮಂಕು ಕವಿದವನಂತೆ ಕೂತಿದ್ದ. ಚಳಿ ಹೆಚ್ಚಾಗುತ್ತಿದೆಯೆಂದು ಕಿಟಿಕಿಯ ಬಾಗಿಲನ್ನು ಮುಚ್ಚಿ ಬಂದ. ಆನಂದ ತನ್ನ ಪಾಲಿನ ಕೊನೆಯ ಸಂಜೆಯ ಶಾಂತಿಯನ್ನು ಉಣ್ಣುತ್ತ ಏನೋ ಧ್ಯಾನಿಸಿದ. ಅಣ್ಣನ ತಿರುಗಾಟ ಈಗ ಹೆಚ್ಚಾಗಿದೆ. ಅತ್ತಿಗೆಯ ವೇದನೆಯೂ ಹೆಚ್ಚಾಗಿ ಇರಬೇಕು. ಇನ್ನೂ ನಾಲ್ಕೈದು ಘಂಟೆಗಳೂ ಬೇಕಾಗಬಹುದೋ ಏನೋ! ಆಮೇಲೆ ಆನಂದ ಹುಟ್ಟುತ್ತಾನೆ. ಇಲ್ಲೆಲ್ಲಾ ಅಂಬೆಗಾಲಿಟ್ಟು ಆಡುತ್ತಾನೆ. ಹೊಸಲು ದಾಟುತ್ತಾನೆ., ಮತ್ತೆ ದೊಡ್ಡ ಹಬ್ಬ ನಡೆಯುತ್ತದೆ…. ಎಲ್ಲ ನಾಟಕವೂ ಮತ್ತೆ ಪ್ರಾರಂಭ… ಅನಂತವಾದ ಜೀವನ ನಾಟಕ… ಹೋದ ವರ್ಷ ಇದೇ ದಿನ… ಚೈತ್ರಮಾಸದ ಒಂದು ಬೆಳದಿಂಗಳ ರಾತ್ರಿ… ದೇಹದಲ್ಲಿ ಇನ್ನೂ ಸ್ವಲ್ಪ ಹೆಚ್ಚು ಶಕ್ತಿ ಇತ್ತು. ಆದರೆ ಮನಸ್ಸಿನಲ್ಲಿ ಮಾತ್ರ ನಿರಂತರ ಹೋರಾಟ. ಸೌಂದರ್ಯ ಪ್ರೇಮಗಳ ಆರಾಧನೆಯಲ್ಲಿ ತೊಡಗಿದ್ದ ಜೀವನವನ್ನು ಕ್ಷಯ ಇಣುಕಿ ನೋಡಿತ್ತು. ಅದು ಸುಂದರವಾದ ರಾತ್ರೆ… ಶ್ರೀ ವಿಷ್ಣು ಜಗನ್ಮೋಹಕ ರೂಪತಾಳಿ ಮರ್ತ್ಯರಿಗೆ ಅಮೃತವನ್ನು ಬಡಿಸುತ್ತಿದ್ದಾನೆಯೋ ಎನ್ನಿಸುವಂತೆ ನಿರ್ಮಲವಾದ ಬೆಳದಿಂಗಳು; ನೀಲಿಯನ್ನೇರಿದ ದುಂಡು ಚಂದ್ರ… ಆದರೆ ಮನಸ್ಸು ಮಾತ್ರ ಬದುಕಿನ ಮರ್ತ್ಯತೆಯನ್ನು ಕುರಿತು ಚಿಂತಿಸುತ್ತಿತ್ತು-ನಡುವೆ ಪಕ್ಕನೆ ಕೋಗಿಲೆಯೊಂದು ಹಾಡಿತು- ತಾನು ಕುಳಿತಿದ್ದ ಬಳಿಯ ಮಾವಿನ ಮರದ ನೆತ್ತಿಯಿಂದ… ಮೈನಿಮಿರ್ನಿಂತಿತು. ಅಮರತ್ವದ ಸಂದೇಶ ನಾದಮಯವಾಗಿ ಬೆಳದಿಂಗಳಿನಲ್ಲಿ ತೇಲಿ ಬಂದು ತನ್ನನ್ನು ಕರುಣಿಸಿತ್ತು… ‘ಕುಹೂ… ಕುಹೂ…’ ಮತ್ತೆ ಈ ಸಂಜೆ ಕೋಗಿಲೆ ಹಾಡುತ್ತಿದೆ. ರೋಮಾಂಚಕಾರೀ ಅನುಭವ!… ಸಾವು ತನ್ನ ಕೊನೆಯ ತುತ್ತಿಗಾಗಿ ಎದೆಯಲ್ಲಿ ಕೈಹಾಕಿದಾಗಲೂ ಅಮರತೆಯ ಸಂದೇಶ ಕಿಟಿಕಿಯಿಂದ ತೂರಿಬರುತ್ತಿದೆ. “ಕುಹೂ…… ಕುಹೂ… ಕ್ಯುಹೂ’ ಅಮೃತ ಸಂದೇಶ ಅಲೆ‌ಅಲೆದು ದೂರದಲೆಲ್ಲೋ ಮಾಯವಾಯಿತು… ಅಂಗಾಂಗಗಳೆಲ್ಲವೂ ಬೆವತು ಬಿಟ್ಟವು. ಈಷ್ಟು ಅಸಾಧ್ಯವಾದ ನೋವು ಎದೆಯಲ್ಲಿ… ಮತ್ತೆ ಮತ್ತೆ ಬಂದು ನೋದುತ್ತಿದ್ದ ಅಣ್ಣನಿಗೆ ಅರ್ಥವೇ ಆಗಲಿಲ್ಲ. ಆನಂದ ತುಂಬ ಶ್ರಮವಹಿಸಿ ಬಚ್ಚಿಟ್ಟ. ವಿಶ್ವ ಸಂಜೆ ಇಳಿಮುಖವಾಗುತ್ತಿದ್ದಂತೆ ಆನಂದನ ಇಚ್ಛೆಯ ಮೇರೆಗೆ ಸಾಕ್ರಟೀಸನ ಮರಣ ವೃತ್ತಾಂತವನ್ನು ನಿಧಾನವಾಗಿ ಓದಿ ಹೇಳಿದ. ಹೆಮ್ಲಾಕನ್ನು ನಿರ್ವಿಕಾರನಾಗಿ ಕುಡಿದ ಸಾಕ್ರಟೀಸನ ಭವ್ಯ ಚಿತ್ರ ಆನಂದನ ಸುತ್ತ ಸುಳಿದು ಅವನನ್ನು ಸಂತೈಸಿತು. ಸಾಕ್ರಟೀಸ್… ಎಂತಹ ಅಚಲ ನಂಬಿಕೆ!… ಸಾವನ್ನೂ ಸ್ವಾಗತಿಸುವಾಗ. “ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ”
*
*
*
ಸಂಜೆ ಕಳೆಯಿತು. ಹಕ್ಕಿಗಳೆಲ್ಲವೂ ಗೂಡು ಸೇರಿದವು. ಪೂರ್ಣ ಚಂದ್ರನ ರಾಜ್ಯ ಇನ್ನು ಪ್ರಾರಂಭ… ಅತ್ತಿಗೆಯ ಬೇನೆ ಹೆಚ್ಹ್ಚುತ್ತಿರಬೇಕು. ತುಂಬಾ ನರಳುವಿಕೆ ಕೇಳಿಬರುತ್ತಿದೆ. ಇನ್ನು ಸ್ವಲ್ಪ ಹೊತ್ತಿನಲ್ಲೆ ಜನನವಾಗಬಹುದು. ಸುಮಧುರಯಾತನೆ ಮುಗಿಯಬಹುದು. ತನ್ನ ಮಧುರಯಾತನೆಯೂ ಕೊನೆಯಾಗಬಹುದು. ಯಾವ ಹೊಸ ಹುಟ್ಟಿಗಾಗಿಯೊ! ಘಳಿಗೆಗಳು ನಿಧಾನವಾಗಿ ಜಾರುತ್ತಿವೆ…… ಹೊರಗೆಲ್ಲ ಸರಸರನೆ ತಿರುಗಾಡುತ್ತಿದ್ದಾರೆ… ಆನಂದ ಧ್ಯಾನಮಗ್ನನಾಗಿ ಕಣ್ಣುಮುಚ್ಚುತ್ತಾನೆ…ಬದುಕಿನಲ್ಲಿ ಎಷ್ಟೋ ರೀತಿಯಿಂದ ತನಗಾದವರನ್ನು ಇನ್ನು ನೆನೆಯಬೇಕು. ಅವರಿಗೆಲ್ಲ ಕೊನೆಯ ವಂದನೆಗಳನ್ನು ಅರ್ಪಿಸಬೇಕು. ಉಳಿದ ಕರ್ತವ್ಯವಿಷ್ಟು. …ಜನ್ಮವಿತ್ತ ತಾಯಿತಂದೆ…ಪ್ರೇಮದ ಅಮೃತವಿತ್ತ ಸುಶೀಲೆ, ಎಷ್ಟೋ ರಸನಿಮಿಷಗಳಿಗೆ ಕಾರಣರಾದ ಗೆಳೆಯರು, ಬಾಳಿಗೊಂದು ಆದರ್ಶವಿತ್ತ ಕವಿಗಳು, ಅಣ್ಣ, ಅತ್ತಿಗೆ, ಎಷ್ಟು ಕನ, ಓಹ್ ಎಷ್ಟು ಜನ ತನ್ನ ಬಾಳಿಗಾದವರು… ಎಂತಹ ಪುಣ್ಯವಂತ… ಅವರೆಲ್ಲರಿಗೂ ಹೇಗೆ ಋಣ ಸಲ್ಲಿಸುವುದು? ಹೃದಯ ತುಂಬಿ ಬಂದಿತು, ಮೆಲ್ಲನೆ ಪಕ್ಕದಲ್ಲಿ ಕುಳಿತಿದ್ದ ವಿಶ್ವನ ಬೆನ್ನು ಸವರಿ ಶಾಂತ ಸ್ವರದಲ್ಲಿ ಎಂದ: “ವಿಶ್ವ ಹೋಗಿ ಬರುತ್ತೇನೆ. ದುಃಖಿಸಬೇಡಿ. ನಿನ್ನ ಕರುಣೆಯನ್ನು ಈ ಜನ್ಮದಲ್ಲಿನ್ನು ತೀರಿಸಲಾರೆ. ಅದರೆ ಇದು ಕೊನೆಯಲ್ಲ… ಇನ್ನು ಮೇಲೆ ನಿಜವಾದ ಪ್ರಾರಂಭ..” ತನ್ನ ಆ ಕೊನೆಯ ಮಾತು ಮುಗಿಸಿ ಬಾಗಿಲು ತೆರೆಯುವಂತೆ ವಿಶ್ವನಿಗೆ ಸನ್ನೆ ಮಾಡಿದ. ಬಲು ಕಷ್ಟದಿಂದ ಅಳುವನ್ನು ಒತ್ತಿ ಹಿಡಿದು ವಿಶ್ವನಾಥ ಎಲ್ಲ ಬಾಗಿಲನ್ನೂ ತೆರೆದು, ಆನಂದನ ಮಗ್ಗುಲಿಗೆ ಬಂದು ಕುಳಿತ. ಆನಂದ ಕಷ್ಟದಿಂದ ಬಲಪಕ್ಕಕ್ಕೆ ಹೊರಳಿ ನೋಡಿದ- ಎಂತಹ ಅಮೃತ ಘಳಿಗೆಯಿದು! ದೂರದಲ್ಲಿ ಮಿನುಗುವ ಆ ವಿಶಾಲ ಸೈಕತರಾಶಿ. ಈ ಬೆಳದಿಂಗಳಿಗೆ ಮೈಯೊಡ್ಡಿ ಅಲ್ಲಲ್ಲಿ ಧ್ಯಾನಮಗ್ನವಾಗಿ ನಿಂತ ಮರಗಳು, ಎರಡು ಚಿಕ್ಕ ಕಣ್ಣುಗಳನ್ನೂ ಅದಾವ ಮಾಯೆಯಿಂದಲೋ ಸೇರಬಲ್ಲ ಅಪಾರವಾದ ಗಗನದ ಈ ಶುಭ್ರನೀಲಿ. ಸತತ ಶ್ರವಣದಿಂದ ಮನೋಗತವಾಗಿ ಮೌನದ ಶ್ರೀಮಂತಿಕೆಯನ್ನೂ ಮೀರಿ, ವೈಕುಂಠದ ಸಂದೇಶ ತರುವ ತುಂಗೆಯ ಈ ಗಂಭೀರಧ್ವನಿ. ಶ್ರೀ ಕೃಷ್ಣ ರಾಸಲೀಲೆಯಾಡಿದ ಹೊತ್ತು. ಎಂತಹ ಮಾಯೆ. ಹುಚ್ಚೇರಿತೇನೆಯೊಂದೀಗ ಕಿರುಲಿತು. ಆಹ್! ಕಿರುಲಿ ಕಿರುಲಿ ಏರಿತು- ಏರಿ ಏರಿ ಕಿರುಲಿತು, ಜೀವಬಿಟ್ಟು ಕೋಗಿಲೆ ‘ಕುಹೂ… ಕುಹೂ…’ ಎಂದಿತು. ಯಾವ ಅಮರಾವತಿಯ ಮೋಡಿ ಇದು? ಅಬ್ಬ! ಒಂದು ಕ್ಷಣದಲ್ಲಿ ಎಂತಹ ದರ್ಶನ! ಆನಂದ ತಟ್ಟನೆ ಎದ್ದು ಕೂತ. ಏನೋ ಶಕ್ತಿ ಸಂಚಲನೆಯಾಯಿತು ನರನರಗಳಲ್ಲೂ. ಏನೋ ಮಧುರಯಾತನೆ ಮಂಥಿಸಿತು ಎದೆಯನ್ನು. ತೇನೆಯೊಡನೆ ಕಿರುಲ ಬೇಕೆನ್ನಿಸಿತು ‘ಜೀವಹಂಸ’ಕ್ಕೆ… ಮೈ ನಡುಗಿತು. ಒಂದೇ ಕ್ಷಣದಲ್ಲಿ ಮಿಂಚಿನಂತೆ ಮಹತ್ ದರ್ಶನ ಒಂದು ಜೀವವನ್ನು ಅಲ್ಲಾಡಿಸಿ ಹಾಯ್ದಿತು. ‘ಈ ತೇನೆ ನಾನು. ಈ ಬೆಳದಿಂಗಳು ನಾನು. ಈ ನೀಲಿ ಗಗನದ ಅನಂತತೆ ನಾನು ಇಲ್ಲ- ನನಗೆ ಸಾವಿಲ್ಲ- ನನಗೆ ಸಾವಿಲ್ಲ…’ ‘ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ” …ವಿಶ್ವನಾಥ ಗಂಭೀರವಾದ ಧ್ವನಿಯಲ್ಲಿ ಓದುತ್ತಿದ್ದ. ಆನಂದನ ಶರೀರ ಮೆಲ್ಲನೆ ಅವನ ಮೈಮೇಲೊರಗಿತು… …ವಿಶ್ವದ ಚೆಲುವಿಗೆ ಪೌರೋಹಿತ್ಯ ನಡೆಸಿದ್ದ ಕವಿಯ ಪಂಚೇಂದ್ರಿಯಗಳೂ ನಿಧಾನವಾಗಿ ತಮ್ಮ ಚೇತನವನ್ನು ಕಳೆದುಕೊಂಡವು… ದೀರ್ಘನಿಟ್ಟುಸಿರೊಂದು ತಪ್ಪಿಸಿಕೊಂಡಿತು. ಆನಂದನ ತೆರೆದ ಕಣ್ಣುಗಳನ್ನು ಮುಚ್ಚಿ, ಬಿಳಿಯ ವಸ್ತ್ರ ಒಂದನ್ನು ಹೊದೆಸಿ ವಿಶ್ವ ಕೈಮುಗಿದನು- ಒಳಗಿನಿಂದ ಮಗು ಅಳುವ ಧ್ವನಿ ಕೇಳಿತು!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.