ಲಂಗರು

-೧-

ಒಲ್ಲದ ಮನಸ್ಸಿನಿಂದ ಮನೆ ಬಿಟ್ಟು ಹೊರಟ ಮೇಲೆ ರಘುವೀರನಿಗೆ ರಾಮತೀರ್ಥಕ್ಕೆ ಹೋಗಿ ಧಾರೆಯಾಗಿ ಧುಮುಕುವ ನೀರಿನ ಕೆಳಗೆ ತಲೆಯೊಡ್ಡಿ ನಿಲ್ಲಬೇಕೆನಿಸಿತು. ಬಂದರಿಗೆ ಹೋಗಿ ದೋಣಿಗಳು ಹೊಯ್ದಾಡಿ ದಡ ಸೇರುವುದನ್ನು ನೋಡಬೇಕೆನಿಸಿತು. ಅಣ್ಣನ ಅಂಗಡಿಗೆ ಹೋಗಿ ಆಡಬೇಕಾಗಬಹುದಾದ ಮಾತುಗಳನ್ನು ಮನಸ್ಸಿನಿಂದ ದೂರ ಮಾಡಲು ಮೈ ಮರೆಯುವಂಥ ಏನನ್ನಾದರೂ ಮಾಡಬೇಕೆನ್ನಿಸಿತು. ರಾಮತೀರ್ಥಕ್ಕೆ ಹೋಗುವ ದಾರಿಯಲ್ಲಿ ಅಣ್ಣ ಅನಂತನ ಅಂಗಡಿಯಿದ್ದದ್ದರಿಂದ ಅತ್ತ ಹೋಗದೆ ಬಂದರಿನತ್ತ ನಡೆದ. ಮನೆಯಿಂದ ಹೊರಡುವ ಹೊತ್ತಿಗೆ ಹೆಂಡತಿ ಮಾಲಿನಿ ಏನನ್ನೂ ಹೇಳದೆ ಇದ್ದರೂ ‘ಹೋಗಿಬರುತ್ತೇನೆ’ ಎಂದದ್ದಕ್ಕೆ ಅವಳು ಹೂಂ ಅಂದ ರೀತಿಯಲ್ಲೇ ಗಂಡ ಮರಳಿ ಬರುವಾಗ ಸಾಧಿಸಿಕೊಂಡು ಬರಬೇಕಾದದ್ದರ ಬಗೆಗಿನ ಅಪೇಕ್ಷೆ ವ್ಯಕ್ತವಾಗಿತ್ತು. ಹೇಳಬೇಕಾದ್ದನ್ನೆಲ್ಲ ಹಿಂದಿನ ರಾತ್ರಿಯೇ ಆಡಿ ಮುಗಿಸಿದ್ದಳು. ಎಲ್ಲ ಮಾತುಗಳು ಸ್ವರಗಳು ತಾರಕ ತಲುಪಿ ಈವತ್ತು ಬೆಳಿಗ್ಗೆ ಅದಕ್ಕಿಂತ ಎತ್ತರದಲ್ಲಿ ಒತ್ತಾಯ ಮಾಡುವುದು ಶಕ್ಯವಿಲ್ಲ ಅನಿಸಿ ಮೌನದಲ್ಲೇ ಚುಚ್ಚಿದ್ದಳು. “ಅದೇನು ದೊಡ್ಡ ವಿಷಯ ಬಿಡೆ….ಅವರು ನಮಗೆ ಮಾಡಿದ್ದನ್ನು ನೆನೆಸಿಕೊಳ್ಳಬೇಕೆ ಹೊರತು, ಯಾರೋ ಹೇಳಿದ್ದನ್ನು ಕೇಳಿಕೊಂಡು ಇಂಥ ಸಣ್ಣಸಂಗತಿ ಈಗ ಮತ್ತೆ ಯಾಕೆ ಎತ್ತಬೇಕು?….”ಎಂದು ರಾತ್ರಿ ರಘುವೀರ ಹೇಳಿದ್ದು ಅವಳನ್ನು ಕೆರಳಿಸಿತ್ತು. “ನೋಡಿ…. ಇದೇ ಮಾತು…. ಇದೇ ಮಾತು ಇಷ್ಟು ವರ್ಷ ಹೇಳಿಕೊಂಡು ಬಂದಿರಲ್ಲ…. ಅದಕ್ಕೇ ಈಗ ನಮಗೆ ಗೆರಟೆ ಹಿಡಿಯುವ ಸ್ಥಿತಿ ಬಂತು…. ಆವಾಗಲೇ ನೀವು ಜೋರಾಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ…. ಇಲ್ಲವಾದರೆ ಆಸ್ತಿಯಲ್ಲಿ ಸಮಪಾಲು ಬಂದಿತ್ತಲ್ಲ…… ಕೊಟ್ಟಿದ್ದೆ ಎಂದು ನಿಮ್ಮಣ್ಣ ಹೇಳುತ್ತಾರಲ್ಲ…… ಹಾಗೇ ಆಗಿದ್ದರೆ ಅವರೇಕೆ ಅಷ್ಟು ಶ್ರೀಮಂತರಾದರು…… ನೀವೇಕೆ ಮುಂದೆ ಬರಲಿಲ್ಲ…… ನಿಮ್ಮ ಹತ್ತಿರ ನಯದ ಮಾತಾಡಿ ತಲೆಗೆ ಎಣ್ಣೆ ಹಾಕಿ ಕಳಿಸಿದ್ದಾರೆ…… ಈಗ ಕೂತು ಗಸಗಸಾ ತಿಕ್ಕಿಕೊಳ್ಳಿ……” ಅವನು ಸಮಾಧಾನದಿಂದ ಕೇಳುತ್ತಿದ್ದಷ್ಟೂ ಅವಳು ಕನಲಿ, ಮಾತಿಗೆ ಮಾತು ಸೇರಿಸುತ್ತ ಅವನ ಸೈರಣೆ ತಪ್ಪುವ ತನಕ, ಆತ ಕೂಗಾಡಿ ಸಿಟ್ಟಿನಿಂದ ಕಂಪಿಸುತ್ತ ಧಡಧಡ ಅತ್ತಿಂದಿತ್ತ ಓಡಾಡುವ ತನಕ, ತನ್ನ ಮಾತು ಅವನ ಅಂತರಂಗವನ್ನು ನಾಟಿತು ಎಂದು ಖಾತ್ರಿಯಾಗುವ ತನಕ ದನಿ ಇಳಿಸಿರಲಿಲ್ಲ. ಇಂಥ ಪ್ರಸಂಗ ಬಂದಾಗಲೆಲ್ಲ ಈ ಮದುವೆಯಾಗಿ ತಾನು ಮನಸ್ಸಿನ ಶಾಂತಿ ಕಳಕೊಂಡೆನೇನೋ ಎಂದು ರಘುವೀರನಿಗೆ ಒಮ್ಮೊಮ್ಮೆ ಅನಿಸುತ್ತಿತ್ತು. ಮಾಲಿನಿಯೇನು ಸದಾ ಜಗಳವಾಡುವಂಥ ಹೆಂಗಸಲ್ಲ. ಆದರೆ ತನ್ನದು, ತನ್ನ ಮನೆ, ತನ್ನ ಸಂಸಾರದ ವ್ಯಾಮೋಹ ತೀರ ಹೆಚ್ಚಾದಾಗ ಸ್ತಿಮಿತ ತಪ್ಪಿದ ಹಾಗೆ ಆಡುತ್ತಾಳೆ ಅನಿಸುತ್ತಿತ್ತು. ಮದುವೆಯಾದಾಗ ರಘುವೀರನಿಗೆ ಮೂವತ್ತೈದು ವರ್ಷ. ಮಾಲಿನಿಗೆ ಮೂವತ್ತೆರಡು. ತಡವಾಗಿ ಮದುವೆಯಾದದ್ದರಿಂದ ಕಳಕೊಂಡಿದ್ದನ್ನೆಲ್ಲ ಈಗ ಒಮ್ಮೆಲೇ ಬಾಚಿಕೊಳ್ಳುವ ಹಾಗೆ ಆಡುತ್ತಿದ್ದಾಳೇನೋ ಅಂದುಕೊಳ್ಳೂತ್ತಿದ್ದ. ಮಚವೆ ಹತ್ತಿಕೊಂಡು, ಹದಿನೈದು ವರ್ಷಗಳ ಕಾಲ ಸಮುದ್ರದ ಮೇಲೆಯೇ ಅನ್ನುವ ಹಾಗೆ ಬದುಕಿದ ರಘುವೀರ ಮಚವೆಯ ವ್ಯವಹಾರ ನಿಲ್ಲಿಸುವ ಪ್ರಸಂಗ ಬಂದ ಮೇಲೆ ಹೊನ್ನಾವರದಲ್ಲೇ ಇರಬೇಕಾಯಿತು. ಅದಾಗದೇ ಇದ್ದಿದ್ದರೆ ಈ ಮದುವೆಯ ಒತ್ತಾಯಕ್ಕೆ ರಘುವೀರ ಬಹುಶಃ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಅಂತೂ ಅದಾವುದೋ ಗಳಿಗೆಯಲ್ಲಿ ಒಪ್ಪಿಕೊಂಡದ್ದೇ ಎಲ್ಲದಕ್ಕೆ ಕಟ್ಟಿಬಿದ್ದಂತಾಗಿತ್ತು. ರಘುವೀರ ಬಂದರಿನತ್ತ ಹೋದಾಗ ಆಗತಾನೇ ಬೆಳಗಿನ ಮೀನು ದೋಣಿಗಳು ದಡ ಹತ್ತುತ್ತಿದ್ದವು. ಮೀನು ಕೊಳ್ಳುವ ಜನರ ಗದ್ದಲ, ದಡ ಸೇರಲು ಪೈಪೋಟಿಯಿಂದ ಸರಸರ ಹುಟ್ಟು ಹಾಕುತ್ತ ಬ್ರಿಜ್ಜಿನ ಕಂಬಗಳ ನಡುವಿನಿಂದ ತೀರದ ಗಿರಾಕಿಗಳತ್ತ ನುಗ್ಗುವ ಮೀನುದೋಣಿಗಳು. ಎರಡು ದಂಡೆಗಳನ್ನು ಸೇರಿಸಲು ಹಾಕಿದ ಹೊಲಿಗೆಯ ಹಾಗೆ ತೋರುವ ಈ ಬ್ರಿಜ್ಜನ್ನು ರಘುವೀರನೆಂದೂ ಇಷ್ಟಪಟ್ಟಿರಲಿಲ್ಲ. ಅದು ಉದ್ಘಾಟನೆಯಾದ ಹೊಸದರಲ್ಲಿ ಕುತೂಹಲದಿಂದ ಅದರ ಮೇಲೆ ಆಚೆಯಿಂದ ಈಚೆಯವರೆಗೆ ನಡೆದಿದ್ದ. ಭರ್ರಭರ್ರನೆ ಲಾರಿಗಳು ದಾಟಿಹೋದ ಹಾಗೆ ಮೈಲುದ್ದದ ಬ್ರಿಜ್ಜು ಕುಪಿಸಿ, ಆ ಕಂಪನ ಇನ್ನೂ ಆರದೇ ಒಳಗೆ ಉಳಿದ ಹಾಗೆ ಅನಿಸುತ್ತಿತ್ತು. ಭರಿಸಿಕೊಳ್ಳಲಾಗದ ಯಾವುದನ್ನೋ ಒಳಗೆ ಹಾದುಹೋಗಲು ಬಿಟ್ಟ ಹಾಗೆ. ಸ್ವಲ್ಪ ಹೊತ್ತು ಸುಮ್ಮನೇ ದೋಣಿಗಳನ್ನು ನೋಡುತ್ತ ನಿಂತು ರಘುವೀರ ಬಂದರಿನಗುಂಟ, ನದಿ ಸಮುದ್ರ ಸೇರುವತ್ತ ನಡೆದ.

-೨-

ಚಿಕ್ಕಂದಿನಿಂದಲೂ ಯಾರ ತಂಟೆಗೂ ಹೋಗದ ರಘುವೀರನಿಗೆ ಅದಾವುದೋ ಹಂತದಲ್ಲಿ ಈತ ಭೋಳೆ ಅನ್ನುವದು ಅಂಟಿಕೊಂಡುಬಿಟ್ಟಿತ್ತು. ಹಾಗೆ ನೋಡಿದರೆ ಅಣ್ಣ ಅನಂತನಿಗಿಂತ ಅವನೇ ಹೆಚ್ಚು ಓದಿದವನು. ಅನಂತ ಏಳನೇ ತರಗತಿಯವರೆಗೆ ಓದಿದ್ದರೆ ರಘುವೀರ ಮೆಟ್ರಿಕ್ ಪಾಸಾಗಿದ್ದ. ಓದುವುದೊಂದು ಬಿಟ್ಟು ಬಾಕಿ ಎಲ್ಲಾ ವಿಷಯಗಳಲ್ಲಿ ಅನಂತ ಮುಂದು. ಅಪ್ಪನ ಅಂಗಡಿಯಲ್ಲಿ ಕೂತು ವ್ಯವಹಾರ ಕಲಿತಿದ್ದ. ಅಪ್ಪ ಸತ್ತ ನಂತರ ಅವನೇ ಅಂಗಡಿಯನ್ನು ಮುಂದುವರೆಸಿಕೊಂಡು ಹೋಗಬೇಕಾಯಿತು. ಅಡಿಕೆ ದಲಾಲಿ ವ್ಯಾಪಾರ. ಆಗ ಅನಂತನಿಗೆ ಇಪ್ಪತ್ತು ವರ್ಷ. ರಘುವೀರನಿಗೆ ಹದಿನೆಂಟು. ಅವನೂ ಅಣ್ಣನಿಗೆ ಅಂಗಡಿಯಲ್ಲಿ ಸಹಾಯ ಮಾಡುತ್ತಿದ್ದರೂ ವ್ಯವಹಾರದ ಸೂತ್ರವೆಲ್ಲ ಅನಂತನ ಕೈಯಲ್ಲಿತ್ತು. ರಘುವೀರನಿಗೆ ಅದರಲ್ಲಿ ಆಸಕ್ತಿಯೂ ಇರಲಿಲ್ಲ. ಎರಡು ವರ್ಷ ಅಂಗಡಿ ನಡೆಸಿ ಹುಟ್ಟಿದ ಆತ್ಮವಿಶ್ವಾಸದಿಂದಲೇ ಅನಂತ ಮಚವೆಯ ವ್ಯವಹಾರಕ್ಕೆ ಕೈಹಾಕಿದ್ದು. ಆಗಲೇ ಹೊನ್ನಾವರದಲ್ಲಿ ಒಂದಿಬ್ಬರು ದೊಡ್ಡ ಕುಳಗಳು ಮಚವೆ ಇಟ್ಟಿದ್ದರು. ಅನಂತ ಇದ್ದ ದುಡ್ಡೆಲ್ಲ ಹಾಕಿ, ಎಲ್ಲೆಲ್ಲಿಂದಲೋ ಸಾಲ ಎತ್ತಿ ಮಂಗಳೂರಿನಲ್ಲಿ ಮಚವೆ ಕಟ್ಟಿಸಲು ಹಾಕಿದ. ಮಂಗಳೂರಿನಿಂದ ಗೋವಾಕ್ಕೆ ಅಲ್ಲಿಂದ ಮುಂಬಯಿಗೆ ಸ್ರಕು ಸಾಗಣೆ ವ್ಯವಹಾರ ಜೋರಾಗಿತ್ತು. ಆಗಿನ್ನೂ ಶರಾವತಿಗೆ ಸೇತುವೆಯಾಗಿರಲಿಲ್ಲ. ಅಕ್ಕಿ ಹೆಂಚು ಕಟ್ಟಿಗೆ ಮಾವು ಎಲ್ಲವನ್ನೂ ಮಚವೆಯಲ್ಲೇ ಸಾಗಿಸುತ್ತಿದ್ದರು. ಮುಂಬಯಿಯಲ್ಲಿ ತೆಂಗಿನಕಾಯಿಗೆ ಬೆಲೆ ಬಂದರೆ ಅದೂ ಹೋಗುತ್ತಿತ್ತು. ಊರಲ್ಲಿರುವ ಮಚವೆಗಳಿಗಿಂತ ದೊಡ್ಡದನ್ನು ಕಟ್ಟಿಸಿದರು. ಗೇರು ಎಣ್ಣೆ, ಕಪ್ಪು ಬಣ್ಣ ಹಚ್ಚಿದ ಅದರ ಹೊರಭಾಗ ಮೀರಿ ಮಿರಿ ಮಿಂಚುತ್ತಿತ್ತು. ಎತ್ತರದ ಹಾಯಿಕಂಬಗಳು ಆಕಾಶವನ್ನು ನೆಟ್ಟಿನಿಂತಂತಿದ್ದವು. ವಿಶಾಲವಾದ ಬೆಳ್ಳಗಿನ ಹಾಯಿಗಳಿಂದ, ಮಚವೆ ರೆಕ್ಕೆ ಬಿಚ್ಚಿ ಹಾರಲು ಸಿದ್ಧವಾದ ಹಾಗೆ ಕಾಣಿಸುತ್ತಿತ್ತು. ಮಚವೆಗೆ ‘ವಿಶ್ವಸಾಗರ’ ಎಂದು ಹೆಸರಿಟ್ಟರು. ಸಣ್ಣ ಹಡಗಿನ ಹಾಗೆ ಎರಡು ಮಜಲುಗಳಲ್ಲಿ ಸರಕು ಪೇರಿಸಿಡುವಂತೆ ಒಳವಿನ್ಯಾಸವಿತ್ತು. ಒಳಗೆ ಇಳಿದರೆ ದೊಡ್ಡ ಮಹಡಿ ಮನೆಯನ್ನು ಹೊಕ್ಕಂತಾಗುತ್ತಿತ್ತು. ಒಳಗೆ ಇಳಿಯುವ ನಿಚ್ಚಣಿಕೆಯ ಪಕ್ಕ ಮೂರು ಕೋಣೆಗಳಿದ್ದವು. ಅಡಿಗೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಎಲ್ಲ ವ್ಯವಸ್ಥೆ ಇತ್ತು. ಸರಕು ಹತ್ತಿ ಇಳಿಸಲು ಮೇಲ್ಗಡ್ಡೆ ಎರಡು ದೊಡ್ಡ ಬಾಗಿಲುಗಳು. ಉಳಿದೆಲ್ಲ ಕಡೆ ಸಂದಿಗೊಂದಿಗಳಲ್ಲಿ ಡಾಂಬರು ತುಂಬಿಸಿ ನೀರು ಒಳಬರದ ಹಾಗೆ ಮಾಡಿದ್ದರು. ಸರಕು ತುಂಬಿಸಿ ಬಾಗಿಲು ಮುಚ್ಚಿ ಸಂದಿಗಳಲ್ಲಿ ಅರಗು ಹಾಕಿಬಿಟ್ಟರೆ ಎಂಥ ಮಳೇಯಲ್ಲೂ ಒಂದು ಹನಿ ನೀರು ತಾಗುತ್ತಿರಲಿಲ್ಲ. ಒಳಗೆ ಹತ್ತಿಳಿಯುವುದಕ್ಕಿರುವ ಸಣ್ಣ ಬಾಗಿಲೊಂದನ್ನು ಬಿಟ್ಟರೆ ಸಾಮಾನು ತುಂಬಿಸಿದ್ದೇ ಉಳಿದ ಬಾಗಿಲುಗಳನ್ನು ಮುಚ್ಚಿ ಬಿಡುತ್ತಿದ್ದರು. ತೂಕ ಸರಿದೂಗಿಸಲು ಮಚವೆಯ ಮೇಲ್ಗಡೆ ಮರಳು ತುಂಬಿದ ಚೀಲಗಳನ್ನು ಪೇರಿಸಿಟ್ಟಿದ್ದರು. ದೊಡ್ಡ ರೀತಿಯಲ್ಲಿ ಪೂಜೆಯಾಗಿ, ಗೊಂಡೆಹೂವಿನ ಸರಗಳಿಂದ ಸಿಂಗಾರಗೊಂಡ ವಿಶ್ವಸಾಗರದ ಮೊದಲ ಯಾತ್ರೆ ಹೊನ್ನಾವರದಿಂದ ಮುಂಬಯಿಗೆ. ಅದರಲ್ಲಿ ರಘುವೀರನೂ ಹೊರಟ. ಅದು ಅವನ ಮೊದಲ ಸಮುದ್ರ ಯಾತ್ರೆ. ದಂಡೆಯಲ್ಲಿ ಕೈಬೀಸುತ್ತ ನಿಂತ ಜನ ದೂರವಾಗುತ್ತ, ನದಿ ಸಮುದ್ರ ಸೇರುವಲ್ಲಿ ಹೊಯ್ದಾಡಿ ಮಚವೆ ಸಮುದ್ರ ಸೇರಿತು. ಯಾರಾದರೂ ವಿಶ್ವಾಸದ ಜನ ಸಿಗುವವರೆಗೆ ಸ್ವತಃ ಹೋಗಿಬರುವುದು ಎಂದು ಆರಂಭವಾದ ಈ ಮಚವೆಯ ಸಖ್ಯ ಮುಂದಿನ ಹದಿನೈದು ವರ್ಷಗಳವರೆಗೆ ಮುಂದುವರಿದಿತ್ತು. ಪ್ರತಿ ಸಲ ಮಚವೆಯಲ್ಲಿ ಹೋಗುವಾಗಲೂ ಹೊಸತೆಂಬಂತೆ ಅದೇ ಮೊದಲ ಯಾತ್ರೆಯಂತೆ ರಘುವೀರನಿಗೆ ಅನಿಸುತ್ತಿತ್ತು. ಸಮುದ್ರದ ಲಹರಿ ಒಂದೊಂದು ಬಾರಿಯೂ ಒಂದೊಂದು ರೀತಿ. ಪ್ರತಿ ಸಾರಿಯೂ ಸಮುದ್ರದ ಹೊಸತೊಂದು ಗುಟ್ಟು ಬಿಚ್ಚಿಕೊಳ್ಳುತ್ತಿತ್ತು. ಜಟ್ಟಿಯ ಸ್ನಾಯುಗಳ ಹಾಗೆ ನುರಿಯುವ ಅಲೆಗಳ ನಡುವೆ ಗಾಳಿ, ಸೂರ್ಯ, ಚಂದ್ರ, ನಕ್ಷತ್ರ, ಮೋಡ ಎಲ್ಲ ಸರೀ ಒದಗಿಬಂದು ದಾರಿ ಸೂಚಿಸಬೇಕು. ಸುತ್ತಮುತ್ತ ನೀರೇ ನೀರು ತುಂಬಿದ್ದರೂ ಅದರಲ್ಲೇ ದಾರಿ ಕಾಣುವ ಶಕ್ತಿ ಬೇಕು. ಮೊದಲ ನಾಲ್ಕೈದು ವರ್ಷ ಕಾಸರಕೋಡಿನ ಅನುಭವಿ ನಾವಿಕ ಗಣು ಇದ್ದ. ಅವನಿಂದಲೇ ರಘುವೀರ ಎಲ್ಲ ರಹಸ್ಯಗಳನ್ನು ಅರಿತದ್ದು: ಗಾಳಿಯ ಸೂಚನೆ ತಿಳಿಯುವುದು ಹೇಗೆ, ಗಾಳಿ ಅನುಕೂಲವಿಲ್ಲದಿದ್ದರೂ ಚಿಕ್ಕ ಚಿಕ್ಕ ಹಾಯಿಗಳನ್ನು ಹೇಗೆ ವಿವಿಧ ಕೋನಗಳಲ್ಲಿ ನಿಲ್ಲಿಸಿ ಮುಂದಿನ ಮುಖ್ಯ ಹಾಯಿಯತ್ತ ಗಾಳಿಯ ಬಲ ಹಾಯುವ ಹಾಗೆ ಮಾಡಬೇಕು, ನೀರಿನ ಬಣ್ಣದಿಂದ ಮೀನಿನ ಹಿಂಡು ಗುರುತಿಸುವುದು ಹೇಗೆ, ತೂಫಾನಿನ ಸುಳಿವು ಹಿಡಿಯುವುದು ಹೇಗೆ, ದಿಕ್ಸೂಚಿಯನ್ನು ಉಪಯೋಗಿಸುವುದು ಹೇಗೆ, ಈ ನಕ್ಷತ್ರ ಇಲ್ಲಿದ್ದರೆ ನೀನು ಇಂಥಲ್ಲಿದ್ದೀ, ಆ ನಕ್ಷತ್ರಕ್ಕೆ ಮುಖ ಮಾಡಿ ನಿಂತರೆ ಬಲಕ್ಕಿರುವುದು ಮುಂಬಯಿ ಇತ್ಯಾದಿಗಳನ್ನು ಕಲಿತದ್ದು ಅವನಿಂದಲೇ. ಅವನಿದ್ದಷ್ಟು ದಿನವೂ ಅವನು ರಘುವೀರನ ಹತ್ತಿರದ ಗೆಳೆಯನಾಗಿದ್ದ. ಕೊನೆಗೊಂದು ದಿವಸ ಯಾವುದೋ ಹಡಗಿನಲ್ಲಿ ಕೆಲಸ ಸಿಕ್ಕಿತೆಂದು ಹೇಳಿ ಬಿಟ್ಟು ಹೊರಟುಹೋದ.

-೩-

ಅನಂತ ಮುಂಬಯಿಯ ಯಾವುದೋ ಕಂಪನಿಗೆ ಬರೆದು, ಅವರು ಅಲ್ಲಿಂದ ಮಂಗಳೂರಿಗೆ ಸಾಗಿಸುವ ಸರಕನ್ನು ಇವರ ಮಚವೆ ಮುಂಬಯಿ ತಲಪುವ ವೇಳೆಗೆ ತಯಾರಾಗಿ ಇಡುವ ವ್ಯವಸ್ಥೆ ಮಾಡಿದ್ದ. ಇಲ್ಲಿಂದ ಒಯ್ದ ಸಾಮಾನು ಅಲ್ಲಿ ಇಳಿಸಿ ತೂಕ ಹಾಕಿಸಿ ರಸೀತಿ ಪಡೆದು, ಮತ್ತೆ ಮಾಲು ಏರಿಸಿ ವಾಪಸು ಹೊರಡುವುದಷ್ಟೆ ರಘುವೀರನ ಜವಾಬ್ದಾರಿ. ಅವನಿಗೆ ಅದಕ್ಕಿಂತ ಹೆಚ್ಚಿನದರಲ್ಲಿ ಆಸಕ್ತಿಯೂ ಇರಲಿಲ್ಲ. ಮಂಗಳೂರಿನಲ್ಲಿಯೂ ಅದೇ ರೀತಿಯ ಏರ್ಪಾಡಾಗಿತ್ತು. ಹೊನ್ನಾವರದ ವ್ಯವಹಾರವನ್ನೆಲ್ಲ ಅನಂತ ನೋಡಿಕೊಳ್ಳುತ್ತಿದ್ದ. ಆಗಾಗ ಮಚವೆ ಹೊನ್ನಾವರಕ್ಕೆ ಬಂದು ಹೋಗುವುದಂತೂ ಇದ್ದೇ ಇತ್ತು. ಮಚವೆಯ ವ್ಯವಹಾರದಲ್ಲಿ ಅದೆಷ್ಟು ದುಡ್ಡು ಬಂತು ಹೋಯಿತು ಎಂದು ರಘುವೀರ ಯಾವತ್ತು ತಲೆಕೆಡಿಸಿಕೊಳ್ಳಲಿಲ್ಲ. ಮಚವೆಯ ರಿಪೇರಿ, ಬಣ್ಣ, ನೌಕರಿಗೆ ಸಂಬಳ, ಮುಂಬಯಿ ಮಂಗಳೂರಲ್ಲಿ ಅಗತ್ಯದ ಖರ್ಚುಗಳಿಗೆ ಬೇಕಾದ ಹಣವನ್ನು ಅನಂತನಿಂದ ತಗೊಳ್ಳುತ್ತಿದ್ದ. ಅನಂತನೂ ಯಾಕೆ ಏನು ಎಂದು ಕೇಳದೇ ಅವನು ಕೇಳಿದಷ್ಟು ತೆಗೆದುಕೊಡುತ್ತಿದ್ದ. ಇತರರ ಮಚವೆಗಳಲ್ಲಿ ಎಷ್ಟೇ ನಂಬಿಕಸ್ತ ನೌಕರರಿದ್ದರೂ ಒಂದು ಬಂದರಿನಿಂದ ಇನ್ನೊಂದು ಕಡೆ ಕದ್ದು ಮಾಲು ಸಾಗಿಸುತ್ತಿದ್ದರು. ಹೆಂಡವೋ, ಪರ್ಮಿಟ್ಟಿಲ್ಲದೇ ಅಕ್ಕಿಯೋ, ಕಟ್ಟಿಗೆಯ ನಾಟವೋ ಏನೋ ಒಂದು ಕಳ್ಳವ್ಯವಹಾರ ನಡೆದೇ ನಡೆಯುತ್ತಿತ್ತು. ರಘುವೀರ ಸ್ವತಃ ಸದಾ ಮಚವೆಯ ಮೇಲೇ ಇರುವುದರಿಂದ ವಿಶ್ವಸಾಗರದಲ್ಲಿ ಇಂಥ ವ್ಯವಹಾರ ನಡೆಯಲಿಲ್ಲ. ಹಾಗಾಗಿ ಯಾವ ಮೇಲು ಸಂಪಾದನೆಯೂ ಇಲ್ಲದ ಈ ಕೆಲಸದಲ್ಲಿ ಆಳುಗಳು ಬಹಳ ಕಾಲ ಇರುತ್ತಲೇ ಇಲ್ಲ. ಹೊಸಬರು ಕೆಲಸ ಕಲಿಯಲು ಬಂದು ಬೇರೆ ಕಡೆ ಕೆಲಸ ಸಿಕ್ಕಿದ್ದೇ ಹೊರಟುಬಿಡುತ್ತಿದ್ದರು. ಮಚವೆಯ ಏರಿಳಿತ ಎದೆತಿದಿಯ ಹಾಗೆ ರಘುವೀರನಲ್ಲಿ ಒಂದಾಗಿಬಿಟ್ಟಿತ್ತು. ಕೊನೆಗಾಣದ ನೀರಿನಲ್ಲಿ ದಿಕ್ಕನ್ನು ಸೂಚಿಸುವ ಮುಳ್ಳಿನ ಭರವಸೆಯ ಮೇಲೆ ಹಾಯಿಗಳ ಆಕಾರ, ಎತ್ತರ, ದಿಕ್ಕು, ಕೋನಗಳನ್ನು ಬದಲಾಯಿಸುತ್ತ ನೀರಿನಲ್ಲಿ ಹಾದಿ ಹುಡುಕಿ ಹೋಗುವುದು ಯಾವುದೋ ಅಲೌಕಿಕದ ಬೆನ್ನು ಹತ್ತಿ ಹೋಗುವ ಹುಚ್ಚಿನ ಹಾಗೆ ಅಂಟಿಕೊಂಡಿತ್ತು. ಒಂದು ಕಡೆಯಿಂದ ಏರಿ ಇನ್ನೊಂದು ಕಡೆ ಇಳಿಯುವ ಸೂರ್ಯ. ಅದೇ ಚಕ್ರದಲ್ಲಿ ಸುತ್ತಿ ಸುತ್ತಿ ಹದಿನೈದು ವರ್ಷಗಳು ಕಳೆದುಹೋದವು. ಆದರೂ ಪ್ರತಿ ಬಾರಿಯೂ ಹೊಸತೇನೋ ದಕ್ಕಿದ ಹಾಗೆ; ಸಿಗಬೇಕಾದ್ದಿನ್ನೂ ಸಿಕ್ಕಿಲ್ಲದ ಹಾಗೆ; ಸಮಾಧಾನ ಮತ್ತು ಅತೃಪ್ತಿ ಒಟ್ಟೊಟ್ಟಿಗೆ. ರಘುವೀರ ತನ್ನ ಮಚವೆಗೆ ತಾನೇ ತಯಾರಿಸಿದ ಹಲವಾರು ಹೊಸ ಆಕಾರದ ಹಾಯಿಗಳನ್ನು ಜೋಡಿಸಿದ್ದ. ಮಚವೆಯ ತೂಕ, ಗಾಳಿಯ ಬಲ ನೋಡಿಕೊಂಡು ಹಲವನ್ನು ಬಿಚ್ಚುತ್ತಿದ್ದ, ಹಲವನ್ನು ಸುತ್ತಿಡುತ್ತಿದ್ದ. ಗಂಟೆಗಟ್ಟಲೆ ಮಚವೆಯ ಮೇಲ್ಭಾಗದಲ್ಲಿ ಕೂತು ಹಲವಾರು ಕೋನಗಳಲ್ಲಿ ಅವುಗಳನ್ನು ಹೊಂದಿಸುತ್ತ ಅದೇನೋ ಧ್ಯಾನದಲ್ಲಿರುತ್ತಿದ್ದ. ಅವನ ಮಚವೆ ಉಳಿದವರಿಗಿಂತ ಮುಕ್ಕಾಲು ದಿವಸ ಮೊದಲೇ ಮಂಗಳೂರಿನಿಂದ ಮುಂಬಯಿ ಸೇರುವ ಹಾಗೆ ಮಾಡುತ್ತಿದ್ದ. ಮಳೆಗಾಲದಲ್ಲಿ ಮೂರು ತಿಂಗಳು ಮಚವೆ ನಡೆಸುತ್ತಿರಲಿಲ್ಲ. ಆಗ ಅದರ ರಿಪೇರಿ ಬಣ್ಣ ಇತ್ಯಾದಿ ಆಗಬೇಕು. ಆ ದಿವಸಗಳಲ್ಲಿ ಮಳೆಗಾಲ ಮುಗಿಯುವುದನ್ನೇ ಎದುರುನೋಡುತ್ತ ಚಡಪಡಿಸುತ್ತಿದ್ದ. ರಘುವೀರ ಮಚವೆಯಲ್ಲಿ ಸುತ್ತುತ್ತಿದ್ದ ವರ್ಷಗಳಲ್ಲಿ ಜನ ಈತ ತೀರಾ ಭೋಳೇ, ಇವನು ಹೀಗೆ ಹಮಾಲರ ಹಾಗೆ ದುಡಿಯುವದು, ಇವನ ಅಣ್ಣ ಮಚವೆಯಿಂದ ಬರುವ ದುಡ್ಡಿನಿಂದ ಸಾವುಕಾರನಾಗಿ ಕಾಲ ಮೇಲೆ ಕಾಲು ಹಾಕಿ ಕೂರುವುದು ಎಂದೆಲ್ಲ ಆಡಿಕೊಂಡರು. ಆಳುಗಳನ್ನಿಟ್ಟು ಮಚವೆ ನಡೆಸುವುದರ ಬದಲು ಇವನೇಕೆ ಖಾರ್ವಿಯ ಹಾಗೆ ಯಾವಾಗಲೂ ಅದರ ಮೇಲೆಯೇ ಇರುತ್ತಾನಲ್ಲ ಎಂದು ಆಡಿಕೊಂಡರು. ಕೆಲವರು ಅದನ್ನು ರಘುವೀರನಿಗೆ ಚುಚ್ಚಿ ಹೇಳಲು ನೋಡಿದರು. ಅವನು ಹಾಂ ಹಾಂ ಎಂದು ಸುಮ್ಮನಾಗಿದ್ದಕ್ಕೆ ಕೈಲಾಗದವನು ಅಂದುಕೊಂಡರು. ಈ ನಡುವೆ ಅನಂತ ಹಳೆಯ ಅಡಿಕೆ ವ್ಯಾಪಾರದ ಜೊತೆಗೆ ಅಂಗಡಿಯ ಪಕ್ಕದ ಭಾಗವನ್ನೂ ಕೊಂಡುಕೊಂಡು ಕಿರಾಣಿ ವ್ಯಾಪಾರ ಸುರುಮಾಡಿದ್ದ. ಭರಭರಾಟೆಯ ವ್ಯಾಪಾರ ನಡೆಯುತ್ತಿತ್ತು. ಅಡಿಕೆ ಹಾಕಿ ದುಡ್ಡು ತಗೊಂಡ ಜನ ಅಲ್ಲೇ ಕಿರಾಣಿ ವ್ಯಾಪಾರವನ್ನೂ ಮುಗಿಸಿ ಹೋಗುತ್ತಿದ್ದರು. ಸಣ್ಣ ತೋಟ ಇರುವವರಿಗೆ ಕಿರಾಣಿ ಸಾಲ ಕೊಟ್ಟು ಬೆಳೆ ಬಂದಾಗ ಅವರ ಅಡಿಕೆ ತನ್ನ ಅಂಗಡಿಗೆ ತನ್ನ ಧಾರಣೆಗೇ ಬರುವ ಹಾಗೆ ಮಾಡುವ ಚಾಲಾಕಿತನವೂ ಅನಂತನಿಗಿತ್ತು.

-೪-

ಶರಾವತಿಗೆ ಸೇತುವೆಯಾದ ಮೇಲೆ ಮುಂಬೈನಿಂದ ಮಂಗಳೂರಿಗೆ ಒಂದೇ ಸಮನೆ ಲಾರಿಗಳು ಓಡಾಡಲಾರಂಭಿಸಿದವು. ಮಚವೆಯ ಮೂಲಕ ಸರಕು ಸಾಗಿಸುವುದು ಇಳಿಮುಖವಾಗುತ್ತ ಬಂದು ಇನ್ನು ನಡೆಸಲಿಕ್ಕಾಗದ ಸ್ಥಿತಿ ಬಂತು. ಅದರ ವರ್ಷದ ರಿಪೇರಿ, ನೌಕರರ ಸಂಬಳಕ್ಕೂ ದುಡ್ಡು ಹುಟ್ಟದಿರುವ ಪ್ರಸಂಗ ಬಂತು. ಆಗ ಅನಂತ ರಘುವೀರನ ಜೊತೆ ಮಚವೆ ದಂಡೆಗಿಳಿದು ಹಾಕುವ ಮಾತು ತೆಗೆದ. ಇತ್ತೀಚೆಗೆ ಎಷ್ಟೋ ಬಾರಿ ಬರೀ ಕಾಲು ಭಾಗ ಸಾಮಾನು ತುಂಬಿಕೊಂಡು ಹೋಗುವಾಗಲೇ ರಘುವೀರನಿಗೆ ಇದರ ಬಗ್ಗೆ ಅನುಮಾನ ಬಂದಿತ್ತು. ಮಚವೆಯಲ್ಲಿ ಸಾಗಿಸಲು ತಗಲುವಷ್ಟು ಕಾಲ ಕಾಯಲು ಯಾರೂ ತಯಾರಿರಲಿಲ್ಲ. ಮಚವೆಯಲ್ಲಿ ಕಳಿಸಿ ಅದು ವಾರದ ಮೇಲೆ ತಲುಪಿ ಅಲ್ಲಿಂದ ವಸೂಲಿಯಾಗಲು ವಾರ ಕಾಯಬೇಕಲ್ಲ; ಲಾರಿಯಲ್ಲಾದರೆ ಬೆಲೆ ಹೆಚ್ಚಾದರೂ ನಾಲ್ಕೈದು ದಿವಸಕ್ಕೆ ಎಲ್ಲವೂ ಆಗುತ್ತದಲ್ಲ ಅನ್ನುತ್ತಿದ್ದರು. ಅದೇನು ಬದುಕಲು ಪುರುಸತ್ತಿಲ್ಲದವರ ಹಾಗೆ ವೇಳೆ ವೇಳೆ ಎಂದು ಸಾಯುತ್ತಾರೋ ಎಂದು ರಘುವೀರನಿಗೆ ಅನಿಸುತ್ತಿತ್ತು. ಕೊನೆಗೂ ಮಚವೆಯನ್ನು ದಂಡೆಗೆಳೆದು ಹಾಕಿದ ಮೇಲೆ ರಘುವೀರ ಹೊನ್ನಾವರದಲ್ಲೇ ಇರಬೇಕಾಯಿತು. ಮಳೆಗಾಲದಲ್ಲಿ ಊರಿಗೆ ಬಂದು ಇರುತ್ತಿದ್ದರೂ ಸದಾ ಅಲ್ಲಿರಬೇಕಾಗಿ ಬಂದಾಗ ಜನ ಬೇರೆಯದೇ ಥರ ಕಾಣತೊಡಗಿದರು. ಮೊದಲ ಕೆಲವು ದಿವಸ ಏನೂ ಮಾಡದೇ ಸುಮ್ಮನೇ ಮನೆಯಲ್ಲಿದ್ದ. ಆಮೇಲೆ ಅನಂತನ ಅಂಗಡಿಗೆ ಹೋಗಿ ಏನಾದರೂ ಕೆಲಸದಲ್ಲಿ ತೊಡಗತೊಡಗಿದ. ಬೇಸರವಾದರೆ ರಾಮತೀರ್ಥಕ್ಕೆ ಹೋಗಿ ಧಾರೆಯ ಕೆಳಗೆ ನಿಂತುಬಿಡುತ್ತಿದ್ದ. ನೆಲದ ಮೇಲೆ ಬದುಕಿಯೇ ಗೊತ್ತಿಲ್ಲದವನ ಹಾಗೆ ಏನೂ ತೋಚದೇ, ಸಮಯ ಸಾಗದೇ ನಿಂತುಬಿಟ್ಟಿದೆಯೇನೋ ಅನಿಸುತ್ತಿತ್ತು. “ನೀನು ಲಾರಿ ನೋಡಿಕೊಳ್ಳುವುದಾದರೆ ಒಂದು ಕೊಳ್ಳುವ ವಿಚಾರ ಮಾಡುವಾ” ಎಂಬ ಅನಂತನ ಸೂಚನೆಯನ್ನು ನಿರಾಕರಿಸಿಬಿಟ್ಟ. ಹಿಂದೆ ಹೊನ್ನಾವರದಿಂದ ಮಚವೆ ಹೋಗುವಾಗ “ರಘುವೀರ ನಮ್ಮ ಮಾಲು ಹಾಕಿದ್ದೇವಪ್ಪಾ…… ನೀನೇ ನೋಡಿಕೊಳ್ಳಬೇಕು……” ಎಂದು ಮಾತಾಡಿಸುತ್ತಿದ್ದ ಜನ, ಮುಂಬೈಯಲ್ಲಿ ಯಾರು ಯಾರಿಗೋ ತಲುಪಿಸಲು ಉಪ್ಪಿನಕಾಯಿ ಹಪ್ಪಳ ಕೊಟ್ಟು, ಅಲ್ಲಿಂದ ಬರುವಾಗ ತರುವ ಸಾಮಾನಿನ ಪಟ್ಟಿ ಕೊಟ್ಟು ‘ನಮ್ಮ ರಘುವೀರ’ ಎಂದು ಪುಸಲಾಯಿಸುತ್ತಿದ್ದ ಜನರ ಬಾಯಲ್ಲೇ ರಘುವೀರ ಯಾವುದಕ್ಕೂ ಪ್ರಯೋಜನವಿಲ್ಲದವನಾಗಿಬಿಟ್ಟ. ರಘುವೀರ ಊರಲ್ಲಿ ನೆಲೆಸಿದ ಆರು ತಿಂಗಳಲ್ಲಿ ಅನಂತ ಹೊಸ ಮನೆಯೊಂದನ್ನು ಕಟ್ಟಿಸುವ ಯೋಚನೆ ಮಾಡಿದ. ಅದುವರೆಗೂ ಇಡಿಯ ಕುಟುಂಬಕ್ಕೆ ಸೇರಿದ ಮನೆಯಲ್ಲಿ, ದಾಯಾದಿಗಳ ಇನ್ನಿತರ ಎರಡು ಸಂಸಾರಗಳ ಜೊತೆ ಇರುತ್ತಿದ್ದರು. ಅದು ಹಳೆಯ ದೊಡ್ಡ ಮನೆ. ರಘುವೀರನ ಅಪ್ಪನ ಕಾಲದಲ್ಲೇ ಪಾಲಾಗಿ ಪ್ರತ್ಯೇಕ ಮೂರು ಒಲೆಗಳು ಉರಿಯುತ್ತಿದ್ದವು. ಗೆರೆಯೆಳೆದು ಗೋಡೆಕಟ್ಟಿ ಪಾಲುಮಾಡಿಕೊಂಡಿರಲಿಲ್ಲವಾದ್ದರಿಂದ, ಬರೀ ಕೋಣೆಗಳನ್ನು ಹಂಚಿಕೊಂಡಿದ್ದರಿಂದ, ಒಬ್ಬರ ಜಾಗದಲ್ಲಿ ಇನ್ನೊಬ್ಬರು ಹಾದುಹೋಗಬೇಕಾದ ಅನಿವಾರ್ಯತೆಯಿಂದ ಪರಸ್ಪರ ಸೌಹಾರ್ದವಿನ್ನೂ ಸ್ವಲ್ಪಮಟ್ಟಿಗೆ ಉಳಿದುಕೊಂಡಿತ್ತು. ಅನಂತರ ಹೆಂಡತಿ ಪ್ರಭಾವತಿ ಮನೆಗೆ ಹಿರಿಯ ಸೊಸೆ. ಅವಳು ಜಾಣ್ಮೆಯಿಂದ ಯಾವ ಮುಖಾಮುಖಿಗೂ ಇಳಿಯದೇ ಸುಸೂತ್ರ ನಿರ್ವಹಿಸಿಕೊಂಡಿದ್ದಳು. ಅನಂತನಿಗೆ ಇಬ್ಬರು ಗಂಡುಮಕ್ಕಳು. ಮಕ್ಕಳು ಬೆಳೆಯುತ್ತಿದ್ದ ಹಾಗೆ, ಈಗ ರಘುವೀರನೂ ಇಲ್ಲಿಯೇ ಇರುವುದೆಂದಾದ ಮೇಲೆ ಜಾಗ ಸಾಲದು ಎಂದು ಹೊಸ ಮನೆಯ ಯೋಚನೆ ಮಾಡಿದ್ದ. ಜಾಗ ಕೊಂಡು ಆರು ತಿಂಗಳಿನಲ್ಲಿ ಮನೆಯೂ ತಯಾರಾಗಿ ಎಲ್ಲ ಅಲ್ಲಿಗೆ ಹೋದರು. ಆಗಲೇ ರಘುವೀರನ ಅಮ್ಮ ಮದುವೆಯಾಗೆಂದು ಅವನನ್ನು ಸತಾಯಿಸಲು ಸುರುಮಾಡಿದ್ದು. ತಾನೇ ಹಾಯಿ ಹರಿದ ಮಚವೆಯ ಹಾಗೆ ದಿಕ್ಕು ತೋಚದೆ ಇರುವಾಗ ಇನ್ನು ಈ ಸಂಸಾರದ ರಗಳೆ ಬೇಡವೆಂದುಕೊಂಡಿದ್ದ. ಅವನಿಗಾಗಲೇ ಮೂವತ್ತೈದು ವರ್ಷವಾಗಿತ್ತು. ಕೂದಲು ನೆರೆಯಲಾರಂಭಿಸಿದ್ದವು. ಮೋರೆಯ ಮೇಲೆ ಸದಾ ಕುರುಚಲು ಗಡ್ಡ. ಮಚವೆಯ ಮೇಲೆ ಯಾವುದೋ ಬಟ್ಟೆ ಹಾಕಿಕೊಂಡಿರುತ್ತಿದ್ದವನು ಈಗ ಪೈಜಾಮ ಅಂಗಿ ಹಾಕುತ್ತಿದ್ದ. ಸದಾ ತಾಯಿ ಅತ್ತೂ ಕರೆದು ಅನಂತನೂ ಒತ್ತಾಯಿಸಿದಾಗ ಯಾವುದೋ ಅಳಿಗೆಯಲ್ಲಿ ಮದುವೆಗೆ ಹೂಂ ಅಂದು ಬಿಟ್ಟಿದ್ದ. ಹಳದೀಪುರದ ಹುಡುಗಿ ಮಾಲಿನಿ ಸಿಕ್ಕಿದ್ದಳು. ಮೂವತ್ತೆರಡಾದರೂ ಮದುವೆಯಾಗದೇ ಉಳಿದವಳು. ಸಾಧಾರಣ ರೂಪ. “ಆ ರಘುವೀರನಾದರೂ ಏನು…… ವಯಸ್ಸಾಗಿದೆಯಲ್ಲ…… ಅಲ್ಲದೇ ಅವನದ್ದು ಅಂತ ಏನಿದೆ? ಎಲ್ಲ ಅಣ್ಣನದೇ ಕಾರುಬಾರು……” ಎಂದು ಜನ ಆಡಿಕೊಳ್ಳುತ್ತಿದ್ದರಿಂದ ಅವನಿಗೆ ಹೆಣ್ಣು ಕೊಡಲು ತಯಾರಾಗಿದ್ದವರೂ ಬಹಳ ಜನ ಇರಲಿಲ್ಲ. ಹಳದೀ ಪುರದಲ್ಲೇ ಮದುವೆಯೂ ಆಯಿತು. ಮಗನ ಮದುವೆಗೆ ಒಂದು ತಿಂಗಳಿರುವಾಗಲೇ ಮದುವೆ ಮದುವೆ ಎಂದು ಹಲುಬಿದ ಅವನ ಅಮ್ಮ ತೀರಿಕೊಂಡಳು. ಅದಾದ ನಂತರ ರಘುವೀರನ ಜೊತೆ ಅನಂತ ಪಾಲಿನ ಮಾತು ತೆಗೆದ. ಪಾಲಿನ ಮಾತು ತೆಗೆದದ್ದೇ ರಘುವೀರನಿಗೆ ಚಿಕ್ಕಪ್ಪ ಪಬ್ಬನ ನೆನಪಾಗಿ ಏನೂ ಬೇಡ ಅನಿಸಿಬಿಟ್ಟಿತು. “ನನಗೇನೂ ಆಸೆಯಿಲ್ಲ. ನೀನೇ ಎಲ್ಲ ಇಟ್ಟುಕೊ” ಅಂದ. ಅನಂತ “ಈಗ ಪಾಲಾಗುವುದೇ ಒಳ್ಳೆಯದು…… ಮುಂದೆ ನಿನ್ನ ಮಕ್ಕಳು ನನ್ನ ಮಕ್ಕಳು ಹೇಗೋ ಏನೋ…… ಅವರು ಜಗಳವಾಡಿ ಪಾಲು ಮಾಡಿಕೊಳ್ಳುವುದಕ್ಕಿಂತ ನಾವು ಚೆನ್ನಾಗಿರುವಾಗಲೇ ಪಾಲು ಮಾಡಿಕೊಳ್ಳುವುದು ಒಳ್ಳೆಯದು……” ಅಂದ. ಹದಿನಾರು ವರ್ಷಗಳ ಹಿಂದಿನ ಲೆಕ್ಕಾಚಾರ ಹಾಕುತ್ತ “ಅಪ್ಪ ಬಿಟ್ಟು ಹೋದ ಹಣ, ನಾವು ತಗೊಂಡ ಸಾಲ ಸೇರಿಸಿ ಮಚವೆ ಕೊಂಡೆವಲ್ಲ. ಅದು ನಿನ್ನದೇ. ಮಚವೆಯಿಂದ ಬಂದ ದುಡ್ಡಿನಲ್ಲಿ ಸಾಲ ತೀರಿಸಿ, ಅದರ ಖರ್ಚು ಕಳೆದು ಬಂದ ಲಾಭವೆಲ್ಲ ನಿನ್ನ ಹೆಸರಲ್ಲಿ ನಲವತ್ತು ಸಾವಿರ ಇದೆ. ಅಂಗಡಿ ನನ್ನ ಪಾಲಿನದು – ಅಂದುಕೊಂಡಿದ್ದೇನೆ. ಅದರಿಂದ ಬಂದದ್ದು ಸ್ವಯಾರ್ಜಿತ. ಹಳೆಯ ಮನೆಯಲ್ಲಿ ನನಗೆ ಪಾಲು ಬೇಡ…… ಅದು ನಿನಗೇ ಇರಲಿ. ನೀನೀಗ ಮದುವೆಯಾದ ಮೇಲೆ ನನ್ನ ಜೊತೆಯೇ ಇರಬಹುದು. ಆ ಮನೆಯ ಪಾಲು ಬೇಡವಾದರೆ ಅಲ್ಲಿರುವವರಿಗೇ ಅದನ್ನು ಮಾರಿ ದುಡ್ಡು ತಗೊಂಡುಬಿಡು…… ಇನ್ನು ಅಮ್ಮನ ಬಂಗಾರದಲ್ಲಿ ಅರ್ಧ ನನಗೆ ಅರ್ಧ ನಿನಗೆ…… ನೀನು ನನ್ನ ಜೊತೆ ಅಂಗಡಿಯಲ್ಲಿದ್ದರೆ ನನಗೂ ಸಹಾಯವಾಗುತ್ತದೆ…… ಮತ್ತೆ ಬೇರೆ ಮನೆ ಮಾಡಲು ಹೋಗಬೇಡ……” ಎಂದೆಲ್ಲ ಹೇಳಿದ. ರಘುವೀರ ಎಲ್ಲದಕ್ಕೂ ಹೂಂ ಹೂಂ ಅಂದ. ಇಷ್ಟೇ ಮಾತುಗಳಲ್ಲಿ ಪಾಲಾಗಿ ಹೋಯಿತು. ಅಮ್ಮನ ಬಂಗಾರದ ಪಾಲು ಕೊಟ್ಟು ಬ್ಯಾಂಕಲ್ಲಿ ಇಡು ಅಂದ. ಅದರಲ್ಲೇ ಒಂದಿಷ್ಟು ಮುರಿಸಿ ಮಾಲಿನಿಗೆ ಮದುವೆಯ ಆಭರಣ ಮಾಡಿಸಿದ್ದಾಯಿತು.

-೫-

ಪಬ್ಬ ಅಂದರೆ ರಘುವೀರನ ಚಿಕ್ಕಪ್ಪ. ಅವನ ಹೆಸರು ಪ್ರಭಾಕರ. ಸಣ್ಣ ಹುಡುಗರೂ ಅವನನ್ನು ಪಬ್ಬ ಅಂತಲೇ ಕರೆಯುವುದು. ರಘುವೀರನ ಅಪ್ಪನಿಗೆ ಮೂರು ಜನ ತಮ್ಮಂದಿರು. ಅವರ ಅಪ್ಪ ಬದುಕಿರುವವರೆಗೆ ಒಂದೇ ಮನೆಯಲ್ಲಿ ಒಂದೇ ಕುಟುಂಬವಾಗಿದ್ದರು. ಎಲ್ಲರೂ ಸೇರಿ ಅಂಗಡಿ ನಡೆಸುತ್ತಿದ್ದರು. ಉದ್ದೋ ಉದ್ದ ದೊಡ್ಡ ಅಂಗಡಿ. ಮೂವರು ಅಣ್ಣ ತಮ್ಮಂದಿರು ಅಂಗಡಿಯಲ್ಲಿ ದುಡಿಯುತ್ತಿದ್ದರು. ಪಬ್ಬ ಮಾತ್ರ ಎಂದೂ ಆ ಕಡೆ ಹಾದವನಲ್ಲ. ಅವನ ಪಾಡಿಗೆ ನಾಟಕ ಆಡಿಸಿಕೊಂಡು ಇದ್ದ. ಅವನಿಗೆ ಅದೇನೋ ನಾಟಕದ ಹುಚ್ಚು. ಊರಲ್ಲಿ ಒಂದಿಷ್ಟು ಹುಡುಗರನ್ನು ಕಟ್ಟಿ ನಾಟಕ ಆಡಿಸಿದ. ಕೆಲವೊಮ್ಮೆ ಹುಬ್ಬಳ್ಳಿಯಿಂದ ಜನ ಕರೆಸಿ ನಾಟಕ ಆಡಿಸುತ್ತಿದ್ದ. ಸ್ವತಃ ಅಭಿನಯಿಸುತ್ತಿದ್ದ. ಅವನು ಆಡಿಸಿದ ನಾಟಕ ನೋಡಿ ಏಣಿಗಿ ಕಂಪನಿಯವರೇ ಬೆರಗಾಗಿದ್ದರಂತೆ. ಅವನ ಪಾತ್ರ ನೋಡಿ ಏಣಿಗಿ ಬಾಳಪ್ಪನವರು ಬಕ್ಷೀಸು ಕೊಟ್ಟಿದ್ದರಂತೆ – ಹೀಗೆಲ್ಲ ಅವನ ಬಗ್ಗೆ ಕತೆಗಳು. ವಯಸ್ಸು ಮೀರಿ ಹೋಗಿದ್ದರೂ ಮದುವೆಯಾಗದೇ ಉಳಿದಿದ್ದ. ಪಬ್ಬ ಇಲ್ಲದೇ ಇದ್ದರೆ ಮನೆಯ ಹೆಂಗಸರಿಗೆ ಕೈ ಮುರಿದ ಹಾಗಾಗುತ್ತಿತ್ತು. ಕಿರಾಣಿ ಸಾಮಾನು ತರಕಾರಿ ತೆಂಗಿನಕಾಯಿ ಎಲ್ಲ ಅವನೇ ನೋಡಿಕೊಳ್ಳುವುದು. ಬೆಳಿಗ್ಗೆ ಬೇಗನೇ ಎದ್ದು ಹಿತ್ತಲಲ್ಲಿ ಪುರುಳೆ ಆರಿಸಿ ಬಚ್ಚಲ ಒಲೆ ಹತ್ತಿಸುವುದು. ಬೆಳಗಿನ ಕೆಲಸ ಮುಗಿಸಿ ಗಂಜಿ ಉಂಡು ಅವನು ತನ್ನ ನಾಯಕದ ಕೆಲಸಕ್ಕೆ ಹೊರಟುಬಿಡುತ್ತಿದ್ದ. ಚೌತಿ ಹಬ್ಬಕ್ಕೆ ಎಲ್ಲ ತಯಾರಿಯೂ ಅವನದೇ. ಫಲಾವಳಿ ಕಟ್ಟಲು ಎಲ್ಲೆಂಲ್ಲಿಂದಲೋ ಅಪರೂಪದ ಹಣ್ಣು ತರಕಾರಿ ತರುತ್ತಿದ್ದ. ಮಂಟಪದ ಅಲಂಕಾರ ಅವನದೇ. ಅಣ್ಣಂದಿರು ಯಾರೂ ಅವನನ್ನು ಅಂಗಡಿ ಕೆಲಸಕ್ಕೂ ಎಳೆದಿರಲಿಲ್ಲ. ಅವನು ಏನಾದರೂ ಮಾಡಬೇಕು ಎಂದು ಅವರಿಗೆ ಒಳಗೊಳಗೇ ಅನಿಸಿದ್ದರೂ ನಾಟಕದ ಚಟ ಹತ್ತಿಸಿಕೊಂಡರೂ ಮನೆಯ ವ್ಯವಹಾರವಾದರೂ ನೋಡಿಕೊಂಡು ಇದ್ದಾನಲ್ಲ ಎಂದು ಸುಮ್ಮನಿದ್ದರು. ಮಕ್ಕಳಿಗೆಲ್ಲ ಪಬ್ಬ ಎಂದರೆ ಪ್ರಾಣ. ಅವರಿಗೆ ಅವನ ಬಣ್ಣದ ಬೇಗಡೆಯಿಂದ ಕಿರೀಟ ಗಿರೀಟ ಮಾಡಿಕೊಟ್ಟು ಬೇರೆಯದೇ ಲೋಕಕ್ಕೆ ಒಯ್ಯುತ್ತಿದ್ದ. ಆಸುಪಾಸಿನಲ್ಲೆಲ್ಲ ಅವನ ನಾಟಕದ ಖ್ಯಾತಿ ಹರಡಿತ್ತು. ಬೇರೆ ಊರಲ್ಲಿ ನಾನು ಹೊನ್ನಾವರದವನು ಅಂದರೆ ನಿಮಗೆ ಪಬ್ಬ ಗೊತ್ತೋ? ಅನ್ನುವಷ್ಟರವರೆಗೆ ಅವನು ಹೆಸರು ಮಾಡಿದ್ದ. ಅಪ್ಪ ಬದುಕಿರುವವರೆಗೂ ಒಟ್ಟಿಗೇ ಇದ್ದ ಅಣ್ಣ ತಮ್ಮಂದಿರು ಅವನು ತೀರಿಕೊಂಡ ಆರು ತಿಂಗಳಿಗೇ ಪಾಲಿಗೆ ಕೂತರು. ಆಗ ರಘುವೀರನಿಗೆ ಎಂಟು ವರ್ಷ. ಎರಡು ಮೂರು ದಿನ ಸತತ ಜಗಳವಾಗಿದ್ದೊಂದೇ ನೆನಪು. ಆಮೇಲೆ ನಡೆದ ಪಾಲಿನ ಪ್ರಸಂಗ, ಬೇಡ ಬೇಡವೆಂದರೂ ಪಬ್ಬನನ್ನೂ ಕೂರಿಸಿಕೊಂಡದ್ದು, ಅವನು ನಡುವೆ ಎದ್ದು ಹೋದದ್ದು ಕಣ್ಣಿಗೆ ಕಟ್ಟಿದ ಹಾಗಿದೆ. ಪಾತ್ರೆ ತಪ್ಪಲೆ ತಾಟು ಸೌಟು ಹಂಡೆ ತಂಬಿಗೆ ಮಂಚ ಹಾಸಿಗೆಗಳೂ ನಾಲ್ಕು ಭಾಗವಾಗಿ ಹೋದವು. ಮನೆಯ ಬಂಗಾರವನ್ನೆಲ್ಲ ಆಭರಣಗಳನ್ನೆಲ್ಲ ಅದು ಬರೀ ಲೋಹವೆಂಬಂತೆ ಗುಪ್ಪೆ ಮಾಡಿ ವಸ್ತದಲ್ಲಿ ಕಟ್ಟಿ ಒಬ್ಬೊಬ್ಬರು ಒಂದೊಂದು ಗಂಟು ಎತ್ತಿಕೊಂಡರು. ಆ ವಯಸ್ಸಿನಲ್ಲಿ ಪಾಲಿನ ಅರ್ಥ ಸ್ಪಷ್ಟವಾಗಿ ತಿಳಿದಿರದಿದ್ದರೂ ರಘುವೀರನ ಮನಸ್ಸಿನಲ್ಲಿ ಹಲವು ಚಿತ್ರಗಳು ನಿಚ್ಚಳವಾಗಿ ಒತ್ತಿನಿಂತವು: ಒಟ್ಟಿಗೇ ಊಟಕ್ಕೆ ಕೂರುತ್ತಿದ್ದ ಹುಡುಗರು ಬೇರೆ ಬೇರೆ ಅಡಿಗೆ ಮನೆಗಳಲ್ಲಿ ಕೂತು ಉಣ್ಣತೊಡಗಿದರು. ಬಚ್ಚಲಲ್ಲಿ ಹಳೆ ತಂಬಿಗೆಯಿತ್ತು, ಆದರೆ ಹಂಡೆ ಹೊಸದು ಬಂದಿತ್ತು. ಅಪ್ಪ ಯಾವಾಗಲೂ ಉಪಯೋಗಿಸುತ್ತಿದ್ದ ನೀರು ಕುಡಿಯುವ ತಂಬಿಗೆಯ ಬದಲು ಬೇರೊಂದು ಬಳಸತೊಡಗಿದ. ಪಬ್ಬ ಮಲಗುತ್ತಿದ್ದ ಚಿತ್ತಾರದ ಮಂಚ ಅಪ್ಪನ ಕೋಣೆಗೆ ಬಂದಿತ್ತು. ಮೊದಲು ಯಾರು ಮಕ್ಕಳಿಗೆ ಏನು ತಂದರೂ ಎಲ್ಲರಿಗೂ ತರುತ್ತಿದ್ದರು. ಈಗ ಅವರವರ ಅಪ್ಪಂದಿರು ಅವರವರ ಮಕ್ಕಳಿಗೆ ಮಾತ್ರ ತರತೊಡಗಿದರು. ಆಡಿ ಓಡಿ ಬೆಳೆದ ಜಾಗ, ಮಲಗುವ ಮಂಚ, ಹಾಸಿಗೆ, ಊಟದ ತಟ್ಟೆಗಳೆಲ್ಲ ಯಾರು ಯಾರದೋ ಪಾಲಿಗೆ ಹೋಗಿ ಹಂಡೆಯಿದ್ದರೆ ತಂಬಿಗೆಯಿಲ್ಲ, ಕಾವಲಿಯಿದ್ದರೆ ದೋಸೆ ಕೈಯಿಲ್ಲ ಹೀಗೆಲ್ಲ ಆಗಿ ಪಾಲಿಗೆ ಬಾರೆದೇ ಇದ್ದದ್ದನ್ನು ಹೊಸತಾಗಿ ಕೊಂಡು ಅವು ಹಳೆಯದರ ಜೊತೆ ಸೇರದೇ ಎದ್ದು ಕಾಣುವಂತಾಗಿ ಪಾಲಿನ ಛಾಯೆ ಎಲ್ಲೆಲ್ಲೂ ಕಾಣುವಂತಾಗಿತ್ತು. ತನ್ನ ಪಾಲಿಗೆ ಬಂದ ಅಂಗಡಿಯ ಭಾಗದಲ್ಲಿ ರಘುವೀರನ ಅಪ್ಪ ಅಡಿಕೆ ದಲಾಲಿ ವ್ಯಾಪಾರ ಸುರುಮಾಡಿದ. ಉಳಿದವರೂ ತಮ್ಮ ತಮ್ಮದೇ ದಂಧೆ ಆರಂಭಿಸಿದರು. ಪಬ್ಬನೂ ಈಗ ಏನಾದರೂ ಮಾಡಬೇಕಿತ್ತು. ಅವರವರ ಮನೆ ಸಾಮಾನು ತರಕಾರಿ ಅವರವರೇ ತರುತ್ತಿದ್ದುದರಿಂದ ಪಬ್ಬ ಮನೆಯಲ್ಲೂ ಪ್ರಯೋಜನವಿಲ್ಲದವನಾದ. ಅವನ ಪಾಲು ಕೊಟ್ಟದ್ದೇ ತಮ್ಮ ಜವಾಬ್ದಾರಿ ತೀರಿತು ಎಂದು ಎಲ್ಲರೂ ಭಾವಿಸಿಕೊಂಡಂತಿತ್ತು. ನಾಟಕದ ಹೊರತು ಯಾವ ವ್ಯವಹಾರವನ್ನೂ ಅವನು ಮಾಡಲಾರದವನಾಗಿದ್ದ. ಒಂದು ವರ್ಷ ಸುಮ್ಮನೇ ಮಂಕಾಗಿ ಊರಲ್ಲಿದ್ದ. ನಾಟಕ ಆಡಿಸಲಿಲ್ಲ. ಏನೋ ಕಳಕೊಂಡವನ ಹಾಗಿದ್ದ. ಕೆಲವೊಮ್ಮೆ ಮನೆಗೆ ಬಂದು ಯಾರದೋ ಅಡಿಗೆ ಮನೆಯಲ್ಲಿ ಕೂತು ಊಟ ಮಾಡಿ ಹೋಗುತ್ತಿದ್ದ. ಒಂದು ಬೆಳಿಗ್ಗೆ ಯಾರಿಗೂ ಹೇಳದೆ ನಾಪತ್ತೆಯಾದ. ಅವನನ್ನು ಹುಡುಕಿಸಲು ಅಣ್ಣ ತಮ್ಮಂದಿರೂ ಹೆಚ್ಚು ಪ್ರಯತ್ನಿಸಲಿಲ್ಲ. ಯಾವುದೋ ಕಂಪನಿಯ ಹಿಂದೆ ಹೋಗಿರಬೇಕು ಬರುತ್ತಾನೆ ಅಂದುಕೊಂಡರು. ಅವನನ್ನು ಪುಣೆಯಲ್ಲಿ ನೋಡಿದ ಹಾಗಾಯಿತು ಎಂದು ಯಾರೋ ಹೇಳಿದ ವರ್ತಮಾನವೇ ಅವನ ಬಗ್ಗೆ ಕೇಳಿದ ಕೊನೆಯ ಸುದ್ದಿ. ಪಬ್ಬ ರಘುವೀರನ ಜೀವನದುದ್ದಕ್ಕೂ ಕಾಡುತ್ತಲೇ ಇದ್ದ. ಪಬ್ಬನಿಗೆ ರಘುವೀರನ ಮೇಲಿದ್ದ ವಿಶೇಷ ಪ್ರೀತಿಯ ಕಾರಣ ಮಾತ್ರವಲ್ಲದೇ ಅಣ್ಣಂದಿರೆಲ್ಲ ಅವನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೇನೋ ಅನಿಸುತ್ತಿತ್ತು. ಪಬ್ಬನ ಶಿಶ್ಯ ಶ್ರೀನಿವಾಸ ಮುಂಬೈ ಸೇರಿ ಸಿನೇಮಾದಲ್ಲಿ ಬಹಳ ಹೆಸರು ಮಾಡಿದ್ದಾನೆಂಬ ಸುದ್ದಿ ಕೇಳಿದಾಗಂತೂ ರಘುವೀರನಿಗೆ ಪಬ್ಬನೂ ದೊಡ್ಡ ವ್ಯಕ್ತಿಯಾಗುತ್ತಿದ್ದ ಅವನನ್ನು ಈ ಮನೆಯ ಪಾಲಿನ ವ್ಯವಹಾರವೇ ಕೆಡಿಸಿತು ಎಂದನ್ನಿಸಿತ್ತು. ಸಹಕುಟುಂಬದಲ್ಲಿ ಪಬ್ಬ ತನ್ನದೇ ರೀತಿಯಲ್ಲಿ ಕುಟುಂಬದ ಕೆಲವು ಅಗತ್ಯಗಳನ್ನಾದರೂ ಪೂರೈಸಿ ಸಲ್ಲುತ್ತಿದ್ದ. ಅವನ ಮೇಲೆ ಸಲ್ಲದ ಜವಾಬ್ದಾರಿಯ ನೊಗ ಹೊರಿಸಿದ್ದೇ ತಪ್ಪಾಯಿತೇನೋ ಅನಿಸಿತ್ತು……

-೬-

ಮದುವೆಯ ನಂತರ ರಘುವೀರನ ಸಂಸಾರ ಜೀವನವೂ ಅನಂತನ ಮನೆಯಲ್ಲೇ ಆರಂಭವಾಯಿತು. ಆರುತಿಂಗಳಲ್ಲೇ ಮಾಲಿನಿ ಸಣ್ಣಪುಟ್ಟ ರಸಕಸಿ ಸುರುಮಾಡಿದ್ದಳು. ತನ್ನ ಗಂಡ ಅಂಗಡಿಯಲ್ಲಿ ದುಡಿಯುವುದು ಬರೀ ಈ ಊಟದ ಸಲುವಾಗಿ ಮಾತ್ರವೇ? ಅವನಿಗೆ ಲಾಭದಲ್ಲಿ ಎನು ಪಾಲುಂಟು? ಎಂದೆಲ್ಲಾ ಗಂಡನ ಬಳಿ ಕಿರಿಕಿರಿ ಮಾಡತೊಡಗಿದಳು. ಏನು ಬೇಕಾದರೂ ಅನಂತನನ್ನು ಯಾಕೆ ಕೇಳಬೇಕು? ಅನಂತನ ಮಕ್ಕಳು ಅದೆಷ್ಟು ದುಂದುವೆಚ್ಚ ಮಾಡುತ್ತಿಲ್ಲ? ಇತ್ಯಾದಿ ಕೇಳತೊಡಗಿದಳು. ಯಾರು ಏನೇ ಸಹಜವಾಗಿ ಅಂದರೂ ಹಂಗಿನ ಅನ್ನದ ಕಾರಣ ಮನಸ್ಸಲ್ಲಿಟ್ಟುಕೊಂಡೇ ಹೇಳುತ್ತಿದ್ದಾರೆ ಎಂದು ಭಾವಿಸಿದಳು. ಅವಳಿಗೊಂದು ಮಗುವಾಗಿ ಮಗುವಿಗೆ ವರ್ಷ ತುಂಬುವ ವೇಳೆಗೆ ಬೇರೆ ಮನೆ ಮಾಡಬೇಕೆಂದು ಪಟ್ಟು ಹಿಡಿದಳು. ಹಬ್ಬಗಳಲ್ಲೆಲ್ಲ ಅನಂತನೇ ಯಾಕೆ ಸೀರೆ ಬಟ್ಟೆ ತರಬೇಕು? ತನಗೆ ಬೇಕಾದ್ದನ್ನು ಗಂಡನಿಂದಲೇ ಪಡೆಯಬೇಕೆಂಬ ಸಹಜ ಹಮ್ಮು – ಎಲ್ಲ ಸೇರಿಕೊಂಡು ಮನಸ್ಸು ಕಹಿ ಮಾಡಿಕೊಂಡಳು. ಒಟ್ಟಾಗಿ ಇರುವ ಕುಟುಂಬದ ಸಂಗತಿಗಳು ಬೇರೆಯಾಗಿರುತ್ತವೆ ಎಂದು ರಘುವೀರ ಹೇಳಹೊರಟರೆ ಅದು ಕೈಲಾಗದವನ ಮಾತಾಗಿ ಕಾಣಿಸಿತು. ನಮಗೇತಕ್ಕೂ ಕಮ್ಮಿಯಿಲ್ಲವಲ್ಲ ಎಂದವನು ಹೇಳಿದರೆ ಅದು ಭಿಕ್ಷೆಯ ಅನ್ನ ಅಂದಳು. ಅಂತೂ ಕೊನೆಗೆ ರಘುವೀರನ ಸಂಸಾರ ಹಳೆಯ ಮನೆಗೆ ಹೋಗುವುದೆಂದಾಯಿತು. ತನ್ನದು ತನ್ನ ಸ್ವಂತದ್ದು ಎಂದವಳು ಒದ್ದಾಡುವ ರೀತಿಗಳೇ ರಘುವೀರನಿಗೆ ಅರ್ಥವಾಗುತ್ತಿರಲಿಲ್ಲ. ಹಳೆಯ ಮನೆಗೆ ಹೋಗುವಾಗ ಇಲ್ಲಿಂದಲೇ ಹಕ್ಕಿನಿಂದಲೆಂಬಂತೆ ಪಾತ್ರೆ ಬಟ್ಟೆ ಹಾಸಿಗೆ ಹೊತ್ತೊಯ್ದಳು. ಅನಂತನಾಗಲೀ ಪ್ರಭಾವತಿಯಾಗಲೀ ಒಂದು ಮಾತಾಡಲಿಲ್ಲ. ಅವರು ಸಮಾಧಾನದಿಂದ ನಡೆದುಕೊಂಡಷ್ಟೂ ಅದು ದಯೆಯ ಹಾಗೆ ಕಂಡು ಇನ್ನಷ್ಟು ಕನಲಿದಳು. ಬೇರೆ ಮನೆ ಮಾಡಿದ ನಂತರವೂ ರಘುವೀರ ಅನಂತನ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದ. ಗಲ್ಲದ ಮೇಲೆ ಕೂರುವುದರಿಂದ ಹಿಡಿದು ಸಾಮಾನು ಕಟ್ಟಿಕೊಡುವುದರವರೆಗೆ ಇದು ಅಂತ ನಿರ್ದಿಷ್ಟ ಕೆಲಸವಿಲ್ಲದೇ ಏನನ್ನಾದರೂ ಮಾಡುತ್ತಿದ್ದ. ಎರಡು ಮನೆಗೂ ಅಗತ್ಯವಿರುವ ತರಕಾರಿ ಮೀನು ಕಿರಾಣಿ ಸಾಮಾನು ರಘುವೀರನೇ ಒಯ್ದು ಹಾಕುತ್ತಿದ್ದ. ಅನಂತ ತಮ್ಮನ ಜೊತೆ ಮನಸ್ಸು ಮುರಿದುಕೊಳ್ಳದೇ ಎರಡೂ ಸಂಸಾರ ನಡೆಸುವುದು ತನ್ನ ಜಾವಾಬ್ದಾರಿಯಂತೆ ಒಂದು ಮಾತು ಹೇಳದೇ ಅಗತ್ಯದ ದುಡ್ಡು ತೆಗೆದುಕೊಡುತ್ತಿದ್ದ. ಎಷ್ಟೋ ಸಲ ಬೇಕಿಲ್ಲದಿದ್ದರೂ ಛಲಕ್ಕೆ ಬಿದ್ದವಳ ಹಾಗೆ ಮಾಲಿನಿ ಹೆಚ್ಚು ಹೆಚ್ಚು ಸಾಮಾನು ತರಿಸಿ ಇಡುತ್ತಿದ್ದಳು. ನೀವೇ ಒಂದು ಅಂಗಡಿ ಹಾಕಿ ಎಂದು ಗಂಡನಿಗೆ ದುಂಬಾಲು ಬಿದ್ದಳು. ಅವರ ಅಂಗಡಿಯಲ್ಲಿ ಸಾಯುವ ಹಾಗೆ ದುಡಿಯುವುದು ಯಾಕೆ, ಅದರ ಬದಲಿಗೆ ನಾವೇ ಒಂದು ಅಂಗಡಿ ಮಾಡೋಣ ಎಂದವಳ ವಾದ. ರಘುವೀರನಿಗೆ ಅದರಲ್ಲಿ ಚೂರೂ ಆಸಕ್ತಿಯಿರಲಿಲ್ಲ. “ನಿಮಗೇನೂ ಸಾಧಿಸುವ ಛಲವಿಲ್ಲ. ಏನಾದರೂ ಆಗಬೇಕೆನ್ನುವ ಹಟವಿಲ್ಲ…. ಆ ಮಚವೆಯ ಮೇಲೆ ಅಷ್ಟು ವರ್ಷ ಇದ್ದಿರಲ್ಲ ಏನು ಮಾಡಿದಿರಿ? ಅದರ ಬದಲಿಗೆ ಒಂದು ಸಣ್ಣ ಅಂಗಡಿ ಹಾಕಿ ಕೂತಿದ್ದರೂ ಅದರ ಹತ್ತುಪಟ್ಟು ಗಳಿಸಬಹುದಿತ್ತು…… ನಿಮ್ಮನ್ನು ದೂರ ಇಡುವುದಕ್ಕಾಗಿಯೇ ನಿಮ್ಮನ್ನು ಅಣ್ಣ ಅದರ ಮೇಲೆ ಕಳಿಸಿ ಬಿಟ್ಟಿದ್ದು…… ” ಎಂದೆಲ್ಲ ಆಡಿ ರಘುವೀರ ತಾಳ್ಮೆಗೆಡುವ ಹಾಗೆ ಮಾಡುತ್ತಿದ್ದಳು. ಇವರೆಲ್ಲ ಯಾಕೆ ಪ್ರತಿಯೊಬ್ಬರೂ ಏನನ್ನಾದರೂ ಸಾಧಿಸಲೇಬೇಕೆಂದು ಅಂದುಕೊಳ್ಳುತ್ತಾರೋ ಎಂದು ರಘುವೀರನಿಗೆ ಅನಿಸುತ್ತಿತ್ತು. ಎಲ್ಲರನ್ನೂ ಬದಿಗೆ ಒತ್ತಿ ಮುನ್ನುಗ್ಗುವುದೇ ಸಫಲ ಜೀವನದ ಲಕ್ಷಣವೆಂದು ಯಾಕೆ ತಿಳಿದುಕೊಂಡಿದ್ದಾರೋ, ದುಡ್ಡು ಹುಟ್ಟದ ಯಾವ ಕೆಲಸವೂ ಪ್ರಯೋಜನವಿಲ್ಲದ್ದೆಂದು ಯಾಕೆ ತಿಳಕೊಂಡಿದ್ದಾರೋ ಎಂದನಿಸುತ್ತಿತ್ತು. ಅವನಿದನ್ನು ಹೇಳಲು ಹೊರಟರೆ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಮಚವೆಯಲ್ಲಿ ತಿರುಗಾಡಿದ ದಿವಸಗಳಲ್ಲಿ ಮನಸ್ಸಿಗೆ ದೊರೆತ ಸುಖ ಸಮಾಧಾನಗಳ ಅರ್ಥ, ಅಲ್ಲಿ ತಾನು ಸಾಧಿಸಿದ್ದು, ಅರಿತದ್ದು, ಬೆಳೆದದ್ದು ಯಾರಿಗೂ ತಿಳಿಸಲಾಗದ ಹಾಗೆ ಅನಿಸುತ್ತಿತ್ತು. ಸಾಧನೆಯ ಹಾದಿ ಲೌಕಿಕದ್ದೇ ಆಗಿರಬೇಕೆಂಬ ಅಪೇಕ್ಷೆ ಎಲ್ಲರಿಗೂ. ಎಲ್ಲಿ ಹೋದರೂ ಏನೋ ಒಂದು ವ್ಯವಹಾರದ ಮಾತಿನಲ್ಲೇ ಮುಳುಗಿರುತ್ತಿದ್ದರು – ಕಂಪನಿಯ ಶೇರುಗಳು, ಲಾರಿ ವ್ಯಾಪಾರ, ಅಡಿಕೆ ದರ, ಯಾವುದೋ ಕಂಪನಿಯ ಏಜನ್ಸಿ ಇದೇ ಮಾತುಗಳು. ಐದೇ ನಿಮಿಷಗಳಲ್ಲಿ ಅವರ ಜೊತೆ ಮಾತಾಡಬಹುದಾದ ವಿಷಯಗಳೆಲ್ಲ ಮುಗಿದು ಹೋಗುತ್ತಿದ್ದವು.

-೭-

ಮದುವೆಯಾದ ಹತ್ತು ವರ್ಷಗಳ ನಂತರವೂ ಏನೂ ಬದಲಾಗದೇ ಉಳಿದ ಹಾಗೆ ಮಾಲಿನಿ ಗಂಡನನ್ನು ಸತಾಯಿಸುತ್ತ ಅವನು ಈಗಲಾದರೂ ಸ್ವಂತ ದಂಧೆ ಸುರುಮಾಡಬೇಕೆಂದು ಒತ್ತಾಯಿಸುತ್ತಲೇ ಇದ್ದಳು. ಇದೇ ಕಾರಣಕ್ಕೆ ಗಂಡಹೆಂಡಿರ ನಡುವೆ ಯಾವಾಗಲೂ ಮಾತುಗಳ ಹಣಾಹಣಿ ನಡೆಯುತ್ತಿತ್ತು. ಈ ವರ್ಷಗಳಲ್ಲಿ ಅವರ ನಡುವಿನ ದೈಹಿಕ ಸಂಯೋಗದ ಕ್ಷಣಗಳೂ ಊಟ ನಿತ್ಯಕ್ರಮದ ಹಾಗೆ ಜರುಗುತ್ತಿದ್ದವು. ಆ ಕ್ಷಣದ ಉತ್ಕಟತೆಗೂ ದೈನಿಕಕ್ಕೂ ಸಂಬಂಧವಿಲ್ಲದವರ ಹಾಗೆ ಮಾತುಗಳ ಯುದ್ಧದಲ್ಲಿ ಒಬ್ಬರನ್ನೊಬ್ಬರು ಅಂದುಕೊಳ್ಳುತ್ತ ಒಬ್ಬರನ್ನೊಬ್ಬರು ಬದಲಾಯಿಸಲು ಸಾಧ್ಯವಿಲ್ಲವೆಂದುಕೊಳ್ಳುತ್ತ ಹತಾಶರಾಗುತ್ತಿದ್ದರು. ಹಿಂದೆ ಆದ ಪಾಲಿನ ವಿಷಯ ಎತ್ತಿ ಮಾಲಿನಿ, ಅದು ಸರಿಯಾಗಿ ಆಗಿರಲಿಕ್ಕಿಲ್ಲ, ನಿಮಗೆ ಅವರು ಲೆಕ್ಕಪತ್ರ ತೋರಿಸಿದ್ದರೇ? ಎಷ್ಟು ದುಡ್ಡು ಎತ್ತಿ ಹಾಕಿದ್ದಾರೋ, ನೀವು ಆ ವಿಷಯ ಮತ್ತೆ ಎತ್ತಬಾರದು ಅಂತಲೇ ಈಗ ಅತೀ ಒಳ್ಳೆಯವರ ಹಾಗೆ ಕೇಳಿದ್ದು ಕೊಡುವ ನಾಟಕ ಆಡುತ್ತಿದ್ದಾರೆ, ಎಂದು ಒಂದೇ ಸಮನೆ ಅನ್ನುತ್ತಿದ್ದಳು. ಹೆಂಡತಿಯ ಬಾಯಿ ಮುಚ್ಚಿಸುವ ಯಾವ ಆಯುಧವೂ ತನ್ನಲ್ಲಿಲ್ಲದ ಹಾಗೆ ಅನಿಸುತ್ತಿತ್ತು. ಇತ್ತೀಚೆಗೆ ಎರಡು ದಿವಸಗಳ ಹಿಂದೆ ಯಾರೋ ಬಂದು ಮಾಲಿನಿಗೆ “ನಿನ್ನ ಅತ್ತೆಯದೊಂದು ಅರವತ್ತು ಪವನಿನ ಸರವಿತ್ತಲ್ಲ…… ಅದು ಯಾರ ಪಾಲಿಗೆ ಹೋಯಿತು? ಪವನುಗಳನ್ನು ಅರ್ಧರ್ಧ ಹಂಚಿಕೊಂಡಿರಬೇಕಲ್ಲವೇ……?” ಎಂದು ಚಾಡಿ ಹೇಳಿ ಚಿಚ್ಚಿಕೊಟ್ಟು ಹೋಗಿದ್ದರು. ಅದನ್ನೇ ಹಿಡಕೊಂಡು ಮಾಲಿನಿ ಈ ಎರಡು ದಿನದಿಂದ ರಘುವೀರನ ಪ್ರಾಣ ಹಿಂಡುತ್ತಿದ್ದಳು. “ಪಾಲು ಸರಿಯಾಗಿ ಆಗಿದೆ ಅದು ಅಣ್ಣನ ಪಾಲಿನದು” ಎಂದು ರಘುವೀರ ಜಾರಿಕೊಳ್ಳಲು ನೋಡಿದ. ಮಾಲಿನಿ ಪ್ರಭಾವತಿಯ ಬಳಿ ಹೋಗಿ ಉಪಾಯವಾಗಿ ಮಾತಾಡಿ ಆ ಸರದ ಸುದ್ದಿ ತೆಗೆಯಲು ನೋಡಿದಳು. ಪ್ರಭಾವತಿ ಸರವಿದ್ದ ಸಂಗತಿ ಎತ್ತಲೇ ಇಲ್ಲ. ಇದರಿಂದಾಗಿ ಇನ್ನೂ ಸಂಶಯ ಹೆಚ್ಚಿ ಮಾಲಿನಿ ರಘುವೀರನ ಬೆನ್ನು ಬಿದ್ದು ಅನಂತನ ಜೊತೆ ಆ ಸರದ ವಿಷಯ ಇತ್ಯರ್ಥವಾಗಲೇಬೇಕೆಂದು ಕೂತಳು. ಹಿಂದಿನ ರಾತ್ರಿ ನಡೆದ ಜಗಳದಲ್ಲಂತೂ ಮಾಲಿನಿ ಬರೀ ಸರದ ವಿಷಯ ಮಾತ್ರವಲ್ಲ ಅಂಗಡಿಯ ಜಾಗದಲ್ಲೂ ಪಾಲು ಕೇಳಿ ಎಂದು ಸುರು ಮಾಡಿದಳು. “ಅಂಗಡಿ ಅವನದು ಮಚವೆ ನನ್ನದು” ಎಂದು ರಘುವೀರ ಹೇಳಿದಾಗಲಂತೂ “ಈಗ ಆ ಮಚವೆಯಲ್ಲೇ ಕೂರಿ…… ಹೊಟ್ಟೆ ತುಂಬುತ್ತದೋ ನೋಡುವಾ…… ಆಹಾಹಾ ಎಷ್ಟು ಚೆನ್ನಾಗಿ ಪಾಲು ಮಾಡಿದ್ದಾರೆ. ಅಂಗಡಿ ಅದರ ಜಾಗ ಎಲ್ಲ ತನಗೇ ಇಟ್ಟುಕೊಂಡು ಹಾಳಾಗಿಹೋದ ಆ ಮಚವೆ ನಿಮಗೆ ಕೊಟ್ಟಿದ್ದಾರೆ…… ಎಷ್ಟು ದೊಡ್ಡ ಮನುಷ್ಯರು…… ಹೋಗಿ ಅವರ ಕಾಲಿಗೆ ಬೀಳುವಾ……” ಎಂದು ತಿವಿದಳು. ಕೊನೆಗೆ ಬೇರೇನಿಲ್ಲದಿದ್ದರೂ ರಘುವೀರ ಆ ಸರದ ವಿಷಯವನ್ನಾದರೂ ಎತ್ತಬೇಕು ಎಂದು ಪಟ್ಟು ಹಿಡಿದಳು. “ನಾಳೆಯೇ ಹೋಗಿ ಮಾತಾಡಿಕೊಂಡು ಬನ್ನಿ…… ಕಮ್ಮಿ ಬಂಗರ ಅಲ್ಲ ಅದು…… ನಮ್ಮ ಮಕ್ಕಳೂ ಮುಂದೆ ಏನಾದರೂ ಮಾಡಬೇಕು…… ಇಲ್ಲಾ ಬೇಡವೇ ಬೇಡ, ನಮ್ಮ ಮಕ್ಕಳನ್ನೂ ಅವರ ಅಂಗಡಿಯಲ್ಲಿ ಆಳಿನ ಕೆಲಸಕ್ಕೆ ಸೇರಿಸುವುದಾದರೆ ಏನೂ ಮಾಡಬೇಡಿ……” ಎಂದೆಲ್ಲ ಅಂದಳು. ಕೊನೆಯಲ್ಲಿ ಏನೊಂದೂ ಇತ್ಯರ್ಥವಾಗದೇ ಉಳಿದರೂ ತನ್ನದೇ ಕೊನೆಯ ಮಾತೆಂಬಂತೆ ರಘುವೀರ ಮಾರನೇ ದಿನವೇ ಕೇಳಬೇಕು ಎಂದು ನೂರು ಸಲ ಸಾರಿ ಹೇಳಿದ್ದಳು. ಹೆಂಡತಿಯ ಮಾತುಗಳನ್ನೇ ಧೇನಿಸುತ್ತ ಬಂದರಿನ ಮೇಲೆ ಸುಮ್ಮನೆ ನಡೆಯುತ್ತ ರಘುವೀರನಿಗೆ ಈ ಅಶಾಂತಿಗೆ ಕೊನೆಯಿಲ್ಲ ಅನಿಸಿತು. ಮಚವೆಯಲ್ಲಿ ತೊಡಗಿಸಿಕೊಂಡ ಹಾಗೆ ಯಾವುದರಲ್ಲೂ ತೊಡಗಿಸಿಕೊಳ್ಳಲು ಆಗುತ್ತಿರಲಿಲ್ಲ. ತೂಗುವ ಮಚವೆಗೆ ಹೊಂದಿಕೊಂಡ ಸಮತೋಲ ಈ ಭೂಮಿಯ ಮೇಲೆ ತಪ್ಪಿಹೋದಂತಾಗುತ್ತಿತ್ತು. ಮಚವೆ ನಡೆಸುವುದರಲ್ಲಿ ಎಂಥ ನಿಷ್ಣಾತನಿದ್ದರೂ ಈಗ ಏನು? ಅನಂತನ ಹತ್ತಿರ ಹೋಗಿ ಮತ್ತೆ ಹಳೆಯ ಮಾತು ಎತ್ತುವುದನ್ನು ಯೋಚಿಸಿದರೇ ನಾಚಿಕೆಯಾಗುತ್ತದೆ. ತಾನು ಸುಮ್ಮನಿದ್ದರೆ ಮಾಲಿನಿ ಸುಮ್ಮನಿರುತ್ತಾಳೆಯೇ? ಗಾಳಿಗೆ ತೂರಿ ಹೋಗುತ್ತಿರುವ ಗಾಳಿಪಟದ ದಾರ ಸಡಿಲು ಬಿಟ್ಟಹಾಗೆ ಅದರಷ್ಟಕ್ಕೇ ಅದನ್ನು ಹೋಗಲಿ ಎಂದು ಬಿಟ್ಟು ಬಿಡಬೇಕು ಅಥವಾ ಪಬ್ಬನ ಹಾಗೆ ಎಲ್ಲದರತ್ತ ಮುಖ ತಿರುವಿ ಮಚವೆ ಹತ್ತಿ…… ಬಂದರಿನಲ್ಲಿ ನಡೆಯುತ್ತಿದ್ದ ಹಾಗೆ ವಿಶ್ವಸಾಗರದ ನೆನಪಾಯಿತು. ಹಿಂದೆ ಯಾವಾಗಲೋ ಒಮ್ಮೆ ಅದನ್ನು ನೋಡಲು ಹೋಗಿದ್ದ. ದಂಡೆಗೆಳೆದು ಹಾಕಿದ ನಂತರದ ಎರಡು ವರ್ಷಗಳವರೆಗೆ ಅದನ್ನು ನೋಡಲೂ ನಿರಾಕರಿಸಿದವನ ಹಾಗೆ ಅತ್ತ ಹೋಗಿರಲೇ ಇಲ್ಲ. ಆ ನಂತರ ಒಮ್ಮೆ ಅದನ್ನು ರಿಪೇರಿ ಮಾಡಿ ನೀರಿಗಿಳಿಸುವ ಹುಚ್ಚು ವಿಚಾರ ಬಂದು ಆ ಕಡೆ ಹೊರಟ. ಬಂದರಿನಿಂದ ಎರಡು ಮೈಲು ಆಚೆ ನದಿ ಸಮುದ್ರ ಸೇರುವ ಹತ್ತಿರ ಅದನ್ನೆತ್ತಿ ಹಾಕಿದ್ದರು. ಅಲ್ಲಿ ಹೋಗಿ ನೋಡಿದರೆ ಬರೀ ಮಚವೆಯ ಅಸ್ತಿಪಂಜರ ನಿಂತ ಹಾಗಿತ್ತು. ಕಟ್ಟಿಗೆಯೆಲ್ಲ ಲಡ್ಡಾಗಿ ಕೀಳಲು ಸಾಧ್ಯವಾದದ್ದನ್ನೆಲ್ಲಾ ಜನ ಹೊತ್ತೊಯ್ದು ಉರವಲಕ್ಕೆ ಹಾಕಿದ್ದರು. ಅದಕ್ಕೊಂದು ಪ್ರದಕ್ಷಿಣೆ ಹಾಕಿದ. ಮಚವೆ ಮರಳಿನಲ್ಲಿ ಹೂತಂತಿತ್ತು. ಮತ್ತೆ ಯಾವತ್ತೂ ಇದನ್ನು ನೀರಿಗಿಳಿಸಲಾರೆ ಅನ್ನಿಸಿ ಖಿನ್ನನಾಗಿದ್ದ. ಹೊತ್ತೇರುವವರೆಗೂ ಬಂದರಿನಲ್ಲೇ ನದಿಯ ಗುಂಟ ನಡೆದೂ ನಡೆದೂ ಅನ್ಯಮನಸ್ಕನಾಗಿ ಮನೆಯತ್ತ ಹೊರಟ. ಒಳಬರುತ್ತಿದ್ದಂತೆ ಮಾಲಿನಿ “ಮಾತಾಡಿಸಿದಾ” ಅಂದಳು. “ಇಲ್ಲ” ಅಂದ.
*****
ಜನವರಿ ೧೯೯೨

‘ಬರಹ’ಕ್ಕಿಳಿಸಿದವರು – ಗುರುಪ್ರಸಾದ್.ಎಸ್ (ಪಚ್ಚಿ)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.