“Judge not that ye be not judged”
-Jesus Christ
ಒಂದು ಸಂಜೆ ಪಿಂಜರಿತ ಮೇಘ ಪಡುವಣದ ಬಾನಿನಲ್ಲಿ
ಶ್ರೀ ಸ್ವಯಂಭು ಸ್ವಚ್ಛಂದ ಮನದಿ ಕುಳಿತಂತೆ ಲೀಲೆಯಲ್ಲಿ
ಶೋಭಿಸಿರಲು, ಕಣ್ಣಿಟ್ಟಿ ಹರಿವವರ ಹಬ್ಬಿದಂಥ ಕಡಲು
ತೆರೆಯನಟ್ಟಿ ತೆರೆ ತೂರುತಿತ್ತು ಹುಡಿ ಚಿನ್ನದಂಥ ಮಳಲು.
ಕಡಲಿನಂಚಿನಲಿ ಸೂರ್ಯಬಿಂಬವಿನ್ನೇನು ಮುಳುಗುತಿತ್ತು
ಕಿರಣರಹಿತ ಕೆಂದಳಿರ ಹಾಸಿದೊಲು ನೀರು ಮಿರುಗುತಿತ್ತು
ಮಂದಗಾಮಿ ತಂಗಾಳಿ ರಯ್ಯನೊಯ್ಯಾರದಿಂದ ಬಂದು
ಮುಟ್ಟಿ ಮುಟ್ಟದೊಲು ತೀಡುತಿತ್ತು ತೆರೆ-ಚುಂಬನಕ್ಕೆ ಸಂದು.
ಯೇಸುಕ್ರಿಸ್ತ ಅಸ್ವಸ್ಥ ಮನದಿ ಕುಳಿತಿದ್ದ ಮಳಲ ತಡಿಗೆ
ಕನ್ನಗೈಯು ಅರೆದೆರೆದ ಕಣ್ಣು ನಸುಬಾಗು ಮೊಗದ ಬಗೆಗೆ;
ನೂರು ಯೋಚನೆಯ ಗಾಣದಲ್ಲಿ ಮನ ಸಿಕ್ಕು ಗಾಸಿಗೊಂಡು
ಲೋಕಹಿತದ ಚಿಂತನೆಗೆ ತೊಡಗೆ ತನ್ನಲ್ಲಿ ನಿಜವ ಕಂಡು:
ಮತದ ಮೌಢ್ಯ ಕಟ್ಟಳೆಯ ನಿಗಳ ದ್ವೇಷಗಳ ಕಳೆವುದಂತು
ಫರಿಸಾಯರವರ ದುರ್ನಡತೆ ನೀಗಿ ಜನ ನೇರಿತಾಗಲೆಂತು?
ಲೋಕದಿಚ್ಚೆ ನಾ ನುಡಿದು ಸತ್ಯ ಧ್ವಜವತ್ತಿ ಹಿಡಿಯಲೆಂತು?
ಒಬ್ಬರೊಬ್ಬರನು ಅರ್ಥ ಮಾಡಿಕೊಳ್ಳದಿರೆ ಏನು ಬಂತು?
ಇಂತು ಚಿಂತೆಯಲಿ ಮುಳುಗಿ ಯೇಸು ಪ್ರಾರ್ಥಿಸಿದನಾಗ ಮನದಿ:
“ತಂದೆ ತಂದೆಯೇ ಜನರಿಗೊಳ್ಳೆಯದ ತಿಳಿವ ಬುದ್ದಿ ಭರದಿ
ಬೆಳೆದು, ಸತ್ಯ ಧರ್ಮಾನುಚರಣೆ ಬೇರೂರಿ ಕರುಣೆಯಲ್ಲಿ
ಕೊನೆಗೆ ಎಲ್ಲ ಲಯ ಹೊಂದಲಲ್ಲಿ ವಿಶ್ವಾತ್ಮ ಪ್ರೇಮದಲ್ಲಿ”.
ಅದೇ ಸಮಯ ಫರಿಸಾಯರೇಸುಗವಮಾನ ಮಾಡಲೆಂದು
ಹೊತ್ತು ಕಾದು ನವಯುವತಿ ಮುಡಿಯ ನಿಡುಗೂದಲನ್ನು ಹಿಡಿದು
ಹುಲಿಯು ಚಿಗುರೆಯನು ಎಳೆವ ತೆರದಿ ದರದರನೆ ಎಳೆದು ತಂದು
ಕಲ್ಲು ಮುಳ್ಳಿನಲಿ ಹಾಸಿಬೀಸಿ ಯೇಸುವಿನ ಮುಂದೆ ಬರಲು
ಊರು ಮಗ್ದಲಾ, ಹೆಸರು ಮೇರಿ, ಏನಂಥ ರೂಪರಾಶಿ!
ಕಪಟರಹಿತೆ ದೀನಾಸ್ಯೆಯಾಗಿ ಪಾಷಂಡಿಗಳಿಗೆ ರೋಸಿ
ಚಿಂದಿ ಬಟ್ಟೆ, ಮೈಯಲ್ಲ ಘಾಯ, ಚೀರಿಡುವ ಗೋಳು ಕೇಳಿ
ಕರಗಲಿಲ್ಲ ಎದೆ ಮರುಗಲಿಲ್ಲ ಮನ ಅವರಿಗದುವೆ ಹೋಳಿ.
ಪ್ರಾಣಸಂಕಟದಿ ಕೆಡೆದು ಬಿದ್ದ ಮಗ್ದಲದ ಕುವರಿ ಮೇರಿ
ಹಿಂದೆಯೊಮ್ಮೆ ಕಂಡಿದ್ದಳವನ ಆ ಸ್ವಾಮಿ ಗುಡ್ಡವೇರಿ
ಜನರ ಗುಂಪಿಗುಪದೇಶಗೈವ ದಿನ ತಾನು ನಿಂತು ಕೇಳಿ
ತೃಪ್ತಿಹೊಂದಿ ಹೋಗಿದ್ದಳಂದು ಇಂದೂನು ಧೈರ್ಯ ತಾಳಿ,
ಇಂಥ ಸಮಯದಲಿ ಮತ್ತೆ ಅವನಿಗೆಯೆ ಶರಣು ಹೊಗುವೆನೆಂದು
ರಕ್ತಸಿಕ್ತ ದೇಹವನು ಎಳೆದು ಶ್ರೀಪಾದದಡೆಗೆ ಬಂದು
ತಲೆಯನಿರಿಸುತಿರೆ ಸುತ್ತು ನಿಂತ ಮತಿಗೆಟ್ಟ ಜನರ ಗುಂಪು:
ಮರುಳರಂತೆ ಹೋಯೆಂದು ನಕ್ಕು ಮೂದಲಿಸಿ ನುಡಿದರಿಂತು:
“ದೇವಸುತನು ನಾನೆಂದು ನುಡಿಯುತಿಹ ಎಲವೊ ಮೂರ್ಖ ಮರಿಯೆ
ನ್ಯಾಯ ಮತ್ತೆ ಅನ್ಯಾಯಗಳನು ಪರಿಕಿಸುವೆನೆಂಬ ಕುರಿಯೆ
ಸತ್ಯಪ್ರೇಮಗಳ ಬಿತ್ತಲಿಹೆಯ ಉನ್ಮತ್ತ ಮತಿಗಳೊಡೆಯ
ಈಗ ಹೇಳು ಈ ಯುವತಿ ನಡತೆಯಲಿ ಇಹುದು ಯಾವ ನ್ಯಾಯ?
“ಇವಳು ಪಾಪಿ ವ್ಯಭಿಚಾರಿಯೆಂದು ಇದೊ ನುಡಿವರೆಲ್ಲ ಸಾಕ್ಷಿ
ಕಣ್ಣಾರೆ ಕಂಡು ಆರೋಪ ಹೊರಿಸಿ ಎಳೆದಿಹರು ಇಲ್ಲಿ ನೂಕಿ
ಹೇಳು ನಿನ್ನ ತೀರ್ಪೇನು ಇಲ್ಲಿಯೇ ನಿಂತ ಕಾಲ ಮೇಲೆ
ಮೂರ್ಖ ಮಂದಿ ನೀನೊಬ್ಬ ಶ್ರೇಷ್ಠ ಗುರು ಎಂದು ಸಾರಲಿಲ್ಲೆ?”
ಚುಚ್ಚುಮಾತುಗಳನೆಸೆಯುತಿರಲು ಪುಂಖಾನುಪುಂಖವಾಗಿ
ಶಾಂತ ಚಿತ್ತದಲಿ ಸೌಮ್ಯಭಾವದಲಿ ಕೇಳುತಿದ್ದ ಯೋಗಿ
ತಲೆಯ ಬಾಗಿ ನಿಟ್ಟುಸಿರನಿಟ್ಟು ಸೈತಿಟ್ಟು ಕ್ರಿಸ್ತಸ್ವಾಮಿ
ತನ್ನ ಕಾಲಬಳಿ ಬಿದ್ದ ಮುಗ್ದೆಯನು ಕಂಡ ವಿಶ್ವಪ್ರೇಮಿ.
ಕತ್ತನೆತ್ತಿ ಯೇಸುವಿನ ಮೊಗವ ನೋಡಿದಳು ಮೇರಿ ತಣಿಯೆ
ಎದೆಯ ದೈನ್ಯ ಕಣ್ಣಿನಲಿ ಬಂದು ಕಂಬನಿಗಳಾಗಿ ಹರಿಯೆ
ತನ್ನ ದುಃಖವನು ತೋಡಿಕೊಳ್ಳುವರೆ ಮಾತು ಬಾರದಿತ್ತು
ಮೂಕಶೋಕದಲಿ ಒಡಲ ಭಾಂಡ ಒಳಗೊಳಗೆ ಕುದಿಯುತಿತ್ತು!
ಆದರವಳ ಜೀವಾತ್ಮ ಶೋಕ ಪರಮಾತ್ಮನದೆಯ ಸೇರಿ
ಮೌನವೀಣೆ ಮಿಡಿದಂತೆ ತಂತಿ ಸಿಡಿದಂತೆ ದನಿಯ ಬೀರಿ:
“ನನ್ನ ಸ್ವಾಮಿ ಓ ಯೇಸುಕ್ರಿಸ್ತ ಪ್ರಭು, ಕರುಣಿಸೆನ್ನ ತಂದೆ
ನಾನು ಮಾತ್ರ ಅರಿಯದೆಯೆ ಗೈದ ಅಪರಾಧ ಮನ್ನಿಸೆಂದೆ”
ಎಂದು ನೊಂದು ಪರಿತಪಿಸಿ ಆತ್ಮ ನೈವೇದ್ಯ ನೀಡಲಾಗಿ
ಅವನ ಕಣ್ಣಿನಲಿ ಕ್ಷಮೆಯು ರಮಿಸಿ ಬರೆ ಶಾಂತಚಿತ್ತಳಾಗಿ
ಮತ್ತೆ ಮತ್ತೆ ಆ ದಿವ್ಯ ಮೊಗದ ಸಂಪದವ ನೋಡಿ ನಂಬಿ
ಕಣ್ಣು ತುಂಬಿ ಎದೆ ತುಂಬಿ ತಲೆಯ ಬಾಗಿದಳು ಜೀವ ತುಂಬಿ,
ತಲೆಯನತ್ತಿ ಕಣ್ತೆರೆದು ಯೇಸು ನೋಡಿದನು ನೆರೆದ ಜನವ
ಧೈರ್ಯವಾಗಿ ಗಂಭೀರನಾಗಿ ಪ್ರಶ್ನಿಸಿದನವರ ಮನವ:
ನಿಮ್ಮ ಧರ್ಮಶಾಸ್ತ್ರದಲ್ಲಿ ಇದಕ್ಕೆ ಪ್ರತಿಶಿಕ್ಷೆಯಾವುದೆನಲು
ಕಲ್ಲು ಹೊಡೆದು ಸಾಯಿಸುವದೆಂಬ ಉತ್ತರವು ಕೇಳಿ ಬರಲು-
“ನಿಮ್ಮ ಧರ್ಮಶಾಸನಕೆ ನಾನು ಪ್ರತಿಮಾತನಾಡುತಿಲ್ಲ
ಹೆಣ್ಣಿನಂತೆ ಗಂಡಸಿಗು ಶಿಕ್ಷೆ ಕಟ್ಟಳೆಯದೇಕೆ ಇಲ್ಲ –
ಎಂಬ ಯೋಚನೆಯ ಮಾಡುತ್ತಿದ್ದೆ ಸರಿ; ನಿಮ್ಮ ಶಾಸ್ತ್ರಕೋತು
ನೀವು ನಡೆಯುತಿರ ನಿಮ್ಮ ಇಷ್ಟವದು, ಆದರೊಂದು ಮಾತು:
“ಇಲ್ಲಿ ನೆರೆದ ಜನರಲ್ಲಿ ಯಾರು ಈ ಮೊದಲು ಒಂದು ಕೂಡ
ಪಾಪಗೈಯದಿಹರವರು ಮೊದಲು ಕಲು ಹೊಡೆಯಬೇಕು ನೋಡ;
ದುಷ್ಟ ಕೃತಿಯ ಮುಚ್ಚಿಟ್ಟುಕೊಂಡು ಉತ್ತಮಿಕೆಯನ್ನು ನಟಿಸಿ
ಕೊಂದ ಪಾಪ ಅವರನ್ನೆ ತಿಂದು ತೇಗುವದು ಪೀಡೆಗೊಳಿಸಿ”
ಎಂದು ನುಡಿಯೆ ನೆರೆದಿದ್ದ ಜನತೆ ತಳಮಳಿಸಿ ತಮ್ಮತಮಗೆ
ಅವರು ಇವರ ಮುಖ ನೋಡಿ ಆತ್ಮವಂಚಕರು ತೆಪ್ಪಗಾಗೆ
ಒಬ್ಬರೊಬ್ಬರೂ ಕಲ್ಲನೆತ್ತಿ ಹೊಡೆಯಲಿಕ ಧೈರ್ಯವಿರದೆ
ಬಂದ ದಾರಿಯನು ಹಿಡಿದು ಸಾಗಿದರು ನಿಲ್ಲಲಿಷ್ಟ ಪಡದೆ.
ಮೇರಿ ಯೇಸುವಿನ ಚರಣ ತೊಳೆಯುತಿರೆ ಕಣ್ಣಧಾರೆಯಿಂದ
ಪಾದಪದ್ಮಗಳ ತಬ್ಬಿ ಹಿಡಿದು ತನ್ನೆರಡು ಕೈಗಳಿಂದ:
“ಪಾಪವೆಂಬ ತಿಳುವಳಿಕೆ ಆಗ ನನಗಾಗಲಿಲ್ಲ ತಂದೆ
ಇದಕೆ ಅವರು ಅಪರಾಧವೆನಲು ನಾನರಿಯದೇನೆ ಗೈದೆ.
“ನನ್ನ ಊರಿನಡೆ ಇನ್ನು ಹೋಗೆ ನನಗಾರು ಇಲ್ಲವಲ್ಲಿ
ನಿನ್ನ ಮಗಳು ನಾ ನಿನ್ನ ತಂಗಿ ತಾಯಿಯೊಲು ಇರುವೆನಿಲ್ಲಿ.
ಅನುಗ್ರಹಿಸು ಓ ಗುರುವೆ ನಿನ್ನ ಆಜನ್ಮ ಸೇವೆಯೊಂದು”
ಎಂದು ದುಃಖ ತಾಪದಲ್ಲಿ ಕರುಣಕಥೆ ತೋಡಿಕೊಂಡಳಂದು.
ಪವಿತ್ರಾತ್ಮ ಪರಮಾತ್ಮ ವರದ ಕರ ಚಾಚೆ ಕರುಣೆ ಹೊನಲು
ಹರಿದು ಘಾಯಗಳ ಸವರಿ ಮೆಲ್ಪಿನಲಿ ಯೇಸು ಸಂತವಿಡಲು
ಮೈಯನೋವಿನುರಿ ಮಾಯವಾಗಿ ತಂಪಾಗಿ ಸೌಖ್ಯವೊದಗಿ
ಆತ್ಮಶಾಂತಿಯಮೃತದಲಿ ತೇಲೆ ಆನಂದಲೋಲೆಯಾಗಿ.
ತಂಪು ಗಾಳಿ ನಿಷ್ಕಂಪಮಾದ ಸಾಗರದಿ ತೀಡುತ್ತಿರಲು
ಕ್ರಿಸ್ತನಮರಸಂದೇಶ ಪೊತ್ತು ಸಮತೆಯಲಿ ಹಂಚುತ್ತಿರಲು
ಅಮೃತ ಕಿರಣನುದಯಿಸಿದ ಇಳೆಯ ಬೆಳದಿಂಗಳಲ್ಲಿ ತೊಳೆದು
ತೇನೆ ಹಕ್ಕಿ ಮಂಗಲವ ಪಾಡಿ ಹಾರಿತ್ತು ನಭವನಳೆದು.
*****