ಕಾಡಿನ ಕತ್ತಲಲ್ಲಿ

ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ
ಸಂಜೆಯ ಕೆಂಪು ಕರಗುವ ಹೊತ್ತು,
ಮರದ ಬೊಡ್ಡೆಗೆ ಆತು
ಕೂತಿದ್ದ ಪುಟ್ಟ ಹುಡುಗ.
ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ
ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ
ಸಂಜೆಯಾಕಾಶಕ್ಕೆ ಗೆರೆ ಬರೆದ
ಗಿರಿಶಿಖರಗಳ ನೆರಳು.
ಈ ನೆರಳುಗಳ ನಡುವೆ
ನೆರ್ಳಾಗಿ ಕೂತವನನ್ನು
‘ಯಾಕೋ ಕೂತಿದ್ದೀಯಾ?-’
ಅಂದೆ.
ಹೆದರಿ ಮೇಲೆದ್ದ. ಕಡ್ಡಿ ಕಾಲಿನ ಮೆಲೆ
ಹರುಕು ಚಿಂದಿಯ, ಜೋಲು ಮೋರೆಯ,
ಕೆದರಿದ ತಲೆಯ ಕೆಳಗೆ ಗಾಬರಿ ಕಣ್ಣು;
ಅಳು ಬೆರೆತ ಮಾತು;
‘ನಾನು ಬರಲಿಲ್ಲ, ಮನೆಯಲ್ಲಿ
ಒಡೇರು ಒದೀತಾರೆ…ಅದಕ್ಕೆ ಇಲ್ಲಿ…’
ಸುತ್ತ ಕತ್ತಲ ಕಾಡು; ಆ ಬಗ್ಗೆ
ಭಯವಿಲ್ಲ ಇವನಿಗೆ
ತಪ್ಪಿಸಿಕೊಂಡ ದನ ಬಾರದ್ದಕ್ಕೆ
ತನಗೆ ಬೀಳುವೇಟಿನ ಭಯಕ್ಕೆ
ಇಲ್ಲಿ, ಸದ್ದಿರದೆ ಕೂತಿದ್ದಾನೆ.
ದನ ಬಾರದ್ದು ಇವನ ತಪ್ಪಲ್ಲ;
ಆದರೂ ದನ ಬಾರದೆ ಇವನು
ಹಿಂದಿರುಗುವಂತಿಲ್ಲ; ಹಿಂದಿರುಗಿದನೊ
ಏಟು ತಪ್ಪುವುದಿಲ್ಲ. ಹಾಗಂತ
ದಟ್ಟ ಕಾಡಿನ ಮೇಲೆ ಕತ್ತಲೆ ಇಳಿದು
ಹಬ್ಬುವುದು ನಿಲ್ಲುವುದಿಲ್ಲ; ಕಪ್ಪೆಗಳ
ವಟ ವಟ, ಚಿಕೆಗಳ ಮಿಣ ಮಿಣ- ಯಾವುದೂ
ನಿಲ್ಲುವುದಿಲ್ಲ. ಈ ಕತ್ತಲೆಯ ಒಳಗೆಲ್ಲೊ
ಕಾದಿದ್ದಾನೆ ಒಡೆಯ.
ಕೈಯಲ್ಲಿ ಚಾವಟಿ ಹಿಡಿದು, ಹೀಗೆಯೇ
ಇಂಥ ಕಡ್ಡಿ ಕಾಲಿನ, ಜೋಲು ಮೋರೆಯ
ಹಾಲುಗಣ್ಣಿನ ಮೈಯ ಚರ್ಮ ಸುಲಿಯುತ್ತ
ಈ ದಟ್ಟ ಕಾಡಿನ ಕತ್ತಲೆಗೆ ಕೆಂಗಣ್ಣು ಹಾಯಿಸುತ್ತ.
ಕವನ ಜಿ ಎಸ್ ಶಿವರುದ್ರಪ್ಪ
ವ್ಯರ್ಥ
ಇಲ್ಲ, ನಾವೂ ನೀವೂ ಸೇರಲೇ ಇಲ್ಲ;
ಮುಖಕ್ಕೆ ಮುಖ, ಎದೆಗೆ ಎದೆ ಹತ್ತಿರ ತಂದು
ಮಾತಾಡಲೇ ಇಲ್ಲ.
ನಮ್ಮ ಮಧ್ಯೆ ಸದಾ ಗಾಳಿ, ಮಳೆ ಕೆಸರು;
ತಂತಿ ಕಂಬಗಳುರುಳಿ,
ಇದ್ದ ಸೇತುವೆ ಮುರಿದು
ಅಲ್ಲಿನ ಗಾಡಿ ಅಲ್ಲೇ
ಇಲ್ಲಿನ ಗಾಡಿ ಇಲ್ಲೇ.
ಮುಚ್ಚಿದ್ದ ಕಿಟಕಿ, ಹೊಗೆ ಹಿಡಿದ ಸೂರಿನ ಕೆಳಗೆ
ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತ,
ಗಿಡದಲ್ಲರಳುತ್ತಿದ್ದ ಮೊಗ್ಗುಗಳನ್ನು ಬಡಿದು ಕೆಡವುತ್ತ,
ತಲೆಯನ್ನು ಗಾಳಿ ಊಳಿಡುವ ಪಾಳುಗುಡಿ ಮಾಡಿ
ಹತ್ತಿದ ಹಣತೆಗಳನ್ನು ನಂದಿಸುತ್ತ
ಕತ್ತಲಲ್ಲೇ ತಡಕಾಡಿಕೊಂಡು ಕೈ ಚಾಚುತ್ತೇವೆ,
ರಾಂಗ್ ನಂಬರಿಗೆ ಟೆಲಿಫೋನು ಮಾಡಿ
ಉತ್ತರಕ್ಕೆ ಕಾಯುತ್ತ ಕೂರುತ್ತೇವೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.