ಏಕೋ ಏನೋ ಈಗ ಕನ್ನಡ ಚಿತ್ರಗಳಿಗೆ ಇಂಗ್ಲೀಷ್ ಹೆಸರಿಡುವುದು ಒಂದು ಫ್ಯಾಶನ್ ಆಗಿದೆ. ಫ್ಯಾಶನ್ ಮಾತ್ರವಲ್ಲ. ಆ ಪದಕ್ಕೆ ಸರಿಸಮಾನವಾದ ಕನ್ನಡ ಪದವನ್ನು ನೀಡಿ ಎಂದು ಸವಾಲು ಎಸೆಯುತ್ತಾರೆ ನಿರ್ಮಾಪಕ ನಿರ್ದೇಶಕರು. ಈಗೀಗ ಮುಹೂರ್ತ ಸಮಾರಂಭದಲ್ಲಿ ಆ ಇಂಗ್ಲೀಷ್ ಹೆಸರು ಕಿತ್ತು ಕನ್ನಡ ಹೆಸರಿಟ್ಟಲ್ಲಿ ಚಿತ್ರ ‘ಪ್ಲಾಪ್’ ಆಗಿಬಿಡುತ್ತದೆ ಎಂಬ ಭ್ರಮೆ ಅವರಿಗೆ.
ಆದ್ದರಿಂದಲೇ ಎ, ಜ್ಹಡ್, ಅಂಡರ್‌ವರ್ಲ್ಡ್, ಲಾಕಪ್ ಡೆತ್, ಎ.ಕೆ.ಫ್ಹಾರ್ಟಿಸೆವೆನ್, ಮಾಫಿಯಾ, ಲಾ ಅಂಡ್ ಆರ್ಡರ್, ಕರ್ಫ್ಯೂ, ಆಪರೇಷನ್ ಡೈಮಂಡ್ ರಾಕೆಟ್, ಸಿಐಡಿ ನೈನ್ ನೈನ್ ನೈನ್ ಹೀಗೆ ಬರುತ್ತಲೇ ಇವೆ. ಇದನ್ನು ನೋಡಿ ನೋಡಿ ಸಾಕಾಗಿ ಫಿಲಂ ಛೇಂಬರ್‍ಸ್ ಇನ್ನು ಮುಂದೆ ಇಂಗ್ಲೀಷ್ ಟೈಟಲ್‌ಗೆ ಅನುಮತಿ ನೀಡುವುದಿಲ್ಲ ಎಂದಿತು.
ರೀಮೇಕ್ ಚಿತ್ರಗಳಿಗೂ ಇಂಗ್ಲೀಷ್ ಹೆಸರಿಡುವ ದಿನ ಬಂದು ಇಂಗ್ಲೀಷ್ ಪದಗಳಿಗೆ ಸ್ಟಾರ್‌ವ್ಯಾಲ್ಯೂ ಬಂದೀತು ಎಂದುಕೊಂಡವರು ಬಹುಮಂದಿ.
ಫಿಲಂ ಚೇಂಬರ್ ತಕರಾರು ಎತ್ತಿ, ಆಕ್ಷೇಪಣೆಯ ದನಿ ಎತ್ತರಿಸಿದಾಗ ಸಣ್ಣ ಸಣ್ಣ ಬಜೆಟ್ ಚಿತ್ರ ಮಾಡುವವರು ಬೆದರಿ-ಬೆಂಡಾಗಿ, ಬಾಡಿ – ಬಸವಳಿದು ತುಂಬ ಬೇಸರದಿಂದಲೇ ಕನ್ನಡದ ಹೆಸರಿಡಲು ಕನ್ನಡ ನಿಘಂಟನ್ನು, ಪುಸ್ತಕ ಪ್ರಕಾಶನದ ಪಟ್ಟಿಯನ್ನು ಹಿಡಿದು ಜನಪ್ರಿಯ ಕತೆ, ಕಾದಂಬರಿಗಳ ಹೆಸರನ್ನು ಇದೀಗ ಭುತಕನ್ನಡಿ ಹಿಡಿದು ಹುಡಕ ಹೊರಟಿದ್ದಾರೆ.
ಆದರೆ ಬಿಗ್ ಬಜೆಟ್ ಫಿಲ್ಮ್‌ನವರು ‘ಫಿಲಂ ಚೇಂಬರ್‌ನ ಕ್ಯಾರೇ ಎನ್ನದೆ ಇಂಗ್ಲೀಷ್ ಹೆಸರನ್ನೇ ಉಳಿಸಿಕೊಳ್ಳುವ ಛಲ ಹೊತ್ತಿದ್ದಾರೆ ಎಂಬುದಕ್ಕೆ ಇತ್ತೀಚಿನ ‘ಸೂಪರ್ ಸ್ಟಾರ್’ ಎಂಬ ಉಪೇಂದ್ರ ಚಿತ್ರವೇ ಸಾಕ್ಷಿ.
ಹಾಗೆ ಹೆಚ್ ಟು ಓ ಎಂಬ ಹೆಸರೂ ಈಗ ಕಾಂಟ್ರವರ್ಸಿಗೆ ಸಿಲುಕಿದೆ. ಈ ಇಂಗ್ಲೀಷ್ ಕನ್ನಡ ಜಗಳ ಕಾರು ಆಟೋಗಳತ್ತಲೂ ತಿರುಗಿದೆ. ಕನ್ನಡದಲ್ಲಿ ಅಂಕಿಗಳನ್ನು ಬರೆಸಿದವರನ್ನು ಪೊಲೀಸರು ಹಿಡಿಯುತ್ತಿದ್ದಾರೆ. ಕನ್ನಡ ನಾಡಿನಲ್ಲಿ ಕನ್ನಡದ ಅಂಕಿಗಳಿರುತ್ತವೆ ಎಂದರೆ ಪೊಲೀಸಿನವ ಮನಬಂದಂತೆ ಫೈನ್ ಹಾಕುವ ದಿನ ಈಗ ಬಂದಿದೆ.
ಹಾಗೆ ಚಿಹ್ನೆಗಳನ್ನು ಚಿತ್ರ ಮಾಡುವ ಇನ್ನೊಂದು ಹುನ್ನಾರವೂ ನಡೆದಿತ್ತು. ಏಕೋ ಅದು ಪಾಸಾಗಲು ಕನ್ನಡಿಗರು ಬಿಡಲಿಲ್ಲ. ಸ್ವಸ್ತಿಕ್ ಚಿಹ್ನೆ ಚಿತ್ರ ಬಂತು. ಅದನ್ನು ಆರಂಭಿಸಿದವರೂ ಉಪೇಂದ್ರರೆ, ಆನಂತರ ಕೊಶ್ಚನ್ ಮಾರ್ಕ್ ಚಿತ್ರದ ಹೆಸರು ಬಂದೆ ಬರುವೆ ಎಂದು ಹೆದರಿಸಿತು. ಇಲ್ಲ – ಅದೂ ಠುಸ್ ಎಂದಿತು.
ಅಕಸ್ಮಾತ್ ಅದು ೧೦೦ ದಿನ ಓಡಿದ್ದರೆ ಫುಲ್‌ಸ್ಟಾಪ್, ಕಾಮ, ಆಶ್ಚರ್ಯ ಸೂಚಕ ಚಿಹ್ನೆಗಳೂ ಚಿತ್ರವಾಗಿ ಬರುತ್ತಿದ್ದವೇನೋ?
‘ವೈ’ ಇದೇಕೆ ಹೀಗೆ ಎಂಬುದನ್ನೀಗ ಚಿತ್ರರಂಗದ ಮಹಾಮಹಿಮರು ಚಿಂತಿಸಬೇಕಿದೆ. ಚಿತ್ರಕ್ಕೊಂದು ಕಥೆಯಂತೂ ಇದ್ದೇ ಇರುತ್ತದೆ. ಅದರ ಕಥಾ ತಿರುಳು ಗಮನಿಸಿ ಒಂದು ಹೆಸರು ಇಡುವುದೇ ಕಷ್ಟವಾದರೆ ಹೇಗೆ?
ಮನೆಯಲ್ಲಿ ಮಗುವೊಂದು ಹುಟ್ಟುವ ಶುಭ ಘಳಿಗೆ ಬಂದಾಗ ಮನೆಮಂದಿಗೆಲ್ಲಾ ಸಂಭ್ರಮವಿರುತ್ತದೆ. ಹುಟ್ಟುವ ಮಗು ಗಂಡಾದರೆ ಏನು ಹೆಸರು – ಹೆಣ್ಣಾದರೆ ಏನು ಹೆಸರು ಎಂದು ಗಂಡ-ಹೆಂಡತಿ ಇಬ್ಬರೇ ಏಕಾಂತದಲ್ಲಿ ಚಿಂತಿಸುತ್ತಾರೆ. ಆದರೆ ಗಂಡುಮಗು ಎಂದು ನಿರ್ಧರಿಸಿದಾಗ ಹೆಣ್ಣು ಮಗು ಹುಟ್ಟಿರುತ್ತದೆ. ಹೆಣ್ಣು ಎಂದುಕೊಂಡಾಗ ಗಂಡುಮಗು ಹುಟ್ಟಿರುತ್ತದೆ. ಕೆಲವೊಮ್ಮೆ ಅವಳಿಜವಳಿಯಾಗಿ ಮತ್ತೆ ಹೆಸರಿಗೆ ಹುಡುಕಾಟವಾಗುತ್ತದೆ. ಆದರೆ ಚಿತ್ರರಂಗದವರಿಗೆ ನಾಮಕರಣ ಸಮಸ್ಯೆಯೇ ಅಲ್ಲ.
ಕಥೆ-ಕಾದಂಬರಿಗಳಿಗೆ ಹೆಸರಿಡುವಾಗ ಲೇಖಕ ಬಹುವಾಗಿ ಚಿಂತಿಸುತ್ತಾನೆ. ಬಹಳಷ್ಟು ಲೇಖಕರು ಕಥೆ, ಕವನ, ಕಾದಂಬರಿ, ನಾಟಕ ಸಲೀಸಾಗಿ ಬರೆಯುತ್ತಾರೆ. ಆದರೆ ಹೆಸರಿಡುವುದೇ ಅವರಿಗೆ ಸಮಸ್ಯೆ ಎನಿಸಿರುತ್ತದೆ.
ಹಿಂದೊಮ್ಮೆ ನಾನು ಬರೆದ ಒಂದು ನಾಟಕಕ್ಕೆ “ಕ್ಷೇತ್ರದ ಕಾಗೆ” ಎಂದು ಹೆಸರಿಟ್ಟೆ. ಕು.ರಾ.ಸೀ., ಅ.ನ.ಸು, ಟಿ.ಟಿ.ಶರ್ಮ, ನವರತ್ನ ರಾಮರಾವ್ ಮುಂತಾದ ಹಿರಿಯ ಲೇಖಕರು ಆ ಹೆಸರು ಬಹು ಇಷ್ಟಪಟ್ಟರು.
ಕಾಗೆ ‘ಪಿಂಡ’ಕ್ಕಾಗಿ ಹಾರಿ ಬರುವಂತೆ ಆಸ್ತಿಗಾಗಿ ಇಲ್ಲದ ಸಂಬಂಧ ಹೇಳಿಕೊಂಡು ಬರುವ ನೆಂಟರಿಷ್ಟರ ಕಥೆ ಅದು. ಕೆರೆಯಲ್ಲಿ ನೀರಿದ್ದಾಗ ಕಪ್ಪೆಗಳು ಸೇರಿ ವಟಗುಟ್ಟುವಂತೆ ಇವರೂ ವಟಗುಟ್ಟುವವರೆ.
ನಾಟಕ ಬಹುವಾಗಿ ಮೆಚ್ಚಿದ ‘ಅನಕೃ’ ಹೇಳಿದರು ನನಗೆ.
“ನಾನೊಂದು ಹೊಸ ಕಾದಂಬರಿ ಬರೆದಿರುವೆ. ಆ ಕೃತಿಗೆ ಈ ಹೆಸರು ತುಂಬ ಚೆನ್ನಾಗಿ ಒಪ್ಪುತ್ತೆ” ಎಂದರು.
“ಹಾಗಾದರೆ ಆ ಕಾದಂಬರಿಗೆ ಇದೇ ಹೆಸರಿಡಿ” ಎಂದೆ.
“ನೀನಿಟ್ಟಿದೀಯಲ್ಲಯ್ಯ. ಮತ್ತೆ ನಾನು ಅದೇ ಹೆಸರಿಡಬಾರದು. ಅದರಿಂದ ನನ್ನ ಕಾದಂಬರಿಗೆ ‘ಕಬ್ಬಿಣದ ಕಾಗೆ’ ಎಂದು ಹೆಸರಿಸುವೆ” ಎಂದರು.
“ಅಂತ ದೊಡ್ಡ ಲೇಖಕರೆದುರು ನಾನಿನ್ನೂ ಆಗ ಹುಡುಗ. ನಾನೇ ನನ್ನ ನಾಟಕದ ಹೆಸರು ಬದಲಿಸಲೆ ಸಾರ್” ಎಂದೆ.
“ಯಾಕಯ್ಯ-ಕನ್ನಡದಲ್ಲಿ ಹೆಸರಿಗೆ ಬರವೇ” ಎಂದರು.
ಅದು ಸೌಜನ್ಯ-ಸಂಸ್ಕೃತಿ ಎಂದುಕೊಂಡೆ.
ಈಗ ಕಾಲ ಬದಲಾಗಿದೆ. ಯಾರು ಯಾರನ್ನೂ ಏನೂ ಕೇಳಬೇಕಿಲ್ಲ.
ರೆಹಮಾನ್ ‘ಸೇತು’ ಸಿನಿಮಾ ಕನ್ನಡ ರೀಮೇಕ್ ಮಾಡಿದಾಗ ನಾಯಕ ಸುದೀಪ್ ಹೆಸರೇ ಚಿತ್ರಕ್ಕಿಡಬಹುದಿತ್ತು. ಆದರೆ ಅದಕ್ಕೆ ‘ಹುಚ್ಚ’ ಎಂದು ಹೆಸರಿಸಿದರು.
“ಅರೆ! ಹುಚ್ಚ” ನಾನು ಬರೆದ ಮೂರನೆ ನಾಟಕ. ಆಗ ಸಾಹಿತ್ಯ ಅಕಾಡಮಿ ಪ್ರಶಸ್ತಿಯೂ ಬಂದಿತ್ತು. ಅದರಿಂದ ನಾನು ಚಿತ್ರ ನಿರ್ಮಾಪಕ ‘ರೆಹಮಾನ್’ ಸಿಕ್ಕಾಗ “ಅಲ್ರೀ, ನನ್ನ ನಾಟಕದ ಹೆಸರೇ ಚಿತ್ರಕ್ಕಿಟ್ಟಿದ್ದೀರಲ್ಲ” ಎಂದೆ.
ಇದರಿಂದ ಅವರು ಚೂರೂ ವಿಚಲಿತರಾಗದೆ “ಹೌದೆ! ಇದು ನಂಗೆ ಪ್ರೆಸ್‌ಮೀಟ್‌ಗೆ ಮುಂಚೇನೇ ಗೊತ್ತಾಗಿದ್ರೆ ಮೂರ್ತಿಯವರು ನಾಟಕಕ್ಕೆ ಹುಚ್ಚ ಅಂತ ಹೆಸರಿಟ್ಟಿದ್ದಾರಲ್ಲ” ಎಂದು ಹೇಳುತ್ತಿದ್ದೆ ಎಂದರೆ ಹೊರತು ಮತ್ತೇನೂ ಹೇಳಲೇ ಇಲ್ಲ.
ಸುನೀಲ್ ಕುಮಾರ್ ದೇಸಾಯಿ ‘ಸ್ಪರ್ಶ’ ಚಿತ್ರ ನಂತರ ಹೊಸ ಚಿತ್ರವೊಂದು ಆರಂಭ ಮಾಡಿದರು. ವಿಷ್ಣುವರ್ಧನ್ ಅದರ ನಾಯಕ. ಅಂದು ಸುನೀಲ್‌ಕುಮಾರ್ ದೇಸಾಯಿ ಹೇಳಿದ ಮೊದಲ ಸ್ಟೇಟ್‌ಮೆಂಟ್ ಎಂದರೆ “ಇದು ಎಸ್.ಎಲ್. ಭೈರಪ್ಪನವರ ‘ಪರ್ವ ಅಲ್ಲ’” ಎಂದರು. ಮುಂದಿನ ವಾರ ಎಲ್ಲ ಪತ್ರಿಕೆಗಳಲ್ಲಿ ಇದು ದಪ್ಪ ಅಕ್ಷರಗಳಲ್ಲಿ ಬಂತು.
ಅದರಿಂದಲೇ ಟೈಟಲ್‌ಗಾಗಿ ಪುಸ್ತಕದ ಅಂಗಡಿಗಳಿಂದ ಬುಕ್‌ಲಿಸ್ಟ್ ತರಿಸಿಕೊಳ್ಳುವವರು ಅತಿಯಾಗಿದ್ದಾರೆ. ನಿಸಾರ್ ಅಹಮದ್ ಅವರ ‘ಕುರಿಗಳು ಸಾರ್ ಕುರಿಗಳು’ ಜನಪ್ರಿಯ ಕವಿತೆ. ಅಂಥ ಕವಿತೆ ಸಾಲು ಎಸ್.ವಿ. ರಾಜೇಂದ್ರಸಿಂಗ್ ಬಾಬು ಲಪಟಾಯಿಸಿ ತಾವೇ ಆ ಕುರಿ ಮಂದೆಗೆ ಕುರುಬರಾದದ್ದು ಒಂದು ಹಗರಣವೇ ಆಯಿತು.
ಆ ಅಂಶ ಪ್ರೆಸ್‌ಮೀಟ್‌ನಲ್ಲಿ ಕೆದಕಿದ್ದರಿಂದಾಗಿ ಬಾಬು ಪಾಲಿಗೆ ನಾನು ಕೆಟ್ಟವನಾದೆ. ಈಗ ಆ ಚಿತ್ರ ಶತದಿನೋತ್ಸವ ತಲುಪುತ್ತಿದೆ. ರಾಜ್ಯ ಪ್ರಶಸ್ತಿ ೩ನೆಯ ಬಹುಮಾನಗಳಿಸಿ ಅದಿಂದೂ ಚರ್ಚೆ ವಸ್ತು ಆಗಿ ಕೂತಿದೆ.
ಇಂಥ ಕಾಂಟ್ರವರ್ಸಿಗಳು ಬಾಬೂಗೆ ತುಂಬಾ ಇಷ್ಟ. ಅದರಿಂದಾಗಿಯೇ ಈಗ ‘ಕುರಿಗಳು ಸಾರ್ ಕುರಿಗಳು’ ಎರಡನೆಯ ಭಾಗ ತೆಗೆಯುವೆ ಎಂದು ಹೆದರಿಸುತ್ತಿದ್ದಾರೆ.
ಈ ಬಾರಿಯಾದರೂ ಬಾಬು ‘ಕುರಿಗಳು ಸಾರ್ ಕುರಿಗಳು’ ಮತ್ತೊಮ್ಮೆ ಓದಿ ಅದರ ವ್ಯಂಗ್ಯ ವಿಡಂಬನೆ ಗಮನಿಸಿ ಅಂಥ ಛಾಯೆಗಳು ಎರಡನೆ ಭಾಗದಲ್ಲಾದರೂ ಮಿಂಚುವಂತೆ ಮಾಡಿದರೆ ಒಳಿತು. ಚಿಂತಿಸಿ ಬಾಬು…ಮನಮಾಡಿದರೆ ನಿಮಗೆ ಅದು ಕಷ್ಟವೇನಲ್ಲ.
ಒಂದು ಸಮಾಧಾನ. ಹಲವಾರು ಇಂಗ್ಲೀಷ್ ಟೈಟಲ್ ಇಡಲು ಹೋಗದೆ-ಕನ್ನಡದ ಕೃತಿಗಳ ಹೆಸರು ಬಳಸುತ್ತಿದ್ದಾರೆ ಎನ್ನುವುದು. ಫಿಲಂ ಚೇಂಬರ್‍ಸ್ ಸೂಪರ್ ಸ್ಟಾರ್ ಹೆಸರು ಓ.ಕೆ. ಮಾಡುವುದೇ ಎಂಬುದನ್ನು ‘ಏಕೆ?’ ಎನ್ನದೆ ಕಾದು ನೋಡೋಣ.
*****
(೬-೭-೨೦೦೧)