‘ಅಂಬಿ’ಗಂದು ಸನ್ಮಾನ
ಪ್ರೆಸ್‌ನವರಿಗೆ ‘ಥೂ-ಛೀ’ ಎಂದು ಅವಮಾನ
ದಾವಣಗೆರೆಯಲ್ಲಿ ಅಂಬರೀಶ್ ಹುಟ್ಟುಹಬ್ಬದ ಅದ್ದೂರಿ ಸಮಾರಂಭದ ಜಾಹೀರಾತು ಪುಟ್ಟಗಟ್ಟಲೆ ಬಂತು. ವಿಷ್ಣು, ನಟ ನಟಿಯರು ಹಿಂಡು ಹಿಂಡಾಗಿ ಬರುತ್ತಾರೆ. ‘ಅಂಬಿ ವಜ್ರ ಕಿರೀಟ ಧಾರಣೋತ್ಸವಕ್ಕೆ’ ಎಂದು ಪ್ರಚಾರವಾದಾಗ ಲಕ್ಷಾಂತರ ಮಂದಿ ಬಂದರು.
ಅವರನ್ನು ಕಂಟ್ರೋಲ್ ಮಾಡುವ ಕೆಪಾಸಿಟಿ ದಾವಣಗೆರೆಯ ಡಿ.ಸಿ. ಸಾಹೇಬರಾದ ಚಿತ್ರನಟ ಕೆ.ಶಿವರಾಮು ಅವರಿಗಿರಬೇಕಾಗಿತ್ತು. ಆ ನಿಟ್ಟಿನಲ್ಲಿ ಸಂಪೂರ್ಣ ಸೋತು ಮುಗ್ಗರಿಸಿದರು ಜಿಲ್ಲಾಧಿಕಾರಿ ಶಿವರಾಮು.
ಅದರಿಂದಾಗಿ ವೇದಿಕೆಯ ಮೇಲೆ ಜನಜಾತ್ರೆ. ಶಿವರಾಮು ವೇದಿಕೆಯ ಮೇಲೆ ಸಂಭ್ರಮಿಸುತ್ತಿದ್ದಾಗ ಪ್ರೇಕ್ಷಕಾಂಗಣದಲ್ಲಿ ಪತ್ರಕರ್ತರು ಪ್ರೆಸ್ ಫೋಟೋಗ್ರಾಫರ್‍ಸ್ ಪೊಲೀಸರ ದೌರ್ಜನ್ಯಕ್ಕೆ ಬಲಿಯಾಗಿ ಅವಮಾನಿತರಾಗಿ ಕತ್ತಿನ ಪಟ್ಟಿ ಹಿಡಿದು ಆಚೆಗೆ ದಬ್ಬಲ್ಪಟ್ಟರು ಅವರು ಹೊಲಸು ಬಾಯಿಗೆ ಸಿಲುಕಿ ‘ಥೂ-ಛೀ’ ಎಂದು ಅವಮಾನಿಸಲ್ಪಟ್ಟರು.
ವಜ್ರದ ಕಿರೀಟಧಾರಣೆ ವೇದಿಕೆ ಮೇಲೆ ಆಗುವ ಮುನ್ನ ಹಿರಿಯ ಪತ್ರಕರ್ತ ಸಿ. ಸೀತಾರಾಮ್ ಅವರ ಕತ್ತಿನ ಪಟ್ಟಿ ಹಿಡಿದೆಳೆದು ಅವಮಾನಿಸಿದ ಪೊಲೀಸ್ ಪೇದೆ. ‘ನನ್ನ ೩೪ ವರ್ಷ ಸರ್ವಿಸ್ನಲ್ಲಿ ಇಂಥ ಅವಮಾನವಾಗಿರಲಿಲ್ಲ’ ಎಂದರು ಸೀತಾರಾಂ.
ಪತ್ರಕರ್ತ ಗಣೇಶ್ ಕಾಸರಗೋಡು, ಬಾಬು ದಿನಕರ, ಪತ್ರಕರ್ತೆ ಅರುಣ ಮುಂತಾದವರನ್ನು ಕ್ಯಾರೆ ಎನ್ನದೆ ಲಾಠಿ ತಿರುವಿದರು ಪೊಲೀಸರು. ಒಳಗೆ ಹೋಗುವುದೇ ಹಿಂಸೆ ಎನ್ನುವಂಥ ಕಹಿ ಕಹಿ ಅನುಭವದಿಂದ ಬಂದ ದಾರಿಗೆ ಸುಂಕವಿಲ್ಲವೆಂದು ಹಿಂತಿರುಗಿದವರು ಬಹುಮಂದಿ.
ಘನಂದಾರಿ ನಟರನ್ನು ಕಲರ್‌ಫುಲ್ ಆಗಿ ಕ್ಲಿಕ್ಕಿಸಲು ಹೋದ ಡಿ.ಸಿ. ನಾಗೇಶ್, ವೀರೇಶ್ ಮುಂತಾದ ಪ್ರೆಸ್ ಫೋಟೋಗ್ರಾಫರ್‍ಸ್ ಪೊಲೀಸರ ಪಾಲಿಗೆ ಕಾಲ ಕಸವಾಗಿದ್ದರು.
ಪತ್ರಕರ್ತರನ್ನು ಪರಮ ಆಸ್ಥೆಯಿಂದ ಕರೆದೊಯ್ದ ಪ್ರಚಾರಕರ್ತ ಸುಧೀಂದ್ರ-ವೆಂಕಟೇಶ್ ಅಲ್ಲಿನ ಅವ್ಯವಸ್ಥೆ ಕಂಡು ‘ಲಬೊಲಬೊ’ ಎಂದು ಬಾಯಿಬಡಿದುಕೊಳ್ಳುವ ಸ್ಥಿತಿ ಕಂಡು ಅವರ ಮುಖ ಕಪ್ಪಿಟ್ಟಿತ್ತು.
‘ನಾವು ಈವರೆಗೆ ೬೫೦ಕ್ಕೂ ಹೆಚ್ಚು ಸಿನಿಮಾ ಕಾರ್ಯಕ್ರಮ ನಡೆಸಿದ್ದೀವಿ. ಆದರೆ ಇದು ನಮ್ಮ ವೃತ್ತಿ ಜೀವನದ ಕಪ್ಪು ಚುಕ್ಕೆ. ಇನ್ನು ಮುಂದೆ ಇಂಥ ಕಾರ್ಯಕ್ರಮದ ಹೊಣೆ ನಾವು ಖಂಡಿತಾ ಹೊರುವುದಿಲ್ಲ” ಎಂದರು.
‘ದಾದು ಫಿರ್ಯಾದಿಲ್ಲದ ಜನ ಜಂಗುಳಿಯಿಂದಾಗಿ ಕಲ್ಲು-ಮಣ್ಣು-ಚಪ್ಪಲಿ ತೂರಾಟವೂ ಅತಿಯಾಗಿ ಅದೊಂದು ದರಿದ್ರ ಕಾರ್ಯಕ್ರಮವೆನಿಸಿತು.
‘ಏನಾದರಾಗಲಿ – ವಜ್ರದ ಕಿರೀಟಧಾರಣೆಯ ಫೋಟೋ ಆದರೂ ತೆಗೆದುಬಿಡೋಣ’ ಎಂದಾಗ ವೇದಿಕೆಗೆ ಆಹ್ವಾನ ಫೋಟೋಗ್ರಾಫರುಗಳಿಗೆ ಕಾರ್ಯಕರ್ತರಿಂದ ಅಂಬಿಯವರಿಂದ. ಅಲ್ಲಿಗೆ ತೆರಳಿದಾಗ ಡಿ.ಸಿ. ಸಾಹೇಬರೂ ಮೇಲಿದ್ದಾರೆ.
ಇನ್ನೇನು ಫೋಟೋ ಕ್ಲಿಕ್ಕಿಸಬೇಕು ‘ಯಾವೋನ್ರೀ ನಿಮ್ಮನ್ನ ಇಲ್ಲಿ ಬರ ಹೇಳಿದೋನು’ ಎಂದು ಮತ್ತೆ ಪೊಲೀಸರಿಂದ ಒದೆ.
ಡಿ.ಸಿ. ಸಾಹೇಬರು ಅಂದು ಅಲ್ಲಿ ಮೂಕ ಪ್ರೇಕ್ಷಕ.
ದುರಾಚಾರಿಗಳಂತೆ ನಡೆದುಕೊಂಡ ಪೊಲೀಸರನ್ನು ತೋರಿಸಿದರೂ ‘ಶಿವರಾಂ’ ಗುಮ್ಮನ ಗುಸುಕರಂತೆ ತೆಪ್ಪಗಿದ್ದರಂತೆ.
ಪತ್ರಕರ್ತರ ಮೇಲೆ ಕೈಮಾಡಿದ ಯಾರನ್ನು ಬೇಕಾದರೂ ‘ಸಸ್ಪೆಂಡ್’ ಮಾಡುವ ಶಕ್ತಿ ಜಿಲ್ಲಾಧಿಕಾರಿಗಿದ್ದರೂ ಏಕೋ ಅಂದವರು ತುಟಿಕ್-ಪಿಟಿಕ್ ಎನ್ನಲಿಲ್ಲ.
ಅಂಬಿ, ವಿಷ್ಣು, ಸುಮಲತಾ, ಅಭಿಷೇಕ್ ಗೌಡ, ತಾರಾ, ಜಯಂತಿ, ಪ್ರೇಮಾ, ಶ್ರೀರಕ್ಷಾ, ಸುಂದರರಾಜ್ ಮುಂತಾದವರ ಸಖ್ಯ ಶಿವರಾಮುಗೆ ಹಿತವೆನಿಸಿ ತಮ್ಮ ನಿಜವಾದ ಕರ್ತವ್ಯ ಮರೆತು ಹೀರೋ ಆಗಿ ಮೆರೆಯುವ ಯತ್ನ ಮಾಡಿದ್ದು ದಾವಣಗೆರೆಯಲ್ಲಾದ ದೊಡ್ಡ ದುರಂತ. ವಜ್ರದ ಕಿರೀಟ ಧಾರಣೆಯ ವಿಚಿತ್ರ ವರದಿ ಕೇಳಿದಾಗ ನನಗೆ ನೆನಪಾದದ್ದು ವಿಶ್ವಕನ್ನಡ ಸಮ್ಮೇಳನ. ಅಂದು ಈ ಆಕಾಶವಾಣಿ ಈರಣ್ಣ, ಜಗನ್ಮೋಹನ ಅರಮನೆಯ ಸಭಾಂಗಣವನ್ನು ಪ್ರವೇಶಿಸಲೆತ್ನಿಸಿದಾಗ ಪೊಲೀಸ್ ಪೇದೆಯೊಬ್ಬ ಬ್ಯಾಡ್ಜ್ ತೋರಿದರೂ ಲೆಕ್ಕಿಸದೆ ಹಿಡಿದೆಳೆದು ದಬ್ಬಿದ್ದ.
ಮರುಕ್ಷಣ ಅಲ್ಲೇ ಪೊಲೀಸರ ವರ್ತನೆ ಖಂಡಿಸಿ. ಆ ಕುರಿತೇ ‘ಚಿತ್ರಾ’ ಒಂದು ಬೀದಿ ನಾಟಕವಾಡಿ ಉಪವಾಸ ಕುಳಿತೆವು. ಒಳಗೆ ಮಾಸ್ಟರ್ ಹಿರಣ್ಣಯ್ಯನವರ ನಾಟಕ. ಅವರು ಉಪವಾಸ ಕುಳಿತ ಅಂಶ ತಿಳಿದು ನಾಟಕದಲ್ಲೇ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ- ಅವರ ಜನ್ಮ ಜಾಲಾಡಿ ನಾಟಕಾನಂತರ ನಮ್ಮೊಡನೆ ಬಂದು ಕುಳಿತರು. ಆಗ ರಾಮಾನುಜಂ ಪೊಲೀಸ್ ಹಿರಿಯ ಅಧಿಕಾರಿ ಅವರು ಬಂದು ‘ಧರಣಿ ನಿಲ್ಲಿಸಿ’ ಎಂದು ವಿನಂತಿಸಿದರೂ ಜಗ್ಗಲಿಲ್ಲ ನಾಟಕದ ಮಿತ್ರರು.
ಬೆಳಗ್ಗೆ ಚದುರಂಗ ಅವರಿಗೆ ಸುದ್ದಿ ಮುಟ್ಟಿತು. ಅವರು ಹಾಗೂ ಸಾಹಿತ್ಯ ಮಿತ್ರರು ರಾಮಕೃಷ್ಣ ಹೆಗಡೆ ಅವರಿಗೆ ಸುದ್ದಿ ಮುಟ್ಟಿಸಿದರು. ಆಗ ಹೆಗಡೆಯವರೊಂದಿಗೆ ರಾಚಯ್ಯನವರು ಇಡೀ ಮಂತ್ರಿಮಂಡಲ ಬಂದು ಕ್ಷಮೆ ಕೋರಿ ಆ ಪೇದೆಯನ್ನು ಸಸ್ಪೆಂಡ್ ಮಾಡಿರುವ ಅಂಶ ತಿಳಿಸಿದ ನಂತರ ಧರಣಿ ಮುಕ್ತಾಯ ಮಾಡಲಾಯಿತು. ಹಾಗೆ ಆಗಲಿಲ್ಲವಲ್ಲ-ದಾವಣಗೆರೆಯಲ್ಲಿ, ಹೆಗಡೆಯವರದು ಸೌಜನ್ಯ, ಶಿವರಾಮು ಅವರದು ದುರಹಂಕಾರ. ಈ ಕಾರಣಕ್ಕೆ ದೊಡ್ಡ ದೊಡ್ಡ ಅಧಿಕಾರದಲ್ಲಿರುವವರು ಸಿನಿಮಾ ಹೀರೋಗಳಾಗಿ ಪರಭಾಷಾ ನಟೀಮಣಿಯರೊಂದಿಗೆ ವಿವಿಧ ಪೋಷಾಕುಗಳಲ್ಲಿ ಕುಣಿಯುವುದನ್ನು ಸರಕಾರ ನಿಷೇಧಿಸಿರುವುದು.
ಸರ್ಕಾರದ ಕೆಲಸದಲ್ಲಿರುವ ಅಧಿಕಾರಿಗಳು ಕತೆ, ಕಾದಂಬರಿ ಬರೆಯಬಹುದಂತೆ, ಸಿನಿಮಾದಲ್ಲಿ ಅಭಿನಯಿಸಿದರೆ ತಪ್ಪೇನು? ಅಭಿನಯಿಸಲು ಅವಕಾಶವಿರಬೇಕು’ ಎಂಬ ವಾದ ಅಂಬಿ, ವಿಷ್ಣು ಮುಂತಾದವರು ಮುಂದೆ ಮಾಡಿ. ಕೆ.ಶಿವರಾಮು ಕೇಸ್ ರೆಕಮೆಂಡ ಮಾಡಿದ್ದಾರೆ. ಅದೇ ವೇಳೆ ಶಿವರಾಮು ಅಭಿನಯಿಸಿದ ‘ಸುಭಾಷ್ ಕ್ಯಾಸೆಟ್’ ಸಹಾ ಬಿಡುಗಡೆ ಆಯಿತಂತೆ. ‘ಪತ್ರಕರ್ತರ ಮೇಲೆ ಸೇಡು ತೀರಿಸಿಕೊಳ್ಳಲು ಶಿವರಾಮು ಪೊಲೀಸರನ್ನು ಬಿಟ್ಟಿದ್ದಾರೆ’ ಎಂಬುದು ಬಹುಮಂದಿಯ ಗುಮಾನಿ.
ಅಂದು ಅವಮಾನಿತರಾಗಿ ತಾವಿಳಿದುಕೊಂಡಿದ್ದ ಸ್ಥಳಕ್ಕೆ ಹಿಂತಿರುಗಿದ ಪತ್ರಕರ್ತರನ್ನು ಕ್ಯಾರೇ ಎನ್ನುವವರಿಲ್ಲದೆ ನಡೆದು ಹೋಗಬೇಕಾಗಿ ಬಂದದ್ದು ಕೆಟ್ಟ ಕಹಿನೆನಪಾಗಿ ಉಳಿಯಿತು ಬಹು ಮಂದಿಯ ಮನದಂತರಾಳದಲ್ಲಿ.
ಸಿನಿಮಾ ನಟ-ನಟಿಯರು ಕೂತಿದ್ದು, ನಿಂತಿದ್ದನ್ನು, ಹೂಸಿದ್ದು, ಕೆಮ್ಮಿದ್ದನ್ನು ಪತ್ರಕರ್ತರು ರಸಮಯವಾಗಿ, ಹಲವೊಮ್ಮೆ ಕಾವ್ಯಮಯವಾಗಿ ಬರೆದು ಚಿತ್ರರಸಿಕರಿಗೆ ಖುಶಿ ನೀಡುತ್ತಿರುತ್ತಾರೆ ಎಂಬುದನ್ನು ತುಂಬ ಚೆನ್ನಾಗಿ ಬಲ್ಲ ಅಂಬಿಗಾಗಲಿ, ವಿಷ್ಣುಗಾಗಲಿ, ಶಿವರಾಮುಗಾಗಲಿ, ಸುಮಲತಾಗಾಗಲಿ ‘ಛೇ ಹೀಗಾಗಬಾರದಿತ್ತು. ನಿಮಗೆ’ ಎಂದು ಅವರಿರುವ ಜಾಗಕ್ಕೆ ಹೋಗಿ ಹೇಳುವ ಸೌಜನ್ಯ ಈ ನಟ-ನಟಿಯರಿಗೆ ಇಲ್ಲದಿದ್ದ ಮೇಲೆ ಇವರಿಗೆ ಚಿನ್ನದ ಕಿರೀಟ ವಜ್ರದ ಕಿರೀಟ ಹಾಕಿದ ಸುದ್ದಿ ಬರೆಯ ಹೋಗಿ ಪೊಲೀಸ್ ಭಾಷೆಯಲ್ಲೇಕೆ ಬೈಸಿಕೊಳ್ಳಬೇಕು ಎನಿಸಿದ್ದರೆ ಖಂಡಿತಾ ಅದು ತಪ್ಪಲ್ಲ.
ಪತ್ರಕರ್ತರಿಗಾದ ಈ ಅವಮಾನ, ಚಿತ್ರನಟರಾದ ಕೆ.ಶಿವರಾಮು ಸಿನಿಮಾ ನಟರಾಗಿ ವರ್ತಿಸುವಾಗ ತಮ್ಮ ಕರ್ತವ್ಯ ಮರೆತ ಅಂಶವನ್ನು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೂ ಶ್ರೀಮತಿ ತೆರೇಸಾ ಭಟ್ಟಾಚಾರ್ಯ ಅವರೂ ಗಮನಿಸಿ ಏಕೆ ಹೀಗಾಯಿತೆಂದು ಕಂಡುಹಿಡಿಯಲು ತನಿಖಾ ಆಯೋಗವೊಂದನ್ನು ರಚಿಸಬೇಕಾದದ್ದು ಅತ್ಯಗತ್ಯ.
ವಜ್ರದ ಕಿರೀಟಧಾರಣೆ ಈಗೊಂದು ಫ್ಯಾಷನ್ನೇ ಆಗಿದೆ. ಮುಂದೆ ಲೋಕಸಭಾ ಸದಸ್ಯ ಶಶಿಕುಮಾರ್, ವಿಷ್ಣುವರ್ಧನ್, ಜಗ್ಗೇಶ್, ಶಿವರಾಜ್‌ಕುಮಾರ್, ಡಾ. ರಾಜ್‌ಕುಮಾರ್, ರವಿಚಂದ್ರನ್ ಮುಂತಾದವರಿಗೆಲ್ಲ ಅವರವರ ಅಭಿಮಾನಿಗಳು ವಜ್ರದ ಕಿರೀಟ ತೊಡಿಸುವ ಸನ್ನಾಹದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ದಾವಣಗೆರೆಯ ಅಂಬಿ ಹುಟ್ಟುಹಬ್ಬ ಪತ್ರಕರ್ತರ ಪಾಲಿಗೊಂದು ಕರಾಳ ನೆನಪು. ಎಂದೊಂದು ಮಾಯದ ಗಾಯ.
ರೆಹಮಾನರ ‘ಯಜಮಾನ’ ೧೩೫ನೇ ದಿನದ ಕಹಿನೆನಪು ಆರುವ ಮುನ್ನ ಪತ್ರಕರ್ತರು ಮತ್ತೊಮ್ಮೆ ದಾವಣಗೆರೆಯಲ್ಲಿ ಪೆಟ್ಟು ತಿಂದು ಪೆಚ್ಚಾಗಿದ್ದಾರೆ.
ಕನ್ನಡ ಚಿತ್ರರಸಿಕರು ಬಯಸುವುದು ನಟ-ನಟಿಯರು ತಮ್ಮ ಪ್ರತಿಭೆ ಬೆಳಗುವ ಸದಭಿರುಚಿಯ ಒಳ್ಳೆಯ ಚಿತ್ರಗಳನ್ನು ಬೆಳ್ಳಿ ಕಿರೀಟ, ಚಿನ್ನದ ಕಿರೀಟ, ವಜ್ರದ ಕಿರೀಟಗಳು ಅವರ ಅಭಿನಯವನ್ನು ಪಳಪಳ ಹೊಳೆಸುವುದು ಸಾಧ್ಯವಿಲ್ಲ ಇಂಥ ಕಿರೀಟಾರೋಹಣ ಕಾಲ್‌ಷೀಟ್ ಪಡೆಯಲು ಅಧಿಕೃತ ಲಂಚವಾಗಬಹುದಷ್ಟೆ.
ಜಿಲ್ಲಾಧಿಕಾರಿಗಳಾದ ಶಿವರಾಮ್ ಅವರೇ,
ನಿಮ್ಮ ಅಭಿಮಾನಿಗಳೂ ನಿಮಗೊಂದು ವಜ್ರದ ಕಿರೀಟ ಹಾಕಲಿದ್ದಾರೆ ಎಂಬ ಸುದ್ದಿಯಿದೆ ನಿಜವೇ?
*****
(೧-೬-೨೦೦೧)