ಅನ್ಕೊಂಡಿದ್ದೊಂದು – ಆಗಿದ್ದೊಂದು

ಮಹಾಬುದ್ಧಿಜೀವಿಯಂತೆ ಕುರುಚಲು ಗಡ್ಡಬಿಟ್ಟು ಬಗಲಿಗೊಂದು ಬ್ಯಾಗ್ ನೇತು ಹಾಕಿಕೊಂಡು – ಹವಾಯಿ ಚಪ್ಪಲಿ ಕಾಲಿಗೆ ಮೆಟ್ಟಿಕೊಂಡು-ಎಲ್ಲ ಸಿನಿಪ್ರೆಸ್ ಮೀಟ್‌ಗಳಿಗೆ ಹಾಜರಾಗುತ್ತಿದ್ದ ‘ಮರೀಂದ್ರ’ ಮೊನ್ನೆ ಕೂಡ ಒಂದು ಮುಹೂರ್ತಕ್ಕೆ ಬಂದಿದ್ದ.

ಅವನದೊಂದು ಸಣ್ಣ ಸಿನಿ ಪತ್ರಿಕೆಯಾದರೂ ಅವನ ಮಾತಿನ ಧಾಟಿ, ಪರಿಚಯದ ವೈಖರಿ ಕಂಡವರೆಲ್ಲ ಅವನನ್ನೊಬ್ಬ ಭಾರಿ ಜರ್‍ನಲಿಸ್ಟ್ ಎಂದು ಭ್ರಮಿಸುತ್ತಿದ್ದರು.

“ಏನು ಮರಿ ಈಚೆಗೇನು ಬರೆದ್ರಿ?” ಎಂದೆ.

“ಬರೆದಿದ್ದಕ್ಕಿಂತ ನಾನು ಮರೆತಿದ್ದೇ ಜಾಸ್ತಿ. ಅದರಿಂದ್ಲೇ ನಮ್ಮ ಪೇರೆಂಟ್ಸ್ ‘ಮರಿ’ ಅಂತ ಹೆಸರಿಟ್ಟಿರಬೇಕು” ಎಂದು ತನ್ನ ಜೋಕಿಗೆ ತಾನೇ ನಕ್ಕ.

“ನಿಮ್ಮ ಪೇಪರಿಗೆ ‘ಫಿಲ್ಮಿ ಸರ್ಕಸ್’ ಎಂದು ಯಾಕೆ ಹೆಸರಿಟ್ಟಿದೀರಿ’ ಅಂದೆ.

‘ಸಿನಿಮಾಗಳಿಗಿಂತ ಸರ್ಕಸ್ಸುಗಳೇ ಜಾಸ್ತಿ ಅಲ್ಲಿ – ‘ಕನ್‌ವಿಕ್ಷನ್ಸ್’ಗಿಂತ ಕಾಂಟ್ರವರ್ಸಿಗಳೇ ಜಾಸ್ತಿ ಮಾಡೋದೂ ಒಂದು ಸರ್ಕಸ್ ಅಲ್ವೇ” ಎಂದು ದುರು ದುರು ನೋಡಿದ ನನ್ನತ್ತ.

ಆ ಹೊತ್ತಿಗೆ ರಾಜಕೀಯ ಪುಡಾರಿಗಳು, ಮಠಾಧೀಶರು-ಸಿನಿರಂಗದ ಗ್ಲಾಮರಸ್ ನಟ-ನಟಿಯರು ಹಾಜರಾದರು. ಬೆಲ್ಲಕ್ಕೆ ಇರುವೆ ಮುತ್ತಿದ್ದಂತೆ ಅಭಿಮಾನಿಗಳ ಮಹಾಪೂರವೇ ಹರಿಯಿತು ಅಲ್ಲಿ. ಆರಾಮವಾಗಿ ಕುರ್ಚಿಯ ಮೇಲೆ ಕೂತಿದ್ದ ಪತ್ರಕರ್ತರು ಪೆಚ್ಚಾಗಿ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದರು. ಅವರಿಗೆ ಕಾಣುತ್ತಿದ್ದುದೆಂದರೆ ಜನಗಳ ಬೆನ್ನು ಮಾತ್ರ.

“ಏನಾಗ್ತಿದೆ ಮರಿ ಅಲ್ಲಿ” ಎಂದೆ.

“ಅದ್ಯಾಕಯ್ಯ ಮೆಗಾಫೋನ್ ತಗೊಂಡೆ” ಎಂದರು ಪ್ರೆಸ್‌ನವರು ಕೋರಸ್‌ನಲ್ಲಿ.

“ಏನು ನಡೀತಿದೆ ಅಲ್ಲಿ ಎಂಬುದರ ರನ್ನಿಂಗ್ ಕಾಮೆಂಟ್ರಿ ಕೊಡ್ತೀನಿ” ಅಂತ ಶುರು ಹಚ್ಕೊಂಡ ತನ್ನ ಮಾತಿನ ಪ್ರವಾಹ – ಅದು ನಾನ್‌ಸ್ಟಾಪ್ ಬಸ್‌ನಂತಿತ್ತು. ಮಧ್ಯೆ ಮಧ್ಯೆ ಉದ್ಗಾರ-ಚೀತ್ಕಾರ.

“ಹಾ…. ಈಗ ನಿರ್ಮಾಪಕರು ಮಠಾಧೀಶರನ್ನು ಜ್ಯೋತಿ ಬೆಳಗಕ್ಕೆ ಆಹ್ವಾನಿಸಿದರು. ಬಂದ್ರು ಅವರು. ದೀಪ ಹಚ್ಚಕ್ಕೆ ಮ್ಯಾಚ್ ಬಾಕ್ಸ್ ಇಲ್ಲ. ಆ ಕಡೆ-ಈ ಕಡೆ ನೋಡ್ತಿದ್ದಾಗ ನಿರ್ದೇಶಕರು ಮ್ಯಾಚ್ ಬಾಕ್ಸ್ ಕೊಟ್ಟರು. ಮಠಾಧೀಶರು ಕಡ್ಡಿ ಗೀರ್‍ತಿದ್ದಾರೆ. ಅದು ಹತ್ಲಿಲ್ಲ. ಅರೆ….! ನಿನ್ನೆ ಮಳೇಲಿ ನೆಂದಿರಬೇಕು. ಅಂದಾಗ…. ಹ್ಯಾಂಡ್‌ಸಂ ಹೀರೋ ಸ್ಟೈಲಿಷ್ ಆಗಿ ಕಡ್ಡಿಪೆಟ್ಟಿಗೆ ತೆಕ್ಕೊಟ್ರು. ಹತ್ತಿತು ಕಡ್ಡಿ. ಜ್ಯೋತಿ ಬೆಳಗಿಸಿದರು. ಒಬ್ಬೊಬ್ಬರಾಗಿ ದಿಢೀರ್‍ ದಿಢೀರ್‍ ಅಂತ ಸ್ವಾಮಿಗಳ ಕಾಲಿಗೆ ಬೀಳ್ತಿದಾರೆ. ಕೂಲಿ ಹೊತ್ಕಂಬಂದ ಹಾಗೆ ೮ ಜನ ಒಂದು ಭಾರಿ ಹಾರ ಹೊತ್ತು ತಂದ್ರು. ಅದನ್ನು ನೋಡಿದ್ದೇ ಸಾಕು ಸ್ವಾಮೀಜಿ ಭಯಾನಕ ಎಕ್ಸ್‌ಪ್ರೆಷನ್ ಕೊಟ್ಟರು. ಹೀರೋ-ಹೀರೋಯಿನ್‌ಗೆ ಭಯ. ಎಲ್ಲಿ ಸ್ವಾಮೀಜಿ ಕುಸಿದು ಬೀಳ್ತಾರೋ ಅಂತ. ಅದರಿಂದ ಸ್ವಾಮೀಜಿನ ಬಲವಾಗಿ ಹಿಡಕೊಂಡ್ರು. ಕ್ಯಾಮರಾಗಳು ‘ಕ್ಲಿಕ್’ ‘ಕ್ಲಿಕ್’ ಅಂದವು.

ಈಗ ಮಂತ್ರಿವರೇಣ್ಯರು ಕೈಗೆ ಕ್ಲಾಪ್ ಬೋರ್ಡ್ ಕೊಟ್ಟರು. ಚಿತ್ರದ ಹೆಸರು ‘ಮಹಾಮೋಸ’ ಅಂತ ಅದರ ಮೇಲೆ ಬರೆದಿದ್ದಾರೆ. ಕ್ಯಾಮರಾಮನ್ ಕಪಿನಿ ಸರಸರ ಓಡ್ತಿದಾರೆ…. ಯಾಕೆ ಓಡ್ತಿದ್ದಾರೆ ಅಂತ ಎಲ್ಲ ಗಾಬರಿಯಿಂದ ಅವರ ಕಡೆ ನೋಡ್ತಿದಾರೆ. ಅವರು ಸೀದಾ ಜನ ಜಂಗುಳಿಯಲ್ಲಿ ಹಿಂದಕ್ಕೆ ತಳ್ಳಲ್ಪಟ್ಟಿದ್ದ ವಿತರಕ ವೀರೇಂದ್ರಕುಮಾರ್‌ನ-ಪೊಲೀಸ್ ಕಳ್ಳನನ್ನು ಎಳ್ಕೊಂಬಂದಂತೆ ಎಳತಂದು ಕ್ಯಾಮರಾ ಸ್ವಿಚಾನ್ ಮಾಡಿ ಅಂತ ಕರ್‍ಕೊಂಬಂದಿದಾರೆ ಕಪಿನಿ.

ಹಾ….ಈಗ ಹೀರೋಯಿನ್ ಹಿಮಾನಿ ತೆಳು ಸೀರೆಯುಟ್ಟು ಬಳ್ಳಿಯಂತೆ ಬಳುಕುತ್ತಾ – ಕುಲುಕುಲು ಎಂದು ಸೊಂಟ ಕುಲುಕಿಸುತ್ತ ಬರುತ್ತಿದ್ದಾಳೆ. ಇನ್ನೊಂದು ಪಕ್ಕದಿಂದ ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿದ ಧ್ರುವಕುಮಾರ್‍-ರವಿಚಂದ್ರನ್ ಸ್ಟೈಲ್‌ನಲ್ಲಿ ಎಂಟ್ರಿಕೊಟ್ಟು “ನಿನ್ನ ಬಿಟ್ಟು ನಾನಿರಲಾರೆ” ಎಂದು ಹೇಳಿ ಅಪ್ಪಿಕೋ ಚಳವಳಿ ನೆನಪಿಸಿಕೊಂಡು – ಹೀರೋಯಿನ್‌ನ, ಬ್ಯಾಚಲರ್‌ಗಳು ದಿಂಬು ತಬ್ಬಿಕೊಳ್ಳುವಂತೆ ಬಲವಾಗಿ ತಬ್ಬಿ ಕೂತಿದ್ದಾನೆ. ‘ಹಾಯ್ ನನ್ನ ರಾಜಾ’ ಎಂದ ಹಿಮಾನಿ ಆ ಅಪ್ಪುಗೆಯ ಸವಿ ಘಳಿಗೆ ಸೊಗಸಾಗಿ ಬಿಂಬಿಸಿದ್ದಾಳೆ ಮೊಗದಲ್ಲಿ. ‘ಕಟ್’ ಅಂತಾರೆ ಡೈರೆಕ್ಟರ್‍.

ಹೀರೋ ಸಪ್ಪಗೆ ನಿಲ್ಲುವ. ಆಗ ಪ್ರಚಂಡ ಕರತಾಡನ.

ಸಿಹಿ ಡಬ್ಬಾ ಬಂತು. ಬೇಕ್‌ಬೇಕಾದವರು ತಮಗೆ ಇಷ್ಟವಾದವರಿಗೆ ಸಿಹಿ ತಿನ್ನಿಸ್ತಿದಾರೆ. ಕ್ಲಾಪ್ ಅಂಡ್ ಸ್ವಿಚಾನ್ ಮುಗೀತು. ಈಗ ಹಾರಗಳ ಹಾವಳಿ. ಹೀರೋ-ಹೀರೋಯಿನ್ ಹೊರಟರು. ಜನ ಚದುರ್‍ತಾ ಇದಾರೆ. ಇಲ್ಲಿಗೆ ಮುಹೂರ್ತ ಸಮಾರಂಭ ಮುಕ್ತಾಯವು. ಇದು ಯಾರಿದು ನನ್ನ ಹತ್ರ ಓಡಿ ಬರ್‍ತಿದಾನೆ….ಬಂದ….ವಿಚಾರಿಸಿದೆ ಅವನ್ನ….ಸಾರಿ….ಪತ್ರಕರ್ತ ಮಿತ್ರರಲ್ಲಿ ವಿನಂತಿ. ದಯಮಾಡಿ ಎಲ್ಲ ಬೇಗ ಬೇಗ ಆಚೆ ತೋಟದಲ್ಲಿ ಕೂರಬೇಕಂತೆ. ಇಡ್ಲಿ-ವಡೆ-ಸಾಂಬಾರ್‍ ತಣ್ಣಗಾಗೋದ್ರಲ್ಲಿ ತಿನ್ನಬೇಕಂತೆ” ಎಂದು ಮೆಗಾ ಫೋನ್ ಕೆಳಗಿಟ್ಟು ನಡೆದ.

ತಕ್ಷಣ ಮರಿ ಬಳಿ ಓಡೋಡಿ ಬಂದ ಒಬ್ಬ ಟಿಪ್‌ಟಾಪ್ ಸೂಟುಧಾರಿ.

‘ಸಾರ್‍-ತಾವು ತುಂಬಾ ಸೊಗಸಾಗಿ ರನ್ನಿಂಗ್ ಕಾಮೆಂಟ್ರಿ ಕೊಟ್ರಿ. ನಾವು ಹೀಗೆ ನಿರರ್ಗಳವಾಗಿ ಮಾತಾಡೋ ಒಬ್ಬ ಮಾತುಗಾರನ್ನ ಹುಡುಕ್ತಿದ್ವಿ. ಅಚಾನಕ್ಕಾಗಿ ಇವತ್ತು ನಿಮ್ಮ ಪ್ರತಿಭೆ ಪರಿಚಯವಾಯಿತು. ಅದರಿಂದ ಹೊಸದಾಗಿ ಓಪನ್ ಆಗ್ತಿರೋ ನಮ್ಮ ಚಾನೆಲ್‌ಗೆ ನೀವು ಆಂಕರ್‍” ಆಗಿ ಬರಬೇಕು.

‘ಆಂಕರ್‌ಗೋ-ಆಕ್ಟರಾಗೋ’

“ಆಂಕರ್‍ ಅಂದ್ರೆ ನಿರೂಪಣೆ ಮಾಡೋದು-ಕಾರ್ಯಕ್ರಮ ನಡೆಸಿಕೊಡೋದು”

“ಸರಿ…. ಅಂದ್ರೆ” ಫಿಲ್ಮಿ ಸರ್ಕಸ್ ಅಂತನ್ನೋ ಪತ್ರಿಕೆ ನಡೆಸ್ತಿದೀನಿ ನಾನು. ಅದರ ಸಂಪಾದಕ ಮರಿ ನಾನು. ಈ ಕೆಲಸ ಹ್ಯಾಗೆ ಬಿಡ್ಲಿ”

“ಆ ಪೇಪರ್‍ ನಿಲ್ಸಿ ಅಂತ ಹೇಳ್ತಿಲ್ಲ ಮಿ.ಮರಿ. ನೀವು ನಮ್ಮಲ್ಲಿಗೆ ಬಂದ್ರೆ ತಿಂಗಳಿಗೆ ೧೦ ಸಾವಿರ ಸಂಬಳ ಕೊಡ್ತೀವಿ ಅಂತ ಓಪನ್ ಆಫರ್‍ ಕೊಡ್ತಿದೀವಿ”

“೧೦ ಸಾವಿರ ತಿಂಗಳಿಗೆ ಕೊಟ್ರೆ ಆ ಪೇಪರ್‍ ತಕರಾರು ಬೇಡವೇ ಬೇಡ ನಂಗೆ”

“ಹಾಗಾದರೆ ನೀವು ಒಪ್ಪಿದಿರಿ ಅಂತ ನಮ್ಮ ಬಾಸ್‌ಗೆ ಹೇಳಲಾ”

“ಖಂಡಿತಾ ಹೇಳಿ, ಇವತ್ತಿನ ಪ್ರೆಸ್ ಮೀಟೇ ನನ್ನ ಲಾಸ್ಟ್ ಪ್ರೆಸ್ ಮೀಟ್”

“ಹಾಗೆ ಯಾಕೆ ಅಂತೀರಿ. ಇನ್ನು ಮುಂದೆ ಪ್ರೆಸ್‌ಮೀಟ್ ೧೫ ದಿನಕ್ಕೊಂದು ಸಲ ಏರ್ಪಾಟು ಮಾಡ್ತಿರತೀವಿ. ಅಲ್ಲಿ ನೀವೇ ಆ ಪ್ರೆಸ್ ಮೀಟು ಕಂಡಕ್ಟ್ ಮಾಡಬೇಕು”. ಎಂದಾಗ ಮರಿ ಹಿರಿಹಿರಿ ಹಿಗ್ಗಿದ. ಅನಂತರ ‘ಮಹಾಮೋಸ’ ಚಿತ್ರದ ಪ್ರೆಸ್ ಮೀಟ್‌ನಲ್ಲಿ ನನ್ನ ಪಕ್ಕವೇ ಕುಳಿತು

“ಮಿಸ್ಟರ್‍ ಮೂರ್ತಿ ಇದೇ ನನ್ನ ಕಡೇ ಪ್ರೆಸ್‌ಮೀಟ್” ಎಂದ.

“ಯಾಕೆ? ಸೂಸೈಡ್ ಮಾಡ್ಕೋಬೇಕು ಅಂತ ಯೋಚನೆ ಮಾಡಿದೀರಾ?”

“ಒಬ್ಬ ಇಂಡಿವಿಷುಯಲಿ ಒಂದು ಪತ್ರಿಕೆ ತರಬೇಕಾದರೆ ಎಷ್ಟು ಮೈ ಹಿಡಿಮಾಡ್ಕೊಂಡು ಬದುಕಬೇಕು ಅಂತ ನನಗೆ ಗೊತ್ತು. ಆ ಕಾರಣಕ್ಕೆ ಎಷ್ಟೋ ಬಾರಿ ‘ಸೂಸೈಡ್’ ಮಾಡ್ಕೋಬೇಕು ಅಂತ ಯೋಚ್ನೆ ಮಾಡ್ತಿದ್ದದ್ದು ನಿಜ. ಆದರೆ ಇವತ್ತು ಮೆಗಾಫೋನ್ ಕೈಗೆ ಸಿಕ್ಕಿದ್ದು ನನ್ನ ಅದೃಷ್ಟದ ಬಾಗಿಲು ತೆಗೆದ ಹಾಗಾಯಿತು” ಎಂದ.

“ನೀವು ಏನು ಹೇಳ್ತಿದೀರಿ ಅರ್ಥವಾಗಲಿಲ್ಲ” ಅಂದೆ.

“ನನ್ನ ರನ್ನಿಂಗ್ ಕಾಮೆಂಟ್ರಿ ಕೇಳಿ ಹೊಸಾ ಚಾನೆಲ್‌ನವರು ಸಖತ್ ಖುಷಿಯಾಗಿ ತಿಂಗಳಿಗೆ ಹತ್ತು ಸಾವಿರ ಸಂಬಳ ಕೊಡ್ತೀವಿ-ಬರಬೇಕು ಅಂದ್ರು. ಹಿಂದೂ-ಮುಂದೂ ನೋಡದೆ ‘ಎಸ್’ ಅಂದಬಿಟ್ಟೆ ಎಂದ ಖುಶಿಯಾಗಿ.

“ಚಿತ್ರ ಮಹಾಮೋಸವಾಗಬಹುದು. ಆದ್ರೆ ನಿಮಗೇನು ಮೋಸವಾಗಲಿಲ್ಲ ಬಿಡಿ” ಎಂದೆ.

“ಅಷ್ಟೆ ಮೂರ್ತಿ ಸರ್‍-ಯಾವಾಗ್ಲೂ ನಾವು ಅನ್ಕೋಳ್ಳದೇ ಒಂದು – ಆಗೋದೇ ಇನ್ನೊಂದು” ಎಂದ.

-ಇದಾದ ಒಂದು ತಿಂಗಳೂ ಇಲ್ಲ. ರಸ್ತೆಯಲ್ಲಿ ಬರುತ್ತಿದ್ದಾಗ ಕಾರೊಂದು ನಿಂತಿತು ನನ್ನ ಪಕ್ಕ. ಗ್ಲಾಮರಸ್ ಹೀರೋನೂ ಮೀರಿಸಿದಂತೆ ಫುಲ್ ಸೂಟಿನಲ್ಲಿದ್ದ ಮರಿ.

ಮಾತು-ನಡಿಗೆ-ವೇಷ-ಭೂಷಣ-ಸ್ಟೈಲ್ ಎಲ್ಲ ಬದಲಾಗಿತ್ತು.

‘ತಗೊಳ್ಳಿ ಮಿಸ್ಟರ್‍ ಮೂರ್ತಿ’ ಅಂತ ವಿಸಿಟಿಂಗ್ ಕಾರ್ಡ್ ಕೊಟ್ಟ, ಅದರಲ್ಲಿನ ‘ಎಂಬ್ಲಂ’ ಮೆಗಾಫೋನ್ ಆಗಿತ್ತು. ಇದೇಕೆ ಮೆಗಾಫೋನ್ ಎಂದೆ. ನನ್ನ ಬದುಕು ಬಂಗಾರವಾಗಿಸಿದ ‘ಮೆಗಾಫೋನ್’ ಎಲ್ಲಾದರೂ ಮರೆಯುವುದು ಸಾಧ್ಯವೆ? ಅಬ್ಬಯ್ಯನಾಯಿಡು ‘ಕರಣೆ’ ಹಿಡಿದು ಬಂದು ‘ಕರಣೆಯೇ’ ತಮ್ಮ ಲಾಂಛನ ಮಾಡಿಕೊಂಡರು.

ಹಾಗೆ ನನಗೆ ಈ ಮೆಗಾ ಫೋನ್ ಎಂದ.

“ಭೇಷ್! ಅಷ್ಟರ ಮಟ್ಟಿನ ಕೃತಜ್ಞತೆ ಇರುವವರೂ ಈ ಕಾಲದಲ್ಲಿದ್ದಾರಲ್ಲ ಎಂದು ಸಂತಸಪಟ್ಟೆ.


(೭-೭-೨೦೦೦)

ಕೀಲಿಕರಣ: ಕಿಶೋರ್‍ ಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.