ಹವೆ ಹೊತ್ತಿಸುವ ಬಿಸಿ
ಬಿಸಿಲು ಬೆಂಕಿ ಬೇಸಗೆ ಧಗೆ
ಅಲವರಿಕೆಯಲ್ಲಿ
ತಣ್ಣನೆ ಒರೆದಂಗಳಕ್ಕೆ
ಮೈ ಚಾಚುವ ಹಿಗ್ಗು
ಗಡಚಿಕ್ಕುವ ಧೋಮಳೆ ನಡುಕ
ಒದ್ದೆ ಮುದ್ದೆಯ ನಡುವೆ
ಒಳಕೋಣೆಯ ಬೆಚ್ಚನೆ ಮೂಲೆ
ಲಾಟೀನ ಕೆಳಗೆ
ಮಗ್ಗಿ ಬರೆಯುವ ಹಿಗ್ಗು
ಕಟಕಟ ಚಳಿ ಕಚಗುಳಿಯ
ನಿಮಿರು ತಿಳಿಗಾಳಿಯಲ್ಲಿ
ಮೈತುಂಬ ಚಿಗುರು ಕಣ್‌ಕಿಸಿದು
ಪ್ರಕೃತಿ ಬದುಕು ನೋಡುವ ಹಿಗ್ಗು
ಉಂಟಲ್ಲ!
ಎಂತ ಹಿನ್ನೆಲೆಯಲ್ಲು ಪುಟ್ಟ ನೆಮ್ಮದಿ ಕುಸುಮ
ಯಾವುದರಿಂದೀ ಬದುಕು
ತುಂಬ ಆತ್ಮೀಯ
*****