ಮಲೆನಾಡ ನೀರ್ಝರಿಣಿ ತಡಿಯ ತಳಿರ್ದೊಂಗಲಲಿ
ನಲಿವ ಮಂಗಲಪಕ್ಷಿ ನಿಚ್ಚ ಹಸುರಿನ ಒಸಗೆ
ಹಾಡೆ ಈ ನೆಲದ ಮಣ್ಣಿಂದೊಗೆದ ಹಾಲ್ದೆನೆಗೆ,
ಸೂರ್ಯಚಂದಿರ ತಾರೆ ನೋಡಿ ಮುಳುಗುವ ನೀಲಿ
ತೇಲಿಸಿತು ನಿನ್ನೆಡೆಗೆ ತನ್ನಮೃತ ಲೀಲೆಯಂ!
ಭವ್ಯತೆಯ ಕನಸು ಗರಿಗೆದರಿ ಮರದುದಿಯಿಂದ
ಬಾನಮುಡಿಗೇರಿ ಬೆಳಕಿನ ಗರ್ಭಗುಡಿಯಿಂದ
ಮಿಡಿಯಿತೊಂದದ್ಭುತೋಂಕಾರ ವೀಣಾರವಂ !
ಗುಣಕೆ ಮತ್ಸರವುಂಟೆ ? ದೇಗುಲದ ಗಂಟೆಯುಲಿ
ಕಂಬ ಕಂಬವ ತುಂಬಿ ಮೈದುಂಬಿ ನಿಂತ ಬಗೆ
ನಿಂತೆ ; ನಿಂತೆನೆ ? ನಾದ ತಂತುವಾದೆನು ಕೊನೆಗೆ
ರಸಋಷಿಯ ಪದ್ಮಶಾಂತಿಯ ಪರ್‍ಣಶಾಲೆಯಲಿ
ಯುಗಯುಗಕು ಸಾಗಿರುವ ಜಗದ ರಾಮಾಯಣಂ
ನೂರು ಸೂರ್ಯೋದಯದ ಬಿಂಬ ಕವಿದರ್ಶನಂ!
ಕೀಲಿಕರಣ: ಎಂ ಎನ್ ಎಸ್ ರಾವ್
ಕೀಲಿಕರಣ: ದೋಷ ತಿದ್ದುಪಡಿ: ಕಿಶೋರ್ ಚಂದ್ರ