ಬಂಧದಿಂ ಬಿಡುಗಡೆಗೆ

(ಅಗಸ್ಟ ಹದಿನೈದು)

ನಾಡಿನೆದೆಯಲ್ಲಿಂದು ಹರುಷ ಉಕ್ಕೇರುತಿದ
ಫಲಿಸಲಿದೆ ಬಹು ದಿನದ ಹಿರಿಯ ಬಯಕೆ;

ನಿಶೆಯಿಂದ ಉಷೆಯಡೆಗೆ, ಬಂಧದಿಂ ಬಿಡುಗಡೆಗೆ
ಜನಕೋಟಿ ಸ್ವಾತಂತ್ರ್ಯ ತೀರದೆಡೆಗೆ

ಸಾಗಿಹರು; ನೀಗಿಹರು ಹಾಳು ಕೂಳೆ ನನಹುಗಳ-
ಬಳಿಸಾರಿ ಬಂದಿಹುದು ಸೌಖ್ಯ ಸುದಿನ;
ಬಾಗಿಹರು ಹೊಸ ನಾಡ ನಾಯಕರ ಹೇಳಿಕೆಗೆ-
ಕೈಗೂಡಲಿಹುದವರ ಭವ್ಯಯಾನ.

ಸುಲಿಗೆ ಮೋಸ, ಸಭ್ಯತೆಯ ವೇಷ, ಸತ್ಯತೆಗೆ ಬಂದ ಹ್ರಾಸ
ಚಿನ್ನದಂಥ ನಾಡಿನಲಿ ಕನ್ನ ಕೊರೆದಂಥ ಕಳ್ಳ ಸಾಸ.
ಹಿಂದು ಮುಸ್ಲಿಮರ ಬಂಧುಬಾಂಧವರ ಭೇದಬೀಜವರಸಿ
ರಕ್ತದೋಕುಳಿಯ ಚೆಲ್ಲಿಸಿದರು ಕಣ್ಣೀರ ಕೋಡಿ ಹರಿಸಿ.

ದೇಶಭಕ್ತರನು ಸರ್ವಶಕ್ತರನು ಸೆರೆಯ ಕಾಳಕಿಳಿಸಿ
ಲಾಠಿ ಗುಂಡು ದುರ್ದಮ್ಯಶಿಕ್ಷೆ ಮರ್ದನೆಗೆ ರೂಪುಗೊಳಿಸಿ,
ಜನತಯುಸಿರ ಹತ್ತಿಕ್ಕಲೆಂದು ಸುತ್ತಾಡಿತಲ್ಲಿ ದಂಡು
ಅರಸುತನಕೆ ಓಗೊಟ್ಟುದಿಲ್ಲ ಎದಗೆಟ್ಟುದಿಲ್ಲ ಬಂಡು.

ಹಡೆದ ತಾಯ್ತಂದೆ, ಮಡದಿ ಮಕ್ಕಳನು, ಮನೆಯ ಮೋಹವನ್ನು
ತೊರೆದು ಬಂದು ಹೋರಾಟಕೆಂದು ನೀಗಿದರು ಪ್ರಾಣವನ್ನು
ಅವರು ಸುರಿದ ಕೆನ್ನೀರಧಾರೆ ಮುನ್ನೀರಿನಂತೆ ತೋರೆ
ಸ್ವಾತಂತ್ರ್ಯ ರವಿಯು ಮೂಡಿದನು; ಮುಖಕೆ ನತ್ತರಿನ ಕಲೆಯು ಬೇರೆ.

ಬಂತು ಬಂತು ಬಿಡುಗಡೆಯು ಬಂತು, ನಿಲುಗಡೆಯ ಹಾಡ ಬಂತು;
ಬಸವಳಿದ ಜನಕೆ ಯಶಕೋರಿ ಬಂತು, ಸಾಮ್ಯತೆಯ ಸುಧೆಯ ತಂತು.
ನರಳಿಕೆಯ ನೋವ, ಬಳಲಿಕೆಯ ಸಾವ ಮೆಟ್ಟಿಕ್ಕಿ ಉಕ್ಕಿ ಬಂತು.
ಅಮರತೆಯ ಹೀರಿ, ಸಮರಸತೆ ಬೀರಿ ಹೊಂದೇರನೇರಿ ಬಂತು!

ಇಂದಿಲ್ಲ ನಾಳೆ ಹೋಳಾದ ನಾಡು ಬೆಸೆದೀತು ಭಯವದೇಕೆ?
ಹಿಂದಾದ ಸಿರಿಯು ಎಂದಾದರೊಮ್ಮೆ ಮುಂದಿನ್ನು ಬಾರದೇಕೆ?
“ಭಾರತವು ಒಂದು, ಭಾರತಿಯು ತಾಯಿ, ಕುಲವೊಂದೆ ಭರತಕುಲವು”
ಎಂದೆಂಬ ಘೋಷ ಕೊರಲುಕ್ಕಿ ಬರಲಿ ಬಂದಂತ ಹಿರಿಯ ಹೊನಲು.

ಆಳುವವರ ಕುಟಿಲತೆಗೆ ಇನ್ನು ಮುನ್ನಿಲ್ಲವಿಲ್ಲಿ ತಾಣ,
ಸಾಮ್ರಾಜ್ಯಶಾಹಿ ಹೆಡೆಯೆತ್ತದಿನ್ನು ವಿಷಕಾರಲಾರದಣ್ಣ.
ಬೆಂದವರ ಬಳಿಗೆ, ನೊಂದವರ ಕೆಲಕೆ ಮಮತೆಯಲಿ ಬಂದುನಿಂದು
ಅಭಯತೆಯ ನೀಡಿ, ಮಂಗಲವ ಹಾಡಿ ಭಾರತಿಗೆ ನಮಿಸಿರಿಂದು.

ಭರತ ಭೂಮಿಯುದ್ದಾಮಕೀರ್ತಿ
ಧವಳತೆಯ ಶಿಖರವೇರಿ-
ಯುಗಯುಗದ ನಿದ್ರೆ ತಾಮಸದ ಮುದ್ರೆ
ಕಡಿದೊಗೆದು ದೂರ ತೂರಿ.

ಸಾವಿನೊಡನೆ ಸೆಣಸಾಡಿ ಗೆದ್ದೆವೋ
ಇನ್ನಿಲ್ಲ ಸಮರ ಮಾರಿ;
ನಾಲ್ವತ್ತು ಕೋಟಿ ನರಕುರಿಗಳಲ್ಲ
ಕೇಸರಿಗಳೆಂದು ಸಾರಿ,
ಜನಮನದ ರೂಢಿ ಮೌಡ್ಯತೆಯ ಸೀಳಿ
ಮಾರ್ಮೊಳಗುತಿಹುದು ಭೇರಿ!

ಅಣ್ಣತಮ್ಮದಿರ ಅಕ್ಕತಂಗಿಯರ ಹಿರಿಯ ಜೀವಗಳಿರ,
ನಾಡಿನೊಲುಮೆಯಲಿ ಬಲುಮಗೊಂಡ ದಿವ್ಯಾತ್ಮ ತೇಜಗಳಿರ
ಈ ದಿನದ ದಿವ್ಯದೋಜಸ್ಸಿನಲ್ಲಿ ತೇಜಸ್ವಿಯಾದ ಮನವು
ಬೆಳಬೆಳಗಲಿನ್ನು ಜಗದಗಲವಾಗಿ ಮಿಗಿಲಾದ ತನ್ನತನವು!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.