‘ಪಾನ್‌ಪರಾಗ್’ ಹೆಸರಿನ ಅಡಕೆ ಪರಿಷ್ಕರಣದ ತಯಾರಕ ಶ್ರೀ ಎಂ.ಎಂ.ಕೊಠಾರಿ ಅವರನ್ನು ಈಚೆಗೆ ಶಿವಮೊಗ್ಗದಲ್ಲಿ ಸನ್ಮಾನಿಸಲಾಯ್ತು. ಇದು, ರಾಜ್ಯದ ಐದಾರು ಜಿಲ್ಲೆಗಳಲ್ಲಿ ಹಂಚಿರುವ ಅಡಕೆ ಬೆಳೆಗಾರರ ಪ್ರಾತಿನಿಧಿಕ ಸನ್ಮಾನವೇನೂ ಅಲ್ಲ; ಪ್ರಾಯಶಃ, ಶಿವಮೊಗ್ಗ ಮತ್ತು ಸುತ್ತಣ ಬೆಳೆಗಾರರು-ವರ್ತಕರಲ್ಲಿ ಕೆಲವರು ಕೂಡಿ ನಡೆಸಿದ್ದು. ಸನ್ಮಾನವನ್ನು ಅದ್ದೂರಿಯಾಗಿ ನಡೆಸಲಾಯಿತು ಮತ್ತು ಅದರಲ್ಲಿ ಕೇಂದ್ರ-ರಾಜ್ಯಮಂತ್ರಿಗಳು ಪಾಲ್ಗೊಂಡಿದ್ದರು ಎಂಬ ಕಾರಣದಿಂದ ಅದಕ್ಕೆ ಪ್ರಾಮುಖ್ಯತೆ ದೊರೆಯಿತು. ಅಡಕೆ ಬೆಳೆಗಾರರು ಮತ್ತು ವರ್ತಕರಿಗೆ ಶ್ರೀ ಕೊಠಾರಿ ಹಾಗೂ ಅವರ ಸಹೋದ್ಯಮಿಗಳಿಂದ ಉಪಕಾರವಾಗಿದೆ. ಅದರಲ್ಲೂ ಮೊದಲು ಈ ಉದ್ಯಮವನ್ನು ದೊಡ್ಡದಾಗಿ ಮೇಲೆಬ್ಬಿಸಿದವರು ಶ್ರೀ ಕೊಠಾರಿ. ಸನ್ಮಾನಕ್ಕೆ ಇದು ಕಾರಣ.
ಅಡಕೆಯ ಸುಗಂಧ ವಸ್ತುಗಳೊಡನೆ ಪರಿಷ್ಕರಿಸುವ ಉದ್ಯಮ ಹಿಂದೆಯೂ ಇತ್ತು. ಕೊಠಾರಿ ಸಂಸ್ಥೆ ಅದನ್ನು ಹೆಚ್ಚು ಆಕರ್ಷಕವಾಗಿಸಿ ದೊಡ್ಡದಾಗಿ ಬೆಳೆಸಿತು. ಕ್ರಮೇಣ ಈ ಪರಿಷ್ಕರಣದಲ್ಲಿ ತಂಬಾಕಿನ ಅಂಶವನ್ನು ಸೇರಿಸಿ ‘ಗುಟಕಾ’ ಎಂಬ ಚರ್ವಣವನ್ನು ತಯಾರಿಸಲಾಯ್ತು. ಗುಟಕಾ ತಯಾರಾಗಲು ತೊಡಗಿದ ಮೇಲೆ ಅದು ರಾಷ್ಟ್ರಾದ್ಯಂತ ಜನರನ್ನು ಆಕರ್ಷಿಸಿ ತನ್ನ ಮಾರಾಟವನ್ನು ಭಾರೀ ಹೆಚ್ಚಿಸಿಕೊಂಡಿತು. ಈಗ ರಾಷ್ಟ್ರದ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಉದ್ಯಮಿಗಳು ನೂರಾರು ಗುಟಕಾ ಉದ್ಯಮ ಘಟಕಗಳನ್ನು ಪ್ರಾರಂಭಿಸಿದಾರೆ. ಇದಕ್ಕೆ ಅಷ್ಟು ವ್ಯಾಪಕ ಬೇಡಿಕೆ ಇದೆಯೆನ್ನುತ್ತಾರೆ. ಈಚೆಗೆ, ಕೆಲವು ಲಾಂಛನಗಳ ಗುಟಕಾಗಳಲ್ಲಿ ತಂಬಾಕು ಮಾತ್ರವಲ್ಲದೆ ಬೇರೆ ಮಾದಕ ವಸ್ತುಗಳನ್ನೂ ಸೇರಿಸುತ್ತಿರಬಹುದು ಅಂತ ಹಲವರ ಅನುಮಾನ. ಹೇಗೂ ರಾಷ್ಟ್ರಾದ್ಯಂತ, ಯುವಪೀಳಿಗೆಯಲ್ಲಿ ವ್ಯಾಪಕವಾಗಿ, ಗುಟಕಾದ ಚಟ ಬೆಳೆಯುತ್ತಿದೆಯೆನ್ನುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಈ ಚಟದಿಂದ ಮುಖ್ಯವಾಗಿ ನಮ್ಮ ತರುಣ ಜನಾಂಗವು ದೈಹಿಕವಾಗಿ ಮಾನಸಿಕವಾಗಿ ದುರ್ಬಲಗೊಳ್ಳುತ್ತಿದೆಯೆನ್ನುವುದು ನಿಜವಾಗಿ ಎಲ್ಲರಿಗೂ ಆತಂಕಕಾರಿಯೇ.
ಬೆಳೆಗಾರರ ವಿಷಯಕ್ಕೆ ಬಂದರೆ, ನಮ್ಮ ಎಲ್ಲ ಬೆಳೆಗಾರರ ಹಾಗೆ ಅಡಕೆ ಬೆಳೆಗಾರರೂ ಮಾರುಕಟ್ಟೆಯ ನಿರಂಕುಶ ಹುಚ್ಚು ಲಹರಿಗಳಿಗೆ, ಅದೃಷ್ಟ ದುರದೃಷ್ಟಗಳ ಜೂಜಾಟಕ್ಕೆ ಸಿಕ್ಕು ಯಾವ ರಕ್ಷಣೆ ಸ್ಥಿರತೆಗಳಿಲ್ಲದೆ ಬಾಳಿಕೊಂಡು ಬಂದಿದ್ದಾರೆ. ಎಲ್ಲ ಸಾಮಾನ್ಯರ ಹಾಗೆ ಅಡಕೆ ಬೆಳೆಗಾರರೂ ಕುಟುಂಬಸ್ಥರಾಗಿ ತಮ್ಮ ತಮ್ಮ ವ್ಯಾವಸಾಯಿಕ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ್ದು ಅನಿವಾರ್ಯವಾಗಿರುವ ಕಾರಣ, ಯಾವುದೇ ಮಾಯಕದಿಂದ ಒಮ್ಮೆ ಬೆಲೆಯೇರಿಕೆ ಕಂಡರೆ, ಸದ್ಯ ತಮ್ಮ ಅದೃಷ್ಟ ಅಂತ ಭಾವಿಸಿ ಹರ್ಷಗೊಳ್ಳುತ್ತಾರೆ. ಇದು ಸಹಜವಾದ್ದೇ. ಹಿಂದಿನ ಕಷ್ಟಕಾಲಗಳನ್ನು ಬಿಟ್ಟು ಈಚೆಗೆ ಹೇಳುವುದಾದರೂ ಎಪ್ಪತ್ತರ ದಶಕದಲ್ಲೊಮ್ಮೆ ಮತ್ತು ಎಂಬತ್ತರ ದಶಕದಲ್ಲೂ ಒಮ್ಮೆ ಧಾರಣೆ ತಳಕ್ಕಿಳಿದು ಬೆಳೆಗಾರರು ಕಂಗಾಲಾಗಿದ್ದರು. ಇನ್ನು, ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಬೆಲೆ ಹೆಚ್ಚುತ್ತ ಬಂದಿದೆಯಾದರೂ ಅದು, ಬೇಯಿಸಿದ ಕೆಂಪು ಅಡಕೆಯ ಕೆಲವು ದರ್ಜೆಗಳಿಗೆ ಮಾತ್ರ. ಗುಟಕಾಕ್ಕೆ ಬಳಸಲು ಬಾರದ ಚಾಲಿ ಮತ್ತಿತರ ಬಗೆಯ ಅಡಕೆಗೆ ಧಾರಣೆಯ ಹೆಚ್ಚಳವಾಗಿಲ್ಲ. ಧಾರನೆ ಏರಿರುವುದು ಒಟ್ಟೂ ಅಡಕೆ ಉತ್ಪನ್ನದ ಸುಮಾರು ಶೇಕಡಾ ಇಪ್ಪತ್ತಕ್ಕೆ ಮಾತ್ರ. ಇಷ್ಟರ ಮೇಲೆ, ಈ ಏರಿಕೆಯ ದಿನಗಳಲ್ಲೂ ಅದರ ಬೆಲೆ ಸ್ಥಿರವಾದದ್ದೇ ಇಲ್ಲ; ಹುಚ್ಚು ಏರುಪೇರುಗಳು ಮುಂದುವರೆದಿವೆ.
ಈ ಸಂಗತಿಗಳೆಲ್ಲ ಇದ್ದೂ ಇವತ್ತು ನಾವು ಬೆಳೆಗಾರರು, ನಾವೇ ಬೆಳೆದ ಅಡಕೆಯ ದುರ್ಬಳಕೆಯಾಗುತ್ತಿರುವುದನ್ನು ಕಂಡು-ಅದರಿಂದ ನಮಗೆ ಕೊಂಚ ಲಾಭವೊದಗುತ್ತದೆ ಎಂಬ ಕಾರಣಕ್ಕೆ-ಆ ಹಾನಿಯನ್ನು ಕಡೆಗಣಿಸಲಿಕ್ಕಾಗುತ್ತದೆಯೇ? ಸನ್ಮಾನದ ಸಂಗತಿಯನ್ನು ಮಾತ್ರ ಹೇಳುತ್ತಿಲ್ಲ; ಅದರಲ್ಲಿ ಪಾಲುಗೊಂಡ ಬೆಳೆಗಾರರು ವರ್ತಕರ ಸಂಖ್ಯೆ ತೀರಾ ಚಿಕ್ಕದು. ಸನ್ಮಾನದ ವಿಷಯವನ್ನೂ ಬಿಟ್ಟೂ ಗುಟಕಾಗೆ ಸಂಬಂಧಿಸಿದ ಬೆಳೆಗಾರರು ಎದುರಿಸಬೇಕಾದ ನೈತಿಕ ಸವಾಲನ್ನು ಕಡೆಗಣಿಸಲಿಕ್ಕಾದೀತೆ? ಈ ವಿಷಯಗಳ ಬಗ್ಗೆ ಹತ್ತಿರದ ರೈತ ಸಹೋದ್ಯೋಗಿಗಳ ಜೊತೆ ಮಾತಾಡಿದ್ದೇನೆ. ಬೇರೆ ಬೇರೆಯವರ ಅಭಿಪ್ರಾಯಗಳನ್ನು ಕೇಳಿಕೊಂಡಿದ್ದೇನೆ. ನಮ್ಮೆದುರಿನ ನೈತಿಕ ಸವಾಲನ್ನು ಕಡೆಗಣಿಸದೆ ಎದುರಿಸಬೇಕಾದ್ದು ನಮ್ಮ ಕರ್ತವ್ಯ ಅಂತ ಹಲವರು ಹೇಳಿದ್ದನ್ನು ಕೇಳಿ ನನಗೆ ದೊಡ್ಡ ಭರವಸೆಯುಂಟಾಗಿದೆ. ಅದೇ ನನಗೆ ಈ ಬರಹವನ್ನು ಬರೆಯಲಿಕ್ಕೆ ಸ್ಫೂರ್ತಿ ಕೊಟ್ಟಿದೆ. ಈ ಸಂದರ್ಭದಲ್ಲಿ ಅನೇಕರು ಗೊಂದಲದಲ್ಲಿ ಬಿದ್ದಿದ್ದಾರೆ ಎನ್ನುವುದೂ ನಿಜವೇ. ಗೊಂದಲಗೊಂಡಾಗ, ಜಾರಿಕೆಯ ಮಾತುಗಳಿಂದ ನಾವು ನುಣುಚಿಕೊಳ್ಳಲೆತ್ನಿಸುವುದೂ ಉಂಟು.
ವ್ಯಾಪಕವಾದ ಮಾರುಕಟ್ಟೆಯಲ್ಲಿ ನಮಗೆ ತಿಳಿಯದ ಮತ್ತು ನಮ್ಮ ಹತೋಟಿಯಿಲ್ಲದ ಎಷ್ಟೋ ಸಂಗತಿಗಳು ನಡೆಯುತ್ತವೆ, ಅವಕ್ಕೆಲ್ಲಾ ನಾವು ಹೊಣೆ ಹೊತ್ತುಕೊಳ್ಳಲು ಸಾಧ್ಯವೆ-ಅಂತ ಅಸಹಾಯಕತೆಯ ಮಾತು ಬಂತು. ನಿಜ, ಮಳೆ, ಬಿಸಿಲು, ಬೆಳೆಹೊಳೆಗಳ ಮೇಲೆ, ಜನರ ಆಲೋಚನೆ ನಡಾವಳಿಗಳ ಮೇಲೆ, ಒಟ್ಟಿನಲ್ಲಿ ಜಗತ್ತಿನ ಯಾವುದರ ಮೇಲೂ ನಮಗೆ ಹತೋಟಿಯಿಲ್ಲ. ಹಾಗಿದ್ದೂ ನಾವು, ಕಂಡ ಕೇಳಿದಾ ಎಲ್ಲ ಸಂಗತಿಗಳನ್ನೂ ನಮ್ಮ ಅಭಿಪ್ರಾಯದ ಹತೋಟಿಗೆ ತಂದುಕೊಂಡು ನಮ್ಮ ಮಟ್ಟಿಗಾದರೂ ರೂಪಿಸಿಕೊಳ್ಳುತ್ತಿರುತ್ತೇವೆ. ಹಾಗೆ ಸ್ವಂತ ಅಭಿಪ್ರಾಯ ನಿರ್ಧಾರಗಳನ್ನು ರೂಪಿಸಿಕೊಳ್ಳುವ ಮೂಲಕವೇ ನಮ್ಮ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿರುತ್ತೇವೆ. ಸ್ವಂತ ವ್ಯಕ್ತಿತ್ವ ಅಂದರೆ ಏನು? ನಮ್ಮದೇ ಭಂಗಿ ಭಣಿತ ಚಲನೆ ಚೇಷ್ಟೆಗಳ ಒಂದು ವಿಶಿಷ್ಟ ದೇಹಾಕಾರವಿರುತ್ತದಲ್ಲ. ನಮಗೆ, ಹಾಗೆ ನಮ್ಮ ಅಭಿಪ್ರಾಯ ನಿರ್ಧಾರಗಳ ಒಂದು ಚಿದಾಕಾರವನ್ನೂ ನಾವು ಕಟ್ಟಿಕೊಳ್ಳುತ್ತಿರುತ್ತೇವೆ. ಅದು ವ್ಯಕ್ತಿತ್ವ. ಖಚಿತ ಅಭಿಪ್ರಾಯ ನಿರ್ಧಾರಗಳಿಂದ ನಮ್ಮ ವ್ಯಕ್ತಿತ್ವವು ಘನವಾಗುತ್ತದೆ. ಅದಿಲ್ಲದಿದ್ದರೆ ನಮ್ಮ ವ್ಯಕ್ತಿತ್ವದ ಆಕೃತಿಯು ಆಕಾರವಿಲ್ಲದೆ ರಾಶಿಯಾದೀತು ಮತ್ತು, ಸ್ವಯಂನಿರ್ಣಯವು ಮನುಷ್ಯನಿಗೆ ದತ್ತವಾಗಿರುವ ಮಹಾಶಕ್ತಿ. ಉದಾಹರಣೆಗೆ-ಈ ಕ್ಷಣದಿಂದ ಜೀವನಪರ್ಯಂತ ನಾನು ಸುಳ್ಳು ಹೇಳುವುದಿಲ್ಲ ಅಂತ ಯೋಚಿಸಿಕೊಂಡು ಸಂಕಲ್ಪಿಸಿ ಅದನ್ನು ಕೈಗೊಂಡರೆ, ಜಗತ್ತಿನ ಯಾವುದೇ ಶಕ್ತಿಯು ನನ್ನನ್ನು ನನ್ನ ನಿರ್ಧಾರದಿಂದ ವಿಚಲಿತಗೊಳಿಸಲಾರದು. ಜಗತ್ತನ್ನು ಹತೋಟಿಗೆ ತೆಗೆದುಕೊಳ್ಳಲಿಕ್ಕಾದೀತೆ, ಬದಲಿಸಲಿಕ್ಕಾದೀತೆ ಅಂತ ಯೋಚಿಸುತ್ತ ಕೂತರೆ, ನಮ್ಮ ವ್ಯಕ್ತಿತ್ವವನ್ನಾದರೂ ನಮ್ಮ ಹತೋಟಿಗೆ ತೆಗೆದುಕೊಳ್ಳಬಹುದಾದ ಬದಲಿಸಿಕೊಳ್ಳಬಹುದಾದ ಸ್ವಾತಂತ್ರ್ಯವನ್ನು, ಮನುಷ್ಯನಿಗೆ ದತ್ತವಾಗಿರುವ ಅಂಥ ಮಹಾಸ್ವಾತಂತ್ರ್ಯವನ್ನು ನಾವು ಕಳೆದುಕೊಳ್ಳುತ್ತೇವೆ. ಮಾರುಕಟ್ಟೆಯ ಲಹರಿಗಳನ್ನು ಬದಲಿಸಲಿಕ್ಕಾದೀತೆ ಅಂತ ಚಿಂತೆ ಮಾಡುವುದನ್ನು ಬಿಟ್ಟು ನಾವು ನಮ್ಮ ಸ್ವಂತದ ನಿರ್ಧಾರ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳುವ ಬಗ್ಗೆ ಯೋಚಿಸಬೇಕು.
ತಂಬಾಕಿನ ಚಟ ಮತ್ತು ಇಂಥ ಇನ್ನೂ ಇತರ ಹಾನಿಕಾರಕ ಚಟಗಳು ಯಾವತ್ತಿನಿಂದ ಇವೆ, ಗುಟಕಾ ಬಗ್ಗೆಯೇ ಯಾಕೆ ಅಷ್ಟೆಲ್ಲಾ ತಲೆಬಿಸಿ ಅಂತ ಕೆಲವರ ಪ್ರಶ್ನೆ. ಚಟಗಳಿವೆ ನಿಜ. ದೂರ ಯಾಕೆ, ನಾನೇ ಸ್ವತಃ ತಂಬಾಕು ತಿನ್ನುವ ಚಟವಿರುವವನು; ಅದನ್ನು ಬಿಡಲಿಕ್ಕಾಗದ ದೌರ್ಬಲ್ಯವುಳ್ಳವನು. ಆದರೆ, ಈ ಚಟದಿಂದಾಗುವ ಹಾನಿ ನನಗೇ ಮತ್ತು ಅದಕ್ಕೆ ನಾನೇ ಹೊಣೆ. ಇದು ಬೇರೆ, ಜಾಸ್ತಿ ನಫೆ ಕಮಾಯಿಸಲಿಕ್ಕಾಗಿ ಅನ್ಯರ ದೌರ್ಬಲ್ಯವನ್ನು ಹಿಡಿದು ಮೀಟಿ ಅವರಲ್ಲಿ ಹಾನಿಕಾರಕ ಚಟ ಬೆಳೆಯುವಂತೆ ಸಂಚು ನಡೆಸುವುದು ಬೇರೆ. ನಮ್ಮ ಬೆಳೆಗಾರರು ಸ್ವತಃ ಸಂಚುಮಾಡಿದವರಲ್ಲ; ಆದರೆ, ಸಂಚು ಮಾಡುವವರಿಗೆ ಮೌನ ಸಮ್ಮತಿ ನೀಡುವುದೂ ಸಂಚಿನಲ್ಲಿ ಕಿಂಚಿತ್ ಪಾಲ್ಗೊಂಡಂತೆ. ಕಡೆಯಪಕ್ಷ, ನಮ್ಮ ಬೆಳೆಯಿಂದ ಅನ್ಯರಿಗೆ ಹಾನಿಯಾಗುವುದನ್ನು ಒಪ್ಪುವುದಿಲ್ಲ ಎಂಬ ದೃಡ ಅಭಿಪ್ರಾಯವಾದರೂ ನಮ್ಮಲ್ಲಿ ಬೆಳೆಯಬೇಕು. ಚಟಗಳುಳ್ಳವರು ಕೂಡಾ ಆ ಚಟವು ತಮ್ಮ ಮಕ್ಕಳಲ್ಲಿ ಮತ್ತು ಸಮುದಾಯದ ಮಕ್ಕಳಲ್ಲಿ ಬೆಳೆಯಲಿ ಅಂತ ಹಾರಯಿಸುವುದಿಲ್ಲ.
ಅಷ್ಟೆಲ್ಲ ಇದ್ದರೆ ಸರ್ಕಾರವೇ ಗುಟಕಾವನ್ನು ನಿಷೇಧಿಸಬಹುದಲ್ಲ ಅಂತ ಹೊಣೆಯನ್ನು ಸರ್ಕಾರಕ್ಕೆ ಅಂಟಿಸುವ ಮಾತುಗಳು ಬಂದಿವೆ. ಅದೂ ಸರಿಯಿಲ್ಲ. ಮೊದಲನೆಯದಾಗಿ ಗುಟಕಾದಲ್ಲೇನಾದರೂ ಅಪಾಯಕಾರಿ ರಾಸಾಯನಿಕಗಳಿದ್ದರೆ ಮಾತ್ರ ನಿಷೇಧ ವಿಧಿಸಬಹುದು. ನಮ್ಮ ನ್ಯಾಯವ್ಯವಸ್ಥೆಯ ಚೌಕ್ಕಟ್ಟಿನಲ್ಲಿ, ತಂಬಾಕಿಗೋಸ್ಕರ ಗುಟಕಾವನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರವಿಲ್ಲ. ಹಾಗೆ ಮಾಡುವುದಾದರೆ ಅದಕ್ಕೆ ಮೊದಲು ಸಿಗರೇಟು ಬೀಡಿ ನಶ್ಯ ತಂಬಾಕುಗಳನ್ನು ಮೊದಲು ನಿಷೇಧಿಸಬೇಕಾಗುತ್ತದೆ. ಮೇಲಾಗಿ, ಮದ್ಯ, ಜೂಜು, ಲಾಟರಿಗಳಿಂದಲೂ ಹಣ ಮಾಡಿಕೊಳ್ಳಲು ಹಾತೊರೆವ ನಮ್ಮ ಸರ್ಕಾರಗಳಿಗೆ ಅಂಥ ನೈತಿಕ ಅಧಿಕಾರವೇ ಇಲ್ಲ. ಎರಡನೆಯದಾಗಿ-ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಇಂಥವನ್ನು ಸಮುದಾಯಗಳೇ ಸ್ವಯಂ ನಿಯಂತ್ರಣಗಳಿಂದ ಸಾಧಿಸಿಕೊಳ್ಳಬೇಕಾದ್ದು ಹೆಚ್ಚು ಅಪೇಕ್ಷಣೀಯ. ಹಾಗಲ್ಲದ ಸರ್ಕಾರವು ಇಂಥದರಲ್ಲಿ ಮಧ್ಯಪ್ರವೇಶ ಮಾಡಲು ಅವಕಾಶ ಕೊಟ್ಟರೆ, ಶಾಸಕರೂ ಅಧಿಕಾರಿಗಳೂ ಆಡಳಿತವೂ ಭ್ರಷ್ಟವಾಗಲು ಅವಕಾಶ ಮಾಡಿಕೊಟ್ಟಂತೆಯೇ.
ನಾವು ಬೆಳೆಗಾರರು ಸಾಮಾನ್ಯ ಜನ, ಸ್ವಾರ್ಥ ಬಿಟ್ಟ ಕೇವಲ ಪರೋಪಕಾರಿ ಸಾಧು ಸಂತರಲ್ಲ, ಸಂಸಾರವಂದಿಗರಾಗಿ ಹೇಗೋ ಅದನ್ನು ನಿರ್ವಹಿಸುವುದೇ ಸಾಕಾಗಿರುವಾಗ ನೈತಿಕತೆ ಇತ್ಯಾದಿ ದೊಡ್ಡವರ ಉಪದ್ವ್ಯಾಪಗಳೆಲ್ಲಾ ನಮಗೆ ಯಾತಕ್ಕೆ ಅನ್ನುವವರುಂಟು. ಸಾಮಾನ್ಯ ಸಂಸಾರವಂದಿಗನ ಸಹಜವೂ ಸಾಧ್ಯವೂ ಅಗತ್ಯವೂ ಆಗಿರುವ ನೈತಿಕತೆಯನ್ನು ಮೀರಿ ಇನ್ನಾವುದೋ ಮಹಾದಿವ್ಯವನ್ನು ನಾನು ಖಂಡಿತವಾಗಿಯೂ ಪ್ರತಿಪಾದಿಸುತ್ತಿಲ್ಲ. ಸಂಸಾರವಂದಿಗರ ಸಹಜ ನೈತಿಕತೆಯನ್ನು ಮೀರಿದ ದೊಡ್ಡ ತಪಸ್ಸು ಜಗತ್ತಿಗೆ ಬೇಕೇ ಇಲ್ಲ. ಕುಟುಂಬದಲ್ಲಿ ನಾವು ಒಬ್ಬರಿಗೊಬ್ಬರು ಒಳ್ಳೆಯದನ್ನು ಹಾರಯಿಸಿಕೊಳ್ಳುತ್ತಿರುತ್ತೇವೆ; ಗಂಡನ, ಮಗನ ಹಿತಕ್ಕಾಗಿ ಸುಖಕ್ಕಾಗಿ ತಾಯಿಯು ಮುದದಿಂದ ತೇಯ್ದುಕೊಳ್ಳುತ್ತಿರುತ್ತಾಳೆ; ಅಪ್ಪನು ತನ್ನ ಒಳಿತಿನ ಬಗ್ಗೆ ಚಿಂತಿಸುವುದಕ್ಕಿಂತ ಹೆಚ್ಚಾಗಿ ಮಗನ ಒಳಿತಿನ ಬಗ್ಗೆ ಚಿಂತಿಸುತ್ತಿರುತ್ತಾನೆ. ಅಡಿಗರ ‘ವರ್ದಮಾನ’ ಕವಿತೆಯಲ್ಲಿ ತಂದೆಯು, ನಡುಮಧ್ಯಾಹ್ನ ಸುಡುಬಿಸಿಲಲ್ಲಿ ಕಾದ ಬಂಡೆಯ ಮೇಲೆ ಕೂತು ಸಿಗರೇಟು ಸೇದುತ್ತ ತಾನೇ ತನ್ನನ್ನು ಸುಟ್ಟುಕೊಳ್ಳುತ್ತಿದ್ದರೂ ತನ್ನ ತಾಪದ ಪರಿವೆಯೇ ಇಲ್ಲದೆ, “….ಅಳಲುತ್ತಾನೆ ಪಂಚಾಗ್ನಿ ಮಧ್ಯಸ್ಥ ಮಗ, ಕೂಗಿ ಕೂಗಿ ಕರೆಯುತ್ತೇನೆ, ಮಂಡೆ ಬಿಸಿ, ಕಂದ ಕಿವುಡಾಗಿದ್ದಾನೆ…. ಕಿವುಚುವ ಕರುಳ ಹಿಡಿದು ಕೊರಗುತ್ತೇನೆ….” ಅಂತ, ತನ್ನ ಮಗನ ತಾಪದ ಬಗ್ಗೆಯೇ ತಪಿಸುತ್ತಾನೆ.
ಸಾಮಾನ್ಯರಲ್ಲಿ ಸಾಮಾನ್ಯರೂ ಇಂಥ ಕೌಟುಂಬಿಕ ಸಾಮುದಾಯಿಕ ಸಂಬಂಧಗಳನ್ನು ಬಲು ಸಹಜವಾಗಿ ರೂಢಿಸಿಕೊಂಡಿರುವುದರಿಂದಲೇ ಮನುಷ್ಯಕುಲ ಬಾಳಿ ಬಂದಿದೆ. ನಮ್ಮ ಮಲೆನಾಡಿನಲ್ಲಿ ಹೊಸದಾಗಿ ಅಡಕೆ ನೆಟ್ಟರೆ ಅದು ಹೂವು ಕಾಣಿಸಲಿಕ್ಕೆ ಹದಿನೈದು ವರ್ಷ, ತುಂಬು ಫಸಲು ಕೊಡಲಿಕ್ಕೆ ಇಪ್ಪತ್ತೈದು ವರ್ಷ ಹಿಡಿಯುತ್ತದೆ. ಹೊಸ ತೋಟ ಮಾಡುವವರು, ಅದು ತಮಗಲ್ಲ ತಮ್ಮ ಮಕ್ಕಳಿಗೆ ಅಂತಲೇ ಮಾಡುತ್ತ ಬಂದಿದ್ದಾರೆ. ಈ ಬೆಳೆಗಾರರು ತಮ್ಮ ಬೆಳೆಯಿಂದಲೇ ದೊಡ್ಡ ಪಾಠ ಕಲಿತುಕೊಂಡು ಬಂದಿದ್ದಾರೆ. ಈ ಮಟ್ಟದ ಸರಳ ಸಾಮಾನ್ಯ ಸಹಜ, ಸಹೃದಯತೆ, ಸಹಾನುಭೂತಿ, ಪ್ರೀತಿ-ಕೊಡುಕೊಳೆಗಳನ್ನಷ್ಟೇ ನಾವು ಕಾಪಾಡಿಕೊಂಡರೆ ಸಾಕು, ಸಾಕೇಸಾಕು. ನಾವು ಬೆಳೆಯುವ ಬೆಳೆಯು ಮುಂದೆ ಅದೇನೋ ಆಗಿ ನಮ್ಮ ದೇಶದ ಎಳೆಯರನ್ನು ಹಾಳು ಮಾಡುತ್ತಿದೆ ಅಂತ ತಿಳಿದಾಗ ಸಂಸಾರಿಯಾದವನಿಗೆ ನಿಜವಾಗಿ ಕರುಳು ಕಿವುಚಿದಂತಾಗುತ್ತದೆ-ಅತಿ ಸ್ವಾರ್ಥದ ಅರಿವಳಿಕೆಯಿಂದ ಕರುಳು ಜಡಗೊಳ್ಳದೆ ಉಳಿದಿದ್ದರೆ.
ಜಗತ್ತನ್ನು ಬಾಳಿಸಿಕೊಂಡು ಬಂದದ್ದೇ ಈ ಕುಟುಂಬ-ಸಮುದಾಯ ಸಂಸ್ಕೃತಿ. ‘ನಾನೆಂಬುದು ಪ್ರತ್ಯೇಕ ವಸ್ತುವಲ್ಲ, ಜಗತ್ತಿನ ಒಂದು ಅಣುಭಾಗವೇ’ ಎಂಬ ಅರಿವು, ನಂಬಿಕೆ ಮತ್ತು ಅದರಿಂದ ಕಲ್ಪಿತವಾಗುವ ಆಸ್ತಿಕತೆ ಧಾರ್ಮಿಕತೆಗಳು-ಇವೇ ಈ ಸಂಸ್ಕೃತಿಯ ಮೂಲ. ಇದೇನೂ ಮಹಾ ತಾತ್ವಿಕ ದರ್ಶನವಲ್ಲ; ಕ್ಷಣಕ್ಷಣವೂ ಒಳಹೊರಗೆ ಉಸಿರಾಡುವಾಗ ನಾವು ಒಮ್ಮೆ ಜಗತ್ತನ್ನು ನಮ್ಮೊಳಗೆ ಕೊಳ್ಳುತ್ತೇವೆ, ಇನ್ನೊಮ್ಮೆ ನಮ್ಮನ್ನು ಜಗತ್ತಿಗೆ ಹಂಚಿಕೊಳ್ಳುತ್ತೇವೆ; ಇಂಥ ನಿಜನಿತ್ಯ ಕ್ರಿಯೆಯಿಂದಲೇ ಬಂದ ಅರಿವು. ಈ ಅರಿವು ನಂಬಿಕೆಗಳಿಂದ ಸಹಾನುಭೂತಿ-ಪ್ರೀತಿ-ಸಹಕಾರ-ತ್ಯಾಗಗಳು ಸಹಜವಾಗಿ ಅರಳಿಕೊಳ್ಳುತ್ತವೆ, ಅವು ಕುಟುಂಬ ಸಮುದಾಯಗಳನ್ನು ರಚಿಸಿ ಬಾಳಿಸುತ್ತವೆ. ಆದಿಮವಾದ ಈ ನಂಬಿಕೆ ನಡಾವಳಿಗಳನ್ನು ಗ್ರಾಮೀಣ ಸಂಸ್ಕೃತಿ, ಕೃಷಿಸಂಸ್ಕೃತಿ ಅಂತಲೂ ಅನ್ನಬಹುದು. ಇದಕ್ಕೆ ಪ್ರತಿಯಾಗಿ, ‘ನಾನು ಬೇರೆ ಜಗತ್ತು ಬೇರೆ, ಸ್ವಂತ ಬಲದಿಂದ ನಾನು ಜಗತ್ತನ್ನು ಆಕ್ರಮಿಸಿ ಅಧೀನವಾಗಿಸಿ, ನನಗೆ ಬೇಕಾದ್ದನ್ನು ಅದರಿಂದ ಬಾಚಿಕೊಂಡು ಬದುಕುತ್ತೇನೆ’ ಎಂಬ ಅಸಹಜ ಕಲ್ಪನೆಯೂ ಆಗಾಗ ಬೆಳೆದುಕೊಳ್ಳುವುದುಂಟು. ಅದನ್ನು ವಾಣಿಜ್ಯ ಸಂಸ್ಕೃತಿ, ನಾಗರಿಕ ಸಂಸ್ಕೃತಿ ಎನ್ನಬಹುದು. ಮೊದಲನೆಯದು ಸಹಕಾರ-ಪ್ರೀತಿ ಸಂಸ್ಕೃತಿಯಾಗಿದ್ದರೆ, ಎರಡನೆಯದು ಸ್ಪರ್ಧಾಸಂಸ್ಕೃತಿ ಯುದ್ದಸಂಸ್ಕೃತಿಯಾಗಿರುತ್ತದೆ. ಈ ಎರಡನೆಯ ಸಂಸ್ಕೃತಿಯು ಪರಸ್ಪರ ಸ್ಪರ್ಧಿಸುವ, ಆಕ್ರಮಿಸುವ, ಶೋಷಿಸುವ ಮತ್ತು ಅಂತಿಮವಾಗಿ ಸರ್ವನಾಶಕ್ಕೆ ಕಾರಣವಾಗುವ ಸಂಸ್ಕೃತಿ.
ಈಚಿನ ದಿನಗಳಲ್ಲಿ ಜಗತ್ತಿನ, ಮಾತ್ರವಲ್ಲ ನಮ್ಮ ದೇಶದಲ್ಲೂ, ಜಾಗತೀಕರಣ ಉದಾರೀಕರಣ ಸ್ಪರ್ಧೆ ಪ್ರಗತಿ ಇತ್ಯಾದಿ ಹೆಸರುಗಳಲ್ಲಿ ಮೇಲಿನ ವಿನಾಶಕಾರಿ ನಾಗರಿಕತೆಯು ಹಬ್ಬಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಾವು ಗ್ರಾಮೀಣರು, ಕೃಷಿಕರು ಜೀವಪೋಷಕವಾದ ನಮ್ಮ ಜನಸಾಮಾನ್ಯ ಸಂಸ್ಕೃತಿಯನ್ನು ಮೇಲೆತ್ತಿ ರಕ್ಷಿಸಿಕೊಳ್ಳಬೇಕು. ಹಾಗೆ ರಕ್ಷಿಕೊಳ್ಳುವುದಕ್ಕೆ ನಾವೆಲ್ಲ ಟೊಂಕಕಟ್ಟಿ ಕತ್ತಿಹಿಡಿದು ರಣಾಂಗಣಕ್ಕೆ ಧಾವಿಸಿ ಮಹಾಸಮರವನ್ನು ಹೂಡಬೇಕಾಗಿಲ್ಲ. ನಾವು ಸಾಮಾನ್ಯ ಜನರು ನಮ್ಮ ಕುಟುಂಬ-ಸಮುದಾಯ ಪ್ರಜ್ಞೆ ಸಂಬಂಧಗಳನ್ನು ಮರೆಯದೆ ಅಥವಾ ಕೈಬಿಡದೆ, ವಾಣಿಜ್ಯ-ಲಾಭ- ಸ್ವಾರ್ಥಗಳ ಅರಿವಳಿಕೆಗೆ ಬಲಿಬಿದ್ದು ಜಡರಾಗದೆ, ಕೊಂಚ ಎಚ್ಚರದಿಂದ ಸಾದಾ ಜೀವಂತ ಸ್ಪಂದಿಸುತ್ತ ಬದುಕಿಕೊಂಡರೆ ಸಾಕು. ನಮ್ಮ ಕುಟುಂಬಗಳೂ ಸಮುದಾಯಗಳೂ ಬದುಕುತ್ತವೆ. ಈಗ ನಾವು ಅಡಕೆ ಬೆಳೆಗಾರರು ಮಾಡಬೇಕಾದ್ದು ಇಷ್ಟನ್ನೇ.
ಇನ್ನು-ಗುಟಕಾ ನಿಂತರೆ ಅಡೆಕೆಯ ಬೆಲೆ ಪಾತಾಳಕ್ಕೆ ಇಳಿದುಹೋಗುತ್ತದೆ ಎನ್ನುವುದೂ ನಿಜವಲ್ಲ. ಅದು ಭ್ರಮೆ. ಈಗಲೂ ಗುಟಕಾಕ್ಕೆ ಹೋಗುವುದು ಒಟ್ಟು ಅಡೆಕೆ ಬೆಳೆಯ ಕಾಲುಭಾಗ ಅಥವಾ ಮೂರರಲ್ಲೊಂದು ಪಾಲು. ಗುಟಕಾ ಬರುವುದಕ್ಕೆ ಮೊದಲೂ ಅಡೆಕೆ ಮಾರಾಟವಾಗುತ್ತಿತ್ತು, ಬೆಳೆಗಾರರು ಬದುಕಿಕೊಂಡಿದ್ದರು. ಹಿಂದೊಮ್ಮೆ ತಂಬಾಕು ತಿನ್ನುವ ಚಟ ಬೆಳೆದಿರುವುದರಿಂದಲೇ ಅಡೆಕೆ ಖರ್ಚಾಗುತ್ತಿದೆ ಅಂತ ಹೇಳುವವರಿದ್ದರು. ನಮ್ಮಲ್ಲಿ ತಂಬಾಕು ತಿನ್ನುವ ಚಟ ವ್ಯಾಪಕವಾಗಿದ್ದರೂ ಅಡಕೆ ಬಳಸುವವರು ಒಟ್ಟೂ ಸಂಖ್ಯೆಯಲ್ಲಿ ತಂಬಾಕಿನ ಚಟವಿರುವವರ ಸಂಖ್ಯೆ ಚಿಕ್ಕದೇ. ಅಲ್ಲದೆ, ತಂಬಾಕು ಈ ದೇಶಕ್ಕೆ ಬಂದದ್ದೇ ಸುಮಾರು ನಾನೂರು ವರ್ಷಗಳ ಹಿಂದೆ. ಆದರೆ ಅಡಕೆಯು ಅಜಂತಾ ಚಿತ್ರಗಳ ಕಾಲದಿಂದ, ಕಾಳಿದಾಸನ ಕಾವ್ಯಗಳ ಕಾಲದಿಂದ ನಮ್ಮ ಎಲ್ಲ ಭಾರತೀಯ ಸಮುದಾಯಗಳೂ ನಿತ್ಯ ಬಳಸುವ ಮಂಗಳೋಲ್ಲಾಸದ ವಸ್ತುವಾಗಿದೆ ಎಂಬುದನ್ನು ಮರೆಯಬಾರದು.
ಭೂಮಿಯಲ್ಲಿ ಬೆಳೆಯುವ ಎಲ್ಲಾ ಸಸ್ಯಗಳೂ ಪ್ರಯೋಜನಕಾರಿಗಳೇ-ಅಡಕೆ ಯಾಕೆ, ತಂಬಾಕು ಕೂಡಾ. ‘ಗಾಳಿಯೂ ಸಮುದ್ರವೂ ಸಸ್ಯಗಳೂ ನಮಗೆ ಜೇನಾಗುತ್ತವೆ, ಅಮೃತವಾಗುತ್ತವೆ’ ಅಂತ ಪ್ರಾಚೀನ ಖುಷಿ ನಂಬಿ ಹಾಕಿದ್ದ. ಒಂದೊಂದೂ ಸಸ್ಯದ ಸದುಪಯೋಗವೇನು ಎಂಬುದನ್ನು ನಾವು ಕಂಡುಕೊಳ್ಳಬೇಕು, ದುರುಪಯೋಗವನ್ನು ತಡೆಯಲು ಯತ್ನಿಸಬೇಕು.
ಅಡೆಕೆಯನ್ನು ಇನ್ನೆಷ್ಟು ಹೊಸ ರೀತಿಗಳಲ್ಲಿ ಪ್ರಯೋಜನಕಾರಿಯಾಗಿ ಬಳಸಬಹುದು ಎಂಬ ಬಗ್ಗೆ ಸಂಶೋಧನೆಗಳಾಗಬೇಕು. ಬೆಳೆಗಾರರೂ ವರ್ತಕರೂ ಆ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ನಮ್ಮ ಮಾಮ್‌ಕೋಸ್, ಕ್ಯಾಂಪ್‌ಕೋ, ತೋಟಗಾರ್ಸ್ ಮುಂತಾದ ಬೃಹತ್ ಸಹಕಾರಿ ಸಂಸ್ಥೆಗಳು ಈ ದಿಶೆಯಲ್ಲಿ ಕೇಂದ್ರೀಕೃತ ಪ್ರಯತ್ನವನ್ನು ನಡೆಸಬೇಕು. ಇಂಥ ಪ್ರಯತ್ನಗಳಿಂದ ಅಡಕೆಯು ಸದುಪಯೋಗವಾಗಿ ಬೆಳೆಗಾರರಿಗೂ ತಕ್ಕ ಬೆಲೆ ಬರಲು ಸಾಧ್ಯ.
ಈಚಿನ ದಶಕಗಳಲ್ಲಿ ಅಡಕೆಗೆ ಧಾರಣೆ ಬಂದಹಾಗೆ, ಅನೇಕರು ಈ ಕೃಷಿಯ ಕಡೆಗೆ ಧಾವಿಸಿ ಬಂದಿದ್ದಾರೆ. ಅಡಕೆ ತೋಟಗಳು ಯಾವ ತಡೆಯಿಲ್ಲದೆ ಒಂದಕ್ಕೆ ಹತ್ತಾಗಿ ಬೆಳೆದಿವೆ. ಇಂಥ ಪ್ರವೃತ್ತಿಯು ಯಾವತ್ತೂ ಕೃಷಿಗೆ ಮಾರಕವೇ. ಎಲ್ಲಾದರಲ್ಲಿ ಗಿಡ ನೆಟ್ಟು ಅದಕ್ಕೆ ಬಲವಂತದಿಂದ ನೀರು ಸುರಿದು ರಸಗೊಬ್ಬರ ಮುಕ್ಕಿಸಿ ಕಡ್ಡಾಯವಾಗಿ ಬೆಳೆಯನ್ನು ಸೆಳೆಯುವ ಈ ಪ್ರಯತ್ನವು ಕೃಷಿಯ ಉತ್ಸಾಹವಲ್ಲದೇ ಅಲ್ಲ, ಇದು ವಾಣಿಜ್ಯ ಲಾಭದ ದಾಹ. ನಿಜವಾದ ಕೃಷಿಕನು ನೆಲಗಿಡಗಳು ಒಂದನ್ನೊಂದು ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಸ್ನೇಹಸಂಧಾನವನ್ನು ಕಾತರದಿಂದ ಕಾಯುತ್ತಾನೆ, ಅದು ಸಿದ್ದಿಸಿದಾಗ ಅದಕ್ಕೆ ತನ್ನ ಶ್ರಮ ಪ್ರೀತಿಗಳನ್ನುಣ್ಣಿಸಿ ಅದು ಹಡೆಯುವ ಫಲವನ್ನು ಎತ್ತಿಕೊಳ್ಳುತ್ತಾನೆ.
ಸನ್ಮಾನವೆಂಬ ಮಾತಿನಿಂದ ಪ್ರಾರಂಭಿಸಿದೆ. ಈ ಮಾನಸನ್ಮಾನಗಳು ಮನುಷ್ಯನಿಗೆ ಮಾತ್ರವಲ್ಲ, ಸಮಸ್ತ ವಸ್ತುಗಳಿಗೂ ಇರುವ ಘನತೆ ಅಂತ ನಮ್ಮ ಹಿರಿಯರು ಭಾವಿಸಿದ್ದರು. ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಗಾದೆಯು ನಮ್ಮಲ್ಲಿ ಹಿಂದಿನಿಂದ ಪ್ರಚಲಿತವಿದೆ. ಸುಮಾರು ಐನೂರು ವರ್ಷ ಹಿಂದಣ ಕನ್ನಡ ಕಾವ್ಯದಲ್ಲಿ, ‘ಒಂದಡಕೆಯ ಹಂಗು’ ಎಂಬ ಮಾತು ಬರುತ್ತದೆ. ಕೇವಲ ವಾಣಿಜ್ಯೋತ್ಸಾಹಿಗಳಿಗೆ, ಹಣದ ಮಾನದಲ್ಲಿ ಅಳೆದಾಗ ಅಡಕೆಯಿಂದ ದೊರಕುವ ‘ಅತಿರಿಕ್ತ ಮೌಲ್ಯ’ವೇ ಅಡಕೆಯ ಮಾನ ಅಂತ ಅನ್ನಿಸಬಹುದು. ಹಣವೆನ್ನುವುದೂ ಒಂದು ಮಾನವೇ. ಆದರೆ ಅದು ಸರ್ವಮಾನವಲ್ಲ. ಅದನ್ನು ಮಿಕ್ಕ, ಮೀರಿದ ಅನೇಕ ಮಾನ ಸಂಮಾನ ಮಹಾಮಾನಗಳಿವೆ.
ಬೆಟ್ಟ ತಪ್ಪಲಿನ ಕಣಿವೆಗಳ ತಳ ಆಳದಲ್ಲಿ ನೆಟ್ಟುಕೊಂಡು, ಆಕಾಶಕ್ಕೆ ಹಂಬಲಿಸುತ್ತ, ಹಂಬಲದಲ್ಲಿ ಕೃಶಕಾಂಡವಾಗಿ ಮೇಲಕ್ಕೆ ಬೆಳೆಯುತ್ತ, ತನ್ನನ್ನು ದಿವದ ಕಡೆಗೆ ಚಾಚಿಕೊಳ್ಳುವುದೇ ಅಲ್ಲದೆ ತಾನುಂಡು ನೆಲದ ಸತ್ವವನ್ನು ದಿವಕ್ಕೆ ಸಾಗಿಸಿಕೊಂಡವ ಈ ‘ಕಣಿವೆಯ ಎತ್ತರ’ವನ್ನು, ಚಂದದ ನೀಳ ಲತಾಕಾಯವನ್ನು ಕಂಡು ವಿಸ್ಮಯಗೊಂಡವರು ಇದು ಕಲ್ಪವೃಕ್ಷ ಸಮಾನವೆಂದು ಭಾವಿಸಿದರು. ಕಣ್ಣಿನ ಗಾತ್ರದ ಇದರ ಫಲವನ್ನು ‘ಮಹಾದಿವ್ಯ’ ಅಂತ ತಿಳಿದರು; ದೇವರಿಗೆ ಸಲ್ಲತಕ್ಕದ್ದು ಅಂತ ಭಾವಿಸಿದರು. ಅಡಕೆಯು ಭಾರತೀಯ ಸಮುದಾಯಗಳಲ್ಲಿ ನಿತ್ಯವಾದ ಅನಿವಾರ್ಯವಾದ ಮಂಗಲವಸ್ತುವೆನ್ನಿಸಿಕೊಂಡಿತು.
ಈ ವಸ್ತುವನ್ನು ಇವತ್ತು ನಾವು ದೇವಸಂಬಂಧದ ಕಲ್ಪನೆಯಲ್ಲಿ ಪರಿಗಣಿಸುವುದಿರಲಿ, ಮನುಷ್ಯಸಂಬಂಧಗಳ ಕಲ್ಪನೆಯಲ್ಲೂ ಪರಿಗಣಿಸದೆ ಹಣದ ಸಂಬಂಧದಲ್ಲಿ ಮಾತ್ರವೇ ಪರಿಗಣಿಸುತ್ತೇವೆ. ಅಂದರೆ, ಅಡಕೆಯ ಮಾನವನ್ನು ಕಳೆದುಬಿಡುತ್ತೇವೆ. ಅಡಕೆಯ ಮಾನಭಂಗವಾದರೆ ಕೃಷಿಕರಿಗೆ ತಮ್ಮ ಮಕ್ಕಳದ್ದೇ ಮಾನಭಂಗವಾಯಿತು ಅನ್ನಿಸಬೇಕು. ನಿಜವಾದ ಬೆಳೆಗಾರನು ತನ್ನ ಹೆಣ್ಣುಮಕ್ಕಳನ್ನು ಸಾಕುವ ಹಾಗೇ ಈ ಚಂದದ ಕಲ್ಪವೃಕ್ಷವನ್ನು ನೀರೆರೆದು ಉಣಿಸಿ ತಿನಿಸಿ ಮೈಮುಟ್ಟಿ ತಲೆ ಮೂಸಿ ಹಿಗ್ಗು ತುಂಬಿಕೊಂಡು ಸಾಕುತ್ತಾನೆ.
*****