ತಿರುಕನಾಗಿ
ತಿರುಕನಾಗಿ
ಅಥವಾ ಮಾತು ಮಾತು ಮಾತುಗಳ
ಶಬ್ದ ಗುಮ್ಮಟವಾದ ಈ ಪ್ರಪಂಚ
ಕವಿಗೆ ತಿಪ್ಪೆಗುಂಡಿಯಂತೆ ಎನ್ನುವುದಾದರೆ
ತಲೆಕೆದರಿದ ತಿರುಕಿಯಂತೆ ಕವಿ
ಈ ತಿಪ್ಪೆಯಲ್ಲಿ ಮರೆತು ಬಿಸಾಕಿದ
ಹರಳು, ಗುಲಗಂಜಿ, ಹೇರ್‌ಪಿನ್ನು, ಬ್ಲೇಡು
ಸರದ ಹುಕ್ಕು, ಅದೃಷ್ಟವಿದ್ದರೆ ನಿರೀಕ್ಷಿಸದೇ ಇದ್ದ
ಮಗುವಿನ ಬೆಳ್ಳಿ ಒಳಲೆ ಇತ್ಯಾದಿ ವಿಶೇಷ ಹುಡುಕಿ ತೆಗೆದು
ಇಟ್ಟುಕೊಳ್ಳುತ್ತಾನೆ, ಅಥವಾ ರೀಸೈಕಲ್ ಮಾಡುತ್ತಾನೆ, ಅಥವಾ
ಒಡೀ ತಿಪ್ಪೆಯಿಂದ ಬಯೋಗ್ಯಾಸ್ ಮಾಡಿ
ದೀಪವನ್ನೂ ಉರಿಸಬಲ್ಲ ರೈತ ಅವನೆಂದರೂ ಸರಿಯೆ.
ಅಥವಾ ಅದೃಷ್ಟವಶಾತ್
ಮಣಿಪಾಲದ ನನ್ನ ಗೆಳೆಯ ವಿಜಯನಾಥ ಶೆಣೈರಂತೆ
ಹಕ್ಕಿದ್ದನ್ನು ಹಕ್ಕಿಯಂತೆ ತಂದೂ ತಂದೂ ಜೋಡಿಸಿ
ಮಾಡಿದ ಗೂಡು ಅದ್ಭುತವೆನ್ನಿಸಿಬಿಟ್ಟು
ಏಕಾಂತಕ್ಕೆ ಸಲ್ಲದೆ
ಅಲ್ಲಿ ತಾನೇ ಕಾಣದಂತಾಗಿ
ಎಲ್ಲರಂತೆ ಇನ್ನೊಂದು ಸಾದಾಮನೆ ಬಾಡಿಗೆಗೆ ಹಿಡಿದು
ತಾನು ಕಟ್ಟಿದ್ದನ್ನು ಉಳಿದವರ ಕಣ್ಣಲ್ಲಿ ಕಂಡು ಸುಖಿಸುತ್ತಾನೆ.
೧೦-೧-೯೨