ಆಶ್ಚರ್ಯವಾಗುತ್ತದೆ. ಇಂಡಿಯಾಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ಬಾಲಕರಾಗಿದ್ದಾಗ ನಮ್ಮಲ್ಲಿ ಆಗ ಅದೆಂಥ ಹುಮ್ಮಸ್ಸಿನ ಬುಗ್ಗೆಗಳು ಚಿಮ್ಮುತ್ತಿದ್ದವು. ಅದೇ ಕಾಲಕ್ಕೆ ಹಿಂದು ಮುಸ್ಲಿಂ ಹಗೆ ಹೊತ್ತಿಕೊಂಡು ದೇಶವು ಕೊಚ್ಚಿ ಹೋಳಾಗಿ ಹೋದದ್ದಾಗಲೀ ಸಮಸ್ತ ಭಾರತದ ಸೃತಿ ಪ್ರಜ್ಞೆ ಕ್ರಿಯೆಗಳ ಏಕೋಸಾಕಾರವಾಗಿದ್ದ ಮಹಾತ್ಮನನ್ನು ಗುಂಡಿಟ್ಟು ಕೊಲೆ ಮಾಡಿದ್ದಾಗಲೀ ಕಡೆಗಣಿಸುವಷ್ಟು ನಮ್ಮ ಬಾಲಿಶ ಹುಮ್ಮಸ್ಸು ಪುಟಿದುಕೊಳ್ಳುತ್ತಿತ್ತು.
ಅದೇ ಸಮಯದಲ್ಲಿ ನಮ್ಮ ಜೋಗದ ವಿದ್ಯುತ್‌ಯೋಜನೆಯ ಎರಡನೆಯ ಹಂತ ಪ್ರಾರಂಭವಾಗುವುದಿತ್ತು. ಮಹಾತ್ಮಗಾಂಧಿ ವಿದ್ಯುತ್‌ಯೋಜನೆ ಕಿರಿದಾಯಿತಂತೆ ಅನ್ನುತ್ತಿದ್ದರು. ಅದಾಗಲೇ ಕಟ್ಟಿದ್ದ ಹಿರೇಭಾಸ್ಕರ ಅಣೆಕಟ್ಟು ಶಿಥಿಲವಾಗುತ್ತಿದೆಯಂತೆ ಅಂತೂ ಮಾತಾಡಿಕೊಳ್ಳುತ್ತಿದ್ದರು. ಅಂತೂ ಯಾವುದೋ ಕಾರಣಕ್ಕೆ ಎರಡನೆಯ ಹಂತದ ಲಿಂಗನಮಕ್ಕಿ ಯೋಜನೆಯ ಸರ್ವೇಕ್ಷಣೆ ನಡೆದಿತ್ತು. ಈ ಹೊಸ ಅಣೆಕಟ್ಟಿನಲ್ಲಿ ನಮ್ಮ ಊರು ಜಮೀನು ಮನೆ ಮುಳುಗಿ ಹೋಗುತ್ತದೆ ಅಂತ ಹಲವಾರು ವರ್ಷ ವದಂತಿಗಳು ಹರಡಿದ್ದವು. ಕಡೆಗೆ ನಮ್ಮ ಊರು ಮುಳುಗಲಿಲ್ಲ. ಜಲಾಶಯದ ಹಿನ್ನೀರು ನಮ್ಮಲ್ಲಿಂದ ಮೂರು ಮೈಲು ದೂರದತನಕವೂ ಬಂದು ಅಲ್ಲಿ ನಿಂತಿತ್ತು. ನಮ್ಮ ಹಿರಿಯರೆಲ್ಲ ಒಮ್ಮೆ ಉಸಿರು ಬಿಟ್ಟು ನೆಮ್ಮದಿಗೊಂಡರು. ನಾನು ಮತ್ತು ನಮ್ಮ ಓರಗೆಯವರು ಮಾತ್ರ ತೀವ್ರ ನಿರಾಶೆಯಲ್ಲಿ ಅದ್ದಿಹೋಗಿದ್ದೆವು. ಹೊಸ ಇಂಡಿಯಾವನ್ನು ನಿರ್ಮಿಸುತ್ತಾ ಇಲ್ಲಿ ಹೊಸಬಗೆಯ ಆಧುನಿಕ ದೇವಾಲಯಗಳನ್ನು ಕಟ್ಟಿ ನಿಲ್ಲಿಸುತ್ತೇನೆ ಅಂತ ಛಲ ತೊಟ್ಟು ಕೆಲಸಮಾಡುತ್ತಿದ್ದ ನಮ್ಮ ನಾಯಕ ನೆಹರೂಗೆ ನಮ್ಮ ಪುಟ್ಟದೊಂದು ಊರನ್ನು ಕಾಣಿಕೆಯಾಗಿ ಒಪ್ಪಿಸಲಿಕ್ಕಾಗದ ದುರ್ದೈವಿಗಳಾದೆವಲ್ಲಾ ಅನ್ನುವ ಖೇದದಲ್ಲಿ ನಾವು ಮುಳುಗಿಹೋದೆವು.
ಅದೆಲ್ಲಾ ಮುಗಿದು ಈಗ ಸುಮಾರು ಐವತ್ತು ವರ್ಷಗಳು ಕಳೆದಿವೆ. ಕಥೆಯು ಅಡ್ಡತಿಡ್ಡ, ತಗ್ಗು ಸಿಕ್ಕಲ್ಲಿ ಹಾಯ್ದುಕೊಳ್ಳುತ್ತಾ ಹರಿದುಕೊಳ್ಳುತ್ತಾ ನಮ್ಮೆಲ್ಲರನ್ನು ಮೀರಿ ನಡೆದಿದೆ. ಅದರ ವಿವರಗಳು ಹಲವು ಹತ್ತು ಬಗೆಯಲ್ಲಿ ಎಲ್ಲರಿಗೆ ತಟ್ಟಿವೆ, ಮನದಟ್ಟಾಗಿವೆ. ಒಂದು ಪುಟ್ಟ ಉದಾಹರಣೆಯನ್ನು ಮಾತ್ರ ಹೇಳುತ್ತೇನೆ. ಶರಾವತಿ ವಿದ್ಯುತ್ ಯೋಜನೆಯಲ್ಲಿ ಉತ್ಪಾದನೆಗಿರುವ ಯಂತ್ರಸ್ಥಾವರಗಳು ಒಟ್ಟೂ ಹತ್ತು. ಇವುಗಳಲ್ಲಿ ನಾದುರಸ್ತು ಮುಂತಾಗಿ ಬಿಟ್ಟು ಸರಾಸರಿ ಏಳೋ ಎಂಟೋ ಸತತ ಕೆಲಸ ಮಾಡುತ್ತವೆ. ಈ ಏಳೆಂಟರಲ್ಲಿ ಒಂದು ಸ್ಥಾವರವು ಉತ್ಪಾದಿಸುವ ಸಮಸ್ತ ವಿದ್ಯುತ್ತೂ ಕೇವಲ ಒಂದು ಅಲುಮಿನಮ್ ಕಾರ್ಖಾನೆಗೆ ಹರಿದು ಹೋಗುತ್ತಿರುತ್ತದೆ. ಪ್ರಾರಂಭದಿಂದ ಈ ತನಕವೂ ಈ ವ್ಯವಸ್ತೆಯು ನಡೆದುಕೊಂಡು ಬಂದಿದೆ. ಕರ್ನಾಟಕದಲ್ಲಿ ಉದ್ದಿಮೆ ಬೆಳೆಸಲು ಮುಂದಾಗಿ ಬಂದರಲ್ಲ ಎಂಬ ಕಾರಣಕ್ಕೆ ಪ್ರಾಯಶಃ, ಮಹಾರಾಷ್ಟ್ರದ ಒಂದು ಉದ್ಯಮ ಸಂಸ್ಥೆಗೆ ನಮ್ಮ ಸರಕಾರವು ಈ ಸವಲತ್ತನ್ನು ಒದಗಿಸಿತು. ಅಲ್ಲದೆ ಉಳಿದೆಲ್ಲಕ್ಕಿಂತ ಅಗ್ಗದ ದರದಲ್ಲಿ (ಪ್ರಾರಂಭದಲ್ಲಿ ಅದು, ಒಂದು ಯುನಿಟ್‌ಗೆ ನಾಲ್ಕು ಪೈಸೆಯಷ್ಟು ಅಗ್ಗವಿತ್ತು) ಸರಬರಾಜು ಮಾಡಿತು. ಆ ಸಂಸ್ಥೆಯವರು ತಮ್ಮ ಕಾರ್ಖಾನೆಯನ್ನು ಬೆಳಗಾವಿಯಲ್ಲಿ ಸ್ಥಾಪಿಸಿದರೂ ತಾಂತ್ರಿಕ ಕಾರಣಗಳಿಗಾಗಿ ತಮ್ಮ ಮುಖ್ಯ ಕಛೇರಿಯನ್ನು ಕೊಲ್ಲಾಪುರದಲ್ಲಿ ಇಟ್ಟುಕೊಳ್ಳುತ್ತೇವೆ ಎಂದು ನಮ್ಮ ಸರಕಾರದ ಅನುಮತಿಯನ್ನು ಪಡೆದುಕೊಂಡರು. ಈ ಒಂದು ‘ತಂತ್ರ’ದಿಂದ, ಮುಂದೆ ಈ ಉದ್ಯಮವು ಸಲ್ಲಿಸುವ ಮಾರಾಟತೆರಿಗೆಯ ಮೊತ್ತವು ಕರ್ನಾಟಕಕ್ಕಲ್ಲ, ಮಹಾರಾಷ್ಟ್ರಕ್ಕೆ ಸಂದಿತು. ಅದು ನಮಗೆ ಸ್ಪಷ್ಟವಾದದ್ದು ಎಷ್ಟೋ ತಡವಾಗಿ. ಉದ್ಯಮವೆನ್ನುವ ಈ ದೃಷ್ಟಿಗೆ ನಫೆಯೊಂದೇ ನಾಣ್ಯವಾಗಿ ಕಾಣುತ್ತದೆ. ಕಣ್ಕಟ್ಟು ಮೋಸ ವಂಚನೆಗಳೇ ಅದರ ನಡೆಯುವ ದಾರಿ.
ಅಣೆಕಟ್ಟುಗಳಲ್ಲಿ ನಮ್ಮಲ್ಲಿನ ನೆಲ ಕಾಡು ಹೊಳೆಗುಡ್ಡ ಹೊಲಮನೆಗಳೂ ಜನರ ಬದುಕೂ ನಾಶಗೊಂಡವು. ಮುಳುಗಡೆಯ ಪರಿಹಾರವನ್ನು ಪಡೆದ ಎಷ್ಟೋ ಜನ ಹೊಸ ಜಮೀನು ಹುಡುಕುತ್ತಾ ಪರಿಹಾರವಷ್ಟನ್ನೂ ತಿರುಗಾಟ ಹುಡುಕಾಟದಲ್ಲೇ ತೊಳೆದುಕೊಂಡು ಬರಿಗೈ ಭಿಕ್ಷುಕರಾಗಿ ಕೂತರು. ಹೀಗೇ ಅಪಾರ ನಾಶಮಾಡಿ ಉತ್ಪಾದನೆಗೊಂಡ ದೊಡ್ಡ ಮೊತ್ತದ ವಿದ್ಯುತ್ ಅಂತಿಮವಾಗಿ ಇಲ್ಲಿರುವ ಬಡತನ ಸಿರಿತನಗಳ ವೈಷಮ್ಯವನ್ನು ಬೇಗಬೇಗ ಬಡಾಯಿಸುತ್ತಾ ಹೋಗಲು ಬಳಕೆಯಾಯ್ತು. ಮಾರುಕಟ್ಟೆಯಲ್ಲಿನ ಬಕಾಸುರ ಗುಡಾಣಗಳಷ್ಟೇ ಬೆಳೆದವು.
ಇದೇ ಕಥೆಯು ಆಮೇಲೆ ಕರ್ನಾಟಕದ ತುಂಬ, ಇಂಡಿಯಾದ ತುಂಬ ವಿವಿಧ ರೂಪ ಬಂಧ ಆಕೃತಿ ಆವೃತ್ತಿಗಳಲ್ಲಿ ಪುನರಾವರ್ತನೆಗೊಂಡಿದೆ. ನಮ್ಮ ಪ್ರಕೃತಿ ಸಂಪತ್ತು ನಿಧಿನಿಕ್ಷೇಪಗಳು ಸ್ಥಳದಿಂದೆದ್ದು ಗುಳೆ ಹೊರಟಂತಾಗಿದೆ. ಕರಿಗಲ್ಲು ಬಂಡೆಗಳೂ ಕೂಡಾ ಈ ಕಡೆ ಜಪಾನಿನ ತನಕ, ಆ ಕಡೆ ಅಮೇರಿಕಾದ ತನಕ ಹೊಳೆಯಾಗಿ ಹರಿದಿವೆ.
ನಾವು ಹಲವು ಮಿತ್ರರು ಬಾಲ್ಯದಿಂದ ಮುಂದೆ, ನೀನಾಸಮ್ ಚಪ್ಪರಕ್ಕೆ ಹಬ್ಬಿ ಕುಡಿಯೊಡೆದುಕೊಳ್ಳಲು ಹವಣಿಸಿದೆವು. ಮೊದಲ ಹಂತದಲ್ಲಿ ನಾಲ್ಕಾರು ವರ್ಷ ನೀನಾಸಮ್ ಉಬ್ಬರಗಳು ಚಟುವಟಿಕೆಗಳು ಅತ್ಯುಬ್ಬರದಲ್ಲಿ ನಡೆದವು. ಎರಡನೇ ಹಂತದಲ್ಲಿ ನಮ್ಮ ಪೊಳ್ಳು ಉಮೇದಿನ ಉಬ್ಬರಗಳು ಠುಸ್ಸೆಂದು ನೀನಾಸಮ್ ಚಟುವಟಿಕೆಗಳೇ ಸ್ಥಗಿತಗೊಂಡವು. ಮೂರನೇ ಹಂತವಾಗಿ ಅರವತ್ತರ ದಶಕದಲ್ಲಿ ನಾವು ಹೊಸದಾಗಿ ಮರಳಿ ಪ್ರಾರಂಭಿಸಿದೆವು. ಆಗ ನಾವು ಮಕ್ಕಳ ಬಗ್ಗೆಯೇ ಹೆಚ್ಚು ಕೇಂದ್ರೀಕರಿಸಿದೆವು. ದೊಡ್ಡವರಾದರೆ, ಸತತವಾಗಿ ಬಂದು ಶಿಸ್ತಿನಿಂದ ಕೆಲಸ ಮಾಡುವುದು ಕಷ್ಟ ಎಂಬುದು ನಮಗೆ ಮನವರಿಕೆಯಾಗಿತ್ತು. ದೊಡ್ಡವರಿಗಿಂತ ಮಕ್ಕಳನ್ನು ನಿರ್ವಹಿಸುವುದು ಸುಲಭವಿತ್ತು. ಅಲ್ಲದೆ, ನಮ್ಮ ರಂಗ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಆಗ ನಟನಟಿಯರು ಸಿಕ್ಕುತ್ತಿರಲಿಲ್ಲ. ಆ ಕಾರಣಕ್ಕೆ ಕೂಡಾ ಮಕ್ಕಳಿಂದ ಪ್ರಾರಂಭಿಸುವುದು ಅಗತ್ಯವೆನಿಸಿತು. ಹೀಗೆ ಮುಂದಕ್ಕೆ ನಾವು ನಮ್ಮಲ್ಲೇ ನಟಿಯರನ್ನು ತಯಾರಿಸಿಕೊಳ್ಳಲು ಸಾಧ್ಯವಾಯ್ತು.
ಇದಾಗಿಯೂ ನಾವು ಸತತ ಅನುಭವಿಸಬೇಕಾಗಿ ಬಂದ ತೊಂದರೆಯೆಂದರೆ, ಮಕ್ಕಳು ದೊಡ್ಡವರಾಗಿ ಮುಂದೆ ಮುಂದೆ ಓದಲು ಊರು ಬಿಟ್ಟು ಹೋಗುತ್ತಿದ್ದುದು. ಓದಿ ಉತ್ತೀರ್ಣರಾದ ಬುದ್ಧಿವಂತರು ಊರನ್ನು ಪೂರ್ತಾಬಿಟ್ಟು ಉದ್ಯೋಗ ಹಿಡಿದು ದೂರದ ಯಾವುದೋ ದೊಡ್ಡ ಊರನ್ನು ಸೇರಿಕೊಳ್ಳುತ್ತಿದ್ದರು. ಹೆಣ್ಣುಮಕ್ಕಳಲ್ಲಿ ಮೊದಲಿದ್ದ ಸಮಸ್ಯೆ, ಅವರು ಮದುವೆಯಾಗಿ ದೂರಹೋಗುವುದು. ಅನಂತರ ಕ್ರಮೇಣ, ಅವರೂ ಉದ್ಯೋಗ ಹುಡುಕಿಕೊಂಡು ನಿಷ್ಕ್ರಮಿಸುವುದು ತೊಡಗಿತು.
ಈಚಿನ ಹತ್ತು ವರ್ಷ ಸುಮಾರಿನಲ್ಲಿ ನಾನು ಕರ್ನಾಟಕದ ಹಲವು ಹಳ್ಳಿ ಕಿರು ಪಟ್ಟಣಗಳನ್ನು ತಿರುಗಾಡಿ ಕಂಡಿದ್ದೇನೆ. ಸೋಮವಾರಪೇಟೆ, ಸುಳ್ಯ, ಉಜಿರೆ, ವಿಟ್ಲ, ಪುತ್ತೂರು, ಕಾರ್ಕಳ, ಬ್ರಹ್ಮಾವರ, ಬೈಂದೂರು, ಹೊನ್ನಾವರ, ಕುಮಟಾ, ಕರ್ಕಿ, ಇಡಗುಂಜಿ, ಅಂಕೋಲ,ಇಟಗಿ, ಇಳಕಲ್ಲು, ಕಿತ್ತೂರು, ಹನಗುಂದ, ಗದಗ, ಹೊಸಪೇಟೆ, ಮರಿಯಮ್ಮನಹಳ್ಳಿ, ಚಿಗಟೇರಿ, ಹಗರಿಬೊಮ್ಮನಹಳ್ಳಿ, ಅಜ್ಜಂಪುರ, ಜಯಪುರ, ಬಸರಿಕಟ್ಟೆ, ಚಿಕ್ಕಮಗಳೂರು, ಮೂಡಿಗೆರೆ, ಸಕಲೇಶಪುರ, ಚಾಮರಾಜನಗರ, ಸಿರ್ಸಿ, ಸಿದ್ದಾಪುರ, ಮಂಚಿಕೇರಿ, ತೀರ್ಥಹಳ್ಳಿ, ಬಸವಾನಿ, ಕೋಣಂದೂರು ಇತ್ಯಾದಿಯಾಗಿ ಹತ್ತೈವತ್ತು ಊರುಗಳು ಥಟ್ಟನೆ ನೆನಪಾಗುತ್ತವೆ. ಇಂಥಲ್ಲಿನ ಚಿಕ್ಕ ದೊಡ್ಡ ಸಮುದಾಯಗಳಲ್ಲಿ ಜನರನ್ನು ಕಂಡು ಆಪ್ತವಾಗಿ ಮಾತಾಡಿದ್ದೇನೆ.
ನಾವು ಕಂಡ ಸಮಸ್ಯೆಯು ಈ ಎಲ್ಲ ಕಡೆಗಳಲ್ಲೂ ಕಾಣಿಸಿಕೊಂಡಂಥದೇ. ಊರಲ್ಲಿರುವ ಬುದ್ಧಿವಂತ ಚುರುಕು ಮಕ್ಕಳು, ಕಸುಬು ಕಲಿತ ಕಲಿಯಬೇಕಾದ ಮಕ್ಕಳು ಊರು ಬಿಟ್ಟು ದೂರ ಹೋಗುತ್ತಾರೆ. ಸಮುದಾಯ ದುರ್ಬಲವಾಗುತ್ತದೆ, ದರಿದ್ರವಾಗುತ್ತದೆ. ಒಂದು ಕಡೆಯಿಂದ ನಮ್ಮ ಹೊಳೆಗುಡ್ಡ ಮರಮಣ್ಣು ನೀರು ಕಲ್ಲುಗಳೂ ಲೋಹನಿಧಿನಿಕ್ಷೇಪಗಳೂ ಹರಿದುಹೋಗುತ್ತಲಿವೆ. ಅದಕ್ಕಿಂತ ಗಂಭೀರವೆಂದರೆ, ನಮ್ಮ ಮಕ್ಕಳು ನಮ್ಮಿಂದ ದೂರಾಗಿ ಕಳೆದುಹೋಗುತ್ತಲಿದ್ದಾರೆ.
ಹೋದಲೆಲ್ಲ ಆಪ್ತಮಾತುಕತೆಗಳಲ್ಲಿ ಈ ಸಂಗತಿಗಳನ್ನು ಪ್ರಸ್ತಾಪಿಸಿದ್ದುಂಟು. ‘ಹೌದು’ ಎಂದ ಜನ ಖಿನ್ನಗೊಳ್ಳುತ್ತಾರೆ, ಅಂತರ್ಮುಖಿಗಳಾಗುತ್ತಾರೆ. ಎರಡನೇ ಮಹಾಯುದ್ಧ ಮುಗಿಯುವ ಹೊತ್ತಿಗೆ ಯೂರೋಪ್‌ನಲ್ಲಿ ಹೀಗೆ ಆಗಿತ್ತಂತೆ. ಬಲಶಾಲಿ ತರುಣರೆಲ್ಲ ಯುದ್ಧಕ್ಕೆ ಆಹುತಿಯಾಗಿಹೋಗಿ ಊರು ತುಂಬಾ ಮಕ್ಕಳು ಮುದುಕರು ಹೆಂಗಸರು ಅಂಗವಿಕಲರು ಉಳಿದಿದ್ದರಂತೆ, ಹಾಗೆ. ಅಥವಾ, ಕಿಂದರಿಜೋಗಿ ಕಥೆಯಲ್ಲಿ ತುದಿಗೆ ಕಾಲಿಲ್ಲದ ಕುಂಟನೊಬ್ಬನೇ ಊರಲ್ಲಿ ಉಳಿದುಬಿಡುತ್ತಾನಲ್ಲ, ಸ್ಮೃತಿಯಾಗಿ, ಆ ಸ್ಮೃತಿಯನ್ನು ಗ್ರಹಿಸಲಿಕ್ಕೂ ಇನ್ನೊಂದು ಜೀವ ಬದಿಗಿಲ್ಲದ ಪಿಶಾಚಸ್ಮೃತಿಯಾಗಿ, ಆ ಥರ. ಸಂಜೆಯ ತುದಿಗೆ ಕಟ್ಟೆಯಂಚಿಗೆ ಕೂತು ಮುಳುಗುವ ಸೂರ್ಯನ ಕಡೆ ಮಂಜುಗಣ್ಣು ಹಾಯಿಸಿ ಈ ನಮ್ಮ ಹೊಸಪ್ರಾಯದ ಮಕ್ಕಳು, ಕಣ್ಣಿನ ಬೊಂಬೆಗಳು, ಕರುಳಿನ ಚಿಗುರುಗಳು, ಹೊಕ್ಕುಳಿನ ಮೊಗ್ಗೆಗಳು ಮಾಯಕದಲ್ಲಿ ಕಳೆದು ಹೋಗುತ್ತಿರುವುದನ್ನು ನೆನೆಯುತ್ತಾ ಸುಯ್ಯುವ ಮುದುಕರ ಸಾಲುಚಿತ್ರ ಕಣ್ಣು ಕಟ್ಟುತ್ತದೆ.
ಭೀತಿಗೊಂಡು ಗೊಂದಲಗೊಂಡು ಸರ್ಕಾರವನ್ನು ದೂರುತ್ತೇವೆ, ರಾಜಕಾರಣಿಗಳನ್ನು ದೂರುತ್ತೇವೆ, ವಿದ್ಯಾಭ್ಯಾಸವನ್ನು ದೂರುತ್ತೇವೆ. ಕಂಡದ್ದನ್ನೆಲ್ಲಾ ದೂರುತ್ತ ಕೈ ಹಿಸುಕಿಕೊಳ್ಳುತ್ತೇವೆ. ಆದರೆ ಇದಕ್ಕೆಲ್ಲ ನಿಜವಾದ ಬೀಜ ನೆಟ್ಟುಕೊಂಡವರು ನಾವೇ, ನಮ್ಮ ಪುಟ್ಟ ಮಕ್ಕಳು ಅದೇ ಹೊಸದಾಗಿ ಹೆಗಲಿಗೆ ಚೀಲ ನೇತುಹಾಕಿಕೊಂಡು ಅಆ ತರಗತಿಗೆ ಹೊರಡುತ್ತಿರುವಾಗಲೇ ಮನೆಯಲ್ಲಿ ವಾಗ್ವಾದ ಶುರುವಾಗುತ್ತದೆ, ಮುಂದೆ ಆ ಮಗುವನ್ನು ಡಾಕ್ಟರು ಮಾಡುವುದೋ ಎಂಜನಿಯರ್ ಮಾಡುವುದೋ ವಕೀಲಿಗೆ ಹಾಕುವುದೋ ಐ.ಎ.ಎಸ್.ಗೆ ಸೇರಿಸುವುದೋ ಅನ್ನುವ ಬಗ್ಗೆ. ಆಗಲೇ ನಾವು ಮಕ್ಕಳ ಮುಂದಣ ದಾರಿಯನ್ನು ಪ್ರಪಂಚದ ಭೂಪಟದಲ್ಲಿ ಇಂಗ್ಲೆಂಡ್ ಅಮೆರಿಕದ ಮಹಾನಗರಗಳ ಕಡೆ ಗೆರೆಯೆಳೆದು ಗುರುತಿಸತೊಡಗುತ್ತೇವೆ.
ಐವತ್ತು ವರ್ಷಗಳ ಹಿಂದಣ ನನ್ನ ಬಾಲ್ಯದಲ್ಲಿಯೇ ಈ ಡಾಕ್ಟರು ಎಂಜನೀರ್ ವಕೀಲಿ ಹುದ್ದೆಗಳ ಲಾಲಸೆ ಶುರುವಾಗಿತ್ತು ನಿಜ. ಆದರೆ, ಆ ಕಾಲವೇ ಬೇರೆ, ಲೋಕವೇ ಬೇರೆ, ಬದುಕೇ ಬೇರೆ. ನೆನಪಿಸಿಕೊಳ್ಳುವಾಗ, ಸ್ವಂತ ಕಂಡ ಉಂಡ ನನಗೇ ಈಗ ನಂಬಲಿಕ್ಕಾಗದಷ್ಟು, ಸುಳ್ಳೆನ್ನುವಷ್ಟು ಬೇರೆ.
‘ನಮ್ಮ ಕಡೆ ಊರೆಂದರೊಂದೆ ಮನೆ’ ಅನ್ನುತ್ತಾರಲ್ಲ ಕುವೆಂಪು? ತೀರ್ಥಹಳ್ಳಿಯ ಕಡೆ ಹಾಗೆ. ನಮ್ಮಲ್ಲಿ-ಆಗ, ಐವತ್ತು ವರ್ಷ ಹಿಂದೆ, ಈಗಲ್ಲ-ಊರೆಂದರೆ ಎರಡು, ಮೂರು ಅಥವಾ ಹತ್ತೆಂಟು ಮನೆಗಳು. ಅಡಕೆ ತೋಟವಿರುವಲ್ಲಿ ಎದುರುತೋಟ, ಹಿಂಬದಿಗೆ ಎತ್ತರದ ದರೆ, ದರೆಯಂಚಿನ ತನಕ ಬಂದು ಕವಿದುಕೊಂಡ ದಟ್ಟವಾದ ಕಾಡು. ಗದ್ದೆಯಿರುವಲ್ಲಿ, ಗದ್ದೆಯ ಭಾಗವಷ್ಟು ಅಂಗಳದ ಥರ ಬಲುಪುಟ್ಟ ಬಯಲು. ಅದರ ಸುತ್ತ ಕವಿದ ಕಾಡು. ಆರು ತಿಂಗಳ ಕಾಲ ಮಳೆ. ಅದರಲ್ಲಿ ಮೂರು ತಿಂಗಳು ಅಬ್ಬರದ ಏಕೋಧಾರೆ ಕಾರ್ಗಾಲ. ನಮಗೆ ಹತ್ತಿರದ ಪೇಟೆಯೆಂದರೆ ಸಾಗರ, ಹತ್ತು ಮೈಲು. ನಡೆದೇ ಹೋಗಬೇಕು. ಹೆಚ್ಚೆಂದರೆ ಎತ್ತಿನ ಗಾಡಿ. ಮಳೆಗಾಲ ನಾಲ್ಕೈದು ತಿಂಗಳು ಎತ್ತಿನ ಗಾಡಿಯೂ ಸಂಚರಿಸದು.
ಇಂಥಲ್ಲಿ ಜೇಷ್ಠ ಆಷಾಢ ಶ್ರಾವಣಗಳಲ್ಲಿ ಮುಖ್ಯವಾಗಿ ಆರ್ದ್ರೆ ಪುನರ್ವಸು ಪುಷ್ಯ ಈ ಮೂರು ಮಳೆಗಳ ಆರು ವಾರಗಳಲ್ಲಂತೂ ಊರೆಂದರೆ ಅದೇ ಒಂದು ಪ್ರತ್ಯೇಕ ಜಗತ್ತು. ಜಗುಲಿಯೇ ಒಂದು ಪ್ರತ್ಯೇಕ ಜಗತ್ತು. ರಾತ್ರಿವೇಳೆ ಬುಡ್ಡಿಯೋ ಲಾಟೀನೋ ಹಚ್ಚಿ ಅಥವಾ ಹೊಡಚಲು ಬೆಂಕಿಯೆದುರು ಒಬ್ಬನೇ ಕೂತರೆ, ಆ ಒಬ್ಬ ಒಂದು ಪ್ರತ್ಯೇಕ ಜಗತ್ತು.
ಇಂಥ ಆವರಣದಲ್ಲಿ, ಮಳೆಗಾಲದ ನಿಸ್ಸಂಪರ್ಕ ಜಗತ್ತಿನ ಏಕಾಂತರಾತ್ರಿಗಳಲ್ಲಿ ನನ್ನ ಅಮ್ಮ ಹೇಳುತ್ತಿದ್ದ ಎರಡು ಸಾಲುಗಳು ನನ್ನನ್ನು ಬಂದು ಆಕ್ರಮಿಸುತ್ತಿದ್ದವು. ಅದರಲ್ಲಿ ಒಂದು ಖೇದಕಥನ, ‘ಪುಟ್ಟ ನಾಗೀ’ ಇನ್ನೊಂದು ಸ್ಮೃತಿಗೀತೆ:
ಮಳೆಯು ನಾಡ ತೊಯ್ಯುತಿರೆ
ಮಿಂಚಿಗಿರುಳು ಬೆದರುತಿರೆ
ಗೂಡುಮುದ್ದಗೊಲ್ಲನೆಡೆಯೊಳೊಂದು ಹಣತೆ ಮಿನುಗಿತಿರೆ
ಮುದವದೊಂದು ಹೊಳೆವುದು
ಬಗೆಯ ಕಣ್ಣು ತೆರೆವುದು
ಎಂಬ ಮೊದಲ ಚರಣವಿರುವ ಗೋಕುಲಸ್ಮೃತಿ. ‘ಪುಟ್ಟನಾಗಿ’ಯೆಂಬುದು ನಮ್ಮ ಮಲೆನಾಡ ಕವಿ ಕೆ.ವಿ.ಪುಟ್ಟಪ್ಪನವರದ್ದು ಅಂತ ಗೊತ್ತಿತ್ತು. ಅದನ್ನು ಮುದ್ರಣದಲ್ಲಿಯೂ ಕಂಡಿದ್ದೆ. ಎರಡನೆಯದೂ-ಈ ಇಲ್ಲಿನ ಗುಡ್ಡ ಕಾಡು ನೆಲಮುಗಿಲು ಮಳೆಹೊಳೆ ಗುಡುಗು ಮಿಂಚು ಕಾಡುಪ್ರಾಣಿಗಳ ಆರ್ಭಟ…..ಈ ಅಬ್ಬರಗಳ ಅಲೆಯಲೆಗಳನ್ನು ಕ್ರಮೇಣ ಪೂರ್ತಾ ಹೀರಿ ಜೀರ್ಣಿಸಿಕೊಳ್ಳುವ ಘನ ಮೌನ ಇವುಗಳ ನಡುವೆಯೇ, ನಮ್ಮ ಕೊಟ್ಟಿಗೆಯಲ್ಲಿ ಕವಲು ಬಣ್ಣದ ಸಾಧು ಮುದಿದನವಿತ್ತಲ್ಲ ಅದರ ಹಾಗೆ, ಮನೆಯೆದುರು ನಿತ್ಯ ಹೂಬಿಡುತ್ತಿದ್ದ ದೊಡ್ಡ ಸಂಪಿಗೆ ಮರವಿತ್ತಲ್ಲ ಅದರ ಹಾಗೇ ಇಲ್ಲೇ ಹುಟ್ಟಿಕೊಂಡ ಹಾಡು ಅಂದುಕೊಂಡಿದ್ದೆ. ಮುಂದೆ ಹೈಸ್ಕೂಲಿನಲ್ಲಿ ಓದುವಾಗ, ಗುರುಗಳಾದ ಗೊರೂರು ನರಸಿಂಹಚಾರ್ಯರಿಂದ ಈ ನನ್ನ ಒಡನಾಡಿ ಹಾಡು ದೂರದ ಮೇಲುಕೋಟೆಯ ಪು.ತಿ.ನರಸಿಂಹಚಾರ್ ಎಂಬವರು ಬರೆದದ್ದು ಎಂದು ಗೊತ್ತಾಯಿತು. ಆಮೇಲೆ ಅದೇ ಕವಿ ಬರೆದ ‘ಗೋಕುಲ ನಿರ್ಗಮನ’ವೆಂಬ ಗೀತನಾಟಕವನ್ನು ನನ್ನ ಗುರುಗಳು ಓದಿ ಹೇಳಿದ್ದರು.
‘ಗೋಕುಲ ನಿರ್ಗಮನ’ವು ನನ್ನ ಒಡನಾಡಿ ಕಿರುನಾಡಿನ ಅನುಭವವನ್ನು ವ್ಯಾಪಕವಾಗಿ ನಾಟಕವಾಗಿ ಹೆಸರಿಸಿಕೊಟ್ಟಿತ್ತು. ಪುರಾಣಕ್ಕೆ ಬಣ್ಣದ ಚಿತ್ರ ರಚಿಸಿಕೊಡುತ್ತಿದ್ದ ನಮ್ಮ ಬಾಲ್ಯಕಾಲದ ಯಕ್ಷಗಾನ ಜಗತ್ತಿನಿಂದಾಗಿ ಈ ನಾಟಕ ಮನಸ್ಸಿನಲ್ಲಿ ಘನವಾಗಿ ಮೂಡಿಕೊಂಡಿತು. ಹೈಸ್ಕೂಲು ದಿನಗಳಾಗಿ ಸುಮಾರು ಹದಿನೈದು ವರ್ಷಕಾಲ, ಪ್ರತಿ ಮಳೆಗಾಲದ ಅಬ್ಬರದ ಮಧ್ಯೆ ಚಾತುರ್ಮಾಸದ ವ್ರತವೆನ್ನುವ ಥರದಲ್ಲಿ ನಾನು ‘ಗೋಕುಲ ನಿರ್ಗಮನ’ವನ್ನು ಪಾರಾಯಣ ಮಾಡಿಕೊಳ್ಳುತ್ತಿದ್ದೆ. ಮುಂದೆ ಅರುವತ್ತರ ದಶಕದಲ್ಲಿ ನವ್ಯಕಾವ್ಯದಲ್ಲಿ ನನ್ನ ಆಸಕ್ತಿ ತೊಡಗಿದ ಮೇಲೆ, ಬಲು ಕಡಿಮೆ ಓದುವ ನನ್ನ ಪ್ರವೃತ್ತಿಯಲ್ಲಿ, ನವೋದಯದ ಬರವಣಿಗೆಗಳನ್ನು ಮರಳಿ ಮರಳಿ ಓದಿಕೊಳ್ಳುವುದು ಕಡಿಮೆಯಾಯ್ತು. ಆಮೇಲೆ ‘ಗೋಕುಲ ನಿರ್ಗಮನ’ವನ್ನು ಓದಿದ್ದು ಕಡಿಮೆಯೇ.
ಈಚೆಗೊಮ್ಮೆ ಅದನ್ನೋದಿದ್ದು ಬಿರುಬಿಸಿಲಿನ ಮದ್ಯಾಹ್ನದಲ್ಲಿ . ಈ ಸಲದ ಓದು ಸದ್ಯದ ತಳಮಳದ ಹಿನ್ನೆಲೆಯಲ್ಲಿ ಹಿಂದಣ ಅನುಭವಗಳನ್ನೆಲ್ಲ ಒಗ್ಗೂಡಿಸಿಕೊಂಡು ಬೇರೆ ಬೇರೆ ಆಳಗಳಲ್ಲಿ, ನನ್ನನ್ನು ತಟ್ಟಿತು.
‘ಗೋಕುಲ ನಿರ್ಗಮನ’ದ ಇಡೀ ನಾಟಕವು ಆಧುನಿಕ ಕವಿಯೊಬ್ಬನಲ್ಲಿ ಆವಾಹಿತವಾಗುವ ‘ಸ್ಮೃತಿ’ಯಾಗಿ ರೂಪುಗೊಂಡಿದೆ. ಕವಿಯ ಸ್ವಂತದ ಹಾಡುಗಳೇ ನಾಟಕಕ್ಕೆ ನಾಂದಿ ಭರತ ವಾಕ್ಯಗಳಾಗಿವೆ.
ಕಥಾಪ್ರಸಂಗವು ಅದೇ ಭಾಗವತದ್ದು. ಗೋಕುಲವೆಂಬ ಗೊಲ್ಲರ ಪುಟ್ಟ ಸಮುದಾಯವೊಂದರಲ್ಲಿ ಸಾಹಸಿಗರಾದ ಬಲರಾಮಕೃಷ್ಣರು, ಅವರ ಜತೆಗೆ ಅವರ ಹಾಗೇ ಪ್ರಾಯಕ್ಕೆ ಬರುತ್ತಿರುವ ಗೋಪಾಲಕರು, ಗೋಪಿಕೆಯರು, ಊರ ಹಿರಿಯರು-ತಮ್ಮದೇ ಒಂದು ಜಗತ್ತಾಗಿ ಬದುಕುತ್ತಿದ್ದಾರೆ. ನಾಟಕ ನಡೆಯುವುದೆಲ್ಲಾ ಒಂದು ಸಂಜೆ ಮತ್ತು ಅದೇ ರಾತ್ರಿ. ಕೃಷ್ಣನು ಊರಾಚೆ ಬಯಲಲ್ಲಿ ನಿಂತು ಕೊಳಲೂದುತ್ತಾನೆ. ಹುಡುಗರು, ಹುಡುಗಿಯರು, ಹುಡುಗಿಯರಲ್ಲಿ ಮುಖ್ಯಳಾಗಿ ಕೃಷ್ಣನಿಂದ ಎಲ್ಲರಿಗಿಂತ ಹೆಚ್ಚು ಆಕರ್ಷಿತಳಾಗಿರುವ ರಾಧೆ, ಎಲ್ಲರೂ ಸೆಳೆತಗೊಂಡು ಆಕಡೆ ಧಾವಿಸುತ್ತಾರೆ. ಊರ ಹಿರಿಯರೂ ಕೊಳಲಿನಿಂದ ಆಕರ್ಷಿತವಾಗುವವರೇ. ಆದರೆ, ಹುಡುಗರ ಹುಡುಗಾಟ ಹುಚ್ಚಾಟಗಳು ಏನಾಗುತ್ತವೋ ಎಂದು ಅವರಿಗೆ ಆತಂಕ, ಕಿರಿಕಿರಿ.
ಆ ಸಂಜೆಯೇ ಮಧುರೆಯಿಂದ ರಾಜಾ ಕಂಸನ ಆಣತಿಯ ಪ್ರಕಾರ ಅಕ್ರೂರನು ಬಂದಿದ್ದಾನೆ. ಮರುದಿನ ಬೆಳಿಗ್ಗೆ ರಾಮಕೃಷ್ಣರನ್ನು ಬಿಲ್ಲಹಬ್ಬದ ವಿನೋದಕ್ಕೆಂದು ಮಧುರೆಗೆ ಕರೆದೊಯ್ಯಲಿಕ್ಕಾಗಿ. ಅಕ್ರೂರನ ಆಹ್ವಾನ, ಬಲರಾಮನ ಹಾರೈಕೆ, ಜತೆ ಹುಡುಗರ ಹಂಬಲಗಳಿಗೆ ಬಾಗಿದ ಕೃಷ್ಣನು ಮರುದಿನದ ನಿಷ್ಕ್ರಮಣಕ್ಕೆ ತಯಾರಾಗುತ್ತಾನೆ. ಕೊಳಲನ್ನು ನೆಲಕ್ಕೆ ಬಿಸುಡುತ್ತಾನೆ. ಇದನ್ನೆಲ್ಲ ಕಂಡು ಖಿನ್ನರಾದ ರಧೆಗೋಪಿಕೆಯರು, ನಿಷ್ಕ್ರಮಣಸಿದ್ಧನಾದ ಕೃಷ್ಣನಿಗೆ ಜಯ ಹಾರೈಸುತ್ತಾರೆ. ನೆಲಕ್ಕೆ ಬಿದ್ದ ಅವನ ಕೊಳಲನ್ನು ಎತ್ತಿ ಮರದ ಬುಡವೊಂದರಲ್ಲಿ ಗರುಕೆ ಚಿಗುರುವ ಎಡೆಯಲ್ಲಿ ಜೋಪಾನವಾಗಿ ಮುಚ್ಚಿಡುತ್ತಾರೆ.
ಪುತಿನ ಅವರು ಪ್ರಕಾಶಕ ಚಿದಂಬರಮ್ ಅವರಿಗೆ ಬರೆದ ಆತ್ಮೀಯ ಪತ್ರವೊಂದು ಮುನ್ನುಡಿಯಾಗಿ ಪ್ರಕಟಗೊಂಡಿದೆ. ‘ಮುಟ್ಟಲಾರೆ ಭಯ’ ಎಂದು ಎಳೆ ಹುಡುಗಿಯರು ಬೆದರುವ ಕುತೂಹಲಿಸುವ ಎಳೆ ಚಿಟ್ಟೆಗೆ ನಲುಗುವ ನವುರಾದ ರೆಕ್ಕೆಯಿರುತ್ತದಲ್ಲ, ಅಂಥದೇ ಗದ್ಯದಲ್ಲಿದೆ ಈ ಮುನ್ನುಡಿ. ಅದರಲ್ಲಿ ಅವರು ಹೇಳುತ್ತಾರೆ : ‘ಲೋಕಕೆ ಬೆಳೆವನ ಗೋಪೀಜನಮನ ಒಳಕೊಳ್ಳಲುಬಹುದೇ-ಎಂದು ಈ ರೂಪಕದಲ್ಲಿ ಗೋಪಿಯರು ಹೇಳಿಕೊಳ್ಳುವಂತೆ ಆ ರಾತ್ರಿ ನಂದಕುಮಾರ ವಾಸುದೇವನಾಗುವುದಕ್ಕಾಗಿ ಅಕ್ರೂರಪ್ರೇರಣೆಯಿಂದ ಗೋಕುಲ ಬಿಟ್ಟು ಮಧುರೆಗೆ ಹೊರಡಲು ಮನಸ್ಸು ಮಾಡುತ್ತಾನೆ. ಬೃಂದಾವನವನ್ನುಳಿದ ಮೇಲೆ ಕೃಷ್ಣನ ಕೊಳಲು ನಮಗೆ ತಿರುಗಿ ಕೇಳಿಬರುವುದಿಲ್ಲ, ಆತನ ಪಾಂಚಜನ್ಯಧ್ವನಿಯೂ ಚಕ್ರಸ್ವಿಷ್ಕಾರವೂ ನಾದ ತುಂಬ ಮೊಳಗಾಡುತ್ತಾ ಅಲೆಯುತ್ತವೆ. ಆತ ಇನ್ನೂ ಮುಗ್ಧಭಾವದಲ್ಲಿರುವಾಗಲೇ ಕೊಳಲು ಅವನ ಕೈಯಿಂದ ಜಾರಿ ಹಳ್ಳಿಯ ಹೊನಲಲ್ಲಿ ಬಿದ್ದುಹೋಯಿತು-ನನ್ನಂಥ ಮುಗ್ಧರ ಮನಸ್ಸಿನಲ್ಲಿ ಆಗಾಗ ಮೊಳಗಿಡುವುದಕ್ಕೆ’
ಬೇಡವೋ ಅಂತ ಅನುಮಾನಿಸಿಕೊಂಡಿದ್ದ ಒಂದು ಸಂಗತಿಯನ್ನು ಇಲ್ಲಿ ಮಧ್ಯೆ ಹೇಳಿಬಿಡುತ್ತೇನೆ.
ಐವತ್ತರ ದಶಕದ ಪ್ರಾರಂಭದಲ್ಲಿ ನಾನು ಮೈಸೂರಿನಲ್ಲಿ ಓದುತ್ತಿದ್ದಾಗ ಅಲ್ಲಿ ಓದಲಿಕ್ಕಿದ್ದ ಸಾಗರದ ಕಡೆಯವರೆಂದರೆ ಮೂರೋ ನಾಲ್ಕೋ ಅಷ್ಟೇ. ಬೆಂಗಳೂರಿನಲ್ಲಿ ನಮ್ಮ ಕಡೆಯವರು ಆಗ ಇಪ್ಪತ್ತು ಇಪ್ಪತ್ತೈದು ಇದ್ದಿರಬಹುದು. ಈ ನಲವತ್ತೈವತ್ತು ವರ್ಷಗಳಲ್ಲಿ ತೀರಾ ಬದಲಾವಣೆಗಳಾಗಿವೆ. ಈಗ ಬೆಂಗಳುರಿನಲ್ಲಿ ನಮ್ಮ ಕಡೆಯವರು ಹಲವು ಸಾವಿರ ಮಂದಿ ಇರಬಹುದು. ನಮ್ಮ ಕಡೆಯ ಹೆಣ್ಣು ಮಕ್ಕಳೇ ಹತ್ತಿರ ಹತ್ತಿರ ಸಾವಿರವಿದ್ದಾರು.
ನನ್ನ ಮಿತ್ರರೊಬ್ಬರು ಬೆಂಗಳೂರಿನಲ್ಲಿ ಒಂದು ಉದ್ಯಮ ಸ್ಥಾಪಿಸಿದ್ದಾರೆ. ಅದೊಂದರಲ್ಲೇ ನಮ್ಮ ಕಡೆಯ ಹಲವು ನೂರು ಮಂದಿ ಹೆಣ್ಣುಮಕ್ಕಳಿಗೆ ಕೆಲಸಕೊಟ್ಟಿದ್ದೇನೆ ಎಂದು ಅವರು ಹೇಳಿದ್ದರು. ಅದೊಂದು ದಿನ ಸಂಜೆ, ಅವರ ಕಿರು ಕಾರ್ಖಾನೆಯನ್ನು ನೋಡಲು ನಾನೂ ಹೋಗಿದ್ದೆ. ಆಗ ಸುಮಾರು ಸಂಜೆ ಆರು ಗಂಟೆ. ಇಡಿಕಿರಿದ ನಗರ ಪ್ರದೇಶದಲ್ಲಿ, ಒಂದು ರಸ್ತೆಯ ಮರಿತಿರುವಿನಲ್ಲಿ, ಇನ್ನೆರಡು ಓಣಿಗಳು ಬಂದು ರಸ್ತೆಯನ್ನು ಕೂಡಿಕೊಳ್ಳುವ ಆಯಕಟ್ಟಿನಲ್ಲಿ ಅವರ ಕಾರ್ಯಾಗಾರ. ಎಲ್ಲೋ ಮುಳುಗುತ್ತಿರುವ ಸೂರ್ಯನ ಅಸ್ಪಷ್ಟ ಕೆಂಪು ಛಾಯೆ ಕತ್ತಲೊಳಗೆ ಕರಗುತ್ತಿದ್ದಿರಬೇಕು. ಬೀದಿದೀಪಗಳು ಗೊತ್ತಗದೆ ಹೊತ್ತಿಕೊಂಡವು. ಸರಿಯಾಗಿ ಅದೇ ಹೊತ್ತಿಗೆ ಕೆಲಸದ ಅವಧಿ ಮುಗಿದು ಐದಾರು ನೂರು ಮಂದಿ ಹೆಣ್ಣುಮಕ್ಕಳು ಎದುರು ಬಾಗಿಲಿನಿಂದ ಹೊರಬರತೊಡಗಿದರು. ನೋಡುತ್ತಾ ನಿಂತಿದ್ದ ನನಗೆ…..ಹೇಗೆ ಹೇಳಲಿ, ಅಷ್ಟು ಅರ್ಧಬೆಂದ ಹೆಣಗಳು ಈಗಷ್ಟೇ ಚಿತೆಯಿಂದ ಎದ್ದುಬರುತ್ತಿದ್ದ ಹಾಗೆ ಕಂಡವು.
ಇದೇ ಹೆಣ್ಣು ಮಕ್ಕಳನ್ನು ನಾನು ನಮ್ಮೂರುಗಳಲ್ಲಿ ಐವತ್ತು ವರ್ಷದಿಂದ ಕಂಡಿದ್ದೇನೆ. ದೊಡ್ಡದೊಂದು ಮನೆತನದಲ್ಲಿ ಮದುವೆಯೆಂದರೆ ಇಂಥ ಅನೇಕ ಮಂದಿ ಹುಡುಗಿಯರು ಕೂಡಿಕೊಳ್ಳುತ್ತಾರೆ. ನಾಲ್ಕು ದಿನ ಮೊದಲು ಬಂದು ಸಂಭ್ರಮಗೊಂಡು ಚುರುಕು ಚಲಿಸುತ್ತಾ ಕೆಲಸ ಮಾಡುತ್ತಾರೆ. ಮದುವೆಯ ದಿನ ಬೆಳಗಿನಜಾವ ಎದ್ದು ತಲೆ ಮೈಮುಖ ಸಿಂಗರಿಸಿಕೊಂಡು ಚಿಗರೆಗಳ ಹಾಗೆ ಉಲ್ಲಾಸದಿಂದ ಕುಣಿದು ಕೆಲಸಮಾಡುತ್ತಾರೆ. ಮೂರೋ ನಾಲ್ಕೋ ಪಂಕ್ತಿ ಊಟ ಬಡಿಸುತ್ತಾರೆ, ನೆಲ ಬಳಿದು ಸ್ವಚ್ಛಮಾಡುತ್ತಾರೆ. ಆ ನಡುವಿನಲ್ಲಿಯೇ ಆಗಾಗ ತಮ್ಮ ಸಿಂಗಾರವನ್ನು ಸಾವರಿಸಿ ಸರಿಗೊಳಿಸಿಕೊಳ್ಳುತ್ತಾರೆ. ಎಲ್ಲ ಮುಗಿದು ಸಂಜೆ ನಾಲ್ಕಕ್ಕೋ ಐದಕ್ಕೋ ಕಡೆಯಲ್ಲಿ ತಮ್ಮ ಊಟ ಮುಗಿಸಿ ಎಲೆಯಡಿಕೆ ಹಾಕಿಕೊಂಡು ಸಂಜೆಯ ಸೂರ್ಯನ ಎದುರು ತಮ್ಮ ತುಟಿ ಕೆಂಪನ್ನು ಮಿರುಗಿಸುತ್ತಾ ಉನ್ಮಕ್ತವಾಗಿ ನಗುತ್ತಿರುತ್ತಾರೆ, ಹರಟುತ್ತಿರುತ್ತಾರೆ.
ಭಾವುಕತೆಯಲ್ಲಿ ಅದ್ದುವುದು ನನ್ನ ಉದ್ದೇಶವಲ್ಲ. ಈ ನಾಲ್ಕೈದು ದಶಕಗಳಲ್ಲಿನ್ನಮ್ಮ ಜನಸಂಖ್ಯೆ ಮೂವತ್ತರಿಂದ ತೊಂಬತ್ತಕ್ಕೆ ಮೂರು ಪಟ್ಟು ಬೆಳೆದು ಸೋಟಿಸಿದೆ ಅನ್ನುವುದುನ್ತಿಳಿದ ಸಂಗತಿಯೇ. ಜನರ ಸಂಖ್ಯೆ ಬೆಳೆಯಿತೆಂದು ಊರು ನೆಲ ಮನೆ ಬೆಳೆಯುವುದಿಲ್ಲವಲ್ಲ? ಉದ್ಯೋಗದ ನೆಲೆ ಹುಡುಕಿ ವಲಸೆ ಹೋಗುವುದು ಕೆಲಮಟ್ಟಿಗೆ ಅನಿವಾರ್ಯವಾಗಿದ್ದೀತು. ಮತ್ತು, ಹೊಸ ಪಾಶ್ಚಾತ್ಯ ನಾಗರೀಕತೆಯು ಲಕಲಕನೆ ಹೊಳೆದು ಆಕರ್ಷಿಸುತ್ತಿರಲು ತರುಣರಿಗೆ ತಮ್ಮ ಸ್ಥಳೀಯ ಕಿರು ಸಮುದಾಯಯಗಳ ಜಡಕಟ್ಟಳೆಗಳು ಬಂಧನವೆನಿಸಿ ಅದರಿಂದ ಪಾರಾಗಿಕೊಳ್ಳುವ ಬಯಕೆ ಹುಟ್ಟಿ ವಲಸೆಯು ಬೇಕೆನ್ನಿಸಿರಬಹುದು. ಎಲ್ಲಕ್ಕಿಂತ ಮುಖ್ಯವೆಂದರೆ, ದಲಿತಜಾತಿಗಳವರಿಗೂ, ಸ್ತ್ರೀಯರಿಗೂ ಈ ಹಳೆಯ ವಿಷಮ ನಿಶ್ಚಲತೆಯನ್ನು ದಾಟಿಕೊಳ್ಳಬೇಕಾದ್ದು ನಿಜವಾಗಿಯೂ ಅತ್ಯಗತ್ಯವಾಗಿತ್ತು. ಹಳೆಯ ಸಮಾಜಗಳ ಅಮಾನವೀಯ ಅನ್ಯಾಗಳಿಂದಾಗಿ ಆ ಬಹುಸಂಖ್ಯರು ಯಾವುದರಿಂದ ವಂಚಿತರಾಗಿದ್ದರೋ ಅದನ್ನು ಅಥವಾ ಅದಕ್ಕೆ ಬದಲು ಇನ್ನೊಂದನ್ನು ಅವರು ಪಡೆದುಕೊಳ್ಳಬೇಕಾದ ತುರ್ತು ಒದಗಿತ್ತು, ಅದಕ್ಕೆ ನಗರ ವಲಸೆಯೇ ಮಾರ್ಗವಾಗಿತ್ತು. (ಡಾ. ಎಂ.ಎನ್. ಶ್ರೀನಿವಾಸರು ಹೇಳುವ ಆಧುನೀಕರಣ-ಸಂಸ್ಕೃತೀಕರಣದ ಜೋಡಿಪ್ರಕ್ರಿಯೆಯು ಹೀಗೆ ವಲಸೆಗಳಿಂದಲೇ ಪ್ರಾಯಃ ಮೊದಲಾಗಿ ವ್ಯಾಪಕಗೊಂಡಿತು.)
ನಮ್ಮ ಬಾಲ್ಯದಲ್ಲಿ, ಆಗಿನ ಸಮಾಜದ ಬಗ್ಗೆ ನಾವು ತೀವ್ರ ಅತೃಪ್ತಿಗೊಂಡವರೇ, ಕನಲಿದವರೇ ‘ಮಳೆಯು ನಾಡ ತೊಯ್ಯುತಿರೆ’ ಹಾಡಿನ ಜತೆ ಆಗ ನನ್ನನ್ನು ಆಕ್ರಮಿಸಿದ ಇನ್ನೊಂದು, ‘ಪುಟ್ಟನಾಗಿ’ ಕವಿತೆಯು ಮಲೆನಾಡಿನ ಹಸಿರುಗತ್ತಲು ಕಪ್ಪುಗತ್ತಲ ನಡುವೆ ಹೆಪ್ಪುಗಟ್ಟಿಕೊಂಡ ಸ್ವಾರ್ಥ ಕ್ರೌರ್ಯ ಹಗೆ ಹಿಂಸೆಗಳನ್ನು ಕಣ್ಣಿಗೆ ಮುಟ್ಟಿಸಿ ಕಾಣಿಸಿತ್ತು.
ಗೋಕುಲದ ಆ ಪುಟ್ಟ ಸಮುದಾಯವನ್ನೇ ಗಮನಿಸಿದರೆ, ಅಲ್ಲಿ ಜಾತಿ-ವರ್ಗ ವೈಷಮ್ಯಗಳು ಅಷ್ಟಾಗಿ ಕಾಡುತ್ತಿತ್ತೆಂದು ತೋರುವುದಿಲ್ಲ. ಹಾಗಿದ್ದರೂ ಆ ಗೋಪಬಾಲಕರಿಗೆ ನಿಶ್ಚಲವೆಂಬಂತಿದ್ದ ಅದೇ ಹಳೇ ಊರು, ಅವೇ ಅಮೋದ ಪ್ರಮೋದಗಳು, ಅವೇ ಆಟನೋಟ ಗೆಯ್ಮೆಗಳು ಸಾಕಷ್ಟು ಬೇಸರ ಹುಟ್ಟಿಸಿರಬೇಕು.
ಬನ್ನಿರೋ ನಾವೆಲ್ಲ ಮಧುರೆಗೆ ಬಿಲ್ಲಹಬ್ಬಕೆ ಹೋಗುವ
ಹಳುವ ಹಳ್ಳಿಯ ಬಿಡುತ ಸೊಗಸಿನ ಹೊಳಲ ಜಾತ್ರೆಗೆ ಹೋಗುವ
ಹೈ ಹಚಚ್ಚಾ ಎಂದು ತುರುಗಳ ಹಣ್ಣು ಮುದುಕರೆ ಕಾಯಲಿ
ಹಟ್ಟಿಯೊಳು ನಿಟ್ಟುಸಿರನಿಡುತ ಹೆಂಗಳುಳಿಯಲಿ ಊರಲಿ.
ಎಂದು ಮಧುರೆಗೆ ಹೋಗಲು ಉತ್ಸುಕರಾಗುತ್ತಾರೆ ಅವರು. “ಬಾಬಾ ಮಧುರೆಗೆ ಬಾ”ಎಂಬ ಅಕ್ರೂರನ ಕರೆಗೆ ದನಿಗೂಡಿಸಿ ಕೃಷ್ಣನನ್ನು ನಿಷ್ಕ್ರಮಣಕ್ಕೆ ತವಕಿಸುತ್ತಾರೆ.
ಏಸ್ಯಾದ ಬಗ್ಗೆ ಗಮನಿಸುತ್ತಾ, ಅನಂತರ ಇಂಡಿಯಾದ ವಿವರಗಳನ್ನು ಕಷ್ಟಪಟ್ಟು ಅಭ್ಯಸಿಸಿ ಕಾರ್ಲ್‌ಮಾರ್ಕ್ಸ್ ತನ್ನ ಹೇಳಿಕೆಯನ್ನು ನೀಡಿದ್ದಾನೆ: ಬರೆದಿಟ್ಟ ಚಿತ್ರದಂತೆ ಚಂದಕಾಣುವ ಈ ಗ್ರಾಮ ಸಮುದಾಯಗಳು ಮನುಷ್ಯರ ಮನಸ್ಸನ್ನು ಸಾಧ್ಯವಾದಷ್ಟೂ ಅತಿಸಂಕುಚಿತವಾಗಿ ಬಿಗಿವೃತ್ತದಲ್ಲಿ ಕಟ್ಟಿಕೆಡಹಿದಂಥವು; ಮನುಷ್ಯ ಚೇತನವು ಸಾಧ್ಯವುಳ್ಳ ಸಮಸ್ತ ವೈಭವಗಳಿಂದಲೂ ಇತಿಹಾಸ ಶಕ್ತಿಗಳಿಂದಲೂ ವಂಚಿತವಾಗುವ ಹಾಗೆ ಮಾಡುವಂಥವು…..ಹಾಗೆ ಆತ ಕನಿಕರಗೊಂಡಿದ್ದಾನೆ. ಅದಷ್ಟೇ ಉಜ್ವಲ ಬೆಳಗುತ್ತಿದ್ದ ಆಗಿನ ಐರೋಪ್ಯ ನಾಗರಿಕತೆಯ ಎತ್ತರದ ವೇದಿಕೆಯ ಮೇಲೆ ನಿಂತು ಅನೇಕರು ಹೀಗೆ ಕನಿಕರಿಸಿದ್ದಾರೆ. ತಮ್ಮ ಬೆಳಕೇ ತಮ್ಮ ಕಣ್ಣುಗಳನ್ನು ಕೋರೈಸುತ್ತಿರಲು ಅವರಿಗೆ ಅನ್ಯರನ್ನು ಭಿನ್ನರನ್ನು ಸ್ವಚ್ಛವಾಗಿ ಕಂಡು ಅರ್ಥಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ, ಇರಲಿ. ಅವರ ಮಾತುಗಳನ್ನು ಬಿಡೋಣ. ಆದರೆ, ಆ ಕಾಲಕ್ಕೆ ನಮ್ಮಲ್ಲಿಯೇ ಇಂಥ ಅನಿಸಿಕೆಗಳು ಹುಟ್ಟಿ ಚಲಾವಣೆಗೆ ಬಂದವು ಅನ್ನುವುದನ್ನು ಮರೆಯಬಾರದು.
ನಮ್ಮ ಊರಿನ ಉತ್ಸಾಹೀ ಹೆಣ್ಣುಮಕ್ಕಳ ಬಗ್ಗೆ ಹೇಳಿದೆನಲ್ಲ, ಆ ಅವರೇ, ಇಪ್ಪತ್ತರೊಳಗೆ ಮದುವೆಯಾಗಿ ಮಕ್ಕಳಾಗಿ ಬಲುಬೇಗ ಸುತ್ತು ತಿರುಗುವ ಗಾಣದ ಎತ್ತಾಗಿ ಆಮೇಲೆ ತುಟಿಕಚ್ಚಿ ತಮ್ಮ ಜೀವನವನ್ನೇ ತಾವು ನುಂಗಿಕೊಂಡು ಹಿರಿಯರಿಂದ ಬಾಯಿಪಾಠ ಮಾಡಿದ ವೇದಂತದ ನುಡಿಗಳಲ್ಲಿ ಹೆಗ್ಗಡಿಕೆಯನ್ನು ಬಡಬಡಿಸುತ್ತಾ ಮತ್ತಿಕುಂಟೆಯ ಹಾಗೆ ಉದ್ದ ಅರೆಬದುಕಿ ಉಸಿರಾಡಿಕೊಂಡಿರುವುದನ್ನೂ ಬೇಕಷ್ಟು ನೋಡಿದ್ದೇನೆ.
ಬೆಂಗಳೂರಿನಲ್ಲಿ ಉದ್ಯಮವನ್ನು ಸ್ಥಾಪಿಸಿದ ನನ್ನ ಮಿತ್ರರ ಪ್ರಾಮಾಣಿಕತೆಯನ್ನಾಗಲೀ ಸದಾಶಯವನ್ನಾಗಲೀ ನಾನು ಪ್ರಶ್ನಿಸುವುದಿಲ್ಲ. ಆದರೆ ಈ ಬೆಳವಣಿಗೆಗೂ ಇರುವ ಪ್ರತಿಮುಖವನ್ನು ಭಾವಿಸಿ ಕಳವಳಗೊಳ್ಳುತ್ತೇನೆ, ಕಲಕಿಹೋಗುತ್ತೇನೆ. ನಗರ ಸೇರಿರುವ ನಮ್ಮ ಹಲವುನೂರು ಮಂದಿ ಹೆಣ್ಣುಮಕ್ಕಳು ಹಳ್ಳಿಯಲ್ಲುಳಿದಿರುವ ಅವರಂಥವರಿಗಿಂತ ಕೊಂಚವೇ ಹೆಚ್ಚು, ಅಥವಾ ಅದೂ ಬೇಡ, ಅವರಷ್ಟೇ ಆದರೂ ಉತ್ಸಾಹಿಗಳಾಗಿ ಮಾನವಿಟ್ಟುಕೊಂಡು ಬದುಕಿಯಾರೇ? ಬೆಳಿಗ್ಗೆ ಆರಕ್ಕೆ ಎದ್ದು ಗಡಿಬಿಡಿಯಲ್ಲಿ ಹೇಗೋ ತಯಾರಾಗಿ ಪ್ಯಾಕ್ಟರಿಗೆ ಓಡಿದರೆ, ಸಂಜೆ ಗೂಡಿಗೆ ಮರಳಿಬಂದು ಉಸಾಬರಿಗಳನ್ನು ಮುಗಿಸಿ ಮಲಗುವುದು ರಾತ್ರಿ ಹತ್ತಕ್ಕೆ. ಬಿಡುವಿಲ್ಲದಷ್ಟು ಏಕಪ್ರಕಾರ ದುಡಿಮೆ. ಈ ದುಡಿಮೆಯಿಂದ ತಾವು ತಯಾರಿಸುವ ಅಲಂಕಾರವಸ್ತುವೋ ಮತ್ತೊಂದೋ ಎಲ್ಲಿರುವ ಯಾರಿಗೆ ಮುದಕೊಟ್ಟೀತು ಎಂಬ ಕಲ್ಪನೆಗೂ ತೃಪ್ತಿಗೂ ಅವಕಾಶವಿಲ್ಲದೆ ಯಾಂತ್ರಿಕ ದುಡಿಮೆ. ಸಂಬಳದ ಹಣಕ್ಕೆ ಒತ್ತೆಯಾದ ಹೆಣದುಡಿಮೆ. ಮೇಲಾಗಿ, ಗಳಿಸುವ ಹಣವು ನಗರದ ದುಬಾರಿಯಲ್ಲಿ ಮಾನವಂತರಾಗಿ ಬದುಕಲಿಕ್ಕೂ ಸಾಲದಶ್ಶ್ಟು. ಯಾವುದೋ ಛಲದಲ್ಲಿ ಊರುಬಿಟ್ಟು ಮತ್ತೆ ಊರಿಗೆ ಮರಳುವುದು ಆಗದ ಮಾತು. ಮಾತ್ರವಲ್ಲ, ಊರಿನ ಬಂಧು ಮಿತ್ರರಿಗೆ ನೆರೆಯವರಿಗೆ ತಾನು ನಗರದಲ್ಲಿ ಚೆನ್ನಾಗಿಯೇ ಬದುಕುತ್ತಿದ್ದೇನೆಂದು ಸಾಬೀತುಮಾಡಿಕೊಳ್ಳಬೇಕು ಕೂಡ.
ಹಳ್ಳಿಗಳಲ್ಲಿ ಇವತ್ತಿಗೂ ವ್ರತ ನೇಮ ಮದುವೆ ಹಬ್ಬ ಹಾಡು ಹಸೆ ಕೈಗೆಲಸ ಮುಂತಾದ ಕಟ್ಟಳೆಗಳು ಅವಶೇಷವಾಗಿಯಾದರೂ ಉಳಿದುಕೊಂಡಿವೆ. ಹಣವನ್ನು ಬಿಟ್ಟು ಇನ್ನಿರುವ ಬದುಕಿನ ಅಸಂಖ್ಯಾತ ಸಾಧ್ಯತೆಗಳನ್ನು ಇವು ಕೆಲಮಟ್ಟಿಗಾದರೂ ಕಾಣಿಸಬಹುದು. ನಗರ ಸೇರಿಕೊಂಡವರಿಗೆ ಅವೆಲ್ಲವೂ ನಷ್ಟವಾಗಿ ಹೋಗಿರುತ್ತವೆ. ಅಂಥವರಿಗೆ ಹುಚ್ಚು ಹಿಡಿಯದೆ ಉಳಿಯಲಿಕ್ಕೆ ಈಗ ದೊರಕುವ ಒಂದೇ ಸಾಧನವೆಂದರೆ ಪ್ರಾಯಃ ಟಿ.ವಿ.ಯಲ್ಲಿ ಕಡಕ್ಕೆ ಹಂಚುವ ಸುಳ್ಳು ಕನಸುಗಳು. ಅವು ಕೂಡ ಅದೆಷ್ಟು ದುಬಾರಿ.
ನಗರ ಬದುಕಿನ ದರೆಯಂಚಿನಲ್ಲಿ ಆ ಬಿಗಿತಸೆಡೆತಗಳಲ್ಲಿಯೂ ಹೇಗೋ ತೋಲ ಹಿಡಿದು ಬದುಕುತ್ತಿರುವ ಈ ನಮ್ಮ ಹೆಣ್ಣುಮಕ್ಕಳು ಯಾವ ಕ್ಷಣಕ್ಕೆ ಜೋಲಿ ತಪ್ಪಿದರೂ ತಪ್ಪಬಹುದು. ಅಲ್ಲಿಂದ ಕೆಡೆದು ಬೀಳುವುದು ಎಲ್ಲಿಗೆ? ನೆನೆದರೆ ನಡುಕ ಬರುತ್ತದೆ.
ಇವತ್ತು ಇಂಡಿಯಾದ ಎಲ್ಲ ಸಮಾಜಗಳೂ ಎದುರಿಸುತ್ತಿರುವ ಕಠಿನವಾದ ದಿವ್ಯ ಇದು. ಇದರಲ್ಲಿ ನಾವು ಪರಾಜಿತರಾಗುತ್ತೇವೆಯೇ? ನಾಶವಾಗಿ ಹೋಗುತ್ತೇವೆಯೇ? ಇಲ್ಲ ಅನ್ನುವುದಾದರೆ ಅದಾವ ಉಪಾಯದಿಂದ ಇದನ್ನು ಉತ್ತರಿಸಿ ಪರಿಹರಿಸಿಕೊಳ್ಳುತ್ತೇವೆ?
ಮಾರ್ಕ್ಸ್‌ನದೇ ಇನ್ನೊಂದು ಹೇಳಿಕೆಯು ನೆನಪಿಗೆ ಬರುತ್ತದೆ. ‘ಇಂಡಿಯಾದ ಸಮಾಜವು ಸಹಸ್ರಾರು ವರ್ಷ ಜಡವಾಗಿ ಬದುಕಿದ್ದ ಕಾರಣ ಅದಕ್ಕೆ ಚರಿತ್ರೆಯೆಂಬುದೇ ರೂಪುಗೊಳ್ಳಲಿಲ್ಲ. ಅಥವಾ ಕನಿಷ್ಠ, ಇಂಡಿಯಾಕ್ಕೆ ದಾಖಲಾದ ಚರಿತ್ರೆ ಇಲ್ಲವೇ ಇಲ್ಲ ಅಂತಲಾದರೂ ನಿಸ್ಸಂದೇಹವಾಗಿ ಹೇಳಬಹುದು’ ಅನ್ನುತ್ತಾನೆ ಮಾರ್ಕ್ಸ್, ಅದೇ ಪಾಪ ಅಂದುಕೊಳ್ಳುವ ಮರುಕದ ಧಾಟಿಯಲ್ಲಿ. ಮಾರ್ಕ್ಸ್ ಮಾತ್ರವಲ್ಲ, ಕಳೆದ ಇನ್ನೂರು ಮುನ್ನೂರು ವರ್ಷಗಳ ಪಾಶ್ಚಾತ್ಯ ಆಧುನಿಕ ನಾಗರಿಕತೆಯ ಅವಧಿಯಲ್ಲಿ ಬಂದ ಚಿಂತಕರೆಲ್ಲರೂ ಪಾಪ, ಚರಿತ್ರೆಯನ್ನು ಅಷ್ಟು ಗಾಢವಾಗಿ ನಂಬಿಕೊಂಡುಬಿಟ್ಟಿದ್ದರು. ಒಂದು ಜನಾಂಗದ ಭೂತಕಾಲದ ಬೇರುಗಳೆಲ್ಲವೂ ಚರಿತ್ರೆಯಲ್ಲಿ ಸಂಚಯನಗೊಂಡು ಬರುತ್ತದೆಂದು ಅವರು ದೃಢವಾಗಿ ವಿಶ್ವಾಸವಿಟ್ಟುಕೊಂಡಿದ್ದರು. ರೆನೆಸಾನ್ಸ್‌ಗೆ ಹಿಂದಿನ ಪಾಶ್ಚಾತ್ಯ ಸಮಾಜಗಳಲ್ಲಿ ಬಹುಶಃ ಇಂಥ ಗಾಢನಂಬಿಕೆ ಇದ್ದಿರಲಿಲ್ಲವೇನೋ. ಇಂಡಿಯಾಮಾತ್ರ ಯಾವತ್ತೂ ಚರಿತ್ರೆಯು ಅಷ್ಟು ಮುಖ್ಯವಾದದ್ದೆಂದು ಗಣಿಸಿರಲಿಲ್ಲ.
ಜೀವವಿರುವ ನಾವು ಮೃತವಾದ್ದನ್ನು ಪರಿಶೀಲಿಸಿ ಕಾಣುತ್ತಿದ್ದೇವೆ ಅನ್ನುವುದೇ ಚರಿತ್ರೆಯು ಕೊಡುವ ಪ್ರಧಾನವಾದ ಅನುಭವ. ಚರಿತ್ರೆಯು ಇಸವಿಗಳನ್ನೂ ಗುಡಿಸಿ ತರುತ್ತದೆ. ಸತ್ತದ್ದಕ್ಕೆಲ್ಲ ಒಳಗೆ ಹುಲ್ಲು ತುಂಬಿಸಿ ಎಚ್ಚರದಿಂದ ಕರಾರುವಕ್ಕಾಗಿ ಆಕಾರಗೊಳಿಸಿ ಕಣ್ಮುಂದೆ ನಿಲ್ಲಿಸುತ್ತದೆ. ಅದೇನಿದ್ದರೂ ನಮ್ಮ ದಿನ ನಿತ್ಯದ ವಾರ್ತಾಪತ್ರಿಕೆಗಳ ಹಾಗೆ. ಪತ್ರಿಕೆಗಳು ನಿತ್ಯದ ವಿವರಗಳನ್ನು ಯಥೇಚ್ಛ ಕೊಡುತ್ತವೆ. ನಮ್ಮ ಓಣಿಯಲ್ಲೇ ನಡೆದದ್ದನ್ನು ಮರುದಿನ ಆಕರ್ಷಕವಾದ ರಂಜಕವಾದ ಕಥೆಯಾಗಿ ನೆಯ್ದು ನಮ್ಮ ಮನೆ ಬಾಗಿಲಿಗೆ ತಂದು ಕೊಡುತ್ತವೆ. ನಮ್ಮದೇ ಘಟನೆ ನಮ್ಮಿಂದ ದೂರವಾದ ಕಥೆಯಾಗಿ ಮಾರ್ಪಟ್ಟಿರುತ್ತದೆ. ಕಲಕಬೇಕಾದ ಸಂಗತಿ ನಮ್ಮನ್ನು ರಂಜಿಸುವ ಸರಕಾಗುತ್ತದೆ. ಚರಿತ್ರೆಯೂ ವಾರ್ತಾಪತ್ರಿಕೆಯ ಹಾಗೆಯೇ ನಮ್ಮನ್ನು ಭೂತಕಾಲದಿಂದ ಬಿಡಿಸಿಡುತ್ತದೆ, ಬೇರೆಯಾಗಿಸುತ್ತದೆ, ದೂರವಾಗಿಸುತ್ತದೆ. ಚರಿತ್ರೆಯು ನಮ್ಮ ಆಹಾರವಾಗಿ ಒಳಗಿಳಿದರು ರಕ್ತಗತವಾಗುವುದಿಲ್ಲ, ವಿಹಾರ ಸ್ಥಳವಾಗಿ ಹಾಸಿಕೊಳ್ಳುತ್ತದೆ.
ಪಾಶ್ಚಾತ್ಯ ಶಿಕ್ಷಣ ಪದ್ಧತಿಯ ಪ್ರಭಾವದಿಂದ ನಮ್ಮಲ್ಲಿ ಹೊಸದಾಗಿ ರೂಪುಗೊಂದ ಚರಿತ್ರೆಯು ಬಹುಶಃ ಮೂರು ವರ್ಗದ ಮುದ್ರೆಗಳನ್ನು ಸೃಷ್ಟಿಸಿತು. ಒಂದು-ಬ್ರಹ್ಮಸಮಾಜ ಕೇಶವ ಚಂದ್ರಸೇನ ಮುಂತಾದಲ್ಲಿ ಹುಟ್ಟಿ ಅಂತಿಮವಾಗಿ ನೀರದ ಚೌಧರಿಯಂಥವರಲ್ಲಿ ಫಲಗೊಂಡ ಭಾರತದ್ವೇಷ. ಎರಡು-ಪ್ರಾಯಃ, ಮಹಾರಾಷ್ಟ್ರದಲ್ಲಿ ಹುಟ್ಟಿ ಆಮೇಲೆ ಸನಾತನವಾದಿ ಹಿಂದು ಸಂಘಟನೆಗಳಲ್ಲಿ ಫಲಗೊಂಡ ಮತಾಂಧತೆ, ರಾಷ್ಟ್ರಾಂಧತೆ. ಮೂರು-ವಿಶ್ವವಿದ್ಯಾಲಯದಂಥ ಸಂಸ್ಥೆಗಳಲ್ಲಿ, ನಾಣ್ಯಶಾಸನ ತಾಮ್ರಪಟ ಪುಸ್ತಕಗಳ ಗೋರಿಯಲ್ಲಿ ಹುಗಿದುಕೊಂಡು ವಿದ್ವಾಂಸರೆನಿಸಿಕೊಂಡ ಅಪ್ರಸ್ತುತ ಕಲೇವರಗಳು ಉತ್ಪಾದಿಸಿದ ತಟಸ್ಥ ನಿರ್ಲಿಪ್ತ ನಿರುಪಯುಕ್ತ ಶಬ್ದಪಾಂಡಿತ್ಯ.
ಇಂಡಿಯಾದ ಸಮಾಜಗಳು ಹಿಂದಿನಿಂದ ಚರಿತ್ರೆಯನ್ನು ಅಷ್ಟಾಗಿ ಗಮನಿಸದೆ ‘ಸೃತಿ’ಯನ್ನು ಅವಲಂಬಿಸಿಕೊಂಡು ಬಂದಂಥವು. ಸೃತಿಯಲ್ಲಿ ಚರಿತ್ರೆಯ ವಿವರಗಳಿರುವುದಿಲ್ಲ. ಅದರ ಅರ್ಕವಿರುತ್ತದೆ. ಅದಕ್ಕಿಂತ ಮುಖ್ಯವಾಗಿ, ಸೃತಿಯೆನ್ನುವುದು ವೈರಸ್‌ನ ಥರ. ವೈರಸ್ ಮೂಲತಃ ಜಡವಸ್ತು, ಜೀವವುಳ್ಳದ್ದಲ್ಲ. ಆದರೆ ಬೇರೆ ಜೀವಕೋಶವೊಂದರಸಂಪರ್ಕವಾದಾಗ ತಟ್ಟನೆ ತಾನೂ ಜೀವಂತವಾಗಿ ಮಾರ್ಪಾಟುಗೊಂಡುಬಿಡುತ್ತದೆ. ಸೃತಿಯು ಚರಿತ್ರೆಯ ವಿವರಗಳ ಹಾಗೆ ಹೆಂಟೆಹೆಂಟೆಯಾಗಿ ಉಂಡುಂಡೆಯಾಗಿ ಎದುರು ಪೇರಿ ನಿಲ್ಲುವುದಿಲ್ಲ. ಒಳಗೆ ಜಿನುಗಿ ನಮ್ಮ ರಕ್ತಗತವಾಗುತ್ತದೆ. ನಮ್ಮ ಕಣ್ಣಿಗಿಳಿದು ನೋಡುವ ನೋಟದಲ್ಲಿ ಮಾಡುವ ಕೆಲಸದಲ್ಲಿ ತೊಡಗಿಕೊಳ್ಳುತ್ತದೆ.
ಗಾಂಧೀಜಿ ದೊಡ್ಡ ಉದಾಹರಣೆ. ಈಶಾವಾಸ್ಯದಿಂದ, ರಾಮಾಯಣದಿಂದ, ಭಗವದ್ಗೀತೆಯಿಂದ, ತುಲಸೀದಾಸ ಕಬೀರರಿಂದ, ತನ್ನ ಕಾಥೇವಾಡದ ಹಿಂದು ಜೈನಮಿಶ್ರಣದ ಬನಿಯಾಸಮಾಜದ ತನಕ, ಭಾರತದ ಸಂಸ್ಕೃತಿಸಮಸ್ತವೂ ಆತನಲ್ಲಿ ಸೃತಿಯಾಗಿ ಅರಗಿಕೊಂಡಿತ್ತು. ರಾಮ ರಾಮ ಅಂತ ಬದುಕಿದ, ಗುಂಡು ಬಡಿದು ನೆತ್ತರು ಚಿಮ್ಮುವಾಗ ರಾಮ ಅಂತ ಸತ್ತ. ರಾಮನು ನಿಖರವಾಗಿ ಯಾವ ಸ್ಥಳದಲ್ಲಿ ಹುಟ್ಟಿದ, ಏನೇನು ಮಾಡಿದ ಇತ್ಯಾದಿ ಚರಿತ್ರೆಯ ವಿವರಗಳನ್ನು ಅತ ಎಲ್ಲಿಯೂ ಪ್ರಸ್ತಾಪಿಸಿದ್ದೇ ಇಲ್ಲ. ಅದರೆ, ಆಧುನಿಕ ಪಾಶ್ಚಾತ್ಯ ಮಾನವೀಯ ಉದಾರ ಭಾವನೆಗಳಲ್ಲಿ ಹುಟ್ಟಿದ ಡೆಮಾಕ್ರಸಿಯಂಥ ಕಲ್ಪನೆಗಳನ್ನು ಸ್ವದೇಶಿಗೊಳಿಸಿ ಅದನ್ನು ರಾಜಕಾರಣದ ಅದ್ಭುತ ಪಾಕವಾಗಿ ಸಿದ್ಧಗೊಳಿಸಿ ಅನಂತರ ಅದಕ್ಕೆ ‘ರಾಮರಾಜ್ಯ’ವೆಂಬ ಹೆಸರು ಕೊಟ್ಟ. ಆತ ‘ಪ್ರಜಾಪ್ರಭುತ್ವ’ವೆಂದು ಪ್ರಸ್ತಾಪಿಸಿದ್ದು ತೀರಾ ಕಡಿಮೆ. ಅದು ಆತನಿಗೆ ‘ರಾಮರಾಜ್ಯ’ವಾಗಿತ್ತು. ಭಗವದ್ಗೀತೆ ಆತನ ಸೋಹಂ ಉಸಿರು. ಆದರೆ ಮಹಾಭಾರತದ ಯುದ್ಧ ನಡೆಯಿತೆಂಬ ಚಾರಿತ್ರಿಕ ಅಂಶವನ್ನು ಆತ ನಂಬಲಿಲ್ಲ.
ಒಮ್ಮೆ ನೆನೆಸಿಕೊಂಡದ್ದಕ್ಕೆ ಮತ್ತೆ ಮಾರ್ಕ್ಸ್‌ನದೇ ನೆನಪಾಗುತ್ತದೆ. ಆತನ ಸಿದ್ಧಾಂತವು ಚರಿತ್ರೆಯ ವಿವರಗಳ ರಾಶಿರಾಶಿಗಳನ್ನವಲಂಬಿಸಿ ತಾರ್ಕಿಕ ಹಂತಗಳಲ್ಲಿ ಸಿದ್ಧಗೊಳ್ಳುತ್ತದೆ. ಒಟ್ಟಿನ ಪ್ರಾಮುಖ್ಯದಲ್ಲಿ ಆತನ ‘ಕ್ಯಾಪಿಟಲ್’ಗಿಂತ ಕಿಂಚಿತ್ತೂ ಕಡಿಮೆಯಲ್ಲವೇ ಅಲ್ಲದ ‘ಹಿಂದ್ ಸ್ವರಾಜ್’ನಲ್ಲಿ ಒಬ್ಬ ಪ್ರಶ್ನೆ ಕೇಳುತ್ತಾನೆ. ಈತ ಹೇಳುತ್ತಾ ಹೋಗುತ್ತಾನೆ. ಚರಿತ್ರೆ ತರ್ಕಗಳು ಅಲ್ಲಿ ಅಗತ್ಯವೆನಿಸುವುದೇ ಇಲ್ಲ.
ಗಾಂಧಿಯ ದೊಡ್ಡ ಉದಾಹರಣೆ ನಮಗೆ ದೊಡ್ಡ ಭರವಸೆಯನ್ನು ಕೊಡಬಹುದು. ಪಾಶ್ಚಾತ್ಯ ನಾಗರಿಕತೆಯು ತನ್ನ ಹೊಸ ಗಳಿಕೆಯ ಗರ್ವದಲ್ಲಿ ಯಾವುದನ್ನು ಹಿಂದಿಕ್ಕಿಕೊಂಡಿತೋ, ಅನೇಕ ಅನಭಿವೃದ್ಧಿ ರಾಷ್ಟ್ರಗಳು ಕೂಡಾ ಪಾಶ್ಚಾತ್ಯ ಅನುಕರಣೆಯ ಛಲದಲ್ಲಿ ಯಾವುದನ್ನು ಹತ್ತಿಕ್ಕಿಕೊಂಡವೋ ಅಂಥ ಸೃತಿಯು, ಬಹುಶಃ ಇಂಡಿಯಾದ ಅಖಂಡ ದೀರ್ಘ ಸಂಸ್ಕೃತಿ ಪ್ರವಹನಗಳಿಂದಾಗಿ ಇಲ್ಲಿ ಇವತ್ತಿಗೂ ಉಳಿದುಬಂದಿದೆ. ಮೊದಲು ಪ್ರಸ್ತಾಪಿಸಿದ ಇವತ್ತಿನ ನಮ್ಮ ತಲ್ಲಣದಿಂದ ಉತ್ತರಣಗೊಳ್ಳಿಸಿಕೊಳ್ಳಲು ಈ ಸೃತಿಯು ನೆರವಾಗಬಹುದೆ?
ಸೃತಿಯೆನ್ನುವುದು ಯಾಕೆ ಅಷ್ಟು ಮುಖ್ಯವಾಗುತ್ತದೆ? ಯಾತಕ್ಕೆ?
ಪಾಶ್ಚಾತ್ಯರು ಮತ್ತು ನಾವೂ ಕೂಡಾ ಈಚೆಗೆ ಸಾಮಾನ್ಯವಾಗಿ ಭಾವಿಸುತ್ತೇವಲ್ಲ, ಆ ಥರದಲ್ಲಿ ಮನುಷ್ಯಜೀವಿಯೆನ್ನುವವ ಒಂದು ಸ್ವತಂತ್ರ ಘಟಕವಲ್ಲ. ಅವನು ಒಂದು ಜೀವಂತ ಸಮೂಹದ ಅಂಗವಷ್ಟೆ. ಪರ್ಯಾಯವಾಗಿ, ಸಮೂಹಗಳು ಜೀವಂತ ಮಾನವಕುಲವೆಂಬ ಸಮಷ್ಟಿಯ ಅಂಗಗಳು. ಒಂದು ಸಮುದಾಯವೋ ಸಮಾಜವೋ ರಾಷ್ಟ್ರವೋ ದೊಡ್ಡದೊಂದು ಸಮಸ್ಯೆ ಬಂದಾಗ, ಧರ್ಮ ಸಂಕಟವು ಪ್ರಾಪ್ತವಾದಾಗ ಹೇಗೆ ಅದನ್ನು ಉತ್ತರಿಸಿ ಎದುರಿಸುತ್ತದೆ? ಪ್ರಸ್ತುತವೆನ್ನುವುದು ಈ ಮಾನವ ಕುಲದ ಬದುಕಿನ ಒಂದು ಬಲುಬಲು ಚಿಕ್ಕ ಚೂರು. ಇದಕ್ಕೆ ಬೆಸೆದುಕೊಂಡು ಅಜ್ಞಾತ ಅದೃಷ್ಟವಾಗಿರುವ ಒಂದು ಬಹು ದೀರ್ಘ, ಅನಾದಿ, ಭೂತಕಾಲ ಅದಕ್ಕಿದೆ. ಸೃತಿಗಳನ್ನು ಉದ್ಭೋಧಿಸಿಕೊಂಡು ಅದರಿಂದ ಸಂಪನ್ನನಾದ ಇವತ್ತಿನ ಮನುಷ್ಯನು ಇಡೀ ಮಾನವ ಕುಲದ ಮೊನೆಯಾಗುತ್ತಾನೆ, ತೆನೆಯಾಗುತ್ತಾನೆ. ಹಾಗಾದಾಗ ಇವತ್ತಿನ ಅವನ ನಿರ್ಣಯವು ಇಡೀ ಮಾನವಕುಲವು ಕೈಗೊಂಡ ನಿರ್ಣಯವಾಗುತ್ತದೆ.
ಇವತ್ತು ಇಲ್ಲಿ ಬದುಕುವ ಈ, ಅಣುವಿನೊಳಗಣ ಸಹಸ್ರಕೋಟಿಗಳಲ್ಲೊಂದು ಭಾಗದ ಪರಮಾಣುವಾದ ನಾನು ಇಡೀ ಮಾನವಕುಲದ, ವಿಶ್ವ ಸಮಸ್ತದ ಆಸ್ತಿಗಳಿಗೂ ಮತ್ತು ಜವಾಬ್ದಾರಿಗಳಿಗೂ ಹಕ್ಕುದಾರ, ಹೊಣೆಗಾರ. ಇತಿಹಾಸಪೂರ್ವಕ್ಕೂ ಪೂರ್ವದ ವೈದಿಕ ಋಷಿಯಿಂದ ಮೊದಲುಗೊಂಡು ಮೊನ್ನೆ ಬಂದ ಆಧುನಿಕ ಪರಮಾಣು ವಿಜ್ಞಾನಿಯ ವಿನೂತನ ಶೋಧದ ತನಕ, ಎಲ್ಲಕ್ಕೂ ನಾನು ವಾರಸುದಾರ. ಯಾವುದನ್ನೂ ನಿರಾಕರಿಸಲಾರೆ, ಕೊಡಹಿಕೊಳ್ಳಲಾರೆ. ಇವತ್ತಿನ ಎಲ್ಲವನ್ನೂ ಒಳಗೊಳ್ಳುತ್ತಾ, ಅನಂತರ ಸೃತಿಯ ಮೂಲಕ ಭೂತಕಾಲದ ಅಪಾರಸಮಸ್ತವನ್ನು ಒಳಗೊಂಡು, ನಾನು ಅದೆಲ್ಲದರ ಸೂಜಿ ಮೊನೆಯಾಗಿ ಕೈಗೊಳ್ಳುವ ನಿರ್ಣಯವೇ ಸಹಜವಾಗುತ್ತದೆ, ಸುಷ್ಠುವೂ ಸಾಧುವೂ ಆಗುತ್ತದೆ. ಈ ಕಾರಣದಿಂದಲೇ ಸೃತಿಯೆಂಬುದು ಅಷ್ಟು ಮುಖ್ಯವಾದ್ದು.
ನಮ್ಮ ಕವಿ ಪುತಿನ ಸೃತಿ ಸಂಗೋಪನ ಉದ್ಬೋಧನಗಳ ಬಗ್ಗೆ ಯಾವಾಗಲೂ ಹೇಳುತ್ತಿರುತ್ತಾರೆ. ‘ಮಳೆಯು ನಾಡ ತೊಯ್ಯುತಿರೆ’ ಎಂಬ ಕಿರು ಹಾಡಿನಿಂದ ಹಿಡಿದು ಇತ್ತೀಚಿಗಿನ ಮಹಾಕಾವ್ಯ ‘ಹರಿಚರಿತೆ’ಯ ತನಕ ಅವರ ಬರವಣಿಗೆಯೆಲ್ಲ ಸೃತ್ಯುದ್ಬೋಧದ ಪೌರೋಹಿತ್ಯ ವಹಿಸಿದೆ.
ಎಲ್ಲ ಕಾವ್ಯ ಕಲೆ ಸಂಸ್ಕೃತಿಗಳೂ ಪ್ರಾಯಶಃ, ಸೃತಿಯ ಸಂಗೋಪನ ಉದ್ಬೋಧಗಳಿಗಾಗಿ ದುಡಿಯುತ್ತವೆ. ಪ್ರಾಚೀನ ನಾಟಕಕಾರನಾದ ಭಾಸನನ್ನು ನೋಡಿ. ಅವನ ಕಿರುನಾಟಕಗಳೆಲ್ಲವುಗಳಲ್ಲೂ ರಕ್ತ ವಂಶ ಕುಲಕುಟುಂಬಗಳು ಕೀರ್ತಿತವಾಗುತ್ತವೆ. ಆದರೆ ಆತನ ಕಾಲದಲ್ಲಾಗಲೇ ಈ ಸಂಬಧಗಳೆಲ್ಲಾ ಎಷ್ಟೋಮಟ್ಟಿಗೆ ಕಳೆದುಹೋಗಿ, ಅದಕ್ಕೆ ಬದಲು ರಾಜಪ್ರಜರ ದಣಿ ಆಳುಗಳ ತರತಮವ್ಯವಸ್ಥೆಯ ಹೊಸ ಸಂಬಂಧಗಳು ರೂಪುಗೊಳ್ಳತೊಡಗಿದವು. ಅದಾಗಲೇ ಇಂಡಿಯಾದ ಬೃಹತ್‌ರಾಜ್ಯ ಸಾಮ್ರಾಜ್ಯಗಳ ನಿರ್ಮಾಣಪ್ರಯತ್ನಗಳು ನಡೆದಿದ್ದವು., ನಡೆಯುತ್ತಿದ್ದವು. ಆ ಘಟ್ಟದಲ್ಲಿ ಭಾಸನು ತನ್ನ ಹಿಂದಣ ಸಂಸ್ಕೃತಿಘಟ್ಟದ, ರಕ್ತಕುಟುಂಬಸಂಬಂಧಗಳ ಘಟ್ಟದ, ಸೃತಿಯನ್ನು ಬಲು ಶ್ರದ್ಧೆಯಿಂದ ಆವಾಹಿಸಿಕೊಳ್ಳುತ್ತಾನೆ. ಆತನ ಪ್ರತಿಜ್ಞಾ ನಾಟಕ ಸ್ವಪ್ನನಾಟಕಗಳಲ್ಲಿ ಸೃತಿ ಮತ್ತು ಪ್ರಸ್ತುತಗಳು ಮುಖಾಮುಖಿಯಾಗಿ ಬಹು ಪ್ರಬುದ್ಧವಾಗಿ ಒಂದು ಸಂವಾದವನ್ನು ಕಲ್ಪಿಸುತ್ತವೆ. ರಾಜಾ ಉದಯನನು ಹೆಣ್ಣುಗಂಡು ಸಂಬಂಧದಲ್ಲಿ ವೀಣೆಸಂಗೀತಗಳ ಸೃತಿಯಲ್ಲಿ ಮುಳುಗಿಹೋಗಿದ್ದಾನೆ. ಇದು ನಾಟಕದ ಒಂದು ಮುಖ. ಮಹಾಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂಬ ಮಂತ್ರಿ ಯೌಗಂಧರಾಯಣನ ಹಂಬಲ ಕರ್ತವ್ಯಗಳು, ಪ್ರಸ್ತುತದ ಕಾಳಜಿಗಳು ನಾಟಕದ ಮತ್ತೊಂದು ಮುಖ. ಉದಯನನ ಸೃತಿಪಟಲತೆಯನ್ನು ಪ್ರಸ್ತುತದ ರಾಜಕಾರಣಕ್ಕೆ ಹೇಗೋ ಹೊಂದಿಸಿ ಹತ್ಯಾರವಾಗಿ ಮಾರ್ಪಡಿಸಲಿಕ್ಕೆ ಯೌಗಂಧರಾಯಣನು ತನ್ನ ಚಾತುರ್ಯವನ್ನು ವ್ಯಯಿಸುತ್ತಾನೆ. ಈ ಎರಡರ ಮುಖಾಮುಖಿಯೇ ಸಂಭಾಷಣ ಸಂವಾದಗಳೇ ಒಟ್ಟೂ ನಾಟಕ.
ನಮ್ಮ ಭಾಗವತ ಗ್ರಂಥವೂ ಭಾಗವತ ಪಂಥವೂ ಬೋಧಿಸುವ ಸೃತಿಗಳು ಇವತ್ತು ನಮಗೆ ಪ್ರಾಯಶಃ, ಮತ್ತಷ್ಟು ಮುಖ್ಯವಾಗುತ್ತವೆ. ಜಾತಿಭೇದ ವರ್ಗಭೇದಗಳನ್ನು ಮೀರಿಸುವ ಶ್ರದ್ಧಾವಂತಪ್ರಯತ್ನವು ಅಲ್ಲಿ ನಡೆದಿದೆ. ಕೊಳಲು ಕೃಷ್ಣಗೋಕುಲಗಳು ಮಾರ್ಗದೇಸಿಯೆಂಬ ಭಿನತೆಯನ್ನು ಮುಸುಳಿಸಿ ನಿವಾಳಿಸುವ ಒಂದು ಉಪಾಯವನ್ನು ಕಾಣಿಸಿವೆ. ಗೋಕುಲದಂಥ ಪುಟ್ಟ ಗ್ರಾಮೀಣ ಭಾಗವತ ಸಮುದಾಯವು ತೀರಾ ಭಿನ್ನ ಸಂಸ್ಕೃತಿಯದಾಗಿದ್ದೂ ಮಾನವಂತವಾಗಿ ತಲೆಯೆತ್ತಿ ಬಾಳಿಕೊಂಡಿತು. ಮಾತ್ರವಲ್ಲ, ಅಂತಿಮವಾಗಿ ಅದು ತನ್ನನ್ನು ಅಖಿಲಭಾರತೀಯ ಏಕಚ್ಛತ್ರದಡಿಯ ಒಂದು ಸ್ವತಂತ್ರ ಸಮುದಾಯವೆಂದೂ ಗಣಿಸಿಕೊಂಡಿತು.
ಕೃಷ್ಣ ಕೊಳಲು ಗೋಕುಲಸೃತಿಯು ಕನ್ನಡದಲ್ಲಿ ಜೈನನಾದ ಪಂಪನಿಂದಲೇ ಶುರುವಾಗಿ ರುದ್ರಭಟ್ಟ ದಾಸರು ಕುಮಾರವ್ಯಾಸ ಚಿಕವೀರರಾಜ ಇತ್ಯಾದಿ ಪರಂಪರೆಯಲ್ಲಿ ಒಂದು ಕಡೆ, ಶಾಸನಗಳಲ್ಲಿ ಇನ್ನೊಂದು ಕಡೆ ವಾಙ್ಮಯ ಹರಿದು ಬಂದಿದೆ. ಆಧುನಿಕರಲ್ಲಿ, ಅಂಬಿಕಾತನಯದತ್ತ ಕುವೆಂಪು ನರಸಿಂಹಸ್ವಾಮಿ ಅಡಿಗ ಮುಂತಾದವರ ಹೆಸರು ತಟ್ಟನೆ ನೆನಪಾಗುತ್ತವೆ.
ಕೊಳಲನೂದಿದಾನೇನಾ-ಕೃಷ್ಣ
ಕೊಳಲನೂದಿದಾ…..
ಕೋಲು ಹಾಕಿದಂತೆ ಕಾಲ
ತಾಲದಲ್ಲಿ ಕುಣಿಯುತಿರಲು
ಮೂಲ ಹಿಡಿದು ಅಲ್ಲಾಡಿಸಿದ
ಬಳ್ಳಿಯಂತೆ ಬಳುಕಿತು ಜೀವ-ಕೊಳಲ…
ಮೈಗೆ ಮೈಗೆ ತುಟಿಯ ಸೋಂಕಿ
ಕೊಳಲ ಮೇಲೆ ಬೆರಳಾಡಿಸಿ
ಮಾತು ಮಾತು ತೂತು ಮಾಡಿ
ಅಂಬಿಕಾತನಯನ ತುಂಬಿ-ಕೊಳಲನೂದುವ
(ಅಂಬಿಕಾತನಯದತ್ತ)
ಬೃಂದಾವನಕೆ ಹಾಲನು ಮಾರಲು
ಹೋಗುವ ಬಾರೇ ಬೇಗ ಸಖಿ….
ಚಿನ್ನವ ಕೊಡನು ರನ್ನವ ಕೊಡನು
ತನ್ನನೆ ಕೊಡುವನು ಬಾರೆ ಸಖಿ….
(ಕುವೆಂಪು)
ಗಾಲಿ ಉರುಳಿದಂತೆ-ಕಾಡಿನ
ಗಳಿ ಹೊರಳಿದಂತೆ
ಬಾನ ದೇಗುಲದ
ಬೆಳ್ಳಿ ಗೋಪುರದ
ಘಂಟೆ ಮೊಳಗಿದಂತೆ
ಹಾಲು ಕಂಚಿನ
ಹೊನ್ನ ಮಿಂಚಿನ
ಘಂಟೆ ಮೊಳಗಿದಂತೆ
ಊರ ದಾರಿಯಲಿ
ಹೂವ ತೇರಿನಲಿ
ಕೃಷ್ಣ ಬರುವನಂತೆ…..
ಸೆರಗ ಸೆಳೆದರಿಯ ಬೆಣ್ಣೆ ಕದ್ದರಿಯ
ಚೆಲವ ಬಂದ ದಾರಿ
ಹಣೆಯ ಕತ್ತುರಿಯ ತಿಲಕದಚ್ಚರಿಯ
ಕಂದ ಬಂದ ದಾರಿ….
ಕಿರು ತಾರೆ ಮುಡಿದೊಂದು ಮುಗಿಲು-ತನ್ನ
ಚೆಲುವಿಗೆ ಬೆರಗಾದ ಮುಗಿಲು.
ಕೊಳಲನು ತುಟಿಗಿಟ್ಟು ಮುಗಿಲು
ತುಟಿ ನನ್ನ ಕೊಳಲೆನುವ ಮುಗಿಲು….
ಶ್ರೀಕೃಷ್ಣನಂತೊಂದು ಮುಗಿಲು
ರಾಧೆಯಂತಿನ್ನೊಂದು ಮುಗಿಲು
ಅಲ್ಲೊಂದು ಇಲ್ಲೊಂದು ಮುಗಿಲು
ಮುಗಿಲೆಲ್ಲಾಕೃಷ್ಣನ ಕೊಳಲು….
(ನರಸಿಂಹಸ್ವಾಮಿ)
ಯಾವ ಮೋಹನ ಮುರಲಿಕರೆಯಿತು
ದೂರತೀರಕೆ ನಿನ್ನನು…..
ಯಾವ ಬೃಂದಾವನವು ಚಾಚಿತು
ತನ್ನ ಮಿಂಚಿನ ಕೈಯನು….
(ಅಡಿಗ)
ಗೋಕುಲ ನಿರ್ಗಮನವು ಕನ್ನಡದ ಸಂವೃದ್ಧ ಪರಂಪರೆಯನ್ನು ಬೆನ್ನಿನಲ್ಲಿಟ್ಟುಕೊಂಡು ಗೋಕುಲದ ಘಟ್ಟದಿಂದ ಮಧುರೆಗೆ ಜಿಗಿದು ದಾಟಿಕೊಳ್ಳುವ (ಲೌಕಿಕ ಅಲೌಕಿಕ, ರಾಜಕೀಯ-ಧಾರ್ಮಿಕ, ಸಾಮಾಜಿಕ-ಆದ್ಯಾತ್ಮಿಕ ಎಲ್ಲವೂ ಒಗ್ಗೂಡಿದ) ಸಂಕ್ರಮಣ ಸಂಭ್ರಮವನ್ನು ಚಿಂತಿಸುತ್ತದೆ.
ಕೃಷ್ಣನ ಕೊಳಲಿನ ಕರೆ-ಆಲಿಸು….
ಮುತ್ತಿನ ಕುಪ್ಪಸ ಹರಳೋಲೆ
ಮಲ್ಲಿಗೆ ಜಾಜಿ ಮುಡಿಮಾಲೆ
ಹೆಜ್ಜೆಯ ನೇವುರ ಗೆಜ್ಜೆಯ ಪಿಲ್ಲಿ
ಮರೆತೇ ಬಂದೆವೆ ಮನೆಯಲ್ಲೇ….ಆಲಿಸು….
ಹೊತ್ತಾರೆ ಹೊರೆಗೆಲಸ ಮಿಕ್ಕರೆ ಮಿಗಲಿ
ಮಿಕ್ಕಾದ ನೆರೆಹೊರೆ ನಕ್ಕರೆ ನಗಲಿ….ಆಲಿಸು….
ಅಂತ ಪ್ರಾರಂಭವಾದ್ದು, ಎಲ್ಲ ಬದಲಾಗಿ,
ಎಲ್ಲ ಬದಲಾದ ಮೇಲೂ ಅಂತಿಮವಾಗಿ,
ಇದ್ದದ್ದು ದಿಟ ಅವನೊಲಿದುದು ದಿಟ ನಾವು
ನಲಿದುದು ದಿಟ ಬಹ ನೆಚ್ಚು ದಿಟ
ಅನ್ನುವ ‘ಸೃತಿ-ವಾಸ್ತವಗಳ’, ‘ಋತು-ಸತ್ಯ’ಗಳ ಐಕ್ಯದಲಿ ಹೊಳೆದು ಮುಗಿಯುತ್ತದೆ.
ಮುಗ್ಗರಿಸುತ್ತ ನಡೆದ ಈ ಬರೆವಣಿಗೆಯನ್ನು ಕೊಂಚ ಮುಗ್ಗರಿಸಿಕೊಂಡೇ ಮುಗಿಸುತ್ತಿದ್ದೇನೆ. ಗೋಕುಲ ನಿರ್ಗಮನದಂಥ ಕೃತಿಗಳು ನನ್ನ ಊರಿಗೆ, ಕರ್ನಾಟಕದ ಸಮುದಾಯಕ್ಕೆ ಈಗ ಬಹು ಮುಖ್ಯ. ಅವು ನಮ್ಮನ್ನು ಸೃತಿದೀಪ್ತಗೊಳಿಸುತ್ತವೆ, ಸಂಪನ್ನವಾಗಿಸುತ್ತವೆ, ಅದಕ್ಕಾಗಿ. ಹಾಗೆ ಸಂಪನ್ನವಾದ ನಾವು ಪ್ರಾಯಶಃ, ಇವತ್ತಿನ ಜೀವ ತುಳ್ಕಾಡಿಸುವ ಎಲ್ಲ ತಲ್ಲಣಗಳ ಮಧ್ಯೆ, ಫ್ಯಾಕ್ಟರಿಯಿಂದ ಬೆಂದು ಹೊರಬರುವ ನಮ್ಮ ಎಳೆಯ ಹೆಣ್ಣುಮಕ್ಕಳು ನಗರ ರಸ್ತೆಯಲ್ಲಿ ದಿಕ್ಕುಗಾಣದೆ ಆಯುಷ್ಯ ತೇಯುತ್ತಿರುವ ನಮ್ಮ ನಮ್ಮ ಕೆಚ್ಚು ಕುಡಿ ಗಂಡುಗಳು ಬಿಕೋ ಅನ್ನುವ ಬೋಳುಹಳ್ಳಿಗಳು ಇತ್ಯಾದಿ ವಾಸ್ತವಗಳ ಮಧ್ಯೆ ಹತಪ್ರಧರಾಗದೆ ಸ್ಥಿರವಾಗಿ ನಿಲ್ಲಲು, ನಿಂತು ಸ್ಥಿರವಾಗಿ ಧೈರ್ಯದಿಂದ ಮುಂದಣ ಹೊಸ ದಾರಿಯನ್ನು ಶೋಧಿಸಿಕೊಳ್ಳಲು ಸಮರ್ಥರಾಗುತ್ತೇವೆ.