ಮರೆವು

ಈ ಜಗತ್ತಿನಲ್ಲಿ ಮರೆವಿಗೊಂದು ಮಹತ್ವವಿದ್ದೇ ಇದೆ. ಕೆಲವೊಮ್ಮೆ ‘ಮರೆವು’ ಇಲ್ಲದೆ ಇದ್ದಿದ್ದಲ್ಲಿ ಜಗತ್ತಿನಲ್ಲಿ ಉತ್ಸಾಹ-ಲವಲವಿಕೆ ಇರುತ್ತಲೇ ಇರಲಿಲ್ಲ ಎನಿಸುತ್ತದೆ.

ಮತ್ತೆ ಹಲವೊಮ್ಮೆ ಮರೆವಿನಿಂದಾದ ಅನಾಹುತದಿಂದ ಜೀವ ರೋಸಿಹೋಗುತ್ತದೆ.

‘ಪಬ್ಲಿಕ್ ಮೆಮೋರಿ ಈಸ್ ವೆರಿ ಷಾರ್ಟ್’ ಎಂಬ ಗಾದೆ ಮಾತೆ ಇರುವುದನ್ನು ನಮ್ಮ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಕಲಿತಿದ್ದಾರೆ.

ಈ ‘ಮರೆವು’ ಎಲ್ಲ ರಂಗದಲ್ಲೂ ಚಿತ್ರ-ವಿಚಿತ್ರ ಸನ್ನಿವೇಶಗಳನ್ನು ಸೃಷ್ಟಿಸುತ್ತ ಬಂದಿದೆ. ಮಹಾಕವಿ ಕಾಳದಾಸ ‘ಶಾಕುಂತಲ’ ಅದ್ಭುತ ನಾಟಕವೆನಿಸಲು ಮರೆವಿನ ಪ್ರಸಂಗವೇ ಕಾರಣ.

‘ಆಬ್ಸೆಂಟ್ ಮೈಂಡೆಡ್ ಪ್ರೊಫೆಸರ್’ ಎಂಬ ಪಾತ್ರ ಸೃಷ್ಟಿಯಾದದ್ದೇ ಮರೆವಿನ ಕಾರಣದಿಂದ. ಕುಡಿದ ಅಮಲಿನಲ್ಲಿ ಪಕ್ಕದ ಮನೆಯ ಬಾಗಿಲು ತಟ್ಟುವ ‘ಕುಡುಕನ’ ಪಾತ್ರವೂ ಮರೆವಿನ ಸಂಕೇತವೇ.

ಅದರಿಂದಲೇ ಈ ‘ಮರೆ’ವನ್ನು ತುಂಬ ಜಾಣತನದಿಂದ ಬಳಸಿಕೊಳ್ಳುವ ಚಾಣಾಕ್ಷರೂ ನಮ್ಮಲ್ಲಿದ್ದಾರೆ.

ಮರೆತಿಲ್ಲದಿದ್ದರೂ ಮರೆತಂತೆ ನಟಿಸುವುದು, ತಾನು ಮಾತನಾಡಿಸುವುದೇ’ ಇನ್ನೊಬ್ಬನಿಗೆ ತೋರುವ ಘನತೆ ಎಂದು ಭಾವಿಸುವುದು, ಆತ್ಮೀಯನನ್ನು ತುಂಬಿದ ಸಭೆಯಲ್ಲಿ ಗುರುತೇ ಇಲ್ಲದವನಂತೆ ಟ್ರೀಟ್ ಮಾಡುವುದು ತಮ್ಮ ಹೆಚ್ಚುಗಾರಿಕೆ ಎಂದು ಭಾವಿಸಿದ್ದಾರೆ ಬಹುಮಂದಿ. ಚಿತ್ರರಂಗದಲ್ಲೂ ಇಂಥ ಪ್ರಸಂಗಗಳನ್ನು ಬಹಳಷ್ಟು ಕಾಣಬಹುದು.

ಜನಪ್ರಿಯ ನಟನೊಬ್ಬ ಪ್ಲೇನ್‌ನಿಂದ ಇಳಿಯುತ್ತಾನೆ. ತನ್ನನ್ನು ಗುರುತಿಸಿ, ಆತ್ಮೀಯತೆಯಿಂದ ಮಾತನಾಡಿಸುವನೆಂಬ ಭ್ರಮೆಯಿಂದ ಬೊಕೆ ಹಿಡಿದು ಹೋದ ವ್ಯಕ್ತಿ, ಆತ ತನ್ನತ್ತ ತಿರುಗಿಯೂ ನೋಡದೆ ಮುನ್ನಡೆದಾಗ ಇವನೇ ಅವನ ಬಳಿ ಓಡಿ ‘ನಿಮ್ಮ ಹುಟ್ಟಿದ ಹಬ್ಬಕ್ಕೆ ಶುಭಾಶಯ’ ಎಂದಾಗ ಆತ ತುಂಬ ಕ್ಯಾಷುಯಲ್ ಆಗಿ ‘ಥ್ಯಾಂಕ್ಸ್’ ಎಂದು ಮುನ್ನಡೆದಾಗ ಈತ ‘ಸ್ವಾಮಿ- ನನ್ನ ಗುರುತು ಸಿಗಲಿಲ್ವೆ’ ಎಂದ.

‘ಅರೆ, ಹೌದಲ್ಲ-ನಿಮ್ಮನ್ನ ಎಲ್ಲೋ ನೋಡಿದ ಹಾಗಿದೆ’ ಎಂದ ನಾಯಕ ಠೀವಿಯಿಂದ.

‘ಈಗ ನೀವು ನೂರು ಚಿತ್ರ ಮಾಡಿರಬಹುದು. ಆದ್ರೆ ನಿಮ್ಮ ಮೊದಲ ಚಿತ್ರ ತೆಗೆದೋರು ಯಾರು ಹೇಳಿ’

‘ಓ… ಹೌದಲ್ಲ… ನಿಮ್ಮ ಹೆಸರು ಮರೆತೆ’

‘ದುಡ್ಡಿನ ಮದ ಏರಿದಾಗ ಮರೆವು ಸಹಜವೇ. ಹತ್ತಿದ ಏಣಿ ಒದೆಯೋನು ಅಂದ್ರೆ ನೀನೇ’ ಎಂದಾಗ ‘ಓ. ಈಗ ಜ್ಞಾಪಕ ಬಂತು. ನೀನು ಮುರಾರಿ ಅಲ್ವೆ. ನಿಮ್ಮ ಬಂಗಲೆ ಪಕ್ಕವೇ ಬಾಡಿಗೆ ಮನೇಲಿದ್ದಿದ್ದು ಎಲ್ಲಾರೂ ಮರೀತೀನಾ’ ಎಂದದ್ದು ನಂತರವೇ.

‘ನೀನು ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿರಬಹುದು ಗೆಳೆಯ. ಆದರೆ ಆ ಹಳೆ ದಿನಗಳನ್ನು, ಹಳೇ ಸ್ನೇಹಿತರನ್ನು ಮರತ್ರೆ ಉದ್ಧಾರ ಆಗಲ್ಲ. ನಿನ್ನ ಹೀರೋ ಮಾಡೋದು ಬೇಡ ಅಂತ ಇಡೀ ಯೂನಿಟ್ ಹೇಳ್ದಾಗ ನೀನೇ ಹೀರೋ ಅಂದೋನು ನಾನು’ ಅಂದಾಗ ಆ ನಾಯಕನ ಮೂತಿ ಇಂಗು ತಿಂದ ಮಂಗನಂತಾಗಿತ್ತು.

ಇಂಥ ಮರವನ್ನೇ ಬಂಡವಾಳ ಮಾಡಿಕೊಂಡು ಬಡಾಯಿಕೊಚ್ಚೊ ಚಮಚಾಗಳದು ಇನ್ನೊಂದು ರೀತಿ.

‘ನಮಸ್ಕಾರ ಸಾರ್ ಮರೆತುಬಿಟ್ರಾ?’

`ಅರೆ-ನಿಮ್ಮನ್ನ ನೋಡೆ ಇಲ್ವಲ್ರೀ’

‘ಶತದಿನೋತ್ಸವದ ದಿನ ನಮ್ಮೂರಲ್ಲಿ ನೀವು ಬಾಯಾರಿಕೆ ಅಂದಾಗ ನಾವೇ ಅಲ್ವಾ ಸಾರ್ ಪೆಪ್ಸಿ ತಂದ್ಕೊಟ್ಟಿದ್ದು’

‘ಹೌದಾ’

‘ಗುಂಪಲ್ಲಿ ನಿಮ್ಮ ಮೇಲೆ ಯಾರೋ ಬೀಳಕ್ಕೆ ಬಂದಾಗ, ನಾನೇ ಅಲ್ವಾ ಸಾರ್ ಅವನ್ನು ಎಳೆದು ಹಾಕಿದ್ದು’

‘ಐ ಸೀ’

‘ಆಮೇಲೆ ತಮ್ಮ ಪಕ್ಕ ನಿಲ್ಲಿಸ್ಕೊಂಡು ಒಂದು ಫೋಟೋನೂ ತೆಗೆಸಿಕೊಂಡು-ಗುಡ್‌ಬಾಯ್ ಅಂದ್ರಲ್ಲ ಸಾರ್, ಅಂತಂದಾಗ ಆತ ಏನನ್ನಬೇಕು. ಅವನ ಪಕ್ಕ ನಿಂತು ಫೋಟೋ ತೆಗೆಸ್ಕೊಂಡಿರೋದು ಇವನು. ಆದ್ರೆ ಅದನ್ನು ಅವರಿಗೇ ತಿಳಿಸಿ ಹೇಳೋ ಜಾಣ.

ಬಡತನದಿಂದ ನಾನು ಮೇಲೆ ಬಂದವನು ಅನ್ನೋದನ್ನ ಮರೀದೇ ಹೇಳೋರು ಇದಾರೆ. ನಾನೆಲ್ಲಿ ಫುಟ್‌ಪಾತಲ್ಲಿ ಹೂವು ಮಾರುತ್ತಿದ್ದೆ. ನಮ್ಮದು ಮುಂಚಿನಿಂದ ಶ್ರೀಮಂತ ಮನೆತನ ಅಂತ ಜಂಭಕೊಚ್ಚೋ ನಟೀಮಣಿಯರೂ ಇದಾರೆ.

ಸಣ್ಣ ಪತ್ರಿಕೇಲಿದ್ದು ದೊಡ್ಡ ಪತ್ರಿಕೆಗೆ ಹೋದೋರ ಹಣೆ ಬರಹವೂ ಅಷ್ಟೆ.

‘ಬಾರಯ್ಯ ನಮ್ಮ ಪತ್ರಿಕೆ ಆಫೀಸ್‌ಗೆ ಒಂದ್ಸಾರಿ’

‘ಯಾವ ಪತ್ರಿಕೆ ನಿಮ್ಮದು’

‘ನೀನು ಮುಂಚೆ ಗಾಸಿಪ್ ಕಾಲಂ ಬರೀತಿರಲಿಲ್ವೆ ನಂ ಪೇಪರ್‌ಗೆ’

‘ಇಲ್ಲ ನಂಗೆ ಜ್ಞಾಪಕ ಇಲ್ಲ’

‘ಅರೆ! ನಿನ್ನ ಮದುವೆ ಆದಾಗ ರೆಸಪಷನ್ ನಾವೇ ಅಲ್ವಾ ಏರ್ಪಾಟು ಮಾಡಿದ್ದು’

‘ಹೌದಾ! ಹಾಗಾರೆ ನಮ್ಮ ಆಫೀಸ್ ಕ್ಯಾಬಿನ್‌ಗೆ’ ಬಾ ಅಂತ ಹೊರಟೇಬಿಟ್ಟ ರಾಯ.

ಅದು ಹಾಗೆ ಯಾವಾಗ್ಲೂ. ದೊಡ್ಡ ಆಫೀಸರ್ಸ್ ಸಂಪರ್ಕಗಳು ಬಂದಾಗ, ದೊಡ್ಡ ಕೆಲಸ ಸಿಕ್ಕಾಗ, ಹಾಯ್, ಹಾಯ್ ಅಂತ ಹೆಣ್ಣುಗಳು ಹಿಂದೆ ಮುಂದೆ ಸುತ್ತುತ್ತಿದ್ದಾಗ ಎಂದೆಂದಿಗೂ ಇದೇ ಧಿಮಾಕು ನಡೆಯತ್ತೆ ಅನ್ಕೊಂಡು ಬೀಗೋರಿಗೂ ಕಾಲವೇ ಪಾಠ ಕಲಿಸುತ್ತೆ.

ಹಳೇ ಎಲೆಗಳು ಉದುರಿದಾಗ ಹೊಸ ಎಲೆಗಳು ಚಿಗುರುತ್ವೆ, ಸದಾ ಕಾಲಕ್ಕೂ ನನ್ನ ಮಾತೇ ನಡೆಯುತ್ತೆ ಅಂತ ಯಾರೆ ಅನ್ಕೊಳೋದೂ ತಪ್ಪೆ.

ಜೀವನ ಅಂದ ಮೇಲೆ ಮನೇಲಿ-ಆಚೆ-ಗೆಳೆಯರ ಜತೆ ಜಗಳಗಳು ಇದ್ದದ್ದೆ. ಜಗಳ ಅಂದ್ರೆ ಭಿನ್ನಾಭಿಪ್ರಾಯ ಮತಭೇದ ಇದ್ದದ್ದೆ. ಇರಲಿ. ಮಾತು-ವಾಗ್ವಾದ ಆದ ಮೇಲೆ ಅದನ್ನ ಅಲ್ಲೇ ಮರೆಯೋದು ವಾಸಿ. ಮರೆವಿರಬೇಕು. ಅಪ್ಪ, ಅಮ್ಮ, ಹೆಂಡ್ತಿ, ಮಕ್ಕಳು ಒಂದಲ್ಲ ಒಂದು ದಿನ ಸಾಯ್ತಾರೆ. ಹಾಗಾಂತ ನಾವು ಸಾಯೋವರೆಗೂ ಅವರನ್ನ ನೆನಸ್ಕೊಂಡು ಅಳ್ತಿರಕ್ಕಾಗುತ್ತ. ಇಂಪಾಸಿಬಲ್.

ಮರೆವಿರಬೇಕು. ಆದ್ರೆ ಮುಖ ನೋಡಿ ಮಣೆ ಹಾಕ್ತಾ ಮರೆವಿನ ನಾಟಕ ಆಡಬಾರದು. ತುಂಬಾ ವಯಸ್ಸಾದ ಮೇಲೆ ಅರಳು ಮರಳಾಗುತ್ತೆ ಅದು ಅನಿವಾರ್ಯ. ಆದರೆ ಅಧಿಕಾರ ದಕ್ಕಿತು ಅಂದಾಗ, ಶ್ರೀಮಂತಿಕೆ. ಒಲೀತು ಅಂದಾಗ, ಮರೆವಿನ ನಾಟಕ ಆಡೋದಿದೆಯಲ್ಲ ಅದು ಹೋಪ್ಲೆಸ್, ಹಾಗೆ ನಡಕೊಂಡ ವ್ಯಕ್ತಿ ಒಬ್ಬನೇ ಕುಳಿತು ತನ್ನ ಫ್ಲಾಶ್ ಬ್ಯಾಕ್ ಜ್ಞಾಪಿಸಿಕೊಂಡ್ರೆ- ಗಿಲ್ಟ್ ಕಾಂಪ್ಲೆಕ್ಸ್‌ ಅವನ್ನ ಕಾಡೋದು ನಿಜ.
*****
(೦೩-೦೫-೨೦೦೨)