ತುಂಬಿ ಹರಿಯುವ ಹೊಳೆಗೆ ತುಂಬಿ ಬಂದಿತು ಗಳಿಗೆ!
ಗಿರಿಯ ಗಂಭೀರತೆಯ ಹೀರಿ ನೆರೆ ನಾಡುಗಳ
ಕಾಡುಗಳನಲೆದು ತತ್ವಾಮೃತದ ಶಾಖೆಗಳ
ಕೊಂಡು ಸಾಗಿತು ಶಾಂತಿ ಜ್ಞಾನ ಸಿಂಧುವಿನಡೆಗೆ.
ಮೆಲುನಗೆಯ ಕಲಕಲ ನಿನಾದದಲಿ ಬಗೆ ತಣಿಸಿ
ನಿರ್‍ಮಲೋದಕದಾಳಕಿಳಿದು ಎದೆ ಕನ್ನಡಿಸಿ
ಜೀವನ ರಸಾಯನವ ನೀಡಿ ನೆಲಫಲಗೊಳಿಸಿ
ಧನ್ಯವೆನಿಸಿದ ನಾಡಿನಳ್ಕರೆಗೆ, – ‘ತತ್ತ್ವಮಸಿ’.
ಸರಸ ಸಜ್ಜನಿಕೆಯನು ಹಿರಿಯರಿಮೆ ಗರಿಮೆಯನು
ತುಂಬಿದನುಭವದೊಂದು ತೇಜೋವಿಲಾಸವನು
ಕಂಡು ಕೈಮುಗಿದಿರುವ ಮಲ್ಲಿಗೆಯ ಮೊಗ್ಗೆಯೊಲು
ಮೆಲ್ಲನೆಯೆ ಎದೆಯ ಪೊದೆಯಲ್ಲರಳಿ ನಿಂದುದನು
ನಮ್ರಭಾವದಿ ಮುಡಿಸಿ ನನ್ನೊಳೆ ಮೌನವಾಂತೆ
ಸಾವ ಗೆದ್ದಿಹ ಬದುಕು ನಿಚ್ಚ ಪರಿಮಳಲ್ತೆ?
*****