‘ಮದುವೆ-ಮುಂಜಿ, ಗೃಹಪ್ರವೇಶ ನಾಮಕರಣ ಎಲ್ಲಕ್ಕೂ ‘ಎ ಒನ್ ಮುಹೂರ್ತ ಯಾವುದೆಂದು ಹುಡುಕುವವರು ಬಹುಮಂದಿ. ಇದು ಮನೆ ಮಾತು. ರಾಜಕೀಯ ರಂಗಕ್ಕೆ ಬಂದರೆ ಚುನಾವಣೆಗೆ ನಾಮಿನೇಷನ್ ಫೈಲ್ ಮಾಡಲು ‘ಎ ಒನ್ ಮುಹೂರ್ತ’ ಪತ್ತೆ ಹಚ್ಚಲು ಶಾಸ್ತ್ರಿಗಳ ಹಿಂದಲೆಯುವುದು ಈಗ ನಿತ್ಯ ಮಾಮೂಲು. ಸಿನಿಮಾ ಮಾತಿಗೆ ಬಂದರೆ ಲಕ್ಷ-ಲಕ್ಷ, ಕೋಟಿ-ಕೋಟಿ ಸುರಿದು ಕನ್ನಡ ಚಿತ್ರ ತಯಾರಿಸುವ ನಿರ್ಮಾಪಕರಲ್ಲಿ ಆಸ್ತಿಕರೂ ಇದ್ದಾರೆ. ನಾಸ್ತಿಕರೂ ಇದ್ದಾರೆ. ಕೋಟಿ ಕಣ್ಮುಚ್ಚಿ ಸುರಿಯಬೇಕಾದಾಗ ಮಾತ್ರ ನಾಸ್ತಿಕನೂ-ಆಸ್ತಿಕನಾಗಿ ಜಪ ಮಣಿ ಕೈಲಿ ಹಿಡಿದು, ಚಿತ್ರದ ಆರಂಭಕ್ಕೆ ‘ಎ ಒನ್ ಮುಹೂರ್ತ ಸಿಕ್ಕೀತೆ’ ಎಂದು ಪರಿತಪಿಸುವ. ಚಿತ್ರ ಬಿಡುಗಡೆಯಾದಾಗ ಅದರ ಹಣೆಬರಹ ಬರೆಯುವುದು ಜನರ ಜವಾಬ್ದಾರಿ. ಅನಂತರವೇ ಅರ್ಥವಾಗುವುದು ಸಂಭ್ರಮ ಯಾರದು? ಸಂಕಟ ಯಾರದು? ಎಂದು. ಆಗಲೆ ನಿರ್ಮಾಪಕನ ಭ್ರಮೆಗಳು ಕಳಚಿ ಸತ್ಯದರ್ಶನ ವಾಗುವುದು.
ಒಳ್ಳೆ ಮುಹೂರ್ತವಾದರೆ ಸಾಲದು. ಒಳ್ಳೆಯ ಮನಸುಗಳು ಒಂದಾಗಿ ಒಳ್ಳೆ ಕಥೆಯೊಂದಕ್ಕೆ ಜೀವ ತುಂಬುವ ಕೆಲಸ ಕಲಾವಿದರಿಂದಾಗಬೇಕು. ನಿರ್ದೆಶಕನ ಸೃಜನಶೀಲತೆಯೂ ಅಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆಗ ಚಿತ್ರ ನಮ್ಮ ನೆಲದ ಭೂಮಿ ಸತ್ಯಗಳನ್ನು ಮಾತ್ರವಲ್ಲ, ಭೂಮಿ ಸತ್ವವನ್ನೂ ಹೀರಿ ಚಿತ್ರ ಕನ್ನಡಿಗರಿಗೆ ಹತ್ತಿರವಾದೀತು.
‘ಸತ್ಯ ಸತ್ವಗಳು ಪರಿ ಅರಿಯಬೇಕೆಂದಿದ್ದಲ್ಲಿ ಜಗತ್ತನ್ನು ಕಣ್ತೆರೆದು ನೋಡುವ, ಅರ್ಥಪೂರ್ಣ ಕೃತಿಯನ್ನು ಅಧ್ಯಯಿನಿಸುವ ತಾಳ್ಮೆಯೂ ಇರಬೇಕಾದದ್ದು ಅಗತ್ಯ. ತಾನು ಬರೆದದ್ದೇ ಸಾಹಿತ್ಯ, ಹಾಕಿದ್ದೇ ರಾಗ, ತೆಗೆದದ್ದೇ ಸಿನಿಮಾ ಎಂದುಕೊಂಡಲ್ಲಿ ಮಾರ್ನಿಂಗ್ ಷೋ ನೋಡಿದ ಮರುಘಳಿಗೆ ಚಿತ್ರಕ್ಕೆ ಗೇಟ್ ಪಾಸ್ ನೀಡುವುದನ್ನೂ ಕನ್ನಡ ಜನ ಬಲ್ಲರು.
ಸಾಂಗ್ ರೆಕಾರ್ಡಿಂಗ್, ಮುಹೂರ್ತ ಎಲ್ಲ ‘ಎ ಒನ್ ಮುಹೂರ್ತ’ದಲ್ಲಿಯೇ ಮಾಡಿದ್ದಾರೆ ಎಂದ ಮೇಲೆ ಹೇಗೆ ಚಿತ್ರೀಕರಿಸಿದರೂ ಜನ ನೋಡಲೇಬೇಕೆಂದೇನೂ ರೂಲ್ಸ್ ಇಲ್ಲವಲ್ಲ. ಯಾರೋ ಮಾಡಿದ ರೂಲ್ಸನ್ನು ಕುರುಡು ನಂಬಿಕೆಯಿಂದ ಕಣ್ಮುಚ್ಚಿ ಅನುಸರಿಸುವುದು ಒಂದು ರೀತಿ. ನಮ್ಮ ರೀತಿ-ನೀತಿಗನುಗುಣವಾಗಿ ರೂಲ್ಸುಗಳನ್ನು ರಿಪೇರಿ ಮಡಿಕೊಳ್ಳುತ್ತಾ ಹೋಗುವುದು ಮತ್ತೊಂದು ರೀತಿ.
ಅಂಥ ಹೊಸ ಚಿಂತನೆಯಿದ್ದವರು ಮಾತ್ರ ಸಿನಿಮಾ ಗ್ರಾಮರನ್ನು ಬದಲಾಯಿಸುವುದು ಸಾಧ್ಯವಾದೀತು. ‘ಎ ಒನ್ ಮುಹೂರ್ತ’ ಒಂದೇ ಚಿತ್ರದ ಯಶಸ್ಸಿನ ಗುಟ್ಟಲ್ಲ. ಒಳ್ಳೆ ಮುಹೂರ್ತದಲ್ಲಿ ‘ಶ್ರೀ’ಕಾರ ಹಾಕಿದರೆ ಸಾಕು, ಬರೆದ ಕೃತಿಗಳೆಲ್ಲ ಅದ್ಭುತವಾಗುವುದು ಸಾಧ್ಯವಿದ್ದಿದ್ದಲ್ಲಿ ಎಲ್ಲ ಲೇಖಕರೂ ಕುವೆಂಪು, ಬೇಂದ್ರೆ, ಮಾಸ್ತಿ, ರಾಜರತ್ನಂ, ದ್ಯಾವನೂರು ಆಗಿಬಿಡುತ್ತಿದ್ದರೇನೊ.
ಈ ಕುರಿತು ಯಾರನ್ನೇ ಕೇಳಿ ಒಬ್ಬೊಬ್ಬರು ಒಂದೊಂದು ರೀತಿ ತಮ್ಮ ಅನಿಸಿಕೆಗಳನ್ನು ಹೇಳುತ್ತಾರೆ. ಸಿನಿಮಾ ನಿರ್ಮಾಪಕರು ಹೇಳಿದ ಸಾಲುಗಳು ಇಗೋ..
“ಒಳ್ಳೆ ಮುಹೂರ್ತದಲ್ಲೇ ಸಿನಿಮಾ ಆರಂಭಿಸಿದೆ. ಏನು ಮಾಡ್ತೀರಿ. ಕೋಟಿ ಕೋಟಿ ಕೊಚ್ಕೊಂಡು ಹೋಗೊ ಹಾಗಾಗಿ ಈಗ ಲಂಗೋಟಿ ಹಾಕ್ಕೊಂಡು ತಿರುಗೋ ಸ್ಥಿತಿ ಬಂದಿದೆ.”
“ನಾನು ‘ಎ ವನ್’ ಮುಹೂರ್ತದಲ್ಲಿ ಚಿತ್ರ ಆರಂಭಿಸಿದಾಗ ನಾನೊಬ್ಬ ಡ್ರೈವರ್ ಆಗಿದ್ದೆ. ಇಡೀ ಟೀಂ. ಪ್ರಾಮಾಣಿಕವಾಗಿ ದುಡಿದಿದ್ದರಿಂದ ಚಿತ್ರ ಹಿಟ್ ಆಯಿತು. ಈಗ ನಾನು ಡ್ರೈವರ್ ಅಲ್ಲ. ಸಿನಿಮಾ ಡೈರೆಕ್ಟರೂ ಆಗೋ ದಿನ ಬಂದಿದೆ. ಮನುಷ್ಯ ‘ಮುಟ್ಟಿದ್ದೆಲ್ಲ ಚಿನ್ನ’ ಆಗಕ್ಕೆ ಅದೃಷ್ಟಾನೂ ಗುದ್ಕೊಂಡು ಬರಬೇಕು. ‘ಎ ಒನ್’ ಮುಹೂರ್ತದಲ್ಲಿ ಚಿತ್ರ ಆರಂಭಿಸಿದೀನಿ ಅಂತ ತೆಪ್ಪಗೆ ಕೂತರೆ ಚಿತ್ರ ಆಗೋದು ಹ್ಯಾಗೆ”
‘ಕ್ಷಣ-ಕ್ಷಣವೂ ಕಲಿಯೋದು ಬೇಕಾದಷ್ಟಿದೆ ಜಗತ್ತಿನಲ್ಲಿ’ ಅಂದ ಚಿತ್ರರಂಗದ ಭೀಷ್ಮ ಜಿ.ವಿ. ಅಯ್ಯರ್ ಮೊನ್ನೆ ಹೇಳಿದ್ರು. “ಗುಬ್ಬಿ ಕಂಪನಿ ವೀರಣ್ಣನವರು ಕ್ಯಾಂಪ್ ಕಡೇಲಿ ಆಡ್ತಿದ್ದ ನಾಟಕ ರಾಮಾಯಣ. ರಾಮಾಯಣ ನಾಟಕ ಅಂತ ಅನೌನ್ಸ್ ಮಾಡಿದ್ರೆ ಕ್ಯಾಂಪ್ ಕ್ಲೋಸ್ ಅಂತ ಲೆಕ್ಕ. ಆದರೆ ಬೇರೆ ಊರಿಗೆ ಹೋಗಿ ಒಳ್ಳೆ ಮುಹೂರ್ತದಲ್ಲಿ ನಾಟಕ ಶುರೂ ಮಾಡಕ್ಕೆ ಕೈಲಿ ಹಣವಿರಲಿಲ್ಲ. ಆಗ ವೀರಣ್ಣನವರು ತಮಗೆ ಬಂದಿದ್ದ ಚಿನ್ನ-ಬೆಳ್ಳಿ ಪದಕಗಳು, ಫಲಕಗಳು ಎಲ್ಲಾ ಮೂಟೆಕಟ್ಟಿ, ಸಾಹುಕಾರರ ಹತ್ರ ಹೋಗಿ ‘ಊರು ಬಿಡಕ್ಕೆ ದುಡ್ಡಿಲ್ಲ, ಇದಿಟ್ಟುಕೊಂಡು ದುಡ್ಡು ಕೊಡು ಮಹಾರಾಯ’ ಎಂದರಂತೆ. ಇದು ಖಚಿತವಾಗಿ ನಂಗೆ ಹೇಗೆ ಗೊತ್ತು. ಅಂದ್ರೆ ಅವತ್ತು ಆ ಗಂಟು ಹೊತ್ಕಂಡು ಹೋಗಿದ್ದವನು ನಾನೇ” ಅಂದ್ರು ಜಿ.ವಿ. ಅಯ್ಯರ್.
ನಾಟಕ ಸಂಸ್ಥೆಗಳನ್ನು, ವ್ಯಕ್ತಿತ್ವವನ್ನು ಸ್ನೇಹವನ್ನು ಕಟ್ಟುವ ಮನಸಿದ್ದವರು ಮಾತ್ರ ಹೀಗೆ ನಡೆದುಕೊಳ್ಳಬಲ್ಲರು ಎನಿಸಿತು ಅಯ್ಯರ್ ಅವರು ಹೇಳಿದ ಘಟನೆ ಕೇಳಿದಾಗ.
ನಾಟಕದ ಕಂಪನಿ, ಸಿನಿಮಾ ಕಂಪನಿ, ಖಾಸಗಿ ಕಂಪನಿ, ಫ್ರೆಂಡ್ಸ್ ಕಂಪನಿಗಳಲ್ಲಿ ಈಗ ಕಟ್ಟುವವರಿಗಿಂತ ಕೆಡವುವವರೇ ಅತಿ ಹೆಚ್ಚಾಗಿದ್ದಾರೆ. ಬ್ರಿಟಿಷರು ಭಾರತ ಬಿಟ್ಟು ಓಡಿದ್ದರೂ ಅವರಿಲ್ಲಿ ಬಿಟ್ಟುಹೋದ `ಒಡೆದಾಳುವ ನೀತಿ’ ಸಂಭ್ರಮದಿಂದ ಎಲ್ಲ ರಂಗದಲ್ಲೂ ವಿಜೃಂಭಿಸುತ್ತಿದೆ.
ಸ್ನೇಹ ಬೆಸೆಯುವುದು ಕಷ್ಟ, ಸ್ನೇಹ ಕೆಡಿಸುವುದು ಚಿಟಕಿ ಚಪ್ಪರದಷ್ಟು ಸುಲಭ, ಹಿತ್ತಾಳೆ ಕಿವಿಯವರಾದರೆ.
“ಇಷ್ಟು ಅದ್ಭುತವಾಗಿ ಬರೆಯೋ ನೀವು, ಸದಾ ಅವನ ಜತೆ ಯಾಕಿದ್ದೀರಿ” ಅಂತ ಒಂದು ಬಾಂಬ್ ಇಟ್ಟರೂ ಸಾಕು, ಗೆಳೆತನದ ನಂಟಿನಲ್ಲಿ ಸಣ್ಣ ಬಿರುಕು ಪ್ರಾರಂಭವಾಗುತ್ತದೆ. ಅಂಥ ಮಾತು ಹೇಳುವುದಕ್ಕೂ “ಎ ಒನ್” ಮುಹೂರ್ತಕ್ಕೆ ಹೊಂಚುವವರೂ ನಮ್ಮ ಸುತ್ತಲೇ ಇದ್ದಾರೆ.
ದಿಢೀರ್ ಎಂದು ಒಂದು ಬೆಳಿಗ್ಗೆ ರಾವ್ ಮನೆ ಫೋನ್ ‘ಟ್ರಿನ್ ಟ್ರಿನ್’ ಎಂದಿತು. ರಾವ್ ಫೋನ್ ತೆಗೆದುಕೊಂಡರು.
“ಮಿಸ್ಟರ್ ರಾವ್, ನಾನು ಭಟ್ ಮಾತಾಡ್ತಿರೋದು. ನಿಮ್ಮ ಮಗ ಬಾಸು ಲೇಖನ ನೋಡಿದೆ. ಬಾಳ ಛಲೋ ಬರೆದಾನ್ರಿ. ಬರಹದಾಗೆ ಜೀವಂತಿಕೆ ಅದೆ. ಮೆಟೀರಿಯಲ್ ಸಖತ್ ಕಲೆಕ್ಟ್ ಮಾಡಿದಾನ್ರಿ. ನಮ್ಮ ಪ್ಯಾಪರ್ ಸೇರೋಕ್ ಹೇಳ್ರೀ”
“ಲೈಬ್ರೆರಿಯನ್ ಆಗಿದಾನೆ ನೋಡಿ. ಅದರಿಂದ ಸದಾ ಯಾವುದಾದರೂ ಬುಕ್ ಓದ್‌ತಿರತಾನ್ರಿ. ಬಂದ ಹೊಸ ಪುಸ್ತಕ ಯಾವುದೂ ಬಿಡಲ್ಲ” ಅಂದರು ರಾಯರು.
“ತುಂಬ ಸ್ಟಡಿ ಮಾಡೋ ಮಂದಿಗೆ ವಿಷಯ ಜ್ಞಾನ ಇರ್ತದೆ ಬಿಡ್ರಿ. ಅದರಿಂದ್ಲೇ ಬರವಣೆಗೆ ಅಥೆಂಟಿಕ್ ಆಗೋದು. ನಮ್ಮಲ್ಲೂ ಇದಾರೆ. ಬೇರೆ ಪತ್ರಿಕೆಗಳು ಓದೋದು ಇರ್ಲಿ, ಅವರು ಬರೆದ ಲೇಖನವನ್ನೇ ಅವರು ಓದಲ್ಲ. ಇನ್ನು ಬೇರೆ ಕೃತಿಗಳು ಎಲ್ಲಿ ಓದತಾರೆ. ಹಿಂಗಾದಾಗ್ಲೆ ಲೇಖನಿ ಅಹಮಿಕೆ ಹೆಚ್ಚಿ ಬರಹಗಳು ತೆವಲಾಗೋದು. ನಿಮ್ಮ ಬಾಸು ಅಂತ ಹುಡುಗರು ನಮಗೆ ಬೇಕ್ರಿ, ಹೇಳಿ ನೋಡಿ”
“ಖಂಡಿತಾ ಹೇಳ್ತಿನಿ. ‘ಹುಂ’ ಅಂದ್ರೆ ‘ಎ ಒನ್ ಮುಹೂರ್ತ’ ಹುಡುಕಿ ನಿಮ್ಮನ್ನ ಕಾಣೋಕೆ ಹೇಳ್ತಿನಿ”
ಹೀಗೆ ಒಳ್ಳೆಯದಕ್ಕೆ ಕೆಟ್ಟದಕ್ಕೆ, ಕಳ್ಳಕಾಕರಿಗೆ, ದರೋಡೆ ಮಾಡಬಯಸುವವರಿಗೆ ಎಲ್ಲರಿಗು ‘ಎ ಒನ್ ಮುಹೂರ್ತ’ ಅರ್ಜೆಂಟಾಗಿ ಬೇಕಿದೆ.
*****
(೩೧-೦೫-೨೦೦೨)