ಅಂತರ್ಜಾಲದ ಬಗೆಗೆ ಯಾವುದೇ ರೀತಿಯ ವ್ಯಾಮೋಹವಿಲ್ಲದಿದ್ದರೂ ಕೃತಕ ಖೊಟ್ಟಿ ಇಂಗ್ಲಿಷ್‌ಮಯ ಅಹಂಕಾರದ ನಡುವೆ ಕನ್ನಡದ ಮೇಲಿನ ಮಮಕಾರ ನಮ್ಮನ್ನು ಈ ಕೆಲಸಕ್ಕೆ ಉತ್ತೇಜಿಸುತ್ತಿದೆ. ಜೊತೆಗೆ ‘ಬರಹ’ ದ ಶೇಶಾದ್ರಿವಾಸುರಂತಹವರಿಂದ ಶ್ರೀ ಅನಂತಮೂರ್ತಿಯಮತಹವರಿಂದ ಪಡೆಯುವ ಸ್ಪೂರ್ತಿಯ ಬೆಂಬಲವೂ ಇದೆ. ಏನೇ ಆದರೂ ಅದರ ಪರಿಣಾಮ, ಪ್ರತಿಕೂಲಪರಿಣಾಮಗಳ ಬಗೆಗೆ ಸ್ವಲ್ಪವಾದರೂ ಎಚ್ಚರಿಕೆಯಿಂದಲೇ ವರ್ತಿಸುವ ಒಂದಷ್ಟು ಮಂದಿ ಈ ಪ್ರಯೋಗಕ್ಕಿಳಿದಿದ್ದೇವೆ. ಇದು ನಮ್ಮ ಮೇಲಿನ ಪ್ರಯೋಗವೂ ಹೌದು. ಕನ್ನಡತನದ ಬಗೆಗಿನ ಪ್ರಯೋಗವೂ ಹೌದು. ಇದರಲ್ಲಿ ತೊಡಗಿಸಿಕೊಂಡಿರುವ ನಾವು ಮಾಹಿತಿ ತಂತ್ರಜ್ಞಾನ ಬಿತ್ತುತ್ತಿರುವ ಭ್ರಮೆ, ಅಮಿಷ, ಕನಸುಗಳ ಬಗೆಗೆ ಸ್ವಲ್ಪ ಎಚ್ಚರಿಕೆಯಿಂದಲೇ ವರ್ತಿಸಬೇಕು ಎಂಬ ಅರಿವಿರುವ ಮಂದಿ. ಜೊತೆಗೆ ಹೊಟ್ಟೆ ಪಾಡಿಗೆ ಅವರವರ ಆಸಕ್ತಿಗೆ ತಕ್ಕಂತೆ ಬೇರೆ ಬೇರೆ ಉದ್ಯೋಗದಲ್ಲಿರುವುದರಿಂದ ಈ ನಮ್ಮ ಕನ್ನಡಸಾಹಿತ್ಯ.ಕಾಂ ಮೇಲೆ ಯಾವುದೇ ರೀತಿಯಲ್ಲೂ ಅವಲಂಬಿಸಿಲ್ಲ. ಹಣಕ್ಕಾಗಿಯೋ ಲಾಭಕ್ಕಾಗಿಯೋ ಇದನ್ನು ಮಾಡುತ್ತಿಲ್ಲ. ಒಬ್ಬೊಬ್ಬರಿಗೂ ಒಂದೊಂದು ರೀತಿಯ ಆಶಯ. ಎಲ್ಲರ ನಡುವೆಯೂ ಒಂದಲ್ಲ ಒಂದು ರೀತಿಯ ಸಮನ್ವಯ ಇರುವುದರಿಂದ , ಉತ್ಸಾಹವೂ ಇರುವುದರಿಂದ ಇದರಲ್ಲಿ ತೊಡಗಿಸಿಕೊಂಡಿದ್ದೇವೆ.
ಅಂತರ್ಜಾಲಕ್ಕೆ ದೊಡ್ಡ ಇತಿಹಾಸವೇ ಇದೆಯಾದರೂ ಅದು ಇಂಗ್ಲಿಷ್‌ನದೇ ವಸಾಹತಾಗಿ ಮುಂದುವರಿಯುತ್ತದೆ, ವಾಣಿಜ್ಯ ವ್ಯವಹಾರಗಳೂ ನಡೆಯುತ್ತಾ ಹೋಗುತ್ತದೆ ಎಂಬ ಬಗೆಗೂ ಸಂದೇಹವಿಲ್ಲ. ನಮಗೆ ಇದ್ಯಾವುದೂ ಬೇಕಿಲ್ಲ. ಅಂತರ್ಜಾಲದಲ್ಲಿ ಸಾಹಿತ್ಯಕ್ಕಾಗಿಯೇ ಮೀಸಲಿರುವ ಕನ್ನಡ ಪತ್ರಿಕೆ ಇಲ್ಲ. ಅದರ ಕೊರತೆ ಸ್ವಲ್ಪವಾದರೂ ನೀಗಿಸಿ ಕನ್ನಡಕ್ಕೂ ಒಂದು ಸ್ಥಾನವಿದೆ ಎಂಬುದನ್ನು ಹೇಳಲಷ್ಟೆ ಈ ಪತ್ರಿಕೆ ಮೀಸಲಾಗಿರುತ್ತದೆ . ಇದು ಒಬ್ಬ ವ್ಯಕ್ತಿಯ ಪ್ರಯೋಗವಾಗಿ ಉಳಿಯಬಾರದು. ಹಾಗೆ ಒಬ್ಬ ವ್ಯಕ್ತಿಯ ನಿಯಂತ್ರಣದಲ್ಲಿ ಇದು ಬೆಳೆಯಲೂ ಸಾಧ್ಯವಿಲ್ಲ ಎಂಬುದು ಗೊತ್ತು. ಸಮಾನಾಸಕ್ತಿ ಇರುವ ಮಂದಿ ಸಹಾಯ ಹಸ್ತ ಚಾಚಿದರೆ ಇದು ಬೆಳೆಯುತ್ತದೆ. ಇಲ್ಲದಿದ್ದರೆ …? ಎಂತಹ ಸಹಾಯ ನಿರೀಕ್ಷೆ? ಕನ್ನಡದ ಲೇಖಕರು ಹೆಚ್ಚಾಗಿ ಇಲ್ಲಿ ಪ್ರಕಟಿಸಲು ಅನುಮತಿ ನೀಡಬೇಕು. ಸಾಹಿತ್ಯ ಯಾರದೇ ಖಾಸಗಿ ಆಸ್ತಿಯಾಗುಳಿಯಬಾರದು. ಯಾವುದೇ ಸಾಹಿತ್ಯ ಶೈಕ್ಷಣಿಕ ಹಾಗು ಅಕಾಡೆಮಿಕ್ ಕೆಲಸಗಳಿಗೆ ತೆರೆದು ಕೊಳ್ಳಬೇಕು. ಶೈಕ್ಷಣಿಕ ಹಾಗು ಅಕಾಡೆಮಿಕ್ ಕೆಲಸಗಳಿಗೆ ಸಾಕಷ್ಟು ಸಾಮಗ್ರಿ ಒದಗಿಸುವುದೇ ಕನ್ನಡ ಸಾಹಿತ್ಯ.ಕಾಂ ನ ಪ್ರಧಾನ ಉದ್ದೇಶ. ಈ ಉದ್ದೇಶದ ಈಡೇರಿಕೆ ಮುಂಚೆಯೇ ಹೇಳಿದ ಹಾಗೆ ಒಬ್ಬರಿಂದ ಸಾಧ್ಯವಿಲ್ಲ. ಸಾಕಷ್ಟು ಶ್ರಮ , ತಂತ್ರಾಂಶಗಳ ಅವಶ್ಯಕತೆ, ಹಣ ಬೇಕಾಗುತ್ತದೆ. ಇದೆಲ್ಲ ದೊರೆತಾಗಲೆ ಇದು ಬೆಳೆಯಲು ಸಾಧ್ಯ. ಈಗ ನಾವು ಕದ್ದು ಮುಚ್ಚಿ , ಸ್ನೇಹಿತರ ಮನೆಯಲ್ಲೋ ಅಥವಾ ಇನ್ನೆಲ್ಲೋ ಈ ಕೆಲಸಗಳನ್ನು ಮಾಡುತ್ತಿದ್ದೇವೆ. ಕದ್ದು ಮುಚ್ಚಿ, ಏಕೆ? ಪೈರಸಿಯದೇ ಹಾಹಾಕಾರದಿಂದ ಹಾಗು ಈ ಪೈರಸಿ ಬಳಸಬಾರದು ಎಂಬ ವ್ಯಾಪಕ ನೀತಿ ಪಾಠದಿಂದ. ಸಾಮಾನ್ಯರ ಕೈಗೆಟುಕದ ರೀತಿಯಲ್ಲಿ ತಂತ್ರಾಂಶಗಳ ಬೆಲೆ, ಈ ಬೆಲೆ ತೆರುವಷ್ಟು ನಾವುಗಳಾರೂ ಶ್ರೀಮಂತರಲ್ಲ. ತೀರಾ ಮಧ್ಯಮ ವರ್ಗದ ಮಂದಿ. ಪ್ರಾರಂಭದಲ್ಲಿ ನಾವು ಈ ಪೈರಸಿಯ ವಾತಾವರಣದಲ್ಲಿ ಸಂಕೋಚದಿಂದಲೇ ಕನ್ನಡಸಾಹಿತ್ಯ.ಕಾಂನ ಕೆಲಸ ಮಾಡುವಂತಾಗಿತ್ತು. ಆತ್ಮವನ್ನು – ಜೀವವನ್ನು ಹಿಡಿ ಮಾಡಿಕೊಂಡು ಕೆಲಸ ಮಾಡುವುದು ನಮ್ಮ ಬಗೆಗೆ ನಮಗೇ ಅಸಹ್ಯ ಮೂಡಿಸಿಬಿಡುತ್ತದೆ. ಆದುದರಿಂದ ಎಷ್ಠೋ ‘ಫ್ರೀವೇರ್’ ಗಳನ್ನು ಅವಲಂಬಿಸಿದೆವು. ಹೀಗೆ ಜೀವವನ್ನು ಹುಡಿ ಹುಡಿ ಮಾಡಿ, ಸುಸ್ತಾಗಿ ಹೋಗುತ್ತದೆ. ಇದು ನಿಲ್ಲುವಂತಾಗಬೇಕು. ಸುಲಭವಾಗಿ ಕೆಲಸ ಮುಂದುವರಿಯುವಂತಾಗಲು ನೆರವಾಗುವ ತಂತ್ರಾಶಗಳನ್ನು ಯಾರಾದರೂ ನೀಡಲು ಮುಂದೆ ಬಂದರೆ ಬಹಳ ಸಂತೋಷ. ಈಗ ಉಚಿತ ಜಾಗದಲ್ಲಿ ಈ ಕನ್ನಡಸಾಹಿತ್ಯ.ಕಾಂ ಹಾಕುತ್ತಿದ್ದೇವೆ. ಸ್ವಂತ ಜಾಗ ಬೇಕು. ಅಂದರೆ ಯಾರಾದರೂ ಜಾಗ ನೀಡಲು ಪ್ರಾಯೋಜಿಸಲು ಮುಂದೆ ಬಂದರೆ ಮತ್ತಷ್ಟು ಸಂತೋಷ. ಇದು ಆತ್ಮಾಬಿಮಾನರಹಿತವಾದ ಯಾಚನೆಯಲ್ಲ. ವಿನಂತಿ.ಕನ್ನಡ ಪುಟಗಳನ್ನು ಕುರಿತಂತೆ ಇನ್ನೊಂದುಮುಖ್ಯ ಸಂಗತಿ. ಪುಟಗಳ ವಿನ್ಯಾಸವನ್ನು ಎಲ್ಲ ಚಾರಣಿಕೆಗಳಲ್ಲಿ (ಬ್ರೌಸರ್) ಪರೀಕ್ಷಿಸಿದ್ದೇವೆ. ಡೈನಾಮಿಕ್ ಫಾಂಟ್ಸ್‌ಗಳನ್ನು ಸಪೋರ್ಟ್ ಮಾಡುವ ನೆಟ್‌ಸ್ಕೇಪ್೪.೭ ಸಹ ಸೇರಿದಂತೆ ನೆಟ್‌ಸ್ಕೇಪ್ ೪ ರ ಮೇಲ್ಪಟ್ಟಿನ ಚಾರಣಿಕೆಗಳಲ್ಲಿ ಯಾವುದೇತೆರನಾದ ದೋಷಗಳು ಕಾಣಲಿಲ್ಲ. ಆದರೆ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೪ ರ ಮೇಲ್ಪಟ್ಟಿನ ಚಾರಣಿಕೆಗಳಲ್ಲಿ ಕನ್ನಡದ ಸಾಲುಗಳಲ್ಲಿನ ಪದಗಳ ಒಡೆದು ಮುಂದಿನ ಸಾಲಿಗೆ ಹೋಗುತ್ತದೆ. ಇದು ‘ಜಸ್ಟಿಫಿಕೇಶನ್’ ಬಳಸಿರುವುದರಿಂದ ಹೀಗೆ ಆಗುತ್ತದೆ. ನಾವು ಅಲೈನ್ ಮಾಡದೆ ಹೋದರೆ ಸಾಲುಗಳು ತೀರಾ ಕೆಟ್ಟದಾಗಿ ಕಾಣಿಸುತ್ತದೆ. ಹೀಗಾಗಿ ಕನ್ನಡ ಪುಟಗಳಿಗೆ ನೆಟ್‌ಸ್ಕೇಪ್ ಬಳಸಿ ಎಂದು ಸೂಚನೆಯನ್ನು ಕೊಟ್ಟಿದ್ದೇವೆ. ಉಳಿದಂತೆ ಆಪರ-೫ , ಮೊಜಿಲ್ಲ ಮುಂತಾದ ಚಾರಣಿಕೆಗಳಲ್ಲಿ ಅಂತಹ ದೋಷಗಳು ಕಾಣಿಸಿಲ್ಲ. ನಿಯೋಪ್ಲಾನಟ್ – ಎಕ್ಸ್‌ಪ್ಲೋರರ್‌ನ ಅವಳಿಯೇ ಅದುದರಿಂದ ಅಲ್ಲೂ ಸಾಲುಗಳು ಒಡೆದು ಕಾಣಿಸುತ್ತವೆ. ಯಾವುದೇ ನೆರವಿಲ್ಲದೆ ಹೋದರೆ ಈ ಉತ್ಸಾಹ ಹೀಗೆ ಮುದುವರೆಯುತ್ತದೋ ಇಲ್ಲವೋ ಕಾಲವೆ ನಿರ್ಣಯಿಸುತ್ತದೆ ಎಂಬ ನಿರ್ಲಿಪ್ತತೆಯಿಂದ ಮುಂದಕ್ಕೆ ಹೋಗುತ್ತಿದ್ದೇವೆ.
ಕನ್ನಡಸಾಹಿತ್ಯ.ಕಾಂ ಪರವಾಗಿ-
ಶೇಖರ್‌ಪೂರ್ಣ
ಎಂ.ಆರ್.ರಕ್ಷಿತ್
‘ಅಹಂಕಾರ’ ವೆಂದರೆ ಬರಿಯ ಇಂಗ್ಲಿಷ್ ಮಾತ್ರ ಶ್ರೇಷ್ಠ ಎಂಬ ಪ್ರತಿಪಾದಕತೆಯಿಂದ ಉಳಿದದ್ದೆಲ್ಲವನ್ನು ತುಚ್ಛವಾಗಿ ಪರಿಗಣಿಸಿಬಿಡುವುದು ಎಂಬ ಅರ್ಥದಲ್ಲಿ ಪರಿಗಣಿಸಬೇಕು. ಇಂಗ್ಲಿಷ್ ಭಾಷೆಯಲ್ಲಿನದೆಲ್ಲವನ್ನು ತಿರಸ್ಕರಿಸುವುದು ಎಂದು ಅರ್ಥವಲ್ಲ.
ನಾವು ಬಳಸಿರುವ ‘ಫ್ರೀ’ ವೇರ್‌ನ ಪಟ್ಟಿ
* ಬರಹ-೪
* ಎಚ್‌ಟಿಎಮ್‌ಎಲ್ ಕಿಟ್
* ನೆಟ್‌ಸ್ಕೇಪ್ ಕಂಪೋಸರ್
* ಟಾಪ್‌ಸ್ಟೈಲ್ ಲೈಟ್
* ಡಬ್ಲುಎಸ್_ಟಿಪಿ ಲೈಟ್
*****