ಇಪ್ಪತ್ತೈದು ವರ್ಷಗಳ ಹಿಂದೆ…
ಅವನೊಬ್ಬ ಬ್ರಾಹ್ಮಣ ಯುವಕ- ಹತ್ತೊಂಬತ್ತು ವರ್ಷ.
ಚಿಕ್ಕಂದಿನಿಂದಲೂ ಶಾಲೆಯಲ್ಲಿ ಕಲಿಯುವ ಆಸಕ್ತಿ ಇರದೆ ಶಾಲೆಗೆ ಚಕ್ಕರ್ ಹೊಡೆಯುತ್ತಾ ಅಲೆಮಾರಿಯಾಗಿದ್ದ. ತಂದೆ ತಾಯಿಗೆ ತಿಳಿಯಿತು. ಬುದ್ಧಿ ಹೇಳಿದರು, ಬೈದರು, ಹೊಡೆದರು, ಬಂಧುವರ್ಗದ ಹಿರಿಯಿರಿಂದಲೂ ಹೇಳಿಸಿದರು. ಹುಡುಗನಿಗೆ ಶಾಲೆಯ ಪಠ್ಯಕ್ಕೆ ಸೀಮಿತವಾಗುವ ಆಸಕ್ತಿ ಉಳಿಯದೆ ಅವನ ಪಾಡಿಗೆ ಅವನೇ ಒಂದು ಲೋಕವನ್ನು ನಿರ್ಮಿಸಿಕೊಂಡ. ಹುಡುಗ ಬೆಳೆಯಲಾರಂಭಿಸಿದಂತೆ ಊಟಕ್ಕೆ ಮುಂಚೆ “ನೀನು ತಿನ್ನುತ್ತಿರುವುದು ಅನ್ನವಲ್ಲ, ನಮ್ಮ ರಕ್ತ..” ಎಂಬ ಶೈಲಿಯ ಬಯ್ಗಳ. ಹುಡುಗ ಬೆಳೆಯಲಾರಂಭಿಸಿದಂತೆ ಜೀವನ ನಿರ್ವಹಣೆಗೆ ಬೇಕಾದ ಸಂಪಾದನೆ ಅನಿವಾರ್ಯವಾಯಿತು. ಆರನೆ ತರಗತಿಗೆ ಶಾಲೆ ಬಿಟ್ಟವನಿಗೆ ಕೆಲಸ ದೊರೆಯುತ್ತದೆಯೆ? ಹೊಟೆಲ್ಲು ಸೇರಿ ಎಂಜಲು ತಟ್ಟೆ ಲೋಟ ತೊಳೆಯತೊಡಗಿದ. ತಿಂಗಳಿಗೆ ನಲವತ್ತೈದು ರೂಗಳ ಸಂಬಳ.
ತಂದೆ ತಾಯಿಯರು ಮಗನ ಈ ಕೆಲಸದಿಂದ ಬಂಧುವರ್ಗದವರ ನಡುವೆ ತಲೆ ಎತ್ತಿ ನಿಲ್ಲಲಾಗದೆ ಮಗನನ್ನು ದೂರವಿರಿಸಿದರು . ಬ್ರಾಹ್ಮಣ ಮಧ್ಯಮ ವರ್ಗದ ಕುಟುಂಬದಲ್ಲಿ ಎಂಜಲು ಸೃಷ್ಟಿಸಿದ ತಲ್ಲಣವನ್ನು ಅರಗಿಸಿಕೊಳ್ಳುವುದು ಅತ್ಯಂತ ಕಠಿಣವಾದ ಕೆಲಸ. ಅಂತೆಯೇ ಬಂಧುವರ್ಗದವರೂ ಥೂ ಛಿ ಎನ್ನತೊಡಗಿದಾಗ ಹುಡುಗ ಮತ್ತಷ್ಟು ಆಂತರಿಕವಾಗಿ ಕುಸಿಯತೊಡಗಿದ. ಎಂಜಲಿಗೂ ಬಾಹ್ಮಣರಿಗೂ ಆಗದೆ ಎಂಜಲು ಕೆಲಸದಿಂದ ಆಗುತ್ತಿದ್ದ ಕಿರಿಕಿರಿ ಮರ್ಯಾದೆಭಂಗದಿಂದ ಕುಟುಂಬವರ್ಗದವರನ್ನು ಪಾರುಮಾಡಬೇಕಾದ ಹೊಣೆಯರಿತ ಹುಡುಗ ಕೆಲಸ ಬದಲಿಸ ಬೇಕಾಯಿತು.
ವರ್ಟಿಗೋದಿಂದ ನರಳುತ್ತಿದ್ದ ಅವನು ನಿರ್ಮಾಣ ಹಂತದಲ್ಲಿದ್ದ ಎತ್ತರೆತ್ತರದ ಕಟ್ಟಡಗಳನ್ನು ಏರಿ ತಾರಸಿಗೆಲ್ಲ ತಾರ್ ಸಲ್ಯೂಶನ್ ಬಳಿದು ಕೂಲಿ ಮಾಡತೊಡಗಿದ. ವರ್ಟಿಗೊ ಹೆಚ್ಚಿದಂತೆ ಏರಲಾಗದೆ, ಗೋಡೆಗಳಂಚಿನ ಮೇಲಿಂದ ಕೆಳಗಿನ ಪ್ರಪಾತವನ್ನು ನೋಡುತ್ತ ನಡೆಯಲಾಗದೆ ಕೆಳಗೆ ಇಟ್ಟಿಗೆ ಕಲ್ಲುಗಳನ್ನು ಹೊತ್ತು ದಿನವೊಂದಕ್ಕೆ ನಾಲ್ಕು ರೂಗಳನ್ನು ಸಂಪಾದಿಸಲು ತೊಡಗಿದ. ಏನೇ ಆದರು ಕುಟುಂಬವರ್ಗದವರು ತಂದೆತಾಯಿಯರು ಅವನನ್ನು ನಂಬಲೇ ಇಲ್ಲ. ” ನೀನು ತಿನ್ನುತ್ತಿರುವುದು ಅನ್ನವಲ್ಲ, ನಮ್ಮ ರಕ್ತ..” ಎಂಬ ಬಯ್ಗಳ ನಿಲ್ಲಲೇ ಇಲ್ಲ. ಹುಡುಗ ಆಂತರಂಗಿಕವಾಗಿ ಕುಸಿಯುತ್ತಾಹೋಗುವುದನ್ನು ತಡೆಯಲು ಅಶಕ್ತನಾದರೂ ಹೋರಾಡುತ್ತಿದ್ದ. ಈ ಹೋರಾಟದಲ್ಲಿ ಜೊತೆಗೂಡಿದವರು ಒಂದಷ್ಟು ಮದಿಯಾದರೆ- ನೆಲೆಯಾಗಿದ್ದು ಬೇರೆಯದೇ ಮನೋಭೂಮಿಕೆ.
ಮನೋಭೂಮಿಕೆ…
ಮೆಜೆಸ್ಟಿಕ್‌ನ ಸೆಂಟ್ರಲ್ ಕಾಲೇಜಿನ ಕ್ಯಾಂಟೀನಿನಲ್ಲಿ ಬೀಡಿ ಸಿಗರೇಟು ಹೊಗೆಯ ಮಧ್ಯೆ ಸಣ್ಣ ಸಣ್ಣ ಟೇಬಲ್ಲುಗಳ ಮೇಲೆ ಬೈ ಟು ಕಾಫಿ ಟೀ ಕಪ್ಪುಗಳ ಬಸಿ. ಮೇಜಿನ ಸುತ್ತಲಿನ ಕುರ್ಚಿಗಳ ಮೇಲೆ ಒಂದ್ ಸಣ್ಣ ಗುಂಪು. ಗುಂಪಿನ ಮಧ್ಯೆ ಅವನು ಕೂತಿರುತ್ತಿದ್ದ. ಬೆಳಿಗ್ಗೆ ಯಾವುದಾದರೊಂದು ಕೆಲಸ. ವಾರದ ಕೊನೆಯಲ್ಲಿ ಬಂದ ಬಟವಾಡೆಯಲ್ಲಿ ಮನೆಗೆ ಒಂದಷ್ಟು ಕೊಟ್ಟು ತಾನು ಒಂದಷ್ಟು ಖರ್ಚು ಮಾಡುತ್ತಿದ್ದ. ಸ್ನಾತಕೋತ್ತರ ಪದವಿಗೆ ಅಭ್ಯಾಸ ನಡೆಸುತ್ತಿದ್ದ ಸ್ನೇಹಿತರ ನಡುವೆ ಅವನು ಕುಳಿತಿದ್ದಾಗಲೆಲ್ಲ ಬದುಕು, ಬದುಕಿನ ಗುರಿ, ಹೀಗೆಯೇ ಬದುಕಬೇಕೆಂಬ ಹಠ ಎಲ್ಲವನ್ನು ನಿರ್ಮಿಸುತ್ತಿದ್ದುದು ಕನ್ನಡಸಾಹಿತ್ಯ. ಸ್ನೇಹಿತರ ಮಾತಾಗಲಿ – ಹರಟೆಯೇ ಆಗಿರಲಿ, ಅದರಲ್ಲಿ ಒಂದು ಉತ್ಸಾಹದ ಪರಿಸರ ನಿರ್ಮಿಸುತ್ತಿದ್ದುದು ಕನ್ನಡ ಸಾಹಿತ್ಯ. ಅದರಲ್ಲು ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್, ಎಸ್.ಎಲ್.ಭೈರಪ್ಪ, ಗೋಪಾಲಕೃಷ್ಣ ಅಡಿಗ- ಒಬ್ಬರೆ ಇಬ್ಬರೆ? ಪಂಡಿತರ ವರ್ಗೀಕರಣವನ್ನೆಲ್ಲ ಮೀರಿ ಓದು ಸಾಗುತ್ತಿತ್ತು. ಓದಿದ್ದನ್ನೆಲ್ಲ ಹಂಚಿಕೊಳ್ಳುವ , ಮಾತಿಗೆ- ಹರಟೆಗೆ ವಸ್ತುವಾಗಿಟ್ಟುಬಿಡಬಲ್ಲ, ತಮ್ಮ ತಮ್ಮ ಅಭಿಪ್ರಾಯಗಳನ್ನೆಲ್ಲ ಯಾರಿಗೂ ಕಡಿಮೆ ಇಲ್ಲದಂತೆ ನಿರೂಪಿಸಿ ಬಿಡುವ ಹಠ, ಸಿಗರೇಟು, ಬೀಡಿ…
ಅವನ ಆಂತರಂಗಿಕ ಕುಸಿತವನ್ನು ತಡೆ ಹಿಡಿದು ಬದುಕಿನಲ್ಲಿ ಉತ್ಸಾಹ ತುಂಬಿ, ಸಾಮಾನ್ಯರ ಬಗೆಗೆ ಯಾವುದೇ ರೀತಿಯ ಸಿನಿಕತನ ಮೂಡದಂತೆ ಮಾಡಿ ಬಿಡುವ ಶಕ್ತಿ ಅಂದಿನ ಕನ್ನಡ ಸಾಹಿತ್ಯಕ್ಕೆ ಇತ್ತು ಎಂಬುದನ್ನು ಇಂದೂ ಸಹ ಕೃತಜ್ಞತೆಯಿಂದ ನೆನೆಯುತ್ತಾನೆ.
ಮನೊಭೂಮಿಕೆಯಿಂದ ಮುಂದುವರೆದದ್ದು…
ಗೊಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ಪಿ.ಲಂಕೇಶ್ ಹಾಗು ಓ.ಎಲ್‌ನಾಗಭೂಷಣಸ್ವಾಮಿಯವರ ಬರವಣಿಗೆ/ಕೃತಿಗಳು ಈ ಬಾರಿಯ ಕನ್ನಡಸಾಹಿತ್ಯ.ಕಾಂ ಒಳಗೊಂಡಿದೆ.
ನಮ್ಮ ಅನಂತಮೂರ್ತಿಯವರಂತೆಯೇ – ಚಂದ್ರಶೇಖರ ಕಂಬಾರ ಹಾಗು ಓಎಲ್ ನಾಗಭೂಷಣ ಸ್ವಾಮಿಯವರು ಕನ್ನಡಸಾಹಿತ್ಯ.ಕಾಂ ಗೆ ‘ಎಕ್ಸ್‌ಕ್ಲೂಸಿವ್ ’ ಅನುಮತಿ ನೀಡಿದ್ದಾರೆ. ಗೋಪಾಲಕೃಷ್ಣ ಅಡಿಗ ಹಾಗು ಪಿ.ಲಂಕೇಶ್‌ರವರ ಕೃತಿಗಳನ್ನು ಕ್ರಮವಾಗಿ ಶ್ರೀಮತಿ ಲಲಿತಾ ಅಡಿಗ ಹಾಗು ಗೌರಿ ಲಂಕೇಶ್‌ರವರ (ಲಂಕೇಃಶ್ ಪತ್ರಿಕೆಯ ಸಂಪಾದಕಿ) ಅನುಮತಿ ಪಡೆದು ಪ್ರಕಟಿಸಲಾಗಿದೆ. ಅಡಿಗರ ಕವನಗಳ ಪ್ರಕಟಣೆಗೆ ಕನ್ನಡಸಾಹಿತ್ಯಡಾ.ಕಾಂ ನನ್ನು ಚಿಕಾಗೋದಲ್ಲಿರುವ ಅಡಿಗರ ಅಳಿಯ ಶ್ರೀ ಕೃಷ್ಣರಾಜುರವರಿಗೆ ಸೂಚಿಸಿದ ಯು. ಆರ್.ಅನಂತಮೂರ್ತಿಯವರಿಗೆ, ಅಡಿಗರ
ಕಾವ್ಯಗಳನ್ನು ಪ್ರಕಟಿಸಲು ನೆರವಾದ ಕೃಷ್ಣರಾಜುರವರಿಗೆ, ಶ್ರೀಮತಿ ಲಲಿತಾ ಅಡಿಗ, ಜಯಂತ ಅಡಿಗರವರಿಗೆ, ಲಂಕೇಶ್‌ರವರ ಕೃತಿ ಪ್ರಕಟಿಸಲು ಅನುಮತಿ ನೀಡಿದ ಗೌರಿ ಲಂಕೇಶ್‌ರವರಿಗೆ ಕನ್ನಡಸಾಹಿತ್ಯ.ಕಾಂ ಪರವಾಗಿ ಕೃತಜ್ಞತೆಗಳು. ಇದೇ ರೀತಿ ನಮ್ಮ ಮೇಲೆ ಭರವಸೆ ಇಟ್ಟ ಶ್ರೀ ಚಂದ್ರಶೇಖರ ಕಂಬಾರ, ಓ ಎಲ್ . ನಾಗಭೂಷಣಸ್ವಾಮಿಯವರಿಗೂ ನಮ್ಮ ಕೃತಜ್ಞತೆಗಳು.
ಕನ್ನಡ ಸಾಹಿತ್ಯ ವಲಯದಲ್ಲಿ ಅನೇಕ ಭಿನ್ನಾಭಿಪ್ರಾಯಗಳು ಕಾಲಾನುಕಾಲಕ್ಕೆ ತಲೆದೋರಿವೆ. ಕನ್ನಡಸಾಹಿತ್ಯ.ಕಾಂ ಗೆ ಯಾರೊಬ್ಬರೂ ಅಸ್ಪೃಶ್ಯರಲ್ಲ. ಅಂತರ್ಜಾಲದಲ್ಲಿ ಕನ್ನಡ ಭಾಷೆ ಸಂಬಂಧಿತ ವಿಷಯ, ಅತ್ಯುತ್ತಮ ಸಾಹಿತ್ಯಕ್ಕಷ್ಟೆ ಪ್ರಾಧಾನ್ಯತೆ. ಹಾಗೆಂದು ಗಂಭೀರವಾದ ಆರೋಗ್ಯಕರವಾದ ಚರ್ಚೆ, ವಿಮರ್ಶೆಯನ್ನು ಕನ್ನಡ ಸಾಹಿತ್ಯ.ಕಾಂ ಪ್ರೋತ್ಸಾಹಿಸುದಿಲ್ಲ ಎಂದು ಅರ್ಥವಲ್ಲ. ವೈಯಕ್ತಿಕ ಟೀಕೆಗಳು ಗೌಣವಾಗಿ ಯಾವುದೆ ಕೃತಿ-ಯಾರದೆ ನಿಲುವುಗಳನ್ನು ಯಾರು ಬೇಕಾದರೂ ಟೀಕಿಸಬಹುದು/ವಿಮರ್ಶಿಸಬಹುದು. ಅಂತಹ ಟೀಕೆ ವಿಮರ್ಶೆಗಳಲ್ಲಿ ಸಿನಿಕತನವಿರದಿರಲಿ, ವ್ಯಕ್ತಿ ನಿಂದೆ ಗೌಣವಾಗಲಿ ಎಂದಷ್ಟೆ ಬಯಸುವುದು.
ಗೋಪಾಲಕೃಷ್ಣ ಅಡಿಗರು ಒಂದು ಪರಂಪರೆಯ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಹಾಗು ಕವಿ. ಅವರ ಕವನಗಳು ಕನ್ನಡಸಾಹಿತ್ಯ.ಕಾಂನಲ್ಲಿ ಪ್ರಕಟಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಂತೆಯೇ ಪಿ.ಲಂಕೇಶ್‌ರವರ ‘ಅಕ್ಕ’ ಕಾದಂಬರಿಯನ್ನು ಪ್ರಕಟಿಸುತ್ತಿದೆ. ಕನ್ನಡ ಸಾಹಿತ್ಯ ವಲಯದಲ್ಲಿ ಅನೇಕ
ಗುಂಪು-ಅಭಿಪ್ರಾಯ, ಭಿನ್ನಾಭಿಪ್ರಾಯಗಳು ಇರುವುದು ಎಷ್ಟು ನಿಜವೋ -ಲಂಕೇಶ್ ಸಹ ಕನ್ನಡ ಸಾಹಿತ್ಯದ ವಲಯದಲ್ಲಿ ಪ್ರಮುಖ ಲೇಖಕರಲ್ಲಿ ಒಬ್ಬರು ಎಂಬುದು ಸಹ ಅಷ್ಟೇ ನಿಜ. ಬಹುಮುಖಿ ವ್ಯಕ್ತಿತ್ವದ ಲಂಕೇಶ್ ಕನ್ನಡ ಪತ್ರಿಕೋದ್ಯಮದಲ್ಲಿ ಒಂದು ಹೊಸ ದಿಕ್ಸೂಚಿಯನ್ನು ನೀಡಿ ಯಶಸ್ವಿಯಾದವರು ಅಂತೆಯೇ ಸಿನಿಮಾ ನಿರ್ದೇಶಕ, ನಟ, ನಾಟಕಕಾರ, ಕವಿ…
ಅಭಿನಂದನೆಗಳು
ಅಂತರ್ಜಾಲದಲ್ಲಿ ಕನ್ನಡ ಬಳಸುತ್ತಿರುವ, ಕನ್ನಡ ಮುದ್ರಣವನ್ನು ಜೀವನೋಪಾಯಕ್ಕೆ ಆಧರಿಸಿರುವ, ಕನ್ನಡ ಪತ್ರಿಕೆಗಳಿಗೆ ಸಂಬಂಧಿಸಿರುವವರಿಗೆಲ್ಲ ಬರಹ ೪ ನ್ನು ಶೇಷಾಧ್ರಿವಾಸುರವರು ಅತ್ಯಂತ ಉಪಯುಕ್ತವೆನ್ನಿಸುವಂತೆ ರೂಪಿಸಿದ್ದಾರೆ. ಡೌನ್‌ಲೋಡ್ ಮಾಡಿಕೊಳ್ಳಲು ಆಗಸ್ಟ್ ೧೯ ರಿಂದ ಇದು ಲಭ್ಯವಿದೆ.
ಪುಟಗಳಿಗೆ, ಸಾಲುಗಳಿಗೆ, ಪ್ಯಾರಾಗಳಿಗೆ ಚೌಕವನ್ನು ಕಟ್ಟ ಬಹುದಲ್ಲದೆ, ಬೇಕೆನ್ನಿಸಿದ ಸಾಲುಗಳಿಗೆ ಅಥವಾ ಎಲ್ಲ ಸಾಲುಗಳಿಗೆ ಅಡಿಗೆರೆಯನ್ನು ಅಕ್ಷರಗಳಿಗೆ ಮೆತ್ತದಂತೆ ಎಳೆಯಬಹುದಾಗಿದೆ. ಮುದ್ರಕರಿಗೆ ಇದು ಪುಟ ವಿನ್ಯಾಸ ಮಾಡಲು ಬಹಳ ಅನುಕೂಲ. ಕರ್ನಾಟಕ ಸರ್ಕಾರ ಅನುಮೋದಿಸಿರುವ ಫಾಂಟುಗಳ ವಿನ್ಯಾಸವನ್ನು ಶೇಷಾದ್ರಿವಸುರವರು ಅಳವಡಿಸಿರುವುದಲ್ಲದೆ, ಕನ್ನಡ ಗಣಕ ಪರಿಷತ್ತಿನ ‘ಕಲಿತ’ ಕೆಜಿಪಿ_ಕೀಬೋರ್ಡ್ ಸಹ ಆಳವಡಿಸಿದ್ದಾರೆ. ಜೊತೆಗೆ ಹೊಸ ಫಾಂಟುಗಳನ್ನು ಸೇರಿಸಿದ್ದಾರೆ. ಕನ್ನಡ ಭಾಷಾಭಿಮಾನದಿಂದ ಅವರು ಮಾಡುತ್ತಿರುವ ಈ ಕೆಲಸವನ್ನು ಕನ್ನಡಸಾಹಿತ್ಯ.ಕಾಂ ಅಭಿನಂದಿಸುತ್ತದೆಯಲ್ಲದೆ, ಮುಂದಿನ ಸಂಚಿಕೆ ಬರಹ ೪ ನ್ನು ಬಳಸಿ ರೂಪಿಸುತ್ತಿದ್ದೇವೆ. ಕನ್ನಡಸಾಹಿತ್ಯ.ಕಾಂ ಗೆ ಭೇಟಿ ನೀಡುವ ಚಾರಣಿಗರೆಲ್ಲ ಬರಹ ೪ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗಿ ಕೋರುತ್ತಿದ್ದೇವೆ.
*****