ಆಗ ಎಲ್ಲ ಹಂತಗಳಲ್ಲೂ ಆಡಳಿತ ಭಾಷೆ ಕನ್ನಡವೇ ಆಗಿರತಕ್ಕದೆಂದು ವಾದಿಸಬೇಕಾದ, ಅಧಿಕಾರಿಗಳನ್ನು ಒಲಿಸಬೇಕಾದ ಅಗತ್ಯವೇ ಬೀಳುವುದಿಲ್ಲ.
೩. ಮುಖ್ಯವಾಗಿ ನಾವು ಸಾಧಿಸಬೇಕಾದ ಮೂರನೆಯದು ಇದು: ಮಕ್ಕಳಲ್ಲಿ ಯಾವ ಭೇದವನ್ನೂ ಮಾಡತಕ್ಕದ್ದಲ್ಲ. ಎಂದರೆ ಎಲ್ಲ ಪ್ರೈಮರಿ ಶಾಲೆಗಳೂ ಒಂದೇ ಮಟ್ಟದವು ಆಗಿರಬೇಕು. ಖಾಸಗೀ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ, ಕಂಪ್ಯೂಟರ್ ಶಿಕ್ಷಣ ಇತ್ಯಾದಿಯಾದರೆ, ಬೋರ್ಡು ಸೀಮೇಸುಣ್ಣಕ್ಕೂ ಗತಿಯಿರದ ಸರ್ಕಾರೀ ಶಾಲೆಗಳು; ಭಾಗ್ಯವಂತರ ಮಕ್ಕಳೆಲ್ಲ ಖಾಸಗೀ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದುವುದು, ಉಳಿದವರು ಕನ್ನಡಮಾಧ್ಯಮದಲ್ಲೇ ಬೇರೆ ಗತಿಯಿಲ್ಲದೆ ಓದಿ ಆಜನ್ಮ ಹಿಂದೆ ಬೀಳುವುದು- ಹೀಗಿರಲೇ ಕೂಡದು. ಮಕ್ಕಳಲ್ಲಿ ಭೇದಮಾಡುವುದು ಅಪರಾಧವೆಂದು ನಾವು ತಿಳಿಯಬೇಕು.
ಸದ್ಯ ಇದು ಲೇಖಕನೊಬ್ಬನ ಹಗಲುಗನಸಿನಂತೆ ಕಾಣಬಹುದು. ಆದರೆ ಒಂದಲ್ಲ ಒಂದು ದಿನ ನಮ್ಮ ಸಮಾನತೆಯ ಹಸಿವಿನಿಂದಾಗಿ ಸಮಾನ ಶಾಲೆಗಳು ನಿಜವಾಗಬೇಕು. ಆಗದಿದ್ದಲ್ಲಿ ಜಾಗತೀಕರಣದ ಎಲ್ಲ ಲಾಭಗಳನ್ನೂ ಪಡೆಯುವ ಒಂದು ವರ್ಗ, ಅದರ ಕಣ್ಣಿಗು ಸಹ ಬೀಳದಂತೆ ಇರುವ ಕೀಳುಭಾವನೆಯಿಂದ ವಿಷಣ್ಣರಾದ ಜನಕೋಟಿ- ಇಂಥ ಒಂದು ನರಕವಾದೀತು ನಮ್ಮ ಇಂಡಿಯಾ.
ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಎಲ್ಲ ಜಾತೀಯ ವಿಷಮತೆಗಳ ನಡುವೆಯೂ ನಾವೆಲ್ಲರೂ ಹೆಚ್ಚುಪಾಲು ಒಂದೇ ಮಾದರಿಯ ಶಾಲೆಗಳಲ್ಲಿ ಓದಿ ಬೆಳೆದವರಾಗಿರುತ್ತಿದ್ದೆವು. ಆದ್ದರಿಂದ ಹಿಂದಿನವರಿಗೆ ಗೊತ್ತಿರುವಷ್ಟು ಕನ್ನಡ ಈಗಿನವರಿಗೆ ಗೊತ್ತಿರುವುದಿಲ್ಲ. ನಗರವಾಸಿಗಳಾದ ನಮ್ಮೆಲ್ಲರ ಮಕ್ಕಳೂ ಅಡುಗೆಮನೆಯಲ್ಲಿ ಬಳಸಬಹುದಾದಷ್ಟು ಮಾತ್ರ ಕಲಿತಿರುತ್ತಾರೆ. ಅದೂ ಇಂಗ್ಲಿಷ್ ಬಾರದ ಅಜ್ಜಿಯೋ ಅಜ್ಜನೋ ಮನೆಯಲ್ಲಿದ್ದರೆ ಮಾತ್ರ. ನಾವೊಂದು ನಾಗರಿಕ ಸಮುದಾಯವಾಗಿ ಬೆಳೆಯುವ ಕ್ರಮ ಇದಲ್ಲ. ಲಂಡನ್ನಿಗೆ ಶೇಕ್ಸ್‌ಪಿಯರಿನ ಸ್ಮರಣೆ, ಡಾಕ್ಟರ್ ಜಾನ್ಸನ್ನಿನ ಸ್ಮರಣೆ ಇವತ್ತಿಗೂ ಉಳಿದಿದೆ.
ಬೆಂಗಳೂರಿನ ಆಧುನಿಕ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಡಿವಿಜಿ, ಕುವೆಂಪು, ಬೇಂದ್ರೆ, ಕುಮಾರವ್ಯಾಸ, ಕಾರಂತ ಯಾರೂ ಗೊತ್ತಿರುವುದಿಲ್ಲ.
ಹಿಂದೆ ಜಾತಿ ತರುತ್ತಿದ್ದ ಅಸಮಾನತೆಗಿಂತ ಹೆಚ್ಚಿನ ಅಸಮಾನತೆಯನ್ನು ಕೆಲವರ ಸ್ವತ್ತಾದ ಇಂಗ್ಲಿಷ್ ಕಲಿಕೆ ತರುತ್ತದೆ. ಬ್ರಾಹ್ಮಣರ ಮಂತ್ರeನದಲ್ಲಿ ಇದೆಯೆಂದು ತಿಳಿದ ಶಕ್ತಿ ನಂಬಿದರೆ ಉಂಟು; ನಂಬದಿದ್ದರೆ ಇಲ್ಲ. ಆದರೆ, ಇಂಗ್ಲಿಷಿನ ತಂತ್ರeನದಲ್ಲಿ ಇರುವ ಶಕ್ತಿ ಕೇವಲ ನಂಬಿಕೆಯ ಮೇಲೆ ನಿಂತದ್ದಲ್ಲ.
ಈ ಮೂರು ಕಾರ್‍ಯಕ್ರಮಗಳ ಹಿಂದಿರುವ ಗ್ರಹಿಕೆ:
ಭಾರತದ ಬಹುತೇಕ ರಾಜ್ಯಗಳು, ಕರ್ನಾಟಕವಂತೂ ಮುಖ್ಯವಾಗಿ, ಬಹು ಭಾಷಾ ವಲಯಗಳು. ನಾವು ಯೂರೋಪಿನಂತೆ ಒಂದೇ ಭಾಷೆ, ಒಂದೇ ಮತ, ಒಂದೇ ರೇಸಿನ ರಾಷ್ಟ್ರವೂ ಅಲ್ಲ ; ರಾಜ್ಯಗಳೂ ಅಲ್ಲ. ಆದ್ದರಿಂದ ಯುರೋಪಿನಲ್ಲಿರುವಂತೆ ನಮ್ಮಲ್ಲಿ ಖಚಿತವಾದ ಮಾತೃಭಾಷೆಯೆಂಬುದಿಲ್ಲ. ಅದರ ಬದಲಾಗಿ ನಮ್ಮಲ್ಲಿ ಹಲವರಿಗೆ ಮನೆಮಾತೊಂದು ಇರುತ್ತದೆ, ದೇಶದ ಮಾತೊಂದು ಇರುತ್ತದೆ, ದೇಶದ ಆಚೆಗಿನ ಸಂಪರ್ಕಕ್ಕಾಗಿ ಇನ್ನೊಂದು ಮಾತು ಇರುತ್ತದೆ. ಮಾತೃಭಾಷೆಯೆಂಬುದು ಞಟಠಿeಛ್ಟಿಠಿಟ್ಞಜ್ಠಛಿ ನ ಅನುವಾದ; ಕನ್ನಡ ರಾಜ್ಯ ಭಾಷೆಯಾಗದಂತೆ, ಶಿಕ್ಷಣ ಮಾಧ್ಯಮವಾಗದಂತೆ ತಡೆಯಲು ಇಂಗ್ಲಿಷ್ ಭಾಷೆಯ ವ್ಯಾಮೋಹಿಗಳು ಬಳಸುವ ಅಸ್ತ್ರ ಈ ಮದರ್ ಟಂಗ್ ಕಲ್ಪನೆ.
ಕನ್ನಡದ ಬರಹಗಾರರಲ್ಲಿ ಮುಖ್ಯರನೇಕರು ಮನೆಯಲ್ಲಿ ತಮಿಳನ್ನೋ, ಮರಾಠಿಯನ್ನೋ, ತುಳುವನ್ನೋ, ಕೊಂಕಣಿಯನ್ನೋ, ತೆಲುಗನ್ನೋ ಆಡುವವರು. ಮಕ್ಕಳಿಗೆ ತಮ್ಮ ಜಾತಿ ಸಮುದಾಯದಲ್ಲೇ ಮದುವೆ ಮಾಡಲೆಂದೋ, ಸಂಬಂಧಿಗಳ ಜೊತೆಗಿನ ಆಪ್ತತೆಗೆಂದೋ ಮನೆಮಾತು ಎಲ್ಲರಿಗೂ ಮುಖ್ಯವಾಗಿ ಉಳಿದಿರುತ್ತದೆ. ನಾವಿದನ್ನು ಗೌರವಿಸಬೇಕು. ಹೊರನಾಡಿನಲ್ಲಿರುವ ಕನ್ನಡಿಗರಿಗೂ ಮನೆಮಾತಾಗಿ ಕನ್ನಡ ಮುಖ್ಯವಲ್ಲವೇ?
ಈ ಸಂದರ್ಭದಲ್ಲೇ ನಾನು ಸೇರಿಸಬೇಕಾದ ಒಂದು ಮುಖ್ಯ ಮಾತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣುವ ವಿಶಿಷ್ಟ ಭಾಷಾವಲಯದಿಂದ ಪ್ರೇರಿತವಾದ ಮಾತಿದು. ಇಲ್ಲಿ ಕೊಂಕಣಿಯಿದೆ; ತುಳುವಿದೆ; ಕನ್ನಡವಿದೆ. ಆದರೂ ‘ಕನ್ನಡದೊಳ್ ಭಾವಿಸಿದ’ ಜನಪದ ಇಲ್ಲಿಯದು. ಮನೆಯಲ್ಲಿ ಮರಾಠಿ ಮಾತಾಡುವರೊಬ್ಬರು ತುಳುವಿನಲ್ಲಿ ರಾಮಾಯಣ ರಚಿಸುವುದು ಈ ಜನಪದದಲ್ಲಿ ಸಾಧ್ಯ. ಕನ್ನಡದಲ್ಲಿ ಸೃಷ್ಟಿಯಾದ ಚೋಮ ನಿಜ ಜೀವನದಲ್ಲಿ ಮಾತಾಡುವ ತುಳುವಿಗೆ ಇಲ್ಲಿ ಅನುವಾದಿತನಾಗಿ ಮರುಹುಟ್ಟು ಪಡೆಯುವುದು ಸಾಧ್ಯ. ಕಯ್ಯಾರ ಕಿಞ ಣ್ಣ ರೈ, ಜತ್ತಪ್ಪ ರೈ, ಗೋವಿಂದ ಪೈ, ಮಂದಾರ ಕೇಶವ ಭಟ್ಟರು- ಬಹುಭಾಷಾವಲಯ ಸೃಷ್ಟಿಸಿದ ಕನ್ನಡಿಗರು. ಸಾಂಸ್ಕೃತಿಕವಾಗಿ ಏಕಭಾಷೆಗಳಾಗಿ ಕುಗ್ಗಿ, ಸೊರಗಿ, ಆದರೆ, ರಾಷ್ಟ್ರಗಳೆಂದು ಮೆರೆದಾಡುವ ಪಾಶ್ಚಾತ್ಯ ನಾಗರಿಕತೆಗೆ ಇಲ್ಲಿ ನಿಜವಾದ ಪರ್‍ಯಾಯವಿದೆ.
ಈ ಭಾವನೆಯಿಂದ ಹುಟ್ಟುವ ನನ್ನ ವಿಚಾರವನ್ನು ಮುಂದುವರಿಸಿ ಹೇಳಬೇಕಾದ್ದು ಇದು : ಕಾಸರಗೋಡಿನಲ್ಲಿರುವ ಬಹು ಸಂಖ್ಯಾತರಿಗೆ ತುಳುವೋ, ಕನ್ನಡವೋ ಮನೆ ಮಾತು; ಆದರೆ, ದೇಶದ ಮಾತಂತೂ ಎಲ್ಲರಿಗೂ ಕನ್ನಡವೇ. ಸರ್ಕಾರದ ಕೆಲಸಕ್ಕೆ ಮಾತ್ರ ಅವರು ದೂರದ ತಿರುವನಂತಪುರವನ್ನು ಆಶ್ರಯಿಸಬೇಕು. ಆದರೆ, ಉಳಿದೆಲ್ಲ ಅವರ ಅಗತ್ಯಗಳನ್ನೂ ಪೂರೈಸುವುದು ದಕ್ಷಿಣ ಕನ್ನಡ ಜಿಲ್ಲೆ. (ನಾನು ಹಿಂದಿನ ಶಬ್ದವನ್ನೇ ಅನುಕೂಲಕ್ಕಾಗಿ ಬಳಸುತ್ತಿದ್ದೇನೆ) ಕೇರಳದಲ್ಲಿ ನಾನು ಉಪಕುಲಪತಿಯಾಗಿ ಕೆಲಸ ಮಾಡುತ್ತಿದ್ದಾಗ ಗಮನಿಸಿದ್ದೆ. ಯಾರನ್ನಾದರೂ ದೂರದ ಕಾಸರಗೋಡಿಗೆ ವರ್ಗಮಾಡಿದರೆ, ಅದನ್ನು ಕೇರಳದ ಜನ ಶಿಕ್ಷೆಯೆಂದು ಭಾವಿಸುತ್ತಿದ್ದರು. ಅಂದರೆ ನಿಜದಲ್ಲಿ ಕಾಸರಗೋಡು ಇರುವುದು ಕರ್ನಾಟಕದಲ್ಲೇ. ಆದರೆ, ಸರ್ಕಾರೀ ದಾಖಲೆಯಲ್ಲಿ ಮಾತ್ರ ಅದಿರುವುದು ಕೇರಳದಲ್ಲಿ. ಕಾಸರಗೋಡಿನ ಜನರಿಗೆ ಇದು ಬೇಡ. ಭಾವನಾತ್ಮಕವಾಗಿ ಕೇರಳಕ್ಕೂ ಕಾಸಗೋಡಿನ ಸಂಬಂಧವಿಲ್ಲ. ಇದೊಂದು ಪ್ರಜಾತಂತ್ರದಲ್ಲಿ ಅಸಂಗತವಾದ ವಿಷಯ. ಇದು ಕೊನೆಯಾಗಬೇಕು. ಕೇರಳಕ್ಕೆ ‘ದೂರದ’ ಊರೆನ್ನಿಸುವುದು ಕೇರಳದಲ್ಲಿ ಇರತಕ್ಕದಲ್ಲ. ಕಾಸಗೋಡು ಕರ್ನಾಟಕಕ್ಕೆ ಸೇರಬೇಕು.
ಇದೇ ಎಚ್ಚರದಲ್ಲಿ ನಾವು ನಮಗೇ ಹೇಳಿಕೊಳ್ಳಬೇಕಾದ ಮಾತೊಂದಿದೆ. ಗುಲ್ಬರ್ಗವೋ, ಬೀದರೋ, ಬೆಳಗಾವಿಯೋ ಬೆಂಗಳೂರಿನ ನಮಗೆ ದೂರದ ಊರೆನ್ನಿಸತೊಡಗಿದರೆ, ಅವರಿಗೆ ಬೆಂಗಳೂರು ದೂರವೆನ್ನಿಸತೊಡಗಿದರೆ, ಆಗ, ಅವೂ ‘ಕನ್ನಡದೊಳ್ ಭಾವಿಸಿದ’ ಜನಪದಗಳಾಗಿ ಉಳಿಯುವುದಿಲ್ಲ.
ನಮ್ಮ ದೇಶದ ಭಾಗ್ಯವಂತರಂತೆ ಬಡವರೂ ಕೂಡ ಬೇರೆ ಬೇರೆ ರಾಜ್ಯಗಳಿಗೆ ಅನಿವಾರ್ಯವಾಗಿ ವಿದ್ಯೆಗಾಗಿಯೋ ಉದ್ಯೋಗಕ್ಕಾಗಿಯೋ ಹೋಗಬೇಕಾಗುತ್ತದೆ. ತಮಿಳುನಾಡಿನ ಬಡವರು ಬೆಂಗಳೂರಿಗೆ ಬರುತ್ತಾರೆ; ಬಿಹಾರಿಗಳು ಬಂಗಾಳಕ್ಕೆ ಹೋಗುತ್ತಾರೆ; ಬಿಜಾಪುರ , ಬೀದರಿನ ಬಡವರು ಗೋವಾಕ್ಕೆ ಹೋಗುತ್ತಾರೆ; ಭಾಗ್ಯವಂತರೆಲ್ಲರೂ ಅಮೆರಿಕಕ್ಕೆ ಹೋಗುತ್ತಾರೆ; ಅಥವಾ ಹೋಗುವ ಕನಸು ಕಾಣುತ್ತಾ ಇಲ್ಲಿರುತ್ತಾರೆ. ನಮ್ಮ ಜನರ ಚಲನಶೀಲತೆಯಲ್ಲಿ ಬದುಕುವ ಛಲವಿದೆ. ಭಾಷೆ ಇದಕ್ಕೆ ಅಡ್ಡಬರಬಾರದು. ಆದರೆ, ತಾವು ಬಂದು ನೆಲಸುವ ದೇಶದ ಭಾಷೆಯನ್ನು ಅವರು ಕಲಿತು ಬದುಕಬೇಕು; ಮನೆ ಮಾತನ್ನು ತಮ್ಮ ಸಾಂಸ್ಕೃತಿಕ ಅಗತ್ಯಗಳಿಗಾಗಿ ಉಳಿಸಿಕೊಳ್ಳುವುದು ಸಾಧ್ಯವಿರಬೇಕು. ಭಾರತ ಅಮೇರಿಕಾದಂತೆ ನೆಲಸಿದವರ ಮನೆಮಾತನ್ನು ಕೊಲ್ಲುವ ದೇಶವಾಗಬಾರದು.
ಇದನ್ನು ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲ ಬಡವರೂ ತಾವು ನೆಲಸುವ ರಾಜ್ಯದ ಭಾಷೆಯನ್ನು ಅಗತ್ಯವಾದರೆ ಕಲಿತೇ ಕಲಿಯುತ್ತಾರೆ. ಮೈಸೂರಿನಲ್ಲಿ ಸಣ್ಣ ಅಂಗಡಿಗಳನ್ನು ತೆರೆದು ಬದುಕುವ ಮಲಯಾಳಿಗಳು ಕೆಲವೇ ತಿಂಗಳುಗಳಲ್ಲಿ ಕನ್ನಡ ಕಲಿತುಬಿಡುವುದನ್ನು ನಾನು ನೋಡಿದ್ದೇನೆ. ಕಲಿಯದವರೆಂದರೆ ಇಂಗ್ಲಿಷ್ ಬಲ್ಲ ಭಾಗ್ಯವಂತರು. ಇದೊಂದು ವಿಪರ್ಯಾಸ. ಪ್ರಭುತ್ವದ ಭಾಷೆಯಾದ ಇಂಗ್ಲಿಷ್ ಕಲಿತವರು ಭಾಷಾದರಿದ್ರರಾಗಿರುತ್ತಾರೆ. ಅವರಿಗೆ ಗೊತ್ತಿರುವುದು ಕೊನೆಗೆ ಒಂದೇ ಭಾಷೆ. ಆದರೆ ಅನಕ್ಷರಸ್ಥರು ಬಹು ಭಾಷಾ ಸಂಪನ್ನರಾಗಿರುತ್ತಾರೆ. ಭಾರತವನ್ನು ಭಾಷೆಗಳಲ್ಲಿ ಹೆಣೆದು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವವರೆಂದರೆ ಇವರೇ. ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ನೆಲಸಿರುವ, ಲಕ್ಷಗಳಲ್ಲಿ ತನ್ನ ಸಂಬಳ ಸವಲತ್ತುಗಳನ್ನು ಪಡೆಯುವ ಬಹುರಾಷ್ಟ್ರೀಯ ಕಂಪನಿಯ ಮ್ಯಾನೇಜರೊಬ್ಬರಿಗೆ ಪ್ರಾಯಶಃ ಬರುವುದು ಇಂಗ್ಲಿಷ್ ಮಾತ್ರವಾದರೆ, ಅಕ್ಷರ ಬಾರದ ಬೆಂಗಳೂರಿನ ಬಸ್‌ಸ್ಟಾಂಡ್ ಕೂಲಿಯೊಬ್ಬ ಕನ್ನಡ ತಮಿಳು ತೆಲಗು ಉರ್ದು ಅಲ್ಲದೆ ಇಂಗ್ಲಿಷನ್ನೂ ಅರ್ಥ ಮಾಡಿಕೊಳ್ಳುವಷ್ಟಾದರೂ ಕಲಿತಿದ್ದರೆ ಆಶ್ಚರ್ಯಪಡಬೇಕಾಗಿಲ್ಲ.
ಆದ್ದರಿಂದ ಪ್ರತಿ ಪ್ರಾಂತ್ಯದಲ್ಲೂ ಅಲ್ಲೇ ಹುಟ್ಟಿ ಬೆಳೆದವರಿಗೆ ಹೇಗೋ ಹಾಗೆ, ಉದ್ಯೋಗಕ್ಕಾಗಿ ಅಲ್ಲಿ ನೆಲಸಿರುವವರಿಗೂ ಆ ಪ್ರಾಂತ್ಯದ ಭಾಷೆ ಶಿಕ್ಷಣ ಮಾಧ್ಯಮವಾಗಿಯೂ, ಆಡಳಿತ ಮಾಧ್ಯಮವಾಗಿಯೂ ಕಡ್ಡಾಯವಾಗಬೇಕು. ಯಾರೇ ಆಗಲಿ, ಫ್ರಾನ್ಸಿಗೋ ಪೋರ್ಚುಗಲ್ಲಿಗೋ ಜಪಾನಿಗೋ ಹೋಗಿ ನೆಲಸಲು ಇಚ್ಛಿಸುವುದಾದರೆ ಆಯಾ ದೇಶದ ಭಾಷೆಗಳನ್ನು ಕಲಿತು ಬದುಕುವಂತೆ, ಭಾರತೀಯರೂ ತಾವು ನೆಲಸುವ ಪ್ರಾಂತ್ಯದ ಭಾಷೆಯನ್ನು ಕಲಿತು ಬದುಕಬೇಕು. ಕನ್ನಡಕ್ಕೆ ಬೇಂದ್ರೆ, ಮಾಸ್ತಿ, ಪುತಿನ ಲಭ್ಯವಾದ್ದು ಈ ಪ್ರಕ್ರಿಯೆಯಲ್ಲೇ.
ಶಿಕ್ಷಣ ಮಾಧ್ಯಮದ ಬಗ್ಗೆ ಒಂದು ಮಾತು : ಎಲ್ಲರೂ ಕನ್ನಡದಲ್ಲಿ ವಿಷಯಗಳನ್ನು ಕಲಿಯಬೇಕು : ಹಾಗೆಯೇ ಎಲ್ಲರೂ ಇಂಗ್ಲಿಷನ್ನು ಒಂದು ಸಂಪರ್ಕ ಭಾಷೆಯಾಗಿಯೂ, eನಾರ್ಜನೆಯ ಭಾಷೆಯಾಗಿಯೂ ಕಲಿಯಬೇಕು. ‘ಕನ್ನಡದಲ್ಲಿ ಕಲಿ : ಇಂಗ್ಲಿಷನ್ನು ಕಲಿ’ ಎಂಬುದು ನಮ್ಮ ಸೂತ್ರವಾಗಬೇಕೇ ಹೊರತಾಗಿ ‘ಕನ್ನಡವನ್ನು ಕಲಿ : ಇಂಗ್ಲಿಷ್‌ನಲ್ಲಿ ಕಲಿ’ ಎಂಬುದಲ್ಲ. ಕನ್ನಡವನ್ನು ಇನ್ನೊಂದು ಭಾಷೆಯಾಗಿ ಕಲಿಯುವುದು ಆಗ ಕೇವಲ ಔಪಚಾರಿಕ ಕಲಿಕೆಯಾಗಿಬಿಡುತ್ತದೆ.
ಕಡ್ಡಾಯವಾದ ಕನ್ನಡ ಮಾಧ್ಯಮ ತಾಯಿತಂದೆಯರಿಗೆ ತಮ್ಮ ಮಕ್ಕಳು ಐಐಟಿಗಳಿಗೆ ಹೋಗಲಾರರು ಎಂಬ ಆತಂಕವನ್ನು ಹುಟ್ಟಿಸುವುದಾದರೆ, ಸದ್ಯಕ್ಕೆ ಅನಿವಾರ್ಯವೆನ್ನಿಸಿದರೆ ಸೈನ್ಸ್ ವಿಷಯಗಳನ್ನು ಇಂಗ್ಲಿಷಿನಲ್ಲಿ ಕಲಿಸುವ ಉಭಯ ಭಾಷಾ ಮಾಧ್ಯಮ ಶಾಲೆಗಳನ್ನು ನಡೆಸಬಹುದು. ಎಲ್ಲ ಮಾನವಿಕ ಶಾಸ್ತ್ರಗಳನ್ನಂತೂ ನಮ್ಮ ವಿದ್ಯಾರ್ಥಿಗಳು ದೇಶದ ಪರಿಸರದ ಭಾಷೆಯಲ್ಲಿ ಕಲಿತದ್ದೇ ಆದರೆ ಸ್ವತಂತ್ರವಾಗಿ ವಿಚಾರಮಾಡಬಲ್ಲವರಾಗಿ ಬೆಳೆಯುತ್ತಾರೆ.
ಜೊತೆಗೇ ನಾವು ಎಚ್ಚರದಿಂದ ನಿರ್ವಹಿಸಬೇಕಾದ ಇನ್ನೊಂದು ಸಂಗತಿಯಿದೆ. ಇಂಗ್ಲೆಂಡಲ್ಲಿ ಶೇಕ್ಸ್‌ಪಿಯರನ್ನು, ಡಿಕನ್ಸನ್ನು, ವರ್ಡ್ಸ್‌ವರ್‍ತನನ್ನು ಓದದೆ ಯಾರೂ ಪದವೀಧರರಾಗುವಂತಿಲ್ಲ. ನಮ್ಮ ದೇಶದಲ್ಲಿ ಮಾತ್ರ ಅದು ಸಾಧ್ಯ. ಪ್ರತಿ ಕನ್ನಡಿಗನೂ ಯಾರು ಯಾರನ್ನು ಓದಿರಲೇಬೇಕೆಂದು ನಮ್ಮ ಹಿರಿಯ ವಿಮರ್ಶಕರು ನಿರ್ಧರಿಸಬೇಕು. ಅಂತ ಲೇಖಕರ ಕೃತಿಗಳು ಕಡ್ಡಾಯವಾಗಿ ವಿದ್ಯಾರ್ಥಿಗಳು ಪದವೀಧರರಾಗುವುದಕ್ಕಿಂತ ಮುನ್ನ ಓದಿರುವಂತೆ ಎಚ್ಚರವಹಿಸಬೇಕು. ನಮ್ಮ ಸಂಸ್ಕೃತಿಯ ಸಾತತ್ಯವನ್ನು ಜಾಗತೀಕರಣದ ಅವಸರದ ಈ ದಿನಗಳಲ್ಲಿ ಉಳಿಸಿಕೊಂಡು ಹೋಗಲು ಇಂತಹ ಒಂದು ‘ಕಲ್ಚರಲ್ ಪಾಲಿಸಿ’ಯ ಅಗತ್ಯವಿದೆ.
ಸಿನಿಮಾ, ಟೆಲಿವಿಷನ್, ಹಾಗೂ ಪಾಠ ಪ್ರವಚನಗಳಲ್ಲಿ ಕನ್ನಡತನ ಬೆಳೆಯಲು ಇಂತಹ ಒಂದು ಸಂಕಲ್ಪ ನಮಗಿರಬೇಕು.
ಅವಕಾಶಗಳು, ಆಕ್ರಮಣಗಳು
ಜಾಗತೀಕರಣದ ಇಂದಿನ ಉತ್ಸಾಹದಲ್ಲಿ ಯಾವುದು ಅವಕಾಶ, ಯಾವುದು ಆಕ್ರಮಣ ಎಂಬುದು ತೋರದೇ ಹೋಗಬಹುದು. ಸದ್ಯ ಸಲ್ಲುವಂತೆ ಕಾಣುವ ಎಲ್ಲವನ್ನೂ ಕಣ್ಣುಮುಚ್ಚಿ ಅನುಕರಿಸುವುದು ಒಂದು ರೋಗವಾಗಬಹುದು. ಲಾಭದಾಯಕ ಎಂದು ಕಾಣುವುದೆಲ್ಲವನ್ನೂ ಕನ್ನಡದೊಳಗೆ ತುರುಕಿ ಮಾರುವ ಉದ್ಯಮಗಳು ಬೆಳೆಯಬಹುದು.
ನಮ್ಮವರೇ ಈ ಅನುಕರಣಕ್ಕೆ ಕಾರಣರಾಗಬಹುದು. ರೀಮೇಕ್ ಸಿನಿಮಾಗಳು ಇದಕ್ಕೆ ಒಂದು ಉದಾಹರಣೆ. ಸರ್ಕಾರ ಇಂತಹ ಪ್ರಯತ್ನಗಳಿಗೆ ಸಹಾಯಕವಾಗಿ ನಿಲ್ಲಬಾರದು. ಕನ್ನಡದಲ್ಲೇ ಸಿನಿಮಾದ ತಂತ್ರeನ, ಕಲಾತ್ಮಕತೆಯ ಹುಡುಕಾಟ, ಮನರಂಜನೆಯ ಕಥಾ ನಿರ್ವಹಣೆ ನಡೆದು ಜನಮನದಲ್ಲಿ ಕನ್ನಡತನ ಊರಬೇಕು. ಮಲಯಾಳಂ ಸಂಸ್ಕೃತಿ ಕೇರಳದ ಎಲ್ಲ ಜನಪ್ರಿಯ ಮಾಧ್ಯಮಗಳಲ್ಲೂ ಊರಿದಂತೆ.
ಅನುಕರಣೆ ಜನಜೀವನದ ಎಲ್ಲ ರಂಗಗಳಲ್ಲೂ ಹರಡಿ ನಮ್ಮ ಕೃಷಿ, ನಮ್ಮ ಮಾರುಕಟ್ಟೆ, ನಮ್ಮ ವಿದ್ಯಾಭ್ಯಾಸ – ಎಲ್ಲವನ್ನೂ ಅಸ್ತವ್ಯಸ್ತಗೊಳಿಸುತ್ತಿರುವುದನ್ನು ನಾವೀಗ ಕಾಣುತ್ತಿದ್ದೇವೆ. ಐಟಿ ಹುಚ್ಚು ಏನನ್ನೂ ಬೆಳಯಗೊಡದ ಪಾರ್ಥೇನಿಯಂನಂತೆ ಹರಡಿ ಆಗಿರುವ ಅನಾಹುತವನ್ನು ನೋಡಿ. ಬುದ್ಧಿವಂತರಾದ ಯುವಕ ಯುವತಿಯರೆಲ್ಲಾ ಐಟಿ ಕಲಿಕೆಗೂ, ಐಟಿ ಕೂಲಿಗೂ ಮುಂದಾಗಿ ಸಮಾಜ ವಿeನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವ ವಿeನ, ತತ್ತ್ವಶಾಸ್ತ್ರ – ಏನನ್ನೂ ಈಚೆಗೆ ಕಲಿಯುತ್ತಿಲ್ಲ. ಹೀಗಾಗಿ ನಮ್ಮ ವಿಶ್ವವಿದ್ಯಾಲಯಗಳು, ಕರ್ನಾಟಕದ ಮೂಲೆ ಮೂಲೆಯಲ್ಲೂ ಇರುವ ಕಾಲೇಜುಗಳು ಹಣವಿಲ್ಲದೆ, ಚುರುಕಾದ ಮನಸ್ಸಿನ ವಿದ್ಯಾರ್ಥಿಗಳಿಲ್ಲದೆ ಸೊರಗುತ್ತಿವೆ. ಐಟಿ ತಂತ್ರeನದ ಬೆಳವಣಿಗೆಗೂ ಅಗತ್ಯವಾದ eನ ಶಾಖೆಗಳು ಬೆಳಯಗೊಡದಂತೆ ಎಂಜಿನಿಯರಿಂಗ್ ಕಾಲೇಜುಗಳು ಮಾತ್ರ ಬೆಳೆಯುವುದು ನಮ್ಮ ಭವಿಷ್ಯಕ್ಕೆ ಅಪಾಯಕಾರಿಯೇ ಸರಿ.
ದಿಢೀರನೆ ಏರುವುದು, ಅಷ್ಟೇ ದಿಢೀರನೆ ಕುಸಿಯುವುದು. ವಿಶ್ವದ ಮಾರುಕಟ್ಟೆಯ ಮಂತ್ರವಾದಿಗಳಿಗೆ ನಮ್ಮ ಪ್ರಜಾತಾಂತ್ರಿಕ ರಾಜಕಾರಣವೂ ಅಧೀನವಾಗಿ ವರ್ತಿಸುವುದು ಖಂಡಿತ ಒಳ್ಳೆಯದಲ್ಲ. ನಮಗೂ ಒಳ್ಳೆಯದಲ್ಲ; ಮುಂದುವರಿದ ಅಮೇರಿಕಾದಂತಹ ದೇಶಗಳಿಗೂ ಒಳ್ಳೆಯದಲ್ಲ.
ಸದ್ಯ ಯಾರೂ ಒಪ್ಪುವಂತೆ ಕಾಣದಿದ್ದರೂ, ಸಂಕೋಚಪಡದೆ ನಾನೊಂದು ವಿಚಾರವನ್ನು ಘನ ಸರ್ಕಾರದ ಮುಂದಿಡುತ್ತಿದ್ದೇನೆ. ನಮ್ಮ ಅರ್ಥ ವ್ಯವಸ್ಥೆಗೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸುವುದು ಅವಶ್ಯವಾದರೆ ಆಹ್ವಾನಿಸೋಣ. ಆದರೆ ನಮ್ಮ ಸಾಮಾಜಿಕ ಅಗತ್ಯಗಳನ್ನು ಉದಾರೀಕರಣದ ನಮ್ಮ ಹುರುಪಿನಲ್ಲಿ ಮರೆಯಬಾರದು. ಖಾಸಗೀಕರಣದ ಈ ದಿನಗಳಲ್ಲಿ ಸರ್ಕಾರೀ ಉದ್ಯೋಗಾವಕಾಶ ತುಂಬ ಕಮ್ಮಿಯಾಗುತ್ತಿದೆ. ಮೀಸಲಾತಿಯ ಮುಖೇನ ನಮ್ಮ ಸಮಾನತೆಯ ಹಸಿವನ್ನು ಪೂರೈಸುವ ಅವಕಾಶಗಳು ಕ್ರಮೇಣ ಇಲ್ಲವಾಗುತ್ತಿವೆ. ಬಡವರು ಇನ್ನೂ ದಿಕ್ಕು ಕೆಟ್ಟ ಬಡವರಾಗುತ್ತ ಹೋಗುವ ಸಮಾಜದಲ್ಲಿ ಸಂಪತ್ತನ್ನು ಯಾರಿಗಾಗಿ ನಾವು ಸೃಷ್ಟಿಸಬೇಕು? ಆದ್ದರಿಂದ ಸರ್ಕಾರದ ಕೆಲಸಗಳಿಗೆ ಅನ್ವಯಿಸುವ ಮೀಸಲಾತಿ ಎಲ್ಲ ಬಹುರಾಷ್ಟ್ರೀಯ ಸಂಸ್ಥೆಗಳಿಗೂ ಅನ್ವಯಿಸಬೇಕು. ಪ್ರೆಸಿಡೆಂಟ್ ಕೆನಡಿ ಕಪ್ಪು ಜನರಿಗೆ ಇಂಥ ಮೀಸಲಾತಿಯನ್ನು ಕಡ್ಡಾಯಮಾಡಿದ್ದ ಎಂದು ನಾನು ಕೇಳಿದ್ದೇನೆ.
ಇಷ್ಟೇ ಸಾಲದು. ಕರ್ನಾಟಕದಲ್ಲಿ ಅವರು ವ್ಯವಹಾರ ಮಾಡುವಾಗ ಕನ್ನಡ ಭಾಷೆಯನ್ನು ಬಳಸುವಂತೆ ಒತ್ತಾಯ ಮಾಡಬೇಕು. ಜಪಾನೀ ಭಾಷೆಯನ್ನು, ಅರೇಬಿಕ್ ಭಾಷೆಯನ್ನು, ಡಚ್ಚನ್ನು ಆಯಾ ದೇಶಗಳಲ್ಲಿ ಈ ಕಂಪನಿಗಳು ಬಳಸುವುದಿಲ್ಲವೇ? – ಹಾಗೆ.
ವಿವೇಕಾನಂದರು ಮುಂದೆ ಬರುವುದು ಶೂದ್ರಯುಗ ಎಂದಿದ್ದರು; ಶೂದ್ರಯುಗ ಎಂದರೆ ದುಡಿಯುವ ಜನರ ಯುಗ ಎಂದರ್ಥ. ಮಾರ್ಕ್ಸ್ ಕೂಡ ಹಾಗೆ ತಿಳಿದಿದ್ದ. ಚರಕದಲ್ಲಿ ನೂಲುವುದೇ ಮುಖ್ಯ ಸಂಕೇತವಾಗಿದ್ದ ಗಾಂಧೀಜಿ ಕೂಡ ಕಾಕಜೀವಿಗಳ ರಾಮರಾಜ್ಯದ ಕನಸು ಕಂಡಿದ್ದರು. ಆದರೆ, ಬುದ್ಧಿಯನ್ನೇ ಜೀವನೋಪಾಯ ಮಾಡಿಕೊಂಡ ಬ್ರಾಹ್ಮಣ ಯುಗವಾಗಲೀ, ರಟ್ಟೆ ಬಲದ ಕ್ಷಾತ್ರಯುಗವಾಗಲೀ, ಶೂದ್ರಯುಗವಾಗಲೀ ಉದಿಸಲಿಲ್ಲ. ಬದಲಾಗಿ ಈಗ ನಾವು ಬದುಕುತ್ತಿರುವುದು ವೈಶ್ಯ ಯುಗದಲ್ಲಿ. ( ಅಂದರೆ ವ್ಯಾಪಾರಿಗಳ ಯುಗದಲ್ಲಿ) ಜನರಲ್ಲಿ ಕೊಳ್ಳುವ ಆಸೆ ಹುಟ್ಟಿಸುವುದು, ಮಾರುವುದು, ಅನಗತ್ಯ ವಸ್ತುಗಳನ್ನು ಉತ್ಪಾದಿಸುತ್ತಲೇ ಹೋಗುವುದು, ಪ್ಲಾಸ್ಟಿಕ್ ಕಸವನ್ನು ಎಲ್ಲಿ ಚೆಲ್ಲಬಹುದೆಂದು ಇಲ್ಲದ ಖಾಲಿಜಾಗಗಳನ್ನು ಹುಡುಕಾಡುವುದು, ಜಗಳ ಹಚ್ಚಿ ಶಸ್ತ್ರಾಸ್ತ್ರಗಳನ್ನು ಎರಡು ಕಡೆಗೂ ಮಾರುವುದು — ಈ ಯುಗದ ಧರ್ಮ. ಈ ಯುಗದ ಮಾರುಕಟ್ಟೆಗಳೇ ಈ ಕಾಲದ ನಿಜವಾದ ದೇವಾಲಯಗಳು. ಇವರ ಕೃಪೆಯಲ್ಲೇ ನಾವು ರಾಮಾಯಣ, ಭಾರತದ ಸೀರಿಯಲ್‌ಗಳನ್ನು ನೋಡುವುದು. ಅದರ ಪರಿಣಾಮವಾಗಿ ‘ನಿರಿಲ್’ ಸೋಪನ್ನೇ ಕೊಳ್ಳುವುದು. ಇಡೀ ವಿಶ್ವದ ಕಾರ್ಮಿಕರು, ರೈತರು, ಬಡಜನರು ಒಗ್ಗಟ್ಟಿನಲ್ಲಿ ಒಂದಾಗುವ ಕನಸನ್ನು ಮಾರ್ಕ್ಸ್‌ನು ಕಂಡಿದ್ದರೆ, ಈಗ ಒಟ್ಟಾದವರು ಮಾತ್ರ ಜಗತ್ತಿನ ವೈಶ್ಯರು.
ಮಾರಾಟವೇ ಇಡಿ ಬದುಕಿನ ಉದ್ದೇಶವೆಂದು ಭಾವಿಸುವ ಈ ಜಾಗತಿಕ ‘ನವ-ವೈಶ್ಯ’ರಲ್ಲೊಂದು ಗುಣವಿದೆ ಎನ್ನಬಹುದನೋ. ಮಾರಾಟ ಸದ್ಯದಲ್ಲಿ ಸುಗಮವಾಗಲು ಏನನ್ನಾದರೂ ಇವರು ಮಾಡಿಯಾರು. ಅಂದರೆ ಕನ್ನಡವನ್ನೂ ಕಲಿತು ವ್ಯವಹರಿಸಿಯಾರು. ಮೊದಲು ಕೊಂಚ ತರಲೆ ಮಾಡಿ, ಆನಂತರದಲ್ಲಿ ಅನಿವಾರ್‍ಯವೆನ್ನಿಸಿದರೆ ಕೆಲವು ಕೆಲಸಗಳನ್ನಾದರೂ ಮೀಸಲಿಟ್ಟಾರು. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ನಮ್ಮಂಥ ಬಡ ದೇಶಗಳು ನಮಗೆ ಅಗತ್ಯವಾದ್ದನ್ನು ವಿನಾಶದಿಂದ ಹೀಗೆ ಪಾರುಮಾಡಿ ಉಳಿಸಿಕೊಳ್ಳಬೇಕು.
ಇನ್ನೂ ಕೆಲವು ಸಲಹೆಗಳು
ಪರಿಷತ್ತಿಗೆ ನನ್ನ ಸಲಹೆಯೇನು? ಪ್ರಜಾತಾಂತ್ರಿಕ ಚೌಕಟ್ಟಿನಲ್ಲಿ ಕೆಲಸ ಮಾಡುವ, ಕರ್ನಾಟಕದ ಎಲ್ಲೆಲ್ಲು ಸದಸ್ಯರನ್ನು ಹೊಂದಿದ ಈ ದೊಡ್ಡ ಸಂಸ್ಥೆಯನ್ನು ಸಾಹಿತ್ಯದಿಂದ ದೂರವಾಗುತ್ತಿದೆಯೆಂದು, ಸೃಜನಶೀಲ ಬರಹಗಾರರನ್ನು ಕಡೆಗಣಿಸುತ್ತದೆಯೆಂದು ನಾನೂ ಈ ಹಿಂದೆ ಟೀಕಿಸಿದ್ದಿದೆ. ಆದರೆ, ಅದು ಅವಸರದ ಟೀಕೆ ಎಂದು ನನಗೀಗ ಅನ್ನಿಸುತ್ತಿದೆ. ಕನ್ನಡ ಭಾಷೆಯನ್ನು ಹೊಸದೃಷ್ಟಿಕೋನದಿಂದ ನೋಡುವಂತೆ ಮಾಡುತ್ತಿರುವ ಡಾ. ಡಿ.ಎನ್. ಶಂಕರ ಭಟ್ಟರು, ಪಂಪನನ್ನೂ ವಚನಕಾರರನ್ನೂ ಈ ನಮ್ಮ ಕಾಲದ ಅನುಭವಕ್ಕೆ ಲಭ್ಯವಾಗುವಂತೆ ಮಾಡಿರುವ ಡಾ. ಎಲ್. ಬಸವರಾಜರು ಸೃಜನಶೀಲ ಚಿಂತಕರಲ್ಲವೇ? ಆಳವಾದ ಪಾಂಡಿತ್ಯಕ್ಕೆ ಮನ್ನಣೆಯಿಲ್ಲದೆ ಸೃಜನಶೀಲತೆ ಜರ್ನಲಿಸಮ್ಮಿನ ಸದ್ಯತನವನ್ನು ಮಾತ್ರ ಪಡೆದಿರುತ್ತದೆ. ಪರಿಷತ್ತನ್ನು ನಾವು ಲೇಖಕರ ದೃಷ್ಟಿ ಯಿಂದ ಮಾತ್ರ ನೋಡುವುದು ಸಲ್ಲದು.
ಹಿಂದೊಂದು ಕಾಲದಲ್ಲಿ ಕನ್ನಡದ ಎಲ್ಲ ಕೆಲಸದ ಜವಾಬುದಾರಿಯನ್ನೂ ಪರಿಷತ್ತು ಮಾತ್ರ ಹೊರಬೇಕಾಗಿ ಬಂದಿತ್ತು. ಆದರೆ, ಈಗ ಸಾಹಿತ್ಯದ ಕೆಲಸಕ್ಕೆ ಸಾಹಿತ್ಯ ಅಕಾಡಮಿ ಇದೆ. ಪುಸ್ತಕ ಪ್ರಕಾಶನಕ್ಕೆ ಪುಸ್ತಕ ಪ್ರಾಧಿಕಾರವಿದೆ. ಕನ್ನಡ ಭಾಷೆಯನ್ನು ರಕ್ಷಿಸಲು ಸರ್ಕಾರವೇ ರಚಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದೆ. eನ ಶಾಖೆಗಳ ಸರ್ವತೋಮುಖ ಅಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಇವೆ. ಕನ್ನಡಕ್ಕೇ ಮೀಸಲಾದ ಕನ್ನಡ ವಿಶ್ವ ವಿದ್ಯಾಲಯವೇ ಹಂಪಿಯಲ್ಲಿದೆ. ಈ ನಡುವೆ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸವೇನು?
ಇದಕ್ಕೆ ಉತ್ತರ ಸುಲಭವೂ ಹೌದು; ಕಷ್ಟವೂ ಹೌದು. ಸುಲಭ ಯಾಕೆಂದರೆ ಗ್ರಾಮಾಂತರ ಪ್ರದೇಶಗಳಲ್ಲಿ ಸದಸ್ಯರನ್ನು ಪಡೆದ, ಪಡೆದಿರದಿದ್ದರೆ ಪಡೆಯಬಹುದಾದ ಪರಿಷತ್ತು ಉಳಿದ ಎಲ್ಲ ಸಂಸ್ಥೆಗಳ ಕೆಲಸವನ್ನು ಗ್ರಾಮ ಗ್ರಾಮಗಳಿಗೆ ಮುಟ್ಟಿಸಬೇಕೆಂದು ಹೇಳಿದರೆ ಮುಗಿಯಿತು.
ಆದರೆ ಇದು ಕಷ್ಟವೂ ಹೌದು
ಯಾಕೆಂದರೆ, ಇದನ್ನು ಮಾಡಲು ಸಂಕಲ್ಪ ಬಲ ಬೇಕು. ಕೇರಳದ ಶಾಸ್ತ್ರ ಸಾಹಿತ್ಯ ಪರಿಷತ್ತಿನಲ್ಲಿರುವಂತಹ ನಿಷ್ಠಾವಂತ ಕಾರ್‍ಯಕರ್ತರನ್ನು ಪರಿಷತ್ತು ಪಡೆದು ಗುರುತಿಸಬೇಕು. ಇವರು ಗ್ರಾಮ ಗ್ರಾಮಗಳಲ್ಲಿ ಲೈಬ್ರರಿಗಳನ್ನು ತೆರೆಯುವ ಚಳವಳಿ ಕೈಗೊಳ್ಳಬೇಕು. ಅಕ್ಷರ eನವನ್ನು ಸರ್ವತ್ರಗೊಳಿಸುವ ಕೆಲಸದಲ್ಲಿ ಮುಂದಾಗಬೇಕು. ನವ ಶಿಕ್ಷಿತರಿಗೆ ಅಗತ್ಯವಾದ ಪುಸ್ತಕ ಪ್ರಕಟಣೆಯ ಕಾರ್‍ಯವನ್ನು ಎಲ್ಲ ಬರಹಗಾರರ ಸಹಕಾರದಿಂದ ನಿರ್ವಹಿಸಬೇಕು. ಕನ್ನಡದ ಬುಡವನ್ನು ಭದ್ರ ಮಾಡುವ ಈ ಕೆಲಸಗಳು ನಾನು ಮೊದಲೇ ಗುರುತಿಸಿದ ಸಮಾನತೆಯ ಹಸಿವನ್ನೂ ಆಧುನಿಕತೆಯ ಹಸಿವನ್ನೂ ತಣಿಸುವಂಥದಾಗಿರುತ್ತದೆ. ಜಾಗತೀಕರಣದಲ್ಲಿ ಕನ್ನಡ ಮೂಲೆಗುಂಪಾಗದಂತೆ ಕನ್ನಡ ಜನಶಕ್ತಿಯನ್ನು ಆಗ ಬೆಳೆಸಿದಂತಾಗುತ್ತದೆ.
ಈ ಸಲಹೆಯನ್ನು ಪರಿಷತ್ತಿನ ಸದಸ್ಯರೆದುರು ವಿನಯದಿಂದ ಇಡುತ್ತಿದ್ದೇನೆ.
ಸ್ಥಳ ಜಗತ್ತಾದ ಕರ್ನಾಟಕದಲ್ಲಿ ಪ್ರe ವಿಸ್ತಾರ :
ಈವರೆಗೆ ಹೊರ ಜಗತ್ತಿಗೆ ನಾವು ತೆರೆದಿದ್ದ ಒಂದೇ ಕಿಟಕಿಯೆಂದರೆ ಇಂಗ್ಲಿಷ್ ಭಾಷೆಯ ಕಿಟಕಿ. ರಷ್ಯನ್, ಸ್ಪ್ಯಾನಿಷ್, ಫ್ರೆಂಚ್, ಇಟಾಲಿಯನ್, ಜರ್ಮನ್ — ಈ ಎಲ್ಲ ಭಾಷೆಗಳ ಸಂಪತ್ತನ್ನೂ ನಾವು ಇಂಗ್ಲಿಷ್ ಕಿಟಕಿಯ ಮುಖಾಂತರ ಕಂಡು, ಅಂದರೆ ಇಂಗ್ಲಿಷ್ ಜನರು ಮೊದಲು ಕಂಡದ್ದನ್ನು ಆಮೇಲೆ ನಾವೂ ಕಂಡು, ಬೆಳೆದವು. ಆದರೆ, ಇದು ಸಾಲದು ಮಾತ್ರವಲ್ಲ, ಸಲ್ಲದು ಕೂಡ. ಸ್ವತಂತ್ರ ಭಾರತದಲ್ಲಿ ಹೊರ ಜಗತ್ತಿಗೆ ಹಲವು ಕಿಟಕಿಗಳು ತೆರೆಯಬೇಕು. ನಮಗೆ ಬೇಕಾದ್ದನ್ನು ನಾವೇ ಆಯುವಂತಾಗಬೇಕು.
ನಮ್ಮ ವಿಶ್ವವಿದ್ಯಾಲಯಗಳು ಯೂಜಿಸಿ ಸಹಾಯಪಡೆದು ಮಾಡಬೇಕಾದ ಕೆಲಸವಿದು. ನಮ್ಮ ಪ್ರeವಂತ ಧೀಮಂತರಲ್ಲಿ ಕೆಲವರಾದರೂ ಉಳಿದ ಕಿಟಕಿಗಳನ್ನು ತೆರೆಯಬಲ್ಲವರಾದರೆ, ಇಂಗ್ಲಿಷ್ ಭಾಷೆಯ (ಅಂದರೆ ಈಗ ಅಮೇರಿಕಾದ) ಹಂಗಿಲ್ಲದಂತೆ, ನೇರವಾದ ಕೆಲಸವನ್ನು ನಮ್ಮ ಕನ್ನಡದಲ್ಲಿ ಮಾಡಬಲ್ಲವರಾದರೆ ನಮ್ಮ ಪ್ರಜ್ಞೆ ಸ್ವತಂತ್ರವಾಗಿ ಹೊರ ಜಗತ್ತಿನ ಪ್ರೇರಣೆಗಳಿಗೆ ತೆರೆದುಕೊಳ್ಳತೊಡಗುತ್ತದೆ. ನಮಗೆ ಬೇಕಾದ್ದನ್ನು ನಾವೇ ಆಯುವುದು ಸಾಧ್ಯವಾಗುತ್ತದೆ. ಅಮೆರಿಕನ್ನರು ಮೆಚ್ಚಿದ್ದು ಎಷ್ಟೋ ವರ್ಷಗಳ ನಂತರ ನಮಗೆ ತಿಳಿದು, ಅಲ್ಲಿ ಹಳಸಿ ಹೋದದ್ದನ್ನು ನಾವಿಲ್ಲಿ ಕೊಂಡಾಡಿ ಕುಣಿದಾಡುವುದು ತಪ್ಪಿದಂತಾಗುತ್ತದೆ.
ಸ್ಥಳವೇ ಜಗತ್ತಾಗುವುದು, ಅಂದರೆ, ಜಗತ್ತನ್ನು ತನ್ನ ಸೀಮಿತವಾದ ಪರಿಧಿಯಲ್ಲೇ ಪಡೆದು, ಕನ್ನಡದಲ್ಲಿ ಅದು ಅರಳುವಂತೆ ಮಾಡಿ ನಮ್ಮ ಪರಿಸರವನ್ನು ಶ್ರೀಮಂತಗೊಳಿಸುವುದು ಅಸಾಧ್ಯವಾದ, ಕೋಟ್ಯಂತರ ಹಣವನ್ನು ಬೇಡುವ ಬೃಹತ್ ಕಾರ್‍ಯವೇನೂ ಅಲ್ಲ. ನಮ್ಮ ಹೆಗ್ಗೋಡಿನ ನೀನಾಸಂ ತನ್ನ ಮಿತಿಯಲ್ಲೇ ಅದನ್ನು ಸಾಧಿಸಿದೆ. ಒಂದು ಹಳ್ಳಿಯಲ್ಲಿ ಶೇಕ್ಸ್‌ಪಿಯರ್, ಬ್ರೆಕ್ಟ್, ಕಾಳಿದಾಸ, ಜಿ.ಬಿ.ಜೋಷಿ, ಕುವೆಂಪು, ಗ್ರೀಕ್ ನಾಟಕಕಾರರು, ಭಾಸ, ಭವಭೂತಿ, ಕಂಬಾರರು, ಶ್ರೀಕಂಠೇಶಗೌರು, ಗಿರೀಶ್ ಕಾರ್ನಾಡ್, ಹೊಸಬರು, ಹಳಬರು,– ಎಲ್ಲರನ್ನೂ ಕೂಡಿಸಿ, ಆಡಿಸಿ, ಹೊಸಪ್ರಜ್ಞೆಯನ್ನು ಕನ್ನಡದಲ್ಲಿ ಬೆಳೆಸುವ ಕೆಲಸ ಸಾಗರ ತಾಲೂಕಿನ ಹಳ್ಳಿಯೊಂದರಲ್ಲಿ ನಡೆಯುತ್ತಿದೆ. ಅಖಿಲ ಭಾರತ ಕೀರ್ತಿಯ ಬಿ.ವಿ. ಕಾರಂತರು ಪ್ರಾರಂಭಿಸಿದ ರಂಗಪ್ರಯೋಗಗಳಿಂದ ಸ್ಫೂರ್ತಿಪಡೆದು, ಬದಲಾಗುತ್ತ ಬೆಳೆದು, ಹೊಸ ಹೊಸ ರೂಪತಾಳಿ ಕರ್ನಾಟಕದ ಮೂಲೆ ಮೂಲೆಗಳಿಗೆ ತಿರುಗಾಡುವ ಈ ನೀನಾಸಂ ಇಡೀ ಭಾರತಕ್ಕೆ ಮಾದರಿಯಾಗಿದೆ. ಹೀಗೆಯೇ ಕರ್ನಾಟಕದ ಹಲವು ಹತ್ತು ಜಾಗಗಳಲ್ಲಿ ನೀನಾಸಂ ರೀತಿಯ ಕೆಲಸ ನಡೆಯುವುದು ಸಾಧ್ಯ.
ಕನ್ನಡದ ಭಾವನಾ ಲೋಕ ಇಡೀ ಪ್ರಪಂಚಕ್ಕೆ ತನ್ನನ್ನು ತೆರೆದುಕೊಂಡಿದೆ. ಇಂತಹ ಕೆಲಸಕ್ಕಾಗಿ ಕಾದಿದೆ. ಇದನ್ನು ಮಾಡಬಲ್ಲ ಧೀಮಂತ ಯುವಕ ಯುವತಿಯರು ಕರ್ನಾಟಕದ ಎಲ್ಲೆಲ್ಲೂ ಇದ್ದಾರೆ. ಹಾಗೆ ನೋಡಿದರೆ ನಮ್ಮ ಸಿಲಿಕಾನ್ ವ್ಯಾಲಿಯಾದ ಕರ್ನಾಟಕದ ಕ್ಯಾಪಿಟಲ್ ಬೆಂಗಳೂರೇ ಕ್ರಮೇಣ ಕನ್ನಡದ ನಗರ ಎನ್ನಿಸುತ್ತಿಲ್ಲ.
ಕೊನೆಯಲ್ಲಿ ಒಂದು ಮಾತನ್ನು ಹೇಳದೇ ಹೋದರೆ ತಪ್ಪಾದೀತು. ಕರ್ನಾಟಕದ ಸರ್ಕಾರ ಪ್ರೈಮರಿ ಶಿಕ್ಷಣದ ಬೆಳವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಹಿಂದಿನಿಂದಲೂ ಕನ್ನಡದ ರಕ್ಷಣೆಗೆ, ಬೆಳವಣಿಗೆಗೆ ಅಗತ್ಯವಾದ ಸಂಸ್ಥೆಗಳನ್ನು ಸೃಷ್ಟಿಸುತ್ತ ಬಂದಿದೆ. ಆದ್ದರಿಂದ ಪ್ರಜಾತಾಂತ್ರಿಕ ಸರ್ಕಾರದ ನೆರವು ಪಡೆಯುವ ಸಂಸ್ಥೆಗಳು ಜನಜೀವನದ ಶಾಶ್ವತವಾದ ಶೈಕ್ಷಣಿಕ ಸಾಂಸ್ಕೃತಿಕ ಅಗತ್ಯಗಳಿಗೆ ಸ್ಪಂದಿಸುವುದು ಅವುಗಳು ಸಂತೋಷವಾಗಿ ಹೊರಬೇಕಾದ ಬಹುಮುಖ್ಯ ಜವಾಬ್ದಾರಿಯಾಗಿದೆ.
ಒಂದು ಕನಸು :
ಶ್ರೀಮಂತ ರಾಷ್ಟ್ರಗಳ ಮಾರುಕಟ್ಟೆಯ ಹಿತಕ್ಕಾಗಿ ಹುಟ್ಟಿಕೊಂಡ ಜಾಗತೀಕರಣದ ಮೂರ್ಖ ಅವಸರಕ್ಕೆ ನಮ್ಮ ಕಂಗಾಲಾದ ಬಡಜನರಿಂದ ವಿರೋಧ ಇಂದಲ್ಲದಿದ್ದರೆ ನಾಳೆ ಬಂದೀತು. ನಮ್ಮದು ಪ್ರಜಾತಂತ್ರವಾದ್ದರಿಂದ ಆಳುವ ಸರ್ಕಾರಗಳು ಮುಂದೇನಾದರೂ ಪಶ್ಚಿಮಕ್ಕೆ ಪರ್ಯಾಯವಾದ ವ್ಯವಸ್ಥೆಯನ್ನು ಹುಡುಕಲೇಬೇಕಾದೀತು. ಪಶ್ಚಿಮಕ್ಕೂ ಅಂಥ ಪರ್‍ಯಾಯಗಳ ನೆಮ್ಮದಿಯ ಬದುಕು ಬೇಕೆನ್ನಿಸೀತು. ಸದ್ಯ ಬೆಳೆದದ್ದಕ್ಕೆ ಯೋಗ್ಯ ಬೆಲೆಯನ್ನು ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ತಮಗೆ ಕಾಣದಂತೆ ನಡೆಯುವ ಶೋಷಣೆಯ ವಿರುದ್ಧ ಸಂಘಟಿತರಾದಾರು. ಉಸಿರಾಡುವುದು ಕೂಡ ಸಾಧ್ಯವಾಗದಂತೆ ಮಾಡುವ ಸದ್ಯದ ಲಾಭದ ‘ಡೆವಲಪ್‌ಮೆಂಟು’ಗಳನ್ನು ಸಹಿಸಲಾರದೆ ಜನ ಭೋಗಲಾಲಸೆಯ ನವನಾಗರಿಕತೆಯ ಗುಂಗಿನಿಂದ ಎಚ್ಚತ್ತಾರು. ಕಾಯಕಜೀವಿಗಳೂ, ಕಲಾವಿದರೂ, ಚಿಂತಕರೂ ಕೂಡಿ ಹೊಸಯುಗವನ್ನು ನಿರ್ಮಿಸಿಯಾರು.
ಇವು ಮುಂದಿನ ಚರಿತ್ರೆಯಲ್ಲಿ ಅಡಗಿರುವ ಸಾಧ್ಯತೆಗಳು. ಆದರೆ ಜನ ವಿಷಣ್ಣರಾಗಿ ಎಲ್ಲವನ್ನೂ ಸಹಿಸಿಕೊಳ್ಳುವವರಾಗಿಬಿಟ್ಟು, ವಿರೋಧಿಸುವ ಆರೋಗ್ಯಕರ ಶಕ್ತಿ ಕಳೆದುಕೊಂಡು ಮಾನವ ನಾಗರಿಕತೆ ನಾಶವಾಗಿ ಹೋಗಲೂ ಬಹುದು. ತನ್ನ ನಾಶದ ಜೊತೆಯಲ್ಲೇ ಇತರ ಜೀವರಾಶಿಯನ್ನೂ ಮಾನವ ನಾಶಮಾಡಿಬಿಡಬಹುದು.
ಇಂತಹ ಆಪತ್ತುಗಳ ಬಗ್ಗೆ ತಲೆಕೆಡಿಸಿಕೊಂಡು ಯೋಚಿಸುವವರು, ಪ್ರಪಂಚದ ಸಕಲ ಜೀವಿಗಳ ಪರವಾಗಿ ಪ್ರೇಮದಲ್ಲಿ, ಆತಂಕದಲ್ಲಿ ಕಾರ್‍ಯೋನ್ಮುಖರಾದವರು ಜಗತ್ತಿನಲ್ಲಿ ಎಲ್ಲೆಲ್ಲೂ ಇದ್ದಾರೆ. ಕರ್ನಾಟಕದ ಯುವಜನರು ಇಂಥಹ ಕರುಣಾಶೀಲರೂ, ಕ್ರಿಯಾಶೀಲರೂ ಆದ ಕನಸುಗಾರರ ಧೀರರ ಜೊತೆ ದನಿಗೂಡಿಸಿ‘ಆಧುನಿಕತೆ’ಗೆ ಹೊಸ ಅರ್ಥವೂ, ಸಮಾನತೆ, ಆಧ್ಯಾತ್ಮಿಕ ಧ್ಯಾನಶೀಲತೆಯ ಹೊಸ ಕಾವೂ ಬರುವಂತೆ ಮಾಡಿಯಾರೆಂಬ ಭರವಸೆಯಲ್ಲಿ ನನ್ನ ಈ ದೀರ್ಘ ಭಾಷಣವನ್ನು ಕೇಳಿಸಿಕೊಂಡ ನಿಮಗೆಲ್ಲರಿಗೂ ಕೈಮುಗಿದು ವಂದಿಸುತ್ತೇನೆ.
ಸಿರಿಗನ್ನಡಂ ಗೆಲ್ಗೆ
*****
ಮುಗಿಯಿತು