೬೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣ ಅಂತರ್ಜಾಲ ಆವೃತಿ ೨

ಹಳ್ಳಿಯ ಅವರ ಮಿತ್ರರು ಮಹಾತ್ಮರ ವಿಚಾರದಿಂದ ದಿಗ್ಭ್ರಾಂತರಾಗುತ್ತಿದ್ದರು. ಪೂರ್ವ -ಪಶ್ಚಿಮಗಳ ಆಚಾರ ವಿಚಾರಗಳ ದ್ವಂದ್ವದಲ್ಲಿದ್ದ ನನ್ನ ತಂದೆಯವರು ನನಗೆ ಉಪನಯನ ಮಾಡಿದ ಬಳಿಕ ಹೆಚ್ಚು ಉತ್ಸಾಹ ತೋರಿಸಿದ್ದು ನಾನು ಪುರುಷಸೂಕ್ತವನ್ನು ಬಾಯಿಪಾಠ ಮಾಡುವುದರಲ್ಲಿ ಅಲ್ಲ. ಎಡ್ಮಂಡ್ ಬರ್‍ಕನ ‘ಇಂಪೀಚ್‌ಮೆಂಟ್ ಆಫ್ ವಾರನ್ ಹೇಸ್ಟಿಂಗ್ಸ್’ ಎಂಬ ಸುದೀರ್ಘ ಭಾಷಣವನ್ನು ಉರು ಹಚ್ಚುವುದರಲ್ಲಿ. ಇಂಗ್ಲಿಷ್ ಜನರ ನ್ಯಾಯಪರತೆಗೆ ಈ ಭಾಷಣ ಕುರುಹಾಗಿ ಕಾಣುತ್ತಿದ್ದೆಂಬುದೂ, ನಮ್ಮ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬ್ರಿಟಿಷರ ಆಳ್ವಿಕೆಯಿಂದ ಉದ್ಭವಿಸಿದ ಶೋಷಣೆಯಿಂದ ನಾವು ವಿಚಲಿತರಾಗುವುದರ ಜೊತೆಗೇ, ಅದು ತರುತ್ತಿದ್ದ ಆಧುನಿಕತೆ ನಮ್ಮನ್ನು ಸಂಪ್ರದಾಯಗಳ ಇಕ್ಕಟ್ಟುಗಳಿಂದ ಪಾರುಮಾಡುವಂತೆಯೂ ಕಂಡು ನಾವು ಅದನ್ನು ಆದರಿಸುತ್ತಿದ್ದುವೆಂಬುದೂ ನನ್ನ ಬೆಳವಣಿಗೆಯಲ್ಲೇ ನನ್ನ ಅನುಭವಕ್ಕೆ ಬಂದ ವಿಷಯಗಳು. ಲೌಕಿಕವಾಗಿ ಪಶ್ಚಿಮದ (ಈಗ ಅಮೆರಿಕಾದ) ಪರವಾಗಿಯೂ, ಪಾರಮಾರ್ಥಿಕ ವಿಷಯಗಳಲ್ಲಿ ಸನಾತನಿಗಳಾಗಿಯೂ ನಾವು ಇಂದಿಗೂ ಉಳಿದುಬಿಟ್ಟಿದ್ದೇವೆ ಎಂಬುದು ಬಸ್ ರೈಲ್ ಪ್ರಯಾಣಗಳಲ್ಲಿ ಅಪರಿಚಿತರ ಜೊತೆಗಿನ ಹರಟೆಗಳಲ್ಲೂ ಪ್ರತ್ಯಕ್ಷವಾಗುವ ಸಂಗತಿ.

‘ಚೋಮನ ದುಡಿ’ಯ ನಂತರ ನಾನು ಓದಿದ ಎಲ್ಲ ಕಾದಂಬರಿಗಳು ನನ್ನ ನಿತ್ಯದ ಪರಿಸರವನ್ನೇ ವಿಚಿತ್ರವಾದ ಶೋಭಯಲ್ಲಿ ತೊಯ್ದದ್ದನ್ನಾಗಿ ಮಾಡಿತು. ಯಾರನ್ನೂ ಕೇವಲ ಇಂಥ ಜಾತಿಯವನೆಂದೋ, ಕುಲದವನೆಂದೋ ಮಾತ್ರ ಗುರಿತಿಸದೇ, ಅವರವರ ಅಂತರಂಗದಲ್ಲಿ ಗಹನವಾದ ಭಾವನೆಗಳನ್ನು ಅಡಗಿಸಿಕೊಂಡವರೆಂದು ಕಾಣುವಂತೆ ಮಾಡಿತು. ಜೊತೆಗೇ ನನ್ನ ಪರಿಸರದಲ್ಲಿ ಪವಿತ್ರವೆಂದು ಕಾಣುವ

ದೈವಗಳನ್ನೂ , ಅವುಗಳ ಸುತ್ತ ಹೆಣೆದುಕೊಂಡ ನಂಬಿಕೆಗಳನ್ನೂ ಪ್ರಶ್ನಿಸುವಂತೆ ಮಾಡಿತು. ಗೃಹೀತವಾದದ್ದನ್ನು ಮೀರಿದ ನೈಜವಾಗಿ ಪವಿತ್ರವಾದ್ದರ ಹುಡುಕಾಟ ಅಂದಿನಿಂದಲೇ ಪ್ರಾರಂಭವಾಯಿತು- ಹೀಗೆ ನನ್ನ ಪಾಲಿಗೆ ಆ ಕಾಲದಲ್ಲಿ ಆಧುನಿಕತೆ, ಬ್ರಿಟಿಷ್ ಆಳ್ವಿಕೆಯ ಒಳಿತು- ಕೆಡಕುಗಳ ಹೊಟ್ಟೆಯಲ್ಲೇ ಹುಟ್ಟಿದ್ದಾದರೂ, ಕನ್ನಡದ ಮೂಲಕವೇ ಒದಗಿಬಂತು.

ಇಲ್ಲಿ ನಾನು ಸೇರಿಸಬೇಕಾದ ಮಾತೊಂದಿದೆ : ಸವೆದ ಜಾಡಾಗಿಬಿಡುವ ಮತಧರ್ಮಗಳ ಒಳಗಿನ ಸತ್ಯಗಳು ಮತ್ತೆ ನನಗೆ ಬೆಳಗುವಂತೆ ಆದದ್ದು – ದೇಶೀಯವಾದ ಹಳ್ಳಿಯ ಹೆಂಗಸರು ಹಾಡುವ ಭಕ್ತಿ ಕಾವ್ಯ ಅಥವಾ ಸಂಗೀತದ ಪ್ರಭೆಯಲ್ಲಿ , ಹರಿಕಥೆಗಳಲ್ಲಿ , ಯಕ್ಷಗಾನದ ಆಟಗಳಲ್ಲಿ . ಆದರೆ ನನ್ನನ್ನು ಬದಲಿಸುವಂತೆ ಇವು ಆಧುನಿಕತೆಯ ಸದ್ಯತನವನ್ನು ಪಡೆದ ಮಾಧ್ಯಮಗಳಿಗಿರಲಿಲ್ಲ . ನನ್ನ ವೈಚಾರಿಕತೆ ಬೆಳೆದದ್ದು : ವಾಸ್ತವವಾದೀ ಪರಂಪರೆಯಲ್ಲಿ ಹುಟ್ಟಿದ ಕನ್ನಡದ ಕಥಾನಕಗಳಲ್ಲಿ , ಅಥವಾ ಮುಂದೆ ನವ್ಯಕಾವ್ಯದಲ್ಲಿ . ನನ್ನ ಎಳೆಯದಿನಗಳಲ್ಲಿ ಕಾರಂತರಿಂದ, ಕುವೆಂಪುವಿನಿಂದ, ಬೇಂದ್ರೆಯಿಂದ, ಬೆಳೆದ ಮೇಲೆ ವಚನಕಾರರಿಂದ, ಮುಂದೆ ನನ್ನ ಮೈಸೂರಿನ ದಿನಗಳಲ್ಲಿ ಅನುಮಾನದ ನಿಕಷದಲ್ಲಿ ಅನುಭವಗಳನ್ನು ಪರೀಕ್ಷಿಸುವ ಅಡಿಗರಿಂದ ನಾನು ತುಂಬ ಕಲಿತೆ. ಆದರೆ ಒಟ್ಟು ವ್ಯಕ್ತಿತ್ವದ ನಿರ್ಮಾಣದಲ್ಲಿ ನಮ್ಮ ಸಂಸ್ಕೃತಿಯ ಎರಡು ಎಳೆಗಳೂ, ದೇಶೀಯವಾದ್ದು ಮತ್ತು ನಮ್ಮ ವಸಾಹತುಶಾಹಿ ಸಂದರ್ಭದಲ್ಲಿ ವಿದೇಶೀಯ ಮೂಲದಿಂದ ನಮಗೆ ಅಗತ್ಯವೆಂದು ಕಂಡದ್ದನ್ನು ನಾವೇ ಆಯ್ದದ್ದು – ಕನ್ನಡದ ಹೆಚ್ಚು ಲೇಖಕರ ಮೇಲೆ ಪರಿಣಾಮ ಬೀರಿ ಅವರ ಒಳಗು ಹೊರಗುಗಳಿಗೆ, ಅಂತರಂಗ ಲೋಕಕ್ಕೂ ಸಾಮಾಜಿಕ ಸಂದರ್ಭಕ್ಕೂ, ನಂಟಿರುವಂತೆ ಕಾಪಾಡುತ್ತವೆ ಎಂದು ನನ್ನ ಭಾವನೆ. ನಮ್ಮ ವೈಚಾರಿಕತೆಯನ್ನು ಬೆಳೆಸಿದ ಲೇಖಕರಲ್ಲೂ ಭಾವುಕವಾಗಿ ಪೂರ್ವ, ವೈಚಾರಿಕವಾಗಿ ಪಶ್ಚಿಮ, ಒಂದನ್ನು ಇನ್ನೊಂದು ತಿದ್ದುವಂತೆ, ಪ್ರಮಾಣೀಕರಿಸುವಂತೆ ಬೆಸುಗೆಯಾಗಿರುತ್ತವೆ.

ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಕುವೆಂಪು. ಇಂಗ್ಲಿಷ್ ಇಲ್ಲದಿದ್ದರೆ ತಾನು ಕೊಟ್ಟಿಗೆಯಲ್ಲಿ ಗೊಬ್ಬರ ಹೊತ್ತು ಬದುಕಬೇಕಾಗಿ ಬರುತ್ತಿತ್ತು ಎನ್ನುವ ಕುವೆಂಪು, ಇಂಗ್ಲಿಷ್ ತಂದ ಆಧುನಿಕತೆಯಿಂದ ಉಪಕೃತರಾಗಿರುವಂತೆಯೇ, ಪ್ರಾಯಶಃ ರಾಮಕೃಷ್ಣಪರಮಹಂಸರಿಗೂ, ವಿವೇಕಾನಂದರಿಗೂ ಅರವಿಂದರಿಗೂ ಋಣಿಯೆಂಬುದನ್ನು ಮರೆಯಬಾರದು. ಕುವೆಂಪುರವರ ಆಧ್ಯಾತ್ಮಿಕ ಆಯಾಮವನ್ನು ತನ್ನ ಶೋಧದಲ್ಲಿ ಕಾಣಿಸಿಕೊಳ್ಳದ ವಿಚಾರವಾದಿ ಕಾರಂತರು ಕೂಡ ಭಾವುಕವಾಗಿ ಯಕ್ಷಗಾನದಲ್ಲಿ ಆಸಕ್ತರಾಗಿದ್ದರು. ಅಂತೆಯೇ, ಎಲ್ಲರಿಗಿಂತ ಮಿಗಿಲಾಗಿ ಅಗೋಚರವಾದ ಶಕ್ತಿಗಳಿಗೆ ಕಣ್ತೆರೆದವರಂತೆ ಬರೆಯುತ್ತಿದ್ದ ಬೇಂದ್ರೆಯವರು ‘ಕುರುಡು ಕಾಂಚಾಣ’ವನ್ನೂ ,‘ಪುಟ್ಟ ವಿಧವೆ’ಯನ್ನೂ ಬರೆದು ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಚುರುಕುಗೊಳಿಸಿದ್ದರು.

ಕನ್ನಡ ಮಾತಿನ ಸೊಗಸನ್ನು ತಮ್ಮ ಹಾಸ್ಯಮಯವಾದ ಮಾತುಗಾರಿಕೆಯಲ್ಲಿ ಬೆಳೆಯಿಸಬಲ್ಲ ಪರಮೇಶ್ವರ ಭಟ್ಟರು ಶಿವಮೊಗ್ಗದ ಇಂಟರ್‌ಮಿಡಿಯೇಟ್ ಕಾಲೇಜಿನಲ್ಲಿ ನಮಗೆ ಸಿಕ್ಕರು. ಸಂಸ್ಕೃತದ ಕ್ಲಾಸಿಗೆ ಚಕ್ಕರು ಹಾಕಿ ನಾನು ಕನ್ನಡದ ಕ್ಲಾಸಿನಲ್ಲಿ ಕೂರುತ್ತಿದ್ದೆ. ಹೈಸ್ಕೂಲಿನಲ್ಲಿ ಹುಟ್ಟಿದ ಎಚ್ಚರ ಮತ್ತು ಗೊಂದಲಗಳಿಗೆ ಶಿವಮೊಗ್ಗದಲ್ಲಿ ಒಂದು ಸ್ಪಷ್ಟತೆ ಮೂಡಲು ಕಾರಣ ನನ್ನ ಜೀವನದಲ್ಲಿ ಪ್ರವೇಶ ಮಾಡಿದ ಶಾಂತವೇರಿ ಗೋಪಾಲಗೌಡರ ಪ್ರಭಾವ. ಲೋಹಿಯಾರ ವಿಚಾರ, ಅದರ ಬೆನ್ನಲ್ಲೇ ಕುಮಾರವ್ಯಾಸ, ಕುವೆಂಪು, ಅಡಿಗ, ಬೇಂದ್ರೆಯವರ ಕಾವ್ಯ, ಅದು ಮುಗಿಯುತ್ತಿದ್ದಂತೆ ಸರ್ಕಲ್ಲಿನ ಸಾಹೇಬರ ಹೊಟೇಲಿನಲ್ಲಿ ಚಹಾ ಕುಡಿದು ಮಾರ್ಕ್ಸ್ ರಾಯ್ ವಿಚಾರ- ಹೀಗೆ ನಮ್ಮಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧಿಸಿದಂತೆ ಸಾಹಿತ್ಯವನ್ನು ರಾಜಕೀಯ ಚಿಂತನೆಯೂ, ರಾಜಕಾರಣವನ್ನು ಸಾಹಿತ್ಯದ ಒಳನೋಟಗಳೂ ಬೆಳಗಿ ಬೆಳಗಿಸುತ್ತಿದ್ದವು. ಮುಂದೆ ಇದೇ ಶಿವಮೊಗ್ಗದಲ್ಲಿ ಜಿ.ಹೆಚ್.ಪಟೇಲ್ ಮತ್ತು ಶಂಕರನಾರಾಯಣ ಭಟ್ಟರ ಸ್ನೇಹದಲ್ಲಿ ಇದು ಮುಂದುವರಿಯಿತು.

ಪಟೇಲ್ ಆ ದಿನಗಳಲ್ಲಿ ಸಾಹಿತ್ಯ ಮತ್ತು ರಾಜಕೀಯ- ಎರಡು ಕ್ಷೇತ್ರಗಳಲ್ಲಿ ಸಾಕಷ್ಟು ಓದಿಕೊಂಡ ರಸಿಕರು ; ನಿಜಲಿಂಗಪ್ಪನವರಿಗೆ ಪ್ರಿಯರಾದ ಬಂಧುವರ್ಗದವರಾದರೂ ಕಾಂಗ್ರೆಸ್ ಸೇರದೆ, ಸಮಾಜವಾದಿ ಪಕ್ಷವನ್ನು ಗೋಪಾಲಗೌಡರ ಜೊತೆ ಕಟ್ಟಬೇಕೆಂಬ ಹಠದ ಆದರ್ಶವಾದಿಗಳು. ಅನುಕೂಲವಂತರಾದ ಶಂಕರನಾರಾಯಣ ಭಟ್ಟರು ‘ಉಳುವವನೇ ನೆಲದೊಡೆಯನಾಗಬೇಕು’ ಎಂಬ ಚಳವಳಿಯಲ್ಲಿ ತೊಡಗಿದ್ದು , ಕ್ರಮೇಣ ತನ್ನ ಜಮೀನನ್ನು ಕಳೆದುಕೊಂಡವರು. ಹಾಸ್ಯಪ್ರಿಯರಾದ ಇವರು ಮುಂದಿನ ದಿನಗಳಲ್ಲಿ ತಮ್ಮನ್ನು ವರ್ಣಿಸಿಕೊಳ್ಳುತ್ತಿದ್ದುದು ಹೀಗೆ : ‘ನಾನೊಬ್ಬ ಲ್ಯಾಂಡ್ ಹೋಲ್ಡರ್’, ಅಂದರೆ ‘ನೆಲ ಹಿಡಿದವನು.’

ಮಾತಾಡುವುದು ಮಾತ್ರವಲ್ಲ , ಕಾಗೋಡು ರೈತ ಸತ್ಯಾಗ್ರಹವೂ, ಅದಕ್ಕಾಗಿ ನಾನು ಕರಪತ್ರಗಳನ್ನು ಬರೆಯುವುದೂ, ಬರೆದದ್ದನ್ನು ನನ್ನ ತಂದೆಯವರು ಶುರುಮಾಡಿದ ಪ್ರೆಸ್ಸಿನಲ್ಲಿ ನಾನೇ ಟ್ರಡಲ್ ಮೆಶೀನಿನಲ್ಲಿ ತುಳಿದು ಅಚ್ಚು ಮಾಡುವುದೂ, ಮಹಡಿಯ ಚಾಪೆ ಹಾಸಿ ಎ.ವಿ.ಶ್ರೀನಿವಾಸ, ಪಕ್ಕದ ಮನೆಯ ಮುಸ್ಲಿಂ ಕ್ಷೌರಿಕ, ಅಣ್ಣಯ್ಯ, ಗೋಪಾಲಗೌಡ- ಇತ್ಯಾದಿ ಸೋಷಲಿಸ್ಟ್ ಗೆಳೆಯರ ಜೊತೆ ಬೆಳಗಿನ ಜಾವದ ತನಕ ಹರಟುವುದೂ ಮೊದಲಾಯಿತು.

ಕಟುವಾದ ವಿಶ್ಲೇಷಣೆಯಲ್ಲಿ ಭೂತಕಾಲದ ಜಾತಿ ಸಂಬಂಧವಾದ ಸಂಕೋಲೆಗಳಿಂದ ಕಿತ್ತುಕೊಂಡು ಹೊರಬರುವ ಆಶಯದ ಜೊತೆ ಜೊತೆಯಲ್ಲೇ ಪಾಶ್ಚಾತ್ಯರ ವೈಚಾರಿಕತೆಯನ್ನು ಪ್ರಶ್ನಿಸಬಲ್ಲ, ಭಾರತೀಯ ಸತ್ಯದಲ್ಲಿ ಬೇರೂರಿದ ಲೋಹಿಯಾರ ಹೊ ಚಿಂತನೆಯಿಂದ ಪ್ರಭಾವಿತವಾಗಿದ್ದ ಚಳುವಳಿಗಳು ನಮಗೆ ಪ್ರಿಯವಾದುವು. ಈಗಿಂದೀಗಲೇ ದ್ವಿಜೇತರ ಜಾತಿಗಳ ಒಕ್ಕೂಟದಲ್ಲಿ , ರೈತರ ಹೋರಾಟದಲ್ಲಿ , ಇಂಗ್ಲೀಷ್ ಹಠಾವೋ ಚಳವಳಿಯಲ್ಲಿ ಪಾಲುದಾರರಾಗಿ ನಮ್ಮ ಭೂತಕಾಲದಿಂದಲೂ, ಪಾಶ್ಚಾತ್ಯರ ಸದ್ಯದ ದರ್ಪದಿಂದಲೂ ಮುಕ್ತವಾದ ಒಂದು ಪರ್‍ಯಾಯ ನಾಗರೀಕತೆಯಾಗಿ ಭಾರತ ರೂಪುಗೊಳ್ಳುವಂತೆ ಮಾಡಬೇಕೆಂಬ ಹಂಬಲದ ಈ ರಾಜಕೀಯ ಚಳುವಳಿಗಳು ಏಕಕಾಲದಲ್ಲಿ ಸಾಮಾಜಿಕ ಆರ್ಥಿಕ ಆಶಯಗಳನ್ನೂ , ಸಾಂಸ್ಕೃತಿಕ ಆಶಯಗಳನ್ನೂ ಪಡೆದುದಾಗಿದ್ದವು. ದ್ರಾವಿಡ ಕಜಗಂನಂತೆಯೋ, ಸಿಕ್ಕರ ಚಳುವಳಿಯಂತೆಯೋ, ಅಸ್ಸಾಮ್‌ನಲ್ಲಿ ವಿದ್ಯಾರ್ಥಿಗಳು ಪ್ರಾರಂಭಿಸಿದ ಚಳುವಳಿಯಂತೆಯೋ ಇದು ಅಲ್ಪ ಉದ್ದೇಶದ ಚಳುವಳಿಯಾಗಿರಲಿಲ್ಲ . ಈ ಚಳುವಳಿಗಳು ರಾಜಕೀಯ ಕಾರ್ಯಾಚರಣೆಯ ಸದ್ಯತನವನ್ನೂ, ಸಾಹಿತ್ಯದ ಧ್ಯಾನಶೀಲತೆಯನ್ನೂ ಒಟ್ಟಾಗಿ ಬೇಡುವಂತಹುದಾಗಿದ್ದವು, ನಮ್ಮ ಪಾಲಿಗೆ.

ಈ ಚಳುವಳಿಯ ಫಲವನ್ನಾಗಿ ಕೆಲವರು ಬಿಹಾರದ ಲಾಲು ಪ್ರಸಾದರನ್ನು ಕಾಣುವುದುಂಟು. ಇದು ನ್ಯಾಯವಲ್ಲ . ಆದರೆ ಅದರ ವಿಶ್ಲೇಷಣೆ ಈಗ ಬೇಡ. ನನಗೆ ಇಲ್ಲಿ ಮುಖ್ಯವಾದ ಸಂಗತಿಯೆಂದರೆ ಇದು: ಇವತ್ತಿನ ನನ್ನ ಮುಖ್ಯ ಒಳನೋಟಗಳನ್ನು ನನಗೆ ಒದಗಿಸುತ್ತಿರುವುದು ಪಾಶ್ಚಾತ್ಯರಲ್ಲಿ ಬೆಳೆದ ಮಾರ್ಕ್ಸ್ ಪ್ರಣೀತ ಚಿಂತನೆಯಲ್ಲ ; ಸ್ಥಳೀಯವೂ, ಜಾಗತೀಕವೂ ಏಕಕಾಲದಲ್ಲಿ ಎಂಬಂತೆ ಕೂಡಿಕೊಂಡ, ಗಾಂಧೀಜಿ ಮತ್ತು ಮಾರ್ಕ್ಸ್ ಇಬ್ಬರಿಗೂ ಸ್ಪಂದಿಸುವ ಚಿಂತನೆಯಿಂದ ಹುಟ್ಟಿದ್ದು ಅದು.

ತೀರ್ಥಹಳ್ಳಿಯಲ್ಲಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಜಾರ್ಜ್ ಬರ್ನಾರ್‍ಡ್ ಶಾನ ನಾಟಕಗಳ ಮುಖಾಂತರ ಸಿನ್ಹ ಎಂಬ ಹಿರಿಯರೊಬ್ಬರು ನನ್ನಲ್ಲಿ ಹುಟ್ಟಿಸಿದ್ದ ವೈಚಾರಿಕತೆಯ ಪ್ರೀತಿಯೇ ಮುಂದೆ ಗೋಪಾಲಗೌಡರು, ಶಿವಮೊಗ್ಗದ ರಾಯಿಸ್ಟರು, ಭದ್ರಾವತಿ ಕಾರ್ಖಾನೆಯ ಕಮ್ಯುನಿಸ್ಟರು, ನನ್ನ ಅಗ್ರಹಾರದ ಪರಿಸರದ ವೇದಾಂತಿಗಳನ್ನು ಪ್ರಶ್ನಿಸುತ್ತಿದ್ದ ಆರ್ಯ ಸಮಾಜದ ಚಿಂತಕರು- ಇವರ ಜೊತೆಗಿನ ವಾಗ್ವಾದಗಳಲ್ಲಿ ಎತ್ತೆತ್ತಲೋ ಬೆಳೆಯುತ್ತ ನನ್ನ ಸಂವೇದನೆಯನ್ನು ಮುಕ್ತವಾಗಿರುವಂತೆ ಕಟ್ಟಿತು. ಮಲೆನಾಡೇ, ಸುಮಾರು ಅರವತ್ತು ಕಿಲೋಮೀಟರಿನಷ್ಟು ಪ್ರದೇಶವೇ ನನಗೆ ಇಡೀ ವಿಶ್ವವನ್ನು ಪರಿಚಯಿಸಿದ ಕ್ಷೇತ್ರವಾಯಿತು. ಅಗ್ರಹಾರದಲ್ಲಿ ಪಂಡಿತ ಪರಂಪರೆಯಲ್ಲಿ ಬೆಳೆದಿದ್ದವರೊಬ್ಬರು ಎಷ್ಟೇ ಕನ್ನಡದ ನವೋದಯದ ಬರಹಗಾರರನ್ನು ಧಿಕ್ಕರಿಸಿ ಹಾಸ್ಯ ಮಾಡುತ್ತಿದ್ದರೂ, ಅವರ ಕಂದ ವೃತ್ತಗಳಿಗೆ ಬದಲಾಗಿ ಎಳೆಯನಾದ ನಾನು ಮನ ಸೋತದ್ದು ಬೇಂದ್ರೆಯ ಕಾವ್ಯಕ್ಕೆ. ಅಂತರ್ಜಾತೀಯ ಮದುವೆಯಾಗಿ ಬ್ರಾಹ್ಮಣರ ಕಣ್ಣಲ್ಲಿ ಜಾತಿಗೆಟ್ಟು ಹಿಂಡಗಲಿದ ಕಾರಂತರ ಬರವಣಿಗೆ ಮತ್ತು ವಿಚಾರಗಳಿಗೆ. ಮತ್ತು ನಿರಂಕುಶಮತಿಗಳಾಗಿ ಎಂದು ಕರೆಯಿತ್ತ ಕುವೆಂಪುವಿಗೆ.

ಹೀಗೆ ಆಧುನಿಕತೆಗೆ ಒಡ್ಡಿಕೊಂಡು ತನ್ನ ಮೂಲದ ಸತ್ವವನ್ನು ಕಳೆದುಕೊಳ್ಳದ ಕನ್ನಡದ ಮೂಲಕವೇ ನನಗೆ ಮನಸ್ಸಿನ ಬೆಳವಣಿಗೆಗೂ, ವಿಸ್ತಾರಕ್ಕೂ ಅಗತ್ಯವಾದ್ದು ಸಿಗುತ್ತಿತ್ತು . ಇಂಗ್ಲೆಂಡಿನಲ್ಲಿ ನಾನು ಓದುತ್ತಿದ್ದ ಕಾಲದಲ್ಲಂತೂ ನನಗಾದ ಎಲ್ಲ ಅನುಭವಗಳೂ ‘ಸಂಸ್ಕಾರ’, ‘ಮೌನಿ’, ‘ಕ್ಲಿಪ್ ಜಾಯಿಂಟ್’ನಂತಹ ಕೃತಿಗಳ ರಚನೆಗೆ ಕಾರಣವಾದವು. ಅದು ನ್ಯೂ ಲೆಫ್ಟ್ ಬೆಳೆದು ನಿಂತಿದ್ದ ಕಾಲ ; ವಿಯಾಟ್ನಂ ಯುದ್ಧಕ್ಕೆ ತೀವ್ರ ವಿರೋಧವಿದ್ದ ಕಾಲ. ನನ್ನ ಪ್ರಾಚಾರ್ಯರಾದ ರಿಚರ್‍ಡ್ ಹಾಗರ್‍ಟ್‌ರವರ ಎಡ ಪಂಥೀಯ ಮುಕ್ತ ಸಂವೇದನೆ, ತನ್ನ ಕಾರ್ಮಿಕ ಹಿನ್ನೆಲೆಯಿಂದ ಅವರು ತಂದ ಅನುಭವಗಳು, ಮಾಲ್ಕಂ ಬ್ರಾಡ್ಬರಿ ಮತ್ತು ಡೇವಿಡ್ ಲಾಡ್ಜ್ ರವರ ಸಾಹಿತ್ಯಿಕ ಒಳನೋಟಗಳು ನನ್ನನ್ನು ಇನ್ನೂ ಹೆಚ್ಚು ಕನ್ನಡದಲ್ಲಿ ಊರಿದವು.

ನಮ್ಮನ್ನು ನಾವು ಗುರುತಿಲ್ಲದಂತೆ ಕಳೆದುಕೊಂಡುಬಿಡಬಹುದಾದ ಅಮೆರಿಕನ್ ನಾಗರಿಕತೆಯ ಇಂದಿನ ಆಧುನಿಕತೆಗಿಂತ ಕೆಲವೇ ಕೆಲವು ವರ್ಷಗಳ ಹಿಂದೆ, ಅಂದರೆ ಸುಮಾರು ನಲವತ್ತು ವರ್ಷಗಳ ಹಿಂದೆ, ಆಧುನಿಕತೆಯ ಸ್ವರೂಪ ಹೇಗಿತ್ತು ಎಂಬುದನ್ನು ಕಥಿಸಲು ನಾನು ಹೀಗೆ ನನ್ನ ಅನುಭವಗಳನ್ನೇ ಹೆಕ್ಕುತ್ತಿದ್ದೇನೆ.

ಕಾಲದಲ್ಲಿ ಮತ್ತೆ ಹಿಂದಕ್ಕೆ ನಿಮ್ಮ ಅನುಮತಿ ಬೇಡಿ ಹೋಗುವೆ. ಹೈಸ್ಕೂಲಿನಲ್ಲಿ ನಮ್ಮ ಮುಖ್ಯೋಪಾಧ್ಯಾಯರಾಗಿದ್ದ ಯೋಗಾ ನರಸಿಂಹರೆಂಬುವರು ಎಳೆಯರಾದ ನಮಗೆ ಶೇಕ್ಸ್‌ಪಿಯರನ್ನೂ , ನೆಹರೂ ಮತ್ತು ಗಾಂಧಿಯವರ ವಿಚಾರಗಳನ್ನೂ ಮನದಟ್ಟಾಗುವಂತೆ ಕನ್ನಡದಲ್ಲಿ ವಿವರಿಸುತ್ತಿದ್ದರು. ಹಳ್ಳಿಯಿಂದ ನಡೆದು ಶಾಲೆಗೆ ಬಂದ ನಮಗೆ ಗಾಂಧೀಜಿಯವರ ಸಾವನ್ನು ತಿಳಿಸುವಾಗ ಪೇಟವನ್ನು ತೊಟ್ಟ ದಿಟ್ಟ ನಿಲುವಿನ ಹೆಡ್ ಮಾಸ್ತರರೇ ಕಣ್ಣೀರು ಹಾಕಿದ್ದರೆಂಬುದು ಅವರ ವಿಚಾರಗಳು ನನಗೆ ಆತ್ಮೀಯವಾಗುವಂತೆ ಮಾಡಿದ್ದವು. ಭಗವದ್ಗೀತೆಯ ತಾತ್ವೀಕ ಮಹತ್ವಕ್ಕಿಂತ ಹೆಚ್ಚಾಗಿ ಅದರ ಮರೆಯಲಾಗದ ಮಾತುಗಳನ್ನು ನಾದಮಯವಾಗಿ ನಮ್ಮ ಕಿವಿಗೆ ಹತ್ತಿಸಿದವರು ಅವರು.

ಆಧುನಿಕತೆ ನಮ್ಮನ್ನು ಆವರಿಸುತ್ತ ಹೋದ ಸಂಕೀರ್ಣವಾದ ಕಥನವನ್ನು ಮುಂದುವರೆಸುತ್ತೇನೆ. ಶಿವಮೊಗ್ಗದಿಂದ ಮೈಸೂರಿಗೆ ಓದಲು ಬಂದ ನನಗೆ ಲೀವಿಸ್‌ರವರ ಖಾಸಾ ಶಿಷ್ಯರಾಗಿದ್ದ ಸಿಡಿ‌ಎನ್‌ರವರು ಮತ್ತು ಬಿ‌ಎಂಶ್ರೀ ಪಂಥದ ಎಸ್.ವಿ.ರಂಗಣ್ಣನವರು ಪ್ರೊಫೆಸರ್ ಆದರು. ಕ್ಲಾಸಿನಲ್ಲಿ ಎಲಿಯಟ್‌ನ ಪದ್ಯಗಳನ್ನು ಚರ್ಚಿಸುವುದು, ಅವನು ಭಗವದ್ಗೀತೆಯನ್ನು ಬಳಸಿದನೆಂದು ಹಿಗ್ಗುವುದು, ಅವನ ಮುಖೇನ ಬೃಹದಾರಣ್ಯಕವನ್ನು ಸವಿಯುವುದು, ಮೈಸೂರಿನ ಕಾಫಿ ಹೌಸಿನಲ್ಲಿ ಆಗ ತಾನೇ ಅಡಿಗರು ಬರೆಯುತ್ತಿದ್ದ ನವ್ಯ ಕವನಗಳನ್ನು ಓದಿ ಚರ್ಚಿಸುವುದು, ಕೆ.ಸದಾಶಿವ, ರಾಘವ, ಶ್ರೀನಿವಾಸರಾವ್, ವಿಶ್ವನಾಥ ಮಿರ್‍ಲೆ , ರತ್ನ, ಮುಂದೆ ಸುಮತೀಂದ್ರ ನಾಡಿಗ ಇತ್ಯಾದಿ ಗೆಳೆಯರ ಜೊತೆ ಹಗಲು ರಾತ್ರಿಯೆನ್ನದೆ ಸಾಹಿತ್ಯ ರಾಜಕೀಯ ವಿಚಾರಗಳ ಬಗ್ಗೆ ಕ್ಲಾಸಿಗೆ ಚೆಕ್ಕರ್ ಹಾಕಿ ಮೇಲಿಂದ ಮೇಲೆ ಒನ್ ಬೈ ಟು ಕಾಫಿ ಕುಡಿದು, ಸಿಗರೇಟು ಸೇದುತ್ತ ಹರಟೆ ಹೊಡೆಯುವುದು, ಗುಟ್ಟಾಗಿ ಬಿಯರ್ ಕುಡಿದು ಗಂಟೆಗಟ್ಟಲೆ ಉದ್ವೇಗದಲ್ಲಿ ದೇವರು ಇದ್ದಾನೊ ಇಲ್ಲವೊ ಎಂಬುದನ್ನು ಚರ್ಚಿಸುವುದು, ಸುಬ್ಬಣ್ಣನ ಜೊತೆ ಪಂಪ ರತ್ನಾಕರವರ್ಣಿಯರನ್ನೂ ಓದಿಸಿ ಕೇಳುವುದು, ಶೆಲ್ಲಿ ಗಾರ್ಕಿಯರನ್ನು ಅವನಿಗೆ ಓದಿಸುವುದು, ಅವನ ಖರ್ಚಿನಲ್ಲಿ ಮೈಸೂರಿಗೆ ಬಂದ ಎಲ್ಲ ನಾಟಕಗಳನ್ನು ನೋಡುವುದು, ನಾವೇ ಬಣ್ಣ ಹಚ್ಚಿ ಉರುಹಚ್ಚಿದ ಮಾತುಗಳನ್ನು ಒಪ್ಪಿಸಿ ಸುಬ್ಬಣ್ಣನ ಖುಷಿಯಲ್ಲಿ ಪಾಲಾಗುವುದು, ಬಿಳಿಗಿರಿಯ ಸಹವಾಸದಲ್ಲಿ ಮೈ ಚಳಿಯನ್ನೂ ಮುಜುಗರಗಳನ್ನೂ ಕಳೆದುಕೊಂಡು ಸೋಗಿನ ಬರವಣಿಗೆಯನ್ನು ನಿರ್ದಯವಾಗಿ ಟೀಕಿಸುವುದು, ಚದುರಂಗದ ಜೊತೆ ಅಡ್ಡಾಡುವುದು, ಗೆಳಯರ ನಡುವೆ ನಮ್ಮ ಬರವಣಿಗೆಗಳನ್ನು ನಿರ್ಮಮದಿಂದ ಪರೀಕ್ಷಿಸಿಕೊಳ್ಳುವುದು- ಹೀಗೆ ನನ್ನ ಸಾಹಿತ್ಯ ಜೀವನ ಶುರುವಾಯಿತು.

ಹುರುಪಿನಲ್ಲಿ ಎಲ್ಲವನ್ನೂ ಕೊಂಚ ಅಗೌರವದಿಂದ ನೋಡಬಲ್ಲ , ಸಂಕೋಚಗಳನ್ನು ಕಳಚಿಕೊಂಡ, ಹಿರಿಯರಿಗೆ ಹುಂಬತನವೆಂದು ತೋರುವ, ಆದರೆ ಇವ್ತತಿಗೂ ನನಗೆ ಬಹು ಮುಖ್ಯವೆಂದು ಅನ್ನಿಸುವ ಕಾಫಿಹೌಸಿನಲ್ಲಿ ಕಳೆದ ಆ ಉತ್ಸಾಹದ, ಆತ್ಮೀಯ ಸಖ್ಯದ ಆ ದಿನಗಳಲ್ಲಿ ಪಾಶ್ಚಾತ್ಯ ಸಾಹಿತ್ಯ ಮಾದರಿಗಳ ಬಗ್ಗೆ ಇರಬೇಕಾದ್ದಕ್ಕಿಂತ ಹೆಚ್ಚಿನ ಆದರವೂ, ಕನ್ನಡ ಮತ್ತು ಸಂಸ್ಕೃತದ ಪ್ರಾಚೀನ ಕೃತಿಗಳ ಬಗ್ಗೆ ಕಡಿಮೆ ತಿಳುವಳಿಕೆಯಿಂದ ಹುಟ್ಟಿದ ಅನಾದರವೂ ಕೆಲಸ ಮಾಡಿರಬಹುದೆಂದು ಈಗೀಗ ನನಗೆ ತಿಳಿಯತೊಡಗಿದೆ.

ಆಗ ಸ್ಪಷ್ಟವಾಗದ ಮುಖ್ಯ ಸಂಗತಿಯೊಂದಿದೆ. ಪಾಶ್ಚಾತ್ಯರ eನ ಪರಂಪರೆಯಲ್ಲಿ ಹುಟ್ಟುವ ಆದರ ನಮಗೆ ತಿಳಿಯದಂತೆಯೇ ಅದಕ್ಕೆ ಸಮಾನವಾದ್ದನ್ನು ನಮ್ಮ ವೈದಿಕ ಪರಂಪರೆಯಲ್ಲಿ ಮಾತ್ರ ಕಾಣತೊಡಗುತ್ತದೆ.. ಏಕ ಕಾಲದಲ್ಲಿ ಇಂಗ್ಲೀಷ್‌ವಾದಿಯೂ, ಪುನರುತ್ಥಾನವಾದಿಯೂ ಸಂಸ್ಕೃತವಾದಿಯೂ ಆಗಿಬಿಡುವುದು ಸಾಧ್ಯವಿದ್ದಾಗ ಕುವೆಂಪು, ಬಿ‌ಎಂಶ್ರೀ, ಕಾರಂತ, ಮಾಸ್ತಿ- ಎಲ್ಲರೂ ಕನ್ನಡದ ಪರ ನಿಂತರು. ಪಾಶ್ಚಾತ್ಯ ನವ್ಯಕ್ಕೆ ಸೋತ ಗೋಪಾಲಕೃಷ್ಣ ಅಡಿಗರೂ ಪಂಪನಿಗೆ ಋಣಿಯಾಗಿ ಬರೆದರು ; ವರ್ತಮಾನದ ತುರ್ತಿನಲ್ಲಿ ಭೂತವನ್ನು ಅಗೆದು ಶೋಧಿಸಿದರು. ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು/ ಪುರುಷೋತ್ತಮ ಆ ಅಂಥ ರೂಪುರೇಖೆ?’ಎಂದು ವ್ರತಶೀಲ ತಪಸ್ಸಿನಲ್ಲಿ ನಿಷ್ಠೆಯುಳ್ಳವರಾದರು. ಇದೇ ಕಾಲಘಟ್ಟದಲ್ಲಿ ಕೆ.ಎಸ್.ನರಸಿಂಹಸ್ವಾಮಿಗಳಾದರೋ ಅಗೆದು ಶೋಧಿಸಬೇಕಾದ ಗಣಿಯೆಂದು ಭೂಮಿಯನ್ನು ನೋಡದೆ, ಹದವಾದ ಮಳೆ ಬಿದ್ದಾಗ, ಹದವಾಗಿ ಉಳಬೇಕಾದ ಬೇಸಾಯಗಾರನ ಕಾಯಕದ ಕುಂಕುಮ ಭೂಮಿಯೆಂದು ಕಂಡರು. ಮಹತ್ವದ ವಿಚಾರದ ವಾಗ್ವಾದವೊಂದು ರೂಪಕವಾಗಿ ಕನ್ನಡದಲ್ಲಿ ಹೀಗೆ ಮೂಡಿತು.

ಈ ಎಲ್ಲರೂ ಆಧುನಿಕರಾಗಿ ಇಂಗ್ಲಿಷಿನಿಂದ ಪಡೆಯಬೇಕಾದ್ದನ್ನು ಪಡೆದು, ಕನ್ನಡದ ಹಳೆಯದರಲ್ಲಿ ಗ್ರಾಹ್ಯವಾದ್ದನ್ನು ಇಂಗ್ಲಿಷಿನ ಕಣ್ಣಿನಿಂದ (?) ನೋಡಿ ಮೆಚ್ಚಿ ಬರೆದರು. ಇಂಗ್ಲಿಷನ್ನು ಕನ್ನಡದ ಕಣ್ಣಿನಿಂದ ನೋಡಿ ತಮ್ಮ ಬರವಣಿಗೆಯಲ್ಲಿ ಅಳವಡಿಸಿಕೊಂಡರು. ಯಾವತ್ತೂ ಅವರು ಜನಪರ ನಿಲುವನ್ನು ಬಿಟ್ಟುಕೊಡುವ- ಇವತ್ತು ನಾವು ಎಲ್ಲೆಲ್ಲೂ ಕಾಣುವ- ‘ಎಟೀಲಿಸ್ಟ್ ’ ಚಿಂತಕರಾಗಿರಲಿಲ್ಲ .

ಆದರೂ ಆಧುನಿಕ ಪಾಶ್ಚಾತ್ಯ ನಾಗರಿಕತೆ ನಮ್ಮನ್ನು ಕೊಂದುಬಿಡುವ ಸಾಧ್ಯತೆ ಇರುವ ದಿನಗಳಲ್ಲಿ ಗಮನಿಸಲೇಬೇಕಾದ ಒಂದು ವಿಷಯವಿದೆ. ನಮಗೆ ಬಿ‌ಎಂಶ್ರೀ, ಕುವೆಂಪು, ಕಾರಂತರಿಗಿದ್ದ ಮುಗ್ಧವಾದ ಇಂಗ್ಲಿಷಿನಿಂದ ಆಧುನಿಕತೆಯನ್ನು ಪಡೆಯಬಹುದಾದ ಶ್ರದ್ಧೆ ಸಾಧ್ಯವಿಲ್ಲ. ಅಡಿಗರೂ ಆ ದಿನಗಳಲ್ಲಿ , ಆರ್ಷ ಮೂಲದ ಹಲವು ಪುರಾಣಗಳನ್ನೂ ವಿಚಾರಗಳನ್ನೂ ಆಧುನಿಕಕ್ಕೆ ಅನ್ವಯಿಸುವ ಉಜ್ವಲ ಕ್ರಿಯೇಟಿವಿಟಿಯ ತಮ್ಮ ಆ ದಿನಗಳಲ್ಲಿ , ಪಶ್ಚಿಮ ಪ್ರಿಯರೇ. ಅವರ ಹಿಂದಿನ ಬಿ‌ಎಂಶ್ರೀ, ಎಂ.ಎಸ್.ಪುಟ್ಟಣ್ಣರಂತೆ ಕಂದಾಚಾರಗಳಿಗೆ ವಿರೋಧವಾಗಿ ಚಿಂತಿಸುವ ಹೊತ್ತಿನಲ್ಲಿ ಕುವೆಂಪು ಕಾರಂತರೂ ಪಾಶ್ಚಿಮಾತ್ಯ ವಿಚಾರಗಳು ಹುಟ್ಟಿಸುವ ಆಧುನಿಕತೆಯ ಪರವಾಗಿ ಇದ್ದವರೇ. ಇವರಲ್ಲಿ ಈ ಆಯ್ಕೆಗೆ ಸಂಬಂಧಿಸಿದಂತೆ ಮುಖ್ಯ ವ್ಯತ್ಯಾಸಗಳಿವೆ- ನಿಜ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಮಾತ್ರ ಅವರು ಪಾಶ್ಚಿಮಾತ್ಯ ವಿಚಾರಗಳಿಗೆ ಮನಸೋತವರು ಎಂಬುದಲ್ಲ . ಕನ್ನಡದ ಜೀರ್ಣಾಗ್ನಿಯಲ್ಲಿ ಪಶ್ಚಿಮದ ಅತ್ಯುತ್ತಮವನ್ನು ಕನ್ನಡಿಸಿಕೊಂಡರು ಎಂಬುದು. ನಾನು ಪ್ರಾರಂಭದಲ್ಲಿ ಸೂಚಿಸಿದ ಅನ್ಯದ ಜೊತೆಗಿನ ಅನುಸಂಧಾನದ ಕ್ರಮಗಳನ್ನು ಕನ್ನಡಕ್ಕೆ ಕಲಿಸಿದ ಪರಮಾಚಾರ್ಯರು ಇವರು.

ಆ ದಿನಗಳಲ್ಲಿ ನಮ್ಮ ಕನ್ನಡದ ಪ್ರೀತಿಯಿಂದಾಗಿ ನಮಗೂ ಪುಣ್ಯಕ್ಕೆ ಎಲಿಯಟ್ ಕೇವಲ ಮಾದರಿಯಾಗಿಯೋ, ಆದರ್ಶವಾಗಿಯೋ ಮಾತ್ರ ಉಳಿಯಲಿಲ್ಲ . ಅಡಿಗರ ಕೆಲವು ಕವನಗಳು ನನ್ನ ಪಾಲಿಗೆ ಎಲಿಯಟ್ಟಿನ ಕಾವ್ಯಕ್ಕಿಂತ ಭಿನ್ನವಾಗಿ, ಹೆಚ್ಚು ನಮ್ಮ ಪರಿಸರಕ್ಕೆ ಅರ್ಥಪೂರ್ಣವಾಗಿ ಕಂಡವು. ವೈಚಾರಿಕ ಶಿಸ್ತಿನ ದಾಮೋದರರಾವ್ ಮತ್ತು ಜಿ.ಎಚ್.ನಾಯಕರ ಜೊತೆಯೂ, ತೀಕ್ಷ್ಣವಾದ ಒಳನೋಟಗಳ ರಾಜೀವ ತಾರಾನಾಥರ ಜೊತೆಯೂ ಈ ಬಗ್ಗೆ ಮಾಡುತ್ತಿದ್ದ ಚರ್ಚೆಗಳು ನೆನಪಾಗುತ್ತವೆ.

ಅಡಿಗರ ರಾಜಕೀಯ ನಿಲುವುಗಳನ್ನು ಟೀಕಿಸುತ್ತಲೇ, ತನ್ನ ನಿಲುವನ್ನು ಶೋಧಕ್ಕೆ ಒಡ್ಡುವ ಅವರ ಕಾವ್ಯ ಪ್ರತಿಭೆಯನ್ನು ನಾನು ಇಂದಿಗೂ ಮೆಚ್ಚಿಕೊಂಡಿದ್ದೇನೆ. ನನಗೆ ಬೇಂದ್ರೆ ಇಂಗ್ಲೆಂಡಿನ ಎಲ್ಲ ರೊಮಾಂಟಿಕ್ ಕವಿಗಳಿಗಿಂತ ಹೆಚ್ಚು ಸಹಜವಾಗಿ, ದೊಡ್ಡವರಾಗಿ, ಗಹನರಾಗಿ ಕಾಣತೊಡಗಿದ್ದರು. ವಿಶ್ವದ ಕವಿವರೇಣ್ಯರನ್ನು ನಿತ್ಯದ ಅನುಭವದಲ್ಲಿ ಒರೆಹಚ್ಚಿ ಮೆಚ್ಚುತ್ತ , ಲ್ಯಾನ್ಸ್‌ಡೌನ್ ಬಿಲ್ಡಿಂಗಿನ ಮೂಲೆ ಅಂಗಡಿಯ ಪ್ರಸಿದ್ಧ ಹುರಿಗಾಳನ್ನು ಮೆಲ್ಲುತ್ತ , ಮೈಸೂರಿನ ವಾಹನ ವಿರಳ ಪ್ರಶಾಂತ ಬೀದಿಗಳಲ್ಲಿ ನಾವು ಅಡ್ಡಾಡಿದ್ದೆವು. ನನ್ನ ಜೊತೆ ನಡೆಯುತ್ತಿದ್ದ ಬಹು ಕಡಿಮೆ ಮಾತಿನ ಅರ್ಥಶಾಸ್ತ್ರಜ್ಞ ಹೆಚ್‌ಎಸ್‌ಕೆ, ಬೀದಿನಾಯಿಗಳನ್ನು ಅಟ್ಟುತ್ತ ಓಡಾಡುವ ವಿಶ್ವನಾಥ ಮಿರ್‍ಲೆ , ಮುಳ್ಳು ಹಂದಿಯೊಂದನ್ನು ಮುದ್ದಿನಿಂದ ಸಾಕಿಕೊಂಡಿದ್ದ ಕಥೆಗಾರ ಸದಾಶಿವ ನೆನಪಾಗುತ್ತಾರೆ.

ಶರ್ಮರ ಏಳು ಸುತ್ತಿನ ಕೋಟೆ ಪ್ರಕಟಗೊಂಡಾಗ ನನ್ನಲ್ಲಿ ಅದರ ಯುವ ಸಂವೇದನೆ ಹುಟ್ಟಿಸಿದ ಉತ್ಸಾಹವನ್ನು ಈಗಲೂ ನೆನೆಯಬಲ್ಲೆ , ಅಡಿಗರ ಯಾವುದೋ ಒಂದು ಮಾತು ನನ್ನಲ್ಲಿ ಹುಟ್ಟಿಸಿದ ವೈಚಾರಿಕ ಅಲೆಗಳನ್ನು ಈಗಲೂ ಗುರುತಿಸಿಕೊಳ್ಳಬಲ್ಲೆ- ನನ್ನ ಬರಹಗಳಲ್ಲಿ . ಸರಿಸುಮಾರು ಆ ಕಾಲದಲ್ಲೇ ಹಿರಿಯರಾದ ನಿರಂಜನರ ಸಖ್ಯ ನನಗೆ ದೊರೆಯಿತು, ಅವರು ಎಳೆಯರಲ್ಲಿ ತೋರುತ್ತಿದ್ದ ಪ್ರೀತಿ ನನ್ನ ಬೆಳವಣಿಗೆಗೆ ಮುಖ್ಯವೆನಿಸಿದ್ದರೂ, ಕ್ರಮೇಣ ನಮ್ಮ ನಡುವೆ ಬೆಳೆಯತೊಡಗಿದ ಅಭಿಪ್ರಾಯ ಭೇದಕ್ಕೆ ಕಾರಣ- ಕೇವಲ ವೈಯಕ್ತಿಕವಾಗಿರಲಿಲ್ಲ . ಸ್ಟಾಲಿನ್ ಸತ್ತಮೇಲೆ ಬಹಿರಂಗಗೊಂಡ ಸೋವಿಯತ್ ಒಕ್ಕೂಟದ ಸತ್ಯಗಳೂ, ಮಿಥ್ಯೆಗಳೂ, ಪ್ರದಗತಿಶೀಲ ಚಳವಳಿಯಲ್ಲಿ ಒಬ್ಬರಾಗಿದ್ದ ಗೋಪಾಲಕೃಷ್ಣ ಅಡಿಗರ ತೀವ್ರವಾದ ಭ್ರಮ ನಿರಸನವೂ, ನನ್ನ ಮೇಲೆ ಬೆಳೆಯುತ್ತ ಹೋದ ಜೆಪಿ ಮತ್ತು ಲೋಹಿಯಾರ ಪ್ರಭಾವವೂ, ಜಿಡ್ಡು ಕೃಷ್ಣಮೂರ್ತಿಗಳಿಂದ ನಾನು ಪಡೆದ ಪ್ರೇರಣೆಗಳೂ, ಭಾರತಕ್ಕೆ ಸಹಜವಾದ ಸಮಾಜವಾದವನ್ನು ಹುಡುಕಿಕೊಳ್ಳಬೇಕೆಂಬ ಹಠವೂ ಇದರಲ್ಲಿ ಅಡಗಿತ್ತು .

ವಿದೇಶಿ ಕನ್ನಡಿಯಲ್ಲಿ ಕಂಡುಕೊಂಡ ದೇಶಿ, ದೇಶೀಯ ಕನ್ನಡಿಯಲ್ಲಿ ಗುರುತಿಸಿಕೊಂಡ ವಿದೇಶಿ, ಕನ್ನಡದ ಸದ್ಯದಲ್ಲಿ ಮರುಹುಟ್ಟು ಪಡೆದು, ಅವಸ್ಥಾಂತರಗೊಂಡು ಇನ್ನೊಂದೇ ಬೇರೆ ಕೃತಿಯಾಗಿಬಿಡುವ ಕಾವ್ಯ ಕ್ರಿಯೆಯ ದಿವ್ಯ ಕನ್ನಡಕ್ಕೇನೂ ಹೊಸದಲ್ಲ . ನವ್ಯ ಹುಟ್ಟಿದ್ದೂ ಕನ್ನಡದಲ್ಲಿ ಹೀಗೆಯೇ. ನಮ್ಮನ್ನು ಆವರಿಸಿದ ಪಾಶ್ಚಿಮಾತ್ಯ ಆಧುನಿಕತೆಯನ್ನು ನಾವು ಜೀರ್ಣಿಸಿಕೊಳ್ಳುವ, ಗೆಲ್ಲುವ ಬಗೆ ನಮ್ಮ ಎಲ್ಲ ಚಳವಳಿಗಳಲ್ಲೂ ಇದೆ. ನವ್ಯ ಚಳವಳಿಯ ಬಗ್ಗೆ ನಡೆದ ಎಲ್ಲ ಚರ್ಚೆಯಲ್ಲೂ ಸ್ವಾತಂತ್ರ್ಯೋತ್ತರ ರಾಜಕಾರಣದ ಭ್ರಮ ನಿರಸನೆಯ ಒಂದು ರಾಜಕೀಯ ಆಯಾಮವೂ, ಕಾಮಜೀವನಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಸಂಕೋಚಗಳನ್ನು ಮೀರಿ ಪ್ರಾಮಾಣಿಕವಾಗಬೇಕೆಂಬ ಇಚ್ಛೆಯೂ, ಅನುಭವ ಪ್ರಾಮಾಣಿಕತೆಗೆ ಗ್ರಂಥಸ್ಥಲ್ಲದ ಭಾಷೆಯೇ ಯಾಕೆ ಅಗತ್ಯವೆಂಬ ಪ್ರಶ್ನೆಯೂ (ನೋಡಿ : ಅಡಿಗರ ‘ಮಣ್ಣಿನ ವಾಸನೆ’) ಅಡಗಿರುತ್ತಿತ್ತು . ಗುರು ಅರವಿಂದರಿಗಿಂತ ಅವರ ಶಿಷ್ಯರಾದ ಬೇಂದ್ರೆಯವರ ಮಣ್ಣಿನ ವಾಸನೆಯ ಪದ್ಯಗಳೂ, ಕುವೆಂಪುರವರ ಕಾದಂಬರಿಯ ದಟ್ಟತೆಯೂ ನಮಗೆ ಮುಖ್ಯವೆನ್ನಿಸಿತ್ತು .

ಈ ನಮ್ಮ ಲೋಕದಲ್ಲಿ ಲಂಕೇಶರು ಮತ್ತು ತೇಜಸ್ವಿ ಕಾಫಿ ಹೌಸ್ ಗೆಳೆಯರ ನಡುವಿನ ಸಾಹಿತ್ಯದ ಚರ್ಚೆಗಳಿಗೆ ತಂದ ಹೊಸ ಆಯಾಮವೂ, ಹೊಸ ತೀವ್ರತೆಯೂ, ಹೊಳಹುಗಳೂ ನೆನಪಾಗುತ್ತವೆ. ಯೂರೋಪಿನ ಸಾಹಿತ್ಯದ ಸೋಂಕಿಲ್ಲದಂತೆ ಅಚ್ಚ ಕನ್ನಡದ ಪ್ರತಿಭೆಯ, ಅನನ್ಯರಾದ ಕಂಬಾರರು ನಮ್ಮ ಸಾಹಿತ್ಯ ಲೋಕಕ್ಕೆ ಪ್ರವೇಶಿಸಿದ್ದು ಇನ್ನೊಂದು ಮುಖ್ಯ ಘಟನೆ. ಹೊಚ್ಚ ಹೊಸ ಅನುಭವದಿಂದ ನವ್ಯದ ದಿಕ್ಕನ್ನು ಬದಲಿಸುವಂತೆ ನಮ್ಮ ಲೋಕವನ್ನು ಕೆಲವು ವರ್ಷಗಳ ನಂತರ ಬೆಳಗಿದವರೆಂದರೆ ದೇವನೂರು ಮಹಾದೇವರು. ‘ಹೊಲೆಮಾದಿಗರ ಹಾಡಿ’ನ ಕವಿ ಸಿದ್ಧಲಿಂಗಯ್ಯನವರು ಕಾವ್ಯಕ್ಕೆ ನವ್ಯದಲ್ಲಿ ಕಾಣಸಿಗದ ತುಂಬು ಕಂಠದ ಧಾರಾಳವನ್ನು ತಂದರು.

ಪುರಾಣ, ಜಾನಪದ, ಚರಿತ್ರೆಗಳನ್ನು ಸಮಕಾಲೀನ ಅನುಭವಗಳಿಗೆ ರೂಪಕ ಮಾಡುವ ಪ್ರತಿಭೆಯ ನಾಟಕಕಾರ ಗಿರೀಶ್ ಕಾರ್ನಾಡ್, ಕವಿತೆಯ ಸ್ವರೂಪವನ್ನೇ ಬದಲಿಸಿದ ರಾಮಾನುಜನ್, ಮತ್ತು ತಿರುಮಲೇಶ್, ಧ್ಯಾನಶೀಲ ಪ್ರತಿಭೆಯ ಗಂಗಾಧರ ಚಿತ್ತಾಲ, ನಗರ ಪ್ರಜ್ಞೆಯ ಪ್ರಯೋಗಶೀಲ ಆಧುನಿಕ ಶಾಂತಿನಾಥ ದೇಸಾಯಿ, ಪಶ್ಚಿಮ ಮುಖಿಯಾದ ‘ಆಧುನಿಕ’ ನವ್ಯದ ಸೃಜನ ಶೀಲ ವೈರಿ ಮೊಕಾಶಿ ಪುಣೇಕರ್, ದಟ್ಟವಾದ ಅನುಭವದ ದೊಡ್ಡ ಬೀಸಿನ ಕಥೆಗಾರ ಯಶವಂತ ಚಿತ್ತಾಲ, ಕಾಡುವಂತೆ ಕನ್ನಡದಲ್ಲಿ ಗೀತೆಗಳನ್ನು ರಚಿಸಿದ, ಚಿಂತನಶೀಲ ಪದ್ಯಗಳನ್ನೂ ಬರೆದ ನಿಸಾರ್ ಅಹ್ಮದ್, ಪಕ್ವವಾದ ವಿಮರ್ಶಾ ಪ್ರಜ್ಞೆಯಿಂದ ಹಳೆಯದನ್ನೂ ಹೊಸದನ್ನೂ ತೂಗಿ ಬರೆಯ ಬಲ್ಲ ಗಿರಡ್ಡಿ ಗೋವಿಂದರಾಜ್, ಭಾವಗೀತೆಯ ಮೃದುವನ್ನೂ ಕಟುವಾದ ವ್ಯಂಗ್ಯವನ್ನೂ ಬೆಸೆಯುವ ನಾಟಕಕಾರ ಮತ್ತು ಕವಿ ಚಂದ್ರಶೇರ ಪಾಟೀಲ್, ಕನ್ನಡಕಾವ್ಯದ ಲಯದಲ್ಲಿ ವಿಶೇಷವಾದ ಆಸಕ್ತಿಯಿದ್ದ ಜಿ.ಎಸ್. ಸಿದ್ಧಲಿಂಗಯ್ಯ, ವಿಮರ್ಶೆಯಲ್ಲಿ ಹೊಸ ಅಲೆಯೆಬ್ಬಿಸಿದ ಕೀರ್ತಿನಾಥ ಕುರ್ತಕೋಟಿ, ಒಂದು ಕೃತಿಯ ಶಿಲ್ಪವನ್ನೂ ಅದರ ವಿವರಗಳನ್ನೂ ಒಟ್ಟಾಗಿ ಗ್ರಹಿಸಬಲ್ಲವರಾಗಿದ್ದ ಸರೋದ್ ವಾದಕ ರಾಜೀವ ತಾರಾನಾಥ, ಲೀವಿಸ್ ನಿಷ್ಠೆ ನಿಷ್ಠುರಗಳನ್ನು ಮೈಗೂಡಿಸಿಕೊಂಡ ಎಂ.ಜಿ. ಕೃಷ್ಣಮೂರ್ತಿ, ನಿರಂತರ ಆತ್ಮಶೋಧದ ಕಥೆಗಳನ್ನು ರಚಿಸಿದ ಎಚ್. ಜಿ. ರಾಘವ, ‘ಗ್ರಾಮಾಯಣದ’ರಾವ್ ಬಹದ್ದೂರರ ಬರವಣಿಗೆಗೂ, ಕುವೆಂಪುಗೂ ಎಕ್ಕುಂಡಿಯವರ ಭಾವ ತೀವ್ರತೆಗೂ ಒಲಿದ ಆಲನ ಹಳ್ಳಿಕೃಷ್ಣ – ಈ ಎಲ್ಲರೂ ಬರೆಯುತ್ತಿದ್ದ ಕಾಲದ ವೈಶಿಷ್ಟ್ಯವೆಂದರೆ : ಒಬ್ಬನ ಮಾತು ಒಬ್ಬನ ಮಾತಾಗಿ ಮಾತ್ರ ಉಳಿಯದಿದ್ದ ಕಾಲವಾಗಿ , ಒಬ್ಬರಿಗೊಬ್ಬರು ಒದಗುವ ಕಾಲವಾಗಿ ನಮಗದು ತೋರಿತ್ತು ಎಂಬುದು. ಇವರಲ್ಲಿ ನನ್ನ ಆತ್ಮೀಯರಾದವರು – ನನಗೆ ತಿಳಿದಂತೆ – ವ್ಯವಸ್ಥೆಯ ಕಡೆ ಅದರ ಒಪ್ಪಿಗೆಗಾಗಿಯಾಗಲೀ, ಮೆಚ್ಚುಗೆಗಾಗಲೀ ಮುಖತಿರುಗಿಸಿದವರಲ್ಲ – ಆ ನಮ್ಮ ಬೆಳವಣಿಗೆಯ ಕಾಲದಲ್ಲಿ. ಅಥವಾ, ಬೇಕಾದರೆ ಇದನ್ನು ಬಡಿದಾಟದ ಕಾಲದಲ್ಲಿ ಎನ್ನಿ. ಯಾಕೆಂದರೆ ಮೇಲಿನ ಹಲವರು ಒಂದು ಪಂಥಕ್ಕೆ ಗಂಟುಬಿದ್ದವರಾಗಿರಲ್ಲಿಲ್ಲ. ನಾನಂತೂ ‘ನವ್ಯ ಕಥೆಗಾರ’ನೆಂದು ಯಾರಾದರೂ ನನ್ನನ್ನು ಕರೆದರೆ ಗೊಂದಲಕ್ಕೊಳಗಾಗುತ್ತಿದ್ದೆ.

ನನ್ನನ್ನು ಮುಂದೆ ಎಂಬತ್ತರ ದಶಕದಲ್ಲಿ ಬೆಳೆಸಿದ್ದು ‘ರುಜುವಾತು’ಪತ್ರಿಕೆ ಹುಟ್ಟಿಸಿದ ಅಗತ್ಯಗಳು ; ಪತ್ರಿಕೆಯಿಂದಾಗಿ ನಾನು ಪಡೆದ ಜೊತೆಗಾರರು. ಒಬ್ಬರನ್ನೊಬ್ಬರು ಬೆಳೆಯಿಸುವಂತೆ ಕೆಲಕಾಲ ಈ ಪತ್ರಿಕೆ ನಡೆಯಿತು. ತಮ್ಮ ನೆನಪಿನಲ್ಲಿ ಇಡೀ ಕನ್ನಡ ಕಾವ್ಯದ ಪರಂಪರೆಯನ್ನು ಹೊತ್ತು ತಿರುಗುವ ಕಿರಂ ನಾಗರಾಜರು ಆ ದಿನಗಳಲ್ಲಿ ನನ್ನ ಕನ್ನಡ ಕಾವ್ಯದ ಅರಿವನ್ನು ಹಿಗ್ಗಿಸಿದರು. ಕೆ. ಸತ್ಯನಾರಾಯಣರು ಮುಂದೆ ನನ್ನ ಗೆಳೆಯರಾಗಿ ಬಿಟ್ಟ ಅಶೀಶನ ನಂದಿಯನ್ನು ನನಗೆ ಪರಿಚಯಿಸಿ ಓದಿಸಿದರು. ನನ್ನ ಬರವಣಿಗೆಯ ಪರಿಧಿಯನ್ನು ತಮ್ಮ ವೆಚಾರಿಕತೆಯಿಂದಲೂ, ಅನುಮಾನಗಳಿಂದಲೂ ಹಿಗ್ಗಿಸಿದರು. ಸರ್ವಮಂಗಳ, ಮೀನಾ ಮೈಸೂರು, ಪಟ್ಟಾಭಿರಾಮ ಸೋಮಯಾಜಿ ಸಾಹಿತ್ಯ ಚರ್ಚೆಯ ಜೀವಂತ ವಲಯವನ್ನು ಮೈಸೂರಲ್ಲಿ ಸೃಷ್ಟಿಸಿದರು.

ಈಗಲೂ ಹಿಂದಿನ ನನ್ನ ವಿದ್ಯಾರ್ಥಿಗಳ ಜೊತೆಗೆ ಗಂಟೆಗಟ್ಟಲೆ ಹರಟುತ್ತ ಅನೇಕ ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದೇನೆ.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.