ಅಮೀರ್ ಖಾನ್‍ನ ಹೆಮ್ಮೆಯ ಚಿತ್ರ “ಲಗಾನ್” ಆಸ್ಕರ್‍ಗೆ ಹೋಗಿದೆ. ಪ್ರಶಸ್ತಿಗಳಲ್ಲಿ ನಂಬಿಕೆಯಿಲ್ಲ ಎಂದು ಯಾವಾಗಲೂ ಪ್ರಶಸ್ತಿಪ್ರಧಾನ ಸಮಾರಂಭಗಳಿಂದ ದೂರವಿರುತ್ತಿದ್ದ ಅಮೀರ್ ಖಾನ್ ಈ ಬಾರಿ ತನ್ನ ನಿಲುವು ಬದಲಾಯಿಸಿಕೊಳ್ಳುತ್ತಿದ್ದಾನೆ. ಮಾರ್ಚಿಗೆ ಎದುರು ನೋಡುತ್ತಿದ್ದಾನೆ. ಸಮಾರಂಭಕ್ಕೆ ಅರ್ಮಾನಿ ಟಕ್ಸಿನಲ್ಲಿ ಬರಲೋ ಅಥವಾ ಲಗಾನ್‍ನ ಅಧಿಕೃತ ಚಿಂದಿ ಧೋತಿಯಲ್ಲಿ ಬರಲೋ ಎಂದು ಯೋಚಿಸುತ್ತಿದ್ದಾನೆ. ಇಡೀ ಭಾರತ ಚಿತ್ರರಂಗಕ್ಕೇ ಒಂದು ಹೆಮ್ಮೆಯ ಚಿತ್ರ ಕೊಟ್ಟಿದ್ದೇನೆ ಎಂದು ಬೀಗುತ್ತಿದ್ದಾನೆ. ಸ್ವತಃ ವಾಜಪೇಯಿಯವರೇ(?) ಶ್ಲಾಘಿಸಿದ್ದಾರೆ.
ಬುದ್ಧಿಜೀವಿಗಳೂ, ಕೇವಲ ಮನುಷ್ಯರೂ ಇದನ್ನು ಭಾರತೀಯತೆಯ ದ್ಯೋತಕವೆಂದು ಪ್ರಶಂಸಿಸಿದ್ದಾರೆ. ಬ್ರಿಟನ್ನಿನಲ್ಲಿ ಕೆಲವು ಬಿಳಿಯರು ಬೇಜಾರು ಮಾಡಿಕೊಂಡಿದ್ದಾರೆ. ಇದು ಕೂಡ ಅಮೀರನಿಗೆ ಅನುಕೂಲಕರವೇ ಆಗಿದೆ. ಇಂಥ ಒಂದು ಸುದ್ದಿಯೇ ಸಾಕು, ಚಿತ್ರದ ಕ್ಯಾಸೆಟ್ ಮಾರಾಟವಾಗಲು. ಅಮೆರಿಕದಲ್ಲಿ “ಬ್ಲಾಕ್‍ಬಸ್ಟರ್” ವಿಡಿಯೋ ಸರಣಿಯ ಅಂಗಡಿಯಲ್ಲಿ “ಲಗಾನ್”ನ ಹಿಂದಿ ಅವತರಣಿಕೆ ಬಾಡಿಗೆಗಿದೆ. ಅಮೀರ ಖಾನಿನ ಉತ್ತರ ಅಮೆರಿಕಾದ ಕ್ಯಾಂಪ್, ಪ್ರಚಾರ ಫಲಕೊಟ್ಟಿದೆ. ಒಟ್ಟು ಅಮೀರ್ ಗೆದ್ದಿದ್ದಾನೆ. ತಾನು ಎಣಿಸದಿರುವ ಯಶಸ್ಸು ಸಿಕ್ಕಿದ್ದಕ್ಕೆ ಪುಳಕಿತನಾಗಿದ್ದಾನೆ. ಏನೀ ಅಬ್ಬರ? ಏನಿದೆ ಇದರಲ್ಲಿ. ಯಾಕೆ ಜನ ಮುಗಿಬೀಳುತ್ತಿದ್ದಾರೆ, ಈ ಚಿತ್ರ ನೋಡಲು. ಆಸ್ಕರ್ ಪಡೆಯಲು ಯೋಗ್ಯವೇ ಈ ಚಿತ್ರ? ಮೂಲತಃ “ಲಗಾನ್: ಒಂದು ವ್ಯಾಪಾರಿ ಚಿತ್ರ. ೨೫ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಸಿನೆಮಾ ತೆಗೆದಾಗ ಚಿತ್ರದ ನಿರ್ಮಾಪಕ ಬಯಸುವುದು ಆಸ್ಕರ್ ನೋಂದಾವಣೆಯಲ್ಲ, ತನ್ನ ದುಡ್ಡು ಹೇಗೆ ವಾಪಸ್ ತೆಗೆದುಕೊಳ್ಳುವುದು ಎನ್ನುವ ವ್ಯಾಪಾರಿ ತಂತ್ರ. ಆ ಎಲ್ಲಾ ವ್ಯಾಪಾರಿ ತಂತ್ರಗಳೂ ಸಮಪ್ರಮಾಣದಲ್ಲಿ ಸೇರಿದಾಗ “ಲಗಾನ್”ನಂತಹ ಚಿತ್ರಗಳು ಸಿದ್ಧವಾಗುತ್ತವೆ.
ಇಲ್ಲಿ ಎಲ್ಲವೂ ಇದೆ. ಗ್ರೇಸಿಯ ಮುಗ್ಧಮುಖವಿದೆ. ರಹಮಾನನ ಸಂಗೀತವಿದೆ. ಸಂಗೀತ ಚೆನ್ನಾಗಿಲ್ಲವೇನೆಂದಿಲ್ಲ, ಚೆನ್ನಾಗಿರಬೇಕೆಂದೇನಿಲ್ಲ. ರಹಮಾನ್ ಅಮೀರ ಖಾನನ “ಲಗಾನ್”ನಂತಹ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾನೆ ಅನ್ನುವ ವಸ್ತುವೇ ಪ್ರೇಕ್ಷಕನನ್ನು “ಕಂಡಿಷನ್” ಮಾಡಿಬಿಡುತ್ತದೆ. ಅದು ಚೆನ್ನಾಗಿರದೇ ಇರುವುದಕ್ಕೇ ಸಾಧ್ಯವೇ ಇಲ್ಲ. ಸುಂದರ ಛಾಯಾಗ್ರಹಣವಿದೆ, ರೀರೆಕಾರ್ಡಿಂಗ್, ಸಂಕಲನ ಚೆನ್ನಾಗಿದೆ. ನಿರ್ಮಾಣದಲ್ಲಿ ಶಿಸ್ತಿದೆ. ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧ ಹೋರಾಡುವ ಹಳ್ಳಿಹೈದರ “ಆಸ್ಕರ್‍ವರ್ತಿ’ ವಸ್ತುವಿದೆ. ಜೊತೆಗೆ “ಕ್ರಿಕೆಟ್” ಇದೆ. ತಂತ್ರಾಂಶಗಳನ್ನು ಒಂದು ಕ್ಷಣ ಬದಿಗಿರಿಸೋಣ. ಬರೀ ತಂತ್ರಾಂಶಗಳಿಂದ ಚಿತ್ರ ಗೆಲ್ಲುವಂತಿದ್ದರೆ ಶಾರೂಖನ ಅಶೋಕನು ಗೆಲ್ಲಬೇಕಾಗಿತ್ತು, ಕಮಲಹಾಸನನ ಅಭಯನೂ ನಿಲ್ಲಬೇಕಿತ್ತು. ಆದರೆ ಹಾಗಾಗಲಿಲ್ಲವಲ್ಲ, ಏಕೆ. ನೋಡುವ ಪ್ರೇಕ್ಷಕ ತೀರ ಬುದ್ಧಿವಂತನೋ, ಅಥವಾ ಅವನನ್ನು ಮರುಳುಮಾಡಿಸುವಂಥಾದ್ದೇನಾದರೂ ಇದೆಯೋ? ಇವೆಲ್ಲವೂ ಸೋಗಲಾಡಿತನ, ಅಪ್ಪಟ ವ್ಯಾಪಾರಿ ಅಂಶವನ್ನೊಳಗೊಂಡ ಸಿನೆಮಾವೊಂದನ್ನು ಆಸ್ಕರ್‍ಗೆ ಹೆಸರಿಸಿರುವುದು ರಾಜಕೀಯ ಎಂದು ನಮ್ಮ ಬುದ್ಧಿಜೀವಿಗಳು ವಿಶ್ಲೇಷಿಸಬಹುದು. ಅದರ ತಪ್ಪುಗಳು ಈ ನಿಟ್ಟಿನಲ್ಲಿ ಜೋರಾಗಿ ಕಾಣಿಸಬಹುದು. ಅದಕ್ಕಿಂತಾ ಒಳ್ಳೆಯ ಭಾರತೀಯ ಚಿತ್ರಗಳು ಅಥವಾ ಅಂತರರಾಷ್ಟ್ರೀಯ ಚಿತ್ರಗಳು ಈಗ ತಟಕ್ಕನೆ ಕಣ್ಣಿಗೆ ಬೀಳಬಹುದು. ನಿರ್ದೇಶಕನ ಅಪಕ್ವತೆ, ನಿರ್ಮಾಪಕನ ವ್ಯಾಪಾರಿ ಮನೋಭಾವ, ಜನಪ್ರಿಯ ಆಟವೊಂದನ್ನು ರಾಷ್ಟ್ರಪ್ರೇಮಕ್ಕೆ ಸಮೀಕರಿಸಿರುವ ತಂತ್ರ ಚೀಪ್ ಎನ್ನಿಸಬಹುದು, ಆಷಾಡಭೂತಿತನವೆನ್ನಬಹುದು. ಎಲ್ಲವನ್ನೂ ನೋಡುವ ಮುನ್ನ ನಮ್ಮಲ್ಲಿರುವ ಪ್ರೇಕ್ಷಕನನ್ನು ಜಾಗರೂಕನನ್ನಾಗಿ ಮಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.
“ಲಗಾನ್” ಯಾತಕ್ಕಾಗಿ ಮಾಡಲ್ಪಟ್ಟಿದೆ ಎಂದು ಅರ್ಥ ಮಾಡಿಕೊಳ್ಳದೆ ಅದರಲ್ಲಿರುವುದನ್ನು ಅನುಭವಿಸದೆ, ಅದು ಆಸ್ಕರ್‍ಗೆ ಹೋದದ್ದನ್ನೇ ನೆಪವಾಗಿಟ್ಟುಕೊಂಡು ಅದರ ಗುಣಾವಗುಣಗಳನ್ನು ವಿಶ್ಲೇಷಿಸುವುದು ತಪ್ಪೆಂದು ನನ್ನ ಭಾವನೆ. ಮೊದಲೇ ಹೇಳಿದಹಾಗೆ “ಲಗಾನ್” ಆದದ್ದು ವ್ಯಾಪಾರಿ ದೃಷ್ಟಿಯಿಂದ. ಪ್ರತಿಯೊಬ್ಬ ನಿರ್ಮಾಪಕ, ನಿರ್ದೇಶಕ ತನ್ನ ಚಿತ್ರದ ಮೂಲಕ ಪ್ರೇಕ್ಷಕನ ಮೂಲ “ಇನ್ಸ್‍ಟಿಂಕ್ಟ್” ಗಳನ್ನು ತಟ್ಟಲು ಪ್ರಯತ್ನಿಸುತ್ತಾನೆ. ಅದು ಪ್ರೇಮ, ಪ್ರೀತಿಯಾಗಿರಬಹುದು, ಹಸೀ ಕಾಮವಾಗಿರಬಹುದು, ಕಣ್ಣಿರಿನ ಕೋಡಿ ಹರಿಸುವ ಮೆಲೋಡ್ರಾಮಾವಾಗಿರಬಹುದು ಅಥವ ಹಿಂಸೆಯಾಗಿರಬಹುದು. ದೇಶಪ್ರೇಮ ಇಂಥ ಒಂದು ಅತಿ ಶಕ್ತಿಶಾಲಿಯಾದ ಮೂಲಭೂತ ತುಡಿತ. ಅದನ್ನು ತನ್ನ ಅನುಕೂಲಕ್ಕೆ ತಿರುಗಿಸಿಕೊಂಡು ಉತ್ತಮ ತಾಂತ್ರಿಕ ಚೌಕಟ್ಟಿನಲ್ಲಿ ಒಂದು ಒಳ್ಳೆಯ ಸಿನೆಮಾ ಮಾಡುವುದು ತಯಾರಕರ ಉದ್ದೇಶವಾಗಿದ್ದರೆ ಅದು ತಪ್ಪೇ? ಹಿಂಸೆ, ಕಾಮಗಳನ್ನು ವೈಭವೀಕರಿಸುವುದಕ್ಕಿಂತ ಇದು ಮೇಲಲ್ಲವೇ?. ಇರುವ ಮೂರೂವರೆ ಘಂಟೆಯ ಅವಧಿಯಲ್ಲಿ ತುಂಬಾ ಆಳವಾದ ಯೋಚನೆಗೆ ಒಳಪಡಿಸದೆ, ಪ್ರೇಕ್ಷಕನನ್ನು ನಗಿಸಿ, ಅಳಿಸಿ ಕೊನೆಗೆ ತುದಿಗಾಲಲ್ಲಿ ನಿಲ್ಲಿಸಿ “ಭಾರತ್ ಮಾತಾ ಕಿ ಜೈ” ಎಂದು ಕಣ್ಣೊರೆಸಿಕೊಂಡು ಟಾಕೀಸನ್ನು ಬಿಡಲು ತಯಾರುಮಾಡುವಾಗ, ನಿರ್ದೇಶಕ ಪ್ರತಿಯೊಂದನ್ನೂ ವೈಭವೀಕರಿಸದಿದ್ದರೆ- ಕಮರ್ಶಿಯಲ್ ಆಗಿ ಗೆಲ್ಲುವುದಿಲ್ಲ. ಆತನ ಉದ್ದೇಶವೂ ಅದೇ ಆಗಿರುತ್ತದೆ. ಕೆಲವೊಮ್ಮೆ ಆತನ ಉದ್ದೇಶಕ್ಕೂ ಮೀರಿ ಸಿನೆಮಾ ಯಶಸ್ಸು ಗಳಿಸಿ ಇಂಥ ಪ್ರಶಸ್ತಿಗಳಿಗೆ ಹೆಸರಿಸಿಕೊಂಡಾಗ ಪ್ರೇಕ್ಷಕ ಆ ಚಿತ್ರವನ್ನು ನೋಡುವ ದೃಷ್ಟಿ ಬದಲಾಗಿಬಿಡುತ್ತದೆ. ಇದ್ದಕ್ಕಿದ್ದಹಾಗೆ ಸಿನೆಮಾ ನೋಡದ ಬುದ್ಧಿಜೀವಿಗಳೆಲ್ಲಾ ಸಿನೆಮಾ ನೋಡಲು ಶುರುಮಾಡಿಬಿಡುತ್ತಾರೆ. ಅದು ತಪ್ಪು, ಇದು ತಪ್ಪುಗಳು ಶುರುವಾಗುತ್ತವೆ.
ಮಾಸ್‍ಗೆಂದು ಮಾಡಿದ್ದನ್ನು ಕ್ಲಾಸ್ ನೋಡಿದರೆ ಆಗುವ ಮೂಗುಮುರಿತ ಶುರುವಾಗಿಬಿಡುತ್ತದೆ. “ಶತರಂಜ್ ಕೆ ಖಿಲಾಡಿ”, “ಮಧ್ವಾಚಾರ್ಯ” ದ ಗುಂಪಿಗೆ ಸೇರಿಸಲ್ಪಡುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಇಂಥವುಗಳನ್ನು ಅನುಭವಿಸಿ ಸುಖಿಸುವ ಆಫ್‍ಬೀಟ್ ಪ್ರೇಕ್ಷಕ “ಲಗಾನ್” ನೋಡಲು ಪ್ರಯತ್ನಿಸುತ್ತಾನೆ. ಅವನ ಇಗೋ ಅಮೀರನ ವೇವ್‍ಲೆಂತಿನೊಂದಿಗೆ ತಾಳೆಯಾಗದೆ ಅವನಲ್ಲಿರುವ ಬೌದ್ಧಿಕ ಪ್ರೇಕ್ಷಕ ಅಳುತ್ತಾನೆ. “ಲಗಾನ್” ಸಾಯುತ್ತದೆ. ಒಂದು ಪ್ರಶಸ್ತಿಯ ನೋಂದಾವಣೆ ಒಂದು ಸುಂದರ ವ್ಯಾಪಾರೀ ಚಿತ್ರವನ್ನು ಹೇಗೆ ಹಾಳು ಮಾಡಬಹುದು ನೋಡಿ. ಇದು “ಆಸ್ಕರ್”ಗೆ ಹೆಸರಿಸಿಕೊಳ್ಳದಿದ್ದರೆ ಇನ್ನೊಂದು “ಹಂ ಆಪ್ಕೆ ಹೈ ಕೌನ್” ಅಥವಾ “ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೇ” ಗಳಂತೆ ಬ್ಲಾಕ್‍ಬಸ್ಟರ್ ಆಗಿರುತ್ತಿತ್ತು. ಫಿಲಂಫೇರ್ ಪ್ರಶಸ್ತಿಗಳು ಬರುತ್ತಿತ್ತು. ಯಥಾಪ್ರಕಾರ, ಅಮೀರ್ ಖಾನ್ ಪ್ರಶಸ್ತಿ ಸಿನೆಮಾದ ಗುಣಕ್ಕೆ ಮಾನದಂಡವಲ್ಲವೆಂದು ಹೇಳಿ ಆ ದಿನದಂದು ಲಂಡನ್ನಿನಲ್ಲಿ ಹೋಗಿ ಕೂತಿರುತ್ತಿದ್ದ. ಕಾಲೇಜುಗಳ ಪಡ್ಡೆಹುಡುಗಿಯರು ಕಣ್ಣೊರೆಸಿಕೊಳ್ಳುತ್ತಿದ್ದರು. ಮತ್ತೆ ವಾಪಸ್ಸಾಗಿ ಸದ್ದಿಲ್ಲದೇ ಇನ್ನೊಂದು ಸಿನೆಮಾ ಮಾಡಲು ಪ್ರಯತ್ನಿಸುತ್ತಿದ್ದ.
ಆದರೆ ಈಗ ಹಾಗಲ್ಲ, ಆಸ್ಕರ್ ಅನ್ನುವ ಹೆಸರೊಂದೇ ಸಾಕು, ತಾನು “ಗಾಂಧಿ”ಯಂತ ಚಿತ್ರ ಮಾಡಿದ್ದೇನೆ ಅನ್ನುವ ಭಾವನೆಯೇ ಸಾಕು ಅಮೀರನನ್ನು ಖುಷಿಪಡಿಸಲು. ಇಡೀ ಚಿತ್ರರಂಗದಲ್ಲಿ ಯಾರೂ ಸಾಧಿಸದಿದ್ದನ್ನು ತಾನು ಸಾಧಿಸಿದ್ದೇನೆ ಎಂದು ಸಂತೋಷಪಡುತ್ತಾನೆ. ಪಾಪ, ಅವನೇನು ಮಾಡುತ್ತಾನೆ ಹೇಳಿ. ಅವನೂ ಒಬ್ಬ ಸಾಮಾನ್ಯ ಮನುಷ್ಯ. ಸಿನೆಮಾ ಜಗತ್ತಿನಲ್ಲೇ ಉತ್ತಮವೆಂದು ಪರಿಗಣಿಸಲ್ಪಡುವ ಪ್ರಶಸ್ತಿಯೊಂದಕ್ಕೆ ನಿಮ್ಮ ಕನಸಿನ ಕೂಸು ನೋಂದಾಯಿಸಲ್ಪಟ್ಟಲ್ಲಿ ನಿಮಗೆ ಖುಷಿಯಾಗುವುದಿಲ್ಲವೇ? ಖಂಡಿತಾ ಆಗುತ್ತದೆ.
ಕಲಾತ್ಮಕ ಚಿತ್ರವಾಗಿದ್ದಿದ್ದರೆ?
ಆದರೆ ಒಂದು ಮಾತ್ರ ನಿಜ. ಇದೇ “ಲಗಾನ್” ಒಂದು ಕಲಾತ್ಮಕ ಚಿತ್ರದಂತೆ ತಯಾರಾಗಿದ್ದರೆ, ಅದನ್ನು ನಮ್ಮ ಜೀ. ವಿ. ಅಯ್ಯರ್ ಅಥವಾ ಆಡೋರರೋ ನಿರ್ದೇಶಿಸಿದ್ದಿದ್ದರೆ ಅದು ಈ ಕಡೆ ವ್ಯಾಪಾರಿಯಾಗೂ ಗೆಲ್ಲುತ್ತಿರಲಿಲ್ಲ, ಆ ಕಡೆ ಆಸ್ಕರಿಗೂ ಹೋಗುತ್ತಿರಲಿಲ್ಲ. ಅದು ಹೋಗಲಿಲ್ಲವೆಂದು ಯಾವನೂ ನೊಂದುಕೊಳ್ಳುತ್ತಲೂ ಇರಲಿಲ್ಲ. ಈ ಹಿರಿಯ ಪ್ರತಿಭೆಗಳ ಬಗ್ಗೆ ಲಘುವಾಗಿ ನಾನು ಮಾತನಾಡುತ್ತಿಲ್ಲ. ಆದರೆ ಇವರುಗಳು ಸಿನೆಮಾ ಮಾಡುವುದು ಅವರ ತೃಪ್ತಿಗೆ ಮಾತ್ರ ಅಥವ ಅವರಷ್ಟೇ ಬುದ್ಧಿವಂತ ಪ್ರೇಕ್ಷಕರಿಗಾಗಿ ಮಾತ್ರ. ನಮ್ಮ ಸಾಮಾನ್ಯ ಪ್ರೇಕ್ಷಕ ಅವರಿಗೆ ಸ್ಪಂದಿಸುತ್ತಾನೆಯೇ? ಇಲ್ಲ. ಬೇರೆ ಬೇರೆ ಅಂತರರಾಷ್ಟ್ರೀಯ ಚಲನಚಿತ್ರ ಉತ್ಸವಗಳಲ್ಲಿ ಬರೀ ಬುದ್ಧಿಜೀವಿಗಳ ಶಹಭಾಸ್‍ಗಿರಿ ಸಿಗುತ್ತದೆ. ಅದು ತಪ್ಪೆಂದು ನಾನು ಹೇಳುತ್ತಿಲ್ಲ. ಯಾಕೆಂದರೆ ಸಾಮಾನ್ಯ ಪ್ರೇಕ್ಷಕನನ್ನು ಮುಟ್ಟುವುದು ಅವರುಗಳ ಉದ್ದೇಶವೂ ಅಲ್ಲ. ಅದೂ ಅಲ್ಲದೆ ಆಸ್ಕರ್ ಕೊಡುವುದೂ ಮೈನ್ ಸ್ಟ್ರೀಮ್ ಸಿನೆಮಾಕ್ಕೆ ಮಾತ್ರ.
ಮಾನದಂಡವೇನು?
ಆಸ್ಕರ್ ನೋಂದಾವಣೆಗೆ ಮಾನದಂಡವೇನು? ಹಾಲಿವುಡ್‍ನ ಫಿಲಂ ಅಕಾಡೆಮಿಯವರು ಬೇರೆ ರಾಷ್ಟ್ರಗಳಿಂದ ಕಳಿಸಲ್ಪಟ್ಟ ಚಿತ್ರಗಳನ್ನು ನೋಡಿ ಉತ್ತಮವೆಂದು ಗುರುತಿಸಿದ್ದಲ್ಲಿ ಉತ್ತಮ ಐದನ್ನು ಕೊನೆಯ ಸುತ್ತಿನ ಸ್ಪರ್ಧೆಯ ತನಕ ಕೊಂಡೊಯ್ಯಲಾಗುತ್ತದೆ. ಅದು ಅಂತಿಮ ಸುತ್ತು. ನಂತರ ಯಾರಿಗೆ ಪ್ರಶಸ್ತಿ ಅನ್ನುವುದು ಪ್ರಶಸ್ತಿಪ್ರದಾನ ದಿನದಂದೇ ಗೊತ್ತಾಗುತ್ತದೆ. ಪ್ರಶಸ್ತಿಯ ನೋಂದಾವಣೆ ಆ ಸಮಾರಂಭಕ್ಕೆ ಹಾಜರಿರುವುದು ಎಲ್ಲವೂ ತೀರ ಗೌರಾವಾನ್ವಿತವಾದ ವಿಷಯಗಳೇ. ಇದುವರೆವಿಗೂ ಭಾರತದಿಂದ ಈ ಸುತ್ತಿನವರೆಗೂ ಹೋಗಿರುವ ಚಿತ್ರಗಳು ಎರಡು. “ಸಲಾಂ ಬಾಂಬೆ’ ಹಾಗೂ ” ಮದರ್ ಇಂಡಿಯಾ”. ಹಾಗಾಗಿ ಅಮೀರ ಖಾನನ ಸಂತೋಷಕ್ಕೂ ಒಂದು ಕಾರಣವಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಆಸ್ಕರ್ ಪ್ರಶಸ್ತಿ ಸಿಕ್ಕಿರುವ ಹಾಲಿವುಡ್ ಚಿತ್ರಗಳನ್ನು ನೋಡೋಣ.” ಗ್ಲೇಡಿಯೇಟರ್” “ಅಮೆರಿಕನ್ ಬ್ಯೂಟಿ” “ಶೇಕ್ಸ್‍ಪಿಯರ್ ಇನ್ ಲವ್” “ಟೈಟನಿಕ್” ” ದ ಇಂಗ್ಲಿಷ್ ಪೇಶೆಂಟ್” “ಬ್ರೇವ್ ಹಾರ್ಟ್’” ದ ಫಾರೆಸ್ಟ್ ಗಂಪ್”. ಕಳೆದ ಆರು ವರ್ಷಗಳಲ್ಲಿ ಆಸ್ಕರ್ ಗೆದ್ದಿರುವ ಚಿತ್ರಗಳು.
ಇವೆಲ್ಲವುದರ ಒಂದು ಸಾಮಾನ್ಯ ಗುಣವೇನು ಗೊತ್ತೇ? ಸಾಮಾನ್ಯ ಪ್ರೇಕ್ಷಕನನ್ನು ಮುಟ್ಟಿರುವುದು. ಈ ಚಿತ್ರಗಳನ್ನು ನೋಡಿ ಖುಷಿಪಡಲು ತೀರ ಬುದ್ಧಿವಂತರಾಗಿರಬೇಕೆಂದಿಲ್ಲ. ಸರಳತೆ ಎಷ್ಟು ಸುಂದರ ಅನ್ನುವುದಕ್ಕೆ ಒಂದೇ ಒಂದು ಉದಾಹರಣೆ ಕೊಡುತ್ತೇನೆ. ಎರಡು ವರ್ಷಗಳ ಹಿಂದೆ ಆಸ್ಕರ್ ಪಡೆದ “ಅಮೆರಿಕನ್ ಬ್ಯೂಟಿ”ಯನ್ನು ನೋಡಿ. ಪ್ರತಿಯೊಬ್ಬ ಅಥವಾ ಒಬ್ಬಾಕೆ ತನ್ನತನದಲ್ಲಿ ತನ್ನ ಅವಶ್ಯಕತೆಗಳನ್ನು ಪೂರೈಸುವ ತವಕದಲ್ಲಿ ತಮ್ಮತನ ಹಾಗೂ ಕುಟುಂಬದ ಸಾಂಘಿಕ ವ್ಯವಸ್ಥೆ ಹೇಗೆ ಚೂರುಚೂರಾಗುತ್ತದೆ ಎಂಬುದನ್ನು ಅತಿ ಸರಳವಾಗಿ ಅಷ್ಟೇ ಪರಿಣಾಮಕಾರಿಯಾಗಿ ಹೇಳಲ್ಪಟ್ಟಿದೆ. ಅದರಲ್ಲಿ ಬರುವ ಪಾತ್ರಗಳನ್ನೇ ನೋಡಿ, ತನ್ನ ಕೆಲಸದಲ್ಲಿ ಮೈಮರೆತಿರುವ ಅಮ್ಮ, ಹೆಂಡತಿ ಹಾಗೂ ಸಂಸಾರದಲ್ಲಿ ಭ್ರಮನಿರಸನನಾಗಿ ಮಗಳ ಸ್ನೇಹಿತೆಯ ಸಖ್ಯದ ಫ್ಯಾಂಟಸಿಯಲ್ಲಿರುವ ಅಪ್ಪ, ಇವರಿಬ್ಬರ ಅವರವರ ಸುಖದ ಹುಡುಕಾಟದಲ್ಲಿ ಕಳೆದುಹೋಗುವ ಹದಿನಾರರ ಮಗಳು, ಅವಳ ಗೆಣೆಕಾರ. ಮಧ್ಯೆ ಅಲ್ಲಲ್ಲಿ ಬರುವ ತನ್ನನ್ನು ತಾನಂದುಕೊಂಡಿದ್ದಕ್ಕಿಂತ ಚಿಕ್ಕವನನ್ನಾಗಿ ಮಾಡಲು ಅಪ್ಪನ ಡ್ರಗ್ ಸಾಹಸಗಳು, ಪಕ್ಕದ ಮನೆಯಾತನ ಗೇ ತುಡಿತ ಚಿತ್ರಕ್ಕೆ ಹಾನಿ ಮಾಡುವುದಿಲ್ಲ. ಅಮೆರಿಕದಲ್ಲಿ ಇರುವ ಯಾರಿಗೂ ಇದು ಹೊಸದೊಂದು ಸಮಸ್ಯೆ ಅನ್ನಿಸುವುದಿಲ್ಲ. ಚಿತ್ರಮಂದಿರದಿಂದ ಹೊರಬಂದಾಗ ಅರ್ಥವಾಗಿಲ್ಲವೆಂದು ತಲೆಕೆರೆದುಕೊಳ್ಳುತ್ತಾ ತಮ್ಮ ಪೆದ್ದುತನ ಪ್ರದರ್ಶಿಸಲು ಅಥವಾ ಅರ್ಥವಾಗಿಲ್ಲದಿದ್ದರೂ ಅರ್ಥವಾಗಿದೆಯೆನ್ನುವ ಬುದ್ಧಿಜೀವಿಗಳ ನಾಟಕಕ್ಕೂ ಇಲ್ಲಿ ಅವಕಾಶವಿಲ್ಲ. ಇದು ಯಾವ ಸಾಮಾನ್ಯ ಮನುಷ್ಯನಿಗೂ ಅರ್ಥವಾಗುತ್ತದೆ. ಇಲ್ಲಿ ಸುಂದರ ನಿರೂಪಣೆಯಿದೆ. ಜ್ವಲಂತ ಸಮಸ್ಯೆಯನ್ನು ಬಿತ್ತರಿಸುವ ಪ್ರಯತ್ನವಿದೆ. ಆದರೆ ಆ ಸಮಸ್ಯೆಗೆ ಉತ್ತರವಿಲ್ಲ. ಏಕೆಂದರೆ ಕೆಲವು ಸಮಸ್ಯೆಗಳಿಗೆ ಉತ್ತರವಿರುವುದಿಲ್ಲ. ಮೇಲೆ ನಾನು ಹೆಸರಿಸಿರುವ ಚಿತ್ರಗಳಿಗಿಂತ “ಲಗಾನ್” ಉತ್ತಮ ಅಥವಾ ಕಳಪೆಯೆಂದು ಹೇಳುತ್ತಿಲ್ಲ.” ಲಗಾನ್” ಆಸ್ಕರ್‍ಗೆ ಹೋಗಿರುವುದು ಪ್ರಾಯಶಃ ಅದರ ಸರಳತೆಯಿಂದ. ಎಪಿಕ್ ಅನ್ನಿಸೋ ಫ್ಯಾಂಟಸಿಯನ್ನು ಅಧಿಕೃತ ಅನ್ನಿಸುವಂತೆ ಒಂದು ಸುಂದರ ದೃಶ್ಯಕಾವ್ಯವನ್ನಾಗಿ ಮಾಡಿರುವ ಜಾಣ್ಮೆಯಿಂದ. ಯಾವುದೇ ಬೌದ್ಧಿಕ ಕಸರತ್ತಿಗೂ ತನ್ನನ್ನು ಎಡೆಮಾಡಿಕೊಳ್ಳದೇ ಅದು ತಾನೇನೋ ಅದನ್ನು ಪ್ರತಿಬಿಂಬಿಸಿರುವುದರಿಂದ. ಅದರ ಮೂಲ ಉದ್ದೇಶ ಮನರಂಜನೆಯನ್ನು ಪ್ರೇಕ್ಷಕನಿಗೆ ಮೋಸಮಾಡದೇ ನೀಡುವುದರಿಂದ. ಇಲ್ಲಿ ಯಾವುದೇ “ಆಬ್‍ಸ್ಟ್ರಾಕ್ಟ್” ಇಲ್ಲ. ಅದರ ಉದ್ದೇಶದಲ್ಲಿ ಅದು ಸಫಲವಾಗಿದೆಯೆಂದು ನನ್ನಲ್ಲಿರುವ ಸಾಮಾನ್ಯ ಪ್ರೇಕ್ಷಕ ಇದುವರೆವಿಗೂ ಹೇಳಿದ್ದಾನೆ. ಅದನ್ನು ಹಟಮಾಡದೇ ಒಪ್ಪಿಕೊಳ್ಳುವುದರಲ್ಲಿ ನನ್ನ ಪ್ರಾಮಾಣಿಕತೆಯಿದೆ. ಅದು ಬಿಟ್ಟು ನನ್ನ ಬುದ್ದಿಮತ್ತೆಯ ಹೊರಪದರವನ್ನು ಮಾತ್ರ ಮುಟ್ಟುವ ತೀರ ಸಾಮಾನ್ಯ ಚಿತ್ರವಿದೆಂದು ನಾನು ನಿರಾಕರಿಸಿದ ಮಾತ್ರಕ್ಕೆ ನನಗೇ ನಾನು ಚಿತ್ರನೋಡಿ ಖುಷಿಪಟ್ಟಿದ್ದು ಸುಳ್ಳೇ.
ಬರೀ ಚಿತ್ರ ಚೆನ್ನಾಗಿ ಮಾಡಿಬಿಟ್ಟು ಕೈ ತೊಳೆದುಕೊಂಡುಬಿಟ್ಟರೆ ಆಸ್ಕರ್ ಬಂದುಬಿಡುವುದಿಲ್ಲ. ಭಾರತೀಯ ಫಿಲಂ ಫೆಡರೇಷನ್‍ದ ಹದಿನಾಲ್ಕು ಮಂದಿಯೇನೋ ಒಮ್ಮತದಿಂದ “ಲಗಾನ್” ಅನ್ನು ಆಯ್ಕೆ ಮಾಡಿದರು. ಭಾರತದಲ್ಲಿ ಲಗಾನ್ ಜೊತೆಗಿದ್ದ ಇನ್ನಿತರ ಸ್ಪರ್ಧಿಗಳಲ್ಲಿ ಮುಖ್ಯವಾದದ್ದು “ಮಾನ್‍ಸೂನ್ ವೆಡ್ಡಿಂಗ್”, “ಮಾಯಾ” ಶಾಂ ಬೆನೆಗಲ್‍ನ “ಜುಬೇದಾ”. ಲಗಾನ್‍ನ “ಸ್ವಾಭಾವಿಕ ಭಾರತೀಯತೆ” ಅದರ ಆಯ್ಕೆಯನ್ನು ಸುಲಭಮಾಡಿಕೊಟ್ಟಿತು ಎಂದು ಆಯ್ಕೆ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ. ಅನೇಕ ಪಂಡಿತರು ಅಮೀರನಿಗೆ ಮುಂಚೆಯೇ ಹೇಳಿದ್ದರು. ಭಾರತದಿಂದ ಆಯ್ಕೆ ಸುಲಭ. ಆದರೆ ಉತ್ತರ ಅಮೆರಿಕಾದಲ್ಲಿನ ಆಯ್ಕೆಗೆ ನೀನು ಲಾಬಿ ಮಾಡಬೇಕು, ತುಂಬಾ ಪ್ರಚಾರ ಮಾಡಬೇಕು ಎಂದು. “ನನ್ನ ಸಿನೆಮಾನೇ ಮಾತಾನಾಡುತ್ತದೆ” ಅನ್ನುವ ಧೋರಣೆಯಲ್ಲಿದ್ದ ಅಮೀರ ಟೊರಾಂಟೊ ಚಿತ್ರೋತ್ಸವದಲ್ಲಿ ಸಿಕ್ಕ ತೀರ ಸುಮಾರಿನ ಮಾಧ್ಯಮಗಳ ಪ್ರಚಾರದ ನಂತರ ತನ್ನ ನಿಲುವನ್ನು ಬದಲಾಯಿಸಿಕೊಂಡ. ಲಾಸ್ ಆಂಜೆಲೆಸ್‍ನಲ್ಲಿ ನಡೆದ ಸುತ್ತಿನಲ್ಲಿ ಅಮೀರ್ ಖಾನ್ ತಾನೇ ಸ್ವತಃ ಪ್ರಚಾರದಲ್ಲಿ ಪಾಲ್ಗೊಂಡ. ನಿರ್ದೇಶಕ ಗೌರೀಕರ್ ಬಿಬಿಸಿಯಲ್ಲಿ ಮಾತನಾಡುತ್ತಾ “ಇದು ಪ್ರಚಾರ ಅಥವಾ ಲಾಬಿಯಲ್ಲ. ಪಶ್ಚಿಮದ ಪ್ರೇಕ್ಷಕರಿಗೆ ಇಂಡಿಯಾದ ಮೈನ್‍ಸ್ಟ್ರೀಮ್ ಸಿನೆಮಾದ ಬಗ್ಗೆ ನಾವು ಮಾಡುತ್ತಿರುವ ಜಾಗೃತಿ” ಎಂದ. ಅದೇನೇ ಆಗಲಿ, ಅಮೀರ ಹಾಗೂ ಗೌರೀಕರ್ ತಮ್ಮನ್ನು ತಾವು ಚೆನ್ನಾಗಿಯೇ ಮಾರಿಕೊಂಡರು.
ಆಸ್ಕರ್ ಕೊನೆಯ ಸುತ್ತಿಗಂತೂ ಹೋಗಿದೆ. ಕೆಲವರು ಇದನ್ನೇ ಕೆಟ್ಟ ರಾಜಕೀಯವೆನ್ನಬಹುದು. ಅದನ್ನು ನಾನೊಪ್ಪುವುದಿಲ್ಲ. ಆಸ್ಕರ್‍ಗೆ ಪ್ರಯತ್ನಮಾಡುತ್ತಿದ್ದರೆ ಪೂರಾ ಮಾಡಬೇಕು. ಇಲ್ಲಿ ಒಣಪ್ರತಿಷ್ಠೆ ಮಾಡಿದರೆ ಸುಮ್ಮನೆ ಮನೆಗೆ ಬರುತ್ತೀರಿ ಅಷ್ಟೇ. ಲಗಾನ್ ಆಸ್ಕರ್‍ಗೆ ಹೋದ ರಾಜಕೀಯದ ತರ್ಕ ಕುತರ್ಕಗಳೇನೇ ಇರಲಿ, ಅದು ಇಲ್ಲಿಯತನಕ ಹೋಗಿರುವುದು ಭಾರತೀಯ ಚಿತ್ರರಂಗಕ್ಕೆ ಒಂದು ಹೆಮ್ಮೆ. ಆದರೆ ಈ ನಿಟ್ಟಿನಲ್ಲಿ ನಾವು ಕೇಳಿಕೊಳ್ಳಬೇಕಾಗಿರುವ ಇನ್ನೊಂದು ಪ್ರಶ್ನೆಯೇನು ಗೊತ್ತೇ? ೭೪ ವರ್ಷದ ಆಸ್ಕರ್ ಇತಿಹಾಸದಲ್ಲಿ ಭಾರತದಿಂದ ಆಸ್ಕರ್‍ನ “ದೊಡ್ಡ ರಾತ್ರಿಗೆ” ಹೋಗಿರುವ ಚಿತ್ರಗಳು ಕೇವಲ ಮೂರು. ಇದರರ್ಥ “ಸಲಾಂ ಬಾಂಬೆ’ ಮದರ್ ಇಂಡಿಯಾ” ದಂತಹ ಚಿತ್ರಗಳೇ ಬಂದಿಲ್ಲವೇ ನಮ್ಮ ಚಿತ್ರರಂಗದಲ್ಲಿ. ಆಡೋರ್, ನಿಹಲಾನಿ, ಸತ್ಯಜಿತ್ ರೇ ರವರಂತಹ ಘಟಾನುಘಟಿಗಳಿಗೂ ಸಾಧ್ಯವಾಗದಿದ್ದನ್ನು ನಿರ್ದೇಶಕ ಗೌರೀಕರ್ ಸಾಧಿಸಿದ್ದಾನೆಯೇ? ಮೊದಲೇ ಹೇಳಿದ ಹಾಗೆ ಇವರೆಲ್ಲ ಮೈನ್ ಸ್ರ್ಟೀಂ ಸಿನೆಮಾ ಮಾಡದಿರುವುದು ಇದಕ್ಕೆ ಕಾರಣವೇ. ಹಾಗಿದ್ದಲ್ಲಿ ಸತ್ಯಜಿತ್ ರೇಗೆ ಜೀವನದ ಸಾಧನೆಗೆ ಆಸ್ಕರ್ ಕೊಟ್ಟಾಗ ಅದು ತನ್ನ ಸಾಧನೆಯ ಮಾನದಂಡವಲ್ಲವೆಂದು ಅದನ್ನು ಆತ ಯಾಕೆ ನಿರಾಕರಿಸಲಿಲ್ಲ? ತಾನು ಮಾಡುವ ಸಿನೇಮಾಗಳಿಗೆ ಆಸ್ಕರ್ ಪ್ರಶಸ್ತಿ ಸರಿಯಾದ ಗೌರವವಲ್ಲ ಅಂದೇಕೆ ಹೇಳಲಿಲ್ಲ? ನಮ್ಮ ಆಫ್‍ಬೀಟ್ ನಿರ್ದೇಶಕರುಗಳು ಅವರ ಚಿತ್ರ ನೋಂದಾವಣೆಯಾದಾಗ ಅದನ್ನು ನಿರಾಕರಿಸುವ ಗತ್ತನ್ನು ತೋರಿಸುತ್ತಾರೆಯೇ? ಇದಕ್ಕೆಲ್ಲಾ ಉತ್ತರ ಒಂದೇ. “ಇಲ್ಲ”.
ಆಸ್ಕರ್ ಪ್ರತಿಯೊಬ್ಬ ಸಿನೆಮಾ ಮಾಡುವಾತನ ಕನಸು, ಕ್ಷಮಿಸಿ, ಪ್ರತಿಯೊಬ್ಬ ಎಂದರೆ ಎಲ್ಲ ಅಂತಲ್ಲ. ನಮ್ಮ ನಿರ್ದೇಶಕರುಗಳು ಏನೇ ಹೇಳಬಹುದು. ಹೆಸರು ಪಟ್ಟಿಯಲ್ಲಿ ಬಂದಾಗ ಬೇಡವೆನ್ನುವ “ದೊಡ್ಡ ಗುಣ” ಯಾರಿಗೂ ಬರುವುದಿಲ್ಲ. ನಮಗೆ ತಿಳಿದೋ ತಿಳಿಯದೆಯೋ ಈ ಪ್ರಶಸ್ತಿ ಪ್ರತಿಷ್ಠೆಯ ದ್ಯೋತಕವಾಗಿದೆ. ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು. ಇಂಡಿಯಾದಿಂದ ಪ್ರಶಸ್ತಿಗೆ ಹೆಸರಿಸುವ ಭಾರತೀಯ ಫಿಲಂ ಫೆಡರೇಷನ್ ತನ್ನ ಕೆಲಸವನ್ನು ತಾನು ಸರಿಯಾಗಿ ಮಾಡಿದ್ದರೆ ಕಳೆದ ವರ್ಷಗಳಲ್ಲಿ ಇನ್ನೂ ಉತ್ತಮ ಚಿತ್ರಗಳು ನೋಂದಾಯಿಸಲ್ಪಡುತ್ತಿತ್ತೋ ಏನೋ. . ಅದರ ಆಯ್ಕೆ ನೋಡಿ. ” ಹೇ ರಾಂ” “ಜೀನ್ಸ್” “ಸಾಗರ್” ನಂತಹ ಚಿತ್ರಗಳನ್ನು ಅದು ಆಸ್ಕರ್‍ಗೆ ಕಳಿಸಿದರೆ ಮೊದಲಸುತ್ತನ್ನೂ ಪೂರೈಸುವ ಸಂಭವವೆಷ್ಟು? “ಕ್ರೌಚಿಂಗ್ ಟೈಗರ್ ಹಿಡ್ಡನ್ ಡ್ರಾಗನ್ಸ್” “ಲೈಫ್ ಈಸ್ ಬ್ಯೂಟಿಫುಲ್” ಗಳು ಗೆದ್ದ ಪ್ರಶಸ್ತಿಯ ವಿಭಾಗದಲ್ಲಿ “ಜೀನ್ಸ್” ನಂತಹ ಸಿನೆಮಾ ಹೆಸರಿಸಿಕೊಳ್ಳುತ್ತದೆ ಅನ್ನುವುದನ್ನು ಗ್ರಹಿಸುವುದಾದರೂ ಹೇಗೆ. ಹಾಲಿವುಡ್‍ನವರು ಕೊಡುವ “ಹೊರಗಿನವರ” ವಿಭಾಗದಲ್ಲಿ ಅದು ನಿಮಗೆ ಇಷ್ಟವಾಗುತ್ತದೆಯೋ ಇಲ್ಲವೋ ಸ್ವಲ್ಪವಾದರೂ ಹಾಲಿವುಡ್ ಅಂಶಗಳನ್ನು ಮೋಶನ್ ಪಿಕ್ಚರ್ ಅಕೆಡೆಮಿ ನಿರೀಕ್ಷಿಸುತ್ತದೆ. ಹಾಗಾದಾಗ ಕಥೆ ನಿರೂಪಣೆ ಉತ್ತಮವಾಗಿದ್ದರೂ ತೀರಾ ಪ್ರಾದೇಶಿಕವಾದ “ಜುಬೇದಾ” ಮತ್ತು ತಾಂತ್ರಿಕ ವೈಭವ್ಯವಿದ್ದೂ ಉತ್ತಮ ವಸ್ತುವಿನ ಕೊರತೆಯಿಂದ ಬಳಲುವ ಹೇರಾಂ ಗಳೂ ಅವರಿಗೆ ಅಸಂಗತವಾಗುತ್ತವೆ.
ಮಣಿರತ್ನಂನ “ನಾಯಗನ್” ಸ್ವಂತಿಕೆಯಿಲ್ಲವೆಂದು ತಿರಸ್ಕರಿಸಲ್ಪಡುತ್ತದೆ. ಸ್ವಲ್ಪಮಟ್ಟಿಗಾದರೂ ಅಂತರರಾಷ್ಟ್ರೀಯವಾಗಿ ಸಂಗತವಾಗುವ ವಸ್ತುವನ್ನು ಅಕೆಡಿಮಿ ಈ ನಡುವೆಯಂತೂ ಬಯಸುತ್ತಿದೆ. ಅದು ಎರಡನೆಯ ಮಹಾಯುದ್ಧವಾಗಿರಬಹುದು, ನಾಜಿ ಪೂರ್ಣಾಹುತಿಯಾಗಿರಬಹುದು ಅಥವಾ ಬ್ರಿಟಿಷರ ವಸಾಹತುಶಾಹಿ ಶೋಷಣೆಯಾಗಿರಬಹುದು, ಕೊಲಂಬಿಯಾದ ಗೆರಿಲ್ಲಾಗಳಾಗಿರಬಹುದು. ಈಗ ಅರ್ಥವಾಯಿತೇ ಮೀರ ನಾಯರ್‍ಳ ಸಲಾಂ ಬಾಂಬೆ ಅಥವಾ ಲಗಾನ್ ಏಕೆ ಆಸ್ಕರ್‍ಗೆ ಹೋಗುತ್ತದೆ ಎಂದು. ಸಲಾಂ ಬಾಂಬೆಯನ್ನು ಮೀರ ನಾಯರ್ ಅಲ್ಲದೆ ಇನ್ನಾರಾದರೂ ತೆಗೆದಿದ್ದರೆ ಆಸ್ಕರ್‍ಗೆ ಹೋಗುತ್ತಿತ್ತೇ? ಯಾಕೆಂದರೆ ಮೀರ ನಾಯರ್ ದೀಪಾ ಮೆಹತಾಗಳು ಆಸ್ಕರ್ ಮಟ್ಟಿಗೆ ಅಂತರರಾಷ್ಟ್ರೀಯರು. “ಲಗಾನ್” ಪ್ರಶಸ್ತಿ ಗೆಲ್ಲುತ್ತದೆಯೇ? ಹೌದು ಎನ್ನುತ್ತಾರೆ ಸಿನೆಮಾ ಪಂಡಿತರು.
ಈ ವಿಭಾಗದಲ್ಲಿ ಇರುವ ಇತರ ಸ್ಪರ್ಧಿಗಳು ಫ್ರಾನ್ಸಿನ “ಅಮೇಲೀ”, ಬಾಸ್ನಿಯಾದ “ನೋ ಮ್ಯಾನ್ಸ್ ಲ್ಯಾಂಡ್” ನಾರ್ವೆಯ “ಎಲ್ಲಿಂಗ್” ಹಾಗೂ ಅರ್ಜೆಂಟೈನಾದ “ಸನ್ ಆಫ್ ದ ಬ್ರೈಡ್”. ಇದರಲ್ಲಿ ಅಮೀರನಿಗೆ ತೀರ ಸಮೀಪದ ಪ್ರತಿಸ್ಪರ್ಧಿ “ಅಮೇಲೀ” ಅಮೆರಿಕಾದಲ್ಲಿ ಇಪ್ಪತ್ತು ಮಿಲಿಯ ಡಾಲರ್‍ಗಳನ್ನು ಗಳಿಸಿದ್ದರೆ “ಲಗಾನ್” ಗಳಿಸಿರುವುದು ಕೇವಲ ಎರಡು ಮಿಲಿಯ ಡಾಲರ್‍ಗಳು ಮಾತ್ರ. ಅದೂ ಉತ್ತರ ಅಮೆರಿಕಾ ಮತ್ತು ಇಂಗ್ಲೆಂಡುಗಳಲ್ಲಿ ಸೇರಿ. ಒಂದು ಸಿನೆಮಾ ಹೇಗೆ ದುಡ್ಡುಮಾಡಿದೆ ಅನ್ನುವುದು ಅದು ಆಸ್ಕರ್ ಗೆಲ್ಲುವುದಕ್ಕೆ ಹೇಗೆ ಪೂರಕವಾಗುತ್ತದೆ? ಆಸ್ಕರ್ ಗೆಲ್ಲುವುದೇ ಚಿತ್ರ ಹೇಗೆ ಮಾರಾಟವಾಗಿದೆ ಅನ್ನುವುದರ ಮೇಲೆ. ಅದು ಮೈನ್‍ಸ್ಟ್ರೀಂ ಪ್ರೇಕ್ಷಕನನ್ನು, ವಿಮರ್ಶಕನನ್ನು ತನ್ನ ಬಳಿ ಸೆಳೆದುಕೊಂಡಾಗ. ಮೀರಾಮ್ಯಾಕ್ಸ್‍ನಂತಹ ದೊಡ್ಡ ಸಂಸ್ಥೆ “ಅಮೇಲೀ” ಯ ಹಿಂದೆ ಪ್ರಚಾರಕ್ಕೆ ನಿಂತಿರುವಾಗ ಆಸ್ಕರ್ ಸಮಿತಿಗೆ ಒತ್ತಡ ಜಾಸ್ತಿಯಾಗುತ್ತದೆ. ಇದು ಅಮೀರನಿಗೆ ಅಷ್ಟು ಅನುಕೂಲಕಾರಿಯಾದ ಬೆಳವಣಿಗೆಯಲ್ಲ ಅನ್ನುವ ವಾದವೊಂದಿದೆ. ಆದರೆ “ಅಮೇಲೀ’ಗೆ ಮಾಧ್ಯಮಗಳಿಂದ ಅಂತಹ ಒಳ್ಳೆಯ ಪ್ರತಿಕ್ರಿಯೆಯಿಲ್ಲ. ಅದು ತುಂಬಾ ’ಫ್ರೆಂಚ್’ ಮತ್ತು ನಿಗೂಢ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಸ್ವಲ್ಪಮಟ್ಟಿಗೆ ಆಫ್‍ಬೀಟ್ ಎಂತಲೂ ಅಂದಿದ್ದಾರೆ. ಇದು “ಲಗಾನ್”ಗೆ ಅನುಕೂಲವೇ ಆಗಬಹುದು. ಆದರೆ “ಲಗಾನ್” ಎಷ್ಟರಮಟ್ಟಿಗೆ ನಮ್ಮ ಹಾಲಿವುಡ್‍ನ ವಿಮರ್ಶಕರನ್ನು ಆಸ್ಕರ್‍ನ ಜ್ಯೂರಿಗಳನ್ನು ತೃಪ್ತಿಪಡಿಸಬಲ್ಲದು. ಬೆಳಗಾಗೆದ್ದು ನಾಲ್ಕೂವರೆ ಘಂಟೆಗಳ ಕಾಲದ ಚಿತ್ರವನ್ನು ನೋಡುವುದು ನನ್ನಿಂದ ಮಾತ್ರ ಸಾಧ್ಯವಿಲ್ಲವಪ್ಪ ಎಂದು ಮೂಗುಮುರಿದಿದ್ದಾರೆ ಕೆಲವು ವಿಮರ್ಶಕರು. ಚಿತ್ರವನ್ನು ಯಾವಕಾರಣಕ್ಕೂ ಮೊಟಕುಮಾಡುವುದಿಲ್ಲವೆಂದು ನಿರ್ದೇಶಕ ಗೌರೀಕರ್ ಅಬ್ಬರಿಸಿದ್ದಾನೆ.
ಅದು ಭಾರತೀಯವಾಗಿರುವುದೇ ಅದರಲ್ಲಿನ ಸಂಗೀತ ಮತ್ತು ನೃತ್ಯಗಳಿಂದ. ಅದನ್ನು ಬಿಟ್ಟುಕೊಡುವುದು ಸಾಧ್ಯವಿಲ್ಲ ಎಂಬ ಹಟಕ್ಕೆ ಅಮೀರ ಖಾನನೂ ಒಪ್ಪಿದ್ದಾನೆ. ಬರೀ ಬ್ರಿಟಿಷರನ್ನು ಬೈಯುವುದು, ಕ್ರಿಕೆಟ್ ಆಡುವುದು ಇಷ್ಟರಿಂದ ಸಿನೆಮಾಕ್ಕೆ ಆಸ್ಕರ್ ಬರುವುದಿಲ್ಲ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ಅದೂ ಕ್ರಿಕೆಟ್ ಏನು ಎಂದು ಗೊತ್ತಿರದ ಅಮೆರಿಕನ್ನರಿಗೆ ಕೊನೆಯ ಹದಿನೈದು ನಿಮಿಷ ಕ್ರಿಕೆಟ್ ಮ್ಯಾಚನ್ನು ತೋರಿಸಿ ಆಸ್ಕರ್ ಹೇಗೆ ಪಡೆಯುತ್ತೀಯ ಎಂದು ಅಮೀರನಿಗೆ ಹಲವಾರು ಸವಾಲು ಹಾಕಿದ್ದಾರೆ. ಆದರೆ ಹಾಲಿವುಡ್ ರಿಪೋರ್ಟರ್‍ನ ವರದಿಗಾರನೊಬ್ಬ ಈ ಕೊನೆಯ ಹದಿನೈದು ನಿಮಿಷಗಳನ್ನು ಚಿತ್ರದ ರಸಘಳಿಗೆಗಳು ಎಂದು ವರ್ಣಿಸಿದ್ದಾನೆ. “ಎಸ್ಕೇಪ್ ಟು ವಿಕ್ಟರಿ”ಯ ಫುಟ್ಬಾಲ್ ಮ್ಯಾಚಿಗಿಂತ ಪರಿಣಾಮಕಾರಿಯಾಗಿ ಚಿತ್ರೀಕೃತವಾಗಿದೆ, ಅದೇ ಚಿತ್ರದ ಬಂಡವಾಳವೆಂದೂ ಹೊಗಳಿದ್ದಾನೆ. ಅಮೆರಿಕನ್ನರಿಗೆ ಅರ್ಥವಾಗದ ಈ ಕೊನೆಯ ರೋಮಾಂಚಕಾರಿ ಆಟವೇ ಈ ಚಿತ್ರದ ಮಾರಾಟದ ಅಂಶವಾಗಿಬಿಡಬಹುದು, ಯಾರಿಗೆ ಗೊತ್ತು. “ಹೊರಗಿನವರಿಗೆ” ಕೊಡುವ ಆಸ್ಕರ್ ಬಹುಮಟ್ಟಿಗೆ ಫ್ರಾನ್ಸ್ ಹಾಗೂ ಇಟಲಿಯ ಕಸಬುದಾರ ಚಲನಚಿತ್ರಕಾರರಿಗೆ ಹೋಗಿದೆ. ಯುರೋಪ್ ಬಿಟ್ಟರೆ ಹೊರಗಿನವರಿಲ್ಲ ಅನ್ನುವ ಧೋರಣೆಯೊಂದು ಅಕಾಡೆಮಿಯಲ್ಲಿದೆ. ಹೋದ ವರ್ಷ ಪ್ರಶಸ್ತಿ ಪಡೆದುಕೊಂಡ “ಕ್ರೌಚಿಂಗ್ ಟೈಗರ್…..” ಆಸ್ಕರ್ ಪಡೆದುಕೊಂಡ ಮೊಟ್ಟ ಮೊದಲ ಏಷ್ಯನ್ ಚಿತ್ರ.
ಇದು ಅಮೀರನ ಮಟ್ಟಿಗೆ ನೆಗೆಟಿವ್ ಆದರೂ ಸೆಪ್ಟೆಂಬರ್ ೧೧ ರ ವಿದ್ಯಮಾನಗಳು ಭಾರತೀಯವಾಗಿರುವ ಹಾಗೂ ಪ್ರಪಂಚದ ಈ ಭಾಗದ ಏನನ್ನೂ ಕಣ್ಣುಬಿಟ್ಟು ನೋಡುವಂತೆ ಅಮೆರಿಕನ್ನರನ್ನು ಮಾಡುತ್ತದೆ ಅನ್ನುವ ವಾದವೊಂದಿದೆ. “ಪ್ರಪಂಚದ ಆ ಭಾಗದ ಜನರಜೀವನವನ್ನು ಹೇಳುವಂತಹ ಚಿತ್ರಗಳನ್ನು ಆಯ್ಕೆಮಾಡುವುದು ಈಗಿನ ವಿದ್ಯಮಾನಗಳ ಬೆಳಕಿನಲ್ಲಿ ನಮ್ಮ ಕರ್ತವ್ಯ. ಆದರೆ ತೀರ ಡಾರ್ಕ್ ಆಗಿರುವುದನ್ನು ತೋರಿಸುವುದು ತಾರ್ಕಿಕವಾಗಿ ಹಾಗೂ ತಾತ್ವಿಕ ಕಾರಣಗಳಿಗಾಗಿ ಸಾಧ್ಯವಾಗದೇ ಇರಬಹುದು” ಎಂದು ಆಯ್ಕೆಸಮಿತಿಯ ಸದಸ್ಯರೊಬ್ಬರೇ ಹೇಳಿದ್ದಾರೆ.ಇರಾನಿನ “ಕಾಂದಹಾರ್” ಅನ್ನುವ ಚಿತ್ರ ತಿರಸ್ಕೃತವಾದದ್ದೂ ಲಗಾನ್ ಆಯ್ಕೆಯಾದದ್ದೂ ಆಯ್ಕೆ ಸಮಿತಿಯ ಈ ಒಂದೇ ಸೆಂಟಿಮಿಟಿನಿಂದಲೇ ಇರಬಹುದು. ನನ್ನನ್ನು ಇನ್ಸೆನ್ಸಿಟಿವ್ ಅನ್ನಬಹುದು ನೀವು. ಈ ವಾದವನ್ನು ಇಲ್ಲವೆನ್ನಲಾಗುತ್ತಿಲ್ಲ, ನನಗೆ. ಒಂದು ಪಕ್ಷ ’ಲಗಾನ್’ಗೆ ಆಸ್ಕರ್ ಬಂದಿತು ಎಂದುಕೊಳ್ಳೋಣ. ಇದು ಅಮೀರನ ಮೇಲೆ ಮತ್ತು ಆತನ ಚಿತ್ರನಿರ್ಮಾಣದ ಮೇಲೆ ಯಾವರೀತಿ ಪರಿಣಾಮ ಮಾಡಬಹುದು. ಮತ್ತೆ ಲಗಾನ್ ನಂತಹ ಚಿತ್ರಗಳನ್ನೇ ಸುತ್ತಿ ಬಿಸಾಡಿಬಿಡುತ್ತಾನೋ ಅಥವಾ ಜವಾಬ್ದಾರಿಯುತವಾಗಿ ತನ್ನ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೋ. ಯಾಕೆಂದರೆ ಹಾಲಿವುಡ್ಡಿನಲ್ಲಿ ಈ ರೀತಿಯ ಅನೇಕ ಉದಾಹರಣೆಗಳಿವೆ.
ಆಸ್ಕರ್ ಬಂದಮೇಲೆ ಪ್ರಶಸ್ತಿ ಬರಲೇಬೇಕೆಂದು ಪಾತ್ರಗಳನ್ನು ಆಯ್ದುಕೊಳ್ಳುವ ಟಾಂ ಹ್ಯಾಂಕ್ಸ್, ರಸ್ಸೆಲ್ ಕ್ರೋವ್ ಗಳಂಥವರು ಇಲ್ಲಿದ್ದಾರೆ. ತನ್ನ ಜೀವಮಾನದಲ್ಲಿ ಒಂದೂ ಆಸ್ಕರ್ ಪಡೆಯದಿದ್ದರೂ ಅನೇಕ ಬಾರಿ ಕೊನೆಯ ಸುತ್ತಿನವರೆಗೂ ಬಂದು ಸೋತು, ವರ್ಷಕೊಮ್ಮೆಯಾದರೂ ಆಸ್ಕರ್‍ಗೋಸ್ಕರವೇ ಪಾತ್ರಮಾಡಬೇಕೆನ್ನುವ ಡೆನ್ಜೆಲ್ ವಾಷಿಂಗ್‍ಟನ್‍ನಂತವರಿದ್ದಾರೆ. ಅಮೀರ್ ವರ್ಷ ಕಳೆದಂತೆ ಬೆಳೆಯುತ್ತಾ ಬಂದಿದ್ದಾನೆ. ಆತ ಈ ಬಾರಿ ಆಸ್ಕರ್ ಗೆದ್ದರೂ ತನ್ನತನವನ್ನು ಬಿಟ್ಟುಕೊಡದೆ ಮೊದಲಿನ ಅಮೀರನಂತೆ ಪ್ರಶಸ್ತಿ ಬೇಡವೆನ್ನುತ್ತಾ ಸಿನೆಮಾ ಮಾಡಿಕೊಂಡಿದ್ದರೆ ಸಾಕು. ಒಟ್ಟಾರೆ ಹೇಳುವುದೆಂದರೆ “ಲಗಾನ್” ಬಹುಮಂದಿ ಭಾರತೀಯರ ಹೆಮ್ಮೆಯಾಗಿದೆ. ಆಟ ಹೇಗೆ ಆಡಿದರೂ ಗೆದ್ದಾತನಿಗೇ ಮರ್ಯಾದೆ ಜಾಸ್ತಿ. ಈ ಹಾದಿಯಲ್ಲಿ ಅಮೀರನ ಗುಂಪಿದೆ. ಅದನ್ನು ಒಣಜಂಭವಿಲ್ಲದೆ ಒಪ್ಪಿಕೊಳ್ಳುವುದರಲ್ಲಿ ನಮ್ಮ ದೊಡ್ಡತನವಿದೆ. ಅದು ಬಿಟ್ಟು ಅದರಲ್ಲಿರುವ ದೌರ್ಬಲ್ಯಗಳನ್ನು ಪಟ್ಟಿಮಾಡುತ್ತಾ ಹೋದರೆ ಅದಕ್ಕೊಂದು ಅರ್ಥವಿರುವುದಿಲ್ಲ. ಕ್ರಿಕೆಟ್ ಎಂದರೆ ಏನು ಎನ್ನುವ ಗಂಧವೂ ಇಲ್ಲದ ನನ್ನ ಐದು ವರ್ಷದ ಮಗಳು ಚಿತ್ರದ ಕೊನೆಯಲ್ಲಿ ಕುಣಿದು ಹಾರಾಡಿ ಸಂತೋಷಪಟ್ಟಳು. ಅವಳಿಗೆ ಭಾರತೀಯತೆಯ ಬಗ್ಗೆ ಗೊತ್ತಿಲ್ಲ, ಕ್ರಿಕೆಟ್ ಖಂಡಿತಾ ಗೊತ್ತಿಲ್ಲ. ಆ ಮಗುವಿನಂತೆ ಚಿತ್ರವನ್ನು ಅನುಭವಿಸೋಣ. ಚಂಪಾನೇರಿನ ಭುವನ ಕೊನೆಯ ಬಾಲಿನಲ್ಲಿ ಮತ್ತೊಂದು ಸಿಕ್ಸರ್ ಹೊಡೆಯುತ್ತಾನೆಂದು ಯಾವ ದೊಡ್ಡಸ್ತಿಕೆಯಿಲ್ಲದೆ ಆಶಿಸೋಣ. ಗುಡ್ ಲಕ್ ಅಮೀರ್!!!
*****
ಫೆಬ್ರವರಿ ೧೫ ೨೦೦೨.
ಪ್ರತಿಕ್ರಿಯೆಗಳು:
ಲಗಾನ್ ಮತ್ತು ಆಸ್ಕರ್- ಗುರುಪ್ರಸಾದ್ ಕಾಗಿನೆಲೆಯವರ ಲೇಖನ ಅನೇಕ ಪ್ರತಿಕ್ರಿಯೆಗಳನ್ನು ಸೆಳೆದಿದೆ. ಶ್ರೀ ಹರಿಹರೇಶ್ವರರವರು ತಮ್ಮ ಎಲ್ಲ ಸ್ನೇಹಿತರಿಗೆ ಈ ಲೇಖನವನ್ನು ಕಳುಹಿಸಿದ್ದರು. ಕೆಲವು ಪ್ರತಿಕ್ರಿಯೆಗಳು ಅವರ ಮೂಲಕ ಬಂದವು. ದಟ್ಸ್‌ಕನ್ನಡ.ಕಾಂ ನ ಮಿತ್ರ ಎಸ್ ಶ್ಯಾಮಸುಂದರ್ ಈ ಲೇಖನವನ್ನು ಮೆಚ್ಚಿ ಹೆಚ್ಚಿನ ಮಟ್ಟದ ಚರ್ಚೆಯಾಗಲಿ ಎಂದು ದಟ್ಸ್ ಕನ್ನಡ.ಕಾಂನಲ್ಲಿ ಇದಕ್ಕಗೇ ಒಂದು ವೇದಿಕೆಯನ್ನು ರೂಪಿಸಿದ್ದರೆ. ಇವರಿಗೆಲ್ಲ ಕನ್ನಡಸಾಹಿತ್ಯ.ಕಾಂ ಪರವಾಗಿ ನನ್ನ ಧನ್ಯವಾದಗಳು.
-ಶೇಖರ್‌ಪೂರ್ಣ
ಮೇ ೦೩, ೨೦೦೨
ಡಾ|| ಗುರುಪ್ರಸಾದ್ ಕಾಗಿನೆಲೆಯವರ ಲೇಖನ ಓದಿದ ಮೇಲೆ , ಇದಕ್ಕೂ ಇನ್ನೇನು ಬರೆಯ ಬಹುದು ಅಂತ ಅನ್ನಿಸುತ್ತಾ ಇದೆ. ಆದರೂ ಚರ್ಚೆ ಆಗಲಿ ಅನ್ನುವುದು ಶೇಖರಪೂರ್ಣ ಅವರ ಆಶಯ.
ಮೂಲತಃ ನನ್ನ ಆಸಕ್ತಿ ರಂಗಭೂಮಿಯಲ್ಲಿ. ಆದ್ದರಿಂದ ಸಿನೆಮಾದ ಸಾಧ್ಯತೆಗಳನ್ನು ಗುರುತಿಸುವಲ್ಲಿ ನನ್ನದೇ ಆದ ಮಿತಿಗಳಿವೆ ಅನ್ನುವುದರಲ್ಲಿ ಅನುಮಾನವಿಲ್ಲ.
ಲಗಾನ್ ಚಿತ್ರ ಆಸ್ಕರ್ ಜಗತ್ತಿನ ಪ್ರವೇಶ ಪಡೆದು , ವಿಜೇತ ಚಿತ್ರಗಳ ಸಾಲಿನಲ್ಲಿ ನಿಲ್ಲಲು ಹೊರಟಿರುವ , ಈ ತವಕದ ಕ್ಷಣಗಳಲ್ಲಿ ಎಲ್ಲರೂ ಅದರತ್ತ ಮತ್ತೊಮ್ಮೆ ನೋಡುತ್ತಿದ್ದಾರೆ. ಅದರ ಗುಣಾತ್ಮಕ, ಋಣಾತ್ಮಕ ಅಂಶಗಳನ್ನು ತೂಗಿ ನೋಡಿದ್ದಾರೆ.ಇದೊಂದು ಒಳ್ಳೆಯ ಅಪ್ಪಟ ಭಾರತೀಯ ವ್ಯಾಪಾರೀ ಚಿತ್ರವಾಗಿ ಹಲವರಿಗೆ ಕಂಡಿದೆ.
ಗೌರಿಯ ಮುಗ್ಧ ಪ್ರೀತಿ , ಭಾರತದ ಹಳ್ಳಿಗಳ ವಾತಾವರಣ, ಹಳ್ಳಿಗರ ಒರಟುತನ,ಮುಗ್ಧ ಮನಸ್ಸು ,ಒಡ್ಡೊಡ್ಡು ಶಕ್ತಿ,ರಾಜನ ಅಸಹಾಯಕತೆ,ಆಂಗ್ಲರ ವಿರುದ್ಧ ದನಿಯೆತ್ತುವ ತುಡಿತ,ಕೊಂಚ ಹಳೆಯ ಮಟ್ಟಿನ ಹಾಡುಗಳು, ಸರಳ ಕುಣಿತ.. ಇವೇ ಇತ್ಯಾದಿಗಳು ಭಾರತೀಯತೆಯ ಪ್ರತೀಕಗಳಾಗಿ ಕಂಡಿವೆ.
ಇವುಗಳೊಡನೆ ಕ್ರಿಕೆಟ್ಟೂ ಹದವಾಗಿ ಬೆರತು , “ಈ ಸಿನೆಮಾ ಮಾಡಿದವರ ತಲೆಗೆ ಕೊಡಬೇಕು” ಅನ್ನೊ ನನ್ನನೂ ಸೇರಿಸಿ ಹಲವರ ಮೆಚ್ಚುಗೆ ಇದರ ಬೆನ್ನಿಗಿದೆ..
ಈ ಹಿನ್ನಲೆಯನ್ನೆಲ್ಲಾ ಗಮದಲ್ಲಿಟ್ಟು ಕೊಂಡು , ಆಸ್ಕರ್ ಪ್ರಶಸ್ತಿ ಪ್ರಪಂಚ ಮರೆತು .. ಯೋಚಿಸಿದರೆ ……………
ತನ್ನ ಸ್ನೇಹಿತೆಯ ಮನೆಗೆ ಹೋಗಿದ್ದ ನನ್ನ ತಂಗಿ ಢಡ್ಡೆಂದು ಬಂದು.. “ಏನೂ ಬರೀತಾ ಇದ್ದೀಯ …? ” ’ಲಗಾನ್ ಒಂದು ಪ್ರತಿಕ್ರಿಯೆ’!!” , “ಏನಿದು “? ..
ಬರೆದು ಮುಗಿದಿಲ್ಲ ಅಂತ ಹೇಳುತ್ತಿದ್ದರೂ ಬಿಡದೆ ಓದಿ –
“ಇಷ್ಟೇನಾ?” “ಕಥೆಯಲ್ಲಿ , ಸಾಧನೆಗೆ ಎಷ್ಟು ಪ್ರಯತ್ನ ಪಡಬೇಕು ಅಂತ ಇದೆ”,ದೇಶ ಭಕ್ತಿ ಇದೆ”, “ಹಾಡುಗಳು ಸೊಗಸಾಗಿವೆ ..” ಇದೆಲ್ಲ ಎನೂ ಬರೆದೇ ಇಲ್ಲ .. ಅಂತ “ಘನನ ಘನನ ..” ಅಂತ ಹಾಡಲು ಪ್ರಾರಂಭಿಸಿದಳು..
ಹಸಿದ ಮನಗಳ ಹಾಡು ಅದು. ಪ್ರತಿಯೊಬ್ಬರೂ ಕಾಯುತ್ತಿದ್ದಾರೆ ಅಲ್ಲಿ …..ಗೌರಿ ತನ್ನ ಪ್ರೀತಿಯ ಬೀಜ ಬಿತ್ತಲು, ಲಾಖಾ ತನ್ನನ್ನು ತಾನು, iಜeಟಿಣiಜಿಥಿ ಮಾಡಿಕೊಳ್ಳಲು, ಡೋಲು ನುಡಿಸುವ ಮೂಗ ತನ್ನನ್ನು ತಾನು ಪ್ರಕಟ ಪಡಿಸಲು, ಭುವನ ಒಂದು ರೀತಿಯ ಬಿಡುಗಡೆಗಾಗಿ,ಸಾಧನೆಗಾಗಿ… ; ಎಲ್ಲರಿಗೂ ಮಳೆ ಒಳಗುದಿಯ ದನಿ ..
ಇದನ್ನು ಇನ್ನು ಹೇಗೆ ಚಿತ್ರಿಸಬಹುದು ..? ಚೂಮನ ದುಡಿಯ ’ಲೇಲೇಲ ಲೇಲ’ ದ ಥರ…
“ನಾನು ಜಮೀನ್ದಾರರ ಹೆಂಡ್ತಿ ಆಂಟಿ” ಯಾರೋ ಮನೆಯ ಕಿಟಕಿಯ ಮುಂದಿನ ಮರದ ಕೆಳಗೆ ನಿಂತು ಹೇಳಿದ್ದು ಕಿವಿಗೆ ಅಪ್ಪಳಿಸಿ , ಕುತೂಹಲ ಕೆರಳಿಸಿತು. ಎದ್ದು ನೋಡಿದೆ. ಮೂರು ಜನ ಮಹಿಳೆಯರು ನಿಂತು ಮಾತಾಡುತಿದ್ದರು.
ಅವರಲ್ಲಿ ಒಬ್ಬರು, “ನಾನು ಜಮೀನ್ದಾರನ ಹೆಂಡತಿ ಆಂಟಿ, ನನ್ನ ಮಗ್ಳು ನನಗೇ ಹೇಳ್ತವ್ಳೆ, ’ಮಮ್ಮಿ’ ನೀನು ಜಮೀನ್ದಾರನ ಹೆಂಡ್ತಿ ಮಮ್ಮಿ, ದಿನಕ್ಕೊಂದು ಸೀರೆ ಉಟ್ಕೊ ಮಮ್ಮಿ,ಕೊಳೆಯಾದ್ರೆ ಇನ್ನೊಂದು ತಗೂ,….. ನನ್ಗೇ ಹೇಳ್ತವ್ಳೆ
ನೋಡಿ,.. ಯೆಷ್ಟು ಸಂತೋಷ ಆಗುತ್ತೆ… , ನನು ಹಾಕಿದ್ ಗೆರೆ ದಾಟಕಿಲ್ಲ ಅವ್ಳು….. ನನ್ನಪ್ಪ ಕೊಟ್ಟಿದ್ದು ದುಡ್ಡು ನನ್ನ ಕೈಗೆ ಕೊಡು ಅಂದೆ , ಕೊಡ್ಲಿಲ್ಲ.. ಆಮೇಲೆ ಅದನ್ನ ಕಳೆದುಕೊಂಡಳು ,ಅವತ್ತಿಂದ… ನಾನು ಹಾಕಿದ ಗೆರೆ ದಾಟಾಕಿಲ್ಲ ಅವ್ಳು.
ಅವಳ ಸ್ಕೂಲ್ ನಲ್ಲಿ ಡಾನ್ಸ್ ಆಡಿದ್ಲು ಟಿವಿಯವರು ಠಿiಛಿಣuಡಿe ತೆಗೆದುಕೊಂಡ್ರು ಆಂಟಿ, ಎಲ್ಲ ನಾನೇ ಹೇಳಿಕೂಟ್ಟಿದ್ದು. ನಿನ್ನ ಡಾನ್ಸ್ ಟೀಚರ್ ಹೇಳಿಕೊಟ್ಟಿದ್ದು ಬಿಟ್ಟು ಬಿಡು . ನಾನು ಹೇಳಿದಂತೆ ಜಿಡಿoಟಿಣ, bಚಿಛಿಞ, siಜe ಅಂತ ಹೇಳಿಕೊಂಡು ಆಡು .. ಅಂತ ಹೇಳಿದೆ. ಹಂ..ಗೆ ಆಡಿದ್ಲು , ಎಲ್ಲ ಹೆಳಿದ್ರು ಆಂಟಿ .. ನಿನ್ನ ಮಗಳನ್ನು ಎಷ್ಟು ದೊಡ್ಡ ಸ್ಟಾರ್ ಮಾಡಿದೆ …
ಪ್ರಿನ್ಸಿಪಲ್ ಕರೆಸಿ , ನೀನೆ ಇಷ್ಟು ಚೆನ್ನಾಗಿ ಆಡ್ತೀಯ , ನಿಮ್ಮಮ್ಮ ಇನ್ನೆಷ್ಟು ಚೆನ್ನಾಗಿ ಮಾಡಬಹುದು .. ನಾವು ನೋಡಬೇಕು ಅಂತ ಹೇಳಿದ್ರಂತೆ ಆಂಟಿ .. ದೊಡ್ದ ಸ್ಟಾರ್ ಆಗಿ , ಅವಾರ್ಡು ತೊಗೊಂಡು .. ಆಮೇಲೆ ನೀವೇ ನೋಡಿ ..”
ಹೀಗೇ ಹರಿದಿತ್ತು ಆಕೆಯ ಮಾತುಗಳು …
ಅವಕ್ಕಾದೆ ಈ ಮಾತುಗಳನ್ನು ಕೇಳಿ . ತುಂಬಾ ಬೇಸರವೆನಿಸಿತು . ಅಲ್ಲೇ ಇದ್ದ ಅಮ್ಮ “ಇವೆಲ್ಲ ದುರಂತಕ್ಕೊಯ್ಯುವ ಆಸೆಗಳು .. ತಲೆ ಕೆಡಿಸ ಬಹುದು ಅಂದರು “.. “ಆಕೆಗೆ ಆಗಲೇ ತಲೆ ಕೆಟ್ಟಿದೆ ಅಂತ ಜನ ಹೇಳ್ತಾರಪ್ಪ” ಅಂದಳು ತಂಗಿ.
ಮೂರು ತಿಂಗಳಲ್ಲಿ ,ಆಟದ ಸಾಮಾನ್ಯ ಪರಿಚಯವೂ ಇಲ್ಲದಿರುವ, ಕಂದಾಯವನ್ನು ಕಟ್ಟಲಾರೆವು ಎಂಬೊಂದೇ ಅರಿವಿನಿಂದ ಒಗ್ಗಟ್ಟಾಗಿರುವ ಜನ , ಅತ್ಯಂತ ಸಂಘಟಿತ , ಅನುಭವಿ ತಂಡದ ಮೇಲೆ ಗೆಲ್ಲುವ ಕನಸು ಕೂಡ ಇಷ್ಟೇ ಭ್ರಮಾಧೀನವಾದುದು ಅಂತ ಅನ್ನಿಸಿಬಿಡ್ತು.
ಉಳಿಯ ಪೆಟ್ಟು ಬೀಳದೆಯೆ , ಶಿಲ್ಪ ತಯಾರಾಗಿ ಬಿಡುತ್ತದೆ , ಅಥವಾ ತಯಾರಾಗಿ ಬಿಡಬೇಕು ಅನ್ನೋ ಧೈರ್ಯವಾಗಲಿ ,ಹುಂಬತನವಾಗಲಿ ನನ್ನದಲ್ಲ.
ಎಂಥ ಕನಸುಗಾರಿಕೆ, ಹುಚ್ಚುತನ , ನಮ್ಮ ಗಾಂಧಿ ಅಜ್ಜನನ್ನು ಸಾಫಲ್ಯದ ತುಟ್ಟ ತುದಿಗೇರಿಸಿತು – ಅನ್ನೋದನ್ನ ಎಂದಿಗೂ ಮರೆಯಲಾಗದು.
ಚಿತ್ರದ ಕೊನೆಯ ಹಾಡಾದ ’ಓ ಪಾಲನಹಾರೇ’ ಯಲ್ಲಿ , ಒಮ್ಮೆ ಎಲ್ಲರೂ ಒಟ್ಟಾಗಿ ಕೈಗಳನ್ನು ಮೇಲೆತ್ತಿ ಚಪ್ಪಾಳೆ ತಟ್ಟುತ್ತಾರೆ , ಅದೂ ವಿಷಮ ಆವರ್ತದಲ್ಲಿ !! ಇದು ಸಾಂದರ್ಭಿಕ ಆಶಯವಾಗಬಹುದಷ್ಟೇ ಎನ್ನುವುದು ದಿಗಿಲು ಹುಟ್ಟಿಸುವಂಥದ್ದು.!
ಟಿಪ್ಪೂ ಸುಲ್ತಾನ ಕಂಡ ಕನಸನ್ನು ಭಗ್ನಗೊಳಿಸಿದ ಮೀರ ಸಾದಿಕ್, ನಮ್ಮ ಅಬ್ಬಕ್ಕ ರಾಣಿಯ ಯೋಜನೆಗಳಿಗೆಲ್ಲ ಮಣ್ಣು ಪಾಲು ಮಾಡಿದ ಸ್ವತಹ ಅವಳ ಗಂಡ – ಒಂದೇ , ಎರಡೇ ನಮ್ಮ ಪೂತ ಚರಿತ್ರೆ!!.
ಹೇಗೋ ತನ್ನದೊಂದು ಸ್ವಂತ ವ್ಯಕ್ತಿತ್ವದ ನಿರ್ಮಾಣಕ್ಕಾಗಿ , ಆ ಮೂಲಕ ಗೌರಿಯ ಪ್ರೀತಿಗಾಗಿ ಬಯಸುವ ಲಾಖಾನ ಮಿತಿ, ಸಿನಿಮಾ ಕಥೆಯ ಮಿತಿಯೂ ಆದಂತಿದೆ. ಬ್ರಿಟಿಷರು ಅತ್ಯಂತ ಸಭ್ಯರು ಆಗಿರುವುದು ಚಿತ್ರದ ಭಾಗ್ಯದ ಬಾಗಿಲಾಗಿದೆ!. ದಿವ್ಯದ ಅಕ್ಕುವಿನಂತಹ , ಮ್ಯಾಚ್ ನ ಅಂಪೈರ್ ನ ಎತ್ತರ ಎಷ್ಟು ಜನರೀಗೆ ನಿಲುಕೀತು !!.
ಸ್ವಾತಂತ್ರ್ಯ ಸಿಕ್ಕ ನಂತರ ,ಗಾಂಧೀಜಿಯ ಕಥೆ ಏನಾಯ್ತು ಎಂಬುದು ಯಾರೂ ತಿರುಚಲಾರದ ಅಂಶವಾಗಿ, ತಿನ್ನಲೂ ಆಗದೆ ಉಗುಳಲೂ ಆಗದ ಕಹಿ ಅನ್ನವಾಗಿರುವಾಗ ,
ತನ್ನ ತಂಗಿಯ ಸಹಾಯದಿಂದ ಗೆಲುವನ್ನು ತನ್ನದಾಗಿಸಿಕೊಂಡ , ಕಡೆಯ ಪಕ್ಷ ಆಕೆಯ ಕಣ್ಣೀರು ಆರಿಸಲು ವಿವಶನಾದ ಭುವನನನ್ನು ಕಲ್ಲು ಗೊಂಬೆಯಂತೆ ಕೊನೆಗೆ ನಿಲ್ಲಲು ;ಬದುಕಿ ಬಾಳಲು ರಸೆಲ್ ಮತ್ತುಅವನ ಬಳಗ ಬಿಟ್ಟರು ಅನ್ನುವುದು ಬಹುಶಃ ಪ್ರೇಕ್ಷಕರ ಪುಣ್ಯ.
ಕಾರ್ನಾಡರ ’ಯಯಾತಿ’ ಹೇಳುವ ಮಾತು – “ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಪುರು, ಆದರೆ ಕನಸೇ ಇಲ್ಲದ ದಾರಿಗಳಲ್ಲಿ ನಡೆಯುವುದು ಹೇಗೆ .. ”
ಮನುಷ್ಯ ತನ್ನ ಆಂತರಂಗಿಕ ,ಸಾಂದರ್ಭಿಕ ಒತ್ತಡ ಮೀರಿ ನಿಲ್ಲುವ ಕನಸು , ಅದು ಸುಪ್ತವಾಗೇ ಇರಲಿ ಅಥವಾ ಇಲ್ಲದಿರಲಿ , ಆದರೆ ಅದರ ಸಾಧ್ಯಾಸಾಧ್ಯತೆಯ ಪ್ರಜ್ನೆ ಜಾಗೃತವಾಗಿರಲಿ ಎಂಬ ಆಶಯ ಬಹುಶಃ ಯಾವತ್ತಿಗೂ ಉಳಿಯುವಂಥದ್ದಾಗಿರುತ್ತದೇನೋ !!.
ಯಶಸ್ವಿನಿ ಹೆಗಡೆ – ಬೆಂಗಳೂರು
Guru prasad avare,
I read your article on Lagaan(Harihareshwara sent it to me). You have made some very good observations. It seems as though if a movie has the ingredients to make it a box office success, it lacks the depth and the stimulation that the intellectual people would want. It is a rare movie that combines a little bit of both and passes both tests.
That goes for magazines too! Now that I am the editor, I find myself juggling to accommodate both tastes which means having articles with depth and other articles that are light entertainment. By the way, your article will be published in ‘Sangama’ ugadi samchike on April 27th.
Where was this article on Lagaan published?
Nalini Maiya Guru avare, I read the article on Lagaan by sri Guruprasad on thatskannada.com (I could not open the earlier file you sent me.) I enjoyed reading the article immensely. I had never read an article in Kannada that discussed so many nuances of Oscar nominations and many related issues. More than anything, the gripping style and the lively narration that covered a comparative analysis with other movies nominated for the Oscar made it a very pleasant reading. His coverage of Amir Khan and Gowarikar and their idiosyncrasies was also done in good taste. I have also read the earlier articles of Guruprasad on the web and enjoyed them. Kindly convey my impressions to him when you speak to him. I have CCd this mail to him and hope to hear from him
one of these days!
Nataraja Dear Dr. Guruprasad,
Harihareswara forwarded me your article on Laggan . It is well researched and well writtten, entertaining article. Though I disagree with some of your observations and conclusions, I thoroughly enjoyed reading it. Your writing style and command of kannada language is very appealing. I would like to see more of your writing in the future.
Aswath N. Rao.
Saint Louis, Missouri.
ಗುರು ಅವರೆ, ನಮಸ್ಕಾರ,
ಲೇಖನ ಬಹಳ ಚೆನ್ನಾಗಿ ಬಂದಿದೆ. ನನ್ನ ಅಭಿನಂದನೆಗಳು.ನನ್ನ ಕೆಲವು ಅಭಿಪ್ರಾಯಗಳನ್ನು ಇಲ್ಲಿ ತಿಳಿಸುತ್ತಿದ್ದೇನೆ :
ಆಸ್ಕರ್‌ಗೆ ಭಾರತೀಯ ಚಿತ್ರರಂಗದ ಮಾನದಂಡ ಯಾವುದು? ಇದು ಬಹಳ ಸಂಶಯದ ವಿಷಯ. ಆಸ್ಕರ್ ಎಲ್ಲ ಗುಣಗಳನ್ನೂ ಬಯಸುವ ಪ್ರಶಸ್ತಿ. ಸ್ಕ್ರಿಪ್ಟ್‌ನಿಂದ ಹಿಡಿದು ಕೊನೆಯಲ್ಲಿ ಕ್ರೆಡಿಟ್ ಸ್ರ್ಕೀನಿನವರೆಗೆ ಗುಣಾಪಗುಣಗಳನ್ನು ಅವಲೋಕಿಸುವ ಅದರ ಪರಿಯೇ ಒಂದು ರೀತಿಯಲ್ಲಿ ವೈಚಿತ್ರ್ಯಗಳಿಂದ ಕೂಡಿದ್ದು. ಅದರಲ್ಲೂ ಸಿನೆಮಟೋಗ್ರಪಿ಼ ಮತ್ತು ಎಡಿಟಿಂಗ್ ತೀವ್ರತರವಾದ ವಿಮರ್ಶೆಗಳಿಗೆ ಒಳಪಡುವಂತದ್ದು. ತಾವು ಲೇಖನದಲ್ಲಿ ತಿಳಿಸಿದಂತೆ ’ಅಮೆರಿಕನ್ ಬ್ಯೂಟಿ’ಯಂತ ಜೀವನಕ್ಕೆ ಹತ್ತಿರದ ಸಂಭಂದವನ್ನು ಬಯಸಿದಂತೆಯೇ ಪ್ರಸ್ತುತ ಪ್ರಪಂಚದ ಚಿತ್ರ ತಯಾರಿಕೆಯ ಅತ್ಯುತ್ತಮ ತಂತ್ರಜ್ಞಾನವನ್ನೂ ಬಯಸುತ್ತದೆ. ಭಾರತೀಯ ಚಿತ್ರರಂಗದ ಮೇಲೆ ಯಾವ ದುರುದ್ದೇಶವೂ ಇಲ್ಲದೇ ಹೇಳುತ್ತಿದ್ದೇನೆ, ಚಿತ್ರ ನಿರ್ಮಾಣದ ತಂತ್ರಜ್ಞಾನದಲ್ಲಿ ನಾವು ಹಾಲಿವುಡ್ ಮತ್ತು ಯುರೋಪಿಗಿಂತಾ ಹಿಂದೆ ಉಳಿದಿದ್ದೇವೆ. ತಾಳ್ಮೆಯನ್ನು ಪರೀಕ್ಷಿಸುವ ಎಡಿಟಿಂಗ್‌ನ ಅನೇಕ ಸೂಕ್ಷ್ಮಗಳಿಗೆ ನಮ್ಮಲ್ಲಿ ಸ್ಥಾನವಿಲ್ಲ. ಕಾರಣಗಳು ಹಲವಾರು, ಆದರೆ ಆಸ್ಕರ್‌ನಲ್ಲಿ ಕಾರಣಗಳನ್ನು ಕೇಳುವರಾರು?
ಹಾಡುಗಳು ಯಾವತ್ತೂ ಛಾಯಾಚಿತ್ರಗ್ರಹಣದ (cinematography) ನಿಯಮಗಳನ್ನು ಪಾಲಿಸುವಲ್ಲಿಯ ಬಹುದೊಡ್ಡ ಸವಾಲು. (ನಾನು ಇಲ್ಲಿ cinematography course ಮಾಡುತ್ತಿದ್ದಾಗ ನಮ್ಮ ಪ್ರೊಫ಼ೆಸರ್ ವಿದ್ಯಾರ್ಥಿಗಳಿಗೆ ಒಖಿಗಿ ನೋಡದಂತೆ ಕಟ್ಟಪ್ಪಣೆ ಮಾಡಿದ್ದರು 🙂 ನನಗೆ ಗೊತ್ತು ಹಾಡುಗಳು ಇರಬೇಕೇ ಬೇಡವೇ ಎನ್ನುವುದು ಬಹಳ ತಾರ್ಕಿಕವಾದ ವಿಷಯ. ಆದರೆ ಹಾಡುಗಳು ಮಾತ್ರಾ ಕತೆಯ ಸುಲಲಿತ ನಿರೂಪಣೆಗೆ (easy flow) ಸ್ವಲ್ಪ ಮಟ್ಟಿಗೆ ಭಂಗತರುವುದಷ್ಟೇ ಅಲ್ಲ, ಸನ್ನಿವೇಷದ ಗಂಭೀರತೆಯನ್ನು ನೀರಾಗಿಸಿಬಿಡುತ್ತವೆ. ಈ ಕಾರಣದಿಂದಾಗಿಯೇ ನೀವು ಸತ್ಯಾಜಿತ್ ರೇನ ಚಿತ್ರದಲ್ಲಾಗಲೀ ಅಥವಾ ನಮ್ಮ ಗಿರೀಶ್ ಕಾಸರವಳ್ಳಿಯವರ ಚಿತ್ರಗಳಲ್ಲಾಗಲೀ ಹಾಡುಗಳನ್ನು ಕಾಣುವುದಿಲ್ಲ. ಕೆಲವು ಕಲಾತ್ಮಕ ಚಿತ್ರಗಳು ಈ ಎಲ್ಲಾ ಸರಳ ತಂತ್ರಗಳನ್ನು ಒಳಗೊಂಡೇ ಸಂಕೀರ್ಣ ಅಭಿವ್ಯಕ್ತತೆಯಿಂದ ನಿಗೂಢವಾಗಿ ಉಳಿದುಬಿಡುತ್ತವೆ. ತಾವು ಲೇಖನದಲ್ಲಿ ತಿಳಿಸಿದಂತೆ ಇಂತಹಾ ಚಿತ್ರಗಳೂ ಕೂಡ ಆಸ್ಕರ್‌ಗೆ ಒಲಿಯುವಂತವಲ್ಲ.
ನನಗನ್ನಿಸುವಂತೆ, ಅಂತರಾಷ್ಟ್ರೀಯ ಮಟ್ಟದಲ್ಲಿ ನಿಲ್ಲುವಂತೆ ಚಿತ್ರ ತಯಾರಿಸಿದ ಒಬ್ಬನೇ ಭಾರತೀಯನೆಂದರೆ ರೇ ಮಾತ್ರಾ. ಕತೆ ಹೇಳುವ್! ಅಲ್ಲಿ ಆತನಿಗೆ ಒಂದು ವಿನೂತನ ಶೈಲಿಯಿತ್ತು. ಸಾಮಾನ್ಯ ಬಡ್ಜೆಟ್‌ನ್ನು ಮುಚ್ಚುವಂತೆ ಚಿತ್ರಗಳನ್ನು ಬದಲಿಸುವ ವಿಶಿಷ್ಟತೆಯಿತ್ತು. ಮುಖ್ಯವಾಗಿ ಒಂದು ದೃಶ್ಯದಿಂದ ಮತ್ತೊಂದಕ್ಕೆ ಕೂಡಿಸುವಲ್ಲಿ ಎಂತಹಾ ಅನುಬಂದವಿತ್ತೆಂದರೆ ನನ್ನ ಮನಸ್ಸನ್ನು ತಿಳಿದೇ ಈ ಚಿತ್ರ ನಿರ್ಮಿಸಿದ್ದಾನೆಯೇ ಎಂದು ನೋಡುವವನು ಕೇಳಿಕೊಳ್ಳಬೇಕು ಹಾಗಿರುತ್ತದೆ. ರೇಯ ‘ಪಥೇರ್ ಪಾಂಚಾಲಿ’, ಮಹಾನಗರ್, ಅಪುರ್ ಸನ್ಸಾರ್, ದೇವಿ, ಚಾರುಲತಾದಂತಹ ಸಿನಿಮಾಗಳಿಗೆ ಆಸ್ಕರ್ ಬರದಿದ್ದುದು ನನಗೆ ಯಾವಾಗಲೂ ಸೋಜಿಗವೇ. ಬಹುಶ: ಅವು ಭಾರತದಿಂದ ಅಂಕಿತವಾಗದೇ ಹೋಗಿರಬಹುದು.
ನಿಮ್ಮ ಲೇಖನದ ಕೊನೆಯ ಭಾಗ ನನ್ನ ಮನಸ್ಸನ್ನು ಬಹಳ ಮುಟ್ಟಿತು. ಮಗುವಿನಂತೆ ನಿಷ್ಕಲ್ಮಷವಾಗಿ ಸಂದರ್ಭವನ್ನು ಸುಖಿಸಿದಾಗಲೇ ಕಲೆಯ ಸಾರ್ಥಕತೆಯು ಅಡಗಿದೆ.
ವಂದನೆಗಳು,
ಎಂ.ಆರ್. ದತ್ತಾತ್ರಿ