ಮೊದಲ ಪ್ರೇಮ… ಧನ್ಯತೆಯಲ್ಲಿ ತಲ್ಲೀನ…

ಆ ಹೆಂಗಸನ್ನು ನಾನು ಬಹಳ ದಿನಗಳಿಂದ ಗಮನಿಸುತ್ತಿದ್ದೇನೆ. ಆಕೆ ಕಿರುತೆರೆಯಲ್ಲಿ ತಾಯಿ ಪಾತ್ರಗಳಲ್ಲಿ ಕಾಣಿಸ್ಕೋತಾರೆ. ಒಳ್ಳೆ ನಟಿ ಕೂಡ.. ನೀವೂ ನೋಡಿರ್‍ತೀರ. ಆಕೆಯ ಹೆಸರು ಬೇಡ. ನಾನು ದುಡಿಯುತ್ತಿದ್ದ ಒಂದು ಸೀರಿಯಲ್‍ನಲ್ಲಿ ಆಕೆಗೆ ವಿಧವೆ ತಾಯಿ ಪಾತ್ರ. ನಮ್ಮ ನಿರ್ದೇಶಕರು ಅವರನ್ನು ಶಾಟ್‍ಗೆ ರೆಡಿ ಮಾಡಿಸಿ ಕರ್‍ಕೊಂಡ್ ಬರ್‍ಲಿಕ್ಕೆ ಹೇಳಿದರು. ನಾನು ಅವರಲ್ಲಿಗೆ ಹೋಗಿ ಶಾಟ್ ರೆಡಿ ಹೇಳಿದೆ ’ಒಂದೇ ನಿಮಿಷ ಬಂದೆ ಗುರು..’ ಎಂದು ಹೇಳುತ್ತಲೇ ತನ್ನ ಮೊಬೈಲ್ ತೊಗೊಂಡು ಕರೆ ಮಾಡಲಾರಂಭಿಸಿದರು. ಆ ಕಡೆಯ ವ್ಯಕ್ತಿಯೊಂದಿಗೆ ಆತ್ಮೀಯವಾಗಿ ಮಾತಾಡುತ್ತಲೇ ತನ್ನ ತಾಳಿಯನ್ನು ತೆಗೆಯಲಾರಂಭಿಸಿದರು. ಮಾತನಾಡುತ್ತಲೇ ತನ್ನ ಹಿಡಿಯಲ್ಲಿದ್ದ ತಾಳಿಯನ್ನು ತನ್ನ ಬ್ಯಾಗ್‍ನಲ್ಲಿರಿಸಿಕೊಂಡರು. ಮೊಬೈಲ್ ಆಫ಼್ ಮಾಡಿ ನನ್ನೊಟ್ಟಿಗೆ ಶಾಟ್‍ಗೆ ಹೊರಟರು. ’ಮೇಡಂ, ನಾನು ಗಮನಿಸುತ್ತಲೇ ಇದ್ದೇನೆ ಪ್ರತಿ ಸಲ ತಾಳಿಯನ್ನು ತೆಗೆಯುವಾಗಲೂ ಒಂದು ಫ಼ೋನ್ ಮಾಡ್ತೀರಲ್ಲಾ.. ಯಾರಿಗೆ? ನಿಮ್ಮವರಿಗಾ..? ಪರ್ಮಿಷನ್ ಕೇಳ್ತೀರಾ..? ತಮಾಷೆ ಮಾಡಿದೆ. ’ಇಲ್ಲ ಗುರೂ, ಅದು ನಿಂಗೆ ಅರ್ಥ ಆಗಲ್ಲ.. ಪ್ರತಿ ಸಲ ತಾಳಿ ತೆಗೆಯುವಾಗಲೂ ಆತ ಅಚಾನಕವಾಗಿ ಙ್ಞಾಪಕವಾಗ್ತಾನೆ. ಮಾತಾಡಿಸಿಬಿಟ್ರೆ ಒಂಥರಾ ಸಮಾಧಾನ.. ನಟನೆಗೇಂತ ಇನ್ನೂ ಸಾವಿರ ಸಲ ಬೇಕಾದ್ರೂ ತೆಗೆದುಬಿಡ್ತೀನಿ ಇದನ್ನ.. ಆದ್ರೆ ನಿಜಜೀವನದಲ್ಲಿ ಅದನ್ನ ನಾನು ಎದುರಿಸಲಿಕ್ಕೆ ಆಗದ್ದು ಅದು. ಇದನ್ನು ಯಾವಾಗ ನಾನು ತೆಗೆದ್ರೂ ಅವನು ನನ್ನ ಮಾತಿಗೆ ಸಿಗಬೇಕು. ಅದಕ್ಕೆ ಪ್ರತಿಸಲವೂ ಇದನ್ನು ತೆಗೆದಾಗಲೂ ಅವನನ್ನು ಮಾತಾಡಿಸಿಬಿಡ್ತೇನೆ.’ ಮಾತು ಮುಗಿಸಿದ್ದಳು.

ಮಹಾತಾಯಿ. ನನ್ನ ಕಣ್ಣಲ್ಲಿ ನೀರಾಡಿಬಿಡ್ತು. ಪ್ರೇಮವೆಂದರೆ ಇದೇನಾ..ಇದೇನಾ..? ಇಲ್ಲ, ಇನ್ನೂ ಇದೆ. ಇದಾದ ಐದೇ ವಾರಕ್ಕೆ ಎಪ್ಪತ್ನಾಲ್ಕು ಪ್ರಾಯದ ಆತ ತೀರಿಕೊಂಡರು. ಆತ ರಂಗಭೂಮಿಯಲ್ಲಿ ದೊಡ್ಡ ಹೆಸರು. ಇಡೀ ರಂಗಾಸಕ್ತರೇ ನೆರೆದಿದ್ದರು ಅಂದು ಅಲ್ಲಿ. ನಾನು ಹೋಗಿದ್ದೆ. ಆಕೆಯ ಸಮಾಧಾನ ಮಾಡಬಲ್ಲ ಏಕೈಕ ವ್ಯಕ್ತಿ ನಾಟಕ ಮುಗಿಸಿ ಮಲಗಿದ್ದ. ದೂರದಿಂದಲೇ ಅಮ್ಮನ ಮುಖವನ್ನೊಮ್ಮೆ ನೋಡಿದೆ. ಆಕೆಯೂ ನನ್ನನ್ನು ಗಮನಿಸಿದರು. ಹತ್ತಿರ ಹೋಗದೇ ಇರಲಾಗಲಿಲ್ಲ.. ಹೋದೆ. ನಾನು ಅವರನ್ನು ಸಮೀಪಿಸುತ್ತಲೇ ’ನಿಮ್ಮ ಡೈರೆಕ್ಟ್ರನ್ನ ಇನ್ನೆಂದೂ ಶಾಟ್ಯ್‍ಗೆ ಕಾಯಿಸಲ್ಲ ಗುರೂ.. ಕಾಯಿಸಬೇಡಾಂತ ಅವರೇ ಹೇಳಿ ಹೊರಟುಬಿಟ್ಟಿದ್ದಾರೆ…’ ಸೂತಕದ ಮನೆ ದುಃಖ ಸಾಗರದಲ್ಲಿ ಲೀನ.. ಮೊದಲ ಪ್ರೇಮ ಧನ್ಯತೆಯಲ್ಲಿ ತಲ್ಲೀನ…

**********

ಯಾರ ಶಾಪವೋ ಏನೋ.. ನಮ್ಮಲ್ಲಿ ನೂರಕ್ಕೆ ತೊಂಭತ್ತು ಮಂದಿ ಮೊದಲ ಪ್ರೇಮದಿಂದ ವಂಚಿತರು. ಜೀವನದ ಯಾವ ಘಟ್ಟದಲ್ಲಿದ್ದರೂ ಅದರ ನೆನಪನ್ನು ಕೆದಕಿಕೊಂಡು ಸುಖಿಸುವ ಹಕ್ಕನ್ನಷ್ಟೇ ಆ ಭಗವಂತ ನಮಗೆ ಕೊಟ್ಟಿದ್ದಾನೆ. ಯಾವುದೋ ವಯಸ್ಸಲ್ಲಿ, ಯಾವುದೋ ಕ್ಷಣದಲ್ಲಿ, ಯಾವುದೋ ಸಂದರ್ಭದಲ್ಲಿ ನಮಗರಿವೇ ಇಲ್ಲದಂತೆ ಮೊತ್ತ ಮೊದಲ ಬಾರಿಗೆ ಯಾರನ್ನೋ ಇಷ್ಟ ಪಟ್ಟೆವಲ್ಲ ಅವರೊಡನೆ ಬಾಳೋ ಸುಖಾನ ಆ ದೇವರು ಮೇಲಿನ ದಂಪತಿಗಳಿಗೆ ಕೊಟ್ಟಂತೆ ಎಲ್ಲರಿಗೂ ಯಾಕೆ ಕರುಣಿಸಲಿಲ್ಲ.. ಪ್ರೇಮಕ್ಕಿಂತ ಜೀವನವೇ ಮುಖ್ಯ ಅಂತ ಅವನೇ ನಂಬಿ ಬಿಟ್ಟನೇ..? ಮೊದಲ ಪ್ರೇಮದ ಆ ಮಧುರ ತೀಕ್ಷ್ಣತೇನ ಮತ್ತೆ ಇಷ್ಟು ವರ್ಷಗಳಲ್ಲಿ ಯಾವ ಪ್ರೇಮದಲ್ಲೂ ನಾವು ಅನುಭವಿಸಲೇ ಇಲ್ಲವಲ್ಲ. ನಿನಗೆ ಇದರ ಬಗ್ಗೆ ಅನುಕಂಪವೇ ಇಲ್ಲವೇ ಭಗವಂತ..? ಮತ್ತೆ ಆ ಸ್ವಚ್ಛ ನಿರ್ವಾಜ್ಯ ಮೊದಲ ಪ್ರೇಮದ ಅನುಭೂತಿಯನ್ನೇಕೆ ಕೊಟ್ಟೆ..? ಅಥವಾ ಇಲ್ಲರಿಗೂ ಆ ದೈವಿಕ ಪ್ರೇಮದ ಸ್ಯಾಂಪಲ್ ಅಷ್ಟನ್ನೇ ಕೊಡ್ತೀಯಾ ಒಮ್ಮೆಯಾದರೂ..? ನಿಜವಾದ ಪ್ರೇಮವೆಂದರೇನೂಂತ ಗೊತ್ತಾಗಲೀ ಅಂತ.. ಏನಯ್ಯಾ ಲೀಲೆ ನಿನ್ನದು..? ದೇವರು ಕಿಲಾಡಿ. ನಮಗೆ ಪ್ರಶ್ನೆ ಕೇಳುವ ಸ್ವಾತಂತ್ರ್ಯವನ್ನಷ್ಟೇ ಕೊಟ್ಟಿದ್ದಾನೆ. ಉತ್ತರಿಸದೆ ಕೂತಿದ್ದಾನೆ ದೂರದಲ್ಲೆಲ್ಲೋ ನಗುತ್ತಾ.

ಆ ಮೊದಲ ಪ್ರೇಮ ಪ್ರಯಾಣದಲ್ಲಾಗಿರಬಹುದು.. ಕಾಲೇಜಿನ ದಿನಗಳಲ್ಲಾಗಿರಬಹುದು.. ಕೆಲಸದ ಸ್ಥಳದಲ್ಲಾಗಿರಬಹುದು.. ಬಸ್‍ಸ್ಟ್ಯಾಂಡಿನಲ್ಲಿ ಬಸ್‍ಗೆ ಕಾಯುತ್ತಾ ಇದ್ದಾಗಲೂ ಆಗಿರಬಹುದು.. ರೈಲ್ವೆ ಕ್ಯಾಂಟೀನ್‍ನಲ್ಲಿಯಾದರೂ ಆಗಿರಬಹುದು.. ಮುಳುಗಿ ಹೋಗುವ ಮುನ್ಸೂಚನೆಯೂ ಇಲ್ಲದ ಟೈಟಾನಿಕ್ ಹಡಗಿನಲ್ಲಾದರೂ..! ಈ ಮೇಲಿನ ದಂಪತಿಗಳಿಗೆ ಅದು ಆದದ್ದು ರಂಗಮಂಚದ ಮೇಲೆ. ಅರ್ಥಾತ್ ಆತ ಅಂದು ನಾಟಕವೊಂದರಲ್ಲಿ ಪಾತ್ರಧಾರಿ. ಈಕೆ ನಾಟಕ ನೋಡ ಬಂದ ರಂಗಾಸಕ್ತೆ. ಆತ ಬಣ್ಣವೇರಿಸಿಕೊಂಡು ರಂಗಕ್ಕೆ ಬಂದನೆಂದರೆ ನವರಸದ ರಂಗೋಲಿಯೇ. ನಾಟಕದ ವೇದಿಕೆಯ ಮೇಲೆ ಶೃಂಗಾರ್‍ಆತಿರೇಕಗಳು ನಿಷೇಧ. ತನ್ನ ಹಾವಭಾವಗಳಲ್ಲೇ ಅದನ್ನು ತೋರಿಸಬೇಕು ಆತ. ಅವನ ಏರಿಳಿತದ ಭಾಷೆ ಮುಖಭಾವಗಳು ನಾಯಕಿಯ ಬಳಿ ಆತ ಸಾರುವ ರೀತಿ ಎಲ್ಲಕ್ಕಿಂತ ಮುಖ್ಯವಾಗಿ ಶೃಂಗಾರವನ್ನು ಆತ ತನ್ನ ಕಣ್ಣುಗಳಲ್ಲೇ ವ್ಯಕ್ತಪಡಿಸಿಬಿಡುತ್ತಿದ್ದ ಶೈಲಿ. ಮುಂದಿನ ಸಾಲಿನಲ್ಲೇ ಕೂತ ಈಕೆಗೆ ರೋಮಾಂಚನ.. ಶೃಂಗಾರ ಸಿಂಚನ.. ಅದು ಅವಳ ಮೊದಲ ಪ್ರೇಮ. ಆ ನಟನೊಂದಿಗೆ ಫ಼ೋನ್‍ನಲ್ಲಿ ಮಾತಾಡಿದ್ದಳಷ್ಟೇ.. ನಾಟಕ ಮುಗಿಯುತ್ತಿದ್ದಂತೆ ಗ್ರೀನ್ ರೂಮ್ ಬಳಿ ನಡೆದೇಬಿಟ್ಟಳು ನೀರೆ. ಮೊದಲ ಪ್ರೇಮವನ್ನು ದಕ್ಕಿಸಿಕೊಳ್ಳಬೇಕಾದರೆ ಈ ಮಟ್ಟದ ಧೈರ್ಯ ಛಲ ಇರಬೇಕಂತೆ.

ಆತ ಆಗಷ್ಟೇ ತನ್ನ ಪಾತ್ರ ಮುಗಿಸಿ ಕಾಫ಼ಿ ಹೀರುತ್ತಾ ವಿರಮಿಸುತ್ತಿದ್ದ. ಒಂದು ನಾಟಕದ ಒಂದು ತೂಕದ ಪಾತ್ರ ನಿರ್ವಹಿಸುವುದೆಂದರೆ ನಿಜ ಶೃಂಗಾರದ ನಂತರದ ಆಯಾಸದಷ್ಟೇ ಶ್ರಮದಾಯಕ. ಆತ ಇನ್ನೂ ತನ್ನ ಬಣ್ಣ ವೇಷ ಭೂಷಣವನ್ನೂ ತೆಗೆದೇ ಇರಲಿಲ್ಲ. ಈಕೆ ತನ್ನ ಪ್ರೇಮವನ್ನು ಹೇಳಿಯೇಬಿಟ್ಟಳು ಆತನ ಮುಂದೆ. ಆತ ತುಂಬಾ ಸಮಚಿತ್ತದವ. ಆತ ಯಾವ ಭಾವವನ್ನೂ ಪ್ರದರ್ಶಿಸದೇ ಇವಳ ಮಾತುಗಳನ್ನೇ ಕೇಳುತ್ತಿದ್ದ. ಅವಳ ಪ್ರೇಮದ ಬದ್ಧತೆ ಅವಳ ಪ್ರಾಮಾಣಿಕ ಮಾತುಗಳಲ್ಲಿ ಅಡಕವಾಗಿದ್ದನ್ನು ಆತ ಗಮನಿಸಿದ್ದ. ತಾನು ಕುಡಿಯುತ್ತಿದ್ದ ಕಾಫ಼ಿಯ ಲೋಟವನ್ನೇ ಇವಳಿಗೆ ಕೊಟ್ಟ. ಕೊಡುತ್ತಾ ತಾನು ಮಾತನಾಡಲಾರಂಭಿಸಿದ. ತನ್ನ ವೇಷಭೂಷಣ, ಬಣ್ಣ ಕಳಚುತ್ತಲೇ. ಅವನೀಗ ಗಮನಿಸುತ್ತಿರೋದು ಅವಳು ಅಸಹ್ಯಿಸಿಕೊಳ್ಳದೇ ತಾನು ಕೊಟ್ಟ ಎಂಜಲು ಕಾಫ಼ಿಯನ್ನು ಕುಡಿಯುತ್ತಿದ್ದಾಳಾ ಅಂತ ಅಲ್ಲ. ಆತ ಗಮನಿಸುತ್ತಿದ್ದುದು ಬೇರೆಯೇ…

ಆತನೀಗ ತನ್ನ ದಿನನಿತ್ಯದ ಉಡುಪಿನಲ್ಲಿದ್ದ. ಅವನು ಬಣ್ಣ ಕಳಚುವಷ್ಟೂ ಕಾಲ ಆಕೆ ಇವನನ್ನೇ ನೋಡುತ್ತಿದ್ದವಳು ಅಸಹ್ಯಿಸಿಕೊಳ್ಳಲಿಲ್ಲ.. ಅಳಲಾರಂಭಿಸಿದಳು.. ತನ್ನ ನಿರ್ಧಾರಕ್ಕಲ್ಲ. ಆತನಿಗೆ ಮೈತುಂಬಾ ಆ ದೇವರು ಕೊಟ್ಟಿರೋ ಕುರೂಪಿ ತೊನ್ನಿಗೆ. ಮುಂದಿನ ದಿನಗಳಲ್ಲೊಂದು ದಿನ ನಾಟಕದ ಮಧ್ಯಂತರದಲ್ಲಿ ಪ್ರೇಕ್ಷಕರ ಸಮ್ಮುಖದಲ್ಲಿಯೇ ಮದುವೆಯಾದರು. ಪ್ರೇಕ್ಷಕರ ಕಣ್ಣೀರಿಂದ ತೋಯ್ದಿದ್ದ ಮುಯ್ಯಿನ ನೋಟಿನ ಹಾರಗಳ ವಿನಿಮಯದ ಜೊತೆಗೇ.

ವಿಚಾರ ಇದ್ಯಾವುದೂ ಅಲ್ಲ. ಆತನನ್ನು ಮದುವೆಯಾದ ಮೇಲೆ ತಂದೆತಾಯಿಗಳು ಈ ಬಗ್ಗೆ ಪ್ರಶ್ನಿಸಿದಾಗ ಆಕೆ ಕೊಟ್ಟ ಉತ್ತರ ’ಆತನ ವ್ಯಕ್ತಿತ್ವದಲ್ಲಿದ್ದ ಸಭ್ಯತೆಯನ್ನು ಗಮನಿಸಿದ್ದೇನೆ.. ಪ್ರೀತಿಸಿದ್ದೇನೆ. ಆತನಲ್ಲಿದ್ದ ಕಲೆಯನ್ನು ಆರಾಧಿಸಿದ್ದೇನೆ.. ಪ್ರೀತಿಸಿದ್ದೇನೆ. ಅವನ ಒಂದು ಕಲೆ ಬೇಕು ಇನ್ನೊಂದು ಕಲೆ ಬೇಡವಾ?’

**********

ನಾನು ನನ್ನ ಮೊದಲ ಪ್ರೇಮಕ್ಕೆ ಸ್ಫ಼ುಟವಾಗೆ ಹೇಳಿದ್ದೆ. ನನ್ನ ಮೊದಲ ಪ್ರೇಮದ ಹೆಸರು ರಮ್ಯಾ.. ರಮ್ಯಾಶ್ರೀಧರ್ ಅಂತ. ಹುಡುಗೀ ನೀನು ನನ್ನನ್ನು ನಿಜವಾಗಿ ಪ್ರೀತಿಸುತ್ತಿದ್ದರೆ ಮಾತ್ರ ಹೇಳು.. ನಾನು ನಿನ್ನನ್ನು ನಂಬಿಬಿಡುವ ಅಪಾಯವಿದೇಂತ. ಯಾವ ಹುಡುಗಿಯೂ ತಮಾಷೆಗೆ ಪ್ರೀತಿಸೋಲ್ಲ ಅಂದಿದ್ಲು. ನಮ್ಮ ಪ್ರೇಮ ಮದುವೆಯಲ್ಲೇ ಕೊನೆಯಾಗುತ್ತೆ ಅಂದಿದ್ಲು. ಪ್ರೇಮ ಮದುವೆಯಲ್ಲಿ ಕೊನೆಯಾಗಬಾರದು.. ಮದುವೆಯ ನಂತರವೂ ಪ್ರೇಮಿಸಬೇಕು ಅಂದಿದ್ದೆ. ಮೇಲಿನ ದಂಪತಿಗಳಿಗಿದ್ದ ಯಾವ ಪರೀಕ್ಷೆಗಳೂ ನಮಗಿರಲಿಲ್ಲ. ಅವಳು ಸ್ವಲ್ಪ ನನ್ನ ಬಡತನವನ್ನು ಗೌರವಿಸಿದ್ದಿದ್ದರೆ. ಇಬ್ಬರೂ ನಮ್ಮ ಮೊದಲ ಪ್ರೇಮವನ್ನು ಉಳಿಸಿಕೊಳ್ಳಬಹುದಿತ್ತು. ಹೋರಾಟದ ಮನಸ್ಸಿರಲಿಲ್ಲ ಅವಳಿಗೆ. ತುಂಬಾ ಕೇಳ್ಕೊಂಡಿದ್ದೆ ಅವಳನ್ನ. ಜೀವನದ ಜೊತೆ ರಾಜಾರೋಷವಾಗಿ ರಾಜಿಯಾಗಿಬಿಟ್ಟಳು. ಸಂತೃಪ್ತ ಜೀವನಕ್ಕೆ ನಿನಗೆ ಏನೇನು ಬೇಕೂ ಅಂತ ನೀನು ಅಂದ್ಕೋತಿಯೋ ಅದಕ್ಕಿಂತ ಜಾಸ್ತೀನೇ ಸಂಪಾದಿಸಿಕೊಡ್ತೀನಿ.. ನಂಗೊಂದು ಅವಕಾಶ ಕೊಡು. ಮನೇಲಿ ಓದ್ತೀನಿ ಅನ್ನು. ಸ್ವಲ್ಪ ಟೈಮ್ ಸಿಗ್ಲಿ. ಒಂದು ವರ್ಷ ಸಾಕು. ಮದುವೆಯಾಗಿಬಿಡೋಣ. ಎರಡೂ ಮನೆಕಡೆಯಿಂದ್ಲೂ ಮೊದಲು ಏನೇ ಬೇಜಾರು ಮಾಡ್ಕೊಳ್ಲಿ.. ನಾವು ನೆಮ್ಮದಿಯಾಗಿ ಬದುಕ್ತಿರೋದು ನೋಡಿ ಅವರೇ ಸಮಾಧಾನಪಡ್ತಾರೆ. ಅನಂತರ ಅವರನ್ನೂ ಸುಖವಾಗಿಡೋಣ. ನಾನು ಏನು ಹೇಳಿದ್ರೂ ಇಲ್ಲ ಅಂತಿರಲಿಲ್ಲ ಅವಳು. ಪತ್ರ ವ್ಯವಹಾರ ನಡೆದೇ ಇತ್ತು. ಆ ಪತ್ರಗಳು ಇವತ್ತಿಗೂ ನನ್ನ ಬಳಿಯೆ ಇವೆ.. ನನ್ನ ಮೊದಲ ಪ್ರೇಮದ ಮೂಕಸಾಕ್ಷಿಯಾಗಿ. ನಾನು ಕೆಲಸ ಅರಸಿ ಕೊಯಮತ್ತೂರಿಗೆ ಹೋದೆ. ಅವಳ ಎಲ್ಲಾ ಪ್ರೇಮಪತ್ರಗಳನ್ನೂ ತಂದುಕೊಡ್ತಿದ್ದ ಅದೇ ಪೋಸ್ಟ್ಯ್‍ಮ್ಯಾನ್ ಅಷ್ಟೇ ಕೂಲಾಗಿ ಅವಳ ಮದುವೆಯ ಆಮಂತ್ರಣ ಪತ್ರಿಕೆಯನ್ನೂ ತಂದಿಟ್ಟ. ಇದ್ಯಾವುದನ್ನೂ ನಿರೀಕ್ಷಿಸದ ನಾನು ಹೌಹಾರಿಬಿಟ್ಟೆ. ಅಬ್ಬಾ ವಂಚನೆಯೇ.. ಮದುವೆ ಮುಗಿದ ದಿನವೇ ಪೋಸ್ಟ್ ಮಾಡಿದ್ದಾಳೆ ಅಮಂತ್ರಣ ಪತ್ರಿಕೆಯನ್ನ. ಮದುವೆಯಾಗಿ ನಾಲ್ಕು ದಿನ ಆ..ಗಿ..ಹೋ..ಗಿ..ದೆ!

ಆಮಂತ್ರಣ ಪತ್ರಿಕೆಗಿಂತ ಎರಡು ದಿನ ಮುಂಚೆ ಬಂದಿದ್ದ ಪತ್ರದ ಸಾರಾಂಶ ನನಗಾಗ ಅರ್ಥವಾಗಲಾರಂಭಿಸಿತು. ಮನೆಯಲ್ಲಿ ನೆಂಟರು ಬಂದಿದ್ದಾರೆ.. ಫ಼ೋನ್ ಮಾಡಬೇಡ. ಬಿಡುವಾದಾಗ ನಾನೇ ಮಾಡ್ತೀನಿ. ನಾನು ಅವರ ಮನೆ ಕಡೆ ಹೋಗಲಾಗಿಲ್ಲ.. ಹೋದಾಗ ನಿನ್ನ ಪತ್ರಗಳಿಗೆ ರಿಪ್ಲೈ ಮಾಡ್ತೀನಿ.. ಸದಾ ನಿನ್ನ ನೆನಪಿನಲ್ಲಿರುವ…ಆರ್.

ಇದೆಲ್ಲಾ ಸುರುವಾಗಿದ್ದು ಹೀಗೆ. ನಮ್ಮದು ಮೂರು ವರ್ಷಗಳ ಅಭೂತಪೂರ್ವ ಪ್ರೇಮ. ನಾನು ಮೊದಲನೇ ಡಿಗ್ರಿಯಲ್ಲಿದ್ದಾಗ ಅವಳು ಮೊದಲನೇ ಪಿ.ಯು.ಸಿ.ಯಲ್ಲಿದ್ದಳು. ನಾನು ಓದೋ ಕವನಗಳನ್ನು ತುಂಬು ತನ್ಮಯತೆಯ್ಯಿಂದ ಕೇಳುತ್ತಿದ್ದಳು. ನಿಜ ಸಾಹಿತ್ಯಾಸಕ್ತೆ. ವಯಸ್ಸಿಗೆ ಮೀರಿದ ಪ್ರಬುದ್ಧತೆ, ಹಾಸ್ಯಪ್ರಜ್ಞೆ ಇತ್ತು ಅವಳಲ್ಲಿ. ಅವಳೂ ಕವನಗಳನ್ನು ಬರೀತಿದ್ಲು. ಕೆಲವು ಸಾಲುಗಳು ಈಗಲೂ ನನಗೆ ನೆನಪಿದೆ ’ಕೊಡಬಲ್ಲಿರಾ ನೀವು ದೇವರಿಗೆ ಕೀಟ ಮುಟ್ಟದ ಪುಷ್ಪವಾ..?’ ’ಪ್ರೇಮಕ್ಕೂ ಹೂ, ಸಾವಿಗೂ ಹೂ’ ’ನೀನು ನನ್ನನ್ನು ಪ್ರಾಮಾಣಿಕವಾಗಿ ಬಹಳವೇ ಮಿಸ್ ಮಾಡಿಕೊಳ್ಳುವಿಕೆ ಕೊಡೋಂಥ ಖುಶಿಯನ್ನು ಪಕ್ಕದಲ್ಲೇ ಅಂಟಿ ಕೂತು ಮುತ್ತಿಕ್ಕುವ ಸಂಭ್ರಮವೂ ಕೊಡಲಾರದು..’ ಹೀಗೆ. ನಾನು ಚಿತ್ರ ನಿರ್ದೇಶಕನಾಗೋ ನನ್ನ ಜೀವನದ ಅದಮ್ಯ ಕನಸನ್ನ ಮೊತ್ತ ಮೊದಲಿಗೆ ಹೇಳ್ಕೊಂಡಿದ್ದು ಅವಳಲ್ಲಿ. ನೀನು ಆಗೇ ಆಗ್ತೀಯಾ ಅಂತ ಮೊತ್ತ ಮೊದಲ ಬಾರಿಗೆ ಹೇಳಿದ್ದವಳು ಅವಳು. ನಾನು ಲೀವ್ ಲೆಟರ್ ಬರೆದರೆ ಹೆಡ್ಮಾಸ್ಟರ್ ಅದನ್ನು ಓದಿ ಕಣ್ಣೀರು ಒರೆಸಿಕೊಂಡು ಲೀವ್ ಸ್ಯಾಂಕ್ಷನ್ ಮಾಡೋರು. ಕನ್ನಡ ಭಾಷೆಯ ಮೇಲೆ ಅಷ್ಟರ ಮಟ್ಟಿಗಿನ ಹಿಡಿತ ಇತ್ತು ನನಗೆ. ನಿಜ ಹೇಳ್ತೀನಿ.. ನಾನೇ ಅವಳಿಗೆ ಪ್ರೇಮ ಕೋರಿ ಮೊದಲು ಪತ್ರ ಬರೆದದ್ದು.

* * * *

ಪ್ರಿಯ ರಮ್ಯಾ,
ನಿನ್ನ ಸ್ನೇಹವನ್ನು ತುಂಬು ಸವಿದಿದ್ದೇನೆ ನಾನು.. ನಿನ್ನ ಕವನಗಳ ಹೊರತಾಗಿ. ನೀನು ಇದುವರೆಗೂ ಕೊಟ್ಟ ಯಾವ ಕಾದಂಬರಿಗಳನ್ನೂ ನನಗೆ ಹಿಂತಿರುಗಿಸಬೇಕು ಅಂತ ಅನ್ನಿಸ್ತಿಲ್ಲ.. ನಿನ್ನದೆಲ್ಲವೂ ನನ್ನದೆನ್ನೋ ಭಾವ.. ಬಹುಶಃ ನೀವು ಶ್ರೀಮಂತರು ಪುಸ್ತಕಗಳನ್ನ ಅಲಂಕಾರಿಕವಾಗಿ ಬಳಸ್ತೀರ.. ನಾವು ಹಾಗಲ್ಲ.. ಓದ್ತೀವಿ.. ನನ್ನಲ್ಲೇ ಇರಲಿ ಬಿಡು. ನಿನ್ನಲ್ಲಿ ನನಗೆ ಇಷ್ಟವಾಗದ ಎರಡು ವಿಚಾರಗಳಿವೆ. ನಿನ್ನ ಡ್ರೆಸಿಂಗ್ ಸೆನ್ಸ್.. ಹಾರಿಬಲ್ ಆಗಿದೆ. ನನ್ನಲ್ಲಿ ದುಡ್ಡಿನ ಬಡತನದ ಕಾರಣ ಒಳ್ಳೇ ಬಟ್ಟೆಗಳಿಲ್ಲ.. ನಿನಗೆ ಟೇಸ್ಟ್‍ನ ಬಡತನ ಇರೊದ್ರಿಂದ ದುಡ್ಡಿದ್ರೂ ಒಳ್ಳೆ ಬಟ್ಟೆ ತೊಗೊಳಲ್ಲ. ಅಪ್ಪನಿಗೆ ಇಷ್ಟವಾಯ್ತು, ಅಮ್ಮನಿಗೆ ಇಷ್ಟ್ಯವಾಯ್ತು ಅನ್ನೋ ಕಾರಣಕ್ಕೆ ಬಟ್ಟೆ ಹಾಕೋದರ ಬದಲು ನಿನಗೆ ಯಾವುದು ಒಪ್ಪುತ್ತೆ ಅದನ್ನ ಹಾಕ್ಕೋಳ್ಳೋದೇ ಸರಿಯಾದದ್ದು.. ಯೋಚಿಸು. ಇನ್ನ ನಿನ್ನ ಟೈಮ್‍ಸೆನ್ಸ್, ’ಯಾರು ಟೈಮ್‍ನ ಸರಿಯಾಗಿ ಮೈನ್‍ಟೇನ್ ಮಾಡಲ್ವೋ ಅವರನ್ನ ಒಳ್ಳೇ ಟೈಮ್ ಯಾವತ್ತೂ ಮೈನ್‍ಟೇನ್ ಮಡೋಲ್ಲ..’ ಗೊತ್ತಿರಲಿ. ಇವೆರಡನ್ನು ನೀನು ತಿದ್ಕೊಂಡ್ರೆ ನೀನು ನನಗೆ ಇನ್ನೂ ಹೆಚ್ಚು ಪ್ರಿಯವಾಗ್ತೀ.

ನಾನು ನಿನಗೆ ಬರೀತಿರೋ ಮೊದಲ ಪತ್ರವೇನಲ್ಲ ಇದು. ಆದರೆ ಇದಕ್ಕೊಂದು ವಿಶೇಷತೆ ಇದೆ. ಇದನ್ನು ನಾನು ನಿನ್ನನ್ನು ನನ್ನವಳೇ ಅಂದ್ಕೊಂಡು ಭಾವಿಸಿ ಬರೆದಿದ್ದೇನೆ. ನಮ್ಮ ಸ್ನೇಹ ಮುಂದುವರಿದು ಪ್ರೇಮವಾಗಬಹುದಾ..? ಪ್ರೇಮವೆಂದರೇನೂಂತ ನನ್ನನ್ನು ಕೇಳಬೇಡ. ನನಗೂ ಗೊತ್ತಿಲ್ಲ. ಅದು ಮದುವೆಗೆ ಪೀಠಿಕೆಯೇ ಇರಬಹುದು. ನಿಜ ಹೇಳ್ತೀನಿ ನಿನ್ನೊಟ್ಟಿಗೆ ಜೀವನಪೂರ್ತಿ ಇರಬೇಕು ಅಂತ ಅನ್ನಿಸ್ತಿದೆ. ಅಮ್ಮನಿಗೆ ನಾನು ಓದೋ ತರಾ ನಾಟಕ ಹೊಡ್ಕೊಂಡ್ ನಿನಗೆ ಪ್ರೇಮಪತ್ರ ಬರಿತಿರೋದೇನಾದ್ರೂ ಗೊತ್ತಾದ್ರೆ ಎದೆ ಒಡ್ಕೊಂಡ್ ಸಾಯ್ತಾಳೆ. ನಿಮ್ಮ ಮನೆ ತರ ನಾಯಿಗೂ ಒಂದು ಪ್ರೈವೇಟ್ ರೂಮ್ ಇಲ್ಲವಲ್ಲ. ಅದೆಲ್ಲವನ್ನೂ ನಮ್ಮಪ್ಪ ಅಮ್ಮ ಸಂಸ್ಕಾರ ಉಣಿಸಿ ಬೆಳೆಸಿರೂದ್ರಿಂದ ನಾನು ಸಂಪಾದಿಸ್ತೀನಿ. ಜೊತೇಲಿ ನೀನ್ ಇರ್ತೀಯಾ..?

ಈ ಗೌಪ್ಯತೆಯ ಥ್ರಿಲ್ಲೇ ಪ್ರೇಮವಾ..? ನಮ್ಮ ಸ್ನೇಹವನ್ನು ನಿನ್ನ ಸಹಕಾರದೊಂದಿಗೆ ಮೂರು ಶಿಫ಼್ಟ್‍ಗಳಲ್ಲಿ ಮುಂದುವರೆಸುವ ನನ್ನ ಆಲೋಚನೆಯೇ ಪ್ರೇಮವಾ..? ನಿನ್ನ ಎಲ್ಲಾ ಭಾವನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ನೀನು ನನ್ನನ್ನು ತಿರಸ್ಕರಿಸುವುದಿಲ್ಲ ಯಾವ ಕಾರಣಕ್ಕೂ ಅಂತ ನಂಬಿ ದಿನನಿತ್ಯ ಎದುರು ಸಿಕ್ಕಾಗ ಮುಖತಃ ಹೇಳಲಾಗದ್ದನ್ನು ಧೈರ್ಯ ಮಾಡಿ ನನ್ನೆಲ್ಲಾ ಇತಿಮಿತಿಗಳ ನಡುವೆಯೂ ಪತ್ರ ಮುಖೇನ ಬರೆಯೋ ಪ್ರಯತ್ನ ಮಾಡ್ತಿದ್ದೀನಲ್ಲಾ.. ಈ ಪ್ರಯತ್ನವೇ ಪ್ರೇಮವಾ..?
ಹೇಳು.. ನನ್ನನ್ನು ತಿರಸ್ಕರಿಸೋದಕ್ಕೆ ನಿಂಗೆ ಕಾರಣಗಳಾದ್ರೂ ಇದೆಯಾ..? ನೀನು ನಿರೀಕ್ಷಿಸದೇ ಇದ್ದ ಈ ಪತ್ರ ಓದುವಾಗ ನಿನ್ನ ಹೃದಯದ ಬಡಿತಗಳು ನಿನಗೇ ಕೇಳಿಸಿದರೆ ನೀನು ನನ್ನನ್ನು ಪ್ರೇಮಿಸ್ತಿದ್ದೀಯಾ ಅಂತ ಅಂದ್ಕೊಳ್ಲಾ..? ಈ ಪತ್ರ ನೀನು ಎರಡನೇ ಬಾರಿ ಓದಿದರೆ ನೀನು ನನ್ನನ್ನು ಪ್ರೇಮಿಸ್ತಿಲ್ಲಾಂತ ಸುಳ್ಳು ಹೇಳಿದ್ರೆ ಪ್ರಪಂಚ ನಿಂತೇನೂ ಹೋಗಲ್ಲ.. ಆಸ್ಟ್ರೇಲಿಯಾದಲ್ಲಿ ಇಷ್ಟು ಹೊತ್ತಿಗಾಗಲೇ ನಾಳೆಯಾಗಿದೆ.

ನಿನ್ನ ಅನಾಗರಿಕ ಅಪ್ಪನಿಗೆ ಸಿನೇಮಾ ನೋಡಲು ಬಂದಾಗಲಾದರೂ ಪಾನ್‍ಪರಾಗ್ ಉಗ್ಯೋದನ್ನು ಬಿಡೋದಕ್ಕೆ ಹೇಳು. ಕಳೆದ ಸಲ ಸಿನೇಮಾ ನೋಡೋ ನಿನ್ನ ನೋಡೋಕೆ ಬಂದಿದ್ದ ನನ್ನ ಏಕೈಕ ಜೀನ್ಸ್‍ಪ್ಯಾಂಟ್ ಮೇಲೆಲ್ಲಾ ಉಗುಳಿದ್ದ.. ಸಾರಿಯನ್ನೂ ಹೇಳದೆ. ಅಮ್ಮನಿಗೆ ರಂಗೋಲಿ ಬಿಡುವಾಗ ಸೆರಗಿನ ಬಗ್ಗೆ ಎಚ್ಚರವಾಗಿರಲು ಹೇಳು. ಕಿರಣ ತುಂಬಾ ಆಡ್ಕೋತಾನೆ. ಮಲೆನಾಡ ಕಣಿವೆಗಳ ಹಸಿರು ಬನದಿಂದ ನಿನಗಾಗಿ ಗಿಣಿಯೊಂದು ನಾ ತರಲಾರೆ.. ಮಣ್ಣಿನಲಿ ನೀರಿನಲಿ ಬದುಕನೇ ಇಟ್ಟಿರುವ ಸೂರ್ಯ ಚಂದ್ರರ ನಾ ತರಲಾರೆ..ಸಾಗರದ ಕಲೆಗಳಲಿ ಉಯ್ಯಾಲೆಯಾಡಿರುವ ಹಂಸನಾವೆಯ ನಾ ತರಲಾರೆ.. ಹಲವು ಅರಸಿಯರು ಹೊತ್ತು ಮೆರೆದಿರುವ ಮುತ್ತಿನಾ ಪಲ್ಲಕಿಯ ನಾ ತರಲಾರೆ.. ಸದ್ಯಕ್ಕಂತೂ..! ಹೇಳು..
ಗುರೂ.

ಒಂದು ವರ್ಷ ಸ್ನೇಹದ ಸಲುಗೆಯ ಪತ್ರಕ್ಕೆ ನಾನು ನಿರೀಕ್ಷಿಸಿದ ಉತ್ತರವೇ ಬಂತು. ಆ ಎರಡು ವರ್ಷಗಳು ನನ್ನ ಜೀವನದ ಅದ್ಭುತ ಕಾಲಗಳಲ್ಲೊಂದು. ಮನೆಯ ಒತ್ತಡಕ್ಕೆ ಅವಳು ಶರಣಾಗಿದ್ದು ಎಲ್ಲವನ್ನೂ ನನ್ನಿಂದ ಸುಸೂತ್ರವಾಗಿ ಮುಚ್ಚಿಟ್ಟಿದ್ದೂ ನನ್ನನ್ನು ದೊಡ್ಡ ಮಟ್ಟಕ್ಕೆ ಘಾಸಿಗೊಳಿಸಿಬಿಟ್ಟಿತ್ತು. ನನ್ನ ಮೇಲೆ ಮನೆಯ ದೊಡ್ಡ ಜವಾಬ್ದಾರಿಗಳಿದ್ದವು. ನನ್ನ ಮುಂದೆ ನನ್ನ ಗಮ್ಯವಿತ್ತು. ನನ್ನೆಲ್ಲಾ ಶಕ್ತಿಗಳನ್ನೂ ಕ್ರೋಢೀಕರಿಸಿ ನನ್ನ ಗಮ್ಯ ತಲುಪೋದಿಕ್ಕೆ ಒಂಭತ್ತು ವರ್ಷಗಳೇ ಬೇಕಾದವು. ನನ್ನಲ್ಲಾ ಜೀವನದ, ಗಮ್ಯದ ಜಂಜಾಟದಲ್ಲೂ ಅವಳನ್ನ ಒಮ್ಮೆ ನಿಲ್ಲಿಸಿ ಮಾತಾಡಿಸಬೇಕೆಂಬ ಆಸೆ ಇದ್ದೇ ಇತ್ತು. ಅವಳ ವಿಳಾಸ, ಫ಼ೋನ್ ನಂಬರ್ ಏನೂ ಇಲ್ಲ.. ಆದರೂ ಹುಡುಕಬೇಕು.. ಸಿಕ್ಕರೆ ಹಳೆಯ ಸ್ನೇಹಿತೆಯಾಗಿಯಾದರೂ ಹರಟೆ ಹೊಡೆಯಬೇಕು.. ನನ್ನ ನಿರ್ದೇಶನದ ’ಮಠ’ ಚಿತ್ರವನ್ನ ಅವಳಿಗೆ ತೋರಿಸಬೇಕು. ನಾನು ಗಮ್ಯ ತಲುಪಿದ್ದು ಅವಳಿಗೆ ಖಂಡಿತ ಖುಷಿಯಾಗಿರುತ್ತೆ.. ನನಗೆ ಗೊತ್ತು ಅವಳು ದೂರದಿಂದಲೇ ನನ್ನನ್ನು ಗಮನಿಸ್ತಿದ್ದಾಳೆ. ಎಲ್ಲಿದ್ದಾಳೆ ಗೊತ್ತಿಲ್ಲ.. ಹೇಗಾಗಿರಬಹುದು ಗೊತ್ತಿಲ್ಲ.. ಗಂಡ ಯಾರೋ ಗೊತ್ತಿಲ್ಲ.. ಮಕ್ಕಳೆಷ್ಟೋ ಗೊತ್ತಿಲ್ಲ.. ಆಗಲೇ ನಾನು ನನ್ನ ಮೊಬೈಲ್ ನಂಬರ್ ಅನ್ನು ಈ ಅಂಕಣದಲ್ಲಿ ಪ್ರಕಟಿಸಿದ್ದು. ಕೆಲವು ಒಳ್ಳೆಯ ಸ್ನೇಹಿತರು ಸಿಕ್ಕರು..ಅವಳು ಸಿಗಲಿಲ್ಲ. ನನ್ನ ಮುಂದಿನ ಮೂರು ಕೋಟಿ ಪ್ರಾಜೆಕ್ಟ್‍ಗೆ ನಿರ್ಮಾಪಕರೂ ಸಿಕ್ಕರು.. ಅವಳು ಸಿಗಲಿಲ್ಲ. ಫ಼ೋನ್ ನಂಬರ್ ಜಾಡೇ ಹಿಡಿದು ಒಬ್ಬ ಬುದ್ಧಿವಂತ ಇಂಜಿನಿಯರ್, ಒಬ್ಬ ಕನ್ನಡ ಎಂ.ಎ. ಮಾಡಿದ ಸಿನೆಮಾಸಕ್ತ ಸಹಾಯಕರು ಸಿಕ್ಕರು.. ಅವಳ ಸುಳಿವೇ ಇಲ್ಲ..

ಒಂದು ದಿನ ಮನಸ್ಸನ್ನೇ ನಾಲಿಗೆಯನ್ನಾಗಿ ಮಾಡಿಕೊಂಡು ಮುಂದಿನ ಪ್ರಾಜೆಕ್ಟ್ ಡಿಸ್ಕಷನ್ನಲ್ಲಿ ಇಡೀ ತಂಡ ಮೈ ಮರೆತಿದ್ವಿ. ಆ ಸಮಯದಲ್ಲಿ ಯಾರೂ ನಮ್ಮನ್ನ ಡಿಸ್ಟರ್ಬ್ ಮಾಡುವಂತಿಲ್ಲ. ನನ್ನ ಮೊಬೈಲ್ ನನ್ನ ನಿರ್ಮಾಪಕರ ಬಳಿ ಇತ್ತು. ಅವರು ರೂಮ್ ಒಳಗೆ ಬಂದರು. ’ಗುರೂ.. ಯಾವುದೋ ಲ್ಯಾಂಡ್‍ಲೈನ್‍ನಿಂದ ಫ಼ೋನ್. ನಿನ್ ಹತ್ರಾನೇ ಮಾತಾಡಬೇಕಂತೆ..’ ’ಅಭಿಮಾನಿಯೋ..ಅವಕಾಶವಾದಿಯೋ..’ ನನ್ನ ಪ್ರಶ್ನೆ. ’ಎರಡೂ ಅಲ್ಲವಂತೆ..’ ನಾನು ಇತ್ತಲ್ಲಿಂದ ಹಲೋ ಹೇಳಿದೆ. ಆ ಕಡೆಯಿಂದ ಒಂದು ಹೆಣ್ಣು ಧ್ವನಿ.. ನಿಧಾನವಾಗಿ ಹಾಡುತ್ತಿತ್ತು. ತೀರಾ ಮೆಲು ಧ್ವನಿಯಲ್ಲಿ.. ನನಗಷ್ಟೇ ಹಾಡಿದಂತೆ! ಮಲೆನಾಡ ಕಣಿವೆಗಳ ಹಸಿರು ಬನದಿಂದ ನಿನಗಾಗಿ ಗಿಣಿಯೊಂದು ನಾ ತರಲಾರೆ..
ಆ ಧ್ವನಿ ಚೆನ್ನಾಗಿ ನೆನಪಿದೆ ನನಗೆ..ರಮ್ಯಾ.. ಮನೆಯ ಛಾವಣಿಯೇ ಕಿತ್ತು ಹೋಗುವಂತೆ ಕೂಗಿದ್ದೆ ನಾನು.. ಹಾಡು ಮುಗಿಯುತ್ತಿದ್ದಂತೆ. ಆ ಕಡೆಯಿಂದ ಅಳುವಿನ ಧ್ವನಿ.. ನನ್ನ ಕಣ್ಣಲ್ಲಿ ನೀರಲ್ಲ.. ಅದು ನೀರಲ್ಲಿ ನನ್ನ ಕಣ್ಣು. ನಾನು ಮಾತಾಡು ರಮ್ಯಾ.. ಮಾತಾಡಮ್ಮಾ ಕೂಗ್ತಿದ್ದೆ ಇತ್ತಲ್ಲಿಂದ.. ಅಷ್ಟೇ..ಕಾಲ್ ಕಟ್ಟಾಗಿ ಹೋಯಿತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.