ಬೆಂಗಳೂರಿನಲ್ಲಿ ಸಾಂಸ್ಕೃತಿಕವಾಗಿ ಜೀವಂತವಿರಲು ಸಾಕಷ್ಟು ಕಷ್ಟಪಡಬೇಕಾಗಿರುವ ನನ್ನಂತಹವರಿಗೆ ಹೆಗ್ಗೋಡು/ನೀನಾಸಂ ಒಂದು ಸಾಧ್ಯತೆಯಾಗಿ ತುಂಬಾ ಮುಖ್ಯವಾಗುತ್ತದೆ. ಒಂದು ವಿಧದಲ್ಲಿ ಈ ಲೇಖನ ನನಗೆ ನಾನೇ ಕೊಟ್ಟುಕೊಳ್ಳುತ್ತಿರುವ ವಿವರಣೆ. ನೀನಾಸಂ ಸಮಾಜ, ಸುಬ್ಬಣ್ಣನವರು ಮತ್ತು ಸಂಬಂಧಿತ ಇತರ ವ್ಯಕ್ತಿಗಳಿಂದ ಬಹಳಷ್ಟು ದೂರದಲ್ಲಿದ್ದರೂ, ಈ ದೂರವನ್ನು ಮೀರಿ ಸಾಧ್ಯವಾಗಿರುವ ನನ್ನ ಹಲವಾರು ಅಭಿಪ್ರಾಯಗಳು ಪೂರ್ತಿ ನಿಜ ಅಲ್ಲದಿರಬಹುದು. ಆದರೆ ಈ ಅನಿಸಿಕೆಗಳು ಪ್ರಾಮಾಣಿಕವಾದ್ದರಿಂದ, ಅಲ್ಲದೇ ಇಂತಹ ಅಭಿಪ್ರಾಯಗಳು ಮತ್ತೆಲ್ಲಾದರೂ ಸಾಧ್ಯವಾಗಬಹುದಾದ್ದರಿಂದ ಇದಕ್ಕೊಂದು ಪ್ರಾತಿನಿಧಿಕ ಗುಣ ಇರಬಹುದು ಎನ್ನುವ ಆಶೆಯಿಂದ (ದುರಾಶೆಯಿಂದ!!!) ಬರೆದಿದ್ದೇನೆ.
ನಾನು ಮೊಟ್ಟ ಮೊದಲ ಬಾರಿಗೆ ನೀನಾಸಂ ಬಗ್ಗೆ ಓದಿದ್ದು ೧೯೯೧-ರಲ್ಲಿ, ಸುಬ್ಬಣ್ಣನವರಿಗೆ ಮ್ಯಾಗ್ಸೇಸೇ ಪ್ರಶಸ್ತಿ ಬಂದಾಗ. ನನಗಾಗ ೧೬ ವರ್ಷ, ಪಿಯೂಸಿ ಓದುತ್ತಿದ್ದೆ. ದೂರದರ್ಶನದಲ್ಲಿ ವಾರ್ತೆ ನೋಡುತ್ತಿದ್ದ ನನಗೆ, ಕನ್ನಡದ ಸುಬ್ಬಣ್ಣನವರಿಗೆ ಮ್ಯಾಗ್ಸೇಸೇ ಪ್ರಶಸ್ತಿ ಬಂದಿದೆ ಎಂದು ಸುದ್ದಿ ಬಿತ್ತರವಾದಾಗ, ಏಕಕಾಲದಲ್ಲಿ ಖುಶಿ ಮತ್ತು ಆಶ್ಚರ್ಯವಾಯಿತು. ಖುಶಿಯಾದದ್ದಕ್ಕೆ ಸಹಜ ಸಾಂಸ್ಕೃತಿಕ ಕಾರಣಗಳ ಜೊತೆಯಲ್ಲೇ ಮತ್ತೊಂದು ತಮಾಶೆಯ ವಿಷಯವೂ ಇದೆ. ಬೆಂಗಳೂರಿನಲ್ಲಿ ಕನ್ನಡಾಭಿಮಾನಿಗಳಾದವರಿಗೆ ಇಂತಹ ಒಂದೊಂದು ಪ್ರಶಸ್ತಿಯೂ ಮುಖ್ಯವಾಗಿಬಿಡುತ್ತದೆ, ಕನ್ನಡಾಭಿಮಾನ ಹೆಚ್ಚಿಸಿಕೊಳ್ಳಲು (ತೋರಿಸಿಕೊಳ್ಳಲು!) ಮತ್ತೊಂದು ಕಾರಣ ಒದಗುವುದರಿಂದ. (ಆಗಷ್ಟೆ ಅಥವಾ ಸ್ವಲ್ಪ ಹಿಂದೆಯೋ, ಸ್ವಲ್ಪ ಮುಂದೋ ಗೋಕಾಕರಿಗೆ ಜ್ಞಾನಪೀಠ ಬಂದದ್ದು ನೆನಪಿದೆ, ಕನ್ನಡದ ಕೋಡು ಮೂಡಲು ಇವಲ್ಲಾ ಸಾಕಾಗಿತ್ತು. ಆದರೆ, ಇಂದಿಗೂ ಗೋಕಾಕ್-ರನ್ನು ನಾನು ಓದಿಯೇ ಇಲ್ಲ!). ಆಶ್ಚರ್ಯವಾದದ್ದು, ಈವರೆಗೆ ಸುಬ್ಬಣ್ಣನವರ ಹೆಸರನ್ನು ಕೇಳಿಯೇ ಇರಲಿಲ್ಲವಲ್ಲ ಎಂದು. ಕಾರಣ ಇಷ್ಟೇ. ಕನ್ನಡ ಸಾಹಿತ್ಯದ ಆಳವಾದ ಪರಿಚಯ ಇಲ್ಲದಿದ್ದರೂ ಅನಂತಮೂರ್ತಿ, ಭೈರಪ್ಪ, ಶಿವರಾಮಕಾರಂತ, ಕುವೆಂಪು, ಮಾಸ್ತಿ, ಕಾರ್ನಾಡ್, ತೇಜಸ್ವಿ ಇವರ ಕೆಲವು ಕೃತಿಗಳನ್ನು ಓದಿದ್ದೆ. ಆಗಷ್ಟೆ ಲಂಕೇಶ್ ಪತ್ರಿಕೆಗೆ ಸ್ವಲ್ಪ ಪ್ರವೇಶ ದೊರೆತಿತ್ತು. ಅಲ್ಲದೇ, ಕನ್ನಡದ ಉತ್ತಮ ಸಿನೆಮಾಗಳ ಪರಿಚಯವಿತ್ತು, ಹಾಗಾಗಿ ಸಿನೆಮಾದಲ್ಲಿ ನಿರತರಾಗಿದ್ದ ಕನ್ನಡ ಸಾಹಿತಿಗಳ ಹೆಸರು ಗೊತ್ತಿತ್ತು. ’ಸಂಸ್ಕಾರ’ ಕಾದಂಬರಿ ಓದಿ, ಸಿನೆಮಾ ನೋಡಿ ಒಂದು ತೀವ್ರವಾದ ಅನುಭವಕ್ಕೆ ತೆರೆದುಕೊಂಡಿದ್ದೆ. ಇಷ್ಟೆಲ್ಲಾ ಇದ್ದರೂ, ಕನ್ನಡ ಪತ್ರಿಕೆಗಳನ್ನೆಲ್ಲಾ ಪ್ರತಿ-ದಿನ ಓದುತ್ತಿದ್ದರೂ – ಸುಬ್ಬಣ್ಣರ ಹೆಸರಾಗಲೀ, ನೀನಾಸಂ-ಆಗಲಿ ಗೊತ್ತೇ ಇರಲಿಲ್ಲ ಎಂದರೆ – ಸ್ಕೂಲ್-ಕಾಲೇಜುಗಳಲ್ಲಿ ಕನ್ನಡ ಬಾವುಟವನ್ನು ಯಾವಾಗಲೂ ಹೊತ್ತಿರುತ್ತಿದ್ದ, ಸಾಂಸ್ಕೃತಿಕವಾಗಿ ಜೀವಂತವಾಗಿದ್ದೇನೆ ಎಂದುಕೊಂಡಿದ್ದ ನನ್ನ ಜಂಬದ ಬಲೂನು ಟುಸ್ಸೆಂದಿತ್ತು. ಅಲ್ಲದೇ ಬೆಂಗಳೂರಿನಲ್ಲಿದ್ದು ಸಾಧ್ಯವಾಗುವ ಸಾಂಸ್ಕೃತಿಕ ಕೂಪಮಂಡೂಕತನದ ಬಗ್ಗೆ ಎಚ್ಚರ ಬಂತು.
ಆ ಸಮಯದಲ್ಲಿ ಸುಬ್ಬಣ್ಣನವರು ದೂರದರ್ಶನದಲ್ಲಿ ಮಾತಾಡಿದ ರೀತಿ, ಪತ್ರಿಕೆಗಳಲ್ಲಿ ಬರುತ್ತಿದ್ದ ಅವರ ಹೇಳಿಕೆಗಳು ಇವೆಲ್ಲಾ ನನಗೆ ಇನ್ನೂ ಜ್ಞಾಪಕವಿದೆ. ತುಂಬಾ ಎನ್ನುವ ಪರಿಣಾಮ ಬೀರಿರಲಿಲ್ಲವಾದರೂ – ಎಷ್ಟು ಸರಳವಾದ ವ್ಯಕ್ತಿ, ನಾವೆಲ್ಲಾ ಹೆಮ್ಮೆ ಪಡಬಹುದು ಎಂದಂತೂ ಅನ್ನಿಸಿದ್ದು ದಿಟ. ಪತ್ರಿಕೆಗಳಲ್ಲಿ ಸುಬ್ಬಣ್ಣನವರ ಕುರಿತು ಬಂದ ವರದಿಗಳಿಗಿಂತಾ ಸತ್ಯ ಹೆಚ್ಚಿನದ್ದು, ಆಳದ್ದಾಗಿದೆ ಎಂದು ಏಕೋ ಅನ್ನಿಸಿದ್ದ ನೆನಪು.
ಮುಂದೆ ಐದಾರು ವರ್ಷಗಳು ನಾನು ಕರ್ನಾಟಕದಿಂದ ದೂರ ಗುಜರಾತ್, ಮುಂಬೈ-ಗಳಲ್ಲಿ ಶಿಕ್ಶಣ ಮುಂದುವರೆಸಿದ್ದರಿಂದ ಕನ್ನಡದ ವಾತಾವರಣದಿಂದ ಸಂಪೂರ್ಣ ದೂರವಾಗಿದ್ದೆ. ಟೈಮ್ಸ್ ಆಫ಼್ ಇಂಡಿಯಾ ವರದಿಗಳು, ಆಗೀಗ ಸುಧಾ-ತರಂಗ, ದೂರದರ್ಶನ ವಾರ್ತೆಗಳು ಇವಿಷ್ಟೆ ಕನ್ನಡ-ಕರ್ನಾಟಕದ ಜೊತೆಗಿನ ಸಂಬಂಧ. ಆ ಐದಾರು ವರ್ಷಗಳಲ್ಲಿ ಒಮ್ಮೆಯೂ ಸುಬ್ಬಣ್ಣನವರ ಹೆಸರನ್ನಾಗಲೀ, ನೀನಾಸಂಹೆಸರಾಗಲೀ ಎಲ್ಲಿಯೂ ಓದಿದ್ದು ಜ್ಞಾಪಕವಿಲ್ಲ. ಇಂಜಿನಿಯರಿಂಗ್ ವಿದ್ಯಾರ್ಥಿಗಳ ’ಆಧ್ಯಾತ್ಮಿಕ’ ಜೀವನವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಪದಗಳೆಂದರೆ – ಹೈಯರ್-ಸ್ಟಡೀಸ್, ಕೆರಿಯರ್, ಟೆಕ್ನಾಲಜಿ, ಬ್ಯುಸಿನೆಸ್, ಫ಼್ಯೂಚರ್, ಜವಾಬ್ದಾರಿ. ಇವೆಲ್ಲಾ ಸರ್ವವ್ಯಾಪಿಯಾಗಿ ಆವರಿಸಿದ್ದ, ಇವುಗಳ ಭರದಲ್ಲಿ ಕೊಚ್ಚಿಹೋಗುತ್ತಿದ್ದ ಆ ದಿನಗಳಲ್ಲಿ ಇನ್ನಿತರ ವಾಸ್ತವಗಳಿಂದ ನಾವು ಅದೆಷ್ಟು ದೂರವಾಗಿರುತ್ತೇವೆಂದರೆ ಈಗ ನೆನೆಸಿಕೊಳ್ಳಲೂ ಭಯವಾಗುತ್ತದೆ. ಅಂತಹ ದಿನಗಳಲ್ಲೂ ನಾನು ನನ್ನ ಬೇರನ್ನು ಗಟ್ಟಿಯಾಗಿಟ್ಟುಕೊಳ್ಳಲು ಮಾಡುತ್ತಿದ್ದ ಪ್ರಯತ್ನಗಳಲ್ಲಿ ಕನ್ನಡದ ಬಗ್ಗೆ ಜಂಭ ಕೊಚ್ಚಿಕೊಳ್ಳುವುದೂ ಒಂದಾಗಿತ್ತು. ಅಂತಹ ಸಂದರ್ಭಗಳಲ್ಲೆಲ್ಲಾ ಕನ್ನಡದ ಜ್ಞಾನಪೀಠ ಪ್ರಶಸ್ತಿಗಳನ್ನು, ಸುಬ್ಬಣ್ಣ-ನೀನಾಸಂ-ಹೆಗ್ಗೋಡುಗಳನ್ನು ಧಾರಾಳವಾಗಿ ಬಳಸಿಕೊಳ್ಳುತ್ತಿದ್ದೆ. ಒಟ್ಟಿನಲ್ಲಿ, ಹೆಗ್ಗೋಡಿನ ನೆನಪು ಆಗೀಗ ಬರುತ್ತಿದ್ದು, ಆಳದಲ್ಲಿ ಅವ್ಯಕ್ತವಾದ ಒಂದು ಆಸಕ್ತಿಯೂ ಇದ್ದಿತೆಂದೇ ನನಗೆ ತೋರುತ್ತದೆ.
ಓದು ಮುಗಿಸಿ ಕೆಲಸ ಬೆಂಗಳೂರಿನಲ್ಲೇ ಆದಾಗ ನಿಧಾನವಾಗಿ ಬೇರಿನ ಜೊತೆಗಿನ ಸಂಬಂಧ ಬಲವಾಗತೊಡಗಿತು. ಈ ಸಂದರ್ಭದಲ್ಲಿ ಒಮ್ಮೆ ನಾನು ನಮ್ಮ ಊರಿಗೆ ಬಸ್-ನಲ್ಲಿ ತೆರಳುತ್ತಿದ್ದಾಗ, ಪ್ರಜಾವಾಣಿ ವಿಶೇಷಾಂಕದಲ್ಲಿರಬೇಕು, ಸುಬ್ಬಣ್ಣನವರ ’ಕನ್ನಡವು ದಕ್ಕಿಸಿಕೊಂಡ ಅರಿವು ಮತ್ತು ಎಚ್ಚರ’ ಲೇಖನವನ್ನು ಓದಿದೆ ತುಂಬಾ ಪ್ರಭಾವಿತನಾದೆ. ಬಸ್-ನಲ್ಲೇ ೩-೪ ಬಾರಿ ಓದಿದ ನೆನಪು. ಇಲ್ಲಿಯವರೆಗೆ ಗುಪ್ತಗಾಮಿನಿಯಾಗಿದ್ದ ಅವರ ಬಗೆಗಿನ ಆಸಕ್ತಿ ಈ ಓದಿನ ನಂತರ ಪ್ರಜ್ಞೆಯ ಮುಖ್ಯವಾಹಿನಿಯಲ್ಲಿ ಸೇರಿತು ಎಂದು ನನ್ನ ಅನಿಸಿಕೆ.
ಇದೇ ದಿನಗಳಲ್ಲಿ ಹೆಗ್ಗೋಡಿನಲ್ಲಿ ನಡೆಯುವ ’ಸಾಂಸ್ಕೃತಿ ಶಿಬಿರ’ ಹಾಗೂ ’ತಿರುಗಾಟ’ ನಾಟಕಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ (ಆದರೆ ಮೊಟ್ಟಮೊದಲು ತಿರುಗಾಟ ನಾಟಕಗಳನ್ನು ನೋಡಿದ್ದು ಹೆಗ್ಗೋಡಿನಲ್ಲಿಯೇ). ಹೋಗಬೇಕೆನ್ನುವ ಆಸೆಯಿತ್ತಾದರೂ ಕೆರಿಯರ್ ಭದ್ರಪಡಿಸಿಕೊಳ್ಳಬೇಕು, ಅದಾಗಬೇಕು, ಇದಾಗಬೇಕು ಎಂದೆಲ್ಲಾ ವ್ಯಾಕುಲಗೊಂಡಿದ್ದ ದಿನಗಳವು. ರಜೆ ಸಿಗಬೇಕು, ಅವಕಾಶಗಳು ತಪ್ಪಿಹೋಗಬಾರದು – ಇತ್ಯಾದಿಗಳ ಜಂಜಡ. ಶಿಬಿರಕ್ಕೆ ಹೋಗುವ ಆಸೆ ಬಲಿಯಲು ವರ್ಷಗಳೇ ಹಿಡಿದವು. ಯಾರಾದರೂ ಹೋಗಿ ಬಂದವರಿದ್ದಾರೆಯೇ ಎಂದು ವಿಚಾರಿಸುತ್ತಿದ್ದೆ.
ನಂತರ ಇಂಟರ್ನೆಟ್-ನಲ್ಲಿ ಒಮ್ಮೆ ಸುಬ್ಬಣ್ಣನವರ ಬಗ್ಗೆ ಹುಡುಕುತ್ತಿದ್ದಾಗ, ರಮೋನ್ ಮ್ಯಾಗ್ಸೇಸೇ ಫ಼ೌಂಡೇಶನ್-ರವರು ಪ್ರಕಟಿಸಿರುವ ಸುಬ್ಬಣ್ಣನವರ ಮ್ಯಾಗ್ಸೇಸೇ ಪ್ರಶಸ್ತಿ ಸ್ವೀಕಾರ ಭಾಷಣವನ್ನು ಓದಿದೆ (ಇದರ ಮೂಲ ಕನ್ನಡ ರೂಪವನ್ನು ನಂತರ ’ಅರೆಶತಮಾನದ…….’-ದಲ್ಲಿ ಇತ್ತೀಚೆಗೆ ಓದಿದೆ). ಕಾಲಾಂತರದಲ್ಲಿ ಅವರ ಇನ್ನಿತರ ಲೇಖನಗಳಾದ ’ಅಡಕೆಯ ಮಾನ’, ’ನನ್ನ ಕನ್ನಡ ಜಗತ್ತು’ – ಇತ್ಯಾದಿಗಳನ್ನು ಓದಿದ ಮೇಲೆ, ತೀವ್ರವಾಗಿ ನನಗನ್ನಿಸಿದ್ದು – ಇವರು ಕನ್ನಡ ಸಾಂಸ್ಕೃತಿಕ ಪ್ರಪಂಚದಲ್ಲಿ ನನಗೆ ಅತ್ಯಂತ ಪ್ರಸ್ತುತರಾದ ವ್ಯಕ್ತಿ, ಇವರ ಊರಿಗೆ, ಆ ಶಿಬಿರಕ್ಕೆ ಖಂಡಿತಾ ಹೋಗಲೇ ಬೇಕು, ಇವರನ್ನು ಕಂಡು ಮಾತಾಡಿಸಿ ಬರಬೇಕು – ಎಂದು. ಹಾಗೆ ನೋಡಿದರೆ ಆಗಲೂ ನನಗೆ ಅವರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ, ಅಷ್ಟೇನೂ ಅವರ ಲೇಖನಗಳನ್ನು ಓದಿರಲೂ ಇಲ್ಲ. ಆದರೂ ಹೀಗೇಕೆ ಅನ್ನಿಸಿತು ಎಂದು ನಾನೇ ಬಹಳಷ್ಟು ಸಾರಿ ಆಲೋಚಿಸಿದ್ದೇನೆ. ಅಂತೂ, ನಮ್ಮಂತಹವರಿಗೆಲ್ಲಾ ಸಾಂಸ್ಕೃತಿಕ-ಹಿರಿಯರ ಅಗತ್ಯ ತುಂಬಾ ಕಾಡುತ್ತಿರುತ್ತದೆಯಾದ್ದರಿಂದ, ಭೇಟಿಯಾಗದೆಯೂ ಸುಬ್ಬಣ್ಣರಂಥವರು ಈ ಅಗತ್ಯವನ್ನು ಪೂರೈಸುತ್ತಿರುತ್ತಾರೆ.
ಈಗ್ಗೆ ಸುಮಾರು ಎರಡೂವರೆ ವರ್ಷಗಳಿಂದ ಬೆಂಗಳೂರಿನಲ್ಲಿ ನಮ್ಮದೇ ಆದ ಸುಮಾರು ೫-೬ ಜನರ ಅನೌಪಚಾರಿಕ ಸಾಹಿತ್ಯಾಸಕ್ತರ ಬಳಗವೊಂದು ಸಾಧ್ಯವಾಗಿದೆ. ಅಲ್ಲೆಲ್ಲಾ ನಾವು ಚರ್ಚಿಸುತ್ತಿದ್ದ ಮುಖ್ಯ ಹೆಸರುಗಳಲ್ಲಿ ಸುಬ್ಬಣ್ಣನವರಿರುತ್ತಿದ್ದುದು ಸ್ವಾಭಾವಿಕ. ನಮ್ಮ ಬಳಗದಲ್ಲಿ ನನಗಿಂತ ಹೆಚ್ಚು ಸಾಹಿತ್ಯ ಓದಿಕೊಂಡ ಜನರಿದ್ದಾರೆ. ಅವರಿಗೆಲ್ಲಾ ಸುಬ್ಬಣ್ಣನವರ ಲೇಖನಗಳು, ಅನುವಾದಿಸಿದ ನಾಟಕಗಳು – ಇವುಗಳ ಚೆನ್ನಾದ ಪರಿಚಯವಿದೆ, ತಿರುಗಾಟ ನಾಟಕಗಳನ್ನು ನೋಡಿದ ಅನುಭವವಿದೆ. ನಾವೆಲ್ಲಾ ಹೆಗ್ಗೋಡಿಗೆ ಹೋಗಬೇಕೆಂದು ಆಗಾಗ್ಗೆ ಮಾತನಾಡಿಕೊಳ್ಳುತ್ತಿದ್ದೆವು.
ಇಷ್ಟರಲ್ಲೇ ಸುಬ್ಬಣ್ಣನವರ ’ಅರೆ ಶತಮಾನದ ಅಲೆ ಬರಹಗಳು’ ಬಿಡುಗಡೆಯಾಗಿದ್ದರಿಂದ, ಶಿಬಿರಕ್ಕೆ ಮುನ್ನವೇ ಅದನ್ನು ಓದಬೇಕು ಎಂದು ಹಠದಿಂದ ಅದನ್ನು ಮುಗಿಸಿದೆ. ಕನ್ನಡ ಸಾಹಿತ್ಯದ ಓದಿನಲ್ಲಿ ನನ್ನ ಮೇಲೆ ಅಪಾರ ಪ್ರಭಾವ ಬೀರಿದ ಪುಸ್ತಕಗಳಲ್ಲಿ ಇದೂ ಒಂದು. ಈ ಮೊದಲು ಅನಂತಮೂರ್ತಿಯವರ ಹಾಗೂ ಡಿ.ಆರ್.ನಾಗರಾಜರ ಪುಸ್ತಕಗಳು ಹಾಗೆಯೇ ಪ್ರಭಾವ ಬೀರಿದ್ದವು. ’ಅರೆ ಶತಮಾನದ….’ ಪುಸ್ತಕದ ಬಗ್ಗೆಯೇ ಬರೆದರೆ ಒಂದು ದೀರ್ಘವಾದ ಲೇಖನವಾದೀತು. ಆದರೆ, ಟಿ.ಪಿ.ಅಶೋಕ್-ರ ಮುನ್ನುಡಿ ಅದೆಷ್ಟು ವಿವರವಾಗಿದೆಯೆಂದರೆ ಮತ್ತೆ ಹೊಸದಾದ್ದನ್ನು ಹೇಳುವುದು ಕಷ್ಟ. ಆದರೂ ನನಗನ್ನಿಸಿದ ಕೆಲವನ್ನು ಹೇಳುತ್ತೇನೆ. ಸ್ವಲ್ಪ ದಿನಗಳ ಹಿಂದೆ, ಬೆಂಗಳೂರಿನ ಸುಚಿತ್ರ ಫ಼ಿಲ್ಮ್ ಸೊಸೈಟಿಯಲ್ಲಿ ನಡೆದ ರಶೋಮೋನ್ ಕುರಿತ ಸಾರ್ವಜನಿಕರ ಜೊತೆಗಿನ ಸಂವಾದದಲ್ಲಿ ಗಿರೀಶ್ ಕಾಸರವಳ್ಳಿಯವರು ತಾವು ಕಂಡಂತೆ ’ರಶೊಮೋನ್’ ಚಿತ್ರದ ಕುರಿತ ಅತ್ಯುತ್ತಮ ಲೇಖನ ಸುಬ್ಬಣ್ಣನವರದ್ದು ಎಂದು ಹೇಳಿದ್ದರು. ಆಗ ನನಗೆ ಇವರು ಉತ್ಪ್ರೇಕ್ಷೆ ಮಾಡುತ್ತಿರಬಹುದೇ ಎನ್ನಿಸಿತ್ತು. ಆದರೆ ’ಅರೆ ಶತಮಾನ…….’-ದಲ್ಲಿ ಆ ಲೇಖನ ಓದಿದ ಮೇಲೆ ಇದು ಖಂಡಿತಾ ನಿಜ ಅನ್ನಿಸಿತು. ನನಗೆ ತುಂಬಾ ಹಿಡಿಸಿದ ಇನ್ನಿತರ ಲೇಖನಗಳೆಂದರೆ ’ಕುವೆಂಪುಗೊಂದು ಪುಟ್ಟ ಕನ್ನಡಿ’, ವಿಕೇಂದ್ರೀಕರಣ, ಪ್ರಜಾಭುತ್ವ, ಕೈಗಾರಿಕಾ ನೀತಿ, ರೈತ-ದಲಿತ ಚಳುವಳಿಗಳು, ’ಭವ ಕೇರಳ, ಭಾವ ಕೇರಳ’, ’ನನ್ನ ಕನ್ನಡ ಜಗತ್ತು’, ’ಅನಂತಮೂರ್ತಿಯವರ ತ್ರಿವಳಿ ಕಾದಂಬರಿಗಳು’, ’ಆಧುನಿಕ ಕನ್ನಡ ಸಾಹಿತ್ಯಕ್ಕೆ ಹೀಗೆ ಬನ್ನಿ’, ’ಫ಼್ರಿಟ್ಜ್ ಬೆನೆವಿಟ್ಜ್’ ಮುಂತಾದವು. ಅವರ ಎಲ್ಲಾ ಲೇಖನಗಳ ಕುರಿತಾಗಿ ನನ್ನ ಗಮನಕ್ಕೆ ಬಂದ ಮತ್ತೊಂದು ವಿಷಯದ ಪರೋಕ್ಷ್ಯ ಪ್ರಸ್ತಾಪ ಪುಸ್ತಕದ ಒಂದು ಲೇಖನದಲ್ಲೇ ಇದೆ. ವಿದ್ಯಾರ್ಥಿಗಳಾಗಿದ್ದಾಗ ಸುಬ್ಬಣ್ಣನವರು ತಮ್ಮ ಒಂದು ಬರಹದಲ್ಲಿ ’ಅದ್ಭುತ’ ಎನ್ನುವ ಪದವನ್ನು ಬಳಸಿದ ಸಂದರ್ಭದಲ್ಲಿ, ಕುವೆಂಪುರವರು ’ಪದಗಳ ಬಳಕೆಯಲ್ಲಿ ಹುಶಾರಾಗಿರಬೇಕು, ಅಜಾಗರೂಕವಾಗಿರಬಾರದು’ ಎಂದು ಹೇಳಿದ್ದನ್ನು, ಸುಬ್ಬಣ್ಣನವರು ತಮ್ಮ ’ಕುವೆಂಪು….’ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಸೂಕ್ಷ್ಮವಾಗಿ ನೋಡಿದರೆ, ತಮ್ಮ ಎಲ್ಲಾ ಲೇಖನಗಳಲ್ಲೂ ಆ ಎಚ್ಚರವನ್ನು ಸುಬ್ಬಣ್ಣನವರು ಪಾಲಿಸಿಕೊಂದು ಬಂದಿದ್ದಾರೆ ಅನ್ನಿಸುತ್ತದೆ. ಒಟ್ಟಿನಲ್ಲಿ, ಸುಬ್ಬಣ್ಣನವರ ವ್ಯಕ್ತಿತ್ವ, ವಿಚಾರಧಾರೆಗಳ ಒಂದು ದಟ್ಟವಾದ ಪರಿಚಯ ನನಗಿಲ್ಲಿ ಸಿಕ್ಕಿತು. ಹಿಂದೊಮ್ಮೆ ಅನ್ನಿಸಿದ್ದ ’ಸಾಂಸ್ಕೃತಿಕವಾಗಿ ಅತ್ಯಂತ ರೆಲೆವೆಂಟ್-ಆದವರು’ ಈಗ ನನಗೆ ಬಹಳ ನಿಜ ಅನ್ನಿಸಿತು.
ಶಿಬಿರದ ಬಗ್ಗೆ, ಪತ್ರಿಕೆಗಳಲ್ಲಿ ಬರುವ ವರದಿಗಳನ್ನು ಓದಿದ್ದೆನಾದ್ದರಿಂದ, ಅದರ ಕುರಿತಾದ ಸ್ವಲ್ಪ ಮಟ್ಟಿಗಿನ ಮಾಹಿತಿಯೂ ಇತ್ತು. ಅನೇಕ ಜನರನ್ನು ಭೇಟಿಯಾಗುವ ಅವಕಾಶ, ವಿಚಾರ-ವಿನಿಮಯ ನಮ್ಮದೇ ಅನುಮಾನಗಳನ್ನು ಮಿಕ್ಕವರ ಜೊತೆ ಹಂಚಿಕೊಂದು ಚರ್ಚಿಸುವ ಅವಕಾಶ, ಹೊಸ ಬೆಳವಣಿಗೆಗಳನ್ನು ತಿಳಿದುಕೊಳ್ಳುವ ಬಯಕೆ – ಇವೆಲ್ಲಾ ಸಹಜವಾಗೇ ಇದ್ದವು. ಇಷ್ಟಲ್ಲದೆ, ದೊಡ್ಡವರ ಪ್ರತ್ಯಕ್ಷ ದರ್ಶನದ ಕುರಿತಾದ ರೋಮಾಂಚನ, ಅವರೆದುರು ಒಂದಷ್ಟು ತೊದಲ್ನುಡಿಗಳನ್ನಾಡಿ ಇಂಪ್ರೆಸ್ ಮಾಡುವ ಬಯಕೆ – ಇವೆಲ್ಲಾ ಇತ್ತೆಂದು ಹೇಳದಿದ್ದರೆ ಅಪ್ರಾಮಾಣಿಕನಾಗುತ್ತೇನೆ. ಇದಿಷ್ಟು ಶಿಬಿರಕ್ಕೆ ಬರುವ ಮುನ್ನ ನನಗಿದ್ದ ಹಿನ್ನೆಲೆ.
ಇಡಿಯ ಶಿಬಿರದಲ್ಲಿ ನನ್ನ ಮೇಲೆ ಅತ್ಯಂತ ಗಾಢವಾದ ಪರಿಣಾಮ ಬೀರಿದ್ದು ಸುಬ್ಬಣ್ಣನವರ ಪ್ರಾಸ್ತಾವಿಕ ಭಾಷಣ. ಸುಬ್ಬಣ್ಣನವರ ’ಅರೆ ಶತಮಾನದ….’ ಓದಿದ ಮೇಲೆ (ಅದರಲ್ಲೂ ನೀನಾಸಂ ಸಮಾಜದ ಮೇಲಿನ ಒಂದು ಲೇಖನವಿದೆ); ಅವರ ಪ್ರಾಸ್ತಾವಿಕ ಭಾಷಣ ಆ ಲೇಖನಗಳ ಒಂದು ಸಾರ ಎಂದು ಹೇಳಿದರೂ ನಡೆದೀತು. ಸದ್ಯಕ್ಕೂ, ಯಾವ ಕಾಲಕ್ಕೂ ಪ್ರಸ್ತುತವೆನಿಸುವ ಮಾತುಗಳೇ ಅವು, ಅರ್ಥವಾಗದಿರುವವರು ಮಾತ್ರ ಕ್ಲೀಷೆ ಎಂದಾರು. ಮುಖ್ಯವಾಗಿ, ಅವರು ಮಾತನಾಡಿದ ರೀತಿ ನನ್ನ ಮನಸ್ಸನ್ನು ಮುಟ್ಟಿತು. ನಾನು ಅನೇಕ ಬಾರಿ ಗಮನಿಸಿದ್ದೇನೆ, ಸಾರ್ವಜನಿಕ ವೇದಿಕೆಗಳಲ್ಲಾಗಲೀ, ಕೆಲವೇ ಜನ ಪರಿಚಿತರ ಸಮ್ಮುಖದಲ್ಲಾಗಲೀ, ಚರ್ಚೆಯಾಗಲೀ, ಭಾಷಣವಾಗಲೀ – ಇನ್ನೊಬ್ಬರನ್ನು ಕನ್ವಿನ್ಸ್ ಮಾಡುವ, ಇಮ್ಪ್ರೆಸ್ ಮಾಡುವ ಧೋರಣೆಯಿಲ್ಲದೇ ಮಾತನಾಡುವುದು ತುಂಬಾ ಕಷ್ಟ, ಎಷ್ಟು ಪ್ರಯತ್ನ ಪಟ್ಟರೂ ನಮ್ಮ ಶಕ್ತಿ ಮೀರಿ ಹೀಗಾಗುತ್ತದೆ. ಭಾಷಣದ ಯಾವ ಹಂತದಲ್ಲಿ ನಮ್ಮ ದನಿ ಮತ್ತು ಅದರ ಆಶಯ ಬದಲಾಗುತ್ತದೆ ಎನ್ನುವುದು ನಮಗೆ ಗೊತ್ತೇ ಅಗುವುದಿಲ್ಲ. ಕನ್ನಡದವರು ಈ ವಿಷಯದಲ್ಲಿ ಮಿಕ್ಕವರಿಗಿಂತಾ ಮೇಲು, ಆದರೂ ನಮ್ಮ ಎಲ್ಲಾ ಚಿಂತಕರನ್ನು ಗಮನಿಸಿದರೆ, ತಮಗೆ ತಾವೇ ಹೇಳಿಕೊಂಡಂತೆ, ಒಂದು ವಿಶಿಷ್ಟ ವಿನಯದಿಂದ, ಆದರೆ ಆಳವಾಗಿ ಮಾತನಾಡುವುದನ್ನು ಅತ್ಯಂತ ವಿಶೇಷವಾಗಿ ಸುಬ್ಬಣ್ಣನವರು ಗಳಿಸಿಕೊಂಡಿದ್ದಾರೆ ಎಂದು ನನಗನ್ನಿಸುತ್ತದೆ. ಅವರದ್ದು ಮೌನವನ್ನು ಕದಡದಂತಹ ಮಾತುಗಳು. ಮಾತಿನ ಮೋಡಿ ವಿಚಾರ ಲಹರಿಯನ್ನು ಮೀರಲು ಯತ್ನಿಸಬಾರದು ಎನ್ನುವ ಕಳಕಳಿ ಇದು ಎಂದು ನನಗನ್ನಿಸಿತು. ಅವರ ಲೇಖನಗಳಲ್ಲಿ ಕಂಡು ಬರುವ ಅವರ ಜೀವನ ದೃಷ್ಟಿ ಅವರ ಮಾತಿನ ಶೈಲಿಯಲ್ಲೂ ನನಗೆ ಕಂಡು ಬಂತು. ಇದೇ ಜೀವನ ದೃಷ್ಟಿ ಅಂತಹ ಒಂದು ಮಾತಿನ ಶೈಲಿಯನ್ನು ಸಹಜವಾಗಿ ರೂಪಿಸಿದೆ (ಬೌದ್ಧಿಕ ಪ್ರಯತ್ನಗಳಿಗಿಂತ ಮಿಗಿಲಾಗಿ) – ಎಂದು ನಂಬಲು ಇಷ್ಟಪಡುತ್ತೇನೆ. ನಾನು ಕಂಡಿದ್ದ ಮೈಸೂರಿನ ಕೆಲ ಅಜ್ಞಾತ ಹಿರಿಯರು ಈ ರೀತಿಯ ಕಳಕಳಿಯುಳ್ಳ ವ್ಯಕ್ತಿತ್ವ ಹೊಂದಿದ್ದುದು ಶಿಬಿರದ ಪೂರ್ತಿ ನನಗೆ ಜ್ಞಾಪಕ ಬರುತ್ತಿತ್ತು.
ಮಿಕ್ಕಂತೆ ಶಿಬಿರದಲ್ಲಿನ ವಿಚಾರ-ವಿನಿಮಯ, ಚರ್ಚೆ ಇವೆಲ್ಲಾ ನನ್ನಲ್ಲಿ ’ಇಷ್ಟೆಲ್ಲಾ ವರ್ಷಗಳಿಂದ ಇದರಿಂದೆಲ್ಲಾ ವಂಚಿತನಾದೆಯಾ, ಶಿವು’ ಅನ್ನುವ ಭಾವನೆ ತಂದಿತು. ನಮ್ಮನ್ನು ನಾವೇ ಜೀವಂತವಾಗಿಟ್ಟುಕೊಳ್ಳಲು ಸಾಧ್ಯವಾಗುವ ಸಾಂಸ್ಕೃತಿಕ ತಂಗುದಾಣವಾಗಿ ಹೆಗ್ಗೋಡು ನನಗೆ ಕಂಡು ಬಂತು. ಒಂದು ಬಗೆಯಲ್ಲಿ ಹೆಗ್ಗೋಡಿನ ನೆನಪೇ ಅಂತಹ ಒಂದು ತಂಗುದಾಣ (ಈ ನಡುವೆ ’ತಂಗುದಾಣ’ ಎನ್ನುವ ಪದಕ್ಕೆ ರೆಸಾರ್ಟ್ ಎನ್ನುವ ಅಪಾರ್ಥ ಬಂದುಬಿಟ್ಟಿದೆಯಾದ್ದರಿಂದ ಹೆದರಿಕೆಯಿಂದಲೇ ಈ ಪದ ಉಪಯೋಗಿಸಿದ್ದೇನೆ. ’ತಂಗುದಾಣ’ ಪದವನ್ನು ಅದರ ಮೂಲಾರ್ಥದಲ್ಲಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ). ಮತ್ತೆ, ನನ್ನಲ್ಲೇ ಅಸ್ಪಷ್ಟವಾಗಿದ್ದ ಅನೇಕ ಆಸಕ್ತಿಗಳನ್ನು ಇನ್ನು ಮುಂದೆ ತೀವ್ರವಾಗಿ ಮುನ್ನಡೆಸಬೇಕು ಎನ್ನುವ ಹುರುಪನ್ನು ತಂದುಕೊಟ್ಟಿತು. ಕೆಲವಾದರೂ ಬಹಳ ದಿನಗಳವರೆಗೆ ಉಳಿಯುವ ಸಾಧ್ಯತೆ ಇರುವ ಪರಿಚಯಗಳಾದವು. ನಮ್ಮಂತೆ ಯೋಚಿಸುವವರು, ನಮ್ಮ ಜೊತೆ ಪ್ರಾಮಾಣಿಕವಾಗಿ ಜಗಳವಾಡಬಲ್ಲವರು, ನಮಗಿಂತಾ ಭಿನ್ನವಾಗಿ ಆಲೋಚಿಸುತ್ತಾ ನಮಗೆ ಮೆಚ್ಚುಗೆಯಾಗಬಲ್ಲ ಅನೇಕರಿದ್ದಾರೆ ಎಂದು ಗೊತ್ತಿದ್ದರೂ, ಅಂತಹವರು ಜೀವ ತಳೆದು ಮುಂದೆ ನಿಂತಿದ್ದು ಭರವಸೆಯನ್ನು ತಂದುಕೊಟ್ಟಿತು. ಎಲ್ಲಕ್ಕಿಂತಾ ಮಿಗಿಲಾಗಿ, ನಮ್ಮ ಪರಂಪರೆಯನ್ನು ವಿವಿಧ ರೀತಿಗಳಲ್ಲಿ ದಕ್ಕಿಸಿಕೊಳ್ಳಲು, ವರ್ತಮಾನವನ್ನು ತೀವ್ರವಾಗಿ ವಿಮರ್ಶಿಸಲು ಹಾಗೂ ಭವಿಷ್ಯದ ಕುರಿತಾದ ಸೃಜನಶೀಲ ಚಿಂತನೆ ನಡೆಸಲು ಪ್ರೇರಕರಾಗಬಲ್ಲ ಸಾಂಸ್ಕೃತಿಕ ಹಿರಿಯರಿದ್ದಾರೆ, ನಮಗೆ ಅವರೆಲ್ಲಾ ಸಿಗಬಲ್ಲವರೂ ಆಗಿದ್ದಾರೆ ಮತ್ತು ಅವರು ನಮಗೆ ದಕ್ಕಬಲ್ಲಂತಹ ಸಾಂಸ್ಕೃತಿಕ-ಸ್ಥಳವೊಂದಿದೆ – ಎಂದೆಲ್ಲಾ ಅನ್ನಿಸುತ್ತಿರುವುದರಿಂದ, ಇದಕ್ಕೆ ಕಾರಣವಾಗಿರುವ ಹೆಗ್ಗೋಡನ್ನು ’ಆಶಾಕಿರಣ’ ಎಂದು ತಿಳಿದರೆ ಉತ್ಪ್ರೇಕ್ಷೆಯಾಗುವುದಿಲ್ಲ ಎಂದುಕೊಂಡಿದ್ದೇನೆ. ಜೊತೆಗೆ, ನಿಮ್ಮ ಪರಿಚಯವಾಯಿತು, ಮಾತನಾಡುವ ಅವಕಾಶ ಸಿಕ್ಕಿತು, ಪತ್ರಗಳ ಮುಖಾಂತರ ನಿಮ್ಮ ಜೊತೆಗೆ ವಿಚಾರವಿನಿಮಯ ಮಾಡಿಕೊಳ್ಳುವ ಅವಕಾಶ ಒದಗಿ ಬಂತು.
ನಾನು ಇನ್ನೊಂದು ವಿಶೇಷವನ್ನು ಗಮನಿಸಿದೆ. ಶಿಬಿರದಲ್ಲಿ ಎಲ್ಲಾ ತರಹದ ಜನರಿದ್ದರು, ಎಡಪಂಥೀಯ ಧೋರಣೆಯುಳ್ಳವರು, ಎಲ್ಲರ ಮುಂದೆ ತೋರಿಸಿಕೊಳ್ಳಲು ಇಷ್ಟವಿಲ್ಲದಿದ್ದರೂ ಆಳದಲ್ಲಿ ಬಲಪಂಥೀಯರೂ, ಪೆರಿಯಾರ್-ವಾದಿಗಳೂ, ಅತ್ಯಾಧುನಿಕರೂ, ಕೇವಲ ಸುಬ್ಬಣ್ಣನವರ ಮೇಲೆ ಅಭಿಮಾನವಿದ್ದವರು, ಯಾವ ಖಚಿತ ಅಭಿಪ್ರಾಯ ಇಲ್ಲದವರೂ – ಹೀಗೆ. ಎಲ್ಲರೂ ಸುಬ್ಬಣ್ಣನವರ ಜೊತೆ ಗುರುತಿಸಿಕೊಳ್ಳುವುದು ನಿಜಕ್ಕೂ ಆಶ್ಚರ್ಯ ತರುವ ವಿಷಯ. ಬೇರೆ ರಾಜ್ಯಗಳಿಗಿಂತಾ ಕರ್ನಾಟಕದಲ್ಲಿ ಈ ಪ್ರಕ್ರಿಯೆ ಹೆಚ್ಚು ಶಕ್ಯ ಎನ್ನುವುದು ನನ್ನ ಗಮನಕ್ಕೆ ಬಂದಿದ್ದರೂ, ನಮ್ಮ ಕಾಲದಲ್ಲಿ ತೀವ್ರವಾದ ರಾಜಿಗಳಿಲ್ಲದೇ, ಯಾವುದೇ ಗುರಿ-ಪ್ರಧಾನವಾದ ವಿಶೇಷ ಪ್ರಯತ್ನವಿಲ್ಲದೇ ಇದು ಸಾಧ್ಯವಾಗುವುದು ಕಷ್ಟವೇ ಸರಿ. ಅವ್ಯಾವುವೂ ಇಲ್ಲದೇ (ಹಾಗೆ ನಂಬಲು ಬಯಸುತ್ತೇನೆ) ಹೆಗ್ಗೋಡಿನಲ್ಲಿ ಇದು ಸಾಧ್ಯವಾಗಿರುವುದು ಸಂತೋಷ ಪಡಬೇಕಾದ ವಿಷಯ.
ಮತ್ತೆ ಹೆಗ್ಗೋಡಿಗೆ ಸಂಸ್ಕೃತಿ ಶಿಬಿರಕ್ಕೆ ಬಂದೇ ಬರುತ್ತೇನೆ ಅಂತ ನನ್ನ ಅನಿಸಿಕೆ. ಒಂದೊಮ್ಮೆ ಬರಲಾಗದಿದ್ದರೂ, ಯಾವಾಗಲೂ ಜೀವಂತವಾಗಿ ಉಳಿಯಬಲ್ಲಂತಹ ಅನುಭವವನ್ನು ಹೆಗ್ಗೋಡು/ನೀನಾಸಂ ಈಗಾಗಲೇ ನನಗೆ ಕೊಟ್ಟಿದೆ. ಅದರ ನೆನಪು ಯಾವ ಕಾಲಕ್ಕೂ ಉಸಿರನ್ನು ಸರಾಗವಾಗಿಸುತ್ತದೆ ಎಂದು ನನ್ನ ಅನಿಸಿಕೆ.
ಹೀಗೆಲ್ಲ ಹೇಳುತ್ತಿರುವಾಗಲೇ ಮತ್ತೊಂದು ಆಲೋಚನೆಯೂ ಬರುತ್ತಿದೆ. ಸುಬ್ಬಣ್ಣನವರ ಪುಸ್ತಕದಲ್ಲಿ ’ಕಿರುಸಮುದಾಯ’ ಎನ್ನುವ ಪದ ಬಹಳಷ್ಟು ಸಾರಿ ಬರುತ್ತದೆ. ಸುಬ್ಬಣ್ಣನವರು, ಮತ್ತಿತರರು ಈ ನೀನಾಸಂ ಸಮಾಜ ಎಂಬ ಕಿರುಸಮುದಾಯವನ್ನು ಹಾಗೂ ಅದರ ಜೊತೆ ಸಂಬಂಧ ಸಾಧ್ಯವಾಗಿಸಿಕೊಂಡ ಇನ್ನಿತರ ಕಿರುಸಮುದಾಯಗಳನ್ನು ತಮ್ಮ ಅಪಾರ ಪರಿಶ್ರಮದಿಂದ ಗಳಿಸಿಕೊಂಡಿದ್ದಾರೆ. ಆದರೆ ನನ್ನಂತಹವರು ತಮ್ಮ ಕಿರುಸಮುದಾಯವನ್ನು ಪಡೆಯುವುದಾದರೂ ಹೇಗೆ. ನಮಗೆ ಒದಗಬಹುದಾಗಿದ್ದ ಎಲ್ಲಾ ಕಿರುಸಮುದಾಯಗಳಿಂದಲೂ ನಾವು ಉಳಿದೇ ಇಲ್ಲ ಎನ್ನುವಷ್ಟು ಬೇರ್ಪಟ್ಟಿದ್ದೇವೆ. ಕೇವಲ ’ಸಂಬಂಧವೊಂದಿರುವ ಸಾಧ್ಯತೆಯಿತ್ತು, ಆದರೆ ಈಗ ಮರು ಜೀವ ತುಂಬುವುದು ಅಸಾಧ್ಯ’ ಎಂದು ನೆನಪಿಸುವ ಅಂಶಗಳಷ್ಟೇ ಉಳಿದುಕೊಂಡಿದೆ. ನಮ್ಮ ನಮ್ಮ ಊರುಗಳ ಜೊತೆ ನಮ್ಮ ಸಂಬಂಧ ಪಳೆಯುಳಿಕೆಗಳಷ್ಟೆ. ನಮ್ಮ ಸಂಬಂಧಿಕರು, ಹಾಗೂ ಜಾತಿಯ ಜೊತೆಗಿನ ಸಂಬಂಧಗಳೂ ಸಾಂಸ್ಕೃತಿಕವಾಗಿ ಜೀವಂತವಾಗಿ ಉಳಿದಿಲ್ಲ, ಕೇವಲ ನೇತ್ಯಾತ್ಮಕ ಅಂಶಗಳಷ್ಟೆ ಉಳಿದಿವೆ. ನಮಗಿರುವ ಒಂದೇ ಸಾಧ್ಯತೆಯೆಂದರೆ ’ಕನ್ನಡ ಸಮುದಾಯ’-ದ ಜೊತೆಗಿನ ಸಂಬಂಧ. ಅದೂ ಒಂದು ಕಿರುಸಮುದಾಯವಲ್ಲ, ಒಂದು ಸಮುದ್ರವೇ ಸರಿ. ಮಿಕ್ಕಂತೆ ನಾವಿರುವಲ್ಲೆಲ್ಲಾ ಜೀವಂತ ’ಸಮುದಾಯ’ ಎನ್ನುವ ಕಲ್ಪನೆ ಅಬ್ಸರ್ಡ್ ಎನ್ನಿಸುವಷ್ಟು ಅಸಾಧ್ಯ, ಒಂದೊಮ್ಮೆ ಸಾಧ್ಯವೆನಿಸಿದರೂ ಕೇವಲ ವ್ಯಾಪಾರದ ಸಾಧ್ಯತೆಯನ್ನು ಹೆಚ್ಚಿಸುವ ಕಾರಣಕ್ಕಾಗಿ ಮಾತ್ರ.
ಇಂತಹ ಪರಿಸ್ಥಿತಿಯಲ್ಲಿ ಸುಬ್ಬಣ್ಣ/ಹೆಗ್ಗೋಡು/ನೀನಾಸಂ-ಸಮಾಜ/ಅಕ್ಷರ-ಪ್ರಕಾಶನ ನಮಗೆ ಎಷ್ಟು ಪ್ರಸ್ತುತ ಎನ್ನುವುದನ್ನು ಎಷ್ಟು ಹೇಳಿದರೂ ಕಡಿಮೆಯೇ.
ಇಷ್ಟು ಸದ್ಯಕ್ಕೆ ನನ್ನ ಮತ್ತು ಹೆಗ್ಗೋಡು-ನೀನಾಸಂ-ಸಂಸ್ಕೃತಿ-ಶಿಬಿರದ ನಡುವಿನ ಸಂಬಂಧ!!!
*****