ನನ್ನ ಮುಂದಿನ ಚಿತ್ರಕ್ಕೇಂತ ಒಂದು ನಂಭಾಷಣೆ ಬರೆದಿದ್ದೀನಿ. “..ಸುಳ್ಳು, ಅರೆಬೆಂದ ನಿರ್ಧಾರ, ಅಸಡ್ಡೆಯ ಕೆಲಸ, ವಿತಂಡವಾದಗಳನ್ನ ಸಮರ್ಥಿಸಿಕೊಳ್ಳೋಕೆ ಯುಕ್ತತೆಯ ಸೌಮ್ಯ ಪದಗಳನ್ನಷ್ಟೇ ಬಳಸ್ತಿರ್‍ತೇವೆ. ಸತ್ಯ ಹೇಳೋವಾಗಾದ್ರೂ ಬಲಿಷ್ಠ ಪದಗಳನ್ನು ಧಾರಾಳವಾಗಿ ಬಳಸೋಣ ಅಂತ..!”
*********
ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಜಗ್ಗೇಶರನ್ನು ಪೋಷಕನಟ ಅಂತ ಘೋಷಿಸಿದಾಗ ನಾನು ನನ್ನ ಅಣ್ಣನ ಸಮಾನ ಜಗ್ಗೇಶರಿಗಾಗಿರುವ ಈ ಅವಮಾನವನ್ನು ನನ್ನ ಸಾವಿನ ಕೊನೆಯ ಕ್ಷಣದವರೆಗೂ ಜ್ಞಾಪಕ ಇಟ್ಕೋತೀನಿ ಅಂತ ಬಲಿಷ್ಠವಾದ ಪದಗಳಿಂದ ವಿರೋಧಿಸಿದಾಗ, ನನ್ನ ಗುರುವೊಬ್ಬರ ’ಇಷ್ಟೊಂದು ಖಾರ ಬೇಕಿತ್ತೇ?’ ಎಂಬ ಪ್ರಶ್ನೆಗೆ ಮೇಲಿನದು ನಾ ಕೊಟ್ಟ ಉತ್ತರವಾಗಿತ್ತು. ಕನ್ನಡದ ಭಾಷಾ ವಿಜ್ಞಾನಿಗಳೊಬ್ಬರು ’ಏನಯ್ಯಾ ನಿನ್ನ ಗುರುಗಳೇ ನಿನಗೆ ಈ ರೀತಿ ಮಾಡಿದ್ದಾರಲ್ಲ?’ ಅಂದಾಗ ನಾನೊಂದು ಉತ್ತರ ಕೊಟ್ಟಿದ್ದೆ. ’ಯಾರು ಗುರುತಿಸುತ್ತಾನೋ ಅವನೇ ಗುರು.. ಯಾರು ತುಳಿಯಲಿಚ್ಛಿಸುತ್ತನೋ ಅವನು ಕುಬ್ಜ. ಅದಕ್ಕೇ ವಾಮನ ಕುಳ್ಳ.’
ಆದರೆ ಈ ಬಾರಿ ನಾನು ಮಾತನಾಡಲು ಹೊರಟಿರುವುದು ಬೇರೆಯೇ ಗುರುಗಳ ಬಗ್ಗೆ. ತೊಟ್ಟಿಲಲ್ಲಿದ್ದಾಗಿನಿಂದ ಸಾಧನೆಯ ಮೆಟ್ಟಿಲುಗಳನ್ನೇರುವವರೆಗೂ ನನ್ನನ್ನು ಮೌಲ್ಯಗಳಿಂದ ವಿಮುಖನಾಗದಂತೆ ನಡೆಸಿಕೊಂಡು ಬಂದ ಗುರು. ನೆರಳಿನಂತೆ ಕಾದ ಗುರು. ಶಿಕ್ಷಿಸಿ ಶಿಷ್ಟತೆಯನ್ನು ಕಲಿಸಿದ ಗುರು. ಬದುಕಯ್ಯಾ ಅಂತ ಬಡಿದೆಬ್ಬಿಸಿದ ಗುರು. ಕೊನೆಯ ಕ್ಷಣದವರೆಗೆ ನಿನ್ನೊಟ್ಟಿಗಿರ್‍ತೀನೀಂತ ಬೆನ್ನಿಗಿರುವ ಗುರು. ಅಂತಹ ಗುರುವನ್ನು ನಾನು ನಿಮಗಿಂದು ಪರಿಚಯಿಸ್ತೇನೆ.
ಆತ ಒಂದು ಮಾತು ಹೇಳ್ತಿದ್ದ ’ನೀನು ಸತ್ತಾಗ ಹೆಣಕ್ಕೆ ಬೆಂಕಿಯಿಡ್ತಾರೆ. ಅಷ್ಟರಲ್ಲಿ ನೀನು ಎಷ್ಟು ಸ್ನೇಹಿತರನ್ನ ಸಂಪಾದಿಸಿರಬೇಕಂದ್ರೆ ನಿನ್ನನ್ನು ಸುಡುತ್ತಿರುವ ಬೆಂಕಿಯನ್ನು ಆರಿಸುವಷ್ಟು..’
’ನನಗೆ ಅರ್ಥ ಆಗ್ಲಿಲ್ಲ ಗುರುಗಳೇ..’
’ನೀನು ಸತ್ತಾಗ ಸ್ನೇಹಿತರು ಏನು ಮಾಡ್ತಾರೆ?’
’ಬಹುಶಃ ಕಣ್ಣೀರಿಡ್ತಾರೆ’.. ಗುರುಗಳ ಮಾತು ಅರ್ಥವಾಗಿತ್ತು.
’ಗುರುಗಳೇ.., ಸ್ನೇಹವೆಂದರೇನು?’
’ಕೊಡುವುದು, ತೆಗೆದುಕೊಳ್ಳುವುದಲ್ಲ.’
’ಏನನ್ನ?’
’ಕೈ..’ ಜೋರಾಗಿ ನಕ್ಕರು ಗುರುಗಳು.
ಪೆದ್ದ ನಾನು. ’ಕೈ ಕೊಡೋನು ಸ್ನೇಹಿತ ಹೇಗಾಗ್ತಾನೆ ಗುರುಗಳೇ?’ ಕೇಳಿದ್ದೆ.
’ಸಹಾಯ ಹಸ್ತ..’
’ಒಳ್ಳೆಯ ಸ್ನೇಹಿತ, ಕೆಟ್ಟ ಸ್ನೇಹಿತ ಎಂದು ಗುರುತಿಸುವುದು ಹೇಗೆ?’
’ನಿಜವಾದ ನೋವಿಗೂ, ನಾಟಕದ ನೋವಿಗೂ ಇರುವಷ್ಟೇ ವ್ಯತ್ಯಾಸ.’
’ಗುರುಗಳೇ, ನಿಮ್ಮ ಆಪ್ತಸ್ನೇಹಿತನ ಹೆಸರು ತಿಳ್ಕೋಬಹುದಾ?’
’ಜ್ಞಾನದಾಹವಿರುವ ಶಿಷ್ಯ.’
’ಅವನು ಸ್ನೇಹಿತ ಹೇಗಾಗ್ತಾನೆ?’
’ತನ್ನ ಅಜ್ಞಾನವನ್ನು ನೀಗಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಗುರುವನ್ನು ಕಲಿಯುವಂತೆ ಮಾಡಿರುತ್ತಾನಾದ್ದರಿಂದ.’
’ಇದು ವ್ಯವಹಾರವಾಗುವುದಿಲ್ಲವೇ.. ಸ್ನೇಹದಲ್ಲಿ ವ್ಯವಹಾರವಿರಕೂಡದು ಎಂದಿದ್ದಿರಿ?’
’ಹಂಚಿದಾಗ ಹೆಚ್ಚೋದು ವ್ಯವಹಾರವಾಗೋದಿಲ್ಲ.’
’ಸ್ನೇಹಕ್ಕೆ ಲಿಂಗಭೇದವಿದೆಯೇ?’
’ಲಿಂಗ, ವಯಸ್ಸು, ಜಾತಿ ದೇಶ, ಭಾಷೆಗಳ ಭೇದವಿಲ್ಲದ ಪ್ರಪಂಚದಲ್ಲಿರೋ ಏಕೈಕ ಮೌಲ್ಯ ಅದು.’
’ಸ್ನೇಹದ ಹೆಸರಲ್ಲಿ ಮೋಸ ಮಾಡುವವರ ಬಗ್ಗೆ?’
’ನಟನಾಕೌಶಲ್ಯ. ಜಾಣತನಕ್ಕಿಂತ ಒಳ್ಳೇತನ ದೊಡ್ಡದು.’
’ಕಷ್ಟಸುಖಗಳಲ್ಲಿ ಸ್ನೇಹಿತನ ಪಾಲು?’
’ಪೂರ್ತಿ.’
’ಸ್ನೇಹಕ್ಕಿಂತ ದೊಡ್ಡದು ಯಾವುದು?’
’ಸ್ನೇಹಿತ.’
’ಸ್ನೇಹಕ್ಕೆ ವಿರೋಧ ಪದ?’
’ಸ್ವಾರ್ಥ.’
’ನಿಮಗಿದನ್ನೆಲ್ಲ ಕಲಿಸಿದೋರು ಯಾರು?’
’ಸ್ನೇಹಿತರು ಅಂತ ನಂಬಿದ್ದೋರು.’
’ಅವರ ಬಗ್ಗೆ ನಿಮ್ಮ ಕೋಪ?’
’ಅವರು ಸ್ನೇಹಕ್ಕೆ ಮೋಸ ಮಾಡಿರಬಹುದು ಆದರೆ ಗುರುವಾಗಿದ್ದರಲ್ಲಾ.. ಗುರುಗಳ ಬಗ್ಗೆ ಕೋಪಿಸ್ಕೋಬಾರದು.’
’ನಿಮ್ಮಲ್ಲಿ ಎಲ್ಲಕ್ಕೂ ಉತ್ತರ ಇದೆ?’
’ಮುಂಚೆ ಅವೂ ಪ್ರಶ್ನೆಗಳಾಗಿದ್ವು.. ಈಗವು ಬೆಳೆದಿವೆ.’
’ಮಾತು ಎಲ್ಲಿಗೋ ಹೋಯ್ತು. ವ್ಯಾವಹಾರಿಕ ಪ್ರಪಂಚದಲ್ಲಿ ಸ್ನೇಹದ ಅಸ್ಥಿತ್ವದ ಬಗ್ಗೆ ಹೇಳಿ.’
’ವ್ಯಾವಹಾರಿಕ ಪ್ರಪಂಚವನ್ನು ಕಾಪಾಡ್ತಿರೋದೇ ಸ್ನೇಹ ಅಥವಾ ಸ್ನೇಹದ ಹೆಸರು.’
’ಸ್ನೇಹದ ಬೆಲೆ?’
’ಪ್ರತೀವಾರದ ’ಗರ್ವ’ಕ್ಕೆ ಹತ್ತು ರೂಪಾಯಿ.’
’ಸ್ನೇಹವನ್ನು ಆರಾಧಿಸುವುದು ಹೇಗೆ?’
’ಕಷ್ಟಕಾಲದಲ್ಲಿ, ಸುಖದ ಆನಂದದಲ್ಲಿ ಜೊತೆಗಿದ್ದು ಇಡೀ ಪ್ರಪಂಚವೇ ನಿನ್ನೊಟ್ಟಿಗಿದೆ ಎಂಬ ನೈತಿಕ ಬೆಂಬಲವನ್ನು ಕೊಟ್ಟ ಸ್ನೇಹಿತರು ’ಗರ್ವ’ಪತ್ರಿಕೆಯನ್ನು ಮಾಡಿದ್ದಾರೆ. ನಿನ್ನ ಮಂಥನದ ವಿಚಾರಗಳು, ಅನುಭವಗಳು, ನಿರೀಕ್ಷೆಗಳು ಎಲ್ಲವನ್ನೂ ಶ್ರದ್ಧಾಭಕ್ತಿಯಿಂದ ಅದರಲ್ಲಿ ಬರಿ. ನಿನ್ನ ಸ್ನೇಹಿತರಿಗೆ ನೀನು ಕೊಡಬಹುದಾದ್ದಷ್ಟೇ.’
’ಅಪ್ಪಣೆ ಗುರುಗಳೇ, ಕೊನೆಯದಾಗಿ ಏನಾದರೂ ಹೇಳೋದಿದೆಯೇ?’
’ಸರಿರಾತ್ರಿಯ ಎರಡು ಗಂಟೆಯಲ್ಲಿ ನಿನ್ನ ಗುರುವನ್ನು ಓದುಗನಿಗೆ ಪರಿಚಯಿಸ್ತೀನೀಂತ ಭಳಾಂಗ್ ಬಿಟ್ಟು ಕೊನೆಯಲ್ಲಿ ಆ ಗುರುವಿನ ಹೆಸರು ’ಅನುಭವ’ ಅಂತ ನೀ ಹೇಳಹೊರಟದ್ದು ಓದುಗನಿಗೆ ಈಗಾಗಲೇ ಗೊತ್ತಾಗಿಹೋಗಿದೆ.. ಎಚ್ಚರದಿಂದಿರು. ಆದರೂ ನಿನ್ನ ಕೆಲಸ ಒಂದು ರೇಂಜಿಗೆ ಮೆಚ್ಚಿದ್ದೇನೆ. ಬಂದ ದಾರಿಗೆ ವರವನ್ನೇನಾದರೂ ಕೇಳಿಕೋ.’
’ಮಿತ್ರರ ’ಗರ್ವ’ಕ್ಕೆ ಅದ್ಭುತ ಯಶಸ್ಸು ಸಿಗಲಿ. ಆ ಯಶಸ್ಸು ಅವರ ತಲೆಗೇರದಿರಲಿ. ಗರ್ವದ ಬೆಲೆ ಇನ್ನೆರೆಡು ಮೂರು ವರ್ಷಗಳಾದರೂ ಹತ್ತಕ್ಕಿಂತ ಮೇಲೇರದಿರಲಿ. ಜೈಹಿಂದ್.. ಜೈಕರ್ನಾಟಕ ಮಾತೆ..’
’ತಥಾಸ್ತು.’
*****
(’ಗರ್ವ’ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ)