ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು
ಎಂದಿಗೂ ಉಚಿತವಲ್ಲ ಪುರುಷರೇ
ವ್ಯಾನಿಟಿ ಹೆಸರಲ್ಲಿ ಏನೆಲ್ಲ ಇರಬಹುದು
ಬಯಲು ಮಾಡುವರೇ?
ಒಂದು ಕನ್ನಡಿ ಹಣಿಗೆ ಕಾಡಿಗೆ ಕರಡಿಗೆ
ಪೆನ್ನು ಪೌಡರು ಕ್ಲಿಪ್ಪು ಸೆಂಟು
ಬಿಳಿ ಹಾಳೆ ಮತ್ತು ನೂಲುಂಡೆ ಇರಬಹುದು
ಗುಂಡಿ, ಸೂಜಿ ಮತ್ತು ಅಡಿಕೆ ಹೋಳೂ.
ಇರಬಹುದು ಹುಣಿಸೆ ಬೀಜಗಳೂ!
ವ್ಯಾನಿಟಿ ಬ್ಯಾಗಿನಲಿ ಬಟಾಣಿಯೇ ಇರಬೇಕೆಂದು
ಉಂಟೇ ಯಾರ ರೂಲು?
ಇದ್ದೀತು ಶುಂಠಿ ಪೆಪ್ಪೆರಮಿಂಟೂ, ಕಂಫಿಟ್ಟೂ
ಒಣಗಿ ರೂಹುಗಳಾದ ಎಲೆ-ಹೂಗಳಿರಬಹುದು
ಇರಬಹುದು ಯಾರದೋ ಮನೆ ದಾರಿ ನಕ್ಷೆ
ಮರದ ಮುಚ್ಚಿಗೆಯಡಿಯ ಕೆಂಪು ನೆಲದ ತಂಪು
ತೇದಷ್ಟು ಸವೆಯದಾ ನೆನಪು
ಟಿಕ್ಕಿ ಎಲೆ ಪರಿಮಳ
ಮರಿ ಇಡುವ ನವಿಲುಗರಿ
ಕಾಪಿಟ್ಟಿರಬಹುದು ಪುಟ್ಟ ದಿನಗಳನ್ನು
ಇರಬಹುದು, ಎಲ್ಲಿನದೋ ಮರಳು-ಮಣ್ಣು.
ಅರೆ ಬರೆದಿಟ್ಟ ಕವನ ತೆವಳುತ್ತಲಿರಬಹುದು
ಮುಗಿಯಲಾರದ ಕತ್ತಲಲ್ಲಿ
ಒಂದು ಬಿಸುಸುಯ್ಯಲು ಕರವಸ್ತ್ರದಲಿ ಅಡಗಿ
ಗುಸುಗುಟ್ಟುತ್ತಿರಬಹುದು ಗಂಟಲಲ್ಲೇ
ವಿಳಾಸ ಹೊತ್ತಿರುವ ಖಾಲಿ ಲಕೋಟೆಯಲಿ
ಕೆಂಪು ಸೂರ್ಯನ ಚಿತ್ರ ಮಾತ್ರವಿರಬಹುದು
ಬಂದ ಪತ್ರದ ಉಸಿರು ಒಗಟಾಗಿ ಇರಬಹುದು
ಚಂದದಕ್ಷರ ಬಂಧದಲ್ಲಿ
ಚಂದದಕ್ಷರ ಸುತ್ತ ನತ್ತು ಮುತ್ತಿನ ಚಿತ್ತು
ಉತ್ಕಂಠ ರಾಗದ ಮಟ್ಟು ಇರಬಹುದು
ಕರಿಮೀಸೆಯಡಿಯಲ್ಲಿ ಮಿರಿಮಿಂಚು ನಗೆಯಲ್ಲಿ
ಹೆಸರಿಲ್ಲದ ಫೋಟೋ ಕೂಡ ಇರಬಹುದು!
ಬಾಲ್ಯ ಯೌವನ ವೃದ್ಧಾಪ್ಯ ನೆರಳುಗಳು
ಸೇರಿಕೊಂಡಿರಬಹು ಆ ಕೋಶದಲ್ಲಿ
ಗಾರ್ಹಸ್ಥ್ಯ ವೇಶ್ಯಾ ಅಭಿಸಾರ ವಾಸನೆಗಳು
ಧರ್ಮ ಲಕ್ಷಣ ಅವಸ್ಥಾಂತರ ವೇಷದಲ್ಲಿ
ಒಂದಕೊಂದಕೆ ಅರ್ಥಾರ್ಥವಿಲ್ಲದೆಯೂ
ಇಲ್ಲವೇ ಹಲವು ಜೊತೆಗಳು?
ಹಾಗೆಯೇ ಈ ಚೀಲದೊಳಗಿನ ಲೋಕಗಳು!
ಚೀಲದೊಳಗಿನ ಲೋಕ ಮತ್ತು ಮನಸಿನ ಲೋಕ
ಒಂದೇ ಎಂದೀಗ ತೂಗಿ ನೋಡುವಿರೇನು?
ಬೆಪ್ಪು ಕಾಪುರುಷರೇ
ವ್ಯರ್ಥ ಕೈ ನೋವೇಕೆ?
ತೂಗಲಾರಿರಿ ತಪ್ಪು ಸಮೀಕರಣವನು.
ಮನಸಿನೊಳಗಡೆ ಎಂದೂ
ಇಣುಕಲಾರಿರಿ ನೀವು. ಹುಡುಕಿ
ತೆಗೆಯಲಾರಿರಿ ಏನನೂ
ಇಣುಕಲಾದರೂ ಹಾಗೆ ಮಾಡಲಾಗದು ನೀವು
ಚೀಲದೊಳಗಿನ ತಿರುಳನು
ಹುಡುಕಿ ತೆಗೆಯಲಾದರೂ ಹಾಗೆ
ಮಾಡಲಾಗದು ನೀವು
ನೋಡಬಾರದು ಚೀಲದೊಳಗನು.
*****