ಮುತ್ತಣ್ಣನ ಪುಟ್ಟ ಕುಲುಮೆ ಮನೆ ರಗರಗ ಹೊಳೆವ ಬೆಂಕಿಯ ನಡುವೆ ಕಾರ್ಖಾನೆಯಂತೆ ಏರ್ಪಟ್ಟು ಅವನ ಸುತ್ತ ಕುಡಲುಗಳು ರಾಶಿಯಾಗಿ ಹಾಸಿಕೊಂಡಿದ್ದವು. ಢಣಾರ್ ಢಣಾರ್ ಎಂಬ ಸುತ್ತಿಗೆ ಲಯವೂ; ಕಾಯ್ದ ಅಲಗು ನೀರಲ್ಲಿಳಿಸಿದಂತೆ ಚೊರ್ರ್ ಎನ್ನುವ ಶಬ್ದವೂ ಜನರ ಮಾತುಕತೆ ಕೆಮ್ಮು ನಗೆ ಎಲ್ಲವೂ ಸೇರಿಕೊಂಡು ಆ ಕತ್ತಲೆ ಕೇರಿಯಲ್ಲಿ ಅಗಾಧವಾದ ಜೀವನೋತ್ಸಾಹವನ್ನು ಕಟ್ಟುತ್ತಿತ್ತು. ಕುಲುಮೆಯ ಬೆಂಕಿ ಏರಿದಂತೆಲ್ಲ ಅಲ್ಲಿದ್ದವರ ಆಕೃತಿಗಳೆಲ್ಲ ಏರುತ್ತ ಇಳಿಯುತ್ತ ನಿರಂತರ ಯಾವುದಾವುದೋ ಸುಖಗಳಿಗಾಗಿ ಶ್ರದ್ಧೆಯಿಂದ ಕಾಯುತ್ತ ಕುಳಿತಿದ್ದಾರೆ ಎಂಬಂತೆ ಮಾಡಿತ್ತು. ಮುತ್ತಣ್ಣನ ಮೈಯೆಲ್ಲ ಬೆವರಿಂದ ಮೇಲೂ ಕೆಳಗೂ ಆಡುತ್ತಿದ್ದರೆ ಕುಡಲುಗಳು ಎಷ್ಟೆಷ್ಟು ಹರಿತವಾಗಿದೆ ಎಂದು ಜನ ಲೆಕ್ಕ ಹಾಕುತ್ತಿದ್ದರು. ಮುತ್ತಣ್ಣನ ಜೀವನದ ಯಾವ ಕಾಲದಲ್ಲೂ ಇವತ್ತಿನಷ್ಟು ಕುಲುಮೆ ಕೆಲಸವನ್ನು ಕಂಡಿದ್ದವನೇ ಅಲ್ಲ. ಈ ಕೆಲಸದಿಂದಾಗಿ ತನ್ನ ಮನೆಯಲ್ಲಿ ಬತ್ತ ಬಂದು ತುಂಬಿಕೊಳ್ಳುತ್ತದೆಂದು ಕನಸು ಹೆಣೆಯುತ್ತ ಎಲ್ಲರ ಕುಡಲುಗಳನ್ನು ಅಚ್ಚುಕಟ್ಟಾಗಿ ತಟ್ಟಿ ಹರಿತ ಮಾಡಿಕೊಡುತ್ತಿದ್ದ . ಕೇರಿಯ ಬಹುಪಾಲು ಜನ ತೀರ್ಮಾನಿಸಿಕೊಂಡಂತೆ ಕುಲುಮೆಯಲ್ಲಿ ಕುಡುಲು ತಟ್ಟಿಸಿಕೊಳ್ಳುವುದಕ್ಕೆ ಕಾಸು ಕೊಡುವ ಬದಲು ಇಂತಿಷ್ಟು ಬತ್ತ ಕೊಡುವುದೆಂದು ಮಾತಾಗಿತ್ತು. ನಾಳೆ ಮುಂಜಾವು ಕೇರಿ ಜನರೆಲ್ಲ ಬಳಗೆರೆ ಬಯಲಲ್ಲಿರುವ ಗದ್ದೆಗಳ ಬತ್ತವನ್ನು ಕೊಯ್ಲು ಮಾಡುವುದಿತ್ತು. ಕೇರಿ ಯಾವತ್ತೂ ಅದರ ಇತಿಹಾಸದಲ್ಲೇ ಇವತ್ತಿನಷ್ಟು ಸಂಭ್ರಮ , ಆಶಯ ನಂಬಿಕೆ ಲವಲವಿಕೆಗಳನ್ನು ಕಂಡಿರಲಿಲ್ಲ. ಅವರೆಲ್ಲರಿಗೂ ಚಿನ್ನದ ಬಣ್ಣದ ಬತ್ತದ ಕಾಳುಗಳು ಮಾಯಾಂಗನೆಯಾಗಿ ಬಂದು ಪ್ರತಿ ಮನೆ ಮನಗಳಲ್ಲಿ ತುಂಬಿಕೊಂಡು ದೊಡ್ಡ ಸೋಜಿಗದ ಸಂಗತಿಯಾಗಿ ಜನರ ಬತ್ತದ ಕನಸು ದೊಡ್ಡ ಬೆಟ್ಟವಾಗಿ ಕ್ಷಣಕ್ಷಣಕ್ಕೂ ಬೆಳೆಯತೊಡಗಿತು. ಕುಡುಲು ತಟ್ಟಿಸಲೇ ಬೇಕಾದ ಅನಿವಾರ್ಯತೆ ಇಲ್ಲದಿದ್ದವರು ಚಾವಡಿ ಕಲ್ಲಿನ ಮೇಲೆ ಕರ್ರಾ ಚರ್ರಾ ಜೀರ್ ಎಂದು ಮಸೆಯುತ್ತಾ ಮಾತನಾಡುತ್ತಾ , ಈಗ ನಿದ್ದೆಯನ್ನು ಕೈಬಿಡುವ ಮಟ್ಟಕ್ಕೆ ಹೋಗಿದ್ದರು. ಸಣ್ಣ ಹುಡುಗರು ಹಿರಿಯರ ಚಟುವಟಿಕೆಗಳಲ್ಲಿ ಪಾಲುಗೊಂಡು ತೂಕಡಿಕೆಯನ್ನು ತಳ್ಳುತ್ತಿದ್ದರು. ಹೆಂಗಸರು ಮೂಲೆ ಮುಡುಕಲಲ್ಲಿ ಧೂಳಿಡಿದು ಬಿದ್ದಿದ್ದ ಗುಡಾಣಗಳ ಮೈಸವರಿ ಪ್ರೀತಿಯಿಂದ ಮುಟ್ಟುತ್ತ ಬತ್ತ ತುಂಬಲು ‘ ಹೈಕ್ಲಾಸಗೆವೆ ’ ಎಂದುಕೊಳ್ಳುತ್ತಿದ್ದರು. ಯಾವುದೋ ಮುದುಕಿ ತನ್ನ ಮನೆಯವರಿಗೆಲ್ಲ ಉಗಿದು ಉಪ್ಪು ಹಾಕುತ್ತ ” ಆಳಾದೊವ್ಯೆ ಸಾವುರ್ ಸಲ ಯೇಳ್ದೆ: ಬ್ಯಾಡಾಕರಲ್ಲ.ಇಂತಾ ಗುಡಾಣ್‌ಗೋಳ ಆಳ್ ಮಾಡ್‌ಬ್ಯಾಡಿ ಮಾರ್ಯಬ್ಯಾಡಿಈ ಅಂತಾ , ನನ್ಮಾತ ಯಾರ್ ಕೇಳಾರು. ಮಣ್ಣುನ್ ಗುಡಾಣ್‌ಗೊಳ್ನೂ ಮಾರ್ಕ ತಿನ್ಕಂಡ್ರು. ಇವತ್ತು ಯಾರ್‌ತಕೋಗಿ ಒಂದ್ಗುಡಾಣ ಕೊಡ್ರವ್ವಾ ಬತ್ತಾ ತುಂಬ್ಕಬೇಕು ಅಂತ ಕೀಳುದು ” ಎಂದು ವಟಗುಟ್ಟುತ್ತಿದ್ದಳು. ಅವಳ ಆ ಸಿಟ್ಟಿಗೆ ಕಾರಣವಿತ್ತು. ಹಿಂದೆ ಅವಳ ತಾತಂದಿರು ದನಗಳನ್ನು ಕದ್ದು ಕೊಯ್ದು ತಿಂದು ಯಾವ ಸುಳಿವೂ ಇಲ್ಲದಂತೆ ಮಾಡಿ ಮಾಂಸದ ಮೂಳೆಗಳೆಲ್ಲವನ್ನೂ ದೊಡ್ಡ ದೊಡ್ಡ ಗುಡಾಣಗಳಲ್ಲಿ ತುಂಬಿ ಮನೆ ಹಿತ್ತಲ್ ಬಳಿ ಗುಂಡಿ ತೋಡಿ ಸಮಾಧಿ ಮಾಡಿಟ್ಟಿದ್ದರು. ದನಗಳ ಮಾಲೀಕರಿಂದ ತಪ್ಪಿಸಿಕೊಳ್ಳಲು ಈ ತಂತ್ರ ಬಳಸುತ್ತಿದ್ದು ಮಾನಮರ್ಯಾದೆಗಳನ್ನು ಹೊಟ್ಟೆ ಹಸಿವನ್ನು ಹೀಗೆ ಬಚ್ಚಿಡುತ್ತಿದ್ದರಂತೆ. ಒಮ್ಮೆ ಹೇಗೋ ಯಾವುದಕ್ಕೋ ಹಿತ್ತಿಲಲ್ಲಿ ಗುಂಡಿ ತೋಡುವಾಗ ಇವು ಸಿಕ್ಕಿ ಸುರಕ್ಷಿತವಾಗಿ ಹೊರತೆಗೆದು ನಂತರ ಅವನ್ನು ಮಾರಾಟ ಮಾಡಿ ಕೊಂಡಿದ್ದರು. ಮುದುಕಿಗೆ ಹಾಗೆ ಗುಡಾಣಗಳನ್ನು ಹೊರತೆಗೆದದ್ದು ತಮ್ಮ ಪೂರ್ವಿಕರ ಮಾನಮರ್ಯಾದೆಗಳನ್ನು ಹರಾಜು ಹಾಕಿದಂತೆ ಎನಿಸಿ ವಿಪರೀತ ದುಃಖ , ಸಿಟ್ಟು ಅಸಮಾಧಾನಗಳಿದ್ದರಿಂದ ; ಈಗ ಇವೆಲ್ಲದರಿಂದಾಗಿ ಆ ಗುಡಾಣಗಳ ನೆಲೆಯಲ್ಲಿ ; ಬತ್ತದ ಈ ಸಂದರ್ಭದಲ್ಲಿ ಮನೆ ಜನರನ್ನು ಬೈಯುತ್ತಿದ್ದಳು. ರಾತ್ರಿಯ ಆಕಾಶದ ತೋಟದಲ್ಲಿ ಆ ಜನರ ಕಣ್ಣುಗಳಿಗೆ ನಕ್ಷತ್ರಗಳು ಬತ್ತದ ಕಾಳುಗಳನ್ನು ಯಾರೋ ಒಣ ಹಾಕಿರುವಂತೆಯೋ ; ಬಿತ್ತನೆಗೆ ಚೆಲ್ಲಿದ್ದಾರೆ ಎಂಬಂತೆಯೋ ಕಾಣಿಸಲ್ಪಟ್ಟು ಇನ್ನಷ್ಟು ಸಂತಸದಿಂದ ಮುಂಜಾವಿನ ಕೆಲಸಕ್ಕಾಗಿ ಅಣಿಯಾಗತೊಡಗಿದರು . ಕುಲುಮೆ ಕಡೆಯಿಂದ ಬರುತ್ತಿದ್ದ ಧ್ವನಿಗಳು ಮುದುಕಿಯ ವಟಗುಟ್ಟುವಿಕೆಯಲ್ಲಿ ಕರಗುತ್ತಿದ್ದವು. ಜನ ಆ ಈ ಜಗುಲಿಯಿಂದ ಬಂದು ಒಂದೆಡೆ ಸೇರಿ ಮಾತನಾಡುತ್ತ ಇದ್ದಂತೆ ಬತ್ತ ಎಂಬ ಮಾಯಾಂಗನೆ ಬಗೆಬಗೆಯಾಗಿ ನರ್ತಿಸುತ್ತಿದ್ದಳು. ‘ ವೋದ್ ಸುಗ್ಗಿಲಲುವೆ ಅನ್ನವುಂಡಿದ್ದು ’ ಎಂದು ಯಾರೋ ಹೇಳುತ್ತಿದ್ದಾರೆ; ಇನ್ನರೋ ‘ ಇಲ್ಲ ಇಲ್ಲಾ ; ಗೌಡ್ರೆಡ್ತಿ ತಿಥೀಲಿ ಗಡದ್ದಾಗಿ ವುಂಡಿರ್ಲಿಲ್ವೆ ’ ಎನ್ನುತ್ತಿದ್ದ. ಮತ್ತೊಬ್ಬ ಉತ್ಸುಕತೆಯಿಂದ ಬಾಯಾಕಿ ; ಈಗಲೇ ಹೇಳದಿದ್ದರೆ ಮರೆತು ಹೋಗುತ್ತದೆನ್ನುತ್ತಆ ‘ ಅಯ್ಯೋ , ಅದ್ಯಾವ ಮಾತಂತಾ ಆಡೀರಿ ; ಬಿಸಾಕಿ ಅದಾ ಅತ್ತಾಗಿ , ಯಾವ್ ಅನ್ನಾವ ನೀವ್ ವುಂಡಿರುದು . ದಾಸೇಗೌಡ್ರು ಮನೇಲಿ ವುಂಡಿದ್ದೇ ; ನಾಯೇನೇಳನೆ ಅದುರ್ ಕತಿಯಾ ; ಅದೆಂತದೋ ಪಲಾವ್ನನ್ನಾ ಮಾಡಿದ್ರೂ… ಅದಾ ಬಾಳೆಲೆಗೆ ಹಾಕುದ್ರೆ … ಲಪ್ಪ ಲಪ್ಪಾ… ಅದೇನ್ ಗಮ್ಮನ್ನುದು ಅಂತೀಯ : ಅನ್ನ ಅಂಗೆ ಗಮ ಗಮಾ ಅಂತ ಹಬ್ಕಂದೂ ಇಡೀ ಗಂಜುಳದ್ ಕೊಟ್ಗೆನೆಲ್ಲ ಗಂದುದ್ ಮನೆ ಮಾಡ್ದಂಗ್ ಮಾಡ್ಬುಡ್ತು , ಅಂತೇ ಅನ್ವಾವುಂಡಿವಿನಿ. ನಿಂ ಜೀವುನ್ ಪೂರ್ತಾ ಅಂತೆದಾ ನಿವ್ ವುಣ್‌ಲಾರ್ರಿ ’ ಎಂದು ಹೇಳಿ ಸುಖ ಪಡತೊಡಗಿದ. ಅವನ ಆ ಸುಖಕ್ಕೆ ಬೇಸರಗೊಂಡ ಇನ್ನೊಬ್ಬ ಸಿಟ್ಟಿನಿಂದ ತಡೆಯುತ್ತಾ ‘ ಇರ್ಲಲೋ , ಅಂತೆದಾ ನೀನೊಬ್ನೆ ಅಲ್ಲಾ ಉಂಡಿರುನು. ನಾನು ಇದ್ಕೆ ನಾಕೊರ್ಸದಯಿಂದೆ ಚನ್ಪಟ್ಣ್ದೆಲಿ ವುಂಡಿದ್ದೇ ಕನಾ ’ ಎಂದ. ನಾಲ್ಕು ವರ್ಷದ ಹಳೆಯ ಮಾತನ್ನೋ ಸುಳ್ಳನ್ನೋ ಹೇಳುತ್ತಿದ್ದಾನೆಂದು ಅವರೆಲ್ಲ ಅವನನ್ನು ಗೇಲಿ ಮಾಡಿ ನಗಾಡಿ ಬಾಯಿ ಮುಚ್ಚಿಸಿದರು. ಅವರ ತಮಾಸೆಗಳಿಗೆ ಮತ್ತಷ್ಟು ಜನ ಬಂದು ಕೂಡಿಕೊಂಡರು. ಹೆಂಗಸರು ಮನೆಗಳಲ್ಲಿ ಬತ್ತ ತುಂಬಲು ಸಾಧನಗಳನ್ನು ಸಿದ್ಧಗೊಳಿಸುತ್ತಾ, ತಂದ ಬತ್ತದಲ್ಲಿ ಏನೆಲ್ಲ ತಿಂಡಿ ತೀರ್ಥಗಳ ಮಾಡಬಹುದೆಂದು ಕ್ಷಣಕಾಲ ಕಲ್ಪಿಸಿ ಏನೇನೋ ಲೆಕ್ಕಿಸುತ್ತಿದ್ದರು . ಹುಡುಗರು ನಿದ್ದೆಯ ಭುಜಗಳ ಮೇಲೆ ತಲೆಯಿಟ್ಟು ಬಿದ್ದಿದ್ದರು . ಜನ ಬೀಡಿಗಳ ಸುಟ್ಟು ಸುಟ್ಟು ಮುರಿಯುತ್ತಾ ತಮ್ಮ ಹೆಂಗಸರು ಹಬ್ಬಗಳಲ್ಲಿ ಅನ್ನವನ್ನು ಸರಿಯಾಗಿ ಮಾಡುವುದಿಲ್ಲ ಎನ್ನುತ್ತಾ ರುಚಿಯಾಗಿ ಅವರು ಏನನ್ನೂ ತಯಾರಿಸುವುದಿಲ್ಲವೆಂದು ಶಾಪ ಹಾಕುತ್ತಿದ್ದರು. ಈ ನಡುವೆ ಊರ ಬಜಾರಿ ಎನಿಸಿದ ತೋಪಮ್ಮ ; ಕೇರಿಯ ಮನೆಮನೆಯಲ್ಲೂ ರಾಗಿಹಿಟ್ಟನ್ನು ಸಾಲ ಮಾಡಿದ್ದವಳು ತರ್ಕಿಸುತ್ತ , ಬಂದ ಬತ್ತದಲ್ಲಿ ಒಂದು ಪಾವು ರಾಗಿಹಿಟ್ಟಿಗೆ ಬದಲಿಯಾಗಿ ಒಂದೊಂದು ಸೇರು ಬತ್ತವನ್ನೇ ಕೊಟ್ಟು ಎಲ್ಲ ಸಾಲಗಳಿಂದ ಮುಕ್ತಳಾಗಬೇಕೆಂದುಕೊಳ್ಳುತ್ತಿದ್ದಳು. ಈಗ ಇಡೀ ಕೇರಿ ನೂರಾರು ನೀಲಿ ನಕ್ಷೆಗಳಲ್ಲಿ ಬಿಸಿಯಾಗತೊಡಗಿತು. ಊರಿನ ಎಂಡದ ಛಾಂಪಿಯನ್ ಚಿಲ್ರೆಯ ಅಂದಾಜು ಹಾಕುತ್ತ ಹೇಗಾದರೂ ಮಾಡಿ ಐದು ಮೂಟೆ ಬತ್ತವನ್ನು ನಾಳೆ ಹೊಡೆದು ; ಅವನ್ನು ಮಾರಿ ಬಂದ ಹಣದಲ್ಲಿ ತೆಂಗಿನಕಾಯಿ ವ್ಯಾಪಾರವನ್ನು ಕೈಗೊಂಡು ನಂತರ ವಿಧವೆ ಜಾನಕವ್ವನನ್ನು ಬಲೆಗೆ ಕೆಡವಿಕೊಳ್ಳಬೇಕೆಂದು ಶಪಥ ಕೈಗೊಳ್ಳುತ್ತಿದ್ದ. ಬೆಂಡಾಗಿಹೋಗಿದ್ದ ವ್ಯರ್ಥ ಬದುಕಿಗೆ ಎಲ್ಲ ಸಂಪತ್ತೂ ಬಂದು ಇಳಿಯುತ್ತದೆನ್ನಿಸಿ ಅವ್ರೆಲ್ಲ ಮಲಗಲು ತೊಡಗಿದರು . ಕೆರೆ ಬಯಲು ಕಡೆಯಿಂದ ವಿಶಾಲ ಗದ್ದೆಗಳ ಮೇಲೆ ಬೀಸಿ ಬರುವ ತಂಗಾಳಿಯು ಘಮ್ಮನೆ ಬತ್ತದ ವಾಸನೆ ಅವರನ್ನು ಅಪ್ಪಿಕೊಳ್ಳತೊಡಗಿತು.
ಎರಡನೆ ಸಾಲು
ಊರ ಕೆರೆ ಬಯಲು, ಪ್ರತಿ ವರ್ಷವೂ ಹೂಳೆತ್ತದ ಮಣ್ಣು ತುಂಬಿಕೊಂಡು ಕೆರೆಯ ವಿಸ್ತಾರ ಬಯಲಿನಂತಾಗಿ , ಫಲಭರಿತ ಮೇಲು ಮಣ್ಣೆಲ್ಲ ಅಲ್ಲಿ ಬಂದ ಸಂಗ್ರಹವಾಗಿ : ಈಗದು ಉತ್ಕೃಷ್ಟ ಭೂಮಿಯಾಗಿಬಿಟ್ಟಿತ್ತು. ಒಳಗೆರೆಗೆ ಸಮೀಪದ ಗದ್ದೆಗಳ ಮಾಲೀಕರು ನಿಧಾನವಾಗಿ ಕೆರೆಯ ಒಳಭಾಗವನ್ನು ಗದ್ದೆಗಳಾಗಿ ಪರಿವರ್ತಿಸಿ ಆಕ್ರಮಿಸಿಕೊಂಡು ಅನುಭೋಗಿಸುತ್ತಿದ್ದರು.ಇದನ್ನೆಲ್ಲ ಸಹಿಸದ ಅದೇ ಜಾತಿಯ ಕೆಲವರು ಸಿಟ್ಟಾದರು. ಕೆರೆಯ ಹೊರಭಾಗದ ದೂರದ ಗದ್ದೆಯ ಮಾಲೀಕರಿಗೆ ನೀರೇ ಸಿಗದೆ ಫಸಲು ಕೈಹತ್ತುತ್ತಲೇ ಇರಲಿಲ್ಲ. ಹೀಗಾಗಿ ಈ ವಿಷಯವನ್ನು ಪ್ರಸ್ತಾಪಿಸಿ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಯಾರೋ ಒಂದು ಮೂಗರ್ಜಿಯನ್ನು ಬರೆಸಿಬಿಟ್ಟಿದ್ದರು. ಇಂಥ ಯಾವುದೇ ಸ್ಥಿತಿಗಳಿಗೆ ಶರವೇಗದಲ್ಲಿ ಪ್ರತಿಕ್ರಿಯಿಸುತ್ತಿದ್ದ ಆ ತಾಲ್ಲೂಕಿನ ತಹಶೀಲ್ದಾರರು ತಕ್ಷಣವೇ ಕಾರ್ಯೋನ್ಮುಖರಾಗಿ : ತಮ್ಮ ಎಲ್ಲೆಯಲ್ಲಿ ಎಷ್ಟು ಅಧಿಕಾರ ಚಲಾಯಿಸಬಹುದೋ ಅಷ್ಟನ್ನು ಚಲಾಯಿಸಿ ಸಂದೇಶವನ್ನು ಹೊರಡಿಸಿದ್ದರು. ದಕ್ಷನಾದ ಯುವಕ ಅಧಿಕಾರಿಗೆ ಇಂಥ ಸವಾಲು ಕೆಲಸಗಳನ್ನು ಸ್ವೀಕರಿಸುವುದೆಂದರೆ ಇಡೀ ಭಾರತಕ್ಕೆ ಸಾಮಾಜಿಕ ಆರ್ಥಿಕ ನ್ಯಾಯವನ್ನು ಕೊಡುವ ಕೆಲಸವಷ್ಟೇ ಪ್ರಮುಖ ಚಾರಿತ್ರಿಕ ಅನಿವಾರ್ಯ ಎಂಬಂತಾಗಿತ್ತು. ಕೆರೆಯ ಒಳಭಾಗವನ್ನು ಅನಧಿಕೃತವಾಗಿ ಬಳಸಿಕೊಂಡಿರುವವರ ಗದ್ದೆಗಳ ಫಸಲನ್ನು ಸರ್ಕಾರ ಈ ಬಾರಿ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ ಎಂತಲೂ , ಈ ಹಿಂದಿನ ಅಧಿಕಾರಿ ಈ ರೀತಿಯ ಅಕ್ರಮ ನಡವಳಿಕೆ ಬಗ್ಗೆ . ತಿಳಿವಳಿಕೆ ನೋಟೀಸು ಜಾರಿ ಮಾಡಿದ್ದರೂ ಈ ಜನ ಕೇಳಿಲ್ಲ ಎಂತಲೂ , ಹೀಗಾಗಿ; ಈ ವೇಳೆಯ ಬತ್ತವನ್ನು ಸರ್ಕಾರವೇ ಕಟಾವು ಮಾಡಿಕೊಳ್ಳುತ್ತದೆಂತಲೂ ನಿಯಮ ಜಾರಿಗೊಳಿಸಿಯೇಬಿಟ್ಟರು. ಹಾಗೆಯೆ ಕೆರೆಯ ಪುನರ್ನವೀಕರಣಕ್ಕೆ ಯೋಜನೆ ಸಿದ್ಧಗೊಳಿಸತೊಡಗಿದರು. ಹೀಗೆ ಬತ್ತ ಕೊಯ್ಲು ಮಾಡಲು ಬೇಕಾಗುವ ಕೆಲಸದಾಳುಗಳನ್ನು ಅದೇ ಊರ ಕೇರಿ ಜನರನ್ನು ಬಳಸಿಕೊಳ್ಳಲು ತಹಸೀಲ್ದಾರರು ತೀರ್ಮಾನಿಸಿ ಒಂದು ಹೇಳಿಕೆಯನ್ನು ಕೊಟ್ಟಿದ್ದರು. ಬತ್ತವನ್ನು ಎಲ್ಲರೂ ಬಂದು ಕೊಯ್ಲು ಮಾಡಿ ಅವರ ಕೆಲಸದ ಸಾಮರ್ಥ್ಯ ಮತ್ತು ಸಂಖ್ಯೆಗನುಗುಣವಾಗಿ ಬತ್ತವನ್ನು ತೆಗೆದುಕೊಡು ಹೋಗಬಹುದೆಂದು ಹೇಳಿದರು. ಈ ವಿಷಯವನ್ನು ಆಗಲೇ ಊರಲ್ಲಿ ತಮಟೆ ಜೋಗಿಯ ಬಾಯಲ್ಲಿ ಸಾರಿಸಿಯೂ ಬಿಟ್ಟಿದ್ದರು ಹಾಗಾಗಿಯೇ ಇಡೀ ಹೊಲೆಗೇರಿ ಈ ಸುದ್ದಿ ಕೇಳಿ ಸರ್ವ ಸಿದ್ಧತೆಗಳಲ್ಲಿ ಮುಂಜಾವಿಗೆ ಕಾಯುವಂತಾಗಿದ್ದುದು. ಕೋಳಿಗಳು ಈ ಎಲ್ಲ ಸುದ್ದಿಯನ್ನೂ ಕೇಳಿ ತಿಳಿದುಕೊಂಡಿದ್ದಂತೆ ಕಂಡು ಬೇಗನೇ ಮುಂಜಾವು ತರಿಸಿ ಕೂಗಿಕೊಂಡು ಬೆಳಕು ಮಾಡಿದವು. ಕೆಲವರು ಕೋಳಿ ಕೂಗುವುದಕ್ಕೂ ಮೊದಲೇ ಎದ್ದು ಕುಳಿತು ಬೀಡಿ ಸೇದುತ್ತಿದ್ದರು. ಅವರ ಯಾವ ದಿನಗಳಲ್ಲೂ ಇಂಥಾ ದಿನ ಬಂದಿರಲಿಲ್ಲ. ಅವರವರ ಅನ್ನದ ಕನಸುಗಳಿಗೆ ಈಗ ನನಸಿನ ಬಣ್ಣ ಬಂದಿತ್ತು. ತಕ್ಷಣವೇ ಜಾರಿಯಾಗಿದ್ದ ಈ ಬಗೆಯ ಕಾನೂನಿಗೆ ಗದ್ದೆಗಳ ಮಾಲೀಕರು ಏನನ್ನೂ ಮಾಡಲಾರದಾಗಿ ತಮ್ಮಲ್ಲೂ ತಪ್ಪು ಇದ್ದುದರಿಂದಲೂ ಅಸಹಾಯಕರಾಗಿದ್ದರು. ಕೇರೆ ಏರಿ ಕೆಳಗಿನ ಗದ್ದೆಗಳ ಒಡೆಯರು ತಮಗೆ ಯಾವುದೇ ‘ ಲಾಸು ’ ಆಗಿಲ್ಲವೆಂದು ಸುಮ್ಮನಿದ್ದರು. ಬೆಳಕು ಚಳಿಯ ಬಟ್ಟೆಯನ್ನು ಬಿಚ್ಚಿ ಅದರ ಮೇಲೆ ಬಿಸಿಲನ್ನು ಹೊದಿಸತೊಡಗಿತ್ತು. ಜನರೆಲ್ಲ ಸಜ್ಜಾದರು. ಅವರಲ್ಲಿದ್ದ ಕುಡುಲಗಳುಶಬ್ಧಗೈಯತೊಡಗಿದವು. ಮುತ್ತಣ್ಣನು ಬತ್ತ ಬಂದು ಬೀಳುತ್ತದೆಂದು ಸುಖಪಡುತ್ತಾ ಎಲ್ಲರೂ ಬಯಲ ಕಡೆ ಹೊರಡುವ ಬಗ್ಗೆ ಆಟುರ ಮಾಡುತ್ತಿದ್ದ. ಪುಟ್ಟಿ , ಚಿಳ , ದುಬಟಿ , ರಗ್ಗು , ಹಳೆ ಸೀರೆಗಳನ್ನೆಲ್ಲ ಹಿಡಿದು ನಿಂತರು. ತೋಪಮ್ಮ ದೊಡ್ಡ ಗಂಟಲು ತೆಗೆದು ‘ ನಡೀರ್ಲೆ ಚಿನಾಲೀರಾ; ಇನ್ನೂ ಎನಾರಿ ಮಾತಾಡ್ತಾ ಇದ್ದೀರಿ . ಬಾಗ್ಲುಗ್ ಬಂದ ಬಾಗೈವಾ ನೋಡ್ತಾ ಕುಂತಿದ್ದಿರೆನೋ ’ ಎಂದು ಛೇಡಿಸುತ್ತ ಓಡಾಡುತ್ತಿದ್ದಳು. ಸಣ್ಣ ಹುಡುಗರು ಇನ್ನಿಲ್ಲದ ಉತ್ಸಾಹದಲ್ಲಿ ಅವರೂ ಕೂಡ ಬತ್ತ ತುಂಬಿಕೊಂಡು ಬರಲು ತಯಾರಾಗುತ್ತಿದ್ದರು. ಎಷ್ಟೋ ಜನ ತಂಗಳಿಟ್ಟು ತಿನ್ನುವುದನ್ನೂ ಮರೆತು ; ಅಂಗಡಿಗಳ ಬೆಲ್ಲದ ಬಿಸಿ ನೀರಿನಂತಹ ಟೀ ಹೀರಿ ನಿಂತಿದ್ದರು. ಅತಿ ವಯಸ್ಸಾದ ಮುದುಕರು ಇಂಥಾ ಕೆಲಸದಲ್ಲಿ ಭಾಗವಹಿಸಲು ದೇವರು ತಮಗೆ ಅವಕಾಶ ಕೊಡಲಿಲ್ಲವಲ್ಲ ಎಂದು ನೊಂದುಕೊಳ್ಳುತ್ತಿದ್ದರು. ಕೇರಿಯಲ್ಲೀಗ ವಿಪರೀತ ಸದ್ದುಗಳು ಏರಿ ಜಾತ್ರೆಯೋ , ಪರಿಸೆಯೋ ಏರ್ಪಟ್ಟಿತೆನ್ನುವ ಹಾಗೆ ಕಾಣತೊಡಗಿತು. ಎಲ್ಲರೂ ಕೆರೆ ಬಯಲ ಕಡೆ ಹೊರಟರು. ಅವರ ಒಗ್ಗಟ್ಟು , ಗುಂಪು , ಕೈಲಿದ್ದ ಕುಡುಲು ಅವರ ಮುಖದಲ್ಲಿದ್ದ ಅಸಾಧ್ಯ sಸಾಹಸೀ ಕಳೆ ಎಲ್ಲವೂ ಮೇಲುಕೇರಿಯವರನ್ನು ತೆಪ್ಪಗಾಗಿಸಿದ್ದವು. ದಡ ದಡ ನಡೆದರು. ಹುಡುಗರು ಬಸ್ಸು ಬಿಡುವ ರೀತಿ ಅವರೆಲ್ಲರ ಮುಂದೆ ಓಡುತ್ತಿದ್ದರು. ಬಿಸಿಲು ಏರತೊಡಗಿತ್ತು. ಒಬ್ಬೊಬ್ಬರ ಕೈಯಲ್ಲೂ ಸಾಮಗ್ರಿಗಳಿದ್ದವು. ತೋಪಮ್ಮ ಎಲ್ಲರನ್ನೂ ಬಿರಬಿರನೆ ನಡೆಸುತ್ತಿದ್ದಳು. ಗಂಡಾಳುಗಳು ದೊಡ್ಡ ಹೆಜ್ಜೆಗಳಲ್ಲಿ ಕೆರೆಬಯಲನ್ನು ಮುಟ್ಟುತ್ತಿದ್ದರೆ ; ಅವರ ನಡುವೆ ಚಿಲ್ರೆಯು ಸಂದೇಶ ಕೊಡುವಂತೆ ಏನೇನೋ ಹೇಳುತ್ತಾ ಬರುತ್ತಿದ್ದ. ಕೆರೆ ಏರಿ ತಲುಪಿ ಅದರ ಮೇಲೆ ನಡೆಯತೊಡಗಿದರು. ಬಿಸಿಲು ಅವರ ಮೇಲೆ ಬಿದ್ದು ಅವರ ಕೈಲಿಡಿದ ವಸ್ತುಗಳ ಸಹಿತ ಏರಿಯ ಕೆಳಕ್ಕೆ ಬಿದ್ದು ಚಲಿಸುತ್ತಿತ್ತು. ಗದ್ದೆಗಳ ವಿಸ್ತಾರ ಬಯಲನ್ನೂ ; ಚಿನ್ನದ ಬಣ್ಣದ ಬತ್ತದ ಫಸಲನ್ನು ಕಣ್ಣು ತುಂಬಾ ನೋಡಿ ಕ್ಷಣಕಾಲ ಸ್ತಬ್ಧರಾಗಿ ನಿಂತರು. . ಈಗ ಅವರೆಲ್ಲರ ಮುಖಗಳಲ್ಲಿ ಎಷ್ಟೆಷ್ಟು ರಾಗಗಳು ಹರಿಯುತ್ತಿದ್ದವು ಎಂಬುದನ್ನು ಯಾರಿಂದಲೂ ಸೆರೆ ಹಿಡಿಯಲು ಆಗುತ್ತಿರಲಿಲ್ಲ. ಸಣ್ಣ ಹುಡುಗರು ಬತ್ತದ ಗೊನೆಗಳನ್ನು ಹಕ್ಕಿಗಳ ಹಾಗೆ ಮುಟ್ಟಿ ಖುಷಿಪಡುತ್ತಿದ್ದರು. ಇಷ್ಟರ ವೇಳೆಗಾಗಲೇ ಆ ತಹಸೀಲ್ದಾರರು ಪೇದೆಗಳ ಬೆಂಬಲ ಸಹಿತ ಅಲ್ಲಿಗೆ ಬಂದು ಒಂದು ಮರದಡಿ ನಿಂತಿದ್ದರು. ಗದ್ದೆಗಳ ಮಾಲೀಕರ ಸುಳಿವೆ ಅಲ್ಲಿ ಇರದಿದ್ದರೂ ದೂರದಲ್ಲಿ ಗದ್ದೆಗಳ ಹೆಂಗಸರು ನಿಂತು ಹಿಡಿ ಶಾಪ ಹಾಕುತ್ತಿದ್ದರು. ತೆಳ್ಳಗೆ ಬೀಸುವ ಗಾಳಿಗೆ ಬತ್ತದ ಗದ್ದೆಗಳು ವಾಲಾಡುತ್ತಿದ್ದಂತೆಯೇ ಆ ಜನರ ತೀವ್ರತರ ಆಶಯಗಳು ಕುಣಿಯತೊಡಗಿದವು. ಜನರನ್ನು ಉದ್ದೇಶಿಸಿ ಆ ಅಧಿಕಾರಿ ಹೇಳಿದ: ‘ ನೋಡಿ , ಯಾರೂ ಯಾವ ಗದ್ದಲ ಮಾಡದೆ ಬತ್ತ ಕೊಯ್ದು ಹಾಕಿ; ಒಂದೊಂದು ಕೆಲಸವನ್ನು ಹಂಚಿಕೊಂಡು ಮಾಡಿ , ಯಾವ ಗಲಭೆಗೂ ಹೆದರಬೇಡಿ , ಬತ್ತದ ಕೊಯ್ಲು ಇವತ್ತೇ ಮುಗಿಯಬೇಕು. ’ ಜನರು ತಹಸೀಲ್ದಾರರ ಈ ಮಾತುಗಳನ್ನು ಕೇಳಿದನಂತರ ಕಾರ್ಯೋನ್ಮುಖರಾದರು. ಎಲ್ಲರೂ ಕೆಸರಿನ ಗದ್ದೆಗಳಿಗೆ ಇಳಿದರು. ಕುಡುಲುಗಳನ್ನು ಚಾಣಾಕ್ಷತೆಯಿಂದ ಆಡಿಸುತ್ತ ಪರಪರ ಬರಬರ ಎನಿಸುತ್ತ ಕೈಕಡಗ ಬಳೆಗಳ ಸದ್ದಿನಲ್ಲಿ ಅಸಾಧ್ಯ ವೇಗದಿಂದ ಬತ್ತವನ್ನು ಕೊಯ್ಯತೊಡಗಿದರು. ಜನರ ತುಳಿತದ ಹೆಜ್ಜೆಗಳು ಸಾವಿರಾರು ಆಕೃತಿ ಕೆಸರಿನಲ್ಲಿ ಚಿತ್ರ ಬಿಡಿಸಿದಂತೆ ಮಾಡಿದವು. ಸಣ್ಣ ಹುಡುಗರು ಬತ್ತ ಕೊಯ್ಯಲು ಆಗದೆ ; ಅವರೆಲ್ಲ ಚಿಕ್ಕ ಚೀಲಗಳಿಗೆ ಬತ್ತವನ್ನು ಗೊನೆಯಿಂದ ಹೂರುತ್ತ ತುಂಬತೊಡಗಿದರು. ಬಗೆಬಗೆಯಾಗಿ ಕೆಲಸಗಳನ್ನು ಜನ ಆ ಕ್ಷಣದಲ್ಲೇ ಹಂಚಿಕೊಂಡರು. ಕೊಯ್ದ ಬತ್ತವನ್ನು ಸಾಲಾಗಿ ಹಾಕಿದ್ದನ್ನು ಎತ್ತಿಕೊಂಡು ಬಂದು ಒಂದೆಡೆ ಕೆಲವರು ಹಾಕುತ್ತಿದ್ದರೆ ; ಅವನ್ನು ಬಡಿಯಲು , ಚೀಲಗಳಿಗೆ ತುಂಬಲು , ಹುಲ್ಲನ್ನೆಲ್ಲ ಇನ್ನೊಂದೆಡೆ ರಾಶಿ ಹಾಕಲು ; ಹೀಗೆ ಎಲ್ಲ ಕೆಲಸವನ್ನು ಅತಿವೇಗದಿಂದ ಮಾಡತೊಡಗಿದರು. ಬೆವರು ಅವರ ಮೈಗಳಿಂದ ಇಳಿಯತೊಡಗಿತು . ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಒಂದೊಂದು ಪಾತಿ ಗದ್ದೆಗಳನ್ನು ಕೊಯ್ದು ಮುಗಿಸುತ್ತಿದ್ಡರು . ಚಿಲ್ರೆಯು ಎಲ್ಲರನ್ನು ನಿಭಾಯಿಸುವಂತೆ ಓಡಾಡುತ್ತಾ ; ‘ ತಿಕುದ್ ಬೆವುರಾ ವೊರೊಸೋಕು ಟೇಂ ಇಲ್ದಂಗೆ ಕೂದ್ ಬಿಸಾಕಿ . ಸಾಯೇಬ್ರು ಇವತ್ತೆ ಯಲ್ಲಾನು ಮುಗ್ಸಿ ಅಂತೇಳಿರುದಾ ಮರ್ತಕಂದ್ರಾ’ ಎಂದು ಅನವಶ್ಯಕವಾಗಿ ಬಾಯಿ ಹಾಕುತ್ತ ಇದು ಮೂಟೆ ಬತ್ತವನ್ನು ಕದಿಯಲು ಸಂಚುಹಾಕುತ್ತಿದ್ದ . ಬತ್ತವನ್ನು ಮೂಟೆಗೆ ತುಂಬುವವರು ತಮ್ಮ ಜೀವನದಲ್ಲಿ ಎಂದೂ ಇಷ್ಟೊಂದು ಬತ್ತವನ್ನು ತುಂಬಿಯೇ ಇರಲಿಲ್ಲವೆಂದು ಬೆರಗಾಗುತ್ತಿದ್ದರು. ಅಧಿಕಾರಿಯು ಇವರೆಲ್ಲರ ಅಸಾಧ್ಯ ಹುಮ್ಮಸ್ಸು ವೇಗ , ಗಿಜಿಗಿಜಿಗಳನ್ನು ನೋಡಿ ಆನಂದ ಪಡುತ್ತ ಒಂದು ಕೆಲಸದ ಮರದಡಿ ಕುಳಿತು ಜೊತೆಗಾರರ ಜೊತೆ ಏನೇನೋ ಮಾತನಾಡುತ್ತಿದ್ದರು. ಕೆಲವೇ ಗಂಟೆಗಳಲ್ಲಿ ಬತ್ತ ರಾಶಿರಾಶಿಯಾಗಿ ಬೀಳತೊಡಗಿತು. ಅಲ್ಲೇ ಒಂದೆಡೆ ಬತ್ತ ಬಡಿಯುತ್ತ ತೂರುತ್ತಾ ಮೂಟೆಗೆ ತುಂಬುತ್ತಾ ಸಾಲಾಗಿಡುತ್ತಾ ಬತ್ತದ ಗದ್ದೆಗಳ ಬರಿದು ಮಾಡುತ್ತಿದ್ದರು. ಹೆಂಗಸರು ಎಣೆಯಿಲ್ಲದ ಖುಷಿಯಲ್ಲಿ ಸೀರೆಯನ್ನು ತೊಡೆಯವರೆಗೂ ಎತ್ತಿಕಟ್ಟಿ ಯಾವ ಮುಜುಗರವೂ ಇಲ್ಲದಂತೆ ಕೊಯ್ಯುತ್ತಿದ್ದರು. ಈ ವೇಳೆಯಲಿ ಅವರ ಬದಿ ನೀರಾದ ತೊಡೆಗಳನ್ನು ನೋಡಿ ಸುಖ ಪಡಲು ಸಮಯವಿರಲಿಲ್ಲ. ಸಣ್ಣ ಹುಡುಗರು ಬತ್ತದ ಬುತ್ತಿಗಳನ್ನು ಮನೆ ಕಡೆ ಸಾಗಿಸತೊಡಗಿದ್ದರು. ಅಧಿಕಾರಿಗಳಿಗೆ ಆ ಬಗ್ಗೆ ಯಾವ ತಡೆಯೂ ಇದ್ದಂತೆ ಕಾಣಲಿಲ್ಲ. ಬಿಸಿಲು ವಿಪರೀತವಾಗುತ್ತಿತ್ತು. ಮತ್ತೆ ಕೆಲವರು ಬತ್ತವನ್ನು ಮನೆಗಳಿಗೆ ಕದ್ದುಕೊಂಡು ಹೋಗಿ ಬಚ್ಚಿಡತೊಡಗಿದರು. ಪೊಲೀಸರು ಜನರ ಇಂಥ ವೇಗದ ಕೆಲಸ ಕಂಡು ಒಳಗೊಳಗೇ ನಾಚಿಕೆಪಟ್ಟುಕೊಳ್ಳುತ್ತ ‘ ಚಾರ್ಜ್ ’ ಎಂದಾಕ್ಷಣವೇ ಲಾಟಿ ಬೀಸಿ ಹೊಡೆಯಲು ಕೂಡ ಅಷ್ಟೊಂದು ವೇಗದಲ್ಲಿ ತಾವು ನುಗ್ಗಲು ಆಗುವುದಿಲ್ಲ ಎಂದು ಬೆರಗಾಗುತ್ತಿದ್ದರು. ಗದ್ದೆಗಳ ಮಾಲೀಕರು ಎಲ್ಲೆಲ್ಲಿಗೆ ಹೋಗಿದ್ದಾರೆಂದು ಯಾರಿಗೂ ತಿಳಿಯಲಿಲ್ಲ. ಕೇರಿ ಜನರಿಗೆ ಒಳಗೊಳಗೇ ಕೊಂಚ ಆಳುಕಿತ್ತಾದರೂ , ಇವರೆಲ್ಲರ ಬೆಂಬಲಕ್ಕಾಗಿ ಕರೆತಂದಿದ್ದ ಪೇದೆಗಳ ರಕ್ಷಣೆಯಿಂದಾಗಿ ಕೆಲಸದಲ್ಲಿ ತಲ್ಲೀನರಾಗಿದ್ದರು. ಕೇರಿಗಳ ಮನೆ ಜನ ಇಷ್ಟು ವೇಳೆಯೊಳಗೆ ಸಾಕಷ್ಟು ಬತ್ತವನ್ನು ಸಾಗಿಸುವಲ್ಲಿ ಸಫಲರಾಗುತ್ತಿದ್ದರು. ಹಾಗಿದ್ದರೂ ಬತ್ತದ ರಾಶಿ ಅಲ್ಲಿ ಬೆಳೆಯತೊಡಗಿತ್ತು. ತುಂಬಿದ್ದ ಗದ್ದೆಗಳು ಸಮಯ ಏರುತ್ತ ಹೋದಂತೆ ಖಾಲಿಯಾಗತೊಡಗಿದವು. ಬತ್ತ ಬಡಿದು ಒಂದೆಡೆ ಹಾಕಿದ ಹುಲ್ಲು ಈಗ ದೊಡ್ಡ ಬೆಟ್ಟದಂತೆ ಬಿದ್ದಿತ್ತು.
ಮೂರನೆಯ ಸಾಲು
ಆ ರಾತ್ರಿ ಕನಸು ಕಂಡಿದ್ದಂತೆಯೇ ಬತ್ತವೆಂಬ ಮಾಯಕಾತಿ ಅವರ ಅಡಿಯಾಳಾಗಿ ಬಿದ್ದಿದ್ದಳು. ಎಲ್ಲರ ಮೈ, ಬಟ್ಟೆಯೆಲ್ಲ ಬದಿಬಗ್ಗಡೆರಾಗಿ ಅವರ ರೂಪವೇ ಬದಲಾದಂತಾಗಿತ್ತು. ಗಂಡಸರ ರಟ್ಟೆಗಳು , ಹೆಂಗಸರ ಸೊಂಟಗಳು ಕೆಲಸದಿಂದ ದಣಿದಿದ್ದವು. ಈ ವೇಳೆ ಹಸಿವೆಂಬುದು ಅವರ ಬಳಿ ನಾಚಿಕೊಂಡು ಓಡಿಹೋಗಿತ್ತು. ಕೆಲಸ ತನ್ನ ಪಾಡಿಗೆ ತಾನು ಸಾಗುತ್ತಾ ಬಹುಪಾಲು ಗದ್ದೆಗಳನ್ನೆಲ್ಲ ಕೊಯ್ದು ಮುಗಿಸಿದಂತಾಗಿತ್ತು. ಹೊತ್ತು ಇಳಿಯತೊಡಗಿತ್ತು. ಜನ ಬತ್ತಗಳನ್ನು ಮನೆಗಳಿಗೂ ಸಾಗಿಸುತ್ತಿದ್ದರು. ಚಿಲ್ರೆಯು ಐದು ಮೂಟೆ ಬತ್ತವನ್ನು ಗೌಡರ ಕಬ್ಬಿನ ಗದ್ದೆಯೊಂದಕ್ಕೆ ಸಾಗಿಸಿ ವಿಜಯಶಾಲಿಯಂತೆ ನಿಂತಿದ್ದ. ಇಡೀ ಒಳಗೆರೆ ಬಯಲು ಬದಿಬಗ್ಗಡವಾಗಿ ವಿಸ್ತಾರವಾಗಿ ಬಿದ್ದುಕೊಂಡಿತ್ತು. ಇಷ್ಟೆಲ್ಲ ಆಗುತ್ತಿರುವಂತೆಯೇ , ಅವರೆಲ್ಲರ ಸ್ಥಿತಿಗಳನ್ನು ನಿಯಂತ್ರಿಸುವಂತೆ , ಮನುಷ್ಯನ ಎಲ್ಲ ಪ್ರಯತ್ನಗಳನ್ನು ಹಿಡಿದು ಆಳಬಲ್ಲೆ ಎಂಬಂತೆ ಇದ್ದಕಿದ್ದಂತೆ ಒಂದು ದೃಶ್ಯ ಎದುರಾಯಿತು. ದೂರದಿಂದ ಅಚಾನಕ್ ಆದ ಈ ದೃಶ್ಯಕ್ಕೆ ತಹಸೀಲ್ದಾರರು ಬೆಚ್ಚಿ : ಜನ ಈ ಹೊಸ ಆಗಮನಕ್ಕೆ ಅರ್ಥವಾಗದೆ ನಿಂತರು. ಜಿಲ್ಲಾಧಿಕಾರಿಗಳೂ, ಸರ್ಕಲ್ ಇನ್ಸ್‌ಪೆಕ್ಟರರೂ ; ಇತರೇ ಅಧಿಕಾರಿಗಳೂ ಮತ್ತು ಗದ್ದೆಗಳ ಮಾಲೀಕರು ಈಗ ಅಲ್ಲಿಗೆ ಬಂದವರಾಗಿದ್ದರು. ತಕ್ಷಣವೇ ಇಡೀ ಪರಿಸರವೇ ಬದಲಾಗಿಹೋಯಿತು. ಅಷ್ಟೊಂದು ಜೀವನೋತ್ಸಾಹಕ್ಕೆ ಯಾರೋ ಕೊರಳು ಹಿಸುಕಿದಂತಾಯಿತು. ಜಿಲ್ಲಾಧಿಕಾರಿಗಳು ಸಿಟ್ಟಿನಿಂದ ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು. ಗದ್ದೆಗಳ ಮಾಲೀಕರು ಸುಮ್ಮನೆ ನಿಂತು ಬತ್ತದ ರಾಶಿಯನ್ನು ನೋಡುತ್ತ ವಿಕಾರರಾಗುತ್ತಿದ್ದರು. ವಾದ ವಿವಾದ ಚರ್ಚೆ ಬಿಸಿಬಿಸಿ ಮಾತುಗಳು ಅಲ್ಲಲ್ಲಿ ಚೆಲ್ಲಾಡಿದವು . ರಕ್ಷಣೆಗೆಂದು ಬಂದಿದ್ದ ಪೇದೆಗಳು ಈಗಿನ ಸ್ಥಿತಿಗೆ ಹೇಗೆ ಪ್ರತಿಕ್ರಿಯಿಸುವುದೆಂದು ಪೆಚ್ಚಾದರು. ತಹಸೀಲ್ದಾರರು ನಿರ್ಧಾರದ ದನಿಯಲ್ಲಿ ಬಾಯಿ ತೆಗೆದು ಎಂದರು ಆ ಜಿಲ್ಲಾಧಿಕಾರಿಗಳು ಸಾಕು ಬಾಯಿ ಮುಚ್ಚು ಎಂಬಂತೆ ಎಂದು ಗುಡುಗಿದರು. ಕೇರಿಯವರಿಗೆ ದಿಕ್ಕು ತೋಚದಂತಾಯಿತು. ‘ ನಿನ್ನ ಜನರ ಮೇಲಿನ ಪ್ರೀತಿಯಿಂದ ಇದನ್ನೆಲ್ಲ ಮಾಡಿ ಹಳ್ಳಿಗಳ ನೆಮ್ಮದಿಯನ್ನೇ ಹಾಳು ಮಾಡ್ತಾ ಇದ್ದೀಯ . ನನಗೆ ಗೊತ್ತು , ನಿನ್ನ ಮೇಲೆ ಏನು ಕ್ರಮ ತಗೋ ಬೇಕೂಂತ .’ ಎಂದು ಸಿಟ್ಟಿನಿಂದ ಎಲ್ಲ ಕಡೆ ಮುಖ ಕಿವಿಚಿದರು.ತಪ್ಪುಗಳ ಪಟ್ಟಿಯನ್ನು ತಹಸೀಲದಾರರ ಮೇಲೆ ಗೌಡರು ಹೇರತೊಡಗಿದರು. ತನ್ನ ಲಿಖಿತ ಒಪ್ಪಿಗೆ ಇಲ್ಲದೆ ಈ ತಹಸೀಲ್ದಾರನು ಅಧಿಕಾರದ ಎಲ್ಲೆಯನ್ನು ದಾಟಿ ಬತ್ತವನ್ನು ಕೊಯ್ಸಿದ್ದಾನೆಂದು ಜಿಲ್ಲಾಧಿಕಾರಿಗಳು ಕೂಗಾಡುತ್ತಿದ್ದರು. ತಹಸೀಲ್ದಾರರು ಈ ಕೆಲಸದ ಬಗ್ಗೆ ಲಿಖಿತವಾಗಿ ತಿಳಿಸಿದ್ದರೇ ಹೊರತು ಮೇಲಾಧಿಕಾರಿಗಳ ಒಪ್ಪಿಗೆ ಬರಲಿ ಎಂದು ಕಾಯುತ್ತಾ ಕುಳಿತಿರಲಿಲ್ಲ. ಮುಖ್ಯರಾಗಿ ಈ ತಹಸೀಲ್ದಾರನು ಹೊಲೆಯರ ಹೊಲೆಯರ ಜಾತಿಯವನೇ ಆಗಿದ್ದು , ಹೊಲೆಯರಿಗಾಗಿ ಈ ಕೆಲಸ ಮಾಡಿದ್ದಾನೆಂದು ಗದ್ದೆಗಳ ಮಾಲೀಕರು ಹೇಳತೊಡಗಿ ಆತನ ಜಾತಿಯನ್ನು ಬೈಯತೊಡಗಿದರು. ಗೌಡರು ಉತ್ಸಾಹಿತರಾಗಿ ಮುಂದೆ ನಿಂತು ಬಾಯಿತೆಗೆದು ಹೀಗೆ ಕೊಯ್ದ ಬತ್ತದಲ್ಲಿ ಅರ್ಧ ಪಾಲನ್ನು ಹೊಲೆಯರಿಗೆ ಕೊಡಲು ಕಾನೂನು ಎಲ್ಲಿದೆ ತೋರಿಸಿ ಎಂದು ಬಡಬಡಾಯಿಸುತ್ತ ಲಾ ಪಾಯಿಂಟ್ ಎಸೆಯುತ್ತಿದ್ದರು. ಬತ್ತದಲ್ಲಿ ಅರ್ಧಪಾಲು ಪಡೆಯುವುದರ ಜೊತೆಗೆ ಕದ್ದು ಈಗಾಗಲೇ ಮನೆಗಳಿಗೆ ಬತ್ತವನ್ನು ತುಂಬಿಕೊಂಡಿದ್ದಾರೆ ಎಂತಲೂ ಇದಕ್ಕೂ ಮುಖ್ಯವಾಗಿ ಆ ಹೊಲೆಯರು ಮೈಮರೆತು ಗದ್ದೆಗಳ ಕೊಯ್ಯುವಾಗ ಅಕ್ರಮಗೊಂಡಿಲ್ಲದ ಗದ್ಡೆಗಳ ಬತ್ತವನ್ನೂ ಕೊಯ್ದು ತುಂಬಿಕೊಂಡಿದ್ಡಾರೆ ಎಂತಲೂ ಗದ್ದೆಯನ್ನು ಕೊಯ್ಸಿರುವುದು ಜಾತಿಯ ಕೆಲಸ ಎಂತಲೂ ಇಷ್ಟಕ್ಕೆಲ್ಲಈ ತಹಸೀಲ್ದಾರನೆ ಜವಾಬ್ದಾರನೆಂದು ದೊಡ್ಡ ಗಲಭೆಯನ್ನೇ ಈಗ ಅಲ್ಲಿ ಸೃಷ್ಟಿಸಿದರು. ತಹಸೀಲ್ದಾರರಿಗೆ ಯಾವ ರೀತಿ ಉತ್ತರ ಕೊಡುವುದು ಎಂಬುದೇ ಈಗ ತಿಳಿಯದಂತಾಗಿ ಗೊಂದಲಗೊಂಡರು. ಇಡೀ ಬಯಲು ಕೆಸರಿನಿಂದ ವಿಕಾರವಾಗಿ ಹಾಸಿಕೊಂಡಿದ್ದು ಅವರನ್ನೆಲ್ಲ ನೋಡುತ್ತಿತ್ತು. ಜನ ಈಗ ಮಾಯವಾಗತೊಡಗಿದರು. ಸಂಜೆ ಸಮೀಪಿಸತೊಡಗಿತು. ಸಮಸ್ಯೆಗಳು ಬಾಲದಂತೆ ಬೆಳೆಯತೊಡಗಿದವು. ಒಳಗೆರೆಯಲ್ಲಿ ಅಕ್ರಮವಾಗಿ ಬತ್ತ ಬೆಳೆದಿದ್ದ ಗದ್ದೆಗಳ ಪೈಕಿಯವರಲ್ಲಿ ಮೂರು ಮಂದಿಯವು ಹೊಲೆಯರಿಗೆ ಸೇರಿದ್ದು, , ಅವನ್ನು ಕೊಯ್ಯದೆ ಜಾತಿ ಪ್ರೀತಿಯಿಂದ ಬಿಟ್ಟುಕೊಟ್ಟಿದ್ದರು. ಗೌಡರು ಈಗ ಆ ಗದ್ದೆಗಳನ್ನು ತೋರಿಸುತ್ತ ‘ ನೋಡಿ ಸ್ವಾಮಿ , ತಮ್ ಜಾತಿಯೋರ್ ಗದ್ದೆಗಳ ಕೊಯ್ದೆ ಯಂಗ್ ಬಿಟ್ಕೊಟ್ಟಿದ್ದರೂ ಅನ್ನೂದ ? ’ ಎನ್ನುತ್ತಾ ಈ ಅಧಿಕಾರಿಯೂ , ಈ ಹೊಲೆಯರೂ ಎಂತಹ ನೀಚ ಕೆಲಸ ಕೈಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಗಳಿಗೆ ತೋರಿಸುತ್ತಿದ್ದರು. ಪೇದೆಗಳು ಸುಮ್ಮನೆ ನಿಂತಿದ್ದರು. ಸರ್ಕಲ್ ಇನ್ಸ್‌ಪೆಕ್ಟರು ಗಂಭೀರವಾಗಿ ಅತ್ತಿತ್ತ ಹೆಜ್ಜೆ ಹಾಕುತ್ತಿದ್ದರು. ತಮ್ಮ ಮೇಲೆ ಎಸಗಿರುವ ಇಂತ ದೂರ್ತ ಕ್ರಿಯೆಗಳಿಂದಾಗಿ ಈ ತಹಸೀಲ್ದಾರರನ್ನು ಕೂಡಲೆ ವಜಾ ಮಾಡಬೇಕಂತಲೂ, ಹೊಲೆಯರಿಗೆ ಯಾವುದಾದರೂ ಶಿಕ್ಷೆ ವಿಧಿಸಬೇಕಂತಲೂ ಪಟ್ಟು ಹಿಡಿಯತೊಡಗಿದರು. ಕತ್ತಲೆ ನಿಧಾನವಾಗಿ ಬರಲು ತೊಡಗುತ್ತಿತ್ತು. ಇದೆಲ್ಲಾ ರಾದ್ದಾಂತವಾಗುವ ಮುಂಚೆಯೆ ಗೌಡರು ಒಂದಾಗಿ ತಕ್ಷಣವೇ ಬೆಂಗಳೂರಿಗೆ ಹೋಗಿ ಅಲ್ಲಿನ ರಾಜಕೀಯ ಪಟುಗಳಿಗೆ ಪಟ್ಟು ಹಾಕಿ ಹಿಡಿದು ನಂತರ ಜಿಲ್ಲಾಧಿಕಾರಿಗಳನ್ನು ಕಂಡು ಜೊತೆಗೂಡಿಸಿಕೊಂಡು ಸಕಲ ಸಿದ್ಧತೆಗಳಿಂದ ಕೆರೆ ಬಯಲಿಗೆ ಬಂದಿದ್ದರು. ತಹಸೀಲ್ದಾರರು ಈ ಕಾರ್ಯಾಚರಣೆ ಬಗ್ಗೆ ‘ ಅಸ್ತು ’ ಎನ್ನುವ ಲಿಖಿತ ದಾಖಲೆ ಪಡೆದಿರಲಿಲ್ಲ ಅಷ್ಟೆ. ಆದರೆ ಇದನ್ನೇ ಮುಖ್ಯವಾಗಿ ಇಟ್ಟುಕೊಂಡು ; ಇದಕ್ಕೂ ಆಳದಲ್ಲಿರುವ ಬೇರೆ ಕಾರಣಗಳಿಂದ ಬಂದು ಎಲ್ಲ ಕ್ರಿಯೆಗಳನ್ನು ಬದಲಿಸಿ ಈಗ ಇದನ್ನೊಂದು ದೊಡ್ಡ ರೇಜಿಗೆ ಮಾಡಿಸಿ ಬಿಟ್ಟಿದ್ದರು. ಗೌಡರೆಲ್ಲರೂ ಕೂಡಿ ಅಧಿಕಾರಿಗಳಿಗೆ ಈಗ ಇನ್ನೊಂದು ನಿರ್ಣಯವನ್ನು ಇಟ್ಟರು. ಹೊಲೆಯರು ತಮ್ಮ ಮನೆಗಳಲ್ಲಿ ತುಂಬಿಕೊಂಡಿರುವ ಬತ್ತವನ್ನು ವಾಪಸ್ಸು ತರಿಸಬೇಕಂತಲೂ ; ತಮಗೆ ಆ ಬತ್ತವನ್ನು ಹಿಂತಿರುಗಿಸಿ ಕೊಡುವ ಮನಸ್ಸಿಲ್ಲದಿದ್ದರೆ ; ಆ ಬತ್ತವನ್ನೆಲ್ಲ ಲೆವಿ ಬತ್ತವೆಂದು ಲೆಕ್ಕ ಚುಕ್ತ ಮಾಡಿಕೊಳ್ಳಬಹುದೆಂದು ಹೇಳಿದರು . ಹಾಗೆಯೆ ಆ ಬತ್ತವನ್ನು ನೀರಾವರಿ ಕಂದಾಯಕ್ಕಾದರೂ ಸಮಮಾಡಿಕೊಳ್ಳಬಹುದೆಂದು ವಿವರಿಸಿದರು. ಅಧಿಕಾರಿಗಳು ಅವರ ಈ ಮಾತುಗಳಿಗೆ ಒಪ್ಪಿದರು. ಹೊಲೆಯರ ಬತ್ತದ ಕನಸು ಈಗ ಹರಿದ ಬೆಳ್ಳಕ್ಕಿಯ ರೆಕ್ಕೆ ಪುಕ್ಕ ಆಕಾಶದಿಂದ ಗಾಳಿಗೆ ಅನಾಥವಾಗಿ ಬೀಳುವಂತೆ ಆಗಿಬಿಟ್ಟಿತು . ಕೆರೆ ಏರಿ ಕೆಳಗಿದ್ದ ಗದ್ದೆಗಳ ಮಾಲೀಕರು ಈಗ ಅನ್ಯಾಯಕ್ಕೆ ಒಳಗಾದ ಗೌಡರ ಕಡೆ ಸೇರಿಕೊಂಡು ಒಂದಾದರು. ಮೂಗರ್ಜಿ ಬರೆದವರ ಪತ್ತೆಯೇ ಇರಲಿಲ್ಲ. ಕೇರಿ ಈಗ ತಲ್ಲಣದಿಂದ ಒದ್ದಾಡುವಂತಾಯ್ತು . ತಹಸೀಲ್ದಾರರೂ ಪೆಚ್ಚಾಗಿ ಇಡೀ ದೃಶ್ಯದಿಂದ ಮರೆಯಾಗಿದ್ದರು.
ಸೂರ್ಯ ಇನ್ನೂ ಮುಳುಗಿರಲಿಲ್ಲ. ಜನರ ಬತ್ತದ ಕನಸು ಇನ್ನೂ ಸತ್ತಿರಲಿಲ್ಲ. ಹೇಗಾದರೂ ಮಾಡಿ ಬತ್ತವನ್ನು ಬಚ್ಚಿಡುವ ತರಾತುರಿಯಲ್ಲಿ ವದ್ದಾಡುತ್ತಿದ್ದರು. ಮಡಕೆ , ಗುಡಾಣ, ತೊಂಬೆ , ಪುಟ್ಟಿಗಳಲ್ಲಿಟ್ಟು ಬತ್ತವನ್ನು ಸ್ಥಳಾಂತರಿಸುತ್ತಿದ್ದರು. ಈ ನಡುವೆ ಮಾಯಮ್ಮ ಒಂದು ಉಪಾಯ ಹೂಡಿ ; ಒಂದು ದೊಡ್ಡ ಹಂಡೆಯಲ್ಲಿ ಬತ್ತವನ್ನು ತುಂಬಿ ಬೇಯಿಸತೊಡಗಿದಳು. ಈ ಬತ್ತ ತಮ್ಮವು ಎಂದು ಹೇಳಿ ಹೇಗಾದರೂ ಉಳಿಸಿಕೊಳ್ಳಬಹುದೆಂದು ಅವಳ ಎಣಿಕೆಯಾಗಿತ್ತು. ಅಲ್ಲದೆ ಬೇಯಿಸಲು ಇಟ್ಟ ಬತ್ತವನ್ನು ಹೇಗೆ ವಾಪಸ್ಸು ಪಡೆಯುತ್ತಾರೆಂಬುದು ಅವಳ ಅಚಲ ನಂಬಿಕೆಯಾಗಿತ್ತು. ಇನ್ನಾರೋ, ಧೈರ್ಯದಿಂದೆದ್ದು ; ಬೂಟುಗಾಲಲ್ಲಿ ಪೇದೆಗಳು ಒಳನುಗ್ಗಿದರೆ ಅವರೆಲ್ಲ ಅಲ್ಲೇ ರಕ್ತ ಕಾರಿ ಬೀಳುತ್ತಾರೆ ಎಂದು ಎಣಿಸುತ್ತಿದ್ದರು. ಚಿಲ್ರೆಯ ಮನಸ್ಸೀಗ ಕುದಿಯತೊಡಗಿತ್ತು. ಊರಲ್ಲಿದ್ದ ಜ್ಞಾನೇಶ್ವರಿ ಯುವಕ ಸಂಘವು ಇದಕ್ಕೆ ಯಾವ ರೀತಿಯಲ್ಲೂ ಪ್ರತಿಭಟಿಸಲಾರದೆ ಸತ್ತು ಕುಳಿತಿತ್ತು. ಮಂಚವು- ಒಂದು ಮೂಟೆ ಬತ್ತವನ್ನು ಹಿತ್ತಲಿಗೆ ಎಳೆದು ತಂದು ಸಣ್ಣ ಗುಂಡಿಯೊಳಗೆ ಇಟ್ಟು ಮೇಲೆ ಅದಿದನ್ನು ಮುಚ್ಚಿ ಡವಗುಡುವ ಎದೆ ಬಡಿತವನ್ನು ಉಬ್ಬಸದ ಬಾಗೆಯಲ್ಲಿ ಹಿಡಿಯುತ್ತಾ ಬಂದು ಕುಳಿತಳು. ಜನರೆಲ್ಲ ಯಾವುದೋ ಒಂದು ಅಗಾಧವಾದುದನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆಂಬಂತೆ ಕಾಣಲ್ಪಟ್ಟಿತು. ಗುಡಾಣಗಳ ಮೇಲೆ ಸೀರೆಗಳನ್ನು ನೀರಿಗಜ್ಜಿ ಬಟ್ಟೆ ಒಣಹಾಕಿರುವಂತೆ ಮೆನೆ ಮಾಡಿ ಕಟ್ಟಿದ್ದರು. ಅವರವರ ಗುಡಿಸಲು ಗೂಡುಗಳಲ್ಲಿ ಬತ್ತವನ್ನು ಬಚ್ಚಿಟ್ಟುಕೊಳ್ಳಲು ತಾಬಿಲ್ಲದೆ ಆತಂಕಗೊಳ್ಳುತ್ತಿದ್ದರು. ಮಕ್ಕಳು ಹಿರಿಯರ ಈ ಪಾಡನ್ನು ಕಂಡು ಕಂಗಾಲಾಗಿದ್ದರೆ ಮೈನೆರೆದ ಹುಡುಗಿಯರು ವಿಪರೀತ ನಾಚಿಕೆ ಅಪಮಾನ ಭಯಗಳಿಂದ ಒಂದೆಡೆ ಕುಳಿತುಬಿಟ್ಟಿದ್ದರು. ಕಾಲೇಜು ಮೆಟ್ಟಿಲು ಹತ್ತಿದ್ದ ಕೇರಿಯ ಹುಡುಗರು ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಸರ್ಕಲ್ ಬಳಿ ಕುಳಿತು ಹರಟುತ್ತಿದ್ದರು. ಇಡೀ ಕೇರಿ ಜರ್ಜರಿತವಾಗತೊಡಗಿತು. ಯಃಕಶ್ಚಿತ್ ಒಂದಿಡಿ ಬತ್ತಕ್ಕಾಗಿ ತಾವೀಗ ತಲ್ಲಣಗೊಳ್ಳುತ್ತಿದ್ದೇವೆ ಎಂಬುದೇ ಮಾಯವಾಗಿ ಒಟ್ಟಾರೆ ತಮಗೆ ಬೇಕಾಗಿರುವ ಯಾವುದಾವುದೋ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂಬಂತೆ ಎಲ್ಲವೂ ವಿಸ್ತರಿಸಿಕೊಂಡಿತು. ಪೇದೆಗಳ ಸಹಿತ ಅಧಿಕಾರಿಗಳು ಬರತೊಡಗಿದರು . ಬತ್ತವನ್ನು ಕಿತ್ತುಕೊಳ್ಳುವ ಕಾರ್ಯಾಚರಣೆಗೆ ಸಜ್ಜಾಗತೊಡಗಿದರು. ಕತ್ತಲೆಯೋ, ರಾತ್ರಿಯೋ, ಇಲ್ಲವೇ ಸೂರ್ಯನೆ ಸತ್ತನೋ ಇಡೀ ಕೇರಿ ಕತ್ತಲೆಯ ಸಮುದ್ರದಲ್ಲಿ ಮುಳುಗಿತು. ಮನುಷ್ಯನ ಅದಮ್ಯ ಚೈತನ್ಯ , ಸಾಹಸ ಸಂಕಷ್ಟ ಹಾಗು ಆಶಯಗಳಾಗಲಿ , ಆತನ ಸೃಷ್ಟಿಶೀಲ ಮನಸ್ಸಿನ ಕನಸುಗಳಾಗಲಿ ; ಹೇಗೆ ಒಂದು ಕ್ಷುಲ್ಲಕ ರಾಜಕೀಯದಿಂದಲೋ ನಮ್ಮದೇ ಕ್ಷುದ್ರದೇವತೆಗಳಿಂದಲೋ ಅಪಮಾನದಿಂದ ಸಾಯುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ಇಡೀ ಕೇರಿ ಈಗ ಬಿದ್ದುಕೊಂಡಿತ್ತು. ಹೊಲೆಯರು ಬಚ್ಚಿಟ್ಟಿರುವ ಬತ್ತವನ್ನು ಈಗಿಂದೀಗಲೇ ಹೊರಹಾಕಿಸಬೇಕೆಂತಲೂಈ , ಇಲ್ಲದಿದ್ದರೆ ಒಂದು ಕಾಳೂ ಸಿಗದಂತೆ ಮಾಯ ಮಾಡುತ್ತದೆಂದು ಎಲ್ಲರೂ ಒಪ್ಪಿ ತಕ್ಷಣ ಕೇರಿಗೆ ಬಂದರು. ಸ್ವತಃ ಜಿಲ್ಲಾಧಿಕಾರಿಗಳೇ ಬಂದಿರುವ ಕಾರಣ ಪೇದೆಗಳು ವೇಗವಾಗಿ ಕಾರ್ಯಾಚರಣೆಗೆ ನುಗ್ಗಬೇಕಾಗಿತ್ತು. ಅಲ್ಲದೆ ಸರ್ಕಲ್ ಇನ್ಸ್‌ಪೆಕ್ಟರ್ ಕೂಡ ಯಶಸ್ವಿಯಾಗಿ ಕಾರ್ಯ ಪಾಲಿಸಬೇಕಾಗಿತ್ತು. ಸದ್ಯದಲ್ಲೇ ಅವರಿಗೆ ಬಡ್ತಿ ಸಿಗುವುದಿದ್ದ ಕಾರಣ ಜಿಲ್ಲಾಧಿಕಾರಿಗಳ ಮುಂದೆ ಈ ಸಮಸ್ಯೆಯನ್ನು ನಿರ್ವಹಿಸಬೇಕಾಗಿತ್ತು. ಹಾಗಾಗಿ ಪೇದೆಗಳನ್ನು ಆರ್ಭಟಿಸುತ್ತ ‘ ಹೂಂ , ನುಗ್ಗಿ , ಎಲ್ಲೆಲ್ಲೆಲ್ಲಿ ಬಚ್ಚಿಟ್ಟಿದ್ದಾರೋ ಅದನ್ನೆಲ್ಲ ಹೊರಹಾಕಿ ಲಾರಿಗೆ ತುಂಬಿ ’ ಎಂದು ಆರ್ಡರ್ ಮಾಡುತ್ತಿದ್ದರು. ಜನ ಈ ಬಗೆಯ ಮುಖಾಮುಖಿಗೆ ಈಡಾಗಿ ನಡುಗಿದರು. ‘ ಹೂಂ; ಚಾರ್ಜ್ ’ ಎನ್ನುತ್ತಾ ಇನ್ಸ್‌ಪೆಕ್ಟರ್ ಸರ್ಕಾರಿ ಸಿಂಹದಂತೆ ಘರ್ಜಿಸತೊಡಗಿದರು. ಆ ಮುಂಜಾವು ರಕ್ಷಣೆಗೆಂದು ಬಂದಿದ್ದ ಪೇದೆಗಳು ಈಗ ಹೇಗೆ ಹಿಂಸಿಸಿ ಬತ್ತವನ್ನು ಕಿತ್ತುಕೊಳ್ಳುವುದೆಂದು ಹಿಂದು ಮುಂದು ನೋಡಿ ; ಕೊನೆಗೆ ಅಸಹಾಯಕರಾಗಿ ಅವರೂ ಕೂಡ ಆ ಕೇರಿ ಮನೆಗಳ ಒಳಕ್ಕೆ ದಾಳಿಯಿಡತೊಡಗಿದರು. ಕೆಲವು ಗಂಡಸರು ಅಡ್ಡಬಂದು ‘ ಸ್ವಾಮಿ ನಮ್ಮಟ್ಟಿವೊಳಕ್ಕೆ ಬೂಡ್ಸ್ ಕಾಲೆಲಿ ನುಗ್ಗಿ , ದೇವ್ರೂ ನಮ್ ಪಾಲ್ಗೆ ಇಲ್ದಂಗ್ ಮಾಡ್ಬೇಡಿ ’ ಎನ್ನುತ್ತಿದ್ದರು. ಪುಟ್ಟ ಹುಡುಗರು ಹೆದರಿ ಮರೆಯಾಗಿದ್ದರು. ಮುದುಕಿಯರು ಕಾಲು ಹಿಡಿದು ಬೇಡಲು ಬರುತ್ತಿದ್ದರು. ಯಾರೋ ಅಳುತ್ತಿದ್ದರು. ‘ ಹೂಂ ನುಗ್ಗಿ ’ ಎಂಬ ಧ್ವನಿ ಅಲ್ಲೆಲ್ಲ ಪ್ರತಿಧ್ವನಿಸುತ್ತಿತ್ತು. ಅಡೆತಡೆ ಹೆಚ್ಚಾದಂತೆ ಪೇದೆಗಳು ಅನಿವಾರ್ಯವಾಗಿ ಲಾಟಿ ರುಚಿ ತೋರಿಸತೊಡಗಿದರು. ಚಿಲ್ರೆಯು ಸಿಟ್ಟಾಗಿ ‘ ವಡ್ದು ಸಾಯ್ಸಬುಡಿ ಸ್ವಾಮಿ, ನಿಮ್ ಲಾಟಿ ಬೂಟು ಬಂದೂಕಿರೋದೆಲ್ಲ ನಮ್ಮಂತೋರ್ಗೆ ವಡುಕ್‌ತಾನೆ ಇರುದು , ವಡ್ದು ಇಲ್ಲೇ ಸಮಾಧಿ ಮಾಡಿ. ಆ ಬತ್ತುದ್ ಅಕ್ಕೀಲೆ ವಲ್‌ಗೇರಿ ತಿಥೀನೂ ಮಾಡ್ಬುಟ್ಟು ವಂಟೋಗಿ ’ ಎಂದು ಯಾತನೀಯ ಧ್ವನಿಯಲ್ಲಿ ಅಲ್ಲೆಲ್ಲ ಕುಣಿದಾಡಿದ. ಅವನ ಮಾತನ್ನು ಈಗ ಅವರಾರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.
ನಾಲ್ಕನೆಯ ಸಾಲು
ಕೆಲವೇ ಕ್ಷಣಗಳಲ್ಲಿ ಪೇದೆಗಳು ರಾಕ್ಷಸರಂತೆ ನುಗ್ಗಿ ನುಗ್ಗಿ ಬಚ್ಚಿಟ್ಟಿದ್ದ ಬತ್ತವನ್ನು ಹೊರಹಾಕತೊಡಗಿದರು . ತೋಪಮ್ಮ ತನ್ನ ಮನೆಗೆ ನುಗ್ಗಿದವರಿಗೆ ಸರಿಯಾದ ಶಾಸ್ತಿ ಮಾಡುತ್ತೇನೆಂದು ನಿಂತಿದ್ದಳು. ಇಡೀ ಊರಿಗೆ ಸೂಲಗಿತ್ತಿಯಾಗಿದ್ದ ಅವಳು ವಿಧವೆಯಾಗಿದ್ದುಕೊಂಡು ಎಲ್ಲರ ಸಾವು ನೋವುಗಳ ವೇಳೆಯಲ್ಲಿ ಸಮಾಧಾನಪಡಿಸುತ್ತ ಧೈರ್ಯ ತುಂಬುತ್ತಿದ್ದವಳ ಕಣ್ಣಲ್ಲಿ ಈಗ ನೀರು ಬರಲೋ ಬೇಡವೋ ಎಂಬಂತಾಗಿ ತುಳುಕುತ್ತಿತ್ತು. ಬೂಟುಗಾಲಿನನಡುವೆ ಉದುರಿದ್ದ ಬತ್ತಗಳು ಸೊರಗುಟ್ಟಿದವು. ಮಡಕೆ ಗುಡಾಣಗಳನ್ನು ಲಾಟಿಯಿಂದ ಹೊಡೆದು ಚಚ್ಚಿ ಉರುಳಿಸಿ ಮನೆ ತುಂಬ ಬತ್ತವನ್ನು ಚೆಲ್ಲಿ ದಡದಡ ಗರಬರ ಡಪ್‌ಡಪ್ ಎಂಬ ನಾನಾ ಸ್ವರಗಳನ್ನು ಹುಟ್ಟಿಸುತ್ತಾ; ಯಾರ ಮುಖವನ್ನು ನೋಡದೆ ಹುಚ್ಚರಂತೆ ಬತ್ತವಿಟ್ಟಿದ್ದ ಸ್ಥಳವನ್ನೆಲ್ಲ ಪತ್ತೆಮಾಡುತ್ತ ; ರೌದ್ರಾವತಾರವನ್ನು ತೋರತೊಡಗಿದರು. ಜನರ ಪ್ರಯತ್ನಗಳೆಲ್ಲ ಅಪಮಾನಿತವಾಗಿ ಹೊರಳಾಡಿ ವಿಷಾದವೆಂಬುದೀಗ ಅಲ್ಲಿ ನಲಿಯತೊಡಗಿತು. ಜಿಲ್ಲಾಧಿಕಾರಿಗಳು ‘ ಪಾರಾ ’ ದ ಸಮೇತ ಬಂದಿರುವುದರಿಂದ ತಮಗೆ ಜೈಲುವಾಸವೇ ಖಾಯಂ ಎಂದು ಹೆದರಿ ಗಂಡಸರು ಓಡಿಹೋದರು. ಹೆಂಗಸರು ಕಂಡಿದ್ದ ಕನಸೆಲ್ಲ ಗುಡಾಣ ಮಡಕೆಗಳು ನಜ್ಜುಗುಜ್ಜಾದಂತೆಯೇ ಪುಡಿಪುಡಿಯಾಗಿ ಬಿದ್ದವು. ಇಡೀ ಕೇರಿಯ ಏನೆಲ್ಲ ಸುಖಗಳನ್ನು ಧ್ವಂಸ ಮಾಡಿದಂತೆ ಆಯಿತು. ಇಷ್ಟಿದ್ದರೂ ಆ ಕಡೆ ಮಾಯಮ್ಮನ ಮನೆಯಲ್ಲಿ ಬತ್ತ ಬೇಯುತ್ತ ಅದರ ಗಮ್ಮನೆ ವಾಸನೆ ಅವರೆಲ್ಲರ ಕಾರ್ಯಾಚರಣೆಯನ್ನು ನಾಚಿಸುವಂತೆ ಸುಳಿಯುತ್ತ ಮೂಗುಗಳನ್ನು ಹಿಡಿಯುತ್ತಿತ್ತು. ಬತ್ತವನ್ನೂ ಹೊರಹಾಕುತ್ತ ಬಂದಂತೆಯೇ ಚಾಮಯ್ಯನ ಮನೆಯೊಳಗಿದ್ದ ತೆಂಗಿನಕಾಯಿಗಳನ್ನು ಹೊರಹಾಕಿದರು. ಮೊನ್ನೆ ತಾನೆ ಕದ್ದು ಆತ ಅವನ್ನು ತಂದಿಟ್ಟಿದ್ದ. ಯಾರೋ ಹೇಳುತ್ತಿದ್ದರು ‘ ನೋಡಿದ್ರಾ ಸ್ವಾಮಿ ಈ ಕಳ್ರು ಇನ್ನೂ ಏನೇನ ಕದ್ದು ಬಂದು ಒಳಗಿಟ್ಟಿದ್ದಾರೋ ಕಾಣವಲ್ಲಾ ’ ಎಂದೊಪ್ಪಿಸುತ್ತಿದ್ದರು. ಈಗ ಆ ಮನೆಗಳಲ್ಲಿ ಬೇರೆ ಬೇರೆ ತೆರನ ಶೋಧ ಆರಂಭವಾಯ್ತು. ಬತ್ತದ ಜೊತೆಗೆ ಅನುಮಾನಾಸ್ಪದವೆನಿಸುವ ವಸ್ತುಗಳನ್ನು ಕೂಡ ವಶಪಡಿಸಿಕೊಳ್ಳತೊಡಗಿದರು. ಗೌಡರ ತೋಟದಲ್ಲಿ ಚಾಮಯ್ಯ ತೆಂಗಿನಕಾಯಿಗಳನ್ನು ಕದ್ದದ್ದು ನಿಜವಾಗಿತ್ತು. ಆತನನ್ನು ಸೆರೆ ಹಿಡಿದರು. ಯಾರ್ಯಾರದೋ ಮನೆಯಲ್ಲಿ ಏನೇನೋ ಸಿಕ್ಕವು. ಹೊಲಗೇರಿಯ ಮೈಯನ್ನು ಬೆತ್ತಲೆ ಮಾಡಿದಂತಾಗಿತ್ತು. ‘ ಇನ್ನೂ ಏನೇನು ಬಚ್ಚಿಟ್ಟಿದ್ದೀರಿ ಹೊರಹಾಕಿ. ಇಲ್ದೇ ಇದ್ರೆ ಊರ್‌ನೇ ಅರೆಸ್ಟ್ ಮಾಡ್ಬೇಕಾಗುತ್ತದೆ. ಹೂತಿರೋ ಹೆಣಾನೆ ಪತ್ತೆ ಮಾಡಿ ಹೊರಕ್ಕೆ ತೆಗೆಯೋರು ನಾವು. ಹೂಂ ನೀವೆ ತಂದ್ರೆ ಸರಿ ’ ಎಂದು ದಪ್ಪ ಹೊಟ್ಟೆಯ ಪೇದೆ ಗುಡುಗಿದ. ಹೀಗೆ ಹೇಳಿದ್ದೇ ತಡ , ಮಂಚವ್ವ ಹಿತ್ತಲಲ್ಲಿಟ್ಟಿದ್ದ ಮೂಟೆ ಬತ್ತವನ್ನು ಉಬ್ಬಸದ ಉಸಿರಾಟದಲ್ಲಿ ಎಳೆದುಕೊಂಡು ಬಂದು ಅವರೆದುರು ಬಿಸಾಡಿ ಬಾಯಿಬಡಿದುಕೊಂಡು ಮರೆಯಾದಳು. ಮಾಯಮ್ಮ ಬತ್ತ ಬೇಯಿಸುತ್ತ ಕುಳಿತ ಕಡೆ ಪೇದೆ ಇನ್ನೂ ಬಂದಿರಲಿಲ್ಲ. ದುರಂತವೆಂದರೆ ಚಿಲ್ರೆಯು ಐದು ಮೂಟೆ ಬತ್ತವನ್ನು ಬಚ್ಚಿಟ್ಟಿದ್ದನ್ನೂ ಯಾರೋ ನೋಡಿಕೊಂಡಿದ್ದವರು ಆ ಸಂಜೆಯೇ ಅಪಹರಿಸಿಬಿಟ್ಟಿದ್ದರು. ಚಿಲ್ರೆಗೆ ಇದರ ಸುಳಿವೇ ಇರಲಿಲ್ಲ. ಯಾವುದಾವುದೋ ಕಾಲದ ಎಲ್ಲ ಬಗೆಯ ಕಳ್ಳತನಗಳನ್ನೂ ಈಗಲೇ ತನಿಖೆ ಮಾಡಬೇಕೆಂಬಂತೆ ಗೌಡರು ಈಗಲ್ಲಿ ಹುರಿಮೀಸೆ ಮೇಲೆ ಕೈಯಾಡಿಸಿ ಹೇಳುತ್ತಿದ್ದರು. ಕೇರಿಯ ಓದುವ ಹುಡುಗರು ಈ ಸ್ಥಿತಿಗೆ ಕೋಪಗೊಂಡು “ ಇವರೆಲ್ಲ ಹೀಗೆ ಮಾಡ್ಕೋ ಅಂತಾ ಯಾರೇಳಿದ್ರು, ಅನುಭವಿಸಲಿ ” ಎಂದು ಸುಮ್ಮನಾಗಿದ್ದರು. ಶೋಧನೆಯಲ್ಲಿ ತೊಡಗಿದ್ದ ಪೇದೆಗಳಲ್ಲಿ ಒಬ್ಬ ಹೊಲೆಯರವನೂ ಇದ್ದು ಆ ಸ್ಥಿತಿಯಲ್ಲಿ ಆತ ಏನನ್ನೂ ಮಾಡಲಾರದೆ ವಿಷಣ್ಣನಾಗಿ ಆ ಕಡೆ ಈ ಕಡೆ ಚಲಿಸುತ್ತಿದ್ದ. ಮಾಯಮ್ಮನ ಮನೆ ಒಳಕ್ಕೆ ಬಂದ ಪೇದೆ ಹುಡುಕಾಡಿ ಏನೂ ಸಿಗದಾಗ ಸಿಟ್ಟಿನಿಂದ ನುಗ್ಗಿ “ ಈ ಪ್ಲಾನ್ ಮಾಡ್ಕಂಡಿದ್ದೀಯೇನೆ ಮುದ್ಕೀ ” ಎಂದು ಹಂಡೆಯನ್ನು ಉರುಳಿಸಿಬಿಟ್ಟ. ಕಾಯ್ದ ಬೆಂದ ಬತ್ತದ ಹಂಡೆ ಉರುಳಿಕೊಂಡು ಬತ್ತವನ್ನು ಚೆಲ್ಲಿಕೊಂಡು ಸುವಾಸನೆಯನ್ನು ಬೀರುತ್ತ ನಿಂತಿತು. ಬೆಂದ ಬತ್ತದ ಹೊಗೆ ಗಮಲು ಅಲ್ಲೆಲ್ಲ ಕರಗತೊಡಗಿತು. ಮಾಯಮ್ಮ ಅಳತೊಡಗಿ ಬೈಯತೊಡಗಿದಳಾದರೂ ಆ ಬತ್ತವನ್ನು ಹೊಲಸು ನೆಲದ ಮೇಲೆ ಉರುಳಾಡಿಸಿದ್ದರಿಂದ ಅವನ್ನು ಪಡೆದುಕೊಳ್ಳಲೂ ಆಗದೆ ಅಸಹಾಯಕಳಾಗಿ ನಿಂತಳು. ಇದನ್ನೆಲ್ಲ ಕಂಡ ಕೆಲವರು ತಮ್ಮ ಮಕ್ಕಳು ಹಸಿದು ಸತ್ತು ಕೊಳೆತ ಹೆಣವದರೂ ಸರಿಯೇ ಈ ಬತ್ತ ಬೇಡ ಎಂಬಂತೆ ; ಬಚ್ಚಿಟ್ಟಿದ್ದ ಬತ್ತವನ್ನು ತಂದು ಒಪ್ಪಿಸತೊಡಗಿದರು. ಬತ್ತ ರಾಶಿಯಾಗಿ ಬೆಳೆಯಿತು. ಈ ಜನ ಇಷ್ಟೊಂದು ಬತ್ತವನ್ನು ಕದ್ದಿದ್ದರೇ ಎಂದು ಅಧಿಕಾರಿಗಳು ವಿಸ್ಮಯಪಡುತ್ತಾ, ತಮ್ಮ ಸಾಮರ್ಥ್ಯಕ್ಕೆ ಒಳಗೊಳಗೇ ಖುಷಿ ಪಡುತ್ತಿದ್ದರು. ಚಿಲ್ರೆಯು ಅಸಾಧ್ಯ ಸಿಟ್ಟಿನಿಂದ ಕೈಕಟ್ಟಿ ನಿಂತು ಎಲ್ಲವನ್ನೂ ನೋಡುತ್ತಿದ್ದ. ಅಷ್ಟರಲ್ಲಿ ತೋಪಮ್ಮನ ಕಡೆಯಿಂದ ಪೇದೆಯೊಬ್ಬ ಹೆದರಿ ಓಡಿಬರುತ್ತಿರುವುದನ್ನು ಕಂಡ. ತೋಪಮ್ಮನ ಮನೆಗೆ ನುಗ್ಗಿದವನನ್ನು ತಡೆಯಲು ಆಕೆ ಹೋರಾಡಿ ಕೊನೆಗೆ ತಕ್ಕ ಹೊಡೆತ ಕೊಟ್ಟಿದ್ದಳು. ಈ ನಾಲ್ಕಾರು ದಿನಗಳ ಹಿಂದೆ ದನ ಕೊಯ್ದಿದ್ದಾಗ ಮಾಂಸ ತಂದಿಟ್ಟುಕೊಂಡು ಕೆಲವಷ್ಟು ಉಂಡು ಉಳಿದ ಮಾಂಸವನ್ನೆಲ್ಲ ದೊಡ್ಡ ದೊಡ್ಡ ಮಾಲೆಯಂತೆ ತುಂಡರಿಸಿ ಒಣ ಹಾಕಿ ಕೊರಬಾಡಿಗಾಗಿ ತಯಾರು ಮಾಡುತ್ತಿದ್ದಳು. ಈ ಕೊರಬಾಡು ಸರಿಯಾಗಿ ಒಣಗದೆ ಕೀಡೆನೊಣಗಳಿಂದ ವಾಸನೆ ಹಿಡಿದು ಹಸಿಹಸಿಯಾಗಿದ್ದವು. ತೋಪಮ್ಮನಿಗೆ ತಕ್ಷಣವೇ ಹೊಡೆಯಲು , ತನ್ನ ಪ್ರತಿಭಟನೆಯನ್ನು ತೋರ್ಪಡಿಸಿಕೊಳ್ಳಲು ಸಿಕ್ಕಿದ್ದು ಆ ಹಸಿಯಾದ ಕೊಳೆತ ಮಾಂಸದ ಸರಗಳಷ್ಟೆ. ಅವನ್ನೇ ಅಂಬಿನಂತೆ ಮಾಡಿಕೊಂಡು ಮುಖಕ್ಕೆ ಬಡಿದು ಆ ವಾಸನೆಗೆ ಪೇದೆ ಓಡುವಂತೆ ಮಾಡಿದ್ದಳು. ಅಲ್ಲಿಂದ ಓಡಿಬಂದವಳು ದೂರದಲ್ಲಿ ನಿಂತಿದ್ದ ಜಿಲ್ಲಾಧಿಕಾರಿಗಳ ಬಳಿ ನುಗ್ಗಿ ಮುಖ ಮೋರೆ ನೋಡದೆ ಅದೇ ಮಾಂಸದಿಂದ ಬಿಳಿ ಬಟ್ಟೆಯ ಮೇಲೆ ಬಡಿದಳು . ಅಧಿಕಾರಿಗಳು ಪೆಚ್ಚಾಗಿ ಹೆದರಿ ವ್ಯಗ್ರಗೊಂಡು ಅಪಮಾನಿತರಾಗಿ ತಪ್ಪಿಸಿಕೊಂಡರು. ತಕ್ಷಣವೇ ಕೆಲವಾರು ಪೇದೆಗಳು ದಡಕ್ಕೆಂದು ನುಗ್ಗಿ ಬಂದು ಅಕೆಯನ್ನು ಹಿಡಿದು ಬಡಿದು ಕಟ್ಹಾಕಿದರು. ಅನಿರೀಕ್ಷಿತವಾದ ಈ ಘಟನೆ ಈಗ ಅಧಿಕಾರಿಗಳ ಸಿಟ್ಟನ್ನು ಇಮ್ಮಡಿಗೊಳಿಸಿ ತಮ್ಮ ಅಧಿಕಾರ ಅಂತಸ್ತು ಮಾನಮರ್ಯಾದೆಗಳ ಮೇಲೆ ನಡೆದ ಅತಿಕ್ರಮಣವೆಂದು ಭಾವಿಸುವಂತಾಯಿತು. ಸರ್ಕಲ್ ಇನ್ಸ್‌ಪೆಕ್ಟರರು ಲಾಟಿ ಚಾರ್ಜಿಗೆ ಅವಕಾಶ ಮಾಡಿಕೊಟ್ಟರು. ಈಗ ಸಿಕ್ಕಸಿಕ್ಕವರಿಗೆಲ್ಲ ಬಡಿಯತೊಡಗಿದಂತೆ ಕ್ಷಣಾರ್ಧದಲ್ಲಿ ಎಲ್ಲರೂ ಮಾಯವಾದರು. ಮನೆಮನೆಗಳೂ ಶೋಧದಿಂದ ಅಸ್ತವ್ಯಸ್ತವಾಗಿ ಒದ್ದಾಡತೊಡಗಿದವು
ಐದನೆಯ ಸಾಲು
ಇದೆಲ್ಲವೂ ನಮ್ಮ ಅರಿವನ್ನೂ ಮೀರಿ ಮತ್ತೊಂದು ಗಂಡಾಂತರವನ್ನೂ ತಂದಿಡತೊಡಗಿತು. ಯಃಕಶ್ಚಿತ್ ಒಂದು ಮುದುಕಿ ಹೀಗೆ ಬಂದು ಬಾಡಿನಿಂದ ಬಡಿದು ಹೊಲಸು ಮಾಡಿ ಅಪಮಾನ ಮಾಡಿದ್ದು ಸರ್ಕಲ್ ಇನ್ಸ್‌ಪೆಕ್ಟರ್‌ರ ತಲೆಯಲ್ಲಿ ಏನೇನೋ ಅನುಮಾನ ಹುಟ್ಟಿಸಿ , ಈ ಜನರೆಲ್ಲ ಪೂರ್ವಯೋಜಿತ ತೀರ್ಮಾನಗಳಂತೆ ಪ್ರತಿದಾಳಿ ಮಾಡಲು ತೊಡಗಿದ್ದಾರೆನ್ನಿಸಿ , ಇದರಲ್ಲಿ ಯಾವುದೋ ಕೈವಾಡ ಇದೆ ಎನ್ನಿಸಿಬಿಟ್ಟು , ಆ ಮುದುಕಿ ಹೊಡೆತ ನಕ್ಸಲೈಟ್ ದಾಳಿಯಂತೆ ಕಂಡುಬಂತು . ಆ ನಡುವೆ ಬೆಂಬಲ ಸಾಕ್ಷಿಯಾಗಿ ಮಾಲೀಕರು ಬಾಯಿತೆಗೆದು ‘ ಅದೇನೇನೋ ಸಂಗ ಕಟ್ಕಂಡವರೆ ಸ್ವಾಮಿ , ಜ್ಞಾನೇಶ್ವರಿ ಯುವಕ ಸಂಗ ಅಂತಾ, ಅವರ್ ಜಾತಿಯೋನು ಬೆಂಗ್ಳೂರಲ್ಲಿ ಓದ್‌ತಾವ್ನೆ . ವೋದ್‌ವರ್ಷ ಬಂದು ಈ ಸಂಗವ ಕಟ್ಕೊಟ್ಟು ನಮ್ಮೊಟ್ಟಿಗೆ ನುಗ್ಸುಕ್ಕೆ ಬಂದಿದ್ದ . ಬೆಂಗ್ಳೂರ್ ಪೇಟೇಲಿ ಅವುಂದು ಏನೇನೋ ಸ್ಟ್ರೈಕು ನಡ್ದವಂತೆ ’ ಎಂದು ಉರುಬಿದ . ಈ ಮಾತಿನಿಂದ ಅಧಿಕಾರಿಗಳಿಗೆ ಪ್ರಬಲ ಅನುಮಾನ ಬಂದು ಈ ಊರಿಗೂ ನಕ್ಸಲೈಟ್ ಚಳವಳಿ ನುಗ್ಗುತ್ತಿದೆ ಎನಿಸಿ ಈ ಬಗ್ಗೆ ಮತ್ತೊಂದು ಬಗೆಯ ವಿಚಾರಣೆಗಳಿಗಾಗಿ ಅವರೆಲ್ಲ ತಲೆಕೆಡಿಸಿಕೊಂಡರು. ಕತ್ತಲಾಗಿಬಿಟ್ಟಿತು. ಕೇರಿಯ ಸಂಘದ ಹುಡುಗರನ್ನು ಗೌಡರು ಹಿಡಿಸಿದರು. ಮಕ್ಕಳು ಕತ್ತಲಲ್ಲಿ ಕತ್ತಲಂತೆ ಅವಿತರು. ಬತ್ತದ ವಿಷಯ ಎತ್ತೆತ್ತಲೋ ಅವರನ್ನೆಲ್ಲ ಎಳೆದುಕೊಂಡು ಹೋಗಿ ಈ ಕೇರಿಯ ಜೀವನವೂ ಕೂಡ ಸಶಸ್ತ್ರ ಹೋರಾಟವಾದಿಗಳ ನೆಲೆಯೇನೋ ಎನಿಸಿ ಒಂದು ರಾಜಕೀಯ ಸಮಸ್ಯೆಯಾಗಿ ರೂಪಾಂತರಗೊಂಡಿತು. ಈ ಬಾರಿ ಲೋಕಲ್ ಚುನಾವಣೆಗಳಲ್ಲಿ ಸೋತಿದ್ದ ಕೆಲ ಗೌಡರು ಈ ವಿಷಯವನ್ನು ಮತ್ತೊಂದು ಕಡೆ ವಾಲಿಸುತ್ತ ; ಇತ್ತೀಚೆಗೆ ಇವರೆಲ್ಲ ಊರಿನ ಶಾಂತಿಯನ್ನೇ ಹಾಳು ಮಾಡಿ ಕೊಲೆ ಬೆದರಿಕೆ ಹಾಕುತ್ತಾರೆಂದು ಹೇಳತೊಡಗಿದರು. ಒಟ್ಟಿನಲ್ಲಿ ತೋಪಮ್ಮನ ಸಹಿತ ಮತ್ತೆ ಕೆಲವರನ್ನು ಹಿಡಿದು ವ್ಯಾನಿನಲ್ಲಿ ಹಾಕಿಕೊಂಡು ಚೆನ್ನಪಟ್ಟಣಕ್ಕೆ ನಡೆದೇಬಿಟ್ಟರು. ಈಗ ಇವರೆಲ್ಲ ದೊಡ್ಡ ಕ್ರೂರಿಗಳ ಹಾಗೆ ಅವರ ಕಣ್ಣಿಗೆ ಕಾಣಿಸತೊಡಗಿದರು. ಕೇರಿಯಲ್ಲಿದ್ದ ಬತ್ತವೆಲ್ಲ ಎಲ್ಲೆಲ್ಲೋ ಹೋಯಿತು. ಬತ್ತದ ಬಗ್ಗೆ ಕೇರಿಯವರಿಗೆ ತಲೆ ಕೆಡಿಸಿಕೊಳ್ಳುವ ಮನಸ್ಸು ಈಗ ಇರಲಿಲ್ಲ . ಜೀವನದ ವಿಷಣ್ಣ ದುಃಖ , ಅದರ ಬೇಟೆ , ಅದರ ಕ್ರೌರ್ಯ ಎಲ್ಲವೂ ಈಗ ಅವರನ್ನು ಹಿಸುಕತೊಡಗಿದವು. ಬಂದವರೆಲ್ಲ ಹೊರಟುಹೋದರು. ಮುಂದಿನ ಕ್ರಮಗಳಿಗಾಗಿ ಅಧಿಕಾರಿಗಳು ಸಜ್ಜಾದರು. ತೋಪಮ್ಮ ಯಾವ ಮಾತನ್ನೂ ಆಡದಂತೆ ತೀವ್ರತರ ಮೌನಿಯಾಗಿ ಆದದ್ದೆಲ್ಲ ಆಗೇ ಬಿಡಲಿ ಎಂಬ ಅಚಲ ಸ್ಥಿತಿಯಲ್ಲಿ ವ್ಯಾನು ಹತ್ತಿದ್ದಳು. ಚಿಲ್ರೆಯು ಲೆಕ್ಕ ಹಾಕುತ್ತಾ ನಾಳೆ ಬೆಳಿಗ್ಗೆ , ಕಬ್ಬಿನ ಗದ್ದೆಯಲ್ಲಿ ಬಚ್ಚಿಟ್ಟಿರುವ ಐದು ಮೂಟೆ ಬತ್ತವನ್ನು ಹೊಂಗನೂರಿನ ಸಾಬರಿಗೆ ಮಾರಿ ; ಇವರನ್ನೆಲ್ಲ ಜಾಮೀನಿನ ಮೇಲೆ ಬಿಡಿಸಿಕೊಂಡು ಬರೋಣ ಎಂದು ತೀರ್ಮಾನಿಸುತ್ತಿದ್ದ. ಕಳೆದ ರಾತ್ರಿಯ ಇದೇ ಹೊತ್ತಿನಲ್ಲಿ ಅವರೆಲ್ಲ ಕುಡುಲು ತಟ್ಟಿಸಲು ಓಡಾಡುತ್ತಿದ್ದ ಕ್ಷಣಗಳೀಗ ಅಲ್ಲಿ ಮೆಲ್ಲನೆ ಸುಳಿದಾಡುತ್ತಿದ್ದವು. ಬೆಳಕು ಮೂರ್ಛೆ ರೋಗಿ ಎಚ್ಚೆತ್ತು ಎದ್ದಂತೆ ಕೇರಿಯ ಮೇಲೆ ಇಳಿಯತೊಡಗಿತು. ಜನ ಕುಂತಲ್ಲೇ ಕುಳಿತು ಬೀಡಿ ಹಚ್ಚಿ ಏನೂ ಆಗಿಲ್ಲ ಎಂಬಂತೆ ಕುಳಿತಿದ್ದರು. ಕಾಗೆಗಳು ವರಗುಟ್ಟುತ್ತಿದ್ದವು. ಆ ರಾತ್ರಿ ಅವರೆಲ್ಲ ಊಟವಿಲ್ಲದೆ ಮಲಗಿದ್ದರಿಂದ ಅವರ ಹೊಟ್ಟೆ ಸಂಕಟವು ಎಳೆಬಿಸಿಲಿಗೆ ವಿಚಿತ್ರ ಅಪಮಾನದ ಎಳೆಗಳನ್ನು ಬಿಡುತ್ತಿತ್ತು . ಕೂಲಿಗೆ ಯಾರಾದರೂ ಕರೆಯುತ್ತಾರೆಂದು ಎಣಿಸಿದರೂ ಕೂಡ ಮೇಲುಕೇರಿಯವರು ಕೂಲಿಗೆ ಕರೆಯುವುದನ್ನು ಇದೆಲ್ಲ ನಡೆದಾದ ಮೇಲೆ ಬಿಟ್ಟು ಬಿಟ್ಟಿದ್ದರು. ಆ ರಾತ್ರಿಯೇ ಅವರು ತೀರ್ಮಾನಿಸಿಕೊಂಡಂತೆ ಇವರಿಗೆ ಬುದ್ಧಿ ಕಲಿಸಬೇಕೆಂದು ಒಂದು ಬಗೆಯ ಆರ್ಥಿಕ ದಿಗ್ಬಂಧನವನ್ನು ಹೇರಿದ್ದರು. ಊರು ಎಳೆ ಬಿಸಿಲಿಗೆ ಮೆಲ್ಲಗೆ ಮೈ ಸಡಿಲ ಮಾಡಿಕೊಳ್ಳುತ್ತಿತ್ತು. ಹೆಂಗಸರು ಮನೆಯ ತುಂಬ ತುಂಬಿಕೊಂಡ ಒಡೆದ ಮಡಕೆ ಚೂರುಗಳನ್ನು ಆಯ್ದು ಹೊರಹಾಕುತ್ತಿದ್ದರು. ಸುಮಾರು ಹೊತ್ತು ಕಳೆಯಿತು. ಇಡೀ ಊರು ಮೌನವಾಗಿತ್ತು. ಆಷ್ಟರಲ್ಲಿ ಪೇಟೆಯಿಂದ ಪೇದೆಯೊಬ್ಬ ಕೇರಿಗೆ ಬಂದ. ಜನ ಹೆದರಿದರು. ಈ ಪೇದೆ ಬತ್ತ ಕೊಯ್ಯುವಾಗ ರಕ್ಷಣೆಗೆಂದು ಬಂದವನಾಗಿದ್ದ. ಅವರಿವರನ್ನೂ ಕರೆದ. ಜಗುಲಿಯೊಂದರಲ್ಲಿ ಕುಳಿತರು. ಕಾತರ ಭಯ ನಾಚಿಕೆಗಳಿಂದ ಜನ ಏನೆಂದು ಕೇಳಿದರು. ಆ ರಾತ್ರಿ ವ್ಯಾನಿನಲ್ಲಿ ಅರೆಸ್ಟ್ ಮಾಡಿಕೊಂಡು ಹೋದವರಲ್ಲಿ ತೋಪಮ್ಮ ಯಾವುದೋ ರೀತಿಯಲ್ಲಿ ವ್ಯಾನಿನಿಂದ ಇಳಿದು ಕಣ್ಮರೆಯಾಗಿದ್ದಳಂತೆ. ಆಕೆ ಹೀಗೆ ತಪ್ಪಿಸಿಕೊಳ್ಳುವ ಚಾಣಾಕ್ಷತೆಯನ್ನು ಅಧಿಕಾರಿಗಳು ಕಂಡು , ಆಕೆ ಇನ್ನಾವ ವಿಪರೀತ ತೊಂದರೆ ತಂದೊಡ್ಡುವಳೋ ಎಂದು ಕಂಗಾಲಾಗಿ ಈ ತಕ್ಷಣವೇ ಅವಳನ್ನು ಹುಡುಕಿ ಹಿಡಿದು ತರಬೇಕೆಂದು ಈಗ ಈ ಪೇದೆಯನ್ನು ಊರಿಗೆ ಕಳಿಸಿದ್ದರು. ಪೇದೆಯು ಮನಸ್ಸಿಲ್ಲದ ಮನಸ್ಸಿನಲ್ಲಿ ಬಂದು ಈ ರೇಜಿಗೆಗೆ ಮನನೊಂದು ತೋಪಮ್ಮ ಬಂದಿದ್ದರೆ ಕಳುಹಿಸಿಕೊಡಿ ಎಂದು ಕೇಳುತ್ತಿದ್ದ. ಬೆಂಗಳೂರಿನಲ್ಲಿ ಇರುವ ಆ ಓದೋ ಹುಡುಗನ ಬಗ್ಗೆ ಅಧಿಕಾರಿಗಳು ಏನು ಬೇಕಾದರೂ ಮಾಡಬಲ್ಲರೆಂದು ಹೇಳುತ್ತಿದ್ದ. ಒಂದು ರೀತಿ ಕೇರಿಯವರ ಪರವಾಗಿ ಅವನ ಅನುಕಂಪ ಇತ್ತು. ಚಿಲ್ರೆಯು ಆತನ ಮಾತನ್ನು ಆಲಿಸಿ ‘ ಈ ಜನಗೋಳ್ ನೋವ್ಗೆ ನೀವ್ಯಾಕೆ ಬೇಜಾರ್ ಮಾಡ್ಕಂಡೀರಿ ಬುಡಿ ಸ್ವಾಮಿ, ನಮ್ ನೋವ ನಾವೆ ಹಣ್‌ಮಾಡ್ಕ ತಿಂತೀವಿ ’ ಎನ್ನುತ್ತಿದ್ದ. ಜನರೆಲ್ಲ ಈಗಿನ ಈ ಪರಿಸ್ಥಿತಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುವ ಶಕ್ತಿಯನ್ನು ಪಡೆದುಕೊಂಡಿರಲಿಲ್ಲ. ಬತ್ತ ಎಂಬ ಮಾಯಾಂಗನೆ ಅವರೆಲ್ಲರ ಎದುರು ನರ್ತಿಸಿ ಏನೆಲ್ಲ ಮಾಡಿಬಿಡುತ್ತಾಳೆಂದು ತರ್ಕಿಸುವ ಸ್ಥಿತಿಯಲ್ಲಿ ಈಗವರು ಅಲ್ಲಲ್ಲೇ ಸ್ತಬ್ಧರಾಗಿ ಕೈಊರಿ ಕುಳಿತಿದ್ದರು. ಸುಸ್ತು ಸಂಕಟ ಹಸಿವು ಅವಮಾನ , ನೀರಸ ಕ್ಷಣಗಳು , ವ್ಯರ್ಥಗೊಳ್ಳುವ ಅವರೆಲ್ಲರ ಕನಸುಗಳು . ಈಗಲ್ಲಿ ಸುಮ್ಮನೆ ಸುಳಿದಾಡುತ್ತ ಅವರನ್ನೇ ಸಂತೈಸುವಂತೆ ಓಡಾಡುತ್ತಿದ್ದವು. ತೋಪಮ್ಮ ಇಲ್ಲಿಗೆ ಬಂದಿಲ್ಲವೆಂದು ತಿಳಿದು ಪೇದೆ ವಾಪಸ್ಸು ಹೊರಟುಹೋದ. ಈಗ ತೋಪಮ್ಮ ಇಡೀ ಕೇರಿಗೆ ಒಬ್ಬ ಅಸಾಧಾರಣ ಶಕ್ತಿಯಂತೆ ಕಾಣಲ್ಪಟ್ಟಳು. ಜನ ಅವಳ ಬರುವಿಕೆಗಾಗಿ ಮಾತ್ರ ತಮ್ಮ ಕನಸು ಮನಸುಗಳಲ್ಲಿ ಲೆಕ್ಕ ಹಾಕತೊಡಗಿದರು. ಸಮಯ ಹೊರಳುತ್ತಿತ್ತು. ಜನ ಅಲ್ಲಲ್ಲಿ ಕರಗುತ್ತಿದ್ದರು. ಆ ನಡುವೆ ಮಾಯಮ್ಮನ ಮೊಮ್ಮಗ ಹಸಿವು ತಾಳಲಾರದೆ , ಇನ್ನೂ ಒಲೆ ಮುಂದೆ ಚೆಲ್ಲಿಕೊಂಡು ಬಿದ್ದಿದ್ದ ಬೇಯಿಸಿದ ಬತ್ತವನ್ನು ಬಾಯಿಗೆ ತುಂಬಿಕೊಂಡು ಅಗಿದಗಿದು ಅರೆಯುತ್ತ ಅರೆಯುತ್ತ ರಸಹೀರುತ್ತ ಆ ಬೆಂದ ಬತ್ತದ ಅಕ್ಕಿ ರುಚಿಯು ಕುಡಿಯುತ್ತ ಹೊಟ್ಟು ಉಗಿಯುತ್ತ ಎಲ್ಲವನ್ನೂ ಜೀರ್ಣಿಸಿಕೊಳ್ಳುತ್ತೇನೆ ಎಂಬಂತೆ ನಿರಾತಂಕವಾಗಿ ತಿನ್ನುತ್ತಿದ್ದ. ಅವನ ಕಟಬಾಯಲ್ಲಿ ಬತ್ತದ ರಸ ಹರಿಯುತ್ತಿತ್ತು. ಇಡೀ ಊರು ಅಗಾಧವಾದ ಮೌನದಲ್ಲಿ ಏನೆಲ್ಲವನ್ನು ತನ್ನೊಳಗೆ ತುಂಬಿಕೊಂಡು ಯಾರ್‍ಯಾರಿಗೋ ಕಾಯುತ್ತಿರುವಂತೆ ಕಾಣುತ್ತಿತ್ತು. ಕೆರೆ ಬಯಲ ಕಡೆಯಿಂದ ಗಾಳಿ ಬೀಸುತ್ತ ಆ ಜನರ ಮೇಲೆ ಹಾಯ್ದು ಬರುತ್ತಿತ್ತು. ಕಾಲ ಎಂಬುದು ತನ್ನೆಲ್ಲ ಸ್ಥಿತಿಗರ್ಭದ ಸತ್ಯಗಳನ್ನು ಹೊತ್ತುಕೊಂಡು ಈಗ ಬೆಳೆಯುತ್ತಲೇ ಇತ್ತು.
ವ್ಯಾಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ