ನವಿಲುಗಳು

ಬೆಂಗಳೂರಲ್ಲಿ ಮನೆ ಕಟ್ಟಿಸಿದೆ; ಫೋನ್ ಹಾಕಿಸಿದೆ; ಎರಡು ಮಕ್ಕಳನ್ನೂ ಒಳ್ಳೆ ಸ್ಕೂಲಿಗೆ ಸೇರಿಸಿದೆ. ಇವುಗಳಿಂದಾಗಿ ಸಿಕ್ಕಿಬಿದ್ದಿರುವ ನಾನು ಸಿಟ್ಟು ಬಂದಾಗೆಲ್ಲ ‘ಹೋಗಯ್ಯ’ ಎಂದು ಕೆಲಸಕ್ಕೆ ರಾಜಿನಾಮೆ ಕೊಟ್ಟ ಅಪ್ಪನಂತೆ ಬದುಕಲಾರೆ. ನಾನು ಕೆಲಸಕ್ಕೆ ಸೇರುವ ತನಕ ಅಮ್ಮ ರೇಷ್ಮೆಸೀರೆ ಕಂಡಿರದದ್ದಕ್ಕೆ, ನಾವು ಅರ್ಧ ಹೊಟ್ಟೆಯಲ್ಲೆ ಬೆಳೆದದ್ದಕ್ಕೆ, ವಯಸ್ಸಾದಾಗ ಅಪ್ಪ ನಮ್ಮ ಗೌರವ ಕಳೆದುಕೊಂಡದ್ದಕ್ಕೆ, ಅಪ್ಪನ ಈ ಸ್ವಾತಂತ್ರ್ಯಪ್ರಿಯತೆ, ಹಠಮಾರಿತನಗಳೂ ಬಹು ಮುಖ್ಯ ಕಾರಣ. ನೋಡಲು ಅಪ್ಪನಂತಿದ್ದರೂ ಸ್ವಭಾವದಲ್ಲಿ ನಾನು ಬೇರೆ. ಆದರೂ ಹೆಂಡತಿಯ ಜೊತೆ ಜಗಳವಾಡುವುದಕ್ಕೆ ಮುಂಚೆ ಅಪ್ಪನ ಅವಗುಣಗಳನ್ನು ಮರೆತು ಬೇಕೆಂದೇ ಅವರ ಸ್ವಾಭಿಮಾನವನ್ನು ಹೊಗಳುತ್ತೇನೆ. ಅರ್ಥಾತ್ ನಿನ್ನಿಂದಾಗಿ ನನ್ನಲ್ಲಿ ಅಪ್ಪನ ಈ ಗುಣ ಇಲ್ಲದಂತಾಯ್ತು ಎನ್ನೋದನ್ನ ಪರೋಕ್ಷವಾಗಿ ಅವಳಿಗೆ ಮನದಟ್ಟು ಮಾಡುತ್ತೇನೆ. ಎಲ್ಲ ಸೌಕರ್ಯಗಳನ್ನೂ ಮಕ್ಕಳಿಗಾಗಿ, ಹೆಂಡತಿಗಾಗಿ ಸಂಪಾದಿಸಲು ಮಾಡಬೇಕಾದ್ದನ್ನೆಲ್ಲ ಮಾಡಿ, ಕೊನೆಯಲ್ಲಿ ಹೆಂಡತಿಯನ್ನೆ ದೂರಿ, ನೀನು ಮೆಚ್ಚುವ ಈ ಸಾಮಾಜಿಕ ಪ್ರತಿಷ್ಠೆ ಕಸದ ಸಮ ಎಂದು ಅಟ್ಟಹಾಸದಿಂದ ಕೂಗಾಡಿ ನನ್ನ ಆತ್ಮಕ್ಕಷ್ಟು ಬೆಚ್ಚಗೆ ಶಾಖ ಕೊಟ್ಟುಕೊಳ್ಳುತ್ತೇನೆ.

ಆದರೆ ನಾನು ಎಂಥ ದುರ್ಬಲ ಮನುಷ್ಯನೆಂದರೆ ಹೆಂಡತಿಗೆ ಹೀಗೆ ನನ್ನನ್ನು ರೂಪಿಸಲು ಪ್ರೇರಣೆ ಕೊಡುವವನೂ ನಾನೇ. ಮದುವೆಯಾಗುವಾಗ ತೆಳ್ಳಗೆ ಉದ್ದಗೆ ಕಾಣುತ್ತಿದ್ದ ಅವಳಿಗೆ ಈ ಎಲ್ಲ ಆಸೆಯಿರಲಿಲ್ಲ: ಯಾವ ಹೆಣ್ಣಿಗೂ ಇರಲ್ಲ. ಪ್ರಾಯಶಃ ಅವಳು ನನ್ನನ್ನು ಉಪಯೋಗಿಸಿಕೊಂಡಳು ಎನ್ನುವುದಕ್ಕಿಂತ ಹೆಚ್ಚಿನ ಸತ್ಯ ನಾನೇ ಅವಳನ್ನು ಹೀಗೆಲ್ಲ ನನ್ನಿಂದ ಮಾಡಿಸಿಕೊಳ್ಳುತ್ತ ಹೋದೆ ಎಂಬುದೇ ಯಾಕಿರಬಾರದು? ಮನುಷ್ಯನ ಮನಸ್ಸಿಗಿರುವ ದ್ರೋಹದ ಸಾಧ್ಯತೆ ಆಗಾಧವಾದ್ದು.

ಇವೆಲ್ಲ ನನಗೆ ಗೊತ್ತಾಗುತ್ತೆ. ಗೊತ್ತಾದರೂ ಇರುವಂತೆಯೇ ಇರುತ್ತೇನೇ ಹೊರತು ಬದಲಾಗಲ್ಲ. ಯಾರೂ ಬರಿಯ ತಿಳುವಳಿಕೇಂದ ಬದಲಾಗಲ್ಲ.
ನಾನು ಬಾಲಕನಾಗಿದ್ದಾಗ ಪರಿಶುದ್ಧನಾಗಿದ್ದೆ ಎಂದು ಕೆಲವೊಮ್ಮೆ ಅಂದುಕೊಳ್ಳುತ್ತೇನಲ್ಲ ಅದು ನಿಜವೋ ಸುಳ್ಳೋ ನನಗೆ ತಿಳಿಯುವ ಆಸೆ. ನನ್ನ ಹೆಂಡತಿ ಜೊತೆ ಇವನ್ನೆಲ್ಲ ಚರ್ಚಿಸಲಾರೆ. ನಾನು ದುಂದು ಖರ್ಚು ಮಾಡದಂತೆ, ನಿತ್ಯ ಕುಡಿಯದಂತೆ, ಆರೋಗ್ಯ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳೋದರಲ್ಲೆ ಅವಳ ಶಕ್ತಿ ವ್ಯಯವಾಗುತ್ತೆ. ‘ನೀನಿಲ್ಲದಿದ್ದರೆ ನಾನು ಉದಾತ್ತನಾಗಿರುತ್ತಿದ್ದೆ, ಸಾಹಸಿಯಾಗುತ್ತಿದ್ದೆ, ಕವಿಯಾಗುತ್ತಿದ್ದೆ’ ಇತ್ಯಾದಿ ನನ್ನ ಅಂತರ – ಪಿಶಾಚತ್ವದ ವ್ಯಸನಗಳನ್ನೆಲ್ಲ ಕತ್ತರಿಸಲು ನಾಲಗೆಯನ್ನು ಇನ್ನಷ್ಟು ಹರಿತ ಮಾಡಿಕೊಳ್ಳುತ್ತ ಹೋಗುವ ಯತ್ನದಲ್ಲೆ ಅವಳು ತಾನು ಹುಡುಗಿಯಾಗಿದ್ದಾಗಿನ ಲವಲವಿಕೆಯನ್ನೆಲ್ಲ ಕಳೆದುಕೊಂಡಿದ್ದಾಳೆ. ನಮ್ಮ ಜಗಳ ಹೇಗಿರುತ್ತದೆಂದರೆ ಆಡುತ್ತ ಆಡುತ್ತ ಇಬ್ಬರೂ ಹಲ್ಕಗಳಾಗುತ್ತೇವೆ. ಇಬ್ಬರಿಗೂ ಫೋನು, ಮನೆ, ಕಾರು ಇತ್ಯಾದಿಯ ಬಗ್ಗೆ ರೋಸಿ ಹೋಗಿರುತ್ತೆ, ಅವಳಿಗೂ ಗೊತ್ತು: ನಾನು ಅವಳ ಜೊತೆ ಜಗಳವಾಡುವುದೆಲ್ಲ ಒಂದು ಬಗೆಯ ಆತ್ಮಹಿಂಸೆ ಅಂತ. ಅವಳಿಗೆ ನನ್ನ ಬಗ್ಗೆ ಕನಿಕರ ಹುಟ್ಟಿದ ದಿನ ನಾನು ಬರಿ ಹೊಗೆ ತುಂಬಿದ ಒಲೆಯಾಗಿಬಿಟ್ಟಿರುತ್ತೇನೆಂದು ನನಗೆ ದಿಗಿಲು. ನನಗಿಂತ ಬಡವನಾದ ಯಾರನ್ನಾದರೂ ಅವಳು ಪ್ರೀತಿಸಿದ್ದೇ ಆದಲ್ಲಿ ನನಗೆ ಅವಳ ಬಗ್ಗೆ ಗೌರವ ಹುಟ್ಟುತ್ತಿತ್ತೋ ಏನೋ. ಆದರೆ ಯಾರೂ ಪ್ರೀತಿಸಲಾರದಂತೆ ನಾವು ಒಬ್ಬರನ್ನೊಬ್ಬರು ಅಸಹ್ಯಪಡಿಸಿಕೊಂಡಿದ್ದೇವೆ.

ನಾನು ಬಾಲಕನಾಗಿದ್ದಾಗ ಪವಿತ್ರನಾಗಿದ್ದೆನೆ ಎಂದು ತಿಳಿಯಲು ಆಸೆಯಾಗುತ್ತೆ ಎಂದನೆಲ್ಲ, ಯಾವಾಗ ಹಾಗನ್ನಿಸುತ್ತೆ ಎಂದರೆ ನನ್ನ ಹೆಂಡತಿ ಯಾವಾಗಲೋ ಒಮ್ಮೊಮ್ಮೆ – ಈಚೆಗೆ ಅದೋ ಕಮ್ಮಿ – ಹಾಡುತ್ತ ಕೂತಾಗ. ಬಹಳ ಮಧುರವಾಗಿ ಹಾಡುತ್ತಾಳೆ. ಆಗ ನನಗೆ ಸಂಕಟವಾಗುತ್ತೆ. ಯಾಕೆ ಇಬ್ಬರೂ ಒಬ್ಬರನ್ನೊಬ್ಬರು ಹೀಗೆ ಗಲೀಜು ಮಾಡಿಕೊಂಡೆವು ಅನ್ನಿಸುತ್ತೆ. ಅಥವಾ ಹೀಗೂ ಇರಬಹುದೆ? ಒಳ್ಳೆ ಕಂಠವಿದೆ, ಅದು ಶಬ್ದ ಮಾಡತ್ತೆ, ಹಾಡಾಗಿ ನನ್ನ ಕಿವಿ ಸೇರತ್ತೆ – ಹೊರತಾಗಿ, ಅವಳ ಸಂಗೀತ ಸೂಚಿಸುವಂಥದ್ದು ನಿಜವಾಗಿಯೂ ಅವಳ ಒಳಗಿಲ್ಲದಿದ್ದರೆ?

ಜೀವದ ಬೇರು ಅಲುಗಿಸುವಂಥದ್ದು ಏನೂ ಆಗುತ್ತಿಲ್ಲವಲ್ಲ ಎನ್ನುವ ನನ್ನ ಈ ದುಃಖವೂ ನನ್ನ ಜೀವನ ಕ್ರಮದ ದ್ರಾಬೆತನವನ್ನು ಮುಚ್ಚಿಕೊಳ್ಳಲೆಂದೋ, ಅಥವಾ ಇನ್ನಷ್ಟು ಪ್ರತಿಷ್ಠಿತ ವ್ಯಕ್ತಿಯಾಗಲು ಅವಶ್ಯವಾದ ಅಹಂಕಾರವನ್ನು ಜೀವಂತವಾಗಿ ಉಳಿಸಿಕೊಳ್ಳಲೆಂದೊ ನಾನು ಹೂಡಿರುವ ಉಪಾಯವಾಗಿದ್ದರೆ? ಈ ಮನೋಸೂಕ್ಷ್ಮದಿಂದ ಕೋಧ ಏನೂ ಪ್ರಯೋಜನವಿಲ್ಲ. ಯಾಕೆಂದರೆ ನಾನು ಇದ್ದಂತೆಯೇ ಇರುತ್ತೇನೆ. ಮಾಡೋದನ್ನೆಲ್ಲ ಮಾಡುತ್ತಲೇ ಹೋಗುತ್ತೇನೆ. ಆಫೀಸಿನಲ್ಲಿ ನನ್ನನ್ನು ನೋಡಿದರೆ ಗೊತ್ತಾಗುತ್ತೆ; ಎಷ್ಟು ಸಭ್ಯ, ಎಷ್ಟು ಪ್ರಾಮಾಣಿಕ, ಜವಾನರ ಬಗ್ಗೆಯೂ ಎಷ್ಟು ಕರುಣೆ – ಆದರೆ ಎಲ್ಲ ಮೇಲಕ್ಕೇರುವ ಉಪಾಯ.

ಯಾಕೆ ಮೇಲಕ್ಕೇರಬಾರದು? ನನ್ನ ಬಗ್ಗೆ ನಾನು ಅಸಹ್ಯಪಟ್ಟುಕೊಳ್ಳುವ ಈ ಮನೋಸೂಕ್ಷ್ಮ ಒಳ್ಳೆಯ ಊಟವನ್ನು ಜೀರ್ಣಿಸಿಕೊಳ್ಳುತ್ತ ಕಣ್ಣುಮುಚ್ಚಿ ಕೂತಾಗ ಇರಲ್ಲವಲ್ಲ. ಆದರೆ ನಾನು ಸುಖಿ ಕೂಡ ಅಲ್ಲವಲ್ಲ.

ಹೀಗೆ ಎಡಬಿಡಂಗಿಯಾಗಿಬಿಟ್ಟ ನನಗೆ ಕೊನೆ ಪಕ್ಷ ಬಾಲಕನಾಗಿದ್ದಾಗ ತತ್ಪರತೆ ಸಾಧ್ಯವಿತ್ತೆ ಎಂದು ಹಂಬಲಿಸುತ್ತೇನೆ. ಅಪ್ಪ ಸತ್ತು ಆರು ವರ್ಷವಾಯ್ತು. ಶ್ರಾದ್ಧಕ್ಕೆಂದು ಹಳ್ಳಿಗೆ ಹೋಗಿದ್ದೆ. ಅಮ್ಮ ಹಳ್ಳಿಯಲ್ಲೆ ಇದ್ದಾಳೆ. ನನ್ನ ಜೊತೆ ಬಂದಿರಲು ಒಪ್ಪಲಿಲ್ಲ. ‘ನನಗೆ ಇಲ್ಲೇ ಸುಖ’ ಎಂದು ಅಮ್ಮ ಹೇಳಿದ್ದನ್ನು ನನ್ನ ಹೆಂಡತಿ ಮೊದಲು ಒಪ್ಪದಂತೆ ನಟಿಸಿ, ಅಮ್ಮನಿಂದ ‘ಇಲ್ಲ, ನಿಜವಾಗಿ, ನಾನ್ಯಾಕೆ ನಿಮ್ಮ ಸುಖಕ್ಕೆ ಅಡ್ಡಿಯಾಗಬೇಕು’ ಇತ್ಯಾದಿ ನಮ್ಮನ್ನು ನೋಯಿಸುವ ಬೋಗಾರು ದುಃಖದ ಮಾತನ್ನಾಡಿಸುವಂತೆ ಜುಲುಮೆ ಮಾಡಿ, ತನ್ಮೂಲಕ ನನಗೆ ಮುಜುಗರವಾಗದಂತೆ ಅಮ್ಮ ಸ್ವಂತ ಇಚ್ಛೆಯಿಂದಲೇ ಹಳ್ಳಿಯಲ್ಲಿರಬೇಕು – ಹೀಗೆ ಏಪಾರ್ಟು ಮಾಡಿದ ನನ್ನ ಹೆಂಡತಿಯ ಘಾಟಿತನ ಕೂಡ ನನ್ನಿಂದಲೇ ಅವಳು ಕಲಿತಿದ್ದಿರಬಹುದು. ನನಗೆ ಹೇಸಿಗೆಯಾದರೂ, ಬೇಕೆನ್ನಿಸುವುದನ್ನು ಅವಳು ಸಾಧಿಸುವ ಕ್ರಮ ಹೀಗೆ. ಡ್ರಿಂಕ್ಸ್ ಕೊಡಬೇಕು; ಇತ್ಯಾದಿಗಳೆಲ್ಲ ಅಮ್ಮ ಮನೇಲಿ ಬಂದಿದ್ದರೆ ಕಷ್ಟ ಎಂದು ಇವಳಿಗೂ ಗೊತ್ತು, ಅಮ್ಮನಿಗೂ ಗೊತ್ತು – ಎಂದು ನನಗೂ ಗೊತ್ತು. ಒಟ್ಟಿನಲ್ಲಿ ಬೆಳೀತ ಬೆಳೀತ ನಾನು ಪಡಪೋಸಿಯಾಗಿಬಿಟ್ಟೆ. ಈ ಆತ್ಮಜ್ಞಾನದಿಂದಲೂ ಪ್ರಯೋಜನವಿಲ್ಲೆಂದು ನಾನು ಮತ್ತೆ ಹೇಳಬೇಕಾಗಿಲ್ಲ. ನನ್ನ ಬಾಸ್ ಇಂಥ ವಿಮರ್ಶೆಯನ್ನು ಮಾಡಿಕೊಳ್ಳುತ್ತ ವ್ಹಿಸ್ಕಿ ಚಪ್ಪರಿಸಿದ್ದೇವೆ – ಗೋಲ್ಫ ಕ್ಲಬ್ಬಿನಲ್ಲಿ.

ಅಪ್ಪನ ಶ್ರಾದ್ಧಕ್ಕೆಂದು ಹಳ್ಳಿಗೆ ಹೋಗಿದ್ದವನು ಹೆಂಡತಿ ಮಕ್ಕಳನ್ನು ಮನೆಯಲ್ಲೆ ಬಿಟ್ಟು ಬಾಲಕನಾಗಿದ್ದಾಗ ನಾವಿದ್ದ ಹದಿನೈದು ಮೈಲಿಯಾಚೆಯ ಹಳ್ಳಿಗೆ ಕಾರು ಬಿಟ್ಟುಕೊಂಡು ಹೋದೆ. ಇವತ್ತಿಗೂ ಬದಲಾಗದ ಕಾಡೊಳಗಿನ ಧೂಳು ರಸ್ತೆಯಲ್ಲಿ ಶರದೃತುವಿನ ಬೋಳು ಮರಗಳನ್ನು, ಕೆಂಪು ಹೂಗಳನ್ನು ಕುತೂಹಲದಿಂದ ನೋಡುತ್ತ ಅವಸರವಿಲ್ಲದೆ ಡ್ರೈವ್ ಮಾಡಿದೆ. ಎಂಟೋ ಹತ್ತೋ ವರ್ಷಗಳ ಹುಡುಗನಾಗಿದ್ದಾಗ ನಡೆದ ಒಂದು ಘಟನೆ ನೆನಪಾಗಿ ಕೇಳಿದಾಗ ಆಗುವಂತೆ ಸಂಕಟವಾಯಿತು.

ಅಮ್ಮನಿಗೆ ಖಾಹಿಲೆ – ಒಣಗಿದ ಗಂಜಿ ಬಟ್ಟಲು, ಔಷಧಿ ಸೀಸೆಗಳ ಮಧ್ಯೆ ಸದಾ ಮಲಗೇ ಇರುತ್ತಿದ್ದಳು. “ಕಿಟ್ಟು ನಿನ್ನ ಅಪ್ಪಯ್ಯ ಏನು ಮಾಡ್ತಿದಾರೆ ನೋಡಿ ಓಡಿ ಬಾ” ಎಂದು ಒಂದು ಭಾನುವಾರ ನರಳುತ್ತ ಗೊಣಗಿದಳು. ಅಮ್ಮನ ಜೊತೆ ಆಗ ಅಜ್ಜಯ್ಯ ಅಜ್ಜಿ ಇದ್ದರು. ಸಾಯಂಕಾಲವಾದೊಡನೆ ಮುಂಡಾಸು ಸುತ್ತಿ ತಾಳ ಮದ್ದಲೆಗೆ ಕೂರುತ್ತಿದ್ದ ಅಜ್ಜಯ್ಯ. ಒಗೆದ ಅಂಗಿ ಚಡ್ಡಿ ಹಾಕಿಕೊಂಡು ಹೊರಟುಬಿಟ್ಟೆ. ಅಪ್ಪಯ್ಯನನ್ನು ನೋಡಿ ಬಾ ಎಂದರೆ ಹಲಸಿನ ಊರಿಗೆ ಬಾ ಅಂತ. ಅಪ್ಪಯ್ಯ ಹಲಸಿನ ಊರಿನ ಗೋವಿಂದರಾಯರ ಮನೇಲಿ ಲೆಖ್ಖಪತ್ರ ನೋಡಲು ಹೋಗುತ್ತಿದ್ದರು. ಗೋವಿಂದರಾಯರು ಅವರ ಸ್ನೇಹಿತರು. ಅಪ್ಪ ಜಗಳವಾಡಿ ಕುಂಸಿಯ ಪೋಸ್ಟ್‌ಮಾಸ್ಟರಿಕೆ ಬಿಟ್ಟಿದ್ದ ಕಾಲ ಅದು.

ಕಾಲೆದುರು ಸಿಕ್ಕಿದ ಕಲ್ಲನ್ನು ಹಾರಿಸುತ್ತ, ಅದು ಹಾರಿದ ದಿಕ್ಕಿಗೆ ಓಡುತ್ತ ಹೋದನೆಂದು ಕಾಣುತ್ತೆ. ಚೆನ್ನಾಗಿ ನೆನಪಿರೋದು: ನಡುವೆ ಶಾಲೆ ಸಿಕ್ಕಿತು ಎಂದು. ಶಾಲೆಯ ಮಣ್ಣು ಜಗುಲಿಯ ಮೇಲೆ ನುಣುಪಾದ ಧೂಳು. ಈ ಧೂಳಿನಲ್ಲಿ ಪುಟಾಣಿ ಗುಂಡಿಗಳನ್ನು ಮಾಡಿ ಅಡಗಿದ ಗುಬ್ಬಚ್ಚಿ ಎನ್ನೋ ಹುಳ. ಈ ಹುಳವನ್ನು ಕೈಮೇಲೆ ಬಿಟ್ಟುಕೊಂಡರೆ ಅದು ಓಡಾಡುವಾಗ ಸುಖವಾದ ಕಚಗುಳಿ. ಪುಟಾಣಿ ಗುಂಡಿಯ ಸುತ್ತ ಬೆರಳಿನಿಂದ ಕೆದಕುತ್ತ ನಾವು ಬಾಲಕರು. “ಕಾಶೀಗ್ಹೋಗೋ ದಾರಿ ತೋರ್ಸು, ಕಾಶೀಗ್ಹೋಗೋ ದಾರಿ ತೋರ್ಸು” ಎಂದರೆ ಕಂದು ಬಣ್ಣದ ದಪ್ಪ ಚರ್ಮದ ಗುಬ್ಬಚ್ಚಿ ಹುಳ ಹೊರಗೆ ಬಂದು ಹಿಂದೆ ಹಿಂದೆ ಹಿಂದೆ ನಡೀತಿದ್ದದ್ದನ್ನ ನೋಡೋದು ಬಹಳ ಖುಷಿ ನಮಗೆ.

ಗುಬ್ಬಚ್ಚಿ ಜೊತೆಗೆ ಆಡಿ ಮುಂದೆ ಹೋದೆ. ಕಾಡಲ್ಲಿ ಅನಾಮತ್ತಾಗಿ ಬಾಯಿ ತೆರೆದ ಅಬ್ಬರಿ. ಅಬ್ಬರಿ ತಳ ನೋಡಿ ಮುಂದೆ ಹೋದೆ. ಗದ್ದೆ ಸಿಕ್ಕಿತು. ಗದ್ದೆಯ ಬಲಕ್ಕೆ ನವಿಲು ಕಲ್ಲಿನ ಗುಡ್ಡ, ನವಿಲುಗಳು ಕೇಕೆ ಹಾಕೋದು ಬೆಳಿಗ್ಗೆ, ಸಂಜೆ, ರಾತ್ರೆ ನಮ್ಮ ಮನೆಯೊಳಕ್ಕೂ ಕೇಳಿಸುತ್ತ ಇದ್ದರೂ ಅಮ್ಮ ಅಲ್ಲಿಗೆ ಹೋಗಲು ಎಂದೋ ಬಿಟ್ಟೇ ಇರಲಿಲ್ಲ. ಅವು ಬಹಳ ಚಂದಾಗಿ ಕುಣಿಯುತ್ತವೆಂದು ಗರಿ ಮಾಡಲು ಬಂದ ಆಳೊಬ್ಬ ಹೇಳಿದ್ದ – ನವಿಲನ್ನು ತಿನ್ನೋ ಜಾತಿಯವ. ಸಾಯಂಕಾಲ ಗೋವಿಂದರಾಯರ ಮನೇಂದ ಹಿಂದಕ್ಕೆ ಬರೋವಾಗ ಮರದ ಬುಡದಲ್ಲಿ ಅವಿತುಕೊಂಡು ಕೂತು ನವಿಲು ಕುಣಿಯೋದನ್ನ ನೋಡೋದು; ಬಿದ್ದ ಗರೀನ್ನ ಎತ್ತಿಕೊಂಡು ಬಂದು ಮರೀ ಹಾಕಕ್ಕೆ ಪುಸ್ತಕದ ಒಳಗೆ ಇಡೋದು – ಅಮ್ಮನಿಗೆ ಗೊತ್ತಾಗದ ಹಾಗೆ – ಎಂದುಕೊಂಡು ಮುಂದೆ ಹೋದೆ.

ಇವತ್ತು ಕಾರನ್ನು ನಿಲ್ಲಿಸಿ ಆ ದಾರೀಲೇ ನನಗೆ ಪ್ರಿಯವಾಗಿದ್ದ ನೀಲಿಯಂಗಿ, ಪ್ಯಾಂಟ್ ತೊಟ್ಟು, ಕತ್ತಿಗೆ ಸಿಲ್ಕ್ ಸ್ಕಾರ್ಫನ್ನು ಸಡಿಲವಾಗಿ ಸುತ್ತಿಕೊಂಡು ನಡೆದೆ. ಗೋವಿಂದರಾಯರ ವಿಧವೆ ಜಾನಕಮ್ಮನ ನೋಡಿ ಹಿಂದಕ್ಕೆ ಬರೋವಾಗ ಮತ್ತೆ ನವಲು ಕಲ್ಲಿನ ಗುಡ್ಡಕ್ಕೆ ಹೋಗೋದು, ಹೊತ್ತಾಗಿ ಹೆಂಡತಿ ರೇಗಿದರೂ ಚಿಂತೆಯಿಲ್ಲ ಎಂದುಕೊಂಡೆ.

ಸಾರ ದಾಟಿದೆ. ಬೇಲಿ ದಾಟಿದೆ. ಕೆಂಪು ಹೂಗೊಂಚಲುಗಳು ಬಿಟ್ಟ ಗುಡ್ಡದ ದಾಸವಾಳದ ಗಿಡಗಳು ಈಗಲೂ ಇವೆ. ಒಗರು ಸಿಹಿ ಬೆರೆತ ಪುಟಾಣಿ ಹಣ್ಣುಗಳು ಬಿಡುವ ಗಿಡ. ಈ ಹಣ್ಣು ಕೆಂಪಾದರೆ, ಕಾಕೆ ಹಣ್ಣು ಕಪ್ಪು – ಬಲು ರುಚಿ. ಈಗ ಇಷ್ಟು ಕಾಕೆ ಹಣ್ಣುಗಳು ಗಿಡದಲ್ಲಿ ಉಳಿದಿರೋದು ನೋಡಿದರೆ ಪ್ರಾಯಶಃ ಆಸುಪಾಸಿನಲ್ಲಿ ಮಕ್ಕಳೇ ಇಲ್ಲವೆಂದು ಕಾಣುತ್ತೆ. ಜಾನಕಮ್ಮನಿಗೆ ಸಂತಾನವಿಲ್ಲದ್ದರಿಂದ ಚಿಕ್ಕಮಕ್ಕಳು ಎಲ್ಲಿ ಬರಬೇಕು?

ಹೆಂಚು ಹೊದೆಸಿದ ಸಾಮಾನ್ಯ ದೊಡ್ಡದಾದ ಮಹಡಿಮನೆ ಎಂದು ಈಗ ಅನ್ನಿಸೋದು. ಆಗ ಬೃಹದಾಕಾರದ ಮನೆ ಎನ್ನಿಸಿತ್ತು. ನಾನು ಅಲ್ಲಿ ರಾತ್ರೆ ಕೆಲವೊಮ್ಮೆ ಮಲಗಿರುತ್ತಿದ್ದಾಗ ಜಾನಕಮ್ಮ ಹೇಳುತ್ತಿದ್ದ ಭಟ್ಟಿವಿಕ್ರಮಾದಿತ್ಯನ ಕಥೆಗಳಿಗೆ ತಕ್ಕುದಾದ ಮನೆ. ದೆವ್ವದ ಕಥೆಗಳು ನಿಜವೆನ್ನಿಸುವ ಅಟ್ಟಗಳು. ಕತ್ತಲೇ ಮೂಲೆಗಳು, ನಾಗಂದಿಗೆಗಳು, ಚಿತ್ರ ಕೆತ್ತಿದ ತೊಲೆಗಳು ಆ ಮನೆಗಿದ್ದುವು. ಮಹಡಿ ಮೇಲೆ ಜಾನಕಮ್ಮ ಮಲಗುತ್ತಿದ್ದ ಕೋಣೆಯಂತೂ ರವಿವರ್ಮನ ಚಿತ್ರಗಳು, ದಪ್ಪ ಕಾಲಿನ ಅಗಲವಾದ ಎತ್ತರವಾದ ಮಂಚ, ಊದುಬತ್ತಿ, ಗಂಧದ ವಾಸನೆ – ಇತ್ಯಾದಿಗಳಿಂದಾಗಿ ಕಥಾನಾಯಿಕೆಯರು ನೂಲಿನೇಣಿಯಿಂದ ಚಂದದ ರಾಜಕುಮಾರನನ್ನು ಒಳಗೆ ಬಿಟ್ಟು ಕೊಳ್ಳುವ, ಅಥವಾ ಗುಪ್ತಪ್ರಣಯಿಯನ್ನು ಹಗಲೆಲ್ಲ ಗಿಣಿರೂಪದಲ್ಲಿ ಸಾಕಿಕೊಳ್ಳುವ ಶಯ್ಯಾಗಾರದಂತಿತ್ತು.

ಕುಣಿಯುತ್ತ ನಡುಮನೆಗೆ ಹೋಗಿ ಕಂಗಾಲಾದೆ. ಅಲ್ಲೊಂದು ಹೆಳವ ಮೂಕ ಹೆಂಗಸು. ಜೋತುಬಿದ್ದ ಗದ್ದದ ಬೆಳ್ಳಗಿನ ಅಗಲವಾದ ಮುಖ, ಈ ಮುಖದ ಗಾತ್ರಕ್ಕೆ ಪುಟ್ಟದೆನ್ನಿಸುವ ಮೂಗು, ಇಷ್ಟು ದೊಡ್ಡ ಕುಂಕುಮ, ತಲೆ ತುಂಬ ಗುಂಗುರು ಕೂದಲಿನ ರಾಶಿ – ಬೇ ಬೇ ಬೇ ಎಂದು ಅದು ಕೂಗಿತ್ತು. ಅದು ಯಾವತ್ತೂ ಅಲ್ಲೇ ನಡುಮನೆಯಲ್ಲೇ ಇರೋದು ಎಂದು ಗೊತ್ತಿದ್ದೂ ಹೆದರಿದ್ದೆ. ಜಾನಕಮ್ಮನ ನಾದಿನಿ, ಕಲ್ಯಾಣಿ – ಅದರ ಹೆಸರು. ಕಲ್ಯಾಣಿ ಹೆಳವಿ ಮೂಕಿಯಾದ್ದರಿಂದ ಗುಡ್ಡೆಕೊಪ್ಪದ ಚೊಟ್ಟೆ ಕೈಯ ನಾಗಪ್ಪನಿಗೆ ಶಾಸ್ತ್ರಕ್ಕೆಂದು ಎರಡನೇ ಹೆಂಡತಿಯಾಗಿ ಮದುವೆಯಾಗಿತ್ತು. ಮೂಲೆಯಲ್ಲೊಂದು ಬೋಗುಣಿಯಲ್ಲಿ ಒದ್ದೆ ಬಟ್ಟೆ. ಯಾವತ್ತೂ ಕಲ್ಯಾಣಿ ನಡುಮನೇನ್ನ ಒರೆಸುತ್ತ ತೆವಳುತಿರುತ್ತೆ. ಅಥವಾ ಮೂಲೆಯಲ್ಲಿ ಕೂತಿರುತ್ತೆ – ಸಿಂಬೆ ಸುತ್ತಿದ ಹಾವಿನ ಹಾಗೆ. ಅದರ ಈ ಕಾಯಕದ ಫಲವಾಗಿ ಸಿಮೆಂಟಿನ ನಡುಮನೆ ನೆಲ ಮುಖ ಕಾಣಿಸುವಂತೆ ಫಳಫಳ ಹೊಳೆಯುತ್ತಿರುತ್ತೆ. ಅವತ್ತು ಕಲ್ಯಾಣಿ ಬೇ ಬೇ ಬೇ ಎಂದು ಕೂಗಲು ಕಾರಣ ನನ್ನ ಧೂಳಿನ ಕಾಲುಗಳು. ನಾನು ಹೊರಗೆ ಹೋಗಿ ಕಾಲು ತೊಳೆದು ಒಳಗೆ ಬಂದೆ.

ಕಲ್ಯಾಣಿ ತೆವಳುತ್ತ ನನ್ನ ಹತ್ತಿರ ಬಂತು. “ಅಪ್ಪಯ್ಯ ಎಲ್ಲಿ” ಎಂದೆ. ಅದಕ್ಕೆ ಕೇಳಿಸದಿದ್ದರೂ ಗೊತ್ತಾಗಿರಬೇಕು. ಗೋಸುಂಬೆಯಂತೆ ಅದರ ಬಿಳುಚಿದ ಮುಖ ಕೆಂಪಾಯಿತು. ಖುಷಿಯಲ್ಲಿ ಮುಖವನ್ನೆಲ್ಲ ವಿಕಾರ ಮಾಡಿಕೊಂಡು ನನ್ನನ್ನು ಬಚ್ಚಲು ಮನೆಯ ಕಡೆ ತಳ್ಳಲು ಪ್ರಾರಂಭಿಸಿತು. ಅದು ತಳ್ಳಿತು – ನಾನು ಹೋದೆ. ಮಧ್ಯಾಹ್ನವಾದ ಮೇಲೆ ಬಚ್ಚಲು ಮನೇಲಿ ಅಪ್ಪಯ್ಯ ಯಾಕೆ ಇರಬೇಕೊ ತಿಳಿಯಲಿಲ್ಲ. ಅಡುಗೆ ಮನೆತನಕ ನನ್ನನ್ನು ತಳ್ಳುತ್ತ ತೆವಳುತ್ತ ಬಂದ ಕಲ್ಯಾಣಿ ‘ಇನ್ನು ಮುಂದೆ ನೀನೊಬ್ಬನೇ ಹೋಗು, ನಾನು ಬರಲ್ಲ’ ಎಂದು ಕಣ್ಣು ಮೂತಿ ಕೈಗಳನ್ನೆಲ್ಲ ಹೊರಳಿಸಿ ಸನ್ನೆಮಾಡಿ, ನನಗರ್ಥವಾಯಿತೆಂದು ಸಮಾಧಾನದಿಂದ ತಲೆ ಹಾಕಿ ನಡುಮನೆಗೆ ಹೋಯಿತು. ನನ್ನ ಹೆಜ್ಜೆ ಗುರುತು ಬಿದ್ದಲ್ಲಿ ನೆಲವನ್ನು ಒರೆಸಲು ಮತ್ತೆ ಅದು ಪ್ರಾರಂಭಿಸಿರಬೇಕು.

ನಾನು ಬಚ್ಚಲಿಗೆ ಹೋಗುತ್ತಿದ್ದಂತೆ ಚೊಂಬಿನಿಂದ ನೀರು ತುಂಬಿ ಸುರಿಯುತ್ತಿದ್ದ ಸದ್ದು ಕೇಳಿಸಿತು. ಹಾಗೇ ಅಪ್ಪಯ್ಯ ನಗೋದು ಕೇಳಿಸಿತು. ಮನೇಲಿ ಅಪ್ಪಯ್ಯ ನಗೋದನ್ನ ನಾನು ಕೇಳಿದ್ದೇ ಇಲ್ಲ. ಅಮ್ಮನ ಜೊತೆ ಮಾತಾಡುವಾಗೆಲ್ಲ ಉರಿ ಮೂತಿಯೇ. ಬಚ್ಚಲೊಳಗೆ ಹೋಗಿ ನೋಡಿದರೆ ಅಪ್ಪ ಬೆತ್ತಲೆ ಸ್ನಾನ ಮಾಡುತ್ತಿದ್ದಾರೆ; ಜಾನಕಮ್ಮ ಬೆನ್ನಿಗೆ ಸೀಗೆ ಉಜ್ಜುತ್ತಿದ್ದಾರೆ. ನನ್ನ ನೋಡಿದ್ದೇ ಜಾನಕಮ್ಮ ಎದ್ದು ಬಂದರು. ನನ್ನನ್ನು ಮುದ್ದಿಡುತ್ತ ಅಡಿಗೆ ಮನೆಗೆ ಕರೆದುಕೊಂಡು ಹೋಗಿ ರವೆ‌ಉಂಡೆ, ಕೋಡುಬಳೆ ಕೊಟ್ಟರು. ಎರಡು ಚಡ್ಡಿಯ ಜೋಬುಗಳಲ್ಲೂ ಕೋಡುಬಳೆ ತುಂಬಿಸಿದರು. “ಅಪ್ಪಯ್ಯನಿಗೆ ಉಷ್ಣವಾಗಿತ್ತು” ಅಂದರು; “ಅಮ್ಮನಿಗೆ ಹುಷಾರಿಲ್ಲವಲ್ಲ, ಅದಕ್ಕೇ ನಾನು ತಲೆಗೆ ಎಣ್ಣೆ ಸ್ನಾನ ಮಾಡಿಸಿದೆ” ಅಂದರು. ನನ್ನನ್ನು ಅವರ ಮಲಗುವ ಕೋಣೆಗೆ ಕರೆದುಕೊಂಡು ಹೋಗಿ ಕಿಟಿಕಿಯಿಂದ ನವಿಲುಕಲ್ಲು ಗುಡ್ಡ ತೋರಿಸುತ್ತ, “ಮರಿ, ನಿನಗೆ ಆ ಗುಡ್ಡದ ಮೇಲೆ ಹೋಗಲು ಇಷ್ಟವಾ?” ಎಂದರು. “ಅಪ್ಪಯ್ಯ ಸ್ನಾನ ಮಾಡುತ್ತ ಇದ್ರು ಅಂತ ಅಮ್ಮನಿಗೆ ಹೇಳಬೇಡ ಆಯ್ತ? ಹೇಳಿದ್ರೆ ಅವರ ಜ್ವರ ಜಾಸ್ತಿ ಆಗತ್ತೆ” ಎಂದರು. ಎಲ್ಲದಕ್ಕೂ ನಾನು ಹು ಹು ಹು ಎನ್ನುತ್ತ ಹೊರಗೆ ಓಡಿಹೋಗುವಾಗ ಕಲ್ಯಾಣಿ ನಕ್ಕಿತು. ಸಿಂಬಿ ಸುತ್ತಿದ ಹಾವಿನಂತೆ ಕೂತು ಆಪ್ತವಾಗಿ ಹತ್ತಿರ ಕರೆಯಿತು. ನಾನು ನಿಲ್ಲದೆ ಓಡಿದೆ. ತೋಟದಲ್ಲಿ ಆಡಿಕೊಂಡಿದ್ದೆ-ಸಾಯಂಕಾಲವಾಗೋತನಕ.

ನಾನು ನೋಡಿದ್ದರ ಅರ್ಥ ಆಗ ನನಗೆ ಆಗಿರಲಿಲ್ಲ ಎಂದು ಈಗ ಅಂದುಕೊಳ್ಳುತ್ತೇನೆ. ಅಂದುಕೊಳ್ಳುತ್ತೇನೆ-ಅಷ್ಟೆ. ಗಂಡ ಮನೇಲಿ ಇಲ್ಲದಿದ್ದಾಗ ಅಪ್ಪಯ್ಯನ ಜೊತೆ ಜಾನಕಮ್ಮ ಏನು ಮಾಡುತ್ತಿದ್ದರು ಎಂದು ನನಗೆ ಮೊದಲು ಹೊಳೆದದ್ದು ಗುಡ್ಡದ ಮೇಲೆ ಒಂದು ದಿನ ಕನ್ಯಾಮಾಸದ ನಾಯಿ ಜೋಡಿ ನೋಡಿದಾಗಲೊ? ಅವು ಜೋಡಿಯಾಗಲಿ ದೇವರೇ ಎಂದು ಪ್ರಾಥಿಸುತ್ತ ಆಸೆಯಿಂದ ನೋಡುತ್ತ ನಿಂತದ್ದು ನೆನಪಾಗುತ್ತದೆ. ಅವು ಗಂಟು ಹಾಕಿಕೊಂಡಾದ ಮೇಲೆ ನನಗೆ ನಡೆದದ್ದೆಲ್ಲ ನೆನಪಾಗಿ ಓಹೋ, ಹೀಗೋ? ಎಂದು ಗೊತ್ತಾಯಿತೋ? ಹೀಗೆ ಗೊತ್ತಾಗಲು ವರ್ಷ ಬೇಕಾಯಿತೊ? ಅಥವಾ ಆಗಲೇ ಗೊತ್ತಾಗಿತ್ತೋ – ಈಗ ಹೇಗೆ ಹೇಳಲಿ?

ಆಮೇಲೆ ಬಹಳ ವರ್ಷವಾದ ಮೇಲೆ ಅಪ್ಪಯ್ಯನ ಜೀವನಕ್ರಮ ಸರಿ ಎಂದು ಅವರ ಧೈರ್ಯವಿಲ್ಲದ ನಾನು ವಾದಿಸಿದ್ದೆ. ನೋಡಿ, ಜೇವನ ಸಫಲವಾಗಲು ಒಳದಾರಿಗಳು ಯಾವತ್ತೂ ಇದ್ದೇ ಇವೆ ಎಂದಿದ್ದೆ. ಆದರೆ ಇವೆಲ್ಲ ನಾನು ಈಗ ಹೇಳೋದು ಅಪ್ರಕೃತ, ಯಾಕೆಂದರೆ ಮತ್ತೆ ನಾನು ಜಾನಕಮ್ಮನ ಮನೆಗೆ ಅಪ್ಪನ ಶ್ರಾದ್ಧ ಮುಗಿಸಿ – ಬೇಕೆಂದೇ ಒಂಟಿಯಾಗಿ ಹೋದಾಗ ನನ್ನ ಮನಸ್ಸಿನಲ್ಲಿದ್ದುದು ಇಷ್ಟೆ: ಬಾಲಕನಾಗಿದ್ದಾಗ ನಾನು ಹೇಗೆ ಇದ್ದೆ? ತತ್ಪರತೆ ನನಗೆ ಸಾಧ್ಯವಿತ್ತೆ? ನನ್ನ ಹೆಂಡತಿಯನ್ನು ಮೀರಿ ನಿಲ್ಲಲು ಎಂದರೆ ನನ್ನ ನೌಕರಿ ಜೀವನವನ್ನೂ ಮೀರಲು ಬೇರ್ಪಡಿಸಿ ಹೇಳೋದು ಬೇಡವಲ್ಲ.

ಆ ನಡುಮನೆಯಲ್ಲೆ ಅದೇ ಕಲ್ಯಾಣಿ ಇತ್ತು. ಈಗ ಮುದಿಯಾಗಿತ್ತು. ತಲೆ ಬೋಳಿಸಿದ್ದರಿಂದ ಸುಕ್ಕುಸುಕ್ಕಾಗಿ ಬತ್ತಿದ ಅದರ ಮುಖ ಗಂಡಸಿನದೋ ಹೆಂಗಸಿನದೋ ತಿಳಿಯದಂತೆ ವಿಕಾರವಾಗಿತ್ತು. ಚೊಟ್ಟೆ ಕೈಯ ಶಸ್ತ್ರದ ಗಂಡ ತೀರಿರಬೇಕು. ಈಗಲೂ ಒರೆಸುತ್ತ ತೆವಳುತ್ತ ಇತ್ತು. ನನ್ನ ಗುರುತು ಅದಕ್ಕೆ ಹತ್ತಿದಂತೆ ಕಾಣಲಿಲ್ಲ. ‘ಜಾನಕಮ್ಮ’ ಎಂದು ಕರೆಯುತ್ತ ಮಹಡಿ ಹತ್ತಿದೆ.

ಅಪ್ಪಯ್ಯ ಈ ಜಾನಕಮ್ಮನಿಂದ ತೃಪ್ತಿಪಡೆದಿರಬೇಕು ಎಂದು ಒಮ್ಮೆ ಅಂದುಕೊಂಡರೆ ಇನ್ನೊಮ್ಮೆ ಏನು ತೃಪ್ತಿಯೋ ಎಂದು ಹೇಳಿಕೊಳ್ಳುತ್ತೇನೆ. ಮದುವೆಗೆ ಮುಂಚೆ ಕಾಮವೆಂದರೆ ಭರ್ಜರಿ ಸಂಗತಿಯೆಂದು ನಾನು ತಿಳಿದಿದ್ದೆ. ಆದರೆ ಕ್ರಮೇಣ ಕಾಮ ನನಗೆ ನಿದ್ದೆ ಬರುವುದಕ್ಕಿಂತ ಮುಂಚಿನ ಅಗತ್ಯವಾಗಿ ಕೊನೆಗೊಂಡಿದೆ. ಇವಳನ್ನಲ್ಲದೆ ನಾನು ಬೇರೆ ಹೆಣ್ಣನ್ನು ಮೋಹಿಸಿಲ್ಲವೆಂದಲ್ಲ. ಆದರೆ ತೊಡೆಗಳ ನಡುವ ಈಗ ಕಾಮ ಪಳಗಿದೆ. ಅಪ್ಪಯ್ಯನಿಗೂ ಹಾಗೇ ಪಳಗಿರಬೇಕು. ನಾನು ಮನೆ ಸೇರುವ ಮುಂಚೆ ಅವರೇ ಸೇರಿ, ಅಮ್ಮನ ಹತ್ತಿರ ನನ್ನ ಯಾಕೆ ಕಳಿಸಿದ್ದು ಎಂದು ಜಗಳವಾಡಿ, ಯಾಕೆ ಇಷ್ಟು ಹೊತ್ತಾಯ್ತೆಂದು ಅಮ್ಮ ನನ್ನನ್ನು ಬೈದು, ಅಪ್ಪ ನನ್ನನ್ನು ಹೊಡೆದು, ಹೊತ್ತಾಯ್ತೆಂದು ಓಡಿ ಬರುವಾಗ ಬಿದ್ದು ಮಂಡಿ ತರಿಯಿತೆಂದು ನಾನು ಅತ್ತು, ಕೆಲವು ದಿನ ಜಾನಕಮ್ಮನ ಮನೆಗೆ ಹೋಗೋದನ್ನ ಅಪ್ಪ ಬಿಟ್ಟು, ಮತ್ತೆ ಹೋಗಲು ಶುರು ಮಾಡಿ, ಕೊನೆಕೊನೆಯಲ್ಲಿ ಗೋವಿಂದರಾಯರು ಸತ್ತಮೇಲೆ ಜಾನಕಮ್ಮನ ಜೊತೆ ಏನೂ ಇಲ್ಲವೆನ್ನುವ ಹಾಗೆ ಇದ್ದು, ಅವರನ್ನು ನೋಡುವುದನ್ನೂ ಕ್ರಮೇಣ ನಿಲ್ಲಿಸಿ, ಅಮ್ಮನ ಪರಚಾಟ ಕಿವಿಮೇಲೆ ಹಾಕಿಕೊಳ್ಳದೆ ತಮ್ಮ ಪಾಡಿಗೆ ತಾವು ಇದ್ದುಬಿಟ್ಟಿದ್ದರು. ಜೀವನವೇ ಇಷ್ಟು ಎಂದು ನಾನು ಈ ಕಾರಣದಿಂದ ತೀರ್ಮಾನಕ್ಕೆ ಬಂದಿದ್ದರೂ ಜಾನಕಮ್ಮನನ್ನು ಮತ್ತೆ ನೋಡಲು ಮಹಡಿ ಹತ್ತುತ್ತಿದ್ದಾಗ ಪ್ರೀತಿಯ ಇನ್ನೇನೋ ಸಾಧ್ಯತೆ ಕಾಣುತ್ತೇನೆಂದು ನಾನು ಆಸೆ ಪಟ್ಟಿರಲಿಲ್ಲ ಎಂದು ಹೇಗೆ ಹೇಳಲಿ? ನಾನು ಯಾವುದಕ್ಕಾಗಿಯೋ ಇನ್ನೂ ಹುಡುಕುತ್ತಿದ್ದೇನೆಂಬುದಂತೂ ನಿಜ. ಹೆಂಡತಿಯನ್ನು, ನೌಕರಿ ಜೀವನವನ್ನು, ನನ್ನ ವಿಷಾದಪೂರ್ಣ ತೀರ್ಪುಗಳನ್ನು ಮೀರುವ ಹಂಬಲ-ಅಥವಾ ಚಟ-ನನಗಿಲ್ಲದಿದ್ದರೆ ಈ ಶ್ರಾದ್ಧೋತ್ತರ ಯಾತ್ರೆಯನ್ನು ನಾನು ಕೈಗೊಳ್ಳುತ್ತಿರಲಿಲ್ಲ.

ಜಾನಕಮ್ಮನಿಗೆ ಕೂಡಲೇ ಗುರುತು ಸಿಕ್ಕಿತು. ಈಗ ಅಷ್ಟೇನೂ ರಮ್ಯವೆನ್ನಿಸದ ಶಯ್ಯಾಗಾರದಲ್ಲಿ ಕೂತು ಹಲ್ಲಿಲ್ಲದ ಬಾಯಲ್ಲಿ ಎಲೆಯಡಿಕೆ ಜಗಿಯುತ್ತಿದ್ದ ಜಾನಕಮ್ಮ, “ಬಾರೋ ಕಿಟ್ಟಣ್ಣ, ಯಾವಾಗ ಬಂದದ್ದು? ಕಾಫಿ ಮಾಡ್ತೇನೆ” ಎಂದು ಕೆಳಗಿಳಿದರು. ನಾನೂ ಅವರ ಹಿಂದೆ ಹೋದೆ. ಕರ ಹಾಕಿ ಸಾರಿಸಿ ರಂಗೋಲೆ ಬಿಟ್ಟು ಶುಭ್ರವಾಗಿದ್ದ ಅಡಿಗೆ ಮನೆಯಲ್ಲಿ ಮಣೆ ಮೇಲೆ ಕೂತೆ. ಅಮ್ಮನ ಯೋಗಕ್ಷೇಮ ಕೇಳಿದರು. ಎಷ್ಟು ಮಕ್ಕಳು, ಹೆಂಡತಿ ಏನು ಕಲಿತಿದ್ದಾಳೆ, ಏನು ಸಂಬಳ, ಮನೆ ಕಟ್ಟಿಸಿದ್ದೀಯಂತೆ, ಕಾರಿದೆಯಂತೆ-ಇತ್ಯಾದಿ ವಿಚಾರಿಸಿಕೊಂಡರು. ಸ್ನಾನದ ಮನೆಯಲ್ಲಿ ನಾನು ಪತ್ತೆ ಹಚ್ಚಿದ್ದು, ರಂಪವಾದದ್ದು, ಆಮೇಲೂ ಹಾಗೇ ಸಾಗಿಸಿಕೊಂಡು ಹೋದದ್ದು, ಕ್ರಮೇಣ ಕಳಚಿಕೊಂಡದ್ದು- ಏನೂ ಅವರನ್ನು ಬಾಧಿಸುತ್ತಿರುವಂತೆ ತೋರಲಿಲ್ಲ. ಈಗಲೂ ಲಕ್ಷಣವಾದ ಹೆಂಗಸು. ಗಂಟು ಕಟ್ಟಿದ ಬಿಳಿಕೂದಲು, ಬಿಳಿಸೀರೆ, ಕೈಗೆ ಒಂದೊಂದು ಬಂಗಾರದ ಬಳೆ, ಕತ್ತಿಗೆ ಒಂದೆಳೆ ಚೈನು-ವೈಧವ್ಯದಲ್ಲೂ ಅಮ್ಮನಿಗಿಂತ ಈಕೆ ಗೆಲುವಾಗಿದ್ದಂತೆ ಕಂಡಿತು. ನಾನು ಅದೂ ಇದೂ ಮಾತಾಡಿ ಹೊರಟು ನಿಂತಾಗ ಆಳಿಗೆ, “ಎರಡು ಬಾಳೆಗೊನೆ ತಗೊಂಡು ಹೋಗಿ ಕಾರಿನಲ್ಲಿಟ್ಟು ಬಾ” ಎಂದರು. “ಅಮ್ಮನಿಗೆ ಬಾಳೆ ಹಣ್ಣೆಂದರೆ ಇಷ್ಟ. ಕೊಡು. ನಿನ್ನ ಮಕ್ಕಳಿಗೆ ಈ ಹಲಸಿನ ಹಣ್ಣಿನ ಚಟ್ಟು ಕೊಡು” ಎಂದು ಕಾಗದದಲ್ಲಿ ಸುತ್ತಿದ ಪೊಟ್ಟಣ ಕೊಟ್ಟರು ಬೇಲಿಯ ತನಕ ಬಂದು ಕಳುಹಿಸಿದರು.

ಸಂಜೆ ಹೊತ್ತಾದ್ದರಿಂದ ನಾನು ಬೇಗ ಬೇಗ ನವಿಲು ಕಲ್ಲುಗುಡ್ಡದ ತಪ್ಪಲಿಗೆ ನಡೆದೆ. ಕಾರು ನಿಲ್ಲಿಸಿದ್ದಲ್ಲಿ ಬಾಳೆಗೊನೆ ತಗೊಂಡು ಹೋಗಿ ಕಾದಿರು ಎಂದು ಆಳಿಗೆ ಹೇಳಿದೆ.

ಅವತ್ತಿನಿಂದ ಇವತ್ತೂ ನವಿಲುಕಲ್ಲಿನ ಗುಡ್ಡದಡಿ ಕೂರಬೇಕೆನ್ನಿಸಿತ್ತು. ಅವತ್ತು ಓಡುತ್ತೋಡುತ್ತ ಬಿದ್ದು ಮಂಡಿ ತರಿಸಿಕೊಂಡು ಮರದ ಸಂದಿ ಅವಿತು ನಿಂತಿದ್ದೆ. ಬಹಳ ಹೊತ್ತು ನಿಂತೇ ಇದ್ದ ಮೇಲೆ ನಾಲ್ಕೋ ಐದೊ ನವಿಲುಗಳು ಕುಪ್ಪಳಿಸುತ್ತ ಗುಡ್ಡ ಇಳಿದು ಗದ್ದೆಗೆ ಬಂದಿದ್ದವು. ಸೋಜಿಗದಿಂದ ನಾನು ನೋಡುತ್ತ ನಿಂತಾಗ ನನ್ನ ಕಣ್ಣೆದುರೇ ಎಗ್ಗಿಲ್ಲದೆ ಕುಣಿದಿದ್ದವು. ತುದಿಗಾಲ ಮೇಲಿನ ಬೆರಗಿನಲ್ಲೆನ್ನುವಂತೆ ನಿಂತು, ಅಷ್ಟೂ ರೆಕ್ಕೆ ಪುಕ್ಕಗಳನ್ನು ಬಿಚ್ಚಿ ಹರಡಿ, ಬಾವುಟದಂತೆ ಎತ್ತಿ ನೆಟ್ಟಗೆ ನಿಲ್ಲಿಸಿ, ಒಂದೊಂದು ಗರಿಯ ಒಂದೊಂದು ಕಣ್ಣೂ ಕಂಪಿಸುವಂತೆ, ಜಂಬದಿಂದ ಕತ್ತನ್ನೂ ಕಿರೀಟವನ್ನೂ ಎತ್ತಿ ಕುಣಿದಿದ್ದುವು. ಕುಣಿಯುವಾಗ ಗಾಳಿಹೊಕ್ಕ ಬಿದಿರು ಹಿಂಡಿಲಿನಂತೆ ತತ್ತರಿಸುತ್ತ ಕೇಕೆ ಹಾಕಿದ್ದವು. ನಾನು ಯಾವ ಸೋಜಿಗದಿಂದ ಎಷ್ಟು ತತ್ಪರನಾಗಿ ನೋಡುತ್ತ ಗುಡ್ಡ, ಗದ್ದೆ, ಕಲ್ಯಾಣಿ, ಜಾನಕಮ್ಮ, ಅಪ್ಪಯ್ಯ, ಅಮ್ಮ, ತರಿದ ಮಂಡಿ, ಬಚ್ಚಲು ಎಲ್ಲವನ್ನೂ ಮರೆತೆ ಎನ್ನುವುದು ಈಗಲೂ ಮರುಕಳಿಸೀತೆ ಎಂದು ಆಸೆ ಪಡುತ್ತ ನಡೆದೆ. ಅದೇ ಮರದ ಹಿಂದೆ ಅವಿತು ನಿಂತೆ. ಸಿಗರೇಟ್ ಹಚ್ಚಿ ಕಾದೆ.

ಮತ್ತೆ ನವಿಲುಗಳು ಬಂದವು. ಕುಣಿದು ಹೋದವು. ರೈತರಿಗೆ ಈ ನವಿಲುಗಳೊಂದು ಪೀಡೆಯಿರಬೇಕು. ಅವು ಕುಣಿಯುವಾಗ ಗರಿ ಕಳಚಿಬಿದ್ದಿತ್ತು. ನನ್ನ ಮಗಳಿಗೆಂದು ಆ ಗರಿಗಳನ್ನು ಆರಿಸಿದೆ.

ಅವತ್ತೂ ಆರಿಸಿದ್ದೆ. ಈಗ ನೆನಪಾಗುತ್ತೆ. ಥಟ್ಟನೇ ಅನುಮಾನವಾಗುತ್ತೆ. ಇವತ್ತು ಅವು ಕುಣಿದಾಗ ನಾನು ಮೈಮರೆಯದೇ ಇದ್ದುದಕ್ಕೆ ವಯಸ್ಸು ಕಾರಣವಲ್ಲವೆ? ಕಣ್ಣಿನಲ್ಲಿ ಹಿಂದಿದ್ದ ಹೊಳಪು ಈಗ ಇಲ್ಲವಲ್ಲ ಎಂದುಬಿಟ್ಟೇನು. ಆದರೆ ಅವತ್ತು ನಾನು ನಿಜವಾಗಿ ತತ್ಪರವಾಗಿ ನೋಡಿದೆನೊ. ಅಥವಾ ಬಿದ್ದ ಗರಿಯನ್ನು ಪುಸ್ತಕದಲ್ಲಿ ಮರಿ ಹಾಕಲು ಇಡಲು ಎತ್ತಿಕೊಳ್ಳಲೆಂದು ತವಕದಲ್ಲಿ ಕಾದೆನೊ? ಈಗ ತಿಳಿಯಲ್ಲ. ಈ ಜೀವನದಲ್ಲಿ ಯಾವ ಕಾಲವೂ ಪವಿತ್ರವಲ್ಲ ಎನ್ನುವ ತೀರ್ಮಾನಕ್ಕೆ ಬರಲು ಕೂಡ ಇಷ್ಟವಾಗಲ್ಲ. ಈ ನಲವತ್ತರ ಪ್ರಾಯದ ನಾನು ಹಿಂದಿನದನ್ನು ಹೇಗಾದರೂ ಮರುಕಳಿಸಿಕೊಂಡೇನು? ಈಗಿವ ನನಗೂ, ಯಾವತ್ತಿನದೋ ಕಾಲದ ಆ ಬಾಲಕನಿಗೂ ಏನು ಸಂಬಂಧ? ಆಗಲೂ ನಾನು ಹೀಗೇ ಇದ್ದೆ ಎಂದು ಹೇಳೊದು ಸತ್ಯವೊ, ಸುಳ್ಳೊ, ಈಗಿನ ವಿಷಾದವನ್ನು ಪರಿಹರಿಸಿಕೊಳ್ಳುವ ಉಪಾಯವೊ, ಈ ಮನಸ್ಸಿನ ಸೂಕ್ಷ್ಮ ದ್ರೋಹವೋ-ನಾನು ಮುಟ್ಟಿದ್ದು ಯಾವುದೂ ಪವಿತ್ರವಾಗಿ ಉಳಿದಿಲ್ಲವೆನ್ನುವ ಯಾತನೆ ಮಾತ್ರ ನಿಜ.

ಈಗ, ಹೀಗೆ ಹೇಳಿಕೊಳ್ಳುವಾಗ ಅಲ್ಲ; ಹೇಳಿಕೊಳ್ಳಲಾಗದಂತೆ ನೋಯುತ್ತ, ಕಾರಿನ ಬಾಗಿಲು ತೆಗೆದು ಒಳಗೆ ಕೂರುತ್ತಿದ್ದಾಗ ಅನ್ನಿಸಿತ್ತಲ್ಲ ಆ ಯಾತನೆ- ಅದು ನಿಜ.

ಬಾಳೆಗೊನೆ ತೆಗೆದುಕೊಂಡು ಮನೆಗೆ ಬಂದೆ. ಗಂಡನಿಗೆ ತಾನೆಂದರೆ ಎಷ್ಟು ಇಷ್ಟವಿತ್ತೆಂದು ಅಮ್ಮ ನನ್ನ ಹೆಂಡತಿಗೆ ವಿವರಿಸುತ್ತಿದ್ದಳು. ಹೊತ್ತಾಗಿ ಬಂದೆನೆಂದು ಹೆಂಡತಿ ಸಿಟ್ಟಾಗಿದ್ದಳು. ಪುಸ್ತಕದಲ್ಲಿ ಗುರ್ತಿಗಿಡಲು ಚೆನ್ನಾಗಿದೆ ಅಂತ ನವಿಲು ಗರಿ ನೋಡಿ ನನ್ನ ಎಂಟು ವರ್ಷದ ಮಗಳು ಖುಷಿಪಟ್ಟಳು.


ಡಿಸೆಂಬರ್, ೧೯೭೨ ಮೈಸೂರು

ಕೀಲಿಕರಣ: ಸೀತಾಶೇಖರ, ಚೀನಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.