ವಿಚ್ಛಿನ್ನ

ತಾನು ಮತ್ತೆ ಒಂಟಿಯಾಗಿರಬಾರದೇಕೆ ಎನ್ನುವ ಯೋಚನೆ ರವಿಗೆ ಬಂದದ್ದು ಇದು ಮೊದಲನೆಯ ಬಾರಿಯೇನಾಗಿರಲಿಲ್ಲ. ಇತ್ತೀಚೆಗೆ ಗೀತ ಹತ್ತಿರವಿಲ್ಲದಿದ್ದಾಗ ಪ್ರತಿಬಾರಿ ಹಾಗೆಯೇ ಆಲೋಚಿಸುವಂತಾಗುತ್ತಿತ್ತು. ಇರಬಹುದು ಎನ್ನುವ ಧೈರ್ಯಕ್ಕಿಂತ ಏಕೆ ಇರಬೇಕು ಎನ್ನುವುದಕ್ಕೆ ತರ್ಕಕ್ಕೆ ನಿಲ್ಲುವ ಕಾರಣಗಳೇನಾದರೂ ಇವೆಯೇ ಎಂದು ಯೋಚಿಸುತ್ತಿದ್ದ. ಒಂಟಿಯಾಗಿರಬಹುದು, ಒಂಟಿಯಾಗಿರಬೇಕು ಎನ್ನುವ ಅನಿಸಿಕೆಗಿಂತ ಹೆಚ್ಚಿನ ಕಾರಣ ಬೇಕಿಲ್ಲವೆಂದೆನಿಸಿತು. ಒಂದು ಕಾಗದದ ಮೇಲೆ, ಸಮಾಜಕ್ಕೆ ಹಾಗೂ ಗೀತಳಿಗೆ ತಾನು ಕೊಡಬಹುದಾದ ನೆಪದಂಥ ಕಾರಣ ಹಾಗೂ ಒಂದುಪಕ್ಷ ಕಾನೂನಿನ ರೀತಿ ಹೋಗಬೇಕಾಗಿ ಬಂದಲ್ಲಿ ಕೋರ್ಟು ಒಪ್ಪುವಂಥ ಒಂದು ನಾಲ್ಕು ಸಾಲನ್ನು ಪಟ್ಟಿಮಾಡಬೇಕೆನಿಸಿತು.
೧. ಇನ್‌ಕಂಪ್ಯಾಟಿಬಲಿಟಿ
೨. ಪರಸ್ಪರರಲ್ಲಿ ನಂಬಿಕೆಯ ಅಭಾವ.
೩. ನಾನು ಮಾಡುತ್ತಿರುವ ಕೆಲಸದಲ್ಲಿ ಆಕೆಗಿರುವ ಅಸಡ್ಡೆ.
೪. ಆಕೆಯ ಕೆಲಸದಲ್ಲಿ ಆಕೆ ತನ್ನನ್ನು ತೀವ್ರವಾಗಿ ತೋಡಗಿಸಿಕೊಂಡಿರುವುದರಿಂದ ಆಕೆಯಿಂದ ಮಗುವೊಂದನ್ನು ತಾನು ಪಡೆಯಬಹುದು ಅನ್ನುವ ನಂಬಿಕೆಯನ್ನು ತಾನು ಕಳೆದುಕೊಂಡಿರುವುದರಿಂದು, ಹಾಗೂ ಹಾಗೇನಾದರೂ ಒಂದುಪಕ್ಷ ಪಡೆದರೂ ಆ ಮಗುವಿಗೆ ಗೀತ ಅಮ್ಮಳಾಗುತ್ತಾಳೆ ಅನ್ನುವ ವಿಶ್ವಾಸವನ್ನು ತಾನು ಕಳೆದುಕೊಂಡಿರುವುದು.

ಕಾರಣಗಳು ಕ್ಷುಲ್ಲಕ ಎನ್ನಿಸಿದವು. ಇವಕ್ಕೆ ಇನ್ನೊಂದೆರಡು ಸೇರಿಸಬೇಕು, ಪಕ್ಕಾ ಆಗಬೇಕಾದರೆ ಎಂದುಕೊಂಡ. ಪಕ್ಕಾ ಎಂದರೇನು ಎನ್ನುವುದಕ್ಕೆ ಸರಿಯಾದ ಅರ್ಥ ತಿಳಿಯಲಿಲ್ಲ. ಇರಲಿ, ಎಂದು ಚೀಟಿಯನ್ನು ಜೇಬಿನಲ್ಲಿ ಇಟ್ಟುಕೊಂಡ.

ಮನೆಗೆ ಬಂದು ಬಾಗಿಲು ತೆಗೆದು ಕೈಯಲ್ಲಿದ್ದ ಬ್ಯಾಗನ್ನು ಬೆಡ್ಡಿನ ಮೇಲೆ ಎಸೆದು ಫ್ರಿಜ್ಜಿನ ಒಳಗೆ ಏನಿದೆ ಎಂದು ನೋಡಿದ. ಮಿಕ್ಕಿದ್ದ ಕಿತ್ತಳೆಹಣ್ಣಿನ ಜ್ಯೂಸನ್ನು ಒಂದು ಗ್ಲಾಸಿಗೆ ಬಗ್ಗಿಸಿಕೊಂಡು ಹೊರಗೆ ಹೊರಟ. ಹೋಗುವಾಗ ಬಾಗಿಲಪಕ್ಕದ ಗೋಡೆಗೆ ಆನಿಸಿದ್ದ ಆನ್ಸರಿಂಗ್ ಮಶೀನಿನ ಮಿನುಗುತ್ತಿದ್ದ ಗುಂಡಿಯನ್ನೊಮ್ಮೆ ಒತ್ತಿದ.”ರಾತ್ರಿ ಬರುವುದು ತಡವಾಗುತ್ತದೆ. ಆಫೀಸಿನವರೊಂದಿಗೆ ಊಟಮಾಡಿ ಬರುತ್ತೇನೆ, ನನಗಾಗಿ ಕಾಯಬೇಡ. ಲವ್ ಯು” ಗೀತಳ ಧ್ವನಿ. ಆ ಕ್ಷಣದಲ್ಲಿ ಯಾಕೋ ಕಿತ್ತಳೆ ಜ್ಯೂಸು ಕುಡಿಯಲು ಮನಸ್ಸು ಬರಲಿಲ್ಲ. ಸಿಂಕಿನಲ್ಲಿ ಚೆಲ್ಲಿ ಫ್ರಿಜ್ಜಿನ ಮೇಲಿದ್ದ ಜ್ಯಾಕ್ ಡೇನಿಯಲ್ ಬಗ್ಗಿಸಿದ. ಫ್ರಿಜ್ಜಿನ ಬಾಗಿಲು ತೆರೆದು ಸ್ವಲ್ಪ ಐಸ್ ಸುರಿದುಕೊಂಡ. ಪೀಠವಿರುವ ಗಾಜಿನ ಲೋಟ ವೈನ್ ಕುಡಿಯುವುದಕ್ಕೆ ಚೆಂದ ಅನ್ನಿಸಿತು. ಜ್ಯಾಕ್ ಡೇನಿಯಲ್ ಪಕ್ಕದಲ್ಲಿರುವ ಗೀತಳ ಮೆಚ್ಚಿನ ಮರ್ಲೋ ಇತ್ತು. ನೋಡಿ ಸುಮ್ಮನಾದ.

ಹೊರಗೆ ಕತ್ತಲಿನ್ನೂ ಆಗಿರಲಿಲ್ಲ. ಕತ್ತಲು ಕಮ್ಮಿಯಾದಷ್ಟೂ ತಾನು ಜಾಸ್ತಿ ಒಂಟಿಯಾಗುತ್ತಿದ್ದೇನೆ ಅನ್ನಿಸಿತು. ಕತ್ತಲಲ್ಲಿ ಕಿಟಕಿಯಿಂದ ಹೊರಗಿಣುಕಿ ಕಾಣುವ ಕಪ್ಪನ್ನೇ ನಿಜವಾದ ಜಗತ್ತು, ಅದು ನನ್ನಿಂದ ಹೆಚ್ಚೇನೂ ಬೇರೆಯೇನಿಲ್ಲ ಅಂದುಕೊಳ್ಳುವಾಗ ಆನಂದವಾಗುತ್ತಿತ್ತು. ದಿನಗಳು ದೊಡ್ಡವಾದಾಗ ನಗುವ ಜಗತ್ತು ತನ್ನನ್ನು ಗೇಲಿಮಾಡುವುದಕ್ಕೇ ಅನ್ನುವುದನ್ನು ಬಲವಾಗಿ ನಂಬುವುದಕ್ಕೆ ಇತ್ತೀಚೆಗೆ ಶುರುಮಾಡಿದ್ದ. ಲಾನಿನ ಮೇಲೆ ಹಾಕಿಕೊಂಡಿದ್ದ ಕುರ್ಚಿಯಮೇಲೆ ಕೂತಿದ್ದ ರವಿಯನ್ನು ಕಂಡು ಪಕ್ಕದ ಮನೆಯ ಮುದುಕಿ ಬಂದು” ಕುಡಿಯುತ್ತಿದ್ದೀಯ ರ್ಯಾವಿ” ಕೇಳಿದಳು, ನಗುತ್ತಾ. ಸುಮ್ಮನೆ ಮುಗುಳ್ನಕ್ಕ. “ಸೊಗಸಾದ ದಿನ” ಎಂದಳು ಆಕಾಶ ನೋಡುತ್ತಾ.
” ಹೌದು” ಎಂದ. ಗೀತಾ ಎಲ್ಲಿ ಅನ್ನುವಂತೆ ನೋಡಿದಳು. “ಇನ್ನೂ ಬಂದಿಲ್ಲ” ಪ್ರಶ್ನೆ ಬರುವ ಮೊದಲೇ ಉತ್ತರಿಸಿದ. ” ಇಲ್ಲೇ ಪಾರ್ಕಿನಲ್ಲಿ ಜುಲೈ ನಾಲ್ಕರ ಪಟಾಕಿ ಹಾರಿಸುತ್ತಾರಂರೆ, ಬರುತ್ತೀಯಾ. ಡೇವಿಡ್ಡೂ ಬರುತ್ತಾನೆ” ಎಂದಳು. ” ಇಲ್ಲ, ನನಗೆ ಸ್ವಲ್ಪ ಕೆಲಸವಿದೆ, ಮನೆಯಲ್ಲಿ. ಸಾರಿ, ಆದರೆ ಥ್ಯಾಂಕ್ಸ್” ಎಂದ. ” ಪರವಾಗಿಲ್ಲ, ನಾವು ಬರುತ್ತೇವೆ, ಗುಡ್‌ನೈಟ್” ಎಂದು ಒಳಗೆ ಹೋದಳು. ಎದುರುಮನೆಯ ಜೋಡಿ ತಮ್ಮ ಅವಳಿಗಳನ್ನು ತಳ್ಳುಗಾಡಿಯಲ್ಲಿ ಕುಳ್ಳಿರಿಸಿ ತಮ್ಮ ಬೈಸಿಕಲ್ಲುಗಳ ಹಿಂದೆ ಕಟ್ಟಿ ಸೈಕಲ್ ತುಳಿಯುತ್ತಾ ಹೋಗುವಾಗ ರವಿಗೆ ಕೈ ಬೀಸಿದರು. ಕೈಯಲ್ಲಿದ್ದ ಗಾಜಿನ ಲೋಟವನ್ನೇ ಅಲ್ಲಾಡಿಸಿ ನಕ್ಕ, ರವಿ.

ತಮ್ಮ ಜೋಡಿಯೂ ಸರಿಯಾಗೇ ಇತ್ತು ಅಂದುಕೊಂಡ. ಆದರೆ, ಈಗ ತಾನು ಒಬ್ಬನೇ ಕೂತು ಸುತ್ತಲಿನ ಜೋಡಿಗಳನ್ನನುಭವಿಸುವಷ್ಟು ಗೀತಳ ಜೊತೆಜೊತೆಗೂ ಅನುಭವಿಸಲಾಗುತ್ತಿಲ್ಲವಲ್ಲ ಎನಿಸಿದಾಗ ನೋವೆನಿಸಿತ್ತಿತ್ತು. ಅದನ್ನಾಕೆ ಅರಿತುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾಳೆ ಅನ್ನುವುದರ ಬಗೆಗೆ ರವಿಗೆ ನಂಬಿಕೆಯಿರಲಿಲ್ಲ. ಸವೆಯುವ ಚಪ್ಪಲಿಯಂತೆ ಹಳತಾಗುತ್ತಿದ್ದೇವೆ ಒಬ್ಬರಿಗೊಬ್ಬರು, ಅನ್ನಿಸುತ್ತಿತ್ತು ರವಿಗೆ. ಈ ಹಳಸಿನಲ್ಲಿ ಹೊಸತನ್ನು ಕತ್ತಲೆಯಲ್ಲಿ ಮಿಂಚನ್ನು ಅರಳಿಸಲು ಅರಿತೂ ಅರಿತೂ ಪ್ರಯತ್ನ ಪಡಬೇಕು, ಸಂಬಂಧ ಪುಕ್ಕಟೆಯಲ್ಲ, ಹಾಗೆ, ಹೀಗೆ ಅಂದುಕೊಂಡ. ಆದರೆ, ಗೀತಳಿಗೆ ತನಗನ್ನಿಸಿದಂತೆ ಅನ್ನಿಸುತ್ತದೆ ಎಂದು ತನಗನ್ನಿಸುವುದಿಲ್ಲ. ಆಕೆ ಕಾಲದ ಜತೆ ಸವೆಯುವ ಪ್ರಾಕೃತಿಕ ಕ್ರಿಯೆಯಂತೆ ಏನನ್ನೂ ಉಳಿಸುವ ಗೋಜಿಗೇ ಹೋಗಿತ್ತಿಲ್ಲವಲ್ಲ. ಹಾಗಾದರೆ ಐವತ್ತೈವತ್ತು ವರ್ಷ ಜೊತೆಯಾಗಿ ಸಂಸಾರ ಮಾಡುವವರು ಹೇಗೆ ಸುಖವಾಗಿರುತ್ತಾರೆ, ಎಂದನ್ನಿಸಿತು.

ಒಂದು ಬಾರಿ ಗ್ಲಾಸಿನಲ್ಲಿದ್ದನ್ನು ಒಮ್ಮೆಲೇ ಗಂಟಲಿಗೆ ಸುರಿದುಕೊಂಡು ಒಳಗೆ ಬಂದು ಡೆಸ್ಕಿನ ಮುಂದೆ ಕೂತು ಕಂಪ್ಯೂಟರನ್ನು ಆನ್ ಮಾಡಿದ.”ನಿನಗೆ ಮೈಲ್ ಇದೆ” ಎಂದು ಹೇಳುವ ಕಂಪ್ಯೂಟರಿನ ಧ್ವನಿಯೇ ತನ್ನನ್ನು ನಿಮಿರಿಸುವುದು ಅನ್ನಿಸಿತು. ಹೋಗಿ ’ಇನ್‌ಬಾಕ್ಸ್ ’ ತೆಗೆದ. ಯಾರೋ ಇಬ್ಬರು ಅಂತರ್ಜಾಲದ ಅಪ್ಸರೆಯರು ರವಿಯ ಮನಸ್ಸನ್ನು ಅರ್ಥಮಾಡಿಕೊಂಡಂತೆ ’ಕಮ್’ ’ಹಾರ್ಡ್’ ಇತರ ಮಿರುಮಿರುಗುವ ಪದಗಳಿರುವ ಮೈಲ್ ಕಳಿಸಿದ್ದರು. ಅವನಿಗರಿವಿಲ್ಲದಂತೆ ಒಂದನ್ನು ಅವನ ಮೌಸ್‌ನ ಮೇಲಿದ್ದ ಬೆರಳು ಕ್ಲಿಕ್ಕಿಸಿತು. ಒಂದು ನಿಮಿಷವೂ ಯೋಚಿಸದೆ ಇಂಥವುಗಳನ್ನೆಲ್ಲಾ ಚೆಕ್‌ಮಾರ್ಕೊತ್ತಿ ಡಿಲೀಟಾಗಿಸುತ್ತಿದ್ದ ಅರಿವೆಗೆ ಬಾರದ ರಿಫ್ಲೆಕ್ಸೂ ಅರಿವೆಗೆ ಬರದಂತೆ ಬದಲಾಗಿರುವುದನ್ನು ಕಂಡು ಹೆದರಿಕೆಯಾಯಿತು. ಕಂಪ್ಯೂಟರಿನ ಪಕ್ಕದಲ್ಲಿದ್ದ ಗೀತಳ ಪಕ್ಕದಲ್ಲಿದ್ದ ತನ್ನ ಮದುವೆಯ ಫೋಟೋದಲ್ಲಿದ್ದ ತಾನೇ ಈಗಿನ ತನ್ನನ್ನು ನೋಡಿ ನಗುತ್ತಿರುವಂತೆ ಅನ್ನಿಸಿತು. ಒಂದುಕ್ಷಣ ಹೆದರಿಕೆಯೆಂತೆನಿಸಿ ಕಂಪ್ಯೂಟರ್ ಅರಿಸಿಬಿಟ್ಟ.

ಫೋಟೊವನ್ನೊಮ್ಮೆ ದಿಟ್ಟಿಸಿ ನೋಡಿದ. ಆರುವರ್ಷಗಳ ಹಿಂದೆ ತೆಗೆದ ಫೋಟೋ ಅದು. ಜೀವನದ ಎಲ್ಲ ಸುಖದುಃಖಗಳಲ್ಲಿ ಸಮಭಾಗಿಗಳಾಗಿರುತ್ತೇವೆ ಎಂದು ಸಪ್ತಪದಿ ತುಳಿದ ದಿನ. ಒಮ್ಮೆಯೂ ನೋಡದಿದ್ದ ಸಾವಿರಾರು ಮೈಲಿ ದೂರವಿರುವ ತಾವಿಬ್ಬರೂ ಪರಸ್ಪರರನ್ನು ಇಂಥ ದೊಡ್ಡ ಕಮಿಟ್‌ಮೆಂಟಿಗೆ ಒಳಗಾಗಿಸಿಕೊಂಡಿದ್ದು ಹೇಗೆ.ಅಮ್ಮ ಕಳಿಸಿದ ಮೂರು ಹುಡುಗಿಯರ ಫೋಟೋಗಳಲ್ಲಿ ಗೀತಳನ್ನು ಇಷ್ಟಪಟ್ಟಿದ್ದ, ರವಿ. ಹದಿನೈದು ದಿನದ ರಜೆಯಲ್ಲಿ ನೋಡಿಬಂದ. ನಂತರ ಆದದ್ದು ಮಾಮೂಲಿ. ವಾರಕ್ಕೆರಡರಂತೆ ಫೋನ್‌ಗಳ ಸುರಿಮಳೆ. ಆರುತಿಂಗಳ ನಂತರ ಬೆಂಗಳೂರಲ್ಲಿ ಭಾರಿ ಮದುವೆ. ವಿಮಾನದಲ್ಲಿ ಒಟ್ಟಿಗೇ ಅಂಟಿಕೊಂಡು ಹದಿನೆಂಟುಗಂಟೆಯ ದೀರ್ಘ ಪ್ರಯಾಣದಲ್ಲೇ ಇಬ್ಬರೂ ಒಬ್ಬರನ್ನೊಬ್ಬರು ಸರಿಯಾಗಿ ನೋಡಿದ್ದು, ಬಾಯಿತುಂಬಾ ಮಾತಾಡಿದ್ದು. ಮೊಟ್ಟಮೊದಲ ಬಾರಿಗೇ ಫೋನಿನಲ್ಲಿ ಕೇಳಿದ ಧ್ವನಿ ತನ್ನೆದುರಿನ ಹುಡುಗಿಯದಲ್ಲವೇನೋ ಅನ್ನಿಸಿದಾಗ ಅಪಶಕುನವೆನ್ನಿಸಿದಂತೆ ವಿಮಾನದ ಟಾಯ್ಲೆಟ್ಟಿಗೆ ಹೋಗಿ ಕೆನ್ನೆ ಬಡಿದುಕೊಂಡು ಬಂದಿದ್ದ. ವಾಲೆಟ್ಟಿನಲ್ಲಿರುವ ದೇವರುಗಳನ್ನೆಲ್ಲಾ ಕಣ್ಣಿಗೊತ್ತಿಕೊಂಡಿದ್ದ. ” ನಾನೂ ಕೆಲಸ ಮಾಡಬೇಕು” ಅನ್ನುವ ವ್ಯಾವಹಾರಿಕ ಮಾತುಕತೆಗೆ ಮದುವೆಯ ಮೊದಲ ದಿನವೇ ಇಳಿದಿದ್ದಳು ಮಡದಿ. ಅದು ಪ್ರೀತಿ ಉಕ್ಕಿಸುವ ಮುಗ್ಧ ದೇಸೀ ಹೆಣ್ಣಿನ ಬೇಜಾರುಕಳೆಯುವ ಹವ್ಯಾಸದಂತೆ ಕಾಣಿಸಲಿಲ್ಲ.ತನ್ನ ಪುಟ್ಟಮನೆಯಲ್ಲಿ ತಾವಿಬ್ಬರೇ ಇದ್ದಾಗ ಬೆಚ್ಚನೆಯ ನೀರಿನ ಸ್ನಾನ ಮಾಡಿ, ಒಳಲಂಗದ ಮೇಲೆ ಟವಲ್ ಕಟ್ಟಿ, ನಿಲುವುಗನ್ನಡಿಯ ಮುಂದೆ ಕೂದಲು ಒಣಗಿಸಿಕೊಳ್ಳುತ್ತಾ ನಿಂತಿರುವ ಹೊಸ ಹೆಂಡತಿಯನ್ನು ಹಿಂದಿನಿಂದ ಬಂದು ’ಭೂ” ಮಾಡಿ ಹರಿಣಿಯಂತೆ ಹೆದರಿದಾಕೆ ಓಡಿಬಂದು ತನ್ನ ಎದೆಗೊರಗುವುದು ಮಣಿರತ್ನಂನ ಚಿತ್ರಗಳಲ್ಲಿ ಮಾತ್ರವೇನೋ ಎನ್ನುವ ಅನುಮಾನ ಮೂಡಿತ್ತು. ಅಥವಾ ಸ್ನಾನವಾದಮೇಲಿನ ಗಂಡಹೆಂಡಿರ ಸಂಬಂಧವನ್ನು ಮಣಿರತ್ನಂ ತನ್ನ ಯಾವಚಿತ್ರದಲ್ಲಿಯೂ ಹೇಳಿಲ್ಲ ಎಂದು ರವಿಗೆ ಸಮಾಧಾನದ ತರಹದ ಬೇಜಾರಾಗಿತ್ತು.

ಎರಡು ಬಾರಿ ಜ್ಯಾಕ್ ಡೇನಿಯಲ್ ಗ್ಲಾಸಿಗೆ ಬಗ್ಗಿಸಿದ್ದ. ಬೆಡ್‌ರೂಮಿಗೆ ಹೋಗಿ ಮಂಚದ ಮೇಲೆ ಕೂತು ಟೀವಿ ಹಾಕಿದ. ಚ್ಯಾನಲ್‌ಗಳನ್ನು ಸುಮ್ಮನೇ ಬದಲಾಯಿಸುತ್ತಿದ್ದ. ಈ ಚ್ಯಾನಲ್‌ಗಳಂತೆ ಮನಸ್ಸಿನ ಪದರಗಳನ್ನೂ ಏಕೆ ಒಬ್ಬನೇ ಕೂತಾಗ ಬದಲಾಯಿಸಲಾಗುವುದಿಲ್ಲ ಎನ್ನಿಸಿತು.ಬೆಡ್‌ರೂಮಿನ ಗೋಡೆಯ ಮೇಲೆ ಆರುವರ್ಷದ ಹಿಂದೆ ತೆಗೆಸಿದ ಗೀತಳ ಆಳೆತ್ತರದ ಫೋಟೊವೊಂದನ್ನು ಹಾಕಿದ್ದ. ಗೀತಳಿಗಿಂತ ಎತ್ತರವಾದ ಈ ಫೋಟೋ ಆತ ಗೀತಳಿಗೆ ಕೊಟ್ಟ ಮೊದಲ ’ಸರ್‌ಪ್ರೈಸ್” ಹೀಗೆಯೇ ಇರಬೇಕೆಂದು ಒಲ್ಲದ ಆಕೆಯನ್ನು ಬೈತಲೆಬೊಟ್ಟು, ಮೂಗುತಿಯಿಂದ ತನ್ನಿಷ್ಟ ಬಂದಂತೆ ಸಿಂಗರಿಸಿ ಬೆಂಗಳೂರಿನಲ್ಲಿ ತೆಗೆಸಿದ ಆ ಫೋಟೋವನ್ನು ಇಲ್ಲಿ ದೊಡ್ಡದಾಗಿಸಿದ್ದ. ಸ್ಟುಡಿಯೋದಲ್ಲಿ ಆ ಫೋಟೋದ ಜೊತೆಗೇ ತನ್ನ ಸಂಸಾರದ ಕನಸೂ ಹಿಗ್ಗುತ್ತಿತ್ತು. ಜೊತೆಗೆ ಎರಡಕ್ಕೂ ಮಿತಿಯಾದ ತನ್ನ ಜೇಬಿನ ವೈಶಾಲ್ಯ ಅದಕ್ಕೊಂದು ರೂಪು ಕೊಟ್ಟಿತ್ತು. ಮದುವೆಯ ಮುಂಚಿನ ದಿನಗಳಲ್ಲಿ ಗೀತಳ ನೆನಪು, ಪ್ರೇಮ, ಕಾಮ ಎಲ್ಲವನ್ನೂ ಪೂರೈಸಿತ್ತು ಆ ಫೋಟೋ. ತುಟಿಯೆಲ್ಲಿ, ಕಣ್ಣೆಲ್ಲಿ, ಎದೆಯೆಲ್ಲಿ ಎಂದು ಕಣ್ಣುಮುಚ್ಚಿ ಕೈಯಾಡಿಸಿದರೂ ಹೇಳಬಲ್ಲೆ ಎಂದು ಮುಂಚೆ ಫೋನಿನಲ್ಲಿ ಪೋಲಿಪೋಲಿಯಾಗಿ ಮಾತನಾಡುತ್ತಿದ್ದ. ಇಂದೂ ಹೇಳಬಲ್ಲೆ ಅನ್ನಿಸಿತು. ಮತ್ತೊಮ್ಮೆ ಇವತ್ತು ಬಹಳದಿನದ ಮೇಲೆ ಆ ಫೋಟೋವನ್ನು ಮೇಲಿನಿಂದ ಕೆಳಗಿನವರೆಗೆ ಸವರಿದ. ಚುಳ್ಳೆಂದು ಕೆಳಗೆ ಫೋಟೋದ ಅಂಚು ಚುಚ್ಚಿತು. ಅಂಚಿನವರೆಗೂ ಹೋದ ಕೈಬೆರಳಿನಿಂದ ರಕ್ತ ಬಂತು. ಪಕ್ಕದಲ್ಲೇ ನೋಡಿದ. ಇತ್ತೀಚೆಗೆ ತೆಗೆಸಿದ ಗೀತಳ ಇನ್ನೊಂದು ಫೋಟೋ. ನೋಡಿದ. ಕೂದಲು ಕತ್ತರಿಸಿದೆ. ಹುಬ್ಬಿಗೆ ಆಕಾರ ಬಂದಿದೆ.ತುಟಿಗೆ, ಕೆನ್ನೆಗೆ ಬಣ್ಣ ಬಂದಿದೆ. ಸೀರೆಯಬದಲು ಜೀನ್ಸ್ ಪ್ಯಾಂಟು ಬಂದಿದೆ. ಯಾವುದೂ ತಪ್ಪಲ್ಲವೆನ್ನಿಸಿತು. ಪ್ರಾಯಶಃ ಆಕೆಯ ಬದಲಾವಣೆಗೆ ತಾನು ಸ್ಪಂದಿಸುತ್ತಿಲ್ಲ ಅನ್ನಿಸಿತು. ಅಥವಾ ತನ್ನ ಕಲ್ಪನೆಗೂ ಮೀರಿ ಈಕೆ ಬೆಳೆಯುತ್ತಿದ್ದಾಳೆಯೇನೋ ಅನ್ನಿಸಿತು. ರೂಪವಂತೆ ಅನ್ನುವ ಮೊದಲ ಕಾರಣಕ್ಕೆ ಗೀತಳನ್ನು ಆರಿಸಿದ್ದ ರವಿ. . ಮದುವೆಯ ಹೊಸದರಲ್ಲಿ ಈ ಬಣ್ಣ, ಬಳುಕೆಲ್ಲಾ ಗೀತಳ ಸೌಂದರ್ಯಕ್ಕೆ ಮೆರುಗುಕೊಡುವುದಕ್ಕೆ ಮಾತ್ರ ಬೇಕು ಎಂದನಿಸಿತ್ತು. ಆದರೆ ಈಗ ಯಾಕೋ ಈ ಲಿಪ್‌ಲೈನರು ಐಲೈನರುಗಳೆಲ್ಲಾ ಗೀತಳನ್ನು ವಿವರಿಸಲಿಕ್ಕೇ ಬೇಕಾಗುತ್ತಿದೆ ಎನ್ನಿಸಿತು. ಹೆಂಡತಿಯ ಬದಲಾವಣೆಯ ಸ್ವಗತವೂ ಜಂಪಾಲಹಿರಿಯ ಸಾಲನ್ನು ಅವಲಂಬಿಸಿರುವುದು ತನ್ನ ಸಂವೇದನೆಗಳ ಬ್ಯಾಂಕ್ರಪ್ಟ್ಸಿಯನ್ನು ವಿಷದವಾಗಿ ತನಗೇ ಬಿಡಿಸಿಹೇಳುತ್ತಿದೆ ಅನ್ನಿಸಿ ಸಂಕಟವಾಯಿತು, ರವಿಗೆ.

ಇಲ್ಲಿಗೆ ಬಂದಾಕ್ಷಣ ಸ್ಕೂಲ್ಲಿಗೆ ಸೇರುತ್ತೇನೆಂದಳು. ಬೇಡ ಅನ್ನಲಾರದೇ ಒಪ್ಪಿದ್ದ. ಹೆಣ್ಣು ಯಾಕೆ ಕೆಲಸಮಾಡಬಾರದೆಂಬ ಅವಳ ಎರಡನೆಯ ತಿಂಗಳಿನ ಪ್ರಶ್ನೆಗೆ ಉತ್ತರ ಕೊಟ್ಟರೆ ಪುರುಷವಾದಿ ಎಂದುಕೊಳ್ಳುತ್ತಾಳೆ , ಮನೆಯಲ್ಲಿ ಸೆಕ್ಷುಯಲ್ ಹರಾಸ್ಮೆಂಟ್ ಎಂಬ ಕಾರ್ಪೋರೇಟ್ ಬೆಳವಣಿಗೆಯಾಗಬಾರದೆಂದು ಉತ್ತರವನ್ನು ತನ್ನಲ್ಲೇ ಅದುಮಿಟ್ಟುಕೊಳ್ಳುತ್ತಾ ಹೋದ.ಒಂದಾದ ನಂತರ ಒಂದು ಪ್ರಶ್ನೆ ಕೇಳುತ್ತಾ ಹೋದಳು, ಗೀತ. ಈತ ಉತ್ತರ ಕೊಡುತ್ತಲೇ ಹೋದ. ಬಹುಮಟ್ಟಿನ ಉತ್ತರ ಕ್ರಿಯೆಯಲ್ಲಿಯೇ ಇತ್ತು. ಅವಳ ಸ್ಕೂಲಿನ ಸಮಯಕ್ಕನುಕೂಲವಾಗುವಂತೆ ಮನೆ ಬದಲಿಸಿದ, ಕೆಲಸವನ್ನೂ ಬದಲಿಸಿದ. ಈಗ ಸದ್ಯಕ್ಕೆ ಮಗು ಬೇಡ ಅಂದಳು. ಆಯಿತು ಎಂದ. ತನ್ನ ವಾರ್ಡ್‌ರೋಬು ಪಾಲಿಸ್ಟರ್‌ನಿಂದ ಹಂಡ್ರೆಡ್ ಪರ್ಸೆಂಟ್ ಕಾಟನ್ ಆಗಲಿ ಅಂದಳು, ಆಯಿತು. ಪ್ರತಿಯೊಂದಕ್ಕೂ ಆತ ಕೊಟ್ಟುಕೊಳ್ಳುತ್ತಿದ್ದ ಉತ್ತರ- ಸಂಬಂಧಗಳು ಒಂದು ವ್ಯಾವಹಾರಿಕ ಒಪ್ಪಂದ. ಎರಡು ವ್ಯಕ್ತಿತ್ವಗಳು ಒಂದಕ್ಕೊಂದು ಸಮಾನಾಂತರವಾಗಿಯೇ ಹೋದರೆ ಆ ಸಂಬಂಧ ಒಂದಕ್ಕೊಂದು ಸೇರುವುದೂ ಇಲ್ಲ, ದೂರವಾಗುವುದೂ ಇಲ್ಲ. ಹಾಗಿದ್ದರೆ ಮಾತ್ರ ಅದು ಆರೋಗ್ಯಕರ. ಇದು ಅವನ ದೌರ್ಬಲ್ಯವೋ ಅಥವಾ ಆಫೀಸಿನ ಕಾರ್ಪೋರೇಟ್ ಬೈಲಾಗಳನ್ನು ಮನೆಗೆ ಅಳವಡಿಸಿದ್ದಕ್ಕೋ ಏನೋ ಎರಡೂ ಕಡೇ ಆತನಿಗೆ ಲಾಭವಾಗಿತ್ತು. ಆತನ ಕಂಪೆನಿ ಪಬ್ಲಿಕ್ಕಿಗೆ ಹೋಗಿತ್ತು. ಆದರೆ ಆತನ ಕೈಕೆಳಗಿನವರು ಇಪ್ಪತ್ತು ಜನ ಕೆಲಸ ಕಳೆದುಕೊಂಡಿದ್ದರು. ಗೀತ ತನ್ನ ಸ್ಕೂಲು ಮುಗಿಸಿ ಇವನಷ್ಟೇ ಒಳ್ಳೆಯ ಕೆಲಸವನ್ನು ಬೇರೆ ಕಂಪೆನಿಯಲ್ಲಿ ಪಡೆದಿದ್ದಳು. ರಾತ್ರಿ ಲೇಟಾಗಿ ಮನೆಗೆ ಬರುತ್ತಿದ್ದಳು. ಬರುತ್ತಲೇ ವೈನು ಕುಡಿಯುತ್ತಿದ್ದಳು. ಬರೀ ಬೀರು ಕುಡಿಯುತ್ತಿದ್ದ ರವಿ ಈಗ ಜ್ಯಾಕ್ ಡೇನಿಯಲ್ ಕುಡಿಯತೊಡಗಿದ್ದ.

ಬಾಗಿಲು ತೆರೆದ ಶಬ್ದವಾಯಿತು. ಗೀತ ಬಂದಳೆಂದುಕೊಂಡ. ’ಹಾಯ್’ ಎನ್ನುತ್ತಲೇ ಉತ್ತರಕ್ಕೆ ಕಾಯದೇ ತನ್ನ ಪರ್ಸನ್ನು ಸೋಫಾದ ಮೇಲೆ ಎಸೆದು ಬಚ್ಚಲಿಗೆ ಹೋದಳು. ರವಿ ತನ್ನಪಾಡಿಗೆ ತಾನು ಟೀವಿ ನೋಡುತ್ತಿದ್ದ. ಗ್ಲಾಸು ಮೂರನೇ ಸುತ್ತು ಮುಗಿದಿತ್ತು.

“ಊಟ ಆಯ್ತಾ” ಬಂದು ಪಕ್ಕದಲ್ಲಿ ಮಂಚದ ಮೇಳೆ ಉರುಳುತ್ತಾ ಕೇಳಿದಳು. ಆಗತಾನೆ ಸ್ನಾನ ಮಾಡಿದ್ದರಿಂದ ಮೂಗಿಗೆ ಸೋಪಿನ ವಾಸನೆ ಹಿತವಾಗಿ ಬರುತ್ತಿತ್ತು. ಬರೀ ಗೌನಿಗೆ ಮರುಳಾಗುವ ತನ್ನ ದೌರ್ಬಲ್ಯವನ್ನು ಕೊಂಚಹೊತ್ತಾದರೂ ದೂರವಿಡಬೇಕೆಂದು ಈ ಕಡೆ ತಿರುಗಿ ಮಲಗಿದ, ರವಿ.

ಟೀವಿಯ ರಿಮೋಟ್ ತೆಗೆದುಕೊಂಡು ಚಾನಲ್ ಬದಲಾಯಿಸತೊಡಳು. ಲೈಫ್‌ಟೈಂಗೆ ನಿಲ್ಲಿಸಿ ಆಸಕ್ತಿಯಿಂದ ನೋಡತೊಡಗಿದಳು. ಸಿಟ್‌ಕಾಮಿನಲ್ಲಿ ಎಲ್ಲೆಲ್ಲಿ ನಗಬೇಕೆಂದು ಹೇಳಿಕೊಡುವ ನಗುವ ಧ್ವನಿಗಳಿಗೆ ಪೈಪೋಟಿ ಕೊಡುವಂತೆ ನಗತೊಡಗಿದಳು. ದಿಂಬಿಗೊರಗಿ ಕಾಲೆತ್ತಿ ರವಿಯ ಮೇಲೆ ಹಾಕಿದಳು. ಮೈಮುರಿದು ಎದ್ದು ಕೆಳಗೆ ಕಾರ್ಪೆಟ್ಟಿನ ಮೇಲೆ ಕೂತಳು. “ಸ್ವಲ್ಪ ಬೆನ್ನು ಒತ್ತುತ್ತೀಯ” ಎಂದು ಕೇಳಿದಳು. ಇವೆಲ್ಲ ಆದದ್ದು ಕೇವಲ ಮೂರು ನಿಮಿಷದಲ್ಲಿ.
ಬೆನ್ನು ಒತ್ತುತ್ತಾ ” ನಾನು ಟೀವಿ ನೋಡುತ್ತಿದ್ದೆ.” ಎಂದ ರವಿ. ” ಇರಲಿ, ಲೈಫ್‌ಟೈಂ ನೋಡು, ಚೆನ್ನಾಗಿದೆ” ನಗುವಿನ ನಡುವೆ ರವಿಯ ಕೈಯನ್ನು ತನಗೆ ಬೇಕಾದ ಭುಜದ ಟ್ರಿಗರ್ ಪಾಯಿಂಟುಗಳ ಮೇಲೆ ಒತ್ತಿಸಿಕೊಳ್ಳುತ್ತಾ ಹೇಳಿದಳು.
“ನಾನು ವಿಂಬಲ್ಡನ್ ನೋಡಬೇಕೆಂದಿದ್ದೆ.” ಮತ್ತೆ ಸಂಕೋಚ ಅಂಟಿದ್ದ ಪಿರಿಕು. ತಾನು ಏನನ್ನೂ ನೇರವಾಗಿ ಹೇಳದೇ ಇದ್ದಿದ್ದೇ ಇದು ಇಲ್ಲಿಯತನಕ ಬರಲು ಕಾರಣವಾಗಿದೆ. ಇವತ್ತು ನಿಷ್ಠುರವಾಗಿಯೇ ಇರಬೇಕು ಅಂದುಕೊಂಡ.
“ಹೊರಗೆ ಲಿವಿಂಗ್ ರೂಮಿನಲ್ಲಿ ನೋಡಪ್ಪ. ಇದು ನನ್ನ ಫೇವರಿಟ್ ಶೋ.” ಕೈಗೊಂದು ಮುತ್ತಿಕ್ಕಿ ಹೇಳಿದಳು ಗೀತ.
“ಇಲ್ಲ, ನಾನು ಇಲ್ಲಿಯೇ ನೋಡುತ್ತೇನೆ, ನೀನು ಹೊರಗೆ ಹೋಗು” ಕಣ್ಣು ಮುಚ್ಚಿ ಹೇಳಿದ ರವಿ. ಧ್ವನಿ ನಡುಗುತ್ತಿತ್ತು.
” ನಾನು ಹೊರಗೆ ಹೋಗಬಹುದು ಎಂದು ನಂಬುವ ಧೈರ್ಯ ಯಾಕೆ ಮಾಡಿದ್ದೀಯ ನೀನು” ಕೇಳಿದಳು ಗೀತ. ಸಣ್ಣ ವಿಷಯವನ್ನು ದೊಡ್ಡದುಮಾಡಲು ಇಬ್ಬರಿಗೂ ತವಕವಾಗುತ್ತಿತ್ತು.
“ಯಾಕೆಂದರೆ, ಇದು ನನ್ನ ಮನೆ.” ಅಂದಮೇಲೆ ಜಾಸ್ತಿಯಾಯ್ತು ಅನ್ನಿಸಿತು. ಆದರೆ ಅಂದಾಗಿಬಿಟ್ಟಿತ್ತು.
“ಓಹೋ,” ಟಿವಿ ಆರಿಸಿದಳು. ಕಣ್ಣು ಮುಚ್ಚಿ ಬರುವ ಸಿಟ್ಟನ್ನು ತುಟಿಕಚ್ಚಿ ತಡೆದು ” ಇನ್ನೊಮ್ಮೆ ಹೀಗೆ ಮಾತಾಡಬೇಡ. ಸಂಬಳದ ಚೆಕ್ಕನ್ನು ನೋಡು. ಯಾರು ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದಾರೆ ಎಂದು. ಸುಮ್ಮನೆ ಮಾತು ಬೆಳೆಸಿ ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಳ್ಳಬೇಡ.”
“ಈ ಎರಡು ವರ್ಷದಿಂದ ಮಾತ್ರ.” ರವಿ ಬಿಡಲಿಲ್ಲ.” ಅದಕ್ಕೆ ಯಜಮಾನಿಯ ರೀತಿ ಆಡುವುದು ಸರಿಯಲ್ಲ”
“ನೀನಿರುವುದು ಭಾರತದಲ್ಲಲ್ಲ. ಇದ್ದರೂ ಅಲ್ಲಿಯೂ ನಿನ್ನ ಹಾಗೆ ಯಾರೂ ಅಡುವುದಿಲ್ಲ. ನಾನು ಹೆಣ್ಣಾದ ತಕ್ಷಣ ಮಟ್ಟಿಸಿಕೊಳ್ಳುವಳೇ ಆಗಬೇಕೆಂದು ಏನೂ ನಿಯಮವಿಲ್ಲ. ಒಂದೇ ಒಂದು ದಿನ ಮನೆಯಕೆಲಸ ಮಾಡುತ್ತೀಯಾ ನೀನು?”
” ನಾನ್ಯಾಕೆ ಮಾಡಬೇಕು. ಬೇಕಾದಷ್ಟು ಮಾಡಿದ್ದೇನೆ, ಈ ಮನೆಗೆ. ನೀನು ನಿನ್ನ ಕೆಲಸದ ಜೊತೆಗೆ ಮನೆಕೆಲಸ ಮಾಡಿದರೆ ಅದೇನು ತಪ್ಪು” ಮಾತು ತಾನೇ ಹಾಕಿಕೊಂಡ ಬೈಲಾಗಳನ್ನು ಎಲ್ಲೋ ಮೀರುತ್ತಿದೆ ಅನ್ನಿಸಿದರೂ, ಮನಸ್ಸಿನ ಯಾವುದೋ ಒಂದು ಭಾಗಕ್ಕೆ ಖುಷಿ ಸಿಕ್ಕುತ್ತಿದ್ದರಿಂದ ಹೀಗೆಯೇ ಮುಂದುವರಿಸೋಣವೆಂದೆನ್ನಿಸಿತು.” ನೀನು ಆಫೀಸಿನ ಪವರ್ ರಾಜಕೀಯಾನ ಮನೆಗೆ ತರಬೇಡ.ಮನೆಯಲ್ಲಿ ನಾನು ನಾನೇ.ನೀನು ನೀನೇ.” ಮಾತುಗಟ್ಟಿಯಾಗತೊಡಗಿತ್ತು, ಅವನಿಗೇ ಅಚ್ಚರಿಯಾಗುತ್ತಿತ್ತು, ಸಣ್ಣ ವಿಚಾರಗಳು ದೊಡ್ಡವಾಗುವ ಕ್ರಿಯೆ ಕೆಲವೊಮ್ಮೆ ಆ ವಿಷಯಗಳೊಂದಿಗೇ ಹಾಸುಹೊಕ್ಕಾಗಿರುತ್ತವೆಯೋ ಏನೋ, ಆದರೆ ಎಲ್ಲವಕ್ಕೂ ಕಾಲಕೂಡಿಬರಬೇಕು ಎಂದನ್ನಿಸಿತು, ಇಬ್ಬರಿಗೂ. ಇದು ಹೋಗುತ್ತಿರುವ ವೇಗ ಇಬ್ಬರಿಗೂ ಇಷ್ಟವಾಗದಿದ್ದರೂ ಉತ್ಕರ್ಷ ಕೆಟ್ಟ ಖುಶಿಯನ್ನು ರವಿಗಂತೂ ತರುತ್ತಿತ್ತು, ಅಥವಾ ಹಾಗಂದುಕೊಂಡಳು ಗೀತ. ಮಾತಾಡಬಾರದು, ಅದು ಈಡಿಯಸಿ ಎಂದೆನ್ನಿಸಿ ಸುಮ್ಮನಿದ್ದಳು. ಆದರೆ,ಇಂದು ಮಾತಾಡಲೇಬೇಕೆಂದು ನಿಶ್ಚಯ ಮಾಡಿದ್ದ, ರವಿ.
” ನೀವು ಹೆಂಗಸರು, ನನ್ನಂಥ ಗಂಡಂದಿರುವವರೆಗೆ ಈ ರೀತಿಯ ಧೋರಣೆಗಳಿಟ್ಟುಕೊಂಡು, ಅದಕ್ಕೆ ಸ್ತ್ರೀವಾದ, ಶೋಷಣೆ, ವಿಮೋಚನೆ ಇನ್ನೂ ಏನೇನನ್ನೋ ದೊಡ್ಡದೊಡ್ಡದಾಗಿ ಮಾತಾಡುತ್ತೀರಿ. ಆದರೆ ನಿನಗೂ ಗೊತ್ತಿರುವ ನಿಜವೇನು ಗೊತ್ತಾ, ಹೆಣ್ಣಿಗೆ ವಾದ ಮಾಡಬೇಕು ಅನ್ನಿಸಿದ್ದು ಆಕೆ ಬಲಿಷ್ಟೆಯಾದದ್ದರಿಂದಲ್ಲ. ನನ್ನಂಥ ನಾಮರ್ದಗಳು ದುರ್ಬಲರಾದ್ದರಿಂದ. ನನ್ನಂಥವರುಗಳನ್ನು ಮುಂದಿಟ್ಟುಕೊಂಡು ನಿನ್ನನ್ನು ನೀನು ಫೆಮಿನಿಸ್ಟ್ ಅಂತ ಕರಕೋತೀಯ. ಅಷ್ಟೆ.”
” ಅದು ತಪ್ಪೇನಿಲ್ಲ, ಪ್ರಪಂಚದಲ್ಲಿ ಪೂರ ಸತ್ಯ ಯಾವುದೂ ಇಲ್ಲ. ಮತ್ತೆ ನೀನು ಮಾಡುತ್ತಿರುವುದು ಒಂದು ತೀರ ದುರ್ಬಲವಾದ ವಾದ, ಕ್ಲಿಶೆ. ಅದು ಎಲ್ಲೂ ಗೆಲ್ಲುವುದಿಲ್ಲ. ಚೆನ್ನಮ್ಮನ ಕಾಲದಿಂದ ಇಲ್ಲಿನವರೆಗೂ ನಾವು ಇದ್ದೇ ಇದೀವಿ. ಇರುತ್ತಲೇ ಹೋಗುತ್ತೀವಿ.ಅದನ್ನು ಒಪ್ಪಿಕೊಳ್ಳೋ ಧೈರ್ಯ ನಿನ್ನಲಿಲ್ಲ. ನೀನು ನಿನ್ನನ್ನು ದುರ್ಬಲ, ನಾಮರ್ದ ಅಂತ ಕರಕೊಳ್ಳೋದು ಒಂದು ರೀತಿಯ ಡಿಫೆನ್ಸು, ಆತ್ಮರಕ್ಷಣೆ. ನಮ್ಮನ್ನೂ ನಾವು ವೀಕ್ ಅಂತ ತಿಳಕೊಳ್ಳಲಿ ಅನ್ನೋ ಭಾವನೆಯನ್ನು ನಮ್ಮಲ್ಲಿ ಮೂಡಿಸೋದಕ್ಕೆ ಎಸಿತಾ ಇರೋ ಕಟ್ಟ ಕಡೆಯ ಒಂದು ಹೊಲಸು ಅಸ್ತ್ರ. ಅದು ಯಾವತ್ತೂ ಕೆಲಸ ಮಾಡುವುದಿಲ್ಲ. ನಿನ್ನನ್ನಿಳಿಸಿಕೊಂಡು ನನ್ನನ್ನೇರಿಸಬೇಕಾಗಿಲ್ಲ. ನೀನು ಎಲ್ಲಿದ್ದೆಯೋ ಅಲ್ಲೇ ಇದ್ದೀಯಾ. ನಾನು ಮೇಲೆ ಹೋಗ್ತಾ ಇದೀನಿ, ಅದನ್ನು ಸುಮ್ಮನೆ ಒಪ್ಕೋ.” ಪಟ್ಟು ಬಿಡದೆ ಹೇಳಿದಳು ಗೀತ.
” ಹಾಗಾದ ತಕ್ಷಣ ನಿನ್ನ ಸುತ್ತ ಇರೋದೆಲ್ಲ ತುಚ್ಚ ಅಂತ ನೋಡೋದು ಎಷ್ಟು ಸರಿ” ಧ್ವನಿಯಲ್ಲಿ ಹತಾಶೆಯಿತ್ತು, ರವಿಯಲ್ಲಿ.
” ಹಾಗೆ ನಾನ್ಯಾವತ್ತೂ ಅಂದುಕೊಂಡಿಲ್ಲ. ನನ್ನ ದಿನಚರಿ, ಹೊರಗೆ ಕೆಲಸ ಮಾಡುತ್ತಿರುವ ಯಾವ ವ್ಯಕ್ತಿಯ ದಿನಚರಿಗಿಂತಾ ಏನೂ ಬೇರೆಯಾಗಿಲ್ಲ. ಆದ್ರೆ ಅದನ್ನು ನೋಡೋ ನಿನ್ನ ದೃಷ್ಟಿ ಸರಿಯಾಗಿಲ್ಲ ಅಷ್ಟೆ. ನನ್ನನ್ನು ಶೋಕೇಸಿನ ಬೊಂಬೆಯ ತರ ನೋಡೋದನ್ನು ಕಡಿಮೆ ಮಾಡಿ, ಸರೀಕಳ ಹಾಗೆ ನೋಡಲು ಪ್ರಯತ್ನ ಮಾಡು. ಆಗ ನಿನಗೇ ಅರ್ಥವಾಗುತ್ತದೆ. ಆದರೆ ಅದಕ್ಕೆ ನೀನು ರೆಡಿಯಾಗಿಲ್ಲ, ಅಷ್ಟೆ. ನಾನು ನಿನಗಿಂತ ಯಾಕೆ ಕಡಿಮೆ ಅನ್ನುವುದಕ್ಕೆ ಒಂದು ಒಳ್ಳೆಯ ಕಾರಣ ಕೊಡು.”
” ಯಾಕೆ ಕಡಿಮೆಯಾ, ನಿನ್ನನ್ನು ನೀನು ಕೇಳಿಕೋ. ಊರು ಕೇರಿ ಗೊತ್ತಿಲ್ಲದ ನನ್ನನ್ನು ಮದುವೆ ಮಾಡಿಕೊಂಡು ದೇಶ ಹಾರಿಬಂದರೆ ಕನಸೇ ಬೀಳದ ನಿನ್ನ ಕಣ್ಣುಗಳಿಗೂ ಕನಸುಬಿದ್ದು ಅವುಗಳನ್ನು ನನಸು ಮಾಡ್ಕೋಬಹುದು ಅನ್ನೋದನ್ನು ಯೋಚನೆ ಮಾಡುವುದಕ್ಕೆ ನಿನಗೆ ಸಾಧ್ಯವಾಗುವುದಕ್ಕೆ. ನಿನ್ನ ಓದು ಮುಗಿಯುವತನಕ ಅಥವಾ ಓದದಿದ್ದರೆ ಕೊನೆಯತನಕ ನಾನು ನೋಡ್ಕೋತೀನಿ ಅನ್ನೋ ಟೇಕನ್ ಫಾರ್ ಗ್ರಾಂಟೆಡ್ ನಂಬಿಕೆಗೆ, ನಿನ್ನನ್ನು ಸಾಯೋವರೆಗೂ ನೋಡ್ಕೋತೀನಿ ಅಂತ ನೀನು ನಿನ್ನ ಮನೆಯವರು ತಿಳ್ಕೊಂಡಿದೀರಲ್ಲ, ಆ ಗ್ಯಾರಂಟಿಗೆ. ನಿನಗೆ ಹುಶಾರಿಲ್ಲದಿದ್ದರೆ, ಮನೇಲಿ ಸಾಮಾನು ಕೆಟ್ಟರೆ ಡಾಕ್ಟರನ್ನೋ ರಿಪೇರಿಯವನನ್ನೋ ಕರೆಯುವ ಮುಂಚೆ ನನ್ನನ್ನು ಕರೀತಿಯಲ್ಲ, ನನ್ನ ಡೀ ಫಾಲ್ಟ್ ವ್ಯಕ್ತಿತ್ವಕ್ಕೆ. ಈಗ ನೀನು ಬಲಮಿದುಳಿಗೆ ಗೊತ್ತಾಗದಂತೆ ಎಡಮಿದುಳಿಗೆ ಯೋಚನೆಮಾಡಲು ಕಲಿಸಿದ್ದೀಯಲ್ಲ, ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ.” ರವಿ ಏನೇನು ಹೇಳಬೇಕೆಂದುಕೊಂಡಿದ್ದನೋ ಎಲ್ಲವನ್ನೂ ಒಟ್ಟಿಗೇ ಹೇಳಿ ಮುಗಿಸಿದ್ದ.
” ಸುಮ್ಮನೆ ಕೂಗಾಡಬೇಡ. ನೀನು ಏನೇ ಹೇಳು. ನನಗೆ ನಿನ್ನ ಮೇಲೆ ಏನು ನಂಬಿಕೆಗಳು, ಸಂಶಯಗಳು, ಇಶ್ಯೂಗಳು ಇದ್ದವೋ ನಿನಗೂ ಅವೇ ಇದ್ದವು, ನನ್ನ ಮೇಲೆ. ಇಲ್ಲದಿದ್ದರೆ ನನ್ನನ್ಯಾಕೆ ಅರ್ರಿಸುತ್ತಿದ್ದೆ. ನೀನಿಲ್ಲದಿದ್ದರೆ ನನಗೆ ಇನ್ನೊಬ್ಬ ಸಿಗುತ್ತಲೇ ಇದ್ದ. ನಿನಗೂ ಅಷ್ಟೆ. ಈಗಲೂ ಅಷ್ಟೆ. ಯಾರೂ ಯಾರಿಗೂ ಎಕ್ಸ್‌ಕ್ಲ್ಯೂಸಿವ್ ಅಲ್ಲ. ಎರಡು ವರ್ಷದ ಹಿಂದೆ ನಾನು ನಿನ್ನನ್ನು ಅವಲಂಬಿಸಿದ್ದೆ ನಿಜ, ಅದು ಜೀವನ ಪೂರ್ತಿ ನಾನು ಇನ್ನೊಬ್ಬನ ಹಂಗಿನಲ್ಲಿರಬಾರದೆಂದು ನನಗೆ ನಾನೇ ಮಾಡಿಕೊಂಡ ಹೊಂದಾಣಿಕೆ. ಅದಕ್ಕೆ ನನ್ನಿಂದ ನಿನಗೆ ಏನು ಸಿಕ್ಕಿದೆ ಅಂತ ನೀನೇ ಕೇಳಿಕೋ. ಎಲ್ಲವನ್ನೂ ದುಡ್ಡಿನ ಮೂಲಕ ಅಳೆಯೋದಾದ್ರೆ, ನನಗೂ ಲೆಕ್ಕ ಬರುತ್ತೆ” ಮುಖಕ್ಕೆ ಹೊಡೆದಂತೆ ಹೇಳಿ ಪಕ್ಕಕ್ಕೆ ತಿರುಗಿ ಮಲಗಿದಳು.

ರಾತ್ರಿ ಎಷ್ಟು ಹೊತ್ತೋ ಗೊತ್ತಿಲ್ಲ, ಗೀತಳ ಕೈ ರವಿಯ ಬೆನ್ನಮೇಲೆ ಬಿದ್ದಿತ್ತು, ಬೆಳಿಗ್ಗೆ ಎದ್ದಾಗ ರವಿಯ ಕೈಗಳೂ ಗೀತಳ ಮೇಲೆ ಬಿದ್ದಿದ್ದವು. ಎದ್ದು ರವಿಯ ಮುಖನೋಡಿ ನಗುತ್ತಾ ಹೋದಳು, ಗೀತ. ಕಾಮ ಗೀಳಾಗುವುದು, ಪ್ರೇಮ ಬೋಳಾಗಿ ಗೋಳಾದಾಗ ಮಾತ್ರ, ಬೇರೆ ಬರೆದ ಕವಿಗೆ ತಲೆಯಲ್ಲಿ ಬುದ್ಧಿಯಿಲ್ಲ ಅಂದುಕೊಂಡ ರವಿ.

ಆ ಫೀಸಿನಲ್ಲಿ ಸಿಕ್ಕಿದ್ದ ಬಿಲ್ಲಿ. “ನನ್ನ ಹೆಂಡತಿಯಿಂದ ಡೈವೋರ್ಸ್ ಸಿಕ್ಕಿತು” ಎಂದು ಖುಷಿಯಾಗಿ ಹೇಳಿದ. ಡೈವೋರ್ಸ್‌ಗೆ ಪ್ರಯತ್ನ ಮಾಡುತ್ತಿದ್ದಾನೆಂದು ರವಿಗೂ ಗೊತ್ತಿತ್ತು. ಆದರೆ ಮುಕ್ತಿಯಲ್ಲಿ ಇಷ್ಟೊಂದು ಸಂತೋಷವಿರುತ್ತದೆ ಎಂದು ಆತನಿಗೆ ಗೊತ್ತಿರಲಿಲ್ಲ. “ಒಟ್ಟು ಎಪ್ಪತ್ತು ಸಾವಿರ ಡಾಲರ್ ಕೈಬಿಟ್ಟಿತು.” ಅಂದ. ಒಂದು ಕ್ಷಣ ಆಶ್ಚರ್ಯವಾಯಿತು ರವಿಗೆ. “ಯಾಕೆ, ಆಕೆಯೂ ಕೆಲಸ ಮಾಡುತ್ತಿದ್ದಳು ಅಲ್ಲವೇ. ಅಲಿಮೊನಿ ಏನೂ ಕೊಡಬೇಕಾಗಿರಲಿಲ್ಲ ಅಲ್ಲವೇ.” ರವಿ ಮನಸ್ಸಿನಲ್ಲಿದ್ದ ಚಿಂತೆಯನ್ನು ಕೇಳಿಕೊಂಡ.

“ಚಮಚದಿಂದ ಎಲ್ಲವನ್ನೂ ಹಂಚಿಕೊಂಡಳು, ಮಾಯಾಂಗಿನಿ.ಐದುವರ್ಷ ಸಂಸಾರ ಮಾಡಿದ ಒಂದುಕಾರಣವೇ ಸಾಕು. ಮನೆಯ ಮೇಲೆ ಆಕೆ ಅಧಿಕಾರ ಪಡೆಯಲು. ಕೆಲಸಮಾಡಲಿ, ಬಿಡಲಿ. ಮನೆ, ಮನೆಯಲ್ಲಿರೋ ಸಾಮಾನುಗಳೇ ಸಾಕು ನನ್ನನ್ನು ದಿವಾಳಿ ಏಳಿಸಲು. ಯಾರೋ ಸರಿಯಾದ ಲಾಯರ್‌ನೇ ಹಿಡಿದಿದ್ದಾಳೆ. ನನ್ನ ಮನೆಯಲ್ಲಿ ನನ್ನನ್ನೇ ಇರದಹಾಗೆ ಮಾಡಿದಳು. ಮನೆಗೆ ದುಡ್ಡು ಕೊಟ್ಟವ ಮಾತ್ರ ನಾನಾದೆ. ಮನೆಯನ್ನು ಬೇಳೆಸಿ ಅದಕ್ಕೆ ರೂಪು ಕೊಟ್ಟಿದ್ದು ಆಕೆ, ಆದ್ದರಿಂದ ಮನೆ ಆಕೆಗೆ ಹೋಗಬೇಕು ಎಂದು ವಾದಿಸಿ ಗೆದ್ದಳು. ಆಕೆ ಇಷ್ಟೊಂದು ವ್ಯವಹಾರಸ್ಥೆ ಎಂದು ಗೊತ್ತಿದ್ದರೆ ಇನ್ನೊಂದೆರಡು ವರ್ಷ ಪ್ಲಾನ್ ಮಾಡಿ ಆಮೇಲೆ ಬಿಡುತ್ತಿದೆ.” ಎಂದ ಬಿಲ್ಲಿ.

” ಎನಿವೇ, ಕಂಗ್ರಾಟ್ಸ್ ಹೇಳಬೇಕೋ ಏನೋ ಗೊತ್ತಾಗುತ್ತಾ ಇಲ್ಲ. ಮುಂದಿನದೇನು ಪ್ಲಾನ್. ಡೇಟು, ಊಟ, ಪ್ರಪೋಸಲ್ಲು… ಮತ್ತೆ ಮೊದಲ ಮನೆಗೇ ವಾಪಸ್ಸು. ನಿಮ್ಮಗಳವ್ಯಾಪಾರವೇ ಅರ್ಥ ಆಗೋಲ್ಲ. ಎಲ್ಲ ಅನುಭವಿಸಿದ ಮೇಲೂ ಮತ್ತೆ ಯಾಕೆ ಇನ್ನೊಮ್ಮೆ ಮದುವೆ ಬೇಕು”
“ಮತ್ತೆ ಮದುವೆ ಆಗ್ತಾರೆ ಅಂದದ್ದು ಯಾರು”
” ಇದು ನಿನ್ನ ಎಷ್ಟನೇ ಮದುವೆ, “ಕೇಳಿದ ರವಿ.
“ಎರಡನೆಯದು. ಸಾಕಷ್ಟು ಬುದ್ಧಿ ಬಂದಿದೆ. ಮತ್ತೆ ಮದುವೆ ಅನ್ನೋ ಬಾವೀಲಿ ಬೀಳೋದಿಲ್ಲ. ಇನ್ನೇನಿದ್ದರೂ ಮದುವೆಯ ಹೊರಗಿನ ಸಂಬಂಧ ಮಾತ್ರ. ಯಾವಳಾದ್ರೂ ಸಿಕ್ಕರೆ. ನನ್ನ ಜೀವನ ನನ್ನದು, ಆಕೆಯದು ಆಕೆಗೆ. ಚೆನ್ನಾಗಿದ್ದರೆ ಮುಂದಿನ ಹಂತ. ಇಲ್ಲದಿದ್ದರೆ ಆಡಿಯೋಸ್”
“ಎಲ್ಲಿಯವರೆಗೆ” ಕುತೂಹಲದಿಂದ ಕೇಳಿದ ರವಿ.
” ಕೊನೆಯವರೆಗೆ”
“ಅಂಥವಳು ಸಿಗಬೇಕಲ್ಲ”

“ಹುಡುಕಿದರೆ ಸಿಕ್ಕೇ ಸಿಗ್ತಾರೆ, ರವಿ. ಇಬ್ಬರು ವ್ಯಕ್ತಿಗಳ ಸಂಬಂಧ ಒಂದು ವ್ಯವಸ್ಥೆ ಆಗೋದು ಮದುವೆಯಿಂದಲೇ. ಅದೊಂದು ವ್ಯವಸ್ಥೆ ಆದಮೇಲೆ ಅಲ್ಲಿ ಮೇಲಿನವ, ಕೆಳಗಿನವ, ನಿಯಮಗಳು ಎಲ್ಲಾ ಶುರೂ ಆಗ್ತವೆ. ಸರಕಾರ ತನ್ನ ಮೂಗು ತೂರಿಸುತ್ತೆ. ಐ‌ಆರ್‌ಎಸ್ ಒಟ್ಟಿಗೇ ತೆರಿಗೆ ಕೇಳುತ್ತೆ. ಎರದೂ ವ್ಯಕ್ತಿಗಳ ಹೆಸರು ಒಂದೇ ಚೆಕ್ಕಿನ ಮೇಲೆ ಬಂದಾಗ ಆಗೋ ರೋಮಾಂಚನ ಮೊದಲ ಮೂರು ದಿನಗಳು ಮಾತ್ರ. ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ತಲೆಕೆಟ್ಟರೂ ಸಾಕು, ಯಾವನೋ ಒಬ್ಬ ಒಳ್ಳೇ ಲಾಯರು ಬರ್ತಾನೆ. ಇಬ್ಬರೂ ಒಟ್ಟಿಗೆ ಇದ್ದಾಗ ಧಂಡಿಯಾಗಿ ಇದೆ ಅನ್ನಿಸಿದ್ದು ಸಮನಾಗಿ ಹೊಂಚಿಕೊಂಡರೆ ಎಲ್ಲ ಕಳಕೊಂಡಿದೀವಿ ಅನ್ನೋ ಭಾವನೆ ಇಬ್ಬರಿಗೂ ಬರುತ್ತದೆ. ಸರಕಾರ ಒಂದಿಷ್ಟು, ಲಾಯರ್ ಒಂದಿಷ್ಟು ಕಿತ್ಕೋತಾರೆ. ಪ್ರಾಕ್ಟಿಕಲ್ಲಾಗಿ ನೋಡಿದರೆ ಮದುವೆ ಅಷ್ಟು ಒಳ್ಳೇ ಬಿಸಿನೆಸ್ ಡಿಸಿಷನ್ ಅಲ್ಲ ಅನ್ನಿಸುತ್ತದೆ. ಮತ್ತೆಲ್ಲಾ ಆದಮೇಲೆ, ನಷ್ಟಕ್ಕೆ ಎಮೋಷನಲ್ ಬಣ್ಣ ಬೇರೆ. ಆದ್ದರಿಂದ ಇನ್ಮೇಲೆ ಯಾರಹತ್ತಿರಾನಾದ್ರೂ ಸಂಬಂಧ ಬೆಳೆಸಿದರೆ, ಅದು ಈ ಸಿಸ್ಟಂನ ಹತ್ತಿರ ಬರುತ್ತಿದೆ ಅನ್ನೋ ಹೊತ್ತಿಗೆ ನುಣುಚಿಕೊಳ್ಳುವಷ್ಟು ಜಾಣ್ಮೆ ಕಲಿಸ್ತಾ ಇದೆ. ಅದೇನಿದ್ರೂ ಒಂಥರಾ ವೃತ್ತಿಪರತೆ ಇದಹಾಗೆ. ನಿನ್ನ ಜೊತೆ ಇದೆಯಲ್ಲ ನನ್ನ ಸಂಬಂಧ, ಹಾಗೆ. ಅದು ವ್ಯವಸ್ಥಿತವಾಗೋದಕ್ಕೆ ಸಾಧ್ಯವೇ ಇಲ್ಲ. ಅನ್ಲೆಸ್……” ಎಂದು ಕಣ್ಣು ಹೊಡೆದ ಬಿಲ್ಲಿ.

ಎರಡೂ ಕೈ ಮೇಲೆತ್ತಿ ಭುಜ ಮೇಲೆ ಕುಣಿಸಿ ಬೆಳ್ಳನೆಯ “ಅಯ್ಯೋ” ಮಾಡಿದ, ರವಿ. ಅದರಲ್ಲಿ ಆಶ್ಚರ್ಯ, ಭಯ, ಚೇಷ್ಟೆ ಹಾಗೂ ನಿರಾಕರಣೆ ಎಲ್ಲವೂ ಕ್ರಮವಾಗಿದ್ದವು.

ರಾತ್ರಿ ಮನೆಗೆ ಬಂದ ರವಿ. ಗೀತ ಇನ್ನೂ ಮನೆಗೆ ಬಂದಿರಲಿಲ್ಲ. ಕೈ ಫ್ರಿಜ್ ಮೇಲಿನ ಜ್ಯಾಕ್ ಡೇನಿಯಲ್‌ಗೆ ಹೋದದ್ದು ಏಕೋ ತಡೆಯಿತು. ಪಕ್ಕದಲ್ಲಿದ್ದ ಮರ್ಲೋ ಬಗ್ಗಿಸಿಕೊಂಡ. ಫ್ರಿಜ್ಜಿನಲ್ಲಿದ್ದ ಹಸಿರು ಈರುಳ್ಳಿ ಹೆಚ್ಚತೊಡಗಿದ.

ಅವನಂದುಕೊಂಡಿದ್ದಕ್ಕಿಂತಾ ಸ್ವಲ್ಪ ಬೇಗಲೇ ಬಂದಳು, ಗೀತ. ರವಿಯ ಗ್ಲಾಸ್ ನೋಡಿ ನಕ್ಕಳು. ತಾನೂ ಮರ್ಲೋ ಬಗ್ಗಿಸಿಕೊಂಡಳು. ” ಅಡಿಗೆ ಮಾಡ್ತಿದೀಯ” ಕೇಳಿದಳು.
ಹೌದು ಎಂದು ನಕ್ಕ.
” ನಾನು ಚೈನೀಸ್ ತಂದಿದ್ದೇನೆ. ತಿಂತೀಯ. ನನಗೆ ಇಷ್ಟಾಂತ ತಂದೆ, ನನಗ್ಗೊತ್ತು, ನಿನಗೆ ಅಷ್ಟೊಂದು ಇಷ್ಟ ಇಲ್ಲಾ ಅಂತ. ” ಅಂದಳು.
” ಮತ್ಯಾಕೆ ತಂದೆ”
” ನನಗೋಸ್ಕರ”
” ನಾನೂ ಅಭ್ಯಾಸ ಮಾಡ್ಕೊಂಡರೆ”
” ನಾಳೆಯಿಂದ ಪ್ರಯತ್ನಪಡು ಬೇಕಾದರೆ. ಇವತ್ತು ನನಗೊಬ್ಬಳಿಗೆ ಸಾಕಾಗುವಷ್ಟು ತಂದಿದ್ದೀನಿ. ಬೇಕಾದರೆ ರುಚಿ ನೋಡು” ಎಂದು ತಂದಿದ್ದ ಅರ್ಧಕ್ಕಿಂತ ಜಾಸ್ತಿಯೇ ರವಿಯ ತಟ್ಟೆಗೆ ಹಾಕಿದಳು.
” ರುಚಿ ತುಂಬಾ ಚೆನ್ನಾಗಿದೆ.” ಹೇಳಿದ ರವಿ.
“ನಾನು ಮಲಗುತ್ತೇನೆ. ಸುಸ್ತಾಗಿದೆ.” ಹೇಳಿ ರೂಮಿಗೆ ಹೋದಳು.
” ನಾನೂ ಬಂದೆ.” ಬಾತ್‌ರೂಮಿಗೆ ಹೋಗಿ ಕೈಕಾಲು ತೊಳೆದು ದೇವರಪಟವನ್ನು ಕಣ್ಣಿಗೊತ್ತಿಕೊಂಡ. ತನ್ನ ಅವಸ್ಥೆ ನೋಡಿ ತನಗೇ ನಗು ಬಂತು. ಕೆಲವೊಂದು ಅಭ್ಯಾಸಗಳು, ಒಳ್ಳೆಯವೋ ಕೆಟ್ಟವೋ ಸುಲಭವಾಗಿ ಹೋಗುವುದಿಲ್ಲ ಅನ್ನಿಸಿತು. ಜೇಬಿನಲ್ಲಿ ಹಿಂದಿನ ದಿನ ಬರೆದಿಟ್ಟ ಚೀಟಿಯನ್ನೊಮ್ಮೆ ಬಿಡಿಸಿ ನೋಡಿದ. ಇದೇ ನಾಲ್ಕು ಕಾರಣಗಳನ್ನು ಸ್ವಲ್ಪ ತಿರುಚಿದರೆ ಆರಾಮಿರುತ್ತದೆ ಅಂದುಕೊಂಡ. ದೇವರಗೂಡಿನಲ್ಲಿ ಹೊರನಾಡ ಅನ್ನಪೂರ್ಣೇಶ್ವರಿಯ ಚಿತ್ರದ ಪಕ್ಕ ಹಳೇ ಇಂಗ್ಲಿಷ್ ಲಿಪಿಯಲ್ಲಿರುವ, ಗೀತ ಹಾಕಿದ್ದ ಬಿಬ್ಲಿಕಲ್ ಹೌದೋ ಅಲ್ಲವೋ ಗೊತ್ತಿಲ್ಲದ ಸುಭಾಷಿತವೊಂದನ್ನು ನೋಡಿದ. ಸರ್ವಧರ್ಮಸಮನ್ವಯವೆನ್ನುವ ಕಾನ್ಸೆಪ್ಟಿಗೆ ಹತ್ತಿರ ಬರುವ ಗೀತಳ ಪ್ರಯತ್ನವದಾಗಿತ್ತು.

“God
Grant me the serenity
to accept things that
I cannot change…..
courage to
change things that I can…. and
the wisdom to know the
difference.”

ಗಟ್ಟಿಯಾಗಿ ಓದಿದ. ಮೆದುವಾಗಿ “ಏಮನ್” ಅಂದ.
*****
ಜುಲೈ ೯, ೨೦೦೨

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.