ಗುಂಡಾಭಟ್ಟರ ಮಡಿಯೆಂದರೆ ನಮ್ಮ ಹಳ್ಳಿಯಲ್ಲೆಲ್ಲ ಒಂದು ಗಾದೆಯ ಮಾತಾಗಿದೆ. ಅದು ಅವರು ಮಾತ್ರಾರ್ಜಿತವಾಗಿ ಪಡೆದುಕೊಂಡದ್ದು. ಮಡಿ-ಮೈಲಿಗೆಗಳಲ್ಲಿದ್ದ ಅವರ ಶ್ರದ್ಧೆ ಅವರ ತಾಯಿಯವರ ಶ್ರದ್ಧೆಯಷ್ಟು ಉಜ್ವಲವಾಗಿರದಿದ್ದರೂ ಸಾಕಷ್ಟು ಪ್ರಖರವಾಗಿತ್ತು.
ಮೈಲಿಗೆ ನಿವಾರಣೆಯ ಮೊದಲನೇ ಹೆಜ್ಜೆಯೆಂದರೆ ಸ್ನಾನ. ಅವರ ತಾಯಿಯವರು ಮಾತ್ರ ಈ ಹೆಜ್ಜೆಯನ್ನು ಅತಿ ‘ಖಟ್ಟಾ’ ರೀತಿಯಿಂದಲೇ ಪಾಲಿಸುತ್ತಿದ್ದರು. ಯಾವುದೇ ಸಣ್ಣ ದೊಡ್ಡ ಕಾರಣಗಳಿಂದ ಯಾವ ಕಾಲಕ್ಕೂ ಅವರಿಗೆ ‘ಶೀ, ಮೈಲಿಗೆಯಾಯಿತು’ ಎನಿಸಿದರೆ ಸಾಕು ; ಸೆಗಣಿ ನೀರಿನಿಂದ ಮೊದಲು ಸ್ನಾನಮಾಡಿ ಅನಂತರ ತಣ್ಣೀರ ಸ್ನಾನ ! ಅವರು ತಮ್ಮ ಜೀವನದಲ್ಲಿ ಸೆಗಣಿಗೆ ಅತ್ಯಂತ ಮಹತ್ವದ ಸ್ಥಾನ ಕೊಟ್ಟಿದ್ದರು.
ಒಮ್ಮೆ ಸಣ್ಣವರಿದ್ದಾಗ ಗುಂಡಾಭಟ್ಟರು ಕೈಯಲ್ಲೊಂದು ‘ಕಾಯಿಬಾಗ’ ಹಿಡಿದು ತಿನ್ನುತ್ತ ಹೊರಗೆ ಬಂದರಂತೆ. ಆ ಕೆಟ್ಟ ಕಾಗೆ ಎಲ್ಲಿಂದ ನೋಡುತ್ತಿತ್ತೋ, ಒಮ್ಮೆಲೇ ಅವರ ಕಾಯಿಬಾಗದ ಮೇಲೆ ಎರಗಿಬಿಟ್ಟಿತು. ಭಟ್ಟರು ಸಾಕಷ್ಟು ಗಟ್ಟಿಯಾಗಿಯೇ ಹಿಡಿದಿದ್ದರಿಂದ ಅದು ಕೈಯಿಂದ ಜಾರಲಿಲ್ಲ. ಇದನ್ನು ಅಡುಗೆಯ ಮನೆಯಿಂದಲೇ ಅವರ ಮಾತೋಶ್ರೀಯವರು ಕಂಡಿರಬೇಕು. “ಅಯ್ಯೋ ಮೈಲಿಗೆ ! ಕಾಗೆ ಮುಟ್ಟಿತಲ್ಲವೋ ಬೆಳಗ್ಗೆ ಎದ್ದಕೂಡಲೇ” ಎಂದು ಕೂಗುತ್ತ ಬಂದರು. “ಇಲ್ಲವ್ವ, ಅದು ನನಗೇನು ಮುಟ್ಟಲಿಲ್ಲ. ಬರೇ ಇದಕಷ್ಟೇ ಚುಂಚು ಬಡೆಯಿತು” ಎಂದರು ಭಟ್ಟರು. ಆದರೂ ಅವರು ಕೇಳಿದರಲ್ಲವೇ. ಕಣ್ಣಾರೆ ಕಂಡಬಳಿಕ ಉಪಾಯವುಂಟೇ ? ಮಗನಿಗೆ ದರ ದರ ಬಾವಿಯ ಮೇಲೆ ಎಳಕೊಂಡೇ ಹೋದರು. “ಚಲೋ ಕಾಯಿಬಾಗ. ಹೊರಗೆ ಹೋಗಬೇಡವೋ, ಒಳಗೆ ಕೂತು ಸಾಯೋ ಎಂದರೆ ಕೇಳ್ತಾನೆಲ್ಲಿ” ಎಂದು ಅದನ್ನೂ ಸೆಗಣಿ ನೀರಿನಿಂದ
ಪವಿತ್ರಗೊಳಿಸಿ, ಮಗನ ಕೈಯಲ್ಲಿ ಕೊಟ್ಟರು. ಮಗನು ಅತಿ ಭಕ್ತಿಯಿಂದಲೇ ಅದನ್ನು ಅವೀಕರಿಸಿದನೆಂದು ಬೇರೆ ಹೇಳಬೇಕಿಲ್ಲ.
ಕೋಳಿಯ ಪಿಷ್ಠವನ್ನು ಮೆಟ್ಟಿದರೆಂದು ಒಂದು ಸಲ, ನಾಯಿಯ ಬಾಲ ತಾಗಿದಂತಾಯಿತೆಂದು ಒಂದು ಸಲ, ಹಿತ್ತಲಲ್ಲಿ ಬಿದ್ದ ಹಳೇ ವಸ್ತ್ರದ ‘ಚಿಂದಿ’ ಮೆಟ್ಟಿದರೆಂದೊಂದು ಸಲ,
ಹೀಗೆ ಹಲವು ಸಲ ಸೆಗಣೀ ನೀರಿನ ಮೊರೆ ಹೋಗುವುದರಲ್ಲಿಯೇ ಅವರ ದಿನದ ಮುಕ್ಕಾಲು ಪಾಲು ವ್ಯಯವಾಗುತ್ತಿತ್ತು.
ಗುಂಡಾಭಟ್ಟರು ತಮ್ಮ ಮಡಿಯನ್ನು ಇಷ್ಟು ‘ಖಟ್ಟಾ’ ರೀತಿಯಿಂದ ಪಾಲಿಸುತ್ತಿರಲಿಲ್ಲ. ಅವರ ಮೈಲಿಗೆ ಕಳೆಯಲು ಬರೇ ತಣ್ಣೀರು ಜಳಕವೇ ಸಾಲುತ್ತಿತ್ತು. ಮೇಲಾಗಿ ಅವರ ಮೈಲಿಗೆಯಲ್ಲಿ ಎರಡು ಬಗೆಯಿದ್ದುವು : ಇದು ಆಗೇರ, ಚಮಗಾರರದೇ ಎಂದು ಪ್ರತ್ಯಕ್ಷ ಪುರಾವೆಗಳಿರದ ಹಳೇ ವಸ್ತ್ರದ ಚಿಂದಿಯನ್ನು ಮೆಟ್ಟಿದರೆ, ರಸ್ತೆ ಮೇಲೆ ಯಾರಾದರೂ ಉಗುಳಿದ ಕವಳದೆಂಜಲ ಮೆಟ್ಟಿದರೆ, ತಾನು ಮುಟ್ಟಿದ ಒಣ (ಹಸಿಯಿದ್ದರೆ ಪರಿವೆಯಿಲ್ಲ-ಅದು ಮೈಲಿಗೆ ವಾಹಕವಲ್ಲವೇನೋ !) ಕಟ್ಟಿಗೆಗೇ ಒಬ್ಬ ಹೊಲೆಯ ಮುಟ್ಟಿದರೆ ಬರೇ ತಣ್ಣೀರು ಜಳಕದಿಂದಲೇ ಅವರು ತಮ್ಮ ಮೈಲಿಗೆಯನ್ನು ಕಳೆಯುತ್ತಿದ್ದರು. ಆದರೆ ಪ್ರತ್ಯಕ್ಷ ಒಬ್ಬ ಅಗೇರ ಇಲ್ಲವೆ ಹೊಲೆಯನಿಗೆ ಕೈ ಸೋಂಕಿದರೆ, ಮುಟ್ಟಾದವರ ವಸ್ತ್ರಕ್ಕೆ ಕಾಲು ತಾಗಿದರೆ ಇಂತಹ ಘೋರ ಮೈಲಿಗೆಯನ್ನು ತಣ್ಣೀರ ಸ್ನಾನ, ಪಂಚಗವಾಕ್ಷ, ಗೋಮೂತ್ರ, ಕೊನೆಗೊಂದು ಹೊಸ ಜನಿವಾರ ಇಷ್ಟೆಲ್ಲ ಸಾಧನಗಳಿಂದಲೇ ನಿವಾರಿಸಬೇಕು. ಅವರ ಈ ಮಡಿ, ಮೈಲಿಗೆಗಳ ಮೇಲೆ ಅನೇಕ ಮನರಂಜಕವಾದ ಕತೆಗಳು ನಮ್ಮ ಹಳ್ಳಿಯಲ್ಲೆಲ್ಲ ಹಬ್ಬಿವೆ. ಆದರೆ ಅವೆಲ್ಲವುಗಳಲ್ಲಿ ಪ್ರಸ್ತುತ ಕತೆಯು ನನ್ನ ಮನ ಸೆಳೆದಿದೆ.
ಗುಂಡಾಭಟ್ಟರಿಗೆ ಪಿತ್ರಾರ್ಜಿತವಾಗಿ ಬಂದ ಮನೆ ಹುಲ್ಲಿನದು-ನಮ್ಮ ಮನೆಯ ಎಡಕ್ಕಿದ್ದ ಹಿತ್ತಲಲ್ಲಿತ್ತು. ಅವರ ಹಿತ್ತಲಿಗೆ ತಾಗಿಯೇ ಪಟೇಲ ದೊಡ್ತಮ್ಮನಾಯ್ಕರ ಗದ್ದೆಗಳು. ಮೊದಲು ಆ ಹೊಲಗಳನ್ನು ಆ ಮಾಸ್ತಿ ಹೊನ್ನಪ್ಪನೇ ಮಾಡುತ್ತಿದ್ದ. ಆದರೆ ಈ ಕೆಲವು ವರ್ಷಗಳಿಂದ ಅಗೇರ ಎಂಕು, ಮುರ್ಕುಂಡಿ ಅದನ್ನು ಮಾಡುತ್ತಿದ್ದಾರೆ. ದೊಡ್ತಮ್ಮ ನಾಯ್ಕ ಆ ಗದ್ದೆಯ ತಡಿಯಲ್ಲಿಯೇ ಅವರಿಗೆ ಗುಡಿಸಲುಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಆ ಗುಡಿಸಲುಗಳಿಗೂ ಇವರ ಹಿತ್ತಲಿಗೂ ನಡುವೆ ಹರಕು-ಮುರುಕಾದ ಬೇಲಿಯೊಂದಿದೆ. ಅಗೇರರ ಹೊಲಸು ಜೀವನ ನೋಡಿ ಊರೊಳಗಿನ ಮೈಲಿಗೆಯೆಲ್ಲ ತಮ್ಮ ನೆರೆಯಲ್ಲೇ ಬೀಡುಬಿಟ್ಟಿತೆಂದು ಭಾಸವಾಯಿತು ಭಟ್ಟರಿಗೆ. ಅವರ ತಾಯಿಯವರು ಈಗ ಬದುಕಿದ್ದರೆ ಏನು ಮಾಡುತ್ತಿದ್ದರೋ ! ಒಮ್ಮೊಮ್ಮೆ ತಮ್ಮ ತಾಯಿಯ ಪ್ರಖರ ಮಡಿಯ ಪ್ರಭಾವದ ಝಳಕ್ಕೆ ಬೆದರಿಯೇ ಅದು ಅಷ್ಟು ದಿನ ಅಲ್ಲಿ ಬರಲಿಲ್ಲವೇನೋ ಎಂದು ಅವರಿಗೆ ಅನಿಸಿದ್ದೂ ಉಂಟು.
ಅಂತೂ ನೋಡುನೋಡುತ್ತಿರುವಷ್ಟರಲ್ಲಿ ಅಗೇರರ ಕೋಳಿಯ ಹಿಂಡುಗಳು, ಗಂಜಿ, ಅಂಬಲಿ ಕುದಿಸುವ ಮಣ್ಣಿನ ಗಡಿಗೆಯ ತುಣುಕುಗಳು, ವಸ್ತ್ರದ ಚಿಂದಿಗಳು ಇವರ ಹಿತ್ತಲಿನ ಪವಿತ್ರತೆಯ ಮೇಲೆ ದಾಳಿ ಮಾಡಿಬಿಟ್ಟವು. ದಿನ ಹತ್ತೆಂಟು ಸಲ ಜಗಳದ ಕಿಡಿ ಹಾರಹತ್ತಿದುವು. ನಿರ್ಭಯದಿಂದ ಇವರ ಬೇಲಿಯೊಳಗಿನ ಕಟ್ಟಿಗೆಯೇ ಮಾಯವಾಗಹತ್ತಿತು. ಇನ್ನೇನು ಕೆಲವು ದಿನಗಳಲ್ಲಿ ಅವರ ಹಾವಳಿ ಇವರ ತೆಂಗಿನ ‘ಮಿಳ್ಳೆ’ಗಳಿಗೂ, ಬಿದ್ದ ಹೆಡೆಗಳಿಗೂ ಬರಹತ್ತಿತು. ಗುಂಡಾಭಟ್ಟರಿಗೆ ಅಲ್ಲಿ ಜೀವನವೇ ಕಷ್ಟವೆನಿಸಿತು. ಅಂತೆಯೇ ತಮ್ಮ ಹೊಸ ಹಂಚಿನ ಮನೆಯನ್ನು ನಮ್ಮ ಮನೆಯ ಬಲಕ್ಕಿರುವ ತಮ್ಮ ಸಣ್ಣ ಹಿತ್ತಲಿನ ಚೂರಿನಲ್ಲಿಯೇ ಕಟಿಸಿದರುಕಟ್ಟಿಸಿದರು. ಅಲ್ಲಿ ಅವರ ಮಡಿಗೂ ಸ್ವಲ್ಪ ಭದ್ರತೆ ಸಿಕ್ಕಂತಾಯಿತು-ಸುತ್ತಲೂ ಜಾತಿಯವರ ಮನೆಗಳೇ.
ಭಟ್ಟರು ಸ್ವತಃ ಅಲ್ಲಿರುವಾಗಲೇ ಮಾಯವಾಗಹತ್ತಿದ ಬೇಲಿ ಅವರು ಅಲ್ಲಿಂದ ತಳ ಕಿತ್ತ ಮೇಲೆ ಇರುವುದುಂಟೇ ? ಅವರ ಮಕ್ಕಳು ಧೈರ್ಯದಿಂದ ಅಲ್ಲಿ ‘ಚಿಣಿಫಣಿ’ ಆಡಹತ್ತಿದರು. ಭಟ್ಟರು ಹಾಳು ಸುರಿಯುವ ತಮ್ಮ ಹಿತ್ತಲಿಗೆ ದರುಶನವಿತ್ತ ಪ್ರತಿಯೊಂದು ಸಲ ತಣ್ಣೇರ ಜಳಕ ಮಾಡಬೇಕಾಗುತ್ತಿತ್ತು-ಅಷ್ಟೊಂದು ಹಾಳುಮಾಡಿಬಿಟ್ಟಿದ್ದರು !
ಕ್ರಮೇಣ ಆ ಹಿತ್ತಲಿನ ಬಗ್ಗೆ ನಿರಾಶೆಗೊಂಡರೂ ಅಲ್ಲಿದ್ದ ಹತ್ತೆಂಟು ಮಾವಿನ ಮರ, ನಾಲ್ಕೈದು ಹಲಸಿನ ಗಿಡಗಳಿಂದ ಅವರು ಆ ಹಿತ್ತಲಿನ ಮೋಹ ಬಿಟ್ಟಿರಲಿಲ್ಲ. ಅವಕ್ಕೇನು ನೀರು ಬೇಕೇ, ಗೊಬ್ಬರ ಬೇಕೇ. ತಾವಾಗಿ ಬೆಳೆದು ನಿಂತಿವೆ. ಆದುದರಿಂದ ಮಾವಿನ ಕಾಯಿಯ ದಿನಗಳಲ್ಲಿ ತಮ್ಮ ಮೈಲಿಗೆಯ ಭಯವನ್ನೂ ಕೆಲ ದಿನ ಬದಿಗಿಟ್ಟು ಆ ಹಿತ್ತಲಿಗೆ ಆಗಾಗ ಹೋಗಿಬರುತ್ತಿದ್ದರು. ದೊಡ್ತಮ್ಮ ನಾಯ್ಕರಿಗೆ ಸ್ವಲ್ಪ ಹೇಳಿ ಆ ಅಗೇರ ಮಕ್ಕಳಿಗೆ ತಮ್ಮ ಹಿತ್ತಲಲ್ಲಿ ಕಾಲಿಡದಂತೆ ತಾಕೀತು ಮಾಡುತ್ತಿದ್ದರು.
ಆ ವರುಷ ಮಾವಿನ ಬೆಳೆಗೆ ಒಳ್ಳೇ ಸುಗ್ಗಿ ಬಂದಂತಾಗಿತ್ತು ನಮ್ಮ ಊರಲ್ಲಿ. ಭಟ್ಟರ ಹತ್ತೆಂಟು ಮರಗಳೂ ಕಾತಿದ್ದವು. ಆದರೆ ಅತ್ಯಂತ ಒಳ್ಳೇ ಕಾಯಿ ಮರವೇ ಅಗೇರರ ಗುಡಿಸಲ ಮೇಲೆ ಒಲಿದಿತ್ತು. ಅದರ ‘ಚಲೋ’ ಬೆಳೆದ ಕಾಯಿ, ತೆಂಗಿನಕಾಯಿಗಿಂತಲೂ ದೊಡ್ಡದಾದುದು. ಹಣ್ಣಿನಂತೆ ಕಾಯಿಗೂ ಒಂದು ಬಗೆಯ ರುಚಿ. ‘ಆಸೆಗೆ’ ಹಾಕಿದರಂತೂ ಒಳ್ಳೆಯ ಬೆಣ್ಣೆಯಂತಾಗುತ್ತಿತ್ತು ! ಆದರೆ ಆ ಮರವನ್ನು ಹತ್ತಲು ಜನ ಹೆದರುತ್ತಿದ್ದರು. ನಡುವೆಯೇ ಅದಕ್ಕೆ ‘ಕೆಡಕು’ ಬಂದಿದೆಯೆಂದೂ ಬಹಳೇ ಹಳೆಯದೆಂದೂ ಅದನ್ನು ಹತ್ತುವ ಧೈರ್ಯ ಆಗುತ್ತಿರಲಿಲ್ಲ. ತಮ್ಮ ಬಾಲ್ಯದಿಂದ ಒಮ್ಮೆಯೂ ಆ ಮರವನ್ನು ಯಾರೂ ಹತ್ತಿದ್ದು ಭಟ್ಟರು ನೋಡಿರಲಿಲ್ಲ. ಆದುದರಿಂದ ತಾವೂ ಯಾರನ್ನೂ ಹತ್ತಿಸುವ ಸಾಹಸಕ್ಕೆ ಬಿದ್ದಿರಲಿಲ್ಲ. ಮಂಗ ಬಂದು, ಇಲ್ಲವೇ ದೊಡ್ಡ ಗಾಳಿಗೆ ಬಿದ್ದ ಹಣ್ಣು-ಕಾಯಿಗಳಿಂದಲೇ ಅವರು ತೃಪ್ತಿಪಡಬೇಕಾಗುತ್ತಿತ್ತು. ಮಂಗಗಳ ಹಾವಳಿ ಹೆಚ್ಚಿ, ಬಹಳ ಕಾಯಿ ಬಿದ್ದರೆ ಪರಮೇಶ್ವರಿಯ ಕೈಯಲ್ಲಿ ಕೊಟ್ಟು ಮೂರು ರಸ್ತೆಯ ಬಳಿಯಲ್ಲಿ ಚಪ್ಪೀಕಲ್ಲು ಮಾರ ಬರುವ ಅಂಬೇರ ಹೆಂಗಸರಿಗೊ ಒಕ್ಕಲಗಿತ್ತಿಯರಿಗೊ ಬಿಲ್ಲಿಗೆ, ಎರಡು ಬಿಲ್ಲಿಗೆ ಐದರಂತೆ ಮಾರಿಸುವುದೂ ಉಂಟು. ಅವರು ಆ ಕಾಯಿಗಳನ್ನು ಹುಳಿಸೊಪ್ಪಿಗೂ ಮೀನ ಆಸೆಗೂ ಉಪಯೋಗಿಸುತ್ತಿದ್ದರು. ಆದರೂ ಬಹಳ ಕಾಯಿಗಳಿಂದ ತುಂಬಿದ ಹೆಗ್ಗೆಯೋ ಅಗೇರರ ಹಿತ್ತಲಲ್ಲಿ ಒಲಿದಿದ್ದರಿಂದ ಅವರು ಎಷ್ಟೋ ಸಲ ಕೊರಗುತ್ತಿದ್ದರು.
ದಿನವೂ ರಾತ್ರಿ ಒಮ್ಮೆ ಎದ್ದು ತಮ್ಮ ‘ಮಿಣಿ ಮಿಣಿ’ ಕಂದೀಲನ್ನು ಕೈಯಲ್ಲಿ ಹಿಡಿದು ಹಿತ್ತಲಲ್ಲಿ ಸುತ್ತಿಬರುವುದು ಭಟ್ಟರ ವಾಡಿಕೆ, ಗಾಳಿ-ಮಳೆಯ ಝಡಿಗೆ ಬಿದ್ದ ಹಣ್ಣು-ಕಾಯಿಗಳನ್ನು ಹೆಕ್ಕಿ ತರಲು. ಮೇಲಾಗಿ ಆ ಲಾಟೀನಿನ ಮಂದ ಬೆಳಕಿನಲ್ಲಿ ಅಲ್ಲಿನ ಚಿಂದಿ-ಗೊಂದಿಗಳೂ ಕಣ್ಣಿಗೆ ಬೀಳುತ್ತಿರಲಿಲ್ಲವಾದ್ದರಿಂದ ಮೈಲಿಗೆಯ ಭಯವೂ ಇರುತ್ತಿರಲಿಲ್ಲ. ಕಣ್ಣಿಗೆ ಬಿದ್ದರೆ ಮಾತ್ರ ಮೈಲಿಗೆ ತಾನೆ !
ಅಂದು ಗಾಳಿಯೂ ಜೋರಾಗಿ ಬೀಸುತ್ತಿತ್ತು. “ಆ ಹಣ್ಣು ಸಾಯಲಿ, ಎಲ್ಲಾದ್ರೂ ಗಾಳಿಗೆ ಹೆಗ್ಗೆ ಮುರಿದುಬಿದ್ದೀತು” ಎಂದು ಹೆಂಡತಿ ಕೊಟ್ಟ ಎಚ್ಚರಿಕೆಯನ್ನೂ ಲೆಕ್ಕಿಸದೆ ಭಟ್ಟರು ಹೊರಗೆ ಬಿದ್ದರು. ಅವರು ಅಪೇಕ್ಷಿಸಿದಂತೆ ಲೆಕ್ಕವಿಲ್ಲದಷ್ಟು ಹಣ್ಣು ಕಾಯಿಗಳು ಉದುರಿದ್ದವು. ಇನ್ನೂ ಉದುರುತ್ತಲಿದ್ದವು. ಭಟ್ಟರು ತಮ್ಮ ಕೈಯಲ್ಲಿ ಒಯ್ದ ಬುಟ್ಟಿ ತುಂಬಿಹೋದುದರಿಂದ ಉಟ್ಟ ಪಂಚೆಯ ಸೆರಗಿನಲ್ಲಿಯೇ ತುಂಬ ಹತ್ತಿದರು. ಆ ಬದಿಯ ಹಿತ್ತಲಲ್ಲಿ ಅಗೇರರ ಮಕ್ಕಳೂ ಹೆಕ್ಕ ಬಂದಿದ್ದರು. ಆಗಾಗ ಭಟ್ಟರು ಅವರನ್ನು ಬಹಿರಂಗವಾಗಿ ಶಪಿಸುತ್ತ ತಮ್ಮ ಮರವೆಂಬ ಬೆದರಿಕೆ ತೋರಿಸಿ ಅವರು ಹೆಕ್ಕಿದ ಹಣ್ಣುಗಳಲ್ಲಿ ಕೆಲವನ್ನು ತಮಗೆ ಕೊಡಬೇಕೆಂದರು. ಆದರೂ ಅವರು ಕೇಳಿದರಲ್ಲವೇ. ತಾವೇ ಆ ಹಿತ್ತಲಲ್ಲಿ ಹೋದರೆ… ಎನಿಸಿತು ಒಮ್ಮೆ. ಆದರೆ ಅಲ್ಲಿಯ ಮೈಲಿಗೆಯ ನೆನಪಾಗಿ ಮೈ ಜುಮ್ಮೆನಿಸಿತು. ಅಷ್ಟರಲ್ಲಿ ‘ಢಬ್’ ಎಂದಿತು ಹಣ್ಣೊಂದು. ಭಟ್ಟರು ಆವಾಜಿನ ಮೇಲೇ ಅದರ ಆಕಾರವನ್ನು ಊಹಿಸಿದರು. ಕ್ಷೀಣ ಬೆಳದಿಂದಗಳಲ್ಲಿಬೆಳದಿಂಗಳಲ್ಲಿ ಹಣ್ಣು ಕಾಣಿಸದಿದ್ದರೂ ಆವಾಜಿನ ಮೇಲೆಯೇ ಅದರ ಜಾಗ ತರ್ಕಿಸಿದರು. ಹಣ್ಣು ಇವರ ಹಿತ್ತಲಿಗೆ ತಾಗಿಯೇ ಅಗೇರರ ಹಿತ್ತಲಲ್ಲಿ ಬಿದ್ದಿತ್ತು. ಭಟ್ಟರು ಬಿದ್ದ ಸದ್ದಿಗೇ ಮೋಹಿತರಾಗಿ ಅಗೇರರ ಹಿತ್ತಲೆಂಬುದನ್ನೂ ಮರೆತು ಅತ್ತ ಧಾವಿಸಿದರು. ಹಣ್ಣು ಇವರ ವಶವಾಯಿತು-ಉಬ್ಬಿಹೋದರು. ಕೈತುಂಬ ಹಣ್ಣು ! ಆದರೆ ಮರುಕ್ಷಣ ತಮ್ಮ ಕೈ ಆ ಅಗೇರ ಮುರ್ಕುಂಡಿಯ ‘ಕೋಸ’ನ ಕೈಲಿದ್ದುದನ್ನು ಕಂಡು ಬೆಚ್ಚಿಬಿದ್ದರು. “ಏನ್ರಾ ಭಟ್ಟರೆ, ಮುಟ್ಟಿಬಿಟ್ರಲ್ಲಾ ? ಅಯ್ಯೋ ಮೈಲಿಗೆಯಾಯ್ತು, ಹೋಗಿ ಮೀಯಬೇಕಾಯ್ತಲ್ಲ ? ಪಾಪ. ನಮ್ಮ ಹಿತ್ತಲಿಗೆ ಯಾಕೆ ಕಾಲಿಡಬೇಕೋ ?” ಎಂದ ಕೋಸ. ಅಲ್ಲಿಯೇ ಅವನ ಕುತ್ತಿಗೆ ಹಿಚುಕಿ ಕೊಂದುಬಿಡಲೇ ಎನ್ನುವಷ್ಟು ಸಿಟ್ಟು ಬಂದಿತ್ತು ಭಟ್ಟರಿಗೆ. ಆದರೂ ಈ ಅಪರಾತ್ರಿಯಲ್ಲಿ ಸ್ನಾನ ಮಾಡುವ ಹೊತ್ತು ಬಂತಲ್ಲ ಎಂಬ ಮಿಡುಕಿನಲ್ಲಿ ತಮ್ಮ ಸಿಟ್ಟನ್ನೆಲ್ಲ ಹೊಟ್ಟೆಯಲ್ಲಿ ಹಾಕಿ ಗೊಂಬೆಯಂತೆ ಸಿಕ್ಕಷ್ಟು ಹಣ್ಣಿನೊಡನೆ ಮನೆಯ ಹಾದಿ ಹಿಡಿದರು. ಸ್ನಾನ ಮಾಡಿದರೂ ಜನಿವಾರ ಬೇರೆ ಬೇಕು. ಈ ನಡುರಾತ್ರೆಯಲ್ಲಿ ಜನಿವಾರ ಎಲ್ಲಿಂದ ತರುವುದು ?… ವಿಚಾರದಲ್ಲಿ ಮಗ್ನರಾಗಿದ್ದಂತೆ ಭಟ್ಟರ ಕೈ ಕೈತುಂಬ ಪಸರಿಕೊಂಡ ಆ ದೊಡ್ಡ ಹಣ್ಣನ್ನು ತಿರುವಿ ಹಾಕಿತು. ಆದರೆ ಅದಕ್ಕೆ ತಳವೇ ಇರಲಿಲ್ಲ ! ಅಯ್ಯೋ ಈ ಹಾಳು ‘ಕೊರಕಲಿ’ನ ಸಲುವಾಗಿ ಮೈಲಿಗೆಯಾಯಿತಲ್ಲ ಎಂಬ ಸಿಟ್ಟಿನಲ್ಲಿ ಅದನ್ನು ‘ಢಪ್’ ಎಂದು ನೆಲಕ್ಕೆ ಒಗೆದರು.
ಮನೆ ಮುಟ್ಟಿದ ಕೂಡಲೇ ಹೊರ ಜಗುಲಿಯ ಮೇಲೆ ನಿಂತು ಭಟ್ಟರು ತಮ್ಮ ಪತ್ನಿಯನ್ನು ಕರೆದರು. ಗಾಢ ನಿದ್ರೆ ಸೇರಿದ ಅವಳಿಗೆ ಇವರ ಕೂಗು ಕೇಳಿಸಲಿಲ್ಲವೇನೋ. “ಹೋಯ್ ಕೇಳಿಸ್ತೇನೆ, ಸ್ವಲ್ಪ ಹೊರಗೆ ಬಾ ಎಂದೆ ; ಹೋಯ್” ಎಂದು ಒಂದೇ ಸವನೆ ಕರೆಯಹತ್ತಿದರು. ಪಾಪ, ಅವಳಿಗಾದರೂ ಏನು ತಿಳಿಯಬೇಕು. ದಿನವೂ ಇವರು ರಾತ್ರಿಯ ವೇಳೆಗೆ ಹೊರಗೆ ಹೋಗುತ್ತಿದ್ದರು. ಕೈಕಾಲು ತೊಳೆದು ಮತ್ತೆ ಮಲಗಿಕೊಳ್ಳುತ್ತಿದ್ದರು. ಅವಳು ಅರೆನಿದ್ದೆಯಿಂದ ಎಚ್ಚರಿಸಿದ ಬಗ್ಗೆ ಬೇಸರ ವ್ಯಕ್ತಪಡಿಸುತ್ತ ಹೊರಗೆ ಬಂದಳು.
“ಇದ್ನೋಡೆ. ಒಂದು ಪಂಚಾಯ್ತಿ ಆಯ್ತಲ್ಲವೇ. ನನಗೆ ಆ ಬೋ…ಮಗ ಮುರ್ಕುಂಡೀ ಕೋಸಾ ಮುಟ್ಟಿಬಿಟ್ಟ. ಏನು ಸೊಕ್ಕ್ಯಾರೆ ಮಕ್ಕಳು. ಮೈಮೇಲೆ ಬಿದ್ದುಬಿಟ್ಟ. ಮೈಲಿಗೆ ಆಗಿಬಿಟ್ಟಿತಲ್ಲ” ಎಂದರು ಕೆಳದನಿಯಲ್ಲಿ. ಈ ಅಪರಾತ್ರಿಯಲ್ಲೆಲ್ಲಿ ಇವರಿಗೆ ನೀರು ಸೇದಿ ಕೊಡುವ ಪ್ರಸಂಗ ಬಂತೋ ಎಂದು ಬೇಸರದ ದನಿಯಲ್ಲಿ, “ಹೊರಗೆ ಕೆಟ್ಟ ಗಾಳಿ ಬಿಟ್ಟಿದೆ. ಈಗ ಹೇಗೆ ಝಳಕಾ ಮಾಡ್ತೀರಿ ? ಈಗ ಹಾಗೆಯೇ ಮಲ್ಕೊಳ್ಳಿ. ನಾಳೆ ಬೆಳಿಗ್ಗೇ ಹಾಸಿಗೆ ಒಗೀಲಿಕ್ಕೆ ಹಾಕಿ, ಝಳ್ಕಾ ಮಾಡಿದ್ರಾಯ್ತು” ಎಂದಳು ಅವರ ಧರ್ಮಪತ್ನಿ. ಭಟ್ಟರಿಗೂ ಈ ಮಾತು ಸಮಂಜಸ ತೋರಿತು, ಜನಿವಾರದ ತೊಂದರೆಯೂ ತುರ್ತು ತಪ್ಪಿತಲ್ಲ ಎಂದು. “ಹೌದು, ನೀ ಅಂದ ಹಾಗೆ ನಾಳೆ ಬೆಳಿಗ್ಗೇ ಝಳ್ಕಾ ಮಾಡಿದ್ರಾಯ್ತು. ಇಲ್ಲೇ ಹೊರಗೆ ಜಗಲಿಯ ಮೇಲೆ ಮಲ್ಕೊಳ್ತೆ. ನನಗೇನೂ ಬೇಡ. ಆ ಚಾಪೆ ಒಂದು ತಾ, ಮತ್ತೇನಾದ್ರೂ ಹೊದ್ದುಕೊಳ್ಳಲಿಕ್ಕೆ ಕೊಡು” ಎಂದರು. ಒಳಗಿನಿಂದ ಚಾಪೆಯೊಂದನ್ನು ತಂದುಕೊಡುತ್ತ “ಆ ದಟ್ಟವಾದ ದುಪ್ಪಟ ಒಗಿಯಲಿಕ್ಕೆ ಹಾಕಿದರೆ ಹಾಳಾಗಿಬಿಡ್ತದೆ. ಈಗ ರಾತ್ರೆ ಯಾರು ನೋಡಲಿಕ್ಕೆ ಬಂದಾರೆ. ನಸ್ಕೀಗೇ ಎದ್ರಾತು. ಇದನ್ನೇ ಹೊದ್ದುಕೊಳ್ಳಿ. ಹೇಗಾದರೂ ನಾಳೆ ತೊಳೆಯೋದೇ ಇತ್ತು” ಎಂದು ತನ್ನ ದಟ್ಟವಾದ ಸೀರೆಯೊಂದನ್ನು ತಂದುಕೊಟ್ಟಳು. ಭಟ್ಟರು ಅದನ್ನು ಹೊದ್ದು ಅಲ್ಲೇ ಜಗಲಿಯ ಮೇಲೆ ಒರಗಿಕೊಂಡರು. ಆದರೂ ಅವರಿಗೆ ನಿದ್ದೆ ಬೇಗ ಹತ್ತಲಿಲ್ಲ. ತಿರುಗಿ ತಿರುಗಿ ಏಕೊ ‘ಮೈಲಿಗೆ, ಮೈಲಿಗೆ’ ಎಂಬ ಭಾವನೆ ತಗಣಿ ಗುಂಗಾಡುಗಳಿಗಿಂತ ಹೆಚ್ಚಾಗಿ ಕಾಡಹತ್ತಿತು. ಜನಿವಾರ ಒಂದಕ್ಕೆ ಖಾರ ಬಂದಿತಲ್ಲಾ ಎಂದೂ ಮಿಡುಕಿದರು.
ರಾತ್ರೆ ಬಹಳ ಹೊತ್ತು ನಿದ್ದೆಗೆಟ್ಟಿದ್ದರಿಂದಲೋ ಏನೋ ಭಟ್ಟರಿಗೆ ರಾತ್ರೆಯ ಕೊನೆಯ ಜಾವದಲ್ಲಿ ಗಾಢ ನಿದ್ದೆ ಹತ್ತಿಬಿಟ್ಟಿತು. ಸೀರೆಯನ್ನು ಮೋರೆಯ ಮೇಲೆಲ್ಲ ಮುಸುಕೆಳೆದು ಅವರ ಆ ಗಿಡ್ಡ ದೇಹ ಗೊರಕೆ ಹೊಡೆಯಹತ್ತಿತು.
ಭಟ್ಟರ ಹೆಂಡತಿ ಎಂದಿನಂತೆ ನಸುಕಿನಲ್ಲಿಯೇ ಎದ್ದು ಹೊರಗೆ ಬಂದಳು. ಅವಳೊಡನೆ ಅವರ ಆರು ವರುಷದ ಚಿರಂಜೀವನೂ ಎದ್ದು ಬಂದ. ಆದರೆ ಅವನಿಗೆ ಸರಿಯಾಗಿ ಮೆಟ್ಟಿಲುಗಳಿಂದ ಅಂಗಳಕ್ಕೆ ಇಳಿಯುವ ಅಭ್ಯಾಸವೇ ಇಲ್ಲ: ಯಾವಾಗಲೂ ಸ್ವಲ್ಪ ಅಡ್ಡಹೋಗಿ ಜಗಲಿಯ ಮೇಲಿಂದ ಅಂಗಳಕ್ಕೆ ಜಿಗಿಯುವುದು ಅವನ ಪರಿಪಾಠ. ಅಂದೂ ಅವನು ಹಾಗೆಯೇ ಜಿಗಿಯಹೋದ. ಪಾಪ ! ನಸುಕಿನಲ್ಲಿ ಆ ಕಪ್ಪು ಸೀರೆ ಅವನಿಗೆ ಹೇಗೆ ಕಾಣಬೇಕು. ಒಮ್ಮೆಲೇ ಎಡವಿ “ಛೇ ! ಅವ್ವಾ ಇಲ್ಲಿ ಯಾರು ಮಲಗ್ಯಾರವ್ವ. ನಾನು ಬಿದ್ದುಹೋಗ್ತಿದ್ದೆ” ಎಂದ. ಅವಳಿಗೂ ಈಗ ನೆನಪಾಯಿತು, ತನ್ನ ಗಂಡ ಅಲ್ಲಿ ಮಲಗಿದ್ದು. “ಅಯ್ಯೋ ಮುಟ್ಟಿದಿಯೇನೋ ? ತಡೆ. ನನಗೆ ಮುಟ್ಟಬೇಡ. ಏ ತಡಿಯೋ, ಅಲ್ಲೇ ನಿಲ್ಲು. ದಿನಾ ಎಂಟು ಗಂಟೆಯಾದರೂ ಏಳದವ ಇಂದು ಯಾಕೆ ಸಾಯಲಿಕ್ಕೆ ಇಷ್ಟು ನಸ್ಕೀಗೆ ಎದ್ದುಬಂದೆಯೊ… ಹೋಯ್, ಸ್ವಲ್ಪ ಏಳಿ ಅಂದೆ. ಅದೇ ನಿಮ್ಮ ಮಗ ನಿಮಗೆ ಮುಟ್ಟಿಬಿಟ್ಟ, ಅವನ ಅಂಗಿ ಸ್ವಲ್ಪ ಕಳೀರಿ” ಎಂದಳು. ಭಟ್ಟರಿಗೂ ಈಗ ಸ್ವಲ್ಪ ಎಚ್ಚರಾಗಿತ್ತು. ತಾವು ಇದ್ದ ಸ್ಥಿತಿಯ ಅರಿವಾದ ಕೂಡಲೇ “ಇಲ್ಲಿ ಯಾಕೆ ಬಂದೆಯೋ ಜೀವಾ ಕೊಡಲಿಕ್ಕೆ ? ಅಂಗಳಕ್ಕೆ ಇಳಿಯಲು ಮೆಟ್ಟಿಲು ಇಲ್ಲವೇನೋ, ಥೋ ಇವ್ನಾ” ಎಂದು ಬಯ್ಯುತ್ತ ಅವನ ಅಂಗಿ ಕಳಿಯಹತ್ತಿದರು. ಅವನು ಹೆದರಿ ಒಮ್ಮೆಲೇ ಅಳಹತ್ತಿದ. ಅವನಿಗೆ ತನ್ನ ಹಿಂದಿನ ಯಾವುದೋ ಅನುಭವದ ನೆನಪಾಗಿ “ಅವ್ವಾ, ಅಪ್ಪನಿಗೆ ಯಾವ ‘ನಾಯಿ ಮುಟ್ಟಿ’ತವ್ವಾ?-ಅಪ್ಪ ಮುಟ್ಟೇನವ್ವಾ?” ಎಂದು ಕೇಳಿದ. ಆದರೆ ಆ ಸಣ್ಣ ಹುಡುಗನಿಗೆಲ್ಲ ಹೇಗೆ ಹೇಳಬೇಕು ? ಅವರು ಅವನಿಗೆ ಸರಿಯಾಗಿ ಉತ್ತರ ಕೊಡದೇ “ಹೋಗು ಹೋಗು ಸುಂನೆ ಹೋಗು” ಎಂದು ಬೆದರಿಸಿಬಿಟ್ಟರು. ತಂದೆಯೊಡನೆ ಮಗನಿಗೂ ತಣ್ಣೀರ ಝಳಕವಾಯಿತು.
ದಿನವೂ ಬೆಳಿಗ್ಗೆ ತನ್ನ ತಾಯಿಯೊಡನೆ ಅಶ್ವತ್ಥಕಟ್ಟೆಗೆ ಹೋಗಿ ಬರುವುದು ಆ ಹುಡುಗನ ಅಭ್ಯಾಸ. ಇಂದು ಈ ಸ್ನಾನದ ಗೊಂದಲದಲ್ಲಿ ಹೊತ್ತಾಗಿದ್ದರಿಂದ ಅವನ ತಾಯಿ ಅಶ್ವತ್ಥಕಟ್ಟೆಗೆ ಹೋಗಲೇ ಇಲ್ಲ. ಸಂಜೆ ಕಟ್ಟೆಯ ಬಳಿಯಲ್ಲಿಯ ಸರ್ವೋತ್ತಮನ ಚಾ ಅಂಗಡಿಗೆ ಇವನು ತಿರುಗಾಡ ಹೋದಾಗ “ಏಕೋ ಹುಡ್ಗಾ ಈ ಹೊತ್ತು ಕಟ್ಟೆಗೆ ಯಾಕೆ ಬರಲಿಲ್ಲೊ” ಎಂದು ಕೇಳುತ್ತ ಆಂಬೋದೆಯೊಂದನ್ನು ಕೈಯಲ್ಲಿತ್ತ, ಸರ್ವೋತ್ತಮ.
“ಈ ಹೊತ್ತು ಬೆಳಿಗ್ಗೆ ತಣ್ಣೀರು ಝಳ್ಕಾ ಮಾಡ್ಬೇಕಾಯ್ತು ಅಪ್ಪನ ಕೂಡ. ಅಪ್ಪ ನಿನ್ನೆ ರಾತ್ರೆ ಮುಟ್ಟಾಗಿ ಹೊರ್ಗೆ ಮಲಕೊಂಡಿದ್ದ. ನಾ ಅವನಿಗೆ ಮುಟ್ಟಿಬಿಟ್ಟೆ” ಎಂದ ಏನೂ ಅರಿಯದ ಹುಡುಗ.
ಆದರೆ ಸರ್ವೋತ್ತಮನ ‘ಬಾಯಲ್ಲಿ ಸಿಕ್ಕ’ ಬಳಿಕ ಕೇಳಬೇಕೇ ! ಮರುದಿನ ಕೇಳಿಯೇಬಿಟ್ಟ “ಏನ್ರಾ ಭಟ್ಟರೆ, ನಿಮ್ಮ ಮಗಾ ಏನೋ ಮಜಾ ಸುದ್ದಿ ಹೇಳ್ದಾ. ನೀವೇನೋ… ಏನ್ಕತೆರಾ ಅದು ?” ಎಂದು. ಭಟ್ಟರು ಆದ ಸಂಗತಿಯೆಲ್ಲ ಹೇಳಿದರು. ಮನೆಗೆ ಬಂದು ಮಗನಿಗೂ ನಾಲ್ಕು ಹೊಡೆತ ಹಾಕಿದರು. ಆದರೆ ಸರ್ವೋತ್ತಮ ಮಾತ್ರ ಈ ಕತೆಯನ್ನು ಒಳ್ಳೇ ಉಪ್ಪು-ಖಾರ ಹಚ್ಚಿ ಈಗಲೂ ಹೇಳುತ್ತಾನೆ ನಮ್ಮ ಊರಲ್ಲಿ !
*****
[೧೯೫೧]
ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ