ನೀವು ಜೊತೆಗಿದ್ದರೆ

ನಿತ್ಯ ಸುಡುವ ಸೂರ್ಯನಡಿ ನೆತ್ತಿ ಬಿರಿದರೂ
ಕಾಲು ಕೊಂಡೊಯ್ಯುತ್ತದೆ ನಡೆದ ದಾರಿಯಲ್ಲೇ
ಮತ್ತೆ ಮತ್ತೆ ನಡೆದು,
ಮೈಲಿಗಟ್ಟಲೆ ದೂರ ಹುಲ್ಲುಗಾವಲ ಹಾಗೆ
ಬಿದ್ದುಕೊಂಡಿದೆ ನೋಡಿ ಬೇಕು ಬೇಡಗಳು.

ರಾತ್ರಿ ಮಲ್ಲಿಗೆ ಹೂವ,
ಕಂಪು ಸುರಿಸಿದ ಮಳೆಯ
ಹುಣ್ಣಿಮೆಯ ಹೊನ್ನ ನೆನಪು,
ನೀವು ಜೊತೆಗಿದ್ದರೆ;

ಹರಿವ ನದಿಗೆ ಮೈ ಕೊಟ್ಟು
ಆಕಾಶಕ್ಕೂ ಮುತ್ತಿಟ್ಟು
ವಿಶಾಲ ವೃಕ್ಷದ ತಂಪಿನಲಿ ತಂಗಬೇಕು
ಕೊಂಚ ಮರೆಯಬೇಕು
ದಿನನಿತ್ಯ ತಿಂದು, ತೇಗಿ, ಮಲಗುವುದು.

ಕೊರೆವ ಛಳಿ, ಸುರಿವ ಮಳೆ
ಸುಮ್ಮನೆ ಜೊತೆಗಿದ್ದು ಭುಜಕ್ಕೆ ಭು ತಾಗಿಸಿ
ತಿಳಿಸಿದರೆ ಸಾಕು.
ಮುತ್ತುಗಳು ಮತ್ತುಗಳು ಸತ್ತು ಹೋಗಲಿ ಎಲ್ಲ
ಸುಟ್ಟು ಹೋಗಲಿ ಸ್ವಪ್ನ ಸಿಡಿಲಿನಲ್ಲಿ.

ಯಾವ ದೀಪದ ಬೆಳಕೊ
ಯಾವ ಚುಕ್ಕಿಯ ಹೊಳಪೊ
ಯಾವ ಬೆಂಕಿಯ ಕಾವೊ
ತಣ್ಣಗೆ ಎದೆ ಸುಟ್ಟು,
ಅಲ್ಲಿ ಹುಟ್ಟಲಿ ಮತ್ತೆ
ಹೊಸದೊಂದು ಪುಟ್ಟ ಹಾಡು.
*****